ಸುಂದರ ದಿನ ಸುಂದರ ಇನ
ಸುಂದರ ವನ ನೋಡು ಬಾ
ಎಳೆ ಬಿಸಿಲೊಳು ತಿಳಿಗೊಳದೊಳು
ಜಲದಲೆಗಳು ನಲಿನಲಿಯಲು
ನೋಡು ಬಾ | ಕೂಡು ಬಾ!
ಬೇಗ ಬಾ | ಬಾ! ಬಾ!
[1]

ಇದು ಸುತ್ತಣ ನಿಸರ್ಗದಲ್ಲಿ ಒಂದು ಬೆಳಗು ಸೌಂದರ‍್ಯಾನುಭವವನ್ನು ಪಡೆದ ಕವಿಯ ಉಲ್ಲಾಸದ ಕರೆ. ಅದೇ ರಸಜೀವಿ ಮತ್ತೆ ಒಮ್ಮೆ –

ಅಂಗಳದವರೆಯ ಚಪ್ಪರದಡಿಯಲಿ
ಮೈ ಮರೆತೊರಗುವುದಾನಂದ!
ಮಲಗಿರೆ ನಡುವಗಲುರಿ ಬಿಸಿಲಲ್ಲಿ
ಬೇಸಗೆ ಬಿಸಿಯುಸಿರಾಡುತಿರೆ
ಹಸುರಾದೆಲೆಗಳ ಬಳ್ಳಿಯ ಕೆಳಗಡೆ
ತಂಪೊಳು ಮಲಗುವುದೆನಿತಂದ!
[2]

ಹೀಗೆನ್ನುತ್ತಾನೆ. ಇದೇನು ಹುಚ್ಚು ಈ ಕವಿಗೆ! ಈತ ಕರೆಯುತ್ತಿರುವುದು ಬೇಸಗೆಯ ದಿನ ನೀಲಗಿರಿಯ ಶಿಖರದ ಅರಮನೆಯ ವಾಸದ ಆನಂದಕ್ಕಲ್ಲ. ಅಂಗಳದವರೆಯ ಚಪ್ಪರದಡಿ ಹಸುರಾದೆಲೆಗಳ ಬಳ್ಳಿಯ ಕೆಳಕ್ಕೆ! ತಿಳಿಗೊಳದ ಅಲೆಗಳು ಎಳೆ ಬಿಸಿಲಿನಲ್ಲಿ ನಲಿಯುವುದನ್ನು ನೋಡುವುದಕ್ಕಾಗಲೀ, ಅಂಗಳದವರೆಯ ಚಪ್ಪರದಡಿ ಮಲಗಿ ಸುಖಿಸುವುದಕ್ಕಾಗಲೀ, ಎಷ್ಟು ಜನ ಮುಂದೆ ಬರುತ್ತಾರೆ! ಈ ಬಗೆಯ ವ್ಯಾಪಾರಗಳಲ್ಲಿ ಏನು ಸುಖವಿದ್ದೀತು – ಎನ್ನಿಸುತ್ತದೆ ಬಹಳ ಜನಕ್ಕೆ. ಆದರೆ ನಲವನ್ನೇ ಕಾಣುವ ಕವಿ ಜೀವಕ್ಕೆ ಅಷ್ಟೇ ಸಾಕು, ಆನಂದವನ್ನು ಪಡೆಯಲು.

ಕವಿಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದ ಹೂತ ಹುಣಸೀಯ ಮರ ಸಾಕ!
[3]

ಏನು ಸೋಜಿಗ ಈ ಕವಿಗಳ ರೀತಿ! ಸಾಮಾನ್ಯವಾದ ಕಲ್ಲು – ಮಣ್ಣುಗಳನ್ನು ಮಕ್ಕಳು ಬೆಳ್ಳಿಬಂಗಾರ ಎಂದುಕೊಂಡು ಆಟವಾಡುವಂತೆ, ಸಾಮಾನ್ಯವಾದ ನಿರ್ವಿಶೇಷವೆನ್ನಿಸುವ ವಸ್ತುಗಳಲ್ಲಿ ಈ ಕವಿಗಳು ಆನಂದವನ್ನು ಪಡೆಯುವರಲ್ಲ! ಎಷ್ಟು ಸುಲಭವಾಗಿ ಕವಿಜೀವ ವಸ್ತುವೊಂದರ ಅಂತರಂಗವನ್ನು ಪ್ರವೇಶಿಸಿ ಒಂದು ಬಗೆಯ ನಲವನ್ನು ಪಡೆಯುತ್ತದೆ! ಈ ನಲವು ಕೇವಲ ಸುಖರೂಪವಾದ ಆಹ್ಲಾದವಲ್ಲ. ಕೇವಲ ಹೊರಗನ್ನು ಕಂಡ ಬೆರಗಿನ ಉದ್ಗಾರವಲ್ಲ. ಗಿಡದಲ್ಲಿ ಅರಳಿದ ಮಲ್ಲಿಗೆಯ ಹೂವೊಂದನ್ನು ಕಂಡು ಕವಿ ಹೀಗೆ ಬೆರಗಾಗುತ್ತಾನೆ –

ನೋಡು ಇದೊ ಇಲ್ಲರಳಿ ನಗುತಿದೆ
ಏಳುಸುತ್ತಿನ ಮಲ್ಲಿಗೆ
ಇಷ್ಟು ಹಚ್ಚನೆ ಹಸುರು ಗಿಡದಿಂ
ದೆಂತು ಮೂಡಿತೊ ಬೆಳ್ಳಗೆ!
[4]

ಈ ಸೋಜಿಗ ಹೂವಿನ ಹೊರಮೈ ಚೆಲುವನ್ನು ಕಂಡದ್ದರಿಂದ ಆದುದಲ್ಲ; ಅದು ಇಂತಹ ಹಸುರು ಗಿಡದಲ್ಲಿ ಇಷ್ಟು ಬೆಳ್ಳನೆಯ ಹೂ ಹೇಗೆ ಮೂಡಿತು – ಎಂಬ ರಹಸ್ಯದ ಚಿಂತನೆಯಿಂದ, ಈ ಚಿಂತನೆಯೂ ಸುಂದರವಾಗಿದೆ. ದಾಳಿಂಬೆಯನ್ನು ತಿನ್ನುತ್ತಾ ಕವಿ –

ದೇಯವಿದನಾ ರೂಕ್ಷ ವೃಕ್ಷವೀ ಪೃಥುವಿಯಿಂ
ದೆತ್ತಿ ಮುದವೆರೆವವೊಲಾವರ್ತಿ ಚೋದಿಸಿತು?
[5]

ಎನ್ನುತ್ತಾನೆ. ತಾನು ತಿನ್ನುವ ದಾಳಿಂಬೆಯ ಹಣ್ಣಿನ ಮೂಲಕ ತನ್ನ ರಸನೆಯನ್ನು ತಣಿಸಿ ಮುದವನ್ನೆರೆಯುವಂತೆ, ಈ ರೂಕ್ಷವಾದ ಮರ ಈ ಪೃಥುವಿಯಿಂದ ರಸವನ್ನೆತ್ತಿ ಅನುವುಗೊಳಿಸುವಂತೆ ಯಾವ ಪ್ರೀತಿ ಇದನ್ನು ಹೀಗೆ ಚೋದಿಸಿತು – ಎಂದು ಬೆರಗಾಗುತ್ತಾನೆ. ಪಾರಿಜಾತದ ಸೊಗಸನ್ನು ಸವಿದು –

ಪಾರಿಜಾತ ಹುಟ್ಟಿಸಿದನ
ಎದೆಯ ಹದವು, ಮನದ ಹದನ
ಏನು ಮಾಟ ಎಂಥ ಆಟ, ಇದರ ಕೂಟ ತಿಳಿಯದು
[6]

ಎಂದು ಬೆರಗಾಗುತ್ತಾನೆ. ಲೋಕದ ಚೆಲುವಿನ ವಸ್ತುಗಳು ಕವಿಗೆ ತರುವ ಈ ಬೆರಗೇ ಅವನ ಪರಿಭಾವನೆಯ ವಸ್ತು. ಈ ಬೆರಗು ವಸ್ತುವಿನ ಹೊರಮೈ ಚೆಲುವಿನಿಂದಲೂ ಆಗಬಹುದು. ಅದರ ಅಂತರಂಗದ ರಹಸ್ಯದ ಚಿಂತನೆಯಿಂದಲೂ ಆಗಬಹುದು. ಮೇಲೆ ಉದಾಹರಿಸಿದ ಮೂರು ಬಗೆಯ ಬೆರಗೂ ಹೂವಿನ ಹೊರಮೈ ಚೆಲುವಷ್ಟನ್ನೇ ಕಂಡು ನಿಂತು ‘ಅಹ’ ಎಂಬ ಉದ್ಗಾರದಲ್ಲಿ ಪರ‍್ಯವಸಾನವಾಗುವ ಬೆರಗಲ್ಲ; ಕಣ್ಣಿಗೆ ಕಂಡದ್ದು, ರುಚಿಗೆ ಸಿಕ್ಕಿದ್ದು, ಮನಸ್ಸಿಗೆ ತಟ್ಟಿದ್ದು – ಅದರದರ ಐಂದ್ರಿಯ ಸಂತೃಪ್ತಿಯನ್ನು ಮೀರಿ ಬೇರೊಂದು ನಿಲುವನ್ನರಿಯಲು ಕಾತರಿಸುವ ಜಿಜ್ಞಾಸೆಯ ಬೆರಗು. ಈ ಬೆರಗಿನಿಂದ ಮೊದಲಾದ ಅವನ ಪರಿಭಾವನೆ ವಸ್ತುವಿನಲ್ಲಿ ತನ್ನನ್ನು ಬೆಸೆದುಕೊಳ್ಳುವ, ವಸ್ತುವಿನ ಚೆಲುವಿನಲ್ಲಿ ಬೆರೆತು ಒಂದಾಗುವ ಉನ್ಮಾದವಾಗುತ್ತದೆ. ಕವಿಯ ಮನಸ್ಸೇ ಹಾಗೆ –

ಎಲ್ಲೋ ಅಂಗೈ ಅಗಲ ಹಸುರು ಕಂಡರೆ ಸಾಕು
ಮನದ ಆಸೆಗಳಲ್ಲಿ ಸೇರುತಿಹವು!
[7]

ಹಸುರನ್ನು ಕಂಡರೆ ಹಾಗೆ ಸೇರಿಕೊಳ್ಳುವುದು ಮಾತ್ರವಲ್ಲ; ಮಲೆನಾಡಿನ ಹಸಿರು ಕಡಲಲ್ಲಿ –

ಹಸುರಾದುದೊ ಕವಿಯಾತ್ಮಂ
ರಸಪಾನ ಸ್ನಾನದಲಿ!
[8]

ಕವಿಯ ಆತ್ಮ ಹಸುರಿನಲ್ಲಿ ಹಸುರಾಯಿತು. ಹಾಗೆ ಹಸುರಾದುದು ಹಸುರು ಎಂಬ ವಸ್ತು ತನ್ನ ವರ್ಣಾದಿ ವೈಭವದಿಂದ ಕವಿಯ ಮನಸ್ಸಿನ ಮೇಲೆ ಮಾಡಿದ ಪರಿಣಾಮದಿಂದ ಮಾತ್ರವಲ್ಲ, ‘ರಸಪಾನ ಸ್ನಾನ’ ದಿಂದ ಹಸುರಾಯಿತು. ಈ ‘ರಸಪಾನ ಸ್ನಾನ’ವೇ ಸೌಂದರ‍್ಯಾನುಭವ. ‘ರಸ’ – ಸೃಷ್ಟಿಯ ಸೌಂದರ್ಯ ಶಕ್ತಿ. ಆ ಸೃಷ್ಟಿಯ ಸೌಂದರ್ಯದ ಚೈತನ್ಯದ ಸ್ನಾನಪಾನದಿಂದ ಕವಿಯ ಆತ್ಮ ಹಸುರಾಯಿತು. ಕೋಗಿಲೆಯ ‘ಚಿಕು ಹೂ’ ಎಂಬ ದನಿಯನ್ನಾಲಿಸಿದ ಕವಿ-

ಈ ಶಾಶ್ವತ ರುತಿಗೊಂದಿದ
ಅಂದದಂದಿನ ಸ್ಮೃತಿಯೋಲಿದ
ಪಿಡಿವಾನಂದದೊಳಾನಂ-
ತ್ಯವ ಮುಟ್ಟಿಹೆನೆಂಬೆ
[9]

ತನ್ನ ಸ್ಮೃತಿಯ ಭಂಡಾರದಲ್ಲಿರುವ ಈ ಕೋಗಿಲೆಯ ದನಿಯನ್ನು ನೆನೆದಾಗಲೆಲ್ಲಾ ನಾನು ಆನಂತ್ಯದ ಸ್ಪರ್ಶವನ್ನು ಪಡೆಯುತ್ತೇನೆ ಎನ್ನುತ್ತಾನೆ. ಲೋಕವಸ್ತುಗಳಲ್ಲೆಲ್ಲಾ ನಲವನ್ನು ಕಾಣಲು ಅದನ್ನು ಉಳಿದವರಿಗೆ ಕಾಣಿಸಲು – ಕವಿಯ ಸತತ ಪ್ರಯತ್ನ ನಡೆದಿದೆ. ಹೀಗೆ ಕರಣಗಳ ಮೂಲಕ ನಲವನ್ನು ಪಡೆಯುವುದೂ ಒಂದು ಬೆರಗಾಗಿಯೇ ತೋರುತ್ತದೆ:

ಹಸಿರೆಲೆಗಳಂಜಲಿಯೊಳಾತು ರವಿತೇಜಮಂ
ಜೀವಕರ್ಘ್ಯವನೆರೆವ ಬನದ ನಲವು.
ಕೆರೆ ಕೆರೆಯ ಹರಡಿನೊಲು ಜಲ ಹಾಸವನು ಮೆರಸಿ
ತಿರೆ ಬಣ್ಣಗೊಳಿಸುವೀ ಬಿಸಿಲ ನಲವು
ಅಲೆ ಕೆದರೆ ತರು ಬೆದರೆ ನೀಲದಿಂ ಧುಮ್ಮುಕ್ಕಿ
ಕೋಡಿಗೇರುತ ಗಾಳಿ ಮೊರೆವ ನಲವು
ಬೆಳಕೆಲರು ಹಸಿರುಗಳ ಪೌತ್ರ ನಾನೀ ನಲವ
ನನ್ನ ಕರಣದಿ ಕೊಂಡು ನಲಿವ ನಲವು
[10]

ಈ ಲೋಕ ಎಷ್ಟೊಂದು ರೀತಿಗಳಲ್ಲಿ ತನ್ನ ನಲವನ್ನು ಹರಡಿರುತ್ತದೆ. ಈ ಎಲ್ಲ ನಲವನ್ನು, ಈ ಎಲ್ಲದರ ಮಗುವಾದ ಮಾನವ ತನ್ನ ಕರಣಗಳಲ್ಲಿ ಕೊಂಡು ನಲಿಯುವುದರಲ್ಲೂ ನಲವಿದೆ. ಇಂಥ ನಲವಿನ ಅನುಭೂತಿಯನ್ನು ಹೀಗೇ ಎಂದು ವಿವರಿಸಲಾಗುವುದಿಲ್ಲ; ಹೇಗೋ ಮಾಡಿ ಹಾಡಿನಂತೆ ಮಾತಿನಲ್ಲಿ ಅದನ್ನು ಕವಿ ಹಿಡಿದಿಡಲು ಪ್ರಯತ್ನಿಸುತ್ತಾನೆ. ಚೆಲುವು ನೀಡುವ ನಲವಿನ ಈ ರಸಾನುಭವವನ್ನು ಕವಿ ಹೇಳಲಾರ, ಹೇಳದಿರಲಾರ –

ಹೇಳಿದರೆ ಹಾಳಾಗುವುದೋ ಈ ಅನುಭವದ ಸವಿಯು
ಹೇಳದಿರೆ ತಾಳಲಾರನೋ ಕವಿಯು.

ನುಡಿಗಳನು ತೊಡಗಿದರೆ ತೊದಲುವುದು ನಾಲಗೆಯು
ಕಳ್ಳರಂದದೊಳೋಡುವುದು ಪದಗಳೆಲ್ಲ;
ತನ್ನಧಿಕತೆಗೆ ತಾನೆ ಮೂರ್ಛೆಹೋಹುದು ಭಾವ
ಮಾತ ಮೀರಿದ ಮೌನದೊಳು ಮಗ್ನವಾಗಿ!

ಒಲುಮೆಯಪ್ಪುಗೆಯಂತೆ ಎನಲು ಸಾಧಾರಣ
ಯೋಗಿಯ ಸಮಾಧಿ ಎನೆ ಅತಿ ಅಪೂರ್ವ
ಕವಿಯ ರಸ ರತಿ ಎನಲು ಕವಿಗೋರ್ವನಿಗೆ ವೇದ್ಯ,
ಮೃತ್ಯು ಮಾಧುರ್ಯಮೆನೆ ಬದುಕಿಹರಿಗರಿದಯ್ಯ| [11]

ಇಂಥ ‘ಉಭಯ ಸಂಕಟ’ದಲ್ಲಿ ಕವಿ ಸಿಲುಕುತ್ತಾನೆ. ಆದರೆ ಈ ಅನುಭವದಲ್ಲಿ ಕವಿ ಒಂದು ಅಪೂರ್ವಾನಂದದಲ್ಲಿ ನಿಲ್ಲುತ್ತಾನೆ. ಅದು ಒಂದು ಬಗೆಯ ಸೌಂದರ‍್ಯ ಸಮಾಧಿ-

ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ‍್ಯ ಸಮಾಧಿಯೊಳಾನಂದವ ಹೀರಿ
[12]

ಇದು ಅದರ ವರ್ಣನೆ. ಇಂತಹ ‘ದರ್ಶನ ಮುಕ್ತಿ’ಯಲ್ಲಿ ಕವಿಗೆ ಎನ್ನಿಸುತ್ತದೆ-

ಇಂತಹ ಸುಂದರ ಪ್ರಾತಃಕಾಲದಿ
ಜೀವಿಸುವುದಕಿಂತಲು ಬೇರೆಯ ಗುರಿ
ಜೀವಕೆ ಬೇಕಿಲ್ಲ
[13]

ಎಂದು. ಏನೋ ಒಂದು ತೃಪ್ತಿ; ಇದಕ್ಕಿಂತ ಮಿಗಿಲಾದುದು ಇನ್ನಿರಲಾರದು ಎಂಬ ಭಾವನೆ ತುಂಬುತ್ತದೆ. ಹೂವಿನ ಸೌಸವವನ್ನು ಸವಿದು-

ಇದೇ ಸಾಕು ಈ ಹೂವಿನ ಪರಿಮಳ
ಬಾಳ ಬೀದಿಯಲಿ ಹೊನ್ನಜಳ
[14]

ಎನ್ನಿಸುತ್ತದೆ. ಈ ನಲವು ಏನು? ಇದರ ಸ್ವರೂಪವೇನು? ಇದು ಏಕೆ ತನ್ನನ್ನು ಹೀಗೆ ಮೋಹಿಸುತ್ತದೆ, ಇತ್ಯಾದಿ ಅರಿವಿನ ಪ್ರಶ್ನೆಗಳೆಲ್ಲಾ ಬೇಸರದ ಕಂತೆಯಾದೀತು, ಈ ಹೊತ್ತಿನಲ್ಲಿ. ಸೌಂದರ‍್ಯವು ನೀಡುವ ಆನಂದದಲ್ಲಿ ಒಂದಾದ ಹೊತ್ತಿನಲ್ಲಿ ಉಳಿದ ಜಿಜ್ಞಾಸೆಗಳೆಲ್ಲ ಏಕೆ? ಅದರ ಮೂಲವನ್ನರಿಯುವ ಆಸೆಯ ಬಂಧ ಏಕೆ –

‘ಅರಿವಾ’ಸೆಯೆ ಮಾಯಾ ಬಂಧ
‘ಇರು’ವುದೆ ಮುಕ್ತಿಯ ಆನಂದ
‘ಅರಿವಾ’ಸೆಯ ಬಿಡು ‘ಇರು’ವಾಸೆಯ ತೊಡು
ಇಂತಹ ಸಮಯದಿ ಇರುವಿಕೆಗಿಂತಲು
ಹೆಚ್ಚಿನ ಅರಿವಿಲ್ಲ!
[15]

ಸೌಂದರ‍್ಯಾನುಭವ ಸಮಯದಲ್ಲಿ ‘ಇರು’ವಿಕೆಗಿಂತಲೂ ಹೆಚ್ಚಿನ ‘ಅರಿವಿಲ್ಲ’ ಎನ್ನುವುದು ಅದರ ಮತ. ಸೌಂದರ‍್ಯಾನುಭವ ಸಮಯದಲ್ಲೇನೋ ಸರಿ. ಆದರೆ ಅನಂತರ ಈ ಅರಿವಾಸೆಯ ಬಂಧ ಜಿಜ್ಞಾಸುವಾದ ಕವಿಯನ್ನು ಅಷ್ಟು ಸುಲಭವಾಗಿ ಇರಲು ಬಿಡುವುದಿಲ್ಲ. ಸೌಂದರ್ಯ ನೀಡುವ ನಲವು ಆನಂದವನ್ನು ಕೊಡುವಂತೆ ಸೌಂದರ್ಯವನ್ನು ಕುರಿತ ಜಿಜ್ಞಾಸೆಯೂ ಆನಂದವನ್ನು ಕೊಡದಿರುವುದೆ? ಈ ಲೋಕದ ಚೆಲುವು ನಮ್ಮನ್ನು ಹೀಗೆ ಮೈಮರೆಸುತ್ತದೆ, ನಲಿಸುತ್ತದೆ. ಆದರೆ ಅದು ಏಕೆ ಮೈಮರೆಸುತ್ತದೆ, ಅದು ನೀಡುವ ಚೆಲುವೆಂಬ ನಲವು ಹೇಗೆ ನಮ್ಮಲ್ಲಿ ಮೂಡುತ್ತದೆ – ಎಂಬ ಜಿಜ್ಞಾಸೆಯೂ ಕವಿಯನ್ನು ಕಾಡುತ್ತದೆ. ಕವಿ ಶಾಸ್ತ್ರಕಾರನಲ್ಲವಾದ್ದರಿಂದ ಈ ವಿಚಾರವೂ ಅವನ ಚಿಂತನೆಯಲ್ಲಿ ರಸವಾಗುತ್ತದೆ. ಸೌಂದರ‍್ಯ ಮತ್ತು ಸೌಂದರ‍್ಯಾನುಭವವನ್ನೇ ತನ್ನ ಪರಿಭಾವನೆಯ ವಸ್ತುವಾಗಿ ಮಾಡಿಕೊಂಡ ಕವಿ-

ಜಗದೀ ದೈನಂದಿನ ಜಂಗಮತೆ
ನನ್ನೊಳು ಜನಿಯಿಸಿತೇತಕೆ ಮಮತೆ.
[16]

ಎಂದು ಚಿಂತಿಸುತ್ತಾನೆ. ಚೆಲುವಿನ ನೆಲೆಯನ್ನು ಬೆಲೆಯನ್ನು ತಿಳಿಯಲು ತವಕಿಸುತ್ತಾನೆ.

ಈ ಚಿಂತನೆ, ಸೌಂದರ‍್ಯವನ್ನು ಕುರಿತ ಜಿಜ್ಞಾಸೆ ನವೋದಯ ಕವಿಗಳ ಒಂದು ವಿಶಿಷ್ಟತೆಯಾಗಿದೆ. ಹಿಂದಿನ ಕವಿಗಳು ತಮ್ಮ ಕಣ್ಣಿಗೆ ಕಂಡ ಮನಸ್ಸಿಗೆ ಮುಟ್ಟಿದ ಚೆಲುವಿನ ಪರಿಗಳನ್ನು ಗುರುತಿಸಿ ಬಣ್ಣಿಸಿದರಷ್ಟೇ ಹೊರತು ಅದರ ಜಿಜ್ಞಾಸೆಗೆ ತೊಡಗಲಿಲ್ಲ. ಹಾಗೆ ತೊಡಗುವುದು ಅವರ ಕಾವ್ಯೋದ್ದೇಶವೂ ಆಗಿರಲಿಲ್ಲ. ಅಂತಹ ಚಿಂತನೆಯ ಅಗತ್ಯವಿರಲಿಲ್ಲ ಅವರ ಕಾವ್ಯಕ್ಕೆ. ಆದರೆ ಇಂದಿನ ಕವಿಗೆ ಈ ಚಿಂತನೆಯೂ ರಸಾನುಭವದ ವಸ್ತುವಾಗಿದೆ. ತನ್ನ ಅಂತರಂಗದ ವ್ಯಾಪಾರವನ್ನೇ ತನ್ನ ಪರಿಭಾವನೆಯ ವಸ್ತುವಾಗಿಸಿಕೊಂಡು ಅದನ್ನು ಆನಂದದಾಯಕವಾಗಿ ಮಾಡಿ ಇಂದಿನ ಕವಿ ನೀಡಿದ್ದಾನೆ. ಶ್ರೀ ಪು.ತಿ.ನ. ಅವರ ಕೆಲವು ಕವನಗಳಲ್ಲಿ ಅದರ ವರ್ಣನವನ್ನೂ, ಬೇಂದ್ರೆ ಅವರ ಕೆಲವು ಕವನಗಳಲ್ಲಿ ಅದರ ಹೊಳಹುಗಳನ್ನು. ಕುವೆಂಪು ಅವರ ಕೆಲವು ಕವನಗಳಲ್ಲಿ ಅದರ ದರ್ಶನವನ್ನೂ ಇನ್ನೂ ಹಲವರಲ್ಲಿ ಅದರ ಪರಿಗಳನ್ನೂ ನಾವು ಗುರುತಿಸಬಹುದು.

ಸೌಂದರ‍್ಯ – ಎನ್ನುವುದೊಂದು ಸಮ್ಮೋಹಕ ಶಕ್ತಿ. ಇತರ ಎಲ್ಲ ವಸ್ತುಗಳಿಂದಲೂ, ವಿಷಯಗಳಿಂದಲೂ ಮನಸ್ಸನ್ನು ಕ್ಷಣಕಾಲವಾದರೂ ಬಿಡಿಸಿ ಒಂದೆಡೆ ಸೇರಿಸುವ ಶಕ್ತಿಯುಳ್ಳದ್ದು. ಈ ಸೆಳೆತವನ್ನು ಕುರಿತು ಕವಿ –

ಮೇಜಿನ ಮೇಲೊಂದು ರೋಜದ ಹೂವು
……………………………………………
ಕಂಗಳು ತಂಗುವ ಸೊಗಸಿನ ರೇವು
[17]

ಎಂಬ ಎರಡು ಮಾತಿನಲ್ಲಿ ಬಣ್ಣಿಸುತ್ತಾನೆ. ‘ಕಂಗಳು ತಂಗುವ ಸೊಗಸಿನ ರೇವು’ ಬಲು ಸುಂದರವಾದ ಮಾತು. ಹತ್ತು ದಿಕ್ಕಿಗೆ ಅಲೆಯುವ ಕಣ್ಣಿನ ಹಡಗು ರೋಜದ ಹೂವಿನ ಈ ಸೊಗಸಿನ ಬಂದರಿನಲ್ಲಿ ಕ್ಷಣಕಾಲ ತಂಗುತ್ತದೆ. ಈ ಹೂವಿನ ಸೊಗಸಿಗೆ ಮನಸ್ಸು ಮಾರುಹೋಗುತ್ತದೆ; ಮೈ ಮರೆಯುತ್ತದೆ. ಇಂಥ ಒಂದು ಹೂವು ಕವಿ ಜೀವವನ್ನು ಬರಿದೇ ಮೈಮರೆಸುವುದಿಲ್ಲ –

ಹರಿವ ಮನವನು ಹಿಡಿದು ಒಂದೆಡೆ
ನಿಲಿಸಿ ತೊಳೆದಿದೆ ಹೂವಿದು
[18]

ಹರಿಯುವ ಮನಸ್ಸನ್ನು ಹಿಡಿಯುವುದು ಮಾತ್ರವಲ್ಲ, ನಮ್ಮ ಮನಸ್ಸನ್ನು ತೊಳೆದು ಸಂಸ್ಕಾರಗೊಳಿಸುತ್ತದೆ. ಹೀಗೆ ಇದು ತನ್ನ ಹೊರಗಿನ ಬಣ್ಣ ಬೆಡಗುಗಳಿಂದ ಆಕಾರ ಅಚ್ಚುಕಟ್ಟುಗಳಿಂದ ನೋಡುವ ಕಣ್ಣನ್ನು ಸೆರೆಹಿಡಿದು ಮನಸ್ಸನ್ನು ಒಂದು ಬಗೆಯ ಕ್ಷಣ ರಸವಿಸ್ಮೃತಿಯಲ್ಲಿ ಅದ್ದುತ್ತದೆ. ಯಾವಾಗ ಈ ಲೋಕದ ಚೆಲುವನ್ನು ಸವಿದರೂ ನಮಗೆ ಇದೇ ಮೊದಲೆಂಬಂತೆ ಒಂದು ವಿಶೇಷ ಆನಂದವನ್ನುಂಟುಮಾಡುತ್ತದೆ.

ಸೌಂದರ‍್ಯ ನಮ್ಮ ಅಂತರಂಗದ ಮೇಲೆ ಮಾಡುವ ಈ ಆಕರ್ಷಣೆಯ ಪರಿಣಾಮವೆಂದರೆ, ನಮಗೆ ಲೋಕ ವಿಷಯಬಂಧಗಳಿಂದ ಆಗುವ ಬಿಡುಗಡೆ. ಈ ಬಿಡುಗಡೆಯ ಸಮಯದಲ್ಲಿ ನಮಗೂ ಸೌಂದರ‍್ಯದ ವಸ್ತುವಿಗೂ ಇರುವ ಸಂಬಂಧ ಲೌಕಿಕ ಪ್ರಯೋಜನದ ಸಂಬಂಧವಲ್ಲ, ನಲವಿನ ಸಂಬಂಧ. ಇದೊಂದು ‘ಮುದದ ಬೇಹರ’ – ಪು.ತಿ.ನ. ಅವರ ಮಾತಿನಲ್ಲಿ. ಕಲಾವಿದನಿಗೂ ಸುಂದರವಾದ ವಸ್ತುವಿಗೂ ಈ ಕಾಲದಲ್ಲಿ ನಡೆಯುವುದು ಒಂದು ಬಗೆಯ ಹೃದಯ ಸಂವಾದ; ಮೋದದ ವ್ಯಾಪಾರ. ಚೆಲುವು ಯಾವಾಗಲೂ ತನಗೆ ತಾನೇ ನಾದವರ್ಣರೂಪಗಳಿಂದ ನಮ್ಮ ಸುತ್ತ ಇರುವುದಾದರೂ ಅದು ಗೋಚರಿಸುವುದು ಯಾವುದೊ ಒಂದು ಚಿತ್ತ ಸ್ವಾಸ್ಥ್ಯದ ಮೂಹೂರ್ತದಲ್ಲಿ. ಕವಿಯಲ್ಲಿ ಚೆಲುವಿನ ಬೆರಳಿಗೆ ಮಿಡಿಯುವ ಒಂದು ಸ್ಥಿತಿ ಎಷ್ಟರ ಮಟ್ಟಿಗೆ ಪ್ರಾಪ್ತವಾಗುತ್ತದೆಯೋ ಅಷ್ಟರಮಟ್ಟಿಗೆ ಅವನ ಹೃದಯವೀಣೆ ನಮಗೆ ಆನಂದದ ರಾಗಗಳನ್ನು ಕೇಳಿಸುವುದು. ಅಂತಹ ಒಂದು ಸ್ಥಿತಿಯಲ್ಲಿ ಹೊರಗಿನ ಲೋಕ ಚೆಲುವಿನ ಮೈದೋರಿ ಕವಿಯೊಡನೆ ನುಡಿಯುವುದು. ‘ಕವಿ’ ಎಂಬ ಕಿರುನಾಟಕದಲ್ಲಿ ಶ್ರೀ ಪು.ತಿ.ನ. ಅವರು ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ. ಅದರಲ್ಲಿ ಕವಿಯೊಬ್ಬ ಚೆಲುವಿನ ನಡುವೆ ತನಗಾಗುವ ನಲವಿನ ಸ್ಥಿತಿಯನ್ನು ಹೀಗೆ ಬಣ್ಣಿಸುತ್ತಾನೆ –

ಎಂಥ ಸುಂದರ ದಿನವು ಮೈದೋರಿದಂತಿಹುದು
ಇಂದೆನ್ನ ಬಾಳಿನೊಲು! ಹಗುರವಾಗಿದೆ ಚಿತ್ತ.
ತೀಕ್ಷ್ಣವಾಗಿದೆ ಕರಣ, ನಿರ್ಲಿಪ್ತವಾಗಿಹುದು
ಜೀವಾತ್ಮ. ಸ್ಥಿರತೆಯಿಂದೆಚ್ಚತ್ತು ಅಲೆತಕ್ಕೆ
ಮೈತೆತ್ತು ಕೊನೆಗೆ ಸಂಚಲನ ಸುಪ್ತಿಗೆ ಸಂದ
ತಿಗುರಿಯೊಲು ನಾನಿಹೆನು. ಅಂತಲ್ಲ ಅಂತಲ್ಲ;
ಬಾಳವೀಣೆಗೆ ಬಿಗಿದ ಕರಣಗಳ ತಂತಿಗಳ
ಮನವೊಪ್ಪೆ ಶ್ರುತಿಮಾಡಿ ನೂರು ಬೆರಲುಗಳಿಂದ
ಮಿಡಿವಂತೆ ತೋರುತಿದೆ ಪರಮಾತ್ಮ…
[19]

ಚಿತ್ತ ಹಗುರವಾಗಿದೆ ಕರಣ ತೀಕ್ಷ್ಣವಾಗಿದೆ. ಜೀವಾತ್ಮ ನಿರ್ಲಿಪ್ತವಾಗಿದೆ. ಇಂತಹ ಸ್ಥಿತಿಯಲ್ಲಿಯೇ ಕವಿಯ ಕಣ್ಣಿಗೆ ಚೆಲವು ಮೈದೋರುವುದು. ಬೇಂದ್ರೆಯವರು ಈ ಒಂದು ಸ್ಥಿತಿಯನ್ನು ಕುರಿತು ಒಂದೆಡೆ –

ತೇಲಾಡುವಾಗ ಮನಸು
ಮೇಲಾಡುತಾವ ಕನಸು
ತಾಕಾಡುವಾಗ ಇತ್ತ
ತೇಕಾಡುತಾವ ಚಿತ್ತ
[20]

ಎಂದು ವರ್ಣಿಸುತ್ತಾರೆ. ನಾವೆಲ್ಲ ಈ ಲೋಕಕ್ಕೆ ಅಂಟಿಕೊಂಡಿದ್ದೇವೆ. ಲೋಕದ ವಸ್ತುಗಳನ್ನು ನಾವು ಸ್ವಂತದ ಫಲಾಫಲಗಳ ದೃಷ್ಟಿಯಿಂದ ನೋಡುತ್ತಾ, ‘ಇತ್ತ’ ಈ ಲೋಕದ ಸುಖಕ್ಕೆ ತಾಕಾಡುತ್ತಾ, ನಾವು ಸುಮ್ಮನೆ ತೇಕಾಡುತ್ತೇವೆ, ತಳಮಳಗೊಳ್ಳುತ್ತೇವೆ. ಆದರೆ ಯಾವಾಗ ನಾವು ಈ ಬಂಧನದಿಂದ ಮೇಲೆದ್ದು ತೇಲಾಡುತ್ತೇವೋ ಆಗ ಕನಸು ಮೇಲಾಡುತ್ತವಂತೆ. ಭವದಿಂದ ಎದ್ದು ಭಾವದಲ್ಲಿ ತೇಲುವ, ವಸ್ತುವಿನ ಲೌಕಿಕ ಇಚ್ಛೆಗಳ ಸೆರೆಯಿಂದ ಬಿಡಿಸಿಕೊಂಡು ನಿಲ್ಲುವ ಈ ಚಾತುರ‍್ಯ ಲಭಿಸಿದಷ್ಟೂ ಕವಿಗೆ ಸೌಂದರ‍್ಯಾನುಭವ ಶಕ್ತಿ ಪ್ರಾಪ್ತವಾಗುತ್ತದೆ. ಕವಿಗಿರುವ ಈ ಶಕ್ತಿಯನ್ನು ಪು.ತಿ.ನ. ಅವರು ‘ಭವನಿಮಜ್ಜನ ಚಾತುರ‍್ಯ ಮತ್ತು ಲಘಿಮಾ ಕೌಶಲ’[21] ಎಂದು ಕರೆಯುತ್ತಾರೆ. ಇಂತಹ ಸ್ಥಿತಿ ಪ್ರಾಪ್ತವಾದ ಚೇತನಕ್ಕೆ ವಸ್ತುವಿನೊಂದಿಗೆ ನಲವಿನ ಸಂಬಂಧವನ್ನು ಬೆಳೆಸುವುದು ಕಷ್ಟವಾಗುವುದಿಲ್ಲ. ಪು.ತಿ.ನ. ಅವರ ‘ಬಿಡುವು’ ಎಂಬ ಸಾನೆಟ್ ಈ ವಿಚಾರವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ.

ಆಹ ಬಿಡುವೆ, ಶಾಂತಿ ದಯಪಾಲಿಸಿಹ ನಲ್ವರವೆ,
ಎನಿತು ಚೆಲುವಾಗಿಸಿಹೆ ಈ ಬಳಕೆ ಸಂಜೆಯನು!
ದಿನದ ಸ್ವರ್ಣಾದಾಯವೊಯ್ಯುತಿದೆ ದಿವಕಭ್ರ;
ತುಹಿನ ಕಿರಣನ ಕೋಡು ಮುದದ ಮದ್ದಾನೆ ಬಾನ್-
ಸರದೊಳಗೆ ಮಲಗಿ ಕೋಡೆತ್ತಿದೊಲು ತೋರುತಿದೆ;
ಹಲಸು ಸಂಪಿಗೆ ಮಾವು ತೆಂಗು ತೆಂಗಿನ ಬಳಗ
ಬಳಸಿ ತುರುಗಳ ನಡುವೆ ರೇಖಿಸಿಹ ಕರುಮಾಡ
ತರುವುದಕ್ಷಿಗೆ ಯಕ್ಷ ರಾಜಧಾನಿಯ ಬೆರಗ.
ಪ್ರತ್ಯಕ್ಷಕಿಂದಾಯ್ತು ಭವ ನಿಯುಕ್ತಿ ವಿಮುಕ್ತಿ.
ಋಣಮುಕ್ತ ಬಂಧುವನು ಮಾನಿಸುವ ಕುಲದಂತೆ
ಮನವ ಮಾನಿಸುತಿಹುದು ಕಂಡುದನೆ ಚೆಲುವೆಂಬ
ಸತ್ಯದರಿವಿಂ ಸೃಷ್ಟಿ. ಮುಗಿಲಮರೆ ತಾರೆಯಿಗೊ
ತುಡಿಯುತಿದೆ ರಾಧೆಯೊಲು ಕಾತರದ ನೋಟ ಬೀರಿ
ಘನ ಗಹನನೆದೆ ಬನದೊಳವಿತಿರುವ ಬೆಗೆಯ ತೋರಿ
[22]

ಇಲ್ಲಿ ಚಿತ್ರಿತವಾಗಿರುವುದ ಕವಿಯ ಮನಸ್ಸಿನ ಅಥವ ನಲವಿನ ಕ್ಷಣದ ಒಂದು ಸಂಜೆ. ದಿನ ಬಳಕೆಯ ಸಂಜೆ ಇಷ್ಟೊಂದು ಚೆಲುವಾಗಿ ತೋರಲು ಕಾರಣ ಈ ‘ಬಿಡುವು’. ಈ ‘ಬಿಡುವು’ ಎನ್ನುವುದು ದೈನಂದಿನ ಗಡಿಬಿಡಿಯಿಂದ ದೊರೆತ ‘ಪುರಸತ್ತು’ ಅಲ್ಲ; ಇದೊಂದು, ಭಗವದ್ಗೀತೆಯಲ್ಲಿ ಹೇಳಿರುವ ಅಕರ್ಮಸ್ಥಿತಿ. ಈ ‘ಬಿಡುವು’ ಕವಿ ಎಂತಹ ಗೊಂದಲದ ನಡುವೆ ತೊಡಗಿದ್ದರೂ ಸಾಧ್ಯ. ಇದೊಂದು ಚೆಲುವನ್ನು ಕಾಣಲು ಹದಗೊಂಡ ಮನಃಸ್ಥಿತಿ. ಇಂತಹ ಸ್ಥಿತಿಯಲ್ಲಿ ಸಂಜೆಯ ನಭದಲ್ಲಿ ಕಂಡ ರೇಖಾಚಂದ್ರ ಮುದದ ಮದ್ದಾನೆಯೊಂದು ಬಾನ್‌ಸರಸಿಯಲ್ಲಿ ಮುಳುಗಿ ಕೋಡೆತ್ತಿದಂತೆ ತೋರುತ್ತದೆ. ದಿನಬಳಕೆಯ ದೂರದ ಮನೆಯೊಂದರ ಮಹಡಿ ಹಲಸು ಸಂಪಿಗೆ ತೆಂಗುಗಳಿಂದ ಬಳಸಿದ ಕರುಮಾಡ, ಇಂದು ಈ ಸಂಜೆ ಬೆಳಕಿನಲ್ಲಿ ಕಣ್ಣಿಗೆ ಯಕ್ಷ ರಾಜಧಾನಿಯಂತೆ ತೋರಿ ಬೆರಗನ್ನುಂಟುಮಾಡುತ್ತದೆ. ಯಾವುದು ಪ್ರತ್ಯಕ್ಷವೋ ಅದಕ್ಕೆ ಈಗ ಕವಿಯ ಅನುಭವದಲ್ಲಿ ‘ಭವನಿಯುಕ್ತಿ ವಿಮುಕ್ತಿ’ ಒದಗಿದೆ. ಯಾವುದು ದಿನದ ಭಾರದಿಂದ ಜಗ್ಗುತ್ತ ತನಗೆ ಪರಿಚಿತವಾಗಿತ್ತೋ ಆ ಮನೆ ಈಗ ತನ್ನ ಲೌಕಿಕ ಸಂಪರ್ಕವನ್ನು ಕಳೆದುಕೊಂಡು ನಲವಿನ ವಸ್ತುವಾಗಿ ಯಕ್ಷರಾಜಧಾನಿಯ ಬೆರಗನ್ನು ತರುತ್ತಿದೆ. ಋಣಮುಕ್ತ ಬಂಧುವನ್ನು ಮಾನಿಸುವ ಕುಲದಂತೆ ಲೋಕಭಾವ ಋಣಮುಕ್ತವಾಗಿ ರಸಲೋಕಕ್ಕೇರಿದ ಏನೆಲ್ಲವನ್ನೂ ಕಣ್ಣು ಚೆಲುವೆಂದು ಅಂಗೀಕರಿಸುತ್ತದೆ. ಬಿಡುವಿನ ಈ ಕ್ಷಣ ನಡೆದಿರುವ ಮೋದದ ವ್ಯಾಪಾರದಲ್ಲಿ ಆಗಿರುವುದು ಬಿಡುಗಡೆ; ಕವಿಗೂ ತನ್ನ ದೈನಂದಿನ ವ್ಯವಹಾರದ ಬಂಧನಗಳಿಂದ ದೊರೆತಿರುವ ಬಿಡುಗಡೆ; ಕವಿ ಪರಿಭಾವನೆಯಲ್ಲಿ ವಸ್ತುವಿಗೂ ಅದರ ಲೌಕಿಕ ಸಂಬಂಧದಿಂದ ಒದಗಿರುವ ಬಿಡುಗಡೆ. ವಸ್ತು ಆತ್ಮಗಳೆರಡರ ಈ ಬಿಡುಗಡೆಯ ನಿಲುಗಡೆ ನಲವೆಂಬ ನಿಲುವಿನಲ್ಲಿ. ಈ ‘ಮುದದ ಬೇಹರ’ದಲ್ಲಿ ಒಲವಿನ ಕೊಡುಪಡೆಯಲ್ಲಿ ವಸ್ತು ಆತ್ಮಗಳೆರಡೂ ಒಂದು ರೀತಿಯ ಸಾಮರಸ್ಯವನ್ನು ಪಡೆದಿರುವುದರಿಂದಲೇ ಈಸಂಜೆಯ ಅನುಭವ ಇಷ್ಟು ಸುಂದರವಾಗಿರುವುದು. ಸಕ್ಕರೆ ಎಂಬ ವಸ್ತು ನಾಲಗೆಯನ್ನು ಸೇರಿ ಅದರಿಂದ ಸಿಹಿ ಎಂಬ ವಿಶೇಷಾನುಭವವಾಗುವಂತೆ ವಸ್ತು ಮತ್ತು ಆತ್ಮ ಇವೆರಡರ ಮಧುರ ಸಂಗಮದಿಂದ ಚೆಲುವೆಂಬ ಅನುಭವ ಮನಸ್ಸಿಗಾಗುತ್ತದೆ. ಈ ಅನುಭವ ಅರ್ಧನಾರೀಶ್ವರನಂತೆ. ಅಲ್ಲಿ ಸಾಮರಸ್ಯವಿದೆ. ಆ ಸಾಮರಸ್ಯದಲ್ಲಿ ಪುರುಷ ರೂಪವೂ ಸ್ತ್ರೀ ರೂಪವೂ ಬೆಸೆದುಕೊಂಡಿದೆ. ಅಂತೆಯೇ ವಸ್ತು ಆತ್ಮಗಳ ಸಂಪೂರ್ಣ ಸಮೀಕರಣ ಸೌಂದರ‍್ಯ. ಒಂದು ಮಾತಿನಲ್ಲಿ ಹೇಳುವುದಾದರೆ – ‘ವಸ್ತ್ವಾತ್ಮ ಮಧುರ ಸಮ್ಮಿಳನೋತ್ಸವಾಗಮಂ[23]

ಲೋಕದಲ್ಲಿ ಚೆಲುವಿನ ವಸ್ತುಗಳಿವೆ. ನಮ್ಮಲ್ಲಿ ಅದನ್ನು ಸವಿಯುವ ಶಕ್ತಿ ಇದೆ. ಇವೆರಡರ ಸಂಗಮದಿಂದಾಗುವ ಆನಂದದ ಮರ್ಮವೇನು, ಈ ಒಳಜಗಕ್ಕೂ ಈ ಹೊರಜಗಕ್ಕೂ ನಂಟನ್ನು ನೇಯುವ ಶಕ್ತಿ ಯಾವುದು ಎನ್ನುವ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ಬೇಂದ್ರೆಯವರು ಹೀಗೆ ಉತ್ತರ ಕೊಡುತ್ತಾರೆ –

ಸೌಂದರ‍್ಯವೆಂಬುದು ಕಣ್ಣಿನ ತುತ್ತಲ್ಲ
ಕಣ್ಣಿಗು ಕಣ್ಣಾಗಿ ಒಳಗಿಹುದು
ರೂಪ ಲಾವಣ್ಯಕೆ ಅಳೆಯಲು ಬಾರದು
ಅವುಗಳೆ ಇದರೊಂದು ಕಣವಿಹವು.
ಇದಿರಿಗೆ ಚೆಲುವಾಗಿ ಇದುವೆ ತಾನೆನುವಾಗ
ಒಲವಾಗಿ ಒಳಗಿಂದ ಹೊಮ್ಮುತಿದೆ
ಅಲ್ಲಿತ್ತು ಸ್ವಾನಂದ ಇಲ್ಲಿದೆ ರಸರಂಗ
ಎಲ್ಲೇನು ಒಂದೆಂದೆ ಚಿಮ್ಮುತಿದೆ
[24]

ಈ ಚೆಲುವು ಕಣ್ಣಿಗೆ ಕಾಣುವ ವಸ್ತುಗಳ ರೂಪ ಲಾವಣ್ಯಗಳಲ್ಲಿಲ್ಲ. ಈ ರೂಪಲಾವಣ್ಯಗಳೇ ಸೌಂದರ್ಯದ ಕಣಗಳಾಗಿವೆ. ಇದಿರಿಗೆ ಕಾಣುವುದು ಚೆಲುವು ಎನ್ನುತ್ತಿರುವಂತೆಯೇ ಒಳಗಿನಿಂದ ಅದನ್ನು ಒಲಿಯುವ ಶಕ್ತಿಯೊಂದು ಕೂಡುತ್ತದೆ. ನಾವು ಸುಂದರವಾಗಿದೆ ಎಂದಾಗ ಅಲ್ಲಿ ನಮಗೆ ಸೌಂದರ‍್ಯಾನುಭವವಾಗುವಂತೆ ಮಾಡುವ ಶಕ್ತಿಯೊಂದಿದೆ-

ಜಗಚೆಲುವೆನ್ನುವ ಬಗೆಯನುರಣನೆ
ವಿಶ್ವಾತ್ಮನ ನಿರ್ಹೇತುಕ ಕರುಣೆ
[25]

ಚೆಲುವನ್ನು ಕಂಡು ಅದರ ಅನುಭವದಿಂದ ನಮ್ಮ ಬಗೆ ಅನುರಣಿತವಾಗುತ್ತದೆ. ಹೀಗೆ ಚೆಲುವಿನ ರೂಪದಲ್ಲಿ  ನಮ್ಮ ಚಿತ್ತವನ್ನು ನಲವಿನಿಂದ ತರಂಗಿತವನ್ನಾಗಿಸುವ ಈ ಶಕ್ತಿ ವಿಶ್ವಾತ್ಮನ ಅವ್ಯಾಜವಾದ ಕರುಣೆಯೇ – ಎಂದು ಕವಿ ಹೇಳುತ್ತಾರೆ. ನಿಜವಾದ ಮೋದದ ವ್ಯಾಪಾರದ ಲಕ್ಷಣವೇ ಇಷ್ಟು. ಅದು ನಿರ್ಹೇತುಕವಾದುದು, ದೈವೀಕರುಣೆಯಂತೆ. ಈ ಕರುಣೆ ಒಂದು ನಿರಂತರ ಕಾರಂಜಿಯಾಗಿ ಪುಟಿಯುತ್ತಿದೆ, ಎಲ್ಲರ ಎದೆಗಳಲ್ಲೂ. ಹೊರಗೆ ಚೆಲುವಾಗಿ ಪುಟಿದರೆ, ಒಳಗೆ ಅದನ್ನು ಸವಿಯುವ ಒಲವಾಗಿ ಹರಿಯುತ್ತದೆ-

ಎಲ್ಲಿಂದ ಬಂದೊಂದು ಸೌಂದರ್ಯ ಝರಿಯಿಂದ
ಎದೆಎದೆಗು ಕಾರಂಜಿ ಪುಟಿಯುತಿದೆ.
ಯಾರಿಂದೊ ಚಲಿಸುವ ಕಾಣದ ಸೂತ್ರವು
ಪುರುಷ ಪ್ರಕೃತಿಗಳನ್ನು ಕುಣಿಸುತಿದೆ.
ಘನರಸ ಆನಂದ ಆನಂದ ದ್ರವರಸ
ಯಾವುದೊ ಕಾವಿಗೆ ಆಗುತಿದೆ
[26]

ಸೌಂದರ್ಯವೆಂಬುದೊಂದು ‘ಝರಿ’. ಆ ರಸದ ಝರಿ ಘನವಾದಾಗ ಆನಂದ, ಆ ಆನಂದ ಮತ್ತೆ ದ್ರವವಾದಾಗ ರಸ. ಸೌಂದರ್ಯವೇ ಆನಂದ, ಆನಂದವೇ ಸೌಂದರ‍್ಯ. ಅದೊಂದು ದೈವೀರಹಸ್ಯ –

…..ವಿಶ್ವಚೇತನದಾ
ಸ್ಪಂದನವೆ ಸೌಂದರ್ಯ; ಅದುವೆ ಜೀವನದ ಮೂಲ
ಬಂಧುರತೆ ಬೊಮ್ಮನದು.
[27]

ಸೌಂದರ್ಯ ವಿಶ್ವ ಚೈತನ್ಯದ ಸ್ಪಂದನ, ನಮ್ಮ ಜೀವನಕ್ಕೆ ಅದೇ ಮೂಲ, ಸೌಂದರ‍್ಯದಿಂದಾಗುವ ಈ ಬಂಧುರತೆ ಬೊಮ್ಮನದು. ಏಕೆಂದರೆ –

ಸೌಂದರ್ಯಮೇ ವಿಶ್ವತತ್ವಂ, ಆ ಪರತತ್ವ
ಭಾಸಮೇ ಸೌಂದರ್ಯ
[28]

ಈ ಒಂದು ಬಂಧುರತೆಗಾಗಿಯೆ ರಸದ ನೀರಡಿಕೆಯುಳ್ಳ ಚೇತನ ಕಾತರಿಸುತ್ತದೆ. ಈ ಕಾತರದಲ್ಲಿ, ಅದಕ್ಕೆ ಈ ಲೋಕದಲ್ಲಿ ದೊರೆಯುವ ಚೆಲುವಿನ ಸ್ಪರ್ಶ ಇನಿತಿನಿತು; ನಲವಿನ ಒಂದು ಕ್ಷಣದಲ್ಲಿ ಕಂಡು ಮರುಕ್ಷಣದಲ್ಲಿಯೇ ಜಾರಿಹೋಗುವುದು ಇದರ ಲಕ್ಷಣ. ಚೆಲುವಿನ ಅಧಿದೇವಿ ಒಂದೆಡೆ ಕವಿಗೆ ಹೇಳುತ್ತಾಳೆ –

ರವಿಯ ಮಿಗುವ ಹಿರಿ ಬೆಳಕು
ಹೊಳಹು ನಾನು ಎಲ್ಲದಕು
ಆಹ ಎನ್ನಲು ತೂರುವೆನ್
ಉಹು ಎನ್ನಲು ಜಾರುವೆನ್
ಎಲ್ಲದರೊಳು ಎಲ್ಲೆಲ್ಲಿಯು
ಹೊಂಚುತಿರುವೆನಂಚೊಳೆ
ಮಿಂಚಿಗಿಂತ ಚಂಚಲೆ.
[29]

ಇಂಥವಳು ಈ ಚೆಲುವಿನ ಮೂರ್ತಿ…… ಇವಳು ಮೈದೋರುವುದು ನಲವಾಗಿ –

ನಲವೆ ನನ್ನ ಕಿರಣವು
ನರರೆದೆಯೇ ಕರಣವು
ಎಲ್ಲದರೊಳು ಎಲ್ಲೆಲ್ಲಿಯು
ಕಾಂಬ ಚೆಲುವೆ ವಿವರಣವು
ನನ್ನ ಖಂಡ ಕಾಂತಿಯ;
ನೋಡು ನೋಡು ಎಲ್ಲೆಡೆಯೊಳು
ನನ್ನ ಈ ವಿಭೂತಿಯ!
[30]

ಸೌಂದರ‍್ಯವೆಂಬುದು ನಲವಿನ ಒಂದು ವಿಶೇಷ ಭೂತಿ – ವಿಭೂತಿ. ಅಲ್ಲಿ ಇಲ್ಲಿ ಎಲ್ಲೆಲ್ಲಿಯೂ ಕಾಣುವ ಚೆಲುವೇ ಈ ನಲವಿನ ಅಖಂಡ ಕಾಂತಿಯ ವಿವರಣೆ. ಈ ಲೋಕದ ಪ್ರತಿಯೊಂದೂ ತನ್ನಲ್ಲಿ ಈ ಚೆಲುವನ್ನು ಹಿಡಿದು ಬಿಡಲು ಪ್ರಯತ್ನಿಸುತ್ತದೆ; ಕವಿಯೂ ಪ್ರಯತ್ನಿಸುತ್ತಾನೆ. ಆಗ ಅವನಿಗೆನ್ನಿಸುತ್ತದೆ: ಈ ಲೋಕದ ಚೆಲುವೆಲ್ಲಾ ಎಲ್ಲಿಂದಲೋ ಬಂದು ಅತಿಥಿಗಳಂತೆ ನಿಂತು ಮನವನ್ನು ತಣಿಸಿ ನಡೆಯುವ ಮೋದದ ಹಾದಿಯ ದಾರಿಗರೆಂದು.

ಅದೃಶ್ಯಲೋಕ ಅನೂಹ್ಯ ರೂಪದ
ಅನಂತ ಕಾಲದ ಯಾತ್ರಿಕರೇ,
ಮಣ್ಣಿನ ಮನದಲಿ ಹೊನ್ನನೆ ಬೆಳೆಯುವ
ಅಪೂರ್ವ ತೇಜದ ಮಾಂತ್ರಿಕರೇ,
ಅತಿಥಿಗಳಹ ನೀವೆಲ್ಲರು ಇಲ್ಲಿಗೆ
ನೆಲಸಲು ಬಂದವರಲ್ಲ;
ಒಂದೆಗಳಿಗೆ ಆಮೋದಕೆ ಬರುವಿರಿ
ಬಂದರಗಳಿಗೆಯೊಳೇ ಮೈಗರೆವಿರಿ,
ವಿಜನ ವಿಜನ ಮನವು
ಶೂನ್ಯ ಶೂನ್ಯ ದಿನವು
[31]

ಎಷ್ಟೊಂದು ರೂಪದಲ್ಲಿ ದಿನವೂ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ, ಮುಂಬೆಳಗಾಗಿ, ಸಂಜೆಯಾಗಿ, ಇಬ್ಬನಿಯಾಗಿ, ಮಳೆಹನಿಯಾಗಿ, ಗಾಳಿಯಾಗಿ, ಸಸ್ಯ ಸೌಂದರ‍್ಯವಾಗಿ, ಮಾನವಲೋಕದಲ್ಲಿ ಬಗೆ ಬಗೆಯ ರೂಪವಾಗಿ, ಭಾವವಾಗಿ, ಅನಂತ ವೇಷಧಾರಿಗಳಾಗಿ ಈ ಅತಿಥಿಗಳು ಬಂದು ನಿಲ್ಲುತ್ತಾರೆ. ನಾವು ಗುರುತಿಸಿದೆವೋ ಅವರು ನಮ್ಮವರು; ಗುರುತಿಸಲಿಲ್ಲವೋ ಅವರು ತಮ್ಮ ಪಾಡಿಗೆ ತಾವು ಹೋಗುತ್ತಾರೆ. ಗುರುತಿಸಿದಾಗ, ಅವರೊಡನೆ ಸಖ್ಯ ಬೆಳಸಿದಾಗ ಅವರು ಹೇಳುತ್ತಾರೆ, ತಾವು ಆನಂದದ ಮೂರ್ತಿಗಳೆಂದು. ಆದರೂ ಇವರೆಲ್ಲ ಇಲ್ಲಿಗೆ ನೆಲಸಲು ಬಂದವರಲ್ಲ. ಹಾಗೆ ಬಂದು ಹೀಗೆ ಹೋಗುವ ‘ಮೋದದ ಹಾದಿಯ ದಾರಿಗರು.’ ಇಂಥವರ ಸ್ಪರ್ಶದಿಂದ ಕವಿಹೃದಯಕ್ಕೆ ಹೊಸ ಬೆಳಕು ಬರುತ್ತದೆ. ಅಲ್ಲಿ ಸಂಗಮದ ಆನಂದವಿದೆ, ಮರುಕ್ಷಣದಲ್ಲೆ ವಿರಹದ ವಿಷಾದವೂ ಇದೆ. ಆಗ-

‘ಆಹ’ ಎನಿಸುತ ಬಂದು ‘ಅಯ್ಯೋ’ ಎನಿಸಿ ನಡೆಯುವ ಚಂಚಲೆ
ನಿನ್ನ ಮಿದು ಪದ ಸೋಂಕಲೀ ಮನ ನೂರು ಮಿಂಚಿನ ಗೊಂಚಲೆ
[32]

ಎನಿಸುತ್ತದೆ. ಇಂತು ಮಿಂಚಿನಂತೆ ಚಂಚಲವಾದುದು ಈ ಚೆಲುವು. ಇದರ ಪೂರ್ಣಾನುಭವ ಸ್ಥಿರವಾಗಿ ನಿಲ್ಲುವುದು ಋಷಿ ಯೋಗಿ ಸಿದ್ಧಾದಿಗಳಿಗೆ. ನಮಗೆ ಲಭಿಸುವುದು ಅಲ್ಪಸ್ವಲ್ಪ. ಆದರೂ –

ಅರೆಯರೆಯೆ ನಮಗೆ ತೋರ್ಪೊಲವು ಚೆಲುವುಗಳೆಲ್ಲ
ಪರಿಪೂರ್ಣ ಸುಖಸತ್ವ ಸಾಗರದ ತೆರೆಗಳ್
[33]

ಎನ್ನುವುದು ಅನುಭವಕ್ಕೆ ಬರುತ್ತದೆ. ಆದುದರಿಂದ ನಾವು ಈ ಲೋಕದ ಚೆಲುವನ್ನು ಒಲಿಯಬೇಕು, ಆರಾಧಿಸಬೇಕು-

‘ಚೆಲುವೇ ದೇವರು ಒಲವೇ ಪೂಜೆ
ಎಂಬುದೆ ರಸಜೀವನದೋಜೆ
[34]

ಎಂದು ಭಾವಿಸಬೇಕು. ಅಷ್ಟೇ ಅಲ್ಲ –

‘ಸುಂದರವಾಗಿರು
ಸೌಂದರ‍್ಯದ ಸೇವೆಯೆ ನೀ ಮಾಡುವ ಮಹದುಪಕಾರ!
ಸುಂದರವಾಗಿರು:
ಸೌಂದರ‍್ಯದಿ ಸಿದ್ಧಿಪುದಾ ಭಗವತ್ ಸಾಕ್ಷಾತ್ಕಾರ!
[35]

ಎಂಬ ಶ್ರದ್ಧೆ ಉದಿಸಬೇಕು. ಈ ಶ್ರದ್ಧೆಯ ಉಪಾಸನೆಯಲ್ಲಿ ಅನನ್ಯವಾದ ತಾದಾತ್ಮ್ಯ ಲಭಿಸಬೇಕು, ಅದೊಂದು ರಸತಪಸ್ಸಾಗಬೇಕು. ಕವಿ ಹೇಳುತ್ತಾನೆ –

ಗಗನವನು ನೋಡು ಮೈ ನೀಲಿಗಟ್ಟುವವರೆಗೆ
ಕಡಲನೀಕ್ಷಿಸು ವಾರಿರಾಶಿ ಧಮನಿಗಳಲ್ಲಿ
ಧುಮ್ಮಿಕ್ಕಿ ಮೊರೆವನ್ನೆಗಂ, ಕಟ್ಟಿರುಳಿನಲ್ಲಿ
ನೀನೆ ಕತ್ತಲೆಯಾಗಿ ನಿನ್ನೊಳೆ ಮಿರು ಮಿರುಗೆ
ಕೋಟಿ ಸಂಖ್ಯೆಯ ತಾರೆಯನ್ನೆಗಂ ಧ್ಯಾನಗೈ.
ಕೇಳು ಸುಗ್ಗಿಯ ಹಕ್ಕಿ ಕರೆಯೆ ಸಗ್ಗವ ಕೂಗಿ
ಮೈಯ ನೆತ್ತರುಮೆಲ್ಲಮಿಂಚರದ ಹೊನಲಾಗಿ,
ಸರ್ವಸೃಷ್ಟಿಯನೊಂದೆ ಮುಕ್ಕುಳಲಿ ಪಾನಗೈ!
ವಿಶ್ವವಿದು ನಿನ್ನಾತ್ಮದಾ ಕಾಲದೇಶದಲಿ
ನಿನ್ನ ಮೈಯಾಗಲಿ; – ವಸುಂಧರೆಯ ಹೃದಯವಾಗಿ
ವಿಸ್ತೃತ ಸಮುದ್ರಗಳೆ ಶ್ವಾಶಕೋಶಗಳಾಗಿ,
ತೇಲಲಿ ಜಗತ್ತು ರಸಸಿದ್ಧಿಯಾಕಾಶದಲಿ.
ಒಂದು ಎರಡೆಂದೆಂಬ ಹುಸಿಯನೆಲ್ಲವ ಬಿಟ್ಟು,
ಉಳಿಯಲೆಂದೆಂದಿಗೂ ಮೂಕವಾಗಿಹ ಗುಟ್ಟು!
[36]

ಎಂದು. ಇದು ರಸಸಿದ್ಧಿ, ಇಂತಹ ಸಿದ್ಧಿಗೆ ಕಾತರಿಸುವುದು, ಸಾಧನೆ ಮಾಡುವುದು, ಆರಾಧಿಸುವುದು, ಏರುವುದು – ಇದೇ ಬಾಳಿನ ‘ಸರ್ವೋತ್ತಮ ಗಂತವ್ಯ’ ಎನ್ನುವುದು ಕವಿಯ ಸೌಂದರ‍್ಯಸಿದ್ಧಿಯ ಹಂಬಲವನ್ನು ತೋರಿಸುತ್ತದೆ. ಈ ನಿರಂತರ ಆರಾಧನೆಯಲ್ಲಿ ರಸಜೀವಿಗೆ ಒಮ್ಮೆ ‘ಚಿರನೂತನ ಸೌಂದರ್ಯ ಮೂರ್ತಿಯ ದರ್ಶನವಾಗುತ್ತದೆ. ಅಲ್ಲಿನ ತನಕ ಅವನು ಕಾಣುವುದೇನಿದ್ದರೂ ಆ ತಾಯಿಯ ಜಡೆಗಳ ವಿಲಾಸ ವಿನ್ಯಾಸವನ್ನು; ಅಲ್ಲಿನ ತನಕ ಈ ಸಖೇದಾಶ್ಚರ್ಯವಾದ ತುಡಿತ –

‘ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ
ಕಾಣದಲ್ಲ!’
[37]

“ನಿನ್ನ ಕೆಂದುಟಿಯ ಹಿಂದುಗಡೆ ಅಮಿತ ಸಂಖ್ಯೆಯ
ಸೂರ‍್ಯ ಚಂದ್ರೋದಯಗಳ ಅಗಣಿತ ರಹಸ್ಯಗಳು
ಹಣ್ಣಾಗಿ ಹುದುಗಿಕೊಂಡಿವೆ.
ನಿನ್ನ ಕಣ್ಗಳ ತಿಳಿಗೊಳದಾಳದಲಿ ನೂರಾರು ಹೇರಾಸೆ
ಗಳ ಮಾಯೆಯ ಮೋಹ ಬೀಡು ಬಿಟ್ಟಿದೆ.

ನಿನ್ನ ಮುಂಗುರುಳುಗಳ ಮರೆಯಲ್ಲಿ ವಿಶ್ವಗ್ರಾಸಿಯಾದ
ಕದ್ದಿಂಗಳ ಕತ್ತಲೆ ಮನೆಮಾಡಿದೆ.
ನಿನ್ನ ಚೆಂಗೆನ್ನಗಳ ಪರ್ಣಶಾಲೆಯಲ್ಲಿ ಇಂದ್ರಧನು
ವರ್ಣಮಯ ವಸಂತಮಾಸದ ಮಹಾಕುಸುಮ ಸಮ್ಮೇಲನ
ನೆರೆದಿದೆ.

ನಿನ್ನೊಂದು ಕಿರುಗನಸಿನೆದುರಿನಲಿ ಹಿಮಾಲಯ ಮಹಾಶೈಲವೂ
ನಾಚಿ ತಲೆಬಾಗಿ ನಿಂತಿದೆ.
ನಿನ್ನೊಂದು ಮೆಲುನಗೆಯ ಶಾಶ್ವತ ಜ್ಯೋತಿಯ ಮುಂದೆ
ಯುಗ ಯುಗಾಂತರ ಸ್ಥಾಯಿಗಳೆಂದು ಹೆಮ್ಮೆಯಿಂದ ಹೊಳೆಯುತಿಹ
ಶಶಿ ಶೂರ‍್ಯ ತಾರೆಗಳ ದೀಪ್ತಿ ಕ್ಷಣ ಭಂಗುರವಾಗಿದೆ.
ಏಕೆನೆ, ನೀನು ಚಿರನೂತನ ಸೌಂದರ‍್ಯ ಮೂರ್ತಿ
[38]

-ಕವಿ ಕುವೆಂಪು ಅವರಿಗೆ ದರ್ಶನವಿತ್ತ ‘ಚಿರನೂತನ ಸೌಂದರ್ಯ ಮೂರ್ತಿ’ ಇವಳು. ಇವಳೇ ಮಾಯೆ, ಇವಳೆ, ರತಿ, ಇವಳೇ ಕಲಾಸುಂದರಿ. “ಪ್ರೇಮ ಸೌಂದರ್ಯ ರೂಪದಿ ಸುಳಿದು ವಿಶ್ವಮಂ ಶುಷ್ಕತಾ ಶೂನ್ಯಕ್ಕೆ ಬಿಡದೆ ಹೊರೆಯುವ ರಸವೆ”[39] ಇವಳು. ಈ ಸೌಂದರ‍್ಯಮೂರ್ತಿ ಈ ಕವಿಗೆ ಮೊದಲು ‘ರತಿ’ಯಾಗಿ ಗೋಚರಿಸಿದಳು ಪ್ರಕೃತಿಯಲ್ಲಿ. ಆಗ ಕವಿಗೆ ಇವಳಾರೆಂಬ ಕುತೂಹಲ ಕೆರಳಿತು-

ತಳಿತಿಹ ವನದೊಳು ಹೀಲಿಯ ಕಂಗಳ
ಕೆದರಿದ ನವಿಲಿನ ಮುಕ್ತಿಯ ಬೆಡಗಿಗೆ
ಚೈತ್ರದ ಬಣ್ಣದ ಸಿರಿಯನು ಸೇರಿಸಿ
ನಿನ್ನನು ನೆಯ್ದಾ ರಸಋಷಿ ಯಾರು?
……………………………………………
ಕೂಸಿನ ಕೆನ್ನೆಯ ತಾಯಿಯ ಮುತ್ತನು
ನಲ್ಲನೆ ಕೆನ್ನೆಗಳಿನಿಯಳ ಮುತ್ತನು
ಎಲ್ಲರ ಹೃದಯದ ದೇವರ ಮುತ್ತನು
ಪೋಣಿಸಿ ನಿನ್ನನ್ನು ಮಾಡಿದರಾರು?
…………………………………………
ಶೂನ್ಯ ಸಮಾಧಿಯೊಳಿದ್ದಾ ಬೊಮ್ಮನ
ಚುಂಬಿಸಿ ಎಚ್ಚರಗೊಳಿಸಲು ನೀನು,
ನಿನ್ನಾ ಪ್ರೀತಿಯ ಮುತ್ತಿನ ಲೀಲೆಯೊ-
ಳುದಿಸಿತು ವಿಶ್ವದ ಸಕಲೈಶ್ವರ್ಯ!
[40]

ಎಂದು ಕವಿಗೆ ಬೆರಗು ಕವಿಯಿತು. ಶೂನ್ಯ ಸಮಾಧಿಯೊಳಿದ್ದ ಬ್ರಹ್ಮನನ್ನು ಇವಳು ಚುಂಬಿಸಿ ಎಚ್ಚರಗೊಳಿಸಲಾಗಿ ಆ ಮುತ್ತಿನ ಲೀಲೆಯಿಂದ ಸೌಂದರ‍್ಯ ರೂಪವಾದ ಈ ವಿಶ್ವದ ಸಕಲೈಶ್ವರ‍್ಯ ಉದಿಸಿತಂತೆ. ಹಿಂದೆ ಎಂದೊ ಒಮ್ಮೆ ಸೂರ‍್ಯ ಚಂದ್ರ ಭೂ ಗ್ರಹಗಳು, ಕಾಣದ ತಾರೆಗಳು ಎಲ್ಲವೂ ಒಂದಾಗಿದ್ದಾಗ, ಕರಗಿ ಕುದಿದು ಹೊಳೆಯುತ್ತಿದ್ದಾಗ, ಕಾಲದೇಶಗಳು ಮೈಮರೆತು ಚೇತನ ಜಡದಲ್ಲಿ ಅವಿತು, ಸುಂದರವಾದ ವನಗಿರಿ ಝರಿಗಳೆ ಬೆಂಕಿಯ ಮುದ್ದೆಯಲ್ಲಿ ಒಂದಾದ ಕಾಲದಲ್ಲಿ, ವೈಣಿಕನಾದ ನಟರಾಜನು ತನ್ನ ವೀಣೆಯನ್ನು ಮಿಡಿದು ನರ್ತನಕ್ಕೆ ತೊಡಗಿದಾಗ ಮೂಡಿತು ಈ ಸೃಷ್ಟಿಯ ಸಮಸ್ತ ಸೌಂದರ‍್ಯ. ‘ರತಿ’ಯಾಗಿ ಸೃಷ್ಟಿಶಕ್ತಿಯನ್ನು ಸೌಂದರ‍್ಯಲೀಲೆಗೆ ಪ್ರೇರಿಸಿದ, ಅನಾದಿ ಗಾಯಕನಾಗಿ ವೀಣೆಯನ್ನು ಮಿಡಿದು ಸೃಷ್ಟಿಯ ಸಂಗೀತವನ್ನು ಬಾಜಿಸಲು ತೊಡಗಿದ, ‘ನಟರಾಜ’ನಾಗಿ ಈ ಎಲ್ಲ ಚೆಲುವುಗಳನ್ನು, ರೂಪಿಸಿದ, ಕಲ್ಪನಾ ಸುಂದರಿ’ಯಾಗಿ ಮಾನವ ಚಿರಂತನ ಸಖಿಯಾಗಿ ಅವನಾತ್ಮದಲ್ಲಿ ನೂರಾರು ರಮ್ಯವಾದ ಕನಸುಗಳನ್ನೂ ಆಕಾಂಕ್ಷೆಗಳನ್ನೂ ಚೋದಿಸಿ ಕಲಾಸೃಷ್ಟಿಗೆ ಕಾರಣವಾದ[41] ಆ ಶಕ್ತಿಯೇ ಸೌಂದರ್ಯದ ಚಿರಂತನ ಮೂರ್ತಿಯಾದ ಕಲಾಸುಂದರಿ. ಇವಳು-

ಪ್ರಥಮ ಪೃಥುಲ ತಿಮಿರ ಜಾತೆ
ನಿತ್ಯ ನೂತನ ಪ್ರಸೂತೆ.
[42]

‘ಮೇಲೆ ನೀಲಗಗನತಲ’ವಾಗಿ ‘ಕೆಳಗೆ ತಿರೆಯ ಹಸುರು ನೆಲ’ವಾಗಿ ಶೋಭಿಸುವವಳಿವಳು. ‘ಇವಳ ಮುಡಿಯ ಮೇಲುಗಡೆ ಇನ ಶಶಿಗಳ ನಿಚ್ಚನಡೆ, ಕಡಲಲೆಗಳ ಗಡಿ ಬಿಡಿ; ಇವಳಿಡುತಿಹ ಮೆಲ್ಲಡಿ’ಗಳಂತೆ! ಜನನ ಮರಣ ಕಾಲ ದೇಶಗಳೆಲ್ಲವೂ ಇವಳ ಚರಣನ್ಯಾಸ ಮಾತ್ರ. ಸೂರ‍್ಯಚಂದ್ರರ ಉದಯದಲ್ಲಿ ಇವಳು ‘ಸ್ವರ್ಣ ಸ್ವಪ್ನರಂಗಿನಿ’, ‘ಲಲಿತ ಚರಣ ಭಂಗಿಯಿಂದೆ’ ಇವಳು ನಡೆದರೆ ‘ಬಹವು ಋತುಗಳೆಲ್ಲ ಹಿಂದೆ’, ಇವಳು ಎವೆ ತೆರೆದರೆ ಹಗಲು, ಎವೆ ಮುಚ್ಚಿದರೆ ಇರುಳು. ಇವಳು ‘ಶತಸಹಸ್ರ ನಿಯತಿಲೋಲೆ’ಯಾದರೂ ‘ಅಕೂಲ ಮುಕ್ತಿಶೀಲೆ’. ನಿಯಮಗಳೆ ಇವಳಿಗೆ ಬಳೆ! ಹರ್ಷ ಶೋಕಗಳನ್ನು ನಾಕ ನರಕಗಳನ್ನು ಸೃಜಿಸುವ ಅರೂಪ ಸುಂದರಿ ಇವಳು. ತಾರಾದಿ ಗ್ರಹಗಳನ್ನೆ ಒಳಗೊಂಡ ನಭವನ್ನೆ ಮಾಲೆಯಾಗಿ ಸೂಡಿಕೊಂಡು ನಲಿಯುವವಳು! ‘ಹೂವುಗಳಿಗೆ ಬಣ್ಣ ಬಳಿದು ದುಂಬಿಗಳನ್ನು ಬಳಿಗೆ ಸೆಳೆದು’ ಒಲುಮೆಯನ್ನು ಕಲಿಸುವವಳಿವಳು. ತತ್ವವಾಗಿ, ಕಾವ್ಯವಾಗಿ, ನೂರಾರು ಭಾವ ತರಂಗವಾಗಿ ತೋರುವವಳು ಇವಳು. ಕವಿಯ ಕಣ್ಣಿಗೆ ಬೆಳಕು ತಂದ ಅಸೀಮ ಸ್ಫೂರ್ತಿ ಈಕೆ. ಅಂದೊಮ್ಮೆ ತನ್ನ ಕನಕ ರಥವನ್ನು ತಂದು ದೂಳಾಡುತ್ತಿದ್ದ ಕವಿಶಿಶುವನ್ನು ತಾವರೆಯ ತೇರಿನಲ್ಲಿ ಕೂರಿಸಿಕೊಂಡು ನೀಲವ್ಯೋಮ ಯಾತ್ರಿಯಾದ ಈ ಮಹಾಶಕ್ತಿಯೇ, ಕುವೆಂಪು ಅವರು ಕಂಡ ‘ಋತುಚಿನ್ಮi ಜಗನ್ಮಾತೆ’. ಕನ್ನಡದ ಮತ್ತೊಬ್ಬ ಕವಿ ಬೇಂದ್ರೆಯವರು ದರ್ಶಿಸಿದ ‘ಗಾಯಿತ್ರಿ’ ಯೂ ಇವಳೇ. ಇವಳನ್ನು ಕುರಿತು –

ಲಯದ ಬಸಿರ ಬಯಲಲ್ಲಿ ದೇವ – ಭವ ಬೀಜ ಬಿತ್ತಿದಾಕೆ
ಮೂಕು ಮೊಗ್ಗೆ ಮುನ್ನೂಕಿ ಬಂಡಿನಲಿ ತಲೆಯನೆತ್ತಿದಾಕೆ
ರಸವ ಮೀರಿ ತಾನಾರಿದಾತನಿಗೆ ಹೇಗೊ ರುಚಿಸಿದಾಕೆ
ಸಾಕ್ಷಿ ಪುರುಷನ ಅಕ್ಷಿಯಲ್ಲೆ ಪ್ರತ್ಯಕ್ಷ ರಚಿಸಿದಾಕೆ.

ಜಡದ ಪ್ರಾಣಗತಿ ಜಡಿದು ಮಿಡಿದು ಸ್ವರಮೇಳಕೋದಿದಾಕೆ
ಕೋಟಿ ಚಿಕ್ಕೆ ಪುಟಕಿರುವ ಬಯಲ ಹೊತ್ತಿಗೆಯನೋದಿದಾಕೆ
ಪಿಂಡಗಳನು ಬ್ರಹ್ಮಾಂಡಗಳನು ಮಣಿಮಾಲೆ ಮಾಡಿದಾಕೆ
ತನ್ನ ತಾಳಗತಿಯಲ್ಲಿ ವಿಶ್ವಗಳ ಗೀತ ಹಾಡಿದಾಕೆ.

ಕೀಟಕೀಟದಲಿ ಮಾಟಮಾಡಿ ಹಲಚೆಲವು ತೋರಿದಾಕೆ
ಪಶುವಿನೆದುರು ಮರಿದೂಡಿ ಮೋಡಿಯಲಿ ಒಲವ ತೋರಿದಾಕೆ
ಹಾವಭಾವದಲಿ ಭೋಗಯೋಗದಲಿ ನಲಿವ ತೋರಿದಾಕೆ
ಸಕಲ ವಿಕಲಗಳ ಕಲೆಯ ಜಾಲದಲಿ ಒಲವ ಮೀರಿದಾಕೆ.

ಚತುರ್ಮುಖನ ನಾಲಗೆಯ ಹಾಸಿ ತುಟಿದಿಂಬು ಮಾಡಿದಾಕೆ
ವತ್ಸಾಲಾಂಭನದ ಹೃದಯ ಕಮಲದಲಿ ಮನೆಯ ಹೂಡಿದಾಕೆ
ಹರನ ಮೈಯನರೆದುಂಬಿ ಲೀಲೆಯಲಿ ತಲೆಯನೇರಿದಾಕೆ
ಹೀಗೆ ಕುಣಿಯೆ ಆನಂದ ಲಹರಿ ಈ ಜೀವ ಸೇರಿದಾಕೆ
[43]

ಎಂದು ಹಾಡಿದ್ದಾರೆ. ಮೂರ್ತವೂ ಅಮೂರ್ತವೂ ಆದ ಈ ಚಿರಂತನ ಚೆಲುವಿನ ಮೂರ್ತಿಯನ್ನು ಮಾತಿನ ಮೋಡಿಯಿಂದ ಕಡೆದಿಡಲು ಯತ್ನಿಸಿದ್ದಾರೆ. ಕುವೆಂಪು ಅವರು ಕಂಡ ಕಲಾಸುಂದರಿ, ಬೇಂದ್ರೆಯವರು ಕಂಡ ಗಾಯತ್ರಿ, ಅಖಂಡ ಸೌಂದರ್ಯ ದರ್ಶನದ ಪ್ರತಿಮೆಗಳು. ಕಣ್ಣಿನ ನಡುವೆ ಒಳಗಣ್ಣನ್ನು ತೆರೆದ ಈ ದಿವ್ಯಮಾಯೆಯನ್ನು ಪು.ತಿ.ನ, ಅವರೂ ಕಂಡು ‘ರಸ ಸರಸ್ವತಿ’ ಎಂದು ಹೆಸರಿಸಿ ಹಾಡಿದ್ದಾರೆ. ಇವಳು ಈ ರಸ ಸರಸ್ವತಿ –

ರಸ ಸರಸ್ವತಿ ದೇವಿ, ಕವಿಯಿಷ್ಟ ಸ್ವಪ್ನವೇ,
ಕವಿಯ ಹೃತ್‌ಕುಹರದಿಂ ರಸಿಕಜನ ಹೊರತೆಗೆವ ಭವ ರತ್ನವೇ.
ಒಳ ಹೊರಗೆ ಬೆರಸಿ ದಿಗ್‌ಭ್ರಮೆಗೊಳಿಸುವಪ್ಸರೇ,
ಇಂದ್ರಿಯ ಮನೋಬುದ್ಧಿ ಧೃತ ಸತ್ಯ ಮತ್ಸರೇ,
ಈರೇಳು ಲೋಕಗಳ ಈ ಲೋಕದಿಂದೆತ್ತಿ ಪಡೆಗೊಂಡ ವಿಕ್ರಮೇ
ತುಳಿಯುವೆಡೆ ಚೆಲು ಚೆಲುವ ಕೊನರಿಸುತ ಜಗದೊಲವ
ಕೊಳುವ ಹೃದಯಂಗಮೇ……
[44]

ಈ ಸೌಂದರ‍್ಯದ ಅಧಿಷ್ಠಾತ್ರಿಯಲ್ಲಿ ಕವಿಯ ನಿರಂತರ ಪ್ರಾರ್ಥನೆ ಇದು :

ಅಲ್ಲೆ ನಿಲ್ಲೆಂದಿಹದ ವ್ಯಾಪಾರವನು ನಿಲಿಸಿ
ಅರಿಷಟ್ಕ ಸಮೆದ ಸೆರೆಯಿಂ ಮುದವ ಬಿಡಿಸಿ
ಕರಣಕಾತ್ಮವೆ ವಿಷಯವಾದುದೆನೆ ಕಂಡಕಂಡೆಡೆಯಲ್ಲಿ ಚೆಲುವನಿರಿಸಿ
ಇಂದುವರೆಗೆನ್ನ ನೀನಮೃತಕರದಿಂದೆತ್ತಿ ಪೊರೆದ ತೆರದಿ
ಭವವನರಿತದ ಮೀರಿ ನಿಲುವ ರಸಪದಕೆನ್ನ ಸಲಿಸು ಜವದಿ.
[45]

* * *


[1] ಕುವೆಂಪು – ಕೊಳಲು. ಪು. ೮೪

[2] ಕುವೆಂಪು – ಕೊಳಲು. ಪು. ೬೨

[3] ಬೇಂದ್ರೆ – ಸಖೀಗೀತ, ಪು. ೩೮

[4] ಜಿ.ಎಸ್.ಶಿ. – ಚೆಲುವು – ಒಲವು, ಪು.೧.

[5] ಪು.ತಿ.ನ – ರಸಸರಸ್ವತಿ, ಪು. ೨೯

[6] ಬೇಂದ್ರೆ – ನಾದಲೀಲೆ ಪು. ೨೩

[7] ಚನ್ನವೀರ ಕಣವಿ -ಆಕಾಶಬುಟ್ಟಿ, ಪು. ೭೦

[8] ಕುವೆಂಪು – ಪಕ್ಷಿಕಾಶಿ ಪು. ೩೯.

[9] ಪು.ತಿ.ನ – ಗಣೇಶ ದರ್ಶನ, ಪು. ೨೪

[10] ಪು.ತಿ.ನ – ಮಲೆದೇಗುಲ, ಪು. ೧೮

[11] ಕುವೆಂಪು – ಪಕ್ಷಿಕಾಶಿ, ಪು. ೧೧.

[12] ಕುವೆಂಪು – ಪಕ್ಷಿಕಾಶಿ ಪು. ೨೪

[13] ಕುವೆಂಪು – ಪಕ್ಷಿಕಾಶಿ, ಪು. ೨೧

[14] ಕೆ.ಎಸ್.ನ. – ಉಂಗುರ, ಪು. ೧೯

[15] ಕುವೆಂಪು – ಪಕ್ಷಿಕಾಶಿ, ಪು.೨೨

[16] ಪು.ತಿ.ನ – ರಸಸರಸ್ವತಿ ಪು. ೩೭

[17] ಪು.ತಿ.ನ.- ಮಾಂದಳಿರು ಪು. ೪

[18] ಜಿ.ಎಸ್.ಶಿ. – ಚೆಲುವು – ಒಲವು ಪು.೨.

[19] ಪು.ತಿ.ನ. – ಕವಿ ಮತ್ತು ದೋಣಿಯ ಬಿನದ, ಪು. ೩೫

[20] ಬೇಂದ್ರೆ – ಗಂಗಾವತರಣ ಪು. ೧೭

[21] ಪು.ತಿ.ನ ಅವರ ರಸ ಸರಸ್ವತಿಯ ಮುನ್ನುಡಿಯನ್ನು ನೋಡಿ.

[22] ಪು.ತಿ.ನ. – ರಸ ಸರಸ್ವತಿ, ಪು. ೩೧.

[23] ಪು.ತಿ.ನ – ರಸ ಸರಸ್ವತಿ, ಪು. ೪೯

[24] ಬೇಂದ್ರೆ – ಸಖಿಗೀತ, ಪು. ೮೪

[25] ಪು.ತಿ.ನ. – ರಸ ಸರಸ್ವತಿ, ಪು. ೩೮

[26] ಬೇಂದ್ರೆ : ಸಖೀಗೀತ ಪು. ೮೪

[27] ಡಿ.ವಿ.ಜಿ. : ಮಂಕುತಿಮ್ಮನ ಕಗ್ಗ ಪು. ೧೦೬

[28] ಡಿ.ವಿ.ಜಿ. : ನಿವೇದನ ಪು. ೪೩.

[29] ಪು.ತಿ.ನ: ಕವಿ ಮತ್ತು ದೋಣಿಯ ಬಿನದ, ಪು.೫೫

[30] ಪು.ತಿ.ನ: ಕವಿ ಮತ್ತು ದೋಣಿಯ ಬಿನದ, ಪು. ೫೫

[31] ಗೋ.ಕೃ. ಅಡಿಗ.: ಕಟ್ಟುವೆವು ನಾವು (ಅತಿಥಿಗಳು) ಪು.೬೪

[32] ಜಿ.ಎಸ್. ಶಿವರುದ್ರಪ್ಪ : ಕಾರ್ತೀಕ ಪು.೯.

[33] ಡಿ.ವಿ.ಜಿ.: ಮಂಕುತಿಮ್ಮನ ಕಗ್ಗ, ಪು. ೬೧-೨೧೯

[34] ಕುವೆಂಪು : ಕೋಗಿಲೆ ಮತ್ತು ಸೋವಿಯತ್ ರಷ್ಯಾ ಪು. ೫೮.

[35] ಕುವೆಂಪು : ಚಂದ್ರಮಂಚಕೆ ಬಾ ಚಕೋರಿ ಪು. ೨೯.

[36] ಕುವೆಂಪು : ಕೃತ್ತಿಕೆ ಪು. ೨೯

[37] ಜಿ.ಎಸ್.ಶಿ.: ಚೆಲುವು – ಒಲವು ಪು. ೬೧.

[38] ಕುವೆಂಪು : ಕಿಂಕಿಣಿ ಪು. ೪೪

[39] ಕುವೆಂಪು : ಚಿತ್ರಾಂಗದಾ ಪು. ೧೧ (ಪಂಕ್ತಿ ೧೨.೧೩)

[40] ಕುವೆಂಪು : ಕೊಳಲು ಪು. ೪೧-೪೨

[41] ‘ಕೊಳಲು’ ಸಂಗ್ರಹದಲ್ಲಿನ ‘ನಟರಾಜ’ (ಪು.೯೭) ‘ರತಿ’ (ಪು. ೪೦-೪೨) ‘ಕಲಾ ಸುಂದರಿ’ ಸಂಗ್ರಹದ ಮೊದಲ ಪದ್ಯ ‘ಕಲ್ಪನಾ ಸುಂದರಿ’ (ಪು.೭೪) ಇವುಗಳಲ್ಲಿ ಈ ವಿಷಯವಿದೆ.

[42] ಕುವೆಂಪು : ಕಲಾಸುಂದರಿ ಪು.೧

[43] ದ.ರಾ.ಬೇಂದ್ರೆ : ಹಾಡು – ಪಾಡು (ಗಾಯಿತ್ರೀ ಸೂಕ್ತ) ಪು.೫೦

[44] ಪು.ತಿ.ನ : ರಸಸರಸ್ವತಿ ಪು : ೪೯

[45] ಪು.ತಿ.ನ : ರಸಸರಸ್ವತಿ ಪು : ೪೯