ಮತಿಹೀನ ನಾ ನಿಮ್ಮ ಸ್ತುತಿ ಮಾಡತೇನ
ಪಾರ್ವತಿ ಪುತ್ರಗ ನಮ್ಮ ಶರಣಾ
ಒಂದಿಷ್ಟು ಪದಗಳ ಚಂದವಾಗಿ ಹೇಳತೇನ
ಲಾಲಸಬೇಕ ಬಡವನ ಶರಣಾ
ಕುಂತ ದೈವೆಲ್ಲಾ ಸ್ವಾದ ತಕ್ಕೊಳ್ಳಿರಿ
ಶಾಂತವಾಗಿರಿ ಅಮೃತಪಾನಾ
ಮಾಡಬ್ಯಾಡರಿ ನೀವು ಗದ್ದಲಾ
ಜ್ಞಾನಿಗಳು ಕೇಳಬೇಕ್ರಿ ನಂದು ಇಷ್ಟ ವಚನಾ
ಬುದ್ಧಿವಂತರು ನೀವು ತಿದ್ದಿಕೊಳ್ಳಿರೀಗಾ
ನಮಗ ಇಲ್ಲ ಅನಬ್ಯಾಡರಿ ಅಷ್ಟು ಜ್ಞಾನಾ
ಡೊಂಕ ಕಬ್ಬಿನ ಸವಿಯ ತಕ್ಕೊಳ್ಳಿರಿ
ಬಡಿಯಬ್ಯಾಡ್ರಿ ಹುಲ್ಲಿನ ಸಮಾನಾ
ಮಂದಮತಿ ನಾನಾ ನಿಮ್ಮ ಸ್ತುತಿಮಾಡತೇನಿ
ಪಂಡಿತರೆಲ್ಲಾ ಹಿಡಿಯಬೇಕ್ರಿ ಖೂನಾ
ಒರಿಗಿ ಹಚ್ಚಿ ನಿರ್ಣಯ ಮಾಡಿರಿ
ಹಿಟ್ಟ ಬೂದಿ ಮಾಡಬಾರದ್ರಿ ಸಮನಾ
ಹಾಡಿನ ಒಗಳ ಬಂದ ಶಬ್ದ ಹೋದರ
ನಮ್ಮ ಮ್ಯಾಲ ಇರಬೇಕ ಕರುಣಾ ||೧||

ಕೈ ಮುಗದ ದೈವಕ ಹೇಳತೇನ
ಬುದ್ಧಿವಂತರು ನೋಡಿರಿ ಸೋಸಿ
ಇನ್ನ ಮ್ಯಾಲ ತ್ರಿಕಾಲದಲ್ಲಿ ನಿಲ್ಲುವೆನು
ನನ್ನ ಗುರುವಿನ ಸ್ಮರಿಸಿ ಸ್ಮರಿಸಿ
ಹರನಕಿಂತ ಗುರು ಹೆಚ್ಚಿನಾವ ಅನಿಸ್ಯಾನ
ಭವ-ಭಯ ಬಿಡಿಸ್ಯಾನೋ ಪಾಸಿ
ಪಾಸಿ ಒಳಗ ಯಾಂವ ಇರಹೋಗತಾನ
ಆಂವಗ ಅನಬೇಕ ಯೋಗ ಋಷಿ
ಹಾಡಿನ ಒಳಗ ಒಂದ ಶಬ್ದ ಹೋದರ
ನಮ್ಮ ಮ್ಯಾಲ ಇರಬೇಕ ಕರುಣಾ ||೨||

ಸ್ವಚ್ಛ ಇಂಚಲಕ ಮೆಚ್ಚಿ ನಿಂತಿದಾನ
ಬಂಕನಾಥ ಹಳ್ಳಕ ತೀರ್ಥಾ
ತ್ರಿಮೂರ್ತಿ ಅವತಾರಾ ಅವಂದಾ
ವಿಷ್ಣು ಬ್ರಹ್ಮ ಮಹೇಶ್ವರಾ ಎಲ್ಲಾ
ಹಗಲಿ ರಾತ್ರಿ ಅಕ್ಷಯದೀಪಾ
ಸದಾಕಾಲ ಉರಿಯುದು ಕಪ್ರಾ
ತ್ರಿಕಾಲದಲ್ಲಿ ಪೂಜೆ ಆಗತೈತ್ರಿ
ಬಿಲ್ವ ಪತ್ರಿ ಅಂವಗ ಶಂಕರಾ
ಎಂಬತ್ತ ಏಳಕೋಟಿ ಸಭಾದಾಗ
ಬಂದ ನಿಂತಿದಾನ ಹರಿಹರಾ
ಅಣ್ಣಾರಾವಜಿ ವಸ್ತಾದನ ಜ್ಞಾನಾ
ಚರಣ (ಕಮಲ)ದಲ್ಲಿ ಗುರು-ಬ್ರಹ್ಮಹರಾ
ಬಾಳಗೋಪಾಳ ನಿಂತ ಹಾಡತಾನಾ
ನಮ್ಮ ಮ್ಯಾಲ ಇರಬೇಕ ಕರುಣಾ ||೩||

ರಚನೆ :
ಬಾಳಗೋಪಾಳ
ಕೃತಿ : ಬಾಳಗೋಪಾಳನ ಲಾವಣಿಗಳು