ಒಂದು ವೇಳೆ ನಾವು ಗಂಡುವಾಕ್ಯ ಇಲ್ಲವೇ ಹೆಣ್ಣುವಾಕ್ಯ ಎಂಬ ಹಣೆಚೀಟಿಯನ್ನು ಅಂಟಿಸಲು ಉತ್ಸುಕರೇ ಆಗಿದ್ದಲ್ಲಿ, ಪ್ರಕಟಣೆಗೆ ಸಂಬಂಧಿಸಿದ ಒಂದು ಚಿಕ್ಕ ಪ್ರಸಂಗವನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಇದು ‘ರಹ್ಲಾಖಾನ್’ಎಂಬ ಬರೆಹಗಾರರಿಗೆ ಸಂಬಂಧಿಸಿದ ಕತೆ. ಈ ಬರೆಗಾರರು ಒಬ್ಬ ಬ್ರಿಟಿಷ್ ನಾಗರಿಕ ಗಂಡಸು. ಬದುಕನ್ನು ಒಬ್ಬ ಪಾಕಿಸ್ತಾನಿ ಹೆಂಗಸಿನ ಕಣ್ಣಲ್ಲಿ ನೋಡುತ್ತಿದ್ದೇನೆಂದು ಆತ ಬರೆದ. ತನ್ನ ಕೃತಿಯನ್ನು ‘ಆತ್ಮ ಚರಿತ್ರೆ’ ಎಂದು ಕರೆದ. ಕರ್ತೃವಿನ ಹೆಸರು ರಹ್ಲಾಖಾನ್ ಎಂದು ನಮೂದಿಸಿದ.  ಇದನ್ನು ವಿರಾಗೊ ಪ್ರೆಸ್‌ಗೆ ಪ್ರಕಟಣೆಗೆಂದು ಕಳುಹಿಸಿದ. ಹಸ್ತಪ್ರತಿಯನ್ನು ಪರಿಶೀಲಿಸಿ ಪ್ರಕಟಣೆಗೆ ಒಪ್ಪಿ ಏಜೆಂಟ್‌ರೊಡನೆ ಮಾತುಕತೆ ಮೊದಲಾಯಿತು. ಆದರೆ, ರಹ್ಲಾಖಾನ್ ಎಂಬುವವರು ಗಂಡಸು ಎಂದು ಗೊತ್ತಾದ ಮೇಲೆ ಹಸ್ತಪ್ರತಿಯನ್ನು ಹಾಗೆಯೇ ಇಡಲಾಯಿತು. ಮುದ್ರಣಗೊಳ್ಳಲೇ ಇಲ್ಲ. ಹೆಂಗಸಿನ ಬರವಣಿಗೆ ಎಂದು ಹೇಳಿಕೊಳ್ಳುವ ಕೃತಿಯನ್ನು ಹೆಂಗಸೇ ಬರೆದಿರಬೇಕು ಎಂದು ವಾದಿಸಲು ಯಾವ ಕಾರಣಗಳೂ ಇಲ್ಲ.  ಯಾವುದೇ ಬಗೆಯ ವಾಕ್ಯರಚನೆಯನ್ನು ಬೇಕಾದರೂ ತಜ್ಞರಾದವರು ಅನುಕರಿಸಬಲ್ಲರು. ತಕ್ಕ ಶಿಕ್ಷಣ, ಶೈಲಿ ಪ್ರಭೇದಗಳ ಪರಿಚಯಗಳಿರಬೇಕು ಅಷ್ಟೇ. ಈ ಪ್ರಶ್ನೆ ನಮ್ಮ ಮುಂದೆ ತಂದಿಟ್ಟಿರುವುದು ಅಧಿಕೃತತೆಯ ಸಮಸ್ಯೆಯನ್ನೇ ಹೊರತು, ಗೊತ್ತಾದ ಭಾಷಾಶೈಲಿಯ ಸಮಸ್ಯೆಯನ್ನಲ್ಲ. ಹೆಂಗಸರು ಅನುಕರಿಸಲಾಗದ ವಿಶಿಷ್ಟ ಶೈಲಿಯಲ್ಲಿ ಬರೆಯುತ್ತಾರೆ ಎನ್ನುವುದಾದರೆ, ಆಗ ರಹ್ಲಾಖಾನ್ ಘಟನೆ ನಡೆಯುವುದು ಸಾಧ್ಯವೇ ಇರುತ್ತಿರಲಿಲ್ಲ.

ಜಂಡರ್ ಮತ್ತು ವಾಕ್ಯವಿನ್ಯಾಸಗಳ ಸಂಬಂಧದ ಪ್ರಶ್ನೆಯನ್ನು ಮತ್ತಷ್ಟು ಉಪಯುಕ್ತವಾದ ನೆಲೆಯಲ್ಲಿ ಚರ್ಚಿಸುವ ಪ್ರಸ್ತಾಪವನ್ನು ಸಾಂದ್ರಾ ಗಿಲ್‌ಬರ್ಟ್ ಮತ್ತು ಸೂಸನ್ ಗೂಬರ್ ನಮ್ಮ ಮುಂದಿಟ್ಟಿದ್ದಾರೆ. ಇವರಿಬ್ಬರೂ ಎಡ್ವರ್ಡ್ ಸೈದ್ ಅವರ ವಿಚಾರಗಳನ್ನು ನೆಲೆಯಾಗಿಸಿಕೊಂಡು ತಮ್ಮ ಪ್ರಸ್ತಾವವನ್ನು ರೂಪಿಸಿದ್ದಾರೆ. ಇವರ ಪ್ರಕಾರ ‘‘ಹೆಣ್ಣು ಸಾಹಚರ್ಯ ಕಾಂಪ್ಲೆಕ್ಸ್’ ಎಂಬುದೊಂದಿದೆ (೧೯೮೮) ಈ ಕಾಂಪ್ಲೆಕ್ಸ್ ಜಾಗ್ರತಗೊಂಡಾಗ ಓದುಗರಿಗೆ ಬರೆಹಗಾರ, ಇಲ್ಲವೇ ಪಾತ್ರ, ಸಾಹಿತ್ಯ ಪರಂಪರೆಯ ಯಾವ ಧಾರೆಯೊಡನೆ ನಂಟು ಹೊಂದಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಗಂಡಸರು ಮುಖ್ಯರಾಗಿರುವ ಪ್ರಧಾನಧಾರೆಯ ಜೊತೆಯಲ್ಲಿ ನಂಟನ್ನು ಹೊಂದಿದ್ದರೆ ಅದರಲ್ಲಿ ನೆಲೆಗೊಂಡ ಮೌಲ್ಯ ವ್ಯವಸ್ಥೆಗಳು ‘ಗಂಡುತನ’ವನ್ನು ಮುಂಚೂಣಿಗೆ ತಂದಿರುತ್ತದೆ. ಹಾಗಿಲ್ಲದೆ, ಹೆಣ್ಣು ಪರಂಪರೆಯ ಜೊತೆಯಲ್ಲಿ ಆ ಬರಹ ನಂಟು ಪಡೆದಿದೆ ಎಂದೂ ಗೊತ್ತಾಗಬಹುದು. ಈ ಅರಿವು ಅಷ್ಟು ಸರಳವಾದದ್ದಲ್ಲ. ಏಕೆಂದರೆ, ಹೆಂಗಸರು ಬರೆಯುವಾಗ ತಮ್ಮನ್ನು ತಾವು ಮೂಲೆ ಗುಂಪಾದವರು ಎಂದು ಭಾವಿಸಿಯೇ ಬರೆಯುತ್ತಿರುತ್ತಾರೆ. ಈ ಅನಿಸಿಕೆಗೆ ಸಿಲುಕಿದ ಬರಹಗಾರ್ತಿಯರು ಹಲವು ಬಗೆಯ ಒತ್ತಡದೊಳಗೆ ಸಿಲುಕಿ ಆಯ್ಕೆಗಳನ್ನು ಮಾಡಿಕೊಳ್ಳಬೇಕಾದ ಇಕ್ಕಟ್ಟಿನಲ್ಲಿರುತ್ತಾರೆ. ತಾನು ಮೂಲೆಗುಂಪಾದ ಬರೆಹಗಾರರ ಪ್ರತಿನಿಧಿ ಎಂಬ ಅರಿವಿನಿಂದ ಬರೆಯ ಹೊರಡುವ ಯಾರಿಗಾದರೂ ಇಂತಹ ಇಕ್ಕಟ್ಟುಗಳು ಅನಿವಾರ್ಯ. ಗಿಲ್‌ಬರ್ಟ್ ಮತ್ತು ಗೂಬರ್ ಈ ಕಾಂಪ್ಲೆಕ್ಸ್ ಅನ್ನು ಗುರುತಿಸಲು ಬೇಕಾದ ವಿಧಾನಗಳನ್ನು ವಿವರವಾಗಿ ಚರ್ಚಿಸಿದ್ದಾರೆ. ನಾವಿಲ್ಲಿ ಲೈನ್ನ್ ಪಿಯರ್ಸ್ ಅವರ ವಿಚಾರಗಳನ್ನು ಪರಿಗಣಿಸಲಿದ್ದೇವೆ. ಈಕೆ ಓದುಗರಿಗೆ ಕೃತಿಯು ಯಾವ ದಿಕ್ಕಿನ ಓಲುವೆಯನ್ನು ತೋರಿಸುವುದು ಎಂದು ಗುರುತಿಸಲು ಪಠ್ಯದಲ್ಲೇ ಇರುವ ಕುರುಹುಗಳನ್ನು ಕುರಿತು ಚರ್ಚಿಸಿದ್ದಾಳೆ. (೧೯೯೧) ಇದರಲ್ಲಿ ಮೂರು ಸಾಧ್ಯತೆಗಳಿವೆ – ೧) ಮೊದಲನೆಯದಾಗಿ ಬರೆಹಗಾರ್ತಿಯರೂ ಗಂಡಸಿನಂತೆ ಬರೆದು ತಮ್ಮನ್ನು ತಾವು ಗಂಡುಪರಂಪರೆಯಲ್ಲಿ ಗುರುತಿಸಿಕೊಳ್ಳುವರು. ೨) ಎರಡನೆಯದಾಗಿ, ಹೆಣ್ಣುತನದ ಸಿದ್ಧ ಮಾದರಿಯಲ್ಲೇ ಬರೆದರೂ, ತಮ್ಮನ್ನು ಗಂಡು ಪರಂಪರೆಯಲ್ಲೇ ಗುರುತಿಸಿಕೊಳ್ಳುವರು.  ಅವರು ಯಾವ ಬದಲಾವಣೆಗೂ ಕಾರಣರಾಗುವುದಿಲ್ಲ. ಹಾಗಾಗಿ, ಗಂಡುಪರಂಪರೆಗೆ ಸೇರಿಹೋಗುತ್ತಾರೆ. ೩) ಮೂರನೆಯದು, ಸ್ತ್ರೀವಾದಿ ನೆಲೆ. ಇಲ್ಲಿ ಬರೆಹಗಾರ್ತಿಯರು ಹೆಣ್ಣುಪರಂಪರೆಯಲ್ಲಿ ಗುರುತಿಸಿಕೊಳ್ಳುತ್ತಾರೆ. ಅದಕ್ಕಾಗಿ ಪಠ್ಯದಲ್ಲಿ ಹಲವು ಕುರುಹುಗಳನ್ನು ನೆಲೆಗೊಳಿಸುತ್ತಾರೆ.

ಮೊದಲನೆಯ ಮಾದರಿಗೆ ಈ ಹಿಂದೆ ನಾವು ಉಲ್ಲೇಖಿಸಿದ ಐರಿಸ್ ಮುರ್ಡೋಕ್ ರ ಬರವಣಿಗೆ ತಕ್ಕ ಉದಾಹರಣೆ. ಈ ಬರೆಹ ಪ್ರಧಾನಧಾರೆಯ ಕಥನ ಬಗೆಯನ್ನೇ ಬಿಡದೆ ಅನುಕರಿಸುತ್ತದೆ. ಭಾಷೆ ಮತ್ತು ಅದರ ವಸ್ತು ವಿನ್ಯಾಸದಲ್ಲಿ ಅನಿರೀಕ್ಷಿತವಾದದ್ದು ಏನೂ ಇಲ್ಲ. ಯಾವ ಅಂತಸ್ಥ ಸೂಚಕಗಳನ್ನೂ ತಲೆ ಎತ್ತಲು ಆ ಬರಹ ಬಿಡುವುದಿಲ್ಲ. ಅನಿಟ ಬ್ರೂಕ್ನರ್ ಅವರ ಕಾದಂಬರಿ ‘ಹೊಟೆಲ್ ಡು ಲ್ಯಾಕ್’ (೧೯೮೪) ನ ಈ ಮುಂದಿನ ಭಾಗ ಮೇಲೆ ಹೇಳಿದ ಎರಡನೇ ಬಗೆಯ ಮಾದರಿಗೆ ಇನ್ನೊಂದು ಸೂಕ್ತ ಉದಾಹರಣೆ.

From the window all that could be seen was a receeding area of grey. It was to be supposed that beyond the grey garden which seemed to sprout nothing but the stiffish leaves of some unfamilar plant, lay the vast grey lake, spreading like an anaesthetic towards the invisible further show and beyond that in imagination only yet verified by the brouchure, the peak of the Dent d’oche, on which snow might already be slightly and silently falling.  For it was late September, out of seasnon, the tourist had gone, the rates were reduced and there were few inducements for visitors in this small town at the water’s edge, whose inhabitants, uncommunicative to begin with, were frequently rendered taciturn by the dense cloud that descended for days at a time and then vanished without warning to reveal a new land scape, full of colour and incident; boats skimning on the lake, passengers at the landing stage an open air market the outline of the gaunt remains of  a ೧೩th century cassel, seams of white on the far mountain, on the cheerful uplands to the south a rising backdrop of apple tree, a fruit sparkling with emblamatic significance.

ಈ ಬರವಣಿಗೆಯ ಶೈಲಿಯಲ್ಲಿ ಸಾಂಪ್ರದಾಯಿಕ ನೆಲೆಯ ಹೆಣ್ಣುತನವಿದೆ. ಆದರೆ, ನಾವು ಸಿದ್ಧ ಮಾದರಿಯಲ್ಲಿ ಹೆಣ್ಣುತನವನ್ನು ಒಳಗೊಳ್ಳುವ ಬಗೆಗೂ, ಪ್ರಜ್ಞಾಪೂರ್ವಕವಾಗಿ ಹೆಣ್ಣುಪರಂಪರೆಯೊಡನೆ ಗುರುತಿಸಿಕೊಳ್ಳುವುದಕ್ಕೂ ಇರುವ ಭಿನ್ನತೆಯನ್ನು ಗಮನಿಸಬೇಕು.  ಮೇಲಿನ ಉದಾಹರಣೆಯ ವಾಕ್ಯರಚನೆಯಲ್ಲಿ ಹೆಚ್ಚು ಪ್ರಮಾಣದ ಕ್ರಿಯಾವಿಶೇಷಣಗಳ ಬಳಕೆ ಇದೆ. ಇದೊಂದು ಸಾಂಪ್ರದಾಯಿಕ ಹೆಣ್ಣು ಬರವಣಿಗೆಯ ಲಕ್ಷಣ. ಉದಾಹರಣೆಗೆ, ಈ ಎರಡು ವಾಕ್ಯಭಾಗಗಳನ್ನು ನೋಡಿ. (೧) From the window all that could be seen was a receeding area of  grey  (೨) It was to be supposed that beyond the grey gardens, which seemed to sprout nothing but stiffish leaves of some unfamilar plant….

ಎರಡನೆಯ ವಾಕ್ಯದ ವಿನ್ಯಾಸ ಪೆಡಸಾಗಿದೆ, ಸುತ್ತಿ ಬಳಸಿ ಹರಿಯುತ್ತದೆ. ಪದಗುಚ್ಛಗಳನ್ನು ಒಂದರೊಳಗೊಂದು ಸೇರಿಸುವ ಬಗೆ ಇದೆ. ಒಂದು ನಿದರ್ಶನ – ‘‘There were pure inducements for visitors in this small town at the water’s edge, whose inhabitants, uncommunicative to begin with, were frequently rendered taciturn by the dense cloud.’’

ಈ ವರ್ಣನೆಯಲ್ಲಿ ಒಂದು ಭೂ ವಿವರದ ಚಿತ್ರಣ ಮಾತ್ರ ಇಲ್ಲ. ಕೇಂದ್ರ ಪಾತ್ರ ತನ್ನಲ್ಲಿ ಆ ವಿವರಗಳು ಯಾವ ಭಾವನೆಗಳನ್ನು ಉಂಟು ಮಾಡುತ್ತಿವೆಯೋ ಅದನ್ನು ಬಣ್ಣಿಸಲಾಗಿದೆ. ಇದಕ್ಕೆ ವಿರುದ್ಧವಾಗಿ ಗಂಡುದೃಷ್ಟಿಯಿಂದ ಭೂವಿವರ ಒಂದನ್ನು ಬಣ್ಣಿಸುವ ಮಾದರಿಯನ್ನು ನೋಡೋಣ. ಇದು ಮಾಲ್ಕಂ ಲೋರಿ (೧೯೮೪) ಅವರ ‘Under the Valcano’ ಕತೆಯಿಂದ ಆಯ್ದುಕೊಂಡದ್ದು ‘‘Two mountain chains traverse the republic roughly from north to south forming between them a number of vallies and plateaux over looking one of these vallies which is dominated by two valcanoes, lies ೬೦೦೦ ft above sea level, the town of Quahnahuac.  It is situated well south of the tropic of Cancer, to be exact on the ೧೯th parallel, in about the same latitude as the Revillagigedo islands to the west in the pacific, or very much farther west, the southern most tip of, the east on the Atlantic seaboard of Yucatan near the border of British Honduras, Hawaii – and as the port of Tzucoxto or very much farther east the town of Juggernaut, in India on the bay of Bengal.

The walls of the town, which is built on a hill, are high, the streets and lanes tortuous and broken, the roads winding.  A fine American style high-way leads in from the north, but is lost in it’s narrow streets and comes out a goat track. Quanhnahuac posseses eitghteen churches and fifty seven cantinas.  It also boast a golf court and no fewer than four hundred swimming pools, public and private, filled with the water that ceaslessly pours down from the mountains, and many splendid hotels.

The hotel casion de la selva stands on a slightly higher hill just out side the town near the railway station.  It is built for back from the main highway and surrounded by gardens and terraces which command a spacious view in every direction.  Palacial, a certain air of desolate spendour prevades it.  For it is no longer a casino.  You may not even dice for drink in the Bar.  The ghosts of ruined gamblers haunting.  No one ever seems to swim in the magnificiant olympic pool.  The spring boats stand empty and mournful.  It’s Jai – alai -courts are grass grown and deserted.  Two tennis courts only are kept up in the season.

ಈ ಪಠ್ಯದಲ್ಲಿ ಮಾಹಿತಿ ನೀಡುವ ಪ್ರವಾಸಿಗಳ ಕೈಪಿಡಿ ಮಾದರಿಯ ಬರವಣಿಗೆ ಇದೆ.  ಭೂದೃಶ್ಯಗಳನ್ನು ಭಾವನಾತ್ಮಕ ನೆಲೆಯಲ್ಲಿ ಬಣ್ಣಿಸುವ ಬಗೆ ಇಲ್ಲಿಲ್ಲ. ಸುಮ್ಮನೆ ಮಾಹಿತಿಯನ್ನು ಒಂದೊಂದಾಗಿ ತೆಗೆದುಕೊಡುವ ಯಂತ್ರದಂತೆ ಬರೆಹಗಾರರು ವರ್ತಿಸಿದ್ದಾರೆ.  ಈ ಬರೆಹದಲ್ಲಿ ಬ್ರೂಕ್ನರ್ ಬರೆಹದಲ್ಲಿ ಕಾಣುವಂತೆ ನಿರೂಪಕರನ್ನು ಪತ್ತೆ ಮಾಡುವುದು ಸುಲಭವಲ್ಲ. ಉದಾಹರಣೆಗೆ ಲೋರಿಯವರ ಪಠ್ಯದ ವಾಕ್ಯ ಹೀಗಿದೆ’ –

‘‘The walls of the town, which is built on a hill, are high, the streets and lanes are tortuous and broken, the roads winding’’ ನಿರೂಪಕರು ಗೋಡೆ, ಬೀದಿ ಮತ್ತು ರಸ್ತೆಗಳ ಬಗ್ಗೆ ತಳೆದ ದೃಷ್ಟಿಕೋನ ಗೊತ್ತಾಗುವುದಿಲ್ಲ. ನಿರ್ಭಾವುಕರಾಗಿ ಇದ್ದದ್ದನ್ನು ಇದ್ದಂತೆ ಹೇಳುವ ಬಗೆ ಇದೆ. ಪಟ್ಟಣದಲ್ಲಿ ಜನರಿದ್ದಾರೋ ಇಲ್ಲವೋ ಗೊತ್ತಾಗುವುದಿಲ್ಲ. ಆದರೆ, ಜನರಿಗೆ ಬೇಕಾದ ಹತ್ತಾರು ಸೌಕರ್ಯಗಳಾದ ಗಾಲ್ಫ್ ಕೋರ್ಟ್, ಚರ್ಚ್, ಈಜುಕೊಳ ಮುಂತಾದವುಗಳ ವಿವರಗಳಿವೆ. ಮೊದಲೆರಡು ಕಂಡಿಕೆಗಳು ಕೇವಲ ಭೂವಿವರಗಳನ್ನು ನೀಡುತ್ತವೆ. ಇದು ಬಹುಮಟ್ಟಿಗೆ ಗಂಡು ಮಾದರಿಯ ಬರವಣಿಗೆ. ಮೇಲಿನ ಎರಡೂ ಉದಾಹರಣೆಗಳು ಹೆಣ್ಣು ಮತ್ತು ಗಂಡು ಬರವಣಿಗೆಯ ಸಿದ್ಧ ಮಾದರಿಗಳನ್ನು ಪ್ರತಿನಿಧಿಸುತ್ತವೆ.

ಬರೆಹಗಾರ್ತಿಯವರಿಗೆ ಲಭ್ಯವಿರುವ ಮೂರನೆಯ ಆಯ್ಕೆಯೆಂದರೆ, ತಾವು ಮುಖ್ಯಧಾರೆಯ ಸಾಹಿತ್ಯ ಪರಂಪರೆಯಿಂದ ಹೊರಬಂದು ಬರೆಯುತ್ತಿದ್ದೇವೆ ಎನ್ನುವುದನ್ನು ತಮ್ಮ ಓದುಗರಿಗೆ ಮನವರಿಕೆ ಮಾಡಿಕೊಡಲು ಬೇಕಾದ ಹೆಣ್ಣುಸಾಹಚರ್ಯದ ಕುರುಹುಗಳನ್ನು ಬರವಣಿಗೆಯಲ್ಲಿ ಇರಿಸುವುದು. ಈ ಬಗೆಯನ್ನು ಆಯ್ದುಕೊಂಡ ಬರವಣಿಗೆಗಳಿವೆ. ಎಲೆನ್ ಗಲ್ಫೋರ್ ಬರೆದ Mole Cutpurse (೧೯೯೩) (ಮೋಲ್ ಕಟ್‌ಪರ್ಸ್) ಎಂಬ ಕೃತಿಯಿಂದ ಆಯ್ದ ಭಾಗವೊಂದನ್ನು ನೋಡೋಣ. ಈ ಬರವಣಿಗೆಯಲ್ಲಿ ಓದುಗರಿಗೆ ಕೃತಿಯ ಪಾತ್ರವು ೧೭ ನೇ ಶತಮಾನದಲ್ಲಿ ಆಗಿಹೋದ ವ್ಯಕ್ತಿಯೊಬ್ಬರ ಚರಿತ್ರೆಯನ್ನು ಮರಳಿ ರಚಿಸುವ ಅಥವಾ ಮರಳಿ ಗಳಿಸುವ ಪ್ರಯತ್ನದಲ್ಲಿ ತೊಡಗಿರುವುದು ಗೊತ್ತಾಗುತ್ತದೆ. ೧೭ ನೇ ಶತಮಾನದ ಇಂಥ ಪಾತ್ರಗಳು ಥಾಮಸ್ ಡೆಕರ್ ಮತ್ತು ಥಾಮಸ್ ಮಿಡ್ಲ್‌ಟನ್ ಬರೆದ ‘The roaring girl’ (ದ ರೋರಿಂಗ್ ಗರ್ಲ್)  ಕೃತಿಯಲ್ಲಿ ಚಿತ್ರಿತವಾಗಿದೆ. ಗಲ್‌ಫೋರ್ಡ್‌ಳ ಬರವಣಿಗೆಯ ಉಲ್ಲೇಖ ಹೀಗಿದೆ – ‘whoever first named her the roaring girl was no liar.  She had a voice like a bellowing fox and a laugh like a love – sick lion – and when she strutted through the streets the crowds parted and stood goglling…. Moll loved an audiance; she would have been a player if they would let her….

ಕೇಂದ್ರಪಾತ್ರವಾದ ಮೋಲ್‌ಳಲ್ಲಿ ಪಾರಂಪರಿಕವಾಗಿ ಎತ್ತಿ ಹೇಳಲಾದ ಹೆಣ್ಣುಗುಣಗಳು ಇಲ್ಲ. ಹಾಗೆ ನೋಡಿದರೆ ಅವಳಲ್ಲಿ ಇರುವುದು ಹೆಣ್ಣಿಗೆ ಸಲ್ಲದು ಎನ್ನಲಾದ ಗುಣಗಳೇ. ಆದರೆ, ಪಠ್ಯವು ಅವಳ ವರ್ತನೆಯ ಬಗ್ಗೆ ಯಾವ ತೀರ್ಮಾನವನ್ನೂ ಮಾಡುವುದಿಲ್ಲ. ನಿರೂಪಕರು ಕೊಂಚ ಅಣಕದ ನೆಲೆಯಲ್ಲಿ ನಿಂತು ಹೊರಗಿನವರಂತೆ ನೋಡುತ್ತಾರೆ. ಉದಾಹರಣೆಗೆ ಇಲ್ಲಿ ಬಳಸಲಾದ Strutted ಪದವನ್ನು ಅತಿಯಾದ ಆತ್ಮವಿಶ್ವಾಸವನ್ನು ತೋರಿಸುವವರ ಬಗ್ಗೆ ಮಾತ್ರ ಹೇಳಲಾಗುತ್ತದೆ. ಹೆಂಗಸು ಹೇಗೆ ವರ್ತಿಸಬೇಕೆಂದು ಯಾವುದೇ ಸಿದ್ಧನಮೂನೆ ಬುದ್ದಿವಾದಗಳನ್ನು ಕೃತಿ ಹೇಳುವುದಿಲ್ಲ. ಆದರೆ, ಮೋಲ್‌ಳ ವರ್ತನೆಗಳನ್ನು ವಿಶಿಷ್ಟವಾದದ್ದು ಎಂದು ಗುರುತಿಸಲೂ ಹೋಗುವುದಿಲ್ಲ. ಅವಳು ನಡೆದುಕೊಳ್ಳುವ ರೀತಿಯನ್ನು ಕುರಿತಂತೆ ಮೌಲ್ಯಾತ್ಮಕ ತೀರ್ಪುಗಳನ್ನು ನೀಡದಿದ್ದರೂ, ಈ ಕೃತಿಯನ್ನು ಯಾವ ಪರಂಪರೆಯ ಭಾಗವಾಗಿ ಬರೆಯಲಾಗಿದೆ ಎಂದರೆ ಜಂಬವುಳ್ಳ ಹೆಣ್ಣು ಪಾತ್ರಗಳು ಕೃತಿಯಲ್ಲಿದ್ದೂ, ಅದು ಸಲ್ಲದ ನಡವಳಿಕೆ ಎಂಬ ಯಾವ ತೀರ್ಮಾನವನ್ನೂ ನೀಡಿರದಿದ್ದರೆ ಆಗ ಓದುಗರು ಈ ಕೃತಿಯು ಹೆಣ್ಣುಸಾಹಚರ್ಯವನ್ನು ಹೊಂದಿದ ಸ್ತ್ರೀವಾದಿ ಬರೆಹಗಳೆಂದು ಗುರುತಿಸಿಯೇ ಬಿಡುತ್ತಾರೆ. ಈ ಪಠ್ಯದಲ್ಲಿ ಬಳಸಲಾದ ಹೋಲಿಕೆಗಳನ್ನು ನೋಡಿ. ಹೆಣ್ಣು ಮುಖ್ಯಪಾತ್ರವಾಗಿರುವಾಗ ಎಂಥ ಹೋಲಿಕೆಗಳನ್ನು ನೀಡಬೇಕೆಂದು ಬರೆಹಪರಂಪರೆಯು ನಂಬಿದೆಯೋ, ಅದಕ್ಕಿಂತ ಭಿನ್ನವಾದ ಹೋಲಿಕೆಗಳು ಇಲ್ಲಿವೆ. ಈ ಹೋಲಿಕೆಗಳಲ್ಲಿ ‘ಹೆಣ್ಣುತನ’ಎಂಬುದಿಲ್ಲ. ಹಾಗೆಂದು ಪಾರಂಪರಿಕವಾಗಿ, ವೀರೋಚಿತವಾದ ಗಂಡುಪಾತ್ರಗಳ ಸಂದರ್ಭದಲ್ಲಿ ನೀಡುವ ಹೋಲಿಕೆಗಳಂತಿವೆ ಎಂದು ನಿರ್ವಿವಾದವಾಗಿ ಹೇಳಲು ಆಗುತ್ತಿಲ್ಲ. ನಾವಿಲ್ಲಿ ಪಠ್ಯದ ವಸ್ತುವಿನ್ಯಾಸವನ್ನು ವಿಶ್ಲೇಷಿಸುವುದಕ್ಕಿಂತ ಹೆಚ್ಚಾಗಿ ಓದುಗರು ತಮ್ಮ ಓದಿನ ಬಗೆಯನ್ನು ಪಲ್ಲಟಗೊಳಿಸಿಕೊಳ್ಳಲು ನೀಡುವ ಸೂಚನೆಯನ್ನು ಗಮನಿಸುತ್ತಿದ್ದೇವೆ. ಹೀಗೆ ಮಾಡುವ ಮೂಲಕ ಓದುಗರು ಪಾತ್ರಗಳ ಬಗ್ಗೆ ಕೆಲವು ತೀರ್ಮಾನಗಳನ್ನು ಮಾಡಿಕೊಳ್ಳಲೇ ಬೇಕಾಗುತ್ತದೆ.

ಸಾಂಪ್ರದಾಯಿಕ ಬರವಣಿಗೆಯ ಪರಂಪರೆಯೊಳಗೇ ಇದ್ದುಕೊಂಡು ಬರೆಯಲು ತೊಡಗುವ ಬರಹಗಾರ್ತಿಯರಿಗೆ ಹಲವು ಆಯ್ಕೆಗಳಿರುತ್ತವೆ ಎಂದಾಯಿತು. ಅವರು ಗಂಡು ಬರವಣಿಗೆಯ ಶೈಲಿಯನ್ನಾಗಲೀ ಇಲ್ಲವೇ ಹೆಣ್ಣುಬರವಣಿಗೆಯ ಶೈಲಿಯನ್ನಾಗಲೀ ಅನುಕರಿಸಬಹುದು.  ಹಾಗಲ್ಲದೆ, ತಮ್ಮ ಬರವಣಿಗೆಯನ್ನು ಓದುವ ಹೆಣ್ಣುಓದುಗರು, ಈ ಬರಹದಲ್ಲಿ ಪಾರಂಪರಿಕ ನಿಲುವುಗಳನ್ನು ಪಲ್ಲಟಗೊಳಿಸುವ ಯತ್ನವನ್ನು ಪ್ರಜ್ಞಾಪೂರ್ವಕವಾಗಿ ಮಾಡಲಾಗಿದೆ ಎನ್ನುವುದನ್ನು ಗುರುತಿಸುವಂತೆ, ಕುರುಹುಗಳನ್ನು ಬಿಡಬಹುದು. ಇಂತಹ ಕುರುಹುಗಳು ಒಂದು ಶೈಲಿಯನ್ನು ಇನ್ನೊಂದು ಶೈಲಿಗಿಂತ ಬೇರೆ ಎಂದು ಗುರುತಿಸಲು ನೆರವಾಗುತ್ತವೆ.  ಉದಾಹರಣೆಗೆ, ವಾಕ್ಯವಿನ್ಯಾಸವನ್ನು ನೋಡೋಣ. ಆಡಳಿತಾತ್ಮಕ ದಾಖಲೆಗಳು, ಕಾನೂನು ಬರಹಗಳು, ಇಲ್ಲವೇ ಶಾಸ್ತ್ರಬರಹಗಳು ಅನುಸರಿಸುವ ಔಪಚಾರಿಕ ಶೈಲಿಯನ್ನೇ ಬಳಸಿಕೊಂಡರೆ, ಆಗ ಓದುಗರಿಗೆ ಇಂಥ ಬರಹಗಳು ಗಂಡು ಪರಂಪರೆಯ ಜೊತೆಗೆ ಸೇರಬಯಸುತ್ತಿವೆ ಎಂದು ಗೊತ್ತಾಗುತ್ತದೆ. ಹೀಗಿಲ್ಲದೆ, ಆಡುಮಾತಿನ ಅನೌಪಚಾರಿಕ ವಿನ್ಯಾಸಗಳಿಗೆ, ಇಲ್ಲವೇ ಔಪಚಾರಿಕತೆಯನ್ನು ಮುರಿಯಲೆಂದೇ ಬೇರೆ ಬೇರೆ ಬಗೆಯ ಭಾಷಾಪ್ರಬೇಧಗಳನ್ನು ಬೆರಸುವಿಕೆಗೆ ಮೊರೆ ಹೋದ ಬರವಣಿಗೆಯ ಶೈಲಿಯು, ಸಿದ್ಧಸಾಹಿತ್ಯ ಪರಂಪರೆಯನ್ನು ನಿರಾಕರಿಸಿ ತಾನು ಹೆಣ್ಣು ಪರಂಪರೆಯೊಡನೆ ಹೆಜ್ಜೆ ಹಾಕುವುದನ್ನು ಸೂಚಿಸುತ್ತವೆ. ಇಂತಹ ಸಾಹಚರ್ಯಗಳನ್ನು ಗುರುತಿಸಲು ಪದಕೋಶವು ನೆರವಾಗುತ್ತದೆ.  ಸಿದ್ಧ ಜಂಡರ್ ಮಾದರಿಗಳಿಗೆ ಅಂಟಿಕೊಂಡ ಪದಗಳನ್ನೇ ಬೇಕೆಂದು ಬಳಸಬಹುದು. ಇಲ್ಲವೇ ಹಾಗೆ ಬಳಸಿಯೂ ತಾನು ಪಲ್ಲಟಗೊಳಿಸುತ್ತಿರುವುದನ್ನು ಸೂಚಿಸಲೂಬಹುದು. ಇಂತಹ ಕುರುಹುಗಳನ್ನು, ಬಳಸಿರುವ ಸಂದರ್ಭಗಳಿಂದ ಬೇರೆ ಮಾಡಿ, ಬಿಡಿಯಾಗಿ ವಿಶ್ಲೇಷಿಸಲು ಹೋಗಬಾರದು. ಏಕೆಂದರೆ, ಆ ಕುರುಹುಗಳಲ್ಲಿ ಅಣಕದ ದೃಷ್ಟಿಕೋನವಿರಬಹುದು. ಇಲ್ಲವೇ ಪಾತ್ರಗಳನ್ನು ಸಕಾರಾತ್ಮಕ ಅಥವಾ ನಕಾರಾತ್ಮಕ ನೆಲೆಯಲ್ಲಿ ಇರಿಸಿರುವುದನ್ನು ಸೂಚಿಸುವ ಉದ್ದೇಶವಿರಬಹುದು. ಏನೇ ಆಗಲಿ, ಬರಹಗಾರರು ತಾವು ಹೊಂದಿರುವ ಸಾಹಚರ್ಯವನ್ನು ಪ್ರಜ್ಞಾಪೂರ್ವಕವಾಗಿ ಪ್ರಕಟಿಸುತ್ತಿರುವ ನೆಲೆಗಳೆಂದು ಈ ಕುರುಹುಗಳನ್ನು ಪರಿಗಣಿಸಬೇಕು.  ಪಠ್ಯದ ವಿಷಯಗಳಲ್ಲೂ ಕುರುಹು ಅಡಕವಾಗಿರುತ್ತದೆ. ಮುಖ್ಯ ಪಾತ್ರ ಹೆಣ್ಣಾಗಿದ್ದು ಆಕೆಗೂ ಉಳಿದ ಹೆಣ್ಣು ಪಾತ್ರಗಳಿಗೂ ಇರುವ ಸಂಬಂಧದ ಮೇಲೆ ಬರಹದ ಒತ್ತು ಹೆಚ್ಚಾಗಿದ್ದರೆ, ಆಗ ಅದೊಂದು ಹೆಣ್ಣುಸಾಹಚರ್ಯದ ಪಠ್ಯವಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಹೆಣ್ಣುಸಾಹಚರ್ಯ ಎಂದ ಕೂಡಲೇ ಬರಹವನ್ನು ಹೆಣ್ಣು ಗಂಡುಗಳು ಬರೆದದ್ದು ಎಂದು ಗುರುತಿಸುವುದಲ್ಲ. ಅಲ್ಲದೆ, ಜೈವಿಕವಾಗಿ ಹೆಣ್ಣು ಗಂಡುಗಳಲ್ಲಿ ಭಿನ್ನತೆ ಇರುವುದರಿಂದಲೇ ಅವರ ಪಠ್ಯಗಳಲ್ಲಿ ಶೈಲಿಯ ನೆಲೆಯ ಭಿನ್ನತೆ ಇರುತ್ತದೆ ಎಂದು ನಂಬುವುದನ್ನು ಹೆಣ್ಣುಸಾಹಚರ್ಯ ಪರಿಕಲ್ಪನೆ ಒಪ್ಪುವುದಿಲ್ಲ.

ಶಿಶ್ನಕೇಂದ್ರೀಯತೆ ಮತ್ತು ಹೆಂಗಸರ ಬರವಣಿಗೆ ಕುರಿತ ತೀರ್ಮಾನಗಳು

ಕೊನೆಗೆ, ನಾನು ಹೆಂಗಸರ ಬರವಣಿಗೆಯನ್ನು ಕುರಿತ ಚಿಂತನೆಗಳು ನಡೆಯುತ್ತಿರುವ ಬಗೆಯನ್ನು ಪರಿಶೀಲಿಸುತ್ತೇನೆ. ಜಂಡರ್ ಮತ್ತು ಸಾಹಿತ್ಯದ ಚರ್ಚೆಗಳು ಈಗಲೂ ಶಿಶ್ನ ಕೇಂದ್ರಿತವಾಗಿವೆ. ಗಂಡಸರ ಬರವಣಿಗೆಯ ಎದುರಿಗೆ ಹೆಂಗಸರ ಬರವಣಿಗೆಯನ್ನು ಇರಿಸಿ ನೋಡುವುದಕ್ಕಿಂತ, ಒಟ್ಟು ಮಾನವ ರಚಿತ ಬರವಣಿಗೆಯಲ್ಲಿ ಹೆಂಗಸಿನ ಬರವಣಿಗೆಯ ಸ್ಥಾನವೇನು ಎಂಬುದನ್ನು ಚರ್ಚಿಸುತ್ತಿದ್ದೇನೆ. ಬ್ರಿಟಿಷ್, ಇಲ್ಲವೇ ಅಮೆರಿಕನ್ ಬರವಣಿಗೆಗಳ ಚರಿತ್ರೆಗಳಿವೆ. ಆದರೆ, ಗಂಡು ಬರವಣಿಗೆಗಳ ಚರಿತ್ರೆಗಳಿಲ್ಲ. ಹೆಂಗಸರ ಬರವಣಿಗೆಗಳ ಚರಿತ್ರೆಗಳನ್ನು ಬರೆಯಲಾಗುತ್ತಿದೆ. ‘‘ಗಂಡಸಿನ ಕೃತಿ’’ ‘ಒಂದು ಕೃತಿ’ ಮಾತ್ರ.  ಆದರೆ ಹೆಂಗಸಿನ ಕೃತಿ ‘ಹೆಂಗಸಿನ ಕೃತಿ’ಎಂದು ಪರಿಗಣಿತವಾಗುತ್ತದೆ’ಎಂದು ಕ್ರಿಸ್ಟೀನ್ ರೋಶೆ ಪೋರ್ಟ್ ಹೇಳಿದ್ದಾಳೆ. (೧೯೮೧) ಹೀಗಿದ್ದರೂ, ಹೆಂಗಸರ ಬರವಣಿಗೆಗಳಲ್ಲಿ ಸಮಾನ ಲಕ್ಷಣಗಳಿರುವುದಕ್ಕಿಂತ ಹಲವು ಭಿನ್ನತೆಗಳೇ ಕಾಣುತ್ತವೆ.

ಶಿಶ್ನಕೇಂದ್ರೀಯತೆಯು ಕಾಣಿಸಿಕೊಳ್ಳುವ ಇನ್ನೊಂದು ವಲಯವಿದೆ. ಅದೆಂದರೆ, ಗಂಡಸರ ಮಾದರಿಯನ್ನು ಆದರ್ಶವೆಂದು ತಿಳಿದು, ಹೆಂಗಸರ ಬರವಣಿಗೆಯನ್ನು ಕುರಿತು ತೀರ್ಮಾನಗಳನ್ನು ನೀಡುವುದು. ಉದಾಹರಣೆಗೆ, ವಿಲಿಯಂ ಗಾಸ್ ಹೇಳುವುದನ್ನು ನೋಡಿ – ‘‘ಹೆಂಗಸರು ತಮ್ಮಲ್ಲಿ ಅಡಗಿರುವ ಅಸಹನೆ, ಕೊಲೆಗಡುಕತನ, ಕಾಮುಕತೆಗಳನ್ನು ಗುರುತಿಸಿಕೊಳ್ಳದಿದ್ದರೆ, ಅವರಿಗೆ ಬಿಡುಗಡೆ ಇಲ್ಲ. ಅವರ ಬರವಣಿಗೆಯು ಯಜಮಾನನ ಬರವಣಿಗೆಯ ಕಾಂತಿಹೀನ ಅನುಕರಣೆಯಾಗಿರುತ್ತದೆ. ಅತ್ಯುತ್ತಮ ಶೈಲಿಗೆ ಕಸುವು ತುಂಬುವ ಒತ್ತಡಗಳು ಅವರ ಬರಹಗಳಲ್ಲಿ ನೋಡಲಾರೆವು’’ (೧೯೭೭) ಗಾಸ್ ಇಲ್ಲಿ ಗಂಡು ಲೈಂಗಿಕತೆಯ ಸಿದ್ಧ ಮಾದರಿಯನ್ನು ಅವಲಂಬಿಸಿದ ರೂಪಕವನ್ನು ಬಳಸಿದ್ದಾನೆ. ಅಂದರೆ, ಹೆಂಗಸರು ಉತ್ತಮ ಬರವಣಿಗೆಯನ್ನು ಮಾಡಬೇಕೆಂದರೆ, ತಮ್ಮ ಲೈಂಗಿಕತೆಯಲ್ಲಿ ಗಂಡಸನ್ನು ಆರೋಪಿಸಿಕೊಳ್ಳಬೇಕೆಂದಾಯ್ತು. ಅಲ್ಲದೆ, ಈಗ ಬರೆಯುತ್ತಿರುವ ಹೆಂಗಸರು ಇಂತಹ ಆರೋಪಿತ ಸ್ಥಿತಿಯಲ್ಲಿ ಬರೆಯುತ್ತಿಲ್ಲವೆಂದೂ ಪರೋಕ್ಷವಾಗಿ ಹೇಳಿದ್ದಾನೆ. ಅವರು ಕೇವಲ ಗಂಡುಬರಹಗಳ ಅನುಕರಣೆ ಮಾಡುತ್ತಿದ್ದಾರೆಂದೂ ಹೇಳಲಾಗಿದೆ. ಅವರು ಗಂಡು ಲೈಂಗಿಕತೆಯನ್ನು ಆರೋಪಿಸಿಕೊಂಡಾಗ ಮಾತ್ರ ನಿಜವಾಗಿ ‘‘ಬಿಡುಗಡೆ ಪಡೆದ’’ ವರಂತೆ ಬರೆಯಬಲ್ಲರು ಎಂದು ಹೇಳಿರುವುದು ವಿರೋಧಾಭಾಸವೇ ಸರಿ. ಶಿಶ್ನ ಕೇಂದ್ರಿತ ನೆಲೆಯ ವಿಮರ್ಶಕರು ಹೆಂಗಸರ ಬರವಣಿಗೆಯ ಬಗೆಗೆ ತಳೆದಿರುವ ದೃಷ್ಟಿಕೋನಕ್ಕೆ ಮತ್ತು ಪೂರ್ವಾಗ್ರಹಗಳಿಗೆ ಈ ಮೇಲಿನ ಉಲ್ಲೇಖವು ತಕ್ಕ ಉದಾಹರಣೆಯಾಗಿದೆ.

ಹಲವು ಸ್ತ್ರೀವಾದಿಗಳು ಶಿಶ್ನ ಕೇಂದ್ರೀಯತೆಯು ಮಾಡಿರುವ ಅನ್ಯಾಯವನ್ನು ಟೀಕಿಸಿದ್ದಾರೆ.  ಶಿಶ್ನ ಕೇಂದ್ರಿತ ವಿಮರ್ಶಕರು, ಹೆಂಗಸರು ಯಾವುದೋ ಕೆಲವು ಬಗೆಯ ಬರವಣಿಗೆಯ ಶೈಲಿಗೆ ಸೀಮಿತಗೊಂಡಿದ್ದಾರೆಂದೂ ಮತ್ತು ಅವರ ಬರವಣಿಗೆಯಲ್ಲಿ ಗುಣಾತ್ಮಕವಾದುದು ಏನೂ ಇಲ್ಲವೆಂದೂ ಬಣ್ಣಿಸಿದ್ದಾರೆ. ಕೆಲವು ಹೆಂಗಸರು ಇಂಥ ವಿಮರ್ಶಕರ ನಿಲುವುಗಳನ್ನು ಒಪ್ಪಿದ್ದಾರೆ. ಜಾಯ್ಸ್ ಕರೋಲ್ ಓಟ್ಸ್ ಹೇಳುವುದನ್ನು ನೋಡಿ ‘Harward guide to contemporary American Literature’ ಎಂಬ ಪುಸ್ತಕದಲ್ಲಿ ‘ಹೆಣ್ಣು ಬರಹಗಾರರು’ಎಂಬ ಅಧ್ಯಾಯದಲ್ಲಿ ‘‘ನನ್ನ ಬರಹಗಳನ್ನು ಚರ್ಚಿಸುತ್ತಾ ಅಲ್ಲಿ ಹೆಂಗಸರ ಸಮಸ್ಯೆಗಳನ್ನು ಕುರಿತಂತೆ ಇರುವ ನನ್ನ ಕೃತಿಗಳನ್ನು ಮಾತ್ರ ಪರಿಗಣಿಸಿ ಉಳಿದವನ್ನು ನಿರ್ಲಕ್ಷಿಸಿದರೆ ನನಗೆ ಹೇಗನ್ನಿಸಬೇಡ?’’ ತನ್ನನ್ನು ‘ಕೇವಲ’ಬರಹಗಾರ್ತಿ ಎಂದು ಪರಿಗಣಿಸುವುದನ್ನು ಆಕೆ ಪ್ರತಿಭಟಿಸುತ್ತಾಳೆ. ಏಕೆಂದರೆ, ಹಾಗೆ ಹೇಳುವ ಮೂಲಕವೇ ತನಗೆ ಕೆಲವು ಋಣಾತ್ಮಕ ನೆಲೆಗಳನ್ನು ಆರೋಪಿಸಿದಂತಾಗಿದೆ ಎನ್ನುವುದು ಅವಳ ನಿಲುವು (೧೯೮೬) ಬರಹಗಾರ್ತಿಯರನ್ನು ಕೇವಲ ಹೆಂಗಸರು ಎಂದು ಪರಿಗಣಿಸಿದಾಗ ಆ ಬಗ್ಗೆ ತಕರಾರೆತ್ತಿದರೆ ಸಾಲದು. ಅದಕ್ಕೂ ಮಿಗಿಲಾಗಿ ಹೀಗೆ ವರ್ಗೀಕರಿಸಿದಾಗ ಹೆಂಗಸು ಎಂಬುದಕ್ಕೆ ಇರುವ ಅವಗುಣಗಳೆಲ್ಲವನ್ನೂ ಬರಹಕ್ಕೂ ರವಾನಿಸುವುದನ್ನೂ ವಿರೋಧಿಸಬೇಕು.

ಕೆಲವು ಸ್ತ್ರೀವಾದಿಗಳು ಹೆಂಗಸರಿಗೆ ಆರೋಪಿಸಿದ ಗುಣಗಳನ್ನು ತಲೆಯ ಮೇಲೆ ಹೊತ್ತು ಮೆರೆದಾಡುತ್ತಿದ್ದಾರೆ. ಆ ಅವಗುಣಗಳೆಲ್ಲ ಅಂತಸ್ಥವಾಗಿವೆಯೆಂದೂ, ಅವು ಸಾಮಾಜಿಕವಾಗಿ ರಚನೆಯಾದುವುದಗಳಲ್ಲವೆಂದೂ ಹೇಳುತ್ತಿದ್ದಾರೆ. ನಾನೀಗ ಶಿಶ್ನ ಕೇಂದ್ರೀಯತೆಯ ರಚನೆಗಳ ತಳಹದಿಯನ್ನೇ ಪ್ರಶ್ನಿಸಬಯಸುತ್ತೇನೆ. ಈ ರಚನೆಗಳು ಹೆಣ್ಣು ಎಂದು ಗುರುತಿಸಲಾದ ವರ್ಗವನ್ನು ಮತ್ತಷ್ಟು ಹೀನಾಯಗೊಳಿಸುವ ಹುನ್ನಾರವಾಗಿದೆ ಎಂದು ತೋರಿಸಿಕೊಡುತ್ತೇನೆ.  ‘ Thinking about Woman’ಎಂಬ ತನ್ನ ಪುಸ್ತಕದಲ್ಲಿ ಮೇರಿ ಎಲ್ಮನ್ ಈ ಹುನ್ನಾರವನ್ನು ವಿವರಿಸಿದ್ದಾಳೆ. ಹೆಂಗಸರ ನಿಲುವುಗಳು, ಗುಣಗಳು, ಬರವಣಿಗೆಗಳು ನಿರ್ಲಕ್ಷ್ಯಕ್ಕೊಳಗಾಗುವುದನ್ನು ತೋರಿಸಿಕೊಟ್ಟಾದ್ದಾಳೆ. ಎಲ್ಲವನ್ನೂ ಗಂಡಸಿಗೆ ಹೋಲಿಸುವ ಮೂಲಕವೇ ಈ ನಿರ್ಲಕ್ಷ್ಯವನ್ನು ಸಾಧಿಸಲಾಗಿದೆ ಎನ್ನುತ್ತಾಳೆ (೧೯೬೮) ಗಂಡು ಮತ್ತು ಹೆಣ್ಣು ಎಂದು ನಾವು ಬಣ್ಣಿಸುತ್ತಿರುವ ವರ್ಗಗಳಲ್ಲಿ ಇರುವ ಭಿನ್ನತೆಗೂ, ಲೈಂಗಿಕ ಇಲ್ಲವೇ ಜಂಡರ್ ನೆಲೆಯ ಭಿನ್ನತೆಗೂ ಯಾವುದೇ ನಂಟಿಲ್ಲ. ಎಲ್ಲರೂ ಬಳಸುತ್ತಿರುವ ಪದಗಳು ಸಹಜವಾಗಿಯೇ ನಿಜವನ್ನೇ ಹೇಳುತ್ತಿರಬೇಕು ಎಂದು ನಂಬಿಬಿಟ್ಟಿದ್ದೇವೆ ಎನ್ನುವುದು ಅವಳ ವಾದ. ಹೆಲೆನ್ ಸೀಕ್ಸೂ ತನ್ನ ‘Sortics’ಕೃತಿಯಲ್ಲಿ ಇದೇ ಮಾತನ್ನು ಹೇಳಿದ್ದಾಳೆ. ಗಂಡು ಮತ್ತು ಹೆಣ್ಣು ಎಂಬ ಪದಗಳು ಮೂಲಭೂತವಾದ ವಿರೋಧವನ್ನು ಹೊಂದಿರುವ ಪದಗಳೆಂದೂ, ಅವು ಉಳಿದ ಇಂಥವೇ ವಿರೋಧವುಳ್ಳ ಪದಗಳ ಪ್ರತಿನಿಧಿಗಳೆಂದೂ ಹೇಳುತ್ತಾಳೆ.

ಅವಳು ಎಲ್ಲಿದ್ದಾಳೆ?

ಕ್ರಿಯಾತ್ಮಕತೆ / ನಿಷ್ಕ್ರಿಯತೆ

ಸೂರ್ಯ / ಚಂದ್ರ

ಸಂಸ್ಕೃತಿ / ಪ್ರಕೃತಿ

ಹಗಲು / ರಾತ್ರಿ

ತಂದೆ / ತಾಯಿ

ಮೆದುಳು / ಹೃದಯ

ಸ್ಪಷ್ಟತೆ / ಸೂಕ್ಷ್ಮತೆ

ಅರ್ಥ / ಭಾವನೆ

ಗಂಡು / ಹೆಣ್ಣು                 (ಸೀಕ್ಸೂ ೧೯೮೧)

ಹೀಗೆ ಪಟ್ಟಿ ಮಾಡುವ ಮೂಲಕ ಪರಸ್ಪರ ವಿರೋಧವುಳ್ಳ ಈ ಜೋಡಿ ಪದಗಳ ನಡುವೆ ನಿಲ್ಲದ ತಾಕಲಾಟವಿದೆ ಎಂದೂ, ಇವೆಲ್ಲವೂ ಜೈವಿಕ ವ್ಯತ್ಯಾಸಗಳಿಗೆ ಅನುಗುಣವಾಗಿ ರಚಿತವಾಗಿವೆ ಎಂದೂ ಸೂಚಿಸುತ್ತಾಳೆ. ಈ ಜೋಡಿ ಪದಗಳ ನಡುವೆ ಸಮಾನ ಸ್ಥಿರತೆಯ ಸಂಬಂಧವಿಲ್ಲ.  ಒಂದು ಇನ್ನೊಂದಕ್ಕಿಂತ ಮೇಲು ಎಂಬ ಚಿಂತನೆ ಇದೆ. ದಿಟವಾಗಿ ಗಂಡು ಭಾಗ ಮೇಲು, ಹೆಣ್ಣುಭಾಗ ಕೀಳು ಎನಿಸಿದೆ.

ಹೆಂಗಸರ ಬರವಣಿಗೆಯನ್ನು ನೋಡಲು ಗಂಡಸರ ಬರವಣಿಗೆಯ ವಿಮರ್ಶೆಯಲ್ಲಿ ಬಳಸಿದ್ದಕ್ಕಿಂತ ಬೇರೆಯೇ ಮಾನದಂಡಗಳನ್ನು ಜಾರಿಗೆ ಕೊಟ್ಟ ವಿಮರ್ಶಕರ ದೊಡ್ಡ ದಂಡೇ ಇದೆ. ಇವರೆಲ್ಲರೂ ಹೆಂಗಸರ ಬರವಣಿಗೆಗಳೆಲ್ಲವನ್ನೂ ಒಂದು ಬೇರೆ ಚೀಲಕ್ಕೆ ತುಂಬುತ್ತಾರೆ. ಹೆಂಗಸರ ಕೃತಿಗಳೆಲ್ಲವನ್ನೂ ಒಂದೇ ಚೌಕಟ್ಟಿನಲ್ಲಿ ನೋಡುತ್ತಾರೆ. ಅವೆಲ್ಲದರ ನಡುವೆ ಏನೋ ಸಮಾನ ಅಂಶವಿದೆ ಎಂದು ಅವರು ತಿಳಿಯಲು ಇರುವ ತರ್ಕವೆಂದರೆ ಅವೆಲ್ಲವನ್ನೂ ಬರೆದವರು ಹೆಂಗಸರು ಎಂಬ ಸಂಗತಿ ಮಾತ್ರ. ಆದರೆ ಗಂಡಸರ ಕೃತಿಗಳನ್ನು ಖಂಡಿತಾ ಹೀಗೆ ನೋಡುವುದಿಲ್ಲ.

ಜೊಆನ ರಸ್ ತಮ್ಮ ಬರಹದಲ್ಲಿ ಹೇಳುವ ಮಾತನ್ನು ಗಮನಿಸೋಣ. ಹೆಂಗಸರ ಬರವಣಿಗೆಗಳನ್ನು ಈಗ ವಿಮರ್ಶಿಸುತ್ತಿರುವ ಪರಿಯನ್ನು ಆಕೆ ತಿರಸ್ಕಾರದ ಜೊತೆಗೆ ಕಟಕಿಯ ಮಾತುಗಳಲ್ಲಿ ವಿಶ್ಲೇಷಿಸಿದ್ದಾಳೆ. ಈವರೆಗಿನ ವಿಮರ್ಶೆಗಳು ಹೆಂಗಸರ ಬರಹಗಳಿಗೆ ಸಾಹಿತ್ಯಕ ಸ್ಥಾನವನ್ನು ನೀಡಬಾರದೆಂಬ ಗುರಿಯನ್ನು ಹೊಂದಿರುವುದನ್ನು ತೋರಿಸುತ್ತಾಳೆ. ಹೀಗೆ ಕೀಳು ಮಾಡಲು ಯಾವ ಯಾವ ತಂತ್ರಗಳನ್ನು ಬಳಸಲಾಗಿದೆ ಎನ್ನುವ ಪಟ್ಟಿಯನ್ನು ನೀಡಿದ್ದಾಳೆ- ‘‘ಹೆಂಗಸರು ಏನೋ ಬರೆದುಬಿಟ್ಟಾಗ ಮಾಡುವುದೇನು? ಮೊದಲ ತಂತ್ರವಾಗಿ ಅದನ್ನು ಆಕೆ ಬರೆದಳೆಂಬುದನ್ನೇ ನಿರಾಕರಿಸುವುದು. ‘ಹೆಂಗಸು ಬರೆಯಲಾರಳು. ಹಾಗಾಗಿ ಯಾರೋ (ಗಂಡಸು) ಅದನ್ನು ಬರೆದಿರಬೇಕು ಎಂದುಬಿಟ್ಟರೆ ಆಯಿತಲ್ಲ.’ ಎಂದು ವಾದಿಸುತ್ತಾಳೆ. ಮಾರ್ಗರೆಟ್ ಕ್ಯಾವೆಂಡಿಶ್, ಎಲಿಸಾಬೆತ್ ವಿಗಿ – ಲೆಬ್ರಾನ್, ಮಾರ್ಗರೆಟಾ ಹ್ಯಾವರ್‌ಮಾನ್, ಅಡಿಲೇಡಾ ಲಾಬಿಲ್-ಗಯರ್ಡ್ -ಮತ್ತಿತರ ಬರಹಗಾರ್ತಿಯರ ಮೇಲೆ ಇಂಥವೇ ಆರೋಪಗಳನ್ನು ಹೊರಿಸಲಾಗಿದೆ. ಇವರೆಲ್ಲರೂ ತಮ್ಮ ತಮ್ಮ ಗಂಡಂದಿರು ಬರೆದ ಕೃತಿಗಳನ್ನು ತಮ್ಮದೆಂದು ಹೇಳಿಕೊಂಡರಂತೆ. ಹೆಂಗಸರ ಬರವಣಿಗೆಯನ್ನು ಕೀಳು ಮಾಡುವ ಇನ್ನೂ ಸೂಕ್ಷ್ಮವಾದ ವಿಧಾನಗಳಿವೆ. ಕೃತಿಯನ್ನು ಯಾರೂ ಬರೆಯಲಿಲ್ಲ, ‘‘ಅದು ತನ್ನನ್ನು ತಾನೇ ರೂಪಿಸಿಕೊಂಡಿದೆ’’ಎಂದು ಹೇಳುವುದು ಇಂಥ ಒಂದು ವಿಧಾನ. ಉದಾಹರಣೆಗೆ ಮೇರಿ ಶೆಲ್ಲಿಯ ಬಗ್ಗೆ ಎಲನ್ ಮೋರ್ಸ್ ಹೇಳುವುದನ್ನು ಕೇಳಿ ‘‘ಮೇರಿ ಶೆಲ್ಲಿಯು ಒಂದು ಪಾರದರ್ಶಕ ಮಾಧ್ಯಮ. ಅವಳ ಸುತ್ತ ಸುಳಿಯುತ್ತಿದ್ದ ವಿಚಾರಗಳು ಅವಳ ಮೂಲಕ ಪ್ರಕಟಗೊಂಡವು’’ ಎಂದು ಹೇಳುತ್ತಾಳೆಯೇ ಹೊರತು ಮೇರಿ ಶೆಲ್ಲಿಯು ಸ್ವಸಾಮರ್ಥ್ಯದ ಕರ್ತೃವೆಂದು ಒಪ್ಪುವುದಿಲ್ಲ. ಹೆಂಗಸರ ಬರವಣಿಗೆಯನ್ನು ಕೀಳುಗಳೆಯುವ ಮತ್ತೊಂದು ವಿಧಾನವನ್ನು ರಸ್ ಹೇಳಿದ್ದಾಳೆ. (೧೯೮೪) ಅದೆಂದರೆ, ಬರೆದ ಹೆಂಗಸಿನ ‘‘ಒಳಗಿದ್ದ ಗಂಡಸೊಬ್ಬ ಅದನ್ನು ಬರೆದ’’ಎಂದು ಹೇಳುವುದು. ಅಂದರೆ, ಹೆಂಗಸು ತನ್ನೊಳಗಿರುವ ಗಂಡು ವ್ಯಕ್ತಿತ್ವದ ನೆರವಿನಿಂದ ಬರೆಯುತ್ತಾಳೆ ಎನ್ನುವುದು. ಸಿಲ್ವಿಯಾ ಪ್ಲಾತ್‌ಳ ‘ಏರಿಯಲ್’ಕೃತಿಗೆ ಮುನ್ನುಡಿ ಬರೆಯುತ್ತಾ ರಾಬರ್ಟ್ ಲೊವೆಲ್ ಹೇಳಿದ್ದನ್ನು ನೋಡಿ. ‘‘ಸಿಲ್ವಿಯಾ ಪ್ಲಾತ್ (ಇದನ್ನು ಬರೆಯುವಾಗ) ಯಾವುದೋ ಒಂದು ಕಾಲ್ಪನಿಕವಾದ ಹೊಸ ಕಟ್ಟುಪಾಡುಗಳನ್ನು ಮೀರಿದ ವ್ಯಕ್ತಿಯಾಗಿ ಪರಿವರ್ತಿತವಾಗಿರುತ್ತಾಳೆ… ಬರೆದವಳು ಒಬ್ಬ ವ್ಯಕ್ತಿ. ಇಲ್ಲವೇ ಒಬ್ಬ ಹೆಂಗಸು ಎನಿಸುವುದೇ ಇಲ್ಲ. ಕವಯಿತ್ರಿಯೊಬ್ಬಳ ರಚನೆ ಖಂಡಿತವಾಗಿಯೂ ಅಲ್ಲ’’. ಆದರೆ ಗಂಡು ಬರಹಗಾರರ ಬರವಣಿಗೆಗೆ ಇಂಥ ಮಾನದಂಡಗಳನ್ನು ಬಳಸಿದ ಉದಾಹರಣೆಗಳಿಲ್ಲ.

ಕೆಲವು ಸಂದರ್ಭಗಳಲ್ಲಿ ಕೆಲವು ಕೃತಿಗಳನ್ನು ಗಂಡಸರು ಬರೆದರೆಂದು ಬಹುಕಾಲ ತಿಳಿದಿದ್ದು, ಬಳಿಕ ಅವು ಹೆಂಗಸರು ಬರೆದದ್ದೆಂದು ಗೊತ್ತಾಗಿದೆ. ಇಂಥ ಪ್ರಸಂಗಗಳಲ್ಲಿ ಕೃತಿಕಾರರ ಜಂಡರ್‌ಗೆ ಓದುಗರು ನೀಡುವ ಪ್ರತಿಕ್ರಿಯೆಯಲ್ಲಿ ಇರುವ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯ. ಚಾರ್ಲೆಟೆ ಬ್ರಾಂಟೆ ತನ್ನ ‘ಜೇನ್ ಐರ್’ ಕೃತಿಯನ್ನು ಕರರ್ ಬಿಲ್ ಎಂಬ ಹೆಸರಿನಲ್ಲಿ ಬರೆದಿದ್ದಳು. ಈ ಹೆಸರಿನಿಂದ ಅದು ಗಂಡೋ ಹೆಣ್ಣೋ ಎಂಬುದು ಗೊತ್ತಾಗುವಂತಿರಲಿಲ್ಲ.  ಮೊದಲಿಗೆ ಬೆಲ್ ಒಬ್ಬ ಗಂಡಸು ಎಂದು ತಿಳಿದು ಅವನ ಕಾದಂಬರಿಯನ್ನು ಶಕ್ತಿಯುತ ಬರವಣಿಗೆ ಎಂದು ಹೊಗಳಲಾಯಿತು. ಆದರೆ ಯಾವಾಗ ಈ ಕಾದಂಬರಿ ಬರೆದದ್ದು ಬ್ರಾಂಟೆ ಎಂದು ಗೊತ್ತಾಯಿತೋ ಆ ಬಳಿಕ, ಆ ಕಾದಂಬರಿಯ ಶೈಲಿಯಲ್ಲಿರುವ ‘ಹುಳುಕುಗಳನ್ನು’ಎತ್ತಿ ತೋರಿಸುವ ಸಮೀಕ್ಷೆಗಳು ಪ್ರಕಟವಾದವು.

ಈ ಪ್ರಸಂಗವನ್ನು ಪರಿಶೀಲಿಸುತ್ತಾ ಎಲೈನ್ ಶೋವಾಲ್ತರ್ ಹೇಳಿದ ಮಾತಿದು – ‘‘ಕೆಲವು ವಿಮರ್ಶಕರು ಈ ಕೃತಿ ಒಬ್ಬ ಗಂಡಸು ಬರೆದದ್ದೇ ಆಗಿದ್ದರೆ, ಒಂದು ಶ್ರೇಷ್ಠ ಕಾದಂಬರಿಯೇ ಸರಿ. ಇದನ್ನೊಬ್ಬಳು ಹೆಂಗಸರು ಬರೆದಿದ್ದರೆ ಅದೊಂದು ಖೇದದ ಮತ್ತು ಜಿಗುಪ್ಸೆಯ ಘಟನೆ ಎಂದರು. ಈ ಮಾತು ಹೇಳಿದ ವಿಮರ್ಶಕರಲ್ಲಿ ಕಿಂಚಿತ್ತೂ ವಿನಯವಿರಲಿಲ್ಲ’’. (೧೯೭೮)ಸಿಸಿಲ್ ಬಾಡ್‌ಕರ್ ಬರೆದ ಕವಿತೆಗಳ ಬಗ್ಗೆ ಇಂಥದೇ ಪ್ರಸಂಗ ನಡೆದುದನ್ನು ತೊರಿಲ್ ಮೊಯಿ ವಿವರಿಸಿದ್ದಾಳೆ. ಸಿಸಿಲ್ ಬಾಡ್‌ಕರ್ ಎಂಬುದು ಗಂಡೋ ಹೆಣ್ಣೋ ಎಂದು ಗೊತ್ತಾಗುವ ಹೆಸರಲ್ಲ. ಯಾರು ‘ಇದನ್ನು ಬರೆದದ್ದು ಗಂಡಸು’ಎಂದು ತಿಳಿದರೋ ಅವರೆಲ್ಲ ಕವಿತೆಗಳನ್ನು ಹಾಡಿ ಹೊಗಳಿದರು. ಮುಂದೆ ಇದು ‘ಹೆಂಗಸರು ಬರೆದದ್ದು’ಎಂದು ಗೊತ್ತಾದಾಗ ಆ ಕವಿತೆಗಳ ವಿಮರ್ಶೆಯೇ ಇಲ್ಲವಾಗುತ್ತಾ ಬಂತು. ಬರಹಗಾರ್ತಿಯರನ್ನು, ಅದರಲ್ಲೂ ಕವಿತೆ ಬರೆದವರನ್ನು, ಅವರ ಹೆಣ್ಣು ಗುಣಗಳಿಂದಲೇ ಗುರುತಿಸುವ ಪ್ರವೃತ್ತಿ ಇರುವುದನ್ನು ಆಲೀಸಿಯಾ ಆಸ್ಟ್ರಿಕರ್ ಗುರುತಿಸಿದ್ದಾಳೆ. ಮರಿಯಾನ್ ಮೂರ್ ಕವಿತೆಗಳನ್ನು ಹಲವು ವಿಮರ್ಶಕರು ಆ ಕವಿತೆಗಳಲ್ಲಿ ಕಂಡು ಬರುವ ‘ನಯವಿನಯ’ಕ್ಕಾಗಿ ಹೊಗಳಿದರು ಎಂದು ಆಲೀಸಿಯಾ ಹೇಳುತ್ತಾಳೆ. ಶಿಶ್ನ ಕೇಂದ್ರೀಯತೆಯು ಗಂಡು ಮತ್ತು ಹೆಣ್ಣು ಬರೆವಣಿಗೆಯ ಮೌಲ್ಯಮಾಪನದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇಲ್ಲಿ ತಟಸ್ಥ ದೃಷ್ಟಿಕೋನ ಇರುವುದಿಲ್ಲ. ಗಂಡಸರ ಬರವಣಿಗೆಯಲ್ಲಿ ಸಕಾರಾತ್ಮಕ ಅಂಶಗಳನ್ನು ಗುರುತಿಸಲಾಗುತ್ತದೆ. ಪ್ಲಾನರಿ ಓಕುನೂರ್ ಬರೆದ‘ವೈಸ್ ಬ್ಲಡ್’ಕೃತಿಯನ್ನು ಪಾಠ ಹೇಳುತ್ತಿದ್ದ ಸಿಂಥಿಯಾ ಓಜಿಕ್ ಹೇಳಿದ ಮಾತುಗಳನ್ನು ಗಮನಿಸಿ – ‘‘ಆಕೆ ಒಬ್ಬ ಹೆಂಗಸೆಂಬುದನ್ನು ನಾನು ಹೇಳಬಲ್ಲೆ… ಅವಳ ವಾಕ್ಯಗಳು ಹೆಣ್ಣುವಾಕ್ಯಗಳು’’ ಎಂದಳು. ನಾನಾಗ ‘ನೀವೇನು ಹೇಳುತ್ತಿದ್ದೀರಿ? ಇದೆಲ್ಲ ಹೇಗೆ ಸಾಧ್ಯ?’ ಎಂದು ಕೇಳಿದೆ. ಆಗವಳು ‘‘ಅವರು ಭಾವುಕರು. ಗಂಡಸರಂತೆ ಸ್ಪಷ್ಟವಾಗಿರುವುದಿಲ್ಲ’ ಎಂದಳು. ನಾನಾಗ ಕೃತಿಯಲ್ಲಿ ಇದ್ದ ನಿರ್ಭಾವುಕವಾದ, ಪೆಡಸಾದ,  ಹಲವು ಭಾಗಗಳನ್ನು ಅವಳಿಗೆ ತೋರಿಸಿದೆ. ಆಗಲೂ ‘‘ಏನೇ ಹೇಳಿದರೂ, ಅವಳದು ಹೆಣ್ಣು ದನಿ…. ಅವಳು ಹೆಣ್ಣಾದುದರಿಂದ ಅವಳ ದನಿ ಹೆಣ್ಣೇ ಆಗಿರಬೇಕು’’ ಎಂದೇ ಪಟ್ಟು ಹಿಡಿದಳು.

ಒಟ್ಟಾರೆ ಹೇಳುವುದಾದರೆ, ಒಂದು ವಾಕ್ಯವನ್ನು ನೋಡಿ ಅದು ಗಂಡು ಇಲ್ಲವೇ ಹೆಣ್ಣುವಾಕ್ಯ ಎಂದು ಹೇಳುವುದು ಅಸಾಧ್ಯವೇ ಸರಿ. ಏಕೆಂದರೆ ಗಂಡು ಬರೆದ ಇಲ್ಲವೇ ಹೆಣ್ಣು ಬರೆದ ವಾಕ್ಯಗಳಲ್ಲಿರುವ ಭಾಷಿಕ ಭಿನ್ನತೆಗಳನ್ನು ಆಧರಿಸಿ ಮಾಡಿರುವ ವ್ಯಾಖ್ಯಾನಗಳೆಲ್ಲ ಅತಿವ್ಯಾಪ್ತಿ ದೋಷಕ್ಕೆ ಒಳಗಾಗಿವೆ. ಹೆಂಗಸರು ಒಂದು ಗೊತ್ತಾದ ಬಗೆಯಲ್ಲೇ ಬರೆಯುತ್ತಾರೆ ಎಂದು ಹೇಳುವುದು ಜಂಡರ್ ವ್ಯತ್ಯಾಸವನ್ನು ಸರಳಗೊಳಿಸಿದಂತಾಗುತ್ತದೆ. ಹೀಗೆಂದ ಮಾತ್ರಕ್ಕೆ ಪಠ್ಯಗಳಲ್ಲಿ ಜಂಡರ್‌ಗೆ ಯಾವ ಪಾತ್ರವೂ ಇಲ್ಲವೆಂದು ಹೇಳಿದಂತಲ್ಲ. ನಾನು ಈಗಾಗಲೇ ಹೇಳಿದಂತೆ ಬರಹಗಾರ್ತಿಯರ ಪಠ್ಯಗಳಲ್ಲಿ ಅವರು ಹೆಣ್ಣು ಸಾಹಚರ್ಯ ಹೊಂದಿರುವುದರ ಕುರುಹುಗಳನ್ನು ಗುರುತಿಸಲು ಸಾಧ್ಯವಿದೆ. ಈ ಸಾಹಚರ್ಯದ ನೆರವಿನಿಂದ ಬರಹಗಾರ್ತಿಯರಲ್ಲೇ ಇರುವ ವ್ಯತ್ಯಾಸಗಳನ್ನು ಗುರುತಿಸಲೂ ಆಗುತ್ತದೆ. ಆಗ ಎಲ್ಲ ಹೆಂಗಸರೂ ಒಂದೇ ರೀತಿ ಬರೆಯುತ್ತಾರೆ ಎಂಬ ನಂಬಿಕೆ ಹುಸಿಯಾಗುತ್ತದೆ. ಗಂಡುವಾಕ್ಯ ಅಥವಾ ಹೆಣ್ಣುವಾಕ್ಯ ಎಂಬುದು ಸಿದ್ಧ ಮಾದರಿಗಳಲ್ಲಿ ಇಲ್ಲವೇ ಜಂಡರ್ ವ್ಯತ್ಯಾಸಗಳ ಬಗ್ಗೆ ಪ್ರಚಲಿತವಿರುವ ನಂಬಿಕೆಗಳನ್ನು ಗಟ್ಟಿ ಮಾಡುವ ಕಡೆ ಮಾತ್ರ ಬೇರೆ ಬೇರೆಯಾಗಿ ಕಾಣುತ್ತದೆ.  ಹೆಂಗಸರ ಬರವಣಿಗೆಯಲ್ಲಿ ಬೇರೆಯೇ ಮೌಲ್ಯವ್ಯವಸ್ಥೆ ಪ್ರವೃತ್ತವಾಗಿರುವುದರಿಂದ ಅದನ್ನು ಓದುವ ಬಗೆಯು ಗಂಡು ಬರವಣಿಗೆಯನ್ನು ಓದುವ ಬಗೆಗಿಂತ ಭಿನ್ನವೇ ಆಗಿರುತ್ತದೆ.

—-
ಆಕರ : Feminist Stylistics (1995) – Sara Mills