ಗೌರಿ ಕಂದ ಗಣಪಣ್ಣ |
ಅರವತ್ನಾಲ್ಕು ವಿದ್ಯೆ ನಿಪುಣ |
ಸುರಳಿ ಸೊಂಡಿ ಕಿರೀಟ ಧಾರಣ |
ತೋರ ಎನ್ನ ಮೇಲೆ ಕರುಣ |
ಸ್ಮರಿಸುವೆ ಅನುದಿನಾ |
ಬಾರೋ ಗಜವದನ |
ಬಾರೋ ಗಜವದನ | ಬಾರೊ ಗಜವದನ ||೧||

ಮರಿಯದೆ ಪನ್ನೀರನ್ನ |
ಕರಿಕಿ ಪತ್ರಿ ಮರಗದವನ |
ಸುರ ಹೊನ್ನಿ ಪುಷ್ಪಗಳನ |
ಏರಿಸಿ ಕರ ಮುಗಿಯುವೆನ |
ಆರತಿ ಬೆಳಗುವೆನ |
ಬಾರೋ ಗಜವದನ | ಬಾರೋ ಗಜವದನ ||೨||

ಸಿರಾ ಪೂರಿ ಬೆಸನ |
ಹೆರ ತುಪ್ಪ ಕರಿಗಡಬ ಅನ್ನ |
ಕ್ಷೀರ ಮಸರ ಕಲಿಸಿ ಪೂರ್ಣ |
ಸಾರ ಶಂಡಗಿ ಚೂರ್ಣ |
ತೋರಿಸುವೆನು ಬಾರಾ |
ಬಾರೋ ಗಜವದನ | ಬಾರೋ ಗಜವದನ | |೩||

ಕಾರ್ಯಕ್ರಮದೊಳು ನಿನ್ನ |
ಶಿರಬಾಗಿ ಬೇಡುವೆನ |
ವರವ ಕೊಟ್ಟ ಮುನ್ನ |
ಪೊರೆಯಯ್ಯ ಕಂದನ್ನ |
ದೂರ ಮಾಡೋ ವಿಘ್ನಾ |
ಬಾರೋ ಗಜವದನ | ಬಾರೋ ಗಜವದನ ||೪||

ಧರೆಯೊಳು ವಾಹೀನ
ಪುರ ಹುಲಕುಂದ ಜಾಣ
ವರಕವಿ ಭೀಮಣ್ಣ
ಗುರು ಹೇಳಿದ ಇದನ
ಅರುವ ಆಯ್ತು ಪೂರ್ಣ
ಬಾರೋ ಗಜವದನ | ಬಾರೊ ಗಜವದನ ||೫||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು