ತೀವ್ರವಾದಿ ನೆಲೆಯಲ್ಲಿ ಭಾಷೆಯ ಬಗ್ಗೆ ತಮ್ಮ ಚಿಂತನೆಗಳನ್ನು ಮಂಡಿಸುವ ಸ್ತ್ರೀವಾದಿಗಳು ಹೆಣ್ಣಿಗಾಗಿ ಪ್ರತಿಭಾಷೆಯೊಂದನ್ನು ರೂಪಿಸುವ ಕಾರ್ಯಯೋಜನೆಯನ್ನು ಹೊಂದಿದ್ದಾರೆ. ಇದೊಂದು ಅತಿ ಸಂಕೀರ್ಣವಾದ ಪ್ರಕ್ರಿಯೆ. ಇದರ ತಾತ್ತ್ವಿಕತೆ ಮತ್ತು ಪ್ರಾಯೋಗಿಕತೆಗಳೆರಡೂ ಹಲವು ಜಟಿಲ ಹಂತಗಳನ್ನು ಹೊಂದಿವೆ. ತೀವ್ರವಾದಿಗಳ ಕಾರ್ಯಯೋಜನೆಯ ಒಂದು ಸರಳ ಪ್ರಸ್ತಾವವು ಭಾಷಾಸುಧಾರಕರ ಪ್ರಸ್ತಾವದ ಒಡಲಿನಿಂದಲೇ ಹುಟ್ಟಿಕೊಂಡಿದೆ. ಪುರುಷ ಕೇಂದ್ರಿತ ನೆಲೆಗಳ ಸೂಚಕಗಳು ತಾರತಮ್ಯವನ್ನು ಹೊಂದಿರುವುದರಿಂದ ಭಾಷಾಸುಧಾರಕರು ಹೆಣ್ಣು ಗಂಡು ಇಬ್ಬರನ್ನೂ ಒಳಗೊಳ್ಳುವ ಪರ್ಯಾಯ ಬಳಕೆಗಳನ್ನು ಸೂಚಿಸಿದರಷ್ಟೇ? ತೀವ್ರವಾದಿಗಳು ಹೆಣ್ಣನ್ನಷ್ಟೇ ಸೂಚಿಸುವ ಪರ್ಯಾಯ ಬಳಕೆಗಳನ್ನು ಜಾರಿಗೆ ಕೊಡಲು ಪ್ರಸ್ತಾವಿಸುತ್ತಾರೆ. ಹೆಣ್ಣನ್ನು ಹೊರಗಿಡುವ ಭಾಷಾಂಶಗಳಿಗೆ ಪ್ರತಿಯಾಗಿ ಗಂಡನ್ನು ಪ್ರಜ್ಞಾಪೂರ್ವಕವಾಗಿಯೇ ಹೊರಗಿಡುವ ಭಾಷಾಂಶಗಳನ್ನು ಬಳಸಲು ಹೇಳುತ್ತಾರೆ. ನಾವು ಹಿಂದೆ ಗಮನಿಸಿದ ಜಾತ್ಯೇಕ ಪುಲ್ಲಿಂಗ ಏಕವಚನ ರೂಪದ ಬದಲು ಜಾತ್ಯೇಕ ಸ್ತ್ರೀಲಿಂಗ ಏಕವಚನ ರೂಪವನ್ನು ಬಳಸಲು ಈ ಪ್ರಸ್ತಾವವು ಸೂಚಿಸುತ್ತದೆ. ಇಂಥ ಬಳಕೆಗಳನ್ನು ಉಳ್ಳ ಸಂಕಥನಗಳು ಓದುಗರಿಗೆ ತಂದೊಡ್ಡುವ ಮೊದಲೋದಿನ ಆಘಾತಗಳೇ ಹೆಚ್ಚು ಪರಿಣಾಮಕಾರಿ ಎಂದು ಇವರು ವಾದಿಸುತ್ತಾರೆ. ಸ್ತ್ರೀವಾದಿ ಚಿಂತಕರನ್ನೂ ಒಳಗೊಂಡು ಹಲವರು ತಮ್ಮ ವೈಚಾರಿಕ ಬರಹಗಳಲ್ಲಿ ಎಚ್ಚರಿಕೆಯಿಂದ ಇಂಥ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

ಆದರೆ ತೀವ್ರವಾದಿ ನೆಲೆಯ ಭಾಷಾಚಿಂತಕರು ಇನ್ನೂ ವ್ಯಾಪಕವಾದ ಕಾರ್ಯ ಯೋಜನೆಯ ಪರವಾಗಿ ಇರುವವರು. ಅವರ ತಾತ್ತ್ವಿಕ ಪರಿಕಲ್ಪನೆಗಳನ್ನು ಮೊದಲು ಗ್ರಹಿಸುವುದು ಅಗತ್ಯ. ನಾವೀಗ ಬಳಸುತ್ತಿರುವ ಭಾಷೆಯು ಮೇಲುನೋಟಕ್ಕೆ ಎಲ್ಲ ಭಾಷಿಕರಿಗೂ ಸಮಾನ ಅವಕಾಶಗಳನ್ನು ಮತ್ತು ಸಾಮರ್ಥ್ಯಗಳನ್ನು ನೀಡುತ್ತದೆ ಎಂದು ನಂಬಿದ್ದೇವೆ. ನಮ್ಮ ಶೈಕ್ಷಣಿಕ ವಲಯ ಇಂಥ ನಂಬಿಕೆಯನ್ನೇ ಆಧರಿಸಿ ತನ್ನ ಪರಿಕರ ಗಳನ್ನು ರೂಪಿಸಿಕೊಂಡಿದೆ. ಆದರೆ, ಭಾಷೆಯು ಸಾಮಾಜಿಕ ನೆಲೆಯ ತಾರತಮ್ಯಗಳನ್ನು ತನ್ನ ಒಡಲಿನಲ್ಲಿ ಅಡಗಿಸಿಟ್ಟುಕೊಂಡಿರುವುದರಿಂದ, ಅಧಿಕಾರ ಕೇಂದ್ರದಲ್ಲಿ ಇರುವವರಿಗೆ (ವಾಸ್ತವವಾಗಿ ಗಂಡಸರಿಗೆ) ಅನುಕೂಲಕರ ವಾಗಿ ಇರುತ್ತದೆ. ಅದರ ರಾಚನಿಕ ಮತ್ತು ಬಳಕೆಯ ನಿಯಮಗಳು ಇಂತಹ ಗಂಡು ಓಲುವೆಗಳನ್ನು ನಿರ್ಭಿಡೆಯಿಂದ ಪ್ರಕಟಿಸುತ್ತವೆ. ಇಂಥ ಭಾಷೆಯನ್ನು ಬಳಸಲು ಹೋಗುವ ಹೆಂಗಸು ಸಹಜವಾಗಿಯೇ ಭಾಷಾ ವಿಕಲತೆಯ ಆರೋಪಕ್ಕೆ ತುತ್ತಾಗುತ್ತಾಳೆ. ಭಾಷೆಯನ್ನು ಸರಿಯಾಗಿ ಬಳಸಲಾರಳೆಂದೂ, ಬಳಸಿದರೂ ಅದು ಅಸಮರ್ಥವಾಗಿರುವುದೆಂದೂ, ಇತರರು ಗುರುತಿಸುವಷ್ಟು ವ್ಯತ್ಯಾಸಗಳು ಕಾಣತೊಡಗುತ್ತವೆ. ಹೆಂಗಸು ತನ್ನ ಈ ‘ವಿಕಲತೆ’ಗೆ ತಾನೇ ಕಾರಣಳೆಂದು ತಿಳಿಯುವಂತಹ ಒತ್ತಾಯಕ್ಕೆ ಒಳಗಾಗುತ್ತಾಳೆ. ಜಗತ್ತಿನ ಅತಿಶ್ರೇಷ್ಠ ಚಿಂತಕರಲ್ಲಿ, ತತ್ವಜ್ಞಾನಿಗಳಲ್ಲಿ, ವಾಕ್‌ಪಟುಗಳಲ್ಲಿ, ಸಂಧಾನಕಾರರಲ್ಲಿ ಹೀಗೆ ಎಲ್ಲೆಲ್ಲಿ ಭಾಷಾಸಾಮರ್ಥ್ಯಗಳು ಮುಂಚೂಣಿ ಯಲ್ಲಿ ಇರುತ್ತವೋ ಅಂಥ ಕಡೆಗಳಲ್ಲಿ ಹೆಂಗಸಿನ ಗೈರುಹಾಜರಿಯನ್ನು ಚರಿತ್ರೆಯುದ್ದಕ್ಕೂ ಗುರುತಿಸಲಾಗುತ್ತದೆ. ಭಾಷಾಕೌಶಲಗಳು ಮುಖ್ಯವಾಗಿರುವ ಸೃಜನಶೀಲ ಸಾಹಿತ್ಯಕ್ಷೇತ್ರ ದಲ್ಲೂ ಹೀಗೆ ಹೆಂಗಸು ತನ್ನ ಗುರುತನ್ನು ಉಳಿಸಲಾಗಿಲ್ಲ. ಇಂಥ ವಿಕಲತೆಗಳ ಆರೋಪಗಳು ಎಷ್ಟು ಬಲವಾಗಿವೆ ಎಂದರೆ,  ಹೆಂಗಸರು ತಮ್ಮ ಭಾಷಿಕ ಕೊರತೆಗಳನ್ನು ತಮ್ಮ ಅಸಾಮರ್ಥ್ಯಗಳೆಂದೇ ನಂಬುತ್ತಾ ಬಂದಿದ್ದಾರೆ. ಒಮ್ಮೆಯೂ ತಮಗೆ ಬಳಸಲು ದೊರಕಿರುವ ಭಾಷೆಯೇ ಇಂಥ ವಿಕಲತೆಯ ನೆಲೆಗೆ ತಮ್ಮನ್ನು ತಳ್ಳಿರಬಹುದೆಂದು ಊಹಿಸಲುಮುಂದಾಗಿಲ್ಲ.ತೀವ್ರವಾದಿ ಭಾಷಾಚಿಂತಕರು ಈ ದಿಕ್ಕಿನಲ್ಲಿ ಚಿಂತಿಸಿ ಭಾಷೆಯು ಹೆಂಗಸಿಗೆ ತಂದಿಟ್ಟಿರುವ ಬಿಕ್ಕಟ್ಟುಗಳನ್ನು ಬಯಲಿಗೆಳೆಯಲು ತಕ್ಕ ತಾತ್ತ್ವಿಕತೆಯೊಂದನ್ನು ರೂಪಿಸಿಕೊಳ್ಳುತ್ತಿದ್ದಾರೆ.

ಭಾಷೆಯು ರಾಚನಿಕ ನೆಲೆಯಲ್ಲಿ ಮತ್ತು ಪದಕೋಶದಲ್ಲಿ ಲಿಂಗತಾರತಮ್ಯವನ್ನು ಪ್ರಕಟಿಸುವುದಕ್ಕೂ, ಬಳಕೆಯ ನೆಲೆಯಲ್ಲಿ ಲಿಂಗತಾರತಮ್ಯವನ್ನು ಪ್ರಕಟವಾಗುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಭಾಷಾಶಾಸ್ತ್ರಜ್ಞರು ರಾಚನಿಕ ನೆಲೆಯಲ್ಲಿ ಭಾಷೆ ಎಂಬುದು ಎಲ್ಲರಿಗೂ ಸಮಾನವಾದ ಸಾಮರ್ಥ್ಯ ಎಂದು ವಾದಿಸುತ್ತಾರೆ. ಆದರೆ, ಅಲ್ಲಿಯೂ ಸುಪ್ತವಾಗಿ ಹೆಣ್ಣು ಗಂಡುಗಳ ನಡುವೆ ಯಜಮಾನ ಮತ್ತು ಅಧೀನ ನೆಲೆಗಳು ಇವೆ ಎಂಬುದು ಸ್ತ್ರೀವಾದಿ ಭಾಷಾಚಿಂತಕರ ವಾದ. ಉದಾಹರಣೆಗೆ, ಜಗತ್ತಿನ ಭಾಷೆಗಳಲ್ಲಿ ನಾಮಪ್ರಕೃತಿಗಳನ್ನು ಪುಲ್ಲಿಂಗ ಸ್ತ್ರೀಲಿಂಗ ಎಂಬ ವಗೀಕರಣಕ್ಕೆ ಗುರಿಪಡಿಸುವ ಬಗೆಯನ್ನು ನೋಡೋಣ. ಭಾಷಾಶಾಸ್ತ್ರಜ್ಞರು ಲೋಕದ ಜಂಡರ್ ವಿಭಜನೆಗೂ, ಭಾಷೆಯ ಜಂಡರ್ ವಿಭಜನೆಗೂ ನೇರ ಸಂಬಂಧ ಇದೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ಲೋಕಸಂವಾದಿಯಾದ ಜಂಡರ್ ವಿಭಜನೆಯೇ ಭಾಷೆಯಲ್ಲೂ ಕಾಣಿಸಿಕೊಳ್ಳುವುದು ಒಂದು ಮಾದರಿ. ಅಂದರೆ, ಜೈವಿಕ ನೆಲೆಯ ವಿಭಜನೆಗಳೇ ಭಾಷೆಯಲ್ಲಿ ಲಿಂಗವಿಭಜನೆಗೆ ಕಾರಣವಾಗಿವೆ. ಇದಲ್ಲದೆ, ವ್ಯಾಕರಣಾತ್ಮಕ ಜಂಡರ್ ವ್ಯವಸ್ಥೆಯನ್ನು ಹೊಂದಿರುವ ಭಾಷೆಗಳೂ ಇವೆ. ಈ ಭಾಷೆಗಳಲ್ಲಿ ಜೈವಿಕ ಸಂಗತಿಗಳು ನೇರವಾಗಿ ಭಾಷೆಯ ಜಂಡರ್ ಪರಿಕಲ್ಪನೆಯನ್ನು ಪ್ರಭಾವಿಸುವುದಿಲ್ಲ. ನಾಮಪ್ರಕೃತಿಗಳ ರೂಪವನ್ನು ಅವಲಂಬಿಸಿ ಲಿಂಗವಿಭಜನೆ ಆ ಭಾಷೆಗಳಲ್ಲಿ ನೆಲೆಗೊಂಡಿರುತ್ತದೆ. ಮೊದಲ ಬಗೆಯ ಭಾಷೆಗಳಲ್ಲಿ ನಾಮಪ್ರಕೃತಿಗಳನ್ನು ಪುಲ್ಲಿಂಗ ಕೇಂದ್ರಿತವಾಗಿ ನೋಡಲಾಗುವ ಒಂದು ಒಳ ಮಾದರಿ ಇದೆ. ಈ ಬಗೆಯ ಭಾಷೆಗಳಲ್ಲಿ ಸ್ತ್ರೀವಾಚಿ ರೂಪಗಳನ್ನು ಪುರುಷವಾಚಿ ರೂಪಗಳಿಗೆ ಪ್ರತ್ಯಯಗಳನ್ನು ಸೇರಿಸುವ ಮೂಲಕ ಪಡೆದುಕೊಳ್ಳಬೇಕಾಗುತ್ತದೆ. ಕನ್ನಡದಲ್ಲಿ ಕುರುಡ, ಕುಂಟ, ಕಿವುಡ, ಹೂವಾಡಿಗ, ಮಡಿವಾಳ, ಆಟಗಾರ, ಭಾಷಣಕಾರ ಮುಂತಾದ ನಾಮಪದ ರೂಪಗಳು ಪುಲ್ಲಿಂಗವಾಗಿವೆ. ಇವುಗಳಿಗೆ ಇ, ಇತಿ, ಇತ್ತಿ, ತಿ ಮುಂತಾದ ಪ್ರತ್ಯಯಗಳನ್ನು ಪ್ರಸಂಗಾನುಸಾರ ಸೇರಿಸಿ ಸ್ತ್ರೀವಾಚಿಗಳನ್ನು ಪಡೆಯಬೇಕಾಗಿದೆ. ಇದು ಮೇಲುನೋಟಕ್ಕೆ ಒಂದು ಮೌಲ್ಯನಿರಪೇಕ್ಷ ವ್ಯಾಕರಣ ನಿಯಮವೆಂದು ತೋರಿದರೂ, ವಾಸ್ತವವಾಗಿ ಈ ನಿಯಮದ ಹಿಂದೆ ಪುರುಷಕೇಂದ್ರಿತ ದೃಷ್ಟಿಕೋನ ಇರುವುದು ಸ್ಪಷ್ಟ. ಇದು ಪ್ರಕಟಗೊಳ್ಳುವ ಸಂದರ್ಭಗಳನ್ನು ನೋಡೋಣ. ಕನ್ನಡದಂಥ ಭಾಷಾ ಮಾದರಿಗೆ ಸೇರಿದ ಭಾಷೆಗಳಿಂದ ಹೊಸ ನಾಮಪದಗಳನ್ನು ಸ್ವೀಕಾರ ಮಾಡಿದಾಗ, ಏನಾಗುತ್ತದೆ? ಮೂಲ ಭಾಷೆಯಲ್ಲಿ ಆ ನಾಮಪದ ಜೈವಿಕ ಲಿಂಗವನ್ನು ಸೂಚಿಸದಿದ್ದರೂ ಕನ್ನಡಕ್ಕೆ ಬಂದ ಕೂಡಲೇ ಜೈವಿಕ ಇಲ್ಲವೇ, ಸಾಮಾಜಿಕ ನೆಲೆಯ ಸಂಗತಿಗಳಿಂದ ಅದರ ಲಿಂಗ ಸ್ವರೂಪ ವನ್ನು ನಿರ್ಧರಿಸಲಾಗುತ್ತದೆ. ಆ ಬಳಿಕ ಕನ್ನಡದ ನಿಯಮಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ಭಾಷಿಕರ ಗಮನಕ್ಕೆ ಬರುವಂತೆ ನಡೆಯುವ ಪ್ರಕ್ರಿಯೆಗಳಲ್ಲ. ಆದರೆ, ಭಾಷೆಯ ರಾಚನಿಕ ನಿಯಮಗಳಲ್ಲೇ ಅಂತಸ್ಥವಾಗಿರುವ ತಾರತಮ್ಯಗಳು ಸ್ವಯಂಚಲಿಗಳಾಗಿ ಕಾರ್ಯ ನಿರ್ವಹಿಸುತ್ತವೆ.

ಈ ಜೈವಿಕ ನೆಲೆಗಳನ್ನು ಭಾಷೆಯ ಲಿಂಗವಿಭಜನೆಗೆ ಆಧಾರವಾಗಿ ಇರಿಸಿಕೊಳ್ಳುವ ಭಾಷೆಗಳಲ್ಲಿ ಇನ್ನೂ ಒಂದು ಮಾದರಿ ಇದೆ. ಇಂಥ ಭಾಷೆಗಳಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗ ಎಂಬ ವಿಭಜನೆ ಇರುತ್ತದೆ. ಇಲ್ಲವೇ, ಜೀವಿವರ್ಗಗಳನ್ನು ಚೇತನ/ಅಚೇತನ ಮತ್ತು ಮಹತ್ /ಅಮಹತ್ ಎಂದು ವಿಭಜಿಸಿಕೊಳ್ಳುವುದುಂಟು. ಜೈವಿಕವಾಗಿ ಹೆಣ್ಣು ಎಂದು ನಿಗದಿಯಾದ ಜೀವಿಗಳು ಇಂಥ ಭಾಷೆಗಳಲ್ಲಿ, ಅಚೇತನ ಇಲ್ಲವೇ ಅಮಹತ್ ವರ್ಗಗಳಿಗೆ ಸೇರುತ್ತವೆ. ತ್ರಿವಿಧ ವಿಭಜನೆ ಇರುವ ಮಾದರಿಯಲ್ಲಿ ಪುಲ್ಲಿಂಗ ಒಂದು ನೆಲೆಯಲ್ಲಿದ್ದರೆ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗ ಮತ್ತೊಂದು ನೆಲೆಯಲ್ಲಿ ನಿಲ್ಲುತ್ತವೆ. (ನಪುಂಸಕ ಎಂಬ ಪದವೇ ಗಂಡಸಲ್ಲದ್ದು. ಎಂಬ ಅರ್ಥವನ್ನು ನೀಡುತ್ತಿದೆ. ಗಂಡಸಾಗಿಯೂ ಗಂಡಸಲ್ಲದ್ದು ಎಂಬ ಅರ್ಥಕ್ಕಿಂತ ಜೀವಿವರ್ಗವನ್ನು ಗಂಡಸು ಮತ್ತು ಗಂಡಸಲ್ಲದ್ದು ಎಂಬ ವಿಭಜನೆಗೆ ಗುರಿಪಡಿಸಿರುವ ತರ್ಕವೇ ಇಲ್ಲಿ ಮುಖ್ಯವಾಗಿದೆ ಎಂದು ತೋರುತ್ತದೆ.) ಈ ಮಾದರಿಯಲ್ಲೂ ಹೆಂಗಸನ್ನು ಅಧೀನತೆಯ ನೆಲೆಗೆ ತಳ್ಳಿರುವುದು ಸ್ಪಷ್ಟವಾಗಿದೆ. ಇಲ್ಲೆಲ್ಲ ಖಚಿತ ಮಾಡಿಕೊಳ್ಳ ಬೇಕಾದ ಸಂಗತಿಯೆಂದರೆ, ಈ ಲಿಂಗತಾರತಮ್ಯಕ್ಕೆ ಭಾಷೆಯೇ ಕಾರಣವೆಂದು ತಿಳಿಯಬಾರದು. ಸಾಮಾಜಿಕ, ಸಾಂಸ್ಕೃತಿಕ ನೆಲೆಯ ಲಿಂಗತಾರತಮ್ಯದ ನಂಬಿಕೆ ಮತ್ತು ಆಚರಣೆಗಳನ್ನು ಭಾಷೆಯೂ ಪ್ರತಿನಿಧಿಸುತ್ತದೆ ಮತ್ತು ಬಳಕೆಯಿಂದ ಸ್ಥಿರೀಕರಿಸುತ್ತದೆ ಎಂದು ತಿಳಿಯಬೇಕು.

ಇನ್ನು ವ್ಯಾಕರಣಾತ್ಮಕ ಜಂಡರ್ ಅನ್ನು ಹೊಂದಿರುವ ಭಾಷೆಗಳ ಮಟ್ಟಿಗೆ ಲಿಂಗತಾರತಮ್ಯದ ನೆಲೆಗಳು ಹೇಗಿರುತ್ತವೆ ಎಂಬುದನ್ನು ಸ್ತ್ರೀವಾದಿ ಭಾಷಾಚಿಂತಕರು ಪರಿಶೀಲಿಸಿದ್ದಾರೆ. ಪದಗಳ ಧ್ವನಿರೂಪವನ್ನು ಅವಲಂಬಿಸಿ ಲಿಂಗವಿಭಜನೆಯನ್ನು ಮಾಡುವ ಭಾಷೆಗಳು ಒಂದು ಗುಂಪಿನಲ್ಲಿದ್ದರೆ, ಅಂತಹ ತರ್ಕವನ್ನು ಹೊಂದಿರದ ಭಾಷೆಗಳೂ ಇನ್ನೊಂದು ಗುಂಪಿನಲ್ಲಿವೆ. ಕೆಲವು ಭಾಷೆಗಳು ಈ ಎರಡೂ ಲಕ್ಷಣಗಳನ್ನು ಹೊಂದಿರಬಹುದು. ಇಂಥ ಭಾಷೆಗಳಲ್ಲಿ ಲಿಂಗವಿಭಜನೆಯ ನೆಲೆಗಳು ಆ ಭಾಷೆಯನ್ನಾಡುವ ಸಮುದಾಯಗಳ ಸಾಂಸ್ಕೃತಿಕ ವಿಕಾಸದ ಚರಿತ್ರೆಯಲ್ಲಿ ಅಡಕವಾಗಿವೆ ಎಂದು ಸ್ತ್ರೀವಾದಿ ಭಾಷಾಚಿಂತಕರು ಒಂದು ಪ್ರಮೇಯವನ್ನು ಮಂಡಿಸುತ್ತಾರೆ. ಕೆಲವು ಭಾಷೆಗಳ ಚರಿತ್ರೆಯನ್ನೂ, ಆ ಭಾಷಿಕರ ಸಾಂಸ್ಕೃತಿಕ ಚರಿತ್ರೆಯನ್ನೂ ಪರಿಶೀಲಿಸಿ ತಮ್ಮ ಪ್ರಮೇಯವನ್ನು ಪರೀಕ್ಷಿಸಿ ದ್ದಾರೆ. ಈ ಹಂತದಲ್ಲಿ ಸ್ತ್ರೀವಾದಿಗಳ ಮುನ್ನಡೆ ಅಷ್ಟು ಖಚಿತವಾಗಿಲ್ಲವೆಂದೇ ಹೇಳ ಬೇಕಾಗಿದೆ.

ಇದಲ್ಲದೆ, ವಾಕ್ಯರಚನೆ, ಧ್ವನಿರಚನೆ ಮುಂತಾದ ನೆಲೆಗಳ ನಿಯಮಗಳೂ ಒಂದಿಲ್ಲೊಂದು ಬಗೆಯಲ್ಲಿ ಗಂಡಸರನ್ನು ಕೇಂದ್ರದಲ್ಲಿರಿಸಿಕೊಳ್ಳುವ ಲಕ್ಷಣಗಳನ್ನೇ ಹೊಂದಿರಬಹುದೆಂದು ಸ್ತ್ರೀವಾದಿ ಭಾಷಾಚಿಂತಕರು ವಾದಿಸುತ್ತಾರೆ. ಆಡುಮಾತಿಗಿಂತ ಹೆಚ್ಚಾಗಿ ಬರಹದ ರೂಪಗಳಲ್ಲಿ ಹೀಗೆ ತಾರತಮ್ಯಗಳು ಪ್ರಕಟವಾಗುತ್ತಿರುವ ಸಾಧ್ಯತೆಗಳನ್ನು ಶೋಧಿಸಲಾಗಿದೆ. ವ್ಯಾಕರಣಗಳು ಒಪ್ಪಿ ವಿವರಿಸುವ ವಾಕ್ಯಗಳು ಗಂಡುವಾಕ್ಯಗಳಾಗಿರುತ್ತವೆ; ಅಂಥ ಕಟ್ಟುಗಳಿರುವ ವಾಕ್ಯಗಳಲ್ಲಿ ಹೆಂಗಸು ತನ್ನನ್ನು ತೊಡಗಿಸಿಕೊಳ್ಳಲಾರಳು. ಒಂದೋ, ಅಂಥ ಕಟ್ಟುಗಳನ್ನು ಯಥಾವತ್ತಾಗಿ ಪಾಲಿಸಿ ತನ್ನ ಹೆಣ್ಣುತನವನ್ನು ಬಿಟ್ಟುಕೊಟ್ಟು ಗಂಡಸಿನಂತೆ ಬರೆಯಬೇಕು. ಇಲ್ಲವೇ, ತಾನು ಹೊಂದಿಸಿಕೊಳ್ಳಲಾಗದ ವಾಕ್ಯರಚನೆಯ ಕಟ್ಟುಗಳಲ್ಲಿ ಸಿಲುಕಿ ಇಕ್ಕಟ್ಟು ಅನುಭವಿಸಬೇಕು. ಇವೆರಡೇ ಸದ್ಯ ಹೆಂಗಸಿಗಿರುವ ಆಯ್ಕೆಗಳೆಂದು ಸ್ತ್ರೀವಾದಿಗಳು ಹೇಳುತ್ತಾರೆ.

ರಾಚನಿಕ ಹಂತದಲ್ಲಷ್ಟೇ ಅಲ್ಲದೆ, ಬಳಕೆಯ ಹಂತದಲ್ಲೂ ಲಿಂಗತಾರತಮ್ಯದ ನೆಲೆಗಳು ಇರುವುದನ್ನು ಗುರುತಿಸಲಾಗಿದೆ. ಈ ಬಗ್ಗೆ ಈಗಾಗಲೇ ಸ್ಥೂಲವಾಗಿ ಹೇಳಲಾಗಿದೆ. ಆದರೆ, ಇಂಥ ಪರಿಸ್ಥಿತಿಗಳ ಹಿಂದಿನ ತಾತ್ತ್ವಿಕ ನೆಲೆಯನ್ನು ಸ್ತ್ರೀವಾದಿಗಳು ನಿರೂಪಿಸುತ್ತಿರುವ ಬಗೆಯನ್ನು ನಾವೀಗ ನೋಡೋಣ. ಭಾಷಾಶಾಸ್ತ್ರಜ್ಞರು ಪ್ರಮಾಣ ಭಾಷೆ (ಕೆಲವರು ಇದನ್ನು ಶಿಷ್ಟ ಭಾಷೆ ಎಂದೂ ಹೇಳುತ್ತಾರೆ) ಮತ್ತು ಉಪಭಾಷೆಗಳ ಸಂಬಂಧವನ್ನು ಯಾಜಮಾನ್ಯ ಮತ್ತು ಅಧೀನತೆಯ ಸಂಬಂಧದಲ್ಲೇ ವ್ಯಾಖ್ಯಾನ ಮಾಡುತ್ತಾರೆ. ಉಪಭಾಷೆಗಳು ತಮ್ಮ ಚಹರೆಗಳನ್ನು ಪ್ರಮಾಣಭಾಷೆಯ ಎದುರು ಕಳೆದುಕೊಳ್ಳುವುದೇ ಸಹಜ ಎಂಬುದು ಅವರ ನಿಲುವು. ಆದರೆ, ಇಲ್ಲಿ ನಡೆಯುವ ಒಂದು ಸಾಮಾಜಿಕ ಪ್ರಕ್ರಿಯೆ ಕುತೂಹಲಕಾರಿಯಾಗಿದೆ. ಉಪಭಾಷೆಗಳನ್ನಾಡುವ ಜನಸಮೂಹ ತಮ್ಮ ಭಾಷಾಸಮುದಾಯದೊಳಗೇ ಎರಡು ಬಗೆಯ ಸಾಮರ್ಥ್ಯಗಳನ್ನು ಪ್ರಕಟಿಸ ಬೇಕಾಗುತ್ತದೆ. ಒಂದು, ತಮ್ಮ ಉಪಭಾಷೆಗೆ ಸಂಬಂಧಿಸಿದ ಸಾಮರ್ಥ್ಯ, ಇನ್ನೊಂದು ಪ್ರಮಾಣಭಾಷೆಗೆ ಸಂಬಂಧಿಸಿದ ಸಾಮರ್ಥ್ಯ. ಪ್ರಮಾಣಭಾಷೆಯ ಸಾಮರ್ಥ್ಯವು ಶಿಕ್ಷಣ ಮತ್ತು ಸಾಮಾಜಿಕ ಚಲನಶೀಲತೆಯಿಂದ ಲಭಿಸುತ್ತದೆ. ಹಾಗಾಗಿ, ಅದು ಉಪಭಾಷಿಕರಿಗೆ ಎರಡನೆಯ ಭಾಷೆಯೇ ಆಗಬಹುದು. ಈ ಎರಡು ಸಾಮರ್ಥ್ಯಗಳನ್ನು ಬಳಸುವ ಬಗ್ಗೆ ಸಾಮಾಜಿಕವಾದ ನಿಯಮಗಳಿರುತ್ತವೆ. ಭಾಷಿಕರು ಇದರ ನಿರ್ವಹಣೆಯನ್ನು ಹೇಗೆ ಮಾಡುತ್ತಾರೆ ಎನ್ನುವುದು ಆಸಕ್ತಿಯ ವಿಷಯ.

ಸ್ತ್ರೀವಾದಿ ಭಾಷಾಚಿಂತಕರು ಹೆಂಗಸರೂ ಕೂಡಾ ಹೀಗೆ ಎರಡು ಭಾಷಾಸಾಮರ್ಥ್ಯಗಳ ನಿರ್ವಹಣೆಯ ಭಾರವನ್ನುಹೊರುತ್ತಿದ್ದಾರೆ ಎಂದು ಪ್ರಸ್ತಾಪಿಸುತ್ತಿದ್ದಾರೆ. ಗಂಡುಭಾಷೆಯ ಸಾಮರ್ಥ್ಯ ಒಂದಾದರೆ, ತಮ್ಮ ಸಹಜ ಹೆಣ್ಣು ಭಾಷಾಸಾಮರ್ಥ್ಯ ಇನ್ನೊಂದು. ಭಾಷಾಶಾಸ್ತ್ರಜ್ಞರು ಹೇಳುವ ಮಾದರಿಗೂ, ಸ್ತ್ರೀವಾದಿಗಳು ಮಂಡಿಸುತ್ತಿರುವ ಮಾದರಿಗೂ ಒಂದು ಮುಖ್ಯ ವ್ಯತ್ಯಾಸವಿದೆ. ಪ್ರಮಾಣಭಾಷೆಯನ್ನೇ ಆಡುವ ಜನವರ್ಗಮೊಮದು ಇಲ್ಲೂ ಇರುವುದಿಲ್ಲ. ಭಾಷಿಕರೆಲ್ಲರಿಗೂ ಅದು ಎರಡನೆಯ ಭಾಷೆಯೇ. ಎಲ್ಲ ಭಾಷಿಕರೂ ಒಮದಲ್ಲ ಒಂದು ಬಗೆಯಲ್ಲಿ ಈ ದ್ವಿಸಾಮರ್ಥ್ಯದ ಬಳಕೆಯ ಹೊರಿಯನ್ನು ಹೊರುವವರೇ. ಆದರೆ, ಹೆಂಗಸರ ವಿಚಾರದಲ್ಲಿ ಹಾಗಲ್ಲ. ಅವರ ಎರಡನೆಯ ಸಾಮರ್ಥ್ಯವಾಗಿರು ಗಂಡಸರ ಭಾಷೆಯನ್ನು ಮಾತ್ರ ಆಡುವ ಗಂಡಸರು ಸಮಾಜದಲ್ಲಿ ಇರುವರಷ್ಟೇ? ಹೀಗಾಗಿ, ಅವರು ತಮ್ಮ ಭಾಷೆಯನ್ನು ಆಡದ ಇನ್ನೊಂದು ಗುಂಪಿನೊಡನೆ ವ್ಯವಹಿಸುವ ಬಿಕ್ಕಟ್ಟಿನಲ್ಲಿರುತ್ತಾರೆ. ಇದು ಇನ್ನಷ್ಟು ಷಟಿಲವಾಗಿರುತ್ತದೆ. ಏಕೆಂದರೆ, ಈ ಎರಡೂ ಭಾಷಾಸಾಮರ್ಥ್ಯಗಳ ನಡುವೆ ಭಿನ್ನತೆಯ ಜೊತೆಗೆ, ತರತಮ ಭಾವವೂ ಸೇರಿಕೊಂಡಿದೆ. ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಒಂದು ಊಹಾತ್ಮಕ ಪ್ರಸಂಗವನ್ನು ನೋಡೋಣ.

A ಮತ್ತು B ಎಂಬ ಎರಡು ಭಾಷೆಗಳಿವೆ. A ಅಧಿಕಾರಸ್ಥರ ಭಾಷೆ. ಅದನ್ನು ಆಡುವವರಿಗೆ B ಭಾಷೆ ತಿಳಿಯುವುದಿಲ್ಲ. A ಮತ್ತು B ಭಾಷೆಗಳನ್ನಾಡುವವರ ನಡುವಣ ಭಾಷಿಕ ಸಂಕಥನಗಳು ಹೇಗಿರುತ್ತವೆ? B ಭಾಷಿಕರು ನಿರಂತರವಾಗಿ A ಭಾಷೆಯನ್ನಷ್ಟೇ ಬಳಸಿ A ಭಾಷಿಕರೊಡನೆ ಸಂವಾದಿಸಬೇಕು. A ಭಾಷಿಕರು ತಮ್ಮ ಏಕಭಾಷಿಕ ಸಾಮರ್ಥ್ಯದಿಂದಲೇ ಎಲ್ಲವನ್ನೂ ನಿಭಾಯಿಸಬಲ್ಲರು. ಅವರು ಎಂದೂ B ಭಾಷೆಯನ್ನು ಅರಿಯುವ ಹೊಣೆಯನ್ನು ಹೊರುವುದಿಲ್ಲ. ಗಂಡು ಹೆಣ್ಣುಗಳ ಭಾಷಾಸಾಮರ್ಥ್ಯಗಳ ಪರಿಸ್ಥಿತಿ ಮೇಲಿನ ಕಾಲ್ಪನಿಕ ಪ್ರಸಂಗವನ್ನು ಹೋಲುತ್ತದೆಂದು ಸ್ತ್ರೀವಾದಿಗಳು ಹೇಳುತ್ತಾರೆ.

ಭಾಷೆ ಮತ್ತು ಸಂಸ್ಕೃತಿಗಳ ಸಂಬಂಧವನ್ನು ಕುರಿತಂತೆ ಭಾಷಾಶಾಸ್ತ್ರಜ್ಞರು ಎರಡು ಭಿನ್ನ ತಾತ್ತ್ವಿಕ ನೆಲೆಗಳನ್ನು ಅವಲಂಬಿಸಿದ್ದಾರೆ. ಒಂದನ್ನು, ಸಾಂಸ್ಕೃತಿಕ ವಿಶಿಷ್ಟ ನೆಲೆ ಎಂದೂ, ಇನ್ನೊಂದನ್ನು ಸಾಂಸ್ಕೃತಿಕ ವೈಶ್ವಿಕ ನೆಲೆ ಎಂದೂ ಗುರುತಿಸಬಹುದು. ಮೊದಲನೆಯದು ಪ್ರತಿಯೊಂದು ಸಂಸ್ಕೃತಿಯ ವಿಶಿಷ್ಟತೆಗಳನ್ನು ಭಾಷೆಯು ತನ್ನ ಒಡಲಿನಲ್ಲಿ ಅಡಗಿಸಿಟ್ಟುಕೊಂಡಿರುತ್ತದೆ ಎಂದು ವಾದಿಸುತ್ತದೆ. ಅಂದರೆ, ಭಾಷೆಗಳು ಆಯಾ ಸಂಸ್ಕೃತಿಗಳ ಅನನ್ಯತೆಯನ್ನು ಪ್ರತಿನಿಧಿಸುತ್ತದೆ ಎಂದಾಯ್ತು. ಈ ವಾದದ ಒಂದು ತುದಿಯಲ್ಲಿ ನಿಂತರೆ, ಒಂದು ಸಂಸ್ಕೃತಿಯ ಜನಸಮುದಾಯ ತನ್ನ ಭಾಷೆಯ ಮೂಲಕ ಪ್ರತಿನಿಧಿಸಲಾದ ವಾಸ್ತವವನ್ನು ಮಾತ್ರ ಗ್ರಹಿಸಬಲ್ಲದು ಎಂದು ತಿಳಿಯಬೇಕಾಗುತ್ತದೆ. ಸಾಂಸ್ಕೃತಿಕ ವೈಶ್ವಿಕ ನೆಲೆಯು ಭಾಷೆಗೆ ಇಂಥ ಆಯಾಮಗಳನ್ನು ನೀಡುವುದಿಲ್ಲ. ಬದಲಿಗೆ, ಪ್ರತಿಯೊಂದು ಭಾಷೆಯಲ್ಲೂ ಎಲ್ಲ ಸಂಸ್ಕೃತಿಗಳಿಗೂ ಸಂವಾದಿಯಾದ ಚಹರೆಗಳು ಒಂದಲ್ಲ ಒಂದು ವಿಧದಲ್ಲಿ ನೆಲೆಗೊಂಡಿರುತ್ತವೆ ಎಂದು ವಾದಿಸಲಾಗಿದೆ. ಹೇಗೆ ನೋಡಿದರೂ, ಇವೆರಡೂ ವಾದಗಳು ಇಡಿಯಾಗಿ ಸತ್ಯವನ್ನು ಬಿಂಬಿಸಲಾರವೆಂದೇ ತೋರುತ್ತದೆ. ಆದರೆ, ಸ್ತ್ರೀವಾದಿ ಭಾಷಾಚಿಂತಕರು ಸಾಂಸ್ಕೃತಿಕ ವಿಶಿಷ್ಟತೆಯ ನೆಲೆಗಳನ್ನು ಬಲವಾಗಿ ನೆಮ್ಮಿದ್ದಾರೆ. ಇದಕ್ಕೆ ಕಾರಣಗಳಿವೆ. ಭಾಷಿಕ ಸಮುದಾಯಗಳಲ್ಲಿ ಲೈಂಗಿಕ ತಾರತಮ್ಯಗಳು ನಂಬಿಕೆ ಮತ್ತು ಆಚರಣೆಗಳ ನೆಲೆಯಲ್ಲಿ ಇರುವುದು ವಾಸ್ತವವಾದರೆ, ಅದು ಒಂದೋ ಆ ಸಮುದಾಯದ ಭಾಷೆಯಲ್ಲಿ ಬಿಂಬಿತವಾಗಬೇಕು. ಇಲ್ಲವೇ ಆ ವಾಸ್ತವವನ್ನು ಸ್ಥಿರೀಕರಿಸಲು ಅಧಿಕಾರ ವರ್ಗವು ಭಾಷಿಕ ಸಾಮಗ್ರಿಗಳನ್ನು ಬಳಸಿಕೊಳ್ಳುತ್ತಿರಬೇಕು. ಈ ಎರಡೂ ಸಾಧ್ಯತೆಗಳನ್ನು ಸ್ತ್ರೀವಾದಿಗಳು ಸಮರ್ಥಿಸಲು ಮೇಲೆ ಹೇಳಿದ ಸಾಂಸ್ಕೃತಿಕ ವಿಶಿಷ್ಟತೆಯ ನೆಲೆಗಳ ಮೊರೆ ಹೋಗುತ್ತಾರೆ.

ಹೆಣ್ಣು ಮತ್ತು ಭಾಷೆಯ ಸಂಬಂಧವನ್ನು ಗ್ರಹಿಸಲು ಮೇಲೆ ಹೇಳಿದ ಸಾಂಸ್ಕೃತಿಕ ವಿಶಿಷ್ಟತೆಯ ಎರಡು ನೆಲೆಗಳು ಹೇಗೆ ನೆರವಾಗಿವೆ ಎನ್ನುವುದನ್ನು ನೋಡೋಣ. ಮೊದಲನೆಯದು, ಭಾಷೆಯಲ್ಲೇ ಲಿಂಗತಾರತಮ್ಯವು ಬಿಂಬಿತವಾಗಿದೆ ಎಂದು ಹೇಳುವ ನೆಲೆ. ಇದು ನಿಜವಿದ್ದರೆ, ಹೆಂಗಸು ತನ್ನ ಅಸ್ತಿತ್ವವನ್ನು ಕಡೆಗಣಿಸುವ ಭಾಷೆಯ ಮೂಲಕವೇ ತನ್ನನ್ನು ತಾನು ಮಂಡಿಸುವ ದುಃಸಾಹಸಕ್ಕೆ ತೊಡಗಿದ್ದಾಳೆ ಎನ್ನಬೇಕಾಗುತ್ತದೆ. ತಾನು ಇಂಥ ಬಿಕ್ಕಟ್ಟಿನಲ್ಲಿ ಇರುವುದು ಅರಿವಿಗೆ ಬಾರದಿದ್ದಾಗ ತನ್ನ ಅಭಿವ್ಯಕ್ತಿಯ ಸೋಲುಗಳ ಬಗ್ಗೆ ಆಕೆ ಹತಾಶಳಾಗಬಹುದು. ಒಂದು ವೇಳೆ ಭಾಷೆಯು ತನ್ನ ಹಿತಗಳ ವಿರುದ್ಧವಾಗಿದೆ ಎಂಬ ಅರಿವಿದ್ದೂ ಅದೇ ಭಾಷೆಯನ್ನು ಬಳಸಬೇಕಾದಾಗ ಆಗಲೂ ತನ್ನ ಸಾಧ್ಯತೆಗಳು ರೆಕ್ಕೆ ಮುರಿದಂತೆ ಆಗುವ ಅನುಭವಕ್ಕೆ ಪಕ್ಕಾಗಿ ನೋವುಣ್ಣುತ್ತಾಳೆ. ಆದರೆ, ಸ್ತ್ರೀವಾದಿ ಭಾಷಾಚಿಂತಕರು ಎರಡನೆಯ ಸಾಧ್ಯತೆಯಿಂದ ಒಂದು ಅವಕಾಶವನ್ನು ಕಲ್ಪಿಸಿಕೊಳ್ಳುತ್ತಾರೆ. ಭಾಷೆಯು ಹೆಣ್ಣಿನ ಅಭಿವ್ಯಕ್ತಿಗೆ ತಕ್ಕುದಾಗಿಲ್ಲ, ಬದಲಿಗೆ ಅಡೆತಡೆಗಳನ್ನೇ ಉಂಟು ಮಾಡುತ್ತದೆ ಎನ್ನುವುದನ್ನು ಕಂಡುಕೊಂಡರೆ, ಆಗ ಪರ್ಯಾಯ ಮಾರ್ಗಗಳ ಶೋಧಕ್ಕೆ ಮುಂದಾಗಬಹುದು. ಈ ಪರ್ಯಾಯ ಮಾರ್ಗಗಳು ಹೆಂಗಸಿಗೆ ಬಿಡುಗಡೆಯ ಅವಕಾಶಗಳನ್ನೂ ಒದಗಿಸಬಹುದಾಗಿದೆ.

ಈ ಪ್ರಬಂಧದ ಆರಂಭದಲ್ಲೇ ಹೇಳಿದಂತೆ ಸ್ತ್ರೀವಾದಿ ಭಾಷಾಚಿಂತನೆ ಸ್ವಯಂ ಪೂರ್ಣವಾದ ಚಟುವಟಿಕೆಯಲ್ಲ. ಒಟ್ಟು ಸ್ತ್ರೀ ಅಸ್ತಿತ್ವಶೋಧ ಮತ್ತು ಸ್ಥಾಪನೆಯ ಪ್ರಕ್ರಿಯೆಯಲ್ಲಿ ಒಂದು ಭಾಗವಾಗಿರುವುದರಿಂದ ಭಾಷಿಕ ಪರ್ಯಾಯಗಳ ಮಂಡನೆ ಮತ್ತು ಬಳಕೆ ಪೂರಕ ನೆಲೆಯಲ್ಲಿ ಕೆಲಸ ಮಾಡುತ್ತದೆ.

ಸಾಂಸ್ಕೃತಿಕ ವಿಶಿಷ್ಟತೆಯನ್ನು ಆಧರಿಸಿ ಹೆಣ್ಣು ಮತ್ತು ಭಾಷೆಯ ಸಂಬಂಧಗಳನ್ನು ವಿವರಿಸುವ ಸ್ತ್ರೀವಾದಿಗಳು ಇನ್ನೊಂದು ನೆಲೆಯಲ್ಲಿ ತಮ್ಮ ಚಿಂತನೆಯನ್ನು ಬೆಳೆಸಿದ್ದಾರೆ. ಅಧಿಕಾರವುಳ್ಳ ಜನವರ್ಗ (ಈ ಸಂದರ್ಭದಲ್ಲಿ ಗಂಡಸರು) ಭಾಷೆ ಎಂಬ ಸಾಂಸ್ಕೃತಿಕ ಮೇಲ್‌ಸ್ತರದ ಪರಿಕರವನ್ನು ತಮ್ಮ ಹಿತಾಸಕ್ತಿಗೆ ತಕ್ಕಂತೆ ಬಳಸುತ್ತಿದ್ದಾರೆ ಎಂಬ ವಾದವನ್ನು ಆಧರಿಸಿ ಈ ಇನ್ನೊಂದು ಚಿಂತನೆ ಸ್ತ್ರೀವಾದಿಗಳಲ್ಲಿ ಬೆಳೆದಿದೆ. ಮೇಲೆ ಹೇಳಿದ ಚಿಂತನಾಕ್ರಮ ಪಾರಂಪರಿಕ ಮಾರ್ಕ್ಸ್‌ವಾದಿ ಚಿಂತನೆಯಿಂದ ಪ್ರೇರೇಪಿತವಾದುದು. ಆರ್ಥಿಕ ನೆಲೆಗಟ್ಟು ಮೇಲ್‌ಸ್ತರವನ್ನು ನಿಯಂತ್ರಿಸುತ್ತದೆ ಎಂಬುದು ಆ ವಾದದ ತಿರುಳು. ಈ ಸಂದರ್ಭದಲ್ಲಿ ಅಧಿಕಾರವುಳ್ಳವರು ಭಾಷೆಯನ್ನು ಒಂದು ಹತಾರವನ್ನಾಗಿ ಪರಿವರ್ತಿಸಿ ತಮ್ಮ ಹಿಡಿತವನ್ನು ಕಾಯ್ದುಕೊಳ್ಳುತ್ತಿದ್ದಾರೆ ಎಂದು ತಿಳಿಯಬಹುದೇ? ಹಾಗಿದ್ದಲ್ಲಿ, ಹೆಂಗಸಿನ ಪ್ರತಿಕ್ರಿಯೆ ಏನಿರಬೇಕು? ಪಾರಂಪರಿಕ ಮಾರ್ಕ್ಸ್‌ವಾದದ ಉತ್ತರಗಳನ್ನೇ ಇಲ್ಲಿ ಬಳಸುವುದಾದರೆ, ಈ ಯಜಮಾನ ಅಧೀನ ಸಂಬಂಧದಲ್ಲಿ ಬದಲಾವಣೆಯನ್ನು (ಅಂದರೆ ತಿರುಳಿನಲ್ಲಿ) ತಾರದೆ ಕೇವಲ ಮೇಲ್‌ಸ್ತರದಲ್ಲಿ (ಅಂದರೆ, ಭಾಷೆಯಲ್ಲಿ) ಬದಲಾವಣೆಯನ್ನು ತರುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಏಕೆಂದರೆ ಮೇಲ್‌ಸ್ತರದ ಮೇಲಿನ ಹಿಡಿತವನ್ನು ಹೊಂದಿರುವ ವರ್ಗವು ತನ್ನ ಅಧಿಕಾರ ಸ್ಥಾಪನೆಗಾಗಿ ಎಲ್ಲ ಬದಲಾವಣೆಗಳನ್ನೂ ನಿಸ್ಸತ್ವಗೊಳಿಸುತ್ತದೆ.

ಒಂದು ವೇಳೆ ಈ ಸಾಧ್ಯತೆಯನ್ನು ನಿಜವೆಂದು ತಿಳಿದರೆ, ಸ್ತ್ರೀವಾದಿ ಭಾಷಾ ಚಿಂತನೆಗಳು ಮಂಡಿಸುವ ಪರ್ಯಾಯಗಳೆಲ್ಲ ಹುಸಿ ಹೋಗುತ್ತವೆ. ಆದರೆ, ತಿರುಳು ಮತ್ತು ಮೇಲ್‌ಸ್ತರದ ಸಂಬಂಧವನ್ನು ಪರಸ್ಪರ ಪ್ರಭಾವಗಳ ನೆಲೆಯಲ್ಲೂ ನೋಡುವ ಚಿಂತನಾಕ್ರಮವೊಂದು ಮಾರ್ಕ್ಸ್‌ವಾದದಲ್ಲಿ ಅಡಕವಾಗಿದೆ. ಈ ಚಿಂತನೆಯ ಪ್ರಕಾರ ತಿರುಳು ನಿಯಂತ್ರಕವಾಗಿದ್ದರೂ ಮೇಲ್‌ಸ್ತರದಲ್ಲಿ ತರುವ ಬದಲಾವಣೆಗಳು ತಿರುಳಿನ ಮೇಲೂ ಪ್ರಭಾವವನ್ನು ಬೀರಬಲ್ಲವು. ಹಾಗಾಗಿ, ಸ್ತ್ರೀವಾದಿ ಭಾಷಾಚಿಂತಕರು ಭಾಷೆಯ ನೆಲೆಯಲ್ಲಿ ಪ್ರಸ್ತಾಪಿಸುವ ಪರ್ಯಾಯಗಳು ಗಂಡು ಅಧಿಕಾರದ ನೆಲೆಗಳನ್ನು ಪ್ರಭಾವಿಸ ಬಲ್ಲವೆಂದು ತಿಳಿಯಬೇಕಾಗುತ್ತದೆ. ಈ ಪ್ರಭಾವದ ಸ್ವರೂಪ ಮಾತ್ರ ಅಸ್ಪಷ್ಟವಾಗಿದೆ. ಏಕೆಂದರೆ, ಗಂಡು ಅಧಿಕಾರವು ಚಾರಿತ್ರಿಕವಾಗಿ ಬೆಳೆಸಿಕೊಂಡ ಬೇರುಗಳು ಸುಭದ್ರವಾಗಿವೆ. ಅವುಗಳನ್ನು ಅಲುಗಿಸಲು ಇಂಥ ಮೇಲ್‌ಸ್ತರದ ಪ್ರಭಾವಗಳು ಹೇಗೆ ಕೆಲಸ ಮಾಡಬಲ್ಲವು ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ.

ಒಂದು ಬಗೆಯ ಪ್ರಭಾವವನ್ನು ಸ್ತ್ರೀವಾದಿ ಭಾಷಾಚಿಂತಕರು ಊಹಿಸಿದ್ದಾರೆ ಮತ್ತು ಅದು ನಿಜವೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಾರ್ಕ್ಸ್‌ವಾದಿ ಪರಿಭಾಷೆಯಲ್ಲಿ ಹೇಳುವುದಾದರೆ ಶೋಷಿತರು ಶೋಷಣೆಯನ್ನು ಮಾಡುವವರ ಅಧಿಕಾರದ ಪರಿಕರಗಳನ್ನು ತಮ್ಮ ನೆಲೆಯಿಂದ ಬಳಸತೊಡಗುವುದೇ ಒಂದು ಪ್ರತಿರೋಧ. ಈ ಪ್ರತಿರೋಧವು ಶೋಷಕರಲ್ಲಿ ಲಜ್ಜೆ ಮತ್ತು ಕ್ರೋಧಗಳನ್ನು ಉಂಟು ಮಾಡಬಹುದು. ಇವೆರಡೂ ಭಾವಗಳು ಪರಿಣಾಮದಲ್ಲಿ ಶೋಷಿತರಿಗೆ ಉಪಯುಕ್ತವಾದವು. ಭಾಷೆಯ ನೆಲೆಯಲ್ಲಿ ನೋಡಿದರೆ, ಹೆಂಗಸರು ತಮ್ಮ ಅಭಿವ್ಯಕ್ತಿಗೆ ತಕ್ಕಂತೆ ಬದಲಿಸಿಕೊಂಡ ಮಾದರಿಯನ್ನು ಬಳಸತೊಡಗಿದಾಗ ಸಹಜವಾಗಿಯೇ ಅದಕ್ಕೆ ವಿರೋಧಗಳು ಉಂಟಾಗುತ್ತವೆ. ವೈರುಧ್ಯಗಳ ನಡುವಣ ತಿಕ್ಕಾಟ ಬೆಳಕಿಗೆ ಬರಲು ಹೀಗೆ ವಿರೋಧಗಳು ಕಾಣಿಸಿಕೊಳ್ಳುವುದು ಅತ್ಯಗತ್ಯ. ಅದರಿಂದ ಗಂಡಸರು ತಮ್ಮ ಅಧಿಕಾರಕೇಂದ್ರಕ್ಕೆ ಸವಾಲುಗಳು ಬರುತ್ತಿರುವುದನ್ನು ತಿಳಿಯುತ್ತಾರೆ. ಆಗ ನಿಜವಾದ ಬದಲಾವಣೆಗೆ ಸ್ತ್ರೀವಾದಿ ಚಳುವಳಿಗಳು ಸನ್ನದ್ಧವಾಗ ಬೇಕಾಗುತ್ತದೆ.

ಸಾಂಸ್ಕೃತಿಕ ವಿಶಿಷ್ಟತೆಯನ್ನು ಆಧರಿಸಿ ತಮ್ಮ ಸ್ತ್ರೀವಾದಿ ಭಾಷಾಚಿಂತನೆಗಳನ್ನು ಮಂಡಿಸುವವರು, ಒಂದು ನೆಲೆಯಲ್ಲಿ ಹೆಂಗಸಿಗೆ ದಕ್ಕಬೇಕಾದ ಅಭಿವ್ಯಕ್ತಿ ಸಾಧ್ಯತೆಗಳಿಗೆ ಅಡ್ಡಿಯುಂಟಾಗುವುದನ್ನು ಗುರುತಿಸಿದರೆ, ಇನ್ನೊಂದೆಡೆ ಆಕೆಗೆ ಬಿಡುಗಡೆಯ ದಾರಿಗಳನ್ನು ತೋರಿಸಿಕೊಡುತ್ತಿರುತ್ತಾರೆ. ಆದರೆ ಈ ಸಮಸ್ಯೆಗೆ ಇನ್ನೂ ಒಂದು ಮುಖವಿದೆ. ಅದೆಂದರೆ, ಭಾಷೆಗೂ, ಗಂಡಸಿಗೂ ಇರುವ ಸಂಬಂಧದ ಸ್ವರೂಪ. ಭಾಷೆಯು ಗಂಡಸಿನ ಹಿಡಿತ ದಲ್ಲಿದೆ ಎಂಬುದರ ಅರ್ಥವೇನು? ತನ್ನ ಅಧಿಕಾರವನ್ನು ಭಾಷೆಯ ಮುಖಾಂತರ ಸ್ಥಾಪಿಸುತ್ತಿರುವುದನ್ನು ಗಂಡಸು ಸ್ವತಃ ತಾನೇ ಬಲ್ಲನೇ? ಅಥವಾ ಆತ ಕೂಡಾ ಒಂದು ಚಾರಿತ್ರಿಕ ವಿನ್ಯಾಸದಲ್ಲಿ ಕೇವಲ ಪಾತ್ರಧಾರಿಯೇ? ಈ ಪ್ರಶ್ನೆಗಳನ್ನು ಕೇಳುವುದು ಉಚಿತವಾಗುತ್ತದೆ. ಏಕೆಂದರೆ, ಮಾರ್ಕ್ಸ್‌ವಾದಿ ಚಿಂತನೆಗಳು ತಿರುಳಿನ ಮೇಲೆ ಅಧಿಕಾರ ವುಳ್ಳವರು ಪ್ರಜ್ಞಾಪೂರ್ವಕವಾಗಿಯೇ ತಮ್ಮ ಹತಾರಗಳನ್ನು ಬಳಸುತ್ತಾರೆಂದು ಒಪ್ಪುತ್ತವೆ. ಶೋಷಕರು ತಮಗೇ ಗೊತ್ತಿಲ್ಲದಂತೆ ಶೋಷಣೆ ನಡೆಸುವರೆಂಬ ಮುಗ್ಧತೆಯನ್ನು ಮಾರ್ಕ್ಸ್‌ವಾದ ಒಪ್ಪುವುದಿಲ್ಲ. ಈ ಮಾದರಿಯು ಈಗಿರುವಂತೆ ಹೆಣ್ಣು ಗಂಡುಗಳಿಗೂ ಭಾಷೆಗೂ ಇರುವ ಸಂಬಂಧವನ್ನು ಯಥಾವತ್ತಾಗಿ ವಿವರಿಸಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಈ ಪ್ರಬಂಧದ ಮೊದಲಲ್ಲಿ ಸ್ತ್ರೀವಾದಿ ಚಿಂತನೆಗಳು ಇತರ ಜ್ಞಾನವಲಯಗಳಲ್ಲಿ ನಡೆದ ಚಿಂತನಾ ಕ್ರಮಗಳಿಂದ ಪ್ರಭಾವಿತವಾಗಿರುವುದನ್ನು ಪ್ರಸ್ತಾಪಿಸಲಾಗಿದೆ. ಇಪ್ಪತ್ತನೆಯ ಶತಮಾನದಲ್ಲಿ ಹಲವಾರು ಚಿಂತನಾಕ್ರಮಗಳು ಹಿಂದೆಂದೂ ಕಾಣದಿದ್ದಷ್ಟು ಪರಿವರ್ತನೆ ಗಳನ್ನು ಕಂಡಿವೆ. ಇದರ ಪರಿಣಾಮವಾಗಿಯೇ ಸ್ತ್ರೀವಾದಿ ಚಿಂತನೆಗಳೂ ತ್ವರಿತ ಗತಿಯಲ್ಲಿ ಬೇರೆ ಬೇರೆ ಪ್ರಶ್ನೆಗಳನ್ನು ಬೇರೆ ಬೇರೆ ಬಗೆಗಳಲ್ಲಿ ವಿಶ್ಲೇಷಿಸುವ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ಸಾಗಿವೆ. ಈ ಮಾತು ಸ್ತ್ರೀವಾದಿ ಭಾಷಾಚಿಂತನೆಗೂ ಅನ್ವಯಿಸುತ್ತದೆ. ಪರಿಹಾರಗಳು ವಿಶ್ಲೇಷಣೆಯ ನೆಲೆಗಳನ್ನು ಅವಲಂಬಿಸುವುದರಿಂದ ವಿಶ್ಲೇಷಣೆಯಲ್ಲಿ ಆಗುವ ಬದಲಾವಣೆಗಳು ಪರಿಹಾರಗಳ ಸ್ವರೂಪವನ್ನು ಬದಲಿಸಿವೆ. ಸ್ತ್ರೀವಾದಿ ಭಾಷಾಚಿಂತನೆಗಳು ಭಾಷೆ ಮತ್ತು ಹೆಣ್ಣಿನ ಸಂಬಂಧದಲ್ಲಿ ಹೆಣ್ಣು ಅನುಭವಿಸುತ್ತಿರುವ ಇಕ್ಕಟ್ಟಿನಿಂದ ಹೊರಬರಲು ಪರಿಹಾರಗಳನ್ನು ಮಂಡಿಸಿವೆ. ಈ ಪರಿಹಾರಗಳಲ್ಲಿ ನಾವು ಈಗಾಗಲೇ ಚರ್ಚಿಸಿದ ಭಾಷಾಸುಧಾರಣೆಗಳೂ ಸೇರಿವೆ. ಇದಲ್ಲದೆ, ಒಂದು ಅತಿಯಲ್ಲಿ ಹೆಂಗಸಿಗಾಗಿಯೇ ಪ್ರತಿಭಾಷೆಯೊಂದನ್ನು ಸೃಷ್ಟಿಸುವ ಪ್ರಸ್ತಾವವೂ ಮಂಡಿತವಾಗಿದೆ. ಅಷ್ಟೇ ಅಲ್ಲ. ಆ ದಿಕ್ಕಿನಲ್ಲಿ ಪ್ರಯತ್ನಗಳು ನಡೆದು ಲಾಡಾನ್ ಎಂಬ ಪ್ರತಿಭಾಷೆಯನ್ನು ರೂಪಿಸಲಾಗಿದೆ. ಕಲ್ಪಿತ ಭಾಷೆಗಳು ಎದುರಿಸುವ ಎಲ್ಲ ಇಕ್ಕಟ್ಟುಗಳೂ ಲಾಡಾನ್‌ಗೆ ಇದೆ. ಇದು ಯಾವ ಹೆಂಗಸಿಗೂ ‘ಮೊದಲ ಭಾಷೆ’ಯಾಗಲಾರದು. ಎರಡನೆಯ ಭಾಷೆಯಾಗಿ ಲಾಡಾನ್ ಅನ್ನು ಕಲಿಯುವ ಪ್ರಸಂಗದಲ್ಲಿ ಸಾಮಾನ್ಯ ಭಾಷಾಶಾಸ್ತ್ರವು ಮಂಡಿಸುವ ದ್ವಿಭಾಷಿಕತೆಯ ಇಕ್ಕಟ್ಟುಗಳು ಇಲ್ಲಿಯೂ ತಲೆ ಎತ್ತುತ್ತವೆ. ಪ್ರತಿಯೊಬ್ಬ ಹೆಂಗಸೂ ತಾನು ಕಲಿತ ಮೊದಲ ಭಾಷೆಯ ಸಂದರ್ಭದಲ್ಲಿ ಮೈಗೂಡಿಸಿಕೊಂಡ ಲಿಂಗತಾರತಮ್ಯದ ಇಕ್ಕಟ್ಟುಗಳಿಂದ ಬಿಡುಗಡೆಯನ್ನು ಎರಡನೆಯ ಭಾಷೆಯ ಬಳಕೆಯಿಂದ ಪಡೆಯಬಹುದೇ? ಇದು ಸ್ತ್ರೀವಾದಿ ಭಾಷಾಚಿಂತನೆ ಎದುರಿಸುವ ಪ್ರಶ್ನೆಯಾಗಿದೆ. ಅಲ್ಲದೆ, ಕಲ್ಪಿತ ಭಾಷೆಗಳು ಒಂದಲ್ಲ ಒಂದು ಮಾನವ ಸಹಜ ಭಾಷೆಯ ರಾಚನಿಕ ಮಾದರಿಯನ್ನು ಅನುಸರಿಸುವುದು ಅನಿವಾರ್ಯ. ಹೀಗಾಗಿ, ಲಾಡಾನ್ ನಂತಹ ಕಲ್ಪಿತ ಭಾಷೆ ಜಾಗತಿಕ ನೆಲೆಯಲ್ಲಿ ಭಿನ್ನ ಸಂಸ್ಕೃತಿಗಳ ಭಿನ್ನ ಭಾಷೆಗಳ ಚೌಕಟ್ಟಿನ ಹೆಂಗಸರಿಗೆ ಬೇರೆಯ ಸಮಸ್ಯೆಗಳನ್ನು ತರಬಹುದು. ಇದೆಲ್ಲವೂ ಮುಂದಿನ ದಿನಗಳಲ್ಲಿ ಸ್ಪಷ್ಟಗೊಳ್ಳಬೇಕಾದ ಸಂಗತಿಗಳಾಗಿವೆ.

ಪ್ರತಿಭಾಷೆಯ ಪರಿಹಾರವನ್ನು ಕೈಬಿಟ್ಟು ಈಗಿರುವ ಭಾಷೆಗಳ ಸಾಧ್ಯತೆಯಲ್ಲೇ ಹೆಣ್ಣುತನದ ಶೋಧನೆ ಸಾಧ್ಯವೇ ಎಂಬ ಇನ್ನೊಂದು ನೆಲೆ ಕೂಡಾ ಮಂಡಿತವಾಗುತ್ತಿದೆ. ಇದು ಎಲ್ಲ ಭಾಷೆಗಳಿಗೂ ಸಮಾನ ಪರಿಹಾರವನ್ನು ಹುಡುಕುವ ಯತ್ನವಲ್ಲ. ಆಯಾ ಸಂಸ್ಕೃತಿಗಳಲ್ಲಿ ಭಾಷೆಗಳ ಹೆಣ್ಣುಸಾಧ್ಯತೆಗಳನ್ನು ಆಯಾ ಸಮುದಾಯದ ಹೆಂಗಸರೇ ಕಂಡುಕೊಳ್ಳಬೇಕಾಗುತ್ತದೆ. ಇದು ಭಾಷೆಗೆ ಸಂಬಂಧಿಸಿದಂತೆ ಮಾತ್ರ ಅನ್ವಯಿಸುವ ಪರಿಹಾರವಾಗಿರದೆ, ಇಪ್ಪತ್ತೊಂದನೆಯ ಶತಮಾನದಲ್ಲಿ ಸಾಂಸ್ಕೃತಿಕ ಸಾರ್ವತ್ರಿಕತೆ ಮತ್ತು ಸಾಂಸ್ಕೃತಿಕ ವಿಶಿಷ್ಟತೆಗಳ ಕದನವನ್ನು ನಿಲ್ಲಿಸಲು ಇರುವ ಒಂದು ಮುಖ್ಯ ವಿಧಾನವಾಗಿವೆ.

ಸ್ತ್ರೀವಾದಿ ಭಾಷಾಚಿಂತನೆಗಳು ಚಾರಿತ್ರಿಕ ಕಾರಣಗಳಿಂದಾಗಿ ಯುರೋಪು ಕೇಂದ್ರಿತವಾಗಿವೆ. ಯೂರೋಪುಕೇಂದ್ರಿತ ಚಿಂತನೆಗಳೆಲ್ಲವೂ ಕಳೆದ ಶತಮಾನದ ಉತ್ತರಾರ್ಧದಲ್ಲಿ ಪ್ರಶ್ನಿತವಾಗಿವೆ. ಏಕೆಂದರೆ, ಆ ಚಿಂತನೆಗಳು ತಮ್ಮ ಮಾದರಿಯನ್ನೇ ಜಾಗತಿಕ ಮಾದರಿ ಎಂದು ಬಿಂಬಿಸತೊಡಗಿದ್ದವು. ಸ್ತ್ರೀವಾದವೂ ಕೂಡಾ ಇಂಥ ಪ್ರಶ್ನೆಗಳನ್ನು ಎದುರಿಸಿದೆ. ‘ಹೆಂಗಸರು’ ಎಂಬ ಜಾಗತಿಕ ಸಾಮಾನ್ಯ ಪರಿಕಲ್ಪನೆ ತನಗೇ ಅರಿವಿಲ್ಲದಂತೆ ಯೂರೋಪಿನ ಪ್ರಜ್ಞಾವಂತ ಹೆಂಗಸರ ಮಾದರಿಯನ್ನು ಸಾರ್ವತ್ರೀಕರಿಸಿದೆ ಎಂಬ ಟೀಕೆಗಳು ಎದುರಾದವು. ಸ್ತ್ರೀವಾದವು ಈ ಪ್ರಶ್ನೆಗಳನ್ನು ಹೇಗೆ ಎದುರಿಸಿದೆ ಎಂಬುದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಆದರೆ, ಸ್ತ್ರೀವಾದಿ ಭಾಷಾಚಿಂತನೆಗಳು ಇಂಥದೇ ಇಕ್ಕಟ್ಟನ್ನು ಎದುರಿಸಿವೆ. ವಸಾಹತು ಆಡಳಿತದ ದೇಶಗಳ ಹೆಂಗಸರು, ಸರ್ವಾಧಿಕಾರಿ ಆಡಳಿತವಿದ್ದ ದೇಶಗಳ ಹೆಂಗಸರು, ಮುಖ್ಯ ಪ್ರವಾಹಕ್ಕೆ ಸೇರದೆ ಸಮುದಾಯಗಳಲ್ಲಿ ಬದುಕುತ್ತಿರುವ ಬುಡಕಟ್ಟುಗಳ ಹೆಂಗಸರು, ನಿರಂತರ ವಲಸೆಯಲ್ಲೇ ಇರಬೇಕಾಗಿ ಬಂದಿರುವ ಸಮುದಾಯಗಳ ಹೆಂಗಸರು, ಅಂತರ್ ಯುದ್ಧದ ಪರಿಣಾಮವಾಗಿ ದೇಶಾಂತರಗಳಲ್ಲಿ ನಿರ್ವಸಿತರಾಗುತ್ತಿರುವ ಹೆಂಗಸರು -ಹೀಗೆ ಹೆಣ್ಣು ಸಮುದಾಯವೇ ಹಲವು ಛಿದ್ರಗಳಲ್ಲಿ ಕಾಣತೊಡಗಿದೆ. ಇವರೆಲ್ಲರ ಭಾಷಿಕ ಸಮಸ್ಯೆಗಳು ಒಂದೇ ಬಗೆಯಲ್ಲಿ ಇರಲಾರವು. ಕೆಲವು ಕಡೆಗಳಲ್ಲಿ ಜಾಗತಿಕ ನೆಲೆಯ ಭಾಷಿಕ ಚಿಂತನೆಗಳ ಉಪಯುಕ್ತತೆ ಕಂಡು ಬಂದರೂ, ಆಯಾ ಸಂದರ್ಭಗಳ ಸಮಸ್ಯೆಗಳನ್ನು ಒಳಗೊಳ್ಳುವ ಚಿಂತನಾಕ್ರಮದಿಂದ ಮಾತ್ರ ತಕ್ಕ ಪರಿಹಾರಗಳು ಸಾಧ್ಯ.

ಹೀಗೆಂದ ಮಾತ್ರಕ್ಕೆ ತಾತ್ತ್ವಿಕ ನೆಲೆಯಲ್ಲಿ ಭಾಷಿಕ ಚಿಂತನೆಗಳು ನಡೆಯಬಾರದೆಂದಲ್ಲ. ಇಂಥ ತಾತ್ತ್ವಿಕ ಚಿಂತನೆಗಳು ಯುರೋಪಿನ ಜ್ಞಾನೋದಯದ ಅವಧಿಯಲ್ಲಿ ಮಾಡಿದ ತಪ್ಪುಗಳನ್ನು ಈಗಲೂ ಪುನರಾವರ್ತಿಸ ಬಾರದು. ಅದೇ ಹಳೆಯ ಮಾದರಿಗೆ ಕಟ್ಟುಬಿದ್ದರೆ, ಒಂದೋ ಹೆಣ್ಣು ಸಮುದಾಯದ ಎಷ್ಟೋ ವಲಯಗಳು ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ನಿಲುವಿಗೆ ಬರಬಹುದು. ಇಲ್ಲವೇ ತಮ್ಮದೇ ಆದ ಬಗೆಯಲ್ಲಿ ಜಾಗತಿಕ ನೆಲೆಯ ಭಾಷಾಚಿಂತನೆಗಳಿಗೆ ಪ್ರತಿರೋಧಗಳನ್ನು ಒಡ್ಡಬಹುದು. ಇಂಥ ಇಕ್ಕಟ್ಟಿನಿಂದ ಹೊರಬರಬೇಕಾದರೆ ತಾತ್ತ್ವಿಕ ನೆಲೆಯಲ್ಲಿ ನಡೆಯುವ ಭಾಷಾ ಚಿಂತನೆಗಳು ತಮ್ಮ ಏಕರೂಪಿ ಚೌಕಟ್ಟನ್ನು ಬಿಟ್ಟುಕೊಡಬೇಕಾಗಿದೆ; ಮತ್ತು ಎಲ್ಲ ವಲಯಗಳ ಹೆಂಗಸರ ಸಮಸ್ಯೆಗಳ ಸ್ವರೂಪವನ್ನು ಬಿಡಿಯಾಗಿಯೇ ಪರಿಗಣಿಸಬೇಕಾಗಿದೆ.

ಜಾಗತಿಕವಾಗಿ ಜ್ಞಾನವಲಯಗಳು ಹದಿನೆಂಟನೆಯ ಶತಮಾನದ ನಂತರ ಕಟ್ಟಿಕೊಂಡ ‘ಮಾನವಿಕ’ ಎಂಬ ಸಾಮಾನ್ಯ ಚೌಕಟ್ಟು ನಿಧಾನವಾಗಿ ಒಡೆದು ಸಂಪರ್ಕವಿಲ್ಲದ ಹಲವು ಜ್ಞಾನ ವಲಯಗಳಾಗಿ ಬದಲಾದವು. ಇದು ಜನ ಸಮುದಾಯದ ಅಗತ್ಯಕ್ಕೆ ತಕ್ಕಂತೆ ನಡೆದ ಬದಲಾವಣೆಗಳಲ್ಲ. ಆದರೆ, ಕಳೆದ ಐವತ್ತು ವರ್ಷಗಳಲ್ಲಿ ಈ ಒಡೆತವನ್ನು ಬಿಟ್ಟು ಮರಳಿ ಹೊಸ ಚಿಂತನಾಕ್ರಮವೊಂದನ್ನು ಕಟ್ಟುವ ಯತ್ನಗಳು ನಡೆಯುತ್ತಿವೆ. ಆದರೆ, ಇದು ಹಳೆಯ ಮಾನವಿಕವಲ್ಲ. ಏಕೆಂದರೆ, ಹಳೆಯ ಮಾನವಿಕದಲ್ಲಿ ಮಾನವ ಮಾತ್ರ ಇದ್ದು, ಆ ಮಾನವ ಕೇವಲ ಗಂಡಸಾಗಿದ್ದ. ಈಗ ಈ ಎರಡೂ ಆಪಾಯಗಳಿಂದ ಪಾರಾಗಿರುವ ಹೊಸ ಚಿಂತನಾಕ್ರಮದತ್ತ ಹೆಜ್ಜೆಗಳನ್ನು ಇಡಲಾಗುತ್ತಿದೆ. ಸ್ತ್ರೀವಾದಿ ಭಾಷಾ ಚಿಂತನೆಗಳೂ ಕೂಡಾ ಈ ಬಗೆಯ ಹೊಸ ಹಾದಿಯಲ್ಲಿ ಮುನ್ನಡೆಯ ಬೇಕಾಗಿದೆ.