ವ್ಯಾಕರಣಾತ್ಮಕ ಜಂಡರ್ : ಪರಿಶೀಲನೆ

ವ್ಯಾಕರಣಾತ್ಮಕ ಜಂಡರ್‌ಗೂ, ಲಿಂಗಭಿನ್ನತೆಗೂ ಯಾವ ಸಂಬಂಧವೂ ಇಲ್ಲ. ಇದರಿಂದಾಗಿ  ಸ್ತ್ರೀವಾದಿಗಳು ಈ ಪರಿಕಲ್ಪನೆಯನ್ನು ಅಷ್ಟೇನೂ ಮುಖ್ಯವಲ್ಲವೆಂದು ತಳ್ಳಿ ಹಾಕುವುದಾಗಿ ನೀವು ತಿಳಿಯಬಹುದು. ಇಂಗ್ಲಿಶ್ ಮಾತಾಡುವ ಸ್ತ್ರೀವಾದಿಗಳು ನಿಜಕ್ಕೂ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ, ಯೂರೋಪಿಯನ್ ವಿದ್ವಾಂಸರು ಇದನ್ನು ಚರ್ಚೆಗಾಗಿ ಕೈಗೆತ್ತಿಕೊಂಡಿದ್ದಾರೆ. ಹೀಗೆ ಮಾಡುವುದಕ್ಕೆ ಇರುವ ಕಾರಣಗಳನ್ನು ಜರ್ಮನ್ ಸ್ತ್ರೀವಾದಿ ಮೇರಿಲೂಸಿ ಜಾನ್‌ಸನ್-ಜೂಲಿಯಟ್ ಎಂಬಾಕೆಯ ಮಾತುಗಳಲ್ಲಿ ನೋಡೋಣ. ಎರಡು ಸಾವಿರ  ವರ್ಷಗಳಿಂದ ಬಗೆಹರಿಯದ ಪ್ರಶ್ನೆಯೊಂದಿದೆ.  ನಾಮಪದ, ಸರ್ವನಾಮ, ಹಾಗೂ ಅರ್ಟಿಕಲ್‌ಗಳ ಪದಾಂತ್ಯಗಳಿಗೂ, ನಾವು ಹೆಣ್ಣು, ಗಂಡು ಎಂದು ತಿಳಿದಿರುವ ನೆಲೆಗಳಿಗೂ ಏನಾದರೂ ಸಂಬಂಧವಿದೆಯೇ ಎಂಬುದೇ ಆ ಪ್ರಶ್ನೆ. ಇಂದಿನ ಭಾಷಾಶಾಸ್ತ್ರಜ್ಞರಿಗೆ ಈ ಪ್ರಶ್ನೆ ತಲೆತಿರುಕತನದ್ದು ಎನ್ನಿಸಬಹುದು. ಆದರೆ, ಭಾಷಾಶಾಸ್ತ್ರ ಕುರಿತು ಬಹು ಖ್ಯಾತ ಪ್ರವೇಶಿಕೆಯನ್ನು ಬರೆದ ಜಾನ್ ಲಯನ್ಸ್ ಪ್ರಕಾರ ಜಂಡರ್ ಎಂಬುದು ಯಾವುದೋ ಒಂದು ಬಗೆಯ ಅರ್ಥದ ಸೆಳಕನ್ನು ಬಿಂಬಿಸುತ್ತಿರುತ್ತದೆ. ಆದರೆ, ಈ ಸೆಳಕು ಲಿಂಗಸಂಬಂಧಿಯಾಗಿರಬೇಕಿಲ್ಲ. ಪ್ರೊಟೊಗೊರಸ್ ನಿಂದ ಮೊದಲುಗೊಂಡು ೧೯ನೇ ಶತಮಾನದ  ವಿದ್ವಾಂಸರವರೆಗೆ ಯಾರಾದರೂ ಮೇಲಿನ ನಿಲುವನ್ನು ಒಪ್ಪಿಯಾರೆಂದು ತೋರುವುದಿಲ್ಲ. ಅವರೆಲ್ಲರಿಗೂ ಜಂಡರ್ ಲಿಂಗಸಂಬಂಧಿಯೇ ಆಗಿರುತ್ತದೆ. ಈ ಸಂಬಂಧ ರೂಪಕಾತ್ಮಕ ನೆಲೆಯಲ್ಲೂ ಇರಬಹುದು, ಅಷ್ಟೇ. ನಿಸ್ಸಂದೇಹವಾಗಿ ಇಂಥ ಚಿಂತನೆಯು ಒಂದು ತಾತ್ವಿಕ ತಳಹದಿಯನ್ನು ಹೊಂದಿದೆ. ಇಡೀ ಲೋಕವನ್ನು ಗಂಡು, ಹೆಣ್ಣು ಎಂದು ಒಡೆದು ನೋಡುವ ಗೀಳು ಅಂದೂ ಇತ್ತು, ಇಂದೂ ಇದೆ.

ಗ್ರೀಕ್ ಭಾಷೆಯಲ್ಲಿ ಜಂಡರ್ ವರ್ಗೀಕರಿಸುತ್ತಿದ್ದ ಬಗೆಯಲ್ಲಿ ತರ್ಕವಿಲ್ಲ ಮತ್ತು ಹೊಂದಾಣಿಕೆ  ಇಲ್ಲ ಎಂದು ಪ್ರೊಟೊಗೊರಸ್ ತಿಳಿದಿದ್ದ. ಒಂದೇ ವಸ್ತುವನ್ನು ಅರ್ಥವಾಗುಳ್ಳ ಎರಡು ಬೇರೆ ಬೇರೆ ಪದಗಳನ್ನು ಬೇರೆ ಬೇರೆ ಜಂಡರ್ ವರ್ಗಕ್ಕೆ ಸೇರಿಸಲಾಗುತ್ತಿತ್ತು. ಇದೆಲ್ಲವನ್ನೂ ಸುಧಾರಿಸಲು ಆತ ಮುಂದಾದ (ಅರಿಸ್ಟೊಫೆನಸ್ ಇವನನ್ನು ಗೇಲಿ ಮಾಡಿದ್ದಾನೆ. ಸುಧಾರಣೆ ಯಶಸ್ಸು ಪಡೆಯಲಿಲ್ಲ.) ಆ ಮುಂದಿನ ವಿದ್ವಾಂಸರು ಜಂಡರ್ ವಿಭಜನೆಯನ್ನು ತರ್ಕಬದ್ದ ಎಂದು ಸಾಧಿಸಲು ಪೈಪೋಟಿ ನಡೆಸಿದರು. ಇದಕ್ಕಾಗಿ ಅವರು ಹುಡುಕಿಕೊಂಡ ತರ್ಕವು ಲಿಂಗ ಭಿನ್ನತೆ ಮತ್ತು ಗಂಡಿನ ಯಜಮಾನ್ಯವನ್ನು ಅವಲಂಬಿಸಿತ್ತು.

೧೯ನೇ ಶತಮಾನದ ಜರ್ಮನ್ ಭಾಷಾಶಾಸ್ತ್ರಜ್ಞ ಯಾಕೊಬ್ ಗ್ರಿಮ್ ವ್ಯಾಕರಣಾತ್ಮಕ ಜಂಡರ್ ಪರಿಕಲ್ಪನೆಯು ಕೆಲವು ನೆಲೆಗಳಲ್ಲಿ ಸಹಜ ಜಂಡರ್‌ಗಿಂತ ಹೆಚ್ಚು ಪರಿಷ್ಕೃತ ಪರಿಕಲ್ಪನೆಯಾಗಿದೆ ಎಂದು ನಂಬಿದ್ದನು. ಸಹಜ ಜಂಡರ್ ಎಂಬುದು ಜೈವಿಕ ಲಿಂಗರಚನೆಯಂತಹ ಒರಟು ಮಾಹಿತಿಯನ್ನು ಅವಲಂಬಿಸಿದ್ದರೆ, ಗಂಡು ಹೆಣ್ಣುಗಳ ಗುಣಲಕ್ಷಣಗಳನ್ನು ಹೆಚ್ಚು ಅಮೂರ್ತ ದೈವಿಕ ನೆಲೆಯಲ್ಲಿ ವ್ಯಾಕರಣಾತ್ಮಕ ಜಂಡರ್ ಪರಿಗಣಿಸುವುದೆಂದು ವಾದಿಸಿದನು. ಅಂದರೆ, ಭಾಷಿಕರು ಹೆಚ್ಚು ಪ್ರಜ್ಞಾವಂತರಾಗಿ ಉನ್ನತ ನೆಲೆಯ ತರ್ಕವನ್ನು ಬಳಸಲು ಸಿದ್ದಗೊಂಡಾಗ ಆ ಭಾಷೆಯಲ್ಲಿ ವ್ಯಾಕರಣಾತ್ಮಕ ಜಂಡರ್ ಮೈದಳೆಯುತ್ತದೆ ಎಂದಾಯ್ತು.

ಜಂಡರ್‌ಗೆ ಸಂಬಂಧಸಿದಂತೆ ಗ್ರಿಮ್ ತನ್ನ ತರ್ಕವನ್ನು ಮತ್ತಷ್ಟು ವಿಶದಪಡಿಸುತ್ತಾನೆ. ಗಂಡು ಅಂದರೆ ಪ್ರಾಚೀನವೂ, ಬೃಹತ್ತೂ, ದೃಢವೂ, ಅನಮ್ಯವೂ, ತ್ವರಿತ ಗತಿಯುಳ್ಳದ್ದೂ, ಕ್ರಿಯಾಶೀಲವೂ, ಜಂಗಮವೂ, ಉತ್ಪಾದಕವೂ ಆಗಿರುವಂಥದು. ಹೆಣ್ಣು ಎಂದರೆ ಈಚಿನದೂ, ಕಿರಿದೂ, ನಯವಾದುದೂ, ಸ್ಥಿರವಾದುದೂ, ನೋವುಣ್ಣುವುದೂ, ಪಡೆದುಕೊಳ್ಳುವುದೂ ಎಂದಾಗುತ್ತದೆ.

ಜಾನ್‌ಸನ್-ಜೂಲಿಯಟ್ ಪ್ರಕಾರ ಕೆಲವು ಬರಹಗಾರರು ಗ್ರಿಮ್‌ನ ಈ ಪ್ರಮೇಯವನ್ನು  ತಲೆಕೆಳಗು ಮಾಡಿದರು. ಒಂದು ಪದದ ವ್ಯಾಕರಣಾತ್ಮಕ ಜಂಡರ್ ಯಾವುದೋ ಅದೇ ಆ ಪದವು ಗಂಡು ಇಲ್ಲವೇ ಹೆಣ್ಣು ಎಂಬುದನ್ನು ಸೂಚಿಸಿಬಿಡುವುದು ಎಂದು ತಿಳಿದರು. ತರ್ಕ ಎಂಬ ಅರ್ಥವನ್ನು ನೀಡುವ ಜರ್ಮನ್ ಪದ ಪುಲ್ಲಿಂಗವಾಗಿದೆ. ಆದ್ದರಿಂದ ಹೆಂಗಸರು ತರ್ಕಶೂನ್ಯರು ಎಂದು ಥಿಯೊಡರ್ ಹಿಪ್ಪೆಲ್ ವಾದಿಸಿದನು. (ಫ್ರೆಂಚ್‌ನಲ್ಲಿ ತರ್ಕ ಎಂಬ ಅರ್ಥವುಳ್ಳ ಪದ raixon-ಸ್ತ್ರೀಲಿಂಗವಾಗಿದೆ. ಹಾಗಿದ್ದರೆ, ಇಲ್ಲೇನು ಮಾಡೋಣ?)ಸಧ್ಯ, ಹಿಪ್ಪಲ್ ತಾನು ಹೇಳಿದ್ದನ್ನು ನಿಜವೆಂದು ನಂಬಲಿಲ್ಲವೆನ್ನೋಣ. ಸುಮ್ಮನೆ ತನ್ನ ಜಾಣತನವನ್ನು ತೋರಿಸಲು ಹೀಗೆ ಹೇಳಿರಬಹುದು. ಇಂತಹ ಜಾಣತನ ಮೆರೆಸುವ ಎಷ್ಟೋ ಮಾತುಗಳು ಪರಿಗಣನೆಗೂ ಬರದಷ್ಟು ಬಾಲಿಶವಾಗಿವೆ.

ಇಂತಹ ವಿಶ್ಲೇಷಣೆಗಳಲ್ಲಿ ವ್ಯಾಕರಣಾತ್ಮಕ ಜಂಡರ್‌ಗೂ ಗಂಡು, ಹೆಣ್ಣು ಭಿನ್ನತೆಗೂ ನೇರ ನಂಟು ಕಲ್ಪಿಸುವ ನೆಲೆಗಳಿವೆ. ಇವೆಲ್ಲವೂ ಪುಂ, ಸ್ತ್ರೀ ಮತ್ತು ತಟಸ್ಥ ಲಿಂಗಗಳು ಶ್ರೇಣೀಕೃತ ಸಂಬಂಧ ಹೊಂದಿವೆ ಎಂದು ನಂಬಿದ್ದವು. ಕೆಲವು ಭಾಷೆಗಳಂತೂ ಈ ನಂಬಿಕೆಯನ್ನು ದೃಡಪಡಿಸುವಂತೆ ವರ್ತಿಸುತ್ತವೆ. ಜಾನ್‌ಸನ್-ಜೂಲಿಯಟ್ ದಕ್ಷಿಣ ಭಾರತದ ಭಾಷೆಯಾದ ಕೊಂಕಣಿಯಿಂದ ಒಂದು ನಿದರ್ಶನ ನೀಡಿದ್ದಾಳೆ. ಆ ಭಾಷೆಯಲ್ಲಿ ಮದುವೆಯಾದ ಹೆಂಗಸಿಗೆ ಸ್ತ್ರೀಲಿಂಗ ರೂಪವಿದ್ದರೆ, ಕನ್ಯೆ ಇಲ್ಲವೇ ವಿಧವೆಗೆ (ಅವರಿಗಿರುವ ಸಾಮಾಜಿಕವಾದ ಕೆಳ ಸ್ಥಾನಮಾನಗಳಿಗನುಗುಣವಾಗಿ) ತಟಸ್ಥ ಲಿಂಗ ರೂಪವಿದೆ.

ಕೆಲವು ಭಾಷೆಗಳಲ್ಲಿ ಚೈತನ್ಯವನ್ನು ಪದಗಳ ಒಂದು ಲಕ್ಷಣವನ್ನಾಗಿ ಪರಿಗಣಿಸಲಾಗುತ್ತದೆ. ಸ್ಲೊವಾನಿಕ್ ಭಾಷೆಗಳಲ್ಲಿ ಪದಗಳಿಗಿರುವ ಚೈತನ್ಯದ ಪ್ರಮಾಣವನ್ನು ಅವುಗಳಿಗೆ ಹತ್ತುವ ವಿಭಕ್ತಿ ಪ್ರತ್ಯಯಗಳ ಮೂಲಕ ಸೂಚಿಸಲಾಗುವುದೆಂದು ಬರ್ನಾರ್ಡ್ ಕಾಮ್ರಿ ಹೇಳುತ್ತಾನೆ. ಇಂತಹ ಭಾಷೆಗಳಲ್ಲಿ ಆ ಪದಗಳಿಗಿರುವ ಜಂಡರ್ ಮುಖ್ಯವಾಗುತ್ತದೆ. ಅಂದರೆ, ಹೆಂಗಸರಿಗೆ ಗಂಡಿಸರಿಗಿಂತ ಕಡಿಮೆ ಚೈತನ್ಯವನ್ನು ಸೂಚಿಸುವ ಪ್ರತ್ಯಯಗಳು ಸೇರುತ್ತವೆ. ಕಾಮ್ರಿ ಮುಂದುವರೆದು ಇನ್ನೊಂದು ಸಂಗತಿ ತಿಳಿಸುತ್ತಾನೆ. ಉನ್ನತ ಚೈತನ್ಯವನ್ನು ಸೂಚಿಸುವ ಪ್ರತ್ಯಯಗಳು ಆ ಭಾಷೆಗಳ ಹಳೆಯ ರೂಪಗಳಲ್ಲಿ ‘‘ಗಂಡಸರಿಗೆ, ವಯಸ್ಕರಿಗೆ, ಮುಕ್ತರಿಗೆ, ಆರೋಗ್ಯವಂತರಿಗೆ ಮಾತ್ರ ಹತ್ತುತ್ತಿದ್ದವೇ ಹೊರತು, ಹೆಂಗಸರು, ಮಕ್ಕಳು, ಗುಲಾಮರು ಮತ್ತು ವಿಕಲಾಂಗರಿಗಲ್ಲ’’ ಭಾಷೆಗಳಲ್ಲಿ ಇಂಥ ಪ್ರವೃತ್ತಿ ಹೆಚ್ಚು ಪ್ರಚಲಿತವಲ್ಲದಿದ್ದರೂ ವ್ಯಾಕರಣದ ನೆಲೆಯ ಪರಿಕಲ್ಪನೆಗಳು ಸಾಮಾಜಿಕ ನೆಲೆಯೊಡನೆ ನಿಕಟತೆಯನ್ನು ಉಳಿಸಿಕೊಂಡಿರುತ್ತವೆ ಎಂಬುದನ್ನು ಇದು ಸೂಚಿಸುತ್ತದೆಂದು ಕಾಮ್ರಿ ಹೇಳುತ್ತಾನೆ.

ಒಂದು ವೇಳೆ ಇಂಥದ್ದೆಲ್ಲ ಹಳೆಗಾಲದ ಊಳಿಗಮಾನ್ಯ ಸಮಾಜಗಳಲ್ಲಿ ಮಾತ್ರ ಇದ್ದದ್ದು ಎಂದು ಯಾರಾದರೂ ತಿಳಿದರೆ, ಯರೋಪಿನ ದೇಶಗಳಾದ ಫ್ರಾನ್ಸ್, ಜರ್ಮನಿ ಮತ್ತು ಇಟಲಿ (ಇಲ್ಲಿನ ಭಾಷೆಗಳಲ್ಲಿ ವ್ಯಾಕರಣಾತ್ಮಕ ಜಂಡರ್ ವ್ವವಸ್ಥೆ ಇದೆ.) ಮುಂತಾದ ದೇಶಗಳಲ್ಲಿ ತೀರಾ ಈಚೆಗೆ ನಡೆದಿರುವ ಚರ್ಚೆಗಳನ್ನು ಒಮ್ಮೆ ಗಮನಿಸುವುದು ಒಳ್ಳೆಯದು. ಈ ಭಾಷೆಗಳಲ್ಲಿ ಹೆಂಗಸರಿಗೆ ನಿಗದಿಯಾದ ಹುದ್ದೆ ಪದವಿಗಳನ್ನು ಸೂಚಿಸುವ ಪದಗಳು ಸ್ತ್ರೀಲಿಂಗ ರೂಪದಲ್ಲಿರುತ್ತವೆ. ಜರ್ಮನ್ ಭಾಷೆಯಲ್ಲಿ ಅಂಥ ಪದಗಳು inನಿಂದ ಕೊನೆಗೊಂಡರೆ, ಇಟಾಲಿಯನ್ ನಲ್ಲಿ essa ಯಿಂದ ಕೊನೆಗೊಳ್ಳುತ್ತದೆ. ಹಿಂದಿನಿಂದಲೂ ಗಂಡಸರ ಹಿಡಿತದಲ್ಲಿದ್ದ ಅಧಿಕಾರದ ಹುದ್ದೆಗಳಿಗೆ ಹೆಂಗಸರು ಪ್ರವೇಶಿಸಿದಾಗ ಹುಟ್ಟುಹಾಕಿದ ಹೊಸ ಪದಗಳನ್ನು ನೋಡಿ – ಅಲ್ಲಿಯೂ ಇಂಥವೇ ಪದಾಂತ್ಯ ರೂಪಗಳಿವೆ. ಉದಾಹರಣೆಗೆ, stadtssekretarin (ಜರ್ಮನ್ ಭಾಷೆ) ಮತ್ತು dottoressa (ಇಟಾಲಿಯನ್) ಆದರೆ, ಇಂಥ ಹುದ್ದೆಗಳಲ್ಲಿರುವ ಹಲವು ಹೆಂಗಸರಿಗೆ ಈ ಬಗೆಯ ಸ್ತ್ರೀ ಸೂಚಕ ಪದನಾಮಗಳನ್ನು ಹೊಂದುವುದು ಇಷ್ಟವಿಲ್ಲ. ಇವರ ತಕರಾರಿಗೆ ಅರ್ಥವಿದೆ. ಏಕೆಂದರೆ, ಹಿಂದಿನಿಂದಲೂ ಜರ್ಮನ್ ಭಾಷೆಯ in ಯುಕ್ತ ಪದನಾಮಗಳ ಬಗ್ಗೆ ಆ ಹುದ್ದೆಯಲ್ಲಿರುವ ಹೆಂಗಸರಿಗೆ ಮುನಿಸಿದ್ದರೆ ಅಚ್ಚರಿಯೇನಿಲ್ಲ. ಈ ಸಮಸ್ಯೆಯನ್ನು ಗುರುತಿಸಿದ ಸ್ತ್ರೀವಾದಿಗಳು ಕೇವಲ ಗಂಡಸರ ಪದನಾಮಗಳನ್ನು ಬಳಸಿ ಹೆಣ್ಣುರೂಪಗಳನ್ನು ಹುಟ್ಟುಹಾಕಿದರೆ ಸಾಲದು, ಹೆಂಗಸರ ಇರುವಿಕೆಯನ್ನು ಸೂಚಿಸುವಂತಹ  ಪದಗಳೇ ಬೇಕೆಂದು ವಾದಿಸಿದ್ದಾರೆ. ಅದಕ್ಕಾಗಿ ಹೊಸ ಪದಗಳನ್ನು ಟಂಕಿಸಲು ಮುಂದಾಗಿದ್ದಾರೆ.(ಉದಾಹರಣೆಗೆ ವೈದ್ಯ ವೃತ್ತಿಯಲ್ಲಿರುವ ಹೆಂಗಸರಿಗೆ dottora ಎಂಬ ಹೊಸ  ಪದವನ್ನು ಸೂಚಿಸಲಾಗಿದೆ. ಇದು ಇಟಾಲಿಯನ್ ಭಾಷೆಯ ಪದರಚನೆಯ ನಿಯಮಗಳನ್ನು ಉಲ್ಲಂಘಿಸುತ್ತದೆ.)

ಎಷ್ಟೋ ಪ್ರಸಂಗಗಳಲ್ಲಿ ಹೆಂಗಸರು ತಮ್ಮ ಪದನಾಮಗಳಲ್ಲಿ ಹೇಗೋ ಒಂದು ಬಗೆಯಲ್ಲಿ ಹೆಂಗಸು ಎಂಬ ಸೂಚನೆ ಇರಿಸುವುದನ್ನೇ ಒಪ್ಪುವುದಿಲ್ಲ. ಏಕೆಂದರೆ, ಅಂಥ ಪದಗಳಿಗೆ ಸಿಗುವ ಸ್ತ್ರೀಲಿಂಗ ಸ್ಥಾನವೇ ತಮ್ಮ ವೃತ್ತಿಯನ್ನು ಕೀಳು ಮಾಡುತ್ತದೆಂದು ವಾದಿಸುತ್ತಾರೆ. ‘‘ಯಶಸ್ವಿಯಾದ ಫ್ರೆಂಚ್ ಸ್ತ್ರೀಯು ತನ್ನನ್ನು ತಾನು le docteur, le professeur, l’ ambassadeur ಮತ್ತು le philosophe ಎಂದು ಕರೆಸಿಕೊಳ್ಳಲು ಬಯಸುತ್ತಾಳೆ. ವಾಸ್ತವವಾಗಿ ಆ ಪದನಾಮಗಳ ಹಿಂದಿನ ರೂಪ il ಎಂದಾಗ ಬೇಕಿದೆ. ಆದರೆ ತಮ್ಮ ದೃಷ್ಟಿಕೋನವನ್ನು ಮುಂದಿಡಲು ವ್ಯಾಕರಣದ ನಿಯಮಗಳನ್ನು ಮೀರಲು ಅವರು ಸಿದ್ದ’’ಎಂದು ಆನ್‌ಕಾರ್ಬೆಚ್ ಹೇಳುತ್ತಾಳೆ.

ಮೇಲಿನ ಸಂಗತಿಗಳನ್ನು ಗಮನಿಸಿದರೆ ವ್ಯಾಕರಣಾತ್ಮಕ ಜಂಡರ್‌ಗೂ ಲಿಂಗಸಂಬಂಧ ಗಳಿಗೂ ಏನೋ ನಂಟಿದೆ ಎಂದು ಜನ ಭಾವಿಸುವಂತೆ ಕಾಣುತ್ತದೆ. ಅವರು ಹೆಣ್ಣು ಮತ್ತು ಗಂಡುಗಳ ನಡುವೆ ಮೇಲು ಕೀಳಿನ ಗ್ರಹಿಕೆಯೂ ಇದೆ ಎಂಬುದಾಗಿ ತಿಳಿಯುತ್ತಾರೆ. ಇದು ಸಾಮಾಜಿಕವಾಗಿ ಹೆಣ್ಣು ಗಂಡುಗಳ ನಡುವೆ ಇರುವ ತರತಮ ಭಾವದ ಬಿಂಬ ಮತ್ತು ಸ್ಥಿರೀಕರಣ ಎನ್ನುವುದು ಅವರ ವಾದ. ವ್ಯಾಕರಣಾತ್ಮಕ ಜಂಡರ್ ಪರಿಕಲ್ಪನೆ ಹೇಗೇ ಹುಟ್ಟಿಕೊಂಡಿರಲಿ, ಅದಕ್ಕೂ ಲಿಂಗಸಂಬಂಧಕ್ಕೂ ಯಾವ ನಂಟೂ ಇಲ್ಲ ಎಂಬುದು ನಿಜವಲ್ಲ. ತಜ್ಞರಿರಲಿ ಸಾಮಾನ್ಯರಿರಲಿ, ನಿಡುಗಾಲದಿಂದಲೂ ವ್ಯಾಕರಣಾತ್ಮಕ ಜಂಡರ್ ವ್ಯವಸ್ಥೆಯ ಮೂಲಕ ಸಾಮಾಜಿಕ ತಾರತಮ್ಯವನ್ನು ಬಿಂಬಿಸುತ್ತಿದ್ದಾರೆ ಎಂಬುದಂತೂ ಖಂಡಿತ.

ಸಹಜ ಜಂಡರ್

ಶತಮಾನಗಳಿಂದ ವ್ಯಾಕರಣಾತ್ಮಕ ಜಂಡರ್ ವ್ಯವಸ್ಥೆಯು ಜೈವಿಕ ಲಿಂಗದ ನೆಲೆಗಳನ್ನು ಸೂಚಿಸುತ್ತದೆ ಎಂದು ವಾದಿಸುತ್ತಿರುವುದನ್ನು ನಾವು ಕಂಡಿದ್ದೇವೆ. ಆದರೆ, ಭಾಷಾಶಾಸ್ತ್ರಜ್ಞರು ಈಗ ಈ ಅಭಿಪ್ರಾಯವನ್ನು ತಳ್ಳಿ ಹಾಕಿದ್ದಾರೆ. ಈಚೆಗೆ ಇಂಗ್ಲಿಶ್ ಭಾಷೆಯ ರಚನೆಯನ್ನು ಅಭ್ಯಾಸಮಾಡಿದವರು ಇನ್ನೊಂದು ಮಹತ್ವದ ಸಂಗತಿಯತ್ತ ನಮ್ಮ ಗಮನವನ್ನು ಸೆಳೆದಿದ್ದಾರೆ. ಲಿಂಗ ರಚನೆಯನ್ನು ಅವಲಂಬಿಸಿದ ವರ್ಗೀಕರಣವಾದ ಸಹಜಲಿಂಗ ವ್ಯವಸ್ಥೆಯ ಬುಡದಲ್ಲಿ ಒಂದು ವ್ಯಾಕರಣಾತ್ಮಕ ಸೂಚನೆ ಇದೆ ಎಂದು ಅವರು ವಾದಿಸುತ್ತಾರೆ.

ಈ ಬೆಳವಣಿಗೆ ಆಕಸ್ಮಿಕವಾದುದಲ್ಲ. ಸ್ತ್ರೀವಾದಿಗಳು ಮಾಡುತ್ತಿದ್ದ ಟೀಕೆಗಳಿಂದ ಇಂಗ್ಲಿಶ್ ಭಾಷೆಯನ್ನು ರಕ್ಷಿಸುವ ಅತೀವ ತವಕವೇ ಈ ವಾದದ ಹುಟ್ಟಿಗೆ ಕಾರಣ. ೧೯೭೦ರ ಸರಿಸುಮಾರಿನಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಮೂಹವಾಚಿ ಪುಲ್ಲಿಂಗ ಪದಗಳನ್ನು ಬಳಸುವ ಕ್ರಮವನ್ನು ಹೆಂಗಸರು ಪ್ರತಿಭಟಿಸಿದರು. ಅಂದರೆ, he ಎಂಬ ಸರ್ವನಾಮ, ಮತ್ತದರ ಸಾಧಿಕ ರೂಪಗಳನ್ನು ಲಿಂಗ ತಿಳಿಯದ ಅಥವಾ ಎಲ್ಲ ಲಿಂಗಗಳಿಗೂ ಅನ್ವಯಿಸುವ  ಪ್ರಸಂಗಗಳಲ್ಲಿ ಬಳಸುವುದು ಸರಿಯಲ್ಲವೆಂಬುದು ಅವರ ವಾದ. ಈ ವಾದ ಧರ್ಮಶಾಸ್ತ್ರದ ಚರ್ಚೆಯಲ್ಲಿ ಹುಟ್ಟಿಕೊಂಡಿತ್ತು. ಭಾಷಾಶಾಸ್ತ್ರ ವಿಭಾಗದ ಹದಿನೇಳು ಜನ ಅಧ್ಯಾಪಕರು ಹಾರ್ವರ್ಡ್ ಕ್ರಿಮ್‌ಸನ್ ಎಂಬ ಕಾಲೇಜು ವಾರ್ತಾಪತ್ರಿಕೆಯಲ್ಲಿ, ಹೆಂಗಸರು ಕೂಗು ಹಾಕುತ್ತಿರುವ ‘‘ಸರ್ವನಾಮ ದ್ವೇಷ’’ದ (ಇದು ಇಡೀ ಪ್ರಸಂಗವನ್ನು ಇವರು ಕಿಲಾಡಿತನದಿಂದ ನೋಡಿದಾಗ ಹುಟ್ಟಿದ ಪದರಚನೆ ‘ಶಿಶ್ನ ದ್ವೇಷ’ಎಂಬ ಪದರಚನೆಯ ಮಾದರಿಯಲ್ಲಿದೆ.) ವಿಷಯದಲ್ಲಿ ಅವರಿಗೆ ತಿಳುವಳಿಕೆ ನೀಡಬೇಕಾಗಿದೆ ಎಂದು ಬರೆದರು. ‘‘ವ್ಯಾಕರಣದಲ್ಲಿ ಮತ್ತು ಪದಕೋಶದಲ್ಲಿ ಪರಸ್ಪರ ವಿರುದ್ದವಾಗಿರುವ ಸಂಗತಿಗಳೆಲ್ಲ, ಸಮಾನ ಸದಸ್ಯರ ನಡುವಣ ವಿರೋಧವಲ್ಲ . ಬದಲಿಗೆ ಆ ಎರಡರಲ್ಲಿ ಒಂದು ಹೆಚ್ಚು ಗುರುತುಳ್ಳದ್ದು, ಇನ್ನೊಂದು ಅಷ್ಟು ಗುರುತಿಲ್ಲದ್ದು ಆಗಿರುವುದೆಂಬ ಸಂಗತಿಯನ್ನಷ್ಟೇ ಈ ವಿರೋಧಗಳು ಸೂಚಿಸುತ್ತವೆ.—-ಇಂಗ್ಲಿಶ್‌ನ ಪುಲ್ಲಿಂಗ ರೂಪದ ಸರ್ವನಾಮವು ಹೀಗೆ ಹೆಚ್ಚು ಗುರುತಿಲ್ಲದ ಪದವಾಗಿದ್ದು, ಆ ಕಾರಣಕ್ಕಾಗಿಯೇ ಅದನ್ನು ತಟಸ್ಥ ಇಲ್ಲವೇ ಅನಿರ್ದಿಷ್ಟ ರೂಪದಲ್ಲಿ ಬಳಸಲಾಗುತ್ತದೆ. ಇಂಗ್ಲಿಶ್‌ನಲ್ಲಿ ಪುಲ್ಲಿಂಗವು ಹೆಚ್ಚು ಗುರುತಿರದ ಪದವಾಗಿರುವುದು ಒಂದು ವ್ಯಾಕರಣಾತ್ಮಕ ಲಕ್ಷಣ ಮಾತ್ರ.(ಟ್ಯುನಿಕಾ ಇಂಡಿಯನ್ನರು ಮಾತಾಡುವ ಭಾಷೆಯಲ್ಲಿ ಸ್ತ್ರೀಲಿಂಗ ರೂಪಗಳು ಹೀಗೆ ಹೆಚ್ಚು ಗುರುತಿಲ್ಲದ ರೂಪಗಳಾಗಿರುತ್ತವೆ. ಅದು ಆ ಭಾಷೆಯ ವ್ಯಾಕರಣಾತ್ಮಕ ಲಕ್ಷಣ)’’.

(ಭಾಷೆಯಲ್ಲಿರುವ ಕೆಲವು ಭಾಷಾಂಶಗಳನ್ನು ವಿವರಿಸಲು ಇಂದಿನ ಭಾಷಾಶಾಸ್ತ್ರಜ್ಞರು marked ಮತ್ತು unmarked ಎಂಬ ಪರಿಕಲ್ಪನೆಗಳನ್ನು ಬಳಸುತ್ತಿದ್ದಾರೆ. ಯಾವ ಭಾಷಾಂಶದ ಬಳಕೆಗೆ ನಿರ್ದಿಷ್ಟ ನಿಯಮಗಳನ್ನು ಹೊರಗಿನಿಂದ ಅನ್ವಯಿಸಬೇಕಾಗಿಲ್ಲವೋ ಅವೆಲ್ಲವೂ unmarked ಎನ್ನಿಸಿಕೊಳ್ಳುತ್ತದೆ. ಯಾವ ಭಾಷಾಂಶವನ್ನು ಬಳಸಲು ನಿರ್ದಿಷ್ಟವಾದ ಪ್ರಸಂಗಾನುಸಾರ ನಿಯಮವನ್ನು ಅನ್ವಯಸಬೇಕಾಗುತ್ತದೋ ಅದು marked ಎನ್ನಿಸಿಕೊಳ್ಳುತ್ತದೆ. Marked ಮತ್ತು unmarked ಭಾಷಾಂಶಗಳು ಜೋಡಿಯಾಗಿರುತ್ತವೆ. ಅವುಗಳಲ್ಲಿ unmarked ಅನ್ನು ಬಳಸುವಾಗ ಯಾವ ಕಟ್ಟುಪಾಡುಗಳೂ ಇರುವುದಿಲ್ಲ. ಆದರೆ marked ಭಾಷಾಂಶ ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ಬಳಕೆಯಾಗಬಲ್ಲದು)

ಒಂದು ಭಾಷೆಯಲ್ಲಿ ವರ್ಗೀಕರಣಕ್ಕಾಗಿ ಬಳಸುವ ತತ್ವಗಳು ರಾಚನಿಕ ನೆಲೆಯಲ್ಲಿಇದ್ದು, ಅರ್ಥದ ನೆಲೆ ಅಷ್ಟು ಮುಖ್ಯವಲ್ಲ ಎನ್ನುವುದಾದರೆ, ಪುಲ್ಲಿಂಗವು ಹೆಚ್ಚು ಗುರುತಿಂದ ರೂಪವೆಂಬ ಮಾತಿಗೆ ಅಷ್ಟೇನೂ ಗಮನ ನೀಡಬೇಕಾಗಿಲ್ಲ. ಆದರೆ, ಇಂಗ್ಲಿಶ್‌ನಂತಹ ಭಾಷೆಯಲ್ಲಿ ಲಿಂಗ ವರ್ಗೀಕರಣವು ಅರ್ಥಾನುಸಾರಿಯಾಗಿ ನಡೆಯುತ್ತದೆ. ಹೀಗಾಗಿ ಹಾರ್ವರ್ಡ್‌ನ ಅಧ್ಯಾಪಕರ ವಾದವನ್ನು ಮತ್ತಷ್ಟು ವಿವರವಾಗಿ ನೋಡಬೇಕಾಗುತ್ತದೆ. ಮೊದಲು ಅಲ್ಲಿ ಬಳಸಲಾದ ಗುರುತುಳ್ಳ ಮತ್ತು ಗುರುತಿರದ ಪರಿಕಲ್ಪನೆಗಳೆಂದರೇನು ಎಂದು ನೋಡೋಣ.

ಭಾಷಿಕ ವಿಶ್ವಾತ್ಮಕ ಅಂಶಗಳನ್ನು ಹುಡುಕಲು ಹೊರಟ ಚಾಮ್‌ಸ್ಕಿ ಪ್ರಣೀತ ಸಿದ್ದಾಂತದಲ್ಲಿ ಗುರುತು ಕುರಿತ ಈ ಚರ್ಚೆ ಇದೆ. ಸಾಮಾನ್ಯವಾಗಿ ಗುರುತು ಎಂಬ ಪರಿಕಲ್ಪನೆಯನ್ನು ಎರಡು ಭಾಷೆಗಳನ್ನು ಹೋಲಿಸುವಾಗ ಬಳಸಲು ಮೊದಲು ಮಾಡಿದರು. ಉದಾಹರಣೆಗೆ, ವಾಕ್ಯದಲ್ಲಿ ಪದಗಳ ಆನುಪೂರ್ವಿಯನ್ನೇ ನೋಡೋಣ. ಭಾಷೆಗಳಲ್ಲಿ ಕಂಡು ಬರುವ ಅನುಪೂರ್ವಿಯ ಒಂದು ಮಾದರಿ ಹೆಚ್ಚು ಸಾಮಾನ್ಯವಾಗಿರ ಬಹುದು. ಮತ್ತೆ ಕೆಲವು ಆನುಪೂರ್ವಿ ಮಾದರಿಗಳು ತೀರಾ ವಿರಳವಾಗಿದ್ದು ಅನಿರೀಕ್ಷಿತವಾಗಿರಬಹುದು. ಇನ್ನೊಂದು ಉದಾಹರಣೆ ನೋಡಿ – u ಮತ್ತು yಎಂಬ ಧ್ವನಿಗಳ ಸಂಬಂಧ. ಯಾವ ಭಾಷೆಗಳಲ್ಲಿ y ಧ್ವನಿ ಇರುವುದಿಲ್ಲವೋ ಆ ಭಾಷೆಗಳಲ್ಲಿ u ಧ್ವನಿ ಇರುತ್ತದೆ. ಇದು ಹೆಚ್ಚು ಭಾಷೆಗಳಲ್ಲಿ ಕಂಡುಬರುತ್ತದೆ. ಆದರೆ ಯಾವುದೋ ಒಂದು ಭಾಷೆಯಲ್ಲಿ ಇವೆರಡೂ ಧ್ವನಿಗಳು ಇರುತ್ತವೆ ಎಂದುಕೊಳ್ಳಿ. ಆಗ u ಗುರುತಿರದ ಧ್ವನಿಯಾದರೆ y ಗುರುತಿರುವ ಧ್ವನಿಯಾಗುತ್ತದೆ. ಅಂದರೆ, ಗುರುತಿಲ್ಲದ ರೂಪಗಳು ಹೆಚ್ಚು ನಿರೀಕ್ಷಿತವಾಗಿರುತ್ತವೆ.

ಹಾರ್ವರ್ಡ್‌ನ ಭಾಷಾ ಶಾಸ್ತ್ರಜ್ಞರು ತಮ್ಮ ವಾದವನ್ನು ಈ ನೆಲೆಯಲ್ಲಿ ಮಂಡಿಸುವಂತೆ ತೋರುತ್ತಿಲ್ಲ. ಇಂಗ್ಲಿಶ್‌ನಲ್ಲಿ ಪುಲ್ಲಿಂಗವು ಗುರುತಿಲ್ಲದ ರೂಪವಾಗಿದ್ದರೆ ಟ್ಯೂನಿಕಾ ಭಾಷೆಯಲ್ಲಿ ಸ್ತ್ರೀಲಿಂಗ ರೂಪಕ್ಕೆ ಆ ಸ್ಥಾನವಿದೆ ಹಾಗಾಗಿ ಇದು ಭಾಷಾ ವಿಶ್ವಾತ್ಮಕ ಅಂಶಗಳಿಗೆ ಸಂಬಂಧಿಸಿದ ಮಾತಲ್ಲ. ಬದಲಿಗೆ, ಆಯಾ ಭಾಷೆಯ ರಚನೆಯನ್ನು ಕುರಿತಂತೆ ಇರುವ ವಿವರಣೆಯಾಗಿದೆ. ಹಾಗಿದ್ದಲ್ಲಿ ಒಂದು ಭಾಷಾಂಶವನ್ನು ಗುರುತಿಲ್ಲದ್ದು ಎಂದು ಹೇಗೆ  ನಿರ್ಧರಿಸುವುದು?

ಭಾಷಾಶಾಸ್ತ್ರಜ್ಞರು ಇದಕ್ಕಾಗಿ ಹಲವು ಹಾದಿಗಳನ್ನು ಹಿಡಿದಿದ್ದಾರೆ. ಒಂದು ರೂಪವು ಹೆಚ್ಚು ವ್ಯಾಪಕವಾಗಿ ಬಳಕೆಯಾಗುತ್ತದೆಯೇ, ಇಲ್ಲವೇ ಅದನ್ನು ಬಳಸಲು ಹೊಸ ನಿಯಮವೊಂದನ್ನು  ಸೇರಿಸುವ ಅಗತ್ಯವಿದೆಯೇ ಎಂಬುದನ್ನು ಹುಡುಕುತ್ತಾರೆ.  ಇದು ಗೊಂದಲಮಯ ವಿವರಣೆ ಎನಿಸಿದರೆ, ಒಂದು ಉದಾಹರಣೆಯನ್ನು ನೋಡೋಣ. ಇಂಗ್ಲಿಶ್‌ನಲ್ಲಿ ಏಕವಚನ ಎಂಬುದು ಗುರುತಿಲ್ಲದ ಭಾಷಾಂಶ. ಆದರೆ, ಬಹುವಚನ ಗುರುತಿರುವ ಭಾಷಾಂಶ. ಏಕೆಂದರೆ, ಬಹುವಚನ ರೂಪ ಪಡೆಯಲು ಒಂದು ಪ್ರತ್ಯಯವನ್ನು ಸೇರಿಸ ಬೇಕಾಗುತ್ತದೆ. ಆದರೆ, ಈ ವಿಧಾನ ಸರ್ವನಾಮ ರೂಪಗಳಾದ he ಮತ್ತು she ಗೆ ಅನ್ವಯಿಸುವುದಿಲ್ಲ.(she ರೂಪವನ್ನು ಪಡೆಯಲು he ಗೆ s ಅನ್ನು ಸೇರಿಸಿಲ್ಲವೇ ಎಂದು ಯಾರಾದರೂ ಟೋಪಿ ಹಾಕಿಯಾರು ಹುಷಾರ್!ಎರಡೂ ರೂಪಗಳಲ್ಲಿ ಇರುವುದು ಎರಡೆರಡು ಧ್ವನಿಗಳು ಮಾತ್ರ) ಇವೆರಡೂ ಬೇರೆ ಬೇರೆ ರೂಪಗಳು ಒಂದರಿಂದ ಒಂದು ಸಾಧಿತವಾಗಿಲ್ಲ.

ಭಾಷಾಶಾಸ್ತ್ರಜ್ಞರು ಬಳಸುವ ಇನ್ನೊಂದು ವಿಧಾನವೆಂದರೆ, ಒಂದು ಭಾಷಾಂಶವನ್ನು  ಸಮೂಹವಾಚಿಯನ್ನಾಗಿ ಬಳಸಬಹುದೇ ಎಂದು ನೋಡುವುದು. ಗುರುತಿಲ್ಲದ ರೂಪಗಳಲ್ಲಿ ಗುರುತಿರುವ ರೂಪಗಳು ಅಂತರ್ಗತವಾಗಿರುತ್ತವೆ. ನಾವೀಗ ಪರಿಶೀಲಿಸುತ್ತಿರುವ ಪ್ರಸಂಗದಲ್ಲಿ ಈ ವಿಧಾನವೂ ಕೆಲಸಕ್ಕೆ ಬರುವುದಿಲ್ಲ.  he ಎಂಬುದು ಸಮೂಹವಾಚಿ; ಏಕೆಂದರೆ, ಅದು ಗುರುತಿಲ್ಲದ ರೂಪ ಎನ್ನುತ್ತಾರೆ . ಅದು ಹೇಗೆ ಗುರುತಿಲ್ಲದ ರೂಪ ಎಂದು ಕೇಳಿದರೆ, ಅದು ಸಮೂಹವಾಚಿಯಲ್ಲವೇ, ಅದಕ್ಕೆ ಎನ್ನುತಾರೆ.

ಮೂರನೆ ಬಗೆ ಎಂದರೆ, ಒಂದು ಭಾಷಾಂಶದ ಅರ್ಥವು ಯಾವುದೇ ಮೌಲ್ಯಾತ್ಮಕ ಓಲುವೆಯನ್ನುತೋರಿಸಿದ್ದಾಗ ಅದನ್ನು ಗುರುತಿಲ್ಲದ ರೂಪವೆಂದು ಹೇಳುವುದು. ಆದರೆ, ಜಂಡರ್  ವಿಚಾರಕ್ಕೆ ಬಂದಾಗ ಅಲ್ಲಿ ಸಾಮಾಜಿಕ ನೆಲೆಯ ನಿರ್ಧಾರಗಳ ಬಗ್ಗೆ ಇರುವ  ಓಲುವೆಯನ್ನು ಬಿಟ್ಟು ಮತ್ತೇನಿದೆ? he ಎಂಬುದು ಯಾರಿಗೆ ಮೌಲ್ಯಾತ್ಮಕ ಓಲುವೆ ಇಲ್ಲದ ಪದವೆಂದು ತೋರುತ್ತದೆ? ಅವರಿಗೆ ಹಾಗನಿಸಲು ಕಾರಣವೇನು?

ಕೊನೆಯ ವಿಧಾನ ಬಳಕೆಯ ಪ್ರಮಾಣವನ್ನು ಅವಲಂಬಿಸಿದೆ. ಒಂದು ಭಾಷಾಂಶವು ಅದರ ವಿಕಲ್ಪಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಬಳಕೆಯಾದರೆ, ಅದನ್ನು ಗುರುತಿರದ ರೂಪವೆಂದೂ, ಉಳಿದ ವಿಕಲ್ಪಗಳನ್ನು ಗುರುತಿರುವ ರೂಪಗಳೆಂದೂ ತಿಳಿಯುವುದು. ಇಂಗ್ಲಿಶ್ ಜಂಡರ್ ವಿಷಯದಲ್ಲಿ ಇದು ಉಪಯೋಗಕ್ಕೆ ಬರುವುದಿಲ್ಲ. ಏಕೆಂದರೆ, ಈ ಭಾಷೆಯಲ್ಲಿ ಜಂಡರ್‌ಗೆ ನಿಗದಿತ ಜೈವಿಕಲಿಂಗವನ್ನು ಸೂಚಿಸುವ ಹೊಣೆ ಇದೆ. ಗಂಡಸನ್ನು ಗುರುತಿಸಲು ಇಲ್ಲವೇ ಯಾವ ಲಿಂಗಕ್ಕೆ ಸೇರಿದವರೆಂದು ತಿಳಿವಿಲ್ಲದೆ ವ್ಯಕ್ತಿಯನ್ನು ಗುರುತಿಸಲು he ಪದವನ್ನು ಬಳಸುತ್ತಾರೆ. ಆದರೆ , She ಯನ್ನು ಹೆಂಗಸನ್ನು ಗುರುತಿಸಲು ಮಾತ್ರವೇ ಬಳಸುತ್ತಾರೆ, ಇವುಗಳಲ್ಲಿ ಯಾವುದನ್ನು ಹೆಚ್ಚು ಬಳಸುತ್ತಾರೆ ಎನ್ನುವುದು ಭಾಷೇತರ ಸಂಗತಿಯೇ ಹೊರತು ಭಾಷಿಕವಾದುದಲ್ಲ. ಮಾತಾಡುವವರು ಏನನ್ನು ಕುರಿತು ಮಾತಾಡುತ್ತಿದ್ದಾರೆ ಎನ್ನುವುದನ್ನು ಅವಲಂಬಿಸಿ ಬಳಕೆ ಪ್ರಮಾಣ ನಿರ್ಧಾರವಾಗುತ್ತದೆ.

ಹಾರ್ವರ್ಡ್ ಪಂಡಿತರು ಈ ವಿಧಾನಗಳಲ್ಲಿ ಯಾವುದನ್ನು ಬಳಸಿದ್ದಾರೆಂಬುದು ನನಗೆ ಗೊತ್ತಿಲ್ಲ. ಯಾವುದನ್ನು ಬಳಸಿದ್ದರೂ ಅದರಿಂದ ನಿರ್ಧಾರವಂತೂ ಹೊರಬೀಳುವುದಿಲ್ಲ. ಆದರೆ, ಹಾರ್ವರ್ಡ್‌ನ ಜಾಣರು ತಪ್ಪು ವಾದವನ್ನು ಮಂಡಿಸುತ್ತಿದ್ದಾರೆ ಎನ್ನುವುದಕ್ಕೆ ಬೇರೊಂದು ಪುರಾವೆ ಇದೆ. ಅವರ ಪ್ರಕಾರ ಇಂಗ್ಲಿಶ್‌ನ ಸಮೂಹವಾಚಿ ಪುಲ್ಲಿಂಗ ರೂಪವು ವ್ಯಾಕರಣಾತ್ಮಕ ಸಂಗತಿ ಮಾತ್ರ. ಆದರೆ, ನಮಗೆ ದೊರಕಿರುವ ಪುರಾವೆ ಚರಿತ್ರೆಗೆ ಸೇರಿದ್ದು.

ಇಂಗ್ಲಿಶ್ ಭಾಷೆಯ ಬೆಳವಣಿಗೆಯನ್ನು ಅಧ್ಯಯನ ಮಾಡಿದ ವಿದ್ವಾಂಸರಿಗೆಲ್ಲಾ he ಎಂಬುದು ಸಮೂಹವಾಚಿ ಪುಲ್ಲಿಂಗರೂಪವಾಗಿ ಕೇವಲ ಎರಡು ಶತಮಾನದಿಂದೀಚೆಗೆ ಮಾತ್ರವೇ ಬಳಕೆಯಾಗುತ್ತಿದೆ ಎನ್ನುವುದು ತಿಳಿದಿದೆ. ಮೊದಮೊದಲ ಪಠ್ಯಗಳು (ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಜೇನ್ ಆಸ್ಟಿನ್‌ಳ ಬರವಣಿಗೆಯೂ ಸೇರಿದಂತೆ) they ಎಂಬುದನ್ನು ಏಕವಚನ ಸಮೂಹವಾಚಿ ರೂಪವಾಗಿ ಬಳಸಿವೆ. ಉದಾಹರಣೆಗೆ, ಈ ವಾಕ್ಯವನ್ನು ನೋಡಿ‘‘– If some one has stolen my pen will they please return it?’’ ಈ ವಾಕ್ಯ ಕ್ರಮಬದ್ದವಾದುದು. ಇಲ್ಲಿ they ಎಂಬುದು ಏಕವಚನ ಸಮೂಹವಾಚಿಯಾಗಿದೆ. ಆದರೆ, ಶುದ್ದಭಾಷೆಯ ಬೆಂಬಲಿಗರಾದ ವೈಯಾಕರಣರು he ರೂಪ ಸರಿ ಎಂದೂ they ಅಶುದ್ದವೆಂದೂ ಹೇಳಿ they ರೂಪ ಬಳಕೆಯಾಗದಂತೆ ಕಟ್ಟುಪಾಡುಗಳನ್ನು ವಿಧಿಸಿದರು. ಆದರೆ, ಇಂದಿಗೂ ಅನೌಪಚಾರಿಕವಾಗಿ ಮಾತಾಡುವಾಗ ಜನರು they ರೂಪವನ್ನೇ ಬಳಸುತ್ತಾರೆ. ಬರವಣಿಗೆಯಲ್ಲಿ he ನೆಲೆ ನಿಂತಿದೆ.  ಈ ಬದಲಾವಣೆಗೆ ಕಾರಣ ಕಟ್ಟುನಿಟ್ಟಾದ ನಿಯಮಗಳನ್ನು ಮಾಡಿದ ವೈಯಾಕರಣರು ಮತ್ತು ಅದನ್ನು ಪೆಟ್ಟುಕೊಟ್ಟು ಕಲಿಸಿದ ಶಿಕ್ಷಕರು ಕಾರಣರೇ ಹೊರತು ಹಾರ್ವರ್ಡ್ ಮಂದಿ ಹೇಳಿದಂತೆ ಭಾಷೆಯಲ್ಲಿ ಅಂತರ್ಗತವಾಗಿದ್ದ ಯಾವುದೋ ಅನೂಹ್ಯ ಲಕ್ಷಣವಲ್ಲ.

ಭಾಷೆಯ ಈ ಬಳಕೆಯಲ್ಲಿ ಯಾವ ಲಿಂಗತಾರತಮ್ಯವೂ ಇಲ್ಲ ಎಂದು ಹಾರ್ವರ್ಡ್‌ನ ನಮ್ಮ ಗೆಳೆಯರು ಉತ್ತರಿಸಿಯಾರು. ಅವರಿಗೆ he ಎಂಬ ಪದವನ್ನು ಹಳೆಗಾಲದ ವೈಯಾಕರಣರು ಒತ್ತಾಯಪೂರ್ವಕವಾಗಿ ಹೇರಿದ್ದು ಆ ಪದದ ಸಹಜತೆಯಿಂದಾಗಿಯೇ ಎಂದೂ ತೋರಬಹುದು. ಹಾಗಿದ್ದಲ್ಲಿ ಅವರು ಆನ್ ಬೋಡಿನ್ ಬರೆದಿರುವ ‘‘ಆಂಡ್ರೋಸೆಂಟ್ರಿಸಮ್ ಇನ್ ಪ್ರಿಸ್ಕ್ರಿಪ್ಟಿವ್ ಗ್ರಾಮರ್’’ಎಂಬ ಉತ್ಕೃಷ್ಟ ಪ್ರಬಂಧವನ್ನು ಓದಬೇಕೆಂದು ಕೋರುತ್ತೇನೆ.

ಬೋಡಿಸ್ ತನ್ನ ಪ್ರಬಂಧದಲ್ಲಿ ಕಟ್ಟುಪಾಡು ವಿಧಿಸುವ ವೈಯಾಕರಣರು they ಬದಲು heಯನ್ನು ನೆಲೆಗೊಳಿಸಿದ್ದನ್ನು ದಾಖಲಿಸಿರುವುದು ಮಾತ್ರವಲ್ಲದೆ ಆ ವೈಯಾಕರಣರು ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳಲು ಮುಂದಿಟ್ಟ ತರ್ಕವನ್ನೂ ನಿರೂಪಿಸಿದ್ದಾಳೆ. ಆ ಉಲ್ಲೇಖವನ್ನು ಗಮನಿಸಿದರೆ, ಹೀಗೆ ಮಾಡಿದ ವೈಯಾಕರಣರಿಗೆ ಭಾಷಿಕ ಸಹಜತೆಯಾಗಲೀ ತರ್ಕಬದ್ದತೆಯಾಗಲೀ ಮುಖ್ಯವಾಗಿರದೆ, ಲಿಂಗತಾರತಮ್ಯ ವೇ ಅವರನ್ನು ಈ ಕ್ರಿಯೆಗೆ ಪ್ರೇರೇಪಿಸಿತು ಎಂಬುದು ಗೊತ್ತಾಗುತ್ತದೆ. (ತರ್ಕಬದ್ದತೆ ಮುಖ್ಯವಾಗಿದ್ದರೆ they ಬಳಸಿದಾಗ ಏಕವಚನ ಬಹುವಚನಗಳ ನಡುವೆ ಗೋಜಲುಂಟಾಗುತ್ತದೆ ಎನ್ನಬೇಕಿತ್ತು. ಬೋಡಿಸ್ ಹೇಳುವಂತೆ ಲಿಂಗ ನೆಲೆಯ ಹೊಂದಾಣಿಕೆಗಿಂತ, ವಚನ ನೆಲೆಯ ಹೊಂದಾಣಿಕೆ ಏಕೆ ಮುಖ್ಯವಾಗಬೇಕು?) ಆ ವೈಯಾಕರಣರು ಗಂಡು ಎಂಬುದು ‘‘ಉತ್ಕೃಷ್ಟ ಜಂಡರ್’’ ಎಂದು ಹೇಳುವ ಮೂಲಕ ಗಂಡಸರು ಸೃಷ್ಟಿಯಲ್ಲಿ ಉತ್ತಮರೆಂದೂ, ಅದು ವ್ಯಾಕರಣದಲ್ಲೂ ತೋರಬೇಕೆಂದೂ ತಿಳಿದದ್ದು ಸ್ಪಷ್ಟವಾಗಿದೆ.

he ಎಂಬುದನ್ನು ಬಳಸಲು ಒತ್ತಾಯಿಸಿದ ಪಠ್ಯಭಾಗದಲ್ಲೇ ಇದೇ ವೈಯಾಕರಣರು ಮತ್ತಷ್ಟು ಬದಲಾವಣೆಗಳನ್ನು ಸೂಚಿಸಿದ್ದಾರೆ. ಇವು ಕೂಡಾ ತಾತ್ವಿಕ ನೆಲೆಯಲ್ಲೇ ಇರುವಂಥವು.  ಇವುಗಳಿಗೆ ಭಾಷಿಕ ಕಾರಣಗಳೇನೂ ಇಲ್ಲ. ಬೋಡಿನ್ ಉಲ್ಲೇಖಿಸುವ ಒಬ್ಬ ವೈಯಾಕರಣನಂತೂ x ಮತ್ತು yಗಳು ವಿವಾಹಿತರೆಂದೋ, ಇಲ್ಲವೇ Mr. x ಎಂಬಾತ Ms y ಯನ್ನು ವಿವಾಹವಾದನೆಂದೋ ಹೇಳುವುದನ್ನು ಖಂಡಿಸಿದ್ದಾನಂತೆ. ಆತ ಹೇಳುವಂತೆ ಔಚಿತ್ಯವುಳ್ಳ ಯಾರಾದರೂ ಈ ಘಟನೆಯನ್ನು ವಿವರಿಸುವಾಗ, ಹೆಂಗಸು ಗಂಡಸನ್ನು ಮದುವೆಯಾದಳು ಎಂದು ಹೇಳುತ್ತಾರಂತೆ. ಏಕೆಂದರೆ ಮದುವೆಯಾದಾಗ ಹೆಣ್ಣು ತಾನೇ ತಂದೆಯ ಮನೆಬಿಟ್ಟು ಬಂದು ಗಂಡನನ್ನು ಸೇರಿ ತನ್ನ ಚಹರೆಯನ್ನು ಕಳೆದುಕೊಳ್ಳುವವಳು?  ಇನ್ನೊಬ್ಬ ವೈಯಾಕರಣನಂತೂ ‘‘Mrs x ಮತ್ತು ಆಕೆಯ ಗಂಡ ಮನೆಯಲ್ಲಿಲ್ಲ ’’ಎಂದು ಹೇಳುವುದು ಅಶುದ್ಧ ಎಂದಿದ್ದಾನಂತೆ. ಗಂಡನ್ನು ಕುರಿತು ಹೇಳುವ ಯಾವುದೇ ಪ್ರಸ್ತಾವನೆಯಲ್ಲಿ ಆತನ ಉಲ್ಲೇಖವೇ ಹೆಣ್ಣಿಗಿಂತ ಮೊದಲು ಬರಬೇಕು. ಏಕೆಂದರೆ ಇದೇ ನಿಸರ್ಗ ಸಹಜವಾದುದು. ಇದು ಆತನ ತರ್ಕ.

ಇಂತಹ ಸಂಗತಿಗಳನ್ನು ಗಮನಿಸಿದಾಗ ಇಂಗ್ಲಿಶ್ ಭಾಷೆಯ ಜಂಡರ್‌ಗೆ ಲಿಂಗತಾರತಮ್ಯದ ಲೇಪನವೇ ಇಲ್ಲ ಎಂದು ಹೇಳುವುದು ಸಾಧ್ಯವೇ ಇಲ್ಲ. he ಎಂಬ ಸಮೂಹವಾಚಿಯ ಉಗಮವನ್ನು ಅರಿಯದ ಇಂದಿನ ಭಾಷಿಕರು ಅದು ವ್ಯಾಕರಣದ ಒಂದು ಲಕ್ಷಣವೆಂದು ಹೇಳಬಹುದು. ಆದರೆ, ಚಾರಿತ್ರಿಕ ಅಧ್ಯಯನಗಳು ಸತ್ಯವನ್ನು ಬಯಲಿಗೆಳೆದಿವೆ. ಈ ರೂಪ ನೆಲೆಗೊಂಡದ್ದೇ ಲಿಂಗತಾರತಮ್ಯದ ತರ್ಕದಿಂದಾಗಿ. ಹೀಗಿರುವಾಗ, ಸ್ತ್ರೀವಾದಿಗಳನ್ನು ತೋರಿಸಿ ವಿರೋಧಿಸುವುದರಲ್ಲಿ ಹೊಸದೂ ಇಲ್ಲ, ಅದು ವಿಚಿತ್ರವೂ ಅಲ್ಲ. ಈ ಪದರೂಪಕ್ಕೆ ಇಲ್ಲದ ವ್ಯಾಖ್ಯೆಯನ್ನು ನೀಡಿ ಅದರ ಮುಗ್ಧತೆ ಮತ್ತು ತಟಸ್ಥತೆಗಳನ್ನು ಪ್ರಶ್ನಿಸುತ್ತಿದ್ದಾರೆಂದು ಕೊರಗುವುದರಲ್ಲಿ ಅರ್ಥವಿಲ್ಲ.

ಹಾರ್ವರ್ಡ್‌ನ ಭಾಷಾಶಾಸ್ತ್ರಜ್ಞರ ಈ ಪ್ರಯತ್ನವು ಅವರಲ್ಲೇ ಹುದುಗಿರುವ ಲಿಂಗತಾರತಮ್ಯದ ಪೂರ್ವಾಗ್ರಹವನ್ನು ಬಯಲಿಗೆಳೆಯುವುದಲ್ಲದೆ, ಭಾಷಾಶಾಸ್ತ್ರದ ಪ್ರಶ್ನಾರ್ಹ ನಿಲುವುಗಳಿಗೆ ನಿಷ್ಠಾವಂತರಾಗಿ ಅವರು ಅಂಟಿಕೊಂಡಿರುವುದನ್ನೂ ತೋರಿಸಿಕೊಡುತ್ತದೆ.  ವ್ಯಾಕರಣವೆಂಬದು ‘ಸಹಜ’ ಮತ್ತು ‘ಸ್ವತಂತ್ರ’ ವ್ಯವಸ್ಥೆಯಾಗಿದ್ದು, ಅದು ರೂಪುಗೊಳ್ಳುವಲ್ಲಿ ಸಾಂಸ್ಕೃತಿಕ ನಡಾವಳಿಗಳು ಯಾವ ಪ್ರಭಾವವನ್ನೂ ಬೀರಿಲ್ಲವೆಂಬ ಪ್ರಮೇಯದ ತಳಹದಿಯ ಮೇಲೆ ಇವರು ತಮ್ಮ ತಾತ್ತ್ವಿಕ ಸೌಧವನ್ನು ನಿಲ್ಲಿಸಿದ್ದಾರೆ. ಆದರೆ ಅವರ ದುರದೃಷ್ಟಕ್ಕೆ ಈ ಪ್ರಸಂಗದಲ್ಲಿ ಬುಡವೇ ಭದ್ರವಿಲ್ಲದಂತಾಗಿದೆ.

ಸಮಾರೋಪ

ಸ್ತ್ರೀವಾದಿಗಳು ಟೀಕಿಸಬೇಕಾದ ಮತ್ತು ಅಂತಿಮವಾಗಿ ನಿರ್ಮೂಲ ಮಾಡಬೇಕಾದ ಸಾಂಸ್ಕೃತಿಕ ಪ್ರವೃತ್ತಿಯೊಂದಿದೆ. ಅದೆಂದರೆ, ಬದುಕಿನ ಎಲ್ಲ ನೆಲೆಗಳಿಗೂ ಗಂಡು ಮತ್ತು ಹೆಣ್ಣು ಎಂಬ ವರ್ಗೀಕರಣವನ್ನು ಅನ್ವಯಿಸುವುದು. ಆ ಮೂಲಕ ಬದುಕನ್ನು ಅದು ಇರುವಂತೆ ನೋಡಲು ಅವಕಾಶ ತಪ್ಪಿಸಿ ಈ ವರ್ಗೀಕರಣಕ್ಕನುಗುಣವಾಗಿಯೇ ನೋಡಲು ಒತ್ತಾಯಿಸುತ್ತಿರುವುದು.   ಈ ವರ್ಗೀಕರಣವು ಸೀಮಿತವಾದ ಅಸಮಾನತೆಯ ನೆಲೆಗಳಿಗೆ ನಮ್ಮನ್ನು ತಳ್ಳುತ್ತಿದೆ. ಈ ಪ್ರವೃತ್ತಿಯು ತುಂಬಾ ಆಳಕ್ಕಿಳಿದಿದೆ. ನಮ್ಮ ಭಾಷೆಗಳನ್ನು ಸುತ್ತುವರೆದಿದೆ, ನುಂಗಿ ನೊಣೆದಿದೆ. (ಹೆಣ್ಣು, ಗಂಡುಗಳಿಗೆ ಬೇರೆ ಬೇರೆ ಹೆಸರುಗಳು, ಬೇರೆ ಬೇರೆ ಪದನಾಮಗಳು, ಬೇರೆ ಬೇರೆ ಸರ್ವನಾಮಗಳು. ಓಹ್!) ಇದರ ಜೊತೆಗೆ ಭಾಷೆ, ಅದರ ವ್ಯಾಕರಣ ವರ್ಗಗಳು ಮುಂತಾದವನ್ನು ಚರ್ಚಿಸುವ ಪರಿಭಾಷೆಯನ್ನು ಈ ಪ್ರವೃತ್ತಿಯು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ಎಷ್ಟೋ ವೇಳೆ ನಮ್ಮ ಅರಿವಿಗೆ ಬರುವುದೇ ಇಲ್ಲ.

ವ್ಯಾಕರಣದ ತಾತ್ವಿಕ ನೆಲೆಗಟ್ಟು ಗಮನಕ್ಕೆ ಬಾರದೆ ಹೋಗಲು ಅಂಥದೊಂದು ತಾತ್ತ್ವಿಕ ನೆಲೆಗಟ್ಟೇ ಇರುವುದಿಲ್ಲವೆಂದು ಭಾಷಾಶಾಸ್ತ್ರಜ್ಞರು ವಾದಿಸುವುದೂ ಕಾರಣ. ಹೀಗೆ ಮಾಡುವುದಕ್ಕೆ ತಮ್ಮ ತಜ್ಞತೆಯನ್ನು ಹೇಗಾದರೂ ಕಾಪಾಡಿಕೊಳ್ಳಬೇಕೆಂಬ ಉದ್ದೇಶ ಕಾರಣವಾಗಿರುತ್ತದೆ. he ಎಂಬ ಸಮೂಹವಾಚಿಯು ಲಿಂಗತಾರತಮ್ಯದಿಂದ ಕೂಡಿದೆ ಎಂದು ಯಾವ ಮೂರ್ಖನಾದರೂ ಹೇಳಿಯಾನು. ಆದರೆ, ಭಾಷಾಶಾಸ್ತ್ರಜ್ಞರು ಮಾತ್ರ ಅದು ‘ಗುರುತಿಲ್ಲದ’ ಪದರೂಪವೆಂದು ವಿವರಿಸಬಲ್ಲರು. ಇದಲ್ಲದೆ, ಭಾಷಾಶಾಸ್ತ್ರಜ್ಞರು ವೈಜ್ಞಾನಿಕ ವಸ್ತುನಿಷ್ಠತೆಯನ್ನು ತಮ್ಮ ಮೇಲೆ ಆರೋಪಿಸಿಕೊಂಡಿದ್ದಾರೆ. ಹೀಗಿರುವಾಗ ಭಾಷಾ ವಿಶ್ಲೇಷಣೆಯ ಕೆಲವು ನೆಲೆಗಳ ಹಿಂದೆ, ರಾಜಕೀಯ ಪ್ರೇರಣೆ ಇದೆಯೆಂದು ಹೇಳಿಬಿಟ್ಟರೆ, ಭಾಷಾಶಾಸ್ತ್ರಕ್ಕೆ ಇರುವ ವಿಜ್ಞಾನದ ಸ್ಥಾನವನ್ನು ಅಲುಗಾಡಿಸಿದಂತೆ ಆಗುವುದೆಂದು ಈ ತಜ್ಞರು ಭಾವಿಸುತ್ತಾರೆ.

ಹೀಗಾಗಿ ಭಾಷಾಶಾಸ್ತಜ್ಞರು ರಾಜಕಾರಣ ಮತ್ತು ತಾತ್ತ್ವಿಕತೆಯ ಸೋಂಕಿನಿಂದ ದೂರವಿರಲು ಯತ್ನಿಸುತ್ತಾರೆ. ಸಸೂರ್‌ನ langue ಪರಿಕಲ್ಪನೆಯ ನೆರವಿನಿಂದ ಭಾಷಾ ಶಾಸ್ತ್ರಜ್ಞರು ತಾವು ಕಣ್ಣೆದುರಿಗಿನ ಜಗತ್ತಿನಲ್ಲಿರುವ ಸಾಮಾಜಿಕ ಮತ್ತು ಅಧಿಕಾರದ ಸಂಬಂಧಗಳಲ್ಲಿ ಮುಳುಗೇಳುತ್ತಿರುವ ಭಾಷಿಕರಿಂದ ತಾವು ಅಲಿಪ್ತರಾಗಿ ಉಳಿಯಲು ಸಾಧ್ಯವೆಂದು ನಂಬುತ್ತಾರೆ. ತಮ್ಮದು ಸಂದರ್ಭ ನಿಷ್ಠವಲ್ಲದ ಶುದ್ಧಾಂಗ ಶೋಧವೆಂದು ನಂಬುತ್ತಾರೆ.  ಇದರಿಂದಾಗಿಯೇ ಒಂದು ಅಸಂಗತ ಸನ್ನಿವೇಶ ಹುಟ್ಟಿಕೊಂಡಿದೆ. ಭಾಷಾಶಾಸ್ತ್ರಜ್ಞರು ಭಾಷಿಕರಿಗೆ ಬುದ್ದಿವಾದ ಹೇಳುತ್ತಿದ್ದಾರೆ. ಭಾಷಿಕರೋ ಕೆಲವು ಬದಲಾವಣೆಗಳು ಆಗಬೇಕೆಂದು ಬಯಸುತ್ತಿದ್ದಾರೆ. ಈ ಬದಲಾವಣೆಗಳು ಅನಗತ್ಯವೆಂಬುದು ಈ ತಜ್ಞರ ವಾದ.  ಏಕೆಂದರೆ, ಅವರ ಪ್ರಕಾರ ಈಗ ಇರುವ ಭಾಷಿಕ ನೆಲೆಗಳಿಗೂ, ಅದನ್ನು ಬಳಸುವವರಿಗೂ ಯಾವ ಸಂಬಂಧವೂ ಇಲ್ಲ. ಇದು ಅಸಂಗತವಲ್ಲದೆ ಮತ್ತೇನು?

ಭಾಷಾಶಾಸ್ತ್ರಜ್ಞರು ಕೋಟೆ ಕಟ್ಟಿಕೊಳ್ಳಲು ಬಳಸುವ ಇನ್ನೊಂದು ತಂತ್ರವೆಂದರೆ, ಚರಿತ್ರೆಯನ್ನು ಮರೆಯವುದು, ಇಲ್ಲವೇ ತಳ್ಳಿಹಾಕುವುದು. ಏಕೆಂದರೆ ಪಶ್ಚಿಮದ ಭಾಷಾಶಾಸ್ತ್ರದ ಚರಿತ್ರೆಯು ಸ್ಪಷ್ಟವಾಗಿ ಶುದ್ಧತೆಯ ವ್ಯಸನದಿಂದ ಪ್ರೇರಿತವಾದದ್ದು. ರಾಜಕಾರಣಕ್ಕೆ ಮಣಿದಿದೆ.  ಕೊಂಚವಾದರೂ ಸೂಕ್ಷ್ಮತೆಯುಳ್ಳ ಭಾಷಾಶಾಸ್ತ್ರಜ್ಞರಿಗೆ ಇಂಥ ಚರಿತ್ರೆಯ ಹೆಣಭಾರವನ್ನು, ವೈಜ್ಞಾನಿಕ ಭಾಷಾಶಾಸ್ತ್ರವೆಂಬುದು ನೆಲೆಗೊಂಡಿರುವ ಇಷ್ಟು ಕಡಿಮೆ ಅವದಿಯಲ್ಲಿ ಸುಲಭವಾಗಿ ಮತ್ತು ಇಡಿಯಾಗಿ ಕಿತ್ತೊಗೆಯಲು ಅಸಾಧ್ಯವೆಂದು ಗೊತ್ತಾಗುತ್ತದೆ. ಭಾಷಾಶಾಸ್ತ್ರವೆಂಬುದು ನಿರ್ವಾತದಲ್ಲಿ ಹುಟ್ಟಿದ್ದಲ್ಲ. ಇಂದಿನ ಭಾಷಾಶಾಸ್ತ್ರಜ್ಞರು ಪಾರಂಪರಿಕ ನೆಲೆಯಿಂದ ಬಂದ ಜಂಡರ್, ವಿಭಕ್ತಿ ಮುಂತಾದ ಪರಿಕಲ್ಪನೆಗಳನ್ನು ಬಳಸುವಾಗಲೇ ಆ ಪದಗಳು ಹೊತ್ತು ತಂದಿರುವ ಪಾರಂಪರಿಕ ಮೌಲ್ಯನಿರ್ಣಯ ಮತ್ತು ಮಿಥ್ಯಾಕಲ್ಪನೆಗಳಿಗೂ ಹೊಣೆಗಾರರಾಗುತ್ತಾರೆ. ಇಂದಿನ ಭಾಷಾಶಾಸ್ತ್ರಕ್ಕೆ ಶುದ್ಧತೆಯ ವ್ಯಸನವಿಲ್ಲದಿರಬಹುದು.  ತನ್ನನ್ನು ತಾನು ವಿಜ್ಞಾನವೆಂದು ಬಿಂಬಿಸಿಕೊಳ್ಳುತ್ತಿರಬಹುದು. ಆದರೂ ವ್ಯಾಕರಣ / ಭಾಷಾಶಾಸ್ತ್ರಗಳು ಪಿತೃಪ್ರಧಾನ ವಿದ್ವತ್ತಿನ ದಾಖಲೆಗಳೇ ಆಗಿರುತ್ತವೆ. ಈ ಬಗೆಯ ವಿದ್ವತ್ತು ಲಿಂಗತಾರತಮ್ಯವನ್ನು ನೆಲೆಗೊಳಿಸುವುದರಲ್ಲಿ ಸದಾ ನಿರತವಾಗಿರುತ್ತವೆ.

ನಾನು ಡೇಲ್ ಸ್ಪಂಡರ್‌ಳನ್ನು ಟೀಕಿಸುವಾಗ ಆಕೆ ಎರಡು ಸಂಗತಿಗಳ ನಡುವೆ ಗೊಂದಲ ಮಾಡಿಕೊಂಡಿದ್ದಾಳೆ ಎಂದು ಹೇಳಿದೆ. ಭಾಷೆಯಲ್ಲೇ ಇರುವ ಲಿಂಗತಾರತಮ್ಯ ಮತ್ತು ಭಾಷೆಗೆ ಆರೋಪಿಸಲಾದ ಲಿಂಗತಾರತಮ್ಯ – ಇವೇ ಆ ಎರಡು ಸಂಗತಿಗಳು. ದಿಟವಾಗಿ ಈ ಎರಡರ ನಡುವೆ ಗೆರೆ ಎಳೆಯುವುದು ಕೆಲವೊಮ್ಮೆ ಕಷ್ಟಕರ. ಒಂದು ಇನ್ನೊಂದರೊಡನೆ ಬೆರೆತು ಹೋಗುತ್ತದೆ. ನಮ್ಮ ಚರ್ಚೆಗಳು ಹೀಗೆ ಉಂಟಾಗುವ ಗೊಂದಲದ ಬಗ್ಗೆ ಯಾವಾಗಲೂ ಎಚ್ಚರದಿಂದಿರಬೇಕಾಗುತ್ತದೆ.

—-
ಆಕರ : False dichotomics : Grammer and Sexual polarities. (in) Feminism and Lingustic Theory – Deborah Cameran