ಗೌರಕ್, ಸ್ಟಾಟ್‌ಲೆಂಡಿನ ಪಶ್ಚಿಮ ಪರಿಸರದಲ್ಲಿರುವ ಒಂದು ಪುಟ್ಟ ಪ್ರಶಾಂತವಾದ ಊರು. ಈ ಊರಿನ ಡಾ. ಕಮಲಾ ಚಂದ್ರಶೇಖರ್ ಅವರು, ಅತಿಥಿಯಾದ ನನಗೆ ಬಿಟ್ಟುಕೊಟ್ಟ ಅವರ ಮನೆಯ ಮಹಡಿಯ ಮೇಲಿನ ಕೋಣೆಯೊಂದರಲ್ಲಿ ಕೂತು, ಅಗಲವಾದ ಕಿಟಕಿಯ ಮೂಲಕ ನೋಡುತ್ತೇನೆ : ಅನತಿ ದೂರದಲ್ಲೇ ಮೈಲಿ ಮೈಲಿಗಳಗಲಕ್ಕೆ ಹರಹಿಕೊಂಡ ವಿಸ್ತಾರವಾದ ಸರೋವರ; ಆ ಸರೋವರದ ವೃತ್ತ ವರ್ತುಲದ ಅಂಚಿನ ಉದ್ದಕ್ಕೂ ಕಾವಲು ಕಾಯುವಂತೆ ಕೂತ ಬೆಟ್ಟಗಳು ; ಆ ಬೆಟ್ಟಗಳ ಮಡಿಲಲ್ಲಿ ಹುದುಗಿಕೊಂಡ ಮನೆಗಳು; ಬೆಟ್ಟಗಳು; ಬೆಟ್ಟಗಳ ಹಸುರನ್ನು ಮೇಯುತ್ತಿವೆಯೋ ಎಂಬಂಥ ತುಂಡು ಮೋಡಗಳ ಹಿಂಡುಗಳು; ಸರೋವರದ ನೀರಿನಲ್ಲಿ ನಿಶ್ಯಬ್ದವಾಗಿ ತಮ್ಮ ನೆರಳನ್ನು ಚೆಲ್ಲುತ್ತಾ ಹಾದು ಹೋಗುವ ದೋಣಿಗಳು. ಈ ಚಕಿತಗೊಳಿಸುವ ದೃಶ್ಯವನ್ನು ನೋಡುತ್ತ, ನಾನು ಇದುವರೆಗೂ ಸಂಚರಿಸಿದ ಆ ಇಂಗ್ಲೆಂಡಿನ ಏರಿಳಿತಗಳಿಗೂ, ಈಗ ಥಟ್ಟನೆ ನಾನು ಪ್ರವೇಶಿಸಿದ ಸ್ಕಾಟ್‌ಲೆಂಡಿನ ನದಿ-ಸರೋವರ – ಕಾಡು – ಬೆಟ್ಟ ಕಣಿವೆಗಳ ಈ ಪರಿಸರಕ್ಕೂ ಎಷ್ಟೊಂದು ವ್ಯತ್ಯಾಸವಿದೆ ಅನ್ನಿಸಿತು.

ಯು.ಕೆ. ಅಥವಾ ಯುನೈಟೆಡ್ ಕಿಂಗ್‌ಡಂ ಎಂದು ಕರೆಯಲಾಗುವ ಈ ದೇಶ ರಾಜಕೀಯವಾಗಿ, ಇಂಗ್ಲೆಂಡ್, ವೇಲ್ಸ್, ಸ್ಕಾಟ್‌ಲೆಂಡ್ ಮತ್ತು ಉತ್ತರ ಐರ‍್ಲೆಂಡ್ – ಇವುಗಳನ್ನೊಳಗೊಂಡ ಒಂದು ಸಮುಚ್ಚಯವಾಗಿದೆ. ಇವುಗಳಲ್ಲಿ ತನಗೆ ತಾನೆ ಪ್ರತ್ಯೇಕವಾದ ದ್ವೀಪ ಭೂಖಂಡವಾಗಿರುವ ಐರ‍್ಲೆಂಡನ್ನು ಹೊರತುಪಡಿಸಿದರೆ, ಇನ್ನುಳಿದ ಪ್ರದೇಶವನ್ನು ಭೌಗೋಳಿಕವಾಗಿ, ಹೈಲ್ಯಾಂಡ್ ಮತ್ತು ಲೋಲ್ಯಾಂಡ್ ಎಂದು ಅವುಗಳ ಪ್ರಾಕೃತಿಕ ಲಕ್ಷಣಗಳಿಗೆ ಅನುಸಾರವಾಗಿ ವಿಭಾಗಿಸಬಹುದು. ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಡೇವನ್ ಹಾಗೂ ಕಾರ್ನ್‌ವಾಲ್ ಪ್ರದೇಶಗಳನ್ನು ಸ್ಥೂಲವಾಗಿ ಹೈಲ್ಯಾಂಡ್ ಎಂದೂ, ಇನ್ನುಳಿದ ಇಂಗ್ಲೆಂಡಿನ ಬಹು ಭಾಗವನ್ನು ಲೋಲ್ಯಾಂಡ್ ಎಂದು ಕರೆಯಲಾಗಿದೆ. ಈ ಪ್ರದೇಶಗಳು ಹವಾಮಾನದ ಹಾಗೂ ಸಂಚಾರ ಸುಭಗತೆಯ ದೃಷ್ಟಿಯಿಂದ ಸಾಕಷ್ಟು ಬೇರೆಯಾಗಿಯೆ ನಿಲ್ಲುತ್ತವೆ. ಇಂಗ್ಲೆಂಡ್ ಹದವಾದ ಏರಿಳಿತಗಳಿಂದ ಮತ್ತು ವಿಸ್ತಾರವಾದ ಬಯಲುಗಳಿಂದ ಹಾಗೂ ಹಸಿರಿನ ಸಸ್ಯ ಸಮೃದ್ಧಿಯಿಂದ ತುಂಬ ರಮ್ಯವಾದ ಪರಿಸರವಾಗಿದೆ. ವೇಲ್ಸ್ ಮತ್ತು ಸ್ಕಾಟ್‌ಲೆಂಡ್‌ಗಳೆರಡೂ ಪ್ರಾಕೃತಿಕವಾಗಿ ಬೆಟ್ಟ-ಕಾಡು -ಕಣಿವೆಗಳಿಂದ ತಕ್ಕಷ್ಟು ಬೇರೆಯೆ ಆದ ಲಕ್ಷಣವನ್ನು ಪಡೆದುಕೊಂಡಿವೆ. ಈ ಭೌಗೋಳಿಕ ವ್ಯತ್ಯಾಸಗಳು ಗುರುತಿಸಹುದಾದ ಜನಾಂಗಿಕ ಹಾಗೂ ಭಾಷಿಕ ವ್ಯತ್ಯಾಸಗಳಿಗೂ ಕಾರಣವಾಗಿದೆ.

ನಾನು ಈ ‘ಹೈಲ್ಯಾಂಡಿನ’ ಬೆಟ್ಟ ಕಾಡುಗಳ ನಡುವಣ ಪುಟ್ಟ ಊರಿಗೆ ಬಂದದ್ದು ಆಗಸ್ಟ್ ತಿಂಗಳ ಕೊಟ್ಟ ಕೊನೆಯ ವೇಳೆಗೆ ಬರ್ಟನ್‌ದಿಂದ ಟಾಮ್‌ವರ್ತ್ ಎಂಬಲ್ಲಿಗೆ ಬಂದು, ಲಂಡನ್ನಿನಿಂದ ಬರುವ ಎಕ್ಸ್‌ಪ್ರೆಸ್ ರೈಲನ್ನು ಹಿಡಿದು, ಗ್ಲಾಸ್ಕೋ ನಗರವನ್ನು ತಲುಪುವ ಈ ಪಯಣ ಸುಮಾರು ನಾಲ್ಕು ಗಂಟೆಗಳನ್ನು ತೆಗೆದುಕೊಂಡಿತು. ಇಂಗ್ಲೆಂಡಿನ ಮಿಡ್‌ಲ್ಯಾಂಡ್ ಪರಿಸರದ ಬಹುತೇಕ ಸಮತಲದ ಏರಿಳಿತಗಳನ್ನು ಹಾದು, ಆಕ್ಸನ್ ಹೋಲ್ಮ್ ಎಂಬಲ್ಲಿಗೆ ಬರುವ ಹೊತ್ತಿಗೆ, ನೆಲದ ಏರಿಳಿತಗಳು ಎತ್ತರದ ಪರ್ವತಗಳಾಗಿ ಮಾರ್ಪಟ್ಟಿದ್ದವು. ಆಕ್ಸನ್ ಹೋಲ್ಮ್ ಸ್ಟೇಷನ್ನಿನಲ್ಲಿ ರೈಲು ನಿಂತಾಗ, ‘ಲೇಕ್ ಡಿಸ್ಟ್ರಿಕ್ಟಿನ ಕೆಂಡಾಲ್‌ಗೆ ಹೋಗುವವರು ಇಲ್ಲಿ ರೈಲನ್ನು ಬದಲಾಯಿಸಬೇಕು’ ಎಂಬ ಸೂಚನಾ ಫಲಕವನ್ನು ನೋಡಿದ ನಂತರ ಅರಿವಾಯಿತು,  ನಾನು ಇಂಗ್ಲೆಂಡಿನಲ್ಲೆ ಅತ್ಯಂತ ಸುಂದರ ನಿಸರ್ಗ ಪರಿಸರವಾದ ವರ್ಡ್ಸ್‌ವರ್ತ್‌ನ ಲೇಕ್ ಡಿಸ್ಟ್ರಿಕ್ಟ್‌ನ ಸೆರಗಿನಲ್ಲಿದ್ದೇನೆ – ಎಂದು. ಸಾಲು ಸಾಲಾದ ಬೆಟ್ಟಗಳ ಬದಿಯಲ್ಲಿ ಹಾದು ನಾನು ಸ್ಕಾಟ್‌ಲೆಂಡಿನ ಮುಖ್ಯ ನಗರವಾದ ಗ್ಲಾಸ್ಗೋವನ್ನು ತಲುಪಿದಾಗ ಯಾಂತ್ರಿಕವಾದ ತೊಂದರೆಯಿಂದ ನಡುದಾರಿಯಲ್ಲಿ  ಸ್ವಲ್ಪ ಹೊತ್ತು ರೈಲು ನಿಂತು, ತಡವಾದ ಕಾರಣದಿಂದ ಆಗಲೇ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಬೃಹದಾಕಾರದ ಗಾಜಿನ ಗುಮ್ಮಟದಿಂದ ದಂಗುಬಡಿಸುವಂತಿದ್ದ ಗ್ಲಾಸ್ಗೋ ರೈಲ್ವೆ ಸ್ಟೇಷನ್ನಿನಲ್ಲಿ ಇಳಿದು, ಒಂದೂಕಾಲು ಗಂಟೆಗೆ ಗೌರಕ್‌ಗೆ ಹೋಗುವ ರೈಲು ನಿಲ್ಲುವ ಪ್ಲಾಟ್‌ಫಾರಂ ಅನ್ನು ಪತ್ತೆ ಹಚ್ಚಿ, ರೈಲಲ್ಲಿ ಪ್ರವೇಶಿಸಿ ಕೂತೆ. ಕೇವಲ ಮೂರು ಕಂಪಾರ್ಟ್‌ಮೆಂಟಿನ ಈ ಪುಟಾಣಿ ರೈಲು, ಅದು ಹೊರಟ ಐದೈದು ನಿಮಿಷಕ್ಕೆ ಒಂದೊಂದು ಸ್ಟೇಷನ್ನಿನಲ್ಲಿ ನಿಲ್ಲುತ್ತ, ಮತ್ತೆ ಉತ್ಸಾಹವನ್ನು ತುಂಬಿಕೊಳ್ಳುತ್ತ ಮುಂದುವರಿಯಿತು. ಈ ಪಯಣದ ಉದ್ದಕ್ಕೂ ಕ್ಲೈಡ್ ಎನ್ನುವ ನದಿಯೊಂದು, ಅಲ್ಲಿ ಕಂಡು ಇಲ್ಲಿ ಮಾಯವಾಗಿ, ಸಹಯಾತ್ರಿಯಾಗಿತ್ತು. ನಡುನಡುವೆ ವಿರಳ ಪ್ರಯಾಣಿಕರ ಈ ರೈಲು, ಬೆಟ್ಟಗಳ ಹೊಟ್ಟೆಯನ್ನು ಸುರಂಗಗಳ ಮೂಲಕ ಹಾದು, ಅಲ್ಲಲ್ಲಿನ ಕಣಿವೆಗಳ ಹಸಿರನ್ನು ತೂರಿ, ಕೊಟ್ಟ ಕೊನೆಯ ನಿಲ್ದಾಣವಾದ ಗೌರಕ್ ಅನ್ನು, ಮಧ್ಯಾಹ್ನದ ಎರಡು ಗಂಟೆಗೆ ತಲುಪಿತು. ರೈಲಿಳಿದು ನೋಡುವಾಗ – ರೈಲು ಅವತ್ತು ಸುಮಾರು ಒಂದು ಗಂಟೆ ತಡವಾದರೂ-ರೈಲ್ವೆ ಸ್ಟೇಷನ್ನಿನಲ್ಲಿ ನನಗಾಗಿ ಕಾದಿದ್ದರು ಡಾ. ಕಮಲಾ ಚಂದ್ರಶೇಖರ್. ಅವರ ಕಾರಲ್ಲಿ ಕೂತು, ಗೌರಕ್‌ನ ಬೀದಿಗಳನ್ನು ಹಾದು, ಅವರ ಮನೆಯೊಳಗಿನ ಮಹಡಿಯ ಮೇಲಿನ ಕೋಣೆಯಲ್ಲಿ  ಕೂತು ನೋಡುತ್ತೇನೆ, ಅದುವರೆಗೂ ಜತೆಗೆ ಬಂದ ನದಿ ಕಣ್ಮರೆಯಾಗಿ, ಎದುರಿಗೆ ದೊಡ್ಡದೊಂದು ಸರೋವರ ಮೈ ಚಾಚಿಕೊಂಡಿದೆ.

ಮಧ್ಯಾಹ್ನದ ವಿಶ್ರಾಂತಿಯ ನಂತರ ಬೆಟ್ಟವೊಂದರ ಇಳಿಜಾರಿನಲ್ಲಿ ಹರಹಿಕೊಂಡಿರುವ ಈ ಪುಟ್ಟ ಊರಿನ ದಾರಿಗಳನ್ನು ಹಾದು, ಡಾ. ಕಮಲಾ ಅವರು ತಮ್ಮ ಕಾರಿನಲ್ಲಿ ಎತ್ತರವಾದೊಂದು ವೀಕ್ಷಣಾ ನೆಲೆಗೆ ಕರೆದುಕೊಂಡು ಹೋದರು. ಸುತ್ತೆತ್ತಲೂ ಅಲೆಯಲೆಯಾಗಿ ಹಬ್ಬಿಕೊಂಡ ಹಚ್ಚ ಹಸುರಿನ ಕಾಡು; ಮುಂದೆ ಸಂಜೆ ಮಬ್ಬಿನಲ್ಲಿ ಮೈಚಾಚಿಕೊಂಡ ವಿಸ್ತಾರವಾದ ಸರೋವರ; ಅದರಂಚಿಗೆ ಕೂತ ಹಾಗೂ ಅದರಾಚೆಗೆ ಶ್ರೇಣಿ ಶ್ರೇಣಿಗಳಾಗಿ ಗೋಚರಿಸುವ ಗಿರಿಪಂಕ್ತಿಗಳು. ಸ್ವಲ್ಪ ಹೊತ್ತು ಅಲ್ಲಿ ನಿಂತು ಆ ದೃಶ್ಯವನ್ನು ನೋಡಿ ಅನಂತರ ಮತ್ತಷ್ಟು ದಟ್ಟ ಹಸುರಿನ ದಾರಿಗಳಲ್ಲಿ ಎರಿಳಿದು ಮನೆಯನ್ನು ತಲುಪುವ ಹೊತ್ತಿಗೆ ಕತ್ತಲಾಗಿ ಸರೋವರದ  ಸುತ್ತಣ ಊರುಗಳ ವಿದ್ಯುದ್ದೀಪಗಳು, ನೀರಲ್ಲಿ ಪ್ರತಿಬಿಂಬಿಸುತ್ತ ಮಾಂತ್ರಿಕ ಲೋಕವೊಂದನ್ನು ಸೃಜಿಸಿದ್ದವು.

ಮರುದಿನ ಬೆಳಿಗ್ಗೆ, ನಾವು ಈ ಸರೋವರದ ಹರಹನ್ನು – ಕಾರಿನ ಸಹಿತ – ಫೆರ್ರಿಯೊಂದರ ಮೇಲೆ ದಾಟಿದೆವು. ವಾಸ್ತವವಾಗಿ, ಗ್ಲಾಸ್ಗೋ ಕಡೆಯಿಂದ ಹರಿದು ಬರುವ ಕ್ಲೈಡ್ ಎಂಬ ನದಿ, ಗೌರಕ್ ಬಳಿ, ಕಣಿವೆಗಳ ಮೂಲಕ ಚಾಚಿಕೊಂಡ ಕಡಲಿನ ಹಿನ್ನೀರಿನೊಳಗೆ ಸಂಗಮವಾಗಿ, ವಿಸ್ತಾರವಾದ ಸರೋವರದ ಹರಹನ್ನು ಪಡೆದುಕೊಂಡಿದೆ. ಈ ಜಲ ವಿಸ್ತಾರವನ್ನು ಫೆರ್ರಿ ದಾಟಲು ತೆಗೆದುಕೊಳ್ಳುವ ಸಮಯ ನಲವತ್ತೈದು ನಿಮಿಷ. ಆರುನೂರು ಅಡಿಗಳಷ್ಟು ಆಳವಿರುವ ಕಪ್ಪು ನೀರಿನ ಈ ಸರೋವರದ ಅಂಚಿಗೆ ಕೂತ ದಟ್ಟ ಹಸುರಿನ ಬೆಟ್ಟಗಳನ್ನು ನೋಡುತ್ತ ಡುನೂನ್ ಎಂಬ ಊರಿನ ತೀರವನ್ನು ನಾವು ತಲುಪಿದಾಗ ಈ ಜಲವಿಸ್ತಾರ ಯಾವ್ಯಾವುದೋ ಕಣಿವೆಗಳ ಇಕ್ಕಟ್ಟುಗಳಲ್ಲಿ ಚಾಚಿಕೊಂಡಿತ್ತು. ಡುನೂನಿಂದ ಕಾರು ಮತ್ತೆ ಎದುರಿಗೆ ಕಾಣುವ ಕಾಡು ಕಣಿವೆಗಳ ದಟ್ಟ ಹಸುರಿನ ಓಣಿಗಳನ್ನು ಪ್ರವೇಶಿಸಿತು. ಈ ಏರಿಳಿತದ ಪಯಣದಲ್ಲಿ ಎತ್ತ ನೋಡಿದರೂ ಬೆಟ್ಟಗಳು – ಕಣಿವೆಗಳು ಮತ್ತು ನೀರಿನ ಹರಿವುಗಳು, ಹರಹುಗಳು. ಸ್ಕಾಟ್‌ಲೆಂಡಿನ ಪಶ್ಚಿಮ ತೀರದಲ್ಲಿ, ಎತ್ತರವಾಗಿ ಹಬ್ಬಿಕೊಂಡ ಬೆಟ್ಟಗಳು ಸೀಳು ಸೀಳಾಗಿ, ವಕ್ರ ವಕ್ರವಾಗಿ ಸಮುದ್ರದೊಳಕ್ಕೆ ಚಾಚಿಕೊಂಡಿರುವುದರಿಂದ ಎಲ್ಲಿ ನೋಡಿದರೂ ನೀರಿನ ವಿವಿಧ ವಿಲಾಸಗಳು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ. ಈ ಬೆಟ್ಟಗಾಡಿನ ನಡುವೆ, ಏರಿಳಿಯುತ್ತ ಹಾಸಿಕೊಂಡ ಟಾರು ದಾರಿಗಳು, ನಿರಾಯಾಸವಾಗಿ ವಾಹನ ಸಂಚಾರಕ್ಕೆ ಸುಗಮವಾಗಿವೆ. ಸ್ಕಾಟ್‌ಲೆಂಡಿನ ಒಂದೊಂದು ಅಂಗುಲವನ್ನೂ ಬಲ್ಲ ಡಾ. ಕಮಲಾ ಅವರು ಲೀಲಾಜಾಲವಾಗಿ ಕಾರನ್ನು ಡ್ರೈವ್ ಮಾಡುತ್ತ, ನನಗೆ ಆ ನಿಸರ್ಗ ರಮಣೀಯತೆಯನ್ನು ವ್ಯಾಖ್ಯಾನಿಸುತ್ತ ಕರೆದೊಯ್ದರು: ‘ಅಲ್ಲಿ ನೋಡಿ ಆ ಬೆಟ್ಟದ ಮೇಲಣ ಕಡು ಹಸಿರು ಎಷ್ಟು ಚೆನ್ನಾಗಿದೆ. ಇಲ್ಲಿ ನೋಡಿ ಕಣಿವೆಯಂಚಿನ ತೆಳು ಹಸಿರು ಎಷ್ಟು ಸೊಂಪಾಗಿದೆ. ಈ ಹಸಿರ ಮೇಲೆ ಬಿಸಿಲು ಬಿದ್ದಾಗ ಅದು ತಾಳುವ ಬಣ್ಣವೇ ಬೇರೆ. ಈ ಬೆಟ್ಟಗಳ ಮೇಲೆ ಮೋಡದ ನೆರಳು ಹಾಸಿಕೊಂಡಾಗ ಅದರ ಚೆಲುವೇ ಬೇರೆ. ಈ ಕೊಲ್ಲಿಯ ನೀರಿನಲ್ಲಿ ಮುಗಿಲ ನೀಲಿ ಬಿಂಬಿಸಿದಾಗ ಅದು ಅವರ್ಣನೀಯ. ಈಗ ದಿಬ್ಬದ ಅಂಚಿನಲ್ಲಿದ್ದಾವಲ್ಲ. ಇವಕ್ಕೆ ಸ್ಕಾಟಿಷ್ ಹೆದರ್ ಅನ್ನುತ್ತಾರೆ. ಈಗ ಆ ಗುಡ್ಡದಂಚಿನಲ್ಲಿ ಇವೇ ಇನ್ನಷ್ಟು ದಟ್ಟವಾಗಿವೆ. ಸದ್ಯಕ್ಕೆ ನಸುಗೆಂಪು ಬಣ್ಣಕ್ಕೆ ಕಾಣುವ ಇವುಗಳಲ್ಲಿ ವಿವಿಧ ಬಣ್ಣಗಳ ವೆರೈಟಿಯೂ ಇದೆ. ಅಕ್ಟೋಬರ್ ವೇಳೆಗೆ ಮರದ ಎಲೆಗಳು ಬೇರೆ ಬಣ್ಣಕ್ಕೆ ತಿರುಗುತ್ತವೆ-ಉದುರುವ ಮುನ್ನ. ಆಗ ನೋಡಬೇಕು ವರ್ಣ ವಿಲಾಸಗಳನ್ನು. ಡಿಸೆಂಬರ್ ತಿಂಗಳಲ್ಲಿ ಈ ಬೆಟ್ಟಗಳೆಲ್ಲಾ ಹಿಮವನ್ನು ತೊಟ್ಟುಕೊಂಡು ಥಳ ಥಳ ಹೊಳೆಯುತ್ತವೆ. ಅದನ್ನು ನೀವು ನೋಡಬೇಕು’ -ಹೀಗೆ ಒಂದೇ ಸಮನೆ ಸಾಗಿತ್ತು ಅವರ ವ್ಯಾಖ್ಯಾನ. ಹೀಗೆ ಪಟಪಟ ಮಾತನಾಡುತ್ತ, ಎರಡು ಮೂರು ದಿನಗಳಲ್ಲಿ ಸುಮಾರು ಐನೂರು ಮೈಲಿ ಸುತ್ತಿಸಿರಬಹುದು ಅವರು ನನ್ನನ್ನು. ಈ ದಾರಿಯಲ್ಲಿ ಒಂದೆಡೆ ಟಿಗ್ನೊಬ್ರಾಕ್ ಎಂಬ ವ್ಯೂ ಪಾಯಿಂಟಿನಲ್ಲಿ ಕಾರು ನಿಲ್ಲಿಸಿ, ನೀವು ನಿಧಾನವಾಗಿ ನೋಡಿ ಇದನ್ನು, ನಾನೊಂದಿಷ್ಟು ಸುಧಾರಿಸಿಕೊಳ್ಳುತ್ತೇನೆ ಎಂದರು. ನೋಡಿದೆ-ಸುಮಾರು ಮೂರು ಸಾವಿರ ಅಡಿಗಳೆತ್ತರದ ನಿಲುವಿನಿಂದ ಮೈಲಿ ಮೈಲಿಗಳಗಲಕ್ಕೆ ಪೆಡಂಭೂತ ಸಂತಾನಗಳಂತೆ ಚಾಚಿಕೊಂಡ ಬೆಟ್ಟಗಳು. ಬೆಟ್ಟಗಳಿಕ್ಕಟ್ಟುಗಳಲ್ಲಿ ಕೊಲ್ಲಿಗಳು, ಸರೋವರಗಳು. ನದಿ-ಕಡಲು-ಬೆಟ್ಟ-ಕಾಡು-ಕಣಿವೆ-ಕೊಲ್ಲಿಗಳು ಈ ಎಲ್ಲವೂ ಒಟ್ಟಿಗೇ ಸೇರಿಕೊಂಡು ನಿರ್ಮಿಸಿರುವ ಅಸಂಖ್ಯ ವೈವಿಧ್ಯಗಳನ್ನು ಹೀಗೆ – ಎಂದು ಹೇಳಲಾಗುವುದಿಲ್ಲ. ಭಾರಿ ಭಾರಿ ಮೊಸಳೆಗಳು ತಮ್ಮ ಗರಗಸ ಮೂತಿಗಳನ್ನು ಚಾಚಿಕೊಂಡು, ಕಡಲ ನೀರಿನಲ್ಲಿ ಹಾಯಾಗಿ ಮೈಚಾಚಿಕೊಂಡಂತೆ ತೋರುತ್ತವೆ ಸುದೀರ್ಘ ವಕ್ರ ಪಂಕ್ತಿಯ ಈ ಬೆಟ್ಟಗಳು. ಈ ರೂಕ್ಷ ಪರ್ವತ ಪಥಗಳಲ್ಲಿ ಅಲ್ಲಲ್ಲಿ  ವಿಶ್ರಾಂತಿ ಧಾಮಗಳು, ಮಾಹಿತಿ ಕೇಂದ್ರಗಳು, ವಸತಿ ಸೌಕರ್ಯವನ್ನೊದಗಿಸುವ ಪುಟ್ಟ ಪುಟ್ಟ ಊರುಗಳು ನಮ್ಮನ್ನು ತಡೆದು ನಿಲ್ಲಿಸುತ್ತವೆ.

ವಾರದ ಕೊನೆಗಳಲ್ಲಂತೂ ಈ ದಾರಿಗಳು ವಿಹಾರಾರ್ಥಿಗಳಿಂದ ತುಂಬಿ ತುಳುಕುತ್ತವೆ. ದೈತ್ಯ ಶಿಖರಗಳ ಬೆಟ್ಟದ ತಪ್ಪಲುಗಳಲ್ಲಿನ ಅರಣ್ಯ ಧಾಮಗಳನ್ನು ಅರಸಿಕೊಂಡು ಹೋಗುತ್ತಾರೆ ಇಲ್ಲಿನ ಜನ. ಒಂದೆಡೆ ಮಾಹಿತಿ ಕೇಂದ್ರದ ಬಳಿ ಕಾರು ನಿಲ್ಲಿಸಿ, ಕೈಯೊಳಗಿನ ನಕ್ಷೆಯನ್ನು ಬಿಡಿಸಿ ತಮ್ಮ ಅಭಿರುಚಿ ಹಾಗೂ ಶಕ್ತಿಗೆ ತಕ್ಕ ಅರಣ್ಯ ಸಂಚಾರದ ದಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಮ್ಮೆ ದಟ್ಟವಾದ ಅರಣ್ಯದ ನಿರ್ಜನವಾದ ನೀರವ ಪಥಗಳನ್ನು ಪ್ರವೇಶಿಸಿದರೆಂದರೆ, ಹೊರ ಜಗತ್ತಿನ ನಾಗರೀಕತೆಯ ಗೊಂದಲಗಳ ಸಂಪರ್ಕವನ್ನು ಕಡಿದುಕೊಂಡಂತೆಯೇ. ನಡೆದಂತೆ ಕಾಡು ತನ್ನ ತಂಪು ನೆರಳಿನಿಂದ ಮುಚ್ಚುತ್ತಾ ಹೋಗುತ್ತದೆ. ಅಲ್ಲಲ್ಲಿ ಕಾಡಿನೇಕಾಂತದಲ್ಲಿ ಜುಳು ಜುಳು ಹರಿಯುವ ನೀರನ್ನು ದಾಟಿ ಮುನ್ನಡೆಯಲು ಮರದ ಸೇತುವೆಗಳಿವೆ. ಆ ಮರದ ಸೇತುವೆಗಳ ಹಾಗೂ ಮೇಲೇರುವ ಮೆಟ್ಟಿಲುಗಳ ಮೇಲೆ, ತೇವವಾಗಿ ಜಾರದಂತೆ, ತಂತಿಯ ಬಲೆಯ ಹೊದಿಕೆಯನ್ನು ಜೋಡಿಸಲಾಗಿರುತ್ತದೆ. ಏರಿ, ಇಳಿದು, ಸುತ್ತಿ, ಬಳಸಿ ನಡೆದಂತೆ ದಟ್ಟವಾದ ಕಾಡಿನ ನಿರ್ಜನ ಶೀತಲ ಮೌನ ನಮ್ಮನ್ನು ಆವರಿಸಿಕೊಳ್ಳುತ್ತದೆ. ಬಗೆ ಬಗೆಯ ಹಕ್ಕಿಗಳ ಸುಸ್ವರವನ್ನಾಲಿಸುತ್ತಾ, ದೂರದ ಕಣಿವೆಯಲ್ಲಿ ಅಲ್ಲಲ್ಲಿ ಧುಮುಕಿ ಹರಿಯುವ ನೀರಿನ ವಾದ್ಯಮೇಳದ ವೈವಿಧ್ಯಕ್ಕೆ ಕಿವಿಗೊಡುತ್ತಾ, ಅತ್ತ ಇತ್ತ ಗೋಡೆಗಳಂತೆ ಮೇಲಕ್ಕೆ ಎದ್ದ ಬೆಟ್ಟಗಳ ಮೈಯ ಬಂಡೆಗಪ್ಪಿನ ಹೊರಚಾಚುಗಳ ವಕ್ರತೆಗೆ ಬೆರಗಾಗುತ್ತಾ, ಎಲ್ಲೋ ಯಾವುದೋ ಕಣಿವೆ ದಾರಿಯಲ್ಲಿ ಧಾವಿಸುವ ಕಾರುಗಳ ಸದ್ದಿನ ಅಸ್ಪಷ್ಟ ಮರ‍್ಮರವನ್ನು ಕೇಳಿ, ತಾವು ಎಲ್ಲಿರಬಹುದು ಎಂದು ಕಲ್ಪಿಸಿಕೊಳ್ಳುತ್ತಾ, ನಿಜವಾದ ಏಕಾಂತವನ್ನು ಅನುಭವಿಸಬಹುದು. ಯಾವುದೇ ಕಾಡುಮೃಗಗಳ ಭಯವಾಗಲಿ, ಕಳ್ಳಕಾಕರ ಭಯವಾಗಲೀ ಈ ಕಾಡುಗಳಲ್ಲಿ ಇಲ್ಲ – ಆಗಾಗ ಮುಸುರಿಕೊಳ್ಳುವ ನುಸಿ-ಸೊಳ್ಳೆಯಂಥ ಕಿಟಕಿಗಳನ್ನು ಬಿಟ್ಟರೆ. ಮೈಯಲ್ಲಿ ಸಾಕಷ್ಟು ಯೌವನವಿದ್ದರೆ ಮತ್ತು ಏಕಾಂತಪ್ರಿಯತೆಯ ರುಚಿ ಇದ್ದರೆ, ಈ ಕಾಡಿನ ಜಾಡುಗಳನ್ನು ದಾಟಿ ಬೆಟ್ಟಗಳನ್ನು ಏರುವ ಸಾಹಸಕ್ಕೆ ತೊಡಗಬಹುದು. ಒಬ್ಬಂಟಿಯಾಗಿ ಹೋದರೂ ಕಳೆದುಹೋಗುವ ಭಯವಿಲ್ಲದೆ, ಮನಸಾರ ಅಲೆಯಬಹುದು ಈ ದಾರಿಗಳಲ್ಲಿ. ಹೀಗಾಗಿ ಇಲ್ಲಿನ ಜನ, ಪರ್ವತಾರಣ್ಯಗಳಲ್ಲಿ ಅಲೆಯುತ್ತಾರೆ. ನದೀ ಸರೋವರಗಳಲ್ಲಿ ಜಲಕ್ರೀಡೆಯಾಡುತ್ತಾರೆ. ದೋಣಿ, ತೆಪ್ಪಗಳಲ್ಲಿ ತೇಲುತ್ತಾರೆ.

ಡಾ. ಕಮಲಾ ಅವರ ಸಾರಥ್ಯದಲ್ಲಿ ನಾನು ಕೌಲ್ (Cowal) ಎಂಬ ಪರ‍್ಯಾಯದ್ವೀಪದ ಪರ್ವತದ ದಾರಿಗಳಲ್ಲಿ ದಿನವಿಡೀ ಸುತ್ತಿದೆ. ಆರ್ಗೈಲ್ (Argyll) ಅರಣ್ಯ ಪರಿಸರ ಎಂದು ಹೆಸರಾದ ಈ ಅರಣ್ಯ ಪಥಗಳ ನಡುವೆ ಇಳಿದು ಏರಿ, ಏರಿ ಇಳಿದು ಸಂಜೆಯ ವೇಳೆಗೆ Loch – Lomond (ಲೋಕ್ – ಲೋಮಂಡ್) ಎನ್ನುವ ಅರಣ್ಯ ವಿಸ್ತರಣಕ್ಕೆ ಬಂದೆವು. ದಟ್ಟ ಹಸುರಿನ ತಂಪಾದ ಕಣಿವೆಗಳ, ನೀಲಜಲ ಶೋಭಿತ ಸರೋವರಗಳ, ನಯನಮೋಹಕವಾದ ಶಿಖರಗಳ, ಈ ಪರಿಸರ ಸ್ಕಾಟ್‌ಲೆಂಡಿನ ಚೆಲುವಿನ ಬೀಡುಗಳಲ್ಲಿ ಒಂದು ಎಂದು ಹೆಸರಾಗಿದೆ. ಈ ಪರಿಸರದ ಬೆಟ್ಟಗಳು ಎರಡು ಸಾವಿರದಿಂದ ಹಿಡಿದು ಮೂರು ಸಾವಿರ ಅಡಿಗಳವರೆಗಿನ ಎತ್ತರವನ್ನು ಹೊಂದಿವೆ. ಇಲ್ಲಿನ ಸರೋವರವೊಂದರ ವಿಸ್ತಾರದಲ್ಲಿ ಐದು ಪೌಂಡ್ ತೆತ್ತು, ಒಂದು ಫೆರ್ರಿಯನ್ನೇರಿ ವಿಹಾರ ಮಾಡಿದೆ. ಲೋಮಂಡ್ ಎಂಬ ಹೆಸರಿನ ಈ ಸರೋವರದ ಸುತ್ತ ಎತ್ತರವಾದ ಹಸಿರು ಇಡಿಕಿರಿದ ಬೆಟ್ಟಗಳಿವೆ. ಬೆಟ್ಟಗಳ ಮುಡಿಗೆ ಕಿರೀಟವಿಟ್ಟ ಬೆಳ್ಳನೆಯ ಮೋಡಗಳು. ಅನಿರೀಕ್ಷಿತವಾದ ಹೊಂಬಿಸಿಲು. ಜೊತೆಗೆ ಆ ಪರಿಸರದ ವಿಶೇಷತೆಯನ್ನು ಕುರಿತು ವಿವರವಾಗಿ ಹಾಗೂ ನಿರರ್ಗಳವಾಗಿ ಪರಿಚಯ ಮಾಡಿಕೊಡುವ ಮಾರ್ಗದರ್ಶಿ ತರುಣಿಯ ವಾಗ್ವಿಲಾಸ. ನಡು ನಡುವೆ ಕಾಫಿ – ಚಹಾ- ವಿಸ್ಕಿ, ಅವರವರಿಗೆ ಬೇಕಾದದ್ದು. ಒಂದು ಗಂಟೆಗೂ ಹೆಚ್ಚು ಕಾಲವನ್ನು ತೆಗೆದುಕೊಂಡ ಈ ನೌಕಾವಿಹಾರ ತುಂಬ ಚೇತೋಹಾರಿಯಾಗಿತ್ತು. ಈ ಪಯಣದ ನಂತರ ನಾವು ಲಸ್ ಎಂಬ ಹಳ್ಳಿಯೊಂದಕ್ಕೆ ಬಂದೆವು. ಈ ಹಳ್ಳಿಯನ್ನು, ದಾರಿಗಳೇ ಚರಂಡಿಗಳಾಗಿರುವ, ತಿಪ್ಪೆಗುಂಡಿಗಳ ನಾತದ, ಕೆಲಸವಿಲ್ಲದ ಅಲಸಿಗರ ಬೇವಿನ ಕಟ್ಟೆಯ – ನಮ್ಮ ಹಳ್ಳಿಗಳಿಗೆ ಹೋಲಿಸುವಂತೆಯೆ ಇಲ್ಲ. ಅತ್ಯಂತ ಸ್ವಚ್ಛವಾದ ರಸ್ತೆಗಳು, ಅಚ್ಚುಕಟ್ಟಾದ ಮನೆಗಳು, ಮಕ್ಕಳ ಆಟದ ಕ್ರೀಡಾಂಗಣ, ಪೊಸ್ಟಾಫೀಸು, ಚರ್ಚು, ವ್ಯವಸ್ಥಿತವಾದ ಅಂಗಡಿಗಳು.  ಈ ಹಳ್ಳಿಯ ಲಕ್ಷಣ. ಇಲ್ಲಿನ ಮಾಹಿತಿ ಕೇಂದ್ರದಲ್ಲಿ ಲೋಕ್ ಲೋಮಂಡ್ ಪರಿಸರದ ನಿಸರ್ಗ ವಿಶೇಷಗಳನ್ನು ಪರಿಚಯಮಾಡಿಕೊಡುವ ಹದಿನೈದು ನಿಮಿಷಗಳ ಅವಧಿಯ ಸಾಕ್ಷ್ಯ ಚಿತ್ರವೊಂದನ್ನು ತೋರಿಸಲಾಗುತ್ತದೆ.

ಈ ಹಳ್ಳಿಯಿಂದ ಹೊರಟು ಹಸಿರು ಹೆಪ್ಪುಗಟ್ಟಿದ ದಾರಿಯಲ್ಲಿ ಪಯಣ ಮಾಡಿ ಮನೆ ತಲುಪಿದಾಗ ರಾತ್ರಿ ಎಂಟೂವರೆ ಗಂಟೆ. ಸರೋವರದಂಚಿನ ಸಾಲು ಬೆಟ್ಟಗಳ ತಪ್ಪಲಿನ ಊರ ಮನೆ ದೀಪಗಳು ಪ್ರತಿಫಲಿಸುತ್ತಾ, ಸರೋವರಕ್ಕೊಂದು ನಕ್ಷತ್ರ ಖಚಿತವಾದ ಹಾರವನ್ನು ತೊಡಿಸಿದಂತಿತ್ತು.

ಈ ಸುತ್ತಾಟದ ಮರುದಿನ ಬೆಳಿಗ್ಗೆ, ನಾನೊಬ್ಬನೆ ಗೌರಕ್‌ದಿಂದ ‘ಎಡೇ ರಿಟರ್ನ್‌ಟಿಕೆಟ್’ ತೆಗೆದುಕೊಂಡು ಎಡಿನ್‌ಬರೋ ನಗರಕ್ಕೆ ಹೊರಟೆ. ಗೌರಕ್‌ದಿಂದ ಗ್ಲಾಸ್ಗೋಗೆ ಹೋಗಿ, ಅಲ್ಲಿನ ಕ್ವೀನ್ಸ್ ಸ್ಟೇಷನ್ನಿನಿಂದ ಎಡಿನ್‌ಬರೋಗೆ ರೈಲು ಹಿಡಿಯಬೇಕು. ಗ್ಲಾಸ್ಗೋದ ಕೇಂದ್ರಸ್ಟೇಷನ್ನಿನಿಂದ ಪ್ರತಿ ಇಪ್ಪತ್ತು ನಿಮಿಷಕ್ಕೆ ಒಂದರಂತೆ ಕ್ವೀನ್ಸ್ ಸ್ಟೇಷನ್ನಿಗೆ ಬಸ್ಸು ಹೊರಡುತ್ತದೆ. ಕ್ವೀನ್ಸ್ ಸ್ಟೇಷನ್ನಿನಿಂದ ಎಡಿನ್‌ಬರೋಗೆ ಎರಡೂವರೆ ಗಂಟೆಗಳ ರೈಲಿನ ಪಯಣ. ಹಿಂದಿನ ದಿನ ಇದ್ದ ನಿರ್ಮಲ, ಶುಭ್ರ ವಾತಾವರಣ ಇವತ್ತಾಗಲೇ ನಾಪತ್ತೆಯಾಗಿ, ಮೋಡ ಮತ್ತು ತುಂತುರು ಮಳೆಯ ಮಬ್ಬು ದಾರಿಯುದ್ದಕ್ಕೂ ಹಬ್ಬಿಕೊಂಡಿತ್ತು. ಬೆಚ್ಚನೆಯ ಉಡುಪು ತೊಟ್ಟು, ಛತ್ರಿಯನ್ನೂ ಜತೆಗಿಟ್ಟುಕೊಂಡು ತಕ್ಕ ಪೂರ್ವಸಿದ್ಧತೆ ಮಾಡಿಕೊಂಡಿದ್ದೆ. ಮಂಜು – ಮಬ್ಬುದಾರಿಯ ಪಯಣದ ನಂತರ ಹನ್ನೊಂದೂವರೆಯ ವೇಳೆಗೆ ಸ್ಕಾಟ್‌ಲೆಂಡಿನ ರಾಜಧಾನಿಯಾದ ಎಡಿನ್‌ಬರೋದಲ್ಲಿ ಇಳಿದೆ. ರೈಲು ನಿಲ್ದಾಣದ ಬದಿಗಿದ್ದ ಮಾಹಿತಿ ಕೇಂದ್ರದಲ್ಲಿ  ವಿಚಾರಿಸಿ, ನಗರ ಸಂಚಾರೀ ಬಸ್ಸಿಗೆ ಟಿಕೆಟ್‌ಅನ್ನು ಕೊಂಡುಕೊಂಡು, ಎತ್ತರವಾದ ಮೆಟ್ಟಿಲುಗಳ ದಾರಿಯನ್ನೇರಿ, ಬಸ್ಸಿನ ನಿಲುಗಡೆಯ ಸ್ಥಳವನ್ನು ಹುಡುಕಿದೆ. ಎತ್ತರದ ಮೆಟ್ಟಿಲ ದಾರಿಯ ತುದಿಗೆ ಪ್ರಿನ್ಸೆಸ್ ರೋಡ್ – ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಂತೆಯೇ, ದೊಡ್ಡ ದೊಡ್ಡ ಅಂಗಡಿಗಳ ಬೀದಿ. ಅದರ ಬದಿಗೆ ವೇವರ್ಲಿ   ಬ್ರಿಡ್ಜ್. ಅದರಿಂದ ಕೊಂಚ ಮುಂದೆ ನೂರಾರು ಬಸ್ಸುಗಳ ಬಸ್ ಸ್ಟ್ಯಾಂಡ್. ವೇವರ್ಲಿ ಅನ್ನುವುದು ವಾಲ್ಟರ್ ಸ್ಕಾಟ್ ಬರೆದ ಮೊಟ್ಟಮೊದಲ ಕಾದಂಬರಿಯ ಹೆಸರು. ಕಾದಂಬರಿ ಬರೆಯುವುದು ತಮ್ಮ ಘನತೆಗೆ ಕುಂದು ತರುವ ವಿಚಾರ ಎಂಬ ಭಾವನೆ ಪ್ರಚಲಿತವಿದ್ದ ಆ ಕಾಲದಲ್ಲಿ, ಸರ್ ವಾಲ್ಟರ್ ಸ್ಕಾಟ್‌ನು, ತನ್ನ ಹೆಸರು ಹಾಕಿಕೊಳ್ಳದೆ ವೇವರ್ಲಿ ಎಂಬ ಕಾದಂಬರಿಯನ್ನು ಪ್ರಕಟಿಸಿದ – ೧೮೧೪ರಲ್ಲಿ. ಎಡಿನ್‌ಬರೋದ ಈ ಪರಿಸರ, ಒಂದು ಸೇತುವೆ ಮತ್ತು ಒಂದು ವಾಣಿಜ್ಯ ಸಂಕೀರ್ಣ (ವೇವರ್ಲಿ ಮಾರ್ಕೆಟ್) ಅವನ ಕಾದಂಬರಿಯ ಹೆಸರನ್ನೆ  ಪಡೆದಿವೆ. ನಾನು ಟಿಕೆಟ್ ತೆಗೆದುಕೊಂಡ ಬಸ್ಸು ಬರುವ ಸ್ಥಳವನ್ನು ಸೇರಿ, ಆಗಲೆ ಹನುಮಂತನ ಬಾಲದಂತೆ ಬೆಳೆದ ಕ್ಯೂನಲ್ಲಿ ನಿಂತೆ. ಈ ಸಂದರ್ಭದಲ್ಲಿ ಐದು ವಾರದ ಕಾಲ ಐವತ್ತನೆಯ ಎಡಿನ್‌ಬರೋ ಉತ್ಸವ ನಡೆಯುತ್ತಿದ್ದುದರಿಂದ, ಅನಿರೀಕ್ಷಿತವಾದ ಜನಸಂದಣಿಯಿತ್ತು. ಹತ್ತು ಹದಿನೈದು ನಿಮಿಷಕ್ಕೆ ಒಮ್ಮೆ ಒಂದು ಬಸ್ಸು ಬಂದರೂ, ನಾನು ಬಸ್ಸನ್ನು ಪ್ರವೇಶಿಸಲು ಅರ್ಧಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು. ಮೇಲೆ ಆಕಾಶದ ತುಂಬ ಮೋಡ; ಆಗಾಗ ಜಿಟಿಜಿಟಿ ಮಳೆ, ಕೊರೆಯುವ ಗಾಳಿ. ಇಂಥ ಪ್ರತಿಕೂಲ ಹವಾಮಾನದಲ್ಲೂ ಯಾರೊಬ್ಬರ ಉತ್ಸಾಹವೂ ತಗ್ಗಿದಂತೆ ತೋರಲಿಲ್ಲ. ಅಂತೂ ಬಸ್ಸನ್ನೇರಿ ಕೂತಾಗ ಮಳೆ ಹನಿಗಳು ಕೊಂಚ ವಿರಾಮಕೊಟ್ಟದ್ದರಿಂದ ಟಾಪ್ ಮೇಲಿನ ಸೀಟಿನಲ್ಲಿ ಕೂತು, ಜರ್ಕಿನ್ ತೊಟ್ಟು, ತಲೆಗೆ ಮಫ್ಲರ್ ಸುತ್ತಿಕೊಂಡು ಬಸ್ಸಿನ ಗೈಡ್ ಧ್ವನಿವರ್ಧಕದ ಮೂಲಕ ಬಿತ್ತರಿಸುವ ‘ಸ್ಥಳ ಪುರಾಣ’ಕ್ಕೆ ಕಿವಿಗೊಟ್ಟೆ.

ಎಡಿನ್‌ಬರೋ ಅತ್ಯಂತ ಪ್ರಾಚೀನವಾದ ನಗರಗಳಲ್ಲಿ ಒಂದು. ಈ ನಗರದ ಕೇಂದ್ರ ಭಾಗದಲ್ಲಿ ನೆಲದಿಂದ ಮೇಲೆದ್ದ ಬೃಹದಾಕಾರವಾದ ಶಿಲಾವಿಸ್ತಾರದ ಮೇಲೆ ಮಂಡಿಸಿದೆ ಎಡಿನ್‌ಬರೋ ಕೋಟೆ. ಈ ಊರಿನ ಯಾವ ಕಡೆಯಿಂದ ನೋಡಿದರೂ ಧೀರವಾಗಿ ಭವ್ಯವಾಗಿ ಈ ಕೋಟೆ ಕಾಣಿಸುತ್ತದೆ. ಈ ಕೋಟೆ ನಿಂತಿರುವ ವಿಸ್ತಾರವಾದ ಹಾಗೂ ಎತ್ತರವಾದ ಶಿಲಾಖಂಡ ಅನೇಕ ಮಿಲಿಯನ್ ವರ್ಷಗಳ ಹಿಂದೆ ಭೂಗರ್ಭದಿಂದ ಉದ್ದುದ್ದವಾದ ಜ್ವಾಲಾಮುಖಿಯ ಪರಿಣಾಮವೆಂದು ಭೂವಿಜ್ಞಾನಿಗಳು ಹೇಳುತ್ತಾರೆ. ಕ್ರಿ.ಶ. ಒಂದನೆ ಶತಮಾನದಷ್ಟು ಹಿಂದೆ ರೋಮನ್ನರ ಸೈನ್ಯ ಈ ಪರಿಸರವನ್ನು ಆಕ್ರಮಿಸಿಕೊಂಡಿತ್ತು. ನಾರ್ಥಂಬ್ರಿಯದ ದೊರೆ ಎಡಿನ್ ಎಂಬಾತನ ಹೆಸರಿನಿಂದ ಈ ಕೋಟೆ ಎಡಿನ್‌ಬರೋ ಎಂಬ ಹೆಸರನ್ನು ಪಡೆದು, ಅನಂತರ ಇದರ ಸುತ್ತ ನಗರವು ಹಬ್ಬಿಕೊಂಡು ಬೆಳೆದಿದೆ. ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬಂದದ್ದು ಹತ್ತನೆಯ ಶತಮಾನದ ರಾಣಿ ಮಾರ್ಗರೆಟ್‌ಳ ಕಾಲದಲ್ಲಿ. ಈ ಕೋಟೆ ಯಾವ ಯಾವ ರಾಜರುಗಳ ಆಡಳಿತದ ಕಾಲದಲ್ಲಿ, ಯಾವ ಯಾವ ರೂಪವನ್ನು ಪಡೆಯಿತೆಂಬುದನ್ನು, ಇಂಗ್ಲೆಂಡಿನ ರಾಜಮನೆತನದ ಚರಿತ್ರೆಯಿಂದ ಗುರುತಿಸಬಹುದು. ಈ ಕೋಟೆಯ ಸುತ್ತ ಹರಡಿಕೊಂಡ ನಗರ ಮುಖ್ಯವಾಗಿ ಕ್ಲಾಸಿಕಲ್ ಶೈಲಿಯ ಕಟ್ಟಡಗಳಿಂದ ಕೂಡಿದೆ. ದೊಡ್ಡ ದೊಡ್ಡ ಕಂಬಗಳಿಂದ, ಕಮಾನುಗಳಿಂದ, ಗೋಪುರಗಳಿಂದ, ಬೆರಗುಗೊಳಿಸುವ ಶಿಲ್ಪವಿನ್ಯಾಸ ಈ ನಗರದ ವೈಶಿಷ್ಟ್ಯವಾಗಿದೆ. ಇನ್ನೂ ಒಂದು ವಿಶೇಷವೆಂದರೆ ಪ್ರಾಚೀನ ರೋಂ ನಗರದಂತೆ ಈ ಊರು ಅನೇಕ ಚಿಕ್ಕ ಚಿಕ್ಕ ಗುಡ್ಡಗಳ ಮೇಲೆ ಹರಹಿಕೊಂಡಿದೆ. ಅಷ್ಟೆ ಅಲ್ಲ, ಕೋಟೆಯ ಕೆಳಗೆ ಮತ್ತು ಊರ ನಡುವೆ ದೊಡ್ಡ ದೊಡ್ಡ ಉದ್ಯಾನಗಳಿವೆ.

ಸುಮಾರು ಒಂದೂವರೆ ಗಂಟೆಯ ಕಾಲ ನಮ್ಮ ಬಸ್ಸಿನ ಗೈಡ್, ಸಂಚಾರದ ಉದ್ದಕ್ಕೂ ನಿರರ್ಗಳವಾಗಿ ಅಂಕಿ ಅಂಶಗಳ ಸಹಿತ ಈ ಊರಿನ ಪುರಾಣವನ್ನು ಕುರಿತು, ಚರಿತ್ರೆಯನ್ನು ಕುರಿತು, ಊರ ತುಂಬ ಹರಹಿಕೊಂಡ ಐತಿಹಾಸಿಕ ಸ್ಮಾರಕಗಳನ್ನು ಕುರಿತು ವಾಗ್‌ಝರಿಯನ್ನು ಅತ್ಯುತ್ಸಾಹದಿಂದಲೇ ಹರಿಸಿದನಾದರೂ, ಮೋಡ ಕವಿದು ಆಗಾಗ ತುಂತುರು ಮಳೆ ಹನಿತು, ಛಳಿಗಾಳಿ ತೀಡುತ್ತಿರುವಾಗ ಈ ಎಲ್ಲ ಸಂಗತಿಗಳನ್ನು  ನೆನಪಿಟ್ಟುಕೊಳ್ಳುವ ಉತ್ಸಾಹ ಯಾರಲ್ಲೂ ಉಳಿದಂತೆ ತೋರಲಿಲ್ಲ. ಮಧ್ಯಾಹ್ನ ಸುಮಾರು ಎರಡು ಗಂಟೆಯ ವೇಳೆಗೆ, ನಮ್ಮ ಪರ್ಯಟನ ಮುಗಿದು ಹೊಟ್ಟೆ ಚುರುಗುಟ್ಟಲು ಶುರು ಮಾಡಿದಾಗ ನಾನು ಬಸ್ ಸ್ಟ್ಯಾಂಡಿನ ಪಕ್ಕದ ಉದ್ಯಾನವೊಂದನ್ನು ಪ್ರವೇಶಿಸಿ, ಡಾ. ಕಮಲಾ ಅವರು ಬೆಳಿಗ್ಗೆ ನನಗೆ ಕಟ್ಟಿಕೊಟ್ಟ ಬುತ್ತಿಯನ್ನು (ಸ್ಯಾಂಡ್ ವಿಚ್ – ಯೋಗರ್ಟ್ – ಹಣ್ಣಿನರಸ ಇತ್ಯಾದಿ) – ಬಿಚ್ಚಿ, ಮರದ ಬೆಂಚುಗಳೊಂದೂ ಖಾಲಿ ಇರಲಿಲ್ಲವಾಗಿ, ಅಲ್ಲೇ ಇದ್ದ ಎತ್ತರವಾದ ವಿಗ್ರಹವೊಂದರ ಪಾದಪೀಠದ ಬದಿಗೆ ಕೂತು, ಮಧ್ಯಾಹ್ನದ ‘ಲಂಚ್’ ಅನ್ನು ಮುಗಿಸಿದೆ. ಹೊಟ್ಟೆ ತುಂಬಿದನಂತರ, ಸುತ್ತಣ ಪರಿಸರ ಮೊದಲಿಗಿಂತಲೂ ಚೆಲುವಾಗಿ ತೋರತೊಡಗಿತು. ಎದ್ದು ನಿಂತು, ನಾನು ನನ್ನ ‘ಲಂಚ್’ ಅನ್ನು ತೆಗೆದುಕೊಂಡದ್ದು ಯಾರ ಪ್ರತಿಮೆಯ ಕೆಳಗೆ ಎಂದು ನೋಡಿದರೆ, ಪಾದಪೀಠದ ಮೇಲೆ ‘ಸರ್ ವಾಲ್ಟರ್ ಸ್ಕಾಟ್’ ಎಂಬ ಲಿಖಿತವಿತ್ತು. ಇಂಗ್ಲಿಷ್ ಭಾಷೆಯಲ್ಲಿ ಮೊಟ್ಟ ಮೊದಲ ಬಾರಿಗೆ ಚಾರಿತ್ರಿಕ ಕಾದಂಬರಿಗಳನ್ನು ಬರೆದವನು ಇವನೇ. ಈತ ಕವಿಯೂ ಹೌದು. ದೇಶಭಕ್ತಿಯನ್ನು ಕುರಿತು ‘Breaths there the man with soul so dead’ ಎಂಬ ಈತನ ಕವಿತೆಯನ್ನು ನಾನು ಹೈಸ್ಕೂಲಿನ ತರಗತಿಯಲ್ಲಿರುವಾಗಲೇ ಓದಿದ್ದೆ. ಇಲ್ಲೇ ಇರುವ ವೇವರ್ಲಿ ಬ್ರಿಡ್ಜ್, ವೇವರ್ಲಿ ಮಾರ್ಕೆಟ್ಟುಗಳೂ ಈತನ ಮೊದಲ ಕಾದಂಬರಿಯ ನೆನಕೆಗಳೇ.

ಬಸ್ಸಿನ ಮೇಲೆ ಕೂತು, ಸಂಚಾರ ಮಾಡುವಾಗ ಹತ್ತಿರದಿಂದ ಕಂಡ ಮತ್ತು ಗೈಡ್‌ನ ಮಾಹಿತಿಯಿಂದ ಪರಿಚಯವಾದ ಎಡಿನ್‌ಬರೋ ಕೋಟೆಯನ್ನು ಪ್ರತ್ಯಕ್ಷವಾಗಿ ಯಾಕೆ ಪ್ರವೇಶಿಸಿ ನೋಡಬಾರದು ಎಂದು, ಇಡೀ ದಿನ ಸಂಚರಿಸಲನುಕೂಲವಾದ ಟಿಕೆಟ್‌ನ್ನು ಪಡೆದ ಕಾರಣದಿಂದ ಮತ್ತೆ ಒಮ್ಮೆ ಬಸ್ಸನ್ನು ಹತ್ತಿ, ಎಡಿನ್‌ಬರೋ ಕೋಟೆಯ ಮಹಾದ್ವಾರದಲ್ಲಿ ಇಳಿದೆ. ಶತಶತಮಾನಗಳ ಕಾಲದಿಂದ, ಅರಮನೆಯಾಗಿ, ಕಾರಾಗೃಹವಾಗಿ, ರಾಜಭಂಡಾರವಾಗಿ, ಸೈನಿಕ ನೆಲೆಯ ಠಾಣೆಯಾಗಿ-ಬಳಕೆಯಾದ ಈ ಕೋಟೆಯ ಒಳಗಿನ ವಿಸ್ತಾರ ಹಾಗೂ ಅದರ ರಚನಾವಿನ್ಯಾಸ ದಂಗುಬಡಿಸುವಂತಿದೆ. ಲಂಡನ್ನಿನ ಟವರ್, ನಾಟಿಂಗ್‌ಹ್ಯಾಂನ ಕೋಟೆ ಮತ್ತು ವಾರ್ವಿಕ್ ಕೋಟೆಗಳಿಗೆ ಹೋಲಿಸಿದರೆ, ಸ್ಕಾಟ್‌ಲೆಂಡಿನ ಎಡಿನ್‌ಬರೋ ಕೋಟೆ ಅವುಗಳೆಲ್ಲವುಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದೆ, ಅದು ನಿಂತಿರುವ ಎತ್ತರದಿಂದ ಹಾಗೂ ಸೊಗಸಿನಿಂದ ಅನ್ನಿಸಿತು. ಈ ಎಲ್ಲ ಕೋಟೆಗಳನ್ನೂ ಅಲ್ಲಲ್ಲಿನ ಆಡಳಿತ ವ್ಯವಸ್ಥೆಗಳು ಉಳಿಸಿಕೊಂಡಿರುವ ಮತ್ತು ನಿರ್ವಹಿಸುವ ಕ್ರಮದ ಹಿಂದೆ ಎಚ್ಚರವಾಗಿರುವ ಚಾರಿತ್ರಿಕ ಪ್ರಜ್ಞೆ ಅತ್ಯಂತ ಪ್ರಶಂಸನೀಯವಾಗಿದೆ. ನಮ್ಮ ದೇಶದಲ್ಲಿರುವ ಚಾರಿತ್ರಿಕ ಮಹತ್ವದ ಕೋಟೆ-ಕೊತ್ತಲಗಳನ್ನು ನಾವು ಹೇಗೆ ಉಳಿಸಿಕೊಂಡಿದ್ದೇವೆ ಎಂಬುದನ್ನೂ, ಪ್ರವಾಸಿಗಳಿಗಾಗಲಿ, ಸ್ವದೇಶಿಯರಿಗಾಗಲಿ, ಅವುಗಳನ್ನು ಪರಿಚಯ ಮಾಡಿಕೊಡುವ ವಿಚಾರದಲ್ಲಿ ನಾವು ವಹಿಸಿರುವ ನಿರ್ಲಕ್ಷ್ಯವನ್ನೂ – ನೆನೆದರೆ ತುಂಬ ವಿಷಾದವಾಗುತ್ತದೆ. ನಮ್ಮ ಘನಸರ್ಕಾರದವರು ‘ಸಂರಕ್ಷಿತ ಸ್ಮಾರಕ’ಗಳೆಂದು, ಬೋರ್ಡು ಹಾಕಿಸುವುದೊಂದನ್ನು ಬಿಟ್ಟರೆ, ಈ ಸ್ಮಾರಕಗಳನ್ನು ಕುರಿತು ಜನರಿಗೆ ತಿಳಿವಳಿಕೆ ಮೂಡಿಸುವ ಇತರ ವ್ಯವಸ್ಥೆಗಳ ಬಗ್ಗೆ ಅಷ್ಟಾಗಿ ಗಮನವನ್ನೆ ಕೊಡುವುದಿಲ್ಲ. ಈ ದೇಶದಲ್ಲಿ ಈ ಬಗೆಯ ಐತಿಹಾಸಿಕ ಸ್ಮಾರಕಗಳ ಬಗ್ಗೆ, ಪ್ರಕಟಿಸುವ ಮಾಹಿತಿ ಪುಸ್ತಿಕೆಗಳೂ, ಸುಶಿಕ್ಷಿತರಾದ ಮಾರ್ಗದರ್ಶಿಗಳ ನೆರವೂ, ವಿವಿಧ ಶ್ರವಣ ಸಾಧನಗಳ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಪ್ರವಾಸಿಗಳಿಗೆ ದೊರೆಯುವ ತಿಳಿವಳಿಕೆಗಳೂ, ಇಲ್ಲಿನ ಸಾರ್ವಜನಿಕ ಶಿಕ್ಷಣದ ಬೇರೊಂದು ರೂಪವಾಗಿವೆ. ನಾನು ಈ ಕೋಟೆಯ ಮೊದಲ ಮಹಾದ್ವಾರವನ್ನು ಪ್ರವೇಶಿಸಿ, ಟಿಕೆಟ್ ಕೊಂಡುಕೊಂಡಾಗ ಆಗಲೇ ಮಧ್ಯಾಹ್ನದ ಮೂರು ಗಂಟೆಯಾದ್ದರಿಂದಲೂ, ನಾನು ಮತ್ತೆ ನನ್ನ ಮರು ಪ್ರಯಾಣಕ್ಕೆ ನಾಲ್ಕು-ನಾಲ್ಕೂವರೆಯ ರೈಲನ್ನು ಹಿಡಿಯಬೇಕಾಗಿದ್ದರಿಂದಲೂ ನಾನೊಬ್ಬನೇ ಸಾಧ್ಯವಾದಷ್ಟು ಬೇಗ ಒಂದು ಸುತ್ತ್ತು ಹಾಕಿ ಬರಲು ನಿರ್ಧರಿಸಿ ಹೊರಟೆ. ನನಗಿದ್ದ ಕಾಲಾವಕಾಶದಲ್ಲಿ ಎಲ್ಲವನ್ನೂ ನೋಡಲು ಸಾಧ್ಯವಾಗದ ಕಾರಣ, ಕೋಟೆಯ ನಡುವಣ ಅಂಗಳದ ಬದಿಯ ಮೆಟ್ಟಿಲುಗಳನ್ನೇರಿ ಆ ಎತ್ತರದಿಂದ ಕಾಣುವ ಎಡಿನ್‌ಬರೋ ನಗರದ ವಿಸ್ತಾರವನ್ನು ವೀಕ್ಷಿಸಿದ ಅನಂತರ, ಸೈನ್ಯಕ್ಕೆ ಸಂಬಂಧಿಸಿದ ಶಸ್ತ್ರಾಗಾರವನ್ನು ನೋಡಿ ಮುಗಿಸುವುದರವೇಳೆಗೆ ಗಡಿಯಾರ ನಾಲ್ಕು ಗಂಟೆಯನ್ನು ತೋರಿಸತೊಡಗಿತ್ತು. ಒಲ್ಲದ ಮನಸ್ಸಿನಿಂದ ನನ್ನ ವೀಕ್ಷಣೆಯನ್ನು ಮೊಟಕುಗೊಳಿಸಿ, ಕೋಟೆಯ ಪಕ್ಕದಲ್ಲಿ ಕೆಳಕ್ಕೆ ಇಳಿಯುವ ಮೆಟ್ಟಿಲುದಾರಿಯ ಮೂಲಕ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯನ್ನು ಹಿಡಿದೆ. ಹಾಗೆಯೇ ಮುಂದುವರಿಯುತ್ತಿರುವಾಗ ಎಡಗಡೆಗೆ ‘ರೈಟರ್ಸ್ ಮ್ಯೂಸಿಯಂ’ ಎಂಬ ಬೋರ್ಡು ಕಣ್ಣಿಗೆ ಬಿತ್ತು. ತಡವಾದರಾಗಲಿ ಎಂದು ಅದರೊಳಕ್ಕೆ ಪ್ರವೇಶ ಮಾಡಿದೆ. ಒಳಗೆ ಹೋಗಿ ನೋಡುತ್ತೇನೆ., ಅದು ಸ್ಕಾಟ್‌ಲೆಂಡಿಗೆ ಸಂಬಂಧಪಟ್ಟ ಮೂವರು ಮುಖ್ಯ ಬರಹಗಾರರಾದ., ‘ಸರ್ ವಾಲ್ಟರ್ ಸ್ಕಾಟ್, ರಾಬರ್ಟ್ ಬರ್ನ್ಸ್ ಮತ್ತು ರಾಬರ್ಟ್ ಲೂಯೀ ಸ್ಟೀವನ್‌ಸನ್ – ಅವರಿಗೆ ಸಂಬಂಧಿಸಿದ ಪ್ರದರ್ಶನಾಲಯ. ಈ ಬರೆಹಗಾರರ ಹಸ್ತಪ್ರತಿಗಳನ್ನು, ಅವರವರ ಕೃತಿಗಳ ಮೊದಲ ಮುದ್ರಣದ ಪ್ರತಿಗಳನ್ನು, ಅವರ ಬದುಕಿಗೆ ಸಂಬಂಧಿಸಿದ ವರ್ಣಚಿತ್ರಗಳನ್ನು, ಅವರವರು ತಮ್ಮ ಜೀವಿತ ಕಾಲದಲ್ಲಿ ಬಳಸುತ್ತಿದ್ದ- ಕನ್ನಡಕ, ಪೆನ್ನು, ವಾಕಿಂಗ್ ಸ್ಟಿಕ್, ಗಡಿಯಾರ – ಅವರವರಿಗೆ ಬಂದ ಪ್ರಶಸ್ತಿಗಳು ಇತ್ಯಾದಿ – ವಸ್ತುಗಳನ್ನು  ಈ ಪ್ರದರ್ಶನಾಲಯದಲ್ಲಿ ಸಂಗ್ರಹಿಸಿ ಇಡಲಾಗಿದೆ. ಹಾಗೆಯೇ ರಾಬರ್ಟ್‌ಬರ್ನ್ಸ್‌ನ ಧ್ವನಿಮುದ್ರಿಕೆಗಳ ಮೂಲಕ, ಅವನ ಕಾವ್ಯವಾಚನವನ್ನೂ ಆಲಿಸಬಹುದು. ರಾಬರ್ಟ್ ಬರ್ನ್ಸ್ ಸ್ಕಾಟ್‌ಲೆಂಡಿನ ಜನದ ಪ್ರೀತಿಯ ಕವಿ ಮಾತ್ರ ಅಲ್ಲ; ಆತ ಅವರ ಸಾಂಸ್ಕೃತಿಕ  ವೀರನೂ ಹೌದು. ರಾಬರ್ಟ್ ಲೂಯೀ ಸ್ಟೀವನ್‌ಸನ್ ಬರೆದ ಟ್ರೆಜರ್‌ಐಲೆಂಡ್, ಡಾ. ಜೆಕಿಲ್ ಅಂಡ್ ಹೈಡ್, ತುಂಬ ಜನಪ್ರಿಯವಾದ ರಮ್ಯಾದ್ಭುತ ಕತೆಗಳು. ಎಡಿನ್‌ಬರೋದ ನ್ಯಾಷನಲ್ ಆರ್ಟ್ಸ್ ಮ್ಯೂಸಿಂಯನಲ್ಲಿ ರಾಬರ್ಟ್ ಬರ್ನ್ಸ್ ಮತ್ತು ಸರ್ ವಾಲ್ಟರ್ ಸ್ಕಾಟ್‌ನ ವರ್ಣಚಿತ್ರಗಳಿವೆ. ಅಷ್ಟೇ ಅಲ್ಲ, ಗ್ಲಾಸ್ಗೋ ನಗರದ ಟೌನ್ ಸೆಂಟರಿನ ಚೌಕದಲ್ಲಿ ಎತ್ತರವಾದ ಕಂಬದ ಮೇಲೆ ವಾಲ್ಟರ್ ಸ್ಕಾಟ್‌ನ ಪ್ರತಿಮೆಯನ್ನೂ ಅದರ ಪಕ್ಕದ ವೇದಿಕೆಯ ಮೇಲೆ ಬರ್ನ್ಸ್ ಕವಿಯ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ.

ಕೇವಲ ಅರ್ಧ ಗಂಟೆಯ ಕಾಲದಲ್ಲಿ ಲೇಖಕರ ಮ್ಯೂಸಿಯಂ ಅನ್ನು ನೋಡಿಕೊಂಡು ಹೊರಕ್ಕೆ ಬಂದೆ. ಅಲ್ಲಿ ಪಾರ್ಕಿನ ಪಕ್ಕದಲ್ಲಿ ಬಣ್ಣ ಬಣ್ಣದ ಆಕರ್ಷಕವಾದ ಉಡುಪುಗಳನ್ನು ತೊಟ್ಟ ಸ್ಕಾಟ್‌ಲೆಂಡಿನ ಪೈಪುಗಾರರು – ಐದಾರು ಪೈಪುಗಳಿರುವ ವಾದ್ಯವೊಂದನ್ನು ಊದುತ್ತ ಸ್ವರಮಾಧುರ್ಯವನ್ನು ಪ್ರಸರಿಸುತ್ತಿದ್ದರು. ಸುತ್ತ ನಿಂತ ಜನ ಮಂತ್ರಮುಗ್ಧವಾಗಿ ಅದನ್ನಾಲಿಸುತ್ತಿದ್ದರು. ಇನ್ನೂ ಮುಂದಕ್ಕೆ ಬಂದರೆ ಮತ್ತೊಂದು ಮಂಡಲಾಕಾರದ ಜನಸಂದಣಿ; ನಡುವೆ ಬಗೆಬಗೆಯ ದೊಂಬರಾಟ, ಮ್ಯಾಜಿಕ್ ಷೋಗಳ ಪ್ರದರ್ಶನ. ಅಂತೂ ಈ ದೇಶದಲ್ಲಿ ಜನ ಇನ್ನೂ ತಮ್ಮ ಪ್ರಾಚೀನ ಕುತೂಹಲ ಹಾಗೂ ಮುಗ್ಧತೆಯನ್ನು ಕಳೆದುಕೊಂಡಿಲ್ಲ ಅನ್ನಿಸಿ ಸಂತೋಷವಾಯಿತು.

ಐದು ಗಂಟೆಯ ರೈಲು ಹಿಡಿದು ಎಡಿನ್‌ಬರೋದಿಂದ ಹೊರಟು ಗ್ಲಾಸ್ಗೋದ ಕ್ವೀನ್ಸ್ ಸ್ಟೇಷನ್ನನ್ನು ತಲುಪಿದಾಗ ಸಂಜೆ ಏಳು ಗಂಟೆ. ಇನ್ನೂ  ಸಂಜೆಯ ಬೆಳಕು, ಆಕಾಶದಲ್ಲಿ ಮೋಡಗಳಿದ್ದರೂ ಮಂದವಾಗಿ ಹಬ್ಬಿಕೊಂಡಿತ್ತು. ಕ್ವೀನ್ಸ್ ಸ್ಟೇಷನ್ನಿನಿಂದ ಗ್ಲಾಸ್ಗೋ ಸೆಂಟ್ರಲ್‌ಗೆ ಹೊರಡುವ ಬಸ್ಸಿಗೆ ಕಾದೆ. ಏಳೂ ಇಪ್ಪತ್ತಕ್ಕೆ ಸರಿಯಾಗಿ ಬಸ್ಸು ಬಂದಿತು.  ಹತ್ತಿದೆ. ಬಸ್ಸಲ್ಲಿ ನಾನಲ್ಲದೆ ಬೇರೆ ಯಾವ ಪ್ರಯಾಣಿಕರೂ ಇಲ್ಲ. ಆದರೆ ಏಳೂ ಇಪ್ಪತ್ತಕ್ಕೆ ಹೊರಡುವ ಬಸ್ಸು, ನನ್ನೊಬ್ಬನ ಸಹಿತ ಹೊರಟೇಬಿಟ್ಟಿತು. ಒಬ್ಬರಿಗಾಗಿ ಬಸ್ಸು ಬಿಡುವುದೇ, ಇನ್ನೊಂದಿಷ್ಟು ಜನ ಬರಲಿ, ಆಮೇಲೆ ಹೊರಟರಾಯಿತು ಎಂಬ ಲೆಕ್ಕಾಚಾರವೇ ಇಲ್ಲ. ಟೈಂ ಅಂದರೆ ಟೈಂ. ಒಬ್ಬರಿರಲಿ, ಇಪ್ಪತ್ತು ಜನವಿರಲಿ ಅದು ಮುಖ್ಯವಲ್ಲ. ಇದು ನಿಜವಾದ ಶಿಸ್ತು. ಈ ಜನ ಬೆಳೆದಿರುವುದು ಹೀಗೆ, ಬದುಕುತ್ತಿರುವುದು ಹೀಗೆ.

ಗ್ಲಾಸ್ಗೋದಿಂದ ಮತ್ತೊಂದು ರೈಲು ಹಿಡಿದು ಗೌರಕ್ ತಲುಪಿದಾಗ ರಾತ್ರಿ ಎಂಟೂವರೆ ಗಂಟೆ. ನಾನು ಮನೆ ತಲುಪಿದ ಕೂಡಲೆ ಡಾ. ಕಮಲಾ ಹೇಳಿದರು: ‘ಈ ಸ್ವಲ್ಪ ಹೊತ್ತಿನ ಮುಂಚೆ  ನಿಮಗೆ ಫೋನ್ ಬಂದಿತ್ತು, ದುಬಾಯಿಯಿಂದ ನಮ್ಮ ಯಜಮಾನರದು. ಮತ್ತೆ ಈ ರಾತ್ರಿ ಮಾತನಾಡುತ್ತಾರಂತೆ. ಮರೆತೆ, ಬರ್ಟ್‌ನ್‌ದಿಂದ  ನಿಮ್ಮ ಮಗನೂ ಫೋನ್ ಮಾಡಿದ್ದ – ನಿಮ್ಮ ಯೋಗಕ್ಷೇಮವನ್ನು ವಿಚಾರಿಸಿದ’.

ಅವರೆಂದಂತೆ ಒಂಬತ್ತು ಗಂಟೆಗೆ ಡಾ. ಚಂದ್ರಶೇಖರ್ ಅವರ ಫೋನು ಬಂತು ದುಬಾಯಿಯಿಂದ. ‘ಹಲೋ, ಹೇಗಿದ್ದೀರಿ? ನೀವು ನಮ್ಮ ಮನೆಗೆ ಬಂದದ್ದು ತುಂಬ ಸಂತೋಷ. ಏನು ಮಾಡಲಿ, ನಾನಿಲ್ಲಿಗೆ ಕೆಲವು ಕಾಲ ಬರಬೇಕಾಯಿತು.  I am sorry, ನಮ್ಮ ಕಮಲಾ ನಿಮ್ಮ ಯೋಗಕ್ಷೇಮವನ್ನು ಚೆನ್ನಾಗಿ ನೋಡಿ ಕೊಳ್ಳುತ್ತಾಳೆ. ನೀವು ಏನೂ ಸಂಕೋಚಪಟ್ಟುಕೊಳ್ಳಬೇಡಿ. ಇನ್ನೂ ನಾಲ್ಕು ದಿನ ಇದ್ದು ಹೋಗಿ. ನಾನು ಹಿಂದಿರುಗಿ ಬಂದ ನಂತರ ಮತ್ತೂ ಒಂದು ಸಲ ನೀವು ಗೌರಕ್‌ಗೆ ಬರಬೇಕು. ಈಗ ನೋಡದೆ ಬಿಟ್ಟಿದ್ದನ್ನು ಆಗ ನಾನೇ ಕರೆದುಕೊಂಡು ಹೋಗಿ ತೋರಿಸುತ್ತೇನೆ, ಬಾಯ್’ – ಎಂದರು. ಡಾ. ಚಂದ್ರಶೇಖರ್ ಅವರ ಸೌಜನ್ಯಕ್ಕೆ ನನ್ನಲ್ಲಿ Thank you very much ಎಂಬ ನುಡಿಗಟ್ಟಲ್ಲದೆ ಬೇರೇನೂ ಇರಲಿಲ್ಲ, ನನ್ನ ಕೃತಜ್ಞತೆಗಳನ್ನು ಸೂಚಿಸುವುದಕ್ಕೆ.

ಡಾ. ಕಮಲಾ ಮೂಲತಃ ಆಂಧ್ರದವರು. ಅವರ ಮನೆ ಮಾತು ತೆಲುಗು. ಬೆಂಗಳೂರಿನ ಡಾ. ಚಂದ್ರಶೇಖರ್ ಅವರನ್ನು  ಮದುವೆಯಾದ ನಂತರ ಕನ್ನಡವನ್ನು ಕಲಿತು, ಮಾತಾಡುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ಕನ್ನಡವನ್ನು ಓದುವುದು ತುಂಬ ಕಷ್ಟವಂತೆ. ಗಂಡ ಹೆಂಡಿರಿಬ್ಬರೂ ಸ್ಕಾಟ್‌ಲೆಂಡಿಗೆ ಬಂದು ಆಗಲೇ ಮೂವತ್ತು ವರ್ಷಗಳಾಯಿತಂತೆ. ಇಬ್ಬರೂ ಗೌರಕ್‌ನ ಆಸ್ಪತ್ರೆಯಲ್ಲಿ ವೈದ್ಯರು. ಇಲ್ಲೆ ದೊಡ್ಡದೊಂದು ಮನೆ ಕೊಂಡುಕೊಂಡು ನೆಲಸಿದ್ದಾರೆ. ಡಾ. ಕಮಲಾ ಮನೋರೋಗ ತಜ್ಞರು. ಗ್ಲಾಸ್ಗೋ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರು. ಅನೇಕ ಅಂತರ್ ರಾಷ್ಟ್ರೀಯ ವೈದ್ಯಕೀಯ ಸಮ್ಮೇಳನ ಹಾಗೂ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುತ್ತ ಜಗತ್ತನ್ನೆಲ್ಲಾ ಸುತ್ತಿದ್ದಾರೆ. ಸಾಹಿತ್ಯ-ಕಲೆಗಳಲ್ಲಿ ಅಪಾರವಾದ ಆಸಕ್ತಿ. ಹಾಗೆಯೆ ಅತಿಥಿ ಸತ್ಕಾರದಲ್ಲಿಯೂ. ಕಾಡು-ಮೇಡುಗಳನ್ನು ಸುತ್ತುವುದೆಂದರೆ ಇವರಿಗೆ ವಿಶೇಷ ಪ್ರೀತಿ. ನಿವೃತ್ತರಾದ ನಂತರ ಬೆಂಗಳೂರಿಗೆ ಬಂದು ನೆಲಸುವ ವಿಚಾರವಿದೆಯಂತೆ. ಆದರೆ ‘ಈ ದೇಶದಲ್ಲಿ ಇಷ್ಟೊಂದು ವರ್ಷಗಳಕಾಲ ಇದ್ದು, ಇಂಥ ನದಿ- ಪರ್ವತ-ಕಾಡು-ಸರೋವರಗಳ ಸ್ಕಾಟ್‌ಲೆಂಡನ್ನು ಹೇಗೆ ಬಿಟ್ಟು ಬರಲಿ ಹೇಳಿ’ – ಅನ್ನುತ್ತಾರೆ.

ಇಂಥ ಡಾ. ಕಮಲಾ ಇಲ್ಲಿ ಅಪ್ಪಟ ಭಾರತೀಯ ಮಹಿಳೆ. ಸೀರೆ ಉಟ್ಟು, ತುರುಬು ಕಟ್ಟಿ, ಕುಂಕುಮ ಇಟ್ಟುಕೊಂಡು ಆಸ್ಪತ್ರೆಗೆ ಹೋಗುತ್ತಾರೆ, ತಮ್ಮ ವೈದ್ಯಕೀಯ ಸೇವೆಗೆ. ಇಲ್ಲಿಗೆ ಬಂದ ಅನೇಕ ಭಾರತೀಯ ಮಹಿಳಾ ವೈದ್ಯರು ಹೀಗಿರುವುದಿಲ್ಲ. ಇಲ್ಲಿನವರ ಉಡುಗೆ ತೊಡುಗೆಗಳನ್ನು ಅನುಕರಿಸುತ್ತಾರೆ. ‘ನಾವು ಯಾಕೆ ಈ ಜನದ ಥರಾ ಆಗಬೇಕು ಹೇಳಿ? ನಾವು ನಾವಾಗೇ ಇರಬೇಕು’ ಅನ್ನುತ್ತಾರೆ ಕಮಲಾ. ಮನೆಯಳಗಿನ ಅಡುಗೆಯ ಕ್ರಮ ಕೂಡಾ ನಮ್ಮದೇ. ಬಹಳ ಅಪರೂಪದ ಹೆಂಗಸು. ಕೊಂಚವೂ ತೋರಿಕೆಯಿಲ್ಲ. ಇಷ್ಟೊಂದು ದೊಡ್ಡ ಹೆಸರಾಂತ ವೈದ್ಯರಾದರೂ ಅತ್ಯಂತ ಸರಳ, ನಿರಾಡಂಬರದ ವ್ಯಕ್ತಿ.

ನಾನು ಎಡಿನ್‌ಬರೋಗೆ ಹೋಗಿ ಬಂದ ಮರುದಿನ ಡಾ. ಕಮಲಾ ಮತ್ತೆ ಸಾರಥ್ಯಕ್ಕೆ ಸಿದ್ಧವಾದರು. ‘ಇನ್ನೇನಾದರೂ ನೋಡುವುದು ಉಳಿದಿದ್ದರೆ ನಾನೇ ಹೋಗಿ ನೋಡಿಕೊಂಡು ಬರುತ್ತೇನೆ ಡಾಕ್ಟ್ರೆ, ನೀವು ಆಸ್ಪತ್ರೆಗೆ ನಿಮ್ಮ ಡ್ಯೂಟಿಗೆ ಹೋಗಿ’ ಎಂದು ನಾನಂದರೂ, ‘ಅದೆಲ್ಲಾ ನಿಮಗೇಕೆ. ನೀವು ನನ್ನ ಅತಿಥಿ. ಸುಮ್ಮನೆ ಬನ್ನಿ. ಕವಿಗಳಾದ ನಿಮಗೆ ಇನ್ನೊಬ್ಬ ಕವಿಯನ್ನು ಭೆಟ್ಟಿ ಮಾಡಿಸುತ್ತೇನೆ’ ಎಂದರು. ನನಗೆ ಆಶ್ಚರ್ಯವಾಯಿತು. ‘ಅದ್ಯಾರು ಮೇಡಂ ಆ ಕವಿ. ಆತ ಎಲ್ಲಿದ್ದಾನೆ’ ಎಂದೆ. ‘ಆತ ಬೇರೆ ಯಾರೂ ಅಲ್ಲ. ಸ್ಕಾಟ್‌ಲೆಂಡಿನ ಅತ್ಯಂತ ಜನಪ್ರಿಯ ಕವಿ – ರಾಬರ್ಟ್ ಬರ್ನ್ಸ್, ಅವನ ಊರಿಗೆ ಹೋಗೋಣ ಇವತ್ತು’ ಎಂದು ಕಾರನ್ನು ಸ್ಟಾರ್ಟ್ ಮಾಡಿದರು. ಸರೋವರದ ದಂಡೆಯ ದಾರಿಗುಂಟ ಹೊರಟ ಕಾರು ಮತ್ತೆಲ್ಲೋ ಹೊರಳಿ, ದಟ್ಟವಾದ ಕೋಟೆಗಟ್ಟಿದಂಥ ಮರಗಳ ಕಾಡಿನ ದಾರಿಯಲ್ಲಿ ಉರುಳಿ ಹತ್ತೂವರೆಯ ವೇಳೆಗೆ ಕಡಲತೀರದ ಏರ್‌ಷೈರ್ ಎಂಬ ದೊಡ್ಡ ಊರನ್ನು ತಲುಪಿತು. ಈಗ ಆ ಊರಿನ ಒಂದು ಭಾಗವೇ ಆಗಿರುವ ಅಲೌವೆ ಎಂಬಲ್ಲಿ ರಾಬರ್ಟ್ ಬರ್ನ್ಸ್‌ನ ಹುಲ್ಲುಗುಡಿಸಲು ಮನೆ ಇದೆ.  ಅದನ್ನು ಬರ್ನ್ಸ್ ಕಾಟೇಜ್ ಅನ್ನುತ್ತಾರೆ.

ರಾಬರ್ಟ್ ಬರ್ನ್ಸ್ ಕನ್ನಡಿಗರಾದ ನಮಗೆ ಅಪರಿಚಿತವಾದವನೇನಲ್ಲ. ಕನ್ನಡದ ಒಲವಿನ ಕವಿ ಕೆ. ಎಸ್. ನರಸಿಂಹಸ್ವಾಮಿ ಅವರಿಗೆ, ಕವಿತೆ ಬರೆಯುವ ಸ್ಫೂರ್ತಿಯನ್ನು ಹುಟ್ಟಿಸಿದ್ದು ಬರ್ನ್ಸ್‌ನ ಕವಿತೆ. ಕೆ.ಎಸ್.ನ. ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದಾಗ ‘ಯಾರೋ ಪುಣ್ಯಾತ್ಮರು ಬರ್ನ್ಸ್ ಕವಿಯ ಸಂಗ್ರಹವನ್ನು’ ಇವರ ಕೈಗೆ ಹಾಕಿದರಂತೆ. ಅದನ್ನು ಓದುತ್ತಾ ಆದೆ ಧಾಟಿಯಲ್ಲಿ ಇವರೂ ಒಂದು ಕವಿತೆಯನ್ನು ಬರೆದರಂತೆ – ಇಂಗ್ಲಿಷಿನಲ್ಲಿ. ಅನಂತರ ಕೆ.ಎಸ್.ನ ಅವರ ಕನ್ನಡ ಕವಿತೆಯ ದಾರಿ ತೆರೆದದ್ದು ಬಿ.ಎಂ.ಶ್ರೀ ಯವರ ‘ಇಂಗ್ಲಿಷ್ ಗೀತೆ’ಗಳಿಂದ. ಆದರೂ ಬರ್ನ್ಸ್‌ನ ಕವಿತೆಗಳು ಕೆ.ಎಸ್. ನ ಅವರಿಗೆ ಕಾವ್ಯದ ಮಾದರಿಯೊಂದನ್ನು ರೂಪಿಸಿಕೊಟ್ಟು, ತಾವೂ ಬರ್ನ್ಸ್‌ನ ಹಾಗೆ ಜನತೆಯ ಕವಿಯಾಗಬೇಕೆಂಬ ಪ್ರೇರಣೆಯನ್ನು ನೀಡಿದ್ದಂತೂ ನಿಜ. ಬಿ.ಎಂ.ಶ್ರೀ. ಯವರೆ ಮೊದಲು ಬರ್ನ್ಸ್‌ನ ಕವಿತೆಗಳ ಸ್ವಾರಸ್ಯವನ್ನು ಕನ್ನಡಕ್ಕೆ ಪರಿಚಯ ಮಾಡಿಕೊಟ್ಟವರು.  My love is like a red red rose ಎಂಬುದನ್ನು ‘ನನ್ನ ಪ್ರೇಮದ ಹುಡುಗಿ ತಾವರೆಯ ಹೊಸ ಕೆಂಪು’ ಎಂದು ಪ್ರಾರಂಭವಾಗುವ ಕವಿತೆಯಾಗಿದೆ. Dunken Grey ‘ಮಾದ ಮಾದಿ’ ಆಗಿದೆ; Bonne Lessly, ‘ಕಂಡಿರ ಸುಂದರಿ ಕಮಲೆಯನು’ ಆಗಿದೆ. ಸ್ಕಾಟ್‌ಲೆಂಡಿನ ಜನಕ್ಕೆ ಬಹುಪ್ರಿಯ ವಾಗಿರುವ ‘A man’s is a Man for A that’ ಎನ್ನುವುದು ‘ಬಡವನ ಹುರುಡು’ ಆಗಿದೆ. ಹೀಗೆ ಇನ್ನೂ ಹಲವಿವೆ.

ಬರ್ನ್ಸ್ ಹುಟ್ಟಿದ್ದು ಕ್ರಿ.ಶ. ೧೭೫೯ನೇ ಜನವರಿ ೨೫ ರಂದು, ಸ್ಕಾಟ್‌ಲೆಂಡಿನ ಅಲೌವೆ ಎಂಬ ಹಳ್ಳಿಯ ಈ ಹುಲ್ಲು ಗುಡಿಸಲು ಮನೆಯಲ್ಲಿ. ತಂದೆ ಬಡ ಬೇಸಾಯಗಾರ. ತಾಯಿ ಹಳ್ಳಿಯ ಹಾಡುಗಳ ಗಣಿ. ಅನೇಕ ಜನಪದ ಗೀತೆಗಳನ್ನು ಆಕೆ ಸುಶ್ರಾವ್ಯವಾಗಿ ಹಾಡುತ್ತಿದ್ದಳಂತೆ. ಈ ಹಾಡುಗಳು ಬರ್ನ್ಸ್‌ನ ಬಾಲ್ಯದ ಮನಸ್ಸಿನಲ್ಲಿ ಅನುಕರಣಗೊಂಡು ಅರಗಿದ್ದರಿಂದ, ಬರ್ನ್ಸ್‌ನ ಕವಿತೆಗಳು ಸ್ಕಾಟ್‌ಲೆಂಡಿನ ಗ್ರಾಮೀಣ ಜೀವನದ ಹಾಗೂ ಜಾನಪದ ಸೊಗಡಿನ ಅಭಿವ್ಯಕ್ತಿಗಳಾಗಿವೆ. ವಾಸ್ತವವಾಗಿ ಬರ್ನ್ಸ್‌ನ ಕವಿತೆಗಳು, ಹಾಡಾಗಿಯೇ ಹುಟ್ಟಿಕೊಂಡವುಗಳು. ಈ ಹೊತ್ತಿಗೂ ಸ್ಕಾಟ್‌ಲೆಂಡಿನ ಜನ ಅವುಗಳನ್ನು ಹಾಡುತ್ತಾರಂತೆ. ಬಡರೈತ ಕುಟುಂಬದಿಂದ ಬಂದ ಈತ ಎಳೆಯಂದಿನಲ್ಲಿ ತುಂಬ ಶ್ರಮದಿಂದ ಬದುಕುತ್ತಿದ್ದರೂ, ತನಗೆ ದೊರೆತ ಶಿಕ್ಷಣದ ನೆರವಿನಿಂದ ಬಹುಬೇಗ ಇಂಗ್ಲಿಷ್ ಸಾಹಿತ್ಯ ಭಾಷೆಯ ಮೇಲೆ ಪ್ರಭುತ್ವವನ್ನು ಗಳಿಸಿಕೊಂಡು ತನ್ನ ಹದಿನೈದನೆಯ ವಯಸ್ಸಿನಲ್ಲಿಯೇ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ. ತನ್ನ ಗೆಳೆಯರ ಸಹಾಯದಿಂದ ಎಕ್ಸೈಸ್ ಡಿಪಾರ್ಟ್‌ಮೆಂಟಿನಲ್ಲಿ ಅವನಿಗೊಂದು ಸಣ್ಣ ಹುದ್ದೆ ದೊರಕಿತು. ೧೭೮೬ರ ವೇಳೆಗೆ ಪ್ರಕಟವಾದ ಅವನ ಮೊದಲ ಕವನ ಸಂಗ್ರಹವನ್ನು ಎಡಿನ್‌ಬರೋದ ಸಾರಸ್ವತ ವಲಯ ಗುರುತಿಸಿ, ಮೆಚ್ಚಿ ಕೊಂಡಾಡಿತು. ಜತೆಗೆ ಅವನ ಹುದ್ದೆಯಲ್ಲಿ ಬಡ್ತಿಯೂ ದೊರೆಯಿತು. ಆದರ  ಇಷ್ಟು ಜನಮನ್ನಣೆ ಗಳಿಸಿದ ಕವಿ ಹೆಚ್ಚು ಕಾಲ ಬದುಕಲಿಲ್ಲ. ೧೭೯೬ರಂದು ಸ್ಕಾಟ್‌ಲೆಂಡಿನ ಡುಂಪ್ರೈಸ್ (Dumfries)  ಎಂಬಲ್ಲಿ ಆತ ನಿಧನನಾದಾಗ ಅವನಿಗೆ ಕೇವಲ ಮೂವತ್ತೇಳು ವರ್ಷ.

ಬರ್ನ್ಸ್ ಕೇವಲ ಕವಿಯಾಗಿ ಮಾತ್ರವಲ್ಲ ಸಾಂಸ್ಕೃತಿಕ ವೀರನೆಂದು ಸ್ಕಾಟ್‌ಲೆಂಡಿನ ಜನರಿಂದ ಮಾನ್ಯನಾಗಿದ್ದಾನೆ. ಅವನ ಸೃಜನಶೀಲತೆ, ಸಮೃದ್ಧವಾದ ಜಾನಪದ ಜೀವನಾನುಭವಗಳಿಂದ, ಅವನು ಪ್ರೀತಿಸಿದ ಹೆಣ್ಣುಗಳ ನೆನಪುಗಳಿಂದ, ಅವನು ಕೈಕೊಂಡ ಪ್ರವಾಸಗಳಿಂದ – ಶ್ರೀಮಂತವಾಗಿದೆ. ಸ್ಕಾಟ್‌ಲೆಂಡಿನ ಮೊದಲ ಮತ್ತು ಮಹತ್ವದ ಜಾನಪದ ಹಾಡುಗಳ ಸಂಗ್ರಾಹಕನೆಂದು ಬರ್ನ್ಸ್ ಪರಿಗಣಿತನಾಗಿದ್ದಾನೆ. ಅವನ ಕವಿತೆಗಳು ಮುಖ್ಯವಾಗಿ ಮಾನವರೆಲ್ಲರೂ ಸಮಾನರೆಂಬ ಭ್ರಾತೃ ಭಾವನೆಯನ್ನು ಎತ್ತಿ ಹಿಡಿಯುತ್ತವೆ. ಸ್ಕಾಟ್‌ಲೆಂಡಿನ ದಕ್ಷಿಣಕ್ಕಿರುವ ಲೇಕ್ ಡಿಸ್ಟ್ರಿಕ್ಟ್‌ನ ಕವಿ ವರ್ಡ್ಸ್‌ವರ್ತ್ ಬರ್ನ್ಸ್‌ನ ಸಮಾಧಿಯ ಬಳಿ ನಿಂತು, ನೆನೆದು, ಅನಂತರ ಕವಿತೆಯೊಂದರ ಮೂಲಕ ತನ್ನ ಗೌರವ – ನಮನಗಳನ್ನು ಸಲ್ಲಿಸಿದ್ದಾನೆ.

ಅಲೌವೆಯ ಬರ್ನ್ಸ್ ಕಾಟೇಜ್‌ನ್ನು ನೋಡುತ್ತ ನಾನು ಇದನ್ನೆಲ್ಲ ನೆನೆದೆ. ಸುಮಾರು ಮೂರು ಶತಮಾನಗಳ ಹಿಂದಿನ ಈ ಹುಲ್ಲು ಗುಡಿಸಲು ಅಂದು ಹೇಗಿತ್ತೊ, ಇಂದೂ ಹಾಗೆಯೆ ಉಳಿದುಕೊಂಡಿದೆ. ಬರ್ನ್ಸ್ ಹುಟ್ಟಿದಂದಿನಿಂದ, ತನ್ನ ಬಾಲ್ಯದ ಏಳು ವರ್ಷಗಳನ್ನು ಕಳೆದದ್ದು ಇಲ್ಲಿ. ಸುಮಾರು ಮೂವತ್ತೈದು ಅಡಿ ಉದ್ದ, ಹತ್ತಡಿ ಅಗಲದ ಈ ಗುಡಿಸಲು ಮನೆಯ ಸುತ್ತಣ ನೆಲವನ್ನು ಸ್ವಾಧೀನಪಡಿಸಿಕೊಂಡು ಉದ್ಯಾನವೊಂದನ್ನು ನಿರ್ಮಿಸಲಾಗಿದೆ. ಈ ಪರಿಸರದಲ್ಲಿ ಈ ಮನೆಗೆ ಹೊಂದಿಕೊಂಡಂತೆ ಒಂದು ವಸ್ತು ಪ್ರದರ್ಶನಾಲಯ ಹಾಗೂ ಪುಸ್ತಕ ಮತ್ತು ಪಿಕ್ಚರ್ ಪೋಸ್ಟ್ ಕಾರ್ಡ್ ಮತ್ತಿತರ ನೆನಪಿನ ಕಾಣಿಕೆಗಳನ್ನು ಮಾರುವ ಮಳಿಗೆಯಿದೆ. ಈ ಆವರಣದ ಪ್ರವೇಶದ್ವಾರದಲ್ಲಿ ಮೂರು ಪೌಂಡ್ ಕೊಟ್ಟು ಕೊಂಡುಕೊಂಡ ಟಿಕೆಟ್‌ನ  ಜತೆಗೆ ಕಿವಿಗೆ ಜೋಡಿಸಿಕೊಳ್ಳುವ ಶ್ರವಣ ಸಾಧನವನ್ನೂ ಒದಗಿಸಲಾಗುತ್ತದೆ. ಅದನ್ನು ಹಾಕಿಕೊಂಡು ಈ ಗುಡಿಸಲು ಮನೆಯ ಮರದ ಬಾಗಿಲನ್ನು ದಬ್ಬಿಕೊಂಡು ಒಳಗೆ ಪ್ರವೇಶಿಸಿದರೆ, ಎಡಗಡೆಯ ಸಣ್ಣ ಕೋಣೆಯ ಗೋಡಗೆ ತಗುಲಿ ಹಾಕಿದ ಬಿಳಿಯ ಪರದೆಯ ಮೇಲೆ, ಪ್ರತಿ ಹತ್ತು ನಿಮಿಷಕ್ಕೆ ಒಮ್ಮೆ ತೋರಿಸಲಾಗುವ ಬರ್ನ್ಸ್ ಕವಿಯ ಬಗೆಗಿನ ಕಿರು ಸಾಕ್ಷ್ಯಚಿತ್ರ ಪ್ರದರ್ಶನವನ್ನು ಕಾಣುತ್ತ, ಕಿವಿಗೆ ಹಾಕಿಕೊಂಡ ಶ್ರವಣ ಸಾಧನದ ಮೂಲಕ ವಿವರಗಳನ್ನು ಕೇಳುತ್ತ ಸಂತೋಷಪಡಬಹುದು. ಬರ್ನ್ಸ್ ಹುಟ್ಟಿ ಬೆಳೆದ ಗ್ರಾಮಾಂತರ ಪರಿಸರ, ಅವನ ಬದುಕಿನ ಹಿನ್ನೆಲೆ – ಇತ್ಯಾದಿಗಳನ್ನು ಈ ಚಿತ್ರ ಪ್ರದರ್ಶನ ಪರಿಚಯ ಮಾಡಿಕೊಡುತ್ತದೆ. ಈ ಕೊಠಡಿಯಿಂದ ಈಚೆಯ ಕೋಣೆಗೆ ಬಂದರೆ ಅದೊಂದು ಚಿಕ್ಕ ಅಡುಗೆ ಮನೆ. ಅಡುಗೆ ಮನೆಯಲ್ಲಿ ಅಸ್ತವ್ಯಸ್ತವಾಗಿ ಬಿದ್ದ ಬುಟ್ಟಿ, ಪಾತ್ರೆ – ಪಡಗಗಳ ನಡುವೆ,  ಒಲೆಯ ಬದಿಯಲ್ಲಿ ಹಾಯಾಗಿ ಒಂದು ಬೆಕ್ಕು, ಈ ಅಡುಗೆ ಮನೆಯ ಪಕ್ಕದಲ್ಲಿ ಡೈನಿಂಗ್ ಹಾಲ್, ಅದೂ ತೀರಾ ಚಿಕ್ಕದು. ಅಲ್ಲೊಂದು ಊಟದ ಮೇಜು. ಸುತ್ತ ಮೂರು ಕುರ್ಚಿಗಳು. ಒಂದು ಕುರ್ಚಿಯ ಮೇಲೆ ಬರ್ನ್ಸ್‌ನ ತಂದೆ ಪುಸ್ತಕವೊಂದನ್ನು  ತೆರೆದು ಏನೋ ಓದಿ ಹೇಳುತ್ತಿದ್ದಾನೆ. ಎದುರಿನ ಕುರ್ಚಿಯ ಮೇಲೆ ಬರ್ನ್ಸ್‌ನ ತಾಯಿ. ಅವಳ ತೊಡೆಯ ಮೇಲೊಂದು ಮಗು. ಅವಳಿಗೆ   ಒತ್ತಿಕೊಂಡು ಅವಳ ಕಾಲಬದಿಗೆ ನಿಂತ ಮತ್ತೊಂದು ಹುಡುಗ. ಆ ಹುಡುಗನ ಪಕ್ಕದಲ್ಲಿ ಕುರ್ಚಿಗೆ ಒರಗಿಕೊಂಡು ನಿಂತ ಬಾಲಕನಾದ ಬರ್ನ್ಸ್. ಇದು ಹಳ್ಳಿಯ ರೈತ ಕುಟುಂಬದ ಒಂದು ಚಿತ್ರ. ಈ ಊಟದ ಕೋಣೆಯ ಪಕ್ಕದ್ದು ದನದ ಮನೆ. ಅಲ್ಲೊಂದು ಹಸು ನಿಂತಿದೆ. ಮೂಲೆಯಲ್ಲೊಂದು ಕೋಳಿ. ಹದಿನೆಂಟನೆ ಶತಮಾನದ ಎಂಥ ರೈತನ ಮನೆಯೊಳಗೆ ಕವಿ ಬರ್ನ್ಸ್ ಹುಟ್ಟಿ ಬೆಳೆದನೆಂಬುದನ್ನು ತೋರಿಸುವ ಪ್ರತಿಕೃತಿಗಳ ಒಂದು ಸ್ತಬ್ಧ ಚಿತ್ರ ಇದು.

ಬರ್ನ್ಸ್ ಹುಟ್ಟಿ ಬೆಳೆದ ಈ ಗುಡಿಸಿಲಿಗೆ ಹುಲ್ಲಿನ ಛಾವಣಿಯಿದೆ. ಅದು ರೈ ಎಂಬ ಧಾನ್ಯದ ಹುಲ್ಲು. ಮನೆಯ ಗೋಡೆಗಳೆಲ್ಲ ನಮ್ಮ ಕಡೆಯ ಹಳ್ಳಿಯ ಮನೆಗಳಿಗಿದ್ದಂತೆಯೆ. ಈ ಕಾಟೇಜ್‌ದಿಂದ ಸ್ವಲ್ಪ ದೂರದಲ್ಲಿ ‘ಟಾಂ ಓ ಷಾಂಟರ್’ ಎಂಬ ಇನ್ನೊಂದು ಸ್ಮಾರಕವಿದೆ. ಅಲ್ಲಿ ಒಂದು ಟೀಷಾಪ್, ಒಂದು ರಂಗಮಂದಿರ, ಅದರ ಸುತ್ತ ವಿಸ್ತಾರವಾದ ಉದ್ಯಾನಗಳಿವೆ. ‘ಟಾಂ ಓ ಷಾಂಟರ್’ ಎಂಬುದು ಬರ್ನ್ಸ್ ಬರೆದ ಒಂದೇ ಒಂದು ಕಥನ ಕವನ. ಬರ್ನ್ಸ್ ತನ್ನ ಎಳೆಯಂದಿನಲ್ಲಿ ಕೇಳಿದ, ಮಾಟ – ಮಂತ್ರಾದಿ ಹಾಗೂ ತಮಾಷೆಗಳನ್ನು ಒಳಗೊಂಡ ಜಾನಪದ ಕತೆಯೆ ಇದರ ವಸ್ತು. ಈ ಕಥನ ಕವನದ ರಂಗಪ್ರಯೋಗ ಇಲ್ಲಿನ ರಂಗಮಂದಿರದಲ್ಲಿ ಪ್ರದರ್ಶಿತವಾಗುತ್ತದೆ. ಒಬ್ಬ ಕವಿಯ ನೆನಪನ್ನು ತಕ್ಕ ಪ್ರೀತಿಗೌರವಗಳಿಂದ ಎಷ್ಟು ಉಜ್ವಲವಾಗಿ ಉಳಿಸಬಹುದು ಎಂಬುದರ ಸಂಕೇತಗಳಾಗಿವೆ ಈ ಸ್ಮಾರಕಗಳು.

ಇಷ್ಟನ್ನು ನೋಡುವ ವೇಳೆಗೆ ಹೊತ್ತು ನೆತ್ತಿಗೇರಿತ್ತು. ಹಿಂದಿನ ಈ ದಿನದಂತಲ್ಲದೆ ಈ ದಿನದ ಹವಾಮಾನ, ನಮ್ಮ ಮೇಲೆ ಕೃಪೆದೋರಿ, ಸೂರ್ಯನ ಬಿಸಿಲು ಧಾರಾಳವಾಗಿತ್ತು. ಬರ್ನ್ಸ್ ಕಾಟೇಜನ್ನು ಹಿಂದೆ ಹಾಕಿ, ಕಾರು ಐರಿಷ್ ಸಮುದ್ರದ ಪಕ್ಕದ ದಾರಿಯಲ್ಲಿ ಧಾವಿಸುತ್ತಿತ್ತು. ಒಂದು ಕಡೆ ಶ್ಯಾಮಲವಾಗಿ ಚಾಚಿಕೊಂಡ ಕಡಲು, ಮತೊಂದು ಕಡೆ ಹಚ್ಚ ಹಸುರಿನ ಏರಿಳಿತಗಳು. ಕೊಂಚ ದೂರ ಮುಂದುವರಿದಂತೆ, ನಮ್ಮ ಕಣ್ಣಿಗೆ ಹಠಾತ್ತನೆ ಕಡಲ ನಡುವೆ ಬೃಹದಾಕಾರವಾಗಿ  ಶಿವಲಿಂಗದಂತೆ ಎದ್ದು ಕೂತ ಶೈಲವೊಂದು ಗೋಚರವಾಯಿತು. ಎತ್ತ ನೋಡಿದರೂ  ನಿಸ್ಸೀಮವಾಗಿ ಚಾಚಿಕೊಂಡ ಹಾಗೂ ಪ್ರಕ್ಷುಬ್ಧವಾದ ಕಡಲು; ಆ ಕಪ್ಪು ಕಡಲ ಅಲ್ಲೋಲ ಕಲ್ಲೋಲದ ನಡುವೆ ಒಂದು ಏಕಶಿಲಾ ಸದೃಶವಾದ ಬೆಟ್ಟ. ನಿರಂತರ ಚಲನೆಯ ಆ ಕಡಲ ನಡುವೆ ಧೀರವಾಗಿ, ಗಂಭೀರವಾಗಿ, ಬಹುಮಟ್ಟಿಗೆ ಗೋಳಾಕಾರವಾಗಿ ಕೂತ ಆ ಬೆಟ್ಟ, ಸಂಯಮದ, ಶಾಂತಿಯ, ಧ್ಯಾನದ ಒಂದು ಪ್ರತೀಕದಂತೆ ಭಾಸವಾಯಿತು. ಅದುವರೆಗೂ ಕಂಡ ರೂಕ್ಷವಾದ ಪರ್ವತದ ಏರುವೆಗಳು, ಆಳವಾದ ಕಣಿವೆಗಳು, ಅರಣ್ಯಗಳು, ಸರೋವರಗಳು ಇತ್ಯಾದಿ ದೃಶ್ಯ ವೈವಿಧ್ಯಗಳು ನಮ್ಮಲ್ಲಿ ಉಂಟು ಮಾಡಿದ ಭಯ, ವಿಸ್ಮಯ, ಕುತೂಹಲ ಇತ್ಯಾದಿ ಭಾವಗಳಿಗೂ, ಈ ವಿಸ್ತಾರವಾದ ಕಡಲ ನಡುವೆ ಏಕಾಂಗಿಯಾಗಿ ಧೀರವಾಗಿ, ಅಚಂಚಲವಾಗಿ ಕೂತ ಈ ಗಿರಿಯು ನಮ್ಮಲ್ಲಿ ಪ್ರಚೋದಿಸಿದ ಆನುಭಾವಿಕ ಅಥವಾ ಅಧ್ಯಾತ್ಮಿಕ ಭಾವಗಳಿಗೂ ಇರುವ ವ್ಯತ್ಯಾಸ ಸ್ವಯಂವೇದ್ಯವಾಗಿತ್ತು.

ನಿಂತಲ್ಲೇ ನಿಂತು ಈ ದೃಶ್ಯವೈಭವದ ಅಯಸ್ಕಾಂತ ಸೆಳೆತಕ್ಕೆ ಸಿಕ್ಕಿಕೊಂಡ ಕಣ್ಣುಗಳನ್ನು ಬಿಡಿಸಿಕೊಂಡು, ಕಾರನ್ನು ಮುಖ್ಯ ರಸ್ತೆಯಿಂದ ಗರ್ವಿನ್ ಎಂಬ ಹಳ್ಳಿಯ ಬದಿಯಿಂದ ಹೊರಳಿಸಿ ನೇರವಾಗಿ ಕಡಲತೀರಕ್ಕೆ ಬಂದೆವು. ಕ್ರಾಯ್ ಬೇ ಎಂದು ಫಲಕದ ಮೂಲಕ ಸೂಚಿಸಲಾದ ಆ ಸ್ಥಳದಲ್ಲಿ  ವಾಹನವನ್ನು ನಿಲ್ಲಿಸಿ, ಮತ್ತಷ್ಟು ಹೊತ್ತು, ನಿಶ್ಚಲಧ್ಯಾನವೇ ಪ್ರಕ್ಷುಬ್ಧ ಕಡಲ ನಡುವೆ ಮೂರ್ತೀ ಭವಿಸಿದಂತಿದ್ದ, ಆ ಬೃಹದ್ ಶಿಲಾಮಂಡಲವನ್ನು ನೋಡುತ್ತ ಕುಳಿತೆವು. ಅನಂತರ ಮನೆಯಿಂದ ಕಟ್ಟಿಕೊಂಡು ತಂದ ಚಿತ್ರಾನ್ನ ಮೊಸರನ್ನವನ್ನು ತಿಂದು – ಬಿಡಲಾರದ ಮನಸ್ಸಿನಿಂದ ಆ ಸ್ಥಳವನ್ನು ಬಿಟ್ಟು ಮತ್ತೆ ಮುಖ್ಯ ರಸ್ತೆಯನ್ನು ಸೇರಿ ಏರ್ ಷೈರ್ ಕಡೆಗೆ ಹೊರಟೆವು. ಸ್ವಲ್ಪ ದೂರ ಹೋಗುವ ವೇಳೆಗೆ ದಾರಿಯ ಬದಿಯಲ್ಲಿ ‘ಎಲೆಕ್ಟ್ರಿಕ್ ಬ್ರೇ’ – Electric Bray ಎಂಬ ಬೋರ್ಡೊಂದು ಕಾಣಿಸಿತು. ಡಾ. ಕಮಲಾ ಅವರು ‘ಈಗ ನಿಮಗೊಂದು ತಮಾಷೆ ತೋರಿಸುತ್ತೇನೆ’ ಎಂದರು. ಅದೊಂದು ಗುಡ್ಡದ ಸಾನು ಪ್ರದೇಶ. ಅಲ್ಲಿ ನಮ್ಮ ಎದುರಿನ ರಸ್ತೆ ಕೆಳಗಿನಿಂದ ಮೇಲೇರಿ ಹೋದಂತೆ ಕಾಣುತ್ತದೆ. ಮುಂದೆ ಸ್ಪಷ್ಟವಾದ ಏರುವೆ-up ಗೋಚರಿಸುತ್ತಿದೆ. ಡಾ. ಕಮಲಾ ಅವರು ಕಾರಿನ ಎಂಜಿನ್ನನ್ನು off ಮಾಡಿ, ಗೇರನ್ನು ನ್ಯೂಟ್ರಲ್ಲಿಗೆ ತಂದರು. ಈಗ ಕಾರು, ಮುಂದೆ ಅಪ್ up ಇರುವ ಕಾರಣದಿಂದ ಹಿಂದಕ್ಕೆ ಹೋಗಬಹುದೆಂದು ಊಹಿಸುತ್ತಿದ್ದ ನನ್ನ ಲೆಕ್ಕಚಾರವನ್ನೆ ತಲೆಕೆಳಗು ಮಾಡಿದಂತೆ, ಅದು ಮುಂದಿನ up ನ್ನು ಸಲೀಸಾಗಿ ಏರುತ್ತಿದೆ! ಇದೇನಾಶ್ಚರ್ಯ, ನಿಸರ್ಗದ ನಿಯಮವೇ ತಲೆಕೆಳಗಾಗುತ್ತಿದೆಯಲ್ಲ, ಮೇಲಿಂದ ಕೆಳಗೆ ತಾನಾಗಿಯೆ ಇಳಿಯುವಂತೆಯೇ, ಈಗ ಕೆಳಗಿನಿಂದ ಮೇಲಕ್ಕೂ ಏರುತ್ತಿದೆಯಲ್ಲ ಅನ್ನಿಸಿ ನಾನು ಗಲಿಬಿಲಿಗೊಂಡೆ. ಈ ನೆಲದ ಗುಣದಲ್ಲೇನಾದರೂ ವಿಶೇಷವಾದ ಅಯಸ್ಕಾಂತ ಶಕ್ತಿಯೇನಾದರೂ ಇದೆಯೋ! ಈ ರಸ್ತೆಯ ಕಾಲು ಮೈಲಿಯಷ್ಟು ಉದ್ದದಲ್ಲಿ ಈ ಸೋಜಿಗವನ್ನು ಗುರುತಿಸಿದ ಸಂಚಾರಿಗರೆಲ್ಲರೂ ಬಹುಕಾಲದಿಂದ ಹೀಗೆಯೇ ಭಾವಿಸಿದ್ದರಂತೆ. ಜಗತ್ತಿನ ವಿಜ್ಞಾನಿಗಳೆಲ್ಲ ಇಲ್ಲಿಗೆ ಬಂದು ಕುತೂಹಲದಿಂದ ಪರೀಕ್ಷೆಯನ್ನು ನಡೆಸಿದರಂತೆ. ಅದರ ಪರಿಣಾಮವಾಗಿ ಹೊರಬಿದ್ದ ಸತ್ಯವೇನೆಂದರೆ   ಸಮುದ್ರ ಮಟ್ಟದಿಂದ ಇನ್ನೂರ ತೊಂಬತ್ತಾರು ಅಡಿ ಎತ್ತರದಲ್ಲಿ ಹಾದು ಹೋಗುವ ದಾರಿಯ ಈ ನಿರ್ದಿಷ್ಟ ಪ್ರದೇಶ (ಕಾಲು ಮೈಲಿ ಉದ್ದ) ದ, ರಸ್ತೆಯ ಕೆಳಭಾಗ ವಾಸ್ತವವಾಗಿ ಹದಿನೇಳು ಅಡಿ ಎತ್ತರವಾಗಿದ್ದರೂ, ಅತ್ತ ಇತ್ತ ಚಾಚಿಕೊಂಡ ಕಡಲು ಹಾಗೂ ನೆಲದ ದೃಶ್ಯಗಳ ಮಿಶ್ರಣದಿಂದ ಅದು ತಗ್ಗಿನಂತೆಯೇ ದೃಷ್ಟಿಗೆ ಭಾಸವಾಗುತ್ತದೆ. ಅದ ಕಾರಣ ನಾವು ಗತ್ತಿನಿಂದ ಎತ್ತರದ ಕಡೆ ಹೋಗುತ್ತಿದ್ದೇವೆ ಅಂದುಕೊಳ್ಳುತ್ತ ಇದ್ದರೆ, ನಮ್ಮ ವಾಹನ ವಾಸ್ತವವಾಗಿ ಇಳಿಜಾರಿನಲ್ಲೆ ಇರುವುದರಿಂದ, ಅದು ಅಪ್ರಯತ್ನಪೂರ್ವಕವಾಗಿ, ಚಲಿಸುತ್ತ ನಮಗೆ ವಿಸ್ಮಯವನ್ನು ಉಂಟುಮಾಡುತ್ತದೆ. ನಿಜವಾಗಿ ನೋಡಿದರೆ ಇಲ್ಲಿ ಯಾವ ಆಶ್ಚರ್ಯವೂ ಇಲ್ಲ. ಮುಂದಿನ ‘ಏರು’ ಇಳಿಜಾರಿನಂತೆ ಕಾಣುವುದು ಕೇವಲ ನಮ್ಮ ದೃಷ್ಟಿ ಭ್ರಮೆಯ -Optical illusion- ಪರಿಣಾಮ.

‘ಬರ್ನ್ಸ್ ಕಂಟ್ರಿ’ ಎಂದು ಕರೆಯಲಾಗುವ ಏರ್‌ಷೈರಿನ ಕಡಲತೀರದ ಪರಿಸರದಿಂದ, ಕಾರು ಮತ್ತೆ ಗೌರಕ್ ಕಡೆಯ ಪರ್ವತಾರಣ್ಯಗಳ ದಾರಿಯಲ್ಲಿ ಧಾವಿಸುತ್ತಿತ್ತು. ಮೂರು ದಿನಗಳ ಕಾಲ ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಬದಿಗಿಟ್ಟು, ಅತಿಥಿಯಾದ ನನ್ನನ್ನು ವಿಶ್ವಾಸದಿಂದ ನೋಡಿಕೊಂಡು, ಕಾಡು – ಮೇಡುಗಳಲ್ಲಿ, ಪರ್ವತ – ಕಣಿವೆಗಳಲ್ಲಿ, ನದಿ – ಸರೋವರಗಳಲ್ಲಿ, ನನ್ನನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಸುತ್ತುವ ಶ್ರಮವಹಿಸಿದ ಡಾ. ಕಮಲಾ ಅವರ ಸೌಜನ್ಯವನ್ನೂ, ವಿಶ್ವಾಸವನ್ನೂ ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತ ಮೂಕನಾಗಿ ಕೂತೆ.