ಸ್ತ್ರೀವಾದಿಗಳು ಭಾಷೆಯನ್ನು ಕುರಿತು ಏಕೆ ಚರ್ಚಿಸಬೇಕು? ಇಂದಿನ ಸಾಹಿತ್ಯ ತತ್ತ್ವಗಳು ಮತ್ತು ಸಾಮಾಜಿಕ ತತ್ತ್ವಗಳನ್ನು ಬಲ್ಲ  ಓದುಗರಲ್ಲಿ ಈ ಪ್ರಶ್ನೆ ಏಳುವುದೇ ಇಲ್ಲ.  ಒಂದು ವೇಳೆ ಈ ಪ್ರಶ್ನೆಯನ್ನು ಕೇಳಿದರೆ ಅವರಲ್ಲಿ ಉತ್ತರ ಸಿದ್ಧವಾಗಿಯೇ ಇರುತ್ತದೆ.  ಹಾಗಿಲ್ಲದ ಓದುಗರಿಗೆ ಪ್ರಶ್ನೆಯು ವಿಚಿತ್ರವೆನ್ನಿಸಬಹುದು, ಇಲ್ಲವೇ ನಿಜವಾದ ಸಮಸ್ಯೆಗಳಿಂದ ದೂರ ಸೆಳೆಯುವ ತಂತ್ರವೆನಿಸಲೂ ಬಹುದು. ಹೀಗಿದ್ದರೂ, ಇಂದಿನ ಸ್ತ್ರೀವಾದಗಳು (ಬಹುವಚನವನ್ನು ಬೇಕೆಂದೇ ಬಳಸಿದ್ದೇನೆ) ಭಾಷೆಯನ್ನು ತಮ್ಮ ರಾಜಕೀಯ ಚಿಂತನೆಗಳಲ್ಲಿ ಸೇರ್ಪಡೆ ಮಾಡಿಕೊಂಡಿವೆ.  ತಮ್ಮ ಭಾಷೆಯನ್ನು ಕುರಿತು ಸ್ತ್ರೀವಾದಿ ಮೀಮಾಂಸೆ ಈಗ ಜಾರಿಯಲ್ಲಿದೆ. ಸಾರ್ವಜನಿಕವಾಗಿ ಮತ್ತು ಶೈಕ್ಷಣಿಕ ವಲಯಗಳಲ್ಲಿ ಈ ಮೀಮಾಂಸೆ ಎಷ್ಟು ಪರಿಣಾಮ ಬೀರಿದೆಯೆಂದರೆ, ಅದನ್ನೀಗ ಸುಮ್ಮನೆ ತಳ್ಳಿ ಹಾಕುವಂತಿಲ್ಲ. ಬದಲಿಗೆ, ಅದರ ತಿರುಳನ್ನು ಅರಿಯಬೇಕಿದೆ ಮತ್ತು ಪರಿಣಾಮಗಳನ್ನು ಗುರುತಿಸಬೇಕಾಗಿದೆ.

ಸ್ತ್ರೀವಾದಿಗಳು ಭಾಷೆಯನ್ನು ಹಲವು ಬಗೆಗಳಲ್ಲಿ ನೋಡಿದ್ದಾರೆ. ಈ ವೈವಿಧ್ಯಕ್ಕೆ ಸ್ತ್ರೀವಾದಗಳಲ್ಲೇ ಇರುವ ರಾಜಕೀಯ ಚಿಂತನೆಗಳ ವ್ಯತ್ಯಾಸವು ಕಾರಣವಾಗಿರುವಂತೆ ಭಾಷೆಯನ್ನು ಈಗ ಚರ್ಚಿಸುವ ಚೌಕಟ್ಟುಗಳು ಮತ್ತು ಅವುಗಳ ಕಥನಗಳ ಬಹುಳತೆಯೂ ಕಾರಣವಾಗಿದೆ. ಭಾಷೆಯನ್ನು ಬಗೆಬಗೆಯ ಚಿಂತನಾ ಪರಂಪರೆಗಳಲ್ಲಿ, ತಾತ್ತ್ವಿಕ ಚೌಕಟ್ಟುಗಳಲ್ಲಿ ಮತ್ತು ಶೈಕ್ಷಣಿಕ ವಲಯಗಳಲ್ಲಿ ವಿಶ್ಲೇಷಿಸಲಾಗುತ್ತಿದೆ. ನಾವಿಲ್ಲಿ ಭಾಷೆಯನ್ನು ಕುರಿತ ಸ್ತ್ರೀವಾದಿ ಮೀಮಾಂಸೆಯನ್ನಷ್ಟೇ ಗಮನಿಸುತ್ತಿಲ್ಲ. ಅದರಾಚೆಗೂ ಹೋಗುತ್ತಿದ್ದೇವೆ. ಏಕೆಂದರೆ ಇಡೀ ಚಿಂತನೆ ಈಗ ನಿಂತ ನೀರಾಗಿ ಉಳಿದಿಲ್ಲ.  ಬದಲಾಗುತ್ತಲೇ ಇದೆ. ಈ ಪ್ರಬಂಧದಲ್ಲಿ ಬಗೆಬಗೆಯ ಸ್ತ್ರೀವಾದಿ ದೃಷ್ಟಿಕೋನಗಳು ಭಾಷೆ ಯನ್ನು ವಿಶ್ಲೇಷಿಸಲು ಹೊಂದಿರುವ ಚೌಕಟ್ಟುಗಳನ್ನೂ, ಅವುಗಳ ತಾತ್ತ್ವಿಕ ನೆಲೆಗಳನ್ನೂ, ಚಾರಿತ್ರಿಕ ಬೆಳೆವಣಿಗೆಯನ್ನೂ ಹಾಗೂ ವಿಷಯ ವೈವಿಧ್ಯವನ್ನೂ ಗಮನಿಸಲಿದ್ದೇವೆ.

ಮೀಮಾಂಸೆ

ಮೊದಲಿಗೆ ಭಾಷೆಯನ್ನು ಕುರಿತು ಸ್ತ್ರೀವಾದಿ ಮೀಮಾಂಸೆ ಎಂದರೇನು ಎಂಬುದನ್ನು ನೋಡೋಣ. ಹಾಗೆ ನೋಡಿದರೆ ಅದಕ್ಕೂ ಮೊದಲು ಯಾವುದಾದರೊಂದು ವಿಷಯದ ಮೀಮಾಂಸೆ ಎಂದರೇನು ಎಂಬುದನ್ನು ತಿಳಿಯಬೇಕು. ಮೀಮಾಂಸೆ ಎಂಬ ಪದ ಬಳಕೆಯಿಂದಾಗಿ ಸವಕಲಾಗಿದೆ. ಆದರೆ, ನಾನು ಬೇಕೆಂತಲೇ ಮೀಮಾಂಸೆ ಎಂಬ ಪದ ಬಳಸಿದ್ದೇನೆ. ಇದಕ್ಕೆ ಎರಡು ಅರ್ಥಗಳಿವೆ. ಎರಡೂ ಅರ್ಥಗಳು ನಮಗಿಲ್ಲಿ ಬೇಕಾಗಿವೆ.

ಮೊದಲ ಅರ್ಥ ಎಲ್ಲರಿಗೂ ಗೊತ್ತಿರುವುದು.  ಈಗೀಗ ಹೆಚ್ಚು ಜನ ‘ಮೀಮಾಂಸೆ’ ಎಂಬ ಪದವನ್ನು ‘ವಿಮರ್ಶೆ’ ಎಂಬ ಅರ್ಥದಲ್ಲಿ ಬಳಸುತ್ತಾರೆ. ಇಲ್ಲಿ ಒಂದು ವಿಷಯವನ್ನು ಮೌಲ್ಯಮಾಪನ ಮಾಡುವ ಇಲ್ಲವೇ ಅದರ ಕುಂದುಕೊರತೆಗಳನ್ನು ಎತ್ತಿ ಹೇಳುವ ಗುರಿ ಇರುತ್ತದೆ. ಇದು ಸರಿಯಾದ ಅರ್ಥವೇ ಆಗಿದೆ. ಏಕೆಂದರೆ, ಸ್ತ್ರೀವಾದಿಗಳು ಈಗ ಭಾಷೆಯನ್ನು ವಿವರಿಸುತ್ತಿರುವ ಬಗೆಯಲ್ಲಿ ಇರುವ ಕೊರತೆಗಳನ್ನು ಎತ್ತಿ ಹೇಳುವವರೇ ಆಗಿದ್ದಾರೆ. ಹೆಂಗಸರಿಗೆ ಭಾಷೆಯು ತೊಡಕುಗಳನ್ನು ಉಂಟು ಮಾಡುತ್ತಿದೆ ಎಂಬುದರಿಂದಾಗಿ ಸ್ತ್ರೀವಾದಿಗಳು ಅದನ್ನು ಬದಲಿಸಲು ಮತ್ತು ಹೆಂಗಸರ ಬಳಕೆಗೆ ತಕ್ಕಂತೆ ಅದನ್ನು ಒಡೆದು ಕಟ್ಟಲು ಮುಂದಾಗಿದ್ದಾರೆ. ಸ್ತ್ರೀವಾದಿ ಚಿಂತಕರು ಈ ನಿಟ್ಟಿನಲ್ಲಿ ನಡೆಸಿರುವ ಪ್ರಯತ್ನ ಮತ್ತು ಪಡೆದಿರುವ ಗೆಲುವು ಹಲವು ಅಧ್ಯಯನಗಳಿಂದ ತಿಳಿದು ಬರುತ್ತದೆ. ಸುಮ್ಮನೆ ಒಂದೆರಡು ಉದಾಹರಣೆಗಳನ್ನು ನೀಡಬಹುದು. ‘ಅವನು’ ಮತ್ತು ‘ಮನುಷ್ಯ’ಎಂಬ ಪದಗಳು ಒಂದೇ ಎಂಬುದನ್ನು ಈಗ ತಳ್ಳಿ ಹಾಕಲಾಗಿದೆ. ಹೆಂಗಸು ಮದುವೆಯಾಗಿದ್ದಾಳೋ ಇಲ್ಲವೋ ಎಂಬುದನ್ನು ತಿಳಿಸಿ ಹೇಳುವ ಸೂಚಕಪದಗಳನ್ನು ಕಿತ್ತು ಹಾಕಲಾಗಿದೆ.  ಭಾಷೆಯು ಹೆಂಗಸಿಗೆ ತನ್ನ ಒಳಗಿನ ಅನಿಸಿಕೆಗಳನ್ನು ಹೊರಗೆ ಹೇಳಲು ತಕ್ಕಂತಿಲ್ಲ ಎನ್ನುವ ಅಂಶವೂ ಕೂಡ ಸ್ತ್ರೀವಾದಿಗಳನ್ನು ಕಾಡಿಸಿದೆ. ಹೊಸ ಬಗೆಯ ಪ್ರತೀಕಗಳನ್ನು, ಬರವಣಿಗೆಯ ಹಾದಿಗಳನ್ನು ಹುಡುಕಲಾಗಿದೆ. ಈಗಿರುವ ಬಳಕೆಯ ಭಾಷೆಯು ಹೆಣ್ಣಿನ ದೇಹ ಮತ್ತು ಜೀವನವನ್ನು ಸರಿಯಾಗಿ ಪ್ರತಿನಿಧಿಸಲಾರದು ಎಂಬ ತಿಳಿವಳಿಕೆಯೇ ಹೀಗೆ ಹೊಸ ದಾರಿಗಳನ್ನು ಹುಡುಕಲು ಪ್ರೇರೇಪಿಸಿದೆ. ಇದೆಲ್ಲವೂ ಸೂಚಿಸುವುದೇನೆಂದರೆ ಬಳಕೆಯ ಭಾಷೆಯ ಬಗೆಗಳಲ್ಲಿ ಹೆಂಗಸಿಗೆ ಅಡ್ಡಿಗಳಿವೆ, ಹಾಗೂ ಅವು ಕೊರತೆಗಳೇ ಸರಿ. ಈ ನಿಲುವು ಸ್ತ್ರೀವಾದಿಗಳು ಇಂದಿಗೂ ಬಳಸುತ್ತಿರುವ ವಿವರಣೆಯ ಹಿಂದಿನ ನೆಲೆಗಟ್ಟಾಗಿದೆ.

ಮೀಮಾಂಸೆ ಎಂಬುದಕ್ಕೆ ಇನ್ನೊಂದು ಹೆಚ್ಚಿನ ಅರ್ಥವಿದೆ. ಈ ಅರ್ಥದಲ್ಲಿ ತತ್ತ್ವಶಾಸ್ತ್ರವು ಈ ಪದವನ್ನು ಬಳಸುತ್ತದೆ. ಯಾವುದಾದರೊಂದು ಸಂಗತಿಯನ್ನು ಮೀಮಾಂಸೆಗೆ ಗುರಿಪಡಿಸುವುದೆಂದರೆ ಆ ಸಂಗತಿಯು ಯಾವ ಚೌಕಟ್ಟಿನಲ್ಲಿ ಬೇರು ಬಿಟ್ಟಿದೆ ಎಂಬುದನ್ನು ತಿಳಿಯುವುದು ಮತ್ತು ಈ ಚೌಕಟ್ಟುಗಳ ಹಿಂದೆ ಇರುವ ತಿಳಿವಳಿಕೆಯ ತಳಹದಿ ಯಾವುದು ಎಂಬುದನ್ನು ಅರಿಯುವುದು. ಸ್ತ್ರೀವಾದಿ ಚಿಂತನೆಯ ಕೆಲವು ಎಳೆಗಳು ಭಾಷಾಮೀಮಾಂಸೆ ಯನ್ನು ಈ ನಿಟ್ಟಿನಲ್ಲೂ ಬೆಳೆಸಿವೆ ಎಂಬುದು ನಿಜ. ಸ್ತ್ರೀವಾದಿಗಳು ಹೊಸ ತತ್ತ್ವಗಳನ್ನು ಹುಡುಕಿದ್ದಾರೆ; ಚೌಕಟ್ಟುಗಳನ್ನು ರೂಪಿಸಿದ್ದಾರೆ. ಭಾಷೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ನೆಲೆಯ ಸಂಗತಿಗಳು ಬೆಳೆದಿವೆ. ಸ್ತ್ರೀ ಪುರುಷರಿಬ್ಬರಿಗೂ ಭಾಷೆ ಒಂದೇ ಎಂಬ ಬೇರು ಬಿಟ್ಟ ನಂಬಿಕೆಯನ್ನು ನಿರಾಕರಿಸಿವೆ. ಈ ಹಿಂದೆ ಜೀವಂತವಾಗಿದ್ದ ಭಾಷಾ ವಿಧಿವಾದವನ್ನು ಮತ್ತೊಮ್ಮೆ ಮುಂಚೂಣಿಗೆ ತಂದಿವೆ. ಇದರಿಂದಾಗಿ, ಭಾಷೆಯು ಲೋಕವನ್ನು ಕುರಿತ ನಮ್ಮ ಗ್ರಹಿಕೆಗಳನ್ನು ಪ್ರತಿಬಿಂಬಿಸುತ್ತದೋ, ಇಲ್ಲವೇ ಅಂಥಾ ಗ್ರಹಿಕೆಗಳ ಮಂಡನೆಗೆ ತಡೆಗೋಡೆ ಯಾಗಿದೆಯೋ ಎಂಬ ಪ್ರಶ್ನೆ ಮತ್ತೊಮ್ಮೆ ಕಾಡಿಸತೊಡಗಿದೆ. ಈ ಎರಡೂ ಅರ್ಥಗಳಲ್ಲಿ ನಾವು ‘ಮೀಮಾಂಸೆ’ ಎಂಬ ಪದವನ್ನು ಗಮನಿಸೋಣ.

ಮಾತು ಮತ್ತು ಮೌನ

ಸ್ತ್ರೀವಾದಿ ಕಥನಗಳಲ್ಲಿ ‘ಮಾತು’ಮತ್ತು ‘ಮೌನ’–ಇವೆರಡೂ ಬಲಶಾಲಿ ರೂಪಕ ಗಳಾಗಿವೆ.  ಹೆಂಗಸರು ಯಾವ ಅಡೆತಡೆಯೂ ಇಲ್ಲದೆ ತಮ್ಮ ನೆಲೆಯನ್ನು ಮಂಡಿಸಲು ಇರುವ ಅವಕಾಶಗಳು ಇಲ್ಲವಾಗಿವೆ ಎನ್ನುವುದನ್ನು ಹೇಳಲು ಈ ಪದಗಳು ಬಳಕೆಯಾಗಿವೆ. ಹೆಚ್ಚಾಗಿ ಇವುಗಳನ್ನು ರೂಪಕಗಳಂತೆ ಬಳಸಿರುವುದರಿಂದ ಈ ಪದಗಳು ಏನು ಹೇಳುತ್ತವೆ ಎನ್ನುವುದು ಸುಲಭವಾಗಿ ಗೊತ್ತಾಗುವುದಿಲ್ಲ. ಹೆಂಗಸರು ‘ಮೌನಿಗಳು’ ಇಲ್ಲವೇ ಅವರ ‘ಬಾಯಿ ಮುಚ್ಚಿಸಲಾಗಿದೆ’ ಎಂದು ಹೇಳಿದ ಕೂಡಲೇ ಅವರು ಎಲ್ಲೆಲ್ಲೂ ಯಾವಾಗಲೂ ಮಾತಿಲ್ಲದೆ ಇರುತ್ತಾರೆ ಎಂದಲ್ಲ.  ಇಲ್ಲವೇ ಅವರಿಗೆ ಮಾತಾಡಲು ಬರುವುದಿಲ್ಲವೆಂದೂ ತಿಳಿಯಲಾಗದು. ಏಕೆಂದರೆ ಮಾತು, ಹುಟ್ಟಿದ ಪ್ರತಿಯೊಬ್ಬ ಮಾನವ ಜೀವಿಗೆ ದೊರೆಯುವ ಸಾಮರ್ಥ್ಯ. ಹೆಂಗಸರದ್ದೇ ಎಂಬ ಭಾಷಿಕ ಚಟುವಟಿಕೆಗಳು ಇಲ್ಲ, ಇರುವುದೆಲ್ಲ ಗಂಡಸರಿಗೇ ಮೀಸಲಾಗಿದೆ ಎಂದೂ ತಿಳಿಯಬಾರದು.  ಹಾಗೆ ನೋಡಿದರೆ ಹೆಂಗಸರಿಗೂ ಗಂಡಸರಷ್ಟೇ ಭಾಷಿಕ ಚಟುವಟಿಕೆಗಳು ಮೀಸಲಾಗಿವೆ.  ಕಾಡುಹರಟೆ, ಹದಿಹರಯದ ದಿನಚರಿಗಳು, ಕುಟುಂಬದವರಿಗೆ ಕಾಗದ ಬರೆಯುವುದು, ಸಂದರ್ಭಕ್ಕೆ ತಕ್ಕಂತೆ ಶುಭಾಶಯದ ಕಾರ್ಡುಗಳನ್ನು ಕಳಿಸುವುದು -ಇವೆಲ್ಲ ಹೆಂಗಸರು ತೊಡಗಿಕೊಳ್ಳುವ ಭಾಷಿಕ ಚಟುವಟಿಕೆಗಳಾಗಿವೆ.

ಹೆಂಗಸರಿಗೆ ಮೀಸಲೆಂದು ತಿಳಿಯಲಾದ ಈ ಭಾಷಾ ಚಟುವಟಿಕೆಗಳನ್ನು ನೋಡಿದರೆ ಸಾಕು. ಹೆಂಗಸರ ಮೌನದ ಅರ್ಥ ಗೊತ್ತಾಗುತ್ತದೆ. ಏಕೆಂದರೆ, ಈ ಚಟುವಟಿಕೆಗಳಿಗೆಲ್ಲ ಸಮಾಜದಲ್ಲಿ ಬೆಲೆ ಇಲ್ಲ. ಕೆಲವನ್ನಂತೂ (ಉದಾ -ಕಾಡು ಹರಟೆ) ಕೀಳಾಗಿ ಕಾಣಲಾಗುತ್ತದೆ. ಇವೆಲ್ಲ ಭಾಷೆಯ ಖಾಸಗಿ ಬಳಕೆಗಳು. ಮನೆಯಲ್ಲಿ, ಕುಟುಂಬದಲ್ಲಿ, ನೆಂಟರಿಷ್ಟರಲ್ಲಿ ಮಾತ್ರ ಬಳಕೆಯಾಗುತ್ತದೆ. ಸಾರ್ವಜನಿಕ ವಲಯದಲ್ಲಿ, ಅಂದರೆ ಅಧಿಕೃತ ಸಂಸ್ಕೃತಿಯಲ್ಲಿ (ಹಾಗೆಂದರೆ, ಆಚರಣೆಗಳು, ಸೂತ್ರಬದ್ಧವಾದ ಜ್ಞಾನ ಮತ್ತು ಸೃಜನಶೀಲ ಕಲೆ ಎಂಬುದು ನನ್ನ ನಿಲುವು. ಇವುಗಳ ಮೂಲಕವೇ ಸಮಾಜ ತನ್ನ ಗುರುತುಗಳನ್ನು ರೂಪಿಸಿಕೊಂಡಿರುತ್ತದೆ) ಹೆಂಗಸರ ಭಾಷಿಕ ಚಟುವಟಿಕೆಗಳಿಗೆ ಜಾಗವೇ ಇಲ್ಲ.

ಕಾಪ್ಲಾನ್ ಮತ್ತಿತರರು(೧೯೮೬) ಮೇಲ್‌ಸ್ತರದ ಸಂಸ್ಕೃತಿಯಲ್ಲಿ ಹೆಂಗಸಿನ ದನಿಗೆ ಜಾಗವೇ ಇಲ್ಲದಿರುವುದನ್ನೇ ನಾವು ಆಕೆಯ ‘ಮೌನ’ವೆಂದು ತಿಳಿಯಬೇಕು ಎನ್ನುತ್ತಾರೆ. ಸಮಾಜವು ತುಂಬಾ ಗೌರವದಿಂದ ನೋಡುವ ಭಾಷಾ ಚಟುವಟಿಕೆಗಳಲ್ಲಿ ಧಾರ್ಮಿಕ ಆಚರಣೆಗಳು, ರಾಜಕೀಯ ವ್ಯಾಖ್ಯಾನಗಳು, ಕಾನೂನು ವ್ಯವಹಾರಗಳು, ವಿಜ್ಞಾನ, ಕಾವ್ಯ ಇವೆಲ್ಲ ಸೇರಿವೆ. ಈ ಚಟುವಟಿಕೆಗಳಲ್ಲಿ ಹೆಂಗಸಿನ ದನಿಯನ್ನು ನಾವು ಕೇಳುವುದೇ ಇಲ್ಲ. ಎಷ್ಟೋ ವೇಳೆ ಅಂಥ ಕಡೆಗಳಲ್ಲಿ ಆಕೆಯ ಬಾಯಿ ಮುಚ್ಚಿಸಲಾಗಿದೆ. ಏಕೆಂದರೆ, ಹೆಂಗಸಿಗೆ ಮಾತು ಬರುವದಿಲ್ಲವೆಂದಲ್ಲ. ಆಕೆ ಬಾಯಿ ಬಿಡದಂತೆ ಮಾಡಲಾಗಿದೆ. ಅದಕ್ಕಾಗಿ ನಿಷಿದ್ಧಗಳನ್ನು ರೂಪಿಸಿ ಜಾರಿಗೆ ಕೊಟ್ಟಿದ್ದಾರೆ. ತೊಡಕುಗಳನ್ನು ಹುಟ್ಟು ಹಾಕಿದ್ದಾರೆ. ಇಲ್ಲವೇ, ಆಚಾರ, ನಡಾವಳಿಗಳ ಮೂಲಕ ಕಂಡೂ ಕಾಣದಂತೆ ಒತ್ತಡಗಳನ್ನು ಹೇರ ಲಾಗುತ್ತದೆ. ಹೆಂಗಸರು ಬೇಕೆಂದರೆ ಪಾಲ್ಗೊಳ್ಳಬಹುದಾದ ಸನ್ನಿವೇಶಗಳಲ್ಲೂ ಕೂಡಾ, ಅವರು ಬದುಕನ್ನು ಸಾಗಿಸಲು ನಿಗದಿ ಪಡಿಸಿದ ಬಗೆಗಳಿಂದಾಗಿ, ಅಂಥಾ ಸನ್ನಿವೇಶಗಳಲ್ಲಿ ಪಾಲ್ಗೊಳ್ಳುವುದು ಕೂಡಾ ಅವರಿಗೆ ಅಪಾಯಗಳನ್ನು ತಂದೊಡ್ಡಬಹುದಾಗಿದೆ. ಅಲ್ಲದೆ, ಬೇರೆಯವರು ಗೇಲಿ ಮಾಡುತ್ತಾರೆಂದೋ, ಎದುರು ಬೀಳುತ್ತಾರೆಂದೋ, ಇಲ್ಲವೇ ಕಡೆಗಣಿಸುತ್ತಾರೆಂದೋ ತಿಳಿದು ಹೆಂಗಸರೂ ಕೂಡಾ ಬಾಯಿ ಬಿಚ್ಚದೆ ಮೌನಿಗಳಾಗಬಹುದು.

ಹೆಂಗಸರು ಬಾಯಿ ಬಿಚ್ಚದಂತೆ ಮಾಡುವುದು ಹೇಗೆ? ಒಂದು ತುದಿಯಲ್ಲಿ ಹೆಂಗಸಿಗೆ ಕೆಲವು ನಿಷಿದ್ಧಗಳನ್ನು ರೂಪಿಸಿ ಆಕೆ ಬಾಯ್ತೆರೆಯದಂತೆ ಮಾಡಬಹುದು. ಕೆಲವು ಸಮಾಜ ಗಳಲ್ಲಿ ಹೆಂಗಸರು ಮನೆಯ ಹೊರಗೆ ಮಾತಾಡುವಂತಿಲ್ಲ. ಮನೆಯೊಳಗೂ ಹಿರಿಯರೆದುರು ಬಾಯ್ತೆರೆಯಬಾರದು. ಮತ್ತೆ ಕೆಲವು ಸಮುದಾಯಗಳಲ್ಲಿ ಹೆಂಗಸರು ತಮ್ಮ ಗಂಡಂದಿರ ಸಂಬಂಧಿಕರ ಹೆಸರುಗಳನ್ನು ಬಾಯಿ ಬಿಟ್ಟು ಹೇಳುವಂತಿಲ್ಲ.  ಆ ಹೆಸರುಗಳಿರಲಿ, ಅವುಗಳಿಗೆ ಉಚ್ಚಾರಣೆಯಲ್ಲಿ ಹೋಲಿಕೆ ಇರುವ ಪದಗಳನ್ನೂ ಹೇಳುವಂತಿಲ್ಲ. ಹೀಗೆ ಮಾಡಿದಾಗ ಹೆಂಗಸಿಗೆ ಮಾತಾಡದಂತೆ ಕಟ್ಟನ್ನು ಹಾಕಿದಂತೆ ಆಗುವುದಿಲ್ಲವಾದರೂ, ತಾನು ಹೇಳಬೇಕಾದ್ದನ್ನು ತಿಳಿಸಲು ಬಳಸು ದಾರಿಗಳನ್ನು ಹುಡುಕುವ ಒತ್ತಡಕ್ಕೆ ಒಳಗಾಗುತ್ತಾಳೆ. ಪಶ್ಚಿಮದ ಸಮಾಜಗಳಲ್ಲಿ ಇಂಥಾ ಕಟ್ಟುಪಾಡುಗಳು, ನಿಷಿದ್ಧಗಳು ಇಲ್ಲವಾದರೂ ಹೆಂಗಸರು ಕೆಲವು ಗೊತ್ತಾದ ಭಾಷಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ಅಲ್ಲೂ ತಡೆಯ ಲಾಗುತ್ತದೆ. ಈಗಲೂ ಹೆಂಗಸು ಬೈಗುಳದ ನುಡಿಗಳನ್ನು ಬಳಸಿದರೆ ಇತರರು ಮುಜುಗರ ಪಡುತ್ತಾರೆ. ಹಾಗೆಯೇ, ಇಂಥ ನುಡಿಗಳನ್ನು ಹೆಂಗಸರೆದುರಿಗೆ ಗಂಡಸರೂ ನುಡಿಯಲು ಹಿಂಜರಿಯುತ್ತಾರೆ.  ಸಾರ್ವಜನಿಕ ಭಾಷಣಕಾರರೂ ಅರ್ಚಕರೂ ಆಗಬಯಸುವ ಹೆಂಗಸರನ್ನು ಗೇಲಿ ಮಾಡುವುದು ಈಗಲೂ ಇದೆ. ಇದೇ ಮಾತು ನಗೆ ಪ್ರಸಂಗಗಳಲ್ಲಿ ಹೆಂಗಸರು ಪಾಲ್ಗೊಂಡಾಗಲೂ ನಿಜವೆನಿಸುತ್ತದೆ. ಈ ಗೇಲಿಗೆ ಅರ್ಥವೇ ಇಲ್ಲ. ಸಾರ್ವಜನಿಕ ಭಾಷಣ, ಪೂಜಾ ಚಟುವಟಿಕೆಗಳು – ಇವೆಲ್ಲವೂ ಇನ್ನೂವರೆಗೆ ಹೆಂಗಸರಿಗೆ ಬಾಗಿಲು ತೆರೆದಿರಲಿಲ್ಲ. (ಕೆಲವು ಧಾರ್ಮಿಕ ಸಂಪ್ರದಾಯಗಳಲ್ಲಿ ಈಗಲೂ ಹಾಗೇ ಇದೆ.) ಮದುವೆ ಮುಂತಾದ ಸಾರ್ವಜನಿಕ ಸಮಾರಂಭಗಳಲ್ಲೂ ಅತಿಥಿಗಳನ್ನು ಉದ್ದೇಶಿಸಿ ಮಾತಾಡುವವರು ಗಂಡಸರೇ ಆಗಿರುತ್ತಾರೆ.

ಹೆಂಗಸರ  ‘ಮೌನ’ವನ್ನು  ಕುರಿತು ಎಲ್ಲೆಡೆಯೂ ಈ ಬಗೆಯ ನಿರಾಶಾದಾಯಕ ಬೀಸು ಮಾತುಗಳು ಮುಖಕ್ಕೆ ರಾಚಿದಂತೆ ಹರಡಿವೆ ಎಂದು ಇಷ್ಟೆಲ್ಲ ಹೇಳಿದ ಮೇಲೆ, ಇಂಥ ಮಾತುಗಳ ಎರಡು ಮುಖ್ಯ ಲಕ್ಷಣಗಳನ್ನು ಗುರುತಿಸುವ ಅಗತ್ಯ ಕಾಣಿಸುತ್ತಿದೆ.  ಮಾನವಶಾಸ್ತ್ರದ ಹಿನ್ನೆಲೆಯಿಂದ ಬಂದ ಸೂಸನ್ ಗಾಲ್(೧೯೯೧) ತನ್ನ ‘ಮಾತು ಮತ್ತು ಮೌನ’ ಎಂಬ ಬರಹದ ಅಡಿಟಿಪ್ಪಣಿಯೊಂದರಲ್ಲಿ ಈ ಮುಂದಿನ ಮಾತುಗಳನ್ನು ಹೇಳುತ್ತಾಳೆ:  ಸಮಾಜವಿಜ್ಞಾನಗಳು ಹೆಂಗಸರನ್ನು ನಿರ್ಲಕ್ಷಿಸಿದೆ ಎಂಬ ಸಂಗತಿಯೇ ನಮ್ಮ ಪೂರ್ವಜ ಹೆಂಗಸರು ಹಾಗೂ ಉಪಸಂಸ್ಕೃತಿಗಳನ್ನು ‘ಮೌನಿಗಳು’ ಎಂಬಂತೆ ಚಿತ್ರಿಸಿವೆ. ಆದರೆ ಈ ‘ಮೌನ’ವು ಸದ್ಯ ಚಾಲ್ತಿಯಲ್ಲಿರುವ ಪಶ್ಚಿಮದ ವಿದ್ವತ್ತಿನ ಭಾಗವಾಗಿ ಖಚಿತವಾಗಿ ನೆಲಗೊಂಡಂತೆ ಆಗಿಬಿಟ್ಟಿದೆ.  ಪ್ರಪಂಚದ ಎಲ್ಲ ಸಂಸ್ಕೃತಿಗಳನ್ನು ಸಾರ್ವಜನಿಕ ವಲಯ ಗಳಿಂದ ಮತ್ತು ಮೇಲ್‌ಸ್ತರದ ಭಾಷಾಚಟುವಟಿಕೆಗಳಿಂದ ಹೆಂಗಸರನ್ನು ದೂರವಿಡಲಾಗಿತ್ತು ಎಂಬ ಸಂಗತಿಯನ್ನು ಕಾರಣವಾಗಿ ನೀಡುವ ಈ ವಿದ್ವತ್ತಿನ ಸರಳ ಹೇಳಿಕೆಯನ್ನು ಈಚಿನ ಸ್ತ್ರೀವಾದಿ ವಿದ್ವಾಂಸರು ಪ್ರಶ್ನಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ತಿಳಿದುಕೊಳ್ಳಬೇಕಾದ್ದು ಇನ್ನೂ ಸಾಕಷ್ಟಿದೆ.

‘ಮೌನ’ ಎಂದಾಗ ಬಲಹೀನತೆ ಎಂಬ ಅರ್ಥ ಹುಟ್ಟುತ್ತದೆ. ಆದರೆ ಗಾಲ್ ಹೇಳುವಂತೆ ಮೌನದ ಅರ್ಥ ಇಷ್ಟು ಸರಳವಾಗಿಲ್ಲ. ಅದು ಯಾವಾಗಲೂ ಬಲಹೀನತೆಯ ಸೂಚಕ ಆಗಬೇಕಿಲ್ಲ. ಎಲ್ಲವನ್ನೂ ಇನ್ನೊಬ್ಬರೆದುರು ಹೇಳಿಕೊಳ್ಳಲೇಬೇಕಾದ ಪ್ರಸಂಗಗಳಿವೆ ಎಂದುಕೊಳ್ಳಿ. ಉದಾಹರಣೆಗೆ ಪ್ರೀಸ್ಟ್‌ಗಳ ಎದುರಿನಲ್ಲಿ, ಚಿಕಿತ್ಸಕರ ಬಳಿ, ಇಲ್ಲವೇ ಕಾನೂನು ಪಾಲಕರಲ್ಲಿ ಹೀಗೆ ಹೇಳಿಕೊಳ್ಳಬೇಕಾಗುತ್ತದೆ. ಇಂಥ ಕಡೆಗಳಲ್ಲಿ ಒತ್ತಾಯ ಮಾಡುವ ಶಕ್ತಿಯನ್ನು ಮೌನದ ಮೂಲಕವೇ ಎದುರಿಸುವ ತಂತ್ರವೂ ಸಾಧ್ಯವಷ್ಟೇ? ಇಲ್ಲಿ ಮೌನ ಬಲಹೀನತೆಯಲ್ಲ. ಹೀಗೆಯೇ ಕೆಲವೊಮ್ಮೆ ಮೌನವು ಶಕ್ತಿಶಾಲಿಗಳ ಅಸ್ತ್ರವೂ ಆಗಬಹುದು.  ಉದಾಹರಣೆಗೆ, ಪುರುಷತ್ವದ ಲಕ್ಷಣವನ್ನಾಗಿ ದೃಢ ದೇಹದ ಮೌನಿ ವ್ಯಕ್ತಿಯನ್ನು ಗುರುತಿಸಲಾಗಿದೆ. ಈ ಪುರುಷ ಶಕ್ತಿಯ ಪ್ರಕಾರ ಗಂಡಸಿಗೆ ಭಾವಾತ್ಮಕ ಒತ್ತಡಗಳಿರುವುದಿಲ್ಲ. ಅವರು ಇಂತಹ ಪ್ರಸಂಗಗಳಿಂದ ದೂರವೇ ಉಳಿಯುತ್ತಾರೆ.  ಒಂದೊಮ್ಮೆ ಹೆಂಗಸರು ಬಲಹೀನರೇ ಎಂದುಕೊಂಡರೂ ಅದಕ್ಕನುಗುಣವಾಗಿ ಹೆಂಗಸರು ಹೊಸಬಗೆಯ ಭಾಷಿಕ ಕೌಶಲಗಳನ್ನು ರೂಪಿಸಿಕೊಳ್ಳುವ ದಿಕ್ಕಿನಲ್ಲಿ ಸಾಗುತ್ತಾರೆಂದು ಗಾಲ್ ಹೇಳುತ್ತಾಳೆ. ಇನ್ನೊಬ್ಬರ ಮಾತನ್ನು ಗಮನವಿಟ್ಟು ಕೇಳುವುದು, ಮಾತುಕತೆಯಲ್ಲಿ ಇನ್ನೊಬ್ಬರಿಗೆ ಹೊಂದಿಕೊಳ್ಳುವುದು, ನಮ್ರವಾಗಿರುವುದು, ಸರಿಯಾದ ಹೊತ್ತಿನಲ್ಲಿ ಎಷ್ಟು ಬೇಕೋ ಅಷ್ಟು ಬೆಂಬಲದ ನುಡಿಗಳನ್ನಾಡುವುದು, ಮಾತಿನ ವರಸೆಗಳನ್ನು ಬದಲಾಯಿಸುವುದು ಮತ್ತು ನುಡಿಜಿಗಿತ ಮಾಡುವುದು – ಇವೆಲ್ಲವೂ ಹೆಂಗಸರು ರೂಪಿಸಿಕೊಂಡ ಹೊಸ ಕೌಶಲಗಳೇ ಆಗಿವೆ. ಈ ನಿಟ್ಟಿನಲ್ಲಿ ಅಧ್ಯಯನ ಮಾಡಿದವರೆಲ್ಲ ಈ ಅಂಶವನ್ನು ಗುರುತಿಸಿದ್ದಾರೆ.

ಸಾಕ್ಷರತಾ ಚಟುವಟಿಕೆಗಳು

ಬರವಣಿಗೆ ಎಂಬುದು ಮಾತಿಗಿಂತ ಬೇರೆ. ‘ಮಾತು’ ಮತ್ತು ‘ಮೌನ’ ಎನ್ನುವ ರೂಪಕ ‘ಮಾತು’ ಮತ್ತು ‘ಬರಹ’ ಗಳೆರಡನ್ನೂ ಒಳಗೊಳ್ಳುತ್ತದೆ. ಮತ್ತೆ ಮತ್ತೆ ಬರವಣಿಗೆಗೆ ಬೇಕಾದ ಕೌಶಲಗಳಿಂದ ಹೆಂಗಸರನ್ನು ದೂರವಿರಿಸಿರುವ ಮಾತು ಚರ್ಚೆಯಾಗುತ್ತಿದೆ.  ಬರವಣಿಗೆಯು ಕೂಡಾ ಒಂದು ತಂತ್ರಜ್ಞಾನವಾಗಿದೆ. ಎಲ್ಲ ತಂತ್ರಜ್ಞಾನಗಳಂತೆ ಇದನ್ನು ಕೂಡಾ ಕೆಲವೇ ಕೆಲವು ಆಯ್ದ ಜನರು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿದ್ದಾರೆ. ಶಾಲೆಗೆ ಹೋಗಲು ಇರುವ ಅಡ್ಡಿಗಳಿಂದಾಗಿ ಸಾಕ್ಷರತೆಯಲ್ಲೂ ಕೊರತೆ ಉಂಟಾಗುತ್ತದೆ. ಇವೆಲ್ಲಕ್ಕೂ ಬಡತನವೇ ಮುಖ್ಯ ಕಾರಣ. ಆದರೂ, ಗೊತ್ತಾದ ಉದ್ದೇಶಗಳನ್ನಿರಿಸಿಕೊಂಡು ಅಕ್ಷರಗಳಿಂದ ದೂರವಿರಿಸಿರುವ ಪ್ರಸಂಗಗಳೂ ಇವೆ. ಆಲಿಸ್ ವಾಕರ್ (೧೯೮೪) ಹೇಳುವುದನ್ನು ನೋಡಿ: ‘‘ನಮ್ಮ ಅಜ್ಜಿ ಮುತ್ತಜ್ಜಿಯರ ಕಾಲದಲ್ಲಿ ಕಪ್ಪು ಹೆಂಗಸೊಬ್ಬಳು ಕಲಾವಿದೆಯಾಗುವುದೆಂದರೆ ಏನು ಗೊತ್ತೆ? ಈ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ರಕ್ತ ಹೆಪ್ಪುಗಟ್ಟುತ್ತದೆ… ಶತಶತಮಾನಗಳಿಂದ ಕಪ್ಪು ಹೆಂಗಸರ ಸೃಜನಶೀಲತೆಯನ್ನು ಕಾಯ್ದಿರಿಸುವುದು ಅಸಾಧ್ಯವೇ ಆಗಿತ್ತು. ಏಕೆಂದರೆ ಅಮೆರಿಕದಲ್ಲಿ ಕಪ್ಪು ಜನರು ಓದಿ ಬರೆಯುವುದು ಶಿಕ್ಷಾರ್ಹ ಅಪರಾಧ ವಾಗಿತ್ತು.’’ ಗುಲಾಮಗಿರಿಯ ಸಂದರ್ಭಗಳಲ್ಲಿ ಗುಲಾಮರು ಓದಿ ಬರೆಯುವುದು, ಇಲ್ಲವೇ ಯಾರಾದರೂ ಅವರಿಗೆ ಅದನ್ನು ಹೇಳಿಕೊಡುವುದು ಅಸಾಧ್ಯವೇ ಆಗಿತ್ತು. ಇದು ಯಜಮಾನರು ನಡೆಸುತ್ತಿದ್ದ ಒಂದು ಕ್ಷುಲ್ಲಕ ಕ್ರೌರ್ಯ ಎಂದು ಅನಿಸಿದರೂ, ದಿಟವಾಗಿ ಇದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯಜಮಾನರು ಅನುಸರಿಸುತ್ತಿದ್ದ ತಂತ್ರವಾಗಿತ್ತು. ಬಲಶಾಲಿ ಗುಂಪುಗಳು, ಬಲಹೀನರಲ್ಲಿ ಓದಿ ಬರೆಯುವ ಕೌಶಲ ನೆಲೆಯೂರಿದರೆ ಅವರಲ್ಲಿ ಬುಡಮೇಲು ಮಾಡುವ ಚಿಂತನೆಗಳು ಬೆಳೆದುಬಿಡುತ್ತವೆ ಎಂದು ನಂಬಿದ್ದರು. ಈ ಕೌಶಲದಿಂದ ಎಲ್ಲವನ್ನೂ ತೂಗಿ ನೋಡುವ ಶಕ್ತಿ ಬರುತ್ತದೆ.  ಅವರು ಎದುರಿಸುವ, ತಿರುಗಿ ಬೀಳುವ ಲಕ್ಷಣಗಳನ್ನು ಮೈಗೂಡಿಸಿಕೊಂಡು ಬಿಡುತ್ತಾರೆ ಎಂದುಕೊಂಡಿದ್ದರು. ಇದು ಕೇವಲ ಗಂಡು ಹೆಣ್ಣುಗಳಿಗೆ ಸೀಮಿತವಾದದ್ದಲ್ಲ ಎಂಬುದು ನಿಜ. ಆಲಿಸ್ ವಾಕರ್ ಹೇಳುವ ಮಾತು ಎಲ್ಲ ಕಪ್ಪು ಗುಲಾಮರಿಗೂ ಸಾರಾಸಗಟಾಗಿ ಅನ್ವಯಿಸುತ್ತದೆ. ಇನ್ನೂ ಬೇರೆ ಕೆಲವು ಸಂದರ್ಭಗಳಲ್ಲಿ ಇದೇ ಬಗೆಯ ಆತಂಕವನ್ನು ದುಡಿಯುವ ವರ್ಗದ ಸಾಕ್ಷರತೆಯನ್ನು ಕುರಿತು ಕೂಡಾ ವ್ಯಕ್ತಪಡಿಸಲಾಗಿದೆ. ಇದೇ ಬಗೆಯಲ್ಲಿ ಹೆಂಗಸರಿಗೆ ಸಾಕ್ಷರತೆಯನ್ನು ತಂದುಕೊಡಲು ಹೊರಟ ಯೋಜನೆಗಳ ವ್ಯವಸ್ಥಾಪಕರು ಕಂಡುಕೊಂಡ ಸಂಗತಿಯೆಂದರೆ ಹೆಂಡತಿಯರಿಗೆ, ಅಕ್ಕತಂಗಿಯರಿಗೆ, ಮಗಳಂದಿರಿಗೆ ಓದಿ ಬರೆಯಲು ಬಂದು ಬಿಟ್ಟರೆ ಅವರು ಸ್ವತಂತ್ರರಾಗಿ ಬಿಡುತ್ತಾರೆ ಎಂಬ ಭಯವನ್ನು ಗಂಡಸರು ಹೊಂದಿದ್ದರು.

ಕೈಗಾರಿಕೀಕರಣಗೊಂಡ (ಅಥವಾ ಆನಂತರದ) ಪಶ್ಚಿಮದಲ್ಲಿ ಓದಿ ಬರೆಯುವುದಕ್ಕೆ ಅಡ್ಡಿಗಳಿಲ್ಲ. ಹಾಗೆ ನೋಡಿದರೆ ಇದೆಲ್ಲ ಹೆಂಗಸರ ಕೆಲಸ ಎಂದು ಈಗ ತಿಳಿಯಲಾಗುತ್ತಿದೆ.  (ಈ ಮಾತು ಹೇಳುವಾಗ ಹೆಚ್ಚು ಜನ ಗುಮಾಸ್ತ ಕೆಲಸಗಾರರು ಹೆಂಗಸರಾಗಿರುವುದು ನನ್ನ ಗಮನದಲ್ಲಿದೆ. ಓದಿ ಬರೆಯುವುದು ಮುಖ್ಯವಾಗಿರುವ ಶಾಲಾ ವಿಷಯಗಳಲ್ಲಿ ಹುಡುಗರಿ ಗಿಂತ ಹುಡುಗಿಯರೇ ಮೇಲುಗೈ ಪಡೆಯುತ್ತಾರೆಂದು ಬ್ರಿಟನ್‌ನಿಂದ ವರದಿಯಾಗಿದೆ). ಆದರೆ, ಹಲವು ವಿದ್ವಾಂಸರು ಹೇಳುವಂತೆ ಸಾಕ್ಷರತೆ ಎಂಬುದು ಕಣ್ಣೆದುರು ಇರುವ ಮುದ್ರಿತ ಅಕ್ಷರಗಳನ್ನು ಗುರುತಿಸುವ ಕೌಶಲ ಮಾತ್ರ ಅಲ್ಲ. ಈ ದಿನಗಳಲ್ಲಿ ‘ಸಾಕ್ಷರತೆ’ ಎನ್ನುವುದಕ್ಕಿಂತೊ‘ಸಾಕ್ಷರತಾ ಚಟುವಟಿಕೆಗಳು’ ಎಂಬ ಮಾತನ್ನು ಬಳಸಲಾಗುತ್ತಿದೆ. ಹೀಗೆಂದಾಗ ಓದಿ ಬರೆಯುವುದಕ್ಕೆ ಹಲವು ನೆಲೆಗಳಿದ್ದು ಅದಕ್ಕೆ ಹಲವು ಅರ್ಥಗಳು ಬೆರೆತುಕೊಂಡಿವೆ.  ಸಾಕ್ಷರತೆಯನ್ನು ಸಾಧಿಸಿರುವ ಸಮಾಜಗಳಲ್ಲಿ ಕೂಡಾ, ಸಾಕ್ಷರತಾ ಚಟುವಟಿಕೆಗಳು ಎಲ್ಲ ಸಾಮಾಜಿಕ ಗುಂಪುಗಳಲ್ಲಿ ಸಮಾನವಾಗಿ ಹಂಚಿಕೊಂಡಿಲ್ಲ.

ಒಂದು ಉದಾಹರಣೆಯನ್ನು ಮೇಲಿಂದ ಮೇಲೆ ಗಮನಿಸಲಾಗುತ್ತಿದೆ. ಇದು ಕಂಪ್ಯೂಟರ್ ಆಧಾರಿತ ಸಂವಹನ (CMC) ಚಟುವಟಿಕೆಗೆ ಸಂಬಂಧಿಸಿದೆ. ಇದು ಅಂತರ್ಜಾಲವನ್ನು ನೆಲೆಯಾಗಿರಿಸಿಕೊಂಡ ಸಂವಹನ. ಕಣ್ಣಿಗೆ ಕಾಣುವ ಜಗತ್ತಿನಂತೆ ಕಣ್ಣಿಗೆ ಕಾಣದ ಈ ಜಗತ್ತನ್ನು ಕೂಡಾ ಪುರುಷರೇ ಹಿಡಿತದಲ್ಲಿರಿಸಿಕೊಂಡಿದ್ದಾರೆ. ಇಲ್ಲಿ ನಡೆಯುವ ಸಂವಹನ ಚಟುವಟಿಕೆಗಳಲ್ಲಿ, ಚರ್ಚೆಗಳಲ್ಲಿ ಕ್ರಿಯಾಶಾಲಿಗಳಾಗಿ ಪಾಲ್ಗೊಳ್ಳುವ ಪ್ರಮಾಣವನ್ನು ಲೆಕ್ಕಕ್ಕೆ ಹಿಡಿದರೆ, ಇಲ್ಲಿಯೂ ಕೂಡಾ ಹೆಂಗಸರು ಎರಡನೇ ದರ್ಜೆಯ ನೆಟಿಜನ್ (ನೆಟ್‌ನಲ್ಲಿರುವ ಸಿಟಿಜನ್‌ಗಳು) ಗಳೇ ಆಗಿದ್ದಾರೆ. ಇದು ನಿಜವೇ ಆಗಿದ್ದಲ್ಲಿ (ಅಂತರ್ಜಾಲಕ್ಕೆ ಸಂಬಂಧಿಸಿದ ಅಂಕಿಸಂಖ್ಯೆಗಳನ್ನು ಬಲವಾಗಿ ಒಪ್ಪಬೇಕೇ ಎಂಬ ಸಂಶಯವಿದೆ.)  ಗಂಡಸರಿಗಿಂತ ಹೆಂಗಸರಿಗೆ CMCಯಲ್ಲಿ ಪಾಲ್ಗೊಳ್ಳಲು ಬೇಕಾದ ತಂತ್ರಜ್ಞಾನ ಕಡಿಮೆ ಪ್ರಮಾಣದಲ್ಲಿ ಸಿಗುತ್ತಿದೆ ಎನ್ನಬೇಕಾಗುತ್ತದೆ. ಇಲ್ಲವೇ ಈ ತಂತ್ರಜ್ಞಾನದ ಬಳಕೆಗೆ ಬೇಕಾದ ಕೌಶಲಗಳು ಹೆಂಗಸರಿಗೆ ದೊರಕುತ್ತಿಲ್ಲ ಎನ್ನಬಹುದು. ಇದನ್ನು ಒಪ್ಪೋಣ. ಇದರ ಜೊತೆಗೆ ಅಂತರ್ಜಾಲದ ಬಳಕೆದಾರರು ಯಾವ ಸಾಮಾಜಿಕ ಸಂದರ್ಭದಲ್ಲಿ ಭಾಗಿಗಳಾಗಿರುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ಉದಾಹರಣೆಗೆ, ಕಣ್ಣಿಗೆ ಕಾಣದ ಸಮುದಾಯದ ಚಟುವಟಿಕೆಗಳಲ್ಲಿ ಭಾಗಿಯಾಗಲು ಬಿಡುವು ಬೇಕು. ಈ ಬಿಡುವು ಕೆಲವರಿಗೆ ಮಾತ್ರ ಹೆಚ್ಚಾಗಿ ದೊರಕುತ್ತದೆ(ಇಲ್ಲಿ ಜಂಡರ್ ಮಾತ್ರ ಮುಖ್ಯವಲ್ಲ. ನಿಜ. ಆದರೆ, ಬಿಡುವು ಮತ್ತು ದುಡಿಮೆಗಳ ಸಂದರ್ಭದಲ್ಲಿ ಗಂಡು ಹೆಣ್ಣುಗಳೆಂಬ ಸಂಗತಿಯನ್ನು ಕಡೆಗಣಿಸುವಂತಿಲ್ಲ). ಸ್ತ್ರೀವಾದಿಗಳು ಅಂತರ್ಜಾಲ ಜಗತ್ತು ಹೆಂಗಸರ ಸ್ವಭಾವಕ್ಕೆ ಅನುಕೂಲಕರವಾಗಿದೆಯೇ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ.  ಅಂತರ್ಜಾಲ ಬಳಕೆದಾರರು ಆಕ್ರಮಣಕಾರಿ ಇಲ್ಲವೇ ತೆಗಳುವ ಸಂದೇಶಗಳನ್ನು ಜಾಲದಲ್ಲಿ ಬಿಡುವುದರಲ್ಲಿ ನಿಸ್ಸೀಮರು. ಈ ಚಟುವಟಿಕೆಗೆ ‘ಫ್ಲೆಮಿಂಗ್’ ಎಂಬ ಹೆಸರಿದೆ. ಇದು ಹೆಂಗಸರನ್ನು ಅಂತರ್ಜಾಲದಿಂದ ದೂರ ಉಳಿಯುವಂತೆ ಮಾಡುತ್ತದೆ. ಒಂದು ವೇಳೆ ಪಾಲ್ಗೊಳ್ಳುವ ಹೆಂಗಸರು ಸ್ತ್ರೀವಾದಿ ಚಿಂತನೆಗಳನ್ನು ಮುಂದಿಡುವವರಾಗಿ ಬಿಟ್ಟರೆ, ಅವರು ಫ್ಲೆಮಿಂಗ್‌ಗೆ ಒಳಗಾಗುವ ಪ್ರಮಾಣವೂ ಹೆಚ್ಚುತ್ತದೆ(ಹೆರ್ರಿಂಗ್ ಇತರರು,೧೯೯೫). ಇಂತಹ ಸಂಗತಿಗಳು ಕಣ್ಣಿಗೆ ಕಾಣುವ ಲೋಕದಲ್ಲಿ ನಡೆದರೆ ಅದನ್ನು ಲೈಂಗಿಕ ಕಿರುಕುಳ ಎನ್ನುತ್ತೇವೆ. ಅಂತರ್ಜಾಲ ಬಳಕೆದಾರರಾದ ಹೆಂಗಸರೂ ಇಂಥ ಕಿರುಕುಳಗಳಿಗೆ ಒಳಗಾಗಿದ್ದಾರೆ. ಅವರ ಸಂಖ್ಯೆಯೂ ಸಾಕಷ್ಟು ಹೆಚ್ಚಿದೆ. ಇದರಿಂದ ಪಾರಾಗಲು ಹೆಂಗಸರು ತಮಗೆ ತಾವೇ ಗಂಡು ಚಹರೆಗಳನ್ನು ಇಲ್ಲವೇ ಗಂಡೋ ಹೆಣ್ಣೋ ಎಂದು ಗೊತ್ತು ಮಾಡಲಾಗದ ಚಹರೆಗಳನ್ನು ಕಟ್ಟಿಕೊಳ್ಳುತ್ತಾರೆ. ಇದರಿಂದ ಬೈಗುಳದ ಸಂದೇಶಗಳಿಂದ ಬಿಡುಗಡೆ ಸಿಕ್ಕೀತು. ಆದರೆ ಅದಕ್ಕಾಗಿ ಹೆಂಗಸು ಬಾಯಿಮುಚ್ಚಿಕೊಳ್ಳಬೇಕಾಯಿತು. ಅಂದರೆ, ತನ್ನ ಹೆಣ್ಣು ಚಹರೆಯನ್ನು ಮುಚ್ಚಿಟ್ಟು ತನ್ನನ್ನು ತಾನು ನಿರಾಕರಿಸಬೇಕಾಗುತ್ತದೆ.

CMCಯಲ್ಲಿ ಪಾಲ್ಗೊಳ್ಳದಂತೆ ಫ್ಲೆಮಿಂಗ್ ಮತ್ತು ಕಿರುಕುಳಗಳು ಅಡ್ಡಿಗಳನ್ನು ಉಂಟುಮಾಡುತ್ತವೆ. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವ ಹೆಂಗಸರ ಮೇಲೆ ಕೆಲವು ಕಟ್ಟುಪಾಡುಗಳನ್ನು ವಿಧಿಸಲಾಗುತ್ತದೆ. ಈ ಮೊದಲು ಲೌಕಿಕ ಕಾರಣಗಳಿಂದ (ಉದಾಹರಣೆಗೆ  ತಂತ್ರಜ್ಞಾನ ಲಭ್ಯತೆ) ಸಂವಹನ ಚಟುವಟಿಕೆಗಳಲ್ಲಿ ಗಂಡಸರೇ ಮೈಲುಗೈ ಪಡೆದಿದ್ದರು. ಈ ಲೌಕಿಕ ಕಾರಣಗಳು ಬದಲಾಗದಿದ್ದರೂ ಸಾಮಾಜಿಕ ಸಂದರ್ಭಗಳಿಂದಾಗಿ, ಈಗಲೂ ಗಂಡಸರೇ ಮೇಲುಗೈ ಪಡೆದಿದ್ದಾರೆ. CMC ಬಗೆಗೆ ‘ನ್ಯಾಟರಿಂಗ್ ಆನ್ ದಿ ನೈಟ್’ (೧೯೯೬) ಎಂಬ ಪುಸ್ತಕವನ್ನು ಬರೆದ ಡೇಲ್ ಸ್ಪೆಂಡರ್‌ನಂಥ ಸ್ತ್ರೀವಾದಿ ಬರೆಹಗಾರರು ಮುದ್ರಣ, ತಂತ್ರಜ್ಞಾನ, ಮತ್ತದರ ಪರಿಣಾಮವಾದ ಪ್ರಕಾಶನ ಉದ್ಯಮದ ಚಾರಿತ್ರಿಕ ಸನ್ನಿವೇಶಕ್ಕೂ, ಈ ಹೊಸ ಸಂವಹನ ಮಾಧ್ಯಮಕ್ಕೂ ಹೋಲಿಕೆಗಳಿವೆ ಎಂಬುದನ್ನು ಗುರುತಿಸಿದ್ದಾರೆ.

ಅನಕ್ಷರತೆ ಮತ್ತು ಕಡಿಮೆ ಶಿಕ್ಷಣ ಇವುಗಳಷ್ಟೇ, ಪ್ರಕಾಶನ ಉದ್ಯಮದಲ್ಲಿ ಪಾಲ್ಗೊಳ್ಳ ದಂತೆ ಹೆಂಗಸಿಗೆ ಅಡ್ಡಿಗಳನ್ನು ತಂದಿದ್ದ ಸಂಗತಿಗಳಾಗಿರಲಿಲ್ಲ. ‘ಎ ರೂಮ್ ಆಫ್ ಒನ್ಸ್ ಓನ್’ ಬರೆದ ವರ್ಜೀನಿಯ ಉಲ್ಫ್ ಹೇಳುವುದನ್ನು ಗಮನಿಸಿ– ‘ತೀರಾ ಈಚಿನವರೆಗೂ ಉನ್ನತ ವರ್ಗದ ಹೆಂಗಸರು ಕೂಡಾ ಆರ್ಥಿಕ ಸ್ವಾತಂತ್ರ್ಯ ಮತ್ತು ಸಮಯದ ಕೊರತೆ ಗಳಿಂದಾಗಿ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ’. ಚಿಕ್ಕ ಮಕ್ಕಳನ್ನು ಬೆಳಸುವ ಹೆಂಗಸರಿಗೆ ಬರವಣಿಗೆಗೆ ಬೇಕಾದ ಅವಕಾಶ ಹಾಗೂ ಮಾನಸಿಕ ಸ್ಥಿರತೆ ದೊರೆಯದ ಬಗ್ಗೆ ಕೂಡಾ ಕೆಲವರು ಚರ್ಚಿಸಿದ್ದಾರೆ. ಹೆಂಗಸರ ಸಮಯ ಮತ್ತು ಶ್ರಮಗಳೆಲ್ಲ ಇತರರ ಬೇಕು ಬೇಡಗಳನ್ನು ಪೂರೈಸಲೆಂದೇ ಮೀಸಲಾಗಿವೆ ಎಂದು ಇಂದಿಗೂ ತಿಳಿಯಲಾಗಿದೆ.  ಹೆಂಡತಿಯರು, ಸೋದರಿಯರು, ಮಗಳಂದಿರು ನಿಷ್ಠೆಯಿಂದ ನೀಡುವ ನೆರವನ್ನು ಆಧರಿಸಿಯೇ ಪುರುಷ ಬರೆಹಗಾರರು ಬೆಳೆದಿದ್ದಾರೆ. ಬೇರೆಯವರಿಂದ ಇಂಥದೇ ನೆರವು ಬೆಂಬಲಗಳನ್ನು ಬರೆಹಗಾರ್ತಿಯೊಬ್ಬರು ಪಡೆದಿರುವ ಉದಾಹರಣೆಗಳು ಇಲ್ಲವೇ ಇಲ್ಲ.

[1]

ಬೇರೆ ಬೇರೆ ಹೆಂಗಸರ ಸಂದರ್ಭಗಳು ಬೇರ ಬೇರೆಯೇ ಎಂದು ತಿಳಿದ ಆಲಿಸ್ ವಾಕರ್ ಅವರ ನಿಲುವನ್ನು ಮತ್ತೊಮ್ಮೆ ಪರಿಶೀಲಿಸೋಣ. ವರ್ಜೀನಿಯಾ ಉಲ್ಫ್ ಪರಿಗಣಿಸುವ ಹೆಂಗಸರಿಗಿಂತ ಅಸಹನೀಯವಾದ ಅಡ್ಡಿ ಆತಂಕಗಳನ್ನು ಎದುರಿಸಿರುವ, ಮತ್ತು ಅವರಲ್ಲಿ ಕೆಲವರು ಈ ಆತಂಕಗಳನ್ನು ನಿವಾರಿಸಿಕೊಂಡಿರುವ, ಹೆಂಗಸರಿದ್ದಾರೆ. ಉಲ್ಫ್ ಬರೆದ ಎ ರೂಮ್ ಆಫ್ ಒನ್ಸ್ ಓನ್ ಕೃತಿಯನ್ನು ದಕ್ಷಿಣ ಆಫ್ರಿಕದ ಬರೆಹಗಾರ್ತಿ ಜ್ಸೀನಾ ಮಹ್ಲೋಪೆ ಬರೆದ ‘ದ ಟಾಯ್ಲೆಟ್’ಎಂಬ ಸಣ್ಣ ಕತೆಯೊಡನೆ ಇರಿಸಿ ನೋಡುವುದು ಸೂಕ್ತ. ಈ ಕತೆಯ ನಾಯಕಿ ಕಾರ್ಖಾನೆಯಲ್ಲಿ ದುಡಿಯುವವಳು. ಅವಳಿಗೂ ಅವಳದ್ದೇ ಕೊಠಡಿ ಇಲ್ಲ. ತನ್ನ ಸೋದರಿಗೆ ನೀಡಿದ ಕೊಠಡಿಯಲ್ಲಿ ಕ್ರಮಬಾಹಿರವಾಗಿ ಮಲಗುತ್ತಾಳೆ. ಆ ಸೋದರಿ ಮನೆಯೊಂದರ ಕೆಲಸದಾಳು. ಆ ಮನೆ ಬಿಳಿಯರಿಗೆ ಸೇರಿದ್ದು. ಇತರರಿಗೆ ಗೊತ್ತಾಗಬಾರ ದೆಂದು ನಾಯಕಿ ತನ್ನ ದುಡಿಮೆಯ ಶಿಫ್ಟ್ ಆರಂಭಗೊಳ್ಳುವುದಕ್ಕೂ ಹಲವು ಗಂಟೆಗಳ ಮೊದಲೇ ಮನೆ ಬಿಡಬೇಕು. ಹೊತ್ತು ಕಳೆಯಲು ಅವಳು ಬೀಗ ಹಾಕದೆ ಬಿಟ್ಟ ಪಬ್ಲಿಕ್ ಟಾಯ್ಲೆಟ್ ಒಂದನ್ನು ಕಂಡುಕೊಳ್ಳುತ್ತಾಳೆ. ಅಸಹ್ಯ ಹುಟ್ಟಿಸುವ ಈ ಜಾಗದಲ್ಲಿ ಕುಳಿತು ತನ್ನ ಬರೆವಣಿಗೆಯ ಚಟುವಟಿಕೆ ಆರಂಭಿಸುತ್ತಾಳೆ. ಕತೆ ಕೊನೆಯಾದಾಗ ಯಾರೋ ಟಾಯ್ಲೆಟ್‌ಗೆ ಬೀಗ ಹಾಕಿಬಿಟ್ಟಿರುತ್ತಾರೆ. ಅವಳು ಹಿಂಜರಿಯದೆ ತನ್ನ ಬರವಣಿಗೆಯನ್ನು  ಮುಂದುವರೆಸಲು ನಿರ್ಧರಿಸುತ್ತಾಳೆ. ಇನ್ನೊಂದು ಬರವಣಿಗೆ ನೆನಪಿಗೆ ಬರುತ್ತದೆ. ಇದು ನಾಜಿಗಳಿಂದ ಅವಿತಿಟ್ಟುಕೊಂಡಿದ್ದ ಆನ್ ಫ್ರಾಂಕ್ ಬರೆದ ಬಹುಖ್ಯಾತ ದಿನಚರಿ. ಮಹ್ಲೋಪೆಯ ನಾಯಕಿಯಂತೆ ಫ್ರಾಂಕ್ ಕೂಡ ಇದ್ದಾಳೆ. ಬರೆಹಗಾರರಿಗೆ ಅಗತ್ಯವೆಂದು ಉಲ್ಫ್ ಹೇಳುವ ಸಾಂಪತ್ತಿಕ ಸೌಲಭ್ಯಗಳು ಮತ್ತು ಮಾನಸಿಕ ಸ್ವಾತಂತ್ರ್ಯಗಳು ಇವರಿಬ್ಬರಿಗೂ ಇಲ್ಲ.  ಹೀಗಿದ್ದಾಗಲೂ ಈ ಹೆಂಗಸರೂ ಬರೆದರೆಂಬುದೇ ಸೋಜಿಗದ ವಿಚಾರ. ಅಂದರೆ, ಬರವಣಿಗೆಯು ತನ್ನನ್ನು ಹತ್ತಿಕ್ಕುವ ಎಲ್ಲವನ್ನು ನಿರಾಕರಿಸುವ ಸಂದರ್ಭವನ್ನು ಮೀರಲು ವ್ಯಕ್ತಿಗೆ ದಾರಿಯೊಂದನ್ನು ತೆರೆದು ತೋರಿಸುತ್ತದೆ ಎಂದು ತಿಳಿಯಲು ಸಾಧ್ಯ. ಹೆಂಗಸರ ಬರವಣಿಗೆಯ ಕತೆಯೇ ಇದಾಗಿದೆ.

ಸಾಹಿತ್ಯ, ಸಂಸ್ಕೃತಿಗಳು ತಮ್ಮ ಚೌಕಟ್ಟಿಗೆ ಬಂದ ಹೆಂಗಸರಿಗೆ ಬೆಂಬಲ ನೀಡಿವೆ, ಇಲ್ಲವೇ ವಿರೋಧಿಯಾಗಿವೆ. ೧೯ ನೆಯ ಶತಮಾನದ ಹಲವು ಬರೆಹಗಾರ್ತಿಯರು ತಮ್ಮ ಬರವಣಿಗೆ ಯನ್ನು ಗಂಭೀರವಾಗಿ ಪರಿಗಣಿಸಲೆಂಬ ಉದ್ದೇಶದಿಂದ ತಮ್ಮ ಹೆಸರನ್ನು ಬದಲಿಸಿಕೊಂಡು ಗಂಡಸರ ಹೆಸರಿಟ್ಟುಕೊಂಡರು.  ಲೈಂಗಿಕತೆ ಮತ್ತು ಭಾವೋನ್ಮಾದಕತೆಯ ವಿಷಯಗಳನ್ನು ಆಧರಿಸಿದ ಕಥಾನಕಗಳನ್ನು ಹೆಣ್ಣು ಹೆಸರಿನಲ್ಲಿ ಬರೆದರೆ ಅದನ್ನು ಅಸಭ್ಯ ಇಲ್ಲವೇ ಒರಟುತನ ಎಂದು ಎಲ್ಲಿ ಪರಿಗಣಿಸುತ್ತಾರೋ ಎಂಬ ಆತಂಕದಿಂದಲೂ ಹೀಗೆ ಹೆಸರು ಬದಲಿಸಿ ಕೊಂಡರು. ಬರೆಹಗಾರ್ತಿಯರಿಗೆ ಎರಡು ಬಗೆಯ ಕಟ್ಟುಗಳಿದ್ದವು. ಒಂದು ಅವುಗಳಲ್ಲಿ ಹೆಣ್ತನದ ಕೊರತೆ ಇದೆಯೆಂದು ಟೀಕಿಸಿದ್ದು, ಇನ್ನೊಂದು ಆ ಕೃತಿಗಳು ಅತಿಯಾದ ಹೆಣ್ತತನದಿಂದ ಕೂಡಿವೆ ಎಂದು ಹೇಳಿದ್ದು. ಒಟ್ಟಾರೆ, ಅವರ ಬರೆಹಗಳನ್ನೆಲ್ಲ ಕೇವಲ ‘ಬರಹಗಾರ್ತಿ’ಎಂಬ ನೆಲೆಯಿಂದ ನೋಡಲಾಯಿತೇ ಹೊರತು ‘ನಿಜ’ ಬರಹಗಾರರ ಕೃತಿ ಎಂದು ಲೆಕ್ಕಿಸಲೇ ಇಲ್ಲ.

ಬರವಣಿಗೆ ಮತ್ತು ‘ವ್ಯತ್ಯಾಸ’

ಸ್ತ್ರೀವಾದಿ ಭಾಷಾಮೀಮಾಂಸೆಯ ಒಂದು ಕವಲಿನವರು ಮುಂದಿಡುವ ಪ್ರಶ್ನೆ ಹೀಗಿದೆ: ಇಂತಹ ಸಾಂಸ್ಕೃತಿಕ ಸಂದರ್ಭದಲ್ಲಿ ಬರಹಗಾರ್ತಿಯರು ‘ಅಧಿಕೃತವಾಗಿ’ ಬರೆಯುವುದು ಹೇಗೆ? ಹೆಂಗಸರು ಗಂಡಸರಂತೆ ಬರೆದರೆ ಸಾಕೇ? ಸಾಂಪ್ರದಾಯಿಕವಾದ (ಪುರುಷ ಪ್ರಧಾನ) ಚೌಕಟ್ಟುಗಳನ್ನು ಒಪ್ಪಿಕೊಳ್ಳುವ ಶರತ್ತಿನ ಮೇಲೆ ನಮ್ಮನ್ನು ಸಾಹಿತ್ಯ ಮತ್ತು ಸಂಸ್ಕೃತಿಯ ವಲಯದೊಳಗೆ ‘ಬಿಟ್ಟು ಕೊಂಡರೆ’ಆಗ ನಾವು ಒಂದು ಬಗೆಯಲ್ಲಿ ಬಾಯಿಮುಚ್ಚಿಸಿ ಕೊಂಡವರಾಗುವುದಿಲ್ಲವೇ? ಇನ್ನೊಂದು ಬಗೆಯಲ್ಲಿ ಬಾಯಿ ಮುಚ್ಚುವುದನ್ನು ಒಪ್ಪಿ ಕೊಂಡಂತೆಯೇ ಅಲ್ಲವೇ? ಕೊನೆಯ ಎರಡು ಪ್ರಶ್ನೆಗಳಲ್ಲಿ ಮೊದಲನೆಯದಕ್ಕೆ ಕೆಲವು ಸ್ತ್ರೀವಾದಿಗಳು ‘ಇಲ್ಲ’ ಎಂದು ಉತ್ತರಿಸಿದರೆ, ಎರಡನೆಯ ಪ್ರಶ್ನೆಗೆ ‘ಹೌದು’ ಎಂದು ಹೇಳುತ್ತಾರೆ. ಹೆಂಗಸರು ತಮ್ಮ ‘ವ್ಯತ್ಯಾಸ’ಗಳನ್ನು ಮುಂದಿಡುವ ಬರಹದ ಬಗೆಯನ್ನು ರೂಢಿಸಿಕೊಳ್ಳಬೇಕೆಂದೂ, ಅದಕ್ಕೆ ತಕ್ಕ ಹಾದಿಗಳನ್ನು ಹುಡುಕಬೇಕೆಂದೂ ಹೇಳುತ್ತಾರೆ.  ಅಂದರೆ ಭಿನ್ನವಾದ ವಿಷಯಗಳ ಬಗೆU ಬರೆಯುವುದಷ್ಟೇ ಅಲ್ಲ, ಕೆಲವರು ಹೇಳುವಂತೆ ಸಾಹಿತ್ಯ ಶೈಲಿಯನ್ನೇ, ಅಷ್ಟೇಕೆ ಭಾಷೆಯನ್ನೇ ಒಡೆದು ಕಟ್ಟಬೇಕು. ಶೋಶನಾ ಫೆಲ್ಮನ್ ೧೯೭೫ ರಲ್ಲಿ ಬರೆದ ನಿಬಂಧದಲ್ಲಿ ಹೇಳುವುದಿಷ್ಟು :  ‘‘ಹೆಂಗಸು ಈಗ ಹೊಸ ಭಾಷೆಯನ್ನೇ ರೂಪಿಸಿಕೊಳ್ಳಬೇಕಾದ ಸವಾಲನ್ನು ಎದುರಿಸುತ್ತಿದ್ದಾಳೆ…. ರಚನೆಯ ವಿರುದ್ಧ ದನಿ ಎತ್ತುವುದು ಮಾತ್ರವಲ್ಲ, ಅಂತಹ ರಚನೆಗಳಿಂದಲೇ ಹೊರ ಬರಬೇಕಾಗಿದೆ. ಪುರುಷ ದತ್ತವಾದ ಅರ್ಥಗಳಿಂದ ನಿಯಂತ್ರಿತವಾದ ಕಥನ ಮಾದರಿಗಳಿಂದ ಬೇರೆಯದೇ ಆದ ನೆಲೆಗಳನ್ನು ಕಟ್ಟಬೇಕಿದೆ.

ಬಳಕೆಯ ಭಾಷೆಯು ಹೆಂಗಸರನ್ನು ಬಾಯಿ ಮುಚ್ಚಿಸುವ, ಅಂಚಿಗೆ ತಳ್ಳುವ ಕೆಲಸವನ್ನು ಮಾಡುತ್ತದೆಂದು ಸ್ತ್ರೀವಾದಿಗಳು ಬಗೆಬಗೆಯ ತಾತ್ತ್ವಿಕ ಚೌಕಟ್ಟುಗಳಲ್ಲಿ ವಿವರಿಸಿದ್ದಾರೆ.  ‘‘ಸ್ತ್ರೀ ಬರವಣೆಗೆ’’ಇಲ್ಲವೇ ‘ಹೆಂಗಸಿನ ಭಾಷೆ’ ಎಂಬ ವಿಷಯಗಳನ್ನು ಕುರಿತು ಚರ್ಚೆಗಳು ಈಗಲೂ ನಡೆಯುತ್ತಿವೆ.

‘‘ಬಾಯಿ ಮುಚ್ಚಿಸುವ’’ಕ್ರಮದ ವಿರೋಧಿಯಾಗಿ ಅಧಿಕೃತ ಸ್ತ್ರೀ ಬರವಣಿಗೆಗಳನ್ನು ನಿರ್ಮಿಸಬೇಕೆಂಬ ವಿಚಾರವನ್ನು ಟೀಕಿಸುವ ಸ್ತ್ರೀವಾದಿಗಳೂ ಇದ್ದಾರೆ. ಎಲೆನ್ ಶೋವಾಲ್ಟರ್ ಬಾಯಿಮುಚ್ಚಿಸುವುದನ್ನು ಸಮಸ್ಯೆಯನ್ನಾಗಿ ಒಪ್ಪಿಕೊಂಡರೂ ಭಾಷೆಯೇ ಹೆಂಗಸಿನ ಬಾಯಿ ಮುಚ್ಚಿಸುವ ಕೆಲಸ ಮಾಡುವುದಿಲ್ಲ. ಹೆಂಗಸರ ಸಾಮರ್ಥ್ಯ ಮತ್ತು ಹಕ್ಕುಗಳ ಮೇಲೆ ಹಾಕಿರುವ ಕಟ್ಟುಪಾಡುಗಳಿಂದ ಹೀಗಾಗುವುದೆಂದು ಹೇಳಿದ್ದಾರೆ.

‘‘ಸ್ತ್ರೀವಾದಿ ವಿಮರ್ಶೆಯು ಹೆಂಗಸರಿಗೆ ಭಾಷೆಯು ದೊರಕುವಂತೆ ಮಾಡಲು ಯತ್ನಿಸಬೇಕು.  ಅಭಿವ್ಯಕ್ತಿಯ ಮೇಲೆ ವೈಚಾರಿಕವಾಗಿ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಹಾಕಿರುವ ಶರತ್ತುಗಳನ್ನು ಮೀರಿ ಹೆಂಗಸಿಗೆ ಭಾಷೆ ಲಭಿಸಬೇಕಾಗಿದೆ. ಹೆಂಗಸಿನ ಪ್ರಜ್ಞೆಯನ್ನು ಹೊರಹಾಕಲು ಭಾಷೆ ಅಸಮರ್ಥವೇ ಎಂಬುದು ಸಮಸ್ಯೆಯಲ್ಲ. ಆದರೆ, ಹೆಂಗಸಿಗೆ ಭಾಷೆಯ ಎಲ್ಲ ಸಂಪನ್ಮೂಲಗಳೂ ಕೈಗೆಟಕುತ್ತಿಲ್ಲ ಎಂಬುದೇ ಸಮಸ್ಯೆ. ಅದರಿಂದಾಗಿ ಆಕೆ ಬಾಯಿ ಮುಚ್ಚಿಕೊಳ್ಳಬೇಕಾಗಿದೆ, ಬದಲಿ ದಾರಿಗಳನ್ನು ಹುಡುಕಬೇಕಿದೆ, ಮತ್ತು ಮುಚ್ಚಿ ಹೇಳ ಬೇಕಿದೆ’’ (ಶೋ ವಾಲ್ಟರ್ ೧೯೮೧).

ಹೆಂಗಸರ ಅಧಿಕೃತ ಬರವಣಿಗೆಯೆಂಬುದನ್ನು ಟೀಕಿಸುವ ಇನ್ನೊಂದು ಸ್ತ್ರೀವಾದಿ ಪಕ್ಷವು, ಹೆಂಗಸರ ‘ವ್ಯತ್ಯಾಸ’ವೆನ್ನುವ ಪರಿಕಲ್ಪನೆಯ ಹಿಂದಿನ ಸಾರವಾದವನ್ನು ಎತ್ತಿ ಹೇಳುತ್ತದೆ.  ಕೆಲವು ಸ್ತ್ರೀವಾದಿಗಳು ಭಾಷೆಯಲ್ಲಿರುವ ಆಯ್ದ ಲಕ್ಷಣಗಳಲ್ಲಿ ಕೆಲವು ಅಧಿಕೃತವಾಗಿ ‘‘ಹೆಣ್ಣುತನವನ್ನು’’ ಬಿಂಬಿಸಬಲ್ಲವು ಎಂಬ ವಾದವನ್ನು ಸಂದೇಹದಿಂದ ನೋಡುತ್ತಾರೆ. ಏಕೆಂದರೆ, ಹೆಣ್ಣುತನಕ್ಕೆ ಗಂಟು ಹಾಕಿರುವ ಎಷ್ಟೋ ಚಹರೆಗಳು ನಿಜವಾಗಿ ಸ್ತ್ರೀವಿರೋಧಿ ಕಥನದ ಭಾಗಗಳೇ ಆಗಿವೆ. ಉದಾಹರಣೆಗೆ, ಹೆಣ್ಣುತನದ ಬರಹಗಳು ದೇಹ ಕೇಂದ್ರಿತ ವಾಗಿರುತ್ತವೆ. ತರ್ಕಕ್ಕೆ ಜೋತು ಬೀಳುವುದಿಲ್ಲ, ಕಾರ್ಯಕಾರಣ ಸಂಬಂಧದ ಸರಳ ರೇಖೆಯ ರಚನೆಗೆ ಕಟ್ಟು ಬೀಳುವುದಿಲ್ಲ. (ಅಂದರೆ, ಹೆಂಗಸರಿಗೆ ಮನಸ್ಸಿಗಿಂತ ದೇಹವೇ ಮುಖ್ಯ. ಅವರು ತರ್ಕಬದ್ಧವಾಗಿ ಚಿಂತಿಸಲಾರರು, ಮತ್ತು ಕಾಲದೇಶಗಳನ್ನು ಸರಿಯಾಗಿ ಅರಿತು ಕೊಳ್ಳಲಾರರು ಎಂದು ಒಪ್ಪಿಕೊಂಡಂತಾಯ್ತು!) ಸಾರಾ ಮಿಲ್ಸ್ ಮತ್ತು ತ್ರಿನ್ಹ್ ಮಿನ್ಹ್-ಹ ಈ ಇಬ್ಬರೂ ಸ್ತ್ರೀವಾದಿಗಳು ಗಂಡು ಹೆಣ್ಣುಗಳ ನಡುವೆ ಇರುವ ವ್ಯತ್ಯಾಸವನ್ನು ದೊಡ್ಡದು ಮಾಡಿ ಹೇಳುವುದಕ್ಕೆ ತಮ್ಮ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಇಂಥ ವ್ಯತ್ಯಾಸಗಳನ್ನು ಗುರುತಿಸುವಾಗ ಪುರುಷತ್ವ ಮತ್ತು ಸ್ತ್ರೀತ್ವಗಳನ್ನು ಎರಡು ಧ್ರುವಗಳೆಂಬಂತೆ ಗುರುತಿಸಲು ಕೆಲವರು ಮುಂದಾಗಿ ಬಿಡುತ್ತಾರೆ. ಇವರು ಹೆಂಗಸರಲ್ಲೇ (ಅಷ್ಟೇಕೆ, ಗಂಡಸರಲ್ಲೂ)ಇರುವ ಅಸಂಖ್ಯ ವ್ಯತ್ಯಾಸಗಳನ್ನು ಮರೆತು ಬಿಡುವರೆಂದು ತ್ರಿನ್ಹ್ ವಾದಿಸುತ್ತಾರೆ. ಹೆಂಗಸರು ಎಂಬ ಕೆಟಗರಿಯಲ್ಲೇ ಹಲವು ವ್ಯತ್ಯಾಸಗಳಿರುವುದರಿಂದ, ‘ಹೆಂಗಸರು’ಒಂದು ದನಿಯಲ್ಲಿ ಮಾತಾಡಿದಾಗ ಅದರಿಂದ ಹಲವು ಹೆಂಗಸರ ಬಾಯಿ ಮುಚ್ಚುವುದು ಒಂದು ವಿಪರ್ಯಾಸವೇ ಸರಿ. ಹೀಗೆ ಒಂದೇ ದನಿಯಲ್ಲಿ ಮಾತಾಡುವವರು ಹಲವರ ಪರವಾಗಿ ಮಾತಾಡುವುದಾಗಿ ಹೇಳುತ್ತಾ, ಆ ಹಲವರು ತಮ್ಮ ಬಗ್ಗೆ ತಾವೇ ಮಾತಾಡುವುದನ್ನು ತಡೆಹಿಡಿಯುತ್ತಿರುತ್ತಾರೆ.

‘ಹೆಣ್ಣುತನದ ಬರವಣಿಗೆ’ಮತ್ತು ‘ಹೆಂಗಸಿನ ಭಾಷೆ’ ಎಂಬ ವಿಚಾರಗಳಿಗೆ ಇನ್ನೂ ಒಂದು ಬಗೆಯ ವಿರೋಧವಿದೆ. ಇದು ಭಾಷಾಶಾಸ್ತ್ರಜ್ಞರ ಮಟ್ಟಿಗೆ ಮುಖ್ಯವಾದುದು. ಹೆಣ್ಣುತನದ ಬರವಣಿಗೆಯ ಬಗ್ಗೆ ಮಾತಾಡುವವರು ಕೈಗೆಟುಕದ ಆದರ್ಶ ಲೋಕದಲ್ಲಿರು ತ್ತಾರೆ ಮತ್ತು ಚರಿತ್ರೆಯ ಗತಿಯನ್ನು ಮರೆತಿರುತ್ತಾರೆ. ಭಾಷಾ ಬಳಕೆಯ ಬಗೆಗಳು ಬದಲಾಗುತ್ತವೆಯಾದರೂ (ಸ್ತ್ರೀ ವಾದವು ಇಂಥ ಹಲವು ಬದಲಾವಣೆಗಳಿಗೆ ತಾನೇ ಕಾರಣವಾಗಿದೆ) ಭಾಷೆಯನ್ನೇ ಮರಳಿ ಕಟ್ಟುವ ಕೆಲಸಕ್ಕೆ ಅವಕಾಶವಿಲ್ಲ. ಕೆಲವು ಸ್ತ್ರೀವಾದಿಗಳು  ಈ ಕಟ್ಟುವ ಕೆಲಸವನ್ನು ವಾಚ್ಯಾರ್ಥದಲ್ಲಿ ನಂಬಿದ್ದಾರೆ. ಭಾಷೆಯು ಮನುಷ್ಯರಲ್ಲಿ ಅಂತಸ್ಥವಾದ ಗ್ರಹಿಕೆಯ ಸಾಮರ್ಥ್ಯಗಳನ್ನು ಅವಲಂಬಿಸಿದ್ದು ಈ ಸಾಮರ್ಥ್ಯವೇ ಭಾಷೆಯ ಸ್ವರೂಪವನ್ನು ನಿರ್ಧರಿಸುತ್ತದೆ. ಸ್ತ್ರೀವಾದಿ ದೃಷ್ಟಿಕೋನದಿಂದ ನೋಡಿದಾಗ ಇನ್ನೂ ಒಂದು ಸಂಗತಿ ಮುಖ್ಯವಾಗುತ್ತದೆ. ಭಾಷೆಯ ಬಳಕೆ ಎಂಬುದು ಒಂದು ಸಾಮಾಜಿಕ ಚಟುವಟಿಕೆ.  ಇದಕ್ಕೊಂದು ಚರಿತ್ರೆ ಇದೆ. ಬಳಸುವವರ ಬದುಕಿನ ಕ್ರಮವನ್ನು ಇದು ಅವಲಂಬಿಸಿರುತ್ತದೆ. ವೈಯುಕ್ತಿಕ ಪ್ರಯತ್ನಗಳು ತಂತಾನೇ ಭಾಷೆಯನ್ನು ಬದಲಿಸಲಾರವು.  ಒಟ್ಟಾಗಿ ನಡೆಸಿದ ಪ್ರಯತ್ನದಿಂದ ಬದಲಾವಣೆಗಳು ನಡೆದರೂ, ಭಾಷೆಯಲ್ಲಿ ಹಿಂದೆ ಇದ್ದುದರ ಗುರುತುಗಳು ಉಳಿದುಕೊಂಡೇ ಇರುತ್ತವೆ. ಭಾಷೆಯಾಗಲೀ, ಸಮಾಜವಾಗಲೀ ಯಾವುದೇ ‘ರಚನೆಯ ಆಚೆ’ಗೆ ಬಂದು ಮಾತಾಡುವುದು ಆಗುವುದಿಲ್ಲ. ಸ್ತ್ರೀವಾದಿಗಳು ಏನಿದ್ದರೂ ಒಳಗೇ ಇದ್ದು ಕೊಂಡು ಹೋರಾಡುತ್ತಾ ರಚನೆಯ ‘ವಿರುದ್ಧ’ದನಿ ಎತ್ತಬೇಕು. ಭಾಷೆಯಲ್ಲಿ ಕಥನದಲ್ಲಿ ಹೆಂಗಸರನ್ನು ಮಂಡಿಸುವ ಬಗೆಯನ್ನು ವಿರೋಧಿಸುತ್ತಾ, ಟೀಕಿಸುತ್ತಾ ಮುಂದುವರೆಯಬೇಕು.


[1] ಇದಕ್ಕೆ ಒಂದೇ ಒಂದು ವಿನಾಯತಿ ಇದೆ. ಬ್ರಿಟಿಷ್ ಬರಹಗಾರ್ತಿ ಜಿನೆಟ್ ವಿಂಟರ್‌ಸನ್ ಅವರ ಗೆಳತಿಯರು ಮತ್ತು ಅಭಿಮಾನಿಗಳು ಅವರ ಮನೆಗೆಲಸ, ಮತ್ತಿತರ ಸುತ್ತಮುತ್ತಲ ಕೆಲಸಗಳನ್ನು ತಾವೇ ಮಾಡುತ್ತಾರಂತೆ. ಈ ಉದಾಹರಣೆಯನ್ನು ಎಂಟರ್‌ಸನ್ ಒಬ್ಬ ಜಂಬಗಾತಿ ಎಂದು ತಿಳಿಸಲು ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ.  ಆಕೆಯನ್ನು ಸ್ವಾರ್ಥಿ, ಮತ್ತು ಪೊಗರಿನವಳು ಎಂದು ಬಿಂಬಿಸಲು ಈ ಮಾತನ್ನು ಹೇಳುತ್ತಾರೆ. ಅದೇನೇ ಇರಲಿ, ಮನೆಗೆಲಸವನ್ನು ಮಾಡದಿರುವುದೇ ಜಗತ್ತಿನ ಬಹುಪಾಲು ಗಂಡಸರಿಗೆ ಸಹಜವಾದ ನಡವಳಿಕೆಯಾಗಿದೆ ಎಂಬುದು ಈ ಉದಾಹರಣೆ ಕುರಿತ ಚರ್ಚೆಯಿಂದ ಮತ್ತಷ್ಟು ಸ್ಪಷ್ಟವಾಗುತ್ತದೆ. ಇಂದಿಗೂ ಪುಸ್ತಕಗಳ ಅರ್ಪಣೆಯ ಪುಟಗಳಲ್ಲಿ ಕಾಣಸಿಗುವ ‘ಯಾರ ನೆರವಿಲ್ಲದಿದ್ದರೆ…. ಅಂಥ ಹೆಂಡತಿಗೆ’ ಎಂಬ ಉಲ್ಲೇಖಗಳನ್ನು ಓದಿ ಸಿಡಿಮಿಡಿ ಗೊಳ್ಳುವವರನ್ನು ಕಾಣಬಹುದೇ?