ಜನನ : ೧೯-೩-೧೯೦೨ ರಂದು ಸೋಸಲೆ (ವ್ಯಾಸರಾಜಪುರ) ಯಲ್ಲಿ ಟಿ. ನರಸಿಪುರ.

ಮನೆತನ : ದಾಸ ಪಂಥ ವಂಶಜರು. ಶ್ರೀ ಪುರಂದರದಾಸರ ಪರಂಪರೆಗೆ ಸೇರಿದ ಸೋಸಲೆ ಪುರುಷೋತ್ತಮದಾಸರು ಇವರ ಮುತ್ತಾತ, ತಾತ ಶ್ರೀನಿವಾಸದಾಸರು, ಅಜ್ಜಿ ನರಸಮ್ಮನವರು ಉತ್ತಮ ಗಾಯಕರೆನಿಸಿದ್ದವರು. ವೀಣೆ ಶೇಷಣ್ಣನವರ ಸಮಕಾಲೀನರು. ತಂದೆ ಅಪ್ರಮೇಯಪ್ಪ ಸೋದರಮಾವ ಸೋಸಲೆ ರಾಮದಾಸರು ಪ್ರಸಿದ್ಧ ಖಂಜರಿ ವಿದ್ವಾಂಸರು.

ಶಿಕ್ಷಣ : ತಾತ ಶ್ರೀನಿವಾಸಮೂರ್ತಿ ಇವರ ವಿದ್ಯಾ ಗುರುಗಳು. ಅಜ್ಜಿ ನರಸಮ್ಮ ಅವರ ಶಿಸ್ತಿನ ತರಬೇತಿ. ಸೋದರಮಾವ ಸೋಸಲೆ ರಾಮದಾಸರಿಂದ ಹಾರ್ಮೋನಿಯಂ ಹಾಗು ಖಂಜರಿ ವಾದನದಲ್ಲಿ ಶಿಕ್ಷಣ.

ಕ್ಷೇತ್ರ ಸಾಧನೆ : ಮೈಸೂರಿನ ದಳವಾಯಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲದಲ್ಲಿ ಇವರ ಪ್ರತಿಭೆಯನ್ನು ಗುರುತಿಸಿದ ಶಾಲಾ ಅಧ್ಯಾಪಕರಾದ ಆನವಟ್ಟಿ ರಾಮರಾಯರ ಉತ್ತೇಜನದಿಂದ ದಾಸರು ವಿದ್ಯಾರ್ಥಿದೆಸೆಯಲ್ಲೇ ಉತ್ತಮ ಗಾಯಕರೆನಿಸಿದ್ದರು. ಶ್ರುತಿ ಶುದ್ದ ಲಯ ಖಚಿತತ್ವ ಉತ್ತಮ ಕಂಠಮಾಧುರ್ಯ ಹೊಂದಿದ್ದ ನಾರಾಯಣದಾಸರು ತಮ್ಮ ೧೨ನೆಯ ವಯಸ್ಸಿನಲ್ಲೇ ಸೋಸಲೆ ಮಠಾಧೀಶರಾಗಿದ್ದ ಶ್ರೀವಿದ್ಯಾವಾರಿಧಿ ತೀರ್ಥರ ಸಮ್ಮುಖದಲ್ಲಿ ಕಥೆ ಮಾಡಿ ಪ್ರಪ್ರಥಮವಾಗಿ ಕೀರ್ತನರ ರಂಗ ಪ್ರವೇಶ ಮಾಡಿದರು. ಮುಂದೆ ಅವರು ಕೀರ್ತಿ ಶಿಖರವನ್ನೇರುತ್ತಲೇ ಹೋದರು. ಸ್ವತಃ ತಾವೇ ಹಾರ್ಮೋನಿಯಂ ನುಡಿಸಿಕೊಂಡು ಹರಿಕತೆ ಮಾಡುವ ಪರಿಪಾಠವನ್ನಿಟ್ಟುಕೊಂಡಿದ್ದರು. ಇತರರ ಕಾರ್ಯಕ್ರಮಗಳಿಗೂ ಪಕ್ಕ ನುಡಿಸುವ ಸಂಪ್ರದಾಯವನ್ನೂ ಬೆಳೆಸಿಕೊಂಡಿದ್ದರು. ರಾಜ್ಯಾದಾದ್ಯಂತ ಸಂಚಾರ ಮಾಡಿ ಹರಿಕಥಾ ಕಾರ್ಯಕ್ರಮ ನೀಡಿರುವುದೇ ಅಲ್ಲದೇ ಆಂಧ್ರ ಪ್ರದೇಶದ ರಾಜಂ ಪೇಟೆಯ ಮಾಧ್ವ ಸಂಘದಲ್ಲಿ, ಬೆಂಗಳೂರು ಸುಲ್ತಾನ್‌ ಪೇಟೆಯ ಹಳೇ ಶೃಂಗೇರಿ ಮಠದಲ್ಲಿ ಅನೇಕ ಬಾರಿ ಸಪ್ತಾಹಗಳನ್ನು ನಡೆಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ೩೫ ವರ್ಷಗಳ ಕಾಲ ಸತತವಾಗಿ ಶೃಂಗೇರಿ ಮಠದಲ್ಲಿ ಕಥಾ ಕೀರ್ತನೆ ನಡೆಸಿ ಒಂದು ದಾಖಲೆಯನ್ನೇ ಸೃಷ್ಠಿಸಿದರು. ಅಲ್ಲಿ ಅವರ ಸಾಧನೆಯ ಕುರುಹಾಗಿ ಅವರಿಗೆ ಮಠದ ವತಿಯಿಂದ ೧,೦೦೦ ತೊಲದ ಬೆಳ್ಳಿಯ ಮಂಟಪದ ಕಾಣಿಕೆಯಾಗಿ ನೀಡಲಾಯಿತು. ಇದು ಈಗಲೂ ಅವರ ಮಗನ ಮನೆಯಲ್ಲಿದೆ. ಎಚ್.ಎಂ. ವಿ. ಸಂಸ್ಥೆ ಇವರ ಮೂರು ಕಥೆಗಳನ್ನು ಧ್ವನಿಮುದ್ರಿಸಿಕೊಂಡಿದೆ. ತಮ್ಮ ೯೦ನೇ ವರ್ಷದವರೆಗೂ ಕಾರ್ಯಕ್ರಮ ನಡೆಸಿದವರು. ರಾಜಾಜಿನಗರದ ಎರಡನೇ ಹಂತದಲ್ಲಿ ತಾವಿದ್ದ ಮನೆಯ ಆವರಣದಲ್ಲೇ ಶ್ರೀ ಸತ್ಯನಾರಾಯಣ, ಗಣಪತಿ, ನವಗ್ರಹಗಳನ್ನು ಪ್ರತಿಷ್ಠಾಪಿಸಿ ಅನಂತರ ರಾಯರ ಬೃಂದಾವನವನ್ನು ಸ್ಥಾಪಿಸಿ ಪೂಜಾದಿ ಕೈಂಕರ್ಯಗಳನ್ನು ನಡೆಸಿಕೊಂಡು ಬಂದರು. ಮುಂದೆ ತಮ್ಮ ಅಂತ್ಯ ಕಾಲದಲ್ಲಿ ಅದನ್ನು ವ್ಯಾಸರಾಜ ಮಠಕ್ಕೆ ದಾನವಾಗಿ ಬರೆದುಕೊಟ್ಟರು. ಇವರ ಮಗ ವಿ|| ಎಸ್. ಎನ್. ಸುರೇಶ್ ಒಳ್ಳೆಯ ಕೀರ್ತನಕಾರರಾಗಿ ತಂದೆಯ ಹೆಸರನ್ನು ಉಳಿಸಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ’ಪ್ರಸಂಗೋಚಿತ ಪರಸ್ಪರ ವಾಕ್ ಪಾರಾವಾರ’ ಪ್ರಾಕ್ತನ ಕೀರ್ತನ ಕೇಸರಿ ಮುಂತಾದ ಬಿರುದಾಂಕಿತರು. ಅಖಿಲ ಕರ್ನಾಟಕ ಕೀರ್ತನ ಮಹಾವಿದ್ಯಾಲಯ, ಕರ್ನಾಟಕ ಗಾನಕಲಾ ಪರಿಷತ್ತು ಇವರನ್ನು ಗೌರವಿಸಿ ಸನ್ಮಾನಿಸಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೮೮-೮೯ ರ ಸಾಲಿನ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ನೀಡಿ ಗೌರವಿಸಿದೆ.

ನಾರಾಯಣದಾಸರು ೧೯೯೪ ರಲ್ಲಿ ತಮ್ಮ ೯೨ನೇ ವಯಸ್ಸಿನಲ್ಲಿ ನಿಧನರಾದರು.