ಸ್ತ್ರೀವಾದಿ ಚಿಂತನೆ ಹಾಗೂ ಚಳುವಳಿಗಳು ಸಾಕಷ್ಟು ದೀರ್ಘಕಾಲದಿಂದಲೇ ಕಾರ್ಯ ಪ್ರವೃತ್ತವಾಗಿವೆ. ಜಾಗತಿಕವಾಗಿ ನೂರೈವತ್ತು ವರ್ಷಗಳಿಗೂ ಮೀರಿದ ಚಾರಿತ್ರಿಕ ಹಿನ್ನೆಲೆ ಇದಕ್ಕಿದೆಯಾದರೂ, ಭಾರತದ ಸಂದರ್ಭದಲ್ಲಿ ಸುಮಾರು ಐದಾರು ದಶಕಗಳಿಂದ ಈ ದಿಕ್ಕಿನಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ಸುಧಾರಣಾವಾದಿ ಚಳುವಳಿಗಳು ಮಹಿಳಾ ವಿಷಯಗಳನ್ನು ಕೈಗೆತ್ತಿಕೊಂಡವೆಂಬುದು ನಿಜವಾದರೂ, ಈ ನೆಲಯ ಚಿಂತನೆ ಹಾಗೂ ಚಟುವಟಿಕೆಗಳನ್ನು ಸ್ತ್ರೀವಾದಿ ಎಂದು ಹೇಳುವುದು ಸರಿಯಾಗಲಾರದು. ಯಜಮಾನ ನೆಲೆಯ ಸಮುದಾಯವು ಅಧೀನ ನೆಲೆಯ ಸಮುದಾಯದ ಬಗ್ಗೆ ತಳೆದ ಮೃದುಧೋರಣೆಗಳೆಂದು ಅವನ್ನು ನೋಡಬಹುದಷ್ಟೆ.

ಇಷ್ಟಾಗಿಯೂ, ಮೊದಲ ಹಂತದ ಸ್ತ್ರೀವಾದಿ ಚಿಂತನೆಗಳು ಮುಖ್ಯವಾಗಿ, ಸ್ತ್ರೀವಾದಿಗಳು ಕೈಗೆತ್ತಿಕೊಂಡ ಚಳುವಳಿಗಳನ್ನು ಮುನ್ನಡೆಸಲು, ಅದಕ್ಕೆ ಸೂಕ್ತವಾದ ಕಾರ್ಯತಂತ್ರಗಳನ್ನು ರೂಪಿಸಲು ಅಗತ್ಯವಾದ ಚೌಕಟ್ಟುಗಳಲ್ಲಿ, ವಿಶೇಷವಾಗಿ ಆಯಾ ಸಾಂದರ್ಭಿಕ ಕಾರ್ಯಸೂಚಿ ಗಳನ್ನು ಹುದುಗಿಸಿಕೊಂಡು ನಡೆಸಿದ ಚಿಂತನೆಗಳಾಗಿರುತ್ತಿದ್ದವು. ಅವುಗಳ ಮುಖ್ಯ ಆದರ್ಶವೇ ತತ್ಕಾಲದ ಉಸಿರುಗಟ್ಟುವ ಪರಿಸ್ಥಿತಿಯಿಂದ ತೀವ್ರಗತಿಯಲ್ಲಿ ಪಾರಾಗಲು ನಡೆಸುವ ಹೋರಾಟವಾಗಿತ್ತು. ಆ ಬಗೆಯ ಬಿಡುಗಡೆಯ ಹಾದಿಗಳನ್ನು ಕಲ್ಪಿಸುವ ಈ ಸ್ತ್ರೀವಾದಿ ಚಿಂತನೆಗಳ, ಹೋರಾಟಗಳ ಪಾತ್ರ ಅತ್ಯಂತ ಮಹತ್ವದ್ದು.

ಇಂಥ ಹೋರಾಟದ ಚಿಂತನೆಗಳು ಕ್ರಮೇಣವಾಗಿ ಮಹಿಳಾ ಸಮುದಾಯದ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಶೋಧಿಸಲು ತೊಡಗಿದ್ದು ಅತ್ಯಂತ ಅಗತ್ಯದ ಹಾಗೂ ಸಹಜವಾದ ಗತಿತಾರ್ಕಿಕ ಅಂಶವೇ ಆಗಿತ್ತು. ವರ್ತಮಾನದ ಸಂಗತಿಗಳನ್ನು ಭೂತ ಹಾಗೂ ಭವಿಷ್ಯದ ಕೊಂಡಿಗಳಿಗೆ ಜೋಡಿಸಿಕೊಂಡು ಅಧ್ಯಯನ ಮಾಡಿದ ಹೊರತು ದೀರ್ಘಕಾಲೀನ ಪರಿಹಾರಗಳನ್ನು ಶೋಧಿಸಲಾಗದು. ಸಮಾಜದಲ್ಲಿ ಇಂದಿಗೂ ಸಮಬಾಳು, ಸುಸಂಗತ ಬದುಕು ಹಾಗೂ ಮುಕ್ತ ಅವಕಾಶಗಳನ್ನು ಪಡೆಯಲು ಮಹಿಳಾ ಸಮುದಾಯವು ಹೋರಾಡಬೇಕಿದೆ ಎಂಬ ವಾಸ್ತವದಲ್ಲಿ, ನಮ್ಮ ಹೋರಾಟಗಳು ಸಮರ್ಥವೂ ಉಪ ಯುಕ್ತವೂ ಆಗಬೇಕಾದರೆ, ನಮ್ಮ ಪೂರ್ವಸಿದ್ಧತೆಗಳೂ ಅಷ್ಟೇ ನಿಖರವಾಗಿ, ಚಾಣಕ್ಷತನ ದ್ದಾಗಿ, ಮುಂದಾಲೋಚನೆಯಿಂದ ಕೂಡಿದ್ದಾಗಿರುವುದು ತೀರಾ ಅಗತ್ಯ.

ಇಂಥದೊಂದು ಪೂರ್ವಸಿದ್ಧತೆಗಾಗಿ ಆಳವಾದ, ಗಂಭೀರವಾದ ವಿಶಾಲವ್ಯಾಪ್ತಿಯ ಚಿಂತನೆಗಳು ರೂಪುಗೊಳ್ಳಬೇಕು. ಇಂಥ ಚಿಂತನೆಗಳು ಕ್ರಮಬದ್ಧವಾದ, ಶಿಸ್ತಿನಿಂದ ಕೂಡಿದ ವಿಶಿಷ್ಟ ಅಧ್ಯಯನ ವಿಧಾನಗಳಿಂದ ಮಾತ್ರ ಆಕಾರ ತಳೆಯುತ್ತವೆ. ಮಹಿಳಾ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡ ಇಂಥ ಕ್ರಮಬದ್ಧ ಅಧ್ಯಯನವು ಈ ಕೆಲವಾರು ದಶಕಗಳಲ್ಲಿ ನೆಲೆಯೂರತೊಡಗಿದೆ. ಇದನ್ನು ಮಹಿಳಾ ಅಧ್ಯಯನ ಎಂಬ ವಿಶಿಷ್ಟ ಜ್ಞಾನ ವಲಯದಲ್ಲಿ ಗುರುತಿಸಿಕೊಳ್ಳಳಾಗಿದೆ.

ಯಜಮಾನ ನೆಲೆಯು ಸಮಾಜದ ಎಲ್ಲ ಸಂಪನ್ಮೂಲಗಳನ್ನು ತನ್ನ ಹಿಡಿತದಲ್ಲೇ ಉಳಿಸಿಕೊಂಡಿರುವುದು ಸಹಜ. ಈ ನಿಯಂತ್ರಣದ ಮುಖ್ಯ ಲಗಾಮು ಜ್ಞಾನ ವಲಯಗಳ ಸೃಷ್ಟಿಯೇ ಆಗಿರುತ್ತದೆ. ಯೋಚನಾಶಕ್ತಿಯು ಯಜಮಾನ ಹಾಗೂ ಅಧೀನ ನೆಲೆಗಳಿಗೆ ಸಮಾನವಾಗಿಯೇ ಇರಬಹುದು. ಆದರೆ ಅದು ವಾಸ್ತವದಲ್ಲಿ ಆಕಾರ ತಳೆದು ಕಾರ್ಯರೂಪಕ್ಕೆ ಬರುವಲ್ಲಿ ಯಜಮಾನ ನೆಲೆಯು ಹೊಂದಿರುವ ನಿಯಂತ್ರಣವು ಮಾತ್ರವೇ ಪರಿಣಾಮಕಾರಿ ಯಾಗುತ್ತದೆ. ಈ ಅರ್ಥದಲ್ಲಿ ಪಿತೃಪ್ರಧಾನ ಸಮಾಜದ ಜ್ಞಾನವಲಯ ಎಂದರೆ ಗಂಡಿನಿಂದ, ಗಂಡಿಗಾಗಿ, ಗಂಡೇ ಸೃಷ್ಟಿಸಿದ ಸಂಗತಿ ಎನಿಸುತ್ತದೆ. ಅನಿವಾರ್ಯವಾಗಿ ಈ ಜ್ಞಾನವಲಯವನ್ನೇ ಹೆಣ್ಣು ಸಮುದಾಯವೂ ಅನುಸರಿಸಬೇಕಾಗುತ್ತದೆ. ಸ್ತ್ರೀವಾದಿ ಚಿಂತನೆಗಳು ಮಹಿಳಾ ಅಧ್ಯಯನಗಳ ನೆಲೆಯಲ್ಲಿ ವಿಸ್ತರಣೆಗಳನ್ನು ಪಡೆದ ಮೊದಲ ಹಂತದಿಂದಲೇ, ಮಹಿಳಾ ಅಧ್ಯಯನಕಾರರು ರೂಢಿಯಲ್ಲಿರುವ ಜ್ಞಾನವಲಯಗಳ ಈ ಜಾಲದೊಂದಿಗೆ ಮುಖಾ ಮುಖಿಯಾಗತೊಡಗಿದ್ದಾರೆ. ಹಾಗಾಗಿ ಮಹಿಳಾ ಅಧ್ಯಯನವೆಂದರೆ ಪ್ರಸ್ತುತ ಜ್ಞಾನ ವಲಯಗಳನ್ನು ಒಡೆದು, ಅಗತ್ಯದ್ದನ್ನು ಪುನಾರಚಿಸಿಕೊಳ್ಳುವ ಒಂದು ಸಂಕೀರ್ಣ ಹೋರಾಟವೇ ಆಗಿದೆ.

ಸಮಾಜದಲ್ಲಿ ಜ್ಞಾನವಲಯಗಳನ್ನು ಬೆಳೆಸಿ ಮುನ್ನಡೆಸುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಯದು. ಈವರೆಗೆ ಈ ಶಿಕ್ಷಣ ವಲಯವು ರೂಢಿಗತ ಪಿತೃಪ್ರಧಾನ ಜ್ಞಾನದ ಸರಕನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುತ್ತಾ ಬಂದಿದೆ. ಮಹಿಳಾ ಬದುಕು ಹೇಗೆ ಪುರುಷ ಬದುಕಿನ ಅಧೀನದ್ದಾದರೂ ಪ್ರತ್ಯೇಕಗೊಂಡದ್ದಾಗಿರಲಾರದೋ ಹಾಗೆಯೇ ಮಹಿಳಾ ಅಧ್ಯಯನವೂ ಪ್ರಸ್ತುತ ಜ್ಞಾನವಲಯಕ್ಕೆ ಎದುರು ನಿಂತು ಸಂವಾದ ನಡೆಸಬೇಕಿದ್ದರೂ ಅದೇ ಶಿಕ್ಷಣ ವಲಯದ ಒಳಹೊಕ್ಕೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ತಾನೇ ಸ್ವತಂತ್ರ ಅಧ್ಯಯನ ವಲಯವಾಗಿ ನಿಲ್ಲಬೇಕಾಗಿರುವ ಅಗತ್ಯದಲ್ಲೂ ಇತರ ಜ್ಞಾನ ವಲಯಗಳೊಳಗೆ ಹೊಕ್ಕು ಹೊರಬರಬೇಕಾದ ಅವಶ್ಯಕತೆಯೂ ಇದೆ. ಹಾಗಾಗಿ. ಬಹುಶಿಸ್ತೀಯ ಹಾಗೂ ಅಂತರಶಿಸ್ತೀಯ ಅಧ್ಯಯನ ಕ್ರಮವು ಮಹಿಳಾ ಅಧ್ಯಯನದ ಮುಖ್ಯ ಚಹರೆಯೂ ಆಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯಂತಹ ಶಿಸ್ತುಗಳಿಂದ ಮೊದಲುಗೊಂಡು ಎಲ್ಲ ಮಾನವಿಕ ಜ್ಞಾನಶಿಸ್ತುಗಳು ಮಾತ್ರವಲ್ಲದೆ, ವಿಜ್ಞಾನ ತಂತ್ರಜ್ಞಾನಗಳವರೆಗೂ ಮಹಿಳಾ ಅಧ್ಯಯನದ ಆಯಾಮದ ಚಿಂತನೆಗಳು ಬೆಳೆಯುತ್ತಿವೆ. ಈ ಸಂದರ್ಭವನ್ನು ಗಂಭೀರವಾಗಿ ಪರಿಗಣಿಸಿದ ಅಂತರ್ ಶಿಸ್ತೀಯ ಅಧ್ಯಯನಗಳು ಮಹಿಳಾ ಅಧ್ಯಯನದಲ್ಲಿ ಸಾಕಷ್ಟು ನಡೆದಿವೆ. ಆಯಾ ಜ್ಞಾನವಲಯಗಳ ವಿಸ್ತರಣೆಗಾಗಿ ಇಲ್ಲಿನ ವಿದ್ವಾಂಸರು ಕೆಲಸ ಮಾಡುವುದಿಲ್ಲ. ಬದಲಿಗೆ ಮಹಿಳಾ ಬದುಕಿನ ಆಯಾಮದಿಂದ ಪ್ರತಿಯೊಂದು ಜ್ಞಾನವಲಯವನ್ನೂ ಪುನರಧ್ಯಯನಕ್ಕೆ ಒಳಗು ಮಾಡುವುದೇ ಇಲ್ಲಿನ ಮುಖ್ಯ ಪ್ರಯತ್ನ. ಭಾರತದಲ್ಲಿ ಈ ಹೊಸದಿಕ್ಕಿನ ಅಧ್ಯಯನಗಳು ಆಕಾರ ತಳೆಯತೊಡಗಿವೆ.

ಈ ಭೂಮಿಕೆಯನ್ನು ಪ್ರಧಾನವಾಗಿಸಿಕೊಂಡು ಭಾಷಾಶಾಸ್ತ್ರವನ್ನು ಅಧ್ಯಯನ ಮಾಡುವ ಹಂಬಲ ನನ್ನಲ್ಲಿ ಕೆಲವು ವರ್ಷಗಳಿಂದಲೂ ಒತ್ತಡವಾಗಿ ಕಾಡತೊಡಗಿತ್ತು. ಸಣ್ಣಪುಟ್ಟ ಲೇಖನ ಹಾಗೂ ಭಾಷಣಗಳ ಸಂದರ್ಭದಲ್ಲಿ ಹೆಣ್ಣಿನ ಭಾಷೆಯನ್ನು ಕುರಿತು, ಭಾಷೆಯ ಕಲಿಕೆ, ಬಳಕೆಗಳಲ್ಲಿ ಕಾಣುವ ಹಲವು ಸಂಘರ್ಷಗಳನ್ನು ಕುರಿತು ಚಿಂತಿಸಲಾರಂಭಿಸಿದ್ದೆ. ವಿಶ್ವವಿದ್ಯಾಲಯವು ವಿಶೇಷ ಅಧ್ಯಯನ ಉದ್ದೇಶಕ್ಕಾಗಿಯೇ ಕೊಡಮಾಡುವ ರಜೆಯ ಅವಕಾಶವು ಈ ಕುರಿತು ದೀರ್ಘ ಅಧ್ಯಯನಕ್ಕೆ ತೊಡಗಿಕೊಳ್ಳಲು ನೆರವಾಯಿತು.

ಸ್ತ್ರೀವಾದಿ ಆಯಾಮದಿಂದ ಭಾಷಾಶಾಸ್ತ್ರವನ್ನು ಅಧ್ಯಯನ ಮಾಡಬೇಕೆಂದುಕೊಂಡಾಗ ಮೊದಲಿಗೆ ಸೈದ್ಧಾಂತಿಕ ಚೌಕಟ್ಟನ್ನು ರೂಪಿಸಿಕೊಂಡು, ಮುಂದುವರೆದ ಹಂತದಲ್ಲಿ ಕ್ಷೇತ್ರಾಧ್ಯಯನವನ್ನು ಆಧರಿಸಿ ಕನ್ನಡ ಸಂದರ್ಭದಲ್ಲಿ ಪ್ರಾಯೋಗಿಕ ವಿಶ್ಲೇಷಣೆಯನ್ನು ಕೈಗೊಳ್ಳಬೇಕೆಂಬ ಆಶಯವಿತ್ತು. ಆದರೆ ಕೆಲಸದ ರೂಪುರೇಷೆಗಳನ್ನು ಕಲ್ಪಿಸುತ್ತಾ ಹೋದಂತೆ ಇಷ್ಟೊಂದು ವಿಸ್ತಾರದ ಅಧ್ಯಯನವನ್ನು ಒಂದು ವರ್ಷದೊಳಗೆ ಪೂರೈಸಲಾಗದೆಂದು ಅರಿವಿಗೆ ಬಂತು. ಹಾಗಾಗಿ, ಅಧ್ಯಯನದ ಮೊದಲ ಹಂತವಾಗಿ ಸೈದ್ಧಾಂತಿಕ ಚೌಕಟ್ಟನ್ನು ಕಟ್ಟಿಕೊಡುವ ಕೆಲಸವನ್ನು ಕೈಗೊಳ್ಳಲಾಯಿತು.

ಕನ್ನಡದ ಸಂದರ್ಭದಲ್ಲಿ ಸ್ತ್ರೀವಾದಿ ದೃಷ್ಟಿಕೋನದಿಂದ ಭಾಷಾಶಾಸ್ತ್ರವನ್ನು ಮರು ವಿವೇಚನೆಗೆ ಒಳಪಡಿಸುವ ಕೆಲಸ ನಡೆದೇ ಇಲ್ಲವೆನ್ನಬಹುದು. ಈ ಹಿನ್ನೆಲೆಯಲ್ಲಿ ಜಾಗತಿಕವಾಗಿ ಈ ದಿಸೆಯಲ್ಲಿ ನಡೆದಿರುವ ಕೆಲಸಗಳನ್ನು ಪರಿಚಯಿಸುವ ಮೂಲಕ ಪ್ರವೇಶವನ್ನೊದಗಿಸುವುದು ಸೂಕ್ತವೆಂದು ತೋರಿತು. ತಾತ್ವಿಕ ಚೌಕಟ್ಟೊಂದನ್ನು ರೂಪಿಸಲು ಅನುವಾಗುವಂತೆ ಹೆಣ್ಣು ಮತ್ತು ಭಾಷೆಗೆ ಸಂಬಂಧಿಸಿದಂತೆ ಅನುಕ್ರಮವಾಗಿ ವಿಷಯಗಳನ್ನು ಕಲ್ಪಿಸಿಕೊಂಡು, ಅದಕ್ಕೆ ಸೂಕ್ತವಾಗಬಹುದಾದ ಲೇಖನ/ಪುಸ್ತಕ ಭಾಗಗಳನ್ನು ಆಯ್ಕೆ ಮಾಡಲಾಯಿತು. ಈ ಬರಹಗಳನ್ನು ಬರೆದವರೆಲ್ಲರೂ ಖ್ಯಾತ ಸ್ತ್ರೀವಾದಿಗಳು. ಒಂದಲ್ಲ ಒಂದು ಬಗೆಯಲ್ಲಿ ಸ್ತ್ರೀವಾದಿ ಸಾಮಾಜಿಕ ಹೋರಾಟಗಳಲ್ಲಿ ಹಾಗೂ ಮಹಿಳಾ ಅಧ್ಯಯನ ವಲಯದಲ್ಲಿ ಏಕಕಾಲಕ್ಕೆ ತೀವ್ರವಾಗಿ ತೊಡಗಿಸಿಕೊಂಡವರು. ಈ ಬರಹಗಳು ನನ್ನ ಅಧ್ಯಯನದ ಮುಖ್ಯ ಉದ್ದೇಶವಾದ ಸ್ತ್ರೀವಾದಿ ಭಾಷಾಶಾಸ್ತ್ರ ಪ್ರವೇಶಿಕೆಯನ್ನು ರೂಪಿಸಲು ಮಾತ್ರವೇ ನೆರವಾಗಿ ಬಂದಿಲ್ಲ. ಬದಲಿಗೆ, ಮಹಿಳಾ ಅಧ್ಯಯನಗಳು ಹಾಗೂ ಅನ್ಯಜ್ಞಾನ ವಲಯಗಳ ಸಂಬಂಧಾಂತರಗಳ ಸ್ವರೂಪವನ್ನು ಖಚಿತವಾಗಿಸುವಲ್ಲಿಯೂ ಇವು ಮಾರ್ಗದರ್ಶಿಗಳಾಗಿವೆ. ಮಹಿಳಾ ಅಧ್ಯಯನದಲ್ಲಿ ತೊಡಗುವ ಯಾರೇ ಆಗಲಿ, ಅಂಥವರು ಯಾವುದೇ ಜ್ಞಾನ ವಲಯದೊಂದಿಗೆ ಮುಖಾಮುಖಿಯಾಗುತ್ತಿರಲಿ, ಈ ಮಾದರಿಯು ಸೂಕ್ತ ಚೌಕಟ್ಟನ್ನು ಒದಗಿಸಬಲ್ಲದು.

ಈ ಹಿನ್ನೆಲೆಯಲ್ಲಿ ಮುಖ್ಯವಾದ ಹನ್ನೆರಡು ಲೇಖನ/ಪುಸ್ತಕ ಭಾಗಗಳನ್ನು ಕನ್ನಡಕ್ಕೆ ತರಲಾಗಿದೆ. ಒಟ್ಟು ಅಧ್ಯಯನ ಸ್ವರೂಪ, ಉದ್ದೇಶ ಮತ್ತು ಉಪಯುಕ್ತತೆಗಳನ್ನು ವಿವರಿಸುವ ಒಂದು ದೀರ್ಘ ಪ್ರಸ್ತಾವನೆಯನ್ನು ಕೂಡಾ ಬರೆದು ಸೇರಿಸಲಾಗಿದೆ. ಅಧ್ಯಯನದ ಅನುಬಂಧವಾಗಿ ಒಂದು ಸಣ್ಣ ಪದಕೋಶ ಹಾಗೂ ಗ್ರಂಥಸೂಚಿಯನ್ನು ಒದಗಿಸಲಾಗಿದೆ.

ಇಂಥದೊಂದು ಅಧ್ಯಯನದಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಟ್ಟ ಕನ್ನಡ ವಿಶ್ವವಿದ್ಯಾಲಯದ ಎಲ್ಲ ಆಡಳಿತಾಧಿಕಾರಿಗಳಿಗೆ, ಪದಾಧಿಕಾರಿಗಳಿಗೆ ನಾನು ಆಭಾರಿ ಯಾಗಿದ್ದೇನೆ.

ಭಾಷಾಶಾಸ್ತ್ರವನ್ನೇ ಪ್ರಧಾನವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಡಾ.ಕೆ.ವಿ. ನಾರಾಯಣ ಅವರು ಈ ಅಧ್ಯಯನಕ್ಕೆ ಅಮೂಲ್ಯವಾದ ಸಲಹೆ ಸೂಚನೆಗಳನ್ನಿತ್ತು ಮಾರ್ಗದರ್ಶನ ಮಾಡಿದ್ದಾರೆ. ಲೇಖನಗಳ ಅನುವಾದದಲ್ಲಿ ಸೈದ್ಧಾಂತಿಕವಾದ ಹಲವು ಭಾಗಗಳನ್ನು ಅರ್ಥಮಾಡಿಕೊಳ್ಳಬೇಕೆಂದಾಗಲೆಲ್ಲ ಪಾಠದ ಮೇಷ್ಟ್ರೂ ಆಗಿದ್ದಾರೆ. ಈ ಸ್ನೇಹದ, ವಿದ್ವತ್ತಿನ ಬೆಂಬಲವೇ ನನ್ನ ಅಧ್ಯಯನದ ಮುಖ್ಯ ಆಧಾರವಾಗಿದೆ.

ಅಧ್ಯಯನ ರಜೆಯನ್ನು ಮುಗಿಸಿ ಬಂದಕೂಡಲೇ ನನ್ನ ಕೆಲಸವನ್ನು ಮಾನ್ಯ ಕುಲಪತಿಯವರು ಗಮನಿಸಿ ಪ್ರೋತ್ಸಾಹದ ಮಾತುಗಳನ್ನಾಡಿ ಕೂಡಲೇ ಪ್ರಕಟಣೆಗಾಗಿ ಕೈಗೆತ್ತಿಕೊಳ್ಳುವುದಾಗಿ ಹೇಳಿದರು. ಅವರಿಗೆ ನನ್ನ ಕೃತಜ್ಞತೆಗಳು. ಮಾನ್ಯ ಕುಲಸಚಿವರೂ ನನ್ನ ಕೆಲಸವನ್ನು ಮೆಚ್ಚಿದ್ದಾರೆ. ಅವರಿಗೂ ನನ್ನ ವಂದನೆಗಳು.

ಪ್ರಸಾರಾಂಗದ ಪ್ರಕಟಣೆಯಾಗಿ ಹೊರಬರಲು ನೆರವಾದ ಮಾನ್ಯ ಉಪಕುಲಸಚಿವರಾದ ಡಾ.ಪ್ರೇಮಕುಮಾರ್ ಅವರಿಗೆ, ಪ್ರಸಾರಾಂಗದ ನಿರ್ದೇಶಕರಿಗೆ ಹಾಗೂ ಅವರ ಸಿಬ್ಬಂದಿಯವರಿಗೆ ಧನ್ಯವಾದಗಳು.

ಸ್ತ್ರೀವಾದ ಹಾಗೂ ಮಹಿಳಾ ಅಧ್ಯಯನದ ಎಲ್ಲ ಆಸಕ್ತರೂ ನನ್ನ ಕೆಲಸವನ್ನು ಗಮನಿಸಬೇಕು, ಮುಖ್ಯವಾಗಿ ಸಕಾರಾತ್ಮಕವಾದ ಚರ್ಚೆ ಸಂವಾದಗಳಿಗೆ ಅವಕಾಶಗಳನ್ನು ಕಲ್ಪಿಸಬೇಕು ಎಂಬ ಆಶಯದ ಕೋರಿಕೆ ನನ್ನದು.

ಎಚ್.ಎಸ್. ಶ್ರೀಮತಿ