ಧರಣಿ ದೇವಿಗೆ ಪರಮ ಗುರುಗಳಿಗೆ ನಿರುತದಿ ಮಾಡುವೆ ಶರಣಾರ್ಥಿ |
ವರವಿ ಪುರುಷರಾದ ಶರಣ ಧುರಿಣರಿಗೆ ಚರಣಕೆರಗಿ ನನ್ನ ಶರಣಾರ್ಥಿ||ಪ||

ಪರ ಊರಿಂದ ಬಂದ ಹಿರಿಯ ಕಿರಿಯರಿಗೆ ಮರೆಯದೆ ಇರುವದು ಶರಣಾರ್ಥಿ
ಅರಿಯದವರಿಗೆ ಹರೆಯದವರಿಗೆ ಸರಳದಿಂದ ಈ ಶರಣಾರ್ಥಿ ||
ಬರೆಯ ಬಲ್ಲವರಿಗೆ ನಿರಿಕ್ಷರಿಗಳಿಗೆ ಪರಿ ಪರಿಯಿಂದ ನನ್ನ ಶರಣಾರ್ಥಿ ||

ಸಿರಿವಂತರಿಗೆ ಗರೀಬ ಜನರಿಗೆ ಸರಿಯಾಗಿ ಮಾಡುವ ಶರಣಾರ್ಥಿ |
ಸರ್ವರಿಗೆಲ್ಲ ನರ ಜನ್ಮ ಕೊಟ್ಟಂತೆ ಗುರು ತಾಯಿಗಳಿಗೆ ಶರಣಾರ್ಥಿ |
ಪರಭಾರ ಕೂತ ಪದ ನಿರೀಕ್ಷಣೆ ಮಾಡುವ ಕರುಣಾಳುಗಳಿಗೆ ಶರಣಾರ್ಥಿ ||

ಚಾಲ

ಪುರಾಣ ಹೇಳ ಕೇಳವರಿಗೆ ಶರಣಾರ್ಥಿ |
ಹರಟೆ ಮಾತಿನ ಮಲ್ಲರಿಗೆ ಶರಣಾರ್ಥಿ ||
ಸರಿಬಾರದೊಳವರಿಗೆ ಶರಣಾರ್ಥಿ |
ಬರಿ ಬಾಯಿ ಮಾಡುವರಿಗೆ ಶರಣಾರ್ಥಿ ||

ಏರು

ಸರಳ ಹೃದಯದಿಂದ ಕರುಣಿಸಿ ಕೇಳಿ ಹರುಷಗೊಂಬವರಿಗೆ ಶರಣಾರ್ಥಿ||೧||

ಹಿಂದುಸ್ಥಾನವನು ಚಂದಾಗಿ ನಡೆಸಿದಂಥ ಮುಂದಾಳು ನೆಹರುಗೆ ಶರಣಾರ್ಥಿ |
ಗಾಂಧಿ ತತ್ವಕ್ಕೆ ಹೊಂದಿಕೊಂಡಂಥ ಬಂಧು ಭಗಿನಿಯರಿಗೆ ಶರಣಾರ್ಥಿ |
ಸುಂದರ ಭಾರತದ ಆಂದೋಲನದಲ್ಲಿ ಮರಣ ಹೊಂದಿದ ಮಹಾತ್ಮರಿಗೆ ಶರಣಾರ್ಥಿ ||

ಮಂದಿಯ ಹಿತಕಾಗಿ ತಂದ ತ್ಯಾಗಮಾಡಿ ಮುಂದೆ ಸಾಗವನಿಗೆ ಶರಣಾರ್ಥಿ |
ಬೋಧದಿಂದ ಜನರ ಹಾದಿಗೆ ತರುವಂಥ ವೇದಾಂತಿಗೊಮ್ಮೆ ಶರಣಾರ್ಥಿ |
ಕ್ರೋಧ ಕಾಮ ಮೋಹ ಮದ ಮತ್ಸರ ಬಿಟ್ಟ ಸದಾಚಾರಿಗಳಿಗೆ ಶರಣಾರ್ಥಿ |

ಚಾಲ

ನಿದ್ದಿ ಬಡಕರಿಗೆ ಶರಣಾರ್ಥಿ |
ಎದ್ದಕೊಂಡ ಕೇಳವರಿಗೆ ಶರಣಾರ್ಥಿ |
ಗದ್ದಲ ಎಬಿಸುವವರಿಗೆ ಶರಣಾರ್ಥಿ |
ಸದ್ದಾಗಿ ಕೇಳವರಿಗೆ ಶರಣಾರ್ಥಿ ||

ಏರು

ವರಕವಿ ಹುಲಕುಂದ ಗುರು ಭೀಮೇಶನಿಗೆ ಶರಣು ಶರಣು ಶಿವ ಶರಣಾರ್ಥಿ||೨||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು