ಮಲಪ್ರಭಾ ಅಂತ ಹೆಸರ ತಾಳಿದ ಅವತಾರ
ಇತಿಹಾಸ ಜಾಹೀರ ಜಿಲ್ಲಾ ಬೆಳಗಾಂವ ಶ್ಯಾರ
ಖಾನಾಪೂರ ತಾಲೂಕ ಹದ್ದಾ ||
ಕುಳಕುಂಬಿಯಲಿ ಹುಟ್ಟಿ ಬಂದೆವ್ವಾ ಎದ್ದಾ ||

ನೀ ಹುಟ್ಟಿದ ಸ್ಥಳ ಮಲ್ಲಾಡ ಸಾಗಿದೆವ್ವಾ ದವಡದೌಡ
ಎಷ್ಟೋ ಜೀವ ತಗೊಂಡ ವಾಹೀಣಿ ಪಡಿಕೊಂಡ
ಸೇರ‍್ಯಾಳ ಬೆಳವಲ ಹದ್ದಾ ||
ನಿನ್ನಲ್ಲಿ ಇಲ್ಲವ್ವಾ ಭಿನ್ನ ಭೇದಾ ||

ದೊಡ್ಡದೊಡ್ಡಗುಡ್ಡಗಳ ಅಡ್ಡಬಂದ್ರು ಬಳಬಳ
ಬಿಚ್ಚತಾವ ಎಂಥಾ ನಿವಳ ಭೂಮೆಲ್ಲಾ ಜಳಜಳ
ರಭಸದಿಂದ ದಾಟತಾಳ ಸಿಟ್ಟಿಗೆದ್ದಾ ||
ತರಬೊ ಧೈರ್ಯ ಯಾರಿಗಿಲ್ಲಾ ಬಂದಾ ||

ಕೂಗಿಕೋತ ನಡದಿ ಹೀಂಗ ಕೃಷ್ಣಾ ಎಂಬೋ ನದಿವಳಗ
ಹೋಗಿ ಕೂಡಿದಿಬೇಗ ಜಾತ್ರಿ ಆಗತೈತಿ ಈಗ
ಇತಿಹಾಸ ಪ್ರಸಿದ್ಧಾ ||
ಹೆಸರಾಂತ ಕೂಡಲ ಸಂಗಂದಾ ||

ತಿಗಡೊಳ್ಳಿ ಊರ ನಿವಳ ಹೊಸ ಹೊಸಾ ಪದಗಳ
ಮಾಡತೇವ ವಿರಳಾ ವಿರಳಾ ಹಾಡತೇವ ಜಳಜಳಾ
ಮಾರುತಿ ದಯದಿಂದಾ ||
ಮರಿಕಲ್ಲಣ್ಣ ತಿಳಸತಾನ ಮುಂದ ಮುಂದಾ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿ ಗೀಗೀ ಪದಗಳು