18ನೇ ಶತಮಾನದ ಅಂತ್ಯ ಭಾಗದಲ್ಲಿ ಕೃಷ್ಣ ಅನಂತ ಡೋಂಗ್ರೆ ಎಂಬ ವೇದಾಧ್ಯಯನ ಸಂಪನ್ನನೂ, ಸದಾಚಾರಿಯೂ ಆದ ಚಿತ್ಪಾವನ ಬ್ರಾಹ್ಮಣನು ಮಾಳದ ಹೇರಂಜಿಯಲ್ಲಿ ವಾಸವಾಗಿದ್ದನು. ಇದಕ್ಕಿಂತ ಮೊದಲು ಈ ಪ್ರದೇಶದ ಭೌಗೋಳಿಕ ಇರುವಿಕೆ ಬಗ್ಗೆ ನಿಮಗಿಲ್ಲಿ ತಿಳಿಸಬೇಕಾಗಿದೆ. ಪೋರ್ಚುಗೀಸರ ಕಾಲದಲ್ಲಿಯೇ ಚಿತ್ಪಾವನರು ದಕ್ಷಿಣಕ್ಕೆ ವಲಸೆ ಬಂದರು. ದಕ್ಷಿಣಕನ್ನಡದ (ಈಗಿನ ಉಡುಪಿ ಜಿಲ್ಲೆ) ಪ್ರದೇಶದಲ್ಲಿ ಆದಿವಾಸಿ ಗಿರಿಜನರಿಂದ ತೋಟದ ಸ್ಥಳಗಳನ್ನು ಪಡೆದು ಊರ್ಜಿತ ರೂಪುಗೊಳಿಸಿ ವಸಾಹತು ಏರ್ಪಡಿಸಿದರು. ಉಡುಪಿ ಜಿಲ್ಲೆಯ ಕಾರ್ಕಳದ ಪೂರ್ವಕ್ಕೆ ಸುಮಾರು 20 ಕಿ.ಮೀ. ದೂರದಲ್ಲಿ ಪಶ್ಚಿಮಘಟ್ಟಗಳ ಸಾಲು, ಕೋಟೆಯ ಗೋಡೆಯಂತೆ ವಿರಾಜಮಾನವಾಗುತ್ತದೆ. ಈ ಪಶ್ಚಿಮಘಟ್ಟ ಅಥವಾ ವರಾಹ ಪರ್ವತದ ಬುಡಕ್ಕೆ ಇರುವ ಮಾಳ ಗ್ರಾಮಕ್ಕೆ ಸುಮಾರು 8-9 ಕಿ.ಮೀ. ದೂರವಿರುವ ತುಂಗಾ-ಭದ್ರಾ ನದಿಗಳ ಉಗಮ ಸ್ಥಾನ ವಾದ ಗಂಗಾಮೂಲವೆಂಬ ಸುಂದರ ಕಾಡಿನ ನಾಡೇ ನಮ್ಮ ರಮಾಬಾಯಿಯ ಜನ್ಮ ಸ್ಥಾನ. ಈ ಗಂಗಾಮೂಲದ ಎಳ್ಳಮಾವಾಸ್ಯೆ ಸ್ನಾನದ ಪಾವಿತ್ರ್ಯ ಇಂದಿಗೂ ನಿತ್ಯನೂತನ. ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರು ಇಲ್ಲಿ ಸಂದರ್ಶನವಿತ್ತು, ಸಂತಸಗೊಂಡಿದ್ದರು. ದೇಶ -ವಿದೇಶದ ಯಾತ್ರಾರ್ಥಿಗಳಿಗೂ ಈ ತಪೋಭೂಮಿ ತಂಪೆರೆಯುವಂತಿದೆ. ಸಮುದ್ರ ಮಟ್ಟದಿಂದ 4037 ಅಡಿ ಎತ್ತರದಲ್ಲಿರುವ ಈ ಗಂಗಾ ಮೂಲದಲ್ಲಿ ಭದ್ರಾ ನದಿಯ ಉಗಮ ಸ್ಥಳಕ್ಕೆ ವರಾಹತೀರ್ಥವೆಂದೂ ತುಂಗಾ ನದಿಯು ಹುಟ್ಟುವ ಸ್ಥಳಕ್ಕೆ ನಾಗತೀರ್ಥವೆಂದೂ ಹೆಸರಿದೆ. ಹಾಗೇ ಪೂರ್ವಾಬಿಮುಖವಾಗಿ ದೂರ ಅಂತರದವರೆಗೆ ಹರಿದು ಶಿವಮೊಗ್ಗದ ಬಳಿಯ ‘ಕೂಡಲಿ’ ಎಂಬಲ್ಲಿ ಕೂಡಿ -ತುಂಗಭದ್ರಾ ಎಂಬ ನದಿಯಾಗಿ ಎಲ್ಲರ ಬಾಯಲ್ಲೂ ಹರಿಯುತ್ತಾಳೆ.

ಈ  ಕೃಷ್ಣ  ಶಾಸ್ತ್ರಿಗಳು  ಗಂಗಾಮೂಲದ  ಬಳಿಯಿರುವ  ಮಾಳ ಗ್ರಾಮದಲ್ಲಿ ವಾಸವಾಗಿದ್ದಾಗ, ಅವರಿಗೆ ರಾಮ ಹಾಗೂ ಪರಮೇಶ್ವರ ಎಂಬಿಬ್ಬರು ಗಂಡು ಮಕ್ಕಳು ಜನಿಸಿದ್ದು ಅವರಲ್ಲಿ ರಾಮಾ ಡೋಂಗ್ರೆ ಬಗ್ಗೆ ವಿಶೇಷ ವಿವರಗಳೇನೂ ಲಭ್ಯವಿಲ್ಲ. ಹಾಗೇ ಪರಮೇಶ್ವರ ಡೋಂಗ್ರೆಗೆ 1796ನೇ ಇಸವಿಯಲ್ಲಿ ಅನಂತನೆಂಬ ಪುತ್ರನು ಹುಟ್ಟಿದನು. ನಮ್ಮ ಈಗಿನ ಚರ್ಚೆಯಲ್ಲಿ  ಅನಂತ ಡೋಂಗ್ರೆಯವರ ವ್ಯಕ್ತಿತ್ವ ಬಹಳ ಉನ್ನತವಾದುದೆಂದು ತಿಳಿದುಬರುತ್ತದೆ. ಚಿಕ್ಕಂದಿನಿಂದಲೂ ಸೂಕ್ಷ್ಮಬುದ್ಧಿ, ಜ್ಞಾಪಕ ಶಕ್ತಿ, ವಿಚಾರಪ್ರಜ್ಞೆ ಮುಂತಾದ ಒಳ್ಳೆ ಗುಣಗಳನ್ನು ಮೈಗೂಡಿಸಿಕೊಂಡೇ ಬೆಳೆದವರು. ಜೊತೆಗೆ ಅಜ್ಜ ಕೃಷ್ಣ ಶಾಸ್ತ್ರಿಗಳ ಒಡನಾಟ, ವಿದ್ಯಾ ಕಲಿಕೆ, ತೋಟದ ಕೆಲಸಗಳಲ್ಲಿ ನೆರವಾಗುವಿಕೆ ಇವೇ ಸಂಸ್ಕಾರಗಳು ಅನಂತ ಶಾಸ್ತ್ರಿಯ ಬಾಲ್ಯದ ಸ್ನೇಹಿತರಾದವು. ಮುಂದೆ ಕೃಷ್ಣ ಶಾಸ್ತ್ರಿಗಳ ನಿಧನಾನಂತರ ಅನಂತ ಡೋಂಗ್ರೆಗೆ ತಮ್ಮ 12ನೇ ವಯಸ್ಸಿನಲ್ಲಿ ಮೊದಲ ವಿವಾಹ ಸೌ. ಯಮುನಾ ಬಾಯಿ ಇವರೊಂದಿಗೆ ನೆರವೇರಿತು.

ವಿವಾಹಾನಂತರ ಶಾಸ್ತ್ರಿ ಡೋಂಗ್ರೆ ಶೃಂಗೇರಿ ಶಂಕರಾಚಾರ್ಯ ಪೀಠದಲ್ಲಿ ವೇದಾಧ್ಯಯನ, ಸಂಸ್ಕೃತಾಭ್ಯಾಸದಲ್ಲಿ ತೊಡಗಿಕೊಂಡರು. ಅಲ್ಲಿ ಸುಮಾರು ಆರು ವರ್ಷಗಳ ಕಾಲ ಅಧ್ಯಯನ ನಡೆಸಿ ತಮ್ಮ 18ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಪುಣೆಯನ್ನು ಸೇರಿದರು. ಆಗ 2ನೇ ಬಾಜಿರಾಯನು ಪೇಶ್ವೆಯಾಗಿದ್ದ ಕಾಲ. ಬಾಜಿರಾಯನ ರಾಜಪುರೋಹಿತ ರಾಮಚಂದ್ರ ಶಾಸ್ತ್ರಿ ಸಾಠೆ ಎಂಬವರು ಅನಂತ ಶಾಸ್ತ್ರಿಗಳ ಗುರುಗಳಾಗಿದ್ದರು. ಆಗ ವಿಶೇಷವೆಂದರೆ ರಾಜಪುರೋಹಿತರಾದ ರಾಮಚಂದ್ರ ಶಾಸ್ತ್ರಿಗಳು ಪೇಶ್ವೆ ಮನೆತನದ ಸ್ತ್ರೀಯರಿಗೆ ಸಂಸ್ಕೃತ ಸಾಹಿತ್ಯವನ್ನು ಕಲಿಸುವುದ್ಕಾಗಿ ನಿಯಮಿತಗೊಂಡಿದ್ದರು. ಹೀಗೆ ಜತೆಗೇ ಅನಂತ ಶಾಸ್ತ್ರಿಗಳೂ ಪೇಶ್ವೆ ದರ್ಬಾರಿನಲ್ಲಿ ಸಹಜವಾಗಿ ತಮ್ಮ ಬುದ್ಧಿಮತ್ತೆಯಿಂದ ನಿಕಟವರ್ತಿಯಾಗಿದ್ದರು.

ಅನಂತ ಶಾಸ್ತ್ರಿಗಳದು ವೈವಿಧ್ಯಪೂರ್ಣ ಬದುಕೇ ಸರಿ. ಕಾವ್ಯ, ತರ್ಕ, ವ್ಯಾಕರಣಾದಿ ಸಾಹಿತ್ಯ ಭಾಗದಲ್ಲೂ, ಪುರಾಣ ಧರ್ಮಶಾಸ್ತ್ರಗಳಲ್ಲೂ, ಉಪನಿಷತ್ತುಗಳಲ್ಲೂ ಪ್ರವೀಣ ರಾದರು. ತಮ್ಮಲ್ಲೇ ತರ್ಕ ನಡೆಸುತ್ತಾ ನಡೆಸುತ್ತಾ ಭಾರತದ ಸ್ತ್ರೀ ವಿದ್ಯಾಭ್ಯಾಸದ ಪ್ರಾಮುಖ್ಯ ಅರಿತುಕೊಂಡರು. ಹಾಗೇ ಪುರಾಣ ಸದೃಶ ಸ್ತ್ರೀಯರಾದ ಗಾರ್ಗಿ, ಮೈತ್ರೇಯಿ, ಸುಲಭಾ, ಲೋಪಾಮುದ್ರಾ, ಶಾಕುಂತಲಾ ಮುಂತಾದವರು ದೇವ ಭಾಷೆಯಾದ ಸಂಸ್ಕೃತದಲ್ಲಿ ಉನ್ನತ ವಿದ್ಯಾಭ್ಯಾಸ ನಡೆಸಿ ವೇದ ಋಚೆಗಳನ್ನು ತಯಾರಿಸುವಷ್ಟು ಯೋಗ್ಯತೆ ಪಡೆದಿದ್ದರಲ್ಲವೆ ಅಂದಿತು ಮನಸ್ಸು. ಹಾಗಾದರೆ ತಾನೂ ಸ್ವಗ್ರಾಮಕ್ಕೆ ಹೋಗಿ ತನ್ನ ಮನೆಯ ಸ್ತ್ರೀಯರಿಗೆ ಸಂಸ್ಕೃತವನ್ನು ಕಲಿಸಲೇಬೇಕೆಂಬ ಸಂಕಲ್ಪ ಮನದಲ್ಲಿ ನೆಲೆಯೂರಿತು.

1818ರಲ್ಲಿ ಮತ್ತೆ ಪೇಶ್ವೆಯವರ ಕಾಲದಲ್ಲಿ ವ್ಯತ್ಯಯವಾಗಿ ಬ್ರಿಟಿಷ್ ಸರಕಾರದ ಹಸ್ತಾಲಾಪದಿಂದಾಗಿ 2ನೇ ಬಾಜಿರಾಯನು ಅಧಿಕಾರ ಕಳೆದುಕೊಳ್ಳಬೇಕಾದ ವಿಲಕ್ಷಣ ಪರಿಸ್ಥಿತಿ ಒದಗಿಬಂತು. ಖಾನ ಕಾನ್ಪುರದ ಬಳಿಯ ಬ್ರಹ್ಮಾವರ್ತಕ್ಕೆ ಅವರನ್ನು ತಮ್ಮ ವಿಶ್ರಾಂತಿ ಜೀವನ ಕಳೆಯುವುದಕ್ಕಾಗಿ ಕಳುಹಿಸಲಾಯಿತು. ಇವರೊಂದಿಗೆ ಅವರ ಪರಿವಾರ ಜನರೂ, ಆಶ್ರಿತರೂ, ರಾಜಗುರುಗಳೂ ಒಡನಾಡಿಗಳಾದರು. ಈ ಸಮಯದಲ್ಲೇ ರಾಮಚಂದ್ರ ಸಾಠೆಯವರು ತನ್ನ ಶಿಷ್ಯನಿಗೆ ‘ಶಾಸ್ತ್ರಿ’ ಎಂಬ ಬಿರುದು ನೀಡಿ ಗೌರವಿಸಿ ಗ್ರಾಮಕ್ಕೆ ತೆರಳಲು ನಿರೂಪ ಕೊಟ್ಟನು. ಇತ್ತ ಅನಂತ ಶಾಸ್ತ್ರಿಗಳು ತಮ್ಮೂರು ಮಾಳಕ್ಕೆ ಏನೋ ಧ್ಯೇಯದ ಹೊಣೆ ಹೊತ್ತುಕೊಂಡು ಬಂದರು. ಸಾಂಸಾರಿಕವಾಗಿ ಕೊರತೆಯಿಲ್ಲದಿದ್ದರೂ, ತನ್ನ ತಂದೆಗೆ ಬಹಳೇ ಸಾಲವಾಗಿದ್ದುದನ್ನು ಕಂಡು ಚಿಂತಿತರಾದರು. ಇದೇ ಸಮಯದಲ್ಲಿ ಅನಂತ ಶಾಸ್ತ್ರಿಗಳಿಗೆ ಎರಡು ಹೆಣ್ಣು ಹಾಗೂ ಒಂದು ಗಂಡು ಮಕ್ಕಳಿದ್ದರು. ತನ್ನ ತಂದೆಗೊದಗಿದ ಪರಿಸ್ಥಿತಿಯಿಂದ ಬೇಸತ್ತು ಧನಾರ್ಜನೆಗೆ ಮೈಸೂರು ಮಹಾರಾಜರ ಆಸ್ಥಾನ ಸೇರಿದರು. ಮೈಸೂರು ಮಹಾರಾಜರೋ ವಿದ್ವಜ್ಜನರ ಆಶ್ರಯದಾತರೂ, ಪೋಷಕರೂ ಎಂದ ಪ್ರಸಿದ್ಧಿಗೊಂಡವರು. ವಿದ್ವಾಂಸರಿಗೆ ಅಲ್ಲಿ ಅತೀವ ಗೌರವ ಕೊಡಲಾಗುತ್ತಿತ್ತು. ಅನಂತ ಶಾಸ್ತ್ರಿಗಳ ಬಹುಶ್ರುತ್ವತ್ವ, ಪಾಂಡಿತ್ಯಗಳಿಗೆ ಮೆಚ್ಚಿದ ಮಹಾರಾಜರು ಅನೇಕ ಧನ, ಕನಕಾದಿಗಳನ್ನು, 25,000 ರೂಪಾಯಿಗಳನ್ನು ಸಂಭಾವನೆ ಕೊಟ್ಟು ಗೌರವಿಸಿದರು. ಹೀಗೆ ಮೈಸೂರಿನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಅನಂತ ಶಾಸ್ತ್ರಿಗಳು ಆಸ್ಥಾನ ಪಂಡಿತರಾಗಿದ್ದರು. ತರುವಾಯ ಮತ್ತೆ ಸ್ವಗ್ರಾಮವಾದ ಮಾಳಕ್ಕೆ ತೆರಳಿ, ಸಾಲಬಾಧೆಯಿಂದ ಮುಕ್ತರಾಗಿ, ತನ್ನ ಮಕ್ಕಳ ವಿವಾಹಾದಿಗಳನ್ನು ಪೂರೈಸಿ, ತನ್ನ ಮನೆಯವರೊಂದಿಗೆ ಕಾಶೀಯಾತ್ರೆಗೆ ಪ್ರಯಾಣ ಬೆಳೆಸಿದರು. ಆಗಿನ ಮುಂಬೈ ಗವರ್ನರನು ಶಾಸ್ತ್ರಿಗಳನ್ನು ಗೌರವಿಸಿ, ಅವರ ಪ್ರಯಾಣದ ಪರವಾನಗಿ ಪತ್ರವನ್ನೂ ಒಂದು ಪಲ್ಲಕ್ಕಿ, ಎರಡು ಗಾಡಿ ಹಾಗೂ ಹನ್ನೆರಡು ಮಂದಿ ಸಿಪಾಯಿಗಳನ್ನೂ ಕಳುಹಿಸಿದ್ದನು. ಈ ಶಿಫಾರಸು ಪತ್ರದಲ್ಲಿ ಅನಂತ ಶಾಸ್ತ್ರಿಯವರನ್ನು  ಯುಕ್ತ ಮರ್ಯಾದೆಗಳಿಂದ ಸ್ವಾಗತಿಸಬೇಕಾಗಿ ದೇಶೀಯ ರಾಜರಿಗೆ ಹಾಗೂ ಸರದಾರರಿಗೆ ಆದೇಶ ಕೊಡಲಾಗಿತ್ತು. ಕಾಶೀ ಯಾತ್ರೆಯ ಸಮಯದಲ್ಲಿ ಅನಂತ ಶಾಸ್ತ್ರಿಗಳ ಪತ್ನಿ ಸೌ| ಯಮುನಾ ಬಾಯಿ ಸ್ವರ್ಗಸ್ಥರಾದರು. ತಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಾಶಿಯಲ್ಲಿ ನಾಲ್ಕು ವರ್ಷಗಳ ಕಾಲ ನೆಲೆಸಿದರು. ಕಾಶಿಯಲ್ಲಿ ಅನಂತ ಶಾಸ್ತ್ರಿಗಳು ಆರು ದರ್ಶನ ಶಾಸ್ತ್ರಗಳಲ್ಲೂ ಪ್ರಾವೀಣ್ಯ ಗಳಿಸಿದರು. ಅದುವರೆಗೆ ಶೈವ ಮತದಲ್ಲಿದ್ದ ಶಾಸ್ತ್ರಿಗಳು ವೈಷ್ಣವ ಮತದ ದೀಕ್ಷೆಯನ್ನು ಸ್ವೀಕರಿಸಿದರು.

ಮುಂದೆ ಕಾಶೀರಾಜನ ಆಸ್ಥಾನದಲ್ಲಿ ಕೆಲ ಕಾಲವಿದ್ದು ಮಥುರಾ, ವೃಂದಾವನ, ಹರಿದ್ವಾರ, ಅಯೋಧ್ಯೆ ಮುಂತಾದ ಕಡೆ ಸಂಚರಿಸಿ ನೇಪಾಳದ ಕಡೆ ಹೊರಟರು. ನೇಪಾಳದಿಂದ ಹಿಂದಿರುಗಿದ ಅನಂತ ಶಾಸ್ತ್ರಿಗಳು 1840ನೇ ಇಸವಿಯಲ್ಲಿ ಪೈಠಣ ಎಂಬ ಊರಿನಲ್ಲಿ ಬಂದು ತಂಗಿದ್ದಾಗ, ದೈವಯೋಗವೋ ಕಾಕತಾಳೀಯವೋ ಕಾಶೀಯಾತ್ರೆಗೆಂದು ಹೊರಟಿದ್ದ ಮಾಧವ ರಾವ್ ಅಭ್ಯಂಕರರೂ ಅಲ್ಲೇ ತಂಗಿದ್ದರು. ತಮ್ಮ ಗರ್ಬಿಣಿ ಹೆಂಡತಿ ಹಾಗೂ ಒಂಬತ್ತು ವರ್ಷ ಪ್ರಾಯದ ಮಗಳನ್ನೂ ಜತೆಗೆ ಕರೆತಂದಿದ್ದರು. ಅನಂತ ಶಾಸ್ತ್ರಿಗಳ ವಿದ್ಯಾ ತೇಜಸ್ಸು, ರೂಪ, ಸಂಪತ್ತು, ಗಂಬೀರ ಸ್ವಭಾವ ಇತ್ಯಾದಿ ಗುಣಗಳಿಂದ ಸಹಜವಾಗಿ ಕಂಗೊಳಿಸುತ್ತಿದ್ದ ವ್ಯಕ್ತಿಯ ವ್ಯಕ್ತಿತ್ವಕ್ಕೆ ಅಭ್ಯಂಕರರು ಮಾರುಹೋದರು. ವಿಧುರನೆಂದು ತಿಳಿದರೂ, ವಿದ್ಯಾವಾರಿದಿಯೊಂದಿಗೆ ತಮ್ಮ ಮಗಳನ್ನು ಧಾರೆ ಎರೆದು ಕೊಟ್ಟೇ ಬಿಟ್ಟರು. ದೈವಯೋಗವೆಂಬಂತೆ ಅನಂತ ಶಾಸ್ತ್ರಿಗಳೂ ಇದಕ್ಕೆ ಒಪ್ಪಿದರು. ಹೀಗೆ ಅನಂತ ಶಾಸ್ತ್ರಿಗಳ ದ್ವಿತೀಯ ವಿವಾಹವು ಸೌ| ಲಕ್ಷ್ಮೀಬಾಯಿಯೊಂದಿಗೆ ನೆರವೇರಿತು.

ವಿವಾಹಾನಂತರ ನವ ವಧುವಿನೊಡನೆ ಸ್ವಗ್ರಾಮ ಮಾಳಕ್ಕೆ ತೆರಳಿದಾಗ ಅನಂತ ಶಾಸ್ತ್ರಿಗಳ ವಯಸ್ಸು ನಲ್ವತ್ತನಾಲ್ಕು ಆಗಿತ್ತು. ಅನಂತ ಶಾಸ್ತ್ರಿಗಳ ವಯೋವೃದ್ಧ ತಾಯಿ ಸೊಸೆಯನ್ನು ಕಂಡು ಆನಂದ ಪಟ್ಟರು. ವಿದ್ಯೆ, ಪ್ರವಾಸಗಳು, ಲೋಕಾನುಭವಗಳು, ಸ್ವತಂತ್ರ ವಾದ ಮನೋಭಾವಗಳು ಇವೆಲ್ಲ ಅನಂತ ಶಾಸ್ತ್ರಿಯವರನ್ನು ಸಂಪ್ರದಾಯ ವಾದದಿಂದ ಹೊರಗುಳಿಸಿದವು. ಭೂತಾರಾಧನೆ, ಮಂತ್ರವಾದ ಮುಂತಾದ ಅಂಧಶ್ರದ್ಧೆ ಗಳನ್ನು ಕಟುವಾಗಿ ಖಂಡಿಸಿದ್ದೇ ಅಲ್ಲದೆ ತಮ್ಮ ಮನೆಯಲ್ಲೂ ಇಂತಹ ಆಚರಣೆಗಳನ್ನು ನಿಷೇದಿಸಿದರು. ಸ್ತ್ರೀಯರನ್ನು ವಿದ್ಯಾವಂತರಾಗಿ ಮಾಡಬೇಕೆನ್ನುವ ಬಯಕೆಯನ್ನು ಕಾರ್ಯರೂಪಕ್ಕೆ ತಂದರು. ಎಂತಹ ಕಾಲದಲ್ಲಿ ಎಂತಹ ಚಲನೆ? ನಮ್ಮ ಮನಸ್ಸು ಹಿಂದೋಡಿದರೆ ತಿಳಿಯುತ್ತದೆ ಆವಾಗಿನ ದಿನಗಳ ಸಂಪ್ರದಾಯಗಳ ಕಟ್ಟುಬದ್ಧತೆ ಹೇಗಿದ್ದೀತೆಂದು. ಅಂಥ ವಾತಾವರಣ ದಲ್ಲಿ ಅನಂತ ಶಾಸ್ತ್ರಿಗಳ ವಾದ ವಿತಂಡ ಎನಿಸಿತು. ‘‘ಸ್ತ್ರೀಯರಿಗೆ ವಿದ್ಯೆ ಅನವಶ್ಯಕ. ಅದರಲ್ಲೂ ದೇವಭಾಷೆಯಾದ ಸಂಸ್ಕೃತಕ್ಕಂತೂ ಸ್ತ್ರೀಯರಿಗೆ ಪ್ರವೇಶವಿಲ್ಲ’’ ಎಂಬ ಭಾವನೆಯೇ ಸರ್ವತ್ರ ಪ್ರಚಾರವಿದ್ದ ಆ ಕಾಲದಲ್ಲಿ ಅನಂತ ಶಾಸ್ತ್ರಿಗಳ ವರ್ತನೆ ನೆರೆಹೊರೆಯವರಿಂದಲೂ ಸ್ವಜನ ರಿಂದಲೂ ನಾನಾ ರೀತಿಯ ದೋಷಾರೋಪಗಳಿಗೆ ಕಾರಣವಾಯಿತು. ಹೊರಪ್ರಪಂಚದ ಅರಿವೇ ಇಲ್ಲದ ಮಂದಿ ಈ ತೆರನ ಬದಲಾವಣೆಯನ್ನು ಹೇಗೆ ಸ್ವೀಕರಿಸಿತು? ಸಹಜವಾಗಿ ಅನಂತ ಶಾಸ್ತ್ರಿಗಳನ್ನು ದ್ವೇಷಿಸತೊಡಗಿದರು. ಆಗ ಅನಂತ ‘‘ಶಾಸ್ತ್ರಿಗಳೂ ನಿಷ್ಠುರವಾಗಿ ಕರ್ತವ್ಯ ಅಕರ್ತವ್ಯಗಳ ಅರಿವು ನನಗಿದೆ. ನಾನು ದೇವರಿಗೆ ಹೆದರಿ ನಡೆಯುವವನೇ ಹೊರತು ಸಮಾಜಕ್ಕೆ ಹೆದರುವವನಲ್ಲ. ನನ್ನ ಜತೆಗೆ ಬೇಕೆನಿಸಿದರೆ ವ್ಯವಹಾರ ಇಟ್ಟುಕೊಳ್ಳುವುದು ಬಿಡುವುದು ನಿಮ್ಮಿಚ್ಛೆ’’ ಎಂಬುದಾಗಿ ತಿಳಿಸಿ ತನ್ನ ಪತ್ನಿ ಲಕ್ಷ್ಮೀಬಾಯಿಗೆ ಸಂಸ್ಕೃತಾಭ್ಯಾಸ ನೀಡಲಾರಂಬಿಸಿದರು.

ಈ ಎಲ್ಲ ವಿಶೇಷ ವಾರ್ತೆಗಳು ಉಡುಪಿ ಮಧ್ವಾಚಾರ್ಯರ ಪೀಠದವರೆಗೂ ಹಬ್ಬಿತು. ಮಠಾದಿಕಾರಿಗಳೇ ಸ್ವತಃ ಶಾಸ್ತ್ರಿಯವರನ್ನು ಕರೆಸಿ, ಧರ್ಮ ವಿರುದ್ಧವಾದ ವರ್ತನೆ ಬಗ್ಗೆ ವಿಚಾರಿಸಿದರು. ಆಗ ಅನಂತ ಶಾಸ್ತ್ರಿಗಳು ಅದಕ್ಕೆ ತಕ್ಕುದಾದ ಕಾರಣಗಳನ್ನು ಒದಗಿಸಿದರು. ಆದರೂ ಮಠಾದಿಕಾರಿಗಳ ಸಮ್ಮುಖದಲ್ಲಿ ವಾದ ಮಂಡಿಸಲು ತರ್ಕ ಸಭೆಯಲ್ಲಿ ಪಾಲ್ಗೊಳ್ಳಬೇಕಾಯಿತು. ಶೀರೂರು ಎಂಬಲ್ಲಿ ಸಭೆಗೆ ಏರ್ಪಾಟಾಯಿತು. ಕರ್ನಾಟಕದ ಮೂಲೆ ಮೂಲೆಗಳಿಂದ 400 ಜನ ಪಂಡಿತರು ಈ ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದರು. ಅನಂತ ಶಾಸ್ತ್ರಿಗಳು ಶೃತಿ, ಸ್ಮ ೃತಿಗಳಿದಲೂ, ರಾಮಾಯಣ, ಮಹಾಭಾರತ ಗಳಿಂದಲೂ, ಇತಿಹಾಸದಿಂದಲೂ, ಸ್ತ್ರೀಯರಿಗೆ ಸಂಸ್ಕೃತ ವಿದ್ಯೆ ಕಲಿಸಬಹುದಾಗಿ ಇದ್ದ ಆಧಾರಗಳನ್ನೆಲ್ಲ ಮಂಡಿಸಿದರು. ಇವರ ತರ್ಕಬದ್ಧವಾದ ವಾದಗಳಿಂದ ಎಲ್ಲ ಪಂಡಿತರೂ ತಲೆದೂಗುವಂತೆ ಉತ್ತರಿಸಿದ್ದು ದೊಡ್ಡ ಸಾಧನೆಯೇ ಸರಿ. ಪ್ರಶ್ನೋತ್ತರ ರೂಪವಾದ ಆ ದಿನದ ತರ್ಕದ ಲೇಖನಕ್ಕೆ ಮಠದ ಕಡೆಯಿಂದ ವಿದ್ವಾಂಸರು ಸಾಕ್ಷರಿಯನ್ನು ಹಾಕಿದರು. ಮುಂದೆ ಅನೇಕ ವರ್ಷಗಳವರೆಗೆ ಈ ಲೇಖನವನ್ನು ಅನಂತ ಶಾಸ್ತ್ರಿಗಳು ಸಂಗ್ರಹಿಸಿ ಜೋಪಾನವಾಗಿಟ್ಟಿದ್ದರೆಂದು ರಮಾಬಾಯಿ ತನ್ನ ಆತ್ಮಕಥೆಯಲ್ಲಿ ಬರೆದಿದ್ದಾರೆ.

ಮುಂದೆ ಕೆಲದಿನಗಳ ನಂತರ ಮಾತೃಶ್ರೀ ದೈವಾದೀನರಾದ್ದರಿಂದ, ಆ ನಿಟ್ಟಿನಲ್ಲಿ ತನ್ನ ಕರ್ತವ್ಯವನ್ನೆಲ್ಲ ನಿರ್ವಹಿಸಿದ ಶಾಸ್ತ್ರಿಗಳು ತಮ್ಮ ಹಿರಿಯ ಹೆಂಡತಿಯ ಮಕ್ಕಳಾದ ರಾಮಕೃಷ್ಣ ಶಾಸ್ತ್ರಿ ಹಾಗೂ ರಮಾಬಾಯಿಗೆ ಎಲ್ಲ ತೋಟ – ಜಮೀನು ಹಂಚಿ ಋಣಭಾರದಿಂದ ಮುಕ್ತರಾದರು. ತಾನು ಮಡದಿ ಲಕ್ಷ್ಮೀಬಾಯಿ ಜತೆಗೆ ತುಂಗಾನದಿಯ ಉಗಮವಾದ ಅದೇ ಗಂಗಾಮೂಲಕ್ಕೆ ಏಕಾಂತ ವಾಸಕ್ಕೆ ಹೊರಟರು. ಅಲ್ಲಿ ಊರಿನಿಂದ ಕರೆಯಿಸಿದ ಆಳುಗಳ ಸಹಾಯದಿಂದ ವಾಸಯೋಗ್ಯವಾದ ಮನೆಯನ್ನು ನಿರ್ಮಾಣ ಮಾಡಲಾಯಿತು. ಸೇವಕರಿಗೆ, ಯಾತ್ರಾರ್ಥಿಗಳಿಗೆ ಬೇರೆ ಬೇರೆ ವ್ಯವಸ್ಥೆ ಮಾಡಲಾಯಿತು. ಮುಂದೆ ಇಲ್ಲಿ ಗಂಗಾಮೂಲದಲ್ಲಿ 125 ಜಾನುವಾರು, ಏಳೆಂಟು ಕೆಲಸಗಾರರ ಮನೆಗಳು. ಅನೇಕ ವಿದ್ಯಾರ್ಥಿಗಳ ಪರಿವಾರವಿತ್ತು. ಜತೆಗೇ ಲಕ್ಷ್ಮೀಬಾಯಿಯ ವಿದ್ಯಾಭ್ಯಾಸವೂ ಸಾಗಿತ್ತು. 10 – 12 ವರ್ಷಗಳ ಕಾಲದ ಆಶ್ರಮ ವಾಸವು ಲಕ್ಷ್ಮೀಬಾಯಿಗೆ ತರ್ಕ, ಕಾವ್ಯ, ವ್ಯಾಕರಣ, ಮೀಮಾಂಸೆಗಳಲ್ಲಿ ಇತರರಿಗೆ ಬೋಧನೆ ಮಾಡುವಷ್ಟು ಸಾಮರ್ಥ್ಯ ವ್ಯಾಪಿಸಿತ್ತು. ಬಂದವರಿಗೆಲ್ಲ ನಗುಮೊಗದಿಂದ ಆದರಾತಿಥ್ಯ ಮಾಡುತ್ತಲೇ, ಜತೆಗೆ ಆಶ್ರಮದ ಹೂದೋಟದಲ್ಲಿ, ತರಕಾರಿ ತೋಟದಲ್ಲಿ ಪತಿಗೆ ಸಹಕರಿಸುತ್ತಿದ್ದಳು. ದಂಪತಿ ಅಕ್ಷರಶಃ ಅರುಂಧತಿ ವಸಿಷ್ಠರಂತೆ ವಾಸವಾಗಿದ್ದರು.

ಇವರಿಗೆ ಒಟ್ಟು ಆರು ಮಂದಿ ಮಕ್ಕಳು. ಮೂರು ಮಕ್ಕಳು ಬಾಲ್ಯದಲ್ಲೇ ಮೃತ್ಯುವಶರಾದರು. ಉಳಿದವರು ಕೃಷ್ಣಾಬಾಯಿ, ಶ್ರೀನಿವಾಸ ಹಾಗೂ ರಮಾಬಾ. ಕೊನೆಯ ಮಗಳಾದ ರಮಾಬಾಯಿ 1858ನೇ ಇಸವಿ ಎಪ್ರಿಲ್ 23ನೇ ತಾರೀಕಿಗೆ ಹುಟ್ಟಿದರು. ಇಷ್ಟರಲ್ಲಾಗಲೇ ತಮ್ಮಲ್ಲಿದ್ದ ಧನವೆಲ್ಲವೂ ವ್ಯಯವಾಗಿದ್ದರಿಂದ ಶಾಸ್ತ್ರಿಗಳು ಸಂಸಾರ ನಿರ್ವಹಣೆಗೆ ಬೇರೆ ದಾರಿ ಹುಡುಕಲೇಬೇಕಾಯಿತು. ಹಾಗೆ ದೃಢನಿರ್ಧಾರ ಕೈಗೊಂಡ ಅನಂತ ಶಾಸ್ತ್ರಿ ದಂಪತಿ ಆರು ತಿಂಗಳ ಕೂಸು ರಮಾಬಾಯಿಯನ್ನು ತೊಟ್ಟಿಲಲ್ಲಿ ಇಟ್ಟುಕೊಂಡು ಗಂಗಾಮೂಲದಿಂದ ಹೊರಟರು. ಒಂದು ರೀತಿಯಲ್ಲಿ ರಮಾಬಾಯಿ ಪಾಲಿಗೆ ದೇಶ ಪರ್ಯಟನೆ ಈಗಿಂದಲೇ ಆರಂಭವಾಯಿತೆನ್ನಬಹುದು. ಈ ದಂಪತಿ ಮೂವರು ಮಕ್ಕಳೊಂದಿಗೆ 1863ರ ಸುಮಾರಿಗೆ ಕುಮಟ ಮಾರ್ಗವಾಗಿ ಮುಂಬಯಿ ತಲುಪಿದರೆಂದು ಹೇಳಲಾಗುತ್ತಿದೆ.

ರಮಾಬಾಯಿಯ ಬಾಲ್ಯ

ಗಂಗಾಮೂಲ ತೊರೆದ ಸಂಸಾರ ತೀರ್ಥಯಾತ್ರೆ ಕೈಗೊಂಡಿತು. ಒಂದೊಂದು ಊರಿನಲ್ಲಿ ನಾಲ್ಕಾರು ತಿಂಗಳಿದ್ದು, ಹೆಚ್ಚೆಂದರೆ ಒಂದು ವರ್ಷ ದೇವಸ್ಥಾನವನ್ನೋ ಛತ್ರಗಳನ್ನೋ ಆಶ್ರಯಿಸುತ್ತಿದ್ದರು. ಈ ಅವಧಿಯಲ್ಲಿ ಪುರಾಣ ಪಠಣ, ಉಪನ್ಯಾಸಗಳನ್ನು ನಡೆಸುತ್ತಿದ್ದರು. ಅದರ ಸಂಭಾವನೆಯೇ ಇವರ ಜೀವನಾಧಾರ. ಲಕ್ಷ್ಮೀಬಾಯಿಯು ತನ್ನ ಮೃದು, ಮಧುರ ಶಾರೀರದಿಂದ ರಾಮಾಯಣ, ಭಾಗವತದ ಶ್ಲೋಕಗಳನ್ನು ಓದುತ್ತಿದುದು ಎಲ್ಲರನ್ನೂ ಸೆಳೆಯುವಂತಿತ್ತು. ಹಾಗೇ ಈ ಎಲ್ಲ ಶ್ಲೋಕಗಳಿಗೆ, ವೇದಾಂತಕ್ಕೆ ತನ್ನ ಅಪೂರ್ವ ವಿಶ್ಲೇಷಣಾ ಪೂರ್ವಕ ವ್ಯಾಖ್ಯೆಯಿಂದ ಅನಂತ ಶಾಸ್ತ್ರಿಗಳ ಪ್ರವಚನವೂ ಜನಾಕರ್ಷಕವೆನಿಸಿತು. ರಮಾಬಾಯಿಗೂ ಅತೀ ಚಿಕ್ಕ ವಯೋಮಾನದಲ್ಲೇ ಅಮ್ಮ ಲಕ್ಷ್ಮೀಬಾಯಿ ದೇವತೆಗಳ ಸ್ತೋತ್ರಗಳನ್ನೂ, ಅಮರಕೋಶವನ್ನೂ ಕಲಿಸಲಾರಂಬಿಸಿದಳು. ಹಾಗೇ ಪುರಾಣದ ಆದರ್ಶಗಳಾದ ಧ್ರುವ, ನಚಿಕೇತ ಮುಂತಾದವರ ಕಥೆಗಳನ್ನೂ ಸೀತೆ, ಸಾವಿತ್ರಿ ಮುಂತಾದ ಪುಣ್ಯಶೀಲರ ಚರಿತ್ರೆಗಳನ್ನೂ ಕಥಾರೂಪವಾಗಿ ಕಲಿಸುತ್ತ ಬಂದಳು. ರಮಾಬಾಯಿಯ ಅಗಾಧ ಸ್ಮರಣಶಕ್ತಿ ಗಮನಿಸಿದ ಅಪ್ಪ ಅನಂತ ಶಾಸ್ತ್ರಿಗಳು ಕ್ರಮವಾಗಿ ವ್ಯಾಕರಣ, ಕಾವ್ಯ, ನಾಟಕಾದಿಗಳನ್ನು ಬೋದಿಸತೊಡಗಿದರು. ರಮಾಬಾಯಿಗೆ 15ರ ಹರೆಯ ತುಂಬುವುದ ರೊಳಗೆ ಸಂಸ್ಕೃತ ಭಾಷೆಯಲ್ಲಿ ಮಾತನಾಡುವ, ಪುರಾಣಾದಿಗಳನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಬಂದಿತು. 1864ರಲ್ಲಿ ಅನಂತ ಶಾಸ್ತ್ರಿ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ಆಗ ಕೃಷ್ಣಾಬಾಯಿಗಿನ್ನೂ 14 ವರ್ಷ. ಹುಡುಗ ಶ್ರೀನಿವಾಸನಿಗೆ 12 ವರ್ಷ. ಹಾಗೇ ಪುಟ್ಟ ರಮೆಗೆ ಆರು ವರ್ಷವಾಗಿತ್ತಷ್ಟೆ. ಅನಂತ ಶಾಸ್ತ್ರಿ ಸಮಯ ಸಿಕ್ಕಿದಾಗಲೆಲ್ಲ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಅಪ್ಪ, ಅಣ್ಣ – ಅಕ್ಕನಿಗೆ ಪಾಠ ಹೇಳಿಕೊಡುವಾಗ ಪುಟ್ಟ ಮಗು ರಮಾಬಾಯಿ ಸಹಜವಾಗಿಯೇ ಜೊತೆಯಿರುತ್ತಿದ್ದಳು. ಸಹಜವಾದ ಕುತೂಹಲದಿಂದ ಎಲ್ಲವನ್ನೂ ಕಿವಿಗೊಟ್ಟು ಆಲಿಸುತ್ತಿದ್ದಳು. ತನಗೇನೂ ಆ ವಯಸ್ಸಿಗೆ ಅದರ ಅರ್ಥ ತಿಳಿಯದಿದ್ದರೂ ತೀವ್ರ ಗ್ರಹಣಶಕ್ತಿಯಿಂದಾಗಿ ಅದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಿದ್ದಳು. ಕೆಲವೇ ದಿನಗಳಲ್ಲಿ ಅನಂತ ಶಾಸ್ತ್ರಿಗಳ ಕೀರ್ತಿ ಬೆಂಗಳೂರಲ್ಲೆಲ್ಲಾ ಹರಡಿತು. ಹಿಂದೊಮ್ಮೆ ಉಡುಪಿಯ ಮಠದಲ್ಲಿ ವಾದ ಮಂಡಿಸಿ ವಿಜಯಿಯಾದವರೆಂದೂ, ಸ್ತ್ರೀಯರಿಗೂ ಸಂಸ್ಕೃತ ಬೋದಿಸುವಲ್ಲಿ ವಿಶೇಷ ಆಸ್ಥೆ ವಹಿಸಿದವರೆಂದೂ ವಿದ್ವಜ್ಜನಲ್ಲಿ ಹಲವರು ಅಭಿಮಾನ ಹೆಚ್ಚಿಸಿಕೊಂಡರು.

ವಾಸುದೇವಾಚಾರ್ಯರ ಘಟನೆಯಿಂದ ರಮಾಬಾಯಿಗೆ ವಿದ್ವಾಂಸರ ನಿಜವಾದ ಯೋಗ್ಯತೆಯನ್ನು ತಿಳಿದುಕೊಳ್ಳುವ ಜ್ಞಾನ ಬಂದಿತೆನ್ನಬಹುದು. ಒಂದೊಮ್ಮೆ ವಾಸುದೇವಾಚಾರ್ಯರೆಂಬವರು ಅನಂತ ಶಾಸ್ತ್ರಿಯವರಲ್ಲಿ ಬಂದು ಬಹಳ ಹೊತ್ತು ವಿಚಾರ ವಿನಿಮಯದಲ್ಲಿ ತೊಡಗಿ, ಅನಂತರ ಅನಂತ ಶಾಸ್ತ್ರಿಯವರಿಗೂ, ಲಕ್ಷ್ಮೀಬಾಯಿಗೂ ನಮಸ್ಕರಿಸಿ ಹೋದರು. ಆ ದಿನ ಚರ್ಚೆಗೆ ಬಿಸಿ ಏರದೆ, ಸೌಮ್ಯವಾಗಿ ಮುಗಿದು ದರಿಂದಲೋ ಜತೆಗೆ ವ್ಯೋಮ ಸಂಹಿತೆಯ ಶ್ಲೋಕವೂ ಮುಕ್ತಾಯದಲ್ಲಿ ಕೇಳದ್ದಕ್ಕೋ ಅಂತೂ ರಮಾಬಾಯಿಗೆ ಆವತ್ತು ಬಂದ ಶಾಸ್ತ್ರಿಗಳು ಹೆಚ್ಚು ತಿಳಿದವರಲ್ಲ ಎಂಬ ಕಲ್ಪನೆಯುಂಟಾಯಿತು. ಸಂದೇಹ ಮುಚ್ಚಿಡುವ ವಯಸ್ಸೂ, ಮನಸ್ಸೂ ಆಗಿರಲಿಲ್ಲ – ರಮಾಬಾಯಿಗೆ. ಅಮ್ಮ ಲಕ್ಷ್ಮೀಬಾಯಿಯಲ್ಲಿ ಬಂದು ಕೇಳೇಬಿಟ್ಟಳು.

ರ : ಅಮ್ಮಾ ಇವತ್ತು ಬಂದವರಾರಮ್ಮ?

ಲ : ವಾಸುದೇವಾಚಾರ್ಯರು ಎಂಬ ಗೃಹಸ್ಥರು. ನಿಮ್ಮ ತಂದೆಯ ಭೇಟಿಗಾಗಿ ಬಂದರಮ್ಮ.

ರ : ಆದರೆ ಅವರು ಹೆಚ್ಚು ತಿಳಿದವರಲ್ಲವೆಂದು ತೋರುತ್ತದೆ.

ಲ : ಇಲ್ಲ ಮಗೂ, ಅವರು ದೊಡ್ಡ ವಿದ್ವಾಂಸರು.

ರ : ಮತ್ತೆ ವ್ಯೋಮ ಸಂಹಿತೆಯ ಶ್ಲೋಕವೇಕೆ ಪಠಿಸಲಿಲ್ಲ?

ಲ : ಅಂ್ಯುೋ ಹುಚ್ಚಿ, ಅವರು ತುಂಬ ಓದಿದವರು. ವ್ಯೋಮ ಸಂಹಿತೆಗಿಂತಲೂ ಹೆಚ್ಚು ಶಾಸ್ತ್ರ ಬಲ್ಲವರು. ಅವರೂ ನಿನ್ನ ತಂದೆಯೂ ಏಕಾಬಿಪ್ರಾಯವುಳ್ಳವರು.

ರ : ಹಾಗಾದರೆ ಇದುವರೆಗೆ ಯಾರೂ ನಿಮಗೂ ವಂದಿಸಿ ಹೋಗಿರಲಿಲ್ಲ. ಇವರು ನಿನಗೂ ನಮಸ್ಕರಿಸಿದರಲ್ಲ. ಬಹುಶಃ ಬಹಳ ಓದಿದವರು ಅಲ್ಲವೇನೋ?

ಲ : ಮಗಳೇ, ತುಂಬಿದ ಕೊಡ ಯಾವತ್ತೂ ತುಳುಕುವುದಿಲ್ಲ. ಯಾರು ನಿಜವಾದ ವಿದ್ಯಾವಂತರೋ, ಅವರು ಬಹಳ ನಮ್ರರಿರುತ್ತಾರೆ. ಅಂಥವರು ಸ್ತ್ರೀಯರಿಗೂ ಸಮಾನವಾದ ಮರ್ಯಾದೆ ಕೊಡುತ್ತಾರೆ. ವಾಸುದೇವಾಚಾರ್ಯರಲ್ಲಿ ಒಣ ಅಭಿಮಾನವಿಲ್ಲದ್ದರಿಂದ ಅವರು ನನ್ನನ್ನೂ ನಮಸ್ಕರಿಸಿ ಹೋದರು. ಮನುಷ್ಯರಲ್ಲಿ ಹೀಗೆ ನಮ್ರತೆ ಇರಬೇಕು.

ಹೀಗೆ ತನ್ನ ತಾಯಿಯಿಂದಲೂ ಮಹಿಳೆಯರಿಗೆ ಸಂಬಂಧಿಸಿ ಹೊಸ ಕಣ್ಣು – ಜ್ಞಾನದ ಕಣ್ಣು ಪಡಕೊಂಡದ್ದು ಮಹತ್ತ್ವದ ಘಟನೆಯೇ.

ಬೆಂಗಳೂರಿನಲ್ಲಿಯ ಇನ್ನೊಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ಅನಂತ ಶಾಸ್ತ್ರಿಗಳು ಬಾಡಿಗೆಗಿದ್ದ ಮನೆಯೊಡೆಯನ ಒಬ್ಬ ಮಗಳು ತವರಿಗೆ ಬಂದಿದ್ದಳು. ಅವಳ ಮಗಳು ತಿಪ್ಪಿ ಹಾಗೂ ರಮಾಬಾಯಿ ಸಮವಯಸ್ಕರು. ತಿಪ್ಪಿ ಯಾವಾಗಲೂ ಹೆಚ್ಚು ಚಿನ್ನಾಭರಣಗಳನ್ನು ಧರಿಸುತ್ತಿದ್ದಳು. ಒಂದು ದಿನ ತಮಾಷೆಗಾಗಿ ತಿಪ್ಪಿಯ ತಾಯಿಯು ಮೈಮೇಲಿನ ಆಭರಣಗಳನ್ನು ಪುಟ್ಟ ರಮಾಬಾಯಿಗೆ ತೊಡಿಸಿದಳು. ರಮಾಬಾಯಿ ಸಹಜ -ಸಂತಸದಿಂದ ಕುಣಿಯುತ್ತ ಈ ಆಭರಣಗಳನ್ನು ತಾಯಿಯಾದ ಲಕ್ಷ್ಮೀಬಾಯಿಗೆ ತೋರಿಸಿದಳು. ಆಗ ಲಕ್ಷ್ಮೀಬಾಯಿಯು ಮಗಳನ್ನು ಹತ್ತಿರಕ್ಕೆ ಕರೆದು, ಬೆನ್ನು ಸವರುತ್ತ, ಮಗೂ ನಿನ್ನಲ್ಲಿ ಚಿನ್ನದಂತಹ ಗುಣಗಳಿದ್ದರೆ ಈ ಎಲ್ಲ ನಗಗಳಿಗಿಂತ ಹೆಚ್ಚಿನ ಶೋಭೆ ಅದೇ ಆಗಿರುತ್ತದೆ ಎಂದಳು. ರಮಾಬಾಯಿಯು ತಾಯಿಯ ಮಾತನ್ನು ಎಂದಿಗೂ ಮರೆಯಲಿಲ್ಲ. ತನ್ನ ಜೀವನ ಪರ್ಯಂತ ರಮಾಬಾಯಿಯು ಆಭರಣಗಳನ್ನು ತೊಟ್ಟುಕೊಳ್ಳಲಿಲ್ಲ ತನ್ನ ಮದುವೆ ಸಂದರ್ಭದಲ್ಲಿ ತನ್ನ ಗಂಡ ಕೊಟ್ಟ ಒಂದು ಉಂಗುರವನ್ನು ಮಾತ್ರ ಜೋಪಾನವಾಗಿಟ್ಟುಕೊಂಡಿದ್ದರು.

ವರುಷಾನಂತರ ಬೆಂಗಳೂರು ತೊರೆದು ದ್ವಾರಕೆಯ ಕಡೆ ಹೊ