ಪ್ರತಿ ಒಂದು ಸಾವಿರ ಜನಸಂಖ್ಯೆಗೆ ಇಬ್ಬರು ಅಥವಾ ಮೂವರಿಗೆ ಇರುವ ಈ ಕಾಯಿಲೆ ಬಡವ- ಶ್ರೀಮಂತ, ಹಳ್ಳಿಗ- ಪಟ್ಟಣಿಗ ಎನ್ನದೆ ಯಾರನ್ನಾದರೂ ಕಾಡಬಲ್ಲದು.

ಸಾಮಾನ್ಯವಾಗಿ 15-30 ವರ್ಷದವರಲ್ಲಿ ಕ್ರಮೇಣವಾಗಿ ಅಥವಾ ಹಠಾತ್ತನೆ ಪ್ರಾರಂಭವಾಗಬಹುದು. ವ್ಯಕ್ತಿಯ ಆಲೋಚನೆ, ಮಾತು, ವಿಚಾರ, ನಡವಳಿಕೆ, ಪ್ರತಿಕ್ರಿಯೆಗಳು ಅಸಂಬದ್ಧವಾಗಿರುತ್ತವೆ, ಇಲ್ಲವೇ ಅರ್ಥಹೀನವಾಗಿರುತ್ತವೆ. ವಿವಿಧ ರೀತಿಯ ಭ್ರಮೆಗಳು, ಸಂಶಯಗಳು ರೋಗಿಯನ್ನು ಆವರಿಸುತ್ತವೆ. ರೋಗಿ ವಾಸ್ತವಿಕತೆಯನ್ನು ಮರೆತು ತನ್ನ ಭ್ರಮಾಲೋಕದಲ್ಲೇ ಇರುತ್ತಾನೆ. ತನ್ನ ಬೇಕು- ಬೇಡಗಳನ್ನು, ಕೆಲಸ- ಕರ್ತವ್ಯಗಳನ್ನು ನಿರ್ಲಕ್ಷಿಸುತ್ತಾನೆ.

ಸಾಮಾನ್ಯವಾಗಿ ನಾಲ್ಕು ಬಗೆಯ ಸ್ಕಿಜೋಫ್ರೀನಿಯಾ ಕಾಣಿಸಿಕೊಳ್ಳುತ್ತದೆ. ಅವುಗಳನ್ನು ಒಂದೊಂದಾಗಿ ಗಮನಿಸುವುದಾದರೆ;

1. ನಿರಾಸಕ್ತಿ: ಅದುವರೆಗೆ ಚುರುಕಾಗಿ ಚಟುವಟಿಕೆಯಿಂದ ಇದ್ದ ವ್ಯಕ್ತಿ ಕ್ರಮೇಣ ಮಂಕಾಗುತ್ತಾನೆ. ಎಲ್ಲದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಯಾವ ಕೆಲಸವನ್ನೂ ಮಾಡದೇ ಸೋಮಾರಿಯಂತೆ ಕಾಲ ಕಳೆಯುತ್ತಾನೆ. ವಿದ್ಯಾರ್ಥಿಯಾದರೆ ಶಾಲೆ- ಕಾಲೇಜಿಗೆ ಹೋಗುವುದಿಲ್ಲ. ಹೋದರೂ ಕಲಿಕೆಯಲ್ಲಿ ಹಿಂದೆ ಬೀಳುತ್ತಾನೆ. ಫೇಲಾಗುತ್ತಾನೆ. ಸ್ನೇಹಿತರೊಡನೆ, ನೆಂಟರಿಷ್ಟರೊಡನೆ ಮಾತು ಕಡಿಮೆ ಮಾಡುತ್ತಾನೆ. ತನ್ನ ಅಲಂಕಾರ, ಕೊನೆಗೆ ಬೇಕು- ಬೇಡಗಳನ್ನು ಕೂಡ ನಿರ್ಲಕ್ಷಿಸುತ್ತಾನೆ.

2. ಸಂಶಯ ಪೀಡಿತ: ತನ್ನ ಮನೆಯವರು, ಮಿತ್ರರು, ಸಹೋದ್ಯೋಗಿಗಳ ಮೇಲೆ ಸಂಶಯಪಡಲು ಪ್ರಾರಂಭಿಸುತ್ತಾನೆ. ಎಲ್ಲರೂ ತನ್ನ ವಿರೋಧವಿದ್ದಾರೆ, ತನಗೆ ಹಾನಿಯುಂಟು(ಕೆಡುಕು) ಮಾಡಲು ಸಂಚು ಮಾಡುತ್ತಿದ್ದಾರೆ, ತನ್ನ ಆಸ್ತಿ- ಪಾಸ್ತಿ ಲಪಟಾಯಿಸಲು, ತನಗೆ ಅಪಮಾನ ಮಾಡಲು ಪ್ರಯತ್ನಿಸುತ್ತಿದ್ದಾರೆ, ತನ್ನನ್ನು ಹಿಂಬಾಲಿಸುತ್ತಾರೆ. ತನ್ನ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎಂದುಕೊಳ್ಳಬಹುದು. ಎಲ್ಲರಿಂದ ದೂರವಿರಲು, ಆತ್ಮರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಈ ವಿಚಾರವಾಗಿ ಆತ ಪೊಲೀಸರಿಗೆ ದೂರು ಕೂಡ ನೀಡಬಹುದು. ಇತರರ ಮೇಲೆ ಆಕ್ರಮಣ ಮಾಡಬಹುದು. ಹಿಂಸಾಚಾರಕ್ಕೂ ಇಳಿಯಬಹುದು.

3. ಭ್ರಮಾಧೀನ: ಈ ರೋಗದ ಅತ್ಯಂತ ವಿಚಿತ್ರ ಲಕ್ಷಣವೆಂದರೆ; ಶೂನ್ಯದಲ್ಲಿ ರೋಗಿಗೆ ಯಾರೋ ಮಾತಾಡಿದಂತೆ ಸದ್ದು ಕೇಳಿಸಬಹುದು. ಅಥವಾ ಹಲವರು ತಮ್ಮ- ತಮ್ಮಲ್ಲೇ ರೋಗಿಯ ಬಗ್ಗೆ ಮಾತಾಡಿಕೊಂಡಂತೆ, ರೋಗಿಗೆ ಹೀಗೆ ಮಾಡು, ಹಾಗೆ ಮಾಡಬೇಡ ಎಂದು ಆಜ್ಞೆ ಮಾಡಿದಂತೆ ಕೇಳಿಸಬಹುದು. ಅವನನ್ನು ಹೆದರಿಸುವ, ಬೆದರಿಸುವ ದನಿಗಳು ಕೂಡ ಕೇಳಬಹುದು. ಸುತ್ತ- ಮುತ್ತ ಯಾರೂ ಇರದಿದ್ದರೂ ಯಾರೋ ಇದ್ದಂತೆ ಅಥವಾ ವಸ್ತುಗಳು, ದೃಶ್ಯಗಳು ಕಾಣಿಸಬಹುದು.

ಕೆಟ್ಟ ಅಥವಾ ಒಳ್ಳೆಯ ವಾಸನೆಯ ಅನುಭವವಾಗಬಹುದು. ಸ್ಪರ್ಶದ ಅನುಭವವಾಗಬಹುದು. ಯಾರದೋ ಹೆಜ್ಜೆಯ ಸದ್ದು ಕೇಳಿದರೆ ಪೊಲೀಸರೋ ಅಥವಾ ತನ್ನ ಶತೃಗಳೋ ತನ್ನನ್ನು ಕೊಲ್ಲಲು ಬರುತ್ತಿದ್ದಾರೆ ಎನ್ನಬಹುದು. ತನ್ನ ಹೃದಯ, ಕರುಳು ಸುಟ್ಟುಹೋಗಿದೆ ಎನ್ನಿಸಿ ಸುಟ್ಟ ವಾಸನೆ ಬರುತ್ತಿದೆ ಎಂದು ಹೇಳಬಹುದು. ತನ್ನ ಆಹಾರದಲ್ಲಿ ಯಾರೋ ವಿಷ ಬೆರೆಸಿರುವುದರಿಂದ ಅದರ ರುಚಿ ಬದಲಾಗಿದೆ ಎನ್ನಬಹುದು. ಈ ರೀತಿ ಭ್ರಮಾಧೀನನಾಗಿ ರೋಗಿ ಆತ್ಮಹತ್ಯೆಗೆ ಪ್ರಯತ್ನಿಸಬಹುದು. ಇತರರೊಂದಿಗೆ ಜಗಳ ಕಾಯಬಹುದು. ಮನೆ ಬಿಟ್ಟು ಓಡಿ ಹೋಗಬಹುದು. ಗೊತ್ತು- ಗುರಿಯಿಲ್ಲದೆ ಅಲೆದಾಡಬಹುದು.

4. ವಿಪರೀತವಾಗಿ, ಅಸಂಬದ್ಧವಾಗಿ, ಅರ್ಥಹೀನವಾಗಿ ಮಾತನಾಡುತ್ತಾ ಅಸಭ್ಯವಾಗಿ ನಡೆದುಕೊಳ್ಳುತ್ತಾ ರಸ್ತೆಯಲ್ಲಿ ಬಿದ್ದಿರುವ ಕಾಗದ, ಅನುಪಯುಕ್ತ ವಸ್ತುಗಳನ್ನು ಅಮೂಲ್ಯವಾದ ವಸ್ತುಗಳೆಂಬಂತೆ ಹೆಕ್ಕಿ, ಗಂಟು ಕಟ್ಟಿ ತನ್ನ ಬಳಿಯಲ್ಲಿ ಅಥವಾ ಮನೆಯೊಳಗೆ ತಂದಿಟ್ಟುಕೊಳ್ಳಬಹುದು. ಸ್ನಾನ ಮಾಡದೇ, ಬಟ್ಟೆ ಬದಲಿಸದೆ ಅತ್ಯಂತ ಕೊಳಕಾಗಿ ಎಲ್ಲೆಂದರಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುತ್ತಾ ಇತರರಿಗೆ ಅಸಹ್ಯವನ್ನುಂಟುಮಾಡಬಹುದು. ಪರಿಚಯದವರನ್ನು ಗುರುತಿಸದೇ ಅಪರಿಚಿತರೊಡನೆ ಸಲುಗೆಯಿಂದ ವರ್ತಿಸಬಹುದು. ಸಮಯ- ಸಂದರ್ಭಕ್ಕೆ ಹೊಂದದ ಭಾವನೆಗಳನ್ನು ಪ್ರಕಟಿಸಬಹುದು. ಆಗ ಜನ ಈ ರೋಗಿಯನ್ನು ‘ಹುಚ್ಚ’ ಅಥವಾ ‘ಹುಚ್ಚಿ’ ಎಂದು ಕರೆಯುತ್ತಾರೆ.

ರೋಗದ ಕಾರಣ: ಮಿದುಳಿನ ಅಸಂಖ್ಯಾತ ನರಕೋಶಗಳಲ್ಲಿ ಡೊಪಮಿನ್, ಗ್ಲುಟಮೇಟ್ ಇತ್ಯಾದಿ ನರವಾಹಕ ವಸ್ತುಗಳು ಏರುಪೇರಾಗುವುದು ಸ್ಕಿಜೋಫ್ರೀನಿಯಾ ರೋಗಕ್ಕೆ ಕಾರಣ ಎನ್ನಲಾಗುತ್ತಿದೆ. ಶೇ.10ರಷ್ಟು ಪ್ರಕರಣಗಳಲ್ಲಿ ರೋಗ ಅನುವಂಶೀಯವಾಗಿ ಬರಬಹುದು. ಅತಿ ಜನ ಸಾಂಧ್ರತೆ, ಮೇಲಿಂದ ಮೇಲೆ ಬರುವ ಕಷ್ಟನಷ್ಟಗಳು, ನಿರಾಶೆ, ಅತಿಯಾದ ಮಾನಸಿಕ ಒತ್ತಡ ಕೂಡ ಕಾಯಿಲೆ ಪ್ರಕಟಗೊಳ್ಳಲು ಪ್ರೇರಣೆ ನೀಡಬಹುದು. ಹಲವು ವರ್ಷಗಳ ಕಾಲ ಕಾಯಿಲೆ ಇದ್ದವರಲ್ಲಿ ರೋಗಿಯ ಮಿದುಳು ಸವೆಯುತ್ತದೆ ಎಂಬುದೂ ಗಮನಾರ್ಹ.

ಚಿಕಿತ್ಸೆ: ಸ್ಕಿಜೋಪ್ರೀನಿಯಾ ರೋಗಕ್ಕೆ ಈಗ ಪರಿಣಾಮಕಾರಿಯಾದ ಚಿಕಿತ್ಸೆಗಳಿವೆ. ಔಷಧ, ವಿದ್ಯುತ್ ಕಂಪನ ಚಿಕಿತ್ಸೆ, ಚಟುವಟಿಕೆಯಿಂದಿರಲು ಮತ್ತು ಉದ್ಯೋಗ ಮಾಡಲು ತರಬೇತಿ ನೀಡಿ ಪುನಃಶ್ಚೇತನ ಚಿಕಿತ್ಸೆಯಿಂದ ರೋಗಿ ಗುಣಮುಖನಾಗುತ್ತಾನೆ.

ಇತ್ತೀಚಿನ ಔಷಧಗಳಾದ ರಿಸ್ಪಿರಿಡಾನ್, ಒಲಾಂಜೆಪಿನ್, ಅರಿಪಿಪ್ರಜೋಲ್, ಕ್ವಿಟಪಿನ್, ಅಮಿಸಲ್ಪ್ರೈಡ್, ಕ್ಲೋಜಪಿನ್ ಬಳಕೆಯಲ್ಲಿವೆ. 15 ದಿನಗಳಿಗೊಮ್ಮೆ ಕೊಡಬಹುದಾದಂತಹ ಇಂಜೆಕ್ಷನ್ ಔಷಧ ಕೂಡ ಲಭ್ಯವಿದೆ. ಒಂದೆರಡು ವರ್ಷ ಅಥವಾ ಹಲವು ವರ್ಷ ಕಾಲ ನಿರಂತರವಾಗಿ ಔಷಧವನ್ನು ಸೇವಿಸಬೇಕು. ವೈದ್ಯರ ಮಾರ್ಗದರ್ಶನ ಇರಬೇಕು.

ಮನೆಯವರ ಪ್ರೀತಿ, ಆಸರೆ, ಮಾಡಲೊಂದು ಕೆಲಸವಿದ್ದರೆ ಕಾಯಿಲೆ ಬೇಗ ಗುಣವಾಗುತ್ತದೆ. ಶೇ.60-70ರಷ್ಟು ರೋಗಿಗಳು ಗುಣಮುಖರಾಗಿ ಸಮಾಜದಲ್ಲಿ ಉಪಯುಕ್ತವಾದ ಜೀವನ ನಡೆಸಬಲ್ಲರೆಂಬುದು ಗಮನಾರ್ಹ. ಉಳಿದವರು ಮನೆಯವರ ಆಶ್ರಯದಲ್ಲೇ ಇರಬೇಕಾಗುತ್ತದೆ. ಮನೆಯವರಿಲ್ಲದವರಿಗೆ ಆಶ್ರಯಧಾಮಗಳ ಅಗತ್ಯವಿದೆ.

ನೆನಪಿಡಿ; ಬೇಗ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ, ಮನೆಯವರ ಪ್ರೀತಿ- ವಿಶ್ವಾಸ ದೊರೆತರೆ ಸ್ಕಿಜೋಫ್ರೀನಿಯಾ ರೋಗ ಹತೋಟಿಗೆ ಬರಬಲ್ಲದು. ಕ್ರಮಬದ್ಧ ಚಿಕಿತ್ಸೆಯಿಂದ ಮಾನಸಿಕ ಅಂಗವೈಕಲ್ಯವನ್ನೂ ತಡೆಗಟ್ಟಬಹುದು.