ಪ್ರತಿನಿಧೀಕರಣಗಳು : ಲೈಂಗಿಕತಾವಾದಿ ಭಾಷೆ ಮತ್ತು ಲೈಂಗಿಕತಾವಾದಿ ಸಂಕಥನ

ಮಾನವ ಸಂಸ್ಕೃತಿಯಲ್ಲಿ ಭಾಷೆ ಮುಖ್ಯ ಭಾಗವಾಗಿದೆ. ಸಂಸ್ಕೃತಿಯ ಕಾಳಜಿಗಳು ಮತ್ತು ಮೌಲ್ಯಗಳನ್ನು ಭಾಷೆಯಲ್ಲಿ ಮಂಡಿಸಲಾಗಿದೆ. ಈ ಮಂಡನೆಗಳನ್ನು ಭಾಷೆಯ ಮೂಲಕವೇ ಮಕ್ಕಳಿಗೆ, ಮತ್ತು ಸಮುದಾಯಕ್ಕೆ ಸೇರ್ಪಡೆಯಾಗುವ ಹೊಸಬರಿಗೆ ಕಲಿಸಿ ಕೊಡಲಾಗುತ್ತದೆ. ಸ್ತ್ರೀವಾದಿ ಭಾಷಾ ಮೀಮಾಂಸೆಯ ಹಲವು ಎಳೆಗಳು, ಭಾಷೆಗಳು ಭಾಷಿಕರಿಗೆ ಜಂಡರ್ ಮತ್ತು ಸ್ತ್ರೀಯರ ಬಗ್ಗೆ ಏನನ್ನು ತಿಳಿಸಿ ಕೊಡುತ್ತವೆ ಎಂಬುದನ್ನು ತಿಳಿಯಲು ಮುಂದಾಗಿವೆ.

ಒಟ್ಟಾರೆಯಾಗಿ, ಭಾಷೆಗಳು ಲೈಂಗಿಕತಾವಾದಿಗಳಾಗಿರುತ್ತವೆ ಎಂದು ಸ್ತ್ರೀವಾದಿಗಳು ತೀರ್ಮಾನಿಸಿದ್ದಾರೆ. ಭಾಷೆಗಳು ಲೋಕವನ್ನು ಪುರುಷರ ಕಣ್ಣೋಟದ ಮೂಲಕವೇ ಮಂಡಿಸುತ್ತವೆ ಇಲ್ಲವೇ ‘ಹೆಸರಿಸು’ತ್ತವೆ. ಇದಲ್ಲದೆ, ಹೆಂಗಸರ ಬಗ್ಗೆ ಲಾಗಾಯತಿನಿಂದ ಬಂದ ನಂಬಿಕೆಗಳನ್ನು, ಗಂಡುಹೆಣ್ಣುಗಳ ನಡುವೆ ಇರುವ ಸಂಬಂಧದ ನೆಲೆಗಳನ್ನು, ಸಿದ್ಧ ಮಾದರಿಗಳಂತೆ ತೋರಿಸುತ್ತವೆ. ‘ಬುಕ್ ಆಫ್ ಜನೆಸಿಸ್’ನಲ್ಲಿ ದೇವರ ಸೃಷ್ಟಿಗೆ ಆಡಂ ಹೆಸರುಗಳನ್ನಿಟ್ಟ ಹಾಗೆಯೇ ಹೆಸರಿಡುವ ಕೆಲಸವನ್ನು ಗಂಡಸರು ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿರುವುದರಿಂದ ಪುರುಷ ಕೇಂದ್ರಿತ ಕಣ್ಣೋಟಗಳು ಮೇಲುಗೈ ಪಡೆದಿವೆ ಎಂದು ಹಲವು ಸ್ತ್ರೀವಾದಿಗಳು ಬಣ್ಣಿಸುತ್ತಾರೆ. ಈ ಪರಿಸ್ಥಿತಿಯ ಪರಿಣಾಮ ಗಂಭೀರವಾಗಿದೆ.  ಏಕೆಂದರೆ, ಹೆಸರುಗಳು ಮೊದಲೇ ಇರುವ ದಿಟಗಳ ಬಿಂಬಗಳಾಗಿಲ್ಲ. ಇಲ್ಲವೇ, ದಿಟಕ್ಕೆ ನಂಟಿಲ್ಲದ ಎಂಥದೋ ಪದಗಳಲ್ಲ. ಹೆಸರುಗಳು ಹಲವು ದಿಟಗಳ ಮೊತ್ತವಾದ ಲೋಕದಲ್ಲಿ ಯಾವುದೋ ಒಂದನ್ನು ಮುಂಚೂಣಿಗೆ ತಂದು ಅದಕ್ಕೆ ಮನ್ನಣೆ ನೀಡುವ ಯತ್ನಗಳಾ ಗಿರುತ್ತವೆ.

ಇದು ಸ್ತ್ರೀವಾದಿಗಳು ಹುಟ್ಟುಹಾಕಿದ ಚಿಂತನೆಯಲ್ಲ. ಬಹು ಹಿಂದಿನಿಂದಲೂ ತತ್ತ್ವ ಶಾಸ್ತ್ರದಲ್ಲಿ ಇದು ಒಂದು ಮುಖ್ಯ ಪ್ರಶ್ನೆಯಾಗಿ ಚರ್ಚೆಯಾಗಿದೆ. ಆದರೆ, ಭಾಷೆಯು ನಾವು ದಿಟವೆಂದು ತಿಳಿದದ್ದನ್ನು ಬಿಂಬಿಸುತ್ತದೋ, ಇಲ್ಲವೇ ಯಾವುದು ದಿಟ ಎಂಬುದನ್ನು ನಿರ್ಧರಿಸುತ್ತದೋ ಎಂಬ ಪ್ರಶ್ನೆಯನ್ನು ಮೊದಲೆತ್ತಿಕೊಂಡವರು ಅಮೆರಿಕದ ಇಬ್ಬರು ಭಾಷಾಶಾಸ್ತ್ರಜ್ಞರು.  ಇಪ್ಪತ್ತನೇ ಶತಮಾನದ ಆದಿ ಭಾಗದಲ್ಲಿ ಎಡ್ವರ್ಡ್ ಸಪೀರ್ ಮತ್ತು ಬೆಂಜಮಿನ್ ಲೀ  ಊರ್ಫ್ ಎಂಬುವರು ಈ ಚರ್ಚೆಯನ್ನು ಕೈಗೆತ್ತಿಕೊಂಡರು. ಇವರಿಬ್ಬರೂ ಅಮೆರಿಕದ ಆದಿವಾಸಿಗಳ ಭಾಷೆಗಳನ್ನು ವಿಶ್ಲೇಷಿಸುತ್ತಿದ್ದವರು. ಈ ಆದಿವಾಸಿಗಳು ಮತ್ತು ಯೂರೋಪಿಯನ್ನರು ಹೊಂದಿರುವ ಲೋಕಗ್ರಹಿಕೆಯ ವ್ಯತ್ಯಾಸಗಳು ಅವರವರು ಮಾತಾಡುವ ಭಾಷೆಗಳ ವ್ಯಾಕರಣ ಮತ್ತು ಅರ್ಥರಚನೆಗಳಿಗೆ ನೇರ ಸಂಬಂಧವನ್ನು ಹೊಂದಿರಬಹುದೇ ಎಂಬುದು ಅವರು ಹಾಕಿಕೊಂಡ ಪ್ರಶ್ನೆ. ಹೀಗೆ ಪ್ರಶ್ನೆಯೊಂದನ್ನು ರೂಪಿಸಿಕೊಳ್ಳಲು ಕಾರಣಗಳಿದ್ದವು. ಆವರೆಗೆ ಯೂರೋಪಿಯನ್ನರು ತಾವು ಲೋಕವನ್ನು ಗ್ರಹಿಸುವ ವಿಧಾನವೇ ಸಹಜ, ಹಾಗೂ ಅದೊಂದೇ ಸಾಧ್ಯವಿರುವ ಮಾದರಿ ಎಂದು ನಂಬಿದ್ದರು. ಜೊತೆಗೆ ತಮ್ಮ ಗ್ರಹಿಕೆಯೇ ಶ್ರೇಷ್ಠ ಎಂಬ ಹೆಮ್ಮೆಯೂ ಸೇರಿತ್ತು. ಇಂತಹ ಚಿಂತನೆಗಳನ್ನು ನಾವೀಗ ಜನಾಂಗೀಯವೆಂದು ಹೇಳುತ್ತಿದ್ದೇವೆ. ಹೀಗೆ ಯೋಚಿಸುವವರು ಶ್ರೇಷ್ಠತೆಯ ಚೌಕಟ್ಟಿಗೆ ಒಪ್ಪಿಸಿಕೊಂಡಿರುತ್ತಾರೆ. ಸ್ತ್ರೀವಾದಿಗಳು ಸಪೀರ್ ಮತ್ತು ಊರ್ಫ್ ಎತ್ತಿದ ಪ್ರಶ್ನೆಯನ್ನು ತಮ್ಮ ಲೈಂಗಿಕತಾವಾದದ ಮೀಮಾಂಸೆಯಲ್ಲಿ ಸೇರಿಸಿಕೊಂಡದ್ದು ಸರಿಯಾಗಿಯೇ ಇದೆ. ಏಕೆಂದರೆ, ಎಷ್ಟೋ ಭಾಷೆಗಳಲ್ಲಿ ಕಾಣುವ ಮಾದರಿಯಂತೆ ‘ಪುರುಷ’ ಇರುವ ನೆಲೆಯಾದರೆ ‘ಸ್ತ್ರೀ’ ಇಲ್ಲದ ನೆಲೆಯಾಗಿರುತ್ತಾಳೆ.  ಭಾಷೆಯೇ ಈ ಚೌಕಟ್ಟನ್ನು ತನ್ನೊಳಗೆ ಹೆಣೆದುಕೊಂಡಿರುವುದರಿಂದ ಭಾಷಿಕರು ಅದನ್ನೇ ದಿಟವೆಂದು ನಂಬಿಬಿಡುತ್ತಾರೆ.

ಸಪೀರ್ ಮತ್ತು ಊರ್ಫ್ ಪ್ರಮೇಯ ಈಗಲೂ ವಾದ ವಿವಾದಗಳಿಗೆ ಕಾರಣವಾಗಿದೆ. ಹಲವರು ಈ ಪ್ರಮೇಯವನ್ನು ಒಪ್ಪಿಕೊಳ್ಳಲು ಬೇಕಾದಷ್ಟು ಪುರಾವೆಗಳಿಲ್ಲ ಎಂದೂ ಅದರ ತಾತ್ತ್ವಿಕ ನೆಲೆಯಲ್ಲೇ ಕುಂದುಗಳಿವೆ ಎಂದೂ ಹೇಳುತ್ತಾರೆ. ಈ ಪ್ರಮೇಯವನ್ನು ಕೆಲವು ಹಂತದವರೆಗೆ ಒಪ್ಪುವವರೂ ಇದ್ದಾರೆ. ಈ ಸಮಸ್ಯೆಯನ್ನು ಅರಿಯಲು ಕೆಲವು ತೊಡಕು ಗಳುಂಟಾಗಿವೆ. ಏಕೆಂದರೆ, ಪ್ರಚಲಿತವಿರುವ ಊರ್ಫ್ ಚಿಂತನೆಗಳು ತುಂಬಾ ಒರಟೊರಟಾ ಗಿವೆ.  ಪರಿಪೂರ್ಣವಾದಂತೆ ತೋರುವುದಿಲ್ಲ. ಕೆಲವು ಟೀಕಾಕಾರರಂತೂ ಈ ಪ್ರಮೇಯ ಬಳಸುದಾರಿಯಿಂದ ಜನಾಂಗೀಯ ಚಿಂತನೆಯನ್ನೇ ಬೆಂಬಲಿಸುತ್ತದೆ ಎನ್ನುತ್ತಾರೆ. ಜ್ಯೋಫ್ ಪುಲ್ಲಂ (೧೯೯೩) ಈ ಪ್ರಮೇಯವನ್ನು ನಿರಾಕರಿಸಿದವರಲ್ಲೊಬ್ಬರು. ಎಸ್ಕಿಮೋಗಳು ಹಿಮದ ಬೇರೆ ಬೇರೆ ಬಗೆಗಳನ್ನು ತಿಳಿಸಲು ನೂರಾರು ಪದಗಳನ್ನು ಹೊಂದಿದ್ದಾರೆ; ಅಷ್ಟು ಪದಗಳಿಲ್ಲದ ಭಾಷೆಗಳನ್ನು ಆಡುವವರಿಗಿಂತ ಬೇರೆಯಾಗಿಯೇ ಎಸ್ಕಿಮೋಗಳು ಹಿಮವನ್ನು ಗ್ರಹಿಸುತ್ತಾರೆ ಎನ್ನುವುದು ಹೆಚ್ಚು ಪ್ರಚಾರ ಪಡೆದ ಸಂಗತಿಯಾಗಿದೆ. ಪುಲ್ಲಂ ಅವರು ಮೊದಲಿಗೆ ಎಸ್ಕಿಮೋಗಳು ಆಡುವ ಇನೂಇಟ್ ನುಡಿಯಲ್ಲಿ ಹಿಮಕ್ಕೆ ನೂರಾರು ಪದಗಳಿವೆ ಎಂಬ ತೀರ್ಮಾನವನ್ನೇ ತಳ್ಳಿ ಹಾಕುತ್ತಾರೆ. ಒಂದು ವೇಳೆ ಹಾಗೆ ನೂರಾರು ಪದಗಳು ಇರುವುದು ನಿಜವೇ ಆಗಿದ್ದರೂ, ಅದೇನೂ ಮಹತ್ವದ ಸಂಗತಿಯಲ್ಲ ಎಂಬುದು ಅವರ ನಿಲುವು.  ಮುದ್ರಕರಿಗೆ ಹಲವು ಬಗೆಯ ಫಾಂಟ್‌ಗಳ ಹೆಸರು ಗೊತ್ತು. ಆದರೆ, ಇದರಿಂದಾಗಿಯೇ ಮುದ್ರಕರು ಲೋಕವನ್ನು ಗ್ರಹಿಸುವ ಬಗೆಗೂ ಇತರರ ಗ್ರಹಿಕೆಯ ಬಗೆಗೂ ವ್ಯತ್ಯಾಸಗಳಿವೆ ಎಂದು ಯಾರೂ ವಾದಿಸುವುದಿಲ್ಲ. ಅವರ ಕೆಲಸವೇ ಮುದ್ರಣವಾದ್ದರಿಂದ ಹಾಗೆ ಹೆಚ್ಚು ಹೆಸರುಗಳು ಅವರಿಗೆ ಗೊತ್ತಿದೆ ಎಂದು ತಿಳಿಯುತ್ತಾರೆ. ನಮಗೆ ಅದು ಗೊತ್ತಿಲ್ಲದಿರುವುದು ಕೊರತೆಯೇನೂ ಅಲ್ಲ. ಈ ಎರಡು ಉದಾಹರಣೆಗಳಲ್ಲಿ ಕೊಂಚ ವ್ಯತ್ಯಾಸವಿದೆ. ಮುದ್ರಕ ಜಗತ್ತನ್ನು ಅಪರಿಚಿತವೆಂದೂ, ಕೌತುಕಗಳಿಂದ ತುಂಬಿದ್ದೆಂದೂ ನಾವು ತಿಳಿಯುವುದಿಲ್ಲ.  ಆದರೆ, ಎಸ್ಕಿಮೋಗಳ ಲೋಕ ಹಾಗಲ್ಲ. ಅವರನ್ನು ನಾವು ‘ಬೇರೆಯವರೆಂದೂ’, ನಮ್ಮಂತೆ ಇರುವವರಲ್ಲವೆಂದೂ ತಿಳಿಯುತ್ತೇವೆ.ಅವರ ಬಗ್ಗೆ ಅಯ್ಯೋ ಪಾಪ ಎಂದು ಹೇಳುವವರು ಇದ್ದಾರೆ. ಇದರಿಂದಾಗಿ ಎಸ್ಕಿಮೋಗಳ ನುಡಿಗಳ ಬಗ್ಗೆ ನಾವು ತಳೆಯುವ ನಿಲುವುಗಳು ಪುಲ್ಲಂ ಅವರು  ಹೇಳುವಷ್ಟು, ಸರಳವಾಗಿಲ್ಲ.

ಊರ್ಫ್ ಪ್ರಮೇಯವನ್ನು ಒಪ್ಪಿಕೊಂಡ ಸ್ತ್ರೀವಾದಿಗಳ ಚಿಂತನೆಗಳು ಹೀಗೆಯೇ ಟೀಕೆಗೆ ಒಳಗಾಗಿವೆ. ಇಂಗ್ಲಿಶ್‌ನಲ್ಲಿ ಇರುವ ಮ್ಯಾನ್ ಎಂಬ ಸಮೂಹವಾಚಿ ಪದದ ಬಗ್ಗೆ ಆ ಭಾಷೆಯನ್ನಾಡುವವರ ತಿಳಿವಳಿಕೆಯ ಪರಿಣಾಮ ಏನೇ ಇರಲಿ, ನಾವು ಆ ಚೌಕಟ್ಟಿಗೆ ಕಟ್ಟುಬಿದ್ದು ಅದನ್ನೇ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇಲ್ಲ. ಪದಗಳು ಸೂಚಿಸುವ ಅರ್ಥದ ವ್ಯಾಪ್ತಿಯನ್ನು ನಾವೀಗ ಮರುಪರಿಶೀಲನೆಗೆ ಗುರಿಪಡಿಸುವವರೇ ಹೊರತು ಆ ಅರ್ಥಕ್ಕೆ ಜೋತು ಬೀಳುವುದಿಲ್ಲ. ಹಾಗೆ ಜೋತು ಬಿದ್ದಿದ್ದರೆ, ಲೈಂಗಿಕತಾವಾದಿ ಭಾಷೆಯ ವಿರುದ್ಧವಾಗಿ ವಾದ ಹೂಡಲು ಆಗುತ್ತಿರಲಿಲ್ಲ. ಮ್ಯಾನ್ ಎಂಬುದನ್ನು ಸಮೂಹ ವಾಚಿಯಾಗಿ ಬಳಸುವ ನೆಲೆಯಿಂದ, ಅದನ್ನು ಕೇವಲ ಗಂಡಸರನ್ನು ಸೂಚಿಸಲು ಬಳಸುವ ನೆಲೆಯನ್ನು ಬೇರ್ಪಡಿಸುವುದು ಅಸಾಧ್ಯವೇನೂ ಅಲ್ಲ. (male ಮತ್ತು human ಪದಗಳನ್ನು ಬೇರೆ ಇಡುವುದು ನಿಜವಾದ ಸಮಸ್ಯೆ). ‘‘ಎಲ್ಲ ಮನುಷ್ಯರೂ ಸಮಾನರು’’ ಎಂಬ ಘೋಷ ವಾಕ್ಯ ಕೇಳಿದಾಗ ಅದನ್ನು ಕೂಗುತ್ತಿರುವ ಮೋರ್ಚಾದ ಜೊತೆಗೆ ಸೇರಿಕೊಳ್ಳಲು ನನಗೇನೂ ಹಿಂಜರಿಕೆ ಇಲ್ಲ. ಆ ಘೋಷಣೆ ಗಂಡಸರನ್ನಷ್ಟೇ ಕುರಿತಿದೆ ಎಂದು ನಾನು ತಿಳಿಯುವುದಿಲ್ಲ. ಆದರೆ ಒಂದು ಸಾರ್ವಜನಿಕ ಮೂತ್ರಿಯ ಬಾಗಿಲ ಮೇಲೆ ‘men’ಎಂದಿದ್ದರೆ, ಅದರೊಳಗೆ ನಾನು ಹೋಗುವಂತಿಲ್ಲ ಎನ್ನುವುದು ಗೊತ್ತಿದೆ. ಪದಗಳು ತಮ್ಮಿಂದ ತಾವೇ ಏನನ್ನೂ ಹೇಳುವುದಿಲ್ಲ, ಅಥವಾ ಯಾರೋ ಪದಗಳಿಗೆ ಇದೇ ಅರ್ಥ ಎಂದು ನಿಗದಿ ಮಾಡಿ ಹೇಳುವಷ್ಟು ಸುಲಭವಾದುದೂ ಅಲ್ಲ. ಡೇಲ್ ಸ್ಪೆಂಡರ್ ಅವರು ‘ಪುರುಷ ನಿರ್ಮಿತ ಭಾಷೆ’ ಎಂಬುದನ್ನು ಕುರಿತು ಬರೆದಿದ್ದಾರೆ. ಅವರ ಊಹೆಯಂತೆ ಯಾರೋ ಕೆಲವರು ಉನ್ನತ ಸ್ತರದ ಗಂಡಸರು ಮಾನವ ಚರಿತ್ರೆಯ ಯಾವುದೋ ಹಂತದಲ್ಲಿ ಆರಾಮವಾಗಿ ಕುಳಿತು ಹೆಂಗಸರನ್ನು ‘ನಿರರ್ಥಕ ನೆಲೆ’ ಗೆ ತಳ್ಳುವ ಅರ್ಥರಚನೆಯ ನಿಯಮಗಳನ್ನು ಬರೆದರು ಎಂದು ಒಪ್ಪಬೇಕಾಗುತ್ತದೆ.  (ಹೌದೇ? ಇದೆಲ್ಲ ನಡೆದದ್ದು ಯಾವಾಗ? ಯಾವ ಭಾಷೆಯಲ್ಲಿ ಗಂಡಸರು ಈ ನಿರ್ಣಯಗಳನ್ನು ನಿರೂಪಿಸಿದರು?)

ಆದರೆ, ಭಾಷೆಯು ಲೈಂಗಿಕತವಾದಿ ಎಂಬುದನ್ನು ಒಪ್ಪಲು ನೀವೇನೂ ವೂರ್ಫ್‌ನ ಹಿಂಬಾಲಕರಾಗಬೇಕಾಗಿಲ್ಲ. ಲೈಂಗಿಕತಾವಾದಿ ಭಾಷೆಯ ಯಾವುದೇ ಭಾಷೆಯಲ್ಲಿ ಅಂತಸ್ಥವಾಗಿ ನೆಲೆಗೊಂಡಿಲ್ಲ; ನಮ್ಮ ದಿನಬಳಕೆಯ ಭಾಷೆಯಲ್ಲಿ ಇದೆಲ್ಲವೂ ಅರಿವಿಗೆ ಬರುವುದೇ ಇಲ್ಲ ಎಂದು ತಿಳಿದರೂ ಭಾಷೆಯ ಲೈಂಗಿಕತಾವಾದಿ ನೆಲೆಗಳು ಮಾತ್ರ ಮತ್ತೆ ಮತ್ತೆ ತಲೆ ಎತ್ತುತ್ತಲೇ ಇರುತ್ತವೆ. ಲೈಂಗಿಕತೆ ಕುರಿತ ಜನಸಾಮಾನ್ಯರ ತಿಳಿವಳಿಕೆಯನ್ನು ಮತ್ತೆ ಮತ್ತೆ ಗಟ್ಟಿ ಮಾಡುತ್ತಲೇ ಇರುತ್ತವೆ. ಇದೆಲ್ಲವನ್ನೂ ನಾವು ‘ಸಹಜ’ಎಂದು ತಿಳಿದು ಬಿಡುತ್ತೇವೆ. ಅದರಲ್ಲೂ ಇಂಥ ಗಟ್ಟಿಗೊಳಿಸುವಿಕೆ ದಿನನಿತ್ಯದ ಯಾವುದೋ ಕ್ಷುಲ್ಲಕ ಭಾಷಾ ಬಳಕೆಯಲ್ಲಿ ಆಗುತ್ತಿದ್ದರಂತೂ ನಮ್ಮ ವಾದವನ್ನು ಸಮರ್ಥಿಸುವುದು ಕಷ್ಟವಾಗುತ್ತದೆ.  ಹಾಗೆ ನೋಡಿದರೆ ನಮ್ಮ ಬಹುಪಾಲು ಭಾಷಾಬಳಕೆಗಳೆಲ್ಲ ಕ್ಷುಲ್ಲಕ ನೆಲೆಗಳಲ್ಲೇ ಇರುತ್ತವೆ.  ಯಾರೋ ಲೈಂಗಿಕ ನೆಲೆಯ ಬೈಗುಳವೊಂದನ್ನು ನಿಮ್ಮನ್ನು ಕುರಿತು ಬಳಸುತ್ತಾರೆ ಎಂದು ಕೊಳ್ಳಿ. ಆ ಸಂದರ್ಭಕ್ಕೆ ನೀವು ತಿರುಗಿ ಬೀಳಬಹುದು. ಆದರೆ ದಿನನಿತ್ಯದ ಸಾಮಾನ್ಯ ಮಾತುಕತೆಗಳಲ್ಲೂ ಹಾಸುಹೊಕ್ಕಾಗಿರುವ ಲೈಂಗಿಕತೆಯ ನೆಲೆಗಳಿಗ ಸವಾಲೆಸೆಯುವ ಸಮಯ ವಾದರೂ ಯಾರಿಗುಂಟು?

ಹೆಸರಿಸುವುದರ’ ಆಚೆಗೆ

ದಿನಬಳಕೆಯ ಭಾಷೆಯು ನಮ್ಮಲ್ಲಿ ಗಟ್ಟಿಗೊಳಿಸುತ್ತಿರುವ ನಂಬಿಕೆಗಳು ಯಾವುವು? ‘ಲೈಂಗಿಕತಾವಾದಿ ಭಾಷೆ’ಎಂಬ ಪದದ ಹಲವು ಬಳಕೆಗಳು ಖಚಿತವಾದ ಅರ್ಥವನ್ನು ನೀಡುವಂತೆ ತೋರುತ್ತಿಲ್ಲ. ಎಲ್ಲ ಸಂಗತಿಗಳನ್ನೂ ಒಂದೇ ಪದದ ಮೂಲಕ ಹೇಳಲು ಹೊರಟಂತಿದೆ. ಲೈಂಗಿಕತಾವಾದಿ ನಂಬಿಕೆಗಳು ಬೇರೆ ಬೇರೆ ನೆಲೆಗಳಿಂದ ಭಾಷೆಯೊಳಗೆ ಬಂದು ಸೇರಿರಬಹುದು ಎನ್ನುವ ಅಂಶವನ್ನು ಇದರಿಂದ ಮರೆಮಾಚಿದಂತಾಗಿದೆ. ಈ ನಂಬಿಕೆಗಳು ಪದರಚನೆಯ ನಿಯಮಗಳಲ್ಲಿ ಬೇರು ಪಡೆದಿರಬಹುದು. ಮತ್ತೆ ಕೆಲವು ಸಂಕಥನಗಳಲ್ಲಿ, ಸಂದರ್ಭ ಭಾಷೆಗಳಲ್ಲಿ ಬಳಕೆಯಾಗುವ ಪದಗುಚ್ಛಗಳಲ್ಲಿ ನೆಲೆಗೊಂಡಿರ ಬಹುದು. ಹಾಗಾಗಿ, ಲೈಂಗಿಕತಾವಾದಿ ಭಾಷೆ ಎಂಬುದನ್ನು ಕೇವಲ ಪುರುಷ ನೆಲೆ ಎಂಬ ಕಣ್ಕಟ್ಟಿನಿಂದ ಹೆಸರಿಸಿದರೆ ದಿಟವಾದದ್ದು ತಿಳಿಯದೆಯೂ ಹೋಗಬಹುದು. ಈ ಪರಿಯ ಭಾಷೆಗೆ ಹಲವು ತೋರ್ಕೆಗಳಿವೆ, ಹಲವು ಆಕಾರಗಳಿವೆ, ಹಲವು ಬಗೆಗಳಲ್ಲಿ ಮಂಡನೆಗೊಳ್ಳುತ್ತವೆ. ಅವುಗಳಿಗೆ ತಮ್ಮದೇ ಆದ ಚರಿತ್ರೆಗಳಿವೆ, ಹಾಗೆಯೇ ಚಹರೆಗಳೂ ಇವೆ.

ಹೆಂಗಸನ್ನು ಲೈಂಗಿಕ ಹಿಂಸೆಗೆ ಒಳಗು ಮಾಡುವ ಸಂದರ್ಭವನ್ನು ಮಂಡಿಸುವ ಬಗೆಯನ್ನು ನೋಡೋಣ. (ಸ್ತ್ರೀವಾದಿಗಳು ಈ ಕುರಿತು ಹೆಚ್ಚು ತಲೆಕೆಡಿಸಿಕೊಂಡಿದ್ದಾರಷ್ಟೇ?) ದಂಪತಿಗಳ ಬದುಕಿನಲ್ಲಿ ನಡೆದ ಘಟನೆಯೊಂದನ್ನು ಎರಡು ಸುದ್ದಿ ಪತ್ರಿಕೆಗಳು ವರದಿಮಾಡಿರುವ ಉದಾಹರಣೆಗಳನ್ನು ಈಗ ನೋಡೋಣ. ಮೊದಲ ವರದಿ ‘ಗುಣಮಟ್ಟಕ್ಕೆ ಹೆಸರಾದ’ ಪತ್ರಿಕೆಯಲ್ಲಿ ದೊರೆತದ್ದು. (‘ಡೈಲಿ ಟೆಲಿಗ್ರಾಫ್’) ಎರಡನೆಯದು, ಒಂದು ಜನಪ್ರಿಯ ಪುಡಿ ಪತ್ರಿಕೆಯಲ್ಲಿ ಮುದ್ರಣಗೊಂಡಿತ್ತು. (ಸನ್) ಇಬ್ಬರು ವರದಿಗಾರರು ಬರವಣಿಗೆಯ ವ್ಯಕ್ತಿ ವಿಶಿಷ್ಟ ಅಂಶಗಳು ನಮಗಿಲ್ಲಿ ಬೇಕಿಲ್ಲ. ಸಾಂಸ್ಥಿಕವಾಗಿ ನೆಲೆಗೊಂಡ ಪದ್ಧತಿಗಳು ಈ ವರದಿಗಳ ಭಾಷೆಯಲ್ಲಿ ಬಿಂಬಿತವಾಗಿರುವುದೂ ಮುಖ್ಯವಲ್ಲ: ‘‘ನಿನ್ನೆ ಬೆಳಿಗ್ಗೆ ಕೆಂಟ್ ಪ್ರದೇಶದ ಬೆಕೆನ್ ಹ್ಯಾಮ್‌ನ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಪುರುಷರು ಮನೆಯೊಡೆಯನ ಮೇಲೆ ದಾಳಿ ಮಾಡಿದ್ದರಿಂದ ಅವನು ತಲೆಗೆ ಏಟು ತಿಂದು ಗಾಯಗೊಂಡು ಹಾಸಿಗೆಯಲ್ಲಿ ಒತ್ತಿಹಿಡಿಯಲ್ಪಟ್ಟ. ಆತನ ಹೆಂಡತಿಯ ಮೇಲೆ ದಾಳಿಕೋರರು ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರವೆಸೆಗಿದರು(ಡೈಲಿ ಟೆಪಿಗ್ರಾಫ್). ‘‘ಹತ್ತೊಂಬತ್ತು ಸ್ಟೋನ್ ತೂಕದ ಭಯಗ್ರಸ್ತ ಗಂಡನನ್ನು ನಿನ್ನೆ ಅವನ ಹೆಂಡತಿಯ ಮೇಲೆ ಅತ್ಯಾಚಾರ ಮಾಡುವಾಗ ಅವಳ ಪಕ್ಕದಲ್ಲೇ ಬಿದ್ದುಕೊಂಡಿರುವಂತೆ ಒತ್ತಾಯಿಸಲಾಯಿತು’’(ಸನ್).

ನನ್ನ ಪ್ರಕಾರ ಎರಡೂ ವರದಿಗಳು ಅತ್ಯಾಚಾರವನ್ನು ವರದಿ ಮಾಡುವ ನೆಪದಲ್ಲಿ ಗಂಡಸಿನ ಮೇಲೆ ನಡೆಸಿದ ದಾಳಿಯನ್ನು ಮುಂಚೂಣಿಗೆ ತಂದಿವೆಯೇ ಹೊರತು, ಹೆಂಗಸಿನ ಅವಸ್ಥೆಯನ್ನಲ್ಲ. ಮೊದಲು ಅತ್ಯಾಚಾರವೆಂದರೆ ಕಳ್ಳತನವೆಂದೇ ವ್ಯಾಖ್ಯಾನಿಸಲಾಗುತ್ತಿತ್ತು.  ಹೆಂಗಸಿನ ಮೇಲೆ ಅತ್ಯಾಚಾರ ಮಾಡುವ ಮೂಲಕ ಅವಳನ್ನು ಮೈಲಿಗೆ ಮಾಡಿ ಅವಳ ಗಂಡ ಇಲ್ಲವೇ ತಂದೆಗೆ ಅವಳು ಬೆಲೆ ಇಲ್ಲದ ವಸ್ತುವಾಗುವಂತೆ ಮಾಡುವುದೆಂದೇ ತಿಳಿಯಲಾಗಿತ್ತು.  ಅದಕ್ಕಾಗಿಯೇ ಮದುವೆಯಾಗದವಳನ್ನು ಬಲಾತ್ಕಾರಿಸುವ ಗಂಡಸಿಗೆ ಅವಳನ್ನೇ ಮದುವೆಯಾಗುವ ಶಿಕ್ಷೆ ವಿಧಿಸಲಾಗುತ್ತಿತ್ತು. ಅತ್ಯಾಚಾರವನ್ನು ಕುರಿತ ಈ ಹಳೆಯ ತಿಳಿವಳಿಕೆಯ ಜೊತೆಗೆ ಈಗ ಅದು ಹೆಂಗಸಿನ ದೇಹರಚನೆಯ ಮೇಲೆ ಮಾಡಿದ ದಾಳಿ ಎಂಬ ಹೊಸ ಚಿಂತನೆ ಸೇರಿಕೊಂಡಿದೆ. ಹೀಗಾಗಿ ಅತ್ಯಾಚಾರವು ವ್ಯಕ್ತಿಯ ನೆಲೆಯ ಅಪರಾಧವೆನಿಸುತ್ತದೆಯೇ ಹೊರತು, ಆಸ್ತಿ ಸಂಬಂಧವಾದ ಅಪರಾಧವಾಗುವುದಿಲ್ಲ.  ಹೀಗಿದ್ದರೂ, ಮೇಲಿನ ಎರಡೂ ವರದಿಗಳನ್ನು ಓದಿದಾಗ ಹುಟ್ಟುಗುಣ ಸುಟ್ಟರೂ ಹೋಗದು ಎಂಬ ಮಾತು ನಿಜವೆನಿಸುತ್ತದೆ.

ನಾನೀಗ ನೀಡಿದ ವಿವರಣೆಗೆ ಬೆಂಬಲವಾಗಿ ಭಾಷೆಯ ಕೆಲವು ಲಕ್ಷಣಗಳನ್ನು ನೋಡ ಬಹುದು.  ಎರಡೂ ವರದಿಗಳಲ್ಲಿ ಗಂಡಸು ಮುಂಚೂಣಿಯಲ್ಲಿದ್ದಾನೆ. ಆತನೇ ವರದಿಯ ವಿಷಯ. ವಾಕ್ಯರಚನೆಯಲ್ಲೂ ಆತನಿಗೆ ಸಂಬಂಧಿಸಿದ ಪದವರ್ಗವೇ ವಾಕ್ಯದ ಮುಖ್ಯ ಭಾಗವಾಗಿದೆ. ಅಲ್ಲದೆ, ‘ಏಟು ತಿಂದ’, ‘ಒತ್ತಿ ಹಿಡಿಯಲ್ಪಟ್ಟ’ ಎಂಬ ಎರಡೂ ಕ್ರಿಯಾ ಪದಗಳು ಗಂಡನೇ ಅನುಭೋಗಿಯಾಗಿದ್ದಾನೆ ಎಂದು ಸೂಚಿಸುತ್ತವೆ. ಹೆಂಗಸನ್ನು ‘ಅವನ ಹೆಂಡತಿ’ ಎಂದು ಹೆಸರಿಸಿ ವಾಕ್ಯದ ಕೊನೆಯಲ್ಲಿ ಮಾತ್ರ ತೋರಿಸಲಾಗಿದೆ. ಅಂದರೆ, ದಾಳಿಗೊಳಗಾಗಿರುವುದು ‘ಅವನ ಮನೆ’ಯೇ ಹೊರತು ಅವಳದ್ದಲ್ಲ. ಎರಡನೆಯ ವರದಿಯಲ್ಲಿ ಅತ್ಯಾಚಾರಕ್ಕೆ ಮಹತ್ವ ನೀಡದೆ ಗಂಡನು ಒತ್ತಾಯ ಪೂರ್ವಕವಾಗಿ ಅದನ್ನು ನೋಡಬೇಕಾಯಿತು ಎಂಬುದಕ್ಕೆ ಮಹತ್ವ ನೀಡಲಾಗಿದೆ.

ಹೆಂಗಸರು ಮತ್ತು ಗಂಡಸರು ಮಾತನಾಡುವ ಬಗೆಯಲ್ಲಿ ಇರುವ ವ್ಯತ್ಯಾಸಗಳನ್ನು ಯಾವ ಚೌಕಟ್ಟಿನಲ್ಲಿ ಇರಿಸಿ ನೋಡಬೇಕು ಎಂಬುದು ಚರ್ಚೆಯ ವಿಷಯವಾಗಿದೆ. ಅವರಿಬ್ಬರ ಲಿಂಗನೆಲೆಯ ವ್ಯತ್ಯಾಸಗಳನ್ನು ಆಧಾರವಾಗಿಟ್ಟುಕೊಂಡು ನಡೆಸುವ ಅಧ್ಯಯನ ಗಳು, ಈ ವ್ಯತ್ಯಾಸದಿಂದಾಗಿಯೇ ಅವರ ಭಾಷಾ ಬಳಕೆಯ ವ್ಯತ್ಯಾಸಗಳು ಉಂಟಾಗುತ್ತವೆ ಎಂದು ವಾದಿಸುತ್ತವೆ. ಆದರೆ, ಇವರಾರೂ ಗಂಡು ಹೆಣ್ಣುಗಳ ನಡುವೆ ಇರುವ ಹೋಲಿಕೆ ಗಳನ್ನು ಗಮನಿಸುವುದೇ ಇಲ್ಲ. ಇಂಥ ಅಧ್ಯಯನಗಳು ಸ್ತ್ರೀವಾದ ನೆಲೆಗೊಳ್ಳುವ ಮೊದಲಿ ನಿಂದಲೂ ನಡೆಯುತ್ತಲೇ ಬಂದಿವೆ. ನಾನು ಭಾಷೆ ಮತ್ತು ಜಂಡರ್‌ಗಳ ಸಂಬಂಧವನ್ನು ಗಮನಿಸುವವಳು. ಈ ಕಾರಣದಿಂದಾಗಿಯೇ ನನಗೆ ಪತ್ರಿಕಾ ವರದಿಗಾರರಿಂದ, ಇಲ್ಲವೇ ಟಿ. ವಿ. ಕಾರ್ಯಕ್ರಮಗಳನ್ನು ಕುರಿತು ಅಧ್ಯಯನ ಮಾಡುವ ಸಂಶೋಧಕರಿಂದ ಫೋನ್ ಕರೆ ಇದ್ದೇ ಇರುತ್ತದೆ. ಹೀಗೆ ಕರೆ ಮಾಡಿದವರೆಲ್ಲ ‘‘ಗಂಡು ಹೆಣ್ಣುಗಳು ಭಾಷೆಯನ್ನು ಬೇರೆ ಬೇರೆ ಬಗೆಯಲ್ಲಿ ಬಳಸುವುದನ್ನು ಕುರಿತು ನಾನು ಏನಾದರೂ ಮಾಡಬೇಕು’’ಎಂದು ಹೇಳುತ್ತಾರೆ. ಇದೊಂದು ಸಮಸ್ಯೆಯೇ ಸರಿ. ಅವರಿಗೆ ಉತ್ತರ ನೀಡಲು ಹಿಂದೆ ಮುಂದೆ ನೋಡುತ್ತಾ ಕೊನೆಗೊಮ್ಮೆ ಭಾಷೆಯ ಈ ನೆಲೆಗಳನ್ನು ಗಮನಿಸಲು ಅವರು ತಿಳಿದುಕೊಂಡಿರು ವುದಕ್ಕಿಂತಲೂ ಬೇರೆಯದೇ ಆದ ನೆಲೆಗಳು ಇವೆ ಎಂಬುದನ್ನು ತಿಳಿಸಲು ಹೆಣಗುತ್ತೇನೆ.

ಪುರುಷ ಮತ್ತು ಸ್ತ್ರೀಯರ ನಡುವೆ ಇರುವ ವ್ಯತ್ಯಾಸಗಳನ್ನು ಸ್ತ್ರೀವಾದಿ ಸಂಶೋಧನೆಗಳು ತಮ್ಮ ಅಧ್ಯಯನದ ಕೇಂದ್ರದಲ್ಲಿ ಇರಿಸಿಕೊಡಿದ್ದರಿಂದ ಅಂತಹ ವ್ಯತ್ಯಾಸಗಳು ಸಹಜ ವಾಗಿಯೇ ಹೆಚ್ಚು ಹೆಚ್ಚು ಕಾಣಿಸತೊಡಗಿದವು. ಇಂಥ ಅಧ್ಯಯನಕಾರರಲ್ಲಿ ಇರುವ ಭಿನ್ನಾಭಿಪ್ರಾಯಗಳು ಈ ವ್ಯತ್ಯಾಸಗಳನ್ನು ವಿವರಿಸುವುದು ಹೇಗೆ ಎಂಬ ಬಗೆಗೆ ಇರುತ್ತವೆ. ಈ ಚರ್ಚೆಗಳನ್ನು ಸಮೀಕ್ಷಿಸಿದಾಗ ಇಂಥ ವಿವರಣೆಯ ಮೂರು ಚೌಕಟ್ಟುಗಳು ಇರುವಂತೆ ತೋರುತ್ತದೆ. ‘ಕೊರತೆ’, ‘ಯಜಮಾನಿಕೆ’ ಮತ್ತು ‘ವ್ಯತ್ಯಾಸ’ – ಎಂಬವೇ ಈ ಮೂರು ಚೌಕಟ್ಟುಗಳು.

ಕೊರತೆ, ಯಜಮಾನಿಕೆ, ವ್ಯತ್ಯಾಸ

ಹುಟ್ಟಿನಿಂದಿರಲಿ, ಇಲ್ಲವೇ ಕಲಿಕೆಯಿಂದರಲಿ ಹೆಂಗಸರು ಭಾಷೆಯನ್ನು ಬಳಸುವ ಬಗೆಯು ಗಂಡಸರ ಬಳಕೆಯ ಬಗೆಗೆ ಹೋಲಿಸಿದರೆ ಕೊರತೆಗಳಿಂದ ಕೂಡಿರುತ್ತದೆ ಎಂದು ಮೊದಲನೆಯ ಚೌಕಟ್ಟು ಹೇಳುತ್ತದೆ. ಬೆಳೆಯುತ್ತಾ ಇಂತಹ ಕೊರತೆಗಳು ನೆಲೆಗೊಳ್ಳುತ್ತವೆ ಎಂದು ಹೇಳುವವರು, ಹೆಂಗಸರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ತರಬೇತನ್ನು ಪಡೆಯುವುದಿಲ್ಲವೆಂದೂ, ಅದರಿಂದಾಗಿಯೇ ಅವರಲ್ಲಿ ಈ ಗುಣದ ಕೊರತೆ ಇರುತ್ತದೆಂದೂ, ಪರಿಣಾಮವಾಗಿ ಅವರು ಹಿನ್ನಡೆಯನ್ನು ಪಡೆಯುವರೆಂದೂ ಹೇಳುತ್ತಾರೆ. ಹೆಂಗಸರು ಹೆಂಗಸರಾಗಿರುವುದರಿಂದಲೇ ಉಂಟಾಗುವ ಪರಿಣಾಮಕ್ಕಿಂತ, ಅವರು ಗಂಡಸರ ಹಿಡಿತದಲ್ಲಿ ಬದುಕಬೇಕಾಗಿರುವುದರಿಂದಲೇ ಹಿನ್ನೆಡೆಗೆ ಗುರಿಯಾಗುತ್ತಾರೆ ಎಂದು ಯಜಮಾನಿಕೆಯ ಚೌಕಟ್ಟಿನವರು ವಾದಿಸುತ್ತಾರೆ. ಇಲ್ಲಿ ಗಂಡಸಿಗೆ ಇರುವ, ಆದರೆ ಹೆಂಗಸಿಗೆ ದೊರಕದ ಅಧಿಕಾರವೇ ಮುಖ್ಯ ವಿಷಯವಾಗುತ್ತದೆ. ನಮ್ಮಂಥ ಹೆಂಗಸರು ಬೆಳೆಯುವಾಗ, ದಿನದ ಹೆಚ್ಚು ಸಮಯವನ್ನು ಕಳೆಯುವ ಸ್ತ್ರೀ ಸಮುದಾಯಗಳಿಗೇ ವಿಶಿಷ್ಟವಾದ ಸಾಮಾಜಿಕ ಮತ್ತು ಭಾಷಿಕ ಕಟ್ಟುಪಾಡುಗಳೇ ಹೆಂಗಸರ ನುಡಿ ಬಳಕೆಯನ್ನು ರೂಪಿಸುತ್ತದೆ ಎಂದು ವ್ಯತ್ಯಾಸದ ಚೌಕಟ್ಟನ್ನು ಅನುಸರಿಸುವವರು ಹೇಳುತ್ತಾರೆ. (ಆದ್ದರಿಂದಲೇ, ಗಂಡಸರ ನುಡಿ ಬಳಕೆಯ ವಿಧಾನಗಳು ಪುರುಷ ಸಮುದಾಯದ ಕಟ್ಟುಪಾಡುಗಳಿಂದ ರೂಪುಗೊಂಡಿರುತ್ತವೆ). ಈ ಪ್ರಕಾರ ಗಂಡು ಹೆಣ್ಣುಗಳು ಎರಡು ಬೇರೆ ಬೇರೆ ಸಂಸ್ಕೃತಿಗಳಿಗೆ ಸೇರಿದವರು ಎಂದಾಯಿತು. ಹೀಗೆ ಇನ್ನೊಂದು ಸಂಸ್ಕೃತಿಯ ನಡವಳಿಕೆಗಳನ್ನು ಅರಿತುಕೊಳ್ಳಲಾಗದೆಯೇ ಇವರು ಬೆಳೆಯುತ್ತಾರೆ. ಹಾಗಾಗಿ, ಇಬ್ಬರೂ ಜೊತೆಯಾಗಿ ನುಡಿ ಬಳಕೆ ಮಾಡುವಾಗ ಒಬ್ಬರ ನ್ನೊಬ್ಬರು ತಪ್ಪಾಗಿ ತಿಳಿದರೆ ಅಚ್ಚರಿಯೇನಲ್ಲ.

ಕೆಲವು ಭಾಷಾಶಾಸ್ತ್ರಜ್ಞೆಯರು (ಅಂಥವರ ಸಂಖ್ಯೆ ಹಿಗ್ಗುತ್ತಿದೆ) ಕೊರತೆಯ ಚೌಕಟ್ಟನ್ನು ಬೆಂಬಲಿಸುತ್ತಾರೆ. ಹಾಗಿದ್ದರೂ ಯಜಮಾನಿಕೆ ಮತ್ತು ವ್ಯತ್ಯಾಸದ ಚೌಕಟ್ಟಿನ ಚಿಂತನೆಗಳು ಮೇಲುಗೈ ಪಡೆಯಲು ಹವಣಿಸುತ್ತಲೇ ಇವೆ. ಮಾತುಕತೆಯಾಡುವಾಗ ಗಂಡಸರು ಹೆಂಗಸರನ್ನು ಹತ್ತಿಕ್ಕಲು ಬೇಕೆಂದೇ ಮುಂದಾಗುವ ಬಗ್ಗೆ, ಅವರಿಬ್ಬರ ನಡುವೆ ಅಧಿಕಾರ ಇರುವ ಅಥವಾ ಇಲ್ಲದಿರುವ ಬಗ್ಗೆ, ಯಜಮಾನಿಕೆ ಚೌಕಟ್ಟಿನ ಅಧ್ಯಯನಕಾರರು ತೀರಾ ಸರಳ ತೀರ್ಮಾನಗಳನ್ನು ಮಾಡುವರೆಂದು ಟೀಕಿಸಲಾಗಿದೆ. ಸಾಮಾಜಿಕ ರಚನೆಗಳಿಂದ ನುಡಿ ಬಳಕೆಗಳು ನೆಲೆಗೊಂಡಿದ್ದರೆ, ಒಬ್ಬ ಗಂಡಸು ವ್ಯಕ್ತಿಗತವಾಗಿ ಒಬ್ಬ ಹೆಂಗಸನ್ನು ಮಾತಿನಲ್ಲಿ ಗೆಲ್ಲಲು ಯತ್ನಿಸುವುದೇಕೆ, ಹಾಗೆ ಮಾಡುವಾಗ ಜಂಡರ್ ಎಂಬುದು ಮುನ್ನೆಲೆಗೆ ಬರುತ್ತದೆಯಲ್ಲವೇ ಎಂಬ ಪ್ರಶ್ನೆಗಳನ್ನು ಎತ್ತಿಕೊಂಡು ವ್ಯತ್ಯಾಸಗಳ ಚೌಕಟ್ಟಿನ ಅಧ್ಯಯನ ಕಾರರನ್ನು ಟೀಕಿಸಲಾಗಿದೆ. ಹಾಗೆ ನೋಡಿದರೆ, ‘ವ್ಯತ್ಯಾಸವೇ ಯಜಮಾನಿಕೆ’ (ಅಕಿ ಉಚೀಡಾ) ಎಂಬ ಹೇಳಿಕೆಯನ್ನು ಈ ಚೌಕಟ್ಟಿನವರು ಹೇಗೆ ವಿವರಿಸುತ್ತಾರೆ? ಅಂದರೆ ನಾವು ಗಂಡುತನ ಮತ್ತು ಹೆಣ್ಣುತನ ಎಂದು ವ್ಯಾಖ್ಯಾನಿಸುವ ಲಿಂಗಾಧಾರಿತ ನೆಲೆಗಳಿಗೆ, ಅಧಿಕಾರ ಮತ್ತು ಬಲಹೀನತೆ ಎಂಬ ಅಂತಸ್ತು ಸೂಚಕ ನೆಲೆಗಳಿಗೆ ಇರುವ ಹೋಲಿಕೆಗಳು ಕೇವಲ ಆಕಸ್ಮಿಕವೂ ಆಗಿರಬಹುದು.

ಯಜಮಾನಿಕೆ/ವ್ಯತ್ಯಾಸ ಚೌಕಟ್ಟುಗಳ ನಡುವಣ ವಾದವಿವಾದಗಳಲ್ಲಿ ಸ್ತ್ರೀವಾದಿಗಳು ತೊಡಗಿರುವಾಗಲೇ, ಈ ಎರಡೂ ಚೌಕಟ್ಟುಗಳ ಅಧ್ಯಯನಕಾರರನ್ನು ಸಾರವಾದಿ ಚಿಂತನೆಗಳನ್ನು ಮಂಡಿಸುವವರೆಂದು ಸ್ತ್ರೀವಾದಿ ಭಾಷಾಶಾಸ್ತ್ರಜ್ಞರು ತರಾಟೆಗೆ ತೆಗೆದು ಕೊಂಡಿದ್ದಾರೆ.

ಸಾರವಾದ : ಪರ ಮತ್ತು ವಿರೋಧ

ಸಾರವಾದ ಎಂಬ ಚೀಲದಲ್ಲಿ ಹಲವು ಸಂಗತಿಗಳು ಅಡಕವಾಗಿವೆ. ‘ಅರಾಜಕತೆ’ ಇಲ್ಲವೇ ‘ಅಂಧಾಭಿಮಾನ’ ಮುಂತಾದ ಪದಗಳನ್ನು ಹೇಗೆ ನಿಖರವಾದ ಅರ್ಥವಿಲ್ಲದೆ ಬಳಸತ್ತಾರೋ, ಹಾಗೆಯೇ ‘ಸಾರವಾದ’ ಎಂಬ ಪದವನ್ನು ಬೇರೆ ಬೇರೆಯವರು ಬೇರೆ ಬೇರೆ ಅರ್ಥಗಳಲ್ಲಿ  ಬಳಸುತ್ತಾರೆ. ಈ ಪದಕ್ಕೊಂದು ಹೀನಾರ್ಥ ಬಂದು ಸೇರಿರುವುದರಿಂದ ಅದರ ಮೂಲಾರ್ಥ ವನ್ನು ಥಟ್ಟನೆ ತಿಳಿಯಲಾಗುವುದಿಲ್ಲ. ಮೊದಲಿಗೆ ಈ ಪದವನ್ನು ‘ಸಾರಾಂಶದಲ್ಲಿ ನಂಬಿಕೆ’ ಎಂದು ತಿಳಿಯೋಣ. ಅಂದರೆ, ಒಂದು ಗುಂಪಿಗೆ ಸೇರಿದವರೆಲ್ಲರೂ ಕೆಲವು ನಿರ್ದಿಷ್ಟ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ಎಲ್ಲ ಲಕ್ಷಣಗಳೂ ಮೂಲಭೂತವಾಗಿರುತ್ತವೆ ಮತ್ತು  ಆ ಗುಂಪಿನ ಚಹರೆಗೆ ಅತ್ಯಗತ್ಯವಾಗಿರುತ್ತವೆ. ಇದು ಈ ವಾದದ ತಿರುಳು. ಈ ನೆಲೆಯಲ್ಲಿ ಗಂಡು ಹೆಣ್ಣುಗಳನ್ನು ತಂತಮ್ಮ ನಿರ್ದಿಷ್ಟ ಚಹರೆಗಳನ್ನುಳ್ಳ ಗುಂಪುಗಳು ಎಂದು ವಾದಿಸಲಾಗುತ್ತದೆ.

ಗಂಡು ಹೆಣ್ಣುಗಳನ್ನು ಜೈವಿಕ ನೆಲೆಗಳಿಂದ ಗುರುತಿಸಲು ಹೊರಟಾಗ ಸಾರವಾದದ ಒಂದು ನೆಲೆ ಮೈದಳೆಯುತ್ತದೆ. ಇದು ಎದ್ದು ಕಾಣುವ ಮತ್ತು ಪರಿಚಿತವಾದ ನೆಲೆಯೇ ಆಗಿದೆ. ಈ ನೆಲೆಯಲ್ಲಿ ವಾದವನ್ನು ಮಂಡಿಸುವವರು ‘ಗಂಡು ಹೆಣ್ಣುಗಳಲ್ಲಿ ಇರುವ ವ್ಯತ್ಯಾಸಗಳು ಜೈವಿಕವಾದವು/ಹುಟ್ಟಿನಿಂದ ಬಂದವು’ ಎಂದು ನಂಬುತ್ತಾರೆ. ಡೆಬೊರಾ ಟ್ಯಾನೆನ್ ಅವರನ್ನು ಸಾರವಾದಿ ಎಂದು ಟೀಕಿಸಲಾಗಿದೆ. ಆದರೆ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ಹೂಡುವ ವಾದ ಇಷ್ಟೇ. ಗಂಡು ಹೆಣ್ಣುಗಳ ಮಾತುಕತೆಗಳ ನಡುವೆ ಇರುವ ವ್ಯತ್ಯಾಸಗಳಿಗೆ ಕಾರಣಗಳು ಜೈವಿಕ ನೆಲೆಯಲ್ಲಿರುತ್ತವೆಂದು ತಾವು ಎಂದೂ ಸೂಚಿಸಿಲ್ಲ ಎನ್ನುತ್ತಾರೆ (ಟ್ಯಾನನ್ – ೧೯೯೪) ಸ್ತ್ರೀವಾದಿಗಳು ಸಾರವಾದವನ್ನು ಕುರಿತು ಈ ದಿನಗಳಲ್ಲಿ ಮಾತಾಡುವಾಗ ಕೇವಲ ಜೈವಿಕ ನೆಲೆಯ ಸಾರವಾದವನ್ನಷ್ಟೇ ಗಮನಿಸುತ್ತಿರುವುದಿಲ್ಲ. ಇದು ಮೊದಲು ಮನದಟ್ಟಾಗಬೇಕು. ಒಬ್ಬ ಸ್ತ್ರೀವಾದಿಯು ಇನ್ನೊಬ್ಬ ಸ್ತ್ರೀವಾದಿಯನ್ನು ‘ಸಾರವಾದಿ’ ಎಂದು ಗುರುತಿಸಿದರೆ, ಅವರ ಉದ್ದೇಶ ಹೀಗಿರ ಬಹುದು-(ಎ) ಹೆಂಗಸರೆಲ್ಲರೂ ಸಮಾನ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಗ್ರಹಿಸ ಲಾಗಿದೆ.(ಬಿ)ಹೆಂಗಸರು ಗಂಡಸರಿಂದ ಮೂಲಭೂತವಾಗಿ ಬೇರೆಯೇ ಆದವರು. ಅಂದರೆ ಎಲ್ಲ ಹೆಂಗಸರಿಗೂ ಸಮಾನವಾದ ಮತ್ತು ಮುಖ್ಯವಾದ ಲಕ್ಷಣಗಳು ಇರುತ್ತವೆಂದೂ, ಈ ಲಕ್ಷಣಗಳೇ ಅವರನ್ನು ಹೆಂಗಸರೆಂದು ಗುರುತಿಸಲು ನೆರವಾಗುತ್ತ ವೆಂದೂ ಹೇಳುವುದೇ ಸಾರವಾದ.

ಈ ಲಕ್ಷಣವು ಹುಟ್ಟಿನಿಂದ ಬಂದುದಲ್ಲವಾದರೆ, ಅದು ಮೈ ತಳೆದದ್ದು ಹೇಗೆ? ಈ ನಿಟ್ಟಿನಲ್ಲಿ ಹಲವು ಚಿಂತನೆಗಳು ಮಂಡಿತವಾಗಿವೆ. ಕುಟುಂಬದಲ್ಲಿ ಬೆಳೆಯುವಾಗ ಮಕ್ಕಳ ಮನಸ್ಸಿನ ಮೇಲೆ ಉಂಟಾಗುವ ಪರಿಣಾಮದಿಂದ ಈ ಲಕ್ಷಣ ನೆಲೆಗೊಳ್ಳಬಹುದು ಎಂಬ ಚಿಂತನೆ ಹೆಚ್ಚು ಚಲಾವಣೆಯಲ್ಲಿದೆ. ಕೆಲವು ಸ್ತ್ರೀವಾದಿಗಳು ಹೇಳುವಂತೆ ಹೆಣ್ಣುಮಗುವೊಂದು ಬೆಳೆಯುವಾಗ ತನಗಿಂತ ದೊಡ್ಡ (ಹೆಚ್ಚಾಗಿ ತಾಯಿ) ಹೆಂಗಸಿನ ಜೊತೆಯಲ್ಲಿ ಇರುವುದರಿಂದ ಅವರು ಹುಡುಗರಿಗಿಂತ ಹೆಚ್ಚಾಗಿ ಸಂಬಂಧಗಳ ಬಗ್ಗೆ ಗಟ್ಟಿಯಾದ ನಿಲುವುಗಳನ್ನು ರೂಪಿಸಿ ಕೊಳ್ಳುತ್ತಾರೆ.  ಹುಡುಗರು ತಮ್ಮ ತಾಯಿಯಿಂದ ಬೇರೆ ಎಂಬುದನ್ನು ತೋರಿಸಿ ಕೊಳ್ಳಲು ಯಾವಾಗಲೂ ಮುಂದಾಗುತ್ತಾರೆ. ಈ ವ್ಯತ್ಯಾಸವೇ ಹೆಣ್ಣುತನದ ಚಹರೆಗೆ ಕಾರಣವಾಗಿ ಗಂಡುತನದಿಂದ ಬೇರೆಯಾಗುವ ನೆಲೆಗಳನ್ನು ರೂಪಿಸುತ್ತದೆ.

ಜಂಡರ್ ಎಂಬುದು ಮೇಲಿನ ಚಿಂತನೆಯ ಪ್ರಕಾರ ಹುಟ್ಟಿನಿಂದ ಬಂದುದಲ್ಲ. ಅದು ಬೆಳೆಯುವಾಗ ಸಾಮಾಜಿಕವಾಗಿ ಮೈದಳೆಯುತ್ತದೆ. ಪಾರಂಪರಿಕವಾಗಿ ಮಕ್ಕಳನ್ನು ಸಾಕುವುದು, ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವುದು ಮಕ್ಕಳು ಜೈವಿಕವಾಗಿ ಹುಡುಗರೋ ಹುಡುಗಿಯರೋ ಎಂಬುದನ್ನು ನೇರವಾಗಿ ಅವಲಂಬಿಸಿರುವುದಿಲ್ಲ. ಇದು ಹೆಚ್ಚು ಸಾಮಾಜಿಕ ನಿಲುವುಗಳಿಂದ ಒತ್ತಾಸೆ ಪಡೆದಿರುತ್ತದೆ. ಇದರಿಂದ ಹುಡುಗರು ಮತ್ತು ಹುಡುಗಿಯರ ಮಾನಸಿಕ ಸ್ಥಿತಿಗತಿಗಳ ನಡುವೆ ಎದ್ದು ಕಾಣುವ ಸ್ಥಿರ ವ್ಯತ್ಯಾಸಗಳು ಉಂಟಾಗುತ್ತವೆ. (‘‘ಸಾಮಾಜಿಕವಾಗಿ ಮೈದಳೆದದ್ದು’’ಎಂದು ಹೇಳಿದ ಮಾತ್ರಕ್ಕೆ ಅದು ಕಟ್ಟುಕತೆಯಲ್ಲ. ಸುಮ್ಮನೆ ಏನೋ ಕಾರಣ ಹೇಳಬೇಕೆಂದು ಹೇಳಿದ್ದೂ ಅಲ್ಲ. ನನಗೆಷ್ಟು ವೇತನ ಬರಬೇಕು ಎಂಬುದು ಸಾಮಾಜಿಕವಾಗಿ ನಿರ್ಧಾರವಾಗುತ್ತದೆ. ನನ್ನ ದುಡಿಮೆಯ ಬೆಲೆ ಇಂತಿಷ್ಟೇ ಎಂದು ಹೇಳುವ ಪ್ರಕೃತಿದತ್ತ ನಿಯಮಗಳೇನೂ ಇಲ್ಲ. ಹೀಗೆ ನನ್ನ ವೇತನ ನಿಗದಿಯಾಗುವಾಗ ತಿಂಗಳ ಕೊನೆಗೆ ನನ್ನ ವೆಚ್ಚಗಳೆಲ್ಲವನ್ನೂ ಪೂರೈಸಲು ಸಾಧ್ಯವಾಗುವಷ್ಟು ಇರುವುದೋ ಎಂಬುದು ಲೆಕ್ಕಕ್ಕೆ ಬರುತ್ತದೆ. ಈ ಎಲ್ಲ ಲೆಕ್ಕಾಚಾರಗಳನ್ನು ನನ್ನಿಷ್ಟದಂತೆ ನಾನು ಸ್ವತಂತ್ರವಾಗಿ ಬದಲಾಯಿಸಲಾರೆ).

ಸಾರವಾದವನ್ನು ನಿರಾಕರಿಸುವ ಸ್ತ್ರೀವಾದಿಗಳು ಗಂಡು ಮತ್ತು ಹೆಣ್ಣುಗಳಲ್ಲಿ ಸಾರಾಸಗಟಾದ ಗುಣಸಮುಚ್ಛಯಗಳನ್ನು ಕಾಣುವುದನ್ನೇ ಒಪ್ಪುವುದಿಲ್ಲ. ಈ ಗುಣಗಳು ಹುಟ್ಟಿನಿಂದಾಗಲೀ ಬೆಳೆಯುವಾಗಲಾಗಲೀ ನೆಲೆಗೊಳ್ಳುತ್ತವೆ ಎನ್ನುವುದನ್ನೇ ಅವರು ತಳ್ಳಿಹಾಕುತ್ತಾರೆ. ಅಂದರೆ ಒಂದೇ ಬಗೆಯ ಹೆಣ್ಣುತನ, ಇಲ್ಲವೇ ಒಂದೇ ಬಗೆಯ ಗಂಡುತನಗಳು ಇರುವುದಿಲ್ಲ. ಯಾರೋ ಒಬ್ಬ ಹುಡುಗಿಯ ಕತೆ (ಅವಳ ಮತ್ತು ಅವಳ ತಾಯಿಯ ಸಂಬಂಧ) ಎಲ್ಲ ಹೆಂಗಸರ ಕತೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ವಾದಿಸುವ ಸ್ತ್ರೀವಾದಿಗಳು ಇನ್ನೂ ಮುಂದೆ ಹೋಗಿ ನಿಶ್ಚಿತವಾಗಿ ನೆಲೆಗೊಂಡ ಜಂಡರ್ ಎಂಬುದು ಇರುವುದೇ ಇಲ್ಲ ಎನ್ನುತ್ತಾರೆ. ಅವರ ಪ್ರಕಾರ ಅದು ಯಾವಾಗಲೂ ‘ಆಗು’ತ್ತಿರುತ್ತದೆ. ಚಹರೆಗಳನ್ನು ಮತ್ತೆ ಮತ್ತೆ ಕಟ್ಟಿಕೊಡುತ್ತಿರುತ್ತದೆ. ಹೆಣ್ಣಾಗಲೀ ಗಂಡಾಗಲೀ ಅವರಲ್ಲಿ ಎಂದೂ ಬದಲಾಗದ ಸಾರಭೂತ ಹೆಣ್ಣುತನ ಇಲ್ಲವೇ ಗಂಡುತನ ಎಂಬುದು ಇರುವುದೇ ಇಲ್ಲ. ಅದು ಆಯಾ ಸಂದರ್ಭಕ್ಕೆ ತಕ್ಕಂತೆ ಆಕಾರವನ್ನು ಪಡೆದುಕೊಳ್ಳುತ್ತದೆ.

ನಾವು ಈಗ ಜಂಡರ್ ಎಂಬುದನ್ನು ಜಾಗತಿಕವಾಗಿ ಎಲ್ಲೆಲ್ಲೂ ಒಂದೇ ಎಂದು ಹೇಳಲಾಗದು.  ಹಿಂದೆ ಹಾಗೆ ಹೇಳುವುದು ಪರಿಪಾಠವಾಗಿತ್ತು. ಹೆಚ್ಚಿನ ಸ್ತ್ರೀವಾದಿಗಳು ಹೀಗಾಗಿ ಇಂದು ಸಾರವಾದವನ್ನು ಒಪ್ಪುವುದಿಲ್ಲ. ಒಂದು ವೇಳೆ ಇದನ್ನೊಪ್ಪಿದರೆ, ಆಯ್ದ ಕೆಲವು ಹೆಂಗಸರ ಅನುಭವಗಳಿಂದ ತಲುಪಿದ ತೀರ್ಮಾನಗಳೇ ಜಗತ್ತಿನ ಎಲ್ಲ ಹೆಂಗಸರಿಗೂ ಹೊಂದುತ್ತದೆ ಎಂದು ಹೇಳಿದಂತಾಗುತ್ತದೆ. ಹೆಂಗಸರಲ್ಲಿರುವ ವ್ಯತ್ಯಾಸಗಳನ್ನು, ಅಷ್ಟೇಕೆ ವಿರೋಧಗಳನ್ನೂ ಒಪ್ಪಬೇಕು. ಆಮೇಲೆ ಅದೇಕೆ ಹಾಗೆ ಇದೆ ಎಂದು ಚಿಂತಿಸಬೇಕು. ಇವೆಲ್ಲವೂ ಒಂದುಗೂಡಿ ವಾದ ವಿವಾದಗಳಿಗೆ ಕಾರಣವಾಗಿದೆ. ಎಲ್ಲ ಹೆಂಗಸರಿಗೂ ಸಲ್ಲುವ ಸಮಾನ ಗುಣ ಸಮುಚ್ಚಯವೇ ಇಲ್ಲವೆಂದ ಮೇಲೆ ಅರ್ಥಪೂರ್ಣವಾದ, ವ್ಯವಸ್ಥಿತವಾದ ಸ್ತ್ರೀವಾದಿ ವಿಶ್ಲೇಷಣೆಗಳೇ ಸಾಧ್ಯವಾಗುವುದಿಲ್ಲ ಎಂಬ ಆತಂಕವೂ ಕೆಲವು ಸ್ತ್ರೀವಾದಿಗಳನ್ನು ಕಾಡುತ್ತದೆ. ಒಂದು ಉದಾಹರಣೆ ನೋಡೋಣ. ಬೇರೆ ಬೇರೆ ಸಮುದಾಯಗಳಲ್ಲಿ ಗಂಡು ಹೆಣ್ಣುಗಳ ನಡುವಣ ಶ್ರಮ ವಿಭಜನೆಯ ನೆಲೆಗಳು ಬೇರೆ ಬೇರೆಯೇ ಆಗಿವೆ. ಹೀಗಿರುವಾಗ ಎಲ್ಲ ಸಮುದಾಯಗಳೂ ಶ್ರಮ ವಿಭಜನೆಯಲ್ಲಿ ಗಂಡು ಹೆಣ್ಣುಗಳೆಂಬ ತಾರತಮ್ಯವನ್ನು ಮಾಡಿಯೇ ತೀರುತ್ತವೆ ಎಂಬ ತೀರ್ಮಾನಕ್ಕೆ ಬಂದರೆ ತಪ್ಪೇ, ಅಥವಾ ಆ ತೀರ್ಮಾನವಷ್ಟೇ ಸಾಕೇ? ತೀರಾ ಈಚಿನ ಸಾಮಾಜಿಕ ಚಿಂತನೆಗಳು ಗಂಡು ಹೆಣ್ಣುಗಳ ನಡುವಣ ವ್ಯತ್ಯಾಸಗಳಿಗೆ ಲೋಕ ಸಹಜವಾದ ಯಾವುದೇ ಆಧಾರವೂ ಇಲ್ಲವೆಂದೂ ‘ಹೆಣ್ಣು’ಎಂಬ ಸಾರಭೂತ ಪರಿಕಲ್ಪನೆಯನ್ನೇ ಬಿಟ್ಟು ಕೊಡಬೇಕೆಂದೂ ವಾದಿಸುವ ಹಂತಕ್ಕೆ ಹೋಗಿದೆ. ಇಂಥ ಇಕ್ಕಟ್ಟಿನಲ್ಲಿ ಸಿಲುಕಿರುವ ಸ್ತ್ರೀವಾದಿಗಳು ಹೊರದಾರಿಯನ್ನು ಕಂಡುಕೊಳ್ಳಬೇಕಾಗಿದೆ. ವೇತನ ತಾರತಮ್ಯದ ಮುಗಿಯದ ಕತೆ, ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಕೌಟುಂಬಿಕ ಹಿಂಸೆಗಳೆಂಬ ದಿನನಿತ್ಯದ ದಿಟಗಳ ಎದುರಿನಲ್ಲಿ, ಸೀವಿಜಾಕ್‌ಸನ್ (೧೯೯೧) ಹೇಳಿದಂತೆ ‘‘ಹೆಣ್ಣನ್ನು ವಿರಚನೆಗೊಳಿಸುವ ’ಕಾಲವಿನ್ನೂ ಬಂದಿಲ್ಲ, ಅದಿನ್ನೂ ದೂರದ ಮಾತು’’ ಎಂದು ಸ್ತ್ರೀವಾದಿಗಳು ತಿಳಿದಿದ್ದಾರೆ.

ಸ್ತ್ರೀವಾದಿ ಭಾಷಾಶಾಸ್ತ್ರದಲ್ಲಿ ಸಾರವಾದವನ್ನು ನಿರಾಕರಿಸಿದ ಚಿಂತನೆಗಳ ಪ್ರಭಾವ ಕಾಣತೊಡಗಿದೆ. ಹಿಂದೆ ರಾಬಿನ್ ಲಕಾಫ್ ‘ಹೆಣ್ಣಿನ ಭಾಷೆ’ ಎಂಬ ಪರಿಕಲ್ಪನೆಯನ್ನು ಮುಂದಿಟ್ಟರಷ್ಟೇ? ಈಗ ಈ ಚಿಂತನೆಗಳನ್ನೇ ಪ್ರಶ್ನಿಸಲಾಗುತ್ತಿದೆ. ಏಕೆಂದರೆ ‘ಹೆಣ್ಣಿನ ಭಾಷೆ’ಎಂದಾಗ ಯಾವ ಹೆಣ್ಣಿನ ಭಾಷೆ ಎಂಬ ಪ್ರಶ್ನೆಯೂ ಜೊತೆಗೇ ಹುಟ್ಟಿಕೊಳ್ಳುತ್ತದೆ.  ಹೀಗಿದ್ದರೂ ಗಂಡಸರು ಮತ್ತು ಹೆಂಗಸರ ಭಾಷಾ ಬಳಕೆಗಳ ಮತ್ತು ಭಾಷಿಕ ವರ್ತನೆಗಳ ನಡುವೆ ಇರುವ ಸಾಮಾನ್ಯೀಕರಿಸಿದ ವ್ಯತ್ಯಾಸಗಳನ್ನು ಇಡಿಯಾಗಿ ತಳ್ಳಿ ಹಾಕಲು ಆಗಿಲ್ಲ.  ಒಂದೇ ಸಮುದಾಯದೊಳಗೇ ಕೂಡಾ ‘ಹೆಂಗಸರು’ ಎಂಬ ಗುಂಪಿನಲ್ಲೇ ಇರುವ ಹಲವು ಬಗೆಗಳನ್ನೂ ಅದರಿಂದ ಹುಟ್ಟುವ ಭಾಷಿಕ ವರ್ತನೆಗಳ ವೈವಿಧ್ಯವನ್ನೂ ಈ ಸಾಮಾನ್ಯೀಕರಿಸಿದ ನೆಲೆಯು ಮರೆಮಾಚುತ್ತದೆ ಎಂಬ ಟೀಕೆ ತಲೆ ಎತ್ತಿದೆ. ಈ ಟೀಕೆಗೆ ಉತ್ತರವಾಗಿ ಒಂದು ವಾದವನ್ನು ಮಂಡಿಸಲಾಗಿದೆ : ಹೆಂಗಸರ ಭಾಷೆಯ ಚಹರೆಗಳನ್ನು ನೂರಾರು ಸಮುದಾಯಗಳ ನೆಲೆಯಲ್ಲಿ ಸಾಮಾನ್ಯೀಕರಿಸಬಹುದೇ ಎಂಬುದು ಪ್ರಶ್ನೆ. ಹೀಗೆ ಸಾಮಾನ್ಯೀಕರಿಸುವಾಗ ಸಿಕ್ಕಿರುವ ಮಾಹಿತಿಗಳನ್ನು ಅವಲಂಬಿಸಿರುತ್ತೇವೆ. ಈ ಮಾಹಿತಿಗಳನ್ನು ಅವಲಂಬಿಸಿ ಸಾಮಾನ್ಯೀಕರಿಸುವವರ ಉದ್ದೇಶ ಗುರಿಗಳು ಏನು ಎಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕು.  ಈ ನೆಲೆಯಿಂದ ಚಿಂತಿಸಹೊರಟಾಗ ‘ಹೆಣ್ಣಿನ ಭಾಷೆ’ ಎಂಬ ಪರಿಕಲ್ಪನೆಯನ್ನು ಪ್ರಶ್ನಿಸುವ ಕೆಲಸ ತಿಳಿದುಕೊಂಡಷ್ಟು ಸುಲಭವಲ್ಲ ಎಂಬುದು ಗೊತ್ತಾಗುತ್ತದೆ. ಭಾಷಾಶಾಸ್ತ್ರದಲ್ಲಿ ಇತರ ಜ್ಞಾನಶಿಸ್ತುಗಳಲ್ಲಿರುವಂತೆಯೇ ಒಂದು ಸಾಮಾಜಿಕ ಸಮುದಾಯದೊಳಗೆ ಇರುವ ಸಮಾನ ಅಂಶಗಳ ಜೊತೆಗೆ ಪರಸ್ಪರ ಒಳವಿಭಜನೆಯನ್ನು ಮಾಡುವ ಅಂಶಗಳು ಯಾವುವು ಎಂಬ ಕಡೆಗೆ ಆಸಕ್ತಿ ಹೊರಳಿದೆ. ಅಂದರೆ, ಈಗ ‘ಹೆಣ್ಣುತನ’ ಎಂಬ ಏಕವಚನದ ನೆಲೆಗಿಂತ ‘ಹೆಣ್ಣುತನಗಳು’ ಎಂಬ ಬಹುವಚನದ ನೆಲೆಗೆ ಸಾಗಿ ಬಂದಿದ್ದಾರೆ.

ಜಂಡರ್ ಎಂಬುದು ‘ಇರುವಂಥದಲ್ಲ’ ಜನರು ಅದನ್ನು ‘ಕಟ್ಟುತ್ತಾರೆ’. ಅದನ್ನು ‘ನಿರ್ವಹಿಸುತ್ತಾರೆ.’ ಇದು ಇಂದಿನ ಸ್ತ್ರೀವಾದಿ ಭಾಷಾಶಾಸ್ತ್ರಜ್ಞರ ಚಿಂತನೆ. ಸಾಮಾಜಿಕ ಭಾಷಾಶಾಸ್ತ್ರವು ಹಿಂದಿನಿಂದಲೂ ಹೆಂಗಸರು ಮತ್ತು ಗಂಡಸರು ಭಾಷೆಯನ್ನು ಎದ್ದು ಕಾಣುವಷ್ಟು ಬೇರೆ ಬೇರೆಯಾಗಿ ಬಳಸುತ್ತಾರೆಂದೂ, ಅದಕ್ಕೆ ಅವರು ಹೆಣ್ಣು ಗಂಡು ಗಳಾಗಿರುವುದೇ ಕಾರಣವೆಂದೂ ಹೇಳಿದೆ. ನಾನು ಹೆಣ್ಣು; ಆದ್ದರಿಂದ ನಾನು ಹೆಣ್ಣಿನಂತೆ ಮಾತಾಡುತ್ತೇನೆ ಈ ವಾದದ ಬೆನ್ನು ಹತ್ತಿದರೆ, ಹೆಣ್ಣು ಮತ್ತು ಗಂಡುಗಳು ತಮಗೆ ದತ್ತವಾದ ವ್ಯತ್ಯಾಸಗಳನ್ನು ಒಪ್ಪಿಕೊಂಡು, ಇತರರೂ ಒಪ್ಪಿಕೊಳ್ಳುವಂತೆ ಮಾಡಲು ಭಾಷಿಕ ವರ್ತನೆ ಗಳಲ್ಲಿ ತೊಡಗುತ್ತಾರೆ ಎಂದಾಯಿತು. ಆದರೆ, ಜಂಡರ್ ಎಂಬುದು ‘ಆಗುವಿಕೆ’ ಎಂದು ಒಪ್ಪಿದರೆ, ಇಲ್ಲವೇ ‘ನಿರ್ವಹಿಸುವಿಕೆ’ ಎಂದು ಒಪ್ಪಿದರೆ ಆಗ ಹೆಣ್ಣಾಗಲಿ ಗಂಡಾಗಲೀ ಸಿದ್ಧ ಮಾದರಿಗಳನ್ನು ಅನುಸರಿಸುತ್ತಿರುವುದಿಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಬಗೆಗಳಲ್ಲಿ ತನ್ನ ಬರಹಗಳನ್ನು ಕಟ್ಟಿಕೊಳ್ಳುತ್ತಿರುತ್ತದೆ. ಹೀಗೆ ಮಾಡುವಾಗ ತಾವೇನು ಮಾಡುತ್ತಿದ್ದೇವೆ ಎಂಬುದನ್ನು ಅವರು ಅರಿತಿರುತ್ತಾರೆ ಎಂದು ಯಾರೂ ಹೇಳುತ್ತಿಲ್ಲ. (ಏನನ್ನಾದರೂ ಸಾಮಾಜಿಕವಾಗಿ ‘ರಚಿಸಲಾಗಿದೆ’ ಎಂದ ಮಾತ್ರಕ್ಕೆ ಅದು ಭ್ರಮೆ ಎಂದೇನೂ ಅಲ್ಲ) ಹೀಗಿದ್ದರೂ ಬೇರೆ ಬೇರೆ ಬಗೆಯಲ್ಲಿ ತಮ್ಮ ಭಾಷಿಕ ವರ್ತನೆಗಳನ್ನು ಬದಲಾಯಿಸಿ ಕೊಳ್ಳುವುದನ್ನು ಅರಿತೇ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ಕೆಲವು ಅಧ್ಯನಕಾರರು ಆಸಕ್ತಿ ತೋರಿದ್ದಾರೆ. ಉದಾಹರಣೆಗೆ, ಗಂಡಸು ಬೇಕೆಂತಲೇ ಹೆಂಗಸಿನಂತೆ ಮಾತಾಡುವುದು, ಟೆಲಿಫೋನ್ ಸೆಕ್ಸ್ ಕಾರ್ಯಕರ್ತರು ಅಗತ್ಯಕ್ಕೆ ತಕ್ಕಂತೆ ಹೆಣ್ಣು ಗಂಡುಗಳಾಗಿ ಧ್ವನಿ ಬದಲಿಸಿ ಕೊಳ್ಳುವುದು – ಇವೆಲ್ಲವನ್ನೂ ಹಾಲ್ ಕೆ(೧೯೯೫) ಚರ್ಚಿಸಿದ್ದಾರೆ.

ಸ್ತ್ರೀವಾದಿ ಭಾಷಾಮೀಮಾಂಸೆ ಮತ್ತು ಅಸ್ಮಿತೆಯ ರಾಜಕಾರಣ

ಸ್ತ್ರೀವಾದಿಗಳಲ್ಲಿ ಸಾರವಾದವನ್ನು ಒಪ್ಪದಿರುವ ಪ್ರವೃತ್ತಿಯ ಜೊತೆಗೆ , ಇತರ ಸಾಮಾಜಿಕ ಚಳುವಳಿಗಳಲ್ಲಿರುವಂತೆಯೇ ‘ಅಸ್ಮಿತೆಯ ರಾಜಕಾರಣ’ ದ ಪರವಾದ ಚಿಂತನೆಗಳೂ ಬೆಳೆದಿವೆ.  ಇವೆರಡರ ನಡುವೆ ಇರುವ ಸಂಬಂಧ ಜಟಿಲವಾದುದು. ಸ್ತ್ರೀವಾದಿಗಳ ಅಸ್ಮಿತೆಯ ರಾಜಕಾರಣದ ನೆಲೆಗಳನ್ನು ಹೀಗೆ ಸಂಗ್ರಹಿಸಬಹುದು : ಲೆಸ್ಬಿಯಾನ್, ಕೊರತೆಯುಳ್ಳ ಹೆಂಗಸರು, ಮುದುಕಿಯರು, ಕಪ್ಪು ಹೆಂಗಸರು, ಯಹೂದಿ ಹೆಂಗಸರು, ದುಡಿಯುವ ಹೆಂಗಸರು-ಮುಂತಾದ ಬೇರೆ ಬೇರೆ ಸಾಮಾಜಿಕ ಗುಂಪುಗಳಿಗೆ ಸೇರಿದವರು ತಮ್ಮ ಚಹರೆ ಗಳನ್ನು ಕಂಡುಕೊಂಡು ಅದಕ್ಕೊಂದು ಸ್ಥಾನಮಾನವನ್ನು ನೀಡುವುದು. ಇದು ಸಾರವಾದವನ್ನು ನಿರಾಕರಿಸುವ ಸ್ತ್ರೀವಾದಿಗಳ ನಿಲುವನ್ನೇ ಇನ್ನೊಂದು ಬಗೆಯಲ್ಲಿ ಎತ್ತಿ ಹಿಡಿಯುತ್ತದೆ. ಅಂದರೆ, ನಾವು ಹಿಂದೆಂದಿಗಿಂತಲೂ ಈಗ ಹೆಂಗಸರಲ್ಲಿರುವ ವ್ಯತ್ಯಾಸಗಳು ಮತ್ತು ಒಳ ಸಂಘರ್ಷಗಳನ್ನು ಹೆಚ್ಚು ಗಮನವಿಟ್ಟು ನೋಡಬೇಕೆಂದಾಯಿತು. ಎಲ್ಲ ಹೆಂಗಸರೂ ಒಂದೇ ಅಲ್ಲ. ಬರೀ ‘ಹೆಂಗಸು’ ಎಂದಾಗ ನಮ್ಮ ಗಮನ ಮಧ್ಯಮ ವರ್ಗದ, ಬಿಳಿಯ, ಹೆಟರೋ ಸೆಕ್ಷ್ಯುಯಲ್ (ಸಲಿಂಗ ಕಾಮಿಗಳಲ್ಲ) ಹೆಂಗಸರನ್ನು ಕುರಿತು ಮಾತ್ರ ಚಿಂತಿಸುತ್ತೇವೆ. ಇದು ಗಂಡಸರು ಮಾತಾಡುವಾಗ ‘ಮನುಷ್ಯ’  ಎಂಬ ಪದವನ್ನು ಬಳಸಿ ಆ ಪದ ಎಲ್ಲ ಮಾನವ ಜೀವಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ಹೇಳಿದರೂ, ದಿಟವಾಗಿ ತಮಗೆ ಮಾತ್ರ ಹೊಂದಾಣಿಕೆಯಾಗುವಂತೆ ಬಳಸಿದಂತೆಯೇ ಸರಿ.  ಇದೂ ಒಂದು ಬಗೆಯಲ್ಲಿ ಹಕ್ಕು ನಿರಾಕರಣೆ ಮತ್ತು ಶೋಷಣೆಯೇ(ಇದೆಲ್ಲವೂ ನಮ್ಮ ವಿವರಣೆಯಲ್ಲಿರುವ ಕೊರತೆಯನ್ನು ತೋರಿಸುತ್ತದೆ. ಜಂಡರ್ ಸಂಬಂಧಗಳನ್ನು ವಿವರಿಸುವಾಗ ಆ ಸಂಬಂಧ ಯಾವ ಯಾವ ಬಗೆಗಳನ್ನು ಒಳಗೊಳ್ಳುತ್ತದೆ ಎಂಬುದನ್ನು ಸ್ತ್ರೀವಾದಿಗಳು ಗಮನಿಸಬೇಕು. ಹಾಗೆ ಗಮನಿಸದ ವಿವರಣೆಗಳನ್ನು ಒಪ್ಪಕೂಡದು.). ಇದೇ ಹೊತ್ತಿನಲ್ಲಿ ಅಸ್ಮಿತೆಯ ರಾಜಕಾರಣವು ಸಾರವಾದವನ್ನೊಪ್ಪದ ಸ್ತ್ರೀವಾದಿ ಚಿಂತನೆಯೊಡನೆ ವಿರೋಧವನ್ನೂ ಹೊಂದಿದೆ. ಸಾರವಾದವನ್ನೊಪ್ಪದವರು ಅಧಿಕೃತವಾದ ಮತ್ತು ಬದಲಾಗದ ಚಹರೆಗಳನ್ನು ಪ್ರಶ್ನಿಸುತ್ತಾರೆ. ಅಸ್ಮಿತೆಯ ರಾಜಕಾರಣವು ಅದರ ಹೆಸರೇ ಹೇಳುವಂತೆ, ಈ ಬದಲಾಗದ ಅಧಿಕೃತ ಚಹರೆಯನ್ನೇ ಆಧಾರವಾಗಿಟ್ಟುಕೊಂಡಿದೆ.

ಸ್ತ್ರೀವಾದಿ ಭಾಷಾಮೀಮಾಂಸೆಯೊಳಗೆ ಅಸ್ಮಿತೆಯ ರಾಜಕಾರಣವು ಎರಡು ಬಗೆಯಲ್ಲಿ ಪ್ರವೇಶ ಪಡೆದಿದೆ. ಮೊದಲನೆಯದು, ‘ಸರ್ವಸಮ್ಮತ’ ಎಂಬ ನೆಲೆಗೆ ಸೇರಿದೆ. ಅಂದರೆ, ಅಧಿಕಾರದಲ್ಲಿರುವ ರಾಜಕಾರಣವು ಯಾವುದನ್ನು ಒಪ್ಪುತ್ತದೋ ಅದೇ ಎಲ್ಲರಿಗೂ ಸಮ್ಮತವಾದದ್ದು ಎಂದು ವಾದಿಸುವುದು. ಈ ನಿಟ್ಟಿನಲ್ಲಿ ಈ ‘ಸರ್ವಸಮ್ಮತ’ ನೆಲೆಯ ನಡವಳಿಗಳೆಲ್ಲವೂ ಅಸ್ಮಿತೆಯ ರಾಜಕಾರಣವು ಭಾಷೆಯ ನೆಲೆಯಲ್ಲಿ ಮೈದಳೆಯುವ ಬಗೆಯದೇ ಆಗಿದೆ. ಜಂಡರ್, ಜನಾಂಗ, ಕುಲಚಹರೆ, ಲೈಂಗಿಕತೆ, ಸಾಮರ್ಥ್ಯ, ಕೊರತೆ – ಮುಂತಾದ ಸಂಗತಿಗಳಲ್ಲಿ ಸಾಮಾಜಿಕವಾಗಿ ಮುಖ್ಯವಾಗಿರುವ ವ್ಯತ್ಯಾಸಗಳನ್ನು ಯಾವ ಪದಗಳಿಂದ ಗುರುತಿಸಬೇಕು ಮತ್ತು ಅವುಗಳಿಗೆ ಸಂಬಂಧಿಸಿದ ಕಟ್ಟುಪಾಡುಗಳನ್ನು ಯಾರು ನಿರ್ಣಯಿಸಬೇಕು ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ. ಒಟ್ಟಾರೆಯಾಗಿ, ಈವರೆಗೆ ನಿಡುಗಾಲದಿಂದ ‘ಬೇರೆಯವರು’ ಎಂದು (ನಮ್ಮಂತೆ ಇಲ್ಲದಿರುವವರು) ಗುರುತಿಸಲಾದ ಗುಂಪುಗಳನ್ನು ಕುರಿತಂತೆ ನಡೆಯುತ್ತಿರುವ ಚರ್ಚೆಯೊಳಗೆ ಸ್ತ್ರೀವಾದಿ ಭಾಷಾರಾಜಕಾರಣವೂ ಸೇರಿ ಹೋಗಿದೆ.

ಇದು ನಿಜವೆಂದು ತಿಳಿಯಲು ಕೆಲವು ಸೂಚನೆಗಳಿವೆ. ಮೊದಮೊದಲು ‘ಲೈಂಗಿಕತಾ ವಾದಿಯಲ್ಲದ ಭಾಷೆ’ ಯ ಲಕ್ಷಣಗಳನ್ನು ವಿವರಿಸುತ್ತಿದ್ದ ಸಂಸ್ಥೆಗಳು ಈಗ ‘ಒಳಗೊಳ್ಳುವ’ ಇಲ್ಲವೇ ‘ತಾರತಮ್ಯ ತೋರದ’ ಭಾಷಾ ಬಳಕೆಗಳನ್ನು ವಿವರಿಸುತ್ತಿವೆ. ಹೀಗೆ ಮಾಡುವಾಗ ಕುಲಚಹರೆ ಮತ್ತು ಕೊರತೆಗಳ ನೆಲೆಗಳೂ ಸೇರಿಕೊಳ್ಳುತ್ತವೆ. ಇದರಿಂದ ಸ್ತ್ರೀವಾದಿ ನೆಲೆಗಳು ತುಂಬಾ ಇಕ್ಕಟ್ಟಿನ ದಾರಿಯಲ್ಲಿ ಸಿಲುಕಿದಂತಾಗಿದೆ. ನಿಜ. ಸ್ತ್ರೀವಾದಿ ಮೀಮಾಂಸೆಯು, ಭಾಷಾ ರಾಜಕಾರಣ ಮತ್ತು ಹೆಸರಿಸುವ ಪ್ರವೃತ್ತಿಗಳು ಕೇವಲ ಸ್ತ್ರೀವಾದಕ್ಕೆ ಮಾತ್ರ ಮೀಸಲಾದ ಸಂಗತಿಗಳಾಗಿ ಉಳಿದಿಲ್ಲವೆಂಬುದನ್ನು ತೋರಿಸಿಕೊಡುವಲ್ಲಿ ಗೆದ್ದಿದೆ. ಹೀಗಿದ್ದರೂ, ಪ್ರಶ್ನೆಗಳು ಉಳಿದೇ ಇವೆ. ಎಲ್ಲವನ್ನೂ ಒಳಗೊಳ್ಳುವ ಬಗೆಯೊಂದನ್ನು ಕಿರಿದು ಮಾಡಿಕೊಂಡಿ ದ್ದೇವೆಯೇ?  ಹಿಂದೆ ‘ಹೆಸರಿಸುವ’ ಪ್ರವೃತ್ತಿಯಲ್ಲಿರುವ ಕೊರತೆಗಳನ್ನು ಸ್ತ್ರೀವಾದಿಗಳು ಟೀಕಿಸಿದ್ದರು.  ನಾವು ಮರಳಿ ಬಿಟ್ಟುಕೊಟ್ಟ ಹಾದಿಗೇ ಬಂದಿದ್ದೇವೆಯೇ? ‘ಸರ್ವಸಮ್ಮತಿ’ಯ ಚರ್ಚೆಯು ಕೇವಲ ಮೇಲು ಪದರದ್ದು. ಸ್ತ್ರೀವಾದಿ ಸುಧಾರಕರು ಮತ್ತು ಪ್ರವರ್ತಕರು ಪಡೆದ ಅನುಭವಗಳಿಂದ ನಾವಿನ್ನೂ ಕಲಿಯಬೇಕಾದ್ದು ಬಹಳಷ್ಟಿದೆ.

ಸ್ತ್ರೀವಾದಿ ಭಾಷಾಮೀಮಾಂಸೆಯನ್ನು, ಅಸ್ಮಿತೆಯ ರಾಜಕಾರಣವು ಪ್ರಭಾವಿಸಿರುವ ಎರಡನೆಯ ಬಗೆಯನ್ನು ನೋಡೋಣ. ಇದು ಸಾಮಾಜಿಕ ಭಾಷಾಶಾಸ್ತ್ರವು ಸ್ತ್ರೀ ಪುರುಷರ ನುಡಿ ನಡವಳಿಕೆಗಳನ್ನು ಅಧ್ಯಯನ ಮಾಡುತ್ತಿರುವ ನೆಲೆಗೆ ಉಪಯುಕ್ತವಾಗಿದೆ. ನಾನು ಮೊದಲೇ ಹೇಳಿದ ಹಾಗೆ ಸಾರವಾದವನ್ನು ಒಪ್ಪದವರು ಏಕರೂಪಿಯಾದ ಪುರುಷ ಭಾಷಾವರ್ತನೆ, ಇಲ್ಲವೇ ಏಕರೂಪಿಯಾದ ಸ್ತ್ರೀ ಭಾಷಾವರ್ತನೆಗಳನ್ನು ಸಂದೇಹದಿಂದ ನೋಡುತ್ತಾರೆ.  ಅಲ್ಲದೆ, ಹೆಣ್ಣಿನ ಭಾಷೆಯ ಎಳೆಗಳನ್ನು ಜಾಗತಿಕ ನೆಲೆಗಟ್ಟಿನಲ್ಲಿ ವಿವರಿಸುವುದನ್ನು ಒಪ್ಪುತ್ತಿಲ್ಲ. ಈ ಸಾರವಾದವನ್ನೊಪ್ಪದವರ ಪ್ರಭಾವದಿಂದ ಕೆಲವು ಅಧ್ಯಯನಕಾರರು ಜಂಡರ್‌ನ ವ್ಯಾಖ್ಯೆಯನ್ನು ಬದಲಿಸಿಕೊಂಡು, ಅದು ನಿರಂತರವಾಗಿ ಬದಲಾಗುವುದು ಎಂಬ ನೆಲೆಗೆ ತಲುಪಿದ್ದಾರೆ. ಇದರೊಡನೆ ಅಸ್ಮಿತೆಯ ರಾಜಕಾರಣದಿಂದ ಪ್ರಭಾವಕ್ಕೊಳಗಾದವರು ಜಂಡರ್ ಎಂಬುದು ನಿರಂತರವಾಗಿ ಬದಲಾಗುವುದು ಎಂದು ತಿಳಿಯುವುದಕ್ಕಿಂತ ಅದು ಛಿದ್ರಗೊಂಡಿರುವುದು ಎಂದು ತಿಳಿಯುವುದು ಹೆಚ್ಚು ಸರಿ ಎನ್ನುತ್ತಿದ್ದಾರೆ. ಅಂದರೆ, ಹೆಂಗಸರ ಭಾಷೆ ಎಂಬುದು ಒಂದು ಬಗೆ ಇಲ್ಲ. ಅದರಲ್ಲಿ ಹಲವು ಬಗೆಗಳಿವೆ. ಹೆಂಗಸರಲ್ಲೇ ಇರುವ ಸಾಮಾಜಿಕ ಒಳಗುಂಪುಗಳ ಚಹರೆಗಳಿಗೆ ತಕ್ಕಂತೆ ಈ ಬೇರೆ ಬೇರೆ ಬಗೆಗಳು ಮೈದಳೆದಿವೆ. ಮೊದಮೊದಲ ಸ್ತ್ರೀವಾದಿ ಭಾಷಾಮೀಮಾಂಸಕರು ಭಾಷೆಯ ನಿಟ್ಟಿನಲ್ಲಿ ಹೆಂಗಸರು ಗಂಡಸರಿಗಿಂತ ಹೇಗೆ ಬೇರೆ ಎಂಬ ಪ್ರಶ್ನೆಯನ್ನು ಮುಂದಿರಿಸಿಕೊಂಡಿದ್ದರು.  ಇಂದಿನ ಸ್ತ್ರೀವಾದಿಗಳು ಭಾಷೆಯ ನಿಟ್ಟಿನಿಂದ ಬಿಳಿಯ ಹೆಂಗಸರು ಕಪ್ಪು ಹೆಂಗಸರಿಗಿಂತ ಹೇಗೆ ಬೇರೆ, ಇಲ್ಲವೇ, ಭಾಷೆಯ ನಿಟ್ಟಿನಲ್ಲಿ ಲೆಸ್ಬಿಯಾನ್‌ಗಳು ಬೇರೆ ಹೆಂಗಸರಿಗಿಂತ ಹೇಗೆ ಭಿನ್ನ ಎಂಬ ಪ್ರಶ್ನೆಗಳನ್ನು ಮುಂದಿರಿಸಿಕೊಂಡಿದ್ದಾರೆ.

ಅಸ್ಮಿತೆ ಮತ್ತು ಭಿನ್ನತೆಗಳು, ವೈವಿಧ್ಯತೆ ಮತ್ತು ಸಂಘರ್ಷಗಳು – ಇವು ಹೆಂಗಸರಲ್ಲಿ ಮೈದಳೆಯುತ್ತಿರುವ ನೆಲೆಗಳು ಇಂದಿನ ಸ್ತ್ರೀವಾದಿ ಚಿಂತಕರು ಭಾಷೆಯನ್ನು ಆಧರಿಸಿ ನಡೆಸುತ್ತಿರುವ ಚಿಂತನೆಗಳಲ್ಲಿ ಮುಂಚೂಣಿಗೆ ಬಂದು ನಿಂತಿವೆ. ನಾನಾದರೋ ‘ಅಸ್ಮಿತೆ’ ಎಂಬುದನ್ನು ಗುರುತಿಸಿದ ಮಾತ್ರಕ್ಕೆ ಅದು ತನ್ನಿಂದ ತಾನೇ ರಾಜಕಾರಣದ ನೆಲೆಗೆ ದಾಟಿ ಬಿಡುತ್ತದೆ ಎಂದು ನಂಬುವವಳಲ್ಲ. ‘ಹೆಂಗಸರು’, ‘ಲೆಸ್ಬಿಯನ್‌ರು’ ಕಪ್ಪು ಹೆಂಗಸರು’, ‘ಮಧ್ಯಮವರ್ಗದ ಬಿಳಿಯ ಹೆಂಗಸರು’ – ಇವೆಲ್ಲ ಗುರುತಿನ ಹಣೆಪಟ್ಟಿಗಳು.  ಕೆಲವು ರಾಜಕೀಯ ನಿಲುವುಗಳು ಇವುಗಳಲ್ಲಿ ಒಳಸೇರಿಕೊಂಡಿರುತ್ತವೆ. ಸ್ತ್ರೀವಾದಿ ಭಾಷಾಮೀಮಾಂಸೆ ಎಂದು ಹೇಳುವಾಗ ನಮಗೆ ಈ ರಾಜಕೀಯ ನಿಲುವುಗಳು ಮತ್ತು ವಾದಗಳು ಮುಖ್ಯ ವಾಗಬೇಕು.

ಈ ಹಂತದಲ್ಲಿ ‘ಅಸ್ಮಿತೆ’ ಮತ್ತು ‘ರಾಜಕೀಯ ನಿಲುವುಗಳ’ ನಡುವೆ ಕಾರ್ಯಕಾರಣ ಸಂಬಂಧಗಳಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಬಹುದು. ಇದಕ್ಕೆ ನಾನು ‘ಹೌದು’ ಮತ್ತು ‘ಇಲ್ಲ’ ಎಂಬ ಎರಡು ಉತ್ತರಗಳನ್ನೂ ನೀಡುತ್ತೇನೆ. ನಿಮ್ಮ ಚರಿತ್ರೆ ಮತ್ತು ನಿಮ್ಮ ಸಾಮಾಜಿಕ ನೆಲೆಗಳು ನೀವು ಒಪ್ಪುವ ರಾಜಕೀಯ ನಿಲುವುಗಳನ್ನು ಪ್ರಭಾವಿಸುತ್ತವೆ ಎಂದು ನಾನು ನಂಬುವುದಿಲ್ಲ. ವ್ಯಕ್ತಿಯ ಚಹರೆ, ಇಲ್ಲವೇ ಅನುಭವಗಳಿಗೂ ಆಕೆಯ ರಾಜಕೀಯ ನಿಲುವುಗಳಿಗೂ ಸಂಬಂಧಗಳನ್ನು ಹುಡುಕುವಾಗ ಒರಟೊರಟಾದ ನೆಲೆಗಳನ್ನು ಮಂಡಿಸುವುದನ್ನು ಸ್ತ್ರೀವಾದಿಗಳು ಬಿಟ್ಟುಕೊಡಬೇಕು. ಜನಾಂಗ, ಕುಲ, ವರ್ಗ ಮತ್ತು ಲೈಂಗಿಕತೆ ಎಂಬ ಪದಗಳನ್ನು ನಾವು ಮಾನವ ಸಮುದಾಯದ ಚೌಕಟ್ಟನಲ್ಲಿ ತಿಳಿದಿರುವುದಕ್ಕೂ ಮಿಗಿಲಾಗಿ ನಮ್ಮ ರಾಜಕೀಯ ವಿಶ್ಲೇಷಣೆ ಮತ್ತು ಬದ್ಧತೆಗಳು ಬೆಳೆಯಬೇಕಿದೆ.

ಸ್ತ್ರೀವಾದಿಗಳು ಅಸ್ಮಿತೆಯ ರಾಜಕಾರಣವನ್ನು ಕುರಿತು ಚರ್ಚಿಸುವಾಗ ಕೆಲವೊಮ್ಮೆ ಸ್ತ್ರೀವಾದಿಗಳಾಗಿರುವುದಕ್ಕಿಂತ ಅಸ್ಮಿತೆಯ ರಾಜಕಾರಣಕ್ಕೆ ಕಟ್ಟುಬೀಳುವವರಂತೆ ಕಾಣುತ್ತಾರೆ.  ಲಿಜ್‌ಕೆಲಿ, ಶೀಲಾ ಬರ್ಟನ್ ಮತ್ತು ಲಿಂಡಾ ರೀಗನ್ ಅವರು ಹೇಳುವ ಮಾತಿದು :  ‘‘ಶೋಷಣೆಗೆ ಒಳಗಾದ ವ್ಯಕ್ತಿಗಳಲ್ಲಿ ಎಲ್ಲವನ್ನೂ ವಿಶ್ಲೇಷಣೆ ಮಾಡುವ ಮತ್ತು ಅದರ ಬಗ್ಗೆ ಅರಿವು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಯಾರು ಅಂಥ ಅನುಭವಗಳಿಗೆ ಒಳಗಾಗಿರುವುದಿಲ್ಲವೋ ಅವರಿಗೆ ಇದು ಸಾಧ್ಯವಿಲ್ಲ’’ (೧೯೯೨). ಕೆಲಿ ಮುಂತಾದವರು ಈ ನಿಲುವನ್ನು ಸುಮ್ಮನೆ ಒಪ್ಪುವುದಿಲ್ಲ. ಅನುಭವಿಸುವುದೇ ಅರಿವಿನ ಜಾಗೃತಿಗೆ ಕಾರಣವಾಗುವುದಾದರೆ, ಎಲ್ಲ ಹೆಂಗಸರೂ ಸ್ತ್ರೀವಾದಿಗಳೇ ಆಗಬೇಕಿತ್ತು. (ಹಾಗೇನೂ ಆಗಿಲ್ಲವಲ್ಲ!) ಆದ್ದರಿಂದ, ಲೆಸ್ಬಿಯನ್ ದೃಷ್ಟಿಕೋನ, ಇಲ್ಲವೇ ಕಪ್ಪು ದೃಷ್ಟಿಕೋನ ಮುಂತಾದವುಗಳನ್ನು ಪ್ರತಿನಿಧಿಸುವ ಯಾರೋ ಒಬ್ಬರನ್ನು ಪತ್ತೆ ಮಾಡುವುದೇ ಹೆಂಗಸರಲ್ಲಿರುವ ಒಳಬಗೆಗಳನ್ನು ಎದುರಿಸುವ ನೆಲೆ ಎನ್ನುವ ನಿಲುವೇ ಪ್ರಶ್ನಾರ್ಹವಾಗುತ್ತದೆ.  ಹೇಗೆ ಇಡೀ ಹೆಂಗಸರನ್ನು ವಿವರಿಸುವ ‘ಒಂದು’ ದೃಷ್ಟಿಕೋನವಿರುವುದಿಲ್ಲವೋ ಹಾಗೆಯೇ, ಲೆಸ್ಬಿಯನ್‌ರನ್ನು ಇಲ್ಲವೇ ಕಪ್ಪು ಹೆಂಗಸರನ್ನು ವಿವರಿಸುವ ‘ಒಂದು ’ ದೃಷ್ಟಿಕೋನ ಇರುವುದು ಸಾಧ್ಯವಿಲ್ಲ. ಅಂದರೆ, ಸ್ತ್ರೀವಾದದಿಂದ ಜನಾಂಗ ಮತ್ತು ಲೈಂಗಿಕತೆಗಳ ಪ್ರಶ್ನೆಗಳನ್ನು ಹೊರಗಿಡಬೇಕಂದಲ್ಲ. ಆದರೆ, ಯಾವುದನ್ನೂ ಸರಳಗೊಳಿಸಬಾರದು. ಈ ಭಿನ್ನತೆಗಳನ್ನು ಯಾರೋ ಒಬ್ಬರು ಮಾತ್ರ ಮಂಡಿಸಬಲ್ಲರು ಎನ್ನುವ ವಾದವನ್ನು ಹೂಡಬಾರದು. ಸ್ತ್ರೀವಾದಿಗಳು ಯಾರೇ ಆಗಿರಲಿ, ಅವರೆಲ್ಲರೂ ಈ ಪ್ರಶ್ನೆಗಳನ್ನು ಕುರಿತಂತೆ ಸೂಕ್ತ ಮೀಮಾಂಸಾರಾಜಕಾರಣವನ್ನು ಕಟ್ಟುವುದು ಅಸಾಧ್ಯ ಎಂದಾದರೆ, ಆಗ ಸ್ತ್ರೀವಾದಿ ಮೀಮಾಂಸೆಗಾಗಲೀ, ಅಥವಾ ಸ್ತ್ರೀವಾದಿ ಚಳುವಳಿಗಳಿಗಾಗಲೀ ನಾಳೆಗಳು ಇರುವುದೇ ಇಲ್ಲ.

ಕೊನೆಗೆ, ಸ್ತ್ರೀವಾದಿ ಭಾಷಾಮೀಮಾಂಸೆಯನ್ನು ಸಮರ್ಥಿಸುವ ಮಾತುಗಳನ್ನು ಹೇಳಲು ಸಾಧ್ಯವಿದೆ ಎನಿಸುತ್ತದೆ. ಅಂದರೆ, ಈ ಮೀಮಾಂಸೆಯಲ್ಲಿ ತೊಡಗಿರುವ ಸ್ತ್ರೀವಾದಿಗಳ ವಿಚಾರಗಳಲ್ಲಿ ಸಹಮತವಿದೆ ಎಂದೇನೂ ಅಲ್ಲ. ಅವರಲ್ಲಿರುವ ಭಿನ್ನಮತಗಳನ್ನು ನಾನು ಈವರೆಗೆ ತಿಳಿಸಲು ಶಕ್ತಳಾಗಿದ್ದೇನೆಂದುಕೊಂಡಿರುವೆ. ಹೀಗಿದ್ದರೂ, ಅವರೆಲ್ಲರ ನಡುವೆ ಈಗಲೂ ಒಂದು ಉಪಯುಕ್ತ ಸಂವಾದ ಸಾಧ್ಯವಿದೆ. ಭಿನ್ನ ಮತಗಳು ಒಂದು ಕಡೆ ಬೆಳೆಯುತ್ತಾ ಹೋಗುತ್ತಿದ್ದರೂ (ಉದಾಹರಣೆಗೆ, ಯಜಮಾನಿಕೆ ಮತ್ತು ವ್ಯತ್ಯಾಸ ಕುರಿತ ಚರ್ಚೆ, ಇಲ್ಲವೇ ಅಸ್ಮಿತೆ ಮತ್ತು ಭಿನ್ನತೆಗಳನ್ನು ಕುರಿತ ಚರ್ಚೆ) ಇವರೆಲ್ಲರೂ ಒಂದೇ ಬಗೆಯ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಎಲ್ಲರ ಕಾಳಜಿಯೂ ಒಂದೇ ಆಗಿದೆ.

—-
ಆಕರ : The Feminist Critique of Language – ಡೆಬೊರಾ ಕ್ಯಾಮರಾನ್