ಸೂರ್ಯನಲ್ಲಿ ಹಲವು ರೀತಿಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಸೌರ ಚಟುವಟಿಕೆಗಳಲ್ಲಿ ಸೌರಜ್ವಾಲೆಗಳು, ಸೌರಚಾಚಿಕೆಗಳು ಮತ್ತು ಸೌರಕಲೆಗಳು ಕೂಡ ಸೇರಿವೆ. ಸೂರ್ಯನ ಮೇಲ್ಮೈನಲ್ಲಿ ಕಂಡುಬರುವ ಈ ಚಟುವಟಿಕೆಗಳು ಸೂರ್ಯನ ಅಂತರಾಳದಲ್ಲಿ ಭಾರೀ ಕ್ಷೋಭೆ ಇದೆ ಎಂಬುದನ್ನು ಸೂಚಿಸುತ್ತವೆ. ಸೂರ್ಯನ ಅಂತರಾಳದೊಳಗಿನ ಕ್ಷೋಭೆಗಳಿಗೆ ಅಲ್ಲಿ ನಡೆಯುತ್ತಿರುವ ಕಾಂತೀಯ ಬದಲಾವಣೆಗಳು ಕಾರಣ ಎಂದು ನಂಬಲಾಗಿದೆ. ಸೂರ್ಯನಲ್ಲಿ ಕಂಡುಬರುವ ಈ ವಿದ್ಯಮಾನಗಳು ಸ್ಥಿರ ಗತಿಯಲ್ಲಾಗಲೀ ಸ್ಥಿರ ರೂಪದಲ್ಲಾಗಲೀ ಇರುವುದಿಲ್ಲ. ಅವು ಬದಲಾಗುತ್ತಲೇ ಇರುತ್ತವೆ. ಕೆಲವೊಮ್ಮೆ ಸೌರ ಚಟುವಟಿಕೆಗಳು ತೀರಾ ಕಡಿಮೆ ಆಗಿಬಿಡುತ್ತವೆ ಮತ್ತು ಇನ್ನು ಕೆಲವು ಬಾರಿ ಅವು ತೀರಾ ಹೆಚ್ಚು ಪ್ರಮಾಣದಲ್ಲಿ ಗೋಚರಿಸುತ್ತವೆ. ಸೌರ ಚಟುವಟಿಕೆ ಅತಿ ಕಡಿಮೆ ಪ್ರಮಾಣದಲ್ಲಿ ಘಟಿಸುವುದನ್ನು ಸೌರ ಕನಿಷ್ಠ ಎಂತಲೂ ಅತಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುವ ಸಂದರ್ಭವನ್ನು ಸೌರ ಗರಿಷ್ಠ ಎಂತಲೂ ಕರೆಯುತ್ತಾರೆ. ಇವನ್ನು ಇಂಗ್ಲೀಷಿನಲ್ಲಿ ಕ್ರಮವಾಗಿ Solar minimums [minima] ಮತ್ತು Solar maximums [maxima] ಎಂದು ಕರೆದಿದ್ದಾರೆ. ಈ ಚಟುವಟಿಕೆಗಳು ಚಕ್ರೀಯವಾಗಿ ಇರುತ್ತವೆ ಎಂದು ತಿಳಿದುಬಂದಿದೆ. ಚಕ್ರೀಯವಾಗಿರುವುದು ಎಂದರೇನು? ಸೂರ್ಯನಲ್ಲಿ ಜರುಗುತ್ತಿರುವ ಚಟುವಟಿಕೆಗಳು – ಅದರಲ್ಲೂ ನಿರ್ದಿಷ್ಟವಾಗಿ ಸೌರಕಲೆಗಳು – ನಿರ್ದಿಷ್ಟ ಕಾಲಾಂತರಗಳಲ್ಲಿ ಪುನರಾವರ್ತನೆಗೊಳ್ಳುತ್ತದೆ. ಸೌರ ಚಟುವಟಿಕೆಗಳ ಚಕ್ರದ ಅವಧಿ 11 ವರ್ಷಗಳು ಎಂಬುದು ಅವಲೋಕನೆಗಳಿಂದ ತಿಳಿದುಬಂದಿದೆ. ಸೌರ ಚಟುವಟಿಕೆಗಳು ಗರಿಷ್ಠದಲ್ಲಿದ್ದಾಗ, ಸೌರ ಮೇಲ್ಮೈನಲ್ಲಿ ಹಲವಾರು ಚಟುವಟಿಕೆಗಳು ಎದ್ದು ಕಾಣುತ್ತವೆ. ಬೃಹತ್ ಸೌರಚಾಚಿಕೆಗಳು, ದೊಡ್ಡ ದೊಡ್ಡ ಸೌರ ಜ್ವಾಲೆಗಳು, ಹಲವಾರು ಸೌರಕಲೆಗಳು ಸೂರ್ಯನ ಮೇಲ್ಮೈನಲ್ಲಿ ಕಂಡುಬರುವ ಕಾಲಘಟ್ಟ ಇದು. ಈ ಸಂದರ್ಭದಲ್ಲಿ ಕೋಟ್ಯಂತರ ಟನ್ನುಗಳಷ್ಟು ದ್ರವ್ಯ ಸೂರ್ಯನ ಮೇಲ್ಮೈನಿಂದ ಎತ್ತರಕ್ಕೆ ಚಿಮ್ಮುತ್ತಿರುತ್ತದೆ. ಈ ದ್ರವ್ಯ ವಿದ್ಯುದಾವಿಷ್ಟ ಅನಿಲಗಳಿಂದ ಆಗಿರುತ್ತದೆ ಎಂದು ತಿಳಿದುಬಂದಿದೆ. ಭೂಮಿಯ ಧ್ರುವ ಪ್ರದೇಶಗಳಲ್ಲಿ ಬಣ್ಣ ಬಣ್ಣಗಳ ಬೆಳಕಿನ ಕುಣಿತ – ಇವನ್ನು ಧ್ರುವಪ್ರಭೆ (Arora) ಎನ್ನುತ್ತಾರೆ – ಹೆಚ್ಚಾಗಿ ಕಂಡುಬರುವುದು ಈ ಸಂದರ್ಭದಲ್ಲಿ. ಸೌರ ಚಟುವಟಿಕೆ ಗರಿಷ್ಠವಾಗಿರುವ ಸಂದರ್ಭ ಅರ್ಥಾತ್ ಸೋಲಾರ್ ಮ್ಯಾಕ್ಸಿಮಾ ಉಂಟಾಗಿರುವ ಸಂದರ್ಭ ನಮಗೆ ಹಲವು ತೊಂದರೆಗಳನ್ನು ಕೊಡಬಹುದು. ಉದಾಹರಣೆಗೆ, ಸಂವಹನ ಉಪಗ್ರಹಗಳಲ್ಲಿ ಸಂವಹನ ವ್ಯವಸ್ಥೆ ಕುಸಿದು ಬೀಳಬಹುದು, ಜಿ.ಪಿ.ಎಸ್. ವ್ಯವಸ್ಥೆ ಹಾಳಾಗಬಹುದು ಇಲ್ಲವೇ ನಮ್ಮ ದೂರಸಂಪರ್ಕ ಸಾಧನಗಳು ಕೆಲ ಕಾಲ ಕೆಲಸ ಮಾಡದಿರಬಹುದು. ಈ ಸಂದರ್ಭ ವ್ರೋಆತಂಕದ ಕ್ಷಣಗಳನ್ನು ಸೃಷ್ಟಿಸಿಬಿಡುತ್ತವೆ.

ಸೌರ ಚಟುವಟಿಕೆಗಳು ಕನಿಷ್ಠ ಮಟ್ಟದಲ್ಲಿ ಇದ್ದಾಗಿನ ಸ್ಥಿತಿಯನ್ನು ಸೋಲಾರ್ ಮಿನಿಮಾ ಎನ್ನುತ್ತೇವಷ್ಟೆ. ಈ ಸಂದರ್ಭದಲ್ಲಿ ಸೌರಕಲೆಗಳು ಬಹಳ ಕಡಿಮೆ ಆಗಿಬಿಡುತ್ತವೆ. ಸೌರಚಾಚಿಕೆಗಳು ಕೆಳಗಿಳಿದು ಬಿಡುತ್ತವೆ. ಸೌರ ಚಟುವಟಿಕೆಗಳು ಮಿನಿಮಾದಲ್ಲಿರುವಾಗ ಕೆಲವು ದಿನಗಳವರೆಗೆ ಸೌರಕಲೆಗಳು ಕಾಣದೆಯೇ ಇರಬಹುದು. ಸೌರ ಚಟುವಟಿಕೆಗಳು ಕನಿಷ್ಠವಾಗಿರುವ ಕಾಲಾವಧಿ ವ್ರೋಕೈಗೊಳ್ಳುವುದಕ್ಕೆ ಯುಕ್ತವಾಗಿರುತ್ತದೆ. ಸೌರ ಚಟುವಟಿಕೆಗಳು ಗರಿಷ್ಠಮಟ್ಟಗಳಲ್ಲಿವೆಯೋ ಅಥವಾ ಕನಿಷ್ಠ ಮಟ್ಟಗಳಲ್ಲ ಇವೆಯೋ ಎಂಬುದನ್ನು ಗುರುತಿಸುವುದಕ್ಕೆ ವಿಜ್ಞಾನಿಗಳು ಸೌರಕಲೆಗಳ ಸಂಖ್ಯೆಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸುತ್ತಾರೆ. ಸೌರಕಲೆಗಳು ಅತಿ ಹೆಚ್ಚಾಗಿರುವ ಅವಧಿಯಲ್ಲಿ ಸೌರ ಚಟುವಟಿಕೆಗಳು ಗರಿಷ್ಠಮಟ್ಟದಲ್ಲಿ ಇವೆಯೆಂದೂ ಅವು ಇಲ್ಲದಿರುವ ಇಲ್ಲವೇ ಅತಿ ಕಡಿಮೆ ಇರುವ ಅವಧಿಯಲ್ಲಿ ಸೌರ ಚಟುವಟಿಕೆಗಳು ಕನಿಷ್ಠಮಟ್ಟದಲ್ಲಿ (ಸೋಲಾರ್ ಮಿನಿಯಾ ಸ್ಥಿತಿ) ಇವೆಯೆಂದೂ ಹೇಳಬಹುದು. ಕಳೆದ ವರ್ಷ ಅರ್ಥಾತ್ 2009ರಲ್ಲಿ ಸೌರ ಚಟುವಟಿಕೆಗಳು ಅತಿ ಕಡಿಮೆ ಮಟ್ಟದಲ್ಲಿ ಇತ್ತು. ಈ ವರ್ಷದ ಮೊದಲ ಅಂದರೆ 2008ರಲ್ಲಿ 266 ದಿನಗಳಂದು ಸೌರಕಲೆಗಳು ಇರಲಿಲ್ಲ. ಇದರಿಂದ ಈಗ ಸೂರ್ಯ ಸೋಲಾರ್ ಮಿನಿಮಾದಲ್ಲಿ ಇದೆ ಎಂದು ಹೇಳಬಹುದು.

ಎರಡು ಸತತ ಸೋಲಾರ್ ಮಿನಿಮಾಗಳ ನಡುವೆ ಇರುವ ಅವಧಿಯನ್ನು ಸೌರ ಚಟುವಟಿಕೆಗಳ ಚಕ್ರದ ಅವಧಿ ಎಂದು ಪರಿಗಣಿಸಬಹುದು. ಈ ರೀತಿಯ ಸೌರ ಚಟುವಟಿಕೆಗಳ ಚಕ್ರ ಇದೆ ಎಂಬುದನ್ನು ಸ್ಯಾಮ್ಯುಯೆಲ್ ಹೈನ್ರಿಕ್ ಶ್ವಾಬೆ (Samuel Heinrich Schwabe) ಎಂಬಾತ 1843ರಲ್ಲಿ ಆವಿಷ್ಕರಿಸಿದ. ಸೌರಕಲೆಗಳು ನಿರ್ದಿಷ್ಟ ಕಾಲಗಳ ಅವಧಿಗಳಲ್ಲಿ ಪುನರಾವರ್ತನೆಯಾಗುತ್ತವೆ ಎಂಬುದು ಅವನ ವಾದವಾಗಿತ್ತು. ಈ ಆವಿಷ್ಕಾರಕ್ಕೆ ಅವನು ಸೌರಕಲೆಗಳ ಬಗ್ಗೆ 17 ವರ್ಷಗಳ ಸುದೀರ್ಘ ಕಾಲ ಮಾಡಿದ ಅವಲೋಕನೆಗಳು ಆಧಾರವಾಗಿದ್ದುವು. ಈ ಅವಲೋಕನೆಗಳನ್ನೂ ಅದಕ್ಕೂ ಹಿಂದೆ ಇತರರು ಮಾಡಿದ ಅವಲೋಕನೆಗಳನ್ನೂ ಆಧಾರವಾಗಿಟ್ಟುಕೊಂಡು ರುಡಾಲ್ಫ್ ವೋಲ್ಫ್ ಎಂಬಾತ ಒಂದು ಕೋಷ್ಟಕವನ್ನು ತಯಾರಿಸಿದ. ಈ ಎಲ್ಲಾ ಮಾಹಿತಿಗಳ ಆಧಾರದ ಮೇಲೆ ಸೌರ ಚಟುವಟಿಕೆಗಳ ಚಕ್ರದ ಅವಧಿ ಸುಮಾರು 11 ವರ್ಷಗಳು ಎಂದು ಅಂದಾಜು ಮಾಡಿದ್ದಾರೆ. ನೀವು ಯಾವ ನಿರ್ದಿಷ್ಟ ಸೌರಕಲೆಗಳನ್ನು ಆಧಾರವಾಗಿಟ್ಟುಕೊಳ್ಳುವಿರಿ ಎಂಬುದನ್ನು ಆಧರಿಸಿ ಈ ಚಕ್ರದ ಕಾಲಾವಧಿ ವ್ಯತ್ಯಾಸಗೊಳ್ಳುವುದು ಸಾಧ್ಯ.