ಶ್ರೀ ಗುರುವೆ ಪರಮ ಪ್ರಖ್ಯಾತ ಜಗದ್ವಿಖ್ಯಾತ |
ನಿಗಮಾಗಮಾತೀತ ಪೊಗಳುವೆ ನಾನ |
ರಂಗ ಭೂಮಿಗಿಳಿಯ ಬೇಕ ನೀನಾ ||ಪ||

ಬಗೆ ಬಗೆಯ ರಾಗದಲಿ ಪ್ರಗತಿಯಾಗಬೇಕ ಗಾನ |
ಬಿಗಿ ಬಿಗಿದು ಶೃತಿನಾದ ಬ್ರಹ್ಮನಾಗಬೇಕ ತಾನ |
ಭುಗಿ ಭುಗಿಲ್ ಎಂಬ ಅಗ್ನಿಗೆ ಡಪ್ಪ ಕಾಸಿ ಚಣನ |
“ಕಂಠತ್ರಾಣ” ಕಂಠ ತ್ರಾಣ ತಾಳದಲ್ಲಿ ನಿನ್ನಿದಿರಲಿ ವಾಸಸ್ಥಾನ |
ರಂಗ ಭೂಮಿಗಿಳಿಯ ಬೇಕ ನೀನಾ ||೧||

ಶಿವ ಯೋಗ ತಿಳಿಸಿ ಭವ ರೋಗ ಅಳಿಸುವ ಕಾವಿ ಧಾರಿ ಯ ರಮಣಾ |
ಜವದಲ್ಲಿ ಪೂಜಿಪೆ ತವ ಚರಣಾ ||
ಕವಿವರ್ಯಗೆ ಅವನಿಯ ಸವಿಯನುಣಿಸಿ ಸಂಪೂರ್ಣ |
ನವಯುಗದ ಭವಿಷ್ಯದ ಶ್ರವಣ ಕೊಟ್ಟ ಪರಿಪೂರ್ಣ |
ಕಿವಿಯಲ್ಲಿ ಬೋಧಿಸಿದ ಜೀವದೇವ ಆತ್ಮ ವರಣ |
“ಬ್ರಹ್ಮಜ್ಞಾನ” ಬ್ರಹ್ಮಜ್ಞಾನ ಸ್ಥಿರಗೊಳ್ಳಲಿ ಕಾಪಾಡಯ್ಯ ಕಂದನ್ನ |
ರಂಗ ಭೂಮಿಗಿಳಿಯ ಬೇಕ ನೀನಾ ||೨||

ಕತ್ತಲೆಲ್ಲ ಹೋಗಿ ಸುತ್ತಲೆ ಜ್ಯೋತಿ ಬಿತ್ತ ಮತ್ಯಾತರ ಅನುಮಾನ |
ಉತ್ತಮ ಸತ್ಯದ ಕಿರಣ ||
ಮೃತ್ಯುವಿನ ಅಂಜಿಕಿಲ್ಲ ನಿತ್ಯದಿ ಮಂತ್ರದ ಪಠಣ |
ಕೃತಿ ಕೃತ್ಯನಾಗುವೆನು ಸ್ತೋತ್ರ ಮಾಡಿ ತವ ಚರಣ |
ಪ್ರತಿಯೊಂದು ಕೃತಿಯಲಿ ಅತಿ ಹಿತದಿಂದ ಪೊರೆಯನ್ನ |
“ಹುಲಕುಂದ” ಹುಲಕುಂದ ಭೀಮ ಕವಿ ಸ್ಮರಿಸೆಂದ ಗುರುವಿನ ಚರಣ |
ರಂಗ ಭೂಮಿಗಿಳಿಯಬೇಕ ನೀನಾ ||೩||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು