ಹೆಸರು: ಸುಮಿತ್ರ
ಊರು: ಸುಭಾಶ್ನಗರ

ಪ್ರಶ್ನೆ: ಸ್ತ್ರೀಯರ ಶತ್ರು ಸ್ತನಕ್ಯಾನ್ಸರ್ ಬರಲು ಕಾರಣವೇನು? ಯಾವ ಯಾವ ಹಂತಗಳಲ್ಲಿ ಸ್ತನ ಕ್ಯಾನ್ಸರ್  ಕಂಡು ಬರುತ್ತದೆ? ಸ್ತನ ಕ್ಯಾನ್ಸರ್  ರೋಗದ ಲಕ್ಷಣಗಳೇನು? ಸ್ತನ ಕ್ಯಾನ್ಸರ್ ಅನ್ನು ತಿಳಿದುಕೊಳ್ಳುವ ಪರೀಕ್ಷಾ ವಿಧಾನಗಳು ಹಾಗೂ ಇದರ ಚಿಕಿತ್ಸೆಗಳು ಯಾವುವು? ಕಾಯಿಲೆ ಯಾರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಾಗೂ ಇದರಿಂದ ತಮ್ಮ ಮಕ್ಕಳಿಗೂ ತೊಂದರೆಯಾಗುತ್ತದೆಯೇ ತಿಳಿಸಿ?

ಉತ್ತರ: ಮಾನವನ ದೇಹವು ನೂರಾರು ವಿಧವಿಧವಾದ ಜೀವಕೋಶಗಳಿಂದ ರೂಪುಗೊಂಡಿರುತ್ತವೆ. ಈ ಜೀವಕೋಶಗಳ ಬೆಳವಣಿಗೆಯಲ್ಲಿ ಉತ್ಪಾದನಾ ಶಕ್ತಿ ಸ್ವಲ್ಪ ಏರುಪೇರಾದರೂ ಒಂದಲ್ಲಾ ಒಂದು ಸವಸ್ಯೆ ಕಂಡುಬರುತ್ತದೆ. ಹೀಗೆ ಜೀವಕೋಶಗಳ ಏರುಪೇರಿನಿಂದ ಉಂಟಾಗುವ ರೋಗಗಳಲ್ಲಿ ಅರ್ಬುದ (ಕ್ಯಾನ್ಸರ್) ರೋಗವು ಒಂದು. ಇದೊಂದು ಭಯಾನಕ ರೋಗ. ಸಾವಿನಲ್ಲಿ ಪರ್ಯಾವಸಾನಗೊಳ್ಳುವ ಭೀಕರ ಮಾರಕ ರೋಗ.

ಕ್ಯಾನ್ಸರ್ ರೋಗವು ದೇಹದ ಯಾವುದೇ ಅಂಗಾಂಗಕ್ಕೆ ಬರಬಹುದು. ಸ್ತನಕ್ಯಾನ್ಸರ್  ವಿಶ್ವದಾದ್ಯಂತ ಎಲ್ಲಾ ದೇಶಗಳಲ್ಲಿಯು ಎಲ್ಲಾ ವರ್ಗದ ಮಹಿಳೆಯರಲ್ಲಿಯು ಬರುವಂತಹ ಕೆಟ್ಟ ಪರಿಣಾಮ ಬೀರುವಂತಹ ಭೀಕರ ಕಾಯಿಲೆಯಾಗಿದೆ.

ಜಗತ್ತಿನಲ್ಲಿ ಪ್ರತಿ ವರ್ಷ ಹತ್ತು ಲಕ್ಷಕ್ಕೂ ಮೀರಿ ಮಹಿಳೆಯರು ಸ್ತನಕ್ಯಾನ್ಸರ್ ರೋಗಕ್ಕೆ ಗುರಿಯಾಗಿ ಚಿಕೆತ್ಸೆ ಪಡೆಯುತ್ತಿದಾರೆ. ೧೯೬೦ ರ ದಶಕದಲ್ಲಿ ಶೇಕಡ ೫ ರಷ್ಟು ಮಹಿಳೆಯರಲ್ಲಿ ಕಂಡುಬರುತ್ತಿದ್ದ ಸ್ತನಕ್ಯಾನ್ಸರ್ ಪ್ರಮಾಣವು ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕವಾಗಿ ಕಂಡುಬರುತ್ತಿದ್ದು ಇಂದು ಇದರ ಪ್ರಮಾಣ ಶೇ. ೭ ರಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಯಲ್ಲಿ ದೃಢೀಕರಿಸಲಾಗಿದೆ.

ಸ್ತನಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿರುವವರಲ್ಲಿ ಭಾರತವೂ ಹಿಂದೆ ಉಳಿದಲ್ಲ. ಭಾರತದ ಮಹಾನಗರಗಳಾದ ಬೆಂಗಳೂರು, ಮುಂಬಯಿ, ಕೊಲ್ಕತ್ತಾ ನಗರಗಳಲ್ಲಿ ಪ್ರತಿ ವರ್ಷ ಶೇ. ೫ ರಷ್ಟು ಸ್ತ್ರೀಯರು ಸ್ತನಕ್ಯಾನ್ಸರ್ ಗುರಿಯಾಗುತ್ತಿದ್ದಾರೆ ಎಂದು ಮಹಿಳಾ ಸಮೀಕ್ಷೆಯೊಂದು ಮಾಹಿತಿ ನೀಡುತ್ತದೆ.

 

ಪ್ರಶ್ನೆ: ಯಾರಿಗೆ, ಯಾವ ವಯಸ್ಸಿನಲ್ಲಿ ಸ್ತನಕ್ಯಾನ್ಸರ್  ಬರಬಹುದು?

ಉತ್ತರ: ಸ್ತನ ಕ್ಯಾನ್ಸರ್ ಬಹುತೇಕ ಮಹಿಳೆಯರಿಗೆಂದೇ ಮೀಸಲಾಗಿರುವ ಕಾಯಿಲೆಯಾದರೂ ಒಟ್ಟು ಸ್ತನಕ್ಯಾನ್ಸರ್ ಉಳ್ಳವರಲ್ಲಿ ಶೇ, ೧ ರಷ್ಟು ಪುರುಷರೂ ಆಗಿರುತ್ತಾರೆ.  ಸಾಮಾನ್ಯವಾಗಿ ೪೦ ವರ್ಷ ನಂತರ ಕಾಣಿಸಿಕೊಳ್ಳುವ ಈ ರೋಗವು ೬೫ ವರ್ಷ ದಾಟಿದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಋತುಮತಿಯಾದವರಲ್ಲಿ ಮತ್ತು ಮಾನಸಿಕ ಋತುಚಕ್ರದಲ್ಲಿ ಏರುಪೇರಾಗಿದ್ದು ಹೆಚ್ಚಿನ ರಕ್ತ ಸ್ರಾವವಿರುವವರಲ್ಲಿ ಸ್ತನಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚು ವಯಸ್ಸಾದ ಮೇಲೆ (೩೦ರ ನಂತರ) ವಿವಾಹವಾಗಿರುವ ಮಹಿಳೆಯಲ್ಲಿ ಮತ್ತು ಬಂಜೆತನದಿಂದ ಬಳಲುತ್ತಿರುವ ಮಹಿಳೆಯರಲ್ಲಿ ಇದರ ಪ್ರಮಾಣ ಇತರ ಕಾರಣಗಳಿಗಿಂತ ಎರಡರಷ್ಟಿರುತ್ತದೆ. ಇದು ವಂಶಪಾರಂಪರ್ಯದಿಂದಲೂ ಬರಬಹುದು. ಹಾರ್ಮೋನ್ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರಲ್ಲಿ ಸ್ತನಕ್ಯಾನ್ಸರ್ ಶೇ.೨೫ ರಷ್ಟು ಹೆಚ್ಚಿರುತ್ತದೆ.

ಆಧುನಿಕ ಯುಗದಲ್ಲಿ ಸ್ವೇಚ್ಛಾಚಾರಕ್ಕೆ ಒಳಗಾಗಿ, ನವೀನ ಸಂಸ್ಕೃತಿ ಹೆಸರಿನಲ್ಲಿ ಜೀವನ ಶೈಲಿಯನ್ನು ಬದಲಾಯಿಸಿಕೊಂಡಿರುವ ಮಹಿಳೆಯರು ಮದ್ಯಪಾನ, ಧೂಮಪಾನ ಮುಂತಾದ ಚಟಗಳಿಗೆ ಬಲಿಯಾಗಿರುತ್ತಾರೆ. ಇಂತವರಲ್ಲಿ ಸ್ತನಕ್ಯಾನ್ಸರ್ ಕಂಡುಬರುವ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಸ್ತನಗಳಲ್ಲಿ ಯಾವುದೇ ರೀತಿಯ ಗಡ್ಡೆಗಳು ಅಥವಾ ಇತರ ಯಾವುದೇ ಬದಲಾವಣೆಗಳು ಕಂಡುಬಂದರೆ ಅದನ್ನು ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ತಜ್ಙವೈದ್ಯರಿಗೆ ತೋರಿಸಿ ಯಾವುದೇ ಹಿಂಜರಿಕೆ, ಸಂಕೋಚವಿಲ್ಲದೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಜೀವನವನ್ನೇ ನೋವಿನಲ್ಲಿ ಕಳೆಯಬೇಕಾಗುತ್ತದೆ. ಅಲ್ಲದೆ ಜೀವವನ್ನು ಕಳೆದುಕೊಳ್ಳಬೇಕಾಗುತ್ತದೆ.

 

ಪ್ರಶ್ನೆ: ಸ್ತನಕ್ಯಾನ್ಸರ್ ಯಾವ ಯಾವ ಹಂತಗಳಲ್ಲಿ ಕಂಡುಬರತ್ತದೆ?

ಉತ್ತರ: ಸ್ತನಕ್ಯಾನ್ಸರ್ ನಾಲ್ಕು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಮೊದಲ ಹಂತ: ಸ್ತನದಲ್ಲಿ ಗೆಡ್ಡೆ ಕಾಣಿಸಿಕೊಂಡು ಅದು ೨ ಸೆಂ.ಮೀ. ಗಿಂತ ಕಡಿಮೆಯಿರುತ್ತದೆ ಮತ್ತು ಬೇರೆ ಕಡೆ ಹರಡುವುದಿಲ್ಲ.

ದ್ವಿತೀಯ ಹಂತ: ಈ ಗೆಡ್ಡೆ ಇನ್ನೂ ಚಿಕ್ಕದಾಗಿರುತ್ತದೆ. ಆದರೆ ಇದು ಸ್ತನದ ಇತರ ಭಾಗಕ್ಕೂ ಅಂದರೆ ಕಂಕುಳಿಗೆ ಹರಡಿರುತ್ತದೆ.

ತೃತೀಯ ಹಂತ: ಈ ಹಂತದಲ್ಲಿ ಗೆಡ್ಡೆ ಮುಕ್ಕಾಲು ಪಾಲು ದೊಡ್ಡದಾಗಿದ್ದು ಸರಿಸುಮಾರು ೫ ಸೆಂ.ಮೀ. ನಷ್ಟಾಗಿರುತ್ತದೆ. ಜೊತೆಗೆ ಹೆಚ್ಚಾಗಿ ಹರಡುತ್ತದೆ.

ನಾಲ್ಕನೇ ಹಂತ: ಕ್ಯಾನ್ಸರ್ ರೋಗವು ಇತರ ಅಂಗಾಂಗಗಳಿಗೂ ಹರಡಿರುತ್ತದೆ. ಆದುದರಿಂದ ಪ್ರಾರಂಭಿಕ ಹಂತದಲ್ಲಿಯೇ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಸೂಕ್ತ.

೧. ಹಾಲ್ರಸ ಕಣ ಗಂಟಿಗೆ ಕ್ಯಾನ್ಸರ್ ಹರಡುತ್ತಿರವುದು (Sentinel Lymph Node)

೨. ಕ್ಯಾನ್ಸರ್ ಗೆಡ್ಡೆ (Tumor)

೩. ಹಾಲೆ (Lobe)

೪. ಹಾಲು ನಾಗುನಾಳ (Duct)

೫. ಮೊಲೆತೊಟ್ಟು (Nipple)

 

ಪ್ರಶ್ನೆ: ಸ್ತನಕ್ಯಾನ್ಸರ್ ರೋಗದ ಲಕ್ಷಣಗಳೇನು?

ಉತ್ತರ: ೧.ಸ್ತನಗಳಲ್ಲಿ ನೋವು ಅಥವಾ ನೋವಿಲ್ಲದ ಗೆಡ್ಡೆಗಳು ಮುಡುವುದು.

೨. ಸ್ತನಗಳಲ್ಲಿ ಅಥವಾ ಕಂಕುಳಲ್ಲಿ ಗೆಡ್ಡೆಯು ಕಾಣಿಸಿಕೊಳ್ಳುವುದು.

೩. ಸ್ತನದ ಮುಲ ರೂಪ ಮತ್ತು ಆಕಾರದಲ್ಲಿ ಬದಲಾವಣೆ ಕಂಡುಬರುತ್ತವೆ.

೪. ಸ್ತನದ ವರ್ಣದಲ್ಲಿ ಬದಲಾವಣೆಯಾಗುವುದು.

೫. ತೊಟ್ಟಿನಿಂದ ರಕ್ತ ಸ್ರಾವವಾಗುವುದು ಅಥವಾ ಕೀವಿನ ಸ್ರಾವವಾಗುವುದು.

೬. ಸ್ತನದ ತೊಟ್ಟಿನಲ್ಲಿ ಮೃದುತ್ವದ ಬದಲಾಗಿ ಒರಟಾಗುವುದು ಮತ್ತು ಗಡುಸಾಗುವುದು.

೭. ಸ್ತನದಲ್ಲಿರುವ ತೊಟ್ಟು ಹಿಂದಕ್ಕೆ ಸರಿಯುವುದು ಮತ್ತು ಅಧಿಕವಾದ ನೋವು ಇತ್ಯಾದಿ.

 

ಪ್ರಶ್ನೆ: ಸ್ತನ ಕ್ಯಾನ್ಸರನ್ನು ತಿಳಿದುಕೊಳ್ಳುವ ಪರೀಕ್ಷಾ ವಿಧಾನಗಳೇನು?

ಉತ್ತರ: ತಪಾಸಣಾ ವಿಧಾನಗಳಲ್ಲಿ ಮೊದಲಿಗೆ ಪ್ರತಿಯೊಬ್ಬ ಸ್ತ್ರೀಯು ಸ್ವಯಂ ಪರೀಕ್ಷೆ ಮಾಡಿಕೊಳ್ಳಬೇಕು. ಈ ಪರೀಕ್ಷೆಯಲ್ಲೇನಾದರೂ ಗಡ್ಡೆಗಳು ಅಥವಾ ಇತರೆ ಯಾವುದೇ ಬದಲಾವಣೆಗಳು ಕಂಡುಬಂದರೆ ತಜ್ಞವೈದ್ಯರನ್ನು ಭೇಟಿಮಾಡಿ ಪರೀಕ್ಷಿಸಿಕೊಳ್ಳಬೇಕು. ಅಗತ್ಯಬಿದ್ದಲ್ಲಿ ಮೆಮೋಗ್ರಾಮ್, ಎಂ.ಆರ್.ಐ. ಸ್ಕ್ಯಾನಿಂಗ್, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಡಕ್ಟಲ್ ಲ್ಯಾವೆಜ್, ಆಪ್ಟಿಕಲ್ ಟೋಮೋಗ್ರಫಿ ಮತ್ತು ಪಿ.ಈ.ಟಿ ಸ್ಕ್ಯಾನಿಂಗ್ ಮುಂತಾದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ಬಯಾಫ್ಸಿ ಪರೀಕ್ಷೆಯನ್ನು ಮಾಡಿಸುವುದರಿಂದ ಸ್ತನಕ್ಯಾನ್ಸರ್ ಇದೆಯೇ? ಎಂಬುದನ್ನು ಖಚಿತವಾಗಿ ತಿಳಿಯಬಹುದು.

 

 

ಪ್ರಶ್ನೆ: ಸ್ವಯಂ ಪರೀಕ್ಷೆ ಮಾಡಿಸಿಕೊಳ್ಳುವ ವಿಧಾನ ಹೇಗೆ ತಿಳಿಸಿ.

ಉತ್ತರ: ಪ್ರತಿಯೊಬ್ಬ ಸ್ತ್ರೀಯು ಮೊದಲಿಗೆ ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದು ಅಗತ್ಯ. ಕನ್ನಡಿಯೆದುರು ನಿಂತು ಸ್ತನ, ಸ್ತನತೊಟ್ಟು, ಬಟುಗಲೆಗಳನ್ನು ಗಮನವಿಟ್ಟು ನೋಡಿ, ಅವುಗಳ ಗಾತ್ರ, ಆಕಾರದಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಿದೆಯೇ ಎಂಬುದನ್ನು ಪರೀಕ್ಷಿಸಿ ದೃಢಪಡಿಸಿಕೊಳ್ಳಬೇಕು. ಮೊಲೆತೊಟ್ಟನ್ನು ಒತ್ತಿದಾಗ ಏನಾದರೂ ದ್ರವದ ಸ್ರವಿಕೆಯಾಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಹಾಗೆ ಕೈಗಳನ್ನು ಮೇಲೆತ್ತಿ ಮತ್ತು ನಿತಂಬದ ಮೇಲೆ ಕೈ ಇಟ್ಟು ಉಂಟಾಗುವ ವ್ಯತ್ಯಾಸಗಳನ್ನು ಗಮನಿಸಬೇಕು. ಆಮೇಲೆ ಕೈಯಿಂದ ಸ್ತನಗಳನ್ನು ಮುಟ್ಟಿ ಗಟ್ಟಿಯಿದೆಯೇ?, ಒತ್ತಿದಾಗ ಸ್ತನದ ಒಳಗೆ ಏನಾದರೂ ಗಂಟುಗಳು ಇದೆಯೇ? ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಹೀಗೆ ಪರೀಕ್ಷಿಸುವಾಗ ಏನಾದರೂ ವ್ಯತ್ಯಾಸ ಕಂಡುಬಂದರೆ ತಜ್ಞವೈದ್ಯರನ್ನು ಕಾಣುವುದು ಅವಶ್ಯಕ.

ಸ್ತನಗಳ ಪರೀಕ್ಷೆಯನ್ನು ಸಾಮಾನ್ಯವಾಗಿ ತಿಂಗಳಿಗೊಮ್ಮೆ ಮಾಡಿಕೊಳ್ಳುವುದು ಒಳ್ಳೆಯದು. ಪರೀಕ್ಷೆಯ ವೇಳೆಯಲ್ಲಿ ಎರಡೂ ಸ್ತನಗಳಲ್ಲಿನ ಆಕಾರ, ಗಾತ್ರ ಮತ್ತು ದೃಢತೆಯಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ ಎಂಬುದನ್ನು ಗಮನಿಸಬೇಕು. ಸ್ತನಗಳಲ್ಲಿ ಗಡ್ಡೆ, ದುರ್ಮಾಂಸ, ಚರ್ಮದ ಬಣ್ಣದಲ್ಲಿ ಬದಲಾವಣೆ, ತುರಿಕೆ, ಕುಳಿ ಅಥವಾ ಗುಳಿ ಏನಾದರೂ ಬಿದ್ದಿದೆಯೇ, ಮೊಲೆ ತೊಟ್ಟೇನಾದರೂ ಒಳ ಸರಿದಿದೆಯೇ ಎಂಬುದನ್ನು ನೋಡಿಕೊಳ್ಳಬೇಕು, ಸ್ತನದಲ್ಲಿ ಏನಾದರೂ ಗಾಯಗಳಾಗಿ ಕೀವು ಅಥವಾ ಇತರ ಯಾವುದೇ ರೀತಿಯ ದ್ರವದ ಸ್ರವಿಕೆಯಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು, ಹಾಗೆಯೇ ಮೊಲೆ ತೊಟ್ಟಿನಿಂದ ಹಾಲು ಅಥವಾ ಇನ್ನಾವುದೇ ದ್ರವ ಬರುತ್ತಿದೆಯೇ ಎಂಬುದರ ಬಗ್ಗೆ ಎಚ್ಚರ ವಹಿಸಬೇಕು.

 

ಪ್ರಶ್ನೆ: ಸ್ತನಕ್ಯಾನ್ಸರನಿಂದ ಯಾವ ಪರಿಣಾಮಗಳು ಉಂಟಾಗುತ್ತವೆ?

ಉತ್ತರ: ಸ್ತನಕ್ಯಾನ್ಸರಿಗೆ ಸೂಕ್ತ ಚಿಕಿತ್ಸೆ ನಿಡದಿದ್ದರೆ ಸ್ತ್ರೀಯ ಆಕರ್ಷಕ ಅಂಗವೆನಿಸಿರುವ, ಕರುಳ ಕುಡಿಗೆ ಅಮೃತ ಉಣಿಸುವ ಸ್ತನಗಳೇ ಇಲ್ಲವಾಗಬಹುದು. ಇದರ ಜೊತೆಗೆ ದೇಹದ ಇತರ ಅಂಗಾಂಗಗಳಿಗೂ ಹರಡುತ್ತದೆ. ಜೀವನದ ಸಂತೋಷಮಯ ಕ್ಷಣಗಳನ್ನು ಕಳೆದುಕೊಂಡು, ಕೊನೆಯ ದಿನಗಳವರೆಗೂ ನೋವಿನಲ್ಲಿ ಕಳೆಯುವ ಪರಿಸ್ಥಿತಿ ಉಂಟಾಗಬಹುದು.

 

ಪ್ರಶ್ನೆ: ಯಾವ ಚಿಕಿತ್ಸೆಗಳಿಂದ ಸ್ತನಕ್ಯಾನ್ಸರ್ ಅನ್ನು ಗುಣಪಡಿಸಬಹುದು?

ಉತ್ತರ: ಕ್ಯಾನ್ಸರ್ ರೋಗಕ್ಕೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳು ಜಾರಿಗೆ ಬಂದಿವೆ. ಕೆಮೋ ಥೆರಪಿ, ಬಯೋಲಾಜಿಕಲ್ ಥೆರಪಿ, ಶಸ್ತ್ರ ಚಿಕಿತ್ಸೆ ಮುಂತಾದ ಚಿಕಿತ್ಸಾ ವಿಧಾನಗಳಿವೆ.

 

ಪ್ರಶ್ನೆ: ಸ್ತನಕ್ಯಾನ್ಸರ್ ಅನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು ಏನೇನು?

ಉತ್ತರ: ಪ್ರತಿನಿತ್ಯ ಸ್ನಾನ ಮಾಡುವಾಗ ಮೃದುವಾಗಿ ಸ್ವಚ್ಛಗೊಳಿಸುವುದು ಅವಶ್ಯಕ. ನಂತರ ಸ್ತನಗಳಿಗೆ ಮತ್ತು ಕಂಕುಳುಗಳಿಗೆ ಮಾಹಿಶ್ಚರೈಜರನ್ನು  ಹಚ್ಚಿಕೊಳ್ಳಬೇಕು. ಬೇಸಿಗೆಯ ಕಾಲದಲ್ಲಿ ಟಾಲ್ಕಂ ಪೌಡರನ್ನು ಹಾಕಿಕೊಳ್ಳಬೇಕು. ಯಾವಾಗಲು ಸರಿಯಾದ ಅಳತೆಯ ಹಾಗೂ ಮೃದುವಾದ ಹತ್ತಿಯಿಂದ ಮಾಡಿದಂತಹ ಒಳ ಉಡುಪನ್ನು (ಬ್ರಾ) ಧರಿಸುವುದು ಉತ್ತಮ. ಬಹಳ ಬಿಗಿಯಾದ ಅಥವಾ ಸಡಿಲವಾದ ಒಳ ಉಡುಪನ್ನು (ಬ್ರಾ) ಧರಿಸುವುದು ಯೋಗ್ಯವಲ್ಲ. ಅತಿ ಬಿಗಿಯಾದ ಒಳ ಉಡುಪನ್ನು ಧರಿಸುವುದರಿಂದ ಸ್ತನಗಳಿಗೆ ಉಸಿರು ಕಟ್ಟಿ ಕಲೆಗಳಾಗುತ್ತವೆ ಮತ್ತು ಚರ್ಮದ ತುರಿಕೆಯಾಗಬಹುದು. ರಾತ್ರಿಯ ವೇಳೆ ಒಳ ಉಡುಪನ್ನು ಧರಿಸದೇ ಇರುವದು ಒಳ್ಳೆಯದು. ಇದರಿಂದ ಸರಾಗವಾಗಿ ಉಸಿರಾಡಲು ಅನುಕೂಲವಾಗುತ್ತದೆ. ಮಲಗುವಾಗ ಬೆನ್ನಿನ ಮೇಲೆ ಅಥವಾ ಪಕ್ಕಕ್ಕೆ ಮಲಗುವುದು ಉತ್ತಮ. ಸ್ತನಗಳ ಮೇಲೆ ಒತ್ತಡ ಬೀಳದಂತೆ (ಬೋರಲಾಗಿ) ಮಲಗಬಾರದು. ಇದರಿಂದ ಸ್ತನಗಳ ಮುಲ ಆಕಾರ ಕೆಡಬಹುದು. ಸ್ತನಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದರೆ ನಿರ್ಲಕ್ಷಿಸದೇ ತಕ್ಷಣವೇ ಸೂಕ್ತ ತಜ್ಞ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಂಡು ವ್ಯತ್ಯಾಸಕ್ಕೆ ಕಾರಣ ತಿಳಿದುಕೊಂಡು ಸೂಕ್ತ ಸಲಹೆ ಸೂಚನೆಗಳೊಂದಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದು. ಆದುದರಿಂದ “ಸ್ತನದ ಸೌಂರ್ದಯದ ಕಡೆ ಹೆಚ್ಚಿನ ಗಮನ ಹರಿಸುವಂತೆ ಅವುಗಳ ರಕ್ಷಣೆಯ ಕಡೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು”.