ಗಣಪತಿ ನಿಮ್ಮ ಸ್ತುತಿ ಮಾಡುವೆನು ಸಭಾದೊಳು
ಮತಿಕೊಡು ವಿದ್ಯದ ಜಯ ಪೂರ್ಣಾ |
ಜನ ನನನ ನನನ ಜಂಕರಿ ನುಡಿಸುತ
ತಾಳದೊಳಗ ಮಾಡುವೆ ಸ್ಮರಣಾ ||

ಬೇಕಾದಂತಾ ಚಂಕು ಚಾಳ ಚಂಕು ಚಾಳ ಗಜಮುಖ
ಸರಿಯಾಗಿ ಬಂದ ನಿಂತ ಸಭಾದೊಳಗ |
ಇಲಿಯ ಮ್ಯಾಗ ಹತ್ತಿಬಂದ ಸುತ್ತಮುತ್ತ ಯಾರಿಲ್ಲ
ಹೊತ್ತಿಗಿ ಹಿಡದ ಬಲಗೈಯ್ಯಾಗ |

ನೀತಿವಂತರ ಮನಿಗಿ ಹೋಗಿ ಊಟಾ ಮಾಡಿ ಬರುವಾಗ
ತತ್ತರಿಸ್ಯಾಡಿ ಬಿದ್ದ ನಡು ದಾರಿಯೊಳಗೆ |
ಪಡಡಡಡಡಡಡ ಹೊಟ್ಟಿ ಒಡದ
ಪಾಯಸ ಹೊಂಟಿತ ಕೆರಿ ಒಡದಾಂಗ ||

ಚಾಲ

ಬಾಳ ಬಳದ ತುಂಬ ತಾನ ಅದೃಷ್ಟಾ
ಸರಪ ಹಿಡದ ಹಾಕತಾನ ಕಟ್ಟಾ ||
ಚಂದ್ರ ನೋಡಿ ನಕ್ಕ ಕೊಕ್ಕಟಾ
ಗಣಪತಿಗೆ ಬಂತ ಬಹು ಸಿಟ್ಟಾ ||
ತಿಗಡೊಳ್ಳಿ ಊರ ಕವಿ ಮೆಟ್ಟಾ
ಮಾರುತಿ ತಿಳಿಸಿದ ಮರಿಕಲ್ಲಗ ಗುಟ್ಟಾ ||

ಏರ

ಚಕ್ರ ವಡದ ಚವತಿ ದಿವಸ ಅರ್ದಾಹೋತ ಸ್ರಾಪದಿಂದ
ಚಂದ್ರನ ಮಾರಿ ನೋಡಬ್ಯಾಡ್ರಿ ಚವತಿ ದಿನಾ |
ಜನ ನನನ ನನನ ಜಂಕರಿ ನುಡಿಸುತ
ತಾಳದೊಳಗೆ ಮಾಡುವೆ ಸ್ಮರಣಾ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲ ಕವಿಯ ಗೀಗೀ ಪದಗಳು