ಸುಳ್ಯ ತಾಲೂಕು, ರಂಗರಾಯ ಮಾಡುವ ನಮಸ್ಕಾರ, ನನ್ನ ಮಗಳು, ಇಪ್ಪತ್ತೆರಡು ಇಪ್ಪತ್ತಮೂರು ವರ್ಷ ಪ್ರಾಯದ ಹುಡುಗಿಗೆ ಮಾನಸಿಕ ಕಾಯಿಲೆ ಶುರುವಾಗಿ ಮೂರು ವರ್ಷ. ಚಿಹ್ನೆಗಳು, ಸಾಧಾರಣವಾಗಿ ಪ್ರತಿ ದಿವಸಕ್ಕೆ ಒಂದೆರಡು ಸಲ ಅನಾವಶ್ಯಕ ನಗೆ, ವಾರಕ್ಕೊಮ್ಮೆ ಒಂದೆರಡು ದಿವಸ ಕೂಗುವ ಅಭ್ಯಾಸ, ಬಾಯಿಯಲ್ಲಿ ಯಾವಾಗಲೂ ಗುನು ಗುನು ಅರ್ಥವಿಲ್ಲದ ಉಚ್ಛಾರ, ಹೊಟ್ಟೆ ಒಳಗೆ ತಿರುಚಿಕೊಂಡು ಬರುವುದಂತೆ, ಬೇರೆಯವರು ತನ್ನನ್ನು ಕರೆಯುತ್ತಾರೆಂದು ಹೇಳುವುದು, ನಿದ್ರಾಹೀನತೆ ಎಲ್ಲಾ ದಿವಸಗಳಲ್ಲಿಲ್ಲ, ವಿನಾಕಾರಣ ಕೋಪ, ಅಸಹನೆ, ಅವಾಚ್ಯ ಶಬ್ದಗಳಲ್ಲಿ ದೂಷಣೆ, ಯಾವ ವಸ್ತು ಸಿಕ್ಕಿದರೂ ಅದನ್ನು ಹಿಡಿದುಕೊಳ್ಳುವುದು ಒಮ್ಮೊಮ್ಮೆ ಉಗ್ರ ಸಿಟ್ಟು.

ಬೆಂಗಳೂರಿನ ಮಾನಸಿಕ ಚಿಕಿತ್ಸಾಲಯದಲ್ಲಿ ಔಷಧಿ ಮಾಡುತ್ತಿದ್ದೇವೆ, ಏನೂ ಸಮಾಧಾನವಿಲ್ಲ. ಮಂಗಳವಾರ, ಶುಕ್ರವಾರ, ಆದಿತ್ಯವಾರ ಹೆಚ್ಚು ಆಯಾಸ ಜಾಸ್ತಿ. ಏನು ಮಾಡಬೇಕೆಂದು ತಿಳಿಸಿ.

ನೀವು ನಮೂದಿಸಿರುವ, ನಿಮ್ಮ ಮಗಳ ರೋಗ ಲಕ್ಷಣಗಳ ವಿವರವನ್ನು ನೋಡಿದರೆ, ಆಕೆ ಚಿತ್ತ ವಿಕಲತೆ ಅಥವಾ ಸ್ಕಿಜೋಫ್ರೇನಿಯಾ ರೋಗದಿಂದ ನರಳುತ್ತಿರುವ ಸಾಧ್ಯತೆಗಳುಂಟು. ಈ ಚಿತ್ತ ವಿಕಲತೆ ಮೂಲತಃ ವಿಚಾರ ಶಕ್ತಿಯ ಮರಗಟ್ಟುವಿಕೆಯಿಂದ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಹಲವಾರು ಅಂಗಾಂಗಗಳಂತೆ, ಮನಸ್ಸಿನಲ್ಲಿಯೂ ಹಲವಾರು ವಿಭಿನ್ನ ಭಾಗಗಳಿವೆ. ಬುದ್ಧಿಶಕ್ತಿ, ವಿಚಾರಶಕ್ತಿ, ಭಾವನೆ, ಏಕಾಗ್ರತೆ ಇತ್ಯಾದಿ. ದೇಹದ ಅಂಗಾಂಗಗಳಿಗೆ ಅಸ್ವಸ್ಥತೆ ತಲೆದೋರುವಂತೆ, ಮನಸ್ಸಿನಲ್ಲಿಯೂ ಈ ಪ್ರತಿಕ್ರಿಯೆ ಸಾಧ್ಯ. ಅದರಂತೆ ಇಚ್ಛಿತ್ತ ವಿಕಲತೆ ವಿಚಾರಶಕ್ತಿಯ ಕಾಯಿಲೆ ಮಾತ್ರ. ವಿಚಾರಶಕ್ತಿಯಲ್ಲಿ ನಾಲ್ಕು ಹಂತಗಳು, ವಿಚಾರಗಳ ಉತ್ಪಾದನೆ, ಸಂಘಟನೆ, ಪ್ರಕಟಣೆ, ಪರಿಗ್ರಹಣೆ ಇದು ನಮ್ಮೆಲ್ಲರಲ್ಲೂ ಕ್ರಮಬದ್ಧವಾಗಿ ನಡೆದು, ಅದಕ್ಕನುಗುಣವಾಗಿ, ನಮ್ಮ ವರ್ತನೆ ಸ್ವಾಸ್ಥತೆಯ ಚೌಕಟ್ಟಿನಲ್ಲಿ ಇರುತ್ತದೆ. ಅದರಂತೆ ನಮ್ಮ ವಿಚಾರಶಕ್ತಿಯನ್ನು, ಆಬ್‌ಸ್ಟ್ರಾಕ್ಟ್ ಥಿಂಕಿಂಗ್ ಅಥವಾ ಗ್ರಹಿಸುವ ವಿಚಾರಶಕ್ತಿ ಎನ್ನುತ್ತೇವೆ. ಆದರೆ ಇಚ್ಛಿತ್ತ ವಿಕಲತೆಯಲ್ಲಿ, ಮೆದುಳಿನಲ್ಲಿ ಆಗುವ ಕೆಲವು ರಸಾಯನಿಕ ಕ್ರಿಯೆ ಬದಲಾವಣೆಯಿಂದ, ವಿಚಾರಶಕ್ತಿ ಮರಗಟ್ಟುತ್ತದೆ. ವ್ಯಕ್ತಿ ತನ್ನ ಚಟುವಟಿಕೆಗಳ ಕ್ರಮಬದ್ಧತೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಯಾರಿಗೂ ಕಾಣಿಸಿದ ನೋಟಗಳು, ಕೇಳಿಸದ ಶಬ್ದಗಳು, ಅಸಂಬದ್ಧ ವರ್ತನೆ, ನಿದ್ರಾಹೀನತೆ, ವಿನಾಕಾರಣ ಎಲ್ಲೆಲ್ಲೋ ಹೋಗಿಬಿಡುವುದು, ಏನನ್ನೋ ಮಾತನಾಡುವುದು, ವಿನಾಕಾರಣ ಎಲ್ಲರನ್ನೂ ದೂಷಿಸುವುದು, ಈ ರೋಗದ ಮೂಲ ಲಕ್ಷಣ. ಕೂಡಲೇ, ನುರಿತ ಮನೋವೈದ್ಯರಿಂದ ಚಿಕಿತ್ಸೆ ನೀಡುವುದು ಒಳಿತು. ಈ ರೋಗವನ್ನು ಸಂಪೂರ್ಣ ಹತೋಟಿಗೆ ತಂದು ಸ್ವಾಸ್ಥ್ಯತೆ ನೀಡಲು ಸಾಧ್ಯತೆಯಿದ್ದರೂ, ನಿರ್ಲಕ್ಷ ಮಾಡಿದಲ್ಲಿ ತೊಂದರೆ ಖಂಡಿತ. ಏಕೆಂದರೆ ಇಚ್ಛಿತ್ತ ವಿಕಲತೆ, ಗುಡ್ಡದ ಇಳಿಜಾರಿನಲ್ಲಿ ಓಡಿದ ಹಾಗೆ. ನೀವು ನಿಲ್ಲುವೆ ಎಂದರೂ, ಇಳಿಜಾರು ನಿಮ್ಮನ್ನು ಮುಂದ ಕೊಂಡೊಯ್ಯುವಂತೆ, ಈ ರೋಗ ಶೀಘ್ರಗತಿಯಲ್ಲಿ ಮುಂದುವರೆದು, ಮನಸ್ಸಿನ ಇತರೇ ಪ್ರಕಾರಗಳಾದ ಏಕಾಗ್ರತೆ, ಭಾವನೆ, ಬುದ್ಧಿಶಕ್ತಿಯನ್ನೂ, ನೆನಪನ್ನೂ ಕ್ಷೀಣಿಸುವುದು ಸಾಧ್ಯ, ಭಾವನೆಗಳು, ನಾಶವಾಗಿ, ಮೃಗಕ್ಕೂ, ಮನುಷ್ಯನಿಗೂ ಇರುವ ವ್ಯತ್ಯಾಸ ಕ್ಷೀಣಿಸುತ್ತದೆ.