ಪೀಠಿಕೆ

ಭಾಷೆಯನ್ನು ಕುರಿತು ಮಾತಾಡುವ ಸಾಮಾನ್ಯರಾಗಲೀ, ಅದನ್ನು ವಿಶ್ಲೇಷಿಸುವ ತಜ್ಞರಾಗಲೀ ಎಲ್ಲರೂ ಲೈಂಗಿತತಾವಾದೀ ನೆಲೆಯಲ್ಲೇ ಇರುತ್ತಾರೆ. ಭಾಷೆಯನ್ನು ಕುರಿತು ಮಾತಾಡುವ ಅಧಿಭಾಷಿಕ ಚಟುವಟಿಕೆಗಳ ಬಗ್ಗೆ ಸ್ತ್ರೀವಾದಿ ಚಿಂತಕರು ಎಚ್ಚರದಿಂದಿರಬೇಕು. ಭಾಷೆ ಮತ್ತು ಅದನ್ನು ಕುರಿತು ಮಾತಾಡುವ ಅಧಿಭಾಷೆ ಇವೆರಡರ ನಡುವಣ ಗೆರೆ ಎಷ್ಟೇ ತೆಳುವಾಗಿರಲಿ, ಸ್ತ್ರೀವಾದಿಗಳು ಇವೆರಡನ್ನೂ ಬೇರೆ ಬೇರೆಯಾಗಿಯೇ ನೋಡಬೇಕು. ಒಂದನ್ನು ಇನ್ನೊಂದೆಂದು ತಿಳಿದು ಗೊಂದಲಕ್ಕೊಳಗಾಗಬಾರದು. ಅಂದರೆ, ಸ್ತ್ರೀವಾದಿಗಳು ಅಧಿಭಾಷೆಯನ್ನೇ ತಮ್ಮ ಟೀಕೆಗೆ ಗುರಿಮಾಡಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. ಒಂದು ವೇಳೆ ಲೈಂಗಿಕತಾವಾದವು ಭಾಷೆಯಲ್ಲೇ ಅಡಕವಾಗಿ ಬಿಟ್ಟಿದ್ದರೆ ಆಗೇನು ಮಾಡುವುದು?

ಭಾಷೆಯಲ್ಲಿರುವ ಲೈಂಗಿಕತಾವಾದವನ್ನು ಚರ್ಚಿಸುವುದು ಸ್ತ್ರೀವಾದಿಗಳ ಮುಖ್ಯ ಭಾಷಿಕ ಕಾಳಜಿಗಳಲ್ಲಿ ಒಂದಾಗಿದೆ. ಈ ಪ್ರಬಂಧದಲ್ಲಿ ನಾನು ಎರಡು ತಾತ್ತ್ವಿಕ ಪ್ರಶ್ನೆಗಳನ್ನು ಚರ್ಚಿಸಲಿದ್ದೇನೆ. ಲೈಂಗಿಕತಾವಾದಿ ಭಾಷೆಯು ಏಕೆ ಸಮಸ್ಯಾತ್ಮಕವಾಗಿದೆ ಮತ್ತು ಅದನ್ನು ಕುರಿತು ನಾವು ಏನು ಮಾಡಬೇಕು’- ಇವೇ ಆ ಎರಡು ಪ್ರಶ್ನೆಗಳು.

ಲೈಂಗಿಕತಾವಾದಿಭಾಷೆಯ ವ್ಯಾಖ್ಯಾನ

‘ಲೈಂಗಿಕತಾವಾದಿ ಭಾಷೆ’ ಎಂದ ಕೂಡಲೇ ಹಾಗೆಂದರೇನು ಎಂಬ ಪ್ರಶ್ನೆ ಎದುರಾಗುತ್ತದೆ. ಗಂಡಸರಿಗಿಂತ ಹೆಂಗಸರು ಕೀಳು ಎಂದು ಹೇಳುವ ಚಿಂತನೆಗಳನ್ನು ಮತ್ತು ಕ್ರಿಯೆಗಳನ್ನು ಸೂಚಿಸಲು ಲೈಂಗಿಕತಾವಾದ ಎಂಬ ಪದರಚನೆ ಹುಟ್ಟಿಕೊಂಡಿದೆ. ಈಗ ಈ ವ್ಯಾಖ್ಯಾನ ಕೊಂಚ ಬದಲಾಗಿದೆ. ಗಂಡು ಹೆಣ್ಣು – ಇವರಲ್ಲಿ ಯಾರನ್ನೇ ಆಗಲಿ, ನ್ಯಾಯಯುತವಲ್ಲದ ರೀತಿಯಲ್ಲಿ ನಡೆಸಿಕೊಂಡರೆ, ಇಲ್ಲವೇ ಇಬ್ಬರನ್ನು ಬೇರೆ ಬೇರೆಯಾಗಿ ನೋಡಿದರೆ, ಆಗ ಅದನ್ನು ಲೈಂಗಿಕತಾವಾದ ಎನ್ನಲಾಗುತ್ತಿದೆ. ಈ ವ್ಯಾಖ್ಯಾನದಂತೆ ಹೆಂಗಸರನ್ನು ಹೊರಗಿಡುವ, ಕೀಳುಗೈಯುವ, ಇಲ್ಲವೇ, ಅವರ ಮಹತ್ವ ಕುಗ್ಗಿಸುವ ಭಾಷೆಯನ್ನು ಮಾತ್ರ ಲೈಂಗಿಕತಾವಾದಿ ಎನ್ನಲಾಗುವುದಿಲ್ಲ. ಒಂದು ವೇಳೆ ಗಂಡಸರನ್ನು ಹೀಗೆಯೇ ಮಂಡಿಸುವ ಭಾಷೆಗೂ ಇದೇ ಹಣೆಪಟ್ಟಿ ಹಚ್ಚಬೇಕಾಗುತ್ತದೆ. ಲೈಂಗಿಕತಾವಾದ ಎಂಬುದು ಈಗ ಜಂಡರ್ ತಟಸ್ಥ ಪರಿಕಲ್ಪನೆಯಾಗಿ ಬಿಟ್ಟಿದೆ. ಒಂದೆರಡು ದಶಕಗಳ ಹಿಂದೆ ಅದನ್ನು ನಾವು ನೋಡುತ್ತಿದ್ದ ಬಗೆಯನ್ನು ಈಗ ಬದಲಾಯಿಸಿಕೊಳ್ಳಬೇಕಾಗಿದೆ. ಯುದ್ಧ ಇಲ್ಲವೇ ಭಯೋತ್ಪಾದಕ ಚಟುವಟಿಕೆಗಳ ವರದಿಗಳಲ್ಲಿ ಕಾಣುವ ‘ಮುಗ್ಧ ಹೆಂಗಸರು ಮತ್ತು ಮಕ್ಕಳು’ ಎಂಬ ಉಕ್ತಿಯಲ್ಲಿ ಲೈಂಗಿಕತಾವಾದಿ ನೆಲೆ ಇದೆಯೆಂದು ಈಚೆಗೊಬ್ಬರು ವಾದಿಸಿದ್ದಾರೆ. ಯುದ್ಧ ಇಲ್ಲವೇ ಹೋರಾಟ ನಡೆದಾಗ ಗಂಡಸರೂ ಕೂಡಾ ಗಾಯಗೊಳ್ಳಬಹುದು. ಇಲ್ಲವೇ ಸಾಯಬಹುದಷ್ಟೇ? ಈಚೆಗೆ ಬಳಸಲಾಗುತ್ತಿರುವ Mothering ಎಂಬ ಪದದ ಬಗ್ಗೆಯೂ ಅವರ ತಕರಾರಿದೆ. ಗಂಡಸರು ತಮ್ಮ ಮಕ್ಕಳ ಬಗ್ಗೆ ಕಾಳಜಿ ಹೊಂದಿಲ್ಲವೆಂದು ಏಕೆ ನಾವೇ ಅಂದುಕೊಳ್ಳಬೇಕು ಎಂದು ಕೇಳಿದ್ದಾರೆ.  ಈ ಪದದ ಬದಲು Parenting ಎಂಬ ತಟಸ್ಥ ಪದವನ್ನು ಏಕೆ ಬಳಸಬಾರದು ಎಂದು ವಾದಿಸಿದ್ದಾರೆ.

ಏಕೆ ಬಳಸಬೇಕು? ಸ್ತ್ರೀವಾದವಾಗಲೀ ಅಥವಾ ಸಮಾಜವಾಗಲೀ ಭಾಷಿಕ ನೆಲೆಯಲ್ಲಿ ಗಂಡಸರ ವಿರುದ್ಧ ಕತ್ತಿ ಮಸೆಯುತ್ತಿಲ್ಲ. ‘ಗಂಡು ವಿರೋಧಿ’ ಪದಗಳಲ್ಲಿ ಹೇಳಲಾಗುತ್ತಿರುವ ಬಳಕೆಗಳು ಲೈಂಗಿಕತಾವಾದಿಯಾಗಿವೆಯೆಂದು ತಿಳಿಯೋಣ. ಆದರೆ, ಅದಕ್ಕೆ ಗಂಡಸರು ಯಾವ ಕಾರಣವನ್ನು ನಮೂದಿಸುತ್ತಿದ್ದಾರೋ ಅಲ್ಲಿ ತಪ್ಪು ಇದೆ. ಸ್ತ್ರೀವಾದಿಗಳು ಲೈಂಗಿಕತಾವಾದವನ್ನು ಗುರುತಿಸಲು ಬಳಸುವ ತರ್ಕದ ಹಿಂದೆ ಹೆಂಗಸರು ಅಧೀನತೆಯ ನೆಲೆಯಲ್ಲಿ ಇದ್ದಾರೆಂಬ ಗ್ರಹಿಕೆ ಕೆಲಸ ಮಾಡುತ್ತಿದೆ. ಗಂಡಸರು ಇದೇ ತರ್ಕವನ್ನು ಬಳಸಲು ಬರುವುದಿಲ್ಲ.

‘ಮುಗ್ಧ ಹೆಂಗಸರು ಮತ್ತು ಮಕ್ಕಳು’ ಎಂಬ ಮಾತು ಗಂಡಸರನ್ನು ಅಂಚಿಗೆ ತಳ್ಳುತ್ತಿಲ್ಲ. ಬದಲಾಗಿ, ಮಕ್ಕಳ ಜೊತೆಗೆ ಸೇರಿಸುವ ಮೂಲಕ ಹೆಂಗಸರನ್ನು ಅಸಹಾಯಕರೆಂದೂ, ನಿಷ್ಕ್ರಿಯರೆಂದೂ, ರಾಜಕೀಯ ಕರ್ತೃತ್ವವಾಗಲೀ, ನೈತಿಕ ತೀರ್ಮಾನ ವಾಗಲೀ ಸಾಧ್ಯವಿಲ್ಲದ ಬಲಿಪಶುಗಳೆಂದೂ ಗುರುತಿಸಿ,ಅವರನ್ನು ಅವಮಾನಿಸುತ್ತಿದೆ. Mothering ಎಂಬ ಪದ ಹಲವು ಸಂದರ್ಭಗಳಲ್ಲಿ ಲೈಂಗಿಕತಾವಾದಿಯಂತೆ ವರ್ತಿಸುತ್ತದೆ. ಏಕೆಂದರೆ,  ಮಕ್ಕಳು ಮತ್ತು ಶಿಶು ಪಾಲನೆಯ ನೆಲೆಯಲ್ಲಿ ಹೆಂಗಸರು ಹೊಂದಿರುವ ಸಂಬಂಧವನ್ನು ನೈಸರ್ಗಿಕವೆನ್ನುವ ನಂಬಿಕೆಯನ್ನು ಈ ಪದ ಮತ್ತೆ ದೃಢ ಪಡಿಸುತ್ತದೆ. ಸ್ತ್ರೀವಾದಿಗಳು ಈ ನಂಬಿಕೆಯನ್ನೇ ಪ್ರಶ್ನಿಸಿದ್ದಾರೆ. ಏಕೆಂದರೆ, ಇಂದಿನ ಬದಲಾದ ಸಾಮಾಜಿಕ ವ್ಯವಸ್ಥೆಗಳಲ್ಲಿ ತಾಯಿಯಲ್ಲದವರನ್ನು ಹೆಂಗಸರಲ್ಲ ಎಂದು ಪರಿಗಣಿಸಲು ಹೊರಟರೆ ಅದರಿಂದ ಲೈಂಗಿಕತಾವಾದಿ ನೆಲೆಗಳನ್ನು ಸಮರ್ಥಿಸಿದಂತಾಗುತ್ತದೆ. ಹೆಂಗಸರು ತಮಗೆ ಬೇಕೆನಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅವಕಾಶಗಳನ್ನು ಮಿತಗೊಳಿಸಿ ದಂತಾಗುತ್ತದೆ. ತಾಯ್ತನದ ಹೊತ್ತಿನ ಅವರ ವೇತನರಹಿತ ದುಡಿಮೆಯನ್ನು ಬಳಸಿ ಶೋಷಣೆಗೆ ಗುರಿ ಮಾಡಿದಂತಾಗುತ್ತದೆ. ಕೆಲವೊಮ್ಮೆ ಅವರು ಹೆತ್ತ ಮಕ್ಕಳಿಗಿಂತಲೂ ಅವರೇ ಕ್ಷುಲ್ಲಕವಾಗಿ ಬಿಡುವ ಹಾಗಾಗಿ ಬಿಡುತ್ತದೆ.

ಲೈಂಗಿಕತಾವಾದಿ ಎಂಬ ಮಾತು ಭಾಷೆಯಲ್ಲಾಗಲೀ, ಇನ್ನಿತರ ಕಡೆಗಳಲ್ಲಾಗಲೀ ಬಳಕೆಯಾಗುವಾಗ ಇಬ್ಬಾಯಿ ಖಡ್ಗದಂತಿರುತ್ತದೆ. ಈ ಮಾತು ಗಂಡಸರನ್ನು ಮತ್ತು ಹಲವು ಹೆಂಗಸರನ್ನು ಆಕರ್ಷಿಸುತ್ತದೆ. ಹಲವು ಪಾಶ್ಚಾತ್ಯ ಸಮಾಜಗಳು ‘ನಾವೆಲ್ಲರೂ ವ್ಯಕ್ತಿಗಳು’ ಎಂಬ ಪ್ರಸ್ತಾವವನ್ನು ಎತ್ತಿ ಹಿಡಿಯುವ ಉದಾರವಾದಿ ಧೋರಣೆಯನ್ನು ಹೊಂದಿವೆ. ಅದರಿಂದಾಗಿಯೇ, ಹೆಂಗಸರ ಶೋಷಣೆಯ ಮಾತೆತ್ತಿ, ಲೈಂಗಿಕತಾವಾದಿ ನೆಲೆಗಳನ್ನು ಮೊದ ಮೊದಲು ಗುರುತಿಸಲು ಹೊರಟ ಕೂಡಲೆ, ಅದಕ್ಕೆ ವಿರೋಧಗಳು ಹುಟ್ಟಿಕೊಂಡವು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಲೈಂಗಿಕ ನೆಲೆಯಿಂದಾಗಿಯೇ ಶೋಷಣೆಗೆ ಒಳಗಾಗುತ್ತಿರುವುದನ್ನು ತೋರಿಸಿಕೊಡಲು ಜನ ಮುಂದಾದರು. ನನ್ನ ಪ್ರಕಾರ ಇದೊಂದು ಗುಮ್ಮನಕತೆ. ಒಂದು ವ್ಯವಸ್ಥೆಯಲ್ಲಿ ಹೆಂಗಸರು ಮತ್ತು ಗಂಡಸರು ಭಿನ್ನರಾಗಿರುವುದರಿಂದ ಲೈಂಗಿಕತಾವಾದ ತಲೆ ಎತ್ತುವುದಿಲ್ಲ. ಅವರ ನಡುವಣ ಅಸಮಾತನೆಯೇ ಅದಕ್ಕೆ ಕಾರಣವಾಗಿರುತ್ತದೆ. ಭಾಷೆಯಲ್ಲಿರುವ ಲೈಂಗಿಕತಾವಾದವು ಈ ಅಸಮಾನತೆಯ ಫಲ. ಅದು ಹೆಂಗಸರನ್ನು ಗುರಿಯಾಗಿ ಇಟ್ಟುಕೊಂಡಿದೆಯೇ ಹೊರತು ಗಂಡಸರನ್ನಲ್ಲ.

ಲೈಂಗಿಕತಾವಾದಿ ಭಾಷೆಯನ್ನು ಅರಿಯುವುದು

ಬೇರೆ ಬೇರೆ ಭಾಷೆಗಳಲ್ಲಿ ಲೈಂಗಿಕತಾವಾದಿ ನೆಲೆಗಳು ಇರುವುದನ್ನು ಗುರುತಿಸಲಾಗಿದೆ ಯಾದರೂ, ನಾನು ಈ ಪ್ರಬಂಧದಲ್ಲಿ ಇಂಗ್ಲಿಶ್ ಭಾಷೆಯ ಉದಾಹರಣೆಗಳನ್ನು ಮಾತ್ರ ಚರ್ಚಿಸಲಿದ್ದೇನೆ. ಇಂಗ್ಲಿಶ್ ಭಾಷೆಯ ಪದಕೋಶ ಮತ್ತು ವ್ಯಾಕರಣ ವ್ಯವಸ್ಥೆಯು ಹೆಂಗಸರನ್ನು ಹೊರಗಿಡುವ, ಹೀನಾಯಗೊಳಿಸುವ ಮತ್ತು ಕ್ಲುಲ್ಲಕಗೊಳಿಸುವ ಲಕ್ಷಣಗಳನ್ನು ಹೊಂದಿರುವುದನ್ನು ಸ್ತ್ರೀವಾದಿಗಳು ಗುರುತಿಸಿದ್ದಾರೆ. ಹೀಗಾಗಲು, ಭಾಷಾವ್ಯತ್ಯಾಸದ ಹಿನ್ನೆಲೆಯಲ್ಲಿ ಕಾರಣಗಳಿವೆ ಎಂದು ವಾದಿಸಿದ್ದಾರೆ. ಮತ್ತೆ ಕೆಲವರು ಈ ಲಕ್ಷಣಗಳಿಗೂ ಸಾಮಾಜಿಕ ವಾಸ್ತವತೆಗೂ ಸಂಬಂಧ ಕಲ್ಪಿಸುವುದರಲ್ಲಿ ಆಸಕ್ತರಾಗಿದ್ದಾರೆ. ಅವರ ಪ್ರಕಾರ ಭಾಷೆ ಎಂಬುದು ತನ್ನೊಳಗೆ ಸ್ವಯಂಪೂರ್ಣವಾದ ವ್ಯವಸ್ಥೆಯೊಂದನ್ನು ರೂಪಿಸಿಕೊಂಡಿರುತ್ತದೆ ಎಂದು ತಿಳಿಯುವ ಬದಲು, ಅದನ್ನು ಸಂಸ್ಕೃತಿಯನ್ನು ಅರಿಯಲು ಬಳಸಬೇಕಾದ ಕೀಲಿಕೈ ಎಂದು ತಿಳಿಯಬೇಕು. ಮತ್ತೆ ಕೆಲವರು ಭಾಷಿಕ ಸುಧಾರಣೆಗಳನ್ನು ತರುವುದೇ ತಮ್ಮ ಮುಖ್ಯ ಗುರಿ ಎಂದೂ, ಅದರಿಂದ ಈ ಬಗೆಯ ಬಳಕೆಗಳು ಇಲ್ಲವಾಗುತ್ತವೆಂದೂ ತಿಳಿದಿದ್ದಾರೆ.

ಈ ಕೊನೆಯ ನೆಲೆಯೇ ಲೈಂಗಿಕತಾವಾದಿ ನೆಲೆಗಳನ್ನು ಭಾಷೆಯಲ್ಲಿ ಗುರುತಿಸಿ ತಕರಾರೆತ್ತಿದ ಸ್ತ್ರೀವಾದಿಗಳಿಗೆ ಸಾರ್ವಜನಿಕವಾದ ಚಹರೆಯನ್ನು ತಂದುಕೊಟ್ಟಿದೆ. ಏಕೆಂದರೆ, ಮಾತು ಮತ್ತು ಬರಹಗಳಲ್ಲಿ ಇಂಥವೇ ಬದಲಾವಣೆಗಳಾಗಬೇಕೆಂದು ಈ ಸ್ತ್ರೀವಾದಿಗಳು ಒತ್ತಾಯಿಸಿದ್ದಾರೆ. ಅವರ ಒತ್ತಡಕ್ಕೆ ಮಣಿದು ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಇಪ್ಪತ್ತು ವರ್ಷಗಳ ಹಿಂದೆ Angry young men ಎಂದು ಬರೆದು ಕೈ ತೊಳೆದುಕೊಳ್ಳುತ್ತಿದ್ದ ಸಮಾಚಾರ ಪತ್ರಿಕೆಗಳು ಈಗ angry young men and women ಎಂದು ಬರೆಯಬೇಕಾದ ಒತ್ತಡಕ್ಕೆ ಸಿಲುಕಿವೆ. Chairperson ಮತ್ತು spokeswoman ಮುಂತಾದ ಪ್ರಯೋಗಗಳು ಈಗ ಎಷ್ಟು ಅಭ್ಯಾಸವಾಗಿ ಹೋಗಿವೆಯೆಂದರೆ ಅವುಗಳನ್ನು ಬಳಸುವುದು ಹೊಸತನವೆಂದು ಅನ್ನಿಸುತ್ತಿಲ್ಲ. ಹಾಗೆಯೇ ಸರ್ವನಾಮಗಳ ಬುಡವೂ ಅಲುಗಾಡುತ್ತಿದೆ.

ಹೀಗೆಂದ ಮಾತ್ರಕ್ಕೆ ಇಂಗ್ಲಿಶ್ ಮಾತಾಡುವ ಸಮುದಾಯಗಳಲ್ಲಿ ಲೈಂಗಿಕತಾವಾದಿ ಭಾಷೆಯು ಜೀವಂತವಾಗಿಲ್ಲ, ಅದರ ಸ್ಥಾನ ಚ್ಯುತಿ ಆಗಿದೆ ಎಂದೇನೂ ಅಲ್ಲ. ಈಗಲೂ ಸಮಾಚಾರ ಪತ್ರಿಕೆಗಳ ಕೋಣೆಯ ಪ್ರಗತಿಶೀಲ ಎಡಪಂಥೀಯರು Manholeಗಳನ್ನು access chambers ಎಂದೋ, ಇಲ್ಲವೇ ಕೆಲವೊಮ್ಮೆ ಇನ್ನೂ ಮುಂದುವರೆದು personholes ಎಂದೋ ಮರುನಾಮಕರಣ ಮಾಡುವ ಹರಟೆಗಳಲ್ಲಿ ತೊಡಗಿಯೇ ಇದ್ದಾರೆ. ಆದರೂ, ಲೈಂಗಿಕತಾವಾದಿ ಭಾಷೆಯ ಬಳಕೆಯ ಕಟ್ಟಾ ಸಮರ್ಥಕರೂ ಕೂಡಾ ಈಗ ತಮ್ಮ ನಿಲುವುಗಳನ್ನು ಬಿಟ್ಟು ಕೊಡಬೇಕಾಗಿ ಬಂದಿದೆ. ಸಾಂಪ್ರದಾಯಿಕ ಇಂಗ್ಲಿಶ್‌ನಲ್ಲಿ ಗಂಡಸಿನ ಬಗ್ಗೆ ಓಲುವೆ ಇರುವುದನ್ನು ಅವರೀಗ ನಿರಾಕರಿಸುತ್ತಿಲ್ಲ. ಬದಲಿಗೆ ಭಾಷಿಕ ಕಾರಣಗಳನ್ನು ಮುಂದೊಡ್ಡಿ ಬದಲಾವಣೆಗಳಿಗೆ ತಕರಾರನ್ನು ಎತ್ತುತ್ತಿದ್ದಾರೆ. ಉದಾಹರಣೆಗೆ, ವ್ಯಾಕರಣ ನಿಯಮಗಳನ್ನು ಮುಟ್ಟುವುದಕ್ಕೆ ನಾವ್ಯಾರು ಎಂದೋ, ಲೈಂಗಿಕತೆಯ ಬಗ್ಗೆ ತಟಸ್ಥವಾಗಿರುವ ಪದ ಪ್ರಯೋಗಗಳು ಸುಂದರವಾಗಿಲ್ಲ ಎಂದೋ, ಅಥವಾ ಇನ್ನೂ ಮುಂದುವರೆದು ಭಾಷೆಯಲ್ಲಿ ಬೇಕೆಂತಲೇ ತರುವ ಬದಲಾವಣೆಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾಶ ಮಾಡಿ ಸರ್ವಾಧಿಕಾರತ್ವಕ್ಕೆ ಎಡೆ ಮಾಡಿಕೊಡುತ್ತದೆಂದೋ ಹೇಳುತ್ತಿದ್ದಾರೆ. ೧೯೭೨ರ Times ಪತ್ರಿಕೆಯಲ್ಲಿ ಸ್ಟೀಫನ್ ಕನ್ಫರ್ ಬರೆದದ್ದನ್ನು ನೋಡಿ – ‘ಸ್ತ್ರೀವಾದಿಗಳು ಸಾಮಾಜಿಕ ಅಪರಾಧಗಳ ಬಗ್ಗೆ ದನಿ ಎತ್ತುತ್ತಿರುವುದು ನ್ಯಾಯಯುಕ್ತವಾಗಿದೆ. ಹಾಗೆ ಮಾಡಬೇಕಾದ್ದು ಅನಿವಾರ್ಯವೂ ಹೌದು. ಆದರೆ, ಪದಗಳ ಮೇಲೆ ದಾಳಿ ಮಾಡುವುದು ಇನ್ನೊಂದು ಬಗೆಯ ಸಾಮಾಜಿಕ ಅಪರಾಧ. ಇಲ್ಲಿ ಸಂವಹನದ ಹಾದಿ ಮತ್ತು ಸಾಧ್ಯತೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ’.

ಅಯ್ಯೋ, ಬಡಭಾಷೆಯೇ! ಇಷ್ಟು ಅಮಾಯಕ ಭಾಷೆಯ ಮೇಲೆ ಸ್ತ್ರೀವಾದಿಗಳು ಗದಾಪ್ರಹಾರ ಮಾಡುತ್ತಿದ್ದಾರೆ. ಸದ್ಯ ಎಷ್ಟೋ ಗಂಡಸರು ಭಾಷೆಯನ್ನು ರಕ್ಷಿಸಲು ಟೊಂಕ ಕಟ್ಟಿದ್ದಾರೆ. ಈ ಮುಸುಕಿನ ಅತ್ಯಾಚಾರ ಕೇವಲ ಆಕಸ್ಮಿಕವೇ? ಏಕೆಂದರೆ, ಗಂಡಸರು ಭಾಷೆಯನ್ನು ಹೆಣ್ಣಿಗೆ ಹೋಲಿಸಿದ್ದಾರೆ. ಭಾಷೆಯಿಂದ ಕವಿಯು ಕವಿತೆಗಳನ್ನು ಹೆರುವಂತೆ ಮಾಡುವನೆಂದು W.B. Auden ಹೇಳಿದ್ದಾನಂತೆ. ಹಾಗಿದ್ದ ಮೇಲೆ ಅವಳ ಮೇಲೆ ಅವನಿಗೆ ಅಧಿಕಾರವಿರಲೇಬೇಕಲ್ಲ. ಹೀಗೆ ಭಾಷೆಯನ್ನು ಕವಿತೆ ಹೆರುವ ಹೆಣ್ಣಿಗೆ ಹೋಲಿಸಿದರೆ, ಕವಯತ್ರಿರಿಗೆ ಏನು ಮಾಡಬೇಕು? ಗಂಡಸರು ಭಾಷೆಯ ಯಜಮಾನರಾಗಿ ರುವುದರಿಂದ ಅದರ ಗತಿಯನ್ನು ನಿಯಂತ್ರಿಸುವವರು ತಾವಲ್ಲದೆ ಹೆಂಗಸರಲ್ಲ ಎಂದು ಈ ಮೂಲಕ ಹೇಳುತ್ತಲೂ ಇರಬಹುದು.

ಭಾಷೆಯನ್ನು ಬಳಸುವವರನ್ನು ಹೊರಗಿಟ್ಟು ಕೇವಲ ಅದರ ಮೇಲಷ್ಟೇ ದಾಳಿ ಮಾಡಬಹುದೆಂಬುದು ಅಸಂಗತ ವಿಚಾರ. ಇದೊಂದು ಅರ್ಥಹೀನ ವಾದ. ಏಕೆಂದರೆ, ಭಾಷೆ ಒಂದು ವಸ್ತು, ಒಂದು ಏಕಶಿಲಾಕೃತಿ ಎಂದು ತಿಳಿದ ಕೂಡಲೇ ಆ ಭಾಷೆಯ ಪದ್ಧತಿಗಳನ್ನು ಬದಲಿಸಿದಾಗ ನಾವು ಯಾರ ಪದಗಳನ್ನು, ಪ್ರತಿಮೆಗಳನ್ನು, ಸಂಪ್ರದಾಯಗಳನ್ನು  ವಿರೋಧಿಸುತ್ತಿದ್ದೇವೆ ಎಂದು ಚಿಂತಿಸುವುದನ್ನೇ ಬಿಟ್ಟು ಬಿಡುತ್ತೇವೆ. ಸ್ತ್ರೀವಾದಿಗಳು ಕೇವಲ ತಮ್ಮ ಸಾಮಾಜಿಕ ಕುಂದುಕೊರತೆಗಳ ಮಂಡನೆಗಾಗಿ ಪದಗಳನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳುವ ಕನ್ಫರ್‌ನ ಮಾತು ದುರ್ಬಲವಾಗಿದೆ.

ಸ್ತ್ರೀವಾದಿಗಳು ‘ಪದಗಳ ಮೇಲೆ ನಡೆಸುತ್ತಿರುವ ದಾಳಿ’ಯ ಬಗ್ಗೆ ಇಷ್ಟೊಂದು ಜನ ದನಿ ಎತ್ತುತ್ತಿರುವುದನ್ನು ನೋಡಿದರೆ, ಭಾಷೆಯಲ್ಲಿ ಲೈಂಗಿಕತಾವಾದಿ ನೆಲೆಗಳಿವೆ ಎಂಬುದು ಕಡೆಗಣಿಸಬೇಕಾದ ವಿಚಾರವೆಂದು ಹೇಳುವುದು ಸುಳ್ಳೆಂದು ನನಗೆ ತೋರುತ್ತದೆ. ಒಂದು ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಇದೇಕೆ ಇಷ್ಟು ಮುಖ್ಯ? ಹೆಂಗಸರನ್ನು ಕೆಲಸಕ್ಕೆ ಬಾರದವರೆಂದೂ ಮತ್ತು ಬಲಿಪಶುಗಳೆಂದೂ ಪರಿಗಣಿಸುವ ಸಂಸ್ಕೃತಿಯ ನೆನಪುಗಳನ್ನು ಇದು ಜಾಗ್ರತಗೊಳಿಸುತ್ತಿದೆಯೋ ಅಥವಾ ನಿಜವಾಗಿಯೂ, ಇದು ಅಪಾಯಕಾರಿಯೇ, ಇದನ್ನು ಬದಲಿಸಬಹುದೇ, ಹಾಗಿದ್ದಲ್ಲಿ ಹೇಗೆ ಬದಲಿಸುವುದು?

ಇವೆಲ್ಲವೂ ತಾತ್ತ್ವಿಕ ಮಹತ್ವದ ಪ್ರಶ್ನೆಗಳು. ಉತ್ತರಗಳ ಬಗ್ಗೆ ಸ್ತ್ರೀವಾದಿಗಳಲ್ಲೇ ಒಮ್ಮತವಿಲ್ಲ. ಬಹುಪಾಲು ಸ್ತ್ರೀವಾದಿಗಳು ಲೈಂಗಿಕತಾವಾದಿ ನೆಲೆ ಭಾಷೆಯಲ್ಲಿ ಇದೆಯೆಂದೂ, ಅದು ಕೆಟ್ಟದ್ದೆಂದೂ ಒಪ್ಪುತ್ತಾರೆ. ಆದರೆ, ಹಾಗಾಗಲು ಕಾರಣವೇನೆಂದು ಹೇಳುವಾಗ ಒಮ್ಮತವಿಲ್ಲ. ಇವರಲ್ಲಿ ಮುಖ್ಯವಾಗಿ ಎರಡು ಗುಂಪುಗಳು ಇವೆ. ಒಂದು ಗುಂಪು ಭಾಷೆಯ ಲೈಂಗಿಕತಾವಾದಿ ನೆಲೆಯನ್ನು ಮತ್ತಾವುದೋ ರೋಗದ ‘ಸೂಚಕ’ವೆಂದು ತಿಳಿದರೆ, ಮತ್ತೊಂದು ಗುಂಪು ಆ ರೋಗಕ್ಕೆ ಈ ನೆಲೆಯೇ ‘ಕಾರಣ’ ವೆಂದು ತಿಳಿಯುತ್ತದೆ.

ಭಾಷೆಯಲ್ಲಿ ಲೈಂಗಿಕತಾವಾದೀ ನೆಲೆ  ಸೂಚಕವೋ, ಕಾರಣವೋ?

ಭಾಷೆಯಲ್ಲಿರುವ ಸಮೂಹವಾಚಿ ಪುಲ್ಲಿಂಗ ಸರ್ವನಾಮಗಳು, man ಎಂಬ ಪದ, ಹೆಂಗಸರಿಗೆ ಮೀಸಲಾದ ಪದನಾಮಗಳು– ಮುಂತಾಗಿ ಭಾಷೆಯಲ್ಲಿರುವ ಲೈಂಗಿಕತಾವಾದೀ ನೆಲೆಯು ಅದನ್ನು ಬಳಸುವವರ ಅಜ್ಞಾನ ಮತ್ತು ಅನವಧಾನದಿಂದ ಉಂಟಾಗುವ ನಿದರ್ಶನಗಳೆಂದು ‘ಸೂಚಕವಾದಿಗಳು’ ನಂಬುತ್ತಾರೆ. ಈ ತಪ್ಪುಗಳನ್ನು ಸುಧಾರಕರು ತಿದ್ದಬಹುದು. ಅದಕ್ಕಾಗಿ (a) ಇಂತಹ ದುರುದ್ದೇಶದ ಪದಗಳ ಕಡೆಗೆ ಬಳಕೆದಾರರ ಗಮನಸೆಳೆದು, ಅವುಗಳಿಂದ ಆಗುತ್ತಿರುವ ತೊಂದರೆಗಳನ್ನು ವಿವರಿಸುವುದು; ಆಮೇಲೆ (b) ಬದಲಾಗಿ ಬಳಕೆದಾರರು ಬಳಸಬಹುದಾದ ಪದಗಳನ್ನು ತಿಳಿಸುವುದು.

‘Handbook of non sexist writing’ ಎಂಬ ಉಪಯುಕ್ತ ಕೈಪಿಡಿಯ ಕರ್ತೃಗಳಾದ ಕೆ.ಸಿ. ಮಿಲ್ಲರ್ ಮತ್ತು ಕೇಟ್ ಸ್ವಿಫ್ಟ್. ಇವರು ಸೂಚಕವಾದಿ ಪ್ರವೃತ್ತಿಯ ಸೂಕ್ತ ಮಾದರಿಗಳು. ಭಾಷೆಯ ಲೈಂಗಿಕತಾವಾದೀ ನೆಲೆಯು ಅಪ್ರಸ್ತುತವಾಗಿರುವುದೇ ಅದರ ಸಮಸ್ಯೆ ಎಂದು ಇವರು ಹೇಳುತ್ತಾರೆ. ಈ ಬಳಕೆ ಒಂದು ಸೈದ್ಧಾಂತಿಕ ನೆಲೆಯಿಂದ ಹುಟ್ಟದೆ, ಸುಮ್ಮನೆ ಅಭ್ಯಾಸ ಬಲದಿಂದ ಉಳಿದುಕೊಂಡಿದೆ. ಜನರು ದಾಸಾನುದಾಸರಂತೆ ಭಾಷಿಕ ಬಳಕೆಗಳಿಗೆ ಜೋತು ಬಿದ್ದಿದ್ದಾರೆ. ಪರ್ಯಾಯ ಪದಗಳನ್ನು ಬಳಸಲು ಯಾರಾದರೂ ಹೇಳಿಕೊಟ್ಟರೆ, ತಾವು ಬದಲಾಗಲು ಜನರು ತುದಿಗಾಲಲ್ಲಿ ನಿಂತಿರುತ್ತಾರೆ. (ಮಿಲ್ಲರ್ ಮತ್ತು ಸ್ವಿಫ್ಟ್ ಇದಕ್ಕೂ ಮೊದಲು ಬರೆದ ಪುಸ್ತಕದ ಉಪಶೀರ್ಷಿಕೆ ‘New language in new times’ ಎಂದಿತ್ತು. ಪ್ರಾಯಶಃ, ತಾವು ಸ್ತ್ರೀವಾದಿ ಹೋರಾಟಗಳು ಮುಗಿದ ನಂತರದ ಲೋಕದಲ್ಲಿ ತಾವಿದ್ದೇವೆಂದು ಇವರು ತಿಳಿದಿರಬೇಕು’.

ಭಾಷೆಯಲ್ಲಿ ಎಲ್ಲವೂ ಹೇಗಿರಬೇಕೋ ಹಾಗಿರುವಂತೆ ಮಾಡುವುದಕ್ಕಾಗಿಯೇ ಅದರಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದೆ. ಭಾಷೆ ವಾಸ್ತವವನ್ನು ಪ್ರತಿನಿಧಿಸಬೇಕು. ಹೆಂಗಸರ ಸ್ಥಾನ ಮನೆಯಲ್ಲಿದೆ ಎಂದು ಹೇಳುತ್ತಿದ್ದ ಸಂದರ್ಭ ಇಲ್ಲವಾಗಿರುವಾಗ ಅದನ್ನೇ ಭಾಷೆ ಈಗಲೂ ಪ್ರತಿನಿಧಿಸುತ್ತಿದ್ದರೆ, ಅದು ತಪ್ಪು ದಾರಿ ಹಿಡಿದಿದೆಯೆಂದೂ, ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೆಂದೂ ಹೇಳಬೇಕಾಗುತ್ತದೆ. ಮಿಲ್ಲರ್ ಮತ್ತು ಸ್ವಿಫ್ಟ್ ಇವರ ಮಾತುಗಳಲ್ಲಿ ಹೇಳುವುದಾದರೆ, ‘‘ಸರಿಯಾದ ಮಾಹಿತಿಯನ್ನು ಹರಡುವವರ ಬಗ್ಗೆ ಜನರಿಗೆ ಗೌರವವಿದೆ. ತಾವು ಹೇಳುತ್ತಿರುವುದು ನಿಖರವಾದದ್ದು, ಭಾಷೆಯನ್ನು ಎಚ್ಚರದಿಂದ ಬಳಸಿದರೆ ಈ ನಿಖರ ಮಾಹಿತಿ ಉಪಯೋಗಕ್ಕೆ ಬರುತ್ತದೆ ಎಂದೂ ತಿಳಿಯಲಾಗಿದೆ. ಸಾಂಪ್ರದಾಯಿಕ ಇಂಗ್ಲಿಶ್ ಬಳಕೆಗಳು ಹೆಂಗಸರ ಸಾಧನೆಗಳು, ಮತ್ತು ಅವರ ಕ್ರಿಯೆಗಳನ್ನು ಮಸುಕು ಮಾಡುವುದಲ್ಲದೆ, ಕೆಲವೊಮ್ಮೆ ಅವರ ಅಸ್ತಿತ್ವವನ್ನೇ ಅಲ್ಲಗಳೆಯುತ್ತದೆ. ಇದೆಲ್ಲವೂ ನಮಗೆ ಈಚೆಗಷ್ಟೇ ಗೊತ್ತಾಗಿದೆ. ಇದೆಲ್ಲವೂ ಗೊತ್ತಿದ್ದೂ, ನಾವು ಅದಕ್ಕೆ ಬೆನ್ನು ಹಾಕಿ ಕೂರಬಹುದು. ಆದರೆ ಹಾಗೆ ಮಾಡುವುದು ಜಗತ್ತು ಚಪ್ಪಟೆಯಾಗಿದೆ ಎಂದು ನಮ್ಮ ಮಕ್ಕಳಿಗೆ ಕಲಿಸಿದರೆ ಹೇಗೋ ಹಾಗಿರುತ್ತದೆ’’.

ಭಾಷೆಯ ಲೈಂಗಿಕತಾವಾದೀ ನೆಲೆಯು ಸತ್ಯವನ್ನು ವಿಕೃತಗೊಳಿಸುತ್ತದೆ. ಇದನ್ನು ಅರಿತ ಬುದ್ದಿವಂತರು ತಮ್ಮ ತಪ್ಪುಗಳನ್ನು ಗುರುತಿಸುತ್ತಾ, ಸುಧಾರಣೆಯ ಕಡೆಗೆ ಸಾಗುತ್ತಾರೆ. ಪೂರ್ವಾಗ್ರಹಗಳನ್ನು ಕಿತ್ತು ಹಾಕಿ ಖಂಡಿತವಾದದ್ದನ್ನು ನಮ್ಮ ಭಾಷೆ ಪ್ರತಿನಿಧಿಸುವಂತೆ ‘ಎಚ್ಚರ’ ವಹಿಸಬೇಕಾಗಿದೆ.

ಮಿಲ್ಲರ್ ಮತ್ತು ಸ್ವಿಫ್ಟ್ ಅವರ ಕೃತಿಯು ಸುಧಾರಣೆಗಳನ್ನು ಮಾಡಹೊರಟಿರುವ ಸ್ತ್ರೀವಾದಿಗಳಿಗೆ ತುಂಬಾ ನೆರವಾಗಿದೆ. ಅದರಲ್ಲಿ ವಿವರಗಳಿವೆ, ಖಚಿತತೆ ಇದೆ, ಬರಹಗಾರರು ಹೆಚ್ಚು ಸೃಜನಶೀಲರಲ್ಲದಿದ್ದರೂ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ನೆರವಾಗುತ್ತದೆ. ಹಾಗಾಗಿ ಆ ಕೃತಿಯ ಮಹತ್ವವನ್ನು ನಾನು ಕಿರಿದುಗೊಳಿಸಲಾರೆ. ಆದರೆ, ಇಲ್ಲಿ ತಾತ್ವಿಕ ನೆಲೆಯ ಹಲವು ಕೊರತೆಗಳು ಹಾಗೆಯೇ ಉಳಿದುಬಿಟ್ಟಿವೆ. ಇಂಥ ಕೃತಿಗಳು ಪ್ರತಿನಿಧಿಸುವ ‘ತಾತ್ವಿಕ ನೆಲೆಯ ಸುಧಾರಣೆ’ ಮತ್ತು ಭಾಷೆಯನ್ನು ಕುರಿತಂತೆ ಇವು ಹೊಂದಿರುವ ನಂಬಿಕೆಗಳನ್ನು ನಾನೀಗ ಚರ್ಚಿಸಲಿದ್ದೇನೆ.

ತಾತ್ವಿಕ ನೆಲೆಯ ಸುಧಾರಣೆ ಎಂದರೆ, ಭಾಷೆಯಲ್ಲಿರುವ ಲೈಂಗಿಕತಾವಾದೀ ಧೋರಣೆಗಳನ್ನು ಪದಗಳ ರೂಪದ ಮೇಲ್ಪದರದಲ್ಲಿ ಅಷ್ಟಿಷ್ಟು ಬದಲಾವಣೆ ಮಾಡಿದರೆ, ಸಾಕೆಂದು ನಂಬುವುದು.  ಆದರೆ ಹೀಗಾದಾಗ ಅರ್ಥಕ್ಕಿಂತ ಮುಖ್ಯವಾಗಿ ಪದಗಳೇ ಸಮಸ್ಯಾತ್ಮಕವಾಗಿ ಬಿಡುತ್ತದೆ. ಪದಗಳ ಗುರಿ ಅವುಗಳನ್ನು ಬಳಸುವವರು ‘ನಿಜವಾಗಿ’ ಏನನ್ನು ಹೇಳಬೇಕಿದೆಯೋ ಅದನ್ನು ಇತರರಿಗೆ ತಿಳಿಸುವುದೇ ಹೊರತು ಬಳಸುವವರು ಉದ್ದೇಶಿಸದ ಸಂಗತಿಗಳನ್ನು ತಿಳಿಸುವುದಲ್ಲ. ಉದಾಹರಣೆಗೆ, ಒಬ್ಬರು manpower problem ಎಂದು ಹೇಳುತ್ತಾರೆಂದು ಕೊಳ್ಳಿ. ಹೀಗೆ ಹೇಳಿದವರ ಉದ್ದೇಶ ತನ್ನೊಡನೆ ಕೆಲಸ ಮಾಡುತ್ತಿರುವವರೆಲ್ಲ ಗಂಡಸರು ಎಂದು ಸೂಚಿಸುವುದಲ್ಲ. Staffing ಇಲ್ಲವೇ Personnel ಎಂಬ ಪರ್ಯಾಯ ಪದಗಳನ್ನು ಬಳಸಿ ಈ ಅರ್ಥಬರದಂತೆ ಮಾಡಬಹುದು ಎಂಬುದೂ ನಿಜ. ಅಂದರೆ, ಪದಗಳಿಗೆ ಸ್ಪಷ್ಟವಾದ, ಸ್ಥಿರವಾದ ಅರ್ಥವಿರುತ್ತದೆಂದು ಹೇಳಿದಂತಾಯಿತು. ಅಲ್ಲದೆ, ಭಾಷೆಯ ಗುರಿ ನಿಜವನ್ನು ಖಚಿತವಾಗಿ ಪ್ರತಿನಿಧಿಸುವುದು ಎಂದೂ ವಾದಿಸಿದಂತಾಯ್ತು. ಆದರೆ, ಇದು ತೀರಾ ಸರಳೀಕೃತ ತಿಳುವಳಿಕೆ ಎಂದು ನಾನು ಮುಂದೆ ಹೇಳಲಿದ್ದೇನೆ.

ಸೂಚಕವಾದೀ ಪ್ರವೃತ್ತಿಗಳನ್ನು ಮೊದಲಿನಿಂದಲೂ ಕೆಲವು ಸ್ತ್ರೀವಾದಿಗಳು ಖಡಾಖಂಡಿತವಾಗಿ ವಿರೋಧಿಸುತ್ತಿದ್ದಾರೆ. ಭಾಷೆಯೇ ಶೋಷಣೆಯ ಕಾರಣ, ಅದು ಕೇವಲ ಸೂಚಕವಲ್ಲ ಎಂದು ಹೇಳುವ ಪರ್ಯಾಯ ಚಿಂತನೆಯನ್ನು ಡೇಲ್ ಸ್ಪೆಂಡರ್ ಪ್ರತಿನಿಧಿಸುತ್ತಾಳೆ. ಸಮೂಹವಾಚಿ ಸರ್ವನಾಮಗಳು ಮತ್ತು man ಪದಗಳನ್ನು ಗುರಿಯಾಗಿಟ್ಟುಕೊಂಡು ಸುಧಾರಣೆಗಳನ್ನು ಸೀಮಿತಗೊಳಿಸಿಕೊಳ್ಳುವುದು ಅರ್ಥವಿಲ್ಲದ್ದೆಂದು ಸ್ಪೆಂಡರ್ ಹೇಳುತ್ತಾಳೆ. ಗಂಡಸರೇ ಎಲ್ಲ ಪದಗಳಿಗೂ ಅರ್ಥವನ್ನು ನಿಗದಿಪಡಿಸಿರುವುದರಿಂದ ಅವರು ಸ್ತ್ರೀವಿರೋಧಿ ನೆಲೆಗಳನ್ನು ಬಲಗೊಳಿಸಿದ್ದಾರೆ. ಹಾಗಾಗಿ, ಎಲ್ಲ ಪದಗಳಲ್ಲೂ ಲೈಂಗಿಕತಾವಾದೀ ನೆಲೆಗಳು ಅಡಕಗೊಂಡಿರುತ್ತವೆ.

ಸೂಚಕ ಮತ್ತು ಕಾರಣ – ಈ ಚರ್ಚೆಯು ಭಾಷೆ ಮತ್ತು ವಾಸ್ತವತೆಗಳ ಸಂಬಂಧವನ್ನು ಕುರಿತ ಪ್ರಶ್ನೆಯೊಡನೆ ತಳುಕು ಹಾಕಿಕೊಂಡಿದೆ. ಈ ಚರ್ಚೆ ವಿಸ್ತಾರವಾದುದು. ಅದನ್ನು ಇನ್ನೊಂದೆಡೆ ಕೈಗೆತ್ತಿಕೊಂಡಿದ್ದೇನೆ. ಸದ್ಯ ತಾತ್ವಿಕ ನೆಲೆಯ ಸುಧಾರಣೆಗಳ ಬಗ್ಗೆ ಮಾತ್ರ ನನ್ನ ವಿಮರ್ಶೆಯನ್ನು ಸೀಮಿತಗೊಳಿಸಿಕೊಂಡು ಸ್ಪೆಂಡರ್ ಮಂಡಿಸಿದ ಹೆಚ್ಚು ಪ್ರಖರವಾದ ಚಿಂತನೆಗಳ ಅಗತ್ಯ ಈಗ ಇದೆಯೆಂದು ವಾದಿಸಲಿದ್ದೇನೆ. ಕಳೆದ ಎರಡು ದಶಕಗಳಿಂದ ಸ್ತ್ರೀವಾದಿಗಳು ಭಾಷೆಯ ಲೈಂಗಿಕತಾವಾದೀ ನೆಲೆಗಳನ್ನು ವಿರೋಧಿಸುತ್ತಾ ಬಂದಿರುವುದನ್ನು ಗಮನಿಸಬೇಕಾಗಿದೆ. ಈ ವಿರೋಧಗಳಿಗೆ ಹಲವು ಗುರಿಗಳಿವೆ. ಅವುಗಳ ಪರಿಣಾಮಗಳು ಈವರೆಗೆ ನಾವು ತಿಳಿದಿದ್ದಕ್ಕಿಂತ ಭಿನ್ನವಾಗಿವೆ. ಭಾಷಾಸುಧಾರಣಾ ವಾದವನ್ನು ನಿಯಂತ್ರಿಸುವ ಮತ್ತು ಮಿತಗೊಳಿಸುವ ಸಂಗತಿಗಳು ಯಾವುವು, ಆ ಸುಧಾರಣೆಗಳು ಪರಿಣಾಮಕಾರಿಯಾಗುವಂತೆ ಮಾಡುವಲ್ಲಿ ಇವುಗಳ ಪಾತ್ರವೇನು ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ.

ವಿಶ್ಲೇಷಣೆ ಮತ್ತು ಪ್ರತಿರೋಧ

ಭಾಷೆಯ ಲೈಂಗಿಕತಾವಾದೀ ನೆಲೆಗಳ ವಿರುದ್ಧ ಸ್ತ್ರೀವಾದಿಗಳ ಹೋರಾಟ

ಸ್ತ್ರೀವಾದಿಗಳು ಭಾಷೆಯ ಲೈಂಗಿಕತಾವಾದೀ ನೆಲೆಗಳನ್ನು ಗಮನಿಸಿ, ಅದರಿಂದ ಉಂಟಾಗುವ ಪ್ರಭಾವಗಳನ್ನು ಇಲ್ಲವಾಗಿಸಲು ಭಾಷಾ ಬಳಕೆಯಲ್ಲಿ ತರಬೇಕಾದ ಬದಲಾವಣೆಗಳನ್ನು ಕುರಿತು ಚಿಂತಿಸಿದ್ದಾರೆ. ಪ್ರತಿರೋಧ ತೋರುವ ಮೊದಲು ವಿಶ್ಲೇಷಣೆ ಅಗತ್ಯ. ಆದರೆ ನಾನಿಲ್ಲಿ ಅವೆರಡನ್ನೂ ಬೇರೆ ಬೇರೆಯಾಗಿ ಇರಿಸಿಲ್ಲ.

ಸ್ಪಷ್ಟತೆಗಾಗಿ ನಾನು ಭಾಷಾಬಳಕೆಯಲ್ಲಿರುವ ಲಿಂಗತಾರತಮ್ಯದ ನೆಲೆಗಳನ್ನು ಎರಡು ಕೊಂಚ ಭಿನ್ನವಾದ ದೃಷ್ಟಿಕೋನಗಳಿಂದ ನೋಡ ಬಯಸಿದ್ದೇನೆ. ಕೆಲವು ಸ್ತ್ರೀವಾದಿಗಳು ಇಂಗ್ಲಿಶ್ ಭಾಷೆಯ ದಿನದಿನದ ಹಲವು ಬಳಕೆಗಳನ್ನು ಗುರುತಿಸಿ ಅವುಗಳ ಮೂಲಕ ಹೆಂಗಸರ ಬಗೆಗೆ ತೋರುವ ತಾರತಮ್ಯವನ್ನು ತೋರಿಸಿದ್ದಾರೆ. ಉದಾಹರಣೆಗೆ, ಹೆಂಗಸರನ್ನು ಸಂಬೋಧಿಸುವ ಬಗೆಗಳು ಮತ್ತು ಪದಕೋಶದಲ್ಲಿ ಇರುವ ಹೀನಾರ್ಥ ಸೂಚಕ ನೆಲೆಗಳು. ಈ ಬಗೆಯ ತಾರತಮ್ಯಗಳನ್ನು ಗುರುತಿಸುವುದು ಸುಲಭ. ನಿವಾರಿಸುವುದು ಕಷ್ಟ. ಏಕೆಂದರೆ, ಇಂಥ ಬಳಕೆಗಳು ಅನಿಯಂತ್ರಿತವಾಗಿ ನಡೆಯುತ್ತಿರುತ್ತವೆ. ಹೆಂಗಸರನ್ನು dearie ಎಂದು, ಸಂಬೋಧಿಸಲು, ಇಲ್ಲವೇ bitches ಎಂದು ಉಲ್ಲೇಖಿಸಲು ಯಾರೂ ಯಾರಿಗೂ ಹೇಳಿಕೊಡುವುದಿಲ್ಲ. ಅದನ್ನು ಕುರಿತ ಲಿಖಿತ ನಿಯಮಗಳು ಕಂಡು ಬರುವುದಿಲ್ಲ. ಇಂಥ ಸಂದರ್ಭಗಳಲ್ಲಿ ವಿಶ್ಲೇಷಣೆಗೆ ಮಾತ್ರ ಸೀಮಿತವಾಗಬೇಕಾಗುತ್ತದೆ. ಇಲ್ಲವೇ, ಸ್ತ್ರೀವಾದಿಗಳು, ಅನೌಪಚಾರಿಕವಾದ ಗೆರಿಲ್ಲಾ ಮಾದರಿಯ ಪ್ರತಿರೋಧಗಳನ್ನು ಒಡ್ಡಬೇಕಾಗುತ್ತದೆ.

ಮತ್ತೆ ಕೆಲವು ಲಿಂಗತಾರತಮ್ಯವುಳ್ಳ ಬಳಕೆಗಳು ದಿನದಿನದ ಮಾತು ಬರಹಗಳಲ್ಲಿ ಕಾಣಿಸಿಕೊಳ್ಳುತ್ತವೆಯಾದರೂ, ಅವುಗಳನ್ನು ವ್ಯಾಕರಣ ಗ್ರಂಥಗಳು ಮತ್ತು ನಿಘಂಟುಗಳು ಮಾನ್ಯ ಮಾಡಿರುತ್ತವೆ. ಹಾಗಾಗಿ, ಅವು ಅಧಿಕೃತವೆನಿಸಿಬಿಡುತ್ತದೆ. (ಕುಖ್ಯಾತವಾದ ಸಮೂಹವಾಚಿ ಪುಲ್ಲಿಂಗ ಸರ್ವನಾಮರೂಪ ಇದಕ್ಕೊಂದು ಉದಾಹರಣೆ.) ಇಂಥ ಕಡೆ ಸ್ತ್ರೀವಾದಿಗಳು, ಮನ್ನಣೆ ನೀಡುವ ಆಕರಗಳನ್ನು ಟೀಕಿಸುವ ಮೂಲಕ ಔಪಚಾರಿಕ ನೆಲೆಯಲ್ಲಿ ತಲೆತೂರಿಸಬಹುದು. ಪರ್ಯಾಯ ರೂಪಗಳನ್ನು ತಾವೇ ಹುಟ್ಟು ಹಾಕಬಹುದು.

ದಿನದಿನದ ವ್ಯವಹಾರಗಳಲ್ಲಿ ಲೈಂಗಿಕತಾವಾದ ಚಿಕ್ಕ ಬೈಗುಳಗಳು : ಮುಚ್ಚಟೆಯ ಮಾತುಗಳು

ವ್ಯಕ್ತಿಯೊಬ್ಬರು ಎದುರಾದಾಗ ಅವರೊಡನೆ ಮಾತಿಗೆ ಮೊದಲು ಮಾಡಲು ಸಂಬೋಧನಾ ರೂಪವೊಂದನ್ನು ಬಳಸುತ್ತೇವೆ. ಇಂಥ ರೂಪಗಳನ್ನು ಪ್ರತಿಯೊಂದು ಭಾಷೆಯೂ ಬೆಳೆಸಿಕೊಂಡಿರುತ್ತದೆ. ಈ ರೂಪಗಳು ಕೇವಲ ಸಂಬೋಧನೆಯನ್ನು ಮಾತ್ರ ಮಾಡುವುದಿಲ್ಲ. ಜೊತೆಗೆ, ಸಂಸ್ಕೃತಿಗೆ ವಿಶಿಷ್ಟವಾದ ಸಾಮಾಜಿಕ ನೆಲೆಯ ವರ್ಗೀಕರಣಗಳನ್ನು ಸೂಚಿಸುತ್ತದೆ. (ರಕ್ತಸಂಬಂಧ/ ಸಾಮಾಜಿಕ ಸಂಬಂಧ, ಪರಿಚಿತ/ ಅಪರಿಚಿತ, ಶ್ರೀಮಂತಿಕೆ/ ಬಡತನ) ಉದಾಹರಣೆಗೆ, ಉಪಾಧ್ಯಾಯಿನಿಯಾದ ನಾನು ನನ್ನ ವಿದ್ಯಾರ್ಥಿಗಳ ನಿಜನಾಮವನ್ನು ತಿಳಿದು ಕರೆಯುವ ಹಕ್ಕು ನನಗಿದೆಯೆಂದು ಭಾವಿಸುತ್ತೇನೆ. ಆದರೆ, ಅವರು ನನ್ನ ನಿಜನಾಮವನ್ನು ಬಳಸಿ ಕರೆಯಲು ನನ್ನ ಅನುಮತಿಯನ್ನು ಕೇಳಬೇಕಾಗಬಹುದು. ಒಂದು ವೇಳೆ ನನ್ನ ಸೋದರಿ ನನ್ನನ್ನು Ms ಕ್ಯಾಮರಾನ್ ಎಂದೇನಾದರೂ ಕರೆದರೆ ನನಗೆ ಅಚ್ಚರಿಯಾಗುತ್ತದೆ. ಜೊತೆಗೆ ಗಲಿಬಿಲಿಯೂ ಆಗಬಹುದು. ಇವೆಲ್ಲ ಹೇಗಿರಬೇಕು ಎಂದು ಹೇಳುವ ಕಟ್ಟುಪಾಡುಗಳು ಸಂಕೀರ್ಣವಾಗಿವೆ. ಕೆಲವೊಮ್ಮೆ ಅವುಗಳನ್ನು ಬಿಡಿಸಿ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಉದಾಹರಣೆಗೆ, ನನ್ನ ತರಗತಿಯಲ್ಲಿರುವ ವಿದ್ಯಾರ್ಥಿನಿಯೊಬ್ಬರು ನನ್ನ ತಾಯಿಯಷ್ಟು ವಯಸ್ಸಿನವರಾಗಿದ್ದರೆ, ಆಗ ಅವರನ್ನು ನಿಜನಾಮ ಹಿಡಿದು ಕರೆಯಬಹುದೇ?

ಗಂಡಸರು ಯಾವಾಗಲೂ ಹೆಂಗಸರನ್ನು ಆಪ್ತರೆಂದೂ, ಅಧೀನರೆಂದೂ ತಿಳಿದು ವರ್ತಿಸುತ್ತಾರೆ. ಅವರು ಅದನ್ನು ತಮ್ಮ ಸಹಜ ನಡವಳಿಕೆ ಎಂದು ನಂಬಿರುವುದನ್ನು ಸ್ತ್ರೀವಾದಿಗಳು ಗುರುತಿಸಿದ್ದಾರೆ. ಹೆಂಗಸರನ್ನು ಮಕ್ಕಳನ್ನು ಕರೆಯುವಂತೆ ಅವರ ನಿಜನಾಮ ಹಿಡಿದು ಕರೆಯುವುದೇ ವಾಡಿಕೆಯಲ್ಲಿದೆ. ಅಲ್ಲದೆ, Love, dear, honey, pet, hen – ಮುಂತಾದ ಮುಚ್ಚಟೆಯ ಮಾತುಗಳು ಯಾವಾಗಲೂ ಹೆಂಗಸರಿಗೇ ಮೀಸಲಾಗಿದೆ.

ನಿಜ. ಇಂಥ ಪದಗಳನ್ನು ಹೆಂಗಸರು ತಂತಮ್ಮಲ್ಲೇ ಕೂಡಾ ಬಳಸುತ್ತಾರೆ. ಕೆಲವೊಮ್ಮೆ ಗಂಡಸರೊಡನೆ ಮಾತಾಡುವಾಗಲೂ ಬಳಸುತ್ತಾರೆ. ಆದರೆ, ಒಬ್ಬ ಹೆಂಗಸು ಒಬ್ಬ ಗಂಡಸನ್ನು dear ಎಂದು ಕರೆದರೆ, ಆಕೆ ಸಾಮಾನ್ಯವಾಗಿ ಅವನಿಗಿಂತ ಹಿರಿಯಳಾಗಿರಬೇಕು, ಇಲ್ಲವೇ ಅವನೊಡನೆ ಆಪ್ತ ಸಂಬಂಧವನ್ನು ಹೊಂದಿರಬೇಕು. ಆದರೆ, ಗಂಡಸು ಈ ಪದವನ್ನು ತನಗಿಂತ ಅಧಿಕಾರದಲ್ಲಿ ಮೇಲಿರುವ ಹೆಂಗಸನ್ನುಳಿದು ಇತರ ಯಾವ ಹೆಂಗಸರಿಗಾದರೂ ಬಳಸಬಹುದು. (ಹಾಗಾಗಿ, ನನ್ನ ಗಂಡು ವಿದ್ಯಾರ್ಥಿಗಳು ಮಾತ್ರ ನನ್ನನ್ನು dear ಎಂದು ಸಂಬೋಧಿಸಲಾರರು. ಆದರೆ, ಈ ಲೋಕದಲ್ಲಿರುವ ಉಳಿದೆಲ್ಲ ಗಂಡಸರಿಗೂ ನನ್ನನ್ನು ಹಾಗೆ ಕರೆಯುವ ಅವಕಾಶವಿದೆ). ಹೆಂಗಸು ದೊಡ್ಡವಳೋ, ಚಿಕ್ಕವಳೋ, ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೆ ಸೇರಿದವಳೋ ಅಲ್ಲವೋ, ಪರಿಚಿತಳೋ ಅಲ್ಲವೋ – ಇವು ಯಾವುವೂ ಪರಿಗಣನೆಗೆ ಬರುವುದಿಲ್ಲ.

ಗಂಡಸರು ಮುಚ್ಚಟೆಯ ಮಾತುಗಳನ್ನು ಬಳಸಿ ಕರೆಯುವುದನ್ನು ಹಾಗೆ ಕರೆಸಿಕೊಂಡ ಯಾವ ಹೆಂಗಸಾದರೂ ವಿರೋಧಿಸಿದರೆ, ಅದನ್ನು ಕ್ಷುಲ್ಲಕ ಬುದ್ದಿ ಎಂದು ತಿಳಿಯುತ್ತಾರೆ. ಗಂಡಸರು ಇಷ್ಟಕ್ಕೂ ಸ್ನೇಹಪರರಾಗಿರಲು ಯತ್ನಿಸುತ್ತಿದ್ದಾರಷ್ಟೇ? ಹಾಗೆ ಕರೆದರೆ ಅದರಲ್ಲೇನು ಲಿಂಗತಾರತಮ್ಯವಿದೆ? ಈ ವಾದವನ್ನು ಸಂದೇಹದಿಂದ ನೋಡಲು ಮತ್ತು ಒಪ್ಪದಿರಲು ಎರಡು ಕಾರಣಗಳಿವೆ. ಮೊದಲನೆಯದಾಗಿ, ಗಂಡು ಹೆಣ್ಣುಗಳನ್ನು ಸಂಬೋಧಿಸುವ ಪದ್ಧತಿಗಳು ಅವರವರಲ್ಲಿ ಸಮಾನತೆಯ ನೆಲೆಯನ್ನು ಹೊಂದಿಲ್ಲ. ಇದು ಮೊದಲ ಕಾರಣ. ನನ್ನ ವಯಸ್ಸಿನ ಒಬ್ಬ ಗಂಡಸನ್ನು ಅಂಗಡಿಯಾತ Sir ಎಂದು ಕರೆದು, ನನ್ನನ್ನು dear ಎಂದು ಕರೆದರೆ, ಅದರಲ್ಲೇನೋ ಇದೆ ಎಂದು ಅನ್ನಿಸಬಾರದೇ? ನಾವು ಒಬ್ಬರನ್ನೊಬ್ಬರು ಗೌರವಿಸುವ ಬಗೆಯಲ್ಲೇ ಏರುಪೇರು ಇದೆ ಎಂದು ಹೇಳಿದರೆ ತಪ್ಪೇನು?

ಎರಡನೆಯದಾಗಿ, ಈ ಮುಚ್ಚಟೆಯ ಮಾತುಗಳು ಹೇಳುತ್ತಿರುವುದಾದರೂ ಏನನ್ನು? ನಾನು ಈಗಾಗಲೇ ಹೇಳಿದಂತೆ ಈ ಪದಗಳು ಆತ್ಮೀಯತೆಯನ್ನು ಸೂಚಿಸುತ್ತಿರಬಹುದು. ಆದರೆ ಅಪರಿಚಿತರಾದವರು ಇಂಥ ಪದಗಳನ್ನು ಬಳಸಿದರೆ ಅದು ಅಗೌರವವನ್ನು ಸೂಚಿಸಿದಂತೆ ಆಗುತ್ತದೆ. ಅಂದರೆ, ಹೆಂಗಸರೊಡನೆ ಮಾತಾಡುವಾಗ ಆಕೆ ತನಗೆ ಪರಿಚಿತಳೋ ಅಲ್ಲವೋ ಎಂಬ ಬಗ್ಗೆ ಗಂಡಸು ತಲೆ ಕೆಡೆಸಿಕೊಳ್ಳಬೇಕಾಗಿಲ್ಲ ಎಂಬ ಏಕಪಕ್ಷೀಯ ನಿರ್ಧಾರ ಅಲಿಖಿತವಾಗಿ ಜಾರಿಯಲ್ಲಿದೆ ಎಂದಾಯ್ತು. ಹೀಗೆ ಮುಚ್ಚಟೆಯ ಮಾತನ್ನು ಯಾವ ಹೆಂಗಸಿಗಾದರೂ ಗಂಡಸು ಬಳಸುವುದಕ್ಕೂ, ಅವರು ಹೆಂಗಸರನ್ನು ಕಣ್ಣು ಮಿಟುಕಿಸದೆ ದಿಟ್ಟಿಸುವುದಕ್ಕೂ, ತಾಕುವಷ್ಟು ಹತ್ತಿರದಲ್ಲಿ ನಿಂತು ಅವರ ವೈಯಕ್ತಿಕ ನೆಲೆಯ ಮೇಲೆ ದಾಳಿ ಮಾಡುವುದಕ್ಕೂ ಸಂಬಂಧವಿದೆ. ಹೀಗೆ ನಾವು ದಿನನಿತ್ಯವೂ ಮತ್ತೊಂದು ಗುಂಪಿನ ಸದಸ್ಯರ ವೈಯಕ್ತಿಕ ನೆಲೆ ಮತ್ತು ಅದರ ಸ್ವಾಯತ್ತತೆಯ ಮೇಲೆ ದಾಳಿ ಮಾಡುತ್ತಲೇ ಇರುತ್ತೇವೆ. ಮಕ್ಕಳೂ ಆ ಗುಂಪಿಗೆ ಸೇರುತ್ತಾರೆ (ಜನಾಂಗವಾದವನ್ನು ಆಚರಿಸುವ ಸಮಾಜಗಳಲ್ಲಿ ಬಿಳಿಯರು ಕಪ್ಪು ಜನರನ್ನು boy  ಮತ್ತು girl ಎಂದು ಕರೆಯುವ ಪದ್ಧತಿ  ವ್ಯಾಪಕವಾಗಿ ಬಳಕೆಯಲ್ಲಿರುವುದನ್ನು ಮರೆಯುವಂತಿಲ್ಲ. ಇದು ಕೇವಲ ಸ್ನೇಹಮಯತೆಯನ್ನು ತೋರುವ ಬಗೆಯೆ? ಖಂಡಿತಾ ಅಲ್ಲ. ಕಪ್ಪು ಜನರಿಗೆ ವಯಸ್ಕ ವರ್ಗಕ್ಕೆ ದೊರೆಯಬೇಕಾದ ಮತ್ತು ಅಧೀನವರ್ಗಕ್ಕೆ ಸಿಗಬೇಕಾದ ಘನತೆಯನ್ನು ನಿರಾಕರಿಸುವುದೇ ಇಂಥ ಸಂಬೋಧನೆಯ ಗುರಿ)

ಸ್ತ್ರೀವಾದಿಗಳು ಇದಕ್ಕೇನು ಮಾಡಬೇಕು? ಪದನಾಮಗಳನ್ನು ಸೂಚಿಸುವ ರೂಪಗಳನ್ನು ಬದಲಿಸುವ ಪ್ರಯತ್ನಗಳು ನಡೆದಿವೆ. (Mrs. ಮತ್ತುMs. ಗಳನ್ನು ಕುರಿತ ವಿವಾದ ನೆನಪಿಸಿಕೊಳ್ಳಿ) ಇಂಥ ಸುಧಾರಣೆಗಳು ಬ್ರಿಟನ್‌ನಲ್ಲಿ ಅಲ್ಲದಿದ್ದರೂ ಬೇರೆ ಕೆಲವು ದೇಶಗಳಲ್ಲಿ ಯಶಸ್ವಿಯಾಗಿವೆ. ವೃತ್ತಿ ಸಂದರ್ಭಗಳಲ್ಲಿ ಯಾವುದೇ ಹೆಂಗಸನ್ನಾದರೂ Ms ಎಂದು ಸಂಬೋಧಿಸುವುದು ಸಂಯುಕ್ತ ಸಂಸ್ಥಾನಗಳಲ್ಲಿ ಈಗ ವ್ಯಾಪಕವಾಗಿ ಬಳಕೆಯಲ್ಲಿದೆ. ಯಾರೂ ಹೆಂಗಸರನ್ನು ಮಿಸ್ಸೋ, ಮಿಸೆಸ್ಸೋ ಎಂಬ ಪ್ರಶ್ನೆ ಕೇಳಿ ಈಗ ತಲೆ ತಿನ್ನುವುದಿಲ್ಲ.

ಸಂಸ್ಥೆಗಳು ತಮ್ಮ ಪದ್ಧತಿಗಳನ್ನೂ, ವರ್ತನೆಗಳನ್ನೂ ಬದಲಿಸಿಕೊಳ್ಳುವಂತೆ, ಒತ್ತಾಯ ಮಾಡಬಹುದು. ಉದಾಹರಣೆಗೆ, ನನ್ನನ್ನು ಉದ್ದೆಶಿಸಿ ಬರೆಯುವಾಗ / ಕರೆಯುವಾಗ  Miss ಬದಲು Ms ಬಳಸಬೇಕೆಂದು ನನ್ನ ಬ್ಯಾಂಕಿನವರನ್ನು ನಾನು ಕೋರಬಹುದು. ಆದರೆ ಸಾಂಸ್ಥಿಕವಲ್ಲದ ದಿನನಿತ್ಯದ ಅನಿಯಂತ್ರಿತ ಸಂದರ್ಭಗಳಲ್ಲಿ ಹೀಗೆ ಮಾಡುವುದು ಸುಲಭವಲ್ಲ. ಸ್ತ್ರೀವಾದಿಗಳು ಒಬ್ಬೊಬ್ಬ ಗಂಡಸನ್ನೂ ನಿಲ್ಲಿಸಿ ಆತನ ಭಾಷಾಬಳಕೆಗಳಲ್ಲಿ ಇರುವ ಲಿಂಗಾತಾರತಮ್ಯದ ನೆಲೆಗಳನ್ನು ವಿವರಿಸಿ ಹೇಳುತ್ತಾ ಕೂರಬೇಕಾಗುತ್ತದೆ. ನಾನು ಬರ್ಲಿನ್‌ನಲ್ಲಿದ್ದಾಗ ಒಬ್ಬ ಹೆಂಗಸನ್ನು ಬಸ್‌ನ ಗಂಡು ಡ್ರೈವರೊಬ್ಬರು ಫ್ರಾಲಿನ್ ಎಂದು ಸಂಬೋಧಿಸಿದರು. (ಫ್ರಾಲಿನ್ ಎಂದರೆ Miss ಗೆ ಸಂವಾದಿ ಪದ. ನಿಜವಾಗಿ ಈ ಪದದ ಅರ್ಥ ಪುಟ್ಟ ಹೆಂಗಸರು ಎಂದು. ಹಲವು ಜರ್ಮನ್ ಹೆಂಗಸರು ಈ ಪದವನ್ನು ಹೀನಾರ್ಥಕ ಎಂದು ಬಗೆದು ಅದರ ಬದಲು ಫ್ರಾ ಎಂಬ ಪದವನ್ನು  ಬಳಸಬೇಕೆಂದು ನಿರೀಕ್ಷಿಸುತ್ತಾರೆ.) ಆತ ಹೇಳಿದ್ದಿಷ್ಟು: ಸರಿಯಾದ ಪ್ರಯಾಣ ದರವನ್ನು ಆಕೆ ನೀಡಿದ್ದಕ್ಕಾಗಿ ‘danke frauliein’ ಎಂದು ಹೇಳಿದನು. (Thank you little woman) ಆಗ ಆಕೆ bitte, Herrlein’ ಎಂದಳು. (You are welcome, little man) ಚಾಲಕನಿಗೆ ಮೈಯೆಲ್ಲ ಉರಿದು ಹೋಯಿತು. ಹೆಂಗಸು ಬಳಸಿದ ಮುಚ್ಚಟೆ ಪದ ಅವನಿಗೆ ಹಿಡಿಸಲಿಲ್ಲ.

ಅಷ್ಟೇನೂ ಚಿಕ್ಕವಲ್ಲದ ಬೈಗುಳುಗಳು: ‘ಬೀದಿ ಮಾತುಗಳು’ ಮತ್ತು ಹೆಂಗಸರ ಮೇಲೆ ಶಾಬ್ದಿಕ ಹಿಂಸಾಚಾರ

ನಗರದ ವಾತಾವರಣದಲ್ಲಿ ಅಪರಿಚಿತರು ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬರೊಡನೊಬ್ಬರು ಮಾತಾಡುವುದನ್ನು ಮತ್ತು ಒಬ್ಬರನ್ನೊಬ್ಬರು ಅನಗತ್ಯವಾಗಿ ಮುಟ್ಟುವುದನ್ನು ತಪ್ಪಿಸುತ್ತಾರೆ. ಸಮಾಜಶಾಸ್ತ್ರಜ್ಞರು ಈ ವರ್ತನೆಯನ್ನು ‘ಪೌರ ನಿರ್ಲಕ್ಷ್ಯ ಮಾದರಿ’ ಎಂದಿದ್ದಾರೆ. ಈ ನಿಯಮಕ್ಕೆ ವಿನಾಯಿತಿಗಳಿವೆ. ಈಗ ಸಮಯವೆಷ್ಟು ಎಂದು ಇನ್ನೊಬ್ಬರನ್ನು ನೀವು ಕೇಳಬಹುದು. ವಿಳಾಸ ಹುಡುಕುವಾಗ ನೆರವು ಕೋರಬಹುದು. ಒಂದು ವೇಳೆ, ನಿಮ್ಮ ವರ್ತನೆ ವಿಚಿತ್ರವಾಗಿದ್ದು ಬೇರೆಯವರ ಗಮನ ಸೆಳೆಯುವಂತಿದ್ದರೆ, ಆಗ ಅವರು ಅದನ್ನು ಕುರಿತು ಏನಾದರೂ ಹೇಳಬಹುದು. ಉದಾಹರಣೆಗೆ, ನೀವು ವಿದೂಷಕರಂತೆ ವೇಷ ಧರಿಸಿ ಬೀದಿಯಲ್ಲಿ ನೆಗೆಯುತ್ತಾ ಹೋಗುತ್ತಿದ್ದರೆ, ಬೇರೆಯವರು ನೋಡಿಯೂ ಸುಮ್ಮನಿರುತ್ತಾರೆಯೆ? ಆದರೆ, ಮತ್ತೊಂದು ಗುಂಪಿನ ಜನರಿದ್ದಾರೆ. ಅವರನ್ನು ‘ತೆರೆದುಕೊಂಡವರು’ಎಂದು ಸಮಾಜಶಾಸ್ತ್ರಜ್ಞೆ  ಕರೋಲ್ ಬ್ರೂಕ್ಸ್ ಗಾರ್ಡ್‌ನರ್ ಬರೆದಿದ್ದಾಳೆ. ಇವರನ್ನು ಕುರಿತು ಯಾರೂ ಯಾವಾಗಲಾದರೂ, ಏನಾದರೂ ಮಾತಾಡಬಹುದು. ಸಾಮಾನ್ಯವಾಗಿ ಮಕ್ಕಳು ಮತ್ತು ಕೆಲವು ನ್ಯೂನತೆಗಳನ್ನುಳ್ಳ ಜನರು ಈ ಗುಂಪಿಗೆ ಸೇರುತ್ತಾರೆ. ಇಷ್ಟಲ್ಲದೆ, ಹೆಂಗಸರೂ ಈ ತೆರೆದವರ ಗುಂಪಿಗೆ ಸೇರುವುದುಂಟು, ಅವರ ನಡೆನುಡಿ, ವರ್ತನೆಗಳ ಬಗ್ಗೆ ಇತರರು ಏನಾದರೂ ಹೇಳಬಹುದಾಗಿದೆ.

ಇಂಥ ಕೆಲವು ಬೀದಿಮಾತುಗಳು ಮುಚ್ಚಟೆ ಮಾತುಗಳಂತೆ ಇಬ್ಬಾಯಿ ಖಡ್ಗಗಳೆಂದು ಗಾರ್ಡ್‌ನರ್ ಹೇಳುತ್ತಾಳೆ. ಕೆಲವು ಸಂದರ್ಭಗಳಲ್ಲಿ ಈ ಮಾತುಗಳನ್ನು ಒಪ್ಪಿಕೊಂಡು ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳಲು ಬಳಸಬಹುದಾಗಿದೆ. ಆದರೆ, ಹೆಂಗಸರು ಇಕ್ಕಟ್ಟಿನಲ್ಲಿ ಸಿಲುಕಿ ಬಿಡುತ್ತಾರೆ. ಇಂಥ ಮಾತನ್ನು ತಮ್ಮ ಬಗ್ಗೆ ತೋರಿದ ‘ಮೆಚ್ಚುಗೆ’ ಎಂದು ತಿಳಿದರೆ, ಆಗ ತಮ್ಮನ್ನು ‘ತೆರೆದವರ’ ಗುಂಪಿಗೆ ಸೇರಿಸಲು ಗಂಡಸರಿಗೆ ಹಕ್ಕಿದೆ ಎಂದು ಒಪ್ಪಿದಂತಾಗುತ್ತದೆ. ಹಾಗಿಲ್ಲದೆ, ಆ ಮಾತನ್ನು ಕೇಳಿಯೂ ಸುಮ್ಮನಿದ್ದರೆ, ಇಲ್ಲವೇ ಪ್ರತಿಭಟಿಸಿದರೆ, ಅದಕ್ಕೆ ಗಂಡಸರು ಮರಳಿ ಬೈಗುಳಗಳ ಸುರಿಮಳೆಯನ್ನೇ ಸುರಿಸಬಹುದು. ಗಯ್ಯಾಳಿ ಎನ್ನಬಹುದು. ಇದಲ್ಲದೆ ಗಂಡಸರ ಬಗ್ಗೆ ಇಂಥ ಬೀದಿ ಮಾತನ್ನಾಡುವ ಹಕ್ಕು ಹೆಂಗಸಿಗೆ ಇಲ್ಲವೆಂಬುದನ್ನು ಮರೆಯಬಾರದು.

ಬೀದಿ ಮಾತುಗಳ ಮುಖ್ಯ ಪರಿಣಾಮವೆಂದರೆ, ಅವು ಸಾರ್ವಜನಿಕ ಸ್ಥಳವನ್ನು ನಿಯಂತ್ರಿಸುವ ಹಕ್ಕನ್ನು ಗಂಡಸರಿಗೆ ನೀಡುತ್ತದೆ. ಅದರೊಳಗೆ ಬರುವ ಹೆಂಗಸರನ್ನು ತಮ್ಮದಲ್ಲದ ಸ್ಥಳಕ್ಕೆ ಬಂದವರೆಂದು ಪರಿಗಣಿಸುವಂತೆ ಗಂಡಸರನ್ನು ಪ್ರೇರೇಪಿಸುತ್ತದೆ. ಈ ಬೀದಿ ಮಾತುಗಳನ್ನು ‘ಹೊಗಳಿಕೆ’ ಎಂದು ತಿಳಿಯುವ ಹೆಂಗಸರನ್ನೂ ಒಳಗೊಂಡಂತೆ ಎಲ್ಲ ಹೆಂಗಸರಿಗೂ ತಮ್ಮನ್ನು ಗಂಡಸರು ಯಾವಾಗಲೂ ಗಮನಿಸುತ್ತಿರುತ್ತಾರೆ ಮತ್ತು ತಮ್ಮ ಬಗ್ಗೆ ಏನೋ ಅಂದುಕೊಳ್ಳುತ್ತಿರುತ್ತಾರೆ ಎನ್ನುವುದು ಗೊತ್ತು. ಹೀಗಾಗಿ ಅವರು ಹೊರಗೆ ಬಂದ ಕೂಡಲೇ ತಮ್ಮ ಬಗ್ಗೆ ತಾವೇ ಯೋಚಿಸುವಂತಾಗುತ್ತದೆ. ಇದು ಕೆಲವೊಮ್ಮೆ ಭಯವಾಗಿಯೂ ಬೆಳೆಯಬಹುದು. ಏಕೆಂದರೆ, ಕೆಲವು ಬೀದಿ ಮಾತುಗಳು ಕೇವಲ ತೋರಿಕೆಯ ಹೊಗಳಿಕೆಗಳಾಗಿರದೆ, ಸ್ಪಷ್ಟವಾಗಿ ದಾಳಿಯ ಸೂಚನೆಗಳನ್ನು ನೀಡುತ್ತದೆ. ಗಂಡಸರಿಗೆ ಇಂಥ ಅಪಾಯಗಳು ಕಾಯ್ದಿರುವುದಿಲ್ಲ.

ಗಂಡಸರಿಗಿಂತ ಹೆಂಗಸರನ್ನು ಹೀನಾಯಗೊಳಿಸುವ ಪದಗಳು ಹೆಚ್ಚಾಗಿವೆ ಎಂದು ಹಲವರು ಗುರುತಿಸಿದ್ದಾರೆ. ಇಂಥ ಪದಗಳಲ್ಲಿ ಲೈಂಗಿಕ ನೆಲೆಯು ಅಂತರ್ಗತವಾಗಿರುತ್ತದೆ. ಗಂಡಸರ ದೇಹದ ಭಾಗಗಳನ್ನು ಹೇಳುವ ಪದಗಳಿಗಿಂತ ಹೆಂಗಸರ ದೇಹದ ಭಾಗಗಳನ್ನು ಹೇಳುವ ಪದಗಳಿಗೆ ನಿಷೇಧ ಹೆಚ್ಚಿದೆ. ಈ ಬಗೆಯ ಪದಗಳು ಹೆಂಗಸನ್ನು ಲೈಂಗಿಕ ಬಲಿಪಶು ಎಂದು ಗುರುತಿಸುತ್ತದೆ. ಇವುಗಳಿಗೆ ಸಂವಾದಿಯಾಗಿರುವ ಪುಲ್ಲಿಂಗ ಪದಗಳೇ ಇಲ್ಲ. ಉದಾಹರಣೆಗೆ, ass, tail, crumpet, nympho, ballbreaku ಮತ್ತು pricktease. ಗಂಡಸರನ್ನು ಬೈಯಲು ಬಳಸುವ ಕೆಲವು ಪದಗಳಿವೆ. ಆದರೆ, ಅವೆಲ್ಲ ಸಲಿಂಗ ಕಾಮವನ್ನು ಸೂಚಿಸುತ್ತವೆ. ಉದಾಗೆ, arsehole, bugger, – ಈ ಪದಗಳು ಸಲಿಂಗ ಕಾಮದ ಬಗೆಗೆ ಇರುವ ಭಯವನ್ನು ಸೂಚಿಸುವ ಜೊತೆಗೆ ಲೈಂಗಿಕ ನೆಲೆಯನ್ನೂ ಹೊಂದಿವೆ. ಏಕೆಂದರೆ, ಸಲಿಂಗಕಾಮಿ ಪುರುಷರನ್ನು ಹೆಂಗಸರ ಚೌಕಟ್ಟಿನಲ್ಲಿರಿಸಿ ಅವರನ್ನು ‘ಹೆಣ್ಣಿಗ’ ರೆಂದು ಗುರುತಿಸುವುದು ವಾಡಿಕೆಯಾಗಿದೆ.

ಈ ಭಾಷಿಕ ವ್ಯವಹಾರವು ಇನ್ನೂ ಹೆಚ್ಚು ವ್ಯಾಪಕತೆಯನ್ನು ಪಡೆದಂತಿದೆ. ಅದರಲ್ಲೂ ಲೈಂಗಿಕತೆಯನ್ನು ಕುರಿತು ಇರುವ ಇಬ್ಬಂದಿ ಧೋರಣೆಗಳನ್ನು ಇದು ಪ್ರತಿನಿಧಿಸುತ್ತದೆ. ಹೆಂಗಸರಿಗೆ ಲೈಂಗಿಕ ಆಸಕ್ತಿಗಳು ಇರಬಾರದು; ಆದರೆ ಗಂಡಸರನ್ನು ತೃಪ್ತಿ ಪಡಿಸುವುದು ಎಂದಿಗೂ ಸಾಧ್ಯವಿಲ್ಲ. ಈ ಎರಡೂ ಧೋರಣೆಗಳೂ ಒಟ್ಟೊಟ್ಟಿಗೇ ವ್ಯಾಪಕವಾಗಿ ಪ್ರಕಟಗೊಳ್ಳುತ್ತವೆ.  ಒಂದು ವೇಳೆ, ಹೆಂಗಸು ತನ್ನ ಬಯಕೆಯನ್ನು ವ್ಯಕ್ತಪಡಿಸಲು ಗೆರೆದಾಟಿ ಹೋದರೆ, ಇಲ್ಲವೇ ಗಂಡಸಿನ ಬಯಕೆಯನ್ನು ತೀರಿಸಲು ನಿರಾಕರಿಸಿದರೆ, ಆಕೆಗೆ ವಾಗ್ದಂಡನೆಯ ಶಿಕ್ಷೆ ಕಾಯ್ದಿರುತ್ತದೆ. ಇದಲ್ಲದೆ, ಹೆಂಗಸರಷ್ಟು ಖಳರೆಂದು ಗುರುತಿಸಲಾದ ಇನ್ನೊಂದು ವರ್ಗ ಇರಲಾರದು. ಈ ಮಾತು ವೇಶ್ಯೆಯರನ್ನು ಕುರಿತ ಸಂಕಥನದಲ್ಲಿ ಎದ್ದು ಕಾಣುತ್ತದೆ. ಇವರು ಗಂಡಸರ ಬಯಕೆಗಳನ್ನು ತೀರಿಸಲೆಂದೇ ಇರುವವರಾದರೂ, ಖಳರ ಪಟ್ಟದಿಂದ ಇವರಿಗೆ ಬಿಡುಗಡೆ ಇಲ್ಲ. ಆಕ್ಸ್‌ಫರ್ಡ್ ಇಂಗ್ಲಿಶ್ ಡಿಕ್ಷ್‌ನರಿಯಲ್ಲಿ ಸೋಸಿ ನೋಡಿದ ಜೂಲಿಯಾ ಸ್ಟ್ಯಾನ್ಲಿಗೆ ಹೆಂಗಸರನ್ನು ವೇಶ್ಯೆಯರೆಂದು ಗುರಿತಿಸುವ ೨೨೦ ಪದಗಳು ದೊರಕಿವೆ. ಅಂದರೆ, ಇಂಗ್ಲಿಶ್ ಭಾಷಿಕರಿಗೆ ಹೆಣ್ಣು ಪದವರ್ಗದಲ್ಲಿ ವೇಶ್ಯೆ ಎಂಬುದು ಸೇರ್ಪಡೆಯಾಗಿ ಬಿಟ್ಟಿದೆ. ಗಂಡಸರು ಈ ವೃತ್ತಿಯಲ್ಲಿ ಇದ್ದಾಗಲೂ ಅವರಿಗೆ ಬಳಸಲಾಗುವ ಪದಗಳಲ್ಲಿ ಇಷ್ಟೊಂದು ಶ್ರೀಮಂತಿಕೆ ಇಲ್ಲ. ಅಲ್ಲದೆ, ಗಂಡು ಪದವರ್ಗದ ವ್ಯಾಪ್ತಿಗೆ ವೇಶ್ಯೆ ಸೇರುವುದಿಲ್ಲ.