ಹೆಚ್ಚು ಸೃಜನಶೀಲವಾದ ಮನಸ್ಸುಗಳು ಮನಸ್ಸಿನ ಆಳದಲ್ಲಿ ಸಂಚಿತವಾದ ಸಂಗತಿಗಳನ್ನು ಭಾಷಿಕ ನೆಲೆಯಲ್ಲಿ ಅಭಿವ್ಯಕ್ತಿ ಮಾಡುತ್ತವೆ. ಇಂಥ ಸಂದರ್ಭಗಳಲ್ಲೂ ಎಷ್ಟೋ ವೇಳೆ ಸಮುದಾಯದ ಸ್ಥಾಪಿತ ಚಿಂತನೆಗಳನ್ನೇ ವೈಭವೀಕರಿಸಿ ಮರು ಸ್ಥಾಪಿಸುವ ಸಾಹಿತ್ಯ ಸೃಷ್ಟಿಯಾಗುತ್ತದೆ ಎನ್ನುವುದು ನಿಜವಾದರೂ, ಸೃಜನಶೀಲ ಮನಸ್ಸುಗಳು ಪ್ರಜ್ಞಾಪೂರ್ವಕವಾಗಿ ತೊಡಗಿಕೊಂಡಾಗ ಸ್ಥಾಪಿತಚಿಂತನೆಗಳನ್ನು ನಿರಾಕರಿಸುವ, ಪ್ರತಿರೋಧಿಸುವ ಆಯ್ಕೆಗಳನ್ನು ಮಾಡಿಕೊಳ್ಳುವುದು ಸಾಧ್ಯ. ಸಾಮಾಜಿಕವಾಗಿ ಸಾಮಾನ್ಯ ಮಹಿಳೆಯೊಬ್ಬಳು ಪ್ರತಿರೋಧವನ್ನು ಅಭಿವ್ಯಕ್ತಿಸಲು ಎದುರಿಸುವ ಸಮಸ್ಯೆ, ಈ ಸೃಜನಶೀಲ ಮಹಿಳೆಗೂ ಇದ್ದೇ ಇದೆ. ಆದರೆ ಕಾವ್ಯರೂಪದ ಹೊದಿಕೆಯಲ್ಲಿನ ಈ ಪ್ರತಿರೋಧವು ವಾಸ್ತವದ ಪರಿಣಾಮಗಳೊಂದಿಗೆ ಮುಖಾಮುಖಿಯಾಗಬೇಕಾದ ಒತ್ತಡಗಳಿಂದ ಸ್ವಲ್ಪಮಟ್ಟಿಗೆ ತಪ್ಪಿಸಿಕೊಳ್ಳುತ್ತದೆ. ವಾಸ್ತವದಲ್ಲಿ ಪರಿಣಾಮಕಾರಿಯಲ್ಲದ ಈ ಭಾಷಿಕಕ್ರಿಯೆಯಿಂದ, ಮನಸ್ಸಿನ ಒತ್ತಡವನ್ನು ಹೊರಹಾಕಿ ಬಿಡುಗಡೆ ಹೊಂದ ಬಹುದೆನ್ನುವ ಕಿಂಚಿತ್ ನೆಮ್ಮದಿಯ ಸಾಧ್ಯತೆ ಇದೆಯೇ ಹೊರತು ಇನ್ನೇನಲ್ಲ. ಅಂದರೆ ವಾಸ್ತವದ ಕ್ರಿಯೆಯಲ್ಲಿ ತೊಡಗಲಾಗದೆ, ಭಾಷಿಕ ಕ್ರಿಯೆಯನ್ನು ಆಶ್ರಯಸಿದಾಗ ಪರಿಣಾಮವೂ ಕೂಡಾ ವಾಸ್ತವದ್ದಾಗಿರದೆ, ಮಾನಸಿಕ ನೆಲೆಯದ್ದಾಗಿರುತ್ತದೆ ಎಂಬುದೂ ಅಷ್ಟೇ ನಿಜ. ಇಷ್ಟಾದರೂ ಸ್ಫೋಟಗೊಳ್ಳುವ ಭಯಾನಕತೆಗಿಂತ ಇದು ಆ ವ್ಯಕ್ತಿಗೆ ಸ್ವಲ್ಪ ನೆಮ್ಮದಿಯ ಹಾದಿಯೆನಿಸಬಹುದು.

ಭಾಷೆಯಲ್ಲಿ ಹೆಣ್ಣು ಗಂಡುಗಳ ನಡುವೆ ಇರುವ ತಾರತಮ್ಯವು ಪ್ರಕಟಗೊಳ್ಳುವ ರೀತಿಯನ್ನು ಈಗ ಇನ್ನೊಂದು ನೆಲೆಯಿಂದ ನೋಡೋಣ. ಹೆಣ್ಣು ಗಂಡುಗಳ ನಡುವೆ ಇರುವ ಅಸಮಾನತೆ ಒಂದು ಚಾರಿತ್ರಿಕವಾದ ಮತ್ತು ಸಾಮಾಜಿಕವಾದ ಸಂಗತಿ. ಇದು ಪ್ರಕಟಗೊಳ್ಳುವ ಬಗೆಗಳು ಹಲವು. ಭಾಷೆಯು ಈ ಅಸಮಾನತೆಯನ್ನು ಪ್ರಕಟಿಸುವ ಒಂದು ಸಾಧನವಾಗಿದೆ. ಈ ನಿಲುವನ್ನು ಕೊಂಚ ಎಚ್ಚರಿಕೆಯಿಂದ ಗಮನಿಸಬೇಕು. ಸಾಮಾಜಿಕ ಭಾಷಾಶಾಸ್ತ್ರಜ್ಞರು ಭಾಷೆಯು ಸಾಮಾಜಿಕ ಸಂಗತಿಗಳ ಸೂಚಕವಾಗಿ ಕೆಲಸ ಮಾಡುವುದನ್ನು ಒಪ್ಪಿದ್ದಾರೆ. ವಯಸ್ಸು, ಅಂತಸ್ತು, ಶಿಕ್ಷಣ, ಪ್ರದೇಶ, ಲಿಂಗ ಮುಂತಾದ ನೆಲೆಗಳಲ್ಲಿ ಇರುವ ಸಾಮಾಜಿಕ ಭಿನ್ನತೆಗಳು ಭಾಷಿಕ ಬಳಕೆಗಳಲ್ಲಿ ಮೈದೋರುತ್ತವೆ ಎನ್ನುವುದು ಸಾಮಾಜಿಕ ಭಾಷಾಶಾಸ್ತ್ರಜ್ಞರಿಗೆ ಸಮ್ಮತವಾದ ವಿಷಯ. ಆದರೆ, ಈ ನಿಲುವನ್ನು ತಮ್ಮ ಅಧ್ಯಯನಗಳ ಮುಖಾಂತರ ಮಂಡಿಸುವಾಗ ಅವರು ಮೌಲ್ಯನಿರಪೇಕ್ಷ ನೆಲೆಯಲ್ಲಿ ನಿಂತಿರುತ್ತಾರೆ. ಅಂದರೆ ಭಾಷಿಕ ಬಳಕೆಗಳಲ್ಲಿ ಇರುವ ಭಿನ್ನತೆಗಳನ್ನು ಅವರು ‘‘ಕಂಡು ಬಣ್ಣಿಸು’’ತ್ತಾರೆಯೇ ಹೊರತು, ಆ ವ್ಯತ್ಯಾಸಗಳಿಗೆ ಇರುವ ಮೌಲ್ಯಾತ್ಮಕ ನೆಲೆಗಳನ್ನು ಶೋಧಿಸುವುದಿಲ್ಲ. ಅದು ಅವರ ಆಸಕ್ತಿಯೂ ಅಲ್ಲ. ಹಾಗೆ ನೋಡಿದರೆ, ನಾಗರಿಕ ಭಾಷಾಸಮುದಾಯಗಳಲ್ಲಿ ‘ಸಹಜ’ವೆಂಬಂತೆ ನಡೆಯುವ ಪ್ರಮಾಣೀಕರಣ ಮತ್ತು ಆಧುನೀಕರಣ ಪ್ರಕ್ರಿಯೆಗಳು ನಿಧಾನವಾಗಿಯೇ ಆದರೂ ಈ ಭಿನ್ನತೆಗಳು ಇಲ್ಲದಂತೆ ಮಾಡುತ್ತವೆ ಎಂದು ಅವರು ತಿಳಿದಿದ್ದಾರೆ. ಸಾಮಾಜಿಕ ಭಾಷಾಶಾಸ್ತ್ರಜ್ಞರು ಹೊಂದಿರುವ ಈ ಮೌಲ್ಯನಿರಪೇಕ್ಷ ದೃಷ್ಟಿಕೋನ, ಮತ್ತು ಭಿನ್ನತೆಗಳು ತಂತಾನೇ ಅಳಿಯುತ್ತವೆ ಎಂಬ ನಂಬಿಕೆಗಳು, ಸ್ತ್ರೀವಾದಕ್ಕೆ ಒಪ್ಪಿತವಲ್ಲ. ಇತರ ಭಿನ್ನತೆಗಳ ಮಾತು ಒತ್ತಟ್ಟಿಗಿರಲಿ, ಲಿಂಗ ಭೇದವನ್ನು ಅವಲಂಬಿಸಿದ ಭಿನ್ನತೆಯು ಖಂಡಿತವಾಗಿಯೂ ಮೌಲ್ಯಾತ್ಮಕ ಹೊರಚಾಚುಗಳನ್ನು ಪಡೆದಿದೆ; ಮತ್ತು ಅದು ಬೇರೆ ಬೇರೆ ಬಗೆಗಳಲ್ಲಿ ಮೈದಳೆಯುತ್ತಲೇ ಇರುತ್ತದೆ ಎನ್ನುವುದು ಸ್ತ್ರೀವಾದದ ನಿಲುವು. ಸಾಮಾಜಿಕ ನೆಲೆಯ ಪರಿವರ್ತನೆಗಳು ನಡೆದರೂ, ಲಿಂಗತಾರತಮ್ಯವು ಅವುಗಳಿಂದ ತನ್ನ ಚಹರೆಗಳನ್ನು ಬಿಟ್ಟುಕೊಡದೆ ಇನ್ನೂ ಬಲಗೊಳ್ಳುತ್ತಾ ಹೋಗುವುದನ್ನು, ಭಾಷೆಯಲ್ಲಿ ಕಾಣಿಸುವ ಹೆಣ್ಣು ಗಂಡು ತಾರತಮ್ಯದ ನೆಲೆಗಳು ಸ್ಥಿರೀಕರಣಗೊಳ್ಳುತ್ತಲೇ ಹೋಗುತ್ತಿರುವುದನ್ನು, ಸ್ತ್ರೀವಾದಿಗಳು ತಮ್ಮ ಅಧ್ಯಯನಗಳಿಂದ ತೋರಿಸಿಕೊಟ್ಟಿದ್ದಾರೆ.

ಹೆಣ್ಣು ಗಂಡು ಎಂಬ ಭೇದವು ಭಾಷೆಯಲ್ಲಿ ಪ್ರಕಟಗೊಳ್ಳುವ ಕೆಲವು ನಿದರ್ಶನಗಳನ್ನು ಮೊದಲು ನೋಡೋಣ. ಸಾಮಾಜಿಕ ಸಂವಾದಗಳಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಭಾಗೀದಾರರಾಗಿರುವಾಗ ಅವರು ಭಾಷೆಯ ಮೂಲಕ ತಮ್ಮನ್ನು ಮಂಡಿಸುವ ಬಗೆಯಲ್ಲಿ ವ್ಯತ್ಯಾಸಗಳಿರುತ್ತವೆ. ಸ್ತ್ರೀವಾದಿಗಳು ಈ ವ್ಯತ್ಯಾಸದ ಸ್ವರೂಪಗಳನ್ನು ಅಧ್ಯಯನ ಮಾಡಿ ದ್ದಾರೆ. ಇಂಥ ಸಂವಾದಗಳಲ್ಲಿ ಗಂಡಸರು ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುವುದು; ಹೆಂಗಸರು ಅವಕಾಶಕ್ಕಾಗಿ ಕಾಯ್ದು, ಹೇಗೋ ತಮ್ಮ ಮಾತುಗಳನ್ನು ಆಡಿದರೂ ಅದರಲ್ಲಿ ನಿರ್ಣಾಯಕ ನೆಲೆ ಇಲ್ಲದಿರುವುದು; ಗಂಡಸರು ಇತರ ಭಾಗೀದಾರರ ಅಭಿಪ್ರಾಯಗಳಿಗೆ ಗಮನ ಕೊಡದಿರುವುದು; ಹೆಂಗಸರು ತಮ್ಮ ಅಭಿಪ್ರಾಯಗಳನ್ನು ಅನನ್ಯಗೊಳಿಸಬೇಕೆಂಬ ನೆಲೆಗೆ ದಾಟದಿರುವುದು; ಮುಂತಾದ ಸಂವಾದ ಲಕ್ಷಣಗಳನ್ನು ಈ ಅಧ್ಯಯನಗಳು ತೋರಿಸಿಕೊಟ್ಟಿವೆ. ಸಾಮಾಜಿಕ ನೆಲೆಯ ಭಾಗೀದಾರಿಕೆಯಲ್ಲಿ ಹೆಂಗಸು ಅವಕಾಶ ವಂಚಿತಳಾಗಿದ್ದಾಳೆ. ಅಂತಹ ಸ್ಥಿತಿಯನ್ನು ಅನಿವಾರ್ಯವೆಂಬಂತೆ ಒಪ್ಪಿಕೊಂಡ ಆಕೆಯು ತನ್ನ ಭಾಷಿಕ ತಂತ್ರಗಳನ್ನು ಬೇರೊಂದು ರೀತಿಯಲ್ಲಿ ರೂಪಿಸಿಕೊಂಡಿರುತ್ತಾಳೆ. ಈ ವಿವರಣೆಯನ್ನು ಸರಿಯಾಗಿ ಗಮನಿಸಬೇಕು. ಹೆಂಗಸರಿಗೆ ಭಾಷೆಯು ತಾನೇ ಅವಕಾಶ ವಂಚಿತ ಸ್ಥಿತಿಯನ್ನು ತಂದೊಡ್ಡುವುದಿಲ್ಲ. ಬದಲಾಗಿ, ಹೆಂಗಸು ತನ್ನ ಸಾಮಾಜಿಕ ಸ್ಥಿತಿಯ ಪರಿಣಾಮವಾಗಿ ಭಾಷಿಕ ಪರಿಕರಗಳನ್ನು ಬಳಸಿಕೊಳ್ಳುವ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡಿರುತ್ತಾಳೆ. ಹೀಗಾಗಿ, ಭಾಷೆಯು ಅಸಮಾನತೆಯ ಅನುಭೋಗಿಯನ್ನಾಗಿ ಹೆಂಗಸನ್ನು ರೂಪಿಸುತ್ತಿಲ್ಲ. ಅಸಮಾನತೆಯ ಅನುಭೋಗಿಯಾಗಿರುವ ಹೆಂಗಸು ತನ್ನ ಈ ಚಹರೆಗಳನ್ನು ಮಂಡಿಸಲು ಭಾಷಿಕ ಪರಿಕರಗಳನ್ನು ತಕ್ಕಂತೆ ಬದಲಿಸಿಕೊಂಡಿದ್ದಾಳೆ. ಈ ವ್ಯಾಖ್ಯೆಯು ಒಂದು ನೆಲೆಯಲ್ಲಿ ಭಾಷೆಯ ‘ಸೂಚಕ’ ಪಾತ್ರವನ್ನು ಹೇಳಿದರೂ, ಇನ್ನೊಂದು ನೆಲೆಯಲ್ಲಿ ಹೆಂಗಸು ತನ್ನ ಅನುಕೂಲಕ್ಕೆ ತಕ್ಕಂತೆ ಭಾಷಿಕ ಪರಿಕರಗಳನ್ನು ಹೊಂದಿಸಿಕೊಳ್ಳುವ ಸ್ವಾತಂತ್ರ್ಯವನ್ನು ಪಡೆದಿದ್ದಾಳೆ ಎನ್ನುವುದನ್ನೂ ಹೇಳುತ್ತಿದೆ. ಸ್ತ್ರೀವಾದಿಗಳು ಈ ಎರಡೂ ನೆಲೆಗಳನ್ನು ತಮ್ಮ ಭಾಷಿಕ ಸಿದ್ಧಾಂತಗಳಲ್ಲಿ ಬಳಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಗಂಡಸಿನ ಭಾಷಾಬಳಕೆಯನ್ನು ‘‘ಅಧೀನಗೊಳಿಸುವ’’ ಮಾದರಿಯೆಂದೂ, ಹೆಂಗಸಿನ ಭಾಷಾಬಳಕೆಯು ‘‘ಸಹಕರಿಸುವ’’ ಮಾದರಿ ಎಂದೂ ಹೇಳುವುದುಂಟು. ಈ ಎರಡೂ ಮಾದರಿಗಳು ಗಂಡಿಗಾಗಲೀ ಹೆಣ್ಣಿಗಾಗಲೀ ದೊರೆತದ್ದು ಹೇಗೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಗತ್ಯ. ಏಕೆಂದರೆ, ಭಾಷಾ ಸಾಮರ್ಥ್ಯಗಳು ಮಗುವಿನಲ್ಲಿ ನೆಲೆಗೊಳ್ಳುವ ಹಂತದಲ್ಲಿ ಇಂಥ ಮಾದರಿಗಳು ಅವರಿಗೆ ದೊರೆಯುವುದಿಲ್ಲ. ಆದರೆ, ಈ ಭಾಷಾಸಾಮಾರ್ಥ್ಯದ ಕೌಶಲಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಹೀಗೆ ಹೆಣ್ಣು ಗಂಡುಗಳು ತಂತಮ್ಮ ಭಾಷಾ ಮಾದರಿಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಇದಕ್ಕೆ ಸಾಮಾಜಿಕವಾದ ಹಲವು ವ್ಯವಸ್ಥೆಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಶಿಕ್ಷಣವು ಇಂತಹ ಸಾಮಾಜಿಕ ಸಂಸ್ಥೆಗಳಲ್ಲಿ ಒಂದು. ಬಹುಮಟ್ಟಿಗೆ ಎಲ್ಲ ಭಾಷಿಕ ಸಮುದಾಯಗಳಲ್ಲಿ ಶಿಕ್ಷಣವು ಸಾಮಾಜಿಕ ಮೌಲ್ಯಗಳನ್ನು ಹರಡುವ, ಸ್ಥಿರೀಕರಿಸುವ, ಅಧಿಕಾರಯುತವಾಗಿ ಹೇರುವ ಕೆಲಸವನ್ನು ಮಾಡುತ್ತದೆ. ಇದು ಶೈಕ್ಷಣಿಕ ವಿಷಯಗಳ ಆಶಯಗಳಲ್ಲಿ ಮಾತ್ರವಲ್ಲ, ಶಿಕ್ಷಣ ಪ್ರಕ್ರಿಯೆಯ ಎಲ್ಲ ಹಂತಗಳಲ್ಲೂ ಕಾಣಸಿಕೊಳ್ಳುತ್ತದೆ. ಮಕ್ಕಳ ಭಾಷಾಕೌಶಲಗಳು ಶೈಕ್ಷಣಿಕ ವಲಯದಲ್ಲಿ ರೂಪುಗೊಳ್ಳುವುದರಿಂದ ಮೇಲೆ ಹೇಳಿದ ಹೆಣ್ಣು ಗಂಡು ಭಾಷಾಮಾದರಿಗಳು ಈ ವಲಯದಲ್ಲಿ ಮಕ್ಕಳಿಗೆ ದತ್ತವಾಗುತ್ತವೆ.

ಇಲ್ಲಿ ಒಂದು ಪ್ರಶ್ನೆ ಎದುರಾಗುತ್ತದೆ. ಹಾಗಿದ್ದಲ್ಲಿ, ಶಿಕ್ಷಣ ವ್ಯವಸ್ಥೆಯ ಚೌಕಟ್ಟಿಗೆ ಸಿಲುಕದ (ಜಾಗತಿಕವಾಗಿ ಈ ಪರಿಸ್ಥಿತಿಯೇ ಹೆಚ್ಚಾಗಿದೆ.) ಮಕ್ಕಳಲ್ಲಿ ಹೆಣ್ಣು ಗಂಡು ಭಾಷಾ ಮಾದರಿಗಳು ನೆಲೆಗೊಳ್ಳುವುದು ಹೇಗೆ? ಸಮಾಜದ ಇತರ ಸಾಂಸ್ಥಿಕ ವ್ಯವಸ್ಥೆಗಳು ಒಂದಲ್ಲ ಒಂದು ರೀತಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಕಾರ್ಯವಲಯಗಳನ್ನು ಮತ್ತು ಅವುಗಳ ಮುಖಾಮುಖಿಯ ಸ್ವರೂಪವನ್ನು ನಿರ್ಧರಿಸಿರುವುದರಿಂದ ಆ ಮಕ್ಕಳಿಗೆ ಭಾಷಾಬಳಕೆಯ ಈ ಮಾದರಿಗಳು ತಪ್ಪದೇ ದೊರೆಯುವಂತೆ ನೋಡಿಕೊಳ್ಳಲಾಗುತ್ತದೆ. ನಿತ್ಯದ ಮನೆಗೆಲಸಗಳು, ಆಟೋಟಗಳು, ಭಾಷಿಕ ವ್ಯವಹಾರಗಳು, ಆಚರಣೆಗಳು, ಸಾಮಾಜಿಕ ನೆಲೆಯ ಭಾಗೀದಾರಿಕೆಗಳು -ಈ ಎಲ್ಲ ವಲಯಗಳಲ್ಲಿ ಹೆಣ್ಣು ಗಂಡು ಗಡಿಗೆರೆಗಳ ಬಗ್ಗೆ ಸಾಮಾಜಿಕ ನಿರ್ದೇಶನಗಳು ಖಚಿತವಾಗಿರುತ್ತವೆ. ಇದರಿಂದಾಗಿ ಆ ಚೌಕಟ್ಟುಗಳಲ್ಲಿ ಮಕ್ಕಳು ತಮಗೆ ನಿಗದಿಯಾದ ಭಾಷಾಕೌಶಲಗಳನ್ನು ಪಡೆದುಕೊಳ್ಳುತ್ತಾರೆ.

ಹೆಣ್ಣು ಗಂಡು ಭಾಷಾಮಾದರಿಗಳ ಈ ವ್ಯಾಖ್ಯೆಯು ಈ ಮೊದಲು ನಾವು ಚರ್ಚಿಸಿದ, ಹೆಂಗಸಿಗೆ ಭಾಷಾ ಪರಿಕರಗಳನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಇರುವ ನಿಲುವಿಗೆ ವಿರುದ್ಧವೆಂಬಂತೆ ತೋರುತ್ತದೆ. ಆದರೆ, ಸ್ತ್ರೀವಾದಿಗಳು ಹೆಣ್ಣು ಗಂಡುಗಳ ಭಾಷಾ ಮಾದರಿಗಳು ನೆಲೆಗೊಳ್ಳುವುದನ್ನು ವಿವರಿಸುವಾಗ ಒಂದು ಎಚ್ಚರವನ್ನು ಕಾಯ್ದುಕೊಳ್ಳುತ್ತಾರೆ. ಈ ಮಾದರಿಗಳು ವ್ಯಾವರ್ತಕವಲ್ಲ. ಅಂದರೆ, ಒಂದು ಇನ್ನೊಂದನ್ನು ಸಂಪೂರ್ಣವಾಗಿ ನಿರಾಕರಿಸಲಾರದು. ಅಧೀನಗೊಳಿಸುವ ಮಾದರಿಯಾಗಲೀ, ಸಹಕರಿಸುವ ಮಾದರಿಯಾಗಲೀ ತಂತಾನೇ ಸ್ವತಂತ್ರ ಅಸ್ತಿತ್ವವನ್ನು ಕಾಯ್ದುಕೊಳ್ಳಲಾರದು. ಒಂದು ಇನ್ನೊಂದರ ಇರುವಿಕೆ ಯನ್ನು ನಿರೀಕ್ಷಿಸುತ್ತದೆ ಮತ್ತು ಬಯಸುತ್ತದೆ. ಈ ಮಾದರಿಗಳ ಒಳ ಸಂಬಂಧಗಳನ್ನು ಒಪ್ಪುವುದಾದರೆ, ಆಗ ಹೆಂಗಸಿಗೆ ತನ್ನ ಮಾದರಿಯನ್ನು ಕಟ್ಟಿಕೊಳ್ಳಲು ಇರುವ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ಸ್ವಾತಂತ್ರ್ಯವು ವ್ಯಕ್ತಿಗತ ನೆಲೆಯದ್ದಲ್ಲ. ಸಾಮುದಾಯಿಕ ನೆಲೆಯಲ್ಲಿ ರೂಪುಗೊಳ್ಳುವಂಥದ್ದು.

ಕಳೆದ ಮೂರು ದಶಕಗಳಲ್ಲಿ ಇನ್ನೊಂದು ಪ್ರಶ್ನೆ ಸ್ತ್ರೀವಾದಿಗಳನ್ನು ಕಾಡಿಸುತ್ತಿದೆ. ಅದೆಂದರೆ, ಹೆಣ್ಣು ಎಂಬ ಸಾರ್ವತ್ರಿಕವಾದ, ಕಾಲದೇಶಾತೀತವಾದ ಪರಿಕಲ್ಪನೆಯನ್ನು ಒಪ್ಪುವುದು ಸಾಧ್ಯವಿಲ್ಲ. ಆದರೆ, ಎಲ್ಲ ಸಾರರೂಪಿ ಚಿಂತನೆಗಳಿಗೆ ಇರುವ ಇಂಥ ಬಿಕ್ಕಟ್ಟುಗಳು ಈ ಪರಿಕಲ್ಪನೆಗೂ ಅನ್ವಯಿಸುತ್ತದೆ. ಬೇರೆ ಬೇರೆ ಭಾಷಿಕ ಸಂಸ್ಕೃತಿಗಳ ಹೆಂಗಸರನ್ನೂ, ಮತ್ತು ಒಂದೇ ಸಮಾಜದಲ್ಲಿ ಇದ್ದರೂ ಬೇರೆ ಬೇರೆ ಸಾಮಾಜಿಕ ಸ್ಥರಗಳಿಗೆ ಸೇರಿದ ಹೆಂಗಸರನ್ನೂ, ಒಂದೇ ಪರಿಕಲ್ಪನೆಯಡಿಯಲ್ಲಿ ಇರಿಸುವುದು ಸರಿಯಾಗದೆಂದು ಸ್ತ್ರೀವಾದಕ್ಕೆ ಪ್ರತಿಕ್ರಿಯಿಸುವ ಇತರ ಜ್ಞಾನವಲಯಗಳ ಚಿಂತಕರು ಹೇಳುತ್ತಿದ್ದಾರೆ. ಈ ಭಿನ್ನ ಚಿಂತನೆಯನ್ನು ಒಪ್ಪುವವರು ಸ್ತ್ರೀವಾದಿಗಳಲ್ಲೂ ಇದ್ದಾರೆ. ಈ ಪ್ರಶ್ನೆ ಭಾಷಿಕ ನೆಲೆಗಳಿಗೆ ಸೀಮಿತಗೊಂಡಂತೆ ಹೇಗೆ ಮಂಡನೆಯಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ.

ಕಪ್ಪು ಸ್ತ್ರೀವಾದದ ಚಿಂತನಾ ಭೂಮಿಕೆಯು ಸಾರರೂಪಿ ಹೆಣ್ಣು ಎಂಬ ಪರಿಕಲ್ಪನೆಯನ್ನು ನಿರಾಕರಿಸುತ್ತದೆ. ಇದರ ತಾತ್ತ್ವಿಕ ವಾಗ್ವಾದಗಳೇನೇ ಇರಲಿ, ಸ್ತ್ರೀವಾದಿ ಭಾಷಾ ಚಿಂತನೆಗಳು ಈ ಬಗೆಯ ಭಿನ್ನ ದಾರಿಯ ಆಲೋಚನಾ ಕ್ರಮಗಳಿಗೆ ಹೇಗೆ ಪ್ರತಿಕ್ರಿಯಿಸಿವೆ ಎನ್ನುವುದಷ್ಟೇ ನಮಗೆ ಇಲ್ಲಿ ಮುಖ್ಯ. ಆಧುನಿಕೋತ್ತರ ಚಿಂತನೆಗಳು ಕೂಡಾ ಸಾರರೂಪಿ ಮಾದರಿಗಳನ್ನು ನಿರಾಕರಿಸುತ್ತವೆ. ಸ್ತ್ರೀವಾದದ ನೆಲೆಯಲ್ಲಿ ಇವು ಕ್ರಿಯಾಶೀಲವಾಗುವ ಬಗೆ ಮಾತ್ರ ಭಿನ್ನವಾಗಿದೆ. ಏಕೆಂದರೆ, ಸಾರರೂಪಿ ಚಿಂತನೆಗಳು ಎಲ್ಲ ಆಂತರಿಕ ವ್ಯತ್ಯಾಸಗಳನ್ನೂ ನಿರಾಕರಿಸುವುದಿಲ್ಲ. ಬದಲಿಗೆ, ಆಂತರಿಕ ಭಿನ್ನತೆಗಳಲ್ಲಿರುವ ಒಳ ಸಂಬಂಧಗಳನ್ನು ಅರಿತುಕೊಳ್ಳಲು ಯತ್ನಿಸುತ್ತದೆ. ಏಕೆಂದರೆ ಹೆಣ್ಣು ಎಂಬ ಪರಿಕಲ್ಪನಾತ್ಮಕ ಚೌಕಟ್ಟಿನಲ್ಲಿ ಬರುವವರ ನಡುವಣ ಭಿನ್ನತೆಗಳೂ ಕೂಡಾ ಮೂಲಭೂತವಾಗಿ ಸಾಮಾಜಿಕ ಅಸಮಾನತೆಗಳಿಂದ ಸೃಷ್ಟಿಗೊಂಡು ನಿಯಂತ್ರಣಕ್ಕೆ ಒಳಗಾಗುತ್ತವೆ. ಅಂದರೆ, ಹೆಂಗಸರ ನಡುವಣ ಅಂತಸ್ತು, ಶಿಕ್ಷಣ, ಅಧಿಕಾರ ಮುಂತಾದ ನೆಲೆಗಳ ಶ್ರೇಣಿಗಳು ಸಹಜ ಆಯ್ಕೆಗಳೇನಲ್ಲ. ಅವುಗಳ ಗತಿಶೀಲತೆಯನ್ನು ಹೊರಗಿನಿಂದ ಗಂಡಸರೇ ನಿಯಂತ್ರಿಸುತ್ತಿರು ತ್ತಾರೆ. ಈ ವ್ಯಾಖ್ಯೆಯನ್ನು ಒಪ್ಪುವುದಾದರೆ, ಆಗ ಸ್ತ್ರೀವಾದಿ ಭಾಷಾ ಚಿಂತನೆಗಳು ತಮಗೊದಗಿದ ಕಲ್ಪಿತ ಬಿಕ್ಕಟ್ಟುಗಳಿಂದ ಹೊರಬರುತ್ತವೆ.

ಈ ವಿಶ್ಲೇಷಣೆಗೆ ಇನ್ನೂ ಒಂದು ನೆಲೆ ಇದೆ. ಅಭಿವೃದ್ದಿಶೀಲ ದೇಶಗಳಲ್ಲಿ ದುಡಿಯುವ ಹೆಂಗಸರ ನಡುವಣ ತಾರತಮ್ಯಗಳನ್ನು ಮುಂದು ಮಾಡಿ ಹೆಣ್ಣು ಎಂಬ ಏಕಾಕೃತಿಯ ರೂಪಣೆಯನ್ನು ತಳ್ಳಿ ಹಾಕಲಾಗುತ್ತದೆ. ಭಾರತದಂತಹ ಸಮಾಜಗಳಲ್ಲಿ ಜಾತಿವ್ಯವಸ್ಥೆಯಿಂದಾಗಿ ಹೆಂಗಸರೂ ಕೂಡಾ ತಂತಮ್ಮ ಜಾತಿಗಳ ವಾಸ್ತವಗಳಲ್ಲಿ ಬಂಧಿಗಳಾಗಿದ್ದಾರೆ. ಹಾಗಾಗಿ, ಅವರೆಲ್ಲರನ್ನೂ ಏಕಸೂತ್ರಕ್ಕೆ ತರವುದು ಅಸಾಧ್ಯವಷ್ಟೇ ಅಲ್ಲ, ತಪ್ಪೂ ಕೂಡಾ ಎಂಬ ವಾದಗಳು ಈಗ ಬಲವಾಗಿವೆ. ಆದರೆ, ಹೆಂಗಸರು ಹೀಗೆ ತಂತಮ್ಮ ವಾಸ್ತವಗಳಲ್ಲಿ ಬಂಧಿಗಳಾಗಿರುವುದು (ಬಂಧಿ ಎನ್ನುವ ಮಾತಿನ ಅರ್ಥವನ್ನು ಸ್ಪಷ್ಟವಾಗಿ ಗ್ರಹಿಸೋಣ) ಅವರ ಆಯ್ಕೆಯಲ್ಲ, ಮತ್ತು ಹಾಗಿರುವುದು ಅವರ ಬಿಡುಗಡೆಯ ಅವಕಾಶಗಳನ್ನು ಕುಂಠಿತಗೊಳಿಸುತ್ತದೆ ಎನ್ನುವುದೂ ನಿಜ. ಅಂದರೆ, ಸಾಮಾಜಿಕ ವಾಸ್ತವದಲ್ಲಿ ಒಡೆದು ಹೋದಂತೆ ಕಾಣುವ ಹೆಣ್ಣು ಎಂಬ ಜನವರ್ಗವು ತನ್ನ ಸಾಧ್ಯತೆಗಳನ್ನು ನಿಜಗೊಳಿಸಿಕೊಳ್ಳಲು ಈ ಸಾಮಾಜಿಕ ವಾಸ್ತವವನ್ನು ನಿರಂತರವೆಂದು ಒಪ್ಪಲು ಸಾಧ್ಯವಿಲ್ಲ. ತಮ್ಮ ಒಳಗಿನ ಭಿನ್ನತೆಗಳ ನೆಲೆಯಲ್ಲೇ ಸರಿ, ಸಂವಾದಕ್ಕೆ ಅಣಿಯಾಗಬೇಕಾಗುತ್ತದೆ. ಸ್ತ್ರೀವಾದಿ ಭಾಷಾಯೋಜಕರು ಈ ಸಾಧ್ಯತೆಗಳನ್ನು ಮನಗಂಡವರಾಗಿದ್ದಾರೆ. ಆದ್ದರಿಂದ, ಸಾರರೂಪಿ ಚಿಂತನೆಗಳ ಕೊರತೆಯನ್ನು ಎತ್ತಿ ಹೇಳುವ ಸಾಂಸ್ಕೃತಿಕ ಮಾನವಶಾಸ್ತ್ರಜ್ಞರ ಆಕ್ಷೇಪಣೆಗಳನ್ನು, ಸ್ತ್ರೀವಾದ ಮತ್ತು ಸ್ತ್ರೀವಾದಿ ಭಾಷಾಚಿಂತನೆಗಳು ಯಥಾವತ್ತಾಗಿ ಒಪ್ಪಬೇಕಾಗಿಲ್ಲ.

ಈ ಹಂತದಲ್ಲಿ ಸಾಮಾಜಿಕ ಭಾಷಾಶಾಸ್ತ್ರಜ್ಞರ ಚಿಂತನೆಗಳಿಗೂ, ಸ್ತ್ರೀವಾದಿ ಭಾಷಾಚಿಂತನೆಗಳಿಗೂ ಇರುವ ವ್ಯತ್ಯಾಸವನ್ನು ಪರಿಗಣಿಸುವುದು ಸೂಕ್ತವಾಗುತ್ತದೆ. ಸಾರರೂಪಿ ಚಿಂತನಾಕ್ರಮವನ್ನು ಒಪ್ಪದ ಸಾಮಾಜಿಕ ಭಾಷಾಶಾಸ್ತ್ರಜ್ಞರು ಶಿಷ್ಟ ಇಲ್ಲವೇ ಪ್ರಮಾಣ ಭಾಷೆಗಳಿಗೂ, ಉಪಭಾಷಾ ಪ್ರಭೇದಗಳಿಗೂ ಇರುವ ಯಾಜಮಾನ್ಯದ ಸಂಬಂಧವನ್ನು ಎತ್ತಿ ಹೇಳುತ್ತಾರೆ. ಅಂದರೆ, ಪ್ರಮಾಣ ಭಾಷೆಗಳು ಅಧಿಕಾರ ಉಳ್ಳವರ ಹಿಡಿತದಲ್ಲಿ ಉಳಿದು, ಅಧಿಕಾರ ವಂಚಿತರ ಅಭಿವ್ಯಕ್ತಿಗೆ ಉಪಭಾಷೆಗಳು ಮೀಸಲಾಗುತ್ತವೆ ಎಂಬುದು ಅವರ ವಾದ. ಈ ಪರಿಸ್ಥಿತಿಯನ್ನು ಮೀರಲು ಭಾಷಾಯೋಜನೆಯಲ್ಲಿ ಉಪಭಾಷೆಗಳಿಗೂ ಅನುವು ಮಾಡಿಕೊಡಬೇಕೆಂಬ, ಸಮಾನಸ್ಕಂಧತೆಯ ಅವಕಾಶ ಕಲ್ಪಿಸ ಬೇಕೆಂಬ ವಾದವನ್ನು ಮಂಡಿಸಲಾಗುತ್ತದೆ. ಮಾತೃಭಾಷಾ ಶಿಕ್ಷಣ, ಆದಿವಾಸಿಗಳ ಭಾಷೆಗಳನ್ನು ಶಿಕ್ಷಣದಲ್ಲಿ ಬಳಸುವುದು, ಆದಿವಾಸಿ ಭಾಷೆಗಳಿಗೆ ಆಧುನೀಕರಣದ ಸೌಲಭ್ಯವನ್ನು ಒದಗಿಸುವುದು-ಇವೇ ಮುಂತಾದ ‘‘ಹಿತ ಕಾಯುವ ಕ್ರಮ’’ಗಳನ್ನು ಮುಂದಿಡುತ್ತಾರೆ. ಇದರ ಉಪಯುಕ್ತತೆಯ ಮೌಲ್ಯಮಾಪನ ನಮಗೆ ಬೇಕಿಲ್ಲ. ಆದರೆ, ಈ ಮಾದರಿಯು ‘‘ಹೆಂಗಸರ ಭಾಷೆ’’ಗಳ ನಡುವಣ ಸಂಬಂಧವನ್ನು ವಿವರಿಸಲು ನೆರವಾಗುತ್ತದೆಯೇ ಎಂಬುದಷ್ಟೇ ನಮಗೆ ಮುಖ್ಯ. ಸಾಮಾಜಿಕ ಭಾಷಾಶಾಸ್ತ್ರವು ಉಪಭಾಷೆಗಳನ್ನು ‘‘ಕಾಯ್ದುಕೊಳ್ಳುವ’’ ಮೂಲಕ, ಸಾಮಾಜಿಕ ವಾಸ್ತವದ ಗೊಡವೆಯಿಂದ ದೂರ ಉಳಿಯುತ್ತದೆ. ಆದರೆ ಹೆಂಗಸರ ಭಾಷೆಗಳ ನಡುವೆ ಇರುವ ಭಿನ್ನತೆಗಳನ್ನು ಗಮನಿಸಿದರೂ, ಅವುಗಳ ಅಸ್ತಿತ್ವವನ್ನು ಕಾಯ್ದುಕೊಳ್ಳಬೇಕೆಂಬ ಗುರಿ ಸ್ತ್ರೀವಾದಿ ಭಾಷಾ ಯೋಜನೆಗಳಿಗೆ ಇಲ್ಲ. ಏಕೆಂದರೆ, ಸ್ತ್ರೀವಾದ ಮೂಲಭೂತವಾಗಿ ಸಾಮಾಜಿಕ ವಾಸ್ತವದ ಬೇರುಗಳನ್ನು ಅಲುಗಿಸಲು ಬಯಸುತ್ತದೆ. ಆದ್ದರಿಂದ, ಹೆಂಗಸರ ಭಾಷೆಗಳು ಎಂಬ ರಚನೆಯನ್ನು ಮನ್ನಿಸಿ ಕಾಯ್ದುಕೊಳ್ಳುವ ಉಮೇದು ಈ ಚಿಂತನೆಗಳಿಗೆ ಇಲ್ಲ. ಸಾಮಾಜಿಕ ಭಾಷಾಶಾಸ್ತ್ರಜ್ಞರು, ಅಲ್ಪ ಸಂಖ್ಯಾತರ, ಅವಕಾಶ ವಂಚಿತರ ಭಾಷೆಗಳ ಹಿತಕಾಯುವ ಯೋಜನೆಗಳಿಗೆ ಮುಂದಾಗುವಾಗ ಮಾನವ ಹಕ್ಕುಗಳ ಪ್ರಶ್ನೆಯನ್ನು ಮುಂದಿಡುತ್ತಾರೆ. ಈ ಹಂತದಲ್ಲಿ ಅವರು ಭಾಷೆಗಳನ್ನು ಸಾಮಾಜಿಕ ಚಲನಶೀಲತೆಯ ಸೂಚಕಗಳೆಂದು ತಿಳಿದಿರುವುದು ಸ್ಪಷ್ಟ. ಆದರೆ, ಭಾಷಾಪ್ರಭೇದಗಳ ನಡುವಣ ಯಾಜಮಾನ್ಯದ ಸಂಬಂಧವು ರೂಪುಗೊಂಡಿರುವುದರ ಹಿಂದೆ ಇರುವ ಕಾರಣಗಳೂ ಹೆಂಗಸರ ಭಾಷೆಗಳು ರೂಪುಗೊಂಡಿರುವ ಹಿಂದಿರುವ ಕಾರಣಗಳೂ ಒಂದೇ ಅಲ್ಲ. ಒಂದರ್ಥದಲ್ಲಿ ಹೆಂಗಸು ತನ್ನ ಭಾಷೆ ಮತ್ತು ತಾನು ಭಾಗವಾಗಿರುವ ಸಾಮಾಜಿಕ/ಪ್ರಾದೇಶಿಕ ಉಪಭಾಷೆ ಎಂಬ ಎರಡು ಚಹರೆಗಳಿಗೆ ಗುರಿಯಾಗಿರುತ್ತಾಳೆಂದು ಹೇಳಬಹುದು. ಈ ಎರಡೂ ಚಹರೆಗಳಿಗೆ ಇರುವ ಗುಣಧರ್ಮಗಳು ಮಾತ್ರ ಬೇರೆ ಬೇರೆ.

ನಾವೀಗ ಸ್ತ್ರೀವಾದಿ ಭಾಷಾಚಿಂತನೆಗಳ ಮೂರನೆಯ ಹಂತಕ್ಕೆ ಬರುತ್ತಿದ್ದೇವೆ. ಭಾಷೆಯಲ್ಲಿ ಹೆಣ್ಣಿನ ಪ್ರತಿನಿಧೀಕರಣ. ಭಾಷಾಸಾಮರ್ಥ್ಯದ ಬಳಕೆಯಲ್ಲಿ ಗಂಡು ಹೆಣ್ಣುಗಳಿಗಿರುವ ತಾರತಮ್ಯ -ಇವುಗಳನ್ನು ಗಮನಿಸಿದ ಮೇಲೆ ಉದ್ಭವಿಸುವ ಪ್ರಶ್ನೆಯೆಂದರೆ, ಹಾಗಿದ್ದಲ್ಲಿ ನಾವೇನು ಮಾಡಬೇಕು ಎಂಬುದು. ಸ್ತ್ರೀವಾದಿಗಳು ಹಲವು ಹಂತಗಳಲ್ಲಿ ಈ ನೆಲೆಯ ಚಿಂತನೆಗಳನ್ನು ರೂಪಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಭಾಷೆ ಎಂಬುದು ಹೆಂಗಸಿಗೆ ಪೂರ್ಣ ಪ್ರಮಾಣದ ಅವಕಾಶವನ್ನು ಒದಿಗಸಿಲ್ಲ ಎನ್ನುವುದನ್ನು ಹೆಂಗಸರು ಅರಿಯುವಂತೆ ಮಾಡಬೇಕಾಗಿದೆ. ತಾವಿರುವ ಪರಿಸ್ಥಿತಿಯು ಹಿತಕರವಾಗಿದೆ ಎಂದು ತಿಳಿಯುವುದು ಒಂದು ಬಗೆ. ಹಿತಕರವಲ್ಲದಿದ್ದರೂ ಪರ್ಯಾಯಗಳಿಲ್ಲ ಎಂದು ತಿಳಿಯು ವುದು ಇನ್ನೊಂದು ಬಗೆ. ಪರ್ಯಾಯಗಳಿದ್ದರೂ ಅವುಗಳನ್ನು ಆಯ್ದುಕೊಳ್ಳಲು ತಮಗೆ ಅವಕಾಶ ಮತ್ತು ಸಾಮರ್ಥ್ಯಗಳು ಇಲ್ಲವೆಂದು ತಿಳಿಯುವುದು ಮತ್ತೊಂದು ಬಗೆ. ಭಾಷೆಯ ಮಟ್ಟಿಗೆ ಹೆಂಗಸರ ಅರಿವಿನ ಪರಿಧಿ ಈ ಮೂರೂ ನೆಲೆಗಳಲ್ಲಿ ಹರಡಿಕೊಳ್ಳುತ್ತದೆ. ಮೊದಲನೆಯ ನೆಲೆಯಲ್ಲಿ ಹೆಂಗಸರು ತಾವಿರುವ ಭಾಷಿಕ ಬಿಕ್ಕಟ್ಟುಗಳ ಬಗ್ಗೆ ಅರಿವನ್ನು ಪಡೆಯದೆ ಇರುವುದರಿಂದ, ಆ ಸ್ಥಿತಿಯನ್ನು ಆಪ್ಯಾಯಮಾನ ಹಂತವೆಂದು ಭಾವಿಸಲೂ ಸಾಧ್ಯ. ಸ್ವಾತಂತ್ರ್ಯವನ್ನು ಬಯಸದಿರುವುದರಿಂದ ಸುರಕ್ಷೆಯು ಹಕ್ಕಾಗುವುದೆಂದು ಭಾವಿಸುವ ಸ್ಥಿತಿ ಇದು. ಸ್ತ್ರೀವಾದಿ ಭಾಷಾಯೋಜನೆಗಳು ಈ ಹಂತದಿಂದ ಹೆಂಗಸರನ್ನು ಹೊರತರುವ ಹೊಣೆಯನ್ನು ಹೊತ್ತುಕೊಳ್ಳುತ್ತವೆ. ಮುಂದಿನ ಎರಡು ಹಂತಗಳು ಪ್ರಜ್ಞೆ ಮೂಡಿದ ನಂತರದ ಹೊಣೆಗಾರಿಕೆಯ ಕಠಿಣ ಹಾದಿಗಳು. ಈ ನೆಲೆಯಲ್ಲಿ ಭಾಷೆಯಲ್ಲಿ ಅಡಗಿರುವ ತಾರತಮ್ಯದ ನೆಲೆಗಳನ್ನು ಪಲ್ಲಟಗೊಳಿಸಬೇಕಾದ ಹೊಣೆ ಇರುತ್ತದೆ. ಇದು ಇಬ್ಬಾಯಿಯ ಖಡ್ಗ. ಒಂದು ಕಡೆ ಹೆಂಗಸರನ್ನು ಭಾಷೆಯ ಬದಲಾಗಬೇಕಾದ ನೆಲೆಗಳಿಗೆ ಸನ್ನದ್ಧಗೊಳಿಸಬೇಕಾಗಿರುತ್ತದಾದರೆ, ಇನ್ನೊಂದು ಕಡೆಯಿಂದ ಇಂಥ ಪ್ರಯತ್ನಗಳು ಈಗಿರುವ ಭಾಷಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವುದನ್ನು ಕಂಡು ಗಂಡಸರು ತೋರುವ ವಿರೋಧವನ್ನು ಎದುರಿಸಬೇಕಾಗಿರುತ್ತದೆ.

ಸ್ತ್ರೀವಾದಿ ಭಾಷಾಚಿಂತನೆಗಳು ಭಾಷೆಯಲ್ಲಿ ಅಂತಸ್ಥವಾಗಿರುವ ತಾರತಮ್ಯದ ನೆಲೆಗಳನ್ನು ಗುರುತಿಸುವಂತೆ ಮಾಡಿದ ಮೇಲೆ, ಮುಂದಿನ ಹಂತದಲ್ಲಿ ಅಂಥ ತಾರತಮ್ಯದ ನೆಲೆಗಳಿಂದ ಹೊರಬರಲು ದಾರಿಗಳನ್ನು ಹುಡುಕಬೇಕಾಗುತ್ತದೆ. ಈ ಪರ್ಯಾಯ ಯೋಜನೆಗಳಲ್ಲಿ ಎರಡು ಬಗೆಗಳಿವೆ. ಒಂದು, ತಾರತಮ್ಯದ ತೀವ್ರತೆಯನ್ನು ಕುಗ್ಗಿಸುವ ಕಡೆಗೆ ಚಲಿಸಿದರೆ, ಮತ್ತೊಂದು ತಾರತಮ್ಯವನ್ನು ಸಂಪೂರ್ಣವಾಗಿ ನಿವಾರಿಸುವ ಕಡೆಗೆ ಚಲಿಸುತ್ತದೆ. ಮೊದಲನೆಯ ಬಗೆಯ ಬದಲಾವಣೆಗಳು ಭಾಷೆಯ ಬಳಕೆಯಲ್ಲಿ ಬದಲಾವಣೆಗಳನ್ನು ತರುವ ಕ್ರಮಗಳನ್ನು ಮುಂದಿಡುತ್ತವೆ. ಎರಡನೆಯದು, ಭಾಷೆಯನ್ನು ಆಮೂಲಾಗ್ರವಾಗಿ ಬದಲಿಸುವ ಕಡೆಗೆ ಪ್ರಯತ್ನಗಳನ್ನು ಮಾಡುತ್ತದೆ. ಮೊದಲನೆಯ ಬಗೆಯನ್ನು ‘ಸುಧಾರಣಾ ಮಾದರಿ’ ಎಂದು ಕರೆಯಲಾಗಿದೆ. ಈ ಸುಧಾರಣಾವಾದಿ ಪ್ರಯತ್ನಗಳು ಸೂಚಿಸುವ ಬದಲಾವಣೆಗಳನ್ನು ಬಳಸಲು ಹೆಂಗಸರನ್ನು ಒಪ್ಪಿಸುವುದು ಮಾತ್ರ ಸಾಲದಾಗುತ್ತದೆ.ಏಕೆಂದರೆ, ಸಾಮಾಜಿಕ ಸಂವಹನಗಳಲ್ಲಿ ಗಂಡಸರೂ ಭಾಗೀದಾರ ರಾಗಿರುವುದರಿಂದ ಅವರೂ ಈ ಬದಲಾವಣೆಗಳನ್ನು ಒಪ್ಪುವಂತೆ ಮಾಡಬೇಕಾಗುತ್ತದೆ. ಇದು ನಿಜಕ್ಕೂ ತ್ರಾಸದಾಯಕ.

ಸುಧಾರಣಾವಾದಿ ಮಾದರಿಗಳು ಮುಂದಿಟ್ಟ ಪರಿವರ್ತನೆಗಳನ್ನು ಕುರಿತಂತೆ ಹಲವು ಬಗೆಯ ಪ್ರತಿಕ್ರಿಯಗಳು ಕಳೆದ ಒಂದೆರಡು ದಶಕಗಳಲ್ಲಿ ಕಂಡುಬಂದಿವೆ. ಇವು ನಿಜಕ್ಕೂ ಉಪಯುಕ್ತ ಎಂಬ ನೆಲೆಯಿಂದ ಮೊದಲುಗೊಂಡು, ತೀವ್ರವಾಗಿ ಗೇಲಿಮಾಡುವ ನೆಲೆಯವರೆಗೂ ಈ ಪ್ರತಿಕ್ರಿಯೆಗಳು ಹರಡಿಕೊಂಡಿವೆ. ಇಂಥ ಬದಲಾವಣೆಗಳ ಬಗ್ಗೆ ಬಂದಿರುವ ಒಂದು ಮುಖ್ಯವಾದ ಆಕ್ಷೇಪವನ್ನು ನೋಡೋಣ. ಇದು ಸಮಾಜಶಾಸ್ತ್ರಜ್ಞರ ಆಕ್ಷೇಪ. ಈ ಚರ್ಚೆಯನ್ನು ತಿಳಿಯಲು ಸುಧಾರಣಾ ಮಾದರಿಯು ಪ್ರಸ್ತಾಪಿಸಿದ ಒಂದು ಬದಲಾವಣೆಯನ್ನು ಗಮನಿಸಬಹುದು. ಇಂಗ್ಲೀಶ್ ನಲ್ಲಿ ಪುರುಷವಾಚಿ ಸರ್ವನಾಮವನ್ನು ಜಾತ್ಯೇಕ ರೂಪವಾಗಿ ಬಳಸಲಾಗುತ್ತದೆ. ಅಂದರೆ, he ಎಂಬ ರೂಪವು ವಾಸ್ತವವಾಗಿ ಗಂಡಸನ್ನೇ ಸೂಚಿಸಿದರೂ, ಎಷ್ಟೋ ಸಂಕಥನಗಳಲ್ಲಿ ಅದು ಇಡೀ ಮಾನವ ಜನಾಂಗ ವನ್ನು ಗಂಡು ಹೆಣ್ಣುಗಳೆಂದು ಭೇದವಿಲ್ಲದೆ ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಬೇರೂರಿದೆ. ಮನುಷ್ಯರನ್ನು ಕುರಿತ ನಿರೂಪಣೆಗಳಲ್ಲಿ ಸರ್ವನಾಮ ಅಗತ್ಯವಾದಾಗ he ಮತ್ತು ಅದರ ಅಂತರ್ಗಮಕ ರೂಪಗಳಾದ his, him ರೂಪಗಳನ್ನು ಬಳಸಲಾಗುತ್ತದೆ. ಸ್ತ್ರೀವಾದಿ ಭಾಷಾಚಿಂತಕರು ಇಂಥ ಬಳಕೆಗಳು ಹೆಂಗಸರನ್ನು ಹೊರಗಿಡುವ ಇಲ್ಲವೇ/ಮತ್ತು ನಗಣ್ಯವಾಗಿಸುವ ಯತ್ನಗಳೆಂದು ವಾದಿಸಿದ್ದಾರೆ. ಇದಕ್ಕೆ ಪರಿಹಾರವೆಂಬಂತೆ, he or she ಎಂತಲೋ, S/he ಎಂತಲೋ ಬಳಸಬೇಕೆಂಬುದು ಒಂದು ಪ್ರಸ್ತಾವವಾದರೆ, he ಬಳಕೆಯಾಗುವ ಕಡೆಗಳಲ್ಲೆಲ್ಲಾ She ಮಾತ್ರ ಬಳಸಬೇಕೆಂದು ಮತ್ತೊಂದು ಪ್ರಸ್ತಾಪವಿದೆ. ಈ ಪ್ರಸ್ತಾವಗಳ ಮೌಲ್ಯಮಾಪನ ಸದ್ಯಕ್ಕೆ ಬೇಡ. ಆಕ್ಷೇಪವೆತ್ತಿದ ಸಮಾಜಶಾಸ್ತ್ರಜ್ಞರು ಏನು ಹೇಳುತ್ತಾರೆಂಬುದನ್ನು ಗಮನಿಸೋಣ.

ಮಾನವ ಸಮುದಾಯವನ್ನು he ಎಂಬ ಪದದಿಂದ ಪ್ರತಿನಿಧಿಸುವ ಕ್ರಮದ ಹಿಂದೆ ಹೆಣ್ಣು ಗಂಡುಗಳನ್ನು ತರತಮ ಭಾವದಲ್ಲಿ ನೋಡುವ ಮತ್ತು ಹೆಣ್ಣಿನ ಅಸ್ತಿತ್ವವನ್ನು ಕಡೆಗಣಿಸುವ ಹುನ್ನಾರವಿದೆ ಎಂದು ಒಪ್ರೋಸಾಮಾಜಿಕ ನೆಲೆಯ ಈ ನಂಬಿಕೆ ಮತ್ತು ಆಚರಣೆಗಳು ಭಾಷೆಯ ಮುಖಾಂತರ ಸೂಚಿತವಾಗುತ್ತವೆ. ಅಂದರೆ, ಭಾಷೆಯು ಸೂಚಕ, ಮತ್ತು ಸಾಮಾಜಿಕ ನಂಬಿಕೆ ಮತ್ತು ಆಚರಣೆಗಳು ಸೂಚಿತಾರ್ಥಗಳು. ಇವುಗಳಲ್ಲಿ ಯಾವುದು ಇನ್ನೊಂದನ್ನು ನಿಯಂತ್ರಿಸುತ್ತದೆ ಎನ್ನುವುದು ಮುಖ್ಯ ಪ್ರಶ್ನೆ. ಸೂಚಕವು ಸೂಚಿತಾರ್ಥದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಎಂದು ಒಪ್ಪುವುದಾದರೆ, ಆಗ ಸೂಚಿತಾರ್ಥದಲ್ಲಿ ಬದಲಾವಣೆಯಾದರೆ ಮಾತ್ರ ಸೂಚಕದಲ್ಲಿ ಬದಲಾವಣೆ ಸಮ್ಮತವಾಗುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ನಂಬಿಕೆ ಮತ್ತು ಆಚರಣೆಗಳಲ್ಲಿ ತಾರತಮ್ಯದ ನೆಲೆಗಳು ಬದಲಾದರೆ, ಆಗ ಸೂಚಕವಾದ ಭಾಷೆಯಲ್ಲಿ ಬದಲಾವಣೆಗಳು ಹೊಂದಿಕೊಳ್ಳುತ್ತವೆ.

ಆದರೆ, ಸೂಚಕವೇ ಸೂಚಿತಾರ್ಥದ ನಿಯಂತ್ರಣವನ್ನು ಮಾಡಬಲ್ಲುದೇ? ಭಾಷಿಕ ಬದಲಾವಣೆಗಳು ಸಾಮಾಜಿಕ ನಂಬಿಕೆ ಮತ್ತು ಆಚರಣೆಗಳನ್ನು ಬದಲಿಸಬಲ್ಲುದೇ? ಒಂದು ವೇಳೆ ಇದು ಅಸಾಧ್ಯ ಎನ್ನುವುದಾದರೆ, ಸ್ತ್ರೀವಾದಿ ಭಾಷಾಯೋಜಕರು ಪ್ರಸ್ತಾಪಿ ಸುವ ಭಾಷಿಕ ಬದಲಾವಣೆಗಳು ಕೇವಲ ಯಥಾಸ್ಥಿತಿಯ ಮುಂದುವರಿಕೆಯನ್ನು ಗೊತ್ತಿಲ್ಲದೆಯೇ ಒಪ್ಪಿದಂತಾಗುತ್ತದೆ. ಏಕೆಂದರೆ, ಸೂಚಿತಾರ್ಥಗಳು ಸೂಚಕಗಳಿಂದ ಬದಲಾಗುವುದಿಲ್ಲ. ಇದಿಷ್ಟು ಸಮಾಜಶಾಸ್ತ್ರಜ್ಞರ ಆಕ್ಷೇಪಗಳು.

ಸಮಾಜಶಾಸ್ತ್ರಜ್ಞರಲ್ಲದೆ, ಭಾಷಾಶಾಸ್ತ್ರಜ್ಞರೂ ಕೂಡಾ ಸ್ತ್ರೀವಾದಿ ಭಾಷಾಚಿಂತನೆಗಳು ಪ್ರಸ್ತಾಪಿಸುವ ಬದಲಾವಣೆಗಳಿಗೆ ಆಕ್ಷೇಪಗಳನ್ನು ಎತ್ತುತ್ತಾರೆ. ಅವರ ವಾದದ ತಿರುಳು ಹೀಗಿದೆ. ಭಾಷಿಕ ಬದಲಾವಣೆಗಳು ನಡೆಯುವ ಕ್ರಮ ವಿಶಿಷ್ಟವಾದುದು. ಅದು ಯೋಜಿತ ವಾದದ್ದಲ್ಲ. ಮತ್ತು ಒಂದೇ ಕಾಲಕ್ಕೆ ಇಡೀ ಭಾಷಾಸಮುದಾಯದ ಅರಿವಿಗೆ ಬರುವಂತೆ ನಡೆಯುವುದಿಲ್ಲ. ಅದು ಹರಡುವ ಬಗೆಯನುಭಾಷಾಶಾಸ್ತ್ರಜ್ಞರು ಅಧ್ಯಯನ ಮಾಡಿದ್ದಾರೆ.  ಸ್ತ್ರೀವಾದಿ ಭಾಷಾಚಿಂತಕರು ಮಂಡಿಸುವ ಭಾಷಿಕಬದಲಾವಣೆಗಳು ‘ಸಹಜ’ ಭಾಷಾ ಬದಲಾವಣೆಗಳ ಚೌಕಟ್ಟಿಗೆ ಹೊಂದುವುದಿಲ್ಲ.ಏಕೆಂದರೆ, ಯಾರೋ ಎಲ್ಲೋ ಯೋಜಿಸಿದ ಬದಲಾವಣೆಗಳನ್ನು, ಭಾಷಾಸಮುದಾಯ ಒಮ್ಮೆಲೇ ಒಪ್ಪಿಕೊಳ್ಳುವುದು ಅಸಾಧ್ಯ.

ಈ ಎರಡೂ ಆಕ್ಷೇಪಗಳನ್ನು ಸ್ತ್ರೀವಾದಿ ಭಾಷಾಚಿಂತಕರು ಗಮನಿಸಿದ್ದಾರೆ. ತಮ್ಮದೇ ಆದ ಬಗೆಯಲ್ಲಿ ಆಕ್ಷೇಪಗಳಿಗೆ ಉತ್ತರಿಸಿದ್ದಾರೆ. ಭಾಷಾಶಾಸ್ತ್ರಜ್ಞರ ಆಕ್ಷೇಪ ಅಷ್ಟು ಬಲವಾದುದಲ್ಲ. ಅವರು ಹೇಳುವ ಭಾಷಿಕ ಬದಲಾವಣೆಗಳ ಮಾದರಿಯು ಎಷ್ಟು ನಿಜವೋ ಯೋಜಿತ ಪ್ರಯತ್ನಗಳಿಂದ ನಡೆಯುವ ಭಾಷಿಕ ಬದಲಾವಣೆಗಳ ಮಾದರಿಯೂ ಅಷ್ಟೇ ನಿಜ. ಇದಕ್ಕೆ ಜಗತ್ತಿನ ಹಲವು ಭಾಷಾಸಂದರ್ಭಗಳಲ್ಲಿ ನಿದರ್ಶನಗಳು ದೊರಕುತ್ತವೆ. ಅಲ್ಲದೆ, ಭಾಷಾಯೋಜನೆ ಎಂಬ ಪರಿಕಲ್ಪನೆಯೇ ಯೋಜಿತ ರೀತಿಯ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತದೆ. ಹಾಗಿಲ್ಲದಿದ್ದರೆ, ಭಾಷಾಶಾಸ್ತ್ರಜ್ಞರು ಭಾಷಾ ಯೋಜನೆಯನ್ನೇ ನಿರಾಕರಿಸಬೇಕಾಗುತ್ತದೆ. ಸ್ತ್ರೀವಾದಿ ಭಾಷಾಚಿಂತಕರು ಎದುರಿಸುವ ಸಮಸ್ಯೆಯು ಬೇರೆ. ಅವರ ಭಾಷಿಕ ಬದಲಾವಣೆಯ ಪ್ರಸ್ತಾವಗಳು ಅಧಿಕಾರ ಕೇಂದ್ರವನ್ನು ಪ್ರಶ್ನಿಸುವ ನೆಲೆಯಲ್ಲಿ ಇರುವುದರಿಂದ, ಆ ಪ್ರಸ್ತಾವಗಳನ್ನು ವಿರೋಧಿಸುವ ಯತ್ನಗಳು ಬಲವಾಗಿಯೇ ಇರುತ್ತವೆ. ಹಾಗಾಗಿ, ಅವರ ಪ್ರಸ್ತಾವಿತ ಭಾಷಾಯೋಜನೆಗಳು ಸೋತರೆ, ಅದಕ್ಕೆ ಆ ಪ್ರಸ್ತಾವಗಳ ಅಂತಃಸಾಮರ್ಥ್ಯ ಕಾರಣವಾಗಿರದೆ, ಸಾಮಾಜಿಕ ಸನ್ನಿವೇಶಗಳ ವಿರೋಧವೇ ಕಾರಣವಾಗಿರುತ್ತದೆ. ಈ ಅಂಶವು ಸ್ತ್ರೀವಾದಿ ಭಾಷಾಚಿಂತಕರಿಗೆ ಗೊತ್ತಿದೆ.

ಇನ್ನು ಸಮಾಜಶಾಸ್ತ್ರಜ್ಞರ ಆಕ್ಷೇಪವನ್ನು ಇವರು ಎದುರಿಸುವ ಬಗೆಯನ್ನು ನೋಡೋಣ. ತರ್ಕಬದ್ಧವಾಗಿ ತೋರುವ ಈ ಆಕ್ಷೇಪಣೆಯು ಮೇಲುನೋಟಕ್ಕೆ ಸ್ತ್ರೀವಾದಿ ಭಾಷಿಕಪರಿವರ್ತನೆಗಳ ಪರಿಣಾಮ ಟೊಳ್ಳು ಎಂಬುದನ್ನು ಬಯಲು ಮಾಡಿದಂತಿದೆ. ಆದರೆ, ಇಂಥ ಪ್ರಸ್ತಾವಗಳನ್ನು ಮಂಡಿಸುವ ಸ್ತ್ರೀವಾದಿಗಳು ಕೇವಲ ಭಾಷಿಕ ನೆಲೆಯ ಚಿಂತನೆಗಳಿಗೆ ಮತ್ತು ಕಾರ್ಯಯೋಜನೆಗಳಿಗೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡಿರುವುದಿಲ್ಲ. ಸಮಾಜ, ಸಂಸ್ಕೃತಿಗಳು ನಂಬಿದ, ಆಚರಿಸುತ್ತಿರುವ ತಾರತಮ್ಯದ ನೆಲೆಗಳ ಎದುರಾಗಿ ಅವರು ದೊಡ್ಡ ಪ್ರಮಾಣದ ಚಿಂತನೆ ಮತ್ತು ಕಾರ್ಯಯೋಜನೆಗಳನ್ನು ರೂಪಿಸುತ್ತಿರುತ್ತಾರೆ. ಪ್ರಸ್ತಾವಿತ ಭಾಷಿಕ ಬದಲಾವಣೆ ಅಂಥ ಕಾರ್ಯಯೋಜನೆಯ ಒಂದು ಭಾಗ ಮಾತ್ರ. ಅದು ಸ್ವತಂತ್ರವೂ ಅಲ್ಲ, ಸ್ವಯಂಪೂರ್ಣವೂ ಅಲ್ಲ. ಹಾಗೆ ಸ್ವಯಂಪೂರ್ಣವೆಂದು ನಂಬಿದಾಗ ಮಾತ್ರ ಸಮಾಜಶಾಸ್ತ್ರಜ್ಞರ ಆಕ್ಷೇಪಣೆಗಳು ನಿಜವಾಗುತ್ತವೆ. ಆದರೆ, ಸ್ತ್ರೀವಾದಿಗಳು ಹಾಗೆ ನಂಬಿಲ್ಲವಾದ್ದರಿಂದ ಅವರು ಪ್ರಸ್ತಾವಿಸುವ ಭಾಷಿಕ ಬದಲಾವಣೆಗಳು ಒಟ್ಟು ಪರಿವರ್ತನೆಯ ಒಂದು ಎಳೆಯನ್ನು ಮಾತ್ರವೇ ಹೇಳುತ್ತಿವೆ. ಹಾಗಾಗಿ, ಈ ಆಕ್ಷೇಪವನ್ನು ಸ್ತ್ರೀವಾದಿಗಳು ಸರಿಯಾಗಿಯೇ ತಳ್ಳಿ ಹಾಕಿದ್ದಾರೆ.

ಸ್ತ್ರೀವಾದಿ ಭಾಷಾಸುಧಾರಕರ ಯತ್ನಗಳು ತಾತ್ತ್ವಿಕವಾಗಿ ಎದುರಿಸಿದ ಆಕ್ಷೇಪಗಳಿಗೆ ಹೇಗೆ ಪ್ರತ್ಯುತ್ತರವನ್ನು ನೀಡಿದವು ಎನ್ನುವುದನ್ನು ಈವರೆಗೆ ಗಮನಿಸಲಾಯಿತು. ಈಗ ಪ್ರಾಯೋಗಿಕ ನೆಲೆಯಲ್ಲಿ ಎದುರಿಸಿದ ಸವಾಲುಗಳ ಸ್ವರೂಪವನ್ನು ನೋಡಬಹುದು. ಸ್ತ್ರೀವಾದಿ ಭಾಷಾಯೋಜನೆಯು ಮಂಡಿಸುವ ಪರ್ಯಾಯ ಬಳಕೆಗಳನ್ನು ಜಾರಿಗೆ ತರಲು ಹಲವಾರು ಅಡ್ಡಿಗಳು ಎದುರಾಗಿವೆ. ಮುಖ್ಯವಾಗಿ ಈ ಪರ್ಯಾಯಗಳನ್ನು ಸಾಧು ಎಂದು ಒಪ್ಪಿಸುವ ಹೊಣೆ ಸ್ತ್ರೀವಾದಿಗಳದ್ದೇ ಆಗಿದೆ. ಬಳಿಕ ಒಪ್ಪಿದವರು ನಿಯತವಾಗಿ ಪ್ರಸ್ತಾವಿತ ಪರ್ಯಾಯಗಳನ್ನು ಬಳಸುವಂತೆ ಮಾಡುವುದು ಇನ್ನೊಂದು ಹೊಣೆ. ಎಲ್ಲಕ್ಕಿಂತ ಮುಖ್ಯವಾಗಿ ಹೀಗೆ ಬಳಕೆಗೆ ಬಂದ ಪರ್ಯಾಯ ರೂಪಗಳಿಂದ ನಿರೀಕ್ಷಿತ ಪರಿಣಾಮಗಳು ಆಗಿವೆಯೇ ಎನ್ನುವುದನ್ನು ಮೌಲ್ಯಮಾಪನ ಮಾಡುವುದು ಮಗದೊಂದು ಹೊಣೆ.

ಹೆಚ್ಚಾಗಿ ಇಂತಹ ಸುಧಾರಣೆಗಳು ಮೂರ್ತರೂಪದಲ್ಲಿ ಐರೋಪ್ಯ ಭಾಷೆಗಳ ಸಂದರ್ಭದಲ್ಲಿ ಮಂಡಿತವಾಗಿವೆ. ಸ್ತ್ರೀವಾದ ತನ್ನ ಜಾಗತಿಕ ಸ್ವರೂಪವನ್ನು ಕಾಯ್ದುಕೊಳ್ಳ ಬೇಕಾದರೆ, ಎಲ್ಲ ಭಾಷಾಸಮುದಾಯಗಳಲ್ಲೂ ಇಂಥವೇ ಭಾಷಿಕ ಸುಧಾರಣೆಗಳು ಜಾರಿಗೊಳ್ಳಬೇಕಾಗುತ್ತದೆ. ಐರೋಪ್ಯ ಕೇಂದ್ರಿತ ಪ್ರಯೋಗಗಳನ್ನು ಅಭ್ಯಾಸ ಮಾಡಿದ ಇತರ ಭಾಷಿಕ ಸಮುದಾಯದ ಸ್ತ್ರೀವಾದಿ ಭಾಷಾಚಿಂತಕರು ಎರಡು ರೀತಿಗಳಲ್ಲಿ ತಮ್ಮ ಹಾದಿಗಳನ್ನು ಹುಡುಕಿಕೊಂಡಿರುವ ಸಾಧ್ಯತೆಗಳಿವೆ. ಯುರೋಪಿನ ಭಾಷೆಗಳಲ್ಲಿ, ಮುಖ್ಯವಾಗಿ ಇಂಗ್ಲಿಶ್‌ನಲ್ಲಿ ಲಿಂಗ ತಾರತಮ್ಯ ಸೂಚಕಗಳಾದ ಭಾಷಾಂಶಗಳ ಸಮಾನಾಂತರ ಮಾದರಿ ಗಳನ್ನು ತಮ್ಮ ಭಾಷೆಯಲ್ಲೂ ಹುಡುಕಿ ತಕ್ಕ ಪರ್ಯಾಯ ಬಳಕೆಗಳನ್ನು ಪ್ರಸ್ತಾಪಿಸುವುದು ಒಂದು ಮಾದರಿ. ಉದಾಹರಣೆಗೆ, ಜಾತ್ಯೇಕ ಏಕವಚನ ರೂಪವು ಮಾನವ ಸಮುದಾಯದ ಪ್ರತಿನಿಧಿಯಾಗಿ ಬಳಕೆಯಾಗುವ ಲಕ್ಷಣ ಇಂಗ್ಲಿಶ್‌ನಲ್ಲಿರುವಂತೆ ಕನ್ನಡದಲ್ಲೂ ಇದೆ. ಆದ್ದರಿಂದ, ಇಂಗ್ಲಿಶ್ ಭಾಷೆಯಲ್ಲಿ ಸೂಚಿಸಿದ ಪರ್ಯಾಯ ಬಳಕೆಗಳಿಗೆ ತಕ್ಕಂಥ ಕನ್ನಡ ರೂಪಗಳನ್ನು ಬಳಸುವುದು ಈ ಮಾದರಿಯ ಗುರಿಯಾಗಿರುತ್ತದೆ. ಇಂಗ್ಲಿಶ್‌ನಲ್ಲಿ he/She, S/he ಎಂಬ ಪ್ರಸ್ತಾವಗಳಿದ್ದರೆ, ಕನ್ನಡದಲ್ಲಿ ಅವನು/ಅವಳು, ಅವಳು/ನು ಎಂದು ಬಳಸಲು ಸೂಚಿಸಲಾಗುತ್ತದೆ.

ಹೀಗಲ್ಲದೆ, ಒಂದೊಂದು ಭಾಷೆಯೂ ಲಿಂಗತಾರತಮ್ಯವನ್ನು ಪ್ರಕಟಿಸಲು ತನ್ನದೇ ಆದ ಬಗೆಗಳನ್ನು ಹೊಂದಿರಬಹುದೆಂದು ತಿಳಿಯುವುದು ಇನ್ನೊಂದು ಮಾದರಿ. ಈ ಹಾದಿ ಹಿಡಿದರೆ, ಆಯಾ ಭಾಷೆಯಲ್ಲಿ ಯಾವ ಭಾಷಾಂಶಗಳು ಹೀಗೆ ಲಿಂಗತಾರತಮ್ಯವನ್ನು ಸೂಚಿಸುತ್ತಿವೆ ಎನ್ನುವುದನ್ನು ಮೊದಲು ಶೋಧಿಸಬೇಕಾಗುತ್ತದೆ. ಬಳಿಕ ಪರ್ಯಾಯ ಬಳಕೆಗಳನ್ನು ಪ್ರಸ್ತಾಪಿಸಬೇಕಾಗುತ್ತದೆ. ಉದಾಹರಣೆಗೆ, ಕೆಲವು ದ್ರಾವಿಡ ಭಾಷೆಗಳಲ್ಲಿ (ಕನ್ನಡದ ಕೆಲವು ಸಾಮಾಜಿಕ ಉಪಭಾಷೆಗಳೂ ಸೇರಿದಂತೆ) ಲಿಂಗವಿಭಜನೆ ಮಾಡುವಾಗ ಆಯಾ ಭಾಷೆಯ ವ್ಯಾಕರಣಗಳು ಗಂಡಸನ್ನು ‘ಮಹತ್’ ವರ್ಗಕ್ಕೂ (ಇಲ್ಲಿ ಮಹತ್ ಎಂದರೆ ಚೇತನಯುಕ್ತ ಎಂದು ಅರ್ಥ) ಉಳಿದ ಎಲ್ಲ ಜೀವಿಗಳನ್ನೂ (ಹೆಂಗಸರು, ಪ್ರಾಣಿಗಳು, ಸಸ್ಯಗಳು) ‘ಅಮಹತ್’ ವರ್ಗಕ್ಕೂ ಸೇರಿಸುತ್ತವೆ. ಹೆಂಗಸನ್ನು ಹೀಗೆ ಅಮಹತ್ ವರ್ಗಕ್ಕೆ ಸೇರಿಸಿದ್ದು ಆಕೆಯ ಅಸ್ತಿತ್ವವನ್ನು ಕೀಳುಗೈದು ತಾರತಮ್ಯವನ್ನು ಪ್ರಕಟಿಸಿದಂತಾಗಿದೆ. ಇಂಥ ಭಾಷೆಗಳಲ್ಲಿ ಹೆಂಗಸಿಗೆ ಪುಲ್ಲಿಂಗಕ್ಕೆ ಸಮಾನವಾದ ಸ್ತ್ರೀಲಿಂಗ ರೂಪಗಳನ್ನು (ಲಿಂಗ, ವಚನ, ಪುರುಷ ಸೂಚಕಗಳಾದ ಆಖ್ಯಾತ ಪ್ರತ್ಯಯಗಳಲ್ಲಿ) ಬಳಸಲು ಪ್ರಸ್ತಾಪಿಸುವುದು ಎರಡನೆಯ ಮಾದರಿಯ ಬದಲಾವಣೆಗೆ ಉದಾಹರಣೆ ಯಾಗಬಲ್ಲದು. ಈ ಎರಡೂ ಮಾದರಿಗಳಲ್ಲಿ ಎರಡನೆಯದು ಸಹಜವಾಗಿಯೇ ಹೆಚ್ಚು ವ್ಯಾಪಕವಾದ ಮತ್ತು ಜವಾಬ್ದಾರಿಯುತವಾದ ನೆಲೆಯಾಗಿದೆ. ಏಕೆಂದರೆ, ಹೀಗೆ ಮಾಡಿದಾಗ ಎಲ್ಲ ಭಾಷೆಗಳಲ್ಲೂ ಇರುವ ಲಿಂಗತಾರತಮ್ಯದ ನೆಲೆಗಳು ಗಮನಕ್ಕೆ ಬರುವಂತೆ, ಭಾಷಾವಿಶಿಷ್ಟವಾದ ಲಿಂಗತಾರತಮ್ಯದ ನೆಲೆಗಳೂ ಗಮನಕ್ಕೆ ಬರುತ್ತವೆ. ಹಾಗಾಗಿಯೇ ಇದು ವ್ಯಾಪಕವಾದುದು. ಭಾಷಾವಿಶಿಷ್ಟವಾದ ತಾರತಮ್ಯದ ನೆಲೆಗಳನ್ನು ಪ್ರತ್ಯೇಕವಾಗಿ ಹುಡುಕಿ ಕಂಡುಕೊಳ್ಳಬೇಕಾಗಿರುವುದರಿಂದ ಇದು ಜವಾಬ್ದಾರಿಯ ನೆಲೆಯಾಗಿರುತ್ತದೆ.

ಈಗಾಗಲೇ ಗಮನಿಸಿದಂತೆ, ಸ್ತ್ರೀವಾದಿ ಭಾಷಾಚಿಂತನೆಗಳ ಕಾರ್ಯಯೋಜನೆಯಲ್ಲಿ ತೀವ್ರವಾದಿ ಹಂತಗಳೂ ಇವೆ. ಈ ತೀವ್ರವಾದಿ ನೆಲೆಗಳು, ಭಾಷೆಯ ಬಳಕೆಯಲ್ಲಿ ಮೇಲ್‌ಸ್ತರದ ಬದಲಾವಣೆಗಳಿಂದ ಯಾವ ಪ್ರಯೋಜನವೂ ಆಗದೆಂದು ವಾದಿಸುತ್ತವೆ. ಭಾಷಾಸುಧಾರಣೆಗಳು ಪುರುಷಕೇಂದ್ರಿತ ನೆಲೆಯನ್ನು ಗುರುತಿಸಿದರೂ, ಅದನ್ನು ಭಗ್ನ ಗೊಳಿಸಲಾರವು. ಹೆಚ್ಚೆಂದರೆ, ಸಮಾನ ಅವಕಾಶಕ್ಕಾಗಿ ಸಂಧಾನಗಳನ್ನು ನಡೆಸುವ ಹಂತದಲ್ಲಿ ನಿಂತು ಹೋಗುತ್ತವೆ. ಪುರುಷಪ್ರಧಾನತೆಯ ಅಹಂಗೆ ಇದರಿಂದ ಮತ್ತಷ್ಟು ಪುಷ್ಟಿಯೇ ಒದಗಬಹುದು. ಏಕೆಂದರೆ ಅವಕಾಶಗಳನ್ನು ‘ನೀಡಿದ’ ಹಮ್ಮು ಅಲ್ಲಿ ನಿರಂತರವಾಗಿ ಉಳಿದೇ ಇರುತ್ತದೆ. ‘ಕೊಡುವ’ ಗಂಡು, ಮತ್ತು ‘ಪಡೆಯುವ’ ಹೆಣ್ಣಿನ ಮಾದರಿಗಳು ಸ್ಥಿರಗೊಳ್ಳುತ್ತವೆ.