ಭಾಷೆಯಲ್ಲಿ ಹೆಂಗಸನ್ನು ಪ್ರತಿನಿಧಿಸುವ ಮತ್ತು ವರ್ಗೀಕರಿಸುವ ಬಗೆಗೆ ನಡೆದಿರುವ ಅಧ್ಯಯನಗಳ ಸರಣಿಯಲ್ಲಿ ಡೇಲ್ ಸ್ಪೆಂಡರ್ ಬರೆದ Man made language ತೀರಾ ಈಚಿನದು, ಮತ್ತು ಬಹುಮಟ್ಟಿಗೆ ವ್ಯಾಪಕ ಓದಿಗೆ ತೆರೆದುಕೊಂಡಿರುವಂಥದು. ಭಾಷೆಯನ್ನು ಕುರಿತ ಚರ್ಚೆಗಳು ಸ್ತ್ರೀವಾದಿಗಳ ತಾತ್ತ್ವಿಕ ಮತ್ತು ರಾಜಕೀಯ ನೆಲೆಗಳಿಗೆ ಅತ್ಯಗತ್ಯವಾಗಿವೆ. ತಾತ್ವಿಕವಾಗಿ ಸಿದ್ಧಾಂತ, ಜಂಡರ್ ನಿಗದೀಕರಣಗಳ  ನೆಲೆಯಲ್ಲಿ ಸ್ಪೆಂಡರ್ ಚರ್ಚಿಸಿದ್ದಾಳೆ. ಲೈಂಗಿಕ ಭಿನ್ನತೆಗಳು ತಮ್ಮದೇ ಆದ ವ್ಯವಸ್ಥೆಯನ್ನು ಹೊಂದಿದ್ದು ಇತರ ಸಾಮಾಜಿಕ ಚಟುವಟಿಕೆಗಳ ಮೇಲೆ ವಿಶಿಷ್ಟ ಪರಿಣಾಮ ಬೀರಬಲ್ಲ ಸಂಗತಿಗಳೆಂದು ಪರಿಗಣಿಸಬೇಕೇ ಹೊರತು, ಕೇವಲ ‘ದೃಷ್ಟಿಕೋನಗಳು’ ಎಂದು ನೋಡಬಾರದು ಎಂಬುದು ಸ್ತ್ರೀವಾದಿಗಳ ನಿಲುವು. ಇನ್ನು ರಾಜಕಾರಣದ ನೆಲೆಯಲ್ಲಿ ಇವರ ಚರ್ಚೆಗಳು, ಭಾಷಿಕ ಅಭಿವ್ಯಕ್ತಿಯು ಹೆಂಗಸರನ್ನು ಕೀಳುಗೈಯುವ ಮತ್ತು ಅವರನ್ನು ಹೊರಗಿಡುವ ಪ್ರಕ್ರಿಯೆಯನ್ನು ಪ್ರಶ್ನಿಸುತ್ತವೆ. ಈ ಮೂಲಕ ತಮ್ಮ ರಾಜಕೀಯ ಕಾರ್ಯಯೋಜನೆಗೆ ಬೇಕಾದ ಬುನಾದಿಯನ್ನು ಸ್ತ್ರೀವಾದಿಗಳು ಕಟ್ಟಿಕೊಂಡಿದ್ದಾರೆ. ಹಾಗಾಗಿ, ನಾವು ಡೇಲ್ ಸ್ಪೆಂಡರ್ ಕೃತಿಯ ಮಹತ್ವವನ್ನು ಅಲ್ಲಗಳೆಯುವುದಿಲ್ಲ. ಆಕೆ ಒದಗಿಸಿರುವ ದತ್ತಾಂಶಗಳು ಅತ್ಯಗತ್ಯವಾಗಿದ್ದವು. ಆದರೆ, ಆಕೆಯ ವಿಶ್ಲೇಷಣೆಯ ಕೆಲವು ನೆಲೆಗಳು ಮತ್ತು ಆಕೆ ತಲುಪುವ ಕೆಲವು ನಿರ್ಣಯಗಳು ಚರ್ಚೆಯನ್ನು ಬಯಸುತ್ತವೆ. ಏಕೆಂದರೆ, ಡೇಲ್ ಸ್ಪೆಂಡರ್ ಅನುಸರಿಸಿದ ವಿಧಾನವು ಈವರೆಗೆ ಭಾಷೆ ಮತ್ತು ವರ್ಗಗಳ ಸಂಬಂಧದಲ್ಲಿ ನಡೆದ ಚರ್ಚೆಗಳೊಳಗೆ ಹುದುಗಿರುವ ಹಲವು ಸಮಸ್ಯೆಗಳನ್ನು ಮರಳಿ ಹುಟ್ಟಿಹಾಕುವಂತಿದೆ. ಈ ಲೇಖನದಲ್ಲಿ ಈ ನೆಲೆಯ ಚರ್ಚೆಯನ್ನು ಬೆಳೆಸಲಾಗಿದೆ. ಇದರಲ್ಲಿ ಮೂರು ಮುಖ್ಯ ಭಾಗಗಳಿವೆ. ಮೊದಲ ಭಾಗದಲ್ಲಿ ಆಕೆ ಹೇಳುವ ‘ಗಂಡಸು ಕಟ್ಟಿದ್ದು’ಎಂಬ ಪರಿಕಲ್ಪನೆಯನ್ನು ಕುರಿತು ಚರ್ಚಿಸಿದ್ದೇವೆ. ಹೀಗೆ ಹೇಳುವುದರಿಂದ ಉಂಟಾಗುವ ಸಮಸ್ಯೆಗಳನ್ನು ಗಮನಿಸಲಿದ್ದೇವೆ. ಎರಡನೆಯ ಭಾಗದಲ್ಲಿ, ಭಾಷೆಯನ್ನು ಕುರಿತ ಆಕೆಯ ನಿಲುವನ್ನು ಚರ್ಚಿಸುತ್ತೇವೆ. ಇಲ್ಲಿ ಭಾಷೆ ಒಂದು ವ್ಯವಸ್ಥೆ ಮತ್ತು ಸಂಕಥನ ಎಂದು ಗುರುತಿಸುವುದು ಸ್ತ್ರೀವಾದಿ ಚಿಂತನೆಗಳಿಗೆ ಅತ್ಯಗತ್ಯವೆಂಬುದನ್ನು ವಿವರಿಸಲಿದ್ದೇವೆ. ಕೊನೆಗೆ ಮೂರನೆಯ ಭಾಗದಲ್ಲಿ, ಒಂದು ಪರ್ಯಾಯ ವಿಶ್ಲೇಷಣಾ ಚೌಕಟ್ಟನ್ನು ಮಂಡಿಸುತ್ತಾ ಈ ಬದಲಾದ ಚೌಕಟ್ಟಿನ ಪರಿಣಾಮಗಳನ್ನು ಹೇಳಲಿದ್ದೇವೆ.

ಗಂಡಸು ಕಟ್ಟಿದ್ದು ಎಂಬ ಪರಿಕಲ್ಪನೆ

ಡೇಲ್ ಸ್ಪೆಂಡರ್ ಹೇಳುವಂತೆ ಭಾಷೆಯಲ್ಲಿ ಹೆಂಗಸು ಅಧೀನಳ ಪಾತ್ರವನ್ನು ವಹಿಸುತ್ತಿರುವುದಕ್ಕೆ ಹೆಂಗಸು ಭಾಷೆಯೊಡನೆ ನಕಾರಾತ್ಮಕ ಸಂಬಂಧ ಹೊಂದಿರುವುದೇ ಕಾರಣ. ಹೊಸ ಮತ್ತು ಸಕಾರಾತ್ಮಕ ಪದಗಳನ್ನು ಹುಟ್ಟುಹಾಕುವುದರಿಂದ ಭಾಷೆಯೊಡನೆ ಹೆಂಗಸು ಹೊಂದಿರುವ ಅಧೀನತೆಯ ನೆಲೆಯನ್ನು ಅಳಿಸಿ ಹಾಕುವುದು ಸಾಧ್ಯವಿಲ್ಲ.  ಏಕೆಂದರೆ, ‘ಸಮಸ್ಯೆ ಇರುವುದು ಪದಗಳನ್ನು ನಿಯಂತ್ರಿಸುತ್ತಿರುವ ಸಕಾರಾತ್ಮಕ, ಇಲ್ಲವೇ ನಕಾರಾತ್ಮಕ ನೆಲೆಯ ಅರ್ಥದ ನಿಯಮಗಳಲ್ಲಿದೆಯೇ ಹೊರತು ನೇರವಾಗಿ ಪದಗಳೇ ವೈರಿಗಳಲ್ಲ’ .  ತಿಳಿದೋ ತಿಳಿಯದೆಯೋ ‘ಗಂಡಸರು ತಮ್ಮನ್ನು ಕೇಂದ್ರದಲ್ಲಿರಿಸುವ ಮತ್ತು ಪ್ರಧಾನಗೊಳಿಸುವ ನಿಯಮಗಳನ್ನು ರೂಪಿಸಿದ್ದಾರೆ;  ಆ ನಿಟ್ಟಿನಿಂದ ಲೋಕವನ್ನು ವರ್ಗೀಕರಿಸಲು ಹೊರಟು ಪಿತೃಪ್ರಧಾನ ವ್ಯವಸ್ಥೆಯನ್ನು ಪ್ರತಿನಿಧಿಸುವ ಸಂಕೇತಗಳ ಜಾಲವನ್ನು ರಚಿಸಿದ್ದಾರೆ.’

ಭಾಷೆಯೊಡನೆ ಹೆಂಗಸಿಗಿರುವ ನಕಾರಾತ್ಮಕ ಸಂಬಂಧವನ್ನು ವಿವರಿಸುವಾಗ ಡೇಲ್ ಸ್ಪೆಂಡರ್, ಸಮಾಜವಾದಿ ಸ್ತ್ರೀವಾದವು ತತ್ತ್ವ ಮತ್ತು ಭಾಷೆಗಳನ್ನು ಚರ್ಚಿಸುವ ಚೌಕಟ್ಟಿನಿಂದ ಪ್ರಭಾವಿತಳಾಗಿದ್ದಾಳೆ. ಈ ಚೌಕಟ್ಟು ಸಾಮಾಜಿಕ ಆಚಾರಗಳು ಮತ್ತು ಪ್ರಾತಿನಿಧ್ಯ ನೀಡುವ ವ್ಯವಸ್ಥೆಗಳು ಹೆಣ್ಣಿನ ಶೋಷಣೆಯನ್ನು ಮಾಡುತ್ತಿರುವುದನ್ನು ವಿವರಿಸಲು ಯತ್ನಿಸುತ್ತದೆ.  ವರ್ಗ ಶತೃತ್ವವನ್ನು ಒಪ್ಪಿಕೊಳ್ಳುವ ಸಾಮಾಜಿಕ ರಚನೆಯ ವ್ಯಾಪ್ತಿಯಲ್ಲಿ ಈ ಚರ್ಚೆಗಳು ನಡೆದು ಬಂದಿವೆ. ಸಾಮಾಜಿಕ ವ್ಯಾಖ್ಯಾನಗಳನ್ನು ರಚಿಸುವಲ್ಲಿ ಮತ್ತು ಕರ್ತೃವಿನ ಸ್ಥಾನವನ್ನು ನಿರ್ದೇಶಿಸುವಲ್ಲಿ ಭಾಷೆಗೆ ಮಹತ್ವದ ಪಾತ್ರವಿದೆ ಎಂದು ಈ ಚರ್ಚೆ ನಂಬುತ್ತದೆ. ಈ ವಿಚಾರಗಳು ಹುಟ್ಟಿಕೊಂಡ ಸಂದರ್ಭ ಮತ್ತು ಅವು ನಿರ್ವಹಿಸಿದ ಕೆಲಸಗಳನ್ನು ಡೇಲ್ ಸ್ಪೆಂಡರ್ ಗಮನಿಸುತ್ತಿಲ್ಲ. ಭಾಷೆಯ ಲಿಂಗತಾರತಮ್ಯ ನೆಲೆಯನ್ನು ಮುಂದಿಡಲು ಯತ್ನಿಸುವಾಗ ಆಕೆ ಸಮಾಜವಾದದಲ್ಲಿ ಭಾಷೆ ಮತ್ತು ತತ್ತ್ವಗಳ ಬಗ್ಗೆ ನಡೆದಿರುವ ಚಿಂತನೆಗಳ ಬೆಳವಣಿಗೆಯನ್ನು ಮರೆತುಬಿಟ್ಟಿದ್ದಾಳೆ.

ಕೆಲವು ಕಡೆ ಡೇಲ್ ಸ್ಪೆಂಡರ್ ಲೈಂಗಿಕತೆಯ ಭಾವವನ್ನು ಕಟ್ಟುವಲ್ಲಿ ಮತ್ತು ವಾಸ್ತವವನ್ನು ರಚಿಸುವಲ್ಲಿ ಭಾಷೆಗಿರುವ ಮಹತ್ವವನ್ನು ಎತ್ತಿ ಹೇಳುತ್ತಾಳೆ. ಮರುಗಳಿಗೆಯಲ್ಲೇ ಭಾಷೆ ಒಂದು ಸಾಮಾಜಿಕ ವರ್ಗದ, ಅಂದರೆ ಗಂಡು ಮತ್ತು ಹೆಣ್ಣಿನ ಹಿತಾಸಕ್ತಿಗಳನ್ನು ಬಿಂಬಿಸುವ ಅಭಿವ್ಯಕ್ತಿಗೆ ಕೇವಲ ವಾಹಕವಾಗಿ ಮಾತ್ರ ತೋರುತ್ತದೆ ಎಂದೂ ಹೇಳುತ್ತಾಳೆ. ಭಾಷೆಯು ಗಂಡು ಹೆಣ್ಣುಗಳ ಸ್ಥಾನಗಳನ್ನು ತಾನೇ ರಚಿಸುತ್ತದೆ; ಆದರೆ ಗಂಡಸು ಭಾಷೆಗಿಂತಲೂ ಮೊದಲಿನವನಾಗಿದ್ದು ತನ್ನ ಹಿತಾಸಕ್ತಿಯನ್ನು ಸಾಧಿಸಿಕೊಳ್ಳಲು ಅದನ್ನು ಬೇಕಾದ ಹಾಗೆ ಕಟ್ಟಿದ್ದಾನೆ. ಡೇಲ್ ಸ್ಪೆಂಡರ್‌ಳ ವಾದಗಳು ಮಾರ್ಕ್ಸ್‌ವಾದದ ಚೌಕಟ್ಟಿನಲ್ಲಿ ಮಂಡಿಸಲಾದ ನಿಲುವುಗಳನ್ನು ಮರುಸ್ಥಾಪಿಸುತ್ತಿವೆ. ಈ ನಿಲುವುಗಳು ಸಾಮಾಜಿಕ ರಚನೆಯೊಳಗೆ ತತ್ತ್ವಕ್ಕೆ, ಮತ್ತದರ ಪರಿಣಾಮಕ್ಕೆ ಯಾವ ಮಹತ್ವವನ್ನೂ ನೀಡುವುದಿಲ್ಲ. ಇಡೀ ಸಮಾಜವನ್ನು ಪರಸ್ಪರ ವಿರುದ್ಧ ಹಿತಾಸಕ್ತಿಗಳಿರುವ ಎರಡು ಪ್ರಧಾನ ವರ್ಗಗಳ ರಚನೆ ಎಂದು ಪರಿಗಣಿಸುತ್ತದೆ. ಈ ಎರಡೂ ಪ್ರಧಾನ ವರ್ಗಗಳು ಭಾಷೆಯೊಡನೆ ಬೇರೆ ಬೇರೆ ಬಗೆಯ ಸಂಬಂಧಗಳನ್ನು ಹೊಂದಿರುತ್ತವೆ. ಡೇಲ್ ಸ್ಪೆಂಡರ್ ವಿವರಣೆಯಲ್ಲಿ ವರ್ಗವಿಭಜನೆಯ ಜಾಗದಲ್ಲಿ ಲಿಂಗವಿಭಜನೆ ನೆಲೆಗೊಂಡಿದೆ. ತನ್ನ ಕೃತಿಯ ಮೊದಲರ್ಧದಲ್ಲಿ ಹೆಂಗಸರು ಗಂಡಸರಿಗಿಂತ ಭಿನ್ನವಾಗಿ ಮಾತಾಡುತ್ತಾರೆಂದು ಸಮರ್ಥಿಸಲು ನಡೆಸಿದ ಅಧ್ಯಯನಗಳ ಸಿಂಧುತ್ವವನ್ನು ಸಂದೇಹದಿಂದ ನೋಡುತ್ತಾಳೆ. ಆ ಬಳಿಕ ಭಾಷೆಯಲ್ಲಿ ಹೆಂಗಸಿಗಿರುವ ನಕಾರಾತ್ಮಕ ಸಂಬಂಧದ ಚಿಂತನೆಯನ್ನು ಮುಂದಿಟ್ಟು ಭಾಷಯಲ್ಲಿರುವ ಲಿಂಗತಾರತಮ್ಯದ ನೆಲೆಗಳನ್ನು ಯಜಮಾನಿಕೆಯ ಚೌಕಟ್ಟಿನಲ್ಲಿ ವಿವರಿಸುತ್ತಾಳೆ. ವ್ಯಾಕರಣದ ನಿಲುವುಗಳು, ಲಿಂಗತಾರತಮ್ಯದ ನುಡಿಗಟ್ಟುಗಳು, ಮತ್ತು ಇವೆಲ್ಲವೂ ಮಾತಾಡುವವರ ಮೇಲೆ ಬೀರುವ ಪರಿಣಾಮಗಳು – ಮುಂತಾದವುಗಳನ್ನು ಮೇಲೆ ಹೇಳಿದಂತೆಯೇ ವಿವರಿಸಿದ್ದಾಳೆ. ಗಂಡಸರು ನೀಡಿದ ವ್ಯಾಖ್ಯಾನಗಳ ಮತ್ತು ಅರ್ಥಗಳ ಪರಿಣಾಮಗಳಿಂದಾಗಿಯೇ ‘‘ಗಂಡು ಅರ್ಥದ ನಿಯಮಗಳು’’ಮೇಲುಗೈ ಪಡೆದಿವೆ ಎಂಬುದು ಡೇಲ್ ಸ್ಪೆಂಡರ್‌ಳ ವಿವರಣೆಯಾಗಿದೆ.  ಮಾರ್ಕ್ಸ್‌ವಾದದ ಪ್ರಕಾರ ಆಳುವವರ್ಗಕ್ಕೆ ವಾಸ್ತವವನ್ನು ವ್ಯಾಖ್ಯಾನಿಸುವ ಅಧಿಕಾರವಿರುತ್ತದೆ. ಈಕೆಯ ಚಿಂತನೆಯಲ್ಲಿ ಅಂಥ ಅಧಿಕಾರ ಗಂಡಸರಿಗಿದೆ. ಹಾಗಾಗಿ, ಭಾಷೆಯ ನಿಯಮಗಳು ಗಂಡಸರ ಅರ್ಥಗಳನ್ನೇ ಬಿಂಬಿಸುತ್ತವೆ. ಅಧಿಕಾರ ವಂಚಿತ ದುಡಿಯುವ ವರ್ಗದಂತೆ, ಹೆಂಗಸರು ಕೂಡಾ ಶೋಷಿತರು. ಗಂಡುಭಾಷೆಯಿಂದ ವ್ಯಾಖ್ಯಾನಕ್ಕೊಳಗಾಗುವವರು. ತಮ್ಮದೇ ಆದ ಭಾಷೆಯನ್ನು ಕಟ್ಟಲಾರದವರು. ಹೆಂಗಸರು ಬೇರೆಯೇ ಭಾಷೆಯನ್ನು ಮಾತಾಡುತ್ತಾರೆಂದು ಡೇಲ್ ಸ್ಪೆಂಡರ್ ಸೂಚಿಸುವುದಿಲ್ಲ. ಈ ನಿಟ್ಟಿನಲ್ಲಿ ಆಕೆಯ ಚಿಂತನೆ ಹೆರಾಲ್ಡ್ ರೋಸೆನ್ ವಾದಕ್ಕೆ ಹತ್ತಿರವಾಗಿದೆ. ಆತ ಬರ್ನ್‌ಸ್ಟಿನ್ ವಿಚಾರಗಳನ್ನು ಟೀಕಿಸಿದವನು. ಬರ್ನ್‌ಸ್ಟಿನ್ ಮಾತಾಡುವ ಎರಡು ಬಗೆಗಳನ್ನು ಪ್ರತಿಪಾದಿಸಿದ. (ಈ ಎರಡೂ ಮಾದರಿಗಳನ್ನು elaborate code ಮತ್ತು restricted code ಎನ್ನುತ್ತಾರೆ. ಸಮಾಜದ ಶ್ರೀಮಂತ ವರ್ಗವು ಮೊದಲ ಬಗೆಯಲ್ಲಿ ಮಾತಾಡಿದರೆ, ದುಡಿಯುವ ವರ್ಗವು ಎರಡನೇ ಬಗೆಯಲ್ಲಿ ಮಾತಾಡುತ್ತದೆಂದು ಬರ್ನ್‌ಸ್ಟಿನ್ ವಾದಿಸಿದ್ದಾನೆ. ಹೀಗಾಗಿ ಎರಡೂ ವರ್ಗಗಳಿಗೆ ಎರಡು ಭಿನ್ನ ವಾಸ್ತವತೆಗಳು ಇರುವುದಾಗಿ ಬರ್ನ್‌ಸ್ಟಿನ್ ಪ್ರತಿಪಾದಿಸಿದ. ಒಂದು ವರ್ಗ ವಾಸ್ತವವನ್ನು ವ್ಯಾಖ್ಯಾನಿಸಿದರೆ, ಇನ್ನೊಂದು ವರ್ಗ ತನ್ನ ನುಡಿಗಟ್ಟಿನಲ್ಲಿ ತನ್ನದೇ ಅರ್ಥಗಳನ್ನು ಹುಟ್ಟು ಹಾಕುತ್ತದೆ. ರಾಸೆನ್ ಈ ನಿಲುವನ್ನು ಖಂಡಿಸಿದ್ದಾನೆ.

ಡೇಲ್ ಸ್ಪೆಂಡರ್ ಗಂಡಸರ ಅರ್ಥಗಳು ಮೇಲುಗೈ ಪಡೆದಿರುವುದನ್ನು ಸೂಚಿಸುತ್ತಾಳೆ.  ಇದರಿಂದ ಹೆಂಗಸರ ವ್ಯಾಖ್ಯಾನಗಳು ಯಾರಿಗೂ ಕೇಳದಂತಾಗಿದೆ ಎನ್ನುತ್ತಾಳೆ.  ಹೆರುವುದನ್ನು ಹೆಂಗಸರು ಪಡೆಯಬಹುದಾದ ಅತ್ಯಂತ ತೃಪ್ತಿಕರ ಅನುಭವವೆಂದು ಗಂಡಸರು ವ್ಯಾಖ್ಯಾನಿಸುತ್ತಾರೆ. ಹೀಗೆ ಹೇಳಿದಾಗ ನೋವು ಮತ್ತು ಭಯಗಳ ಉಲ್ಲೇಖವೇ ಅಳಿಸಿಹೋಗುತ್ತದೆ. ಹೆರುವ ಬಗ್ಗೆ ಹೆಂಗಸು ಮಾತಾಡಿದರೆ, ನೋವು ಮತ್ತು ಸಂಕಷ್ಟಗಳನ್ನು ಆಕೆ ಮುಚ್ಚಿಡಲಾರಳು. ಭಾಷೆಯೊಳಗಿರುವ ಈ ಒಪ್ಪಂದ ಸಮಸ್ಯಾತ್ಮಕವಾಗಿದೆ. ಬೇರೆ ಬೇರೆ ಸಾಮಾಜಿಕ ಅನುಭವಗಳ ಮೂಲಕ ಬೇರೆ ಬೇರೆ ಅರ್ಥಗಳು ಹುಟ್ಟುವಂತೆ ತೋರುತ್ತದೆ. ಈ ಅನುಭವಗಳ ಭಿನ್ನತೆ ಸಾಮಾಜಿಕ ಗುಂಪುಗಳ ವಿಭಜನೆಯಿಂದ ಹುಟ್ಟಿದ್ದು. ಈ ವಿಭಜನೆ ಇದೆ ಎಂದು ಮೊದಲು ಒಪ್ಪಿಕೊಂಡರೆ, ಬಳಿಕ ಎಲ್ಲ ಭಾಷಿಕಕ್ರಿಯೆಗಳನ್ನೂ ಮತ್ತು ನುಡಿವಳಿಗಳನ್ನೂ ಈ ವಿಭಜನೆಗೆ ತಕ್ಕಂತೆ ಹೊಂದಿಸಲಾಗುತ್ತದೆ. ಅಂದರೆ ಅನುಭವಗಳಿಂದ ಅರ್ಥ ಹುಟ್ಟುತ್ತದೆ ಎಂದು ಹೇಳಿದಂತಾಯ್ತು. ವ್ಯಕ್ತಿಯ ಅನುಭವಗಳನ್ನು ಅರ್ಥ ಬಿಂಬಿಸುತ್ತದೆಂದೂ, ಭಾಷೆಯಲ್ಲಿ  ಅದು ‘ಮಂಡನೆ’ಯಾಗುವುದೆಂದೂ ತಿಳಿಯಬೇಕಾಗುತ್ತದೆ. ಒಂದು ಗುಂಪಿಗೆ ಸೇರಿದ ಅರ್ಥವನ್ನು ಕಟ್ಟಬೇಕಾಗುತ್ತದೆ. ಅಂದರೆ, ಗುಂಪುಅರ್ಥರಚನೆಯೂ ಕೂಡಾ ಸಹಜವೆನಿಸಿ ಬಿಡುತ್ತದೆ. ಈ ವಾದವನ್ನು ಒಪ್ಪುವುದು ಸಾಧ್ಯವಿಲ್ಲ. ಏಕೆಂದರೆ, ಇದು ಭಾಷೆಯನ್ನು ವಾಸ್ತವತೆಯ ವಾಹಕವಾಗುವ ಉಪಕರಣವೆಂದು ತಿಳಿಯುತ್ತದೆ. ಆಗ ಭಾಷೆಗೇ ಒಂದು ಪ್ರತ್ಯೇಕ ಅಸ್ತಿತ್ವ ಮತ್ತು ಪ್ರಭಾವವಿದೆ ಎಂಬುದನ್ನು ನಿರಾಕರಿಸಿದಂತಾಯಿತು. ಒಂದು ವೇಳೆ, ಈಗಾಗಲೇ ಇರುವ ಗುಂಪುಗಳ ಅರ್ಥಗಳನ್ನು ಹೇಳಲು ಭಾಷೆಯನ್ನು ವಾಹಕವನ್ನಾಗಿ ಬಳಸುವುದಿಲ್ಲ ಎಂದೇನಾದರೂ ವಾದಿಸಿದರೆ, ಆಗ ಅರ್ಥವೆಂಬುದು ಭಾಷಾಂಗಗಳ ಸಂಬಂಧದಿಂದ ಹುಟ್ಟುತ್ತದೆಂದು ತಿಳಿಯಬೇಕಾಗುತ್ತದೆ. ಈ ಭಾಷಾಂಗಗಳ ಸಂಬಂಧವು ಸಾಮಾಜಿಕವಾಗಿ ನಿಯಂತ್ರಣಕ್ಕೊಳಗಾಗಬಹುದೇ ಹೊರತು ಭಾಷಾಪೂರ್ವ ಸ್ಥಿತಿಯಲ್ಲೇ ಇದ್ದಿರಬಹುದಾದ ಸಾಮಾಜಿಕ ವ್ಯವಸ್ಥೆಯನ್ನು ಈ ಸಂಬಂಧ ಅಭಿವ್ಯಕ್ತಿಸುವುದಿಲ್ಲ. ಭಾಷೆಗೊಂದು ಸಾಮಾಜಿಕ ಪಾತ್ರವಿದೆ. ಅದು ಕರ್ತೃವಿನ ಸ್ಥಾನವನ್ನು ರಚಿಸುವಲ್ಲಿ ಮುಂದಾಳಾಗಿ ಕೆಲಸ ಮಾಡುತ್ತದೆ.

ಈಗ ನಮ್ಮ ಎರಡನೆಯ ಸಮಸ್ಯೆಯನ್ನು ಚರ್ಚಿಸೋಣ. ಈ ಸಮಸ್ಯೆಯು ಸಾಮಾಜಿಕ ದೃಷ್ಟಿಕೋನಗಳ ನಿರ್ಮಾಣ ಮತ್ತು ಪ್ರಸಾರಗಳ ಸ್ವರೂಪವನ್ನು ಅರಿಯಲು ವರ್ಗ ಇಲ್ಲವೇ ಗುಂಪುಗಳ ಅರ್ಥಗಳು ಎಷ್ಟು ನೆರವಾಗಬಲ್ಲವು ಎಂಬುದೇ ಆಗಿದೆ. ಒಂದು ವೇಳೆ, ಗುಂಪುಗಳು ಮೊದಲೇ ಸಿದ್ಧವಾಗಿರುತ್ತವೆ ಎಂದು ಒಪ್ಪಿಕೊಂಡರೆ, ಇಂಥ ಗುಂಪುಗಳ ರಚನೆಯಲ್ಲಿ ಮತ್ತು ಅವುಗಳಿಗೊಂದು ಕರ್ತೃಸ್ಥಾನವನ್ನು ಒದಗಿಸುವಲ್ಲಿ ತತ್ವಗಳು ವಹಿಸುವ ಪಾತ್ರವೇನೆಂಬುದು ಗೊತ್ತಾಗುವುದಿಲ್ಲ. ಹೀಗೆ ಚಿಂತಿಸುವುದರ ಇಕ್ಕಟ್ಟೇನು ಎಂಬುದು ಡೇಲ್ ಸ್ಪೆಂಡರ್ ನೀಡುವ ಹೆರುವ ಕ್ರಿಯೆಯ ಉದಾಹರಣೆಯಿಂದಲೇ ಗೊತ್ತಾಗುತ್ತದೆ.  ಹೆರುವ ಕ್ರಿಯೆಯು ಭಯ, ನೋವು, ಮತ್ತು ಆನಂದಗಳ ಸಮ್ಮಿಶ್ರಣವೆಂದು ಹೆಂಗಸರೇ ಹೇಳುತ್ತಾರೆ. ಅಲ್ಲದೆ, ಸ್ತ್ರೀವಾದಿಗಳೂ ಕೂಡಾ ಹೆರುವ ಕ್ರಿಯೆಗೆ ಘನತೆಯನ್ನು ತಂದು ಕೊಡುವ ಉದ್ದೇಶವನ್ನು ಪ್ರಕಟಿಸಿದ್ದಾರೆ. ಬಸುರಿ ಹೆಂಗಸರು ಮತ್ತು ಬಾಣಂತಿಯರ ಆರೈಕೆಯನ್ನು ಕಡೆಗಣಿಸುವುದರ ವಿರುದ್ಧ ಮತ್ತು ತಾಯ್ತನದ ಮಹತ್ವವನ್ನು ಎತ್ತಿ ಹೇಳುವುದರ ಪರವಾದ ಹೋರಾಟಗಳನ್ನು ಮಾಡತೊಡಗಿದ್ದಾರೆ. ಹೆರಿಗೆಯಾಗುವಾಗ ಹೆಂಗಸಿಗೆ ಅರಿವಳಿಕೆ ನೀಡುವ ಪದ್ಧತಿ ೧೯ನೆಯ ಶತಮಾನದಲ್ಲಿ ಜಾರಿಗೆ ಬಂತು. ಈ ಬಗ್ಗೆ ನಡೆದಿರುವ ಚರ್ಚೆಗಳನ್ನು ಗಮನಿಸಿದರೆ, ಹೆಂಗಸಿನ ನೈತಿಕ ಬದುಕಿನಲ್ಲಿ ಹೆರುವಿಕೆಯ ನೋವಿಗೆ ಗಂಡಸರು ನೀಡುತ್ತಿದ್ದ ಮಹತ್ವವನ್ನು ಗುರುತಿಸಬಹುದಾಗಿದೆ. ಹೆರಿಗೆಯ ನೋವು, ಅದನ್ನು ಕಂಡಾಗ ಆಗುವ ಭಯ ಮತ್ತು ತಳಮಳಗಳ ಬಗ್ಗೆ ಗಂಡಸರೂ ಕೂಡಾ ದನಿಗೂಡಿಸಿದ್ದಾರೆ. ಇದೆಲ್ಲವೂ ಏನನ್ನು ಹೇಳುತ್ತಿದೆ?  ಅರ್ಥ ಎಂಬುದು ಈಗಾಗಲೇ ಸಿದ್ಧಗೊಂಡ ಗುಂಪುಗಳ ಸೊತ್ತಲ್ಲ. ಅವೇನಿದ್ದರೂ, ನಿರ್ದಿಷ್ಟ ತತ್ವಗಳಿಂದಾಗಿ ಹುಟ್ಟುವಂಥವು. ಸಮಸ್ಯೆ ಇರುವುದು ಹೆರುವುದನ್ನು ಗಂಡಸರು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದರಲ್ಲಲ್ಲ. ಹೆರುವ ಕ್ರಿಯೆಯ ಮೇಲೆ ಹಿಡಿತವಿರಿಸಿಕೊಳ್ಳಲು ಹೆಂಗಸರು ಅವಕಾಶ ವಂಚಿತರಾಗಿರುವುದನ್ನು ಮಂಡಿಸುವ ಬಗೆಯಲ್ಲಿ ಸಮಸ್ಯೆ ಇದೆ. ನಾವಿಲ್ಲಿ ಪ್ರಶ್ನಿಸಬೇಕಾಗಿರುವುದು ವೃತ್ತಿಯ ನೆಲೆಯಲ್ಲಿ ಗಂಡಸರು ರೂಪಿಸಿಕೊಂಡಿರುವ ಶ್ರೇಣೀಕರಣವನ್ನು; ಅಲ್ಲದೆ, ಹೆಂಗಸನ್ನು ಒಂಟಿಯನ್ನಾಗಿಸುವ ವೈದ್ಯಕೀಯ ಪದ್ಧತಿಗಳನ್ನು ಟೀಕಿಸಬೇಕಾಗಿದೆ. ಹೆರಿಗೆ ಸಂಬಂಧದ ನಿಯಮಗಳು, ಮಗುವಿನ ಹುಟ್ಟು ಮತ್ತು ಆರೈಕೆಗಳ ಬಗ್ಗೆ ಇರುವ ನಂಬಿಕೆಗಳು – ಇವೆಲ್ಲವೂ ವಾದಗ್ರಸ್ತವಾಗಿವೆ. ಈ ಎಲ್ಲ ಸಂಗತಿಗಳಿಂದ ನಮ್ಮ ವಾದಕ್ಕೆ ಇನ್ನೊಂದು ಎಳೆ ದೊರಕುತ್ತಿದೆ. ಇದು ಅಧಿಕಾರಕ್ಕೆ ಸಂಬಂಧಿಸಿದ್ದು. ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅಧಿಕಾರ ಚಲಾಯಿಸುತ್ತದೆ ಎಂದು ನಂಬಲಾಗಿದೆ. ಇದು ಅಧಿಕಾರವು ಪ್ರವರ್ತಿಸುವ ಬಗೆಯನ್ನು ಕುರಿತ ಸರಳೀಕೃತ ನಿಲುವು. ಹಲವಾರು ಅಸಮಾನತೆಗಳ ನೆಲೆಯ ವರ್ಗೀಕರಣಗಳಿಗೆ ಒಳಗಾದ ಸಮಾಜದಲ್ಲಿ ಒಂದು ಗುಂಪಿಗಿಂತ ಹೆಚ್ಚಿನ ಅಧಿಕಾರವುಳ್ಳ ಇನ್ನೊಂದು ಗುಂಪು ಇರುವುದು ಸಹಜ. ಬಿಳಿಯರು, ಗಂಡಸರು, ಅಧಿಕಾರಿಗಳು ಇವರೆಲ್ಲ ಮೇಲುಗೈ ಪಡೆದವರೇ ಸರಿ. ಆದರೆ, ಯಜಮಾನಿಕೆ ಮತ್ತು ಅಧೀನತೆಗಳ ಸಂಬಂಧ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಹೆಂಗಸು ಹೆಂಗಸಾಗಿ  ಅಧೀನಳೆನಿಸಿಕೊಂಡರೂ, ಆಕೆ ಜನಾಂಗವಾದಿಯಾಗಿರಬಹುದು. ಯಾವುದೋ ಒಂದು ಗುಂಪು ಎಲ್ಲ ಬಗೆಯ ಯಜಮಾನಿಕೆಯನ್ನು ನೇರವಾಗಿ, ಒತ್ತಾಯ ಪೂರ್ವಕವಾಗಿ ಹೇರುತ್ತಿರುವ ಉದಾಹರಣೆಯನ್ನು ಹುಡುಕಿ ತೆಗೆಯುವುದು ಕಷ್ಟ. ಮಾರ್ಕ್ಸ್‌ವಾದಿಗಳು ಶೋಷಣೆಯ ತತ್ವಗಳನ್ನು ಹುಡುಕಿ ತೆಗೆಯಲು ಯತ್ನಿಸಿದರು. ದುಡಿಯುವ ಕಡೆ ನೇರವಾದ ಶೋಷಣೆ ಇಲ್ಲದಿರುವಾಗಲೂ ಸಾಮಾಜಿಕ ನಡಾವಳಿಗಳೂ, ಪ್ರತಿನಿಧೀಕರಣ ವ್ಯವಸ್ಥೆಗಳೂ ಹೇಗೆ ಶೋಷಣೆಯ ತತ್ವಗಳಿಂದ ಪ್ರಭಾವಿತವಾಗಬಲ್ಲವು ಎನ್ನುವುದನ್ನು ಗುರುತಿಸಿದ್ದಾರೆ.

ಮಾರ್ಕ್ಸ್‌ವಾದದಲ್ಲೇ ಇಂಥ ಚರ್ಚೆಗಳು ನಡೆದಿವೆ. ಹಿತಾಸಕ್ತಿಯುಳ್ಳ ಗುಂಪುಗಳು ಮತ್ತು ಪ್ರಾತಿನಿಧ್ಯ ನೀಡುವ ವ್ಯವಸ್ಥೆಗಳ ಸಂಬಂಧಗಳನ್ನು ಅರಿತುಕೊಳ್ಳಲು ಈ ವಾದಗಳು ನೆರವಾಗಲಿಲ್ಲ. ಪ್ರಾತಿನಿಧ್ಯ ನೀಡುವ ವ್ಯವಸ್ಥೆಗಳು ಕರ್ತೃವಿಗೆ ಸ್ಥಾನವನ್ನು, ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ. ಆದರೆ, ಗುಂಪುಅರ್ಥಗಳು, ಇಲ್ಲವೇ ವ್ಯಕ್ತಿಗಳು, ಎಂದಿಗೂ ಇಂಥ ವ್ಯವಸ್ಥೆಗಳನ್ನು ಹುಟ್ಟು ಹಾಕಲಾರವು. ಎಲ್ಲ ಅರ್ಥಗಳೂ ಸಾಮಾಜಿಕವಾದವೇ. ಈ ಅರ್ಥಗಳನ್ನು ಕೇವಲ ಬೇರೊಂದು ಅಭಿವ್ಯಕ್ತಿಯ ಪ್ರತಿನಿಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನೋಡಿದಾಗ ಅನುಭವ ಮತ್ತು ಅಸ್ಮಿತೆಗಳನ್ನು ಅರ್ಥದ ಮೂಲ ಎಂದು ತಿಳಿಯಲು ಸಾಧ್ಯವಿಲ್ಲ. ಆದರೆ, ಅನುಭವ ಮತ್ತು ಅಸ್ಮಿತೆಗಳು ಅರ್ಥದ ಪರಿಣಾಮಗಳೆಂದು ಗ್ರಹಿಸಬೇಕಾಗುತ್ತದೆ. ಮಾಕ್ಸ್‌ವಾದದಲ್ಲಿ ಐಡಿಯಾಲಜಿಯನ್ನು ಕುರಿತ ಚರ್ಚೆಯು ಮೊದಲಾದದ್ದು ಹೇಗೆ? ಎರಡು ಅಸಮಾನತೆಯುಳ್ಳ ವರ್ಗಗಳ ನಡುವೆ ಸಮತೋಲನ ಹುಟ್ಟುವುದು ಯಾವ ಸಂದರ್ಭದಲ್ಲಿ ಎಂಬುದನ್ನು ಅರಿಯಲು ಹೊರಟಾಗ ಈ ಚರ್ಚೆಗಳು ಮೊದಲಾದವು. ಈ ಬಗೆಯ ಚರ್ಚೆಗಳು ಬೆಳೆಯುತ್ತಾ ಹೋದಂತೆ ಮಾರ್ಕ್ಸ್‌ವಾದವು ಇದುವರೆಗೂ ಸಮಾಜವನ್ನು ಪರಸ್ಪರ ಶತ್ರುತ್ವವುಳ್ಳ ಎರಡು ಏಕಾಕೃತಿಯ ವರ್ಗಗಳ ರಚನೆ ಎಂದು ಗ್ರಹಿಸಿದ್ದೇ ಬುಡಮೇಲಾಗುವ ನೆಲೆಗೆ ಸಾಗುತ್ತಿದೆ. ಡೇಲ್ ಸ್ಪೆಂಡರ್‌ಗೆ ಈ ಯಾವುದೂ ಗಣನೆಗೇ ಬಂದಂತಿಲ್ಲ. ಮಾರ್ಕ್ಸ್‌ವಾದದ ಹಳೆಯ ಸವಕಲು ನೆಲೆಯನ್ನೇ ನಂಬಿದಂತಿದೆ. ಯಜಮಾನಿಕೆಯ ವ್ಯಾಖ್ಯಾನಕ್ಕೆ, ಆ ಹಳೆಯ ಮಾದರಿಗೇ ಜೋತು ಬಿದ್ದಿದ್ದಾಳೆ.  ಆ ಹಳೆಯ ಮಾದರಿಯು, ಅನುಭವಗಳು ಗುಂಪುಗಳಿಗೆ ತಕ್ಕಂತೆ ಭಿನ್ನವಾಗಿರುತ್ತವೆಂದು ನಂಬುತ್ತದೆ. ಈ ಪರಸ್ಪರ ಎದುರಾಳಿಗಳಾದ ಗುಂಪುಗಳ ಅರ್ಥವನ್ನು ಭಾಷೆಯಲ್ಲಿ ಅಭಿವ್ಯಕ್ತಿಸಲಾಗುವುದೆಂದು ವಾದಿಸುತ್ತಾಳೆ. ಡೇಲ್‌ಸ್ಪೆಂಡರ್ ಈ ವಾದವನ್ನು ನಂಬಿ, ಭಾಷೆಯು ಸಾಮಾಜಿಕ ವಾಸ್ತವವನ್ನು ರಚಿಸುವಷ್ಟು ಶಕ್ತವಾಗಿದೆಯೆಂಬ ತನ್ನ ಇನ್ನೊಂದು ನೆಲೆಯ ವಾದದ ಬುಡಕ್ಕೆ ಕೊಡಲಿ ಪೆಟ್ಟು ಹಾಕಿಕೊಂಡಿದ್ದಾಳೆ. ಇದರಿಂದಾಗಿ, ಭಾಷೆಯು ಈಗಾಗಲೇ ಇರುವ ಮತ್ತು ತನಗೆ ಸಂಬಂಧಪಡದ ಯಾವುದೋ ಅರ್ಥಕ್ಕೆ ವಾಹಕವಾಗುವ ನೆಲೆಗೆ ಸೀಮಿತವಾಗಿ ಬಿಟ್ಟಿದೆ.

ಯಾವ ಭಾಷೆ ?

ಭಾಷೆಯಲ್ಲಿ ಲಿಂಗತಾರತಮ್ಯ ಉಂಟೆಂದು ಸ್ಪಷ್ಟವಾಗಿ ತೋರಿಸಿಕೊಡುವ ಮೊದಲು, ಭಾಷೆ ಎಂದರೆ ನಾವು ಏನೆಂದು ತಿಳಿದಿದ್ದೇವೆ ಎಂಬುದು ಖಚಿತವಾಗಬೇಕು. ನಾವು ಸುಮ್ಮನೆ ಈಗಾಗಲೇ ಪರಿಚಿತವಿರುವ, ಸ್ಪಷ್ಟವಾಗಿರುವ, ಯಾವ ಬಿರುಕೂ ಇಲ್ಲದ ಸಂಗತಿಯೊಂದನ್ನು ಕಲ್ಪಿಸಿಕೊಂಡು ಮುಂದುವರೆಯಲು ಸಾಧ್ಯವಿಲ್ಲ. ಒಂದಷ್ಟು ಸ್ಪಷ್ಟನೆಗಳು ಅಗತ್ಯವಾಗಿವೆ.  ಭಾಷಾಶಾಸ್ತ್ರದಲ್ಲೇ ಭಾಷೆಯನ್ನು ಕುರಿತಂತೆ ನಡೆದಿರುವ ತಾತ್ವಿಕ ಚರ್ಚೆಗಳನ್ನು ಡೇಲ್ ಸ್ಪೆಂಡರ್ ಕಡೆಗಣಿಸಿದ್ದಾಳೆ. ಹೋಗಲಿ, ತನ್ನ ದೃಷ್ಟಿಯಲ್ಲಿ ಭಾಷೆ ಎಂದರೇನು ಎಂಬುದನ್ನು ವಿವರಿಸಿದ್ದಾಳೆಯೇ ಎಂದರೆ ಅದೂ ಇಲ್ಲ. ಭಾಷೆ ಎಂಬ ಪದದೊಳಗೆ ಹಲವಾರು ಸಂಗತಿಗಳನ್ನು ತುರುಕಿದ್ದಾಳೆ. ಪದಗಳಿಗೆ ಸಂಬಂಧಿಸಿದ ಎಲ್ಲವೂ ಮತ್ತು ಪ್ರತಿಯೊಂದೂ ಆಕೆಯ ಪ್ರಕಾರ ಭಾಷೆಯ ವ್ಯಾಪ್ತಿಗೆ ಸೇರಿಬಿಡುತ್ತದೆ. ಹೀಗಾಗಿ, ನಮಗೆ ಉಳಿಯುವುದು ತಾತ್ವಿಕವಾಗಿ ನಿರುಪಯುಕ್ತವಾದ, ಜನಬಳಕೆಯ ನೆಲೆಯ ಭಾಷಾವ್ಯಾಖ್ಯಾನ. ಇಲ್ಲವೇ ಭಾಷೆ ಮತ್ತು ಲಿಂಗಸಂಬಂಧಗಳನ್ನು ಕುರಿತಂತೆ ನಡೆದಿರುವ ಪ್ರಾಯೋಗಿಕ ಅಧ್ಯಯನಗಳ ಹಿನ್ನೆಲೆಯಲ್ಲಿರುವ ಅಸ್ಪಷ್ಟವಾದ ವ್ಯಾಖ್ಯಾನ ಮಾತ್ರ.

ಭಾಷಾಶಾಸ್ತ್ರದ ಚೌಕಟ್ಟಿನಲ್ಲಿ ಭಾಷೆ ಎಂದರೆ ‘ನಿಯಮ ಮತ್ತು ಪ್ರತಿನಿಧೀಕರಣಗಳ ವ್ಯವಸ್ಥೆ’. (ಸಸೂರ್‌ನ ಲಾಂಗ್ ಮತ್ತು ಚಾಮ್‌ಸ್ಕಿಯ ಗ್ರಾಮರ್ ಕಲ್ಪನೆಗಳು.. ಈ ವ್ಯಾಖ್ಯೆಯು ಭಾಷಿಕರು ಮತ್ತು ಭಾಷಾಬಳಕೆಯ ಸಂದರ್ಭಗಳನ್ನು ಪರಿಗಣಿಸುವುದಿಲ್ಲ.  ಹೀಗೆ ಪರಿಗಣಿಸದೆ ದೂರವಿಟ್ಟಿರುವುದಕ್ಕೆ ಲಿಂಗತಾರತಮ್ಯ ನೆಲೆ, ಜನಾಂಗವಾದ, ಇಲ್ಲವೇ ವರ್ಗಹಿತಾಸಕ್ತಿಗಳು ಕಾರಣವಲ್ಲ. ಆದರೆ, ಡೇಲ್ ಸ್ಪೆಂಡರ್ ಅದೇ ಕಾರಣವೆಂದು ತಿಳಿದಿದ್ದಾಳೆ.  ನಿರ್ದೇಶನಗಳನ್ನು ನೀಡುತ್ತಿದ್ದ ವ್ಯಾಕರಣ ಪರಂಪರೆಗಳಿಂದ ದೂರ ಉಳಿಯಲು ಭಾಷಾಶಾಸ್ತ್ರವು  ಭಾಷೆಯ ಹೊಸ ವ್ಯಾಖ್ಯಾನವೊಂದನ್ನು ಮಾಡುವುದು ಅಗತ್ಯವಾಗಿತ್ತು.  ಅಲ್ಲದೆ, ಪ್ರಾಯೋಗಿಕ ನೆಲೆಯ ಅಧ್ಯಯನಗಳಲ್ಲಿ ಎಲ್ಲಕ್ಕೂ ತಾತ್ವಿಕ ಮಹತ್ವವಿದೆ ಎಂದು ತಿಳಿಯಲಾಗುತ್ತಿತ್ತು. ಭಾಷಿಕ ವರ್ತನೆಗಳಿಗೆ ಸಲ್ಲದ ಮಹತ್ವವನ್ನು ನೀಡಲಾಗುತ್ತಿತ್ತು.  ಇಂಥ ಪರಿಸ್ಥಿತಿಯಿಂದ ಹೊರಬರಲು ಭಾಷಾಶಾಸ್ತ್ರವು ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಿದೆ.  ಬಳಕೆಯ ಸಂದರ್ಭಗಳನ್ನು ದೂರವಿರಿಸಿ ನೀಡುವ ವ್ಯಾಖ್ಯಾನಗಳು ‘ಅಪರಿಪೂರ್ಣವೂ ಮತ್ತು ನಿಖರವಲ್ಲದ್ದೂ’ಆಗುವುದೆಂದು ಡೇಲ್ ಸ್ಪೆಂಡರ್ ವಾದಿಸುತ್ತಾಳೆ. ಆದರೆ, ಹಾಗೆಂದರೇನು ಎಂದು ವಿವರಿಸುವುದಿಲ್ಲ. ‘‘ಭಾಷಾಶಾಸ್ತ್ರದ ವ್ಯಾಖ್ಯಾನಗಳು ಸ್ತ್ರೀವಾದಿ ಪ್ರಶ್ನೆಗಳನ್ನು ಬಿಡಿಸಲು ಅಡೆತಡೆಗಳನ್ನೊಡ್ಡಿರುವುದು’’ ಹೇಗೆ ಎನ್ನುವುದನ್ನು ವಿವರಿಸುವುದಿಲ್ಲ. ತನ್ನ ವಿಶ್ಲೇಷಣೆಗೆ ಸಾಮಾಜಿಕ ಭಾಷಾಶಾಸ್ತ್ರದ ನೆಲೆಗಳನ್ನು ಆಕೆ ಆಶ್ರಯಿಸುವಂತೆ ತೋರುತ್ತದೆ. ಆದರೆ, ಸಾಮಾಜಿಕ ಭಾಷಾಶಾಸ್ತ್ರವು ಬಳಕೆ ಮತ್ತು ರಚನೆಗಳ ನಡುವಣ ವಿಭಜನೆಯನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಸಾಮಾಜಿಕ ಭಾಷಾ ಅಧ್ಯಯನಗಳು ಭಾಷೆಯ ರಚನೆಯನ್ನು ಕುರಿತ ಚೌಕಟ್ಟನ್ನು ನಿರಾಕರಿಸದೆಯೂ ತಮ್ಮ ಅಧ್ಯಯನಗಳನ್ನು ಮುಂದುವರೆಸುತ್ತಿವೆ. ಹಾಗಾಗಿ, ಅಲ್ಲಿ ತಾತ್ವಿಕ ಗೊಂದಲಗಳೇನಿಲ್ಲ. ಹೆಚ್ಚೆಂದರೆ, ಸಾಮಾಜಿಕ ಭಾಷಾಶಾಸ್ತ್ರವು ಬಳಕೆ ಮತ್ತು ರಚನೆಗಳ ನೆಲೆಯಿಂದಲೇ ಹುಟ್ಟಿರುವ ತಾತ್ವಿಕ ಪರಿಕಲ್ಪನೆಗಳನ್ನು ಬಳಸಿಕೊಳ್ಳುತ್ತಿರಬಹುದು. ಆದರೆ, ಡೇಲ್ ಸ್ಪೆಂಡರ್ ಭಾಷಾಶಾಸ್ತ್ರಕ್ಕಿಂತ ಸಾಮಾಜಿಕ ಭಾಷಾಶಾಸ್ತ್ರವೇ ಹೆಚ್ಚು ಪ್ರಗತಿಪರವೆಂದು ನಂಬಿದಂತಿದೆ. ವರ್ಗ, ಲಿಂಗ ಇಲ್ಲವೇ ಜನಾಂಗ, ಇತ್ಯಾದಿಗಳನ್ನು ಹೆಸರಿಸುವ ಅಧ್ಯಯನ ಶಿಸ್ತು, ಹಾಗೆ ಹೆಸರಿಸದ ಅಧ್ಯಯನಶಿಸ್ತಿಗಿಂತ ಪ್ರಗತಿಪರವೆಂದು ವಾದಿಸಿದ ಹಾಗಿದೆ. ಹಾಗೆ ನೋಡಿದರೆ ‘ಕಪ್ಪುಜನರ ಮತ್ತು ದುಡಿಯುವ ವರ್ಗದ ಭಾಷೆಯಲ್ಲಿ ಏನೋ ಕೊರತೆ ಇದೆ ಎಂಬ ವ್ಯಾಪಕ ನಂಬಿಕೆಯು’ ಭಾಷಾಶಾಸ್ತ್ರದಿಂದ ಹುಟ್ಟಿದ್ದಲ್ಲ. ಇದು ನಿರ್ದೇಶಾತ್ಮಕ ವ್ಯಾಕರಣ ಮತ್ತು ಅದರಿಂದ ಹುಟ್ಟಿದ ಕಲಿಕೆಯ ಪದ್ಧತಿ, ಹಾಗೂ ಸಾಂಸ್ಕೃತಿಕ ನಡಾವಳಿಗಳಿಂದ ಪ್ರೇರಿತವಾದ ನಿಲುವು. ಲಂಡನ್‌ನ ಕಾಕ್ನಿ ಉಪಭಾಷೆಯಲ್ಲಿ ಕೇಳಿಸುವ ಗಲೀಯ ಧ್ವನಿಗಳಿಗೆ (ಗಂಟಲಿನ ಮೇಲು ಭಾಗದಲ್ಲಿ ಹುಟ್ಟುವ ಧ್ವನಿಗಳು glottel, ಅವರ ಸೋಮಾರಿತನ, ಸಾಂಸ್ಕೃತಿಕ ದಾರಿದ್ರ್ಯ, ಇಲ್ಲವೇ ‘ಸೀಮಿತ ನುಡಿ’ ಗಳು ಕಾರಣವೆಂದು ವಾದಿಸುವುದನ್ನು ಭಾಷಾಶಾಸ್ತ್ರ ಸಂಪೂರ್ಣವಾಗಿ ನಿರಾಕರಿಸುತ್ತದೆ. ಭಾಷಾಶಾಸ್ತ್ರದ ನಿಟ್ಟಿನಿಂದ ನೋಡಿದರೆ, ಈ ಗಲೀಯ ಧ್ವನಿಗಳ ಇರುವಿಕೆ ಧ್ವನಿರಚನೆಯ ಸಿದ್ಧಾಂತಗಳನ್ನು ಮರುರೂಪಿಸಲು ಕಾರಣವಾಗಿವೆ. ಭಾಷಾಶಾಸ್ತ್ರ ‘ವ್ಯಾಕರಣ ಬದ್ಧ’ ಎಂದು ಹೇಳುವುದೂ, ನಿರ್ದೇಶಾತ್ಮಕ ವ್ಯಾಕರಣ ‘ಪರಿಶುದ್ಧ’ ಎಂದು ಹೇಳುವುದೂ ಒಂದೇ ಅಲ್ಲ.  ವ್ಯಾಕರಣಾತ್ಮಕ ರಚನೆ ಎಂಬುದು ವ್ಯಾಕರಣದ ನಿಯಮಗಳಿಂದ ರೂಪುಗೊಂಡಿರುತ್ತದೆ.  ಉದಾಹರಣೆಗೆ ‘the man, the feminist,  Dale inspired challenged became aphasic’ ಎಂಬ ವಾಕ್ಯವು ಇಂಗ್ಲಿಶ್‌ನ ವಾಕ್ಯರಚನಾ ನಿಯಮಗಳಿಗೆ ಅನುಗುಣವಾಗಿರುವುದರಿಂದ ‘ವ್ಯಾಕರಣ ಬದ್ಧ’ವಾಗಿದೆ. ಆದರೆ ಸಾಮಾನ್ಯ ಬಳಕೆಯ ನಿಟ್ಟಿನಲ್ಲಿ ನೋಡಿದರೆ ಇದು ‘ಒಳ್ಳೆಯ ಇಂಗ್ಲಿಶ್’ ಅಲ್ಲ. ಡೇಲ್ ಸ್ಪೆಂಡರ್ ಉಲ್ಲೇಖಿಸಿ ಟೀಕಿಸುವ ಬಹುಪಾಲು ಲಿಂಗತಾರತಮ್ಯ ಮತ್ತು ಭಾಷೆ ಸಂಬಂಧದ ಅಧ್ಯಯನಗಳೆಲ್ಲವೂ ಸಾಮಾಜಿಕ ಭಾಷಾಶಾಸ್ತ್ರ ಹಾಗೂ ಸಾಮಾಜಿಕ ಮನೋವಿಜ್ಞಾನಗಳನ್ನು ಅವಲಂಬಿಸಿವೆಯೇ ಹೊರತು ಭಾಷಾಶಾಸ್ತ್ರವನ್ನಲ್ಲ. ಭಾಷೆ ಎಂಬುದು ‘ಸಾಮಾಜಿಕ ಉತ್ಪಾದನೆ’ ಇಲ್ಲವೇ ‘ಸಮಾಜದ ಪ್ರತಿಬಿಂಬ’ ಎನ್ನುವ ಸಾಮಾನ್ಯ ನೆಲೆಯ ತಿಳಿವಳಿಕೆಗಳು ಸಾಮಾಜಿಕ ಭಾಷಾಶಾಸ್ತ್ರದ ಅಧ್ಯಯನಗಳಿಗೆ ಪ್ರಚೋದಕಗಳಾಗಿವೆ. ಒಂದು ಗುಂಪಿಗೆ ಸೇರಿದ ಭಾಷಿಕರು ಸಮಾಜದಲ್ಲಿ ನಿರ್ದಿಷ್ಟ ಸ್ಥಾನವೊಂದನ್ನು ಹೊಂದಿದ್ದರೆ, ಅವರ ಭಾಷೆಯು ಆ ಸಾಮಾಜಿಕ ಸ್ಥಾನಕ್ಕೆ ತಕ್ಕಂತೆ ಇರುತ್ತದೆ, ಇಲ್ಲವೇ ಅದನ್ನು ಪ್ರತಿಬಿಂಬಿಸುತ್ತದೆ ಎಂಬ ನಿಲುವುಗಳು ಆ ಅಧ್ಯಯನಗಳಲ್ಲಿರುತ್ತವೆ. ಹಾಗಾಗಿಯೇ ಭಾಷೆಯ ನೆಲೆಯಲ್ಲಿ ಲಿಂಗಸಂಬಂಧೀ ಭಿನ್ನತೆಗಳಿಗೆ ಮತ್ತು ಇಲ್ಲವೇ ಹೆಣ್ಣಿನ ಭಾಷೆಯ ‘ಕೀಳ್ಮೆ’ಗೆ ಉದಾಹರಣೆಗಳನ್ನು ಪುರಾವೆಗಳನ್ನೂ ಹುಡುಕುತ್ತಿರುತ್ತವೆ.

ಭಾಷಾವ್ಯವಸ್ಥೆಗಳು ಏಕಶಿಲಾರೂಪದಲ್ಲಿ ಇರುವುದಿಲ್ಲವೆಂಬುದು ಭಾಷಾಶಾಸ್ತ್ರದ ನಿಲುವು.  ಭಾಷೆಯಲ್ಲಿ ಬೇರೆ ಬೇರೆ ಬಗೆಯ ನಿಯಮಗಳೂ ಮತ್ತು ಪ್ರತಿನಿಧೀಕರಣಗಳೂ ಇರುತ್ತವೆ.  ಭಾಷಿಕ ಪ್ರತಿನಿಧೀಕರಣದ ಮೂರು ನೆಲೆಗಳೆಂದರೆ – ಧ್ವನಿರಚನೆ, ವಾಕ್ಯರಚನೆ ಮತ್ತು ಅರ್ಥರಚನೆಗಳು. ಸರಳವಾಗಿ ಹೇಳಬೇಕೆಂದರೆ ಶಬ್ದಗಳು, ರಚನೆಗಳು ಮತ್ತು ಅರ್ಥ. ಧ್ವನಿರಚನೆಯ, ವಾಕ್ಯರಚನೆಯ ಮತ್ತು ಅರ್ಥರಚನೆಯ ನೆಲೆಗಳನ್ನು ಮಂಡಿಸಲು ಬಳಸುವ ಪರಿಕಲ್ಪನೆಗಳು ಬೇರೆ ಬೇರೆಯಾಗಿವೆ. ಈ ಮೂರೂ ನೆಲೆಗಳಿಗೆ ನೇರವಾದ ಸಂಬಂಧಗಳನ್ನು ಕಲ್ಪಿಸಲು ಆಗುವುದಿಲ್ಲ. ಉದಾಹರಣೆಗೆ, ಧ್ವನಿರಚನೆಯ ನಿಯಮಗಳನ್ನು ಧ್ವನಿಸಂಕೇತಗಳು ಮತ್ತು ಧ್ವನಿಗಳ ವ್ಯಾಪ್ತಿಗಳನ್ನು ಬಳಸಿ ಅನ್ವಯಿಸಲಾಗತ್ತದೆ.  ವಾಕ್ಯರಚನೆಯ ನಿಯಮಗಳನ್ನು ವಾಕ್ಯಾಂಗಗಳು ಮತ್ತು ಅವುಗಳ ಸಂಬಂಧದ ನೆಲೆಯಲ್ಲಿ ಅನ್ವಯಿಸಲಾಗುತ್ತದೆ. ಈ ನೆಲೆಯಲ್ಲಿ ಭಾಷೆಯು ಏಕಶಿಲಾರೂಪದಲ್ಲಿ ಇರುವುದಿಲ್ಲ ಎಂದು ಒಪ್ಪಿತವಾದರೆ, ರಾಚನಿಕ ವ್ಯವಸ್ಥೆ ಮತ್ತು ಅದರ ಬಳಕೆದಾರರು, ಇಲ್ಲವೇ ಬಳಕೆಯ ಸಂದರ್ಭಗಳು ಈ ಸಂಬಂಧಗಳನ್ನು ಈ ಮೂರು ಒಳಸ್ಥರಗಳಿಗೆ ಹೊಂದುವಂತೆ ಅರಿತುಕೊಳ್ಳಬೇಕಾಗುತ್ತದೆ. ಹಾಗಿದ್ದಲ್ಲಿ ಭಾಷೆಯು ‘ಗಂಡಸು ಕಟ್ಟಿದ್ದಾದರೆ’ ಅದರ ಸ್ವರೂಪವನ್ನು ಅರಿಯಬೇಕಾದರೆ, ಅದು ಧ್ವನ್ಯಾತ್ಮಕ, ವಾಕ್ಯಾತ್ಮಕ ಮತ್ತು ಅರ್ಥಾತ್ಮಕ ಸ್ತರಗಳಲ್ಲಿ ಹೇಗೆ ನಿಜ, ಎಂಬುದನ್ನು ತೋರಿಸಿ ಕೊಡಬೇಕಾಗುತ್ತದೆ. ನಿಜ ಭಾಷಾಶಾಸ್ತ್ರದ ಪರಿಕಲ್ಪನೆಗಳು ಮತ್ತು ಅದು ಮಂಡಿಸುವ ಸ್ತರಗಳು ಪವಿತ್ರವಾದವು, ಹಾಗಾಗಿ ಪ್ರಶ್ನಾತೀತವಾದವು ಎಂದೇನಲ್ಲ. ಆದರೆ, ನಮ್ಮ ಟೀಕೆಗಳು ಈ ಪ್ರತಿಯೊಂದು ಪರಿಕಲ್ಪನೆಯನ್ನು, ಅವುಗಳ ಪ್ರಭಾವಗಳನ್ನು ಗಮನಿಸುತ್ತಾ, ಅವು ಹೇಗೆ ಸ್ತ್ರೀವಾದಿ ವಿಶ್ಲೇಷಣೆಗೆ ಅಡೆತಡೆಗಳನ್ನೊಡ್ಡಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸಬೇಕಾಗುತ್ತದೆ. ಹಾಗೆ ಮಾಡದಿದ್ದರೆ, ತಾತ್ತ್ವಿಕ ನೆಲೆಯಲ್ಲಿ ನಮ್ಮ ಶತ್ರುವನ್ನು ಗುರುತಿಸುವುದಕ್ಕೆ ಮತ್ತು ಪರ‍್ಯಾಯವನ್ನು ಕಟ್ಟುವುದಕ್ಕೆ ಆಗುವುದಿಲ್ಲ. ಲಿಂಗತಾರತಮ್ಯ ಇದೆ ಎಂದು ಬೀಸುಮಾತಿನಲ್ಲಿ ಹೇಳಿಬಿಟ್ಟರೆ, ಅದನ್ನೊಂದು ಬಲವಾದ ವಾದವೆಂದು ಹೇಳಲಾಗುವುದಿಲ್ಲ.

ಲಿಂಗತಾರತಮ್ಯದ ವಾಕ್ಯರಚನೆ

ಡೇಲ್ ಸ್ಪೆಂಡರ್ ಧ್ವನಿರಚನೆಯ ಮಾತೆತ್ತದಿದ್ದರೂ, ಆಕೆ ವಾಕ್ಯರಚನೆ ಮತ್ತು ಅರ್ಥರಚನೆಗಳನ್ನು ಗಂಡಸು ಕಟ್ಟಿದ್ದೆಂದು ವಾದಿಸುತ್ತಾಳೆ. ಆದರೆ, ಆಕೆ ತನ್ನ ವಾದಕ್ಕೆ ಬೆಂಬಲವಾಗಿ ನೀಡುವ ಪುರಾವೆಗಳು ನಿರರ್ಥಕವಾಗಿವೆ, ಕೆಲವೊಮ್ಮೆ ತಪ್ಪುದಾರಿ ಗೆಳೆಯುವಂತಿವೆ. ಆಕೆ ನೀಡುವ ಪುರಾವೆಗಳಲ್ಲಿ ಎರಡು ಬಗೆಗಳಿವೆ. ಬೇರೆ ಬೇರೆ ನಿರ್ದೇಶಾತ್ಮಕ ಮೈಯಾಕರಣರ ಹೇಳಿಕೆಗಳು ಒಂದು ಬಗೆಯವಾದರೆ, man / he ರೂಪಗಳ ಬಳಕೆ ಕುರಿತದ್ದು ಇನ್ನೊಂದು ಬಗೆ. ನಿರ್ದೇಶಾತ್ಮಕ ವೈಯ್ಯಾಕರಣರ ಘೋಷಣೆಗಳು ಆಸಕ್ತಿದಾಯಕವಾಗಿವೆ. ತಾತ್ವಿಕ ಚರ್ಚೆಗಳಿಗೆ ಅನುವು ಮಾಡಿಕೊಡುತ್ತವೆ. ಆ ಘೋಷಣೆಗಳು ಕಲಿಕೆಯ ವಿಧಾನಗಳ ಮೇಲೆ ನಿಸ್ಸಂದೇಹವಾಗಿ ಪ್ರಭಾವ ಬೀರಿವೆ. ಆದರೆ, ಅವು ವಾಕ್ಯಾತ್ಮಕ ವ್ಯವಸ್ಥೆಯ ರಾಚನಿಕ ಸ್ವರೂಪವನ್ನು ವ್ಯಾಖ್ಯಾನಿಸಲು ತಕ್ಕ ಪುರಾವೆಗಳಲ್ಲ. ನಿರ್ದೇಶಾತ್ಮಕ ವ್ಯಾಕರಣಕ್ಕೂ ವಾಕ್ಯರಚನಾ ಸ್ತರಕ್ಕೂ ವ್ಯತ್ಯಾಸವಿದೆ ಎಂಬುದನ್ನು ಡೇಲ್ ಸ್ಪೆಂಡರ್ ತಿಳಿದಿರುವಂತೆ ತೋರುವುದಿಲ್ಲ. ಏಕೆಂದರೆ, ಆಕೆ ಹೇಳುವ ಈ ಮಾತನ್ನು ನೋಡಿ – ‘‘ಭಾಷೆಯ ರಚನೆಯು ಅರ್ಥರಚನೆಗಿಂತ ಹೆಚ್ಚು ಮೂರ್ತವೂ, ಸ್ಪಷ್ಟವೂ ಆಗಿರುತ್ತದೆ’’. ಆದರೆ ವಾಕ್ಯರಚನೆ ಎಂದರೆ ಅದಲ್ಲ. ಹಾಗೆಂದು ನಿರ್ದೇಶಾತ್ಮಕ ವೈಯಾಕರಣಿಗಳು ಹೇಳಬಹುದು. ಏಕೆಂದರೆ, ತಾತ್ವಿಕ ಸಂಕಥನಗಳು ಅವರನ್ನು ಆವರಿಸಿಕೊಂಡು ಮಂಕು ಕವಿಯುವಂತೆ ಮಾಡಿವೆ. ಉದಾಹರಣೆಗೆ ಡೇಲ್ ಸ್ಪೆಂಡರ್ ಚರ್ಚಿಸುವ ಒಂದು ನಿರ್ದೇಶಾತ್ಮಕ ‘ನಿಯಮ’ದಂತೆ ಗಂಡಸನ್ನು ಸೂಚಿಸುವ ಪದವು ಸಂಯೋಗಾತ್ಮಕ ರಚನೆಗಳಲ್ಲಿ ಹೆಂಗಸನ್ನು ಸೂಚಿಸುವ ಪzಕ್ಕಿಂತ ಮೊದಲು ಬರಬೇಕು : ಗಂಡಸು ಮತ್ತು ಹೆಂಗಸು, ಗಂಡ ಮತ್ತು ಹೆಂಡತಿ – ಇದು ವಾಕ್ಯರಚನೆಯ ನಿಯಮವಲ್ಲ. ಕೇವಲ ಒಂದು ತಾತ್ವಿಕ ನಿಲುವು ಮಾತ್ರ.  ಏಕೆಂದರೆ, ಇದರಲ್ಲಿ ಸಂಯೋಗಾತ್ಮಕ ರಚನೆಗಳ ವಾಕ್ಯಾತ್ಮಕ ಲಕ್ಷಣಗಳು ಸೂಚಿತವಾಗುವುದಿಲ್ಲ. ಇಂಗ್ಲಿಶ್‌ನಲ್ಲಿ ಇಂಥ ರಚನೆಗಳನ್ನು ವಿವರಿಸುವ ಬೇರೆಯೇ ನಿಯಮಗಳಿವೆ. (ಉದಾಹರಣೆಗೆ, ಒಂದೇ ಬಗೆಯ ವಾಕ್ಯಾತ್ಮಕ ಲಕ್ಷಣಗಳುಳ್ಳ ಘಟಕಗಳನ್ನು ಮಾತ್ರ ಈ ರಚನೆಗಳಲ್ಲಿ ಜೋಡಿಸಬೇಕು, ಅಂದರೆ, ನಾಮಪದಗಳು ನಾಮಪದಗಳೊಡನೆ ಮಾತ್ರ ಜೋಡಣೆಗೊಳ್ಳಬೇಕು.. ಹೀಗೆ ಜೋಡಣೆಯಾಗುವ ಘಟಕಗಳು ಯಾವ ಅನುಕ್ರಮದಲ್ಲಿ ಬರಬೇಕು ಎಂಬುದನ್ನು ನಿಗದಿಪಡಿಸುವ ನಿಯಮಗಳಿಲ್ಲ. ಹಾಗಾಗಿ woman and man ಇಲ್ಲವೇ wife and husband ಮಾದರಿಯ ರಚನೆಗಳು a sandwich and a cake, ಇಲ್ಲವೇ, very tired and depressed ಮಾದರಿಯ ರಚನೆಗಳಂತೆ ನಿಯಮ ಬದ್ಧವಾಗಿಯೇ ಇದೆ. ಇವುಗಳನ್ನು a cake and sandwich, depressed and very tired ಎಂದು ಬರೆಯಬೇಕೆಂಬ ನಿಯಮಗಳಿಲ್ಲ.  ನಿರ್ದೇಶಾತ್ಮಕ ವ್ಯಾಕರಣ ಮತ್ತು ವಾಕ್ಯರಚನೆಯ ನಡುವಣ ವ್ಯತ್ಯಾಸಗಳನ್ನು ಗುರುತಿಸಿಬಿಟ್ಟೆವೆಂದರೆ, ಬಳಿಕ ನಾವು ಭಾಷೆಯ ವಾಕ್ಯರಚನೆಯ ನಿಯಮಗಳನ್ನು ಬದಲಿಸಬೇಕಾಗಿಲ್ಲ. ಒಂದು ವೇಳೆ ಹಾಗೆ ಮಾಡುವುದರಿಂದ ನಮಗೆ ಅನುಕೂಲವಾಗುವುದಿದ್ದರೆ ಮಾಡೋಣ. ಆದರೆ, ಅದರಿಂದ ನಿರ್ದೇಶಾತ್ಮಕ ವೈಯಾಕರಣರ ಹುನ್ನಾರಗಳು ಬಯಲಿಗೆ ಬರುತ್ತವೆ ಅಷ್ಟೆ. ದುರದೃಷ್ಟವಶಾತ್ ಡೇಲ್ ಸ್ಪೆಂಡರ್ ಒದಗಿಸಿದ ‘ವಾಕ್ಯರಚನೆಯ ನೆಲೆಯ’ ಪುರಾವೆಗಳನ್ನು ಉಳಿದ ಸ್ತ್ರೀವಾದಿಗಳು ಗಂಭೀರವಾಗಿ ಪರಿಗಣಿಸಿ ಬಿಟ್ಟಿದ್ದಾರೆ. ಭಾಷೆಯಲ್ಲಿ ಸರ್ವಸಮ್ಮತವಾಗುವ ನೆಲೆಯಲ್ಲಿ ಅಡಗಿರುವ ಇಂಥ ಪುರಾವೆಗಳನ್ನು ಹುಡುಕ ತೊಡಗಿದ್ದಾರೆ. ‘‘ಡೇಲ್ ಸ್ಪೆಂಡರ್ ಹೇಳುವಂತೆ ನಮ್ಮ ವ್ಯಾಕರಣದ ನಿಯಮಗಳು ಎಲ್ಲ ಹೆಂಗಸರ ಮತ್ತು ಎಲ್ಲ ಗಂಡಸರ ದೃಷ್ಟಿಕೋನವನ್ನು ಬಿಂಬಿಸುವುದಿಲ್ಲ, ಬದಲಿಗೆ ಕೆಲವು ಗಂಡಸರ ನಿರ್ದೇಶನಗಳನ್ನು ಅವಲಂಬಿಸಿದೆ. (ಹೂಟ್ – ೧೯೮೧) ಭಾಷೆ ಎಂಬುದೇ ಇಲ್ಲದಿದ್ದಾಗ ಗಂಡಸರೆಲ್ಲ ಸಭೆ ಸೇರಿ ಇಂಥ ಸಂಕೀರ್ಣವೂ ಸಂಕ್ಲಿಷ್ಟವೂ ಆದ ರಚನೆಯುಳ್ಳ ವ್ಯವಸ್ಥೆಯ ಮೂಲಕ ತಮ್ಮ ನಿಲುವನ್ನು ಪ್ರತಿಪಾದಿಸುವ ನಿರ್ಣಯವನ್ನು ಹೇಗೆ ಮಾಡಿದರೋ ತಿಳಿಯುತ್ತಿಲ್ಲ. ಚಿತ್ರಗಳನ್ನು ಬರೆದರೇ, ಇಲ್ಲವೇ ವಾಕ್ಯರಚನೆಯೇ ಇಲ್ಲದ ಭಾಷೆಯೊಂದು ಅವರ ಬಳಿ ಇತ್ತೇ? ನಮ್ಮ ಪ್ರಶ್ನೆ ‘‘ಗಂಡಸರು ವಾಕ್ಯರಚನೆಯ ನಿಯಮಗಳನ್ನು ಹೇಗೆ ಕಟ್ಟಿದರು’’ ಎಂಬುದಲ್ಲ. ನಾವು ಗಮನ ಹರಿಸಬೇಕಾಗಿರುವುದು ಕೆಲವು ನಿರ್ದಿಷ್ಟ ನುಡಿಗಟ್ಟುಗಳು, men and women ಮಾದರಿಯ ರಚನೆಗಳಂಥವು ಎಂಬುದರ ಕಡೆಗೆ ಇರಬೇಕಾಗಿದೆ. ಅಲ್ಲದೆ, ಇಂತಹ ನುಡಿಗಟ್ಟುಗಳು ತಾತ್ವಿಕ ಸಂಕಥನಗಳಲ್ಲಿ ಚರ್ಚೆಯಾಗುವಾಗ, ಅವೆಲ್ಲವೂ ಭಾಷೆಯ ರಚನೆಗೆ ಅನಿವಾರ್ಯವಾಗಿದ್ದವು ಎಂಬಂತೆ ಬಿಂಬಿತವಾಗುತ್ತಿದೆ; ಸಮಾಜದ ರಚನೆ ಇಲ್ಲವೇ ‘‘ಮಾನವ ಸ್ವಭಾವ’’ದ ಪ್ರತಿನಿಧಿಗಳೆಂಬಂತೆ ಮಂಡಿತವಾಗುತ್ತಿದೆ. ಇದು ನಮ್ಮ ಚರ್ಚೆಯ ವಿಷಯವಾಗಬೇಕು.

ಡೇಲ್ ಸ್ಪೆಂಡರ್ ‘ವಾಕ್ಯರಚನೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಚರ್ಚಿಸುವ ಇನ್ನೊಂದು ಪ್ರಸಂಗವೆಂದರೆ, man/he ಯ ಬಳಕೆ. ಇಲ್ಲಿ ನಾಮಪದ ಮತ್ತು ಸರ್ವನಾಮಗಳು ಸೂಚಿಸುವ ವ್ಯಕ್ತಿಯ ಲಿಂಗವನ್ನು ಕುರಿತ ಹಾಗೆ ಆಕೆ ಚರ್ಚಿಸುತ್ತಿದ್ದಾಳೆ ಎಂಬುದು ಸ್ಪಷ್ಟವಾಗಿದೆ.  ಸೂಚಿಸುವುದಕ್ಕೂ, ವಾಕ್ಯರಚನೆಯ ನಿಯಮಗಳಿಗೂ ಸಂಬಂಧವೇನೂ ಇಲ್ಲ. ಪದ ಮತ್ತು ಅದರ ಅರ್ಥ ಇಲ್ಲವೇ, ಅದು ಸೂಚಿಸಬಹುದಾದ ಇತರ ಅರ್ಥಗಳನ್ನು ವಾಕ್ಯರಚನೆಯ ನಿಯಮಗಳು ನಿರ್ಧರಿಸುವುದೂ ಇಲ್ಲ, ನಿಯಂತ್ರಿಸುವುದೂ ಇಲ್ಲ. ನಿಜ. man ಮತ್ತು he ಎಂಬ ಪದಗಳು ಗಂಡಸನ್ನು ಸೂಚಿಸುತ್ತವೆ, ಕೆಲವೊಮ್ಮೆ ಹೆಂಗಸನ್ನು ಸೂಚಿಸಬಹುದು ಎಂದು ಹೇಳುವುದು ಲಿಂಗತಾರತಮ್ಯ ನೆಲೆಯಲ್ಲಿ ಸರಿ. ಆದರೆ ಇದು ಭಾಷೆಯಲ್ಲೇ ಇರುವ ಲಿಂಗತಾರತಮ್ಯ ನೆಲೆಗೆ ಉದಾಹರಣೆಯಲ್ಲ. ಇಲ್ಲಿ ರಚನೆಯ ಪಾತ್ರವೇನೂ ಇಲ್ಲ. ನಾವು ರಚನೆ, ಸಂಕೇತ, ಇಲ್ಲವೇ ಪದ ಇತ್ಯಾದಿಗಳನ್ನು ನಮಗೆ ಬೇಕಾದ ಹಾಗೆ ಒಂದರ ಬದಲು ಇನ್ನೊಂದನ್ನು ಬಳಸುವಂತಿಲ್ಲ. ಡೇಲ್ ಸ್ಪೆಂಡರ್ ಹಾಗೆ ಬಳಸಿಬಿಡುತ್ತಾಳೆ. ಸರ್ವನಾಮವು ಏನನ್ನು ಸೂಚಿಸಬೇಕೆಂಬುದು ವಾಕ್ಯರಚನೆಯ ನಿಯಮಗಳಿಂದ ನಿರ್ಧಾರವಾಗುವುದಿಲ್ಲ.  ಕೆಳಗಿನ ಉದಾಹರಣೆಗಳನ್ನು ನೋಡಿ-

                John                            he

೧.                          Said that                         was leaving

                Mary                                                   she

                he                                John

೨.                        Said that                        was leaving

                she                              Mary

ಒಂದನೆಯ ವಾಕ್ಯದಲ್ಲಿ john ಎಂಬುದು he ಪದದಿಂದ Mary ಎಂಬುದು she ಪದದಿಂದ ಸೂಚಿತವಾಗುತ್ತದೆ. ಈ ವಾಕ್ಯಗಳಿಗೆ ಇರುವುದು ಒಂದೇ ಒಂದು ಅರ್ಥ. ಆದರೆ, ಎರಡನೆಯ ವಾಕ್ಯದಲ್ಲಿ ಹಾಗಿಲ್ಲ. he ಪದವು john ಅನ್ನು she ಪದವು Mary ಯನ್ನು ಸೂಚಿಸಲೇಬೇಕೆಂಬ ಒತ್ತಾಯವಿಲ್ಲ. ಈ ವಾಕ್ಯಗಳಿಗೆ ಒಂದಕ್ಕಿಂತ ಹೆಚ್ಚು ಅರ್ಥಗಳು ಸಾಧ್ಯ.

ಅಲ್ಲದೆ, ಸರ್ವನಾಮ ಮತ್ತದರ ಸೂಚಕಗಳ ನಡುವೆ ಇರುವ ಸಂಬಂಧದ ಮೇಲೆ ವಿಧಿಸಲಾದ ರಾಚನಿಕ ನಿಯಂತ್ರಣಗಳಿಗೂ ಜಂಡರ್‌ಗೂ ಸಂಬಂಧವಿಲ್ಲ. ಡೇಲ್ ಸ್ಪೆಂಡರ್‌ಳು ಹೀಗೆ ಸರ್ವನಾಮಗಳ ಜಂಡರ್ ಸ್ವರೂಪವನ್ನು ಮಂಡಿಸುತ್ತಿರುವುದಕ್ಕೆ ಶಾಲಾ ವ್ಯಾಕರಣಗಳಲ್ಲಿ ಸರ್ವನಾಮಗಳನ್ನು ವ್ಯಾಕರಣಾತ್ಮಕ ಪದಗಳೆಂದು  ಹೇಳುವ ಅಪಕಲ್ಪನೆಯೇ ಕಾರಣವಾಗಿದೆ. ಹಾಗಾಗಿಯೇ ಅವುಗಳಿಗೂ ವಾಕ್ಯರಚನೆಗೂ ಸಂಬಂಧ ಕಲ್ಪಿಸ ಹೊರಟಿದ್ದಾಳೆ. ಹೀಗಿದ್ದರೂ ಡೇಲ್ ಸ್ಪೆಂಡರ್ man / he ಗಳನ್ನು ಒಂದೇ ಚೌಕಟ್ಟಿನಲ್ಲಿ ಚರ್ಚಿಸಿದ್ದು ಸರಿಯಾಗದು. ಏಕೆಂದರೆ, ನಾಮಪದಗಳು ವ್ಯಾಕರಣಾತ್ಮಕ ಪದಗಳಲ್ಲ. ಅವುಗಳನ್ನು ಬೇರೆ ನೆಲೆಯಲ್ಲಿ ಪರಿಗಣಿಸಬೇಕಾಗುತ್ತದೆ.

ಒಟ್ಟಾರೆ, ಲಿಂಗತಾರತಮ್ಯ ಮತ್ತು ಭಾಷೆ ಕುರಿತ ಇಡೀ ಚರ್ಚೆಯು ಲಿಂಗತಾರತಮ್ಯ ಮತ್ತು ಅರ್ಥರಚನೆ, ಇಲ್ಲವೇ ಲಿಂಗತಾರತಮ್ಯ ಮತ್ತು ತಾತ್ವಿಕ ಭಾಷಾಶಾಸ್ತ್ರದ ಚೌಕಟ್ಟಿನಲ್ಲಿ ನಿಗದಿಗೊಳ್ಳದ, ಯಾವುದೋ ಪ್ರತಿನಿಧೀಕರಣದ ನೆಲೆಯ ಸಂಬಂಧವನ್ನು ಕುರಿತ ಚರ್ಚೆಯಾಗಿ ಬಿಟ್ಟಿದೆ.

ಲಿಂಗತಾರತಮ್ಯ ನೆಲೆಯ ಅರ್ಥ

man / he ಕುರಿತ ಚರ್ಚೆಯನ್ನು, ಡೇಲ್ ಸ್ಪೆಂಡರ್ ಬೆಳೆಸಿದ ಅರ್ಥದ ವಿಶ್ಲೇಷಣೆಯಲ್ಲಿ, ಸೇರಿಸಬಹುದು. ಆಕೆ ಅದನ್ನು ತನ್ನ ‘ಅರ್ಥ ರಚನೆಯ ನಿಯಮಗಳಲ್ಲಿ’ ಏಕೆ ಸೇರಿಸಲಿಲ್ಲವೋ ತಿಳಿಯದು. ಆಕೆಯ ಮಾಹಿತಿ ಮತ್ತು ವಿವರಣೆಗಳು ಈ ಹಿಂದಿನ ಸ್ತ್ರೀವಾದಿ ವಿಶ್ಲೇಷಕರು ಮಾಡಿದ ಅರ್ಥ ವಿಶ್ಲೇಷಣೆಯನ್ನೇ ಹೋಲುತ್ತವೆ. ಆದರೆ, ಈಕೆ ಅದೆಲ್ಲವನ್ನೂ ಸೂತ್ರೀಕರಿಸಿ ತಾತ್ವಿಕ ಚೌಕಟ್ಟೊಂದನ್ನು ನೀಡಲು ಯತ್ನಿಸುತ್ತಾಳೆ. ಇಲ್ಲೇ ಸಮಸ್ಯೆ ಮೊದಲಾಗುವುದು. ಅರ್ಥವನ್ನು ಕುರಿತ ಆಕೆಯ ಸಾಮಾನ್ಯ ನಿಯಮಗಳು ಮತ್ತು ‘‘ಅರ್ಥರಚನೆ’’ಯನ್ನು ಕುರಿತ ನಿಯಮಗಳು ಸಮಸ್ಯೆಗೆ ಕಾರಣವಾಗಿವೆ. ಭಾಷೆಯ ವ್ಯಾಖ್ಯಾನ ಹೇಗೆ ಅವಳಲ್ಲಿ ಅಸ್ಪಷ್ಟವಾಗಿದೆಯೋ, ಹಾಗೆಯೇ ‘‘ಅರ್ಥ’’ಮತ್ತು  ‘‘ಅರ್ಥರಚನೆ’’ಯ ನಿಯಮಗಳ ವ್ಯಾಖ್ಯಾನವೂ ಅಸ್ಪಷ್ಟವಾಗಿದೆ. ಆಕೆ ನಮ್ಮನ್ನು ಅರ್ಥವನ್ನು ಕುರಿತ ಎರಡು ವ್ಯಾಖ್ಯಾನಗಳ ನಡುವೆ ತೂಗು ಹಾಕಿ ಬಿಡುತ್ತಾಳೆ. ಆದರೆ ಇವೆರಡರಲ್ಲಿ ಯಾವುದೂ ಸ್ತ್ರೀವಾದಿ ತತ್ತ್ವಗಳ ಬೆಳವಣಿಗೆಗೆ ನೆರವಾಗುವುದಿಲ್ಲ. ಒಂದೋ ಎಲ್ಲವನ್ನೂ ಅರ್ಥದ ನೆಲೆಗೆ ಒಯ್ಯಬಹುದು ಎನ್ನುತ್ತಾಳೆ, ಇಲ್ಲವೇ ಅರ್ಥವೆಂದರೆ ಭಾಷೆಯ ಹೊರತಾಗಿಯೂ ನಡೆಯಬಲ್ಲ ಒಂದು ಬಗೆಯ ಮಾನಸಿಕ ಇಲ್ಲವೇ ಪ್ರಾಯೋಗಿಕ ಚಟುವಟಿಕೆ ಎಂದು ಭಾವಿಸುತ್ತಾಳೆ. ಡೇಲ್ ಸ್ಪೆಂಡರ್ ಮಂಡಿಸುವ ಈ ನಿಲುವುಗಳಲ್ಲಿ ಸಮಸ್ಯೆಗಳಿವೆ.  ಅದರಲ್ಲಿ ವಿರೋಧಾಭಾಸಗಳಿವೆ. ಆದರೆ, ಇದನ್ನು ಸ್ಪಷ್ಟವಾಗಿ ಗುರುತಿಸಲಾಗಿಲ್ಲ. ಅಲ್ಲದೆ, ನಾವು ಹೇಗೆ ವ್ಯಾಖ್ಯಾನಿಸಬೇಕೆಂದು ತಿಳಿಯಲಾಗದ ಪದಗಳನ್ನು ಆಕೆ ಬಳಸಿ ಬಿಡುತ್ತಾಳೆ.  ಆದ್ದರಿಂದ ಆಕೆಯ ತೀರ್ಮಾನಗಳನ್ನು ಒಪ್ಪಬೇಕೇ ಬೇಡವೇ ಎಂಬ ಗೊಂದಲದಲ್ಲಿ ನಾವು ಬೀಳುತ್ತೇವೆ.

ಭಾಷಾಸಿದ್ಧಾಂತಗಳ ದೃಷ್ಟಿಯಿಂದ ಒಂದು ಉಕ್ತಿಯ ಅರ್ಥವನ್ನು ಅದು ಇತರ ಉಕ್ತಿಗಳೊಡನೆ ಹೊಂದಿರುವ ಸಮಾನಾರ್ಥಕ, ವಿರುದ್ಧಾರ್ಥಕ ನೆಲೆಗಳಿಂದ ಗುರುತಿಸಲಾಗುತ್ತದೆ. ಹಾಗಾಗಿ, ಅರ್ಥವೆಂಬುದು ಕೇವಲ ಭಾಷಿಕ ವ್ಯಾಪಾರ. ಉಕ್ತಿಗಳ ನಡುವಣ ಸಂಬಂಧದ ನೆಲೆಯಲ್ಲಿ ಹುಟ್ಟುವ ಉತ್ಪನ್ನ, ಇಲ್ಲವೇ ಪರಿಣಾಮ. ಈ ಪರಿಕಲ್ಪನೆಯಲ್ಲಿ ಉಕ್ತಿಯಲ್ಲಿ ಅಡಕವಾಗಿರುವ ಭಾವನೆಗಳು, ಪ್ರತಿಮೆಗಳು, ಗ್ರಹಿತಾರ್ಥಗಳು ಸ್ಥಾನ ಪಡೆಯುವುದಿಲ್ಲ. ಭಾಷೆಯ ಆಚೆಗೆ ಸಂಭವಿಸಬಹುದಾದ ಅರ್ಥಸಂಬಂಧೀ ಪ್ರಕ್ರಿಯೆಗಳೂ ಕೂಡಾ ಇದರಲ್ಲಿ ಸೇರುವುದಿಲ್ಲ. ಡೇಲ್ ಸ್ಪೆಂಡರ್ ಹೇಳುವಂತೆ ‘‘ಹೆಂಗಸಿನ ಸ್ವಾಯತ್ತತೆ, ಇಲ್ಲವೇ ಸಾಮರ್ಥ್ಯಗಳನ್ನು ಸೂತ್ರ ರೂಪದಲ್ಲಿ ಹೇಳಬಹುದು ಎನ್ನುವುದೇ ಒಂದು ವಿರೋಧಾಭಾಸ’’. ಈ ಮಾತನ್ನು ಅರ್ಥರಚನೆಯ ವಿರೋಧಾಭಾಸ ಎಂಬ ನೆಲೆಯಲ್ಲಿ ಇಟ್ಟು ನೋಡಿದಾಗ ಅದು ಹುಸಿ ಎಂದು ಗೊತ್ತಾಗುತ್ತದೆ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ಕೆಳಗಿನ ಉದಾಹರಣೆಯನ್ನು ನೋಡೋಣ

೧ Sue’s friends are all strong and independant women.

೨ Sue killed, Tom and Tom is alive and kicking

ಡೇಲ್ ಸ್ಪೆಂಡರ್ ವ್ಯಾಖ್ಯೆಯಂತೆ ನೋಡಿದರೆ ಈ ಎರಡೂ ವಾಕ್ಯಗಳು ಅರ್ಥದ ನೆಲೆಯಲ್ಲಿ ವಿಚಿತ್ರವಾಗಿಯೇ ಇವೆ. ಅರ್ಥರಚನೆಯ ವಿರೋಧಾಭಾಸ ಎಂಬುದಕ್ಕೆ ಬೇರೊಂದು ವ್ಯಾಖ್ಯೆಯನ್ನು ಆಕೆ ನೀಡಿದ್ದರೆ, ಮೇಲಿನ ಎರಡು ವಾಕ್ಯಗಳನ್ನು ನಾವು ವಿವರಿಸುವ ಬಗೆಯೇ ಬೇರೆಯಾಗುತ್ತಿತ್ತು. ‘‘ಭಾಷೆಯಲ್ಲಿ ಪ್ರವೃತ್ತವಾಗಿರುವ ಒಂದು ಅರ್ಥರಚನೆಯ ನಿಯಮದ ಪ್ರಕಾರ ಗಂಡಸೇ ಎಲ್ಲದಕ್ಕೂ ಪ್ರಮಾಣ’’ ಎಂದು ಡೇಲ್ ಸ್ಪೆಂಡರ್ ಹೇಳುತ್ತಾಳೆ. ಇದಕ್ಕೆ ಪೂರಕವಾಗಿ ಇನ್ನೊಂದು ಸಾಮಾನ್ಯ ಅರ್ಥರಚನೆಯ ನಿಯಮವನ್ನು ಹೇಳಲಾಗಿದೆ.  ‘‘ಹೆಂಗಸಿಗೆ ಅನ್ವಯವಾಗುವ ಯಾವುದೇ ಸಂಕೇತವಾಗಲೀ ಅದು ನಕಾರಾತ್ಮಕವಾಗಿಯೇ ಇರುತ್ತದೆ. ಜೊತೆಗೆ ಲೈಂಗಿಕ ನೆಲೆಯನ್ನು ಪಡೆದಿರುತ್ತ ದೆಂಬುದನ್ನು ಗಮನಿಸಬೇಕು.’’. ಎಂಬುದೇ ಆ ನಿಯಮ. ‘‘ಕೇವಲ ಪದಗಳನ್ನು ಬಿಡುವುದು, ಇಲ್ಲವೇ ಸೇರಿಸುವುದೇ ಕಾಳಜಿಯಾಗಬಾರದು. ಏಕೆಂದರೆ, ಸಮಸ್ಯೆ ಇರುವುದು ಪದಗಳಲ್ಲಲ್ಲ. ಅವುಗಳ ಸಕಾರತ್ಮಕ, ಇಲ್ಲವೇ ನಕಾರತ್ಮಕ ನೆಲೆಗಳನ್ನು ನಿಯಂತ್ರಿಸುವ ಅರ್ಥರಚನೆಯ ನಿಯಮಗಳಲ್ಲಿದೆ. ಲೈಂಗಿಕನೆಲೆಯ ಪದಗಳನ್ನು ಕೈ ಬಿಡಬೇಕೆಂಬ ಯಾವುದೇ ಸೂಚನೆಯಾದರೂ ಈ ಮೇಲಿನ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ’’. ಎಂದು ಡೇಲ್ ಸ್ಪೆಂಡರ್ ಒತ್ತಿ ಹೇಳುತ್ತಾಳೆ. ಈ ಅಂಶವು ಆಕೆಯ ವಿಶ್ಲೇಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಅದರ ಸ್ವರೂಪ ಮತ್ತು ಪರಿಣಾಮಗಳನ್ನು ಎಚ್ಚರಿಕೆಯಿಂದ ಚರ್ಚಿಸಬೇಕಾಗಿದೆ.

man ಮತ್ತು he ಎಂಬ ಪದಗಳ ಅರ್ಥಕ್ಕಷ್ಟೇ ಗಮನಹರಿಸುವ ವಿಶ್ಲೇಷಣೆಗಳಲ್ಲಿ ಒಂದು ಸಮಸ್ಯೆ ಇದೆ. ಇಂಥ ಸ್ತ್ರೀವಾದಿಗಳು man ಪದವು ‘ಮನುಷ್ಯ’ನನ್ನು ಸೂಚಿಸುವುದಿಲ್ಲ.  ‘ಗಂಡಸ’ನ್ನು ಮಾತ್ರ ಸೂಚಿಸುತ್ತದೆ ಎಂದು ವಾದಿಸುತ್ತಾರೆ. ತಮ್ಮ ವಾದಕ್ಕೆ ಆಧಾರವಾಗಿ ಕೆಳಗಿನ ವಾಕ್ಯಗಳನ್ನು ಉದಹರಿಸುತ್ತಾರೆ.

೧. Man’s vital interests are food, shelter, and access to female.

೨.  Man is the only primate that commits rape

man ಎಂಬುದು ‘ಮನುಷ್ಯ’ನನ್ನು ಸೂಚಿಸುತ್ತಿದ್ದರೆ ಮೇಲಿನ ಎರಡೂ ವಾಕ್ಯಗಳು ಅರ್ಥಹೀನವಾಗುತ್ತವೆ. ಆಗ ಈ ಕೆಳಗಿನ ವಾಕ್ಯದಷ್ಟೇ ಅಸಂಬದ್ಧವಾಗಿ ತೋರುತ್ತದೆ-

೩.  Man unlike other mammals, has dificulty in giving birth.

ಆದರೆ, ಮೊದಲ ಎರಡು ವಾಕ್ಯಗಳನ್ನು ಜನ ಬಳಸುವುದುಂಟು, ಬಳಸಿದಾಗ ಜನ ಒಪ್ಪುವುದೂ ಉಂಟು. ಆದರೆ, ಮೂರನೆಯ ವಾಕ್ಯವನ್ನು ಬಳಸುವುದೂ ಇಲ್ಲ, ಒಪ್ಪುವುದೂ ಇಲ್ಲ. ಅರ್ಥ ಮೀಮಾಂಸಕರು, ನಿಘಂಟು ತಜ್ಞರು ಏನೇ ಹೇಳಿದರೂ man ಎಂದರೆ ಕೇವಲ ಗಂಡಸು ಎಂಬ ಅರ್ಥ ಮಾತ್ರ ಇದೆ ಎಂದು ಸ್ತ್ರೀವಾದಿಗಳು ವಾದಿಸುತ್ತಾರೆ.  ಹೀಗೆಯೇ ಜಂಡರ್ ಯಾವುದೆಂದು ಖಚಿತವಾಗಿ ಹೇಳಲಾಗದ ಎಷ್ಟೋ ಪದಗಳು man ಪದವನ್ನು ಹೋಲದಿದ್ದರೂ, ಬಳಕೆಯಲ್ಲಿ ಗೊಂದಲಗಳನ್ನು ಉಂಟು ಮಾಡದೆ ಇರಬಹುದು.  ಉದಾಹರಣೆಗೆ –

೪.  People will give up their wives, but not power.

೫.  Americans of higher stature have less chance of having a fat wife.

೬.  Young people should be out interfering with the local maidene.

೭.  Drivers – belt the wife and kids.  keep them safe.

ಹಾಗಾಗಿ ಸ್ತ್ರೀವಾದಿಗಳ ನಿಲುವನ್ನು man ಅಲ್ಲದೆ, ಹಲವು ಪದಗಳಿಗೆ ವಿಸ್ತರಿಸಬೇಕಾಗುತ್ತದೆ.  ಡೇಲ್ ಸ್ಪೆಂಡರ್ ಬಳಸಿದ ಸಾಮಾನ್ಯ ಅರ್ಥರಚನೆಯ ನಿಯಮಗಳ ವಿಶ್ಲೇಷಣೆಯು ಕೇವಲ ಒಂದು ಪದಕ್ಕೆ ಮಾತ್ರ ಅನ್ವಯಿಸದೆ ವಿಸ್ತೃತ ನೆಲೆಗೆ ಒಯ್ಯುವ ಪ್ರಯತ್ನದಂತೆ ತೋರುತ್ತದೆ. ಆಕೆ ನಿರೂಪಿಸಿದ ಮೊದಲನೆಯ ನಿಯಮವು ‘‘ಸ್ತ್ರೀಯರನ್ನು ಹೊರಗಿಡುವ ’’ಭಾಷೆಯ ಲಕ್ಷಣವು ಕೇವಲ man /he ಗೆ ಮಾತ್ರ ಸೀಮಿತವಾಗಿಲ್ಲ ಎಂದು ಹೇಳುತ್ತದೆ. ಎರಡನೆಯ ನಿಯಮವು ಹೆಂಗಸನ್ನು ಅರ್ಥದ ನೆಲೆಯಲ್ಲಿ ಕೀಳುಗೈಯುವ ಎಲ್ಲ ಪ್ರಯತ್ನಗಳನ್ನೂ ಒಗ್ಗೂಡಿಸಲು ಪ್ರಯತ್ನಿಸುತ್ತದೆ. ಆದರೆ, ಈ ಅರ್ಥರಚನೆಯ ನಿಯಮಗಳು ಸಮಸ್ಯಾತ್ಮಕವಾಗಿವೆ. ಮೊದಲನೆಯದಾಗಿ ಈ ನಿಯಮಗಳು ಅತಿವ್ಯಾಪ್ತಿಯಿಂದ ಕೂಡಿವೆ. ಈ ಬಗೆಯ ಪದಗಳ ಚೌಕಟ್ಟಿಗೆ ಸೇರದ ಪದಗಳಿಗೂ ಅವು ಅನ್ವಯವಾಗಿಬಿಡುತ್ತದೆ. ಉದಾಹರಣೆಗೆ,

೮.  Poeple don’t like being ill, but women put up with it better than men.

೯.  I met several Americans this summer and the most interesting of them were a journalist and her daughter.

ಕೆಲವೊಮ್ಮೆ ಕೇವಲ ಹೆಂಗಸರನ್ನಷ್ಟೇ ಸೂಚಿಸುವ ಪ್ರಸಂಗಗಳಿವೆ. ಉದಾಹರಣೆಗೆ

೧೦.  The consumer will not know that she is buying foreign eggs

೧೧.                  Nurse’s

            A                              first duty is to her patient

                        speech therapist

ಹೀಗೆಯೇ, ಎರಡನೆಯ ನಿಯಮದ ಅಡಿಯಲ್ಲೂ ಹೆಂಗಸನ್ನು ಸೂಚಿಸುವ ಸಂಕೇತಗಳು ತಮ್ಮ ವ್ಯಾಪ್ತಿಯನ್ನು ದಾಟಿ ಹೋಗಿರುವ ಪ್ರಸಂಗಗಳು ಇರುತ್ತವೆ, ಅಲ್ಲದೆ ಹೀನಾರ್ಥಗಳನ್ನು ಇಲ್ಲವೇ ಲೈಂಗಿಕ ನೆಲೆಯ ಸೂಚ್ಯಾರ್ಥಗಳನ್ನು ಹೊಂದಿರಬಹುದು.

೧೨.                     Sister

            My       daughter       took (her grandmother out for lunch.)

                        aunt

೧೩.  The new head mistress introduced herself to the pupil’s mothers.

ಕೆಲವೊಮ್ಮೆ ಒಂದು ಸ್ತ್ರೀವಾದಿ ಪದಕ್ಕೆ ಹೀನಾರ್ಥವಿದ್ದರೆ, ಇನ್ನೊಂದಕ್ಕೆ ಅಂಥ ಹೀನಾರ್ಥವೇನೂ ಇರುವುದಿಲ್ಲ. ಮುಂದೆ ಬರುವ ವಾಕ್ಯ ೧೪ ಮತ್ತು ೧೫ ನ್ನು ನೋಡಿ

೧೪.  We have not spoken to the female who lives upstairs

                                                                        girl

೧೫.  We have not spoken to the                         who lives upstairs

                                                                        woman

ಹೀಗಾಗಿ ಡೇಲ್ ಸ್ಪೆಂಡರ್ ನಿರೂಪಿಸಿದ ನಿಯಮಗಳನ್ನು ಎಲ್ಲ ಕಡೆಯೂ ಅನ್ವಯಿಸಲು ಬರುವುದಿಲ್ಲ. ಆದ್ದರಿಂದ ಇವುಗಳನ್ನು ಅರ್ಥರಚನೆಯ ನಿಯಮಗಳೆಂದು ಹೇಳಲಾಗದು. ಭಾಷಾಶಾಸ್ತ್ರೀಯ ನಿಯಮಗಳು ಒಂದೋ ವಿನಾಯತಿ ಇಲ್ಲದಂತೆ ಎಲ್ಲ ಕಡೆಯೂ ಅನ್ವಯವಾಗಬೇಕು, ಇಲ್ಲವೇ ಅನ್ವಯಗೊಳ್ಳಲು ನಿರ್ದಿಷ್ಟವಾದ ಸಂದರ್ಭವೊಂದಿರಬೇಕು.  ಈ ಸಂದರ್ಭಗಳನ್ನು ಕೇವಲ ಭಾಷಿಕ ನೆಲೆಯಲ್ಲಿ ಮಾತ್ರ ವಿವರಿಸಲಾಗುತ್ತದೆ. ಧ್ವನಿರಚನೆಯ, ವಾಕ್ಯರಚನೆಯ, ಇಲ್ಲವೇ ಅರ್ಥರಚನೆಯ ಸಂದರ್ಭಗಳನ್ನು ಸ್ಪಷ್ಟವಾಗಿ ಗುರುತಿಸಲಾಗುತ್ತದೆ. ಅಲ್ಲದೆ, ಇಂಥ ಸಂದರ್ಭಗಳನ್ನು ಬೇಕಾಬಿಟ್ಟಿಯಾಗಿ ಪಟ್ಟಿ ಮಾಡಿ, ಕೆಲವು ಸಂದರ್ಭಗಳಲ್ಲಿ ನಿಮಯವು ಅನ್ವಯಿಸದೆಯೂ ಇರಬಹುದೆಂದು ಹೇಳುವಂತಿಲ್ಲ.  ಇಂತಹ ಸಂದರ್ಭ ನಿರೂಪಣೆಗಳ ಹಿಂದೆ ಒಂದು ಗೊತ್ತಾದ ನಿಯಮವಿರುತ್ತದೆ. ಡೇಲ್ ಸ್ಪೆಂಡರ್‌ಳ ವಿಶ್ಲೇಷಣೆಯಲ್ಲಿ ಇದಾವುದೂ ಕಾಣುವುದಿಲ್ಲ. ತನ್ನ ನಿಯಮಗಳನ್ನು ನಿಯಂತ್ರಿಸುವ ಸಂದರ್ಭಗಳನ್ನು ಹೇಳುವುದಿಲ್ಲ. ಅವು ಅನ್ವಯವಾಗದೆ ಹೋಗುವ ಪ್ರಸಂಗಗಳನ್ನೂ ವಿವೇಚಿಸುವುದಿಲ್ಲ. ಈ ಶರತ್ತುಗಳನ್ನು ಪೂರೈಸದೆ ಇರುವುದರಿಂದ, ಆಕೆ ಹೇಳಿದ ನಿಯಮಗಳನ್ನು ಪ್ರಶ್ನಿಸಲೇ ಬೇಕಾಗುತ್ತದೆ. ಉದಾಹರಣೆಗಳಿವೆಯೆಂದ ಮಾತ್ರಕ್ಕೆ ನಿಯಮವೊಂದು ಧುತ್ತೆಂದು ಮೈದಳೆಯುವುದಿಲ್ಲ. ನಿಯಮವನ್ನು ಮೀರುವ ಉದಾಹರಣೆಗಳನ್ನು ಗಮನಿಸಿರಬೇಕು. ಒಟ್ಟಾರೆಯಾಗಿ, ಈಕೆಯ ನಿರೂಪಣೆ ಸಾರಾಸಗಟಾಗಿದೆ.  ಅದೆಲ್ಲವನ್ನೂ ಒಗ್ಗೂಡಿಸಿ ಎರಡು ಖಚಿತವಾದ ನಿಯಮಗಳನ್ನು ನಿರೂಪಿಸುವುದು ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ.