ಸೋಸಲೆ!

ಈ ಹೆಸರು ಕೇಳಿದ ತಕ್ಷಣ ನಮ್ಮ ಮುಂದೆ ಬಂದು ನಿಲ್ಲುವ ಚಿತ್ರ ವ್ಯಾಸರಾಜ ಯತಿಗಳದ್ದು. ಅಲ್ಲಿರುವ ವ್ಯಾಸರಾಜ ಮಠದ್ದು. ಆದರೆ ವ್ಯಾಸರಾಜರು ಮಾಧ್ವಪೀಠದ ಯತಿಗಳಾಗಿ ಬಂದಾಗ ಈ ಸೋಸಲೆ ಗ್ರಾಮದ ಹೆಸರೂ ಅವರಿಗೆ ತಿಳಿದಿರಲಿಕ್ಕಿಲ್ಲ! ಕಾರಣ ಅವರು ಹುಟ್ಟಿದ್ದು ಬನ್ನೂರಿನಲ್ಲಿ, ಯತಿ ಪಟ್ಟ ಸ್ವೀಕರಿಸಿದ್ದು ಬ್ರಹ್ಮಣ್ಯತೀರ್ಥರ ಶಿಷ್ಯರಾಗಿ ಅಬ್ಬೂರಿನಲ್ಲಿ! ಅನಂತರ ದಾಸಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀಪಾದರಾಜರ ಸನ್ನಿಧಿಯಲ್ಲಿ ಶಿಷ್ಯವೃತ್ತಿ ಮಾಡಿ ವಿಜಯನಗರ ಅರಸರ ರಾಜಗುರುಗಳಾಗಿ ಕರ್ನಾಟಕಿ ವಿದ್ಯಾಸಿಂಹಾಸನಾಧೀಶ್ವರರಾಗಿ ಮೆರೆದು ಕೃಷ್ಣದೇವರಾಯನ ಕುಹೂ ಯೋಗವನ್ನು ನಿವಾರಿಸಿ ವ್ಯಾಸ ಕೂಟ-ದಾಸಕೂಟಗಳ ಸ್ಥಾಪಕರಾಗಿ ಹರಿದಾಸ ಪಂಥಕ್ಕೆ ನಾಂದಿ ಹಾಡಿ ಮುಂದೆ ನವ ವೃಂದಾವನದಲ್ಲಿ ವೃಂದಾವನಸ್ಥರಾದವರು.

ಹಾಗಿದ್ದ ಮೇಲೆ ವ್ಯಾಸರಾಜ ಮಠಕ್ಕೆ ಸೋಸಲೆ ಹೇಗೆ ಬಂದು ಅಂಟಿಕೊಂಡಿತು! ಇದಕ್ಕೆ ಕಾರಣರಾರು? ಎಂಬೆಲ್ಲ ಪ್ರಶ್ನೆಗಳು ಉದ್ಭವಿಸುವುದು ಸಹಜ, ಇದಕ್ಕೂ ಇತಿಹಾಸವಿದೆ.

ಶ್ರೀಮದ್ವಾಚಾರ್ಯರ ನೇರ ಶಿಷ್ಯರಾದ ಪದ್ಮನಾಭ ತೀರ್ಥರ ಪರಂಪರೆಯಲ್ಲಿ ಬಂದ ವಿದ್ಯಾಧಿರಾಜರ ಕಾಲದಲ್ಲಿ ರಾಜೇಂಧ್ರ ತೀರ್ಥರಿಂದ ಕವಲೊಡೆದ ಮಠ, ಮುಂದೆ ಅವರಿಂದ ಏಳನೆಯವರಾದ ರಾಮತೀರ್ಥರ ಕಾಲದಲ್ಲಿ ಮತ್ತೊಮ್ಮೆ ಎರಡು ಹೋಳಾಯಿತು. ಅಲ್ಲಿ ಇಬ್ಬರು ಯತಿಗಳಿಗೆ ದೀಕ್ಷೆ ಕೊಟ್ಟು ಒಬ್ಬರಿಗೆ ಲಕ್ಷ್ಮೀಧರರೆಂದೂ ಮತ್ತೊಬ್ಬರಿಗೆ ಲಕ್ಷ್ಮೀಕಾಂತರೆಂದೂ ನಾಮಕರಣ ಮಾಡಿ ಎರಡು ಮಠಗಳನ್ನಾಗಿ ಮಾಡಲಾಯಿತು. ಲಕ್ಷ್ಮೀಕಾಂತರಿಂದ ನಡೆದು ಬಂದ ಮಠವೇ ಸೋಸಲೆ ಮಠವಾಯಿತು. ಲಕ್ಷ್ಮೀಕಾಂತ ತೀರ್ಥರು ಸುಮಾರು ಹತ್ತು ವರುಷಗಳ ಕಾಲ ಪೀಠವನ್ನಲಂಕರಿಸಿ ಮೈಸೂರು ಜಿಲ್ಲೆಗೆ ಸೇರಿದ ತಿರುಮಕೂಡಲು ನರಸೀಪುರದಲ್ಲಿ ವೃಂದಾವನಸ್ಥರಾದರು. ಇದು ಕಾವೇರಿ ಕಪಿಲಾ ಹಾಗೂ ಸ್ಫಟಿಕ ನದಿಗಳ ಸಂಗಮ ಕ್ಷೇತ್ರ. ಈ ಮೂರು ನದಿಗಳ ಸಂಗಮ ಸ್ಥಳವಾದ್ದರಿಂದಲೇ ಇದು ‘ತಿರುಮಕೂಡಲು’ ಎಂದು ಪ್ರಸಿದ್ಧವಾಯಿತು. ಈ ತಿರುಮಕೂಡಲಿನಿಂದ ಐದು ಕಿ.ಮೀ.ನಷ್ಟು ದೂರದಲ್ಲಿರುವ ಗ್ರಾಮವೇ ಸೋಸಲೆ. ಮುಂದೇ ಇದೇ ಪರಂಪರೆಯಲ್ಲಿ ಬಂದ ವಿದ್ಯಾವಲ್ಲಭ ತೀರ್ಥರು ಈ ಸ್ಥಳದಲ್ಲಿ ಮಠ ಸ್ಥಾಪನೆ ಮಾಡಿದರು. ಹಾಗಾಗಿ ಇದು ಸೋಸಲೆ ವ್ಯಾಸರಾಜ ಮಠವೆಂದು ಕರೆಯಲ್ಪಟ್ಟಿತು. ಅಂದಿನಿಂದ ಈ ಸೋಸಲೆಗೆ ಒಂದು ವಿಶಿಷ್ಟಸ್ಥಾನ ಬಂದು ಅದರ ಹೆಸರು ಶಾಶ್ವತವಾಯಿತು. ಇಲ್ಲಿಂದ ಮುಂದೆ ಮಠದ ಪೀಠಕ್ಕೆ ಬಂದ ಯತಿಗಳಲ್ಲಿ ಅನೇಕರು ಸೋಸಲೆಯಲ್ಲೇ ವೃಂದಾವನಸ್ಥರಾಗಿ ವಿರಾಜಮಾನರಾಗಿದ್ದಾರೆ.

ಈ ಸೋಸಲೆ ಕೇವಲ ಒಂದು ಧಾರ್ಮಿಕ-ವೈದಿಕ ಪರಂಪರೆಯ ಕ್ಷೇತ್ರವಾಗಿರದೇ ತಿರುಮಕೂಡಲಿನ ನದೀ ಸಂಗಮದಂತೆ ಕಲಾಸಂಗಮವೂ ಆಗಿರುವುದೂ ಒಂದು ವೈಶಿಷ್ಟ್ಯವೇ.

ತಿರುಮಕೂಡಲು ನರಸೀಪುರ ನಾಡಿನ ಮಹಾಣ್‌ ಪಿಟೀಲು ವಾದಕ ಮೈಸೂರು ಟಿ.ಚೌಡಯ್ಯನವರಂಥ ಅಪ್ರತಿಮ ಕಲಾವಿದರನ್ನು ನೀಡಿದರೆ ಸೋಸಲೆಯೂ ಈ ದಿಸೆಯಲ್ಲಿ ಹಿಂದೆ ಬೀಳದೆ ಸೋಸಲೆ ರಾಮದಾಸರು, ಸೋಸಲೆ ಶೇಷಗಿರಿದಾಸರಂಥ ಖಂಜರಿ ವಾದಕರನ್ನು ನೀಡಿದೆ. ಅಷ್ಟೇ ಅಲ್ಲದೆ ದಾಸಪಂಥದಲ್ಲೂ ಪರಂಪರೆಯನ್ನು ಉಳಿಸಿಕೊಂಡು ಬಂದ ಕೀರ್ತಿ ಈ ಸೋಸಲೆಯದೇ!

ವ್ಯಾಸಕೂಟದೊಂದಿಗೆ ದಾಸಕೂಟವನ್ನೂ ಸ್ಥಾಪಿಸಿ “ನೀತಿಯೆಲ್ಲವನರಿತು ನಿಗಮ ವೇದ್ಯನ ನಿತ್ಯ ವಾತಸುತನಲ್ಲಿ ಹನ ವರ್ಣಿಸುತಲೀ, ಗೀತನರ್ತನದಿಂದ ಕೃಷ್ಣನ್ನ ಪೂಜಿಸುವ, ಪೂತಾತ್ಮ ಪುರಂದರ ದಾಸರಿವರಯ್ಯಾ” ಎಂದು ತಾವೇ ಮೊಟ್ಟ ಮೊದಲಿಗೆ ದಾಸದೀಕ್ಷೆಯನ್ನಿತ್ತ ಪುರಂದರದಾಸರನ್ನು ಕುರಿತು ಹಾಡಿ ಅವರ ಕೃತಿಗಳನ್ನು ಪುರಂದರೋಪನಿಷತ್‌ ಎಂದು ಕರೆದರು  ವ್ಯಾಸಮುನಿಗಳು. ಹೀಗೆ ತಮ್ಮ ಗುರುಗಳಿಂದಲೇ ಹೊಗಳಿಸಿಕೊಂಡ ಪುರಂದರದಾಸರದ್ದು ಸದ್ವಂಶ. ಆ ವಂಶದ-ಪರಂಪರೆಯಲ್ಲಿ ಬಂದವರಲ್ಲಿ ಬಹುತೇಕ ಮಂದಿ ದಾಸ ಪಂಥವನ್ನೇ ಅನುಸರಿಸಿಕೊಂಡು ಬಂದಿದ್ದಾರೆ. ಅಂಥವರಲ್ಲಿ ಸೋಸಲೆ ಪುರುಷೋತ್ತಮ ದಾಸರ ಹೆಸರು ಉಲ್ಲೇಖನೀಯ. ಕೇವಲ ದಾಸಪಂಥವನ್ನು ಅನುಸರಿಸಿ ಯಾಯಿವಾರವನ್ನು ಮಾಡಿಕೊಂಡು ಬಂದ ಹರಿದಾಸರಾಗದೆ ಹರಿಕಥಾ ಕ್ಷೇತ್ರದಲ್ಲೂ ಸಾಕಷ್ಟು ಕೃಷಿ ಮಾಡಿ ಉತ್ತಮ ಕೀರ್ತನಕಾರರು ಎಂಬ ಕೀರ್ತಿಗೆ ಪಾತ್ರರಾದವರು. ಇವರು ಆಗ ಮೈಸೂರು ಪ್ರಾಂತ್ಯದ ಆಳರಸರಾಗಿದ್ದ ಚಾಮರಾಜೇಂದ್ರ ಒಡೆಯರ್ ರವರ ಆಸ್ಥಾನ ವಿದ್ವಾಂಸರಾಗಿದ್ದವರು. ಇವರ ಮಗ ಶ್ರೀನಿವಾಸದಾಸರು ತಂದೆಯ ಜಾಡಿನಲ್ಲೇ ನಡೆದು ಬಂದು ಉತ್ತಮ ಕೀರ್ತನಕಾರರಾಗಿದ್ದರು. ಇವರ ಧರ್ಮಪತ್ನಿ ನರಸಮ್ಮನವರೂ ಉತ್ತಮ ಕಂಠ ಹೊಂದಿದ್ದು ದೇವರನಾಮಗಳನ್ನು, ಸಂಪ್ರದಾಯದ ಹಾಡುಗಳನ್ನು ಹಾಡುವಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದೇ ಅಲ್ಲದೆ ಯಾರದೇ ಮನೆಯಲ್ಲಿ ಹಬ್ಬ-ಹಸೆ, ಆರತಿ-ಅಕ್ಷತೆಗಳ ಶುಭಸಂದರ್ಭಗಳಲ್ಲಿ ನರಸಮ್ಮನವರ ಹಸೆಗೆ ಕರೆದ ಹಾಡು; ಆರತಿ ಹಾಡುಗಳಿಲ್ಲದೆ ಉತ್ಸವ ಮುಗಿಯುವಂತೆಯೇ ಇರಲಿಲ್ಲ.

ಆದರೆ ಶ್ರೀನಿವಾಸದಾಸರ ಮಗ ಅಪ್ರಮೇಯಪ್ಪನವರು ಮಾತ್ರ ಪಂಡಿತ ಪುತ್ರರಾದರು. ವಂಶಪಾರಂಪರ್ಯವಾಗಿ ಬಂದ ಹರಿಕಥಾ ಕಲೆ ಇವರಿಗೆ ಒಲಿಯಲೇ ಇಲ್ಲ. ಮಗನ ಬಗ್ಗೆ ಶ್ರೀನಿವಾಸದಾಸರಿಗೆ ಸ್ವಲ್ಪ ಮಟ್ಟಿನ ಚಿಂತೆಯೇ ಆಯಿತು. ಮದುವೆ ಮಾಡಿದರೆ ಬಂದ ಹೆಣ್ಣಿನ ಕಾಲ್ಗುಣದಿಂದಲಾದರೂ ಮಗನಿಗೆ ಕಲೆ ಸಿದ್ಧಿಸಬಹುದೇನೋ ಎಂಬ ಆಸೆ ಹೊತ್ತು ಕುಲೀನ ಮನೆತನದ ಸುಂದರಮ್ಮ ಎಂಬ ಕನ್ಯೆಯೊಡನೆ ವಿವಾಹವನ್ನು ಮಾಡಿದರು. ಸುಂದರಮ್ಮ ಸಹ ಸಂಪ್ರದಾಯಸ್ಥರ ಮನೆಯ ಹುಡುಗಿ. ಮನೆ ಮಟ್ಟಿಗೆ ಹಾಡುವಷ್ಟು ಹಾಡು ಹಸೆಗಳನ್ನು ಕಲಿತಿದ್ದಳು. ಕಾಲಕ್ರಮದಲ್ಲಿ ಈ ದಂಪತಿಗಳಿಗೆ ಹುಟ್ಟಿದ ಮಗನೇ ಕರ್ನಾಟಕ ಕಥಾಕೀರ್ತನ ಕ್ಷೇತ್ರದಲ್ಲಿ ತಮ್ಮ ಅಪ್ರತಿಮ ಪಾಂಡಿತ್ಯದಿಂದ ಮೆರೆದು ವಂಶದ ಹೆಸರಿಗೆ ಕೀರ್ತಿ ತಂದ ಸೋಸಲೆ ನಾರಾಯಣ ದಾಸರು.

ಬಾಲ್ಯ-ವಿದ್ಯಾಭ್ಯಾಸ: ಅಪ್ರಮೇಯಪ್ಪನವರಿಗೆ ಗಂಡು ಸಂತಾನವಾದಾಗ ಮೊಮ್ಮಗನಿಗೆ ಶ್ರೀನಿವಾಸ ದಾಸರು ನಾರಾಯಣ ಎಂದು ಹೆಸರಿಟ್ಟರು. ತಾವೇ ಹಾಡು, ದೇವರನಾಮಗಳನ್ನು ಹೇಳುತ್ತಾ ಅದು ಸದಾ ಮಗುವಿನ ಕಿವಿಗೆ ಬೀಳುವಂತೆ ಮಾಡುತ್ತಿದ್ದರು. ಮಗ ಅಪ್ರಮೇಯಪ್ಪನಿಗೆ ಒಲಿಯದ ಕಲೆ ಮೊಮ್ಮನಿಗಾದರೂ ಒಲಿಯಲಿ ಎಂಬ ಅವರ ಆಸೆ ಹುಸಿಯಾಗಲಿಲ್ಲ. “ಬೆಳೆಯುವ ಪೈರಿನ ಗುಣ ಮೊಳಕೆಯಲ್ಲೇ” ಎಂಬ ಗಾದೆಯಂತೆ ನಾರಾಯಣ ಅತಿ ಚಿಕ್ಕ ವಯಸ್ಸಿನಲ್ಲೇ ಗಾಯನ ಕಲೆಯ ಕಡೆ ಆಸಕ್ತಿ ತೋರಿದ್ದು  ಮರುಭೂಮಿಯಲ್ಲಿ ಗಂಗಾಜಲವನ್ನು ಕಂಡಂತಾಯಿತು. ತಾವೇ ಮೊಮ್ಮಗನಿಗೆ ಆರಂಭದ ಶಿಕ್ಷಣ ಕೊಡಿಸುವ ಯೋಚನೆ ಮಾಡುತ್ತಿದ್ದಾಗ ಅವರ ಕಣ್ಣಿಗೆ ಬಿದ್ದವರು ಸೋಸಲೆ ರಾಮದಾಸರು, ಸೊಸೆ ಸುಂದರಮ್ಮನವರ ಅಣ್ಣ. ಸಂಗೀತ-ಹರಿಕಥೆ ಎರಡರಲ್ಲೂ ನುರಿತವರು. ಆಗಿನ ಕಾಲಕ್ಕೆ ಒಳ್ಳೆಯ ವಿದ್ವಾಂಸರೆಂಬ ಹೆಸರನ್ನು ಗಳಿಸಿದ್ದವರು.

ಶ್ರೀನಿವಾಸದಾಸರು ವೀಣೆ ಶೇಷಣ್ಣನವರ ಸಮಕಾಲೀನರು. ರಾಮದಾಸರು ಶೇಷಣ್ಣನವರ ಕಚೇರಿಗಳಿಗೆ ಅನೇಕ ಬಾರಿ ಖಂಜರಿ ವಾದ್ಯ ನುಡಿಸಿದವರು. ಮೊಮ್ಮಗ ನಾರಾಯಣನಿಗೆ ತಾತ ಶ್ರೀನಿವಾಸದಾಸರು ಹಾಗೂ ಸೋಸಲೆ ರಾಮದಾಸರಿಂಧ ಸಮಗ್ರ ಶಿಕ್ಷಣ ದೊರೆಯಿತು. ಆಗ ಇವರಿದ್ದದ್ದು ಮೈಸೂರಿನಲ್ಲಿ ಹಾಗಾಗಿ ಇವರ ಲೌಕಿಕ ಶಿಕ್ಷಣ ನಡೆದದ್ದು  ಮೈಸೂರಿನ ದಳವಾಯಿ ಶಾಲೆಯಲ್ಲಿ. ಅದೇ ಸಂದರ್ಭದಲ್ಲಿ ಈ ಲೇಖಕನ ತಂದೆ ಗಮಕ ವಿದ್ವಾನ್‌ ಮೈ.ಶೇ. ಅನಂತಪದ್ಮನಾಭರಾಯರೂ ಅದೇ ಶಾಲೆಯಲ್ಲಿ ಓದುತ್ತಿದ್ದರಂತೆ. ವಯಸ್ಸಿನಲ್ಲಿ ನಾರಾಯಣದಾಸರಿಗಿಂತ ಒಂದು ವರ್ಷ ಚಿಕ್ಕವರು. ಆಗಿನಿಂದಲೇ ನಮ್ಮ ತಂದೆಯವರ ಚಿರಪರಿಚಿತರಾಗಿದ್ದರು ನಾರಾಯಣದಾಸರು. ದಳವಾಯಿ ಶಾಲೆಯಲ್ಲಿ ಆಗ ಶಿಕ್ಷಕರಾಗಿದ್ದ ನಂಜುಂಡಯ್ಯ  ಎಂಬುವರು ನಮಗೆ ತುಂಬಾ ಆತ್ಮೀಯರಾಗಿದ್ದರವರು. ಇವರ ಸಹೋದ್ಯೋಗಿ ಆನವಟ್ಟಿರಾಮರಾಯರು. ಲೋಕಾಭಿರಾಮವಾಗಿ ಮಾತನಾಡುತ್ತಾ ಹರಿಕಥೆಯ ವಿಚಾರ ಬಂದಾಗ ಮೊದಲಿಗೆ ಅವರ ಬಾಯಿಂದ ಬರುತ್ತಿದ್ದ ಹರಸರು ನಾರಾಯಣದಾಸರದ್ದು. “ಆಕಾರದಲ್ಲಿ ವಾಮನ ಮೂರ್ತಿಯಾದರೂ ಕೀರ್ತಿಯಲ್ಲಿ ತ್ರಿವಿಕ್ರಮನಂತೆ ಬೆಳೆದವರು” ಎಂದು ಆಗಾಗ್ಗೆ ನಂಜುಂಡಯ್ಯನವರು ಹೇಳುತ್ತಿದ್ದರು. ಆಗ ನನಗೂ ಅವರ ಬಗ್ಗೆ ಆಸಕ್ತಿ ಮೂಡಿ ನಾರಾಯಣದಾಸರ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎನ್ನಿಸಿತು. ಆದರೆ ಇದಾದ ಎಷ್ಟೋ ವರ್ಷಗಳ ನಂತರ ನಾರಾಯಣದಾಸರನ್ನು ಭೇಟಿಯಾಗುವ ಸಂದರ್ಭ ಕೂಡಿ ಬಂದದ್ದು ಅವರ ಮಗಳ ಮದುವೆಯ ಸಂದರ್ಭದಲ್ಲಿ. ನಮ್ಮ ತಾಯಿಯ ತಂಗಿಯ ಮಗನೇ ವರ! ಹೀಗಾಗಿ ಪರಿಚಯ  ಸಂಬಂಧವಾಗಿ ಬೆಸುಗೆ ಹಾಕಿತು.  ನಾನು ಆಗ ಪತ್ರಕರ್ತನಾಗಿ ರಾಷ್ಟ್ರೀಯ ಮಟ್ಟದ ಪತ್ರಿಕೆಯೊಂದರಲ್ಲಿ ಸಂಪಾದಕೀಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಲಾವಿದರ ಸಮಗ್ರ ಪರಿಚಯ ಲೇಖನ ಬರೆಯುತ್ತಿದ್ದೆ. ಅಲ್ಲದೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯವರು ಕರ್ನಾಟಕ ಕಥಾಕೀರ್ತನಕಾರರ ಪರಿಚಯ ಗ್ರಂಥವನ್ನು ಬರೆಯುವ ಹೊಣೆಯನ್ನು ನನಗೇ ವಹಿಸಿದ್ದರು. ಆಗ ಸಹಜವಾಗಿ ನಾರಾಯಣದಾಸರನ್ನು ಭೇಟಿಯಾಗಿ ಅವರಿಂದಲೇ ಕೆಲವು ವಿಷಯಗಳನ್ನು ಸಂಗ್ರಹಿಸಿದೆ.

ದಳವಾಯಿ ಶಾಲೆಯಲ್ಲಿ ಓದುತ್ತಿದ್ದಾಗ್ಗೆ ಹುಡುಗ ನಾರಾಯಣನ ಕಂಠಶ್ರೀಗೆ ಮಾರುಹೋದ ಆನವಟ್ಟಿ ರಾಮರಾಯರು ಹುಡುಗ ಸಂಗೀತ ಕಲಿಯಲು ಹೆಚ್ಚಿನ ಉತ್ತೇಜನ ನೀಡಿದರು. ಅಲ್ಲದೆ ಮನೆಯಲ್ಲಿ ಅಜ್ಜಿ ತಾತನಿಂದ ಕಠಿಣವಾದ ಗಾಯನ ಶಿಕ್ಷಣ. ತಪ್ಪಿದ್ದಲ್ಲಿ ನರಸಮ್ಮನ ಕೈಲಿದ್ದ ಸೌಟಿನಿಂದಲೇ ಪೆಟ್ಟು. ಹೀಗಾಗಿ ಶ್ರುತಿ, ಲಯ, ಸ್ವರಗಳೆಲ್ಲದರಲ್ಲೂ, ಪೂರ್ಣ ಖಚಿತತೆ ಗಳಿಸಿದವರು ದಾಸರು.

ಪ್ರಥಮ ರಂಗ ಪ್ರವೇಶ: ಹುಡುಗ ನಾರಾಯಣ ಕಿಶೋರಾವಸ್ಥೆಗೆ ಬರುವ ಹೊತ್ತಿಗೆ ಹರಿಕಥಾ ಕಲೆಯನ್ನು ಕರಗತ ಮಾಡಿಕೊಂಡು ‘ಬಾಲಪ್ರತಿಭೆ’ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ. ನಾರಾಯಣನಿಗೆ ಆಗ ಹನ್ನೆರಡು ವರ್ಷ. ಆಗ ವ್ಯಾಸರಾಜ ಮಠದ ಯತಿಗಳಾಗಿದ್ದವರು ಶ್ರೀ ಶ್ರೀ ವಿದ್ಯಾವಾರಿಧಿ ತೀರ್ಥ ಶ್ರೀಪಾದರು. ಅಪರೋಕ್ಷ ಜ್ಞಾನಿಗಳು. ಮಾಧ್ವಸಿದ್ಧಾಂತಗಳ ಎಲ್ಲಾ ಸಾರಗಳನ್ನು ಅರೆದು ಕುಡಿದವರು. ವಿದ್ಯಾಪಕ್ಷಪಾತಿಗಳು. ಆ ಬಾರಿಯ ಚಾತುರ್ಮಾಸ್ಯ ವ್ರತಕ್ಕಾಗಿ ಸೋಸಲೆಯಲ್ಲೇ ಬೀಡು ಬಿಟ್ಟಿದ್ದರು. ಈ ಹೊತ್ತಿಗೆ ಹರಿಕಥೆಯಲ್ಲಿ ಸಾಕಷ್ಟು ಪಾಂಡಿತ್ಯಗಳಿಸಿದ್ದರೂ ನಾರಾಯಣ ಇನ್ನೂ ವೇದಿಕೆ ಹತ್ತಿರಲಿಲ್ಲ. ಸ್ವತಂತ್ರವಾಗಿ ಕಾರ್ಯಕ್ರಮ ನೀಡಿರಲಿಲ್ಲ. ತಾತ ಶ್ರೀನಿವಾಸದಾಸರ ಹರಿಕಥೆಯಾಗುವಾಗ ಜೊತೆಯಲ್ಲಿ ಸಹಕರಿಸುವ ಅಭ್ಯಾಸವಾಗಿತ್ತು. ಈಗ ಹುಡುಗ ನಾರಾಯಣನಿಗೊಂದು ಸುಯೋಗ. ಶ್ರೀಗಳವರ ಸನ್ನಿಧಿಯಲ್ಲಿ ಕಥೆ ಮಾಡುವ ಸದವಕಾಶ. ಹುಡುಗನೂ ಅಳುಕಲಿಲ್ಲ, ಕಳವಳಿಸಲಿಲ್ಲ, ಸ್ವಾಮಿಗಳ ಸಮ್ಮುಖದಲ್ಲಿ ಕಥೆ ಮಾಡುವುದಾಗಿ ಧೈರ್ಯದಿಂದಲೇ ಒಪ್ಪಿಕೊಂಡ.

ಅಂದು ಶ್ರೀಮಠದಲ್ಲಿ ವಿದ್ವಜ್ಜನರು ಹಾಗೂ ಭಕ್ತಾದಿಗಳು ಬಂದು ಸೇರಿದ್ದರು. ಎಲ್ಲರ ಬಾಯಲ್ಲೂ ಒಂದೇ ಮಾತು. ಯಾರೋ ಹನ್ನೆರಡು ವರುಷದ ಬಾಲಕನಂತೆ ಕಥೆ ಮಾಡುತ್ತಾನಂತೆ! ಎಲ್ಲರಿಗೂ ಹುಡುಗನನ್ನು ನೋಡುವ ಕುತೂಹಲ. ಕಥೆ ಕೇಳುವ ಆಸಕ್ತಿ. ಸ್ವಾಮಿಗಳು ಬಂದು ಸಭೆಯಲ್ಲಿ ಆಸೀನರಾಗಿದ್ದಾರೆ. ಸ್ವತಃ ತಾತ ಶ್ರೀನಿವಾಸದಾಸರೇ ಮೊಮ್ಮಗನನ್ನು ವೇದಿಕೆಗೆ ಕರೆತಂದರು. ಹುಡುಗ ವಾಮನ ಮೂರ್ತಿ. ಶುಭ್ರವಾದ ಬಿಳಿ ಕಚ್ಚೆ ಪಂಚೆವುಡಿಸಿ, ದ್ವಾದಶನಾಮಗಳ ಲಾಂಛನದೊಂದಿಗೆ ಹುಡುಗ ಬಂದು ಶ್ರೀಗಳವರಿಗೆ ನಮಸ್ಕರಿಸಿ ಅವರ ಸಂಪೂರ್ಣ ಅನುಗ್ರಹ ಪಡೆದು ವೇದಿಕೆಗೆ ಬಂದು ಕಾರ್ಯಕ್ರಮ ಆರಂಭಿಸಿದ. ತಾರತಮ್ಮ ಸ್ತೋತ್ರ ಅನಂತರ ಕಥೆಗೆ ಪೂರ್ವ ಪೀಠಿಕೆ ಮುಗಿಸಿ ಪ್ರಮುಖ ಕಥಾ ಭಾಗಕ್ಕೆ ಬರುವ ಹೊತ್ತಿಗೆ ಹುಡುಗನ ಕಂಠಶ್ರೀಗೆ ಅವನ ವಾಕ್ಪಟುತ್ವಕ್ಕೆ ಸಭಿಕರು ಮಾರುಹೋಗಿದ್ದರು. ಅಂದಿನ ಕಥೆ “ಭಕ್ತ ಪ್ರಹ್ಲಾದ”! ಎಳೆಯ ಹುಡುಗ ಪ್ರಹ್ಲಾದನ ಭಕ್ತಿಯ ಕುರಿತು ಈ ಎಳೆಯ ಪೋರನಿಂದ ಸುಲಲಿತ ನಿರೂಪಣೆ. ಕಥೆ ಮುಗಿಯುವ ಹೊತ್ತಿಗೆ ಎಲ್ಲರ ಕಣ್ಣಲ್ಲೂ ನೀರು. ಅಲ್ಲಿ ಪ್ರಹ್ಲಾದಚ ಪಟ್ಟ ಕಷ್ಟಕೋಟಲೆ ದುಃಖ; ಅದನ್ನು ನಿರೂಪಣೆ ಮಾಡಿದ ನಾರಾಯಣನ ವಾಗ್ವೈಖರಿಗೆ ಸಂತೋಷ! ಶ್ರೀಗಳವರು ಹುಡುಗ ತಲೆ ಸವರಿ ಪೂರ್ಣಾನುಗ್ರಹ ಮಾಡಿ ಈತನಿಗೆ ಉಜ್ವಲ ಭವಿಷ್ಯವಿದೆ ಎಂದು ಆಶೀರ್ವದಿಸಿದರು. ಹೀಗೆ ತಮ್ಮ ಹನ್ನೆರಡನೆಯ ವಯಸ್ಸಿನಲ್ಲೇ ತಮ್ಮ ಮಠದ ಗುರುಗಳಿಂದಲೇ ಅನುಗೃಹೀತರಾಗಿ ‘ಕಿಶೋರ ಪ್ರತಿಭೆ’ಯೆನಿಸಿದರು ನಾರಾಯಣದಾಸರು.

ದಾಸರು ಗಾಯನದ ಜೊತೆಗೆ ಹಾರ್ಮೋನಿಯಂ ವಾದನ ಹಾಗೂ ಖಂಜರಿ ನುಡಿಸುವುದನ್ನೂ ಕಲಿತು ಸ್ವತಂತ್ರವಾಗಿ ಇತರ ಕಾರ್ಯಕ್ರಮಗಳಿಗೆ ಪಕ್ಕವಾದ್ಯವನ್ನೂ ನುಡಿಸುತ್ತಿದ್ದರು.

ಮುಂದೆ ಹರಿಕಥಾ ಕಲೆಯನ್ನೇ ತಮ್ಮ ವ್ಯಕ್ತಿ ಮಾಧ್ಯಮವನ್ನಾಗಿ ಮಾಡಿಕೊಂಡು ಬೆಂಗಳೂರಿಗೆ ವಲಸೆ ಬಂಧರು. ಶ್ರೀಮಠದ ಕಡೆಯಿಂದ ಇವರ ಕೀರ್ತಿ ಈಗಾಗಲೇ ಅನೇಕ ಕಡೆ ವ್ಯಾಪಿಸಿದ್ದು ಬೆಂಗಳೂರು ವ್ಯಾಸರಾಜ ಮಠದಲ್ಲಿ ಅನೇಕ ದಿನಕಾಲ ಸತತವಾಗಿ ಕಥೆ ನಡೆಸಿದರು. ಹೊರ ರಾಜ್ಯಕ್ಕೂ ಇವರ ಕೀರ್ತಿ ಪಸರಿಸುವಂತಾಗಿ ಆಂಧ್ರಪ್ರದೇಶದ ರಾಜಂಪೇಟೆಯ ಮಾಧ್ವಸಂಘದಲ್ಲಿ ಏಳು ದಿನಗಳ ಕಾಲ ಹರಿಕಥೆ ಮಾಡಿ ಬಂದರು.

ಬೆಂಗಳೂರು ಸುಲ್ತಾನ ಪೇಟೆಯ ಹಳೇ ಶೃಂಗೇರಿ ಮಠದಲ್ಲೂ ಹರಿಕಥಾ ಸಪ್ತಾಹ ನಡೆಸಿದರು. ಬೆಂಗಳೂರಿನ ಬಡಾವಣೆಗಳಲ್ಲಿನ ಬಹುತೇಕ ಮಾಧ್ವಸಂಘಗಳು, ರಾಯರ ಮಠಗಳು, ರಾಮ, ಕೃಷ್ಣ ದೇವಸ್ಥಾನಗಳಲ್ಲಿ ಅವರ ಕಥೆಗಳು ಸತತವಾಗಿ ನಡೆಯುತ್ತಿದ್ದವು. ಇಂಥ ಸಂದರ್ಭಗಳಲ್ಲಿ ಹಿರಿಯ ಹಾರ್ಮೋನಿಯಂ ಮಾಂತ್ರಿಕ ಅರುಣಾಚಲಪ್ಪನವರು ಅವರ ಕಾರ್ಯಕ್ರಮಗಳಿಗೆ ಸ್ವಯಂ ಪ್ರೇರಿತರಾಗಿ ಹಾರ್ಮೋನಿಯಂ ನುಡಿಸಿದ್ದಾರೆಂಧ ಮೇಲೆ ನಾರಾಯಣದಾಸರ ಗಾನವೈಖರಿ ಎಂಥಾದ್ದು ಎಂಬುದಕ್ಕೆ ವಿವರಣೆ ಅನಗತ್ಯ. ಅವರ ಕಂಠಶ್ರೀಯ ಮುಂದೆ ನನ್ನ ಶಾರೀರ ಏನೇನು ಅಲ್ಲ ಎಂದು ಕಂಠ ಭಯಂಕರರೆಂದೇ ಪ್ರಸಿದ್ಧರಾಗಿದ್ದ ಬಿ.ಎಸ್‌. ರಾಜೈಂಗಾರ್ಯರು ಉದ್ಗರಿಸಿದ್ದರಂತೆ! ಕಾರಣ ಇಬ್ಬರೂ ಹಾಡುತ್ತಿದ್ದುದು ಕಪ್ಪು ಎರಡನೇ ಮನೆ ಶ್ರುತಿಯಲ್ಲಿ.

ವಿಶಿಷ್ಟ ದಾಖಲೆ: ಆ ಕಾಲಕ್ಕೆ ಬಹುಶಃ ಯಾವ ಕೀರ್ತನಕಾರನೂ ಸಾಧಿಸಲಾಗದಂಥ ಅದ್ಭುತ ಸಾಧನೆಯನ್ನು ಮಾಡಿದವರು  ನಾರಾಯಣದಾಸರು. ಸುಲ್ತಾನ್‌ ಪೇಟೆಯ ಶೃಂಗೇರಿ ಮಠದಲ್ಲಿ ಪ್ರಥಮ ಬಾರಿಗೆ ಸಪ್ತಾಹ ನಡೆಸಿದಾಗ ಅವರ ವಿದ್ವತ್ತಿಗೆ ಮಾರುಹೋದ ಮಠದ ಅಧಿಕಾರಿಗಳು ಸತತವಾಗಿ ಮೂವತ್ತೈದು ವರ್ಷಗಳ ಕಾಲ ಅವರಿಂದ ಕಥಾ ಕೀರ್ತನೆಯನ್ನು ನಡೆಸಿ ಒಂದು ವಿಶಿಷ್ಟ ದಾಖಲೆಯನ್ನೇ ಸೃಷ್ಟಿಸಿದವರು . ಇದರ ಕುರುಹಾಗಿ ಮಠದ ವತಿಯಿಂದ ಇವರಿಗೆ ೧,೦೦೦ ತೊಲ ತೂಕದ ಸಂಪೂರ್ಣ ಬೆಳ್ಳಿಯ ಮಂಟಪವನ್ನು ಕಾಣಿಕೆಯಾಗಿ ನೀಡಿ ಗೌರವಿಸಿದರು. ಈ ಮಂಟಪ ನಾರಾಯಣದಾಸರ ಕೊನೆಯುಸಿರಿರುವ ತನಕ ಅವರ ದೇವರ ಮನೆಯಲ್ಲಿ ವಿರಾಜಮಾನವಾಗಿದ್ದು ಈಗ ಅವರ ಮಕ್ಕಳ ಮನೆಯಲ್ಲಿದೆ.

ಹೊರರಾಜ್ಯಕ್ಕೂ ಇವರ ಕೀರ್ತಿ ಪಸರಿಸಿ ಮುಂಬಯಿ, ಚೆನ್ನೈ, ಆಂಧ್ರ ಮೊದಲಾದೆಡೆ ಸಂಚರಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಮಠಮಾನ್ಯಗಳು, ಸಂಸ್ಥೆಗಳು ಇವರನ್ನು ಗೌರವಿಸಿ ಬಿರುದುಗಳನ್ನು ನೀಡಿ ಸನ್ಮಾನಿಸಿವೆ.

ಪ್ರಸಂಗಗೋಚಿತ ಪ್ರಸ್ಫರ ವಾಕ್ಪಾರಾವಾರ, ಪ್ರಾಕ್ತನ ಕೀರ್ತನಕೇಸರಿ, ಹರಿಕಥಾ ವಿದ್ವನ್ಮಣಿ, ಕೀರ್ತನ ಕಲಾ ವಿಚಕ್ಷಣ ಮುಂತಾದ ಬಿರುದುಗಳಿಗೆ ಪಾತ್ರರಾದ ನಾರಾಯಣದಾಸರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕರ್ನಾಟಕ ಕಲಾತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಗಾನ ಕಲಾ ಪರಿಷತ್ತು ಸಹ ಈ ವಿಚಾರದಲ್ಲಿ ಹಿಂದುಳಿಯದೆ ತನ್ನ ವಾರ್ಷಿಕ ಸಂಗೀತ ವಿದ್ವಾಂಸರ ಸಮ್ಮೇಳನದ ವಿದ್ವತ್‌ ಸದಸ್‌ನಲ್ಲಿ ಗೌರವಿಸಿ ಸನ್ಮಾನಿಸಿದೆ.

ಮಾಗಡಿ ರಸ್ತೆಯ ಶ್ರೀ ಗುರುರಾಘವೇಂದ್ರ ಸೇವಾ ಸಮಿತಿ, ಕರ್ನಾಟಕ ಕೀರ್ತನ ಮಹಾವಿದ್ಯಾಲಯ, ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಇವರಿಗೆ ಶಾಲು ಹೊದಿಸಿ ಗೌರವಿಸಿವೆ.

ಪ್ರಸಿದ್ಧ ಹೆಚ್‌.ಎಂ.ವಿ. ಧ್ವನಿಮುದ್ರಣ ಸಂಸ್ಥೆ ಇವರಿಂದ ಮೂರು ಕಥಾಪ್ರಸಂಗಗಳನ್ನು ಧ್ವನಿ ಮುದ್ರಿಸಿಕೊಂಢು ಪ್ರಸಾರಮಾಡಿದೆ. ಆಕಾಶವಾಣಿ ಕಲಾವಿದರಾಗಿಯೂ ಅನೇಕ ವರ್ಷಗಳ ಕಾಲ ಕಥಾ ಕೀರ್ತನ ಕಾರ್ಯಕ್ರಮಗಳ ಪ್ರಸಾರ ಮಾಡಿದ್ದಾರೆ.

ಇವರದು ತುಂಬು ಕುಟುಂಬ. ಗಂಡು ಮಕ್ಕಳ ಪೈಕಿ ಎಸ್‌.ಎನ್‌. ಸುರೇಶ್‌ ತಂದೆಯ ಹಾದಿಯಲ್ಲೇ ಬಂದು ಬಾಲಪ್ರತಿಭೆಯಾಗಿ ಮೆರೆದು ಇಂದು ಒಬ್ಬ ಪ್ರತಿಭಾವಂತ ಕೀರ್ತನಕಾರರಾಗಿ ಹೆಸರು ಗಳಿಸಿದ್ದಾರೆ.

ರಾಯರ ಬೃಂದಾವನ ಸ್ಥಾಪನೆ: ಇಷ್ಟಾದರೂ ನಾರಾಯಣದಾಸರ ಮನಸ್ಸಿನಲ್ಲಿ ಏನೋ ಒಂದು ಅತೃಪ್ತಿ. “ರಾಯರ” ಅವಿಚ್ಛಿನ್ನ ಭಕ್ತರಾಗಿದ್ದ ದಾಸರಿಗೆ ಒಂದು ಬೃಂದಾವನವನ್ನು ಸ್ಥಾಪಿಸಬೇಕೆಂಬ ಪ್ರಬಲ ಹಂಬಲ. ಆಗ ಅವರು ವಾಸವಿದ್ದದ್ದು ಈಜುಕೊಳ ಬಡಾವಣೆಯಲ್ಲಿ. ರಾಜಾಜಿನಗರದ ಎರಡನೇ ಹಂತ (ಈಗ ಸುಬ್ರಹ್ಮಣ್ಯನಗರ)ದಲ್ಲಿ ಅವರಿಗೆ ಸೇರಿದ ಒಂದು ನಿವೇಶನವಿತ್ತು. ಅಲ್ಲಿ ಮೊದಲಿಗೆ ಶ್ರೀ ಸತ್ಯನಾರಾಯಣ ದೇವರನ್ನು ಪ್ರತಿಷ್ಠಾಪಿಸಿ ಗುಡಿಕಟ್ಟಿಸಿ ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರುವಂತೆ ಏರ್ಪಾಡು ಮಾಡಿದ್ದರು. ಕಾಲಕ್ರಮೇಣ ದೇವರ ಪಕ್ಕದಲ್ಲಿಯೇ. ಮೂಲಮೃತ್ತಿಕೆಯೊಡನೆ ರಾಯರ ಬೃಂದಾವನವನ್ನೂ ಪ್ರತಿಷ್ಠಾಪಿಸಿ ತಮ್ಮ ಸಂಕಲ್ಪವನ್ನು ಪೂರ್ಣಗೊಳಿಸಿದರು. ಅವರಿರುವಷ್ಟು ಕಾಲವೂ ಅಲ್ಲಿ ರಾಯರ ಆರಾಧನೋತ್ಸವವನ್ನು ಮೂರುದಿವಸಗಳ ಕಾಲ ಅದ್ಧೂರಿಯಿಂದ ನಡೆಸುತ್ತಿದ್ದರು. ಸಂಜೆಯ ಹೊತ್ತಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲ ದಿನ ಅವರದ್ದೆ “ಪ್ರಹ್ಲಾದ ವಿಜಯ” ಕಥೆ ನಡೆದರೆ ಎರಡನೆಯ ದಿನ ಮಗ ಸುರೇಶ್‌ ಅವರಿಂದ “ರಾಘವೇಂದ್ರ ವಿಜಯ” ಕಥೆ ನಡೆಯುತ್ತಿತ್ತು. ಮೂರನೆಯ ದಿನ ಪ್ರಸಿದ್ಧ ವೇಣು ವಾದಕ ಸಿ.ಎಂ. ಮಧುರಾನಾಥ್‌ ಅವರ ವೇಣುವಾದನ. ಇದು ನಾರಾಯಣದಾಸರು ಬದುಕಿರುವವರೆಗೂ ಅನೂಚಾನವಾಗಿ ನಡೆದುಕೊಂಡು ಬಂದಿತ್ತು.

ಮುಂದೆ ಅಂದರೆ ತಮ್ಮ ನಂತರ ಮಠದ ಕಾರ್ಯಾಚರಣೆಗಳು ಸುವ್ಯವಸ್ಥಿತವಾಗಿ ಶಾಸ್ತ್ರ ಪ್ರಕಾರವಾಗಿ ನಡೆಸಿಕೊಂಡು ಬರುವಂತೆ ಮಕ್ಕಳೆಲ್ಲರ ಅನುಮತಿ ಪಡೆದು ಮಂದಿರದ ಸಮಸ್ತ ಸ್ಥಳವನ್ನು ಸೋಸಲೆ ವ್ಯಾಸರಾಜ ಮಠಕ್ಕೆ ನೀಡುವಂತೆ ದಾನಪತ್ರ ಬರೆದು ಆಗ ಶ್ರೀಮಠದ ಯತಿಗಳಾಗಿದ್ದ ಶ್ರೀಶ್ರೀ ವಿದ್ಯಾಪಯೋನಿಧಿ ತೀರ್ಥ ಶ್ರೀ ಪಾದಂಗಳವರಿಗೆ ಅರ್ಪಿಸಿ ತಮ್ಮ ಸಂಕಲ್ಪವನ್ನು ಪೂರೈಸಿ ತಮ್ಮ ತೊಂಬತ್ತೆರೆನೇ ವಯಸ್ಸಿನಲ್ಲಿ ಹರಿಪಾದ ಸೇರಿದರು.

ಈಗ ಅವರಿಂದ ಸ್ಥಾಪಿಸಲ್ಪಟ್ಟ ರಾಯರ ಮಠ ಸೋಸಲೆ ಮಠವಾಗಿ ಪರಿವರ್ತಿತಗೊಂಡು ನಾರಾಯಣದಾಸರ ಹೆಸರು ಅಜರಾಮರವಾಗಿದೆ.