ಕಂಡ ಕಂಡ ಕಡೆ ಸೊಂಡಿಲ ಚಾಚುವ
ಆನೆಗೆ ಅಂಕುಶವಿಲ್ಲ,
ಕಾಡುಕುದುರೆಗಳ ಹೂಡಿದ ರಥಕ್ಕೆ
ದಾರಿಯ ಹಂಗಿಲ್ಲ.

ಇಷ್ಟು ದೀಪಗಳು ಸುತ್ತಲು ಉರಿದೂ
ಕತ್ತಲು ತಪ್ಪಿಲ್ಲ.
ಎಷ್ಟು ಗುಡಿಸಿದರು ದಿನವೂ ಮನೆಯನು
ಪೊರಕೆಗೆ ಬಿಡುವಿಲ್ಲ.

ಕರಡು ಪ್ರತಿಗಳನು ಯಾರು ತಿದ್ದಿದರು
ಕುರುಡಿಗೆ ಕೊನೆಯಿಲ್ಲ.
ಎಷ್ಟು ಉಜ್ಜಿದರು ಕಾಲ ಬುಡಕ್ಕೇ
ಗೆದ್ದಲು ಬಿಡಲಿಲ್ಲ.

ತಿರುಗು ಚಕ್ರಗಳ ನಿಶ್ಚಲ ಕೇಂದ್ರದಿ
ನಿಲ್ಲುವ ಬಲವಿಲ್ಲ.
ಮೊರೆಯುವ ಅರೆಯುವ ಬದುಕನ್ನೆದುರಿಸಿ
ಗೆಲ್ಲುವ ಛಲವಿಲ್ಲ.

ಪಾಚಿಗಟ್ಟಿರುವ ಕುರುಡು ದಾರಿಯಲಿ
ಜಾರಿಕೆ ತಪ್ಪಿಲ್ಲ.
ದಾರಿಯುದ್ದಕ್ಕೂ ಸೋಲಿನ ಹಾಡಿಗೆ
ಎಂದೂ ಮುಗಿವಿಲ್ಲ.