ಸೌತೆಕಾಯಿ ಹಸಿಯಾಗಿ ತಿನ್ನುವ ‘ಪಚ್ಚಡಿ ತರಕಾರಿ’. ಭಾರತದ ಎಲ್ಲಾ ಕಡೆ ಇದರ ಬೇಸಾಯ ಮತ್ತು ಬಳಕೆಗಳು ಇವೆ. ಇದು ನಮ್ಮ ದೇಶದ ಜನಪ್ರಿಯ ತರಕಾರಿ.

ಪೌಷ್ಟಿಕ ಗುಣಗಳು :

೧೦೦ ಗ್ರಾಂ ಕಾಯಿಗಳಲ್ಲಿನ ವಿವಿಧ ಪೋಷಕಾಂಶಗಳು

ತೇವಾಂಶ – ೯೬.೩ ಗ್ರಾಂ
ಶರ್ಕರಪಿಷ್ಟ – ೨.೭ ಗ್ರಾಂ
ಪ್ರೊಟೀನ್ – ೦.೪ ಗ್ರಾಂ
ಕೊಬ್ಬು – ೦.೧ ಗ್ರಾಂ
ಖನಿಜ ಪದಾರ್ಥ – ೦.೩ ಗ್ರಾಂ
ರಂಜಕ – ೨೫ ಮಿ.ಗ್ರಾಂ
ಕ್ಯಾಲ್ಸಿಯಂ – ೧೦ ಮಿ.ಗ್ರಾಂ
ಕಬ್ಬಿಣ – ೧.೫ ಮಿ.ಗ್ರಾಂ
ಕಬ್ಬಿಣ – ೦೫ ಮಿ.ಗ್ರಾಂ
ಪೊಟ್ಯಾಷಿಯಂ – ೫೦ ಮಿ.ಗ್ರಾಂ
ಪೊಟ್ಯಾಷಿಯಂ – ೫೦ ಮಿ.ಗ್ರಾಂ
ರೈಬೋಫ್ಲೇವಿನ್ – ೦.೦೧ ಮಿ.ಗ್ರಾಂ
ಥಯಮಿನ್ – ೦.೦೫ ಮಿ.ಗ್ರಾಂ
’ಸಿ’ ಜೀವಸತ್ವ – ೭ ಮಿ.ಗ್ರಾಂ

ಔಷಧೀಯ ಗುಣಗಳು : ಸೌತೆ ಉತ್ತಮ ಆಹಾರ. ಅದರಲ್ಲಿನ ತೇವಾಂಶ ಇತರ ಆಹಾರದಲ್ಲಿನ ಹುಳಿ ಅಂಶವನ್ನು ತೊಳೆದುಹಾಕುತ್ತದೆ. ಮಲಬದ್ಧತೆ ಇರುವವರು ಇದನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಬೇಕು. ಸೌತೆ ಶೈತ್ಯಕಾರಕವೆನ್ನುತ್ತಾರೆ. ಬೇಸಿಗೆಯಲ್ಲಿ ತಿಂದರೆ ದಣಿವು ದೂರಗೊಳ್ಳುತ್ತದೆ. ಇದರಲ್ಲಿ ಜೀರ್ಣಕಾರಕ ಗುಣಗಳಿವೆ. ಇದು ಮೂತ್ರವರ್ಧಕವಿದ್ದು ರಕ್ತದ ಒತ್ತಡ ಇರುವವರು ಹೆಚ್ಚಾಗಿ ಬಳಸಬೇಕು.

ಉಗಮ ಮತ್ತು ಹಂಚಿಕೆ : ಸೌತೆ ನಮ್ಮ ದೇಶದ್ದು. ಜಗತ್ತಿನ ಎಲ್ಲಾ ಕಡೆ ಕಂಡುಬರುತ್ತದೆ.

ಸಸ್ಯ ವರ್ಣನೆ : ಸೌತೆ ಕುಕುರ್ಬಿಟೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಬಳ್ಳಿ. ಬಳ್ಳಿಯಾದ್ದರಿಂದ ಮೇಲಕ್ಕೇರಲು ಆಸರೆ ಬೇಕು. ಕಾಂಡ ಮತ್ತು ಕವಲು ಹಂಬುಗಳು ಬಲಹೀನ. ನುಲಿಬಳ್ಳಿಗಳ ನೆರವಿನಿಂದ ಆಸರೆಗೆ ಸುತ್ತಿ ಮೇಲಕ್ಕೆ ಹಬ್ಬುತ್ತವೆ. ಎಲೆಗಳು ಹಸ್ತಾಕಾರ; ಅಂಚು ಒಡೆದಿರುವುದಿಲ್ಲ. ಎಲೆಗಳ ಬಣ್ಣ ಹಸುರು; ನರಗಳು ಸ್ಪಷ್ಟ. ಕಾಂಡ, ಎಲೆ ಮತ್ತು ಹೂತೊಟ್ಟುಗಳ ಮೇಲೆಲ್ಲಾ ನವಿರಾದ ತುಪ್ಪಳ. ಹೂವು ಏಕಲಿಂಗಿಗಳು; ಸಣ್ಣ ತೊಟ್ಟು, ಪುಷ್ಪದಳಗಳು ಹಳದಿ ಬಣ್ಣ. ದೀರ್ಘ ಬೆಳಕಿನ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಗಂಡು ಹೂವು ಬಿಡುವುದು ಸಾಮಾನ್ಯ. ಕಾಯಿ ಉದ್ದ, ಉರುಳೆಯಂತೆ. ಒಳಗಿನ ತಿರುಳಿನಲ್ಲಿ ಅಸಂಖ್ಯಾತ ಬೀಜ ಹುದುಗಿರುತ್ತವೆ.

ತಳ ಅಭಿವೃದ್ಧಿ : ಈ ಬೆಳೆಯ ಅಭಿವೃದ್ಧಿ ಸ್ವಲ್ಪಮಟ್ಟಿಗೆ ನಡೆದಿದೆ. ಉತ್ತಮ ತಳಿಗಳನ್ನು ಅಭಿವೃದ್ಧಪಡಿಸಿ ಬೇಸಾಯಕ್ಕೆ ತರುವಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮುಂತಾಗಿ ಬಹುವಾಗಿ ಶ್ರಮಿಸಿವೆ.

ಹವಾಗುಣ : ಇದು ಉಷ್ಣವಲಯದ ಬೆಳೆ, ಬೆಚ್ಚಗಿನ ಹವಾಗುಣ ಬೇಸಾಯಕ್ಕೆ ಬಲುಸೂಕ್ತ. ಬೇಸಿಗೆ ಮತ್ತು ಮಳೆಗಾಲಗಳಲ್ಲಿ ಚೆನ್ನಾಗಿ ಫಲಿಸುತ್ತದೆ. ಇದು ಕಡಿಮೆ ಅವಧಿಯಲ್ಲಿ ಫಲಿಸುವ ಬೆಳೆ. ಬಹಳಷ್ಟು ಬಿಸಿಲು-ಬೆಳಕುಗಳಿದ್ದಲ್ಲಿ ಹಾಗೂ ದೀರ್ಘ ಸಮಯ ಬೆಳಕು ಲಭ್ಯವಿದ್ದಲ್ಲಿ ಗಂಡು ಹೂಗಳ ಉತ್ಪತ್ತಿ ಜಾಸ್ತಿ. ಇತರ ಕಾಲಗಳಿಗಿಂತ ಮಳೆಗಾಲದಲ್ಲಿ ಬೆಳೆದಾಗ ಅಧಿಕ ಫಸಲು ಸಾಧ್ಯ. ಕರ್ನಾಟಕದಲ್ಲಿ ಜನವರಿ-ಫೆಬ್ರುವರಿ ಸೂಕ್ತ ಕಾಲ. ಜೂನ್-ಜುಲೈನಲ್ಲಿ ಸಹ ಬಿತ್ತಬಹುದು.

ಮುಖ್ಯ ತಳಿಗಳು :

ಜಾಪನೀಸ್ ಲಾಂಗ್ಗ್ರೀನ್ : ಬಹುಬೇಗ ಎಂದರೆ ಬಿತ್ತನೆಯಾದ ಸುಮಾರು ೪೫ ದಿನಗಳಲ್ಲಿ ಕೊಯ್ಲಿಗೆ ಬರುವ ತಳಿ. ಕಾಯಿಗಳು ೩೦-೩೮ ಸೆಂ.ಮೀ. ಉದ್ದ, ದಪ್ಪ, ಸಿಪ್ಪೆ ಹಸುರು ಬಣ್ಣ. ತಿರುಳ ರಸವತ್ತು, ತಿನ್ನಲು ಗರಿಗರಿಯಾಗಿರುತ್ತದೆ; ಫಸಲು ಅಧಿಕ.

. ಸ್ಟೇಟ್ : ಇದಕ್ಕೆ ಸ್ಟ್ರೇಟ್ ಎಯ್ಟ್ ಎಂಬ ಹೆಸರೂ ಇದೆ. ಬೇಗ ಕೊಯ್ಲಿಗೆ ಬರುವ ತಳಿ. ಕಾಯಿಗಳು ಉದ್ದ, ಎರಡೂ ತುದಿಗಳು ಗುಂಡಗೆ, ನೋಡಲು ಉರುಳೆಯಂತೆ, ಸಿಪ್ಪೆ ಹಸುರು ಬಣ್ಣ; ಮೇಲೆಲ್ಲಾ ಸಣ್ಣ ಸಣ್ಣ ಗುಳ್ಳೆಗಳು.

. ಚೈನಾ : ತಡವಾಗಿ ಕೊಯ್ಲಿಗೆ ಬರುವ ತಳಿ, ಬಿಡಿಕಾಯಿಗಳು ೪೦ ರಿಂದ ೬೦ ಸೆಂ.ಮೀ. ಉದ್ದ, ದಪ್ಪ, ಸಿಪ್ಪೆ ಹಸುರು ಬಣ್ಣ, ಮೇಲೆಲ್ಲಾ ಸಣ್ಣ ಸಣ್ಣ ಕೂಳೆಗಳು. ತಿರುಳು, ಗರಿಗರಿ, ರುಚಿಕರ, ಫಸಲು ಅಧಿಕ.

. ಪೋಯಿನ್ಸೆಟ್ಟಿ : ಕೈ ತೋಟಗಳಿಗೆ ಒಪ್ಪುವ ತಳಿ. ತುಪ್ಪಳಿನ ರೋಗ ನಿರೋಧಕ.

. ಮಂಗಳೂರು ಸೌತೆ : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾಸ್ತಿ. ಕಾಯಿಗಳು ದೊಡ್ಡವು, ಮೋಟು, ಬಲಿತಾಗ ಹಳದಿ ಬಣ್ಣ, ಮೇಲೆಲ್ಲಾ ಉದ್ದ, ಹಸುರು ಪಟ್ಟೆಗಳು. ಅಡುಗೆಗೆ ಹೆಚ್ಚು ಸೂಕ್ತ. ಪೂರ್ಣ ಬಲಿತಾಗ ಬಹುದೀರ್ಘಕಾಲ ಸಂಗ್ರಹಿಸಿಡಬಹುದು.

. ಧಾರವಾಡದ ಸೌತೆ ಕಾಯಿ ಸುಮಾರು ದೊಡ್ಡವು. ಬಿಡಿಕಾಯಿಗಳು ೧೦ ರಿಂದ ೧೫ ಸೆಂ.ಮೀ. ಉದ್ದ ೩ ರಿಂದ ೫ ಸೆಂ.ಮೀ. ದಪ್ಪ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜನಪ್ರಿಯ. ಸಿಪ್ಪೆ ಹಸುರು ಹಳದಿ ಬಣ್ಣ, ಮೇಲೆಲ್ಲಾ ಉದ್ದ ಪಟ್ಟೆಗಳು. ತಿರುಳು ತಿನ್ನಲು ಗರಿಗರಿ.

ಭೂಮಿ ಸಿದ್ಧತೆ ಮತ್ತು ಬಿತ್ತುವುದು : ಕಾಲುವೆಗಳಲ್ಲಿ ೭೫ ರಿಂದ ೯೦ ಸೆಂ.ಮೀ. ಗೊಂದರಂತೆ ದಿಬ್ಬಗಳನ್ನು ಮಾಡಿ ತಲಾ ೩-೪ ಬೀಜ ಬಿತ್ತಬೇಕು. ಬಿತ್ತುವ ಆಳ ೧ ಸೆಂ.ಮೀ. ಹೆಕ್ಟೇರಿಗೆ ೨.೫ ಕಿ.ಗ್ರಾಂ ಬೀಜ ಬೇಕಾಗುತ್ತವೆ. ಅವು ನಾಲ್ಕೈದು ದಿನಗಳಲ್ಲಿ ಮೊಳೆಯುತ್ತವೆ.

ಗೊಬ್ಬರ : ಹೆಕ್ಟೇರಿಗೆ ೨೫ ರಿಂದ ೩೦ ಟನ್ ತಿಪ್ಪೆಗೊಬ್ಬರ. ೬೦ ಕಿ.ಗ್ರಾಂ ಸಾರಜನಕ. ೫೦ ಕಿ.ಗ್ರಾಂ. ರಂಜಕ ಮತ್ತು ೮೦ ಕಿ.ಗ್ರಾಂ ಪೊಟ್ಯಾಷ್ ಸತ್ವಗಳನ್ನು ಶಿಫಾರಸು ಮಾಡಿದೆ.

ನೀರಾವರಿ : ನಾಲ್ಕೈದು ದಿನಗಳ ಅಂತರದಲ್ಲಿ ನೀರು ಕೊಟ್ಟರೆ ಸಾಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಸೌತೆ ಬಳ್ಳಿಗಳ  ಬೇರು ಸಮೂಹ ಹೆಚ್ಚು ಆಳಕ್ಕೆ ಇಳಿದಿರುವುದಿಲ್ಲ. ಹಾಗಾಗಿ ಅಂತರ ಬೇಸಾಯವು ಹಗುರವಾಗಿರಬೇಕು. ಸಸಿಗಳು ಸುಮಾರು ೧೦-೧೫ ಸೆಂ.ಮೀ. ಎತ್ತರವಿದ್ದು ತಲಾ ೨-೩ ಎಲೆಗಳನ್ನು ಹೊಂದಿರುವಾಗ ಒಮ್ಮೆ ಮತ್ತು ವಾರದ ನಂತರ ಮತ್ತೊಮ್ಮೆ ೫೦ ರಿಂದ ೧೦೦ ಪಿಪಿಎಂ ಸಾಮರ್ಥ್ಯದ  ಮ್ಯಾಲ್ಲಿಕ್ ಹೈಡ್ರಜೈಡ್ ಇಲ್ಲವೇ ೫ ರಿಂದ ೧೦ ಪಿಪಿಎಂ ಜಿಬ್ಬೆರೆಲ್ಲಿಕ್ ಆಮ್ಲ ಅಥವಾ ೧೦೦ ಪಿಪಿಎಂ ನ್ಯಾಫ್ತಿಲಿನ್ ಅಸೆಟಿಕ್ ಆಮ್ಲ ಇಲ್ಲವೇ ೪೦೦ ಪಿಪಿಎಂ ಸಾಮರ್ಥ್ಯದ ಎಥ್ರೆಲ್ ದ್ರಾವಣವನ್ನು ಸಿಂಪಡಿಸಿದರೆ ಅಧಿಕ ಸಂಖ್ಯೆಯಲ್ಲಿ ಹೆಣ್ಣು ಹೂವು ಬಿಟ್ಟು, ಇಳುವರಿಯಲ್ಲಿ ಶೇ. ೬೦ ರಿಂದ ೧೦೦ ರಷ್ಟು ಹೆಚ್ಚಳ ಸಾಧ್ಯ.

ಆಸರೆ ಒದಗಿಸುವುದು : ಬಳ್ಳಿಗಳಿಗೆ ಆಸರೆ ಒದಗಿಸಿದರೆ ಫಸಲು ಅಧಿಕಗೊಳ್ಳುವುದರ ಜೊತೆಗೆ ಅದರ ಗುಣಮಟ್ಟ ಉತ್ತಮವಿರುತ್ತದೆ. ಬಳ್ಳಿಗಳ ಬುಡದಲ್ಲಿ ಮುಳ್ಳು ಕಂಟಿಗಳನ್ನು ಚುಚ್ಚಿ ನಿಲ್ಲಿಸಬಹುದು ಅಥವಾ ಉದ್ದಕ್ಕೆ ತಂತಿಯನ್ನು ಎಳೆದು, ಅದಕ್ಕೆ ಹಬ್ಬಿಸಬಹುದು.

ಕೊಯ್ಲು ಮತ್ತು ಇಳುವರಿ : ಬಿತ್ತನೆ ಮಾಡಿದ  ೪೫-೬೦ ದಿನಗಳಲ್ಲಿ ಕೊಯ್ಲು ಪ್ರಾರಂಭವಾಗುತ್ತದೆ. ಬೆಳೆ ಅವಧಿಯಲ್ಲಿ ಸುಮಾರು ೩-೪ ಕೊಯ್ಲುಗಳಿರುತ್ತವೆ. ಹೆಕ್ಟೇರಿಗೆ ೧೫ ರಿಂದ ೨೦ ಟನ್ ಇಳುವರಿ ಸಾಧ್ಯ. ಕಾಯಿಗಳು ಬೇಗ ಕೆಡುತ್ತವೆ. ಸಾಧಾರಣ ಪರಿಸ್ಥಿತಿಗಳಲ್ಲಿ ಅವುಗಳನ್ನು ೩-೪ ದಿನಗಳವರೆಗೆ ಹಾಗೆಯೇ ಇಡಬಹುದು. ಶೀತಲಮಳಿಗೆಗಳಲ್ಲಿ ಜೋಪಾನ ಮಾಡಿದರೆ ಇನ್ನೂ ಹೆಚ್ಚು ಕಾಲ ಚೆನ್ನಾಗಿರಬಲ್ಲವು. ಕಾಯಿಗಳನ್ನು ೪.೪ ರಿಂದ ೭.೨ ಸೆ. ಉಷ್ಣತೆ ಮತ್ತು ಶೇಕಡಾ ೮೫ ರಿಂದ ೯೫ ಸಾಪೇಕ್ಷ ಆರ್ದ್ರತೆಗಳಲ್ಲಿ ದಾಸ್ತಾನು ಮಾಡಿದರೆ ಅವು ೧೦ ರಿಂದ ೧೪ ದಿನಗಳವರೆಗೆ ಚೆನ್ನಾಗಿರಬಲ್ಲವು.

ಕೀಟ ಮತ್ತು ರೋಗಗಳು :

. ಕೆಂಪು ದುಂಬಿ : ಎಳೆಯ ಸಸಿಗಳನ್ನು ಮುತ್ತಿ ಎಲೆಗಳನ್ನು ತಿನ್ನುತ್ತವೆ. ಎಳೆಯ ಮರಿಗಳು ಹಾಗೂ ಪ್ರಾಯದ ಕೀಟಗಳೆರಡೂ ಹಾನಿಕಾರಕವೇ. ಹತೋಟಿಗೆ ೧೦ ಲೀಟರ್ ನೀರಿಗೆ ೨೦ ಗ್ರಾಂ ಸೆವನ್ ಬೆರೆಸಿ ವಾರಕ್ಕೊಮ್ಮೆ ಎರಡು ಸಾರಿ ಸಿಂಪಡಿಸಬೇಕು.

. ಕತ್ತರಿ ಹುಳು : ರಾತ್ರಿ ಹೊತ್ತಿನಲ್ಲಿ ಓಡಾಡಿ ಇಡಭಾಗಗಳನ್ನು ಕತ್ತರಿಸಿ ಹಾಳುಮಾಡುತ್ತವೆ. ಹತೋಟಿಗೆ ೧೦ ಲೀಟರ್ ನೀರಿಗೆ ೨೦ ಗ್ರಾಂ ಫ್ಯೂರಡಾನ್ ಹರಳುಗಳನ್ನು ಬೆರೆಸಿ ದ್ರಾವಣವನ್ನು ಸಿಂಪಡಿಸಬೇಕು.

. ಹಣ್ಣಿನ ನೊಣ : ಈ ನೊಣಗಳು ಕಾಯಿಗಳ ಸಿಪ್ಪೆಯಲ್ಲಿ ತಮ್ಮ ಅಂಡನಾಳ ಚುಚ್ಚಿ ಮೊಟ್ಟೆಯಿಡುತ್ತವೆ. ಅಂತಹ ಭಾಗಗಳು ಬಣ್ಣಗೆಟ್ಟು ಕೊಳೆಯುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿಗಳು ತಿರುಳನ್ನು ತಿನ್ನಲು ಪ್ರಾರಂಭಿಸುತ್ತವೆ. ಇವುಗಳ ಹತೋಟಿಗೆ ೧೦ ಲೀ. ನೀರಿಗೆ ೧೦ ಮಿ.ಲೀ. ಫೆಂಥಿಯಾನ್ ಮತ್ತು ೧೦೦ ಗ್ರಾಂ ಬೆಲ್ಲ ಇಲ್ಲವೇ ಸಕ್ಕರೆ ಬೆರೆಸಿ ಬೆಳೆಯ ಮೇಲೆ ಸಿಂಪಡಿಸಬೇಕು. ವಾರಕ್ಕೊಮ್ಮೆ ಎರಡು ಸಾರಿ ಸಿಂಪಡಿಸಿದರೆ ಸಾಕು. ಅದರ ಜೊತೆಗೆ ಹಾನಿಗೀಡಾದ ಕಾಯಿಗಳನ್ನು ಕಿತ್ತು ನಾಶಗೊಳಿಸಬೇಕು.

. ಬಾಡುವ ರೋಗ: ಬೀಜೋಪಚಾರ ಮಾಡಬೇಕು. ನಿರೋಧಕ ತಳಿಗಳನ್ನು ಬಿತ್ತುವುದು ಲಾಭದಾಯಕ.

. ಚಿಬ್ಬುರೋಗ: ಈ ಶಿಲೀಂಧ್ರರೋಗ ಎಲೆ,  ಹೂವು ಮತ್ತು ಕಾಯಿಗಳಲ್ಲಿ ಕಂಡುಬರುತ್ತದೆ. ಹಾನಿಗೀಡಾದ ಭಾಗಗಳು ಬಣ್ಣಗೆಟ್ಟು ಹಾಳಾಗುತ್ತವೆ. ತೀವ್ರ ಹಾನಿಯಿದ್ದಾಗ ಭಾಗಗಳು ನಶಿಸಿ, ಕುಸಿಯುತ್ತವೆ. ರಂಧ್ರಗಳೂ ಉಂಟಾಗುತ್ತವೆ. ಬಿತ್ತನೆಗೆ ಮುಂಚೆ ಬೀಜವನ್ನು ಥೈರಂ ನಂತಹ ಔಷಧಿಯಲ್ಲಿ ಅದ್ದಿ ಉಪಚರಿಸಬೇಕು. ಬೆಳೆಯ ಮೇಲೆ ಕ್ಯಾಪ್ಟಫಾಲ್ ದ್ರಾವಣ ಸಿಂಪಡಿಸುವುದು ಲಾಭದಾಯಕ. ೧೦ ಲೀಟರ್ ನೀರಿಗೆ ೨೦ ಗ್ರಾಂ ನಂತೆ ಬೆರೆಸಿ ಸಿಂಪಡಿಸಬೇಕು.

. ತುಪ್ಪುಳಿನ ರೋಗ: ಸಸ್ಯಭಾಗಗಳು ಮಂಕಾಗಿ, ಬಣ್ಣಗೆಡುತ್ತವೆ. ತೀವ್ರಹಾನಿ ಇದ್ದಾಗ ಅವು ಸಾಯುತ್ತವೆ. ಇದು ಶಿಲೀಂಧ್ರಗಳಿಂದ ಉಂಟಾಗುವ ರೋಗ. ಹತೋಟಿ ಮಾಡಲು ೧೦ ಲೀಟರ್ ನೀರಿಗೆ ೨೫ ಗ್ರಾಂ ಮ್ಯಾಂಕೊಜೆಬ್ ಇಲ್ಲವೇ ೩೦ ಗ್ರಾಂ ಕ್ಯಾಪ್ಟಫಾಲ್ ಶಿಲೀಂಧ್ರನಾಶಕವನ್ನು ಬೆರೆಸಿ ಬೆಳೆಯ ಮೇಲೆ ವಾರಕ್ಕೊಮ್ಮೆ ಸಿಂಪಡಿಸಬೇಕು. ಎರಡು ಸಿಂಪರಣೆಗಳಾದರೆ ಸಾಕಾಗುತ್ತದೆ.

. ಬೂದಿ ರೋಗ: ಸಸ್ಯ ಭಾಗಗಳಲ್ಲಿ ಬೂದಿಯಂತಹ ಧೂಳು ಕಾಣಿಸಿಕೊಳ್ಳುತ್ತದೆ. ಹಾನಿಗೀಡಾದ ಭಾಗಗಳು ಮಂಕಾಗಿ, ಸಾಯುತ್ತವೆ. ಹತೋಟಿಗೆ ೧೦ ಲೀಟರ್‌ನೀರಿಗೆ ೧೦ ಮಿ.ಲೀ. ದಿನಕಾಪ್ ಬೆರೆಸಿ ವಾರಕ್ಕೊಮ್ಮೆ ಮೂರು ಸಾರಿ ಸಿಂಪಡಿಸಬೇಕು. ಹೆಕ್ಟೇರಿಗೆ ಸುಮಾರು ೭೦೦ ಲೀಟರ್ ದ್ರಾವರಣ ಬೇಕಾಗುತ್ತದೆ.

. ದುಂಡು ಜಂತು: ಈ ಜಂತುಗಳು ಸೂಕ್ಷ್ಮವಿದ್ದು ಬೇರುಗಳನ್ನು ಕಚ್ಚಿ ಗಾಯ ಮಾಡುತ್ತವೆ. ಅಂತಹ ಬಳ್ಳಿಗಳ ಬೆಳವಣಿಗೆ ಸಮರ್ಪಕವಾಗಿರುವುದಿಲ್ಲ. ಇವು ಮಣ್ಣೊಳಗಿದ್ದು ಬಿತ್ತನೆಯಾದ ಕೂಡಲೇ ಬೇರುಗಳಿಗೆ ಹಾನಿಯನ್ನುಂಟುಮಾಡುತ್ತವೆ. ಬಿತ್ತನೆಗೆ ಮುಂಚೆ ಹೆಕ್ಟೇರಿಗೆ ೨೫ ಕಿ.ಗ್ರಾಂ ಕಾರ್ಬಫ್ಯುರಾನ್ ಹರಳುಗಳನ್ನು ಮಣ್ಣಿಗೆ ಸೇರಿಸಿದರೆ ಇವುಗಳ ಕಾಟ ಇರುವುದಿಲ್ಲ.

ಬೀಜೋತ್ಪಾದನೆ : ಸೌತೆ ಪರಕೀಯ ಪರಾಗಸ್ಪರ್ಶದ ಬೆಳೆ.

* * *