ನಾರಾಯಣಾ ನಿನ್ನ ನಾಮದ ಬೀಜವ |
ನಾನೆಲ್ಲಿ ಬಿತ್ತಿ ಬೆಳೆಯಲಿ | ನಿನ ನಾಮ |
ನಾಲೀಗಿ ಮೇಲೆ ಬೆಳೆದೇನೋ ||

ಕೃಷ್ಣ ಕೃಷ್ಣ ಎಂದು ಮತ್ತ ಬೀದಿಗಿ ಬಂದ |
ಕೃಷ್ಣ ನಮಗೆಲ್ಲಿ ದೊರದಾನ | ಈ ಪರಿ |
ಎಷ್ಟು ದಿನ ಹೀಂಗ ಕಳೆಯಲಿ ||

ಇಂದು ನನ್ನಂಗಳ ಶ್ರೀಗಂಧ ನಾತಾವ |
ಬಂದಿದಾನೇನ ಶ್ರೀಹರಿ | ನನ ಮನಿಗೆ |
ಗಂಧದ ಮಡುವ ಕಲಕೂತ ||

ಶಿವ ಶಿವ ಎಂದರ ಸಿಡಲೆಲ್ಲ ಬಯಲಾಗಿ |
ಕಲ್ಲು ಬಂದೆರಗಿ ಕಡೆಗಾಗಿ | ಎಲೆ ಮನವೆ |
ಶಿವನೆಂಬ ಶಬುದ ಬಿಡಬ್ಯಾಡ ||

ಮಂದಿ ಮಂದೀಯೆಂದು ಮಂದಿ ನಂಬಲಿ ಹೋದ |
ಮಂದಿ ಬಿಟ್ಟಾರ ನಡುನೀರ | ಮಲ್ಲಯ್ಯ |
ತಂದಿ ನನ ಕೈಯ ಬಿಡಬ್ಯಾಡ ||

ಭಂತ್ನಾಳ ಶರಣಯ್ಯ ನಾ ನಿನ್ನ ಮಗಳಯ್ಯ |
ಲೇಸಗಿತ್ತೆಯ್ಯ ಬಡವೆಯ್ಯ | ನನ ಮ್ಯಾಲ |
ಸಾಸ್ವಿಕಾಳಟ್ಟು ದಯವಿರಲಿ |

ಯಾಲಕ್ಕಿ ತಂದೀದ ಏಳಪ್ಪ ಬಲಭೀಮ |
ಯಾಲಕ್ಕಿ ಒಳಗ ಎಳಿನಾಮ | ತಂದೀದ |
ಏಳೊ ನಿಮ್ಬರಗಿ ಬಲಭೀಮ ||

ಸತ್ಯವಂತರೆಂದು ಶರಣ ಮಾಡಲಿ ಹೋದ |
ಮತ್ಯಾಕ ಮಾರಿ ತಿರುವ್ಯಾರ | ಬಸವಣ್ಣ |
ಮುತ್ತು ತಂದೀದ ಮಗಡಾಕ ||

ಸೊಲ್ಲಾಪುರದ ಒಳಗೆ ಸೆಲ್ಲೆಲ್ಲ ಮಲ್ಲೀಗಿ |
ಹಾಸುಮಂಚೆಲ್ಲ ಹವಳವ | ಸಿದರಾಮನ |
ದುಂಡುಕೋಲೆಲ್ಲ ದವನವ ||

ಆಕಾಶದಡವ್ಯಾಗ ಧೂಪದ ಹೊಗೆಯೆದ್ದು |
ಆಯ್ತ ಮಲ್ಲಯನ ಶಿವಪೂಜಿ | ಆಗಾಗ |
ಆಕಾಶದ ಘಂಟಿ ಘಳಲೆಂದು ||

ಎಲ್ಲೆಲ್ಲಿ ನೋಡಿದರ ಥೆಳ್ಳಾನ ಕಲ್ಲಿಲ್ಲ |
ಜಳ್ಳಾನೆ ಹರಿವ ಜಲವಿಲ್ಲ | ಲಿಂಗಯ್ಯನ |
ವಸ್ತ್ರ ನಾನೆಲ್ಲಿ ಒಗೆಯಲೆ ||

ಮೂಗಿನಾಗ ಮೂಗುತಿ ನಕ್ಕರೆ ಕರಿಕಲ್ಲು |
ಅಕ್ಕ ನೀನ್ಯಾರ ಮಗಳವ್ವಾ | ಹಲಸಂಗಿ |
ಗಚ್ಚೀನ ಗುಡಿಯ ಜಕ್ಕವ್ವ ||