‘‘ಲೋಕದಲ್ಲಿರುವ ವಸ್ತುಗಳು ಮತ್ತು ಘಟನೆಗಳು ನಮಗೆ ವರ್ಗೀಕೃತವಾದಂತೆ ತೋರುವುದಿಲ್ಲ. ಅವುಗಳನ್ನು ವರ್ಗೀಕರಿಸಿದಂತೆ ನಾವು ನಮ್ಮ ಗ್ರಹಿಕೆಯನ್ನು ಅವುಗಳ ಮೇಲೆ ಆರೋಪಿಸುತ್ತೇವೆ. ಹಾಗೆ ನೋಡಿದರೆ ವರ್ಗೀಕರಿಸುವವರು ನಾವೇ’’ ಎಂದು ಜೇಮ್ಸ್ ಬ್ರಿಟಾನ್ (೧೯೭೫) ಹೇಳಿದ್ದಾನೆ. ಇದು ಸತ್ಯವೋ ಅಲ್ಲವೋ ಎಂಬುದು ನನಗೆ ಮುಖ್ಯವಲ್ಲ. ಏಕೆಂದರೆ, ಭಾಷೆಯು ವಾಸ್ತವವನ್ನು ಬಿಂಬಿಸಲು ಶಕ್ತವಾಗಿರುತ್ತದೆ ಎಂದು ನಾನು ನಂಬಿದ್ದೇನೆ. ನನ್ನ ಪ್ರಶ್ನೆ ಇರುವುದು ಜೇಮ್ಸ್ ಬ್ರಿಟಾನ್ ಹೇಳುತ್ತಿರುವ ಮಾತಿನಲ್ಲಿ ಸೂಚಿತವಾದ ‘ನಾವು’ ಎಂದರೆ ಯಾರು ಎಂಬುದಾಗಿದೆ. ಲೋಕವನ್ನು ತಮಗೆ ಬೇಕಾದಂತೆ ನಮಗೆ ತೋರಿಸುತ್ತಿರುವ ‘ಇವರು’ ಯಾರು? ಅವರ ವಿಭಜನೆ, ವರ್ಗೀಕರಣ ಮುಂತಾದವುಗಳ ಹಿಂದೆ ಇರುವ ನಿಯಮಗಳು ಯಾವುವು?

ಬ್ರಿಟಾನ್ ಸ್ಪಷ್ಟವಾಗಿ ಹೇಳದಿದ್ದರೂ, ಅಲ್ಲಿ ಸೂಚಿತವಾದವರು ಗಂಡಸರೇ ಆಗಿದ್ದಾರೆ. ಇದು ಗಂಡಸರು ಕಟ್ಟಿದ ಲೋಕ. ಹೆಂಗಸರು ಇಲ್ಲಿ ಬಂದು ವಾಸಿಸುವವರು. ಒಂದು ವೇಳೆ ಹೆಂಗಸರೇ ತಮ್ಮ ಜಗತ್ತನ್ನು ಕಟ್ಟಬೇಕೆಂದುಕೊಂಡರೆ, ಹೀಗೆ ಲೋಕಕಟ್ಟುವ ಕ್ರಿಯೆಯ ಹಿಂದೆ ಪ್ರವೃತ್ತವಾಗಿರುವ ನಿಯಮಗಳನ್ನು ತಿಳಿದಿರಬೇಕಾಗುತ್ತದೆ. ಅಂದರೆ, ಭಾಷೆ ಮತ್ತು ವಾಸ್ತವತೆಗಳ ನಡುವೆ ಇರುವ ನಂಟನ್ನು ಅರಿಯಬೇಕು.

ಸೂಸನ್ ಲ್ಯಾಂಗರ್ (೧೯೭೬) ಗಂಡಸರು ಸಂಕೇತೀಕರಿಸುವ ಜೀವಿಗಳೆಂದು ಹೇಳಿದಳು.  (ಬಹುಶಃ ಸಂಕೇತೀಕರಿಸುವ ಸಾಮರ್ಥ್ಯವೇ ನಮ್ಮನ್ನು ಇತರ ಜೀವಿಗಳಿಂದ ಬೇರೆ ಎನಿಸಲು ಕಾರಣವಾಗಿರಬೇಕು.) ನಮ್ಮ ಲೋಕವನ್ನು ವರ್ಗೀಕರಿಸಲು, ವ್ಯವಸ್ಥಿತವಾಗಿರಿಸಲು ನಾವು ನಿರಂತರವಾಗಿ ಸಂಕೇತಗಳನ್ನು ಹುಟ್ಟುಹಾಕುತ್ತೇವೆಂದು ಲ್ಯಾಂಗರ್ ಹೇಳುತ್ತಾಳೆ. ಹೀಗೆ ನಾವು ಕಟ್ಟಿದ ಲೋಕದ ವ್ಯವಸ್ಥೆಯ ತಳಹದಿಯಲ್ಲಿ ಅಪೂರ್ಣತೆ ಇರುವುದರಿಂದ, ಅದು ವಾಸ್ತವತೆಗೆ ಹತ್ತಿರವಾಗಲು ನಡೆಸಿದ ಪ್ರಯತ್ನ ಮಾತ್ರ ಆಗಿರುವುದರಿಂದ, ಅದನ್ನು ಪೂರ್ಣವಾಗಿ ನಂಬುವುದು ಮೂರ್ಖತನವಾಗುತ್ತದೆ. ಹೀಗಿದ್ದರೂ ನಾವು ಮೂರ್ಖರೇ ಆಗಿದ್ದೇವೆ. ನಮ್ಮ ಸಂಕೇತಗಳ ಮೂಲಕ ನಾವು ಕಟ್ಟಿದ ಲೋಕವನ್ನು ನಾವು ನಂಬುತ್ತೇವೆ. ಈ ಸಂಕೇತಗಳ ಪ್ರತಿನಿಧೀಕರಣಜಾಲಕ್ಕೆ ಸಿಕ್ಕಿಬಿದ್ದಿದ್ದೇವೆ. ಈ ಲೋಕದ ಹಿಂದಿರುವ ಅರ್ಥವನ್ನು ತಿಳಿಯಲು ಗೋಜಲಿನ ನಿಯಮಗಳನ್ನು ಒಪ್ಪಿಕೊಂಡಿದ್ದೇವೆ.  ಸಂಕೇತೀಕರಿಸುವ ನಮ್ಮ ಸಾಮರ್ಥ್ಯ, ಆ ಸಂಕೇತಗಳನ್ನು ನಾವು ಬಳಸುವ ಬಗೆ, ಇವುಗಳಿಂದ ಭಾಷೆ, ಆಲೋಚನೆ, ಮತ್ತು ವಾಸ್ತವತೆ ಎಂಬ ರಚನೆಗಳ ಜಾಲವನ್ನು ರೂಪಿಸಿಕೊಂಡಿದ್ದೇವೆ.

ಭಾಷೆಯ ಮಾಯಾಜಾಲಕ್ಕೆ ನಾವು ಒಳಗಾಗಿರುವುದರಿಂದಲೇ ಎಷ್ಟೋ ಕಾಲದಿಂದ ಭಾಷೆ, ಆಲೋಚನೆ, ಮತ್ತು ವಾಸ್ತವಗಳ ಸಂಬಂಧ ಕುರಿತ ಚರ್ಚೆ ನಡೆಯುತ್ತಲೇ ಇದೆ. ಒಂದು ಕಡೆ ಎಲ್ಲ ಮನುಷ್ಯ ಜೀವಿಗಳೂ ಒಂದೇ ಬಗೆಯ ಪುರಾವೆಗಳನ್ನು ಬಳಸಿಯೂ, ಒಂದೇ ಬಗೆಯ ನಿರ್ಣಯಕ್ಕೆ ಬರುವುದಿಲ್ಲ ಎಂದು ಹೇಳಲು ಆಧಾರಗಳಿವೆ. ಇನ್ನೊಂದು ಕಡೆ, ಸಫಿರ್-ವೂರ್ಫ್ ಪ್ರಮೇಯದಂತೆ ಭಾಷೆಯೇ ಎಲ್ಲದರ ನಿರ್ಣಾಯಕ ನೆಲೆಯಾಗಿದೆ ಎಂದು ತಿಳಿಯಬೇಕಾಗುತ್ತದೆ. ಭಾಷೆಯೇ ನಮ್ಮ ಜಗತ್ತನ್ನು ಕಟ್ಟುತ್ತದೆ ಮತ್ತು ಅದರ ಮೇರೆಗಳನ್ನು ಗುರುತಿಸುತ್ತದೆ.

ತತ್ತ್ವಶಾಸ್ತ್ರಜ್ಞರಿಂದ ಮೊದಲುಗೊಂಡು ರಾಜಕಾರಣಿಗಳವರೆಗೆ ಪ್ರತಿಯೊಬ್ಬರನ್ನೂ ಕಾಡಿಸಿರುವ ಪ್ರಶ್ನೆಯೊಂದಿದೆ. ಮನುಷ್ಯ ಜೀವಿಗಳು ‘‘ವಸ್ತುಜಗತ್ತನ್ನು ಅದು ಇರುವಂತೆಯೇ ಗ್ರಹಿಸಲು ಶಕ್ತರಾಗಿದ್ದಾರೆಯೇ’’ ಎಂಬುದೇ ಈ ಪ್ರಶ್ನೆ. ಲೋಕದಲ್ಲಿರುವ ಎಲ್ಲವನ್ನೂ ಅರಿಯಲು ಒಂದೇ ಒಂದು ದಾರಿ ಇದೆ, ಹಾಗೂ ಅದನ್ನು ಹಿಡಿದು ಹೊರಟಾಗ ಲೋಕ ಎಲ್ಲರಿಗೂ ಒಂದೇ ರೀತಿಯಲ್ಲಿ ಕಾಣುತ್ತದೆ ಎಂದು ನಂಬುವ ಈ ಪ್ರಶ್ನೆಯು ಅಸಂಗತವೇ ಸರಿ. ಒಂದು ವೇಳೆ ಅಂಥದೊಂದು ದಾರಿ ಇದ್ದರೂ ಮನುಷ್ಯಜೀವಿಗಳಿಂದ ನಾವು ಲೋಕವನ್ನು ಅದರ ಶುದ್ಧ ಮತ್ತು ವಸ್ತುನಿಷ್ಠ ರೂಪದಲ್ಲಿ ನೋಡುವುದು ಸಾಧ್ಯವೇ ಇಲ್ಲ. ಏಕೆಂದರೆ ನಮ್ಮನ್ನು ನಾವೇ ರಚಿಸಿದ ಸಂಕೇತಗಳು ಕಟ್ಟಿಹಾಕಿವೆ. ಆ ಸಂಕೇತಗಳಿಗೆ ಮಿತಿಗಳಿವೆ. ಅಲ್ಲದೆ, ನಮ್ಮ ಭಾಷೆಯ ಮಿತಿಗಳೇ ಆ ಸಂಕೇತಗಳನ್ನು ಕಟ್ಟಿಹಾಕಿವೆ.

ಭಾಷೆ ಎಂಬುದು ತಟಸ್ಥವಲ್ಲ. ಅದು ವಿಚಾರಗಳ ವಾಹಕ ಮಾತ್ರ ಅಲ್ಲ. ತಾನೇ ವಿಚಾರಗಳನ್ನು ಕಟ್ಟಬಲ್ಲದು. ಮಾನಸಿಕ ಕ್ರಿಯಾವರ್ತವನ್ನು ಅದು ರೂಪಿಸುತ್ತದೆ.  (ವೂರ್ಫ್-೧೯೭೬) ಹೀಗಿರುವಾಗ ಮನುಷ್ಯ ಜೀವಿಗಳ ಲೋಕವನ್ನು ಅದು ಇರುವಂತೆಯೇ ಗ್ರಹಿಸಲು ಸಾಧ್ಯ ಎಂದು ತಿಳಿಸಿದರೆ, ಅದು ತಪ್ಪಾಗುತ್ತದೆ. ಅವರು ಎಂದೂ ನಿರ್ಮಮವಾಗಿ ಲೋಕವನ್ನು ಕಾಣಲಾರರು. ಏಕೆಂದರೆ, ಅವರೇ ಅಥವಾ ಅವರಲ್ಲಿ ಕೆಲವರು ಈ ಲೋಕವನ್ನು ಕಟ್ಟಿದ್ದಾರೆ. ಆ ಲೋಕದಲ್ಲಿ ತಮ್ಮನ್ನು ತಾವು ನೆಲೆಗೊಳಿಸಿಕೊಂಡಿದ್ದಾರೆ.

ಮನುಷ್ಯ ಜೀವಿಗಳು ಲೋಕವನ್ನು ನಿಷ್ಪಕ್ಷಪಾತವಾಗಿ ಬಣ್ಣಿಸಲಾರರು. ಹಾಗೆ ಮಾಡಲು, ಮೊದಲು ಅವರ ಬಳಿ ಒಂದು ವರ್ಗೀಕರಣ ವ್ಯವಸ್ಥೆ ಇರಬೇಕು. ವಿಚಿತ್ರವೆಂದರೆ, ಅಂಥದೊಂದು ವರ್ಗೀಕರಣ ವ್ಯವಸ್ಥೆ ದೊರಕಿತೆಂದರೆ, ಅವರಿಗೊಂದು ಭಾಷೆ ದೊರಕಿದಂತೆ.  ಹೀಗಾದ ಮೇಲೆ ಅವರಿಗೆ ಬೇಕಾದ್ದು ಮಾತ್ರ ಕಾಣುತ್ತದೆ.

ಈ ಬಗೆಯ ಇಕ್ಕಟ್ಟು ಭಾಷಾಶಾಸ್ತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಅಂಗರಚನಾ ಶಾಸ್ತ್ರ ಮತ್ತು ಜೀವಶಾಸ್ತ್ರಗಳು ಕೂಡಾ ಈ ಪಕ್ಷಪಾತ ಧೋರಣೆಯನ್ನು, ಆ ಮೂಲಕ ಹುಟ್ಟುವ ನಿಷ್ಪಕ್ಷಪಾತತೆ ಮತ್ತು ವಸ್ತುನಿಷ್ಠತೆಯ ಹುಸಿನೆಲೆಗಳನ್ನು ಕೆಲವೊಮ್ಮೆ ತಮಗೇ ತಿಳಯದಂತೆ ಬೆಂಬಲಿಸಿವೆ. ಈ ಜ್ಞಾನಶಿಸ್ತುಗಳಿಂದ ದೊರಕಿರುವ ಮಾಹಿತಿಯನ್ನು ಒಗ್ಗೂಡಿಸಿದಾಗ ನಾವೇ ಎಲ್ಲವನ್ನೂ ವ್ಯವಸ್ಥೆಗೊಳಿಸುವ ಪ್ರಕ್ರಿಯೆಯಲ್ಲಿ ಮತ್ತು ಅದನ್ನು ಬಣ್ಣಿಸುವ ಕ್ರಿಯೆಯಲ್ಲಿ ತೊಡಗಬೇಕಾಗಿ ಬಂದುದು ಗೊತ್ತಾಗುತ್ತದೆ. ‘‘ಲೋಕವನ್ನು ಅದು ಇರುವಂತೆಯೇ ಗ್ರಹಿಸಬಲ್ಲ’ ಮನುಷ್ಯ ಸಾಮರ್ಥ್ಯದ ಬೆಂಬಲಿಗರ ವಾದದಲ್ಲಿರುವ ಪೊಳ್ಳುತನ ಇಲ್ಲಿ ಬಯಲಾಗುತ್ತದೆ. ಏಕೆಂದರೆ, ಈ ಕ್ರಿಯೆಯಲ್ಲಿ ತೊಡಗುವ ಮೆದುಳಿಗೆ ನೋಡುವ ಇಲ್ಲವೇ ಕೇಳಿಸಿಕೊಳ್ಳುವ ಶಕ್ತಿಯೇ ಇಲ್ಲ. ರೂಪಕಗಳನ್ನು ಬಳಸಿ ಹೇಳುವುದಾದರೆ, ‘‘ಮೆದುಳು ಕುರುಡು ಮತ್ತು ಕಿವುಡಾಗಿದೆ. ಅದಕ್ಕೆ ಬೆಳಕು ಮತ್ತು ಸದ್ದಿನ ಸಂಪರ್ಕವೇ ಇಲ್ಲ. ಹೊರಜಗತ್ತಿನ ಸ್ಥಿತಿಗತಿಗಳ ಬಗೆಗಿನ ಮಾಹಿತಿಯನ್ನು ಅದಕ್ಕೂ ಪರಿಸರಕ್ಕೂ ಮಧ್ಯವರ್ತಿಯಾಗಿರುವ ದೇಹದ ಹೊರಭಾಗದಿಂದ, ನರಸಮೂಹಗಳ ಮೂಲಕ ಹಾಯ್ದುಬರುವ ಜೈವಿಕ ವಿದ್ಯುತ್ ಮಿಡಿತಗಳಿಂದ ಅದು ಗ್ರಹಿಸಬೇಕಾಗುತ್ತದೆ’’. (ಸ್ಮಿತ್ ೧೯೭೧).

ಮೆದುಳು ಕೂಡಾ ವ್ಯಾಖ್ಯಾನಿಸುತ್ತದೆ. ಅದೂ ಸಂಕೇತಗಳಲ್ಲೇ ವ್ಯವಹರಿಸಬೇಕು.  ‘ವಾಸ್ತವ’ ಅದಕ್ಕೂ ಗೋಚರಿಸುವುದಿಲ್ಲ. ಈ ಸಂಕೇತಗಳನ್ನು ಕಟ್ಟುವ ಒಡೆಯುವ ಕೆಲಸಕ್ಕಾಗಿ ಭಾಷೆಯೆಂಬುದು ಮೈದಳೆದಿದೆ. ಅದೇ ನಮ್ಮ ಆಸ್ತಿ. ನಮ್ಮ ಸುತ್ತ ಇರುವ ಲೋಕದಲ್ಲಿ  ‘‘ನಾವು ಏನನ್ನು ನೋಡುತ್ತೇವೋ’’ ಅದೆಲ್ಲವೂ ಭಾಷೆಯಲ್ಲಿರುವ ಸಂಕೇತೀಕರಣ ನೆಲೆಗಳನ್ನು ಅವಲಂಬಿಸಿದೆ. ‘‘ನಾವೆಲ್ಲರೂ ನೋಡುವುದನ್ನು ಕಲಿಯಬೇಕು. ಪ್ರತಿಯೊಬ್ಬ ಮನುಷ್ಯಜೀವಿಯ ಬೆಳವಣಿಗೆಯೆಂದರೆ ನಿಧಾನವಾಗಿ ‘ನೋಡುವ’ ನಿಯಮಗಳನ್ನು ಕಲಿಯುವುದು ಎಂದರ್ಥ. ಹೀಗಾಗದಿದ್ದರೆ, ನಾವು ಸಾಮಾನ್ಯ ಅರ್ಥದಲ್ಲಿ ನಮ್ಮ ಸುತ್ತಣ ಜಗತ್ತನ್ನು ಅರಿಯಲಾರೆವು. ನಾವು ಸುಮ್ಮನೆ ಕಣ್ತೆರೆದರೆ ಕಾಣುವ ಪರಿಚಿತ ಆಕಾರಗಳು, ಬಣ್ಣಗಳು, ಸದ್ದುಗಳು – ಮುಂತಾದವು ಏನೂ ಇಲ್ಲ. ನಮ್ಮ ಇಂದ್ರಿಯಗಳ ಮೂಲಕ ಹೊರಜಗತ್ತಿನಿಂದ ಪಡೆದುಕೊಂಡ ಮಾಹಿತಿಯನ್ನು ಕೆಲವು ಮನುಷ್ಯ ನಿರ್ಮಿತ ನಿಯಮಗಳಿಗೆ ಅನುಗುಣವಾಗಿ ವ್ಯಾಖ್ಯಾನಿಸಿಕೊಂಡಾಗ ಮಾತ್ರ ನಾವು ‘ವಾಸ್ತವ’ ವೆಂದು ತಿಳಿದಿರುವುದು ಆಕಾರ ಪಡೆಯುತ್ತದೆ.’’ (ವಿಲಿಯಮ್ಸ್ – ೧೯೭೫)

ನಮ್ಮ ಭಾಷೆಯಲ್ಲಿ ಹೀಗೆ ಸಂಕೇತೀಕರಣಗೊಂಡಿರುವ ನಿಯಮಗಳಲ್ಲಿ ಲಿಂಗತಾರತಮ್ಯವೂ ಒಂದಾಗಿದೆ. ನಾವು ನೋಡುವ ‘ವಾಸ್ತವ’ ದ ಮೇಲೆ ಈ ನಿಯಮದ ಪರಿಣಾಮ ದಟ್ಟವಾಗಿದೆ.  ಹಾಗೆಯೇ ‘ವಸ್ತುನಿಷ್ಠತೆ’ ಎಂಬುದೂ ಕೂಡ ಪರಿಣಾಮ ಬೀರುತ್ತವೆ. ಏಕೆಂದರೆ ವೈಜ್ಞಾನಿಕ ವಿಧಾನವೆಂಬುದು ಮಾನವ ಸಹಜವಾದ ಪ್ರಕ್ರಿಯೆಗಳಲ್ಲಿ ಇರುವ ದೋಷಗಳನ್ನು ಮೀರಿ ನಿಲ್ಲುತ್ತದೆಂದೂ, ಅದು ಮಂಡಿಸುವ ಸತ್ಯಗಳನ್ನು ಪ್ರಶ್ನಿಸುವುದು ಅಸಾಧ್ಯವೆಂದೂ ನಂಬಲಾಗಿದೆ. ಅಲ್ಲದೆ, ಎಷ್ಟೋ ವ್ಯಕ್ತಿಗಳು ತಮ್ಮ ಸ್ವಂತ ಅನುಭವಗಳಿಗೂ ಪ್ರಚಲಿತವಿರುವ ‘ವೈಜ್ಞಾನಿಕ ಸತ್ಯ’ ಗಳಿಗೂ ಹೊಂದಾಣಿಕೆ ಯಾಗದಿದ್ದಾಗ ತಮ್ಮಲ್ಲೇ ಏನೋ ದೋಷವಿದೆ ಎಂದು ಹಿಂಜರಿಯುತ್ತಾರೆ.

ವಿಜ್ಞಾನವು ನಿಷ್ಪಕ್ಷಪಾತಿ ಎಂಬ ಪ್ರಚಲಿತ ನಂಬಿಕೆಯನ್ನು ಕೇವಲ ಸ್ತ್ರೀವಾದಿಗಳೇ ಅಲ್ಲದೆ, ಇನ್ನೂ ಹಲವರು ಪ್ರಶ್ನಿಸಿದ್ದಾರೆ. ಜೊತೆಗೆ ಭಾಷೆ, ಆಲೋಚನೆ ಮತ್ತು ವಾಸ್ತವತೆಗಳ ನಂಟನ್ನು ಮರುವಿಶ್ಲೇಷಣೆಗೆ ಗುರಿಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ತ್ರೀವಾದಿಗಳ ಚಿಂತನೆಗೆ ಒಂದು ವಿಶಿಷ್ಟತೆ ಇದೆ, ಹೆಚ್ಚಳವಿದೆ. ತತ್ತ್ವಶಾಸ್ತ್ರ, ಇಲ್ಲವೇ ಸಮಾಜಶಾಸ್ತ್ರಗಳಲ್ಲಿ ಈಗ ವಿಜ್ಞಾನದ ‘ವಸ್ತುನಿಷ್ಠತೆ’ ಯ ಸಮಸ್ಯೆಯನ್ನು ಚರ್ಚಿಸಲಾಗಿದೆ. ಹಳೆಯ ತಿಳುವಳಿಕೆಗಳು ಅಪೂರ್ಣ ಮತ್ತು ಸುಳ್ಳು ಎಂದು ಒಪ್ಪಲಾಗುತ್ತಿದೆ. ವೈಜ್ಞಾನಿಕ ಯುಗಕ್ಕೂ ಮೊದಲಿನ ಊಳಿಗಮಾನ್ಯಯುಗ ಧಾರ್ಮಿಕಯುಗ, ವಾಣಿಜ್ಯಯುಗಗಳಲ್ಲಿ ಇದ್ದ ‘ಅಂಧ ಶ್ರದ್ಧೆ’ ಗಳು ವಿಜ್ಞಾನಕ್ಕೂ ಅಂಟಿಕೊಂಡಿವೆ. ಅವೆಲ್ಲವನ್ನು ಪ್ರಶ್ನಿಸಬೇಕಾಗಿದೆ. ಹೀಗೆ, ವೈಜ್ಞಾನಿಕ ವಿಧಾನವೆಂಬುದನ್ನು ಈಗ ಪುನರ್ಮೌಲ್ಯೀಕರಣಕ್ಕೆ ಗುರಿ ಮಾಡಲಾಗಿದೆ. ಧರ್ಮವನ್ನು ಸಮರ್ಥಿಸಲು ಅಂತಃಸ್ಫೂರ್ತಿ, ಪುರಾಣ, ದೈವಿಕ ಪ್ರೇರಣೆಗಳ ನೆರವನ್ನು ಪಡೆದಂತೆ, ವಿಜ್ಞಾನವನ್ನು ಸಮರ್ಥಿಸಲು ವಸ್ತುನಿಷ್ಠತೆ ಮತ್ತು ಪ್ರಾಯೋಗಿಕತೆಗಳ ಬೆಂಬಲವನ್ನು ಪಡೆಯಲಾಗುತ್ತಿದೆ. ಈ ಅಂಶವನ್ನೀಗ ಪರಿಶೀಲಿಸಬೇಕಾಗಿದೆ. ಅಂಧ ಶ್ರದ್ಧೆಗಳನ್ನು ಕಿತ್ತೊಗೆಯಬೇಕಾಗಿದೆ.

ಅಲೆನ್ ಚಾಲ್ಮರ‍್ಸ್ (೧೯೭೮) ತನ್ನ ಅಧ್ಯಯನದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನಗಳನ್ನು ಕುರಿತ ತಪ್ಪು ಕಲ್ಪನೆಗಳನ್ನು ಚರ್ಚಿಸಿದ್ದಾನೆ. ವೈಜ್ಞಾನಿಕವೆಂದು ಹಣೆಪಟ್ಟಿ ಪಡೆದದ್ದೆಲ್ಲವೂ ಮನ್ನಣೆಗೆ, ನಂಬಿಕೆಗೆ ತಕ್ಕುದಾಗಿದೆ ಎಂಬ ತಿಳಿವಳಿಕೆಯೇ ಪ್ರಶ್ನಾರ್ಹವಾಗಿದೆ. ಭಾಷೆ, ಆಲೋಚನೆ, ಮತ್ತು ವಾಸ್ತವತೆಗಳ ಸಂಬಂಧವನ್ನು ಕುರಿತ ಚರ್ಚೆಯನ್ನು ಬೆಳೆಸುತ್ತಾ ಹೋದಂತೆ, ವಿಜ್ಞಾನಿಗಳನ್ನೂ ಒಳಗೊಂಡಂತೆ, ಎಲ್ಲ ಮನುಷ್ಯರೂ ಒಂದೇ ಬಗೆಯ ಪುರಾವೆಗಳಿದ್ದರೂ ಒಂದೇ ನಿರ್ಣಯಕ್ಕೆ ಬರುವುದಿಲ್ಲವೆಂಬುದು ಗೊತ್ತಾಗುತ್ತಿದೆ. ಏಕೆಂದರೆ, ಪ್ರತಿಯೊಬ್ಬರೂ ನೋಡುವಾಗ ಅವರಲ್ಲಾಗುವ ಪರಿಣಾಮವನ್ನು ಹೊರಜಗತ್ತಿನಲ್ಲಿ ಇರುವ ವಸ್ತುಗಳು ಕಣ್ಣಿನ ಮೂಲಕ ನೀಡುವ ಬಿಂಬಗಳನ್ನಷ್ಟೇ ಅವಲಂಬಿಸಿರುವುದಿಲ್ಲ.  ನೋಡುತ್ತಿರುವವರ ಅನುಭವ, ಅರಿವು, ನಿರೀಕ್ಷೆ, ಮತ್ತು ಅಂತರಂಗದ ಸ್ಥಿತಿಗತಿಗಳು ಒಟ್ಟಾರೆ ಪರಿಣಾಮಕ್ಕೆ ಕಾರಣವಾಗುತ್ತವೆ. ಇವೆಲ್ಲವೂ ಸಂಸ್ಕೃತಿವಿಶಿಷ್ಟವಾದುದೆಂದು ತಿಳಿಯಲಾಗಿದೆ. ನಾನು ಇದನ್ನು ಬಾಷೆ ನಿರ್ಧರಿಸುತ್ತದೆಂದೂ, ಭಾಷೆಯೇ ಅನುಭವ, ಅರಿವು, ನಿರೀಕ್ಷೆ ಮತ್ತು ಅಂತರಂಗದ ಸ್ಥಿತಿಗತಿಗಳ ನಡುವೆ ಸಂಬಂಧ ಕಲ್ಪಿಸುತ್ತದೆಂದೂ ವಾದಿಸುತ್ತೇನೆ.

ವಿಜ್ಞಾನವು ಪರಿವೀಕ್ಷಣೆಯ ಮೂಲಕವೇ ಕಾರ‍್ಯಾರಂಭ ಮಾಡುತ್ತದೆ ಎಂಬುದನ್ನು ನಾವೀಗ ಪ್ರಶ್ನಿಸಬೇಕಾಗಿದೆ. ವಾಸ್ತವವಾಗಿ ಐಂದ್ರಿಯಿಕ ಅನುಭವಗಳ್ನು ಆಧರಿಸುವ ಪ್ರಾಯೋಗಿಕತೆಯು ಮೌಲ್ಯನಿರಪೇಕ್ಷವಾಗಿರುವುದಿಲ್ಲ. ಏಕೆಂದರೆ, ಪರಿವೀಕ್ಷಣೆಗೂ ಮೊದಲು ಒಂದು ಸಿದ್ಧಾಂತವಿರುತ್ತದೆ. ಸಾಂಸ್ಕೃತಿಕ ನೆಲೆಯಲ್ಲಿ ಸಿದ್ಧಗೊಂಡ ಈ ಸಿದ್ಧಾಂತಗಳು ನಾವು ಪರಿವೀಕ್ಷಣೆಯ ಮೂಲಕ ಏನನ್ನು ಗ್ರಹಿಸಬೇಕೆಂಬುದನ್ನು ನಿಯಂತ್ರಿಸುತ್ತಿರುತ್ತವೆ.

ಸಾಂಸ್ಕೃತಿಕ ನೆಲೆಯಲ್ಲಿ ಲಿಂಗತಾರತಮ್ಯದ ಭಾಷೆ ಮತ್ತು ಲಿಂಗತಾರತಮ್ಯದ ಸಿದ್ಧಾಂತಗಳು ಸಿದ್ಧರೂಪದಲ್ಲಿ ಲಭ್ಯವಿದ್ದಾಗ, ನಮ್ಮ ಪರಿವೀಕ್ಷಣೆಯೂ ಕೂಡಾ ಲಿಂಗತಾರತಮ್ಯ ನೆಲೆಯಲ್ಲೇ ಕೊನೆಗೊಳ್ಳುತ್ತದೆ. ಹೀಗಾಗುವುದರಿಂದಲೇ, ಹೊಸ ವಸ್ತು, ಹೊಸ ಪ್ರಸಂಗ, ಹೊಸ ಮಾಹಿತಿಗಳಿಗೂ ಕೂಡಾ ಲಿಂಗತಾರತಮ್ಯದ ಸೋಂಕು ತಗಲುತ್ತದೆ. ಅವುಗಳಲ್ಲೂ ನಮಗೆ ಲಿಂಗತಾರತಮ್ಯದ ಫಲಿತ ಲಭಿಸುವುದು ಅನಿವಾರ್ಯವಾಗಿ ಬಿಡುತ್ತದೆ. ಯಾವುದೇ ವ್ಯಾಖ್ಯಾನವಾದರೂ ಸಿದ್ಧಾಂತಗಳಿಂದ ನಿಯಂತ್ರಣಗೊಳ್ಳುತ್ತದೆ. ವಿಜ್ಞಾನ ಕೂಡಾ ಒಂದು ವ್ಯಾಖ್ಯಾನ ಚಟುವಟಿಕೆ ಆಗಿರುವುದರಿಂದ, ಅಲ್ಲಿಯೂ ಸಿದ್ಧಾಂತಗಳೇ ಮೇಲುಗೈ ಪಡೆಯುತ್ತವೆ.

ವಾಸ್ತವತೆ ಮತ್ತು ಜ್ಞಾನಗಳನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಮನುಷ್ಯರು ಭಾಗಿಗಳಾಗಿರುತ್ತಾರೆ ಎಂಬ ತಿಳಿವಳಿಕೆಯಿಂದ ಡ್ವೈಟ್ ಬೊಲಿಂಗರ್ (೧೯೭೫) ತನ್ನ ವಾದವನ್ನು ಮುಂದಿರಿಸಿದ್ದಾನೆ.  ಆತ ಹೇಳುವಂತೆ ನಮ್ಮ ಭೂತಕಾಲವನ್ನು ಪುನರ್ವ್ಯಾಖ್ಯೆಗೆ ಗುರಿಪಡಿಸಬೇಕಾಗಿದೆ. ಹಾಗೆ ಮಾಡಿದಾಗ ನಮ್ಮ ಚರಿತ್ರೆಯುದ್ದಕ್ಕೂ ನಾವು ನಿಸರ್ಗವನ್ನು ಕ್ರಮೇಣವಾಗಿ ನಮ್ಮ ವ್ಯಾಖ್ಯೆಯ ತೆಕ್ಕೆಗೆ ತೆಗೆದುಕೊಂಡಿದ್ದೇವೆ ಎಂಬುದೇ ಸುಳ್ಳೆಂದು ಗೊತ್ತಾಗುತ್ತದೆ. ನಿಜವಾಗಿ ನಾವು ನಮ್ಮ ಭಾಷೆಯನ್ನು ಅವರಿಸಿರುವ ವಸ್ತುಜಗತ್ತನ್ನು ಹೇಗೆ ಗ್ರಹಿಸುತ್ತೇವೆಯೋ ಅದನ್ನು ಸುಮ್ಮನೆ ಹೊರಹಾಕುತ್ತಾ ಬಂದಿದ್ದೇವೆ. ಒಮ್ಮೆ ಭಾಷೆಯಲ್ಲಿ ವರ್ಗೀಕರಣದ ನೆಲೆಗಳು ಸಿದ್ಧಗೊಂಡವೆಂದರೆ, ಆ ಬಳಿಕ ಆ ವರ್ಗೀಕರಣಕ್ಕನು ಗುಣವಾಗಿ ಲೋಕವನ್ನು ಮುರಿದು ಕಟ್ಟುವ ಕೆಲಸಕ್ಕೆ ತೊಡಗುತ್ತೇವೆ. ಈ ವರ್ಗೀಕರಣಕ್ಕೆ ಹೊಂದಿಕೊಳ್ಳದ ಪುರಾವೆಗಳು ದೊರೆತರೂ ಅವುಗಳನ್ನು ನಾವು ಗುರುತಿಸಲಾರೆವು.

ಹೀಗಾಗಿ ಮನುಷ್ಯರಿಗೆ ಭಾಷೆ ಎಂಬುದೊಂದು ವಿರೋಧಾಭಾಸ. ಅದು ಬಿಡುಗಡೆಯನ್ನು ನೀಡುತ್ತಿರುವಾಗಲೇ ಬಂಧಿಸುವ ಹುನ್ನಾರಗಳನ್ನೂ ಮಾಡುತ್ತಿರುತ್ತದೆ. ಒಂದೆಡೆ, ನಾವು ಬದುಕಿರುವ ಈ ಲೋಕವನ್ನು ಕಟ್ಟಲು ಆಗಾಧ ಸ್ವಾತಂತ್ರ್ಯವನ್ನು ಒದಗಿಸುತ್ತಿರುತ್ತದೆ.  ಈ ಸ್ವಾತಂತ್ರ್ಯದಿಂದಾಗಿಯೇ ಬೇರೆ ಬೇರೆ ಸಮುದಾಯಗಳು ಬೇರೆ ಬೇರೆ ಜಗತ್ತುಗಳನ್ನೇ ಕಟ್ಟಿಕೊಂಡಿವೆ. ಇನ್ನೊಂದೆಡೆ, ಹೀಗೆ ಕಟ್ಟಿದ ಲೋಕದಲ್ಲಿ ನಾವು ಬಂಧಿಗಳು. ಅದರಲ್ಲಿ ಕಿಂಚಿತ್ತು ಬದಲಾವಣೆಯಾದರೂ ಪ್ರತಿಭಟಿಸುತ್ತೇವೆ, ಹೆದರುತ್ತೇವೆ. ಹೀಗಾದಾಗ, ಭಾಷೆಯು ಒಂದು ಬೋನಿನಂತೆ ತೋರುತ್ತದೆ.

ನಿಜ, ನಾವು ಲಿಂಗತಾರತಮ್ಯವನ್ನು ನಿರ್ವಾತದಲ್ಲಿ ಸೃಷ್ಟಿಸಿಲ್ಲ. ಗಂಡು ಸಹಜ, ಹೆಣ್ಣು ವಿಕಲ್ಪ ಎಂಬ ವರ್ಗೀಕರಣವನ್ನು ಹುಟ್ಟು ಹಾಕಿದೆವು. ಹೀಗೆ ಮಾಡಲು ಆಧಾರಗಳೇನೂ ಇರಲಿಲ್ಲ. ಇದೊಂದು ಊಹೆಯ ರಚನೆ. ಆದರೂ ಇದನ್ನು ಅತ್ಯಂತ ಸ್ವೋಪಜ್ಞವಾದ ಪ್ರತಿಭಾಪೂರ್ಣವಾದ ರಚನೆಯೆಂದು ಹೇಳಲಾಗುತ್ತದೆ. ಈ ವರ್ಗೀಕರಣವನ್ನು ನಮ್ಮ ಬಾಷೆ ಮತ್ತು ಆಲೋಚನೆಗಳಲ್ಲಿ ನೆಲೆಗೊಳಿಸಿಕೊಂಡ ಮೇಲೆ ಇದಕ್ಕಿಂತ ಬೇರೆ ರೀತಿಯಲ್ಲಿ ಮತ್ತು ಉತ್ತಮವಾಗಿ ಲೋಕವನ್ನು ಪುನರ್ವ್ಯವಸ್ಥೆಗೊಳಿಸುವ ಯಾವುದೇ ಪ್ರಯತ್ನವನ್ನಾದರೂ ನಿರಾಕರಿಸುತ್ತಿದ್ದೇವೆ. ನಮ್ಮ ಬೋನಿನಲ್ಲಿ ನಾವೇ ಸಿಲುಕಿದ್ದೇವೆ. ಈ ಬೋನು ನಮ್ಮನ್ನು ಎಷ್ಟು ಅಂಧರನ್ನಾಗಿ ಮಾಡಿದೆಯೆಂದರೆ, ಬೇರೊಂದು ಬಗೆಯಲ್ಲಿ ಕಟ್ಟಿದ ಜಗತ್ತನ್ನು ಊಹಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲವಾಗಿದೆ.

ಈ ಹಂತದಲ್ಲೇ ಭಾಷೆ, ಆಲೋಚನೆ, ಮತ್ತು ವಾಸ್ತವಗಳ ನಂಟನ್ನು ಕುರಿತು ಸ್ತ್ರೀವಾದಿಗಳು ಮಂಡಿಸಿರುವ ಚಿಂತನೆಗಳ ವಿಶಿಷ್ಟತೆ ಮುಖ್ಯವಾಗತ್ತದೆ. ಲಿಂಗತಾರತಮ್ಯವನ್ನು ಒಪ್ಪಿಕೊಂಡು ಅದರಿಂದ ಪ್ರೇರಿತರಾಗಿ ವಾಸ್ತವವನ್ನು ಸಂಕೇತೀಕರಿಸುವ ಕೆಲಸ ನಡೆದು ಹೋಗಿದೆ. ಆದರೆ, ಸ್ತ್ರೀವಾದಿಗಳು ಇದೆಲ್ಲವೂ ಇಷ್ಟು ಸರಳವೆಂದು ತಿಳಿಯುವುದಿಲ್ಲ. ವೈಜ್ಞಾನಿಕ ವಿಧಾನ ಮತ್ತು ವಸ್ತುನಿಷ್ಠತೆಗಳು ಜಂಡರ್ ಎಂಬ ಪರಿಕಲ್ಪನೆಯ ಸಂಪರ್ಕವಿಲ್ಲದೆಯೇ ರೂಪುಗೊಂಡಿವೆ ಎನ್ನುವುದನ್ನು ಸ್ತ್ರೀವಾದಿಗಳು ಒಪ್ಪುವುದಿಲ್ಲ. ಇವರು ಗಂಡು ಸಹಜ, ಹೆಣ್ಣು ವಿಕಲ್ಪ ಎಂಬ ವರ್ಗೀಕರಣವನ್ನು ನಾವು ಸೃಷ್ಟಿಸಲಿಲ್ಲ, ಆ ವರ್ಗೀಕರಣಕ್ಕೆ ಮನ್ನಣೆ ಸಿಗುವಂತೆ ಮಾಡುವ ದಾರಿಗಳನ್ನು ಹುಡುಕಲಿಲ್ಲ ಎಂಬ ವಾದವನ್ನು ಒಪ್ಪುತ್ತಾರೆ.  ಏಕೆಂದರೆ ಇನ್ನೊಂದು ನೆಲೆಯಲ್ಲಿ ನೋಡಿದಾಗ, ಹೀಗೆ ಮಾಡಿದ ‘ನಾವು’ ಎಂಬುವವರು ಅಧಿಕಾರದ ಕೇಂದ್ರದಲ್ಲಿದ್ದ ಗಂಡಸರೇ ಆಗಿದ್ದಾರೆ. ಅವರು ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಈ ಲೋಕವನ್ನು ಸೃಷ್ಟಿಸಿ, ವರ್ಗೀಕರಣ ಮಾಡಿ, ಲಿಂಗತಾರತಮ್ಯವನ್ನು ನೆಲೆಗೊಳಿಸಿ, ಅದಕ್ಕೆ ಮನ್ನಣೆ ದೊರಕಿಸಿ, ಕೊನೆಗೆ ಭಾಷೆ ಎಂಬ ಹೊರದಾರಿಯಿಲ್ಲದ ಬೋನನ್ನು ರಚಿಸಿದ್ದಾರೆ.

ಭಾಷೆಯು ನಮ್ಮ ಜಗತ್ತನ್ನು ರೂಪಿಸುತ್ತದೆ ಎನ್ನುವುದಾದರೆ, ಸಂಕೇತಗಳನ್ನು ರಚಿಸುವ ಮತ್ತು ಅವುಗಳಿಗೆ ಅರ್ಥಪ್ರದಾನ ಮಾಡುವ ಅಧಿಕಾರವುಳ್ಳವರು ಈ ಲೋಕದಲ್ಲಿ ವಿಶಿಷ್ಟ ಸ್ಥಾನಮಾನಗಳನ್ನು ಪಡೆದುಕೊಳ್ಳುತ್ತಾರೆ. ತಮ್ಮ ಉದ್ದೇಶಕ್ಕನುಗುಣವಾಗಿ ಈ ಜಗತ್ತನ್ನು ವ್ಯವಸ್ಥೆಗೊಳಿಸುತ್ತಾರೆ. ತಾವೇ ಕೇಂದ್ರದಲ್ಲಿರುವಂತೆ ನೋಡಿಕೊಳ್ಳುವ ಭಾಷೆಯನ್ನೂ, ವಾಸ್ತವತೆಯನ್ನೂ, ಜ್ಞಾನವನ್ನೂ ಸೃಷ್ಟಿಸಿಕೊಳ್ಳುತ್ತಾರೆ. ಯಾರೂ ಪ್ರಶ್ನಿಸಲಾಗದ ನಂಬಿಕೆಯ ಜಾಲವು ಬೇರು ಬಿಡುವಂತೆ ನೋಡಿಕೊಳ್ಳುತ್ತಾರೆ. (ಹಾಗಾದಾಗ ಮಾತ್ರವೇ ಅವರ ಉಚ್ಚಸ್ಥಾನವು ‘ನೈಸರ್ಗಿಕ’ವಾದುದು. ‘ವಸ್ತುನಿಷ್ಠ’ವಾದುದು ಎಂಬ ತಿಳಿವಳಿಕೆ ನೆಲೆಗೊಳ್ಳುತ್ತದೆ.) ಇಂಥ ಅಧಿಕಾರ ಕೇಂದ್ರದಿಂದ ದೂರವಾಗುವ ಜನರು ಶೋಷಿತರಾಗುವುದು ಅನಿವಾರ್ಯವಾಗುತ್ತದೆ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಈ ಸಾಧ್ಯತೆ ಸಂಪೂರ್ಣವಾಗಿ ಸಾಕಾರಗೊಂಡಿದೆ. ಏಕೆಂದರೆ, ಅಧಿಕಾರ ಕೇಂದ್ರದಲ್ಲಿರುವ ಗಂಡಸರೇ ಭಾಷೆ, ಆಲೋಚನೆ ಮತ್ತು ವಾಸ್ತವತೆಗಳನ್ನು ಸೃಷ್ಟಿಸಿದ್ದಾರೆ. ಚಾರಿತ್ರಿಕವಾಗಿ ನೋಡಿದಾಗ ಕೂಡಾ, ಈ ಎಲ್ಲ ಪ್ರಕ್ರಿಯೆಗಳೂ ಗಂಡಿನಿಂದಲೇ ನಿಯಂತ್ರಿತವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವು ಗಂಡಸರು ಉಳಿದ ಗಂಡಸರ ಪರವಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಇದರಲ್ಲಿ ಹೆಂಗಸರಿಗೆ ಕಿಂಚಿತ್ತೂ ಪಾತ್ರವಿಲ್ಲ.

ಈ ಲೋಕದಲ್ಲಿ ಜೀವಿಸಬೇಕಾದರೆ, ಅದಕ್ಕೊಂದು ಹೆಸರು ನೀಡಬೇಕಾಗುತ್ತದೆ. ‘ಹೆಸರು ’ ಎಂಬುದು ವಾಸ್ತವತೆಯ ಸಂಕೇತ. ಅದಿಲ್ಲದಿದ್ದರೆ, ಒಂದು ವಸ್ತು, ಪ್ರಸಂಗ ಇಲ್ಲವೇ ಭಾವನೆಯನ್ನು ನಾವು ಒಪ್ಪುವುದೇ ಕಷ್ಟವಾಗುತ್ತದೆ. ಆಕಾರವಿಲ್ಲದ ಜಗತ್ತನ್ನು, ಅಸ್ತವ್ಯಸ್ತವಾದ ಜಗತ್ತನ್ನು, ನಿರಂತರ ಚಲನಶೀಲವಾದ ಜಗತ್ತನ್ನು, ಸಾಕಾರರೂಪಕ್ಕೆ ತರಬೇಕೆಂದರೆ ಹೆಸರಿಸುವುದೊಂದೇ ಲಭ್ಯವಿರುವ ದಾರಿ. ಹೆಸರಿಡುವ ಮೂಲಕ ಒಂದು ವಿನ್ಯಾಸವನ್ನು ಹುಟ್ಟುಹಾಕಿ ಆ ಮೂಲಕ ಈ ಜಗತ್ತನ್ನು ನಮಗೆ ಬೇಕಾದ ರೀತಿಯಲ್ಲಿ ಕಟ್ಟುತ್ತೇವೆ.

ಆದರೆ, ಹೆಸರುಗಳನ್ನು ಹುಟ್ಟುಹಾಕುವವರು ಮನುಷ್ಯರು. ಹೆಸರುಗಳಿಗೂ ಅವು ಸೂಚಿಸುವ ವ್ಯಕ್ತಿ ಇಲ್ಲವೇ ವಸ್ತುಗಳಿಗೂ ನೇರ ಸಂಬಂಧವೇನೂ ಇರುವುದಿಲ್ಲ. ಎಲ್ಲದಕ್ಕೂ ಹೆಸರುಗಳನ್ನೇ ಅವಲಂಬಿಸುವ ನಾವು ಅವು ಕೇವಲ ಸಂಕೇತಗಳೆಂದು ತಿಳಿಯದೇ ಇದ್ದರೆ ತಪ್ಪು ಮಾಡುತ್ತಿರುತ್ತೇವೆ. ಒಂದೇ ಬಗೆಯ ಮಾಹಿತಿಯನ್ನು ಲೋಕದಿಂದ ಪಡೆದುಕೊಂಡರೂ ಬೇರೆಬೇರೆಯವರು ಅವುಗಳನ್ನವಲಂಬಸಿ ಬೇರೆ ಬೇರೆ ಲೋಕಗಳನ್ನೇ ಗ್ರಹಿಸಲು ಅವರೆಲ್ಲ ಬಳಸುವ ಹೆಸರುಗಳು ಬೇರಬೇರೆಯಾಗಿರುವುದೇ ಕಾರಣ.

ಹೆಸರಿಸುವುದು ಒಂದು ತಟಸ್ಥವಾದ ಕೆಲಸವಲ್ಲ. ಬೇಕಾಬಿಟ್ಟಿ ನಡೆಯುವಂಥದೂ ಅಲ್ಲ.  ಈಗಿರುವ ನಿಯಮಗಳನ್ನೇ ವಿಸ್ತರಿಸಿ ಹೆಸರುಗಳನ್ನು ರೂಪಿಸುತ್ತಿರುತ್ತೇವೆ. ಬೆಂಜಮಿನ್ ಲೀ ವೂರ್ಫ್ ಈ ಬಗ್ಗೆ ಹೇಳುವುದನ್ನು ನೋಡಿ – ‘‘ಹೆಸರಿಸುವುದು ಕಲ್ಪನೆ ಎಂಬ ಹುಚ್ಚು ಕುದುರೆಯ ಓಟವಲ್ಲ. ತೀರಾ ಮುಗ್ಧವಾದ ಚಟುವಟಿಕೆಯೂ ಅಲ್ಲ. ಈಗಾಗಲೇ ವಿನ್ಯಾಸಗೊಂಡ ನಿಮಯಗಳನ್ನು ಬಳಸಿ ಹೆಸರಿಸುತ್ತೇವೆ. ಈಗ ತನ್ನ ಭಾಷೆಯಲ್ಲಿ ರೂಪುಗೊಳ್ಳದಿರುವ ವಿನ್ಯಾಸದಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕಲು ಹೇಳಿದರೆ ಆತ(?)  ಆಗದು ಎನ್ನುತ್ತಾನೆ. ಇದು, ಮೊಟ್ಟೆಯೇ ಇಲ್ಲದಿರುವಾಗ ಹುರಿದ ಮೊಟ್ಟೆಯನ್ನು ತಯಾರಿಸಬೇಕೆಂದು ಹೊರಟಂತಾಗುತ್ತದೆ’’ (೧೯೭೬).

ಈವರೆಗೆ ನೆಲೆಗೊಂಡ ಅರ್ಥವಿನ್ಯಾಸಗಳನ್ನು ಬಳಸಿಕೊಳ್ಳದ ಹೆಸರುಗಳು, ನಿರರ್ಥಕವಾಗುತ್ತವೆ. ಹೊಸ ಹೆಸರುಗಳು ಹೆಸರಿಡುವವರ ಯೋಚನಾಕ್ರಮವನ್ನು ಹಿಂಬಾಲಿಸುತ್ತದೆಯೇ ಹೊರತು ಹೆಸರನ್ನು ಪಡೆಯುತ್ತಿರುವ ವಸ್ತು/ಪ್ರಸಂಗಗಳ ಲಕ್ಷಣಗಳನ್ನಲ್ಲ. ಹೆಸರಿಡುವವರ ಯೋಚನಾಕ್ರಮವನ್ನಂತೂ ಅವರ ಭಾಷೆಯೇ ನಿಯಂತ್ರಿಸುತ್ತದೆ. ಈಗ ಬಳಕೆಯಲ್ಲಿರುವ ಹೆಸರಿಡುವ ನಿಯಮಗಳು ಕೊರತೆಯಿಂದ ಕೂಡಿರಲಿ, ಹುಸಿಯಾಗಿರಲಿ ಆ ನಿಯಮಗಳಿಂದ ಹೊರಬರುವುದು ಮಾತ್ರ ಸಾಧ್ಯವೇ ಇಲ್ಲ.

ಹೆಸರಿಸುವ ಎಲ್ಲ ಕ್ರಿಯೆಗಳೂ ಅಗತ್ಯಾನುಸಾರ ಪೂರ್ವಾಗ್ರಹಗಳಿಂದ ಕೂಡಿರುತ್ತವೆ. ಈ ಪೂರ್ವಾಗ್ರಹಗಳನ್ನು ಸಂಕೇತೀಕರಣಗೊಳಿಸಿದರೆ ಹೆಸರಿಸಿದಂತೆಯೇ ಆಗುತ್ತದೆ. ತಾತ್ವಿಕವಾಗಿ ಹೇಳುವುದಾದರೆ, ಸಮಾಜದಲ್ಲಿರುವ ಎಲ್ಲ ವ್ಯಕ್ತಿಗಳಿಗೂ ಹೀಗೆ ಹೆಸರಿಸುವ ಅವಕಾಶವಿದ್ದರೆ, ಆಗ ಬಗೆಬಗೆಯ ಪೂರ್ವಾಗ್ರಹಗಳು ಕಾಣತೊಡಗುತ್ತವೆ.  ಒಂದೇ ಭಾಷೆಯನ್ನಾಡುವವರೂ  ನಿಯಮಗಳ ಚೌಕಟ್ಟಿನಲ್ಲಿ ಆಯ್ಕೆಗಳನ್ನು ಪ್ರಕಟಿಸಬಲ್ಲರು. ಸಮಸ್ಯೆ ಹುಟ್ಟುವುದು ಬೇರೆ ರೀತಿಯಲ್ಲಿ. ಒಂದು ಗುಂಪು ಮಾತ್ರ ತನ್ನ ಆಯ್ಕೆಯನ್ನು ಪ್ರಕಟಿಸುವ ಅವಕಾಶವನ್ನು ಪಡೆದು ತನ್ನ ಆಯ್ಕೆಯನ್ನು ಉಳಿದವರು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸುವ ಪರಿಸ್ಥಿತಿ ಈಗ ಉಂಟಾಗಿದೆ. ಈ ಅಧಿಕಾರವುಳ್ಳ ಗಂಡಸರ ಗುಂಪು ತನ್ನ ಪೂರ್ವಾಗ್ರಹಗಳನ್ನು ನಿರಂತರವಾಗಿ ಬಲಪಡಿಸುತ್ತಾ ಹೋಗುತ್ತದೆ.

ಇದೆಲ್ಲ ಹೇಗೆ ನಡೆಯುವುದೆಂಬುದನ್ನು ಅರಿಯುವುದು ತೀರಾ ಸುಲಭ, ಜಾನ್ ಆರ್ಚರ್ಡ್(೧೯೭೮) ಲೈಂಗಿಕ ನೆಲೆಯ ಪಾತ್ರ ನಿರ್ವಹಣೆ ಕುರಿತಂತೆ, ತಿಳುವಳಿಕೆಯು ನಿರ್ಮಾಣಗೊಳ್ಳುವ ಪ್ರಕ್ರಿಯೆಯನ್ನು ದಾಖಲಿಸಿದ್ದಾನೆ.  ಇದಕ್ಕಾಗಿ ಒಂದು ಪ್ರಯೋಗದ ಉಲ್ಲೇಖವನ್ನು ನೀಡಲಾಗಿದೆ. ಹೊರಗಿನಿಂದ ಒದಗುವ ಚೋದನೆಗಳಿಗೆ ಗಂಡು ಹೆಣ್ಣುಗಳು ನೀಡುವ ಪ್ರಕ್ರಿಯೆಗಳು ಭಿನ್ನವಾಗಿರುತ್ತವೆಯೇ ಎಂಬುದನ್ನು ತಿಳಿಯಲು ಈ ಪ್ರಯೋಗ ನಡೆದಿತ್ತು. ಈ ಪ್ರಯೋಗದಲ್ಲಿ ಭಾಗಿಗಳಾದವರು ಆ ಚೋದನೆಯನ್ನು ಮಾತ್ರ ಗಮನಿಸಬಹುದಿತ್ತು, ಇಲ್ಲವೇ ಬೇಕೆಂದರೆ ಅದನ್ನು ಒಟ್ಟು ಪರಿಸರದ ಭಾಗವಾಗಿಯೂ ಪರಿಭಾವಿಸಬಹುದಿತ್ತು. ಈ ಪ್ರಯೋಗದಿಂದ ದೊರೆತ ಫಲಿತಾಂಶದಂತೆ ಹೆಂಗಸರು ಚೋದನೆಯನ್ನು ಪರಿಸರದ ಅಂಗವನ್ನಾಗಿ ಗ್ರಹಿಸಿದರೆ, ಗಂಡಸರು ಮಾತ್ರ ಅದನ್ನಷ್ಟೇ ಬೇರ್ಪಡಿಸಿ ಗ್ರಹಿಸುತ್ತಿದ್ದರು. ಈ ಪ್ರಯೋಗ ನಡೆಸಿದ ವಿಜ್ಞಾನಿಗಳು ಈಗಾಗಲೇ ಭಾಷೆಯಲ್ಲಿ ನೆಲೆಗೊಂಡ ನಿಯಮಗಳಿನುಗುಣವಾಗಿ ಗಂಡು ಹೆಣ್ಣುಗಳ ಗ್ರಹಿಕೆಯ ಭಿನ್ನತೆಯನ್ನು ಹೆಸರಿಸಿದರು. ಅವರ ಪ್ರಕಾರ, ಗಂಡು ಸಕಾರಾತ್ಮಕ ಮತ್ತು ಹೆಣ್ಣು ನಕಾರಾತ್ಮಕ; ಹಾಗಾಗಿ, ಗಂಡಸರ ವರ್ತನೆಗಳು ಸಂದರ್ಭ ನಿರಪೇಕ್ಷವಾಗಿದ್ದವು. ಈ ವರ್ಗೀಕರಣದಲ್ಲಿ ಗಂಡಸು ‘ತೋರಿಸಿದ’ ಸ್ವಾತಂತ್ರ್ಯ ಸಕಾರಾತ್ಮಕವಾಗಿತ್ತು, ಹೆಂಗಸು ಆ ಸ್ವಾತಂತ್ರ್ಯವನ್ನು ‘ತೋರಿಸಲಿಲ್ಲ’ ಹಾಗಾಗಿ, ಆಕೆಯ ವರ್ತನೆ ನಕಾರಾತ್ಮಕವಾಗಿತ್ತು.

ಘಟನೆಗಳಲ್ಲೇ ಇಂಥ ವರ್ಗೀಕರಣ ಹುದುಗಿಲ್ಲ. ಪ್ರಯೋಗಕರ್ತೃಗಳ ವ್ಯಕ್ತಿಗತ ದೃಷ್ಟಿಕೋನಗಳು ಹೀಗೆ ವರ್ಗೀಕರಿಸಲು ಪ್ರೇರಣೆ ನೀಡಿವೆ. ಒಂದು ಸಂಗತಿಯನ್ನು ಬಿಡಿಯಾಗಿ ಇಲ್ಲವೇ ಇಡಿಯಾಗಿ ನೋಡುವುದು ಸ್ವಾತಂತ್ರ್ಯವೋ ಬಂಧನವೋ ಎಂಬುದು ಲೋಕದಲ್ಲೇ ಅಡಗಿರುವ ಸಂಗತಿಯಲ್ಲ. ಈ ಘಟನೆಯನ್ನು ನೋಡಿದವರು ತಮ್ಮ ಪಿತೃಪ್ರಧಾನ ನಿಲುವುಗಳನ್ನು ಆರೋಪಿಸಿ ಅದೆಲ್ಲವೂ ಲೋಕದಲ್ಲೇ ಅಡಗಿದೆ ಎಂಬ ಭ್ರಮೆಯನ್ನು ಹುಟ್ಟಿಸುತ್ತಾರೆ.

ಇದಕ್ಕೆ ಪರ‍್ಯಾಯಗಳಿವೆ. ನನ್ನ ಪೂರ್ವಾಗ್ರಹಗಳನ್ನು ಬಳಸಿದ್ದರೆ ನಾನು ಹೆಂಗಸರ ವರ್ತನೆಯನ್ನು ಸಕಾರಾತ್ಮಕ, ಗಂಡಸರ ವರ್ತನೆ ನಕಾರಾತ್ಮಕ ಎಂದು ಹೇಳುತ್ತಿದ್ದೆ.  ಹೆಸರಿಸುವಾಗ ಹೆಂಗಸರ ವರ್ತನೆಯನ್ನು ‘ಸಂದರ್ಭ ಜಾಗೃತಿ’ ಎಂದೂ, ಗಂಡಸರ ವರ್ತನೆ ‘ಸಂದರ್ಭ ಅಂಧತ್ವ’ ಎಂದೂ ಹೇಳುತ್ತಿದ್ದೆ. ಇದೂ ಕೂಡ ಒಂದು ಬಗೆಯ ರಾಜಕಾರಣವೆಂದೇ ಪರಿಗಣಿತವಾಗುತ್ತದೆ. ಏಕೆಂದರೆ ಹೀಗೆ ಮಾಡುವುದು ನೆಲೆಗೊಂಡಿರುವ ನಿಯಮಗಳಿಗೆ ವಿರುದ್ಧವಾಗಿದೆ.

ಇದೆಲ್ಲವನ್ನೂ ಕಂಡಾಗ ಅಧಿಕಾರದಲ್ಲಿರುವವರು ಹೆಸರಿಸಲು ಶಕ್ತರಾಗುವ ಮೂಲಕ ವಾಸ್ತವತೆಯನ್ನೇ ಪ್ರಭಾವಿಸಬಲ್ಲರು ಎಂದು ತಿಳಿಯುತ್ತದೆ. ಒಂದಕ್ಕಿಂತ ಹೆಚ್ಚು ಹೆಸರುಗಳು ಲಭ್ಯವಿದ್ದರೆ, ಬಳಕೆದಾರರು ತಮ್ಮ ಹಿತಾಸಕ್ತಿಗಳಿಗೆ ತಕ್ಕ ಹೆಸರುಗಳನ್ನು ಆಯ್ಕೆ ಮಾಡಿಕೊಳ್ಳಬಹುದೇನೋ. ಆಗ ಗಂಡಸರು ಸಂದರ್ಭ ನಿರಪೇಕ್ಷ, ಇಲ್ಲವೇ ಸಂದರ್ಭ ಅಂಧತ್ವ ವರ್ತನೆಯನ್ನು ತೋರುತ್ತಾರೆಂದು ಹೇಳಬಹುದಿತ್ತು. ಆಗ ಕೊನೆಯ ಪಕ್ಷ ಒಂದು ಮಾದರಿಯ ಹೆಸರುಗಳ ಕೊರತೆ, ಇಲ್ಲವೇ ಅವುಗಳ ಹುಸಿನೆಲೆ ತಿಳಿಯುವಂತಾಗುತ್ತದೆ.  ಆದರೆ, ಗಂಡಸರು ಲೋಕವನ್ನು ಹೆಸರಿಸಿದ್ದಾರೆ. ಇಲ್ಲಿ ಆಯ್ಕೆಗಳಿಲ್ಲ. ಅವರಿಟ್ಟ ಹೆಸರುಗಳ ಕೊರತೆ, ಇಲ್ಲವೇ ಅವುಗಳ ಹುಸಿತನ ಯಾರ ಅರಿವಿಗೂ ಬಾರದೆ ರಾಜ್ಯಭಾರ ನಡೆಸುವಂತಾಗಿದೆ.

—-
ಆಕರ : Extracts from ‘Man made language’ – Dale Spender