ಗುರುವೆ ನಿಮ್ಮ ಪಾದಕೆ ಬೆರಸಿ
ಪೂಜಿ ಮಾಡುವೆ ಸಾಹಿತ ತರಸಿ
ತೀರ್ಥ ಸೀತಾಳದಿಂದ ಪಾದ ತೊಳಸಿ
ಅಬಿರ ಕಸ್ತೂರಿ ಅಂಗಕ ಧರಸಿ
ಜಾಜಿ ಪುಷ್ಪ ಮಲ್ಲಿಗೆ ಏರಸಿ ||

ಹರುಷದಿಂದ ಲೋಬಾನ ಸುಡಸಿ
ವಾದ್ಯವಾಲಗ ಸಂಬಾಳ ಬಾರಸಿ
ಕಾಯಿ ಕಪ್ಪುರ ನೈವೇದ್ಯ ತೋರಸಿ
ಶಿರಬಾಗಿ ನಿಂತನಾ ಕೈ ಜೋಡಸಿ
ಎನ್ನ ಮ್ಯಾಗ ಆಗೀರಿ ಖುಷಿ ||

ಮಂಗಳಾರತಿ ಬೆಳಗುವೆ ಹರುಷಿ
ಗುರುವೆ ನಿಮ್ಮ ನಾಮವ ಸ್ಮರಿಸಿ
ಬಾಜಿ ಬಜಂತರಿ ಕಾಳಿ ಹಿಡಿಸಿ
ರುದ್ರವೀಣಾ ತಂಬುರಿ ಮಿಡಿಸಿ
ಮಡಲಿ ಗತ್ತ ಗಾಯನ ನುಡಿಸಿ ||

ಭುವನದೊಳಗೆ ಬಂದೆನು ಜನಿಸಿ
ಹರಿಯ ಪಾದಸೇವಕ ಅನಿಸಿ
ನಿಮ್ಮ ಪಾದ ಮ್ಯಾಲ ನನ್ನ ಆಶಿ
ನಿಜಾತೋರಿಸೊ ಗುರು ಪರಿಹರಿಸಿ
ಖಾಜಾ ವರವ ಬೇಡಿದ ಒಲಸಿ
ಗುರುವೆ ನಿಮ್ಮ ಪಾದಕ ಬೆರಸಿ
ಪೂಜಿ ಮಾಡುವೆ ಸಾಹಿತ ತರಸಿ ||

ರಚನೆ :
ಖಾಜಾಭಾಯಿ
ಕೃತಿ : ಜೀವನ ಸಂಗೀತ