ಜಂಡರ್ ವ್ಯತ್ಯಾಸಗಳಿಂದ ಭಾಷಿಕವಾಗಿ ಆಗುವ ಪರಿಣಾಮಗಳನ್ನು ಗಮನಿಸುವ ಜೊತೆಗೆ, ಅದರಿಂದ ಆಗುವ ಸಾಮಾಜಿಕ ಪರಿಣಾಮಗಳನ್ನು ಗಮನಿಸಬೇಕು. ಜನರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುವಾಗ ಏನಾಗುತ್ತಿರುತ್ತದೆ ಎಂಬುದನ್ನು ವಿವರಿಸುವ ಇಂದಿನ ಚಿಂತನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಗಂಡಸರು ಮತ್ತು ಹೆಂಗಸರು ಒಬ್ಬರೊಡನೊಬ್ಬರು ಮಾತನಾಡುವಾಗ ಏಕೆ ಸರಿಯಾದ ಸಂವಹನ ಆಗುವುದಿಲ್ಲ; ತಪ್ಪು ತಿಳಿವಳಿಕೆಗಳು ಉಂಟಾಗುವುದೇಕೆ ಎಂಬೆಲ್ಲ ವಿಚಾರಗಳನ್ನು ನಾವೀಗ ಗಮನಿಸಬೇಕು.  ಇದಲ್ಲದೆ, ಓದುವ ಮಕ್ಕಳಲ್ಲಿ ಹುಡುಗರು ಮತ್ತು ಹುಡುಗಿಯರ ಭಾಷಿಕ ವರ್ತನೆಗಳ ಹಿನ್ನೆಲೆಯಲ್ಲಿ ಹುಡುಗಿಯರು ಎದುರಿಸುವ ಇಕ್ಕಟ್ಟುಗಳನ್ನು ಚರ್ಚಿಸಬೇಕು. ವಯಸ್ಕರ ಮಾತುಕತೆಗಳಲ್ಲಿ ಜಂಡರ್ ವ್ಯತ್ಯಾಸಗಳಿಂದಾಗಿ  ಆಗುವ ತಪ್ಪು ತಿಳಿವಳಿಕೆಗಳನ್ನು ಹೆಚ್ಚಾಗಿ ‘ಅದು ಹಾಗೆಯೇ ಇರುವುದು’ ಎಂದು ತಿಳಿದು ಅಧ್ಯಯನ ಮಾಡಲಾಗುತ್ತಿದೆ. ಇಂಥ ಅಧ್ಯಯನಗಳು ಹೆಣ್ಣು ಗಂಡುಗಳ ನಡುವೆ ಸಂವಾದ ಯಾವಾಗ ಮುರಿದು ಬೀಳುತ್ತದೆ ಎಂಬುದನ್ನು ಗಮನಿಸುತ್ತಿವೆ. ಆದರೆ, ತರಗತಿಯಲ್ಲಿ ಇರುವ ಭಾಷಿಕ ವರ್ತನೆಗಳ ಅಧ್ಯಯನಗಳು ಭಾಷೆಯಲ್ಲಿ ಜಂಡರ್ ವ್ಯತ್ಯಾಸಗಳನ್ನು ಹುಟ್ಟಿಸುತ್ತಿರುವ ಸಾಮಾಜಿಕ ಒತ್ತಡಗಳನ್ನು ಹೆಚ್ಚಾಗಿ ಗಮನಿಸುತ್ತಿವೆ. ಹಲವು ಅಧ್ಯಯನಕಾರರು ಹೇಳುವಂತೆ ಶಾಲೆಗಳಲ್ಲಿ ಹುಡುಗಿಯರು ತಮ್ಮ ಸಾಮರ್ಥ್ಯಗಳನ್ನು ಇಡಿಯಾಗಿ ಹೊರಗೆಡಹಲಾರರು;ಹಾಗೂ ಅದಕ್ಕೆ ಭಾಷೆ ಕೂಡಾ ಒಂದು ಬಲವಾದ ಕಾರಣವಾಗಿದೆ.  ಆದ್ದರಿಂದ ಈ ಅಧ್ಯಯನಕಾರರು ಹುಡುಗ ಹುಡುಗಿಯರ ನಡುವೆ ವ್ಯತ್ಯಾಸಗಳಿದ್ದರೂ ತಾರತಮ್ಯಗಳಿರುವುದಿಲ್ಲ ಎನ್ನುವ ನಿಲುವನ್ನು ಒಪ್ಪುತ್ತಿಲ್ಲ.

ಹೆಂಗಸರು ಮತ್ತು ಗಂಡಸರ ನಡುವಣ ಸಂವಾದದಲ್ಲಿ ಉಂಟಾಗುವ ತಪ್ಪು ತಿಳಿವಳಿಕೆಗಳು

ಎಲ್ಲರೂ ಗಂಡಸರೇ ಇರುವ ಗುಂಪು ಹಾಗೂ ಎಲ್ಲರೂ ಹೆಂಗಸರೇ ಇರುವ ಗುಂಪುಗಳ ಒಳಗೆ ನಡೆಯುವ ಸಂವಾದಗಳ ಸ್ವರೂಪ ಬೇರೆ ಬೇರೆ ಬಗೆಯಲ್ಲೇ ಇರುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಈ ಸಂವಾದಗಳ ಸ್ವರೂಪದ ವ್ಯತ್ಯಾಸವೇ ಹೆಂಗಸರು ಮತ್ತು ಗಂಡಸರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುವಾಗ ತಪ್ಪು ತಿಳಿವಳಿಕೆ ಉಂಟಾಗುವುದಕ್ಕೆ ಕಾರಣಗಳಾಗುತ್ತವೆ ಎಂದು ವಾದಿಸಲಾಗಿದೆ. ಕೆಲವು ಅಧ್ಯಯನ ಕಾರರಂತೂ(Maltz and Borker, 1982 : Tamen, 1991) ಎಷ್ಟು ಮುಂದುವರೆದು ವಾದಿಸುತ್ತಾರೆಂದರೆ, ಹೆಂಗಸರು ಮತ್ತು ಗಂಡಸರ ನಡುವಣ ಮಾತುಕತೆಗಳು ಎರಡು ಬೇರೆ ಬೇರೆ ಸಂಸ್ಕೃತಿಗಳ ನಡುವೆ ನಡೆಯುವ ಮಾತುಕತೆಗಳೆಂದು ಹೇಳುತ್ತಾರೆ. ಮೊದಲು ಎಲ್ಲಾ ಗಂಡಸರೇ ಇರುವ ಗುಂಪುಗಳು ಹಾಗೂ ಎಲ್ಲಾ ಹೆಂಗಸರೇ ಇರುವ ಗುಂಪುಗಳ ಒಳಗೆ ನಡೆಯುವ ಮಾತುಕತೆಗಳ ಚಹರೆಗಳನ್ನು ಗುರುತಿಸಿಕೊಳ್ಳೋಣ. ಆಮೇಲೆ, ಏಕೆ ತಪ್ಪು ತಿಳಿವಳಿಕೆಗಳು ಉಂಟಾಗುತ್ತವೆ ಎಂಬುದನ್ನು ನೋಡೋಣ.

ಎಲ್ಲ ಹೆಂಗಸರೇ ಇರುವ ಗುಂಪುಗಳಲ್ಲಿ ಹೆಂಗಸರು ತಾವು ಮಾತುಕತೆಯಲ್ಲಿ ತೊಡಗಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಭಾಷೆಯನ್ನು ಹೊರತುಪಡಿಸುವ ಕೆಲವು ಹುನ್ನಾರಗಳನ್ನು ಬಳಸುತ್ತಾರೆ. ಮಾತನಾಡುವಾಗ ಕೊಂಚ ಮುಂದೆ ಬಾಗುವುದು, ಒಬ್ಬರನ್ನೊಬ್ಬರು ನೋಡಿಕೊಳ್ಳುವಂತೆ ಕತ್ತು ತಿರುಗಿಸುವುದು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದು. ಇವಿ ಅಂಥ ಕೆಲವು ಹುನ್ನಾರಗಳು. ಇಂಥ ಗುಂಪುಗಳಲ್ಲಿ ಹೆಂಗಸರು ಒಂದೇ ವಿಷಯನ್ನು ಕುರಿತು ಬೇಕಾದರೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಾತನಾಡಬಲ್ಲರು. ಜೊತೆಗೆ, ತಮ್ಮ ಬಗ್ಗೆ ಹೇಳಿಕೊಳ್ಳುತ್ತಾರೆ, ಭಾವನೆಗಳನ್ನು ಹಂಚಿಕೊಳ್ಳುತ್ತಾರೆ, ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಹಂಡಸರಾದರೋ ಒಂದು ವಿಷಯದಿಂದ ಇನ್ನೊಂದು ವಿಷಯದ ಕಡೆಗೆ ಹಾರುತ್ತಿರುತ್ತಾರೆ. ತಮ್ಮ ತಮ್ಮ ಅನುಭವಗಳನ್ನು ಹೇಳಿಕೊಳ್ಳು ಪೈಪೋಟಿ ನಡೆಸುತ್ತಾರೆ. ತಾವು ಹೆಚ್ಚು ಎಂಬುದನ್ನು ತೋರಿಸಿಕೊಳ್ಳುವುದು, ಹೇಗಾದರೂ ಮೇಲುಗೈ ಸಾಧಿಸುವುದು ಅವರ ಗುರಿಯಾಗಿರುತ್ತದೆ. ತಮ್ಮ ಬಗ್ಗೆಯೇ ಮಾತನಾಡಿಕೊಳ್ಳುವುದು ಕಡಿಮೆ. ಇಂದಿನ ವಿದ್ಯಮಾನಗಳು, ಆಟೋಟಗಳು, ಪ್ರವಾಸಗಳು…. ಇವೇ ಮುಂತಾದ ಸಂಗತಿಗಳು ತಮಗೆ ಹೆಚ್ಚು ಗೊತ್ತುಎಂಬುದನ್ನು ಸಾಬೀತು ಮಾಡಲು ಮುನ್ನುಗ್ಗುತ್ತಾರೆ. ಹೆಂಗಸರು ಮತ್ತು ಗಂಡಸರ ಗುಂಪುಗಳಲ್ಲಿ ಮಾತುಕತೆಯನ್ನು ನಡೆಸುವ ಬಗೆಯಲ್ಲೂ ವ್ಯತ್ಯಾಸಗಳು ಕಾಣುತ್ತವೆ. ಹೆಂಗಸರು ಇನ್ನೊಬ್ಬರಿಗೆ ಮಾತನಾಡಲು ಅನುವು ಮಾಡಿಕೊಡುತ್ತಿರುತ್ತಾರೆ. ತಾವೇ ಹೆಚ್ಚು ಮಾತನಾಡಿದರೆ ಮುಜುಗರ ಪಡುತ್ತಾರೆ. ಇಲ್ಲರೂ ಮಾತುಕತೆಯಲ್ಲಿ ಪಾಲ್ಗೊಳ್ಳಬೇಕು, ಒಬ್ಬರೇ ಮೇಲುಗೈ ಪಡೆಯಬಾರದು ಎನ್ನುವುದು ಬರೀ ಹೆಂಗಸರೇ ಇರುವ ಗುಂಪುಗಳ ಒಂದು ಚಹರೆ. ಅದರೆ, ಬರೀ ಗಂಡಸರಿರುವ ಗುಂಪುಗಳಲ್ಲಿ ಮೇಲುಗೈ ಪಡೆಯಲು ಪೈಪೋಟಿ ನಡೆದು ಮಾತುಕತೆ ಮೊದಲಾದ ತುಸು ಹೊತ್ತಿನಲ್ಲೇ ಅವರವರಲ್ಲೇ ಯಾರು ಮೇಲು, ಯಾರು ಹಿಂಬಾಲಕರು ಎಂಬುದು ತೀರ್ಮಾನವಾಗಿಬಿಡುತ್ತದೆ. ಎಲವರು ತಾವೇ ಮಾತನಾಡುತ್ತಿದ್ದರೆ, ಉಳಿದವರು ಆಗಾಗಷ್ಟೇ ಉಸಿರೆತ್ತಿ ಸುಮ್ಮನಾಗುತ್ತಾರೆ. ಗಂಡಸರು ಒಬ್ಬೊಬ್ಬರೇ ಇಡೀ ಗುಂಪನ್ನು ಉದ್ದೇಶಿಸಿ ಮಾತಾಡುತ್ತಾರೆ (Arie’s ೧೯೭೬ರಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ ಒಟ್ಟು ಮಾತುಕತೆಯು ಮೂರನೇ ಒಂದು ಭಾಗದ ಸಮಯ ಹೀಗೆ ಒಬ್ಬರೇ ಮಾತನಾಡುವುದುಂಟು) ಆದರೆ, ಹೆಂಗಸರಲ್ಲಿ ಹೀಗಾಗುವುದು ಕಡಿಮೆ (ಒಟ್ಟು ಸಮಯದಲ್ಲಿ ಪ್ರತಿಶತ ೬.೫ರಷ್ಟು ಹೊತ್ತು ಹೀಗಾಗಬಹುದು). ಅಂದರೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳುವುದೇ ಹೆಂಗಸರ ಗುಂಪುಗಳು ಆಯ್ದುಕೊಳ್ಳುವ ಹಾದಿಯಾಗಿದೆ.

ಒಬ್ಬರಾದ ಮೇಲೆ ಇನ್ನೊಬ್ಬರು ಮಾತನಾಡುವ ಬಗೆ ಬರೀ ಗಂಡಸರ ಗುಂಪಿನಲ್ಲೂ ಇರುತ್ತದೆ.  ಆದರೆ, ಇದು ಹೇಗೆ ನಡೆಯಬೇಕು ಎನ್ನುವುದನ್ನು ಗೊತ್ತುಮಾಡುವ ಮಾದರಿಗಳಿವೆ. Sacks ಮತ್ತಿತರರು(೧೯೭೪) ಈ ಮಾದರಿಗಳನ್ನು ತೋರಿಸಿ ಕೊಟ್ಟಿದ್ದಾರೆ. ಈ ಮಾದರಿಯಲ್ಲಿ ಎರಡು ಕಟ್ಟುಪಾಡುಗಳಿರುತ್ತವೆ. ಒಂದು, ಒಮ್ಮೆಗೆ ಒಬ್ಬರು ಮಾತ್ರ ಮಾತನಾಡಬೇಕು.ಎರಡು, ಮಾತನಾಡುವವರು ಮತ್ತೆ ಮತ್ತೆ ತಮ್ಮ ಸರದಿಯನ್ನು ಪಡೆದುಕೊಳ್ಳಬೇಕು. ಬರೀ ಹೆಂಗಸರ ಗುಂಪಿನ ಮಾತುಕತೆಗಳಲ್ಲಿ ಮಾತಿನ ಸರದಿ ಪಡೆಯುವ ಬಗೆ ಹೀಗಿರುವುದಿಲ್ಲ. ಒಂದೇ ಹೊತ್ತಿನಲ್ಲಿ ಒಬ್ಬರಿಗಿಂತ ಹೆಚ್ಚು ಜನ ಮಾತನಾಡುತ್ತಿರಬಹುದು. ಎಲ್ಲರೂ ಒಟ್ಟಾಗಿ ಸೇರಿ ಮಾತಾಡುತ್ತಾ ಮಾತುಕತೆಯನ್ನು ಮುಂದುವರೆಸುತ್ತಾರೆಯೇ ಹೊರತು, ಸರದಿಯನ್ನು ಕಾಯುತ್ತಾ ಕೂರುವುದಿಲ್ಲ.

ಮಾಲ್ಟ್‌ಜ್ ಮತ್ತು ಬೊರ್ಕರ್(೧೯೮೨) ಇವರು ಮಾತುಕತೆಗಳ ಬಗೆಯಲ್ಲಿ ಇರುವ ಈ ವ್ಯತ್ಯಾಸಗಳೇ ಹೆಂಗಸರು ಗಂಡಸರು ಒಟ್ಟಾಗಿ ನಡೆಸುವ ಮಾತುಕತೆಗಳ ತಪ್ಪು ತಿಳಿವಳಿಕೆಗಳಿಗೆ ಕಾರಣವಾಗುವುದನ್ನು ಗುರುತಿಸಿದ್ದಾರೆ. ಗಂಡಸರು ಮತ್ತು ಹೆಂಗಸರು ಮಾತಿನಲ್ಲಿ ತೊಡಗುವುದು, ಇನ್ನೊಬ್ಬರ ಮಾತನ್ನು ತಿಳಿದುಕೊಳ್ಳುವುದು, ಹೊಂದಿಕೊಂಡು ಮಾತಾಡುವುದು – ಈ ಎಲ್ಲ ನಿಟ್ಟಿನಲ್ಲಿ ಬೇರೆ ಬೇರೆ ಮಾತುಗಳನ್ನೇ ಹೊಂದಿರುತ್ತಾರೆ.  ಎಳವೆಯಲ್ಲಿ ಮತ್ತು ಹದಿಹರಯದಲ್ಲಿ ತಂತಮ್ಮ ಗುಂಪುಗಳಲ್ಲಿ ಮಾತಾಡಿಕೊಳ್ಳುವಾಗ ಈ ನಿಯಮಗಳು ಮೈ ತಳೆದು ಬಲವಾಗಿ ಬೇರು ಬಿಟ್ಟಿರುತ್ತವೆ. ಅಂತಹ ಎಂಟು ವ್ಯತ್ಯಾಸಗಳನ್ನು ಮುಂದೆ ಚರ್ಚಿಸೋಣ.

. ಕಡಿಮೆ ಬದಲು ಮಾತುಗಳು

ಹೆಂಗಸರು ಗಂಡಸರೊಡನೆ ಮಾತಾಡುವಾಗ ಯಾವ ಬದಲು ಮಾತುಗಳನ್ನು ಆಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಾಗುವಂತಿರುತ್ತದೆ. ‘ಹೌದು’ ‘ಹಾಂ’ಎಂದು ಹೇಳಿದರೆ ‘ನಾನು ಕೇಳಿಸಿಕೊಳ್ಳುತ್ತಿದ್ದೇನೆ. ನಿಮ್ಮ ಮಾತಿಗೆ ನನ್ನ ಬೆಂಬಲವಿದೆ’ ಎಂದು ತಿಳಿಯಬೇಕು. ಹೆಂಗಸರು ಈ ಮಾತುಗಳನ್ನು ಹೇಳಿದರೆ ಗಂಡಸರು ಅದಕ್ಕೆ ತಮ್ಮದೇ ಆದ ಹೆಚ್ಚಿನ ಅರ್ಥ ಕೊಟ್ಟುಕೊಳ್ಳುತ್ತಾರೆ. ‘ನಿನ್ನ ಮಾತಿಗೆ ನನ್ನ ಒಪ್ಪಿಗೆ ಇದೆ’ ಎಂದು ಹೆಂಗಸರು ಹೇಳುತ್ತಿದ್ದಾರೆಂದು ತಿಳಿಯುತ್ತಾರೆ. ಹೀಗೆ ಕಡಿಮೆ ಮಾತುಗಳಲ್ಲಿ ಉತ್ತರ ಹೇಳುವ ಹೆಂಗಸರ ನಡವಳಿಕೆಗಳು ಗಂಡಸರು ಮತ್ತು ಹೆಂಗಸರ ಮಾತುಕತೆಗಳಲ್ಲಿ ಹೆಚ್ಚಿನ ತಪ್ಪು ತಿಳಿವಳಿಕೆಗಳಿಗೆ ಕಾರಣವಾಗುತ್ತವೆ. ಮೊದಲನೆಯದಾಗಿ, ಹೆಂಗಸರು ತಮ್ಮ ಮಾತಿಗೆ ಒಪ್ಪಿಗೆ ನೀಡುತ್ತಿದ್ದಾರೆ ಎಂದು ಗಂಡಸರು ತಿಳಿದುಕೊಂಡು ಬಿಡುತ್ತಾರೆ. ಆದರೆ, ಅದು ಹಾಗಿಲ್ಲವೆಂದು ಗೊತ್ತಾದಾಗ ಮೈ ಪರಚಿಕೊಳ್ಳುತ್ತಾರೆ. ಎರಡನೆಯದಾಗಿ, ಗಂಡಸರೇಕೆ ಹೀಗೆ ಕಡಿಮೆ ಮಾತಿನ ಉತ್ತರಗಳನ್ನು ನೀಡುತ್ತಿಲ್ಲ ಎಂಬುದು ಹೆಂಗಸರನ್ನು ಹೆಚ್ಚು ಕಾಡಿಸುವುದಿಲ್ಲ. ಒಂದು ವೇಳೆ ಗಂಡಸರು ಹಾಗೇನಾದರೂ ಹಾಂ, ಹೂಂ ಎಂದಷ್ಟೇ ಎನ್ನುತ್ತಿದ್ದರೆ, ಅದು ತಮ್ಮ ಮಾತನ್ನು ಗಂಡಸರು ಕೇಳಿಸಿಕೊಳ್ಳುತ್ತಿಲ್ಲ ಎಂದು ಹೆಂಗಸರಿಗೆ ಅನ್ನಿಸುತ್ತದೆ.

. ಪ್ರಶ್ನೆಗಳ ಅರ್ಥ

ಹೆಂಗಸರು ಮತ್ತು ಗಂಡಸರು ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವ ಬಗೆಯೇ ಬೇರೆ ಬೇರೆ.  ಹೆಂಗಸರು ಗಂಡಸರಿಗಿಂತ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಇದು ಅಧ್ಯಯನ ಗಳಿಂದ ಗೊತ್ತಾಗಿದೆ.  ಅವರು ಮಾತುಕತೆಯು ಕಡಿದು ಹೋಗದೆ ಮುಂದುವರೆಯಬೇಕೆಂಬ ಇರಾದೆಯಿಂದ ಹೀಗೆ ಪ್ರಶ್ನೆಗಳ ಮೊರೆ ಹೋಗುತ್ತಾರೆ. ಪ್ರಶ್ನೆಗಳು ಮಾತಿನ ಕ್ರಿಯೆಗಳು. ಅದರಿಂದಾಗಿ ಅದಕ್ಕೆ ಉತ್ತರಗಳು ಮಾತಿನ ಕ್ರಿಯೆಗಳಾಗಿ ಮೈದಳೆಯಲೇ ಬೇಕು. ಅಂದರೆ ಮಾತಿನ ಸರಣಿ ಕಡಿದು ಹೋಗದೆ ಮುಂದುವರೆಯುತ್ತಲೇ ಇರುತ್ತದೆ. ಹೆಂಗಸರು ಹೆಚ್ಚಾಗಿ ಪ್ರಶ್ನೆಗಳನ್ನು ಮಾತಿನ ವರಸೆಗಳಾಗಿ ಬಳಸುತ್ತಾರೆ.  ‘ಇವನನ್ನು ಕಟ್ಟಿಕೊಂಡು ಹೇಗಪ್ಪಾ ಏಗುವುದು?’ ಎಂದು ಹೆಂಗಸರು ಕೇಳಿದರೆ ಆಕೆ ಹೇಗೆ ಏಗುವುದು ಎನ್ನು ವುದನ್ನು ತಿಳಿಸಿಹೇಳುವ ಕಿವಿ ಮಾತನ್ನು ಬಯಸುತ್ತಿರುವುದಿಲ್ಲ. ಅವಳು ಈಗ ಅನುಭವಿಸುತ್ತಿರುವ ಯಾವುದೋ ಗೋಜಲನ್ನು ಅರಿತು ತನ್ನ ಭಾವನೆಗಳನ್ನು ನೀನೂ ಹಂಚಿಕೋ ಎಂದು ಸೂಚಿಸುತ್ತಿರುತ್ತಾಳೆ. ಆದರೆ, ಗಂಡಸರು ಪ್ರಶ್ನೆಗಳನ್ನು ಹೀಗೆ ಬಳಸುವುದಿಲ್ಲ. ಯಾವುದೋ ಮಾಹಿತಿಯನ್ನು ಪ್ರಶ್ನೆಗಳು ಬಯಸುತ್ತವೆ ಎಂದು ತಿಳಿಯುವ ಅವರು ಹಾಗೆ ಬೇಕಾದ ಮಾಹಿತಿಯನ್ನು ನೀಡಲು ಮುಂದಾಗುತ್ತಾರೆ. ಹೆಚ್ಚು ವಿವರವಾಗಿಯೇ ಉತ್ತರಗಳನ್ನು ನೀಡುವುದೂ ಉಂಟು.  ಹೀಗಾಗಿ, ಹೆಂಗಸರು ಮತ್ತು ಗಂಡಸರು ಮಾತನಾಡುವಾಗ ಇಕ್ಕಟ್ಟುಗಳು ಉಂಟಾಗುತ್ತವೆ. ಗಂಡಸರಿಗೆ ಪ್ರಶ್ನೆಗಳು ಕೇವಲ ಪ್ರಶ್ನೆಗಳಷ್ಟೇ ಆಗಿದ್ದರೆ,  ಹೆಂಗಸರಿಗೆ ಅವು ಮಾತುಕತೆ ಮುಂದುವರೆಸಲು ಇರುವ ಒಳದಾರಿಗಳು. ಹೀಗಾಗಿ, ಪ್ರಶ್ನೆಗಳ ಬಳಕೆಯನ್ನು ಗಂಡಸರು ಮತ್ತು ಹೆಂಗಸರು ಬೇರೆ ಬೇರೆ ಉದ್ದೇಶಗಳಿಗಾಗಿ ಮಾಡುತ್ತಿರುತ್ತಾರೆ. ಇದು ತಪ್ಪು ತಿಳಿವಳಿಕೆಯುಂಟಾಗಲು ಕಾರಣವಾಗುತ್ತದೆ.

. ಮಾತನಾಡುವವರ ಸರದಿಗಳ ನಡುವಣ ಕೊಂಡಿಗಳು

ಮಾತನಾಡುವವರು ಮಾತುಕತೆಯಲ್ಲಿ ತಮ್ಮ ಸರದಿ ಬಂದಾಗ, ತಮಗಿಂತ ಮೊದಲು ಮಾತಾಡಿದವರು ಏನು ಹೇಳಿದರು ಎನ್ನುವುದನ್ನು ಗಮನದಲ್ಲಿ ಇರಿಸಿಕೊಂಡು ತಮ್ಮ ಮಾತನ್ನು ಮೊದಲು ಮಾಡುತ್ತಾರೆ. ಹೀಗೆ ಮಾತನಾಡುವಾಗ ಈವರೆಗೆ ಮಾತಾಡಿದ ವಿಷಯ, ಇಲ್ಲವೇ ಅದರೊಡನೆ ಸಂಬಂಧವುಳ್ಳ ವಿಷಯವನ್ನು ಕುರಿತು ಹೇಳುತ್ತಾರೆ. ಈ ಬಗೆಯನ್ನು ಹೆಚ್ಚಾಗಿ ಹೆಂಗಸರು ಬಳಸುವುದು ಕಂಡು ಬರುತ್ತದೆ. ಗಂಡಸರಾದರೋ ಮೊದಲು ಮಾತಾಡಿದವರು ಏನು ಹೇಳಿದರು ಎನ್ನುವುದನ್ನು ಗುರುತಿಸುವುದು ತಮ್ಮ ಹೊಣೆ ಎಂದು ತಿಳಿಯುವುದಿಲ್ಲ. ಹೆಚ್ಚಿನ ಗಂಡಸರು ಮೊದಲಿನವರ ಕೊಡುಗೆಯನ್ನು ಕಡೆಗಣಿಸಿ, ತಮ್ಮ ನಿಲುವನ್ನು ಮುಂದಿಡತೊಡಗುತ್ತಾರೆ. ಗಂಡಸರು ಮತ್ತು ಹೆಂಗಸರು ಜೊತೆಯಾಗಿ ಮಾತಾಡುವಾಗ ಈ ಮೇಲೆ ಹೇಳಿದ ವ್ಯತ್ಯಾಸದಿಂದಾಗಿ, ಹೆಂಗಸರಿಗೆ ತಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ ಎಂದು ತೋರುತ್ತದೆ. ಗಂಡಸರು ತಮ್ಮ ಪಾಡಿಗೆ ತಾವು ಈ ಗೋಜಲಿನ ಕಡೆಗೆ ಗಮನವಿಡದೆ ಮುಂದುವರೆಯುತ್ತಾರೆ. ತಾವು ಪಾಲಿಸುವ ಕಟ್ಟುಗಳನ್ನು ಬಿಡದೆ ಅನುಸರಿಸುತ್ತಾರೆ.

. ವಿಷಯ ಬದಲಾವಣೆ

ಬರೀ ಗಂಡಸರೇ ಸೇರಿ ಮಾತಾಡುವಾಗ ವಿಷಯಗಳ ಬದಲಾವಣೆ ತಟಕ್ಕನೆ ಆಗಿ ಹೋಗುತ್ತದೆ.ಬರೀ ಹೆಂಗಸರು ಸೇರಿ ಮಾತಾಡುವಾಗ ಹೀಗಾಗದು. ಅವರು ಒಬ್ಬೊಬ್ಬರೂ  ಮಾತಾಡಿದ್ದನ್ನು ಕೂಡಿಸಿಕೊಳ್ಳುತ್ತಾ ನಿಧಾನವಾಗಿ ಬೇರೊಂದು ವಿಷಯಕ್ಕೆ ದಾಟುತ್ತಾರೆ.  ಡಾರ್‌ವಲ್(೧೯೯೦) ಅವರ ಅಧ್ಯಯನದಲ್ಲಿ ಇದಕ್ಕೊಂದು ಉದಾಹರಣೆ ಇದೆ. ಹನ್ನೆರಡು ವಯಸ್ಸಿನ ಇಬ್ಬರು ಹುಡುಗರು ಇಪ್ಪತ್ತು ನಿಮಿಷ ನಡೆಸಿದ ಮಾತುಕತೆಯಲ್ಲಿ ಐವತ್ತೈದು ವಿಷಯಗಳ ಕಡೆಗೆ ಗಮನ ಹಾಯಿಸಿದರು. ಯಾವ ವಿಷಯವನ್ನೂ ಒಂದೆರಡು ಬಾರಿಗಿಂತ ಹೆಚ್ಚು ಸರದಿಗಳಲ್ಲಿ ಚರ್ಚಿಸಲಿಲ್ಲ. ಒಂದಕ್ಕೊಂದು ನಂಟಿಲ್ಲದ ವಿಷಯಗಳ ಕಡೆಗೆ ಹುಡುಗರ ಮಾತುಕತೆಗಳು ಕುಪ್ಪಳಿಸುತ್ತಾ ನಡೆಯುತ್ತವೆ. ಹನ್ನೆರಡು ವಯಸ್ಸಿನ ಇಬ್ಬರು ಹುಡುಗಿಯರು ಹೀಗೆಯೇ ಇಪ್ಪತ್ತು ನಿಮಿಷ ಮಾತಾಡಿದಾಗ ಅವರು ಒಂದೇ ವಿಷಯವನ್ನು ಚರ್ಚಿಸಿದ್ದನ್ನು ಡಾರ್‌ವಲ್ ಗಮನಿಸುತ್ತಾರೆ. ಅವರಲ್ಲೊಬ್ಬಳು ತನ್ನ ಇನ್ನೊಬ್ಬ ಗೆಳತಿಯೊಡನೆ ಮುನಿಸಿಕೊಂಡ ವಿಷಯವನ್ನಷ್ಟೇ ಅವರು ಮಾತಾಡಿದ್ದರು. ಹೆಂಗಸರ ಮಾತುಕತೆಗಳಲ್ಲಿ ಒಂದೇ ವಿಷಯವನ್ನು ಬಿಡದೆ ಮುಂದುವರೆಸುವುದು, ಅದರ ಬೇರೆ ಬೇರೆ ನೆಲೆಗಳನ್ನು ಗುರುತಿಸುವುದು ಕಂಡು ಬರುತ್ತದೆ. ಈ ಬಗೆ ಗಂಡಸರ ಮಾತುಕತೆಗಳಲ್ಲಿ ಕಾಣಿಸುವುದು ಕಡಿಮೆ.

. ಸ್ವರಕ್ಷಣೆ

ಹೆಂಗಸರು ಮಾತುಕತೆಯಲ್ಲಿ ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಮುಂದಾಗುತ್ತಾರೆ. ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಒಬ್ಬರನ್ನೊಬ್ಬರು ಸಂತೈಸುತ್ತಾರೆ. ನೆರವು ನೀಡಲು ಬಯಸುತ್ತಾರೆ. ಹಾಗಾಗಿ, ಬರೀ ಹೆಂಗಸರ ಮಾತುಕತೆ, ಅದರಲ್ಲಿ ತೊಡಗುವವರಿಗೆ ಒಂದು ಬಗೆಯ ಸಂತೈಕೆಯಾಗಿರುತ್ತದೆ. ಈ ಮುಂದೆ ಹದಿನಾಲ್ಕು ವರ್ಷದ ನಾಲ್ವರು ಹುಡುಗಿಯರ ಮಾತುಕತೆಯನ್ನು ನೀಡಿದೆ. ಇವರೆಲ್ಲ ಹಲವು ವರ್ಷಗಳ ಗೆಳತಿಯರು ಇವರು ಡಿ ಎಂಬ ಹುಡುಗಿಯ ಮಲಗುವ ಕೋಣೆಯಲ್ಲಿ ಮಾತಾಡುತ್ತಿದ್ದಾರೆ. ಅವರ ಮಾತುಕತೆಯ ವಿಷಯ ಮುಟ್ಟಿನ ಹೊತ್ತಿನ ನೋವು.

ಎ- ನನಗೆ ಬೆನ್ನಲ್ಲಿ ತುಂಬಾ ನೋವಾಗುತ್ತದೆ…. ಇಲ್ಲಿ…. ಕೆಳಗೆ

ಡಿ – ಹೌದು. ನನಗೂ ಹಾಗೇನೇ ಬೆನ್ನಲ್ಲಿ ಛಳಕು ಬರುತ್ತದೆ. ತಡೆದುಕೊಳ್ಳಲು ನನಗೆ ಆಗುವುದಿಲ್ಲ. ಖಂಡಿತ ಅಲ್ಲದೆ,

ಎಬಿಸಿ – ಹೀಗೇ ತಡೆದುಕೊಳ್ಳಲು ಆಗೊಲ್ಲ. ಆಗ ಬಿಸಿ ನೀರಿನ ಬಾಟಲ್‌ಗಳನ್ನು….

ಎ – ಬಾಟಲಿಂದ ನಿಜವಾಗಿ ಉಪಯೋಗವಿದೆ.

ಸಿಡಿ – ಬಿಸಿ ನೀರಿನ ಬಾಟಲುಗಳು ನಿಜಕ್ಕೂ ನನಗೂ ನೆರವಾಗುತ್ತದೆ.

ಗಂಡಸರಿಗೆ ಸ್ವಂತ ಸಮಸ್ಯೆಗಳನ್ನು ಮಾತುಕತೆಯಲ್ಲಿ ಮುಂದಿರಿಸುವುದು ಅಷ್ಟು ಇಷ್ಟವಾಗುವುದಿಲ್ಲ. ಯಾರಾದರೂ ಹೀಗೆ ತಮ್ಮ ಸಮಸ್ಯೆಗಳನ್ನು ಹೇಳಿದರೆ ಉಳಿದವರು ಆತ ಪರಿಹಾರ ಬಯಸುತ್ತಿದ್ದಾನೆಂದು ತಿಳಿಯುತ್ತಾರೆ. ಆ ಸಮಸ್ಯೆಗೆ ತಳಕು ಹಾಕಿಕೊಳ್ಳುವ ತಮ್ಮ ಯಾವುದೇ ಸಮಸ್ಯೆಯನ್ನು ಅವರು ಹೇಳಿಕೊಳ್ಳುವುದಿಲ್ಲ. ಬದಲಿಗೆ ಎಲ್ಲ ಬಲ್ಲವರಂತೆ ಪರಿಹಾರಗಳನ್ನು ಹೇಳತೊಡಗುತ್ತಾರೆ. ಉಳಿದ ಗಂಡಸರೆಲ್ಲರೂ ಭಾಷಣ ಮಾಡತೊಡಗುತ್ತಾರೆ.  ಟ್ಯಾನೆನ್(೧೯೯೧) ಅವರು ನೀಡುವ ಈ ಪ್ರಸಂಗವನ್ನು ಗಮನಿಸಿ. ಇಲ್ಲಿ ಗಂಡ ಹೆಂಡತಿ ಮಾತಾಡುತ್ತಿದ್ದಾರೆ. ಹೆಂಡತಿ ತನ್ನ ತೊಂದರೆಯನ್ನು ಹೇಳಿಕೊಂಡಿದ್ದಾಳೆ. ಅದಕ್ಕೆ ಗಂಡ ಬುದ್ದಿವಾದ ಹೇಳಿಕೊಡುತ್ತಾನೆ. ಅವರಿಬ್ಬರ ನಡುವೆ ಮಾತುಕತೆ ಇದರಿಂದಾಗಿ ಮುರಿದು ಬೀಳುವುದನ್ನು ಗುರುತಿಸಬಹುದು. ಹೆಂಡತಿಯ ಒಂದು ಸ್ತನದಲ್ಲಿ ಉಂಟಾಗಿದ್ದ ಗಂಟನ್ನು ತೆಗೆದು ಹಾಕಿದ್ದಾರೆ. ಇದರಿಂದ ಅವಳ ಸ್ತನದ ಆಕಾರ ಕೆಟ್ಟಿದೆ. ಅದರ ಮೇಲಿನ ಹೊಲಿಗೆಗಳನ್ನು ಕಂಡಾಗಲೆಲ್ಲ ಅವಳಿಗೆ ಮುಜುಗರವಾಗುತ್ತಿದೆ. ಇದೇ ಮಾತನ್ನು ತನ್ನ ಗೆಳತಿಗೆ ಹೇಳಿದರೆ ಆಕೆ ಹೇಳಿದ್ದಿಷ್ಟೇ. ‘ನಿಜ ಇದರಿಂದ ನಿನ್ನ ಮೈಯನ್ನು ಯಾರೋ ಹರಿದು ಹಾಕಿದಂತಿದೆ’ ಆದರೆ ಹೆಂಡತಿಯ ಮಾತನ್ನು ಕೇಳಿಸಿ ಕೊಂಡ ಗಂಡ ಹೇಳಿದ್ದೇನು? ‘ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೋ. ಗಾಯದ ಗುರುತು ಹೋಗಿ ನಿನ್ನ ಸ್ತನದ ಮೊದಲಿನ ಆಕಾರ ಮರಳಿ ಪಡೆಯಬಹುದು’. ಗೆಳತಿಯ ಮಾತು ಕೇಳಿದಾಗ ಹೆಂಡತಿಗೆ ಮನಸ್ಸು ತಹಬಂದಿಗೆ ಬಂದಂತಾಯಿತು. ಆದರೆ, ಗಂಡನ ಮಾತು ಕೇಳಿದಾಗ ಮೈ ಪರಚಿಕೊಳ್ಳುವಂತಾಯಿತು. ಅಂದರೆ, ಒಂದು ಸಮಸ್ಯೆಯನ್ನು ಗಂಡಸರು ತೆಗೆದುಕೊಳ್ಳುವ ಬಗೆಗೂ, ಹೆಂಗಸರು ತಿಳಿದುಕೊಳ್ಳುವ ಬಗೆಗೂ ವ್ಯತ್ಯಾಸವಿದೆ. ಹಾಗಾಗಿ, ಅವರು ನೀಡುವ ಉತ್ತರಗಳು ಕೂಡಾ ಬೇರೆ ಬೇರೆಯಾಗಿರುತ್ತದೆ.

. ಮಾತಿನ ದಾಳಿ

ಬರೀ ಗಂಡಸರ ಗುಂಪಿನ ಮಾತುಕತೆಯಲ್ಲಿ ಜೋರಾಗಿ ಕೂಗುವುದು, ಏರು ದನಿಯಲ್ಲಿ ವಾದಿಸುವುದು ಕಂಡು ಬರುತ್ತದೆ. ಸಣ್ಣ ಪುಟ್ಟ ಸಂಗತಿಗಳನ್ನು ದೊಡ್ಡದು ಮಾಡುತ್ತಾರೆ.  ಹಾಗೆ ಮಾಡುವುದರಲ್ಲೇ ಅವರಿಗೆ ಖುಷಿ. ಕಿರಚುವುದು, ಬೈಯ್ಯುವುದು, ಹೆದರಿಸುವುದು, ಹಂಗಿಸುವುದು, ಗಂಡಸರ ಮಾತಿನ ದಾಳಿಯ ಚಹರೆಗಳು. (ಲೆಬೋವ್ -೧೯೭೨) ಹದಿಹರಯದ ಕಪ್ಪು ಹುಡುಗರು ಬೈದಾಡಿಕೊಳ್ಳುವ ಪ್ರಸಂಗಗಳನ್ನು ಗಮನಿಸಿ ಮೇಲಿನ ಲಕ್ಷಣಗಳನ್ನು ಗುರುತಿಸಿದ್ದಾರೆ). ಹೆಂಗಸರು ಹೀಗೆ ಮಾತಿನ ದಾಳಿಯಲ್ಲಿ ತೊಡಗುವುದನ್ನು ಬಯಸುವುದಿಲ್ಲ.  ಹಾಗೆ ಮಾಡುವುದು ಅವರಿಗೆ ಹಿತವೆನಿಸದು. ಹೀಗೆ ಮಾತಿನ ದಾಳಿ ಮಾಡಿದರೆ ಕೇಳಿದವರಿಗೆ ನೋವಾಗುವುದೆಂದು ತಿಳಿದಿರುತ್ತಾರೆ. ಒಪ್ಪಿಗೆಯಾಗದ್ದನ್ನು ನೇರವಾಗಿ ಹೇಳುವ ಬದಲು ಸುತ್ತಿ ಬಳಸಿ ತಿಳಿಸಲು ತೊಡಗುತ್ತಾರೆ. ಗಂಡಸರು ಹೆಂಗಸರು ಒಟ್ಟಾಗಿ ಮಾತುಕತೆಯಾಡುವಾಗ ಈ ಮಾತಿನ ದಾಳಿ ಗೊಂದಲಗಳಿಗೆ ಕಾರಣವಾಗುತ್ತದೆ. ಹೀಗೆ ದಾಳಿ ಮಾಡುವುದು ಮಾತುಕತೆ ಮುರಿಯಲು ಕಾರಣವೆಂದು ಹೆಂಗಸರು ತಿಳಿಯುತ್ತಾರೆ. ಆದರೆ, ಗಂಡಸರಿಗೆ ಅವರ ಮಾತುಕತೆಗಳಲ್ಲಿ ಹೀಗೆ ದಾಳಿಯಲ್ಲಿ ತೊಡಗುವುದು ಅಡ್ಡಿಪಡಿಸುವ ಸಂಗತಿಯಾಗಿ ತೋರುವುದಿಲ್ಲ. ಹೆಂಗಸರಲ್ಲೂ ಮಾತಿನಲ್ಲಿ ಹಂಗಿಸುವ ಬಗೆ ಕಾಣುವುದುಂಟು. (ಗುಡ್‌ವಿನ್ – ೧೯೮೨, ೧೯೯೦ ;  ಎಡರ್ – ೧೯೯೦ ಇವರು ಕಪ್ಪು ಮತ್ತು ದುಡಿಯುವ ಹೆಂಗಸರಲ್ಲಿ ಹಂಗಿಸುವ ಬಗೆ ಉಂಟೆಂದು ತೋರಿಸಿದ್ದಾರೆ). ಅವರಲ್ಲೂ ಇದು ನಡವಳಿಕೆಯ ಒಂದು ಭಾಗವೇ ಹೊರತು ಮೇಲುಗೈ ಪಡೆಯಲು ಬಳಸುವ ತಂತ್ರವಲ್ಲ. ಅಂದರೆ ಮಾತಿನ ದಾಳಿಯನ್ನು ಗಂಡಸರು ಬಳಸುವುದಕ್ಕೂ, ಹೆಂಗಸರು ಬಳಸುವುದಕ್ಕೂ ವ್ಯತ್ಯಾಸಗಳಿವೆ ಎಂದಾಯಿತು.

. ಕೇಳಿಸಿಕೊಳ್ಳುವುದು

ಮಾತುಕತೆಯಲ್ಲಿ ಪಾಲ್ಗೊಳ್ಳುವವರಿಗೆ ಮಾತನಾಡುವ ಹಕ್ಕು ಇದ್ದಂತೆ ಕೇಳಿಸಿಕೊಳ್ಳುವ ಹೊಣೆಯೂ ಇರುತ್ತದೆ. ಬರೀ ಹೆಂಗಸರೇ ಇರುವ ಗುಂಪುಗಳಲ್ಲಿ ಪಾಲ್ಗೊಳ್ಳುವವರು ಕೇಳಿಸಿಕೊಳ್ಳುವುದಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ತಾವೇ ಮುಂದಾಗಿ ಮಾತನಾಡುವುದು ಕಡಿಮೆ. ಸರದಿಯ ಮೇರೆಗೆ ಮಾತನಾಡುತ್ತಿರುವ ಹೆಂಗಸಿನ ಮಾತನ್ನು ತಡೆದು ತಾವೇ ಮಾತಾಡಲು ತೊಡಗುವುದಂತೂ ಕಡಿಮೆ. ಬೇರೆಯವರು ಮಾತನಾಡುವಂತೆ ಹುರಿದುಂಬಿಸುತ್ತಾರೆ. ಗಂಡಸರಿಗೆ ಮಾತನಾಡುವುದೆಂದರೆ ಒಂದು ಪಂದ್ಯವಿದ್ದಂತೆ. ಅಲ್ಲಿ ಕೇಳಿಸಿಕೊಳ್ಳುವುದಕ್ಕಿಂತ ತಾವೇ ಮಾತನಾಡುವುದಕ್ಕೆ ಮೊದಲ ಮಣೆ. ಯಾವಾಗ ಬೇಕಾದರೂ ಮುನ್ನುಗ್ಗಿ ತಮ್ಮ ಸರದಿಯನ್ನು ಪಡೆದುಕೊಳ್ಳಲು ಹವಣಿಸುತ್ತಿರುತ್ತಾರೆ. ಸಿಕ್ಕ ಅವಕಾಶವನ್ನು ಸುಮ್ಮನೆ ಬಿಟ್ಟುಕೊಡುವುದಿಲ್ಲ. ಬರೀ ಗಂಡಸರ ಗುಂಪಿನಲ್ಲಿ ಕೆಲವರೇ ಮುಂದಾಳಾಗಿ ಮಾತನಾಡುತ್ತಾರೆ. ಉಳಿದವರು ಸೋತು ಹಿಂದೆ ಸರಿಯುವರು. ಗಂಡಸರಿಗೆ ಕೇಳಿಸಿಕೊಳ್ಳುವುದರಲ್ಲಿ ಹೆಚ್ಚು ಆಸಕ್ತಿ ಇಲ್ಲ. ಗಂಡಸರು ಹೆಂಗಸರು ಒಟ್ಟಾಗಿ ಮಾತನಾಡುವಾಗ ಗೊಂದಲಗಳುಂಟಾಗುತ್ತವೆ. ಹೆಂಗಸರು ಗಮನವಿಟ್ಟು ಕೇಳುತ್ತಿದ್ದರೆ ಗಂಡಸರಿಗೆ ಅದು ತಮ್ಮ ಹಕ್ಕನ್ನು ಮಂಡಿಸಲು ಹೆಂಗಸರು ಸೋಲುತ್ತಿರುವ ಬಗೆ ಎಂದು ತೋರುತ್ತದೆ. ಹಾಗೆಯೇ, ಮಾತಿಗೆ ಮುಂದಾಗುವ ಗಂಡಸರು ಇತರರ ಮಾತಿನ ಹಕ್ಕನ್ನು ಮತ್ತು ತಮ್ಮ ಕೇಳಿಸಕೊಳ್ಳುವ ಹೊಣೆಯನ್ನು ಮರೆಯುತ್ತಿದ್ದಾರೆಂದು ಹೆಂಗಸರಿಗೆ ತೋರುತ್ತದೆ. (ಹೆಂಗಸರು ಮಾತುಕತೆಗೆ ನೀಡುವ ಕೊಡುಗೆಯನ್ನು ಕಡೆಗಣಿಸಿ ಅವರ ಕೇಳಿಸಿಕೊಳ್ಳುವ ಗುಣವನ್ನೇ ಮೆಚ್ಚುವ ಗಂಡಸರು ಮೋಸ ಮಾಡುತ್ತಾರೆಂದು ಹೆಂಗಸರು ಹೇಳುತ್ತಾರೆ.) ಆದ್ದರಿಂದ ಹೆಂಗಸರೂ ಗಂಡಸರೂ ಜೊತೆಗೂಡಿ ಮಾತಾಡುವಾಗ ಹೆಂಗಸರು ಮಾತಾಡುವುದು ಕಡಿಮೆಯೇ.  ತಾವೇ ಮುಂದಾಗಿ ಮಾತಾಡುವುದಂತೂ ಇಡೀ ಮಾತುಕತೆಯ ಮೂರನೇ ಒಂದು ಪಾಲು ಮಾತ್ರ.

. ಒಟ್ಟಾಗಿ ಮಾತಾಡುವುದು

ಒಬ್ಬರಿಗಿಂತ ಹೆಚ್ಚು ಜನ ಮಾತುಕತೆಗಳಲ್ಲಿ ಒಟ್ಟೊಟ್ಟಾಗಿ ಮಾತಾಡುವುದುಂಟು.  ಹೀಗಾಗುವುದನ್ನು ಗಂಡಸರು ಒಂದು ಬಗೆಯಲ್ಲಿ ಅರ್ಥ ಮಾಡಿಕೊಂಡರೆ, ಹೆಂಗಸರು ಇನ್ನೊಂದು ಬಗೆಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ. ಇದರಿಂದಾಗಿಯೂ ತಪ್ಪು ತಿಳುವಳಿಕೆಗಳಾಗುತ್ತವೆ. ಗಂಡಸರಿಗೆ ಮಾತನಾಡುವುದೇ ಮುಖ್ಯ. ಸಿಕ್ಕ ಸಮಯವನ್ನು ಬಿಟ್ಟು ಕೊಡಲಾರರು. ಹೀಗೆ ಮಾಡಲು ಅವರು ಅನುಸರಿಸುವ ತಂತ್ರವಾಗಿ, ಇನ್ನೊಬ್ಬರು ಮಾತನಾಡುತ್ತಿರುವಾಗ ಅವರು ಮಾತು ಮುಗಿಸುವ ಮೊದಲೇ ತಮ್ಮ ಮಾತನ್ನು ಮೊದಲು ಮಾಡುತ್ತಾರೆ.

ಹೀಗೆ ಒಬ್ಬರು ಮಾತಾಡುವಾಗಲೇ ಇನ್ನೊಬ್ಬರು ತಮ್ಮ ಮಾತನ್ನು ಮೊದಲು ಮಾಡಿದರೆ ಅದನ್ನು ನಡುವೆ ಬಾಯಿ ಹಾಕುವುದು ಎಂದು ತಿಳಿಯಲಾಗುವುದು. ಹೀಗೆ ಮಾಡುವುದರಿಂದ, ಮೊದಲು ಮಾತಾಡುತ್ತಿರುವವರ ಹಕ್ಕಿಗೆ ಅಡ್ಡಿಪಡಿಸಿದಂತಾಗುತ್ತದೆ.  ಅವರು ತಮ್ಮ ಸರದಿ ಸಮಯವನ್ನು ಪೂರೈಸಲು ಆಗುವುದೇ ಇಲ್ಲ. ಇನ್ನೊಬ್ಬರು ಹೀಗೆ ನಡುವೆ ಬಾಯಿ ಹಾಕಿದರೆ ಮೊದಲೇ ಮಾತನಾಡುತ್ತಿರುವ ಗಂಡಸು ಮಾತು ನಿಲ್ಲಿಸದೆ ಮುಂದುವರೆಸುತ್ತಾನೆ. ಹುಡುಗರು ತಮ್ಮ ಗುಂಪುಗಳಲ್ಲಿ ಚಿಕ್ಕವರಾಗಿದ್ದಾಗ ಹೀಗೆ ತಮ್ಮ ಮಾತಾಡುವ ಹಕ್ಕನ್ನು ಬಿಟ್ಟುಕೊಡದೆ ಕಾಯ್ದುಕೊಳ್ಳುವ ‘ಕೌಶಲ’ ವನ್ನು ಕಲಿತು ಬಲಪಡಿಸಿಕೊಳ್ಳುತ್ತಾರೆ.

ಹೆಂಗಸರ ಮಾತಿನಲ್ಲೂ ಹೀಗೆಯೇ ನಡುವೆ ಬಾಯಿ ಹಾಕುವ ಪ್ರಸಂಗಗಳು ನಡೆಯುತ್ತವೆ.ಆದರೆ, ಹೀಗೆ ಮಾಡುವುದನ್ನು ಮಾತನಾಡುತ್ತಿದ್ದವರ ಹಕ್ಕಿಗೆ ಅಡ್ಡಿಮಾಡಿದಂತೆ ಎಂದು ಯಾರೂ ತಿಳಿಯುವುದಿಲ್ಲ. ತಾವು ಕೇಳಿಸಿಕೊಳ್ಳುತ್ತಿರುವ ಮಾತಿಗೆ ಪ್ರತಿಕ್ರಿಯೆಗಳನ್ನು ನೀಡುತ್ತಾ ಹುರಿದುಂಬಿಸಲು ಹೆಂಗಸರು ನಡುವೆ ಬಾಯಿ ಹಾಕುತ್ತಾರೆ. ಹೂಂ, ಹಾ, ಹೌದು ಹೌದು, ಸರಿ…. ಮುಂತಾದ ಚಿಕ್ಕ ಚಿಕ್ಕ ಪದಗಳನ್ನು ಬಳಸುವುದು, ತಲೆಯಾಡಿಸುವುದು ಹೆಂಗಸರಲ್ಲಿ ಕಂಡುಬರುತ್ತದೆ. ಬರೀ ಹೆಂಗಸರಿರುವಾಗ ಇದಾವುದನ್ನೂ ಹಕ್ಕಿಗೆ ಅಡ್ಡಿ ಮಾಡುವ ನಡತೆ ಎಂದು ಯಾರೂ ತಿಳಿಯುವುದಿಲ್ಲ. ತಾವು ಮನಸ್ಸಿಟ್ಟು ಕೇಳಿಸಿಕೊಳ್ಳುತ್ತಿರುವುದನ್ನು, ಮಾತಿನಲ್ಲಿ ಪಾಲ್ಗೊಳ್ಳುತ್ತಿರುವುದನ್ನು ತೋರಿಸಲು ಹೀಗೆ ಮಾಡುತ್ತಿರುತ್ತಾರಷ್ಟೇ.

ಬರೀ ಹೆಂಗಸರ ಮಾತುಕತೆಯಲ್ಲಿ ಒಟ್ಟೊಟ್ಟಿಗೆ ಮಾತಾಡುವುದಕ್ಕೆ ಬೇರೆ ಬೇರೆ ಕಾರಣಗಳಿವೆ.  ಅವೆಲ್ಲವೂ ಅವರ ಮಾತುಕತೆಗಳ ಚಹರೆಗಳಾಗಿವೆ. ಹೆಂಗಸರು ತಮ್ಮ ಸರದಿಯನ್ನು ಪೂರ್ಣಗೊಳಿಸುವುದು ಒಂದು ಲಕ್ಷಣ. ಈಗ ಮಾತನಾಡುತ್ತಿರುವ ವಿಷಯವನ್ನು ಕುರಿತು ಒಂದೇ ನಿಲುವನ್ನು ಒಮ್ಮೆಗೆ ಒಬ್ಬರಿಗಿಂತ ಹೆಚ್ಚು ಜನರು ಹೇಳುತ್ತಾರೆ. ಹಾಗಿಲ್ಲದೆ, ಒಂದೇ ವಿಷಯವನ್ನು ಕುರಿತು ಬೇರೆ ಬೇರೆ ನಿಲುವುಗಳಿದ್ದರೆ, ಅದನ್ನು ಒಂದಕ್ಕೊಂದು ಪೂರಕವೆಂಬಂತೆ ಹೇಳಬಲ್ಲರು. ಒಬ್ಬರು ಮಾತಾಡುತ್ತಿರುವಾಗ ಇನ್ನೊಬ್ಬರು ಬಾಯಿ ಹಾಕಿದರೂ ಅದು ಈಗ ಹೇಳುತ್ತಿರುವ ವಿಷಯಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಲೆಂದು ಮಾಡುವ ಕೆಲಸವಾಗಿರುತ್ತದೆ.  ಒಟ್ಟೊಟ್ಟಿಗೆ ಮಾತಾಡುವ ಹೆಂಗಸರ ಮಾತುಕತೆಯ ಈ ನೆಲೆಯನ್ನು ಹೆಚ್ಚಾಗಿ ಯಾರೂ ಗಮನಿಸುತ್ತಿಲ್ಲ.

ಒಟ್ಟಿಗೆ ಮಾತಾಡುವಾಗ ಎರಡು ಗುರಿಗಳಿರಬಹುದು. ಒಂದು, ಮೊದಲು ಮಾತಾಡುತ್ತಿರುವವರು ಹೇಳುವುದನ್ನು ಇಲ್ಲವೆಂದು ತಳ್ಳಿಹಾಕಿ ತನ್ನ ನಿಲುವು ಏನೆಂದು ಹೇಳುವುದು. ಎರಡು, ಮೊದಲನೆಯವರು ಹೇಳುತ್ತಿರುವ ನಿಲುವಿಗೆ ತನ್ನ ಮಾತಿನ ಮೂಲಕ ಒಪ್ಪಿಗೆಯನ್ನು ನೀಡುವುದು. ಮೊದಲ ಬಗೆ, ಮಾತುಕತೆ ಮುರಿದು ಬೀಳಲು ಕಾರಣವಾಗುತ್ತದೆ. ಎರಡನೆಯ ಬಗೆಯದು ಹೀಗಾಗುವುದಿಲ್ಲ. ಹೆಂಗಸರು ಮತ್ತು ಗಂಡಸರು ಜೊತೆಯಾಗಿ ಮಾತನಾಡುವಾಗ ಈ ಎರಡೂ ಬಗೆಗಳೂ ಬಳಕೆಯಾಗುವುದುಂಟು. ತಾವು ಮಾತಾಡುವಾಗ ಗಂಡಸರೊಬ್ಬರು ಬಾಯಿ ಹಾಕಿದರೆ, ಹೆಂಗಸರು ಸುಮ್ಮನಾಗಿ ಬಿಡುತ್ತಾರೆ. ಅವರು ಚಿಕ್ಕಂದಿನಿಂದ ಕಲಿತು ಬೆಳೆಸಿಕೊಂಡಿರುವ ಮಾತುಕತೆಯ ತಂತ್ರಗಳಲ್ಲಿ ಗಂಡಸರ ಈ ನಡುವೆ ಬಾಯಿಹಾಕುವಿಕೆಯನ್ನು ತಡೆಯಲು ಬೇಕಾದ ತಂತ್ರಗಳು ಇಲ್ಲ. ತಾವು ಮಾತಾಡುವಾಗ ಹೆಂಗಸರೇನಾದರೂ ಬಾಯಿ ಹಾಕಿದರೆ, ಗಂಡಸರು ಅದನ್ನು ತಲೆತೂರಿಸುವಿಕೆ ಎಂದು ತಿಳಿದು ಅದಕ್ಕೆ ಎದುರಾಗಿ ಮಾತಾಡುತ್ತಾರೆ.

ಹೆಂಗಸರು ಮತ್ತು ಗಂಡಸರು ಮಾತುಕತೆಯಲ್ಲಿ ರೂಢಿಸಿಕೊಂಡಿರುವ ಒಟ್ಟಾರೆ ನಡವಳಿಕೆಗಳಲ್ಲಿ ಇರುವ ವ್ಯತ್ಯಾಸಗಳಿಂದ ಅವರಿಬ್ಬರೂ ಜೊತೆಯಾಗಿ ಮಾತಾಡುವಾಗ ತಪ್ಪು ತಿಳಿವಳಿಕೆಗಳು ಉಂಟಾಗುತ್ತವೆ. ಹೆಂಗಸರು ತಮ್ಮ ಮಾತುಕತೆಗಳಲ್ಲಿ ಒಬ್ಬರಿಗೊಬ್ಬರು ಸಹಕರಿಸಿ ಮಾತಾಡುವ ಹಾದಿಯನ್ನು ಹಿಡಿದರೆ, ಗಂಡಸರು ಒಬ್ಬರೊಡನೊಬ್ಬರು ಪೈಪೋಟಿ ಮಾಡುವ ದಾರಿ ಹಿಡಿಯುತ್ತಾರೆ. ಮಾತುಕತೆಯನ್ನು ನಡೆಸುವ ಈ ಎರಡು ಬಗೆಗಳಿಂದ ಬೇರೆ ಬೇರೆ ಬಗೆಯ ನಿಯಮಗಳು ಬಳಕೆಗೆ ಬಂದಿರುತ್ತವೆ. ಮಾತುಕತೆಯಲ್ಲಿ ಏನೆಲ್ಲ ಇರಬೇಕು, ಅದು ಹೇಗೆ ಮುಂದುವರೆಯಬೇಕು, ಮಾತಾಡುತ್ತಿರುವರ ಸರದಿ ಮುಗಿಸುವ ಹಕ್ಕನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬೆಲ್ಲ ಸಂಗತಿಗಳನ್ನು ಕುರಿತಂತೆ ಹೆಂಗಸರಿಗೆ ಇರುವ ನಿಲುವುಗಳು ಒಂದು ಬಗೆಯವಾದರೆ, ಗಂಡಸರಲ್ಲಿ ಇರುವ ನಿಲುವುಗಳು ಇನ್ನೊಂದು ಬಗೆಯವು. ಗಂಡಸರು ಮತ್ತು ಹೆಂಗಸರು ಒಟ್ಟಾಗಿ ಮಾತಾಡುವಾಗ ಆ ಮಾತುಕತೆ ಮುರಿದು ಬೀಳದೆ ಮುಂದುವರೆಯುವಂತೆ ಮಾಡಲು ಹೆಂಗಸರು ಹೆಚ್ಚು ಪ್ರಯತ್ನ ಮಾಡುವುದನ್ನು ಗುರುತಿಸಲಾಗಿದೆ.

ಹೆಂಗಸರು ಮತ್ತು ಗಂಡಸರು ಒಟ್ಟಾಗಿ ಮಾತಾಡುವಾಗ ಉಂಟಾಗುವ ತಪ್ಪು ತಿಳಿವಳಿಕೆಗಳಿಗೆ ಅವರವರ ಮಾತುಕತೆಯ ನಿಯಮಗಳು ಮತ್ತು ನೆಲೆಗಳು ಬೇರೆ ಬೇರೆಯಾಗಿರುವುದೇ ಕಾರಣವೆಂದು ಕೆಲವರು ಹೇಳಬಹುದು(ಮಾಲ್ಟ್‌ಜ್ ಮತ್ತು ಬೋರ್ಕರ್ ೧೯೮೨, ಟ್ಯಾನನ್ ೧೯೯೧). ಗಂಡಸರೊಡನೆ ಮಾತುಕತೆಗೆ ತೊಡಗುವ ಹೆಂಗಸು ಗಂಡಸರ ಮಾತುಕತೆಯ ನೆಲೆಗಳನ್ನು ಕರಗತ ಮಾಡಿಕೊಂಡಿಲ್ಲದಿರುವುದರಿಂದ ತೊಂದರೆಗೆ ಒಳಗಾಗುತ್ತಾಳೆ ಎಂದೂ ಹೇಳಬಹುದು. ಗಂಡಸರೂ ಹೆಂಗಸರೂ ಒಟ್ಟಾಗಿ ಮಾತಾಡುವಾಗ ಮಾತುಕತೆಯಲ್ಲಿ ಇನ್ನೊಬ್ಬರ ನಿಲುವುಗಳನ್ನು ಒಪ್ಪುವ, ಇನ್ನೊಬ್ಬರ ಸರದಿಗೆ ಮನ್ನಣೆ ಕೊಡುವ, ಒಬ್ಬರಿಗೊಬ್ಬರು ಸಹಕರಿಸುವಂತೆ ಮಾಡುವ, ಪ್ರಶ್ನೆಗಳನ್ನು ಕೇಳುವ ಮೂಲಕ ಮಾತುಕತೆ ಸಲೀಸಾಗಿ ಮುಂದುವರೆಯುವಂತೆ ಮಾಡುವ ಹೊಣೆಯನ್ನು ಹೆಂಗಸರೇ ಹೆಚ್ಚಾಗಿ ಹೊತ್ತುಕೊಳ್ಳುತ್ತಾರೆ. ಒಟ್ಟಾರೆಯಾಗಿ ನೋಡಿದಾಗ ಗಂಡಸರು ಮೇಲುಗೈ ಪಡೆದುಕೊಳ್ಳುತ್ತಾರೆ. ಹಾಗಾಗಿ, ಮಾತುಕತೆಯ ಎರಡು ಮಾದರಿಗಳು ಮತ್ತು ಈಗಿರುವ ಅಧಿಕಾರದ ರಚನೆಗಳ ನಡುವೆ ಒಂದಿಷ್ಟು ಹೊಂದಾಣಿಕೆಗಳು ನಡೆಯಬೇಕೆಂದು ತಿಳಿಯುವುದು ತಪ್ಪೇನೂ ಅಲ್ಲ.

ಹಾಗಿದ್ದಲ್ಲಿ ಹೆಂಗಸರು ತಮ್ಮ ಮಾತುಕತೆಯ ಬಗೆಯನ್ನು ಬದಲಾಯಿಸಿಕೊಂಡು ಈ ಗೋಜಲಿನಿಂದ ಹೊರಬರಬೇಕೆಂದು ಹೇಳುವುದು ಎಷ್ಟು ಸರಿ? ಅವರ ಮಾತುಕತೆಯ ಕೆಲವು ನೆಲೆಗಳು ಎಲ್ಲರ ಮಾತುಕತೆಯಲ್ಲಿ ನೆಲೆಗೊಳ್ಳುವುದು ಸರಿ ಎಂದು ಕೆಲವರಿಗೆ ತೋರಲೂಬಹುದು. ಅಂದರೆ, ಗಂಡಸರೇ ತಾವು ರೂಢಿಸಿಕೊಂಡ ಮಾತುಕತೆಯ ನೆಲೆಗಳ ಇಕ್ಕಟ್ಟಿನಿಂದ ಹೊರಬಂದು ಕೊಂಚ ಒಳಗೊಳ್ಳುವ ಹಾದಿಯನ್ನು ಹಿಡಿಯಬೇಕೆಂದು ಹೇಳುವುದೇ ಸರಿ. ಈ ನಿಟ್ಟಿನಲ್ಲಿ ಚರ್ಚೆಗಳನ್ನು ನಡೆಸಿದಾಗ ಕೆಲವು ಗಂಡಸರು ಹೇಳಿದ್ದು ಹೀಗಿದೆ – ಅವರಲ್ಲಿ ಕೆಲವರಿಗೆ ಗಂಡಸರೊಡನೆ ಮಾತಾಡುವಾಗಲೂ ತಮ್ಮ ನಿಲುವುಗಳನ್ನು  ಹೇಳಲಾಗದೆ ಉಳಿಯುವ ಪರಿಸ್ಥಿತಿ ಅನುಭವಕ್ಕೆ ಬಂದಿದೆ. ಲಂಡನ್‌ನಲ್ಲಿರುವ ಹ್ಯಾಕ್ನಿ ಡೌನ್ಸ್‌ಬಾಯ್ಸ್ ಸ್ಕೂಲ್‌ನ ಅಧ್ಯಾಪಕರು ಒಂದು ವಿಶೇಷ ತರಬೇತಿಯನ್ನು ನೀಡಲು ಉದ್ದೇಶಿಸಿದರು. ಅದರ ಗುರಿ ಹುಡುಗರು ತಮ್ಮ ಬಗ್ಗೆಯೇ ತಾವು ಹೇಳಿಕೊಳ್ಳುವುದನ್ನು ಕಲಿಸುವುದು. ತರಗತಿಯಲ್ಲಿ ಹುಡುಗರು ತಂತಮ್ಮಲ್ಲಿ ಮಾತಾಡಿಕೊಳ್ಳುವಾಗ ಹೆಚ್ಚು ಪೈಪೋಟಿಯಿಂದ ಮಾತಾಡುತ್ತಿದ್ದರು. ಅವರ ಮಾತುಕತೆಯಲ್ಲಿ ಬಿರುಸುತನವಿರುತ್ತಿತ್ತು.  ಆ ಮಾತುಕತೆಗಾಗಿಯೇ ಒಂದು ಹೊಸ ಶೈಲಿಯನ್ನು ರೂಪಿಸಿಕೊಂಡಿದ್ದರು. ಇದೆಲ್ಲ ಕಾರಣಗಳಿಂದ ಅವರಾರೂ ತಮ್ಮ ಸ್ವಂತದ ಸಂಗತಿಗಳನ್ನು ಚರ್ಚಿಸುವಲ್ಲಿ ಸೋಲುತ್ತಿದ್ದರು. ಗಂಡಸರು ಹೀಗೆ ತಮ್ಮ ನಿಲುವನ್ನು ಹೇಳಿಕೊಳ್ಳಲಾಗದೆ ಸೋಲುತ್ತಿರುವುದು ಅವರೆಲ್ಲರಿಗೂ ಒಂದು ಸಮಸ್ಯೆಯಾಗಿದೆ ಎಂದು ಇತ್ತೀಚಿನ ಹಲವು ಅಧ್ಯಯನಗಳು ತೋರಿಸಿವೆ.

ಮಾತುಕತೆಯ ಈ ಎರಡು ಮಾದರಿಗಳಿಂದ ಹೆಂಸಗರಿಗೆ ಇರುವಷ್ಟೇ ತೊಂದರೆ ಗಂಡಸರಿಗೂ ಇದ್ದಂತಿದೆ. ಗಂಡಸರು ಹೆಂಗಸರು ಒಟ್ಟಾಗಿ ಮಾತಾಡುವಾಗ ಹೆಂಗಸರ ಸಹಕರಿಸುವ, ಒತ್ತಾಸೆಯಾಗುವ ಮಾತಿನ ಬಗೆಗೆ ಅವರಿಗೇ ತೊಡರುಗಾಲಾಗಿ ಗಂಡಸರು ಮೇಲುಗೈ ಪಡೆಯುವಂತೆ ಮಾಡುತ್ತದೆ. ಕಾನೂನು ವ್ಯವಸ್ಥೆ, ರಾಜಕೀಯ ವ್ಯವಸ್ಥೆ -ಮುಂತಾದ ಕಡೆಗಳಲ್ಲಿ ಇದೇ ಕಾರಣಕ್ಕೆ ಹೆಂಗಸರ ಧ್ವನಿ ಉಡುಗಿ ಹೋದಂತೆ ಆಗಿರುತ್ತದೆ. ಏಕೆಂದರೆ, ಅಲ್ಲೆಲ್ಲ ಪುರುಷ ಮಾದರಿಗಳು ನೆಲೆಯೂರಿದೆ. ಗಂಡಸರ ಪೈಪೋಟಿಯ ಮಾದರಿಯಿಂದಾಗಿ ತಮ್ಮ ಭಾವನೆಗಳನ್ನು ಹೊರಹಾಕಿ, ಇನ್ನೊಬ್ಬರೊಡನೆ ಗೆಳೆತನ ಬೆಳೆಸಲು ಹೆಂಗಸರಿಗೆ ಅಡ್ಡಿಯಾಗುತ್ತದೆ. ‘‘ಭಾಷೆಯು ಪುರುಷ ಚಹರೆಯನ್ನು ಕಾಯ್ದುಕೊಳ್ಳುವ ಒಂದು ಆಯುಧವಾಗಿದೆಯೇ ಹೊರತು ಇನ್ನೊಬ್ಬರೊಡನೆ ನಂಟು ಬೆಳೆಸಲು ಇಲ್ಲವೇ ತಮ್ಮ ಭಾವನೆಗಳ ಲೋಕವನ್ನು ನಿಷ್ಠೆಯಿಂದ ಹೊರಹಾಕಲು ನೆರವಾಗುವ ಸಾಧನವಾಗಿಲ್ಲ’’(ಸೈಡ್ಲರ್ ೧೯೮೯).