ಗಂಡು ಹೆಣ್ಣುಗಳಲ್ಲಿ ಭಾಷಿಕ ವರ್ತನೆಗಳು ಭಿನ್ನವಾಗಿರುವುದನ್ನು ಗಮನಿಸಲಾಗಿದೆ. ಈ ವರ್ತನೆಯ ವ್ಯತ್ಯಾಸಗಳನ್ನು ಸಿದ್ಧಸೂತ್ರಗಳಿಂದ ವ್ಯಾಖ್ಯಾನಿಸಲಾಗುತ್ತಿದೆ. ಇದೊಂದು ಸಾಂಸ್ಕೃತಿಕ ನೆಲೆಗಟ್ಟಿನ ವ್ಯಾಪಾರವಾಗಿದೆ. ಹೀಗೆ ಮಾಡುವಾಗ ಎಲ್ಲವನ್ನೂ ಗಂಡು ಮತ್ತು ಹೆಣ್ಣು ಎಂದು ವಿಭಜಿಸಿ, ಅವೆರಡನ್ನೂ ಪರಸ್ಪರ ವಿರೋಧದ ನೆಲೆಯಲ್ಲಿ ಇರಿಸಲಾಗುತ್ತದೆ.  ಯಿನ್ ಮತ್ತು ಯಾಂಗ್; ಅನಿಮಸ್ ಮತ್ತು ಅನಿಮಾ; ಮಾದರಿಯ ಜೋಡಿಪದಗಳಲ್ಲಿ ಇರಿಸಿ ಮಾನವ ಚಿಂತನಾಕ್ರಮದಲ್ಲಿ ಇರುವ ಎಲ್ಲ ಕಾಲಕ್ಕೂ ಸಲ್ಲುವ ವರ್ಗೀಕರಣ ಎಂಬಂತೆ ವಿವರಿಸಲಾಗಿದೆ.

ಜಾಕ್ ರೋಸೆನ್‌ಥಾಲ್ ಒಂದು ‘ಚಿಂತನಾ ಪ್ರಯೋಗ’ ವನ್ನು ಮಾಡಿದ್ದಾರೆ. ಅದರಲ್ಲಿ ಜನರಿಗೆ ಜೋಡಿಪದಗಳನ್ನು ನೀಡಲಾಯಿತು. knife/fork, ford/chevrolet, salt/pepper, vanilla/chocolate – ಈ ಜೋಡಿ ಪದಗಳಲ್ಲಿ ಯಾವುದನ್ನು ಗಂಡು ಮತ್ತಾವುದನ್ನು ಹೆಣ್ಣು ಎಂದು ಜನರು ಗುರುತಿಸುತ್ತಾರೆ ಎನ್ನುವುದನ್ನು ತಿಳಿಯುವುದು ಪ್ರಯೋಗದ ಉದ್ದೇಶವಾಗಿತ್ತು. ಈ ತಲೆಕಡಿಸುವ ಸಮಸ್ಯೆಗೆ ಜನರಲ್ಲಿ ಸುಲಭವಾದ ಉತ್ತರಗಳಿದ್ದವು. ಅಷ್ಟೇ ಅಲ್ಲ, ಭಾಗಿಗಳಾದವರೆಲ್ಲರೂ ಒಂದೇ ಬಗೆಯಲ್ಲಿ ಪದಗಳನ್ನು ವರ್ಗೀಕರಿಸಿದ್ದರು.  knife, ford, pepper, chocolate ಗಳು ಗಂಡು ಪದಗಳಾಗಿದ್ದರೆ fork, salt, chevrolet, vanilla ಗಳು ಹೆಣ್ಣು ಪದಗಳಾಗಿದ್ದವು.

ಇದನ್ನು ಜಂಡರ್‌ನ ರೂಪಾತ್ಮಕ ನೆಲೆ ಎನ್ನಲಾಗಿದೆ. ಇದರಲ್ಲಿ ಮೂರು ಕುತೂಹಲಕಾರಿ ಸಂಗತಿಗಳಿವೆ. ಒಂದು ಈ ವರ್ಗೀಕರಣಕ್ಕೂ ಲೋಕದಲ್ಲಿರುವ ನಿಜ ಜಂಡರ್‌ವರ್ಗಕ್ಕೂ ಏನೇನೂ ಸಂಬಂಧವಿಲ್ಲ. ಏಕೆಂದರೆ ಇಲ್ಲಿ ಪಟ್ಟಿ ಮಾಡಲಾದ ಎಲ್ಲವೂ ಕೇವಲ ನಿರ್ಜೀವ ವಸ್ತುಗಳು ಮತ್ತು ಜಂಡರ್ ರಹಿತವಾದವು. ಅಂದರೆ, ಗಂಡು ಮತ್ತು ಹೆಣ್ಣು ಎಂಬುದನ್ನು ನಿಜವಾದ ಲೈಂಗಿಕ ವ್ಯತ್ಯಾಸದ ನೆಲೆಯಿಂದ ಬೇರ್ಪಡಿಸಿ ಯಾವುದಕ್ಕೆ ಬೇಕಾದರೂ ಅನ್ವಯಿಸಬಹುದು ಎಂದಾಯಿತು.

ಎರಡು, ಈ ವರ್ಗೀಕರಣದ ಹಿಂದೆ ಯಾವುದೇ ನಿರ್ದಿಷ್ಟ ತರ್ಕಬದ್ಧ ನಿಯಮವಿದ್ದಂತಿಲ್ಲ.  pepper ಮತ್ತು chocolate ಗಳಿಗೆ salt ಮತ್ತು vanilla ಗಳಿಗಿಂತ ಕಟು ವಾಸನೆ ಹೆಚ್ಚಿರುವುದರಿಂದ ಅವುಗಳನ್ನು ‘ಗಂಡು’ ಎಂದು ಗುರುತಿಸಲಾಗಿರಬಹುದು ಎನ್ನುವುದು ರೊಸೆನ್‌ಥಾಲ್ ಊಹೆ. chevrolete ನ್ನು ಹೆಣ್ಣು ಎಂದು ಗುರುತಿಸಿದ್ದಕ್ಕೆ ಅದರ ಉಚ್ಚಾರಣಾ ರೂಪ ಕಾರಣವಿದ್ದೀತು (ಅದು fordಗಿಂತ ನಿಡಿದಾದ ಉಚ್ಚಾರವನ್ನು ಹೊಂದಿದೆ. ಕೊನೆಯಲ್ಲಿ ಸ್ವರವಿದೆ, ಅದರಲ್ಲಿ ‘ಫ್ರೆಂಚ್’ ಗುಣವಿದೆ.) knife ಎಂಬುದು ಗಂಡಾಗಿ ತೋರಲು ಅದಕ್ಕೂ ಮುನ್ನುಗ್ಗುವಿಕೆಗೂ ಏನೋ ಸಂಬಂಧ ಕಲ್ಪಿಸಿಕೊಂಡದ್ದು ಕಾರಣ. ಈ ಜೋಡಿ ಪದಗಳ ಪಟ್ಟಿಗೆ ಹೆಚ್ಚು ಪದಗಳನ್ನು ಸೇರಿಸುತ್ತಾ ಹೋದಂತೆ ಜನರು ವರ್ಗೀಕರಣಕ್ಕೆ ಅನುಸರಿಸುವ ಸೂತ್ರದ ಲಕ್ಷಣಗಳನ್ನು ಹೇಳುವುದು ಇನ್ನಷ್ಟು ತೊಡಕಾಗುತ್ತದೆ. ಅಂದರೆ, ಗಂಡು ಮತ್ತು ಹೆಣ್ಣು ಎಂಬ ಪರಿಕಲ್ಪನೆಗಳು ತೀರಾ ಅಮೂರ್ತ ನೆಲೆಯಲ್ಲಿ ಇರುತ್ತವೆ ಎಂದಾಯಿತು.  ಆ ಪರಿಕಲ್ಪನೆಯೊಳಗೆ ಸಬಲ/ದುರ್ಬಲ, ಕ್ರಿಯಾತ್ಮಕ/ನಿಷ್ಕ್ರಿಯಾತ್ಮಕ ಮುಂತಾದ ವೈರುಧ್ಯಗಳು ಅಧೀನವಾಗಿರುತ್ತವೆ. ಹೀಗಾಗಿ, ನಾವು ರೂಪಕಾತ್ಮಕ ನೆಲೆಯಲ್ಲಿ ವಿರೋಧವನ್ನು ಹೊಂದಿರುವ ಪರಿಕಲ್ಪನೆಗಳ ಜಾಲದೊಡನೆ ವ್ಯವಹರಿಸುತ್ತಿದ್ದೇವೆ.

ಮೂರು, ಇವೆಲ್ಲಕ್ಕಿಂತ ಮುಖ್ಯವಾಗಿ ಜಂಡರ್ ಎಂಬ ಗುಣವೇ ಸಂಬಂಧದ ನೆಲೆಯಲ್ಲಿ ಇರುವಂಥದು. ಅದು ಎರಡು ಪದಗಳ ನಡುವಣ ವೈರುಧ್ಯವನ್ನು ಅವಲಂಬಿಸಿದೆ.  ಯಾರಾದರೂ salt ಎಂಬುದು ಗಂಡೋ ಹೆಣ್ಣೋ ಎಂದು ಕೇಳಿದರೆ, ಗೊಂದಲಕ್ಕೆ ಬೀಳುತ್ತಾರೆ.  ಉತ್ತರ ನೀಡಲಾರರು. salt ಮತ್ತು pepper ಗಳನ್ನು ಒಟ್ಟಾಗಿ ಹೇಳಿ ವೈರುಧ್ಯವನ್ನು ಎದುರಿಗಿರಿಸಿದಾಗ ಮಾತ್ರ ಉತ್ತರ ನೀಡುವುದು ಸುಲಭವಾಗುತ್ತದೆ. ಹೀಗೆ ಜೋಡಿಯಾಗುವ ಪದಗಳನ್ನು ಬದಲಾಯಿಸಿಬಿಟ್ಟರೆ, ಆಗ ಆ ಪದಗಳ ಜಂಡರ್ ಕೂಡಾ ಬದಲಾಗಿ ಬಿಡಬಹುದು.  knife/ fork ಬದಲು spoon/fork ಪದಜೋಡಿಯನ್ನು ಕೊಟ್ಟರೆ ಆಗ fork ಗಂಡಾಗಿ ಬಿಡುತ್ತದೆ.  knife ಜೊತೆಯಲ್ಲಿರುವಾಗ fork ಹೆಣ್ಣಾಗಿದ್ದರೆ, spoon ಜೊತೆಯಲ್ಲಿರುವಾಗ ಅದು ಗಂಡಾಗಿ ಬಿಡುತ್ತದೆ. ಅಂದರೆ, ಯಾವುದೇ ವಸ್ತುಸೂಚಕ ಪದದಲ್ಲಿ ಅಂತಸ್ಥವಾಗಿ ಗಂಡು ಹೆಣ್ಣು ಎಂಬುದಿಲ್ಲ. fork ಎಂಬುದನ್ನು ಎಷ್ಟೇ ಅಮೂರ್ತವಾಗಿ ಪರಿಭಾವಿಸಿದರೂ ಅದು fork ಮಾತ್ರವೇ. ಬೇರೇನೂ ಅಲ್ಲ.

ರೂಪಾತ್ಮಕವಾದ ನೆಲೆಯ ಜಂಡರ್‌ಗೆ ಇರುವ ಸಂಬಂಧದ ಸ್ವರೂಪವು ಕೆಲವು ಕುತೂಹಲಕಾರಿ ಸಂಗತಿಗಳನ್ನು ತೋರಿಸಿಕೊಡುತ್ತದೆ. ಇಪ್ಪತ್ತನೆಯ ಶತಮಾನದ ಸ್ತ್ರೀವಾದಿಗಳು ಈ ಸ್ವರೂಪವನ್ನು ಗುರುತಿಸಿ ಎತ್ತಿ ಹಿಡಿದಿದ್ದಾರೆ. ಗಂಡು ಹೆಣ್ಣು ಎಂಬುದು ಸಾರರೂಪಿಯಲ್ಲ.  ನಿರ್ದಿಷ್ಟವಾದ, ಬದಲಾಗದ, ಮತ್ತು ಸ್ವತಂತ್ರವಾದ ಅಸ್ತಿತ್ವವುಳ್ಳ ಸಂಗತಿಗಳಲ್ಲ. ಹೆಣ್ಣು ಎಂಬ ಪರಿಕಲ್ಪನೆ ಇಲ್ಲದಿದ್ದರೆ, ಗಂಡು ಎಂಬುದೂ ಇರುವುದಿಲ್ಲ (ಸಸೂರ್ ಹೇಳುವಂತೆ ಎರಡು ಸಂಗತಿಗಳನ್ನು ವ್ಯಾಖ್ಯಾನಿಸಲು ಅವುಗಳ ನಡುವೆ ಇರುವ ಭಿನ್ನತೆಯನ್ನೂ ಲೆಕ್ಕಕ್ಕೆ ಹಿಡಿಯಬೇಕು. ಕ್ ಎಂಬ ಧ್ವನಿಯ ಲಕ್ಷಣವೇನು ಎಂಬುದು ಪ್ರಶ್ನೆ ಎಂದುಕೊಳ್ಳಿ. ಒಂದು ಭಾಷೆಯಲ್ಲಿ ಬಳಕೆಯಾಗುವ ಕ್ ಧ್ವನಿಯನ್ನು ಬಿಡಿಯಾಗಿ ಅದರದ್ದೇ ಆದ ಚಹರೆಗಳಿಂದ ವಿವರಿಸಲು ಹೊರಡುವುದು ಸರಿಯಲ್ಲ. ಅದು ಅದೇ ಭಾಷೆಯ ಇತರ ಧ್ವನಿಗಳಿಗಿಂತ ಭಿನ್ನವಾಗಿರುವ ನೆಲೆಗಳನ್ನು ವಿವರಿಸುವುದು ಮುಖ್ಯವಾಗುತ್ತದೆ. ಆ ಭಾಷೆಯಲ್ಲಿ ಚ್ ಎಂಬ ಧ್ವನಿ ಇದ್ದರೆ ಆಗ ಕ್ ಮತ್ತು ಚ್ ಗಳಿಗೆ ಇರುವ ಭಿನ್ನತೆಯೇ ಅವುಗಳ ಲಕ್ಷಣ ನಿರ್ವಚನಕ್ಕೆ ಅಗತ್ಯವಾದ ಸಂಗತಿ.)

ನಮಗೆ ಪರಿಚಿತವಿರುವ ಎಲ್ಲ ಸಮಾಜಗಳೂ ಲಿಂಗಬೇಧವನ್ನು ಆಧರಿಸಿಯೇ ವ್ಯವಸ್ಥೆಗೊಂಡಿದೆ.  ಹಾಗಾಗಿ ನಾವು ಗಂಡು ಹೆಣ್ಣು ಎಂಬ ವರ್ಗೀಕರಣ ಸರಳ ಮತ್ತು ಸಹಜ ಎಂದು ನಂಬುತ್ತೇವೆ. ಸಸ್ಯ, ಪ್ರಾಣಿಗಳನ್ನು ವರ್ಗೀಕರಿಸುವಂತೆ ಸಿಂಹ, ಹುಲಿಗಳನ್ನು ವರ್ಗೀಕರಿಸುವಂತೆ, ಗಂಡು ಹೆಣ್ಣುಗಳನ್ನು ವರ್ಗೀಕರಿಸುವುದು ಸುಲಭ ಎಂದುಕೊಳ್ಳುತ್ತೇವೆ. ಅಂತಹ ಎರಡು ವರ್ಗಗಳು ಇವೆ, ಮತ್ತು ಅವುಗಳನ್ನು ವ್ಯಾಖ್ಯಾನಿಸಬಹುದು ಎಂದುಕೊಳ್ಳುತ್ತೇವೆ. ಇದು ಅಪಕಲ್ಪನೆ ಎಂದು ಸ್ತ್ರೀವಾದಿಗಳು ಹೇಳಿದ್ದಾರೆ. ಸ್ವಲ್ಪ ಒರಟಾಗಿ ಹೇಳುವವರು ಇದನ್ನೊಂದು ವಂಚನೆ ಎಂದಿರುವುದೂ ಉಂಟು. ಯಾವುದು ನಿಯತವೆಂದರೆ, ಅವೆರಡರ ನಡುವೆ ಇರುವ ಭಿನ್ನತೆ ಮಾತ್ರ.

ಈ ಬಗ್ಗೆ ಮೊದಲಿಗೆ ಚರ್ಚಿಸಿದ್ದು ಮಾನವ ಶಾಸ್ತ್ರಜ್ಞೆ ಮಾರ್ಗರೇಟ್ ಮೀಡ್. ತನ್ನ sex and temperament ಎಂಬ ಹೆಸರಾಂತ ಕೃತಿಯಲ್ಲಿ ಈ ಕುರಿತು ಹೇಳಿದ್ದಾಳೆ. ಆಕೆ ಹೇಳುವಂತೆ ಪ್ರತಿಯೊಂದು ಸಮಾಜವೂ ಕೆಲವು ಗುಣ ಮತ್ತು ಕ್ರಿಯೆಗಳನ್ನು ಗಂಡು ಎಂದೂ, ಉಳಿದವನ್ನು ಹೆಣ್ಣು ಎಂದೂ ಗುರುತಿಸುತ್ತದೆ. ಒಂದು ಸಂಸ್ಕೃತಿಯಿಂದ ಇನ್ನೊಂದು ಸಂಸ್ಕೃತಿಗೆ ಹೋದಾಗ ಗಂಡು ಮತ್ತು ಹೆಣ್ಣು ಎಂದು ಗುರುತಿಸಲಾಗುವ ಗುಣ ಮತ್ತು ಕ್ರಿಯೆಗಳು ಬೇರೆ ಬೇರೆಯಾಗುತ್ತವೆ. ಅಷ್ಟೇಕೆ, ಕೆಲವೊಮ್ಮೆ ಒಂದಕ್ಕೊಂದು ವಿರುದ್ಧವೂ ಆಗಿರಬಹುದು. ಒಂದು ಸಮುದಾಯ ಮೀನುಗಾರಿಕೆಯನ್ನು ಗಂಡು ಎಂದೂ ನೇಯ್ಗೆಯನ್ನು ಹೆಣ್ಣೂ ಎಂದು ಪರಿಗಣಿಸಬಹದು. ಆ ಸಮುದಾಯದಿಂದ ಅನತಿ ದೂರದಲ್ಲಿರುವ ಇನ್ನೊಂದು ಸಮುದಾಯದಲ್ಲಿ ಮೀನು ಹಿಡಿಯುವುದು ಹೆಂಗಸಾಗಿದ್ದರೆ, ಗಂಡಸು ನೇಯ್ಗೆ ಮಾಡುತ್ತಿರಬಹುದು. ಇದು ಭೌಗೋಳಿಕ ಭಿನ್ನತೆಯ ಮಾತಾಯಿತು. ಒಂದೇ ಸಮಾಜದಲ್ಲಿ ಬೇರೆ ಬೇರೆ ಕಾಲಾವಧಿಯಲ್ಲಿ ಈ ಗುಣ, ಕ್ರಿಯೆಯ ವಿಭಜನೆ ಬೇರೆಯಾಗುತ್ತದೆ. ಮಧ್ಯಯುಗದ ಯೂರೋಪಿಯನ್ನರು ಹೆಂಗಸರು ಸದಾ ಲೈಂಗಿಕ ಅತೃಪ್ತರು ಎಂದು ಪರಿಗಣಿಸಿದ್ದರೆ, ವಿಕ್ಟೋರಿಯನ್ ಯುಗದ ಹೊತ್ತಿಗೆ ಹೆಂಗಸರು ಸಹಜವಾಗಿಯೇ ಲೈಂಗಿಕ ಜಡರೆಂದೂ ವೈವಾಹಿಕ ಕರ್ತವ್ಯವೆಂದಷ್ಟೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವವರೆಂದೂ ತಿಳಿದಿದ್ದರು.

ಮೀಡ್ ಇನ್ನೂ ಒಂದು ಮುಖ್ಯ ಸಂಗತಿಯನ್ನು ತಿಳಿಸುತ್ತಾಳೆ. ಯಾವುದನ್ನು ಗಂಡು ಎಂದು ಪರಿಗಣಿಸಲಾಗುತ್ತದೋ ಅದಕ್ಕೆ ಹೆಣ್ಣು ಎಂದು ಪರಿಗಣಿಸಲಾದುದಕ್ಕಿಂತ ಹೆಚ್ಚಿನ ಮಾನ್ಯತೆಯನ್ನು ನೀಡಲಾಗುತ್ತದೆ. ಇತ್ತೀಚಿನ ಸ್ತ್ರೀವಾದಿ ಚಿಂತಕರೂ ಕೂಡಾ ಈ ಅಂಶವನ್ನೇ ಚರ್ಚಿಸಿದ್ದಾರೆ. ಗಂಡು ಹೆಣ್ಣು ಎನ್ನುವಾಗ ನಾವು ರಚಿತ ಭಿನ್ನತೆಯನ್ನಷ್ಟೇ ಗಮನಿಸುತ್ತಿಲ್ಲ. ಅದರೊಡನೆ ಒಂದು ಶ್ರೇಣೀಕರಣವೂ ಅಡಗಿದೆ ಎಂಬುದು ಸ್ತ್ರೀವಾದಿಗಳ ನಿಲುವು.

ಇದನ್ನೇ ಬೇರೆ ಮಾತಲ್ಲಿ ಹೇಳುವುದಾದರೆ ಬಲಶಾಲಿ ಜಂಡರ್ ವರ್ಗವಾಗಿ ರಚಿತವಾದ ಗಂಡಸರು ಹೆಣ್ಣು ಗಂಡು ಎಂಬ ವೈರುಧ್ಯವನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಬಲ್ಲರು. ಆ ವ್ಯಾಖ್ಯಾನವನ್ನೇ ಎಲ್ಲರ ಮೇಲೂ ಹೇರಬಲ್ಲರು. ಸಿಮೋನ್  ದ ಬೊವಾ ತನ್ನ ‘ದ ಸೆಕೆಂಡ್ ಸೆಕ್ಸ್’ನಲ್ಲಿ ವಾದಿಸುವಂತೆ ಗಂಡಸು, ಹೆಂಗಸನ್ನು ‘ಅನ್ಯ’ ಎಂಬಂತೆ ರಚಿಸಿಕೊಂಡಿದ್ದಾನೆ. ಈ ‘ಅನ್ಯ’ ಎಂಬುದು ತಾನಲ್ಲದ ಬೇರೊಂದು ಎನ್ನುವುದು ಗಂಡಸಿನ ವ್ಯಾಖ್ಯೆ. ಗಂಡಸರು ತಮಗೆ ಆರೋಪಿಸಿಕೊಳ್ಳುವ ಚಹರೆಗಳಿಗೆ ವಿರುದ್ಧವಾದದ್ದೆಲ್ಲ ಹೆಣ್ಣು ಎಂದು ಹೇಳುತ್ತಾರೆ. ಗಂಡಸರು ಕ್ರಿಯಾಶೀಲರಾದರೆ, ಹೆಂಗಸರು ನಿಷ್ಕ್ರಿಯರು; ಗಂಡಸರು ತಾರ್ಕಿಕರಾದರೆ, ಹೆಂಗಸರು ಭಾವಜೀವಿಗಳು; ಗಂಡಸರು ಒಳಿತಿನ ಪ್ರತಿನಿಧಿಗಳಾದರೆ ಹೆಂಗಸರು ಕೆಡುಕಿನ ಪ್ರತಿನಿಧಿಗಳೇ ಸರಿ. ಅಂದರೆ ಮಾನವ ಜನಾಂಗದಲ್ಲಿ ಯಾವುದನ್ನು ನಕಾರಾತ್ಮಕ ಗುಣಗಳೆಂದು ಗಂಡಸರು ತಿಳಿಯುತ್ತಾರೋ ಅವೆಲ್ಲವೂ ಹೆಂಗಸರಿಗೆ ಆರೋಪಿತವಾಗಿ ಬಿಡುತ್ತವೆ.

ಹೀಗೆ ಯೋಚಿಸುವುದು ಪಾಶ್ಚಾತ್ಯ ಚಿಂತನಾಕ್ರಮದಲ್ಲಿ ಬಹುದೊಡ್ಡ ಚರಿತ್ರೆಯನ್ನೇ ಹೊಂದಿದೆ ಎಂದು ಸ್ತ್ರೀವಾದಿ ಚಿಂತಕಿ ಹೆಲೆನ್ ಸೀಕ್ಸೂ ತೋರಿಸಿಕೊಟ್ಟಿದ್ದಾಳೆ. ಪಾಶ್ಚಾತ್ಯ ತತ್ವಶಾಸ್ತ್ರ ಪರಂಪರೆಗೆ ಅಡಿಗಲ್ಲಿಟ್ಟವರೆಂದು ತಿಳಿಯಲಾಗಿರುವ ಗ್ರೀಕರು ಲೋಕವನ್ನು ಹಲವು ಪರಸ್ಪರ ವಿರೋಧವುಳ್ಳ ಜೋಡಿಗಳ ಸರಣಿ ಎಂದು ಕಲ್ಪಿಸಿಕೊಂಡರು. ಅಂದರೆ, ದ್ವಿದಾ ಭಾವದಲ್ಲಿ ಲೋಕವನ್ನು ನೋಡಿದರು. (ಈ ಜೋಡಿಗಳಲ್ಲಿ ಒಂದು ನಿಜವಿದ್ದರೆ, ಇನ್ನೊಂದು ಸುಳ್ಳಾಗಿರುತ್ತದೆ. ಒಂದು ಚಲನಶೀಲವಾಗಿದ್ದರೆ, ಇನ್ನೊಂದು ಸ್ಥಿರವಾಗಿರುತ್ತದೆ) ಇಂಥ ಜೋಡಿಗಳಲ್ಲಿ ಸಾಂತ/ಅನಂತ, ಕತ್ತಲೆ/ಬೆಳಕು, ತರ್ಕ/ ತರ್ಕರಹಿತತೆ, ದೇಹ/ ಮನಸ್ಸು ಗಂಡು/ಹೆಣ್ಣು – ಇಂಥವು ಸೇರಿಕೊಂಡಿವೆ. ಇವುಗಳಲ್ಲಿ ಒಂದನ್ನು ಸಕಾರಾತ್ಮಕ ಇನ್ನೊಂದನ್ನು ನಕಾರಾತ್ಮಕ ಎಂದು ಗ್ರೀಕ್ ಚಿಂತಕರು ಗುರುತಿಸಿದರು. ಅಷ್ಟಲ್ಲದೆ ಈ ಜೋಡಿಗಳಲ್ಲಿ ವಿರೋಧದ ಜೊತೆಗೆ ಶ್ರೇಣಿಯೂ ಸೇರಿದೆ. ಅಂದರೆ, ಈ ರೂಪಾತ್ಮಕ ರಚನೆಯಲ್ಲಿ ಹೆಂಗಸು ನಕಾರಗಳ ವಲಯಕ್ಕೆ ಸೇರಿದವಳಾಗಿದ್ದು, ಕೆಡುಕು ಅಪಾಯಗಳ ಪ್ರತಿನಿಧಿಯಾಗುತ್ತಾಳೆ.  ಹಾಗಾಗಿ ಅವಳನ್ನು ಹದ್ದುಬಸ್ತಿನಲ್ಲಿಡುವುದು ಅನಿವಾರ್ಯ.

ಇವೆಲ್ಲವೂ ಈಚೆಗೆ ಫ್ಯಾಶನ್ ಆಗಿರುವ ವಿಮರ್ಶಾ ಸಿದ್ಧಾಂತದ ಕಡೆಗೆ ನಮ್ಮ ಗಮನವನ್ನು ಹರಿಯುವಂತೆ ಮಾಡುತ್ತದೆ. ಈ ವಿಮರ್ಶಾ ಸಿದ್ದಾಂತದ ಮುಖ್ಯ ಪರಿಕಲ್ಪನೆ ‘ನಿರಚನೆ’. ಜಾಕ್ ಡೆರಿಡಾ ಈ ತತ್ವವನ್ನು ಪ್ರಚುರಪಡಿಸಿದ್ದು. ನಿರಚನ ಸಿದ್ಧಾಂತದಂತೆ ವಿಮರ್ಶಕರು ದ್ವಿದಾ ಸಂಬಂಧಗಳಲ್ಲಿ ಅಂತರ್ಗತವಾಗಿರುವ ಕಾರ್ಯಯೋಜನೆಯನ್ನು ಹೊರಗೆಳೆಯುತ್ತಾರೆ. x ಮತ್ತು yಗಳು ಪರಸ್ಪರ ವಿರುದ್ಧವಾದ ಧ್ರುವಗಳೆಂದು ವಾದಿಸುವುದು ದ್ವಿದಾ ಕಲ್ಪನೆಯ ತಳಹದಿ. ನಿರಚನ ನೆಲೆಗಳು ಇಂತಹ ತರ್ಕವನ್ನೇ ತಪ್ಪು ಎಂದು ವಾದಿಸುತ್ತವೆ. ಏಕೆಂದರೆ, x ಎಂಬುದರ ಅಸ್ತಿತ್ವವೇ y ಅನ್ನು ಅವಲಂಬಿಸಿರುವಾಗ, ಅದಕ್ಕೆ ಪ್ರತ್ಯೇಕ ನೆಲೆಯೇ ಇಲ್ಲ. ಹಾಗೆ y ಗೆ ಕೂಡಾ. ಯಾವುದನ್ನಾದರೂ ಶುದ್ಧಾಂಗವಾಗಿ ನೋಡಿ ಅದರ ಅರ್ಥ ಇಂತಿಷ್ಟೇ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಎಲ್ಲ ಅರ್ಥಗಳೂ ಸಂಬಂಧದ ನೆಲೆಯಲ್ಲಿ ಇರುತ್ತವೆ.ಹಾಗಾಗಿ ಬದಲಾಗುತ್ತಲೇ ಇರುತ್ತವೆ. (fork ನ ಜಂಡರ್ ಬದಲಾದದ್ದನ್ನು ನೆನಪಿಸಿಕೊಳ್ಳಿ) ಅಲ್ಲದೆ x  ಮತ್ತು yಗಳ ನಡುವೆ ಅಂತಸ್ಥವಾದ ಶ್ರೇಣೀಕರಣವೊಂದಿರುತ್ತದೆ. ಇದನ್ನು ಅವಲಂಬಿಸಿಯೇ ಅವೆರಡನ್ನೂ ವ್ಯಾಖ್ಯಾನಿಸುತ್ತಿದ್ದರೂ ಈ ಶ್ರೇಣೀಕರಣವಿದೆಯೆಂದು ಯಾರೂ ಒಪ್ಪುವುದಿಲ್ಲ.

ಸೀಕ್ಸೂ ಇಲ್ಲವೇ ಲೂಸ್ ಇರಿಗೆರೆ, ನಿರಚನೆಯ ನೆಲೆಯಲ್ಲಿ ಎರಡು ಪ್ರಶ್ನೆಗಳನ್ನು ಮುಂದಿಡುತ್ತಾರೆ. ಈ ಪ್ರಶ್ನೆಗಳು ಹೆಣ್ಣು ಗಂಡು ಎಂಬ ದ್ವಿದಾ ಕಲ್ಪನೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ವಿರುದ್ಧ ನಲೆಗಳಿಗೆ (ಒಳಿತು/ಕೆಡಕು, ಬುದ್ದಿ/ಭಾವ) ಸಂಬಂಧಿಸಿವೆ.  ಮೊದಲಿಗೆ, ಹೆಣ್ಣು ಗಂಡುಗಳು ವಿರುದ್ಧ ಧ್ರುವಗಳೆಂದು ತಿಳಿಯುವುದು ಸರಿಯೇ? ಲೂಸ್ ಇರಿಗೆರೆಯಂತೂ ಹೆಣ್ಣು ಎಂಬುದನ್ನು ಗಂಡು ಅಲ್ಲದುದು ಎಂದು ಹೇಳುವುದೇ ಸರಿಯಲ್ಲ ಎನ್ನುತ್ತಾಳೆ. ಅದರಲ್ಲೂ ಲೈಂಗಿಕತೆಗೆ ಸಂಬಂಧಿಸಿದಂತೆ ಈ ಮಾತು ಇನ್ನಷ್ಟು ನಿಜ. ಇಂಥ ಸಾರವಾದಗಳಿಗೆ ಫ್ರಾಯ್ಡ್‌ನೇ ಹೊಣೆಗಾರ. ಅವನು ಮಂಡಿಸಿದ ಚಿಂತನೆಯಂತೆ ಗಂಡಸಿಗೆ ಶಿಶ್ನವಿದೆ, ಹೆಂಗಸಿಗೆ ಶಿಶ್ನವಿಲ್ಲ. ಫ್ರಾಯ್ಡ್ ಏನೇ ಹೇಳಲಿ ಹೆಂಗಸಿಗೂ ಅವಳದೇ ಆದ, ಆದರೆ ಭಿನ್ನವಾದ, ಲೈಂಗಿಕ ಅಂಗಗಳು ಇವೆ ಎಂದು ಇರಿಗೆರೆ ಹೇಳುತ್ತಾಳೆ. ಆದರೆ, ಹೆಂಗಸಿನ ಈ ಅಂಗಗಳು ಭಿನ್ನವೇ ಹೊರತು ಗಂಡಸಿನ ಅಂಗಗಳಿಗೆ ವಿರುದ್ಧವಾದವಲ್ಲ. ಫ್ರಾಯ್ಡ್ ಪ್ರಣೀತ ದ್ವಿದಾ ಕಲ್ಪನೆಯು ಲೈಂಗಿಕ ವ್ಯತ್ಯಾಸದ ವಾಸ್ತವವನ್ನು ಗ್ರಹಿಸಲು ಶಕ್ತವಾಗಿಲ್ಲ.  ಎರಡನೆಯ ಪ್ರಶ್ನೆಯು, ಹೆಣ್ಣನ್ನು ಗಂಡಿಗೆ ವಿರುದ್ಧವಾಗಿ ಇರಿಸಿ ನೋಡುವಾಗಲೇ ಆ ಹೆಣ್ಣುತನಕ್ಕೆ ಯಾವ ಮೌಲ್ಯವನ್ನು ನೀಡಲಾಗಿದೆ ಎಂಬುದನ್ನು ಕುರಿತಿದೆ. ಹೆಣ್ಣುತನವನ್ನು ಕತ್ತಲಿಗೆ, ಅನಂತಕ್ಕೆ, ದೇಹಕ್ಕೆ, ಭಾವಕ್ಕೆ ಮತ್ತು ತರ್ಕಶೂನ್ಯತೆಗೆ ಸಮೀಕರಿಸಲಾಗಿದೆ.  ಇವೆಲ್ಲವೂ ನಕಾರಾತ್ಮಕವಾದವು. ಇವುಗಳು ಸ್ತ್ರೀತ್ವದೊಡನೆ ನೆಂಟನ್ನು ಹೊಂದಿರುವುದರಿಂದಲೇ ತಮ್ಮ ಮೌಲ್ಯವನ್ನು ಕಳೆದುಕೊಂಡಿವೆ. ಆದ್ದರಿಂದ ಸ್ತ್ರೀವಾದವು ಪುನರ್ಮೌಲ್ಯೀಕರಣದ ಹೊಣೆಯನ್ನು ಹೊರಬೇಕು. ಅಲ್ಲದೆ, ಅವುಗಳನ್ನು ಹೊತ್ತು ಮೆರೆಯಲು ಸಿದ್ಧವಾಗಬೇಕು. ಪಶ್ಚಿಮದ ಚಿಂತನೆಗಳು ಮನಸ್ಸಿಗಿಂತ ದೇಹ ಕೀಳು, ತರ್ಕಕ್ಕಿಂತ ಭಾವನೆಗಳು ಕೀಳು ಎಂದು ಮಂಡಿಸಿರುವುದನ್ನು ಪ್ರಶ್ನಿಸಬೇಕು.

ಇವೆಲ್ಲಕ್ಕೂ ಭಾಷೆಗೂ, ಅದರಲ್ಲೂ ವ್ಯಾಕರಣಕ್ಕೂ ಏನು ಸಂಬಂಧ? ತೀರಾ ಸರಳವಾದ ನೆಲೆಯಲ್ಲಿ ಹೇಳುವುದಾದರೆ ಗಂಡು ಹೆಣ್ಣು ಎಂಬ ವರ್ಗೀಕರಣ ಇಂಗ್ಲಿಶ್ ಭಾಷೆಯೊಳಗೆ (ಜಗತ್ತಿನ ಎಲ್ಲ ಭಾಷೆಗಳೊಳಗೂ ಇರುವಂತೆ) ಮತ್ತು ಅದರ ರೂಪಕ ರಚನೆಯೊಳಗೆ ತಲೆತೂರಿಸಿದೆ. ಜೋಡಿ ಪದಗಳನ್ನು ಇರಿಸಿಕೊಂಡು ನಡೆಸಿದ ಪ್ರಯೋಗದಿಂದ ಈ ಅಂಶ ಸ್ಪಷ್ಟವಾಗಿದೆ. ಆದರೆ ಇನ್ನಷ್ಟು ತಾತ್ವಿಕ ನೆಲೆಯಲ್ಲಿ ನೋಡಿದಾಗ ನಾವು ವ್ಯಾಕರಣವೆಂದು ಕರೆಯುವ ಭಾಷಾರಚನೆಯ ವಿಶ್ಲೇಷಣೆಯೊಳಗೂ ಗಂಡು ಹೆಣ್ಣು ಎಂಬ ದ್ವಿದಾ ಕಲ್ಪನೆ ಹೆಣೆದುಕೊಂಡಿರುವುದು ಗೊತ್ತಾಗುತ್ತದೆ. ಲೋಕದ ಎಲ್ಲ ಭಾಷೆಗಳಲ್ಲೂ ಜಂಡರ್ ಎನ್ನುವುದು ವ್ಯಾಕರಣದ ಒಂದು ಪರಿಕಲ್ಪನೆಯೇ ಆಗಿದೆ. ಈ ಸಂಗತಿ ಜಂಡರ್ ಕುರಿತ ಚರ್ಚೆಯನ್ನು ಪ್ರಭಾವಿಸುತ್ತಿದೆ. ಇದರ ಜೊತೆಗೆ ಭಾಷಾಶಾಸ್ತ್ರವು ಗಂಡು ಹೆಣ್ಣು ಎಂಬ ದ್ವಿದಾ ಕಲ್ಪನೆಗೆ ವಿಶೇಷ ಮಾನ್ಯತೆಯನ್ನು ನೀಡಿದೆ. ಇದನ್ನು ಸ್ತ್ರೀವಾದಿಗಳೂ ಸೇರಿದಂತೆ ನಿರಚನವಾದಿಗಳು ಪ್ರಶ್ನಿಸುತ್ತಿದ್ದಾರೆ.

ಭಾಷಾಶಾಸ್ತ್ರ ಮತ್ತು ದ್ವಿದಾ ಕಲ್ಪನೆ

ಭಾಷೆಯ ರಚನೆಯಲ್ಲಿ ವೈರುಧ್ಯ ತತ್ತ್ವಕ್ಕೆ ಸಸೂರ್ ಮಹತ್ವವನ್ನು ನೀಡಿದನು. ಉದಾಹರಣೆಗೆ ಪ್ ಎಂಬ ಧ್ವನಿಗೆ ಬ್ ಎಂಬ ಧ್ವನಿಯ ಒಂದು ಲಕ್ಷಣ ಮಾತ್ರ ವ್ಯತ್ಯಾಸವಿದೆ. ಈ ಲಕ್ಷಣವೇ ಘೋಷತ್ವ ಎಂದು ಧ್ವನಿಶಾಸ್ತ್ರಜ್ಞರು ಗುರುತಿಸುತ್ತಾರೆ. ಬ್ ಧ್ವನಿಯನ್ನು ನುಡಿಯುವಾಗ ಇರುವ ಘೋಷತ್ವ ಪ್ ಧ್ವನಿಯನ್ನು ನುಡಿಯುವಾಗ ಇರುವುದಿಲ್ಲ. ಹೀಗೆಯೇ ಬೇರೆ ಬೇರೆ ಧ್ವನಿಗಳನ್ನು ಲಕ್ಷಣಗಳ ಇರುವಿಕೆ ಅಥವಾ ಇಲ್ಲದಿರುವಿಕೆಯನ್ನು ಅವಲಂಬಿಸಿ ವಿವರಿಸುತ್ತಾನೆ.

ಹೀಗೆ ಧ್ವನಿಗಳ ನಡುವೆ ಇರುವ ಲಕ್ಷಣ ವ್ಯತ್ಯಾಸಗಳನ್ನು ಗುರುತಿಸಲು ಭಾಷಾಶಾಸ್ತ್ರದ ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತದೆ. ಅಂದರೆ, ಅವರು ವಿಶ್ಲೇಷಿಸುತ್ತಿರುವ ಭಾಷಾ ಮಾಹಿತಿಯ ಜೋಡಿಯಲ್ಲಿ ಯಾವುದಾದರೊಂದು ಲಕ್ಷಣ ಇದೆಯೋ ಇಲ್ಲವೋ ಎಂಬುದನ್ನು ಗುರುತಿಸುವುದು. ಭಾಷೆ ಮತ್ತು ಆಲೋಚನೆಗಳು ‘ಸಹಜ’ವಾಗಿಯೇ ಹೀಗೆ ‘ವೈರುಧ್ಯ’ಗಳ ಸರಣಿಯಾಗಿರುತ್ತವೆಂದು ಅವರಿಗೆ ಹೇಳಿಕೊಡಲಾಗುತ್ತದೆ.

ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ. ಈ ದ್ವಿದಾ ಭಿನ್ನತೆ ಭಾಷೆಯಲ್ಲಿ ಮೊದಲೇ ಇದ್ದು, ಅದನ್ನು ನಾವು ಗುರುತಿಸುತ್ತೇವೋ, ಅಥವಾ ನಮ್ಮ ಭಾಷಾ ವಿಶ್ಲೇಷಣೆಗೆ ಅನುಕೂಲಕರ ಎಂದು ನಾವೇ ಕಟ್ಟಿಕೊಳ್ಳುತ್ತೇವೋ ಎಂಬುದು ದ್ವಿದಾ ಭಿನ್ನತೆಗಳು ಭಾಷಾರಚನೆಗೆ ಸಹಜವೋ ಅಥವಾ ವಿಶ್ಲೇಷಕರಿಗೆ ಅವು ಸುಲಭದ ದಾರಿಯನ್ನು ಒದಗಿಸುವುದರಿಂದ ‘ಸಹಜ’ ಎಂದು ನಾವು ತಿಳಿಯುತ್ತೇವೆಯೋ? ಎರಡನೆಯ ಪ್ರಶ್ನೆ ನಾವು ಲಕ್ಷಣಗಳ ‘ಇರುವಿಕೆ’ ಅಥವಾ ‘ಇಲ್ಲದಿರುವಿಕೆ’ಯ ನೆಲೆಯಲ್ಲೇ ಆಲೋಚಿಸುತ್ತೇವೆ ಎನ್ನುವುದಾದರೆ, ಹೀಗೆ ಆಲೋಚಿಸುವುದೂ ಕೂಡ ನಮಗೆ ಹುಟ್ಟಿನಿಂದ ಬಂದುದೋ, ಅಥವಾ ಅದನ್ನು ನಾವು ಕಲಿಯುತ್ತೇವೆಯೋ?

ಇದಲ್ಲದೆ, ಮೂರನೆಯ ಪ್ರಶ್ನೆಯೂ ಒಂದಿದೆ. ಮೊದಲ ಎರಡು ಪ್ರಶ್ನೆಗಳಿಗೆ ಏನೇ ಉತ್ತರವಿರಲಿ. ಆ ಉತ್ತರಗಳು ಭಾಷಾ ವಿಶ್ಲೇಷಣೆಯ ಎಲ್ಲ ಹಂತಗಳಿಗೂ ಅನ್ವಯಿಸುತ್ತವೋ ಎಂಬುದು. ನಮ್ಮ ಶ್ರವಣಾಂಗಗಳಿಗೆ ಧ್ವನಿಯ ಲಕ್ಷಣಗಳ ಇರುವಿಕೆ, ಇಲ್ಲದಿರುವಿಕೆಗಳನ್ನು ಗುರುತಿಸುವುದು ಸುಲಭವಾಗಿರುವುದರಿಂದ ಈ ವೈರುಧ್ಯ ತತ್ವವು ಭಾಷೆಯ ಧ್ವನಿರಚನೆಯಲ್ಲಿ ಸಹಜವೆಂದು ತಿಳಿಯೋಣ. ಆದರೆ, ಭಾಷೆಯ ಇನ್ನಿತರ ಸ್ತರಗಳಾದ ವ್ಯಾಕರಣ ಮತ್ತು ಅರ್ಥರಚನೆಗಳಿಗೂ ಈ ತತ್ತ್ವಗಳು ‘ಸಹಜ’ ವೆಂದು ತಿಳಿಯಬೇಕೆ?

ಪದಗಳ ಅರ್ಥಗಳನ್ನು ವಿವರಿಸುವ ಒಂದು ಮಾದರಿ ಇದೆ. ಇದು ದ್ವಿದಾ ಭಿನ್ನತೆಯನ್ನು ಅವಲಂಬಿಸಿದೆ. ಈ ಮಾದರಿಯು ಒಂದು ಪದದ ಅರ್ಥವನ್ನು ಮೂಲಭೂತ ಲಕ್ಷಣಗಳ ಇರುವಿಕೆ, ಇಲ್ಲದಿರುವಿಕೆಗಳ ಸರಣಿ ಎನ್ನುವಂತೆ ಪರಿಗಣಿಸುತ್ತದೆ. ಉದಾಹರಣೆಗೆ ಪ್ರಾಣಿ ಎಂಬ ಪದವನ್ನು ನೋಡಿ. ಅದರಲ್ಲಿ ಚೇತನ ಎಂಬ ಲಕ್ಷಣ ಇದೆ. ಆದರೆ, ಮಾನವ ಎಂಬ ಲಕ್ಷಣ ಇಲ್ಲ. ಈ ಮೂಲಭೂತ ಲಕ್ಷಣಗಳು ಅಂತಸ್ಥವಾಗಿರುವುದರಿಂದ ದ್ವಿದಾ ಭಿನ್ನತೆಯನ್ನು ಗುರುತಿಸುವುದು ಮಾನವರ ಗ್ರಹಿಕೆಗೆ ಸಹಜವಾಗಿಯೇ ಲಭಿಸುವುದೆಂದು ವಾದಿಸಲಾಗಿದೆ.

ಇಲ್ಲಿ ಒಂದು ತೊಂದರೆ ಇದೆ. ಕೆಲವು ಲಕ್ಷಣಗಳನ್ನು ಹೀಗೆ ಸಹಜವಾಗಿಯೇ ಇರುವ, ಇಲ್ಲದಿರುವ ನೆಲೆಯಲ್ಲಿ ಗುರುತಿಸಬಹುದು. ಚೇತನತ್ವ ಮತ್ತು ಮಾನವತ್ವಗಳು ಅಂತಹ ಸಹಜ ಲಕ್ಷಣಗಳೆಂದು ನಂಬೋಣ. ಆದರೆ, ಎಳೆಯ/ಮುದಿ ಎಂಬ ಜೋಡಿಗೇನು ಹೇಳೋಣ?  ಮೇಲಿನ ಅರ್ಥವಿಶ್ಲೇಷಣೆಯ ಮಾದರಿಯು ಈ ಜೋಡಿಯನ್ನು ಒಂದೇ ಲಕ್ಷಣದಲ್ಲಿ ಅಳವಡಿಸಬೇಕು. ಅಂದರೆ, ಮುದಿತನ ಇದೆ ಅಥವಾ ಇಲ್ಲ ಎಂದು ಹೇಳಬೇಕಾಗುತ್ತದೆ.  ಆದರೆ, ಇದು ಅಷ್ಟು ಒಪ್ಪಿಗೆಯಾಗುವ ಮಾತಲ್ಲ. ಎಳೆಯ ಮತ್ತು ಮುದಿ ಎಂಬುದು ನಿಘಂಟಿನ ರಚನೆಗಳು. ವಯಸ್ಸು ಎಂಬುದು ವಿಚ್ಛೇದನೆಗೊಳ್ಳದ ಸರಣಿ. ಮುದಿ ಮತ್ತು ಎಳೆಯ ಎಂಬುದನ್ನು ಗೆರೆ ಎಳೆದು ಬೇರೆ ಮಾಡಲು ಬರುವುದಿಲ್ಲ. ಹಾಗಾಗಿ, ಅವೆರಡೂ ವಿರೋಧವುಳ್ಳ ಲಕ್ಷಣಗಳಲ್ಲ.

ಹಾಗಾದರೆ, ಗಂಡು/ಹೆಣ್ಣು ಎಂಬ ಜೋಡಿಗೆ ಏನು ಹೇಳೋಣ? ದೇಹರಚನೆಯನ್ನಷ್ಟೇ ಗಮನಿಸಿದರೆ ಸರಿ. ಇದೆ ಇಲ್ಲ ಎಂದು ಪಟ್ಟಿಯನ್ನು ಮಾಡಬಹುದು. ಪದಗಳ ಅರ್ಥವಿಶ್ಲೇಷಣೆಯ ಮೇಲೆ ಹೇಳಿದ ಮಾದರಿಯಲ್ಲಿ ಲಕ್ಷಣಗಳು ಪದಗಳಲ್ಲಿ ಅಂತಸ್ಥವಾಗಿರುತ್ತವೆಂದು ಹೇಳಲಾಗಿದೆ. ಆಗ ಹೆಂಡತಿ ಎಂಬ ಪದಕ್ಕೆ ಗಂಡ ಅಲ್ಲದುದು ಎಂಬ ವಿವರಣೆ ನೀಡಬೇಕಾಗುತ್ತದೆ. ಹೆಂಡತಿ ಪದಕ್ಕೆ ಹೆಣ್ಣುತನದ ಲಕ್ಷಣಗಳನ್ನು ಬಳಸಿ ವಿವರಣೆ ನೀಡುವುದೇನೋ ಸಹಜ. ಆದರೆ, ಜಂಡರ್ ಎಂಬುದು ಪರಸ್ಪರ ಸಂಬಂಧವಿಲ್ಲದ ಪದಗಳ ನಡುವಣ ದ್ವಿದಾ ಭಿನ್ನತೆಯ ನೆಲೆಯಲ್ಲಿ ವಿವರಣೆಗೆ ಒಳಗಾದಾಗ ಗೊಂದಲ ಹುಟ್ಟಿಕೊಳ್ಳುತ್ತದೆ. ಅಲ್ಲದೆ, ಈ ದ್ವಿದಾ ನೆಲೆಗಳ ನಡುವೆ ಶ್ರೇಣೀಕರಣವೂ ಇರುವುದರಿಂದಾಗಿ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಅಂದರೆ, ಹೆಣ್ಣನ್ನು ಗಂಡು ಅಲ್ಲದುದು ಎಂದು ವಿವರಿಸಿದಾಗ, ಆ ವಿವರಣೆಯನ್ನು ತಟಸ್ಥವೆಂದು ತಿಳಿಯುವುದು ಸಾಧ್ಯವಾಗುವುದಿಲ್ಲ.

ಗಂಡು ಆಗಿರುವುದು ಮತ್ತು ಆಗಿಲ್ಲದಿರುವುದು : ಅರ್ಥದ ನಕಾರಾತ್ಮಕ ನೆಲೆಯೇ?

ಡೇಲ್ ಸ್ಪೆಂಡರ್ ತನ್ನ ಪುಸ್ತಕ Man made language ನಲ್ಲಿ ಮೇಲಿನ ಅರ್ಥ ವಿವರಣೆ ಮಾದರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಹೆಣ್ಣು ನೆಲೆಯ ಅರ್ಥವನ್ನು ‘ಗಂಡು ಅಲ್ಲದುದು’ ಎಂದು ವಿವರಿಸಿದ ಕೂಡಲೇ ಭಾಷೆಯಲ್ಲಿ ಹೆಣ್ಣನ್ನು ನಕಾರಾತ್ಮಕ ನೆಲೆಗೆ ತಳ್ಳಿದಂತಾಗುತ್ತದೆ ಎನ್ನುತ್ತಾಳೆ.

ನನಗನ್ನಿಸುವಂತೆ ಡೇಲ್ ಸ್ಪೆಂಡರ್ ಇಲ್ಲೊಂದು ತಪ್ಪು ಮಾಡಿದ್ದಾಳೆ. ಭಾಷೆಯ ಪೂರ್ವಾಗ್ರಹ ಹಾಗೂ ಭಾಷಾಶಾಸ್ತ್ರಜ್ಞರು ಬಳಸುವ ವಿಶ್ಲೇಷಣೆಯ ಮಾದರಿಯ ಪೂರ್ವಾಗ್ರಹಗಳ ನಡುವೆ ಏನೂ ವ್ಯತ್ಯಾಸವಿಲ್ಲ ಎಂದು ತಿಳಿದಿದ್ದೇ ಈ ತಪ್ಪು. ನಿಜ, ಗಂಡಲ್ಲದುದು ಎಂದು ಹೇಳುವುದು ತಾರತಮ್ಯವನ್ನು ಸೂಚಿಸುತ್ತದೆ. ಅರ್ಥವಿಶ್ಲೇಷಣೆಯ ಈ ಮಾದರಿಯು ಎಲ್ಲ ದ್ವಿದಾ ಭಾವಗಳನ್ನು ಕೇವಲ ‘ಇರುವ ಅಥವಾ ‘ಇಲ್ಲದಿರುವ’ ನೆಲೆಯಲ್ಲಷ್ಟೇ ಗುರುತಿಸಬೇಕೆಂದು ನಂಬುತ್ತದೆ. ಆಗ, ಹೆಣ್ಣಲ್ಲದುದು ಎಂಬ ವಿವರಣೆಯು ಕೂಡಾ ಸಾಧುವಾದುದೇ ಆಗಬೇಕು. ಅಂದರೆ ಹೆಣ್ಣನ್ನು ಗಂಡಲ್ಲದುದು ಎಂದು ಹೇಳಿದರೇ ಹೊರತು, ಗಂಡನ್ನು ಹೆಣ್ಣಲ್ಲದುದು ಎಂದು ಹೇಳಲಿಲ್ಲ. ಇದೇ ಅವರ ವಿಶ್ಲೇಷಣೆಯ ಚೌಕಟ್ಟಿನಲ್ಲಿ ಗಂಡನ್ನೇ‘ಸಹಜ ಸ್ಥಿತಿ’ ಎಂದು ಗ್ರಹಿಸಿದ್ದರ ಸೂಚನೆಯಾಗಿದೆ.

ಆದರೆ, ಸ್ಪೆಂಡರ್ ತನ್ನ ವಾದದಲ್ಲಿ ಇನ್ನೊಂದು ನೆಲೆಗೆ ಜಿಗಿಯುತ್ತಾಳೆ. ‘‘ಈ ಲೋಕವನ್ನು ಮೂಲಭೂತವಾಗಿ ನಾವು ಗ್ರಹಿಸುವ ನೆಲೆಯಲ್ಲೇ ಗಂಡು ಸಕಾರಾತ್ಮಕ, ಹೆಣ್ಣು ಹಾಗಾಗಿಯೇ ನಕಾರಾತ್ಮಕ ಎಂದು ಭಾವಿಸುವ ಪ್ರವೃತ್ತಿ ಇದೆ’’ ಎನ್ನುತ್ತಾಳೆ. ಹೀಗೆ ಗ್ರಹಿಸುವುದು ‘ಯಾರಿಗೆ’ ಮೂಲಭೂತವಾದುದು? ಅರ್ಥವಿಶ್ಲೇಷಕರ ನೆಲೆಯಿಂದ ನೋಡಿದಾಗ ಇದು ಭಾಷಾಶಾಸ್ತ್ರಜ್ಞರು ರೂಪಿಸಿಕೊಂಡ ನಿಯಮ ಮಾತ್ರ ಎಂದು ತಿಳಿಯಬೇಕು. ಮೀಡ್, ಸಿಲೋನ್ ದ ಬೋವಾ, ಸೀಕ್ಸೂ ಮುಂತಾದವರು ಹೇಳಿದ್ದನ್ನು ಒಪ್ಪುವುದಾದರೆ, ಹೀಗೆ ಗ್ರಹಿಸುವ ನಿಯಮವು ಲಿಂಗತಾರತಮ್ಯವನ್ನು ಒಪ್ಪಿಕೊಂಡ ಪಾಶ್ಚಾತ್ಯ ತತ್ತ್ವಶಾಸ್ತ್ರಜ್ಞರಲ್ಲಿ ಲಾಗಾಯತಿನಿಂದಲೂ ಇದ್ದೇ ಇದೆ. ಹಾಗಿದ್ದಲ್ಲಿ ಈ ನಿಯಮವು ನಮ್ಮ ಭಾಷೆಯಲ್ಲೇ ಇದೆ ಎಂದೂ, ಆ ಭಾಷೆಯನ್ನಾಡುವ ಪ್ರತಿಯೊಬ್ಬರಲ್ಲೂ ಅದು ಸದಾಕಾಲ ನೆಲೆನಿಂತಿರುವುದೆಂದೂ ಹೇಳಿದಂತಾಯಿತೇನು?

ಈ ನಿಯಮವು ಭಾಷೆಯ ಅವಿನಾಭಾಗವೆಂದು ಹೇಳುವ ಮೂಲಕ ಇದೊಂದು ಸಾಂಸ್ಕೃತಿಕ ರಚನೆ ಎಂದು ತೋರಿಸಿಕೊಟ್ಟು, ಯಾರ ಹುನ್ನಾರಗಳನ್ನು ಡೇಲ್ ಸ್ಪೆಂಡರ್ ಬಯಲಿಗೆಳೆಯಬೇಕಿತ್ತೋ, ತನಗೇ ಗೊತ್ತಿಲ್ಲದಂತೆ ಅವರ ಲಿಂಗತಾರತಮ್ಯದ ಚಿಂತನೆಗಳು ಸಹಜವೆಂದು ನಂಬುವಂತೆ ಮಾಡಲು ನೆರವಾಗಿ ಬಿಟ್ಟಿದ್ದಾಳೆ. ಇಂಗ್ಲಿಶ್ ವ್ಯಾಕರಣದಲ್ಲಿರುವ ಇಂಥ ನಿಯಮಗಳನ್ನು ಭಾಷಾಶಾಸ್ತ್ರಜ್ಞರು ಸುಮ್ಮನೆ ಅನುಸರಿಸುತ್ತಿದ್ದಾರೆಂದು ಸ್ಪೆಂಡರ್ ಹೇಳಿದಂತಾಗಿದೆ. ಆದರೆ, ಅವರು ತಾವೇ ಅಂಥ ನಿಯಮವನ್ನು ಹುಟ್ಟು ಹಾಕುತ್ತಿದ್ದಾರೆಂದು ನಾನು ಹೇಳುತ್ತೇನೆ. ಜಂಡರ್ ಅನ್ನು ಯಾವುದೋ ಒಂದು ಗೊತ್ತಾದ ರೀತಿಯಲ್ಲಿ ಬಣ್ಣಿಸಿ, ಆ ರೀತಿಯೇ ಸಾರಭೂತವೆಂದೂ, ನಿಜವೆಂದೂ, ಬದಲಾಗದ್ದೆಂದೂ, ಸಹಜವೆಂದೂ, ಅತ್ಯಗತ್ಯವಾದುದೆಂದೂ, ನಂಬಿಸುವ ಹುನ್ನಾರದಂತಿದೆ. ಇದನ್ನೇ ಸಿಮೋನ್ ದ ಬೋವಾ ಮತ್ತು ಹೆಲನ್ ಸೀಕ್ಸೂ ಬಯಲಿಗೆಳೆಯಲು ಯತ್ನಿಸಿದ್ದು.

ಅರ್ಥ ವಿವರಣೆಯ ಮಾದರಿಯಲ್ಲಿ ದ್ವಿದಾ ಭಿನ್ನತೆಗಳು ‘ಸಹಜ ಮತ್ತು ಅಂತಸ್ಥ’ ಎಂದು ಹೇಳಿದ ನೆಲೆಗೆ ಮರಳಿ ಹೋಗೋಣ. ಆದರೆ, ನಾನು ನಿಘಂಟಿನಲ್ಲಿ ಕಾಣುವ ವಿರೋಧವುಳ್ಳ ಪದಗಳಿಗಿಂತ ಹೆಚ್ಚಾಗಿ ಸಾಂಸ್ಕೃತಿಕ ನೆಲೆಯ ವಿರೋಧಗಳನ್ನು ಕಲಿತುಕೊಳ್ಳುತ್ತೇವೆಂದು ಹೇಳುವವಳಿದ್ದೇನೆ. ಈ ಪ್ರಬಂಧದ ಮೊದಲಲ್ಲೇ ಹೇಳಿದ ರೂಪಕಾತ್ಮಕ ನೆಲೆಯ ಜಂಡರ್ ಲಕ್ಷಣಗಳು ಇಂಥವೇ ಆಗಿವೆ. ಇಲ್ಲಿ ನಾವು ಯಾವುದೇ ಒಂದು ನಿಯಮವನ್ನು ಪಾಲಿಸುವುದಿಲ್ಲ. ಸಂದರ್ಭಕ್ಕನುಗುಣವಾಗಿ ಬದಲಾಯಿಸುತ್ತಿರುತ್ತೇವೆ. ಹಾಗೆಯೇ ಒಂದು ಸಂಸ್ಕೃತಿಯಿಂದ ಇನ್ನೊಂದು ಸಂಸ್ಕೃತಿಗೂ ಇದು ಬೇರೆಯಾಗುತ್ತಲೇ ಇರುತ್ತದೆ.

ನಿಮ್ಮ ಶಾಲೆಯ ದಿನಗಳಲ್ಲಿ ವಿರುದ್ಧ ಪದಗಳನ್ನು ಕಲಿಸಲು ಯತ್ನಿಸಿದ್ದನ್ನು ನೆನಪು ಮಾಡಿಕೊಳ್ಳಿ. ನನ್ನ ದಿನಗಳಲ್ಲಂತೂ ಮಕ್ಕಳು ಕಪ್ಪು- ಬಿಳುಪು (ನೀವು ಭೌತಶಾಸ್ತ್ರವನ್ನು ಓದಿದ್ದರೆ ಮಾತ್ರ ಏನಾದರೂ ತಿಳಿಯಲು ಸಾಧ್ಯ) ಉತ್ತರ- ದಕ್ಷಿಣ, ಹಗಲು – ರಾತ್ರಿ(ಇಂದಿನ ದಿನಗಳಲ್ಲಿ ಇದೀಗ ಹಗಲು/ಸಂಜೆ ಆಗಿದೆ.) ಉದ್ದ – ಗಿಡ್ಡ – ಇಂಥವನ್ನೇ ಮಕ್ಕಳು ಕಲಿಯುತ್ತಿದ್ದುದು. ಈ ಪದಜೋಡಿಗಳನ್ನು ಹಟಮಾಡಿ ಕಲಿಸುತ್ತಿದ್ದುದನ್ನು ನೋಡಿದಾಗಲೇ ಅವುಗಳ ನಡುವೆ ‘ಇರುವ ವಿರೋಧವು’ ಸಹಜವಲ್ಲ ಎಂಬುದು ಗೊತ್ತಾಗುತ್ತದೆ. ಅವುಗಳ ವಿರುದ್ಧ ಪದಗಳೆಂದು ಕಲಿಸಲು ಹೂಡುತ್ತಿದ್ದ ತರ್ಕಗಳಲ್ಲಿ ಹೊಂದಾಣಿಕೆಯೇ ಇಲ್ಲ.  ಒಂದಕ್ಕೊಂದು ಢಿಕ್ಕಿ ಹೊಡೆಯುವಂತಿದೆ. ಇದರಿಂದಲೂ ಈ ಪದಜೋಡಿಗಳು ಸಹಜ ವಿರೋಧ ಜೋಡಿಗಳಲ್ಲ ಎಂದು ತಿಳಿಯುತ್ತದೆ. ಎಲ್ಲವನ್ನೂ ಸೀಳಿ ವಿರುದ್ಧ ನೆಲೆಯಲ್ಲಿ ನಿಲ್ಲಿಸುವುದು ‘ತಿದ್ದುವಿಕೆ’ಯ ಗುಣವೇ ಹೊರತು ಅದು ಅಂತಸ್ಥವಾದುದಲ್ಲ. ಹೀಗೆ ತಿದ್ದುವಿಕೆಯನ್ನು ‘ಬೆಳೆದ’ ಸಂಸ್ಕೃತಿಗಳು ಮಾನ್ಯ ಮಾಡುತ್ತವೆ. ಜಗತ್ತನ್ನು ಹೀಗೆ ಗ್ರಹಿಸುವ ಕುತರ್ಕ ವಿಧಾನಕ್ಕೆ ಮಣೆ ಹಾಕುತ್ತದೆ.

ಈ ವಾದದ ಎಳೆಯನ್ನು ಹಿಡಿದು ಮುಂದುವರೆಸುವುದಾದರೆ, ಗಂಡು, ಹೆಣ್ಣು ಎಂಬ ದ್ವಿದಾ ಭಿನ್ನತೆಗಳು ಅರ್ಥರಚನೆ ಮತ್ತು ಮಾನವರ ಗ್ರಹಿಕೆಯ ಮೂಲಭೂತ ತತ್ವಗಳಾಗಿರದೆ, ಅವುಗಳನ್ನು ವಿಶ್ಲೇಷಿಸುವಾಗ ಹೊಸದಾಗಿ ಕಸಿ ಮಾಡಿದ ತತ್ತ್ವಗಳಾಗಿವೆ ಎಂದು ಹೇಳಬೇಕಾಗುತ್ತದೆ. ಈ ದ್ವಿದಾ ಭಿನ್ನತೆಯು ಸಹಜ ಸಂಗತಿಗಳಿಂದ ರೂಪುಗೊಂಡಿರದೆ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮೈದಳೆದಿರುತ್ತದೆ. ಅಲ್ಲದೆ, ಭಾಷೆಯ ಸಂಕೀರ್ಣತೆಯನ್ನು ಇದು ಯಶಸ್ವಿಯಾಗಿ ಹಿಡಿದಿಡಲಾರದು.

ಹಾಗೆಂದ ಮಾತ್ರಕ್ಕೆ ಹೆಣ್ಣು ಗಂಡು ಎಂಬ ಭಿನ್ನತೆಯನ್ನೇ ನಿರಾಕರಿಸಬೇಕೆಂದಿಲ್ಲ.  ಸ್ತ್ರೀವಾದಿಗಳು ಹೆಣ್ಣು, ಗಂಡು ಎಂಬ ಭಿನ್ನತೆಯು ಸಹಜವೆನ್ನುವುದನ್ನು ನಿರಾಕರಿಸುತ್ತಾರೆ.   ಅದು ಸಾಂಸ್ಕೃತಿಕವಾಗಿ ರೂಪುಗೊಂಡಿದ್ದು ಎಂದು ತಿಳಿದಾಗ ಮಾತ್ರವೇ ಅದನ್ನು ವಿರೋಧಿಸಬಹುದು ಹಾಗೂ ಬದಲಿಸಬಹುದು. ಆದರೆ, ಇಂಥ ಸಾಂಸ್ಕೃತಿಕ ನಂಬಿಕೆಗಳ ದುಷ್ಪರಿಣಾಮಗಳನ್ನು ಏನೂ ಅಲ್ಲ ಎಂದು ಬದಿಗೆ ಸರಿಸಲು ಆಗುವುದಿಲ್ಲ. ಭಾಷೆ ಮತ್ತು ಅದರ ವ್ಯಾಕರಣದ ಮೇಲೆ ಈ ಪರಿಣಾಮಗಳು ಇದ್ದೇ ಇವೆ. ಜಂಡರ್ ಎಂಬ ವ್ಯಾಕರಣ ಪರಿಕಲ್ಪನೆಯನ್ನು ಪರೀಕ್ಷಿಸಿದರೆ ಈ ಅಂಶ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಜಂಡರ್ ಪ್ರಸಂಗ : ವ್ಯಾಕರಣ ಮತ್ತು ತಾತ್ತ್ವಿಕತೆ

ಭಾಷೆಯಲ್ಲಿ ಜಂಡರ್ ಎಂಬುದು ಅತ್ಯಂತ ಮುಖ್ಯ ಮತ್ತು ಪರಿಚಿತವಾದ ಪರಿಕಲ್ಪನೆಯಾಗಿದೆ.  ನೂರಾರು ವರ್ಷಗಳಿಂದ ಅದನ್ನು ವಿಶ್ಲೇಷಿಸಿ ಚರ್ಚಿಸಲಾಗಿದೆ. ಆದರೆ, ಈ ವಿಶ್ಲೇಷಣೆ ಮತ್ತು ಚರ್ಚೆಗಳೆಲ್ಲವೂ ಲಿಂಗಭಿನ್ನತೆ ಮತ್ತು ಗಂಡಿನ ಯಜಮಾನ್ಯದಂತಹ ಭಾಷೇತರ ತತ್ತ್ವಗಳ ಹಿಡಿತಕ್ಕೆ ಸಿಲುಕಿ ಬಿಟ್ಟಿವೆ.

ಜಂಡರ್ ವ್ಯಾಖ್ಯಾನ

ಪ್ರಾಚೀನ ಗ್ರೀಸ್ ದೇಶದಲ್ಲಿ ಪ್ರಚಲಿತವಿದ್ದ ಭಾಷಾ ಚಿಂತನೆಗಳಲ್ಲೇ ಜಂಡರ್ ಎಂಬ ಪರಿಕಲ್ಪನೆ ಹುಟ್ಟಿಕೊಂಡದ್ದು. ಪ್ರೊಟೊಗೊರಸ್ ಆದಿಚಿಂತಕನೆಂದು ಹೇಳಲಾಗಿದೆ. ಈ ಪದವು ‘ಗುಂಪು’ಇಲ್ಲವೇ ‘ಬಗೆ’ ಎಂಬ ಅರ್ಥವುಳ್ಳ ಪದಗಳಿಂದ ಹುಟ್ಟಿದಂತಿದೆ. ಗ್ರೀಕ್ ನಾಮಪದಗಳನ್ನು ಸಾಂಪ್ರದಾಯಿಕವಾಗಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ತಟಸ್ಥಲಿಂಗ ಎಂದು ವರ್ಗೀಕರಿಸುವ ಪದ್ಧತಿ ಇದೆ.

ಹಲವು ಯೂರೋಪಿಯನ್ ಭಾಷೆಗಳಲ್ಲಿರುವಂತೆ ಗ್ರೀಕ್ ಭಾಷೆಯಲ್ಲೂ ವ್ಯಾಕರಣಾತ್ಮಕ ಜಂಡರ್ ಎಂಬುದಿದೆ. ಇಂತಹ ವ್ಯವಸ್ಥೆಯುಳ್ಳ ಭಾಷೆಗಳಲ್ಲಿ ನಾಮಪದಗಳನ್ನು ಅವುಗಳ ಶಬ್ದರೂಪವನ್ನು ಅನುಸರಿಸಿ ವರ್ಗೀಕರಿಸಲಾಗುತ್ತದೆ. ಉದಾಹರಣೆಗೆ, ಅವುಗಳ ಅಂತರ್ಗಮಕ ರೂಪಗಳು, ವಿಶೇಷಣಗಳೊಡನೆ ಅವು ವರ್ತಿಸುವ ರೀತಿ ಮುಂತಾದವು ಪರಿಗಣನೆಗೆ ಬರುತ್ತದೆ. ಪುಲ್ಲಿಂಗ, ಸ್ತ್ರೀಲಿಂಗ ಮತ್ತು ತಟಸ್ಥ ಎಂಬ ಹಣೆಪಟ್ಟಿಗೂ, ಆ ಪದಗಳು ಲೋಕದಲ್ಲಿ ಹೊಂದಿರುವ ಅರ್ಥಕ್ಕೂ ಯಾವ ಸಂಬಂಧವೂ ಇರುವುದಿಲ್ಲ.  ಉದಾಹರಣೆಗೆ, ಮೇಜು ಎಂಬುದಕ್ಕೆ ಲ್ಯಾಟಿನ್ ಪದ mensa. ಇದರ ಕೊನೆಯಲ್ಲಿರುವ ‘ಸ್ವರದಿಂದಾಗಿ ಆ ಪದವನ್ನು ಸ್ತ್ರೀಲಿಂಗವೆಂದು ಗುರುತಿಸಲಾಗುತ್ತದೆ. ಇದಕ್ಕೆ ಹತ್ತುವ ನಾಮವಿಶೇಷಣವು ಸ್ತ್ರೀಲಿಂಗ ರೂಪದಲ್ಲೇ ಇರುತ್ತದೆ. ಅರ್ಥವಿಶೇಷಣೆಯ ನೆಲೆಗೆ ಹೋಗಿ ನೋಡಿದರೆ mensa ಪದಕ್ಕೆ ಅಚೇತನ ಲಕ್ಷಣವನ್ನು ಹೇಳಬೇಕು. ಅಚೇತನವಾದದ್ದು ಸ್ತ್ರೀಲಿಂಗ ರೂಪವಾಗುವುದು ಸಾಧ್ಯವಾಗದು.

ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ (ಆಧುನಿಕ ಜರ್ಮನ್ ಭಾಷೆಯಲ್ಲಿ ಕೂಡಾ) ಮೂರು ಜಂಡರ್‌ಗಳಿವೆ. ಕೆಲವು ಭಾಷೆಗಳಲ್ಲಿ ಎರಡೇ ಜಂಡರ್‌ಗಳಿವೆ. ಉದಾಹರಣೆಗೆ ಫ್ರೆಂಚ್, ಮತ್ತೆ ಕೆಲವು ಭಾಷೆಗಳಲ್ಲಿ ಇನ್ನೂ ಹೆಚ್ಚು ಸಂಖ್ಯೆಯ ಜಂಡರ್‌ಗಳಿವೆ. ಉದಾಹರಣೆಗೆ, ಆಫ್ರಿಕಾದ ಬಂಟು ಭಾಷೆಗಳು. ಇದೆಲ್ಲವನ್ನೂ ಗಮಸಿದಾಗ ವ್ಯಾಕರಣಾತ್ಮಕ ಜಂಡರ್‌ಗೆ  ಲೋಕಸಂವಾದಿತ್ವ ಮುಖ್ಯವಲ್ಲ, ಪದಗಳ ಶಬ್ದರೂಪವೇ ಆಧಾರ ಎನ್ನುವುದು ಇನ್ನಷ್ಟು ಸ್ಪಷ್ಟವಾಗುತ್ತದೆ.

ಇದಕ್ಕೆ ಭಿನ್ನವಾಗಿ ಇಂಗ್ಲಿಶ್ ಬೇರೆ ರೀತಿಯ ಜಂಡರ್ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ.  (ರೂಪಿಸಿಕೊಂಡಿದೆ ಎಂದದ್ದಕ್ಕೆ ಕಾರಣಗಳಿವೆ. ಅದರ ಹಳೆಯ ಹಂತದಲ್ಲಿ ಮೂರು ಬಗೆಯ ಜಂಡರ್ ವರ್ಗೀಕರಣ ಇತ್ತು; ಮತ್ತು ಅದು ಇಂದಿನ ಜರ್ಮಾನಿಕ್ ಭಾಷೆಗಳ ಚಹರೆಯನ್ನು ಪಡೆದಿತ್ತು.) ಇಂಗ್ಲಿಶ್‌ನಲ್ಲಿ ಜಂಡರ್ ಅನ್ನು ಗುರುತಿಸಲು ಪದದ ಅರ್ಥ ಮುಖ್ಯವೇ ಹೊರತು, ಅದರ ಶಬ್ದರೂಪವಲ್ಲ. ಲ್ಯಾಟಿನ್ mensa ಕ್ಕೆ ಸಂವಾದಿಯಾದ ಇಂಗ್ಲಿಶ್‌ನ table ಈ ಭಾಷೆಯಲ್ಲಿ ಯಾವಾಗಲೂ ತಟಸ್ಥ ಲಿಂಗವೇ.  ಇದಕ್ಕೆ ಬದಲಿಯಾಗಿ it ಎಂಬ ಸರ್ವನಾಮ ಬಳಕೆಯಾಗುತ್ತದೆ.  table  ಅಚೇತನ ವಸ್ತುವಾದ್ದರಿಂದ ಅದು ತಟಸ್ಥ ಲಿಂಗವರ್ಗಕ್ಕೆ ಸೇರಿದೆ. ಆದರೆ, ಜೈವಿಕವಾಗಿ ಲಿಂಗಚಹರೆಯನ್ನುಳ್ಳ ಯಾವುದೇ ಪದವನ್ನು ಸ್ತ್ರೀ ಅಥವಾ ಪುಲ್ಲಿಂಗ ಎಂದು ಗುರುತಿಸಲಾಗುತ್ತದೆ. ಮತ್ತೆ ಕೆಲವು ಪದಗಳು ಗಂಡು, ಹೆಣ್ಣು ಇಬ್ಬರನ್ನೂ ಸೂಚಿಸಬಹುದು. ಉದಾಹರಣೆಗೆ, driver, friend – ಮುಂತಾದವು. ಇಂಥ ಪದಗಳನ್ನು common gender ಎಂದು ಗುರುತಿಸಲಾಗುತ್ತದೆ. ಈ ವರ್ಗಕ್ಕೆ ಸೇರಿದ ಪದಗಳ ಬದಲಿಗೆ ಬರುವ ಸರ್ವನಾಮ ರೂಪ ಯಾವುದಾಗಬೇಕೆಂಬುದು ಪ್ರಸಂಗಾನುಸಾರ ನಿರ್ಧಾರವಾಗುತ್ತದೆ.  driver ಪದಕ್ಕೆ he/she ಎರಡರಲ್ಲೊಂದು ಸರ್ವನಾಮವಾಗಿ ಬರಬಹುದು.

ಅರ್ಥಾನುಸಾರಿಯಾದ ಇಂಥ ಜಂಡರ್ ವರ್ಗೀಕರಣವನ್ನು ಸಹಜ ಜಂಡರ್ ಎನ್ನುತ್ತಾರೆ.  ಇಂಗ್ಲಿಶ್ ಭಾಷಿಕರಿಗೆ ಬೇರೆ ಕೆಲವು ಭಾಷೆಗಳಲ್ಲಿ ಇರುವಂತೆ ಅಚೇತನ ವಸ್ತುಗಳಿಗೂ ಪುಂ/ಸ್ತ್ರೀ ಲಿಂಗವನ್ನು ಹಚ್ಚುವುದು ತಲೆ ಬಿಸಿ ಮಾಡುತ್ತದೆ. (ರೋಸೆನ್‌ಥಾಲ್ ನಡೆಸಿದ ಪ್ರಯೋಗದ ಚೌಕಟ್ಟಿನಲ್ಲಿ ನೋಡಿದಾಗ ಇಂಗ್ಲಿಶ್ ಭಾಷಿಕರು ಅಷ್ಟು ತಲೆ ಬಿಸಿ ಮಾಡಿಕೊಳ್ಳುವ ಆಗತ್ಯವಿಲ್ಲವೆಂದು  ತೋರುತ್ತದೆ.)

ನಾನು ಈ ವರೆಗೆ ವ್ಯಾಕರಣ ಪುಸ್ತಕಗಳಲ್ಲಿ ದೊರೆಯುವ ಸಿದ್ದ ಚೌಕಟ್ಟುಗಳನ್ನು ವಿವರಿಸಿದ್ದೇನೆ. ಬಳಿಕೆಯಲ್ಲಿ ಇದೆಲ್ಲವೂ ಹೀಗೆ ಇರುವುದಿಲ್ಲ. ಸ್ತ್ರೀವಾದಿಗಳು ಬಳಕೆಯಲ್ಲಿ ಕಾಣುವ ಗೋಜಲುಗಳಿಗೆ ಪ್ರತಿಕ್ರಿಯಿಸಿರುವುದು ಸಕಾರಣವಾಗಿದೆ.

ಉದಾಹರಣೆಗೆ, ಮುಂದೆ ನೀಡಿದ ಈ ವಾಕ್ಯವನ್ನು ನೋಡಿ (ಈ ವಾಕ್ಯವನ್ನು women’s journal ನಿಂದ ಆಯ್ದುಕೊಂಡಿದೆ)

Man is unique among the apes in that he grows a long beard and it is to this that he owes his superior intelligence.

ಈ ವಾಕ್ಯವನ್ನು ಬರೆದ ಇಲ್ಲವೇ ಓದಿದ ವ್ಯಕ್ತಿ ಗಂಡು ನೆಲೆಯಿಂದ ಗಮನಿಸಿದ್ದರೆ ಮಾತ್ರ ಇಲ್ಲಿ ಸಹಜ ಜಂಡರ್ ಎಂಬುದು ಬಳಕೆಯಾಗಿದೆ ಎಂಬ ನಿಲುವಿಗೆ ಬರಲು ಸಾಧ್ಯ.

ಇದಕ್ಕೆ ಭಿನ್ನವಾಗಿ ಜರ್ಮನ್ ಭಾಷೆಯ ಭಾಷಾ ತಜ್ಞರು ೧೯ನೆಯ ಶತಮಾನದಲ್ಲಿ  ವ್ಯಾಕರಣಾತ್ಮಕ ಜಂಡರ್ ವರ್ಗೀಕರಣಕ್ಕೂ ಅರ್ಥದ ನೆಲೆಯ ಬೆಂಬಲವಿದೆ ಎಂದು ಸಾಧಿಸಲು ಬಲು ಕಷ್ಟಪಟ್ಟಿದ್ದಾರೆ. ಇದೆಲ್ಲವನ್ನು ಕಂಡಾಗ ಒಂದು ಪ್ರಶ್ನೆಯನ್ನು ಕೇಳಬೇಕೆನ್ನುಸುತ್ತದೆ. ಜಂಡರ್‌ಗೂ ಮತ್ತು ಲಿಂಗಕ್ಕೂ ಇರುವ ನಿಜವಾದ ಸಂಬಂಧವೇನು?