ಈ ವೈರುಧ್ಯಗಳು ಇದ್ದರೂ ಲೈಂಗಿಕ ಸಿದ್ಧಮಾದರಿಗಳನ್ನು ನಿರಂತರವಾಗಿ ಪೋಷಿಸಿಕೊಂಡು ಬರಲು ಯಾವ ಅಡ್ಡಿಯೂ ಇಲ್ಲವಾಗಿದೆ. ಅತಿಲೈಂಗಿಕ ಬಯಕೆಯುಳ್ಳ ಹೆಂಗಸಿಗೂ ಒಂದು ಬೈಗುಳ ಪದವಿದೆ. (slag). ಹಾಗೆಯೇ ಲೈಂಗಿಕ ಬಯಕೆ ತುಂಬಾ ಕಡಿಮೆ ಇರುವ ಹೆಂಗಸಿಗೂ ಬೈಗುಳ ಪದವಿದೆ (prick tease). ಹೆಂಗಸರ ವರ್ತನೆಗಳು ಲೈಂಗಿಕ ನೆಲೆಯಲ್ಲಿ ಕೆಲವೊಮ್ಮೆ ಆಪ್ಯಾಯಮಾನವಾಗಿ ಕಂಡರೆ, ಅವೇ ವರ್ತನೆಗಳು ಮತ್ತೆ ಕೆಲವೊಮ್ಮೆ ತೀವ್ರ ಟೀಕೆಗೆ ಗುರಿಯಾಗುತ್ತವೆ. ಗಂಡಸರಿಗೆ ಇವೆಲ್ಲವೂ ಕಾಡುವ ಸಮಸ್ಯೆಗಳೇ ಅಲ್ಲ. ಉದಾಹರಣೆಗೆ, ಅತಿಲೈಂಗಿಕ ಪ್ರವೃತ್ತಿಯ ಗಂಡಸನ್ನು ಸೂಚಿಸುವ ಪದ ಹೊಗಳಿಕೆಯ ಪದವೇ ಆಗಿದೆ (stud)

ಇಂಗ್ಲಿಶ್ ಭಾಷೆಯ ಇತಿಹಾಸದಲ್ಲಿ ಇರುವ ಒಂದು ವ್ಯವಸ್ಥಿತ ಪ್ರಕ್ರಿಯೆಯನ್ನು ಶುಲ್ಜ್ ಗುರುತಿಸಿದ್ದಾಳೆ. ಅದನ್ನು ಆಕೆ ‘ಹೆಂಗಸರನ್ನು ಮಾತ್ರವೇ ಅರ್ಥನೆಲೆಯಲ್ಲಿ ಕೀಳುಗೈಯುವುದು’ ಎಂದು ಕರೆದಿದ್ದಾಳೆ. ಮೊದಮೊದಲು ಲಿಂಗಭೇದವಿಲ್ಲದೆ (ಗಂಡು ಹೆಣ್ಣು ಇಬ್ಬರಿಗೂ ಬಳಕೆಯಾಗುತ್ತಿದ್ದ) ಪದಗಳು ಕಾಲ ಕಳೆದಂತೆ ಹೆಂಗಸರನ್ನು ಹೀನಾಯ ಮಾಡಲು ಬಳಸುವ ಪದಗಳಾಗಿ ಮಾರ್ಪಟ್ಟಿವೆ ಎಂದು ಶುಲ್ಜ್ ಹೇಳುತ್ತಾಳೆ.  (harlot ಎಂಬ ಪದ ಒಂದು ಕಾಲದಲ್ಲಿ ಎಳೆ ವಯಸ್ಸಿನ ವ್ಯಕ್ತಿ ಎಂಬ ಅರ್ಥವನ್ನು ಹೊಂದಿತ್ತು) ಹಾಗೆಯೇ ಮುಚ್ಚಟೆ ಪದಗಳೂ ಕೂಡ ಅರ್ಥ ಬದಲಿಸಿಕೊಂಡಿವೆ. (tart ಎಂಬ ಪದಕ್ಕೆ ಅಮಾಯಕ ಎಂಬ ಅರ್ಥವಿತ್ತು. ಹಾಗೆಯೇ honey, sweetie ಎಂಬ ಪದಗಳಿಗೂ ಹೀಗೆಯೇ ಅರ್ಥಗಳಿದ್ದವು) ಆದರೆ ಯಾವಾಗ ಪದಗಳು ಹೆಂಗಸರಿಗೆ ಅನ್ವಯವಾಗ ತೊಡಗುತ್ತವೋ ಆಗ ಅವು ನಕಾರಾತ್ಮಕ ನೆಲೆಗೆ, ಕೆಲವೊಮ್ಮೆ ಲೈಂಗಿಕ ನೆಲೆಗೆ ದಾಟುತ್ತವೆ. ಮೊದಲು ಗಂಡಸಿಗೆ ಬಳಸುತ್ತಿದ್ದ ಪದ ಮತ್ತು ಹೆಂಗಸಿಗೆ ಬಳಸುತ್ತಿದ್ದ ಪದಗಳು ಸಮಾನತೆಯ ನೆಲೆಯಲ್ಲಿದ್ದವು. ಉದಾಗೆ, bachelor ಮತ್ತು spinster, courtier ಮತ್ತು  courtisan.  ಆದರೆ ಕಾಲ ಕಳೆದಂತೆ ಈಗ ಆ ಪದಗಳ ನಡುವೆ ಸಮಾನತೆಯ ನೆಲೆ ಇಲ್ಲ. ಹೆಂಗಸನ್ನು ಕುರಿತ ಪದಗಳು ಕೆಳದರ್ಜೆಗೆ ಇಳಿದಿವೆ. ಗಂಡಸನ್ನು ಕುರಿತ ಪದಗಳಿಗೆ ಹೀನಾರ್ಥದ ಸೋಂಕು ತಗುಲಿಲ್ಲ. Governer/ governess, master / mistress ಎಂಬ ಪದ ಜೋಡಿಗಳಿಗೂ ಇದೇ ಮಾತು ಅನ್ವಯಿಸುತ್ತದೆ. tramp ಎಂಬ ಪದವನ್ನು ನೋಡಿ. ಮೊದಲು ಹೆಣ್ಣು ಗಂಡುಗಳಿಬ್ಬರಿಗೂ ಸಮಾನವಾಗಿ ಬಳಕೆಯಾಗುತ್ತಿದ್ದ ಪದ. ಈಗಲೂ ಹಾಗೆಯೇ ಬಳಕೆಯಾದರೂ ಗಂಡಸು tramp ಆದರೆ ಆತ ಕೇವಲ ನಿರ್ವಸಿತ ಮಾತ್ರ. ಹೆಂಗಸು tramp ಎನಿಸಿದರೆ ಅವಳು ಸಡಿಲ ಚಾರಿತ್ರ್ಯವುಳ್ಳವಳಾಗುತ್ತಾಳೆ.

ಶುಲ್ಜ್ ತಾನು ಗುರುತಿಸಿದ ಈ ಪ್ರಕ್ರಿಯೆಗೆ, ಹಲವು ಕಾರಣಗಳನ್ನು ಹುಡುಕಿದ್ದಾಳೆ. ಆಕೆ ಹೇಳುವಂತೆ ಹೆಂಗಸರ ಬಗ್ಗೆ ಗಂಡಸರಿಗೆ ಇರುವ ಪೂರ್ವಾಗ್ರಹಗಳೇ ಇದಕ್ಕೆ ಕಾರಣ. ಹೆಂಗಸರ ‘ನೈಸರ್ಗಿಕ’ ಶಕ್ತಿ ಇಲ್ಲವೇ ಜೈವಿಕ ನೆಲೆಯ ಶ್ರೇಷ್ಠತೆಯನ್ನು ಗಂಡಸರು ಸದಾ ಭಯಗ್ರಸ್ತರಾಗಿ ನೋಡಿದ್ದಾರೆ. ನನ್ನನ್ನೂ ಒಳಗೊಂಡಂತೆ ಹಲವು ಸ್ತ್ರೀವಾದಿಗಳಿಗೆ ಗಂಡಸರು ಹೆಂಗಸರ ಜೈವಿಕ ಶ್ರೇಷ್ಠತೆಯ ಬಗ್ಗೆ ಭಯಗ್ರಸ್ತರಾಗಿದ್ದಾರೆ ಎಂಬ ವಿವರಣೆ ವಿಚಿತ್ರವಾಗಿ ತೋರುತ್ತದೆ. (ನಿಜ. ತುಂಬಾ ಅಧಿಕಾರ ಚಲಾಯಿಸುವ ಜನರು ತಮ್ಮ ಅಧೀನರ ಬಗ್ಗೆ ಭಯಗ್ರಸ್ತರೇ ಆಗಿರುತ್ತಾರೆ. ಅತಿಯಾಗಿ ಒತ್ತಡಕ್ಕೊಳಗಾದ ಅಧೀನರು ಎಂದಾದರೂ ಸಿಡಿದರೆ ಅದನ್ನು ತಡೆದುಕೊಳ್ಳಬೇಕಲ್ಲ ಎಂಬ ಆತಂಕದಿಂದ ಈ ಭಯ ಹುಟ್ಟುತ್ತದೆ). ಹೀಗೆ ವಿವರಿಸುವ  ಬದಲು ಹೆಚ್ಚು ಸರಳವಾದ ನೆಲೆಯನ್ನು ಆಶ್ರಯಿಸುವುದು ಸೂಕ್ತ. ಗಂಡಸರು ನಮ್ಮನ್ನು (ಹೆಂಗಸರನ್ನು) ಕೆಳಸ್ತರದವರೆಂದು ಪರಿಗಣಿಸುತ್ತಾರೆ. ನಮ್ಮನ್ನು ನಮ್ಮ ಲೈಂಗಿಕ ಚಹರೆಗಳ ಮೂಲಕವೇ ವಾಖ್ಯಾನಿಸುತ್ತಾರೆ. ಈ ವಾಸ್ತವವೇ ನಮ್ಮನ್ನು ಹೀನಾಯಗೊಳಿಸಿರುವ ಪ್ರಕ್ರಿಯೆಯಲ್ಲಿ ಬಿಂಬಿತವಾಗಿದೆ.

ಆದರೂ, ಚಿಕ್ಕ ಬೈಗುಳಗಳಿಂದ ಹಿಡಿದು ದೊಡ್ಡ ದಾಳಿರೂಪದ ಮಾತುಗಳನ್ನು ಸ್ತ್ರೀವಾದಿಗಳು ವಿಶ್ಲೇಷಿಸುವ ಪ್ರಕ್ರಿಯೆ ಇಲ್ಲಿಗೇ ನಿಂತರೆ ಸಾಲದು. ಇನ್ನೂ ಕೊರತೆ ಉಳಿದು ಬಿಡುತ್ತದೆ. ನಾವು ಪರಿಶೀಲಿಸುತ್ತಿರುವ ಭಾಷಿಕ ನಡವಳಿಕೆಗಳಿಗೆ ಹೆಂಗಸರ ಕೀಳ್ಮೆ ಮತ್ತು ಲೈಂಗಿಕ ಚಹರೆಗಳ ಬಗ್ಗೆ ಇರುವ ಸಾಂಸ್ಕೃತಿಕ ನಂಬಿಕೆಗಳನ್ನು ಬಿಂಬಿಸುವ ಕೆಲಸಕ್ಕಿಂತ ಹೆಚ್ಚಿನ ವ್ಯಾಪಕತೆ ಇದೆ. ಮಿಲ್ಲರ್ ಮತ್ತು ಸ್ವಿಫ್ಟ್ ಮಂಡಿಸಿದ ಮಾದರಿಯ ವ್ಯಾಖ್ಯಾನಕ್ಕಷ್ಟೇ ಈ ನಡವಳಿಕೆಗಳನ್ನು ಮಿತಿಗೊಳಿಸಲು ಆಗುವುದಿಲ್ಲ. ಅಂದರೆ, ಅವು ವಾಸ್ತವವನ್ನು ವಿಕೃತಗೊಳಿಸಿ ಮಂಡಿಸುತ್ತವೆ ಎಂದು ಹೇಳಿದರೆ ಸಾಲದು. ಏಕೆಂದರೆ ಈ ಭಾಷಿಕ ನಡವಳಿಕೆಗಳು ತಮ್ಮದೇ ಆದ ವಾಸ್ತವವೊಂದನ್ನು ಕಟ್ಟಲು ಸಮರ್ಥವಾಗಿವೆ. ಇವು ಒಂದು ಬಗೆಯಲ್ಲಿ ಸಾಮಾಜಿಕ ನಿಯಂತ್ರಣ ಮತ್ತು ವ್ಯಾಖ್ಯಾನಗಳ ಮಾದರಿಗಳಾಗಿವೆ. ಇದನ್ನೀಗ ನಾನು ವಿವರಿಸಲಿದ್ದೇನೆ.

ಸಾಮಾಜಿಕ ನಿಯಂತ್ರಣಕ್ಕಾಗಿ ಬೈಗುಳುಗಳು

ಎಳೆ ಹರೆಯದ ಹೆಂಗಸರು slag, slut ಮುಂತಾದ ಪದಗಳನ್ನು ಕೇಳಿಸಿಕೊಂಡಾಗ ಹೇಗೆ ಗಮನ ನೀಡುತ್ತಾರೆ ಎಂಬುದನ್ನು ಸಮಾಜಶಾಸ್ತ್ರಜ್ಞೆ ಸೂ ಲಿವ್ ಅಧ್ಯಯನ ಮಾಡಿದ್ದಾಳೆ. ಗಂಡಸರಾಗಲೀ, ಹೆಂಗಸರು ತಂತಮ್ಮಲ್ಲೇ ಆಗಲಿ ಆ ಪದಗಳನ್ನು ತಮ್ಮ ಬಗ್ಗೆ ಬಳಸುವುದನ್ನು ನೆನೆದು ಈ ವಯೋಮಾನದ ಹೆಂಗಸರು ಭಯಪಡುತ್ತಾರೆ. ತಮ್ಮ ವರ್ತನೆಗಳನ್ನು, ಲೈಂಗಿಕ ನಡಾವಳಿಗಳನ್ನು, ತಿದ್ದಿಕೊಂಡು ಯಾರೂ ತಮ್ಮ ಬಗ್ಗೆ ಈ ಪದಗಳನ್ನು ಬಳಸದಂತೆ ನೋಡಿಕೊಳ್ಳುತ್ತಾರೆ. ಹೆಂಗಸಿನ ಗೌರವಕ್ಕೆ ಧಕ್ಕೆ ತರುವ ಲೈಂಗಿಕ ನೆಲೆಯ ಬೈಗುಳ ಪದಗಳು ಎಷ್ಟಿವೆ ಎಂದರೆ, ಅವುಗಳನ್ನು ಬಳಸಿ ಹೆಂಗಸರನ್ನು ಹದ್ದುಬಸ್ತಿನಲ್ಲಿಡುವುದು ಸಾಧ್ಯವೆಂದು  ಭಾವಿಸಲಾಗಿದೆ. ಆದರೆ, ಗಂಡಸರ ವಿರುದ್ಧ ಬಳಸಲು ಹೆಂಗಸರಿಗೆ ಇಂಥ ಶಸ್ತ್ರಾಸ್ತ್ರಗಳು ಇಲ್ಲವೇ ಇಲ್ಲ. ಒಂದು ವೇಳೆ ಒಬ್ಬ ಗಂಡಸು ಕಂಡ ಕಂಡ ಹೆಂಗಸರೊಡನೆ ಚೆಲ್ಲಾಟವಾಡುತ್ತಿದ್ದಾನೆ ಎಂದುಕೊಳ್ಳಿ. ತನ್ನ ನಡವಳಿಕೆಯ ಬಗ್ಗೆ ಅವನಿಗೆ ಗೊತ್ತಿದೆ ಎಂದೂ ಭಾವಿಸೋಣ. ಇಂಥವನನ್ನು ಟೀಕಿಸಲು ಹೆಂಗಸು ಯಾವ ಬೈಗುಳ ಬಳಸಬಹುದು?

ಹೆಂಗಸರನ್ನು ದೈಹಿಕವಾಗಿ ಮತ್ತು ಲೈಂಗಿಕವಾಗಿ ಹಿಂಸೆಗೆ ಗುರಿಪಡಿಸಿದ ಸಂದರ್ಭಗಳಲ್ಲೆಲ್ಲ ಗಂಡಸು. ಶಾಬ್ದಿಕ ನೆಲೆಯಲ್ಲಿ ಬೈಗುಳಗಳ ಮೂಲಕವೂ ಆ ಹೆಂಗಸನ್ನು ಹಿಂಸಿಸುವುದನ್ನು ಗಮನಿಸಬಹುದು. ಅಂತಹ ಶಾಬ್ದಿಕ ಹಿಂಸೆ ಇಲ್ಲದ ಪ್ರಸಂಗಗಳೇ ವಿರಳ. ಅತ್ಯಾಚಾರ ಮಾಡುವ,  ಇಲ್ಲವೇ ಬಡಿಯುವ ಗಂಡಸಿನ ದೈಹಿಕ ಕ್ರಿಯೆಗಳಷ್ಟೇ ಅವನು ಬಳಸುವ ಪದಗಳೂ ಕೂಡಾ ಭಯ ಹುಟ್ಟಿಸುವಂತೆ, ಹೀನಾಯಗೊಳಿಸುವಂತೆ ಇರುತ್ತವೆ. ಕೆರಳಿದ ಗಂಡಸರು ಭಾಷಿಕ  ಸಂಪನ್ಮೂಲಗಳನ್ನು ಬಳಸಿ ಸಂದರ್ಭಗಳನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುತ್ತಾರೆ. ಬೈಗುಳಗಳನ್ನು ಬಳಸಿ ಹೆದರಿಸಬಹುದು, ತಾವು ಇದುವರೆಗೂ ಮಾಡಿದ ದೈಹಿಕ ಹಿಂಸೆ ಮತ್ತು ಲೈಂಗಿಕ ಕ್ರಿಯೆಗಳು ಪರಸ್ಪರರ ಸಮ್ಮತಿಯೊಡನೆ ನಡೆದವು ಎಂದು ಸೂಚಿಸಲು ಮುಚ್ಚಟೆ ಪದಗಳನ್ನು ಬಳಸಬಹುದು. ತಮ್ಮ ವರ್ತನೆಗಳು ಅತ್ಯಾಚಾರವೂ ಅಲ್ಲ. ದಾಳಿಯೂ ಅಲ್ಲ, ಹೊಡೆತವೂ ಅಲ್ಲ, ಅದು ಪ್ರೀತಿಜನ್ಯವಾದುದು ಎಂದು ಬಿಂಬಿಸಲು ಇಂಥ ಪದಗಳನ್ನು ಬಳಸುತ್ತಾರೆ.

ಲೈಂಗಿಕತೆ ಮತ್ತು ಅತ್ಯಾಚಾರಗಳ ಬಗೆಗೆ ಇರುವ ಮಿಥ್ಯಾಕಲ್ಪನೆಗಳನ್ನು ಈಗ ಲಭ್ಯವಿರುವ ಪದಗಳು ಸೂಕ್ತವಾಗಿ ಬಿಂಬಿಸುತ್ತವೆ. ಅದರಲ್ಲಿ ಅಮೂರ್ತವಾದುದು ಏನೂ ಇಲ್ಲ. ಹಾಗೆ ನೋಡಿದರೆ ಭಾಷೆ ಎಂಬುದೇ ಒಂದು ಹಿಂಸಾಚಾರ. ಅವವೇ ಸಾಂಸ್ಕೃತಿಕ ನಂಬಿಕೆಗಳನ್ನು ಭಾಷೆ ಮರಳಿ ಮರಳಿ ಕಟ್ಟುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಶಾಬ್ದಿಕ ದಾಳಿಯೇ ‘ಮುಖ್ಯ ಘಟನೆ’ಯಾಗಿರುತ್ತದೆ. Cock, fist ಎಂಬ ಪದಗಳಿಗಿಂತ Cunt, slag  ಎಂಬಂಥ ಪದಗಳು ಹೆಚ್ಚು ಸಾರಿ ಬಳಕೆಯಾಗುತ್ತವೆ. ಮರಳಿ ತನ್ನ ಪ್ರತಿರೋಧ ತೋರಿಸಲು ಹೆಂಗಸಿಗೆ ಅಂಥವೇ ಪದಗಳು ಇಲ್ಲವಾಗಿವೆ. ನಿಜ ಜೀವನದಲ್ಲಿ ಇದು ಮುಖ್ಯವಾಗುತ್ತದೆ. ಏಕೆಂದರೆ ಪದಗಳಿಂದ ನಿಮಗೆ ನೋವುಂಟು ಮಾಡಲು ಸಾಧ್ಯವಿಲ್ಲವೆಂಬ ಜನಪ್ರಿಯ ನಂಬಿಕೆಯನ್ನು ಗಂಡಸರ ಹಿಂಸೆಗೆ ಒಳಗಾಗಿ ಬಂದ ಹೆಂಗಸರು ಒಪ್ಪುವುದಿಲ್ಲ.

ಈ ಸಮಸ್ಯೆಗಳನ್ನು ಕುರಿತು ಚರ್ಚಿಸುವಾಗ ಶಾಬ್ದಿಕ ಹಿಂಸೆಯನ್ನು ನಿಭಾಯಿಸುವ ಬಗೆ ಹೇಗೆಂದು ಸ್ತ್ರೀವಾದಿಗಳು ತಲೆ ಚಚ್ಚಿಕೊಂಡಿದ್ದಾರೆ. ಈಗಿರುವ ಪದಗಳ ನಕಾರಾತ್ಮಕ ಅರ್ಥಕ್ಕೆ ಬದಲಾಗಿ ಅವುಗಳಿಗೆ ಹೆಚ್ಚು ಸಕಾರಾತ್ಮಕ ಅರ್ಥವನ್ನು ತುಂಬುವ ಮೂಲಕ ಆ ಪದಗಳನ್ನು ‘ಮರುಗಳಿಕೆ’ ಮಾಡಬೇಕೆಂಬ ಒಂದು ಸಲಹೆಯನ್ನು ನೀಡಲಾಗಿದೆ. ಲೆಸ್ಬಿಯನ್‌ರಿಗೆ ಬಳಸುವ dyke ಎಂಬ ಪದದ ಬದಲು spinster ಪದವನ್ನು ಬಳಸುವ ಮೂಲಕ ಮೇಲೆ ಹೇಳಿದ ಪರಿಹಾರವನ್ನು ಜಾರಿಗೆ ತರಲಾಗಿದೆ. ಈ ಪದವೂ ಹೀನಾರ್ಥವನ್ನು ಹೊಂದಿದೆಯಾದರೂ, ಮೊದಲು ಬಳಸುತ್ತಿದ್ದ ಪದದಷ್ಟು ಧೃತಿಗೆಡಿಸುವುದಿಲ್ಲ. ಮೇರಿ ಡೇಲಿ ಈ ಪದದ ಆಯ್ಕೆಯನ್ನು ಸಮರ್ಥಿಸುತ್ತಾ ಪಿತೃಪ್ರಧಾನ ಸಮಾಜದ ಕಟ್ಟುಪಾಡುಗಳನ್ನು ಒಪ್ಪಿಕೊಳ್ಳದ ಈ ಹೆಂಗಸರು ತಮ್ಮದೇ ಆದ ವಾಸ್ತವವನ್ನು ನೇಯ್ದುಕೊಳ್ಳುತ್ತಾರೆ(spin) ಎನ್ನುತ್ತಾಳೆ. ಈಚೆಗೆ ಲೈಂಗಿಕತೆಯನ್ನು ಕುರಿತ ಕತೆಗಳ ಸಂಕಲನವೊಂದು ಪ್ರಕಟಗೊಂಡಿದೆ. ಅದರ ಹೆಸರು Macho sluts. ಹೀಗೆ ಹೆಸರಿಡುವ ಮೂಲಕ slut ಎಂಬ ಪದವನ್ನು ಮರುಗಳಿಕೆ ಮಾಡುವ ಉದ್ದೇಶವನ್ನು ಪ್ರಕಟಿಸಲಾಗಿದೆ. (ಈ ಪದ ಸೂಚಿಸುವ ಅನಿರ್ಬಂಧಿತ ಲೈಂಗಿಕತೆಯ ನೆಲೆಯನ್ನು ಈ ಶೀರ್ಷಿಕೆ ನಿರಾಕರಿಸಿಲ್ಲ) ಕೆಲವು ಹೆಂಗಸರು cunt ಪದವನ್ನು ಮರುಗಳಿಕೆ ಮಾಡಲು ಈ ಪದಕ್ಕೂ cunning (ತಿಳಿವು, ಮಾಂತ್ರಿಕ ಶಕ್ತಿ) ಪದಕ್ಕೂ ಸಂಬಂಧವಿದೆ ಎಂದು ಸೂಚಿಸಿದ್ದಾರೆ. ಅಥವಾ ದೇಹದ ಹೆಣ್ಣುಭಾಗ ಮತ್ತು ಅತ್ಯಂತ ಶಕ್ತಿಯುತವಾದ ಅಂಗವನ್ನು ಅದು ಹೇಳುತ್ತಿದೆ ಎಂದೂ ವಾದಿಸಿದ್ದಾರೆ.

ಇಲ್ಲಿ ಎರಡು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಒಂದು, ಆಶಯಕ್ಕೆ ಸಂಬಂಧಿಸಿದ್ದು. ಸ್ತ್ರೀವಾದಿಗಳು ತಮ್ಮ ಲೈಂಗಿಕ ಆಯ್ಕೆಗಳಲ್ಲಿರುವ ವೈವಿಧ್ಯಗಳನ್ನು (ಲೆಸ್ಬಿಯಾನಿಸಂ, ಇಲ್ಲವೇ spinsterhood) ವೈಭವೀಕರಿಸಲಿ. ಆದರೆ, ನಮ್ಮನ್ನು ನಾವು ದೇಹದ ಅಂಗದ ಮಟ್ಟಕ್ಕೆ ಇಳಿಸಿಕೊಳ್ಳುವುದು ಸರಿಯಲ್ಲವೇನೋ. (ನನ್ನನ್ನು ನಾನು cunt ಎಂದಾಗಲೀ,

slut ರ ಎಂದಾಗಲೀ ಕರೆದುಕೊಳ್ಳಲು ನನಗೆ ಇಷ್ಟವಾಗುವುದಿಲ್ಲ. ‘ಅನೈತಿಕ’ ಹೆಂಗಸಿಗೆ ಭಾಷಿಕವಾಗಿ ಇರುವ ಪದಗಳ ಅಗತ್ಯವನ್ನು ನಾನು ಪ್ರಶ್ನಿಸಲು ಸಿದ್ಧಳಿದ್ದೇನೆಯೇ ಹೊರತು, ಆ ಪದಗಳನ್ನೇ  ಅಪ್ಪಿ ಮುದ್ದಾಡಲಾರೆ).

ಎರಡನೆಯ ಸಮಸ್ಯೆ, ಉದ್ದೇಶಕ್ಕೆ ಸಂಬಂಧಿಸಿದೆ. ಒಂದು ಪದದ ಅರ್ಥ ಅದನ್ನು ಬಳಸಿದ ಸಂದರ್ಭಕ್ಕನುಗುಣವಾಗಿ ಬದಲಾಗುತ್ತದೆ. ಬಳಸಿದವರು ಹಾಗೆ ಬಳಸುವಾಗ ಯಾವ ಅರ್ಥವನ್ನು ಇಟ್ಟುಕೊಂಡಿದ್ದಾರೋ ಅದನ್ನು ಕೇಳಿಸಿಕೊಂಡವರು ಅರಿತುಕೊಳ್ಳುವ ಬಗೆಯನ್ನು ಅವಲಂಬಿಸಿರುತ್ತದೆ. ನನ್ನನ್ನು ಒಬ್ಬ ಗಂಡಸು dyke ಎನ್ನುತ್ತಾನೆ ಎಂದರೆ, ಆತ  ನನ್ನ ಬಗ್ಗೆ ತಿರಸ್ಕಾರ ಹೊಂದಿರುತ್ತಾನೆಂದು ಅರ್ಥವೇ ಹೊರತು ನನ್ನ ಬಗ್ಗೆ ಸ್ನೇಹಭಾವ ಪ್ರಕಟಿಸುತ್ತಿದ್ದಾನೆಂದು ಅರ್ಥವಲ್ಲ. (ಇದೇ ಬಗೆಯಲ್ಲಿ NWA – Niggas with attitude ಎಂಬ ಪದವನ್ನು ಬಿಳಿಯ ಜನರು ಕಪ್ಪು ಜನರಿಗೆ ಬಳಸಿದರೆ, ಆ ಕಪ್ಪು ಜನರು ಅದನ್ನು ತಿರಸ್ಕಾರ ಸೂಚಕವೆಂದೇ ತಿಳಿದು ಪ್ರತಿಭಟಿಸುತ್ತಾರೆ. ಕಪ್ಪು ಸಮುದಾಯಗಳಲ್ಲಿ ಈ ಪದವನ್ನು ನಿರಾಕರಿಸಬೇಕೋ, ಮರುಗಳಿಕೆ ಮಾಡಬೇಕೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.) ನಾವು ಒಂದು ಪದದ ಅರ್ಥವನ್ನು ಸಮುದಾಯ ಹೇಗೆ ಗ್ರಹಿಸುತ್ತದೆಯೋ ಅದೆಲ್ಲವನ್ನೂ ಸುಮ್ಮನೆ ಒಂದು ಹೇಳಿಕೆ ನೀಡುವ ಮೂಲಕ ಬದಲಾಯಿಸಲು ಆಗುವುದಿಲ್ಲ. ಮರುಗಳಿಕೆ ಎಂಬುದು ಅರ್ಥದ ವೈವಿಧ್ಯಗಳನ್ನು ಕಡಿಮೆ ಮಾಡಿ ಒಂದು ಅರ್ಥಕ್ಕೆ ಮಿತಗೊಳಿಸಬಹುದು. (ಸಾಂಸ್ಕೃತಿಕ ನಂಬಿಕೆಗಳನ್ನೂಕೂಡಾ) ಆದರೆ, ಹೋರಾಟ ಮಾತ್ರ ನಿಲ್ಲುವಂತಿಲ್ಲ.

            ಈ ಸಮಸ್ಯೆಯನ್ನು ಗುರುತಿಸಿದ ಕೆಲವು ಸ್ತ್ರೀವಾದಿಗಳು ಪರ್ಯಾಯ ವಿಧಾನವನ್ನು ಸೂಚಿಸಿದ್ದಾರೆ. ಪದಗಳ ಅರ್ಥವನ್ನು ನೇರವಾಗಿ ಬದಲಿಸುವ ಮಾರ್ಗಕ್ಕಿಂತ ಅದೇ ಪದಗಳನ್ನು ಬಳಸಿ ಆಟವಾಡುವುದು ಸರಿಯಾದುದೆಂದು ಇವರು ಹೇಳುತ್ತಾರೆ. ಇದೊಂದು ‘ಅಧಿಭಾಷಿಕ’ ತಂತ್ರ. ಏಕೆಂದರೆ, ಇಲ್ಲಿ ಪದಗಳನ್ನು ಎಚ್ಚರದಿಂದ ಗಮನಿಸುತ್ತಿರುತ್ತೇವೆ. ಅವುಗಳ ವ್ಯುತ್ಪತ್ತಿ, ಚರಿತ್ರೆ, ಧ್ವನಿರಚನೆ – ಇವೆಲ್ಲವನ್ನೂ ಬೇಕೆಂತಲೇ ಪರಿಗಣನೆಗೆ ಒಳಪಡಿಸಲಾಗುತ್ತದೆ.

ಅಧಿಭಾಷಿಕ ತಂತ್ರಗಳು  – herstory ಯ ಮರುಗಳಿಕೆ

ಮೇರಿ ಡೇಲಿ ಮುಂತಾದ ಹಲವು ಸ್ತ್ರೀವಾದಿಗಳು ಪದಗಳನ್ನು ಒಂದು ಬಗೆಯ ಪ್ರಾಕ್ತನ ಉತ್ಖನನಗಳಿಗೆ ಗುರಿಪಡಿಸುವುದು ಉಪಯುಕ್ತ ಚಟುವಟಿಕೆ ಎಂದು ತಿಳಿದಿದ್ದಾರೆ. ವ್ಯುತ್ಪತ್ತಿ ಕೋಶಗಳನ್ನು ಹುಡುಕಿ ಈ ಪದಗಳು ಎಲ್ಲಿಂದ ಬಂದವು, ಮೊದಲಿದ್ದ ಅರ್ಥವೇನು, ಏನೆಲ್ಲ ಬದಲಾವಣೆಗಳಾಗಿವೆ – ಮುಂತಾದ ಸಂಗತಿಗಳನ್ನು ಈ ಉತ್ಖನನದಲ್ಲಿ ಗುರುತಿಸಲಾಗುತ್ತದೆ. ಉದಾಹರಣೆಗೆ, ನಮಗೆ ಸಮಸ್ಯಾತ್ಮಕವಾಗಿರುವ ಪದ cunt ತಾನೇ? ಅದರ ಕತೆ ನೋಡೋಣ. ನಾನು ಭಾಗಿಯಾಗಿದ್ದ ಚರ್ಚೆಯೊಂದರಲ್ಲಿ ಒಬ್ಬ ಹೆಂಗಸು ಆ ಪದವನ್ನು ತಾನು ಬಳಸುವುದಿಲ್ಲವೆಂದೂ, ಏಕೆಂದರೆ ಆ ಪದದ ಗಮ್ಯಾರ್ಥ ಸೂಚ್ಯಾರ್ಥಗಳೆಲ್ಲವೂ ಅಶ್ಲೀಲತೆಯನ್ನು ಬಿಂಬಿಸುತ್ತವೆಂದೂ ಹೇಳುತ್ತಿದ್ದುದನ್ನು ಗಮನಿಸಿದೆ. ಆ ಪದದ ಬದಲು Vagina ಎಂಬ ಪದವನ್ನು ಬಳಸಲು ಆಕೆ ಸಿದ್ಧಳಿದ್ದಳು. ಆದರೆ, ಹೀಗೆ ಸಿದ್ಧವಿದ್ದ ಆಕೆ ನಿಘಂಟನ್ನು ನೋಡಿದಾಗ ದಿಗ್ಭ್ರಾಂತಳಾದಳು. ಆ ನಿಘಂಟಿನಲ್ಲಿ Vagina ಪದದ ನಿಷ್ಪತ್ತಿಯನ್ನು ಕೊಡಲಾಗಿತ್ತು. (Vagina ಎಂದರೆ ಲ್ಯಾಟಿನ್ ಭಾಷೆಯಲ್ಲಿ ಒರೆ ಎಂಬ ಅರ್ಥವನ್ನು ನೀಡುತ್ತದೆ. ಕತ್ತಿಗಳನ್ನು ಮುಚ್ಚಿಡುವುದು ಒರೆಯಲ್ಲಿ ತಾನೇ?) ನಿಷ್ಪತ್ತಿ ತಿಳಿದ ಮೇಲೆ ಆ ಪದವನ್ನು ಬಳಸಲೂ ಹಿಂಜರಿಕೆಯಾಗಿ ಅದನ್ನು ಕೈ ಬಿಡಬೇಕಾಗಿ ಬಂತು. ಆ ಪದದ ಚರಿತ್ರೆಯನ್ನು ತಿಳಿಯುವ ಮೂಲಕ ಭಾಷೆಯ ಲೈಂಗಿಕ ನೆಲೆಗಳ ಸ್ವರೂಪ ಮತ್ತಷ್ಟು ಸ್ಪಷ್ಟವಾಯಿತೆಂದು ಆಕೆ ಹೇಳಿದಳು.

ಕೆಲವೊಮ್ಮೆ ಸ್ತ್ರೀವಾದಿ ದೃಷ್ಟಿಕೋನವನ್ನು ಮಂಡಿಸಲು ಆ ಪದದ ಚರಿತ್ರೆ ಮತ್ತು ನಿಷ್ಪತ್ತಿಗಳನ್ನು ಮರೆಯುವುದು, ಕಡೆಗಣಿಸುವುದು ಸರಿಯಾದ ಹಾದಿ ಎಂದು ತೋರುತ್ತದೆ. ಇದಕ್ಕೆ history ಪದವೇ ಒಳ್ಳೆಯ ಉದಾಹರಣೆ. ಸ್ತ್ರೀವಾದಿಗಳು ಈ ಪದವನ್ನು ಮರುರಚಿಸಿ herstory ಎಂದು ಬರೆಯುತ್ತಾರೆ, ಹೇಳುತ್ತಾರೆ. history ಎಂಬುದು ‘ಅವನ ಕತೆ’ಯನ್ನು ಹೇಳುತ್ತಿದೆ ಎನ್ನುವುದೇ ಈ ಬದಲಾವಣೆಗೆ ಪ್ರೇರಕ ಸಂಗತಿ. ಹಾಗಾಗಿ, herstory ಎಂದು ಬಿಟ್ಟರೆ ಆಗ ಸ್ತ್ರೀವಾದಿ ಪ್ರತಿನಿಧೀಕರಣ ಆಯಿತೆಂದು ತಿಳಿಯುತ್ತಾರೆ. ಹಲವು ಪಂಡಿತರು ಈ ಬಗ್ಗೆ ಹೇಳಿರುವ ವಿಚಾರಗಳಿಂದ history ಪದವು ಲ್ಯಾಟಿನ್ ಭಾಷೆಯ historia ಪದದಿಂದ ಬಂದಿದ್ದು, ಅದಕ್ಕೂ ಇಂಗ್ಲಿಶ್ ಭಾಷೆಯ ಸರ್ವನಾಮ his ಗೂ ಯಾವ ಸಂಬಂಧವೂ ಇಲ್ಲ. ಹೀಗೆಯೇ, ಕೆಲವು ಸ್ತ್ರೀವಾದಿಗಳು women ಪದದಲ್ಲಿರುವ ಗಂಡು ಸೂಚಕಕತೆಯನ್ನು ಕಿತ್ತು ಹಾಕಲು ಆ ಪದದ ಬರೆಹ ರೂಪವನ್ನು wimmin ಎಂದೂ womyn ಎಂದೋ ಬದಲಿಸಿದ್ದಾರೆ. ಆದರೆ, women ಪದದ ನಿಷ್ಪತ್ತಿ ಹೀಗಿಲ್ಲ. ಹಾಗೆ ನೋಡಿದರೆ ಅದರ ಉಚ್ಚಾರಣೆಯಲ್ಲೂ men ಸೂಚಿತವಾಗುವುದಿಲ್ಲ.

ಭಾಷಾಶಾಸ್ತ್ರಜ್ಞರೂ ಮತ್ತು ನಿರ್ದೇಶಕ ವೈಯಾಕರಣರೂ, ಈ ಬದಲಿಸುವ ಪ್ರವೃತ್ತಿಯ ಬಗ್ಗೆ ಕಿರಿಕಿರಿ ಪಟ್ಟಿದ್ದಾರೆ. (Harward ವಿಶ್ವವಿದ್ಯಾನಿಲಯದಲ್ಲಿಯಾರಾದರೂ herstory ಕೋರ್ಸ್‌ನ್ನು ಆರಂಭಿಸಿದರೆ ಅವರನ್ನು ಕಾಪಾಡಲು ಆ ದೇವರೇ ಬರಬೇಕು!) ಆದರೆ, ರಾಜಕೀಯ ಉದ್ದೇಶಗಳಿಂದಾಗಿ ಸ್ತ್ರೀವಾದಿಗಳು ಭಾಷೆಯೊಡನೆ ಏಕೆ ಆಟವಾಡಬಾರದು? history ಯು ಬಹಳಷ್ಟು ಸಲ ಗಂಡಸರ ಬದುಕಿನ ನಿರೂಪಣೆಯೇ ಆಗಿದೆ ಎಂಬುದನ್ನು ಕೊಂಚ ಕಿಡಿಗೇಡಿತನದಿಂದ, ಅಷ್ಟೇ ಗೌರವದಿಂದ ಸೂಚಿಸುವ herstory ಪದ ಸಾಕಷ್ಟು ಉತ್ತಮವಾಗಿಯೇ ಇದೆ. ಸ್ತ್ರೀವಾದಿಗಳಲ್ಲದೆ ಬೇರೆ ಯಾರಾದರೂ Wimmin ಎಂಬ ತಿದ್ದಿದ ಕಾಗುಣಿತದ ಪ್ರಯೋಗವನ್ನು ಮುಂದಿಟ್ಟಿದ್ದರೆ ಆಗ ಜನರೆಲ್ಲ ಚಪ್ಪಾಳೆ ಹೊಡೆದು ಮನ್ನಣೆ ನೀಡುತ್ತಿದ್ದರೇನೊ. (ಪ್ರಾಸಂಗಿಕವಾಗಿ ಗಮನಿಸಬೇಕಾದ ಸಂಗತಿಯೊಂದಿದೆ. ಗಂಡಸರೂ ಕೂಡಾ ತಮಗೆ ಅನುಕೂಲವಾಗುವ ಬಗೆಯಲ್ಲಿ ಪದಗಳ ನಿಷ್ಪತ್ತಿಯನ್ನು ಕಟ್ಟುತ್ತಿದ್ದಾರೆ. ಈಗ woman ಎಂಬ ಪದವಿದೆಯಷ್ಟೇ. ಇದನ್ನು womb-man’ ಇಲ್ಲವೇ woe-to-man ಎಂಬ ಬಗೆಯಲ್ಲಿ ಬಹು ಹಿಂದಿನಿಂದಲೂ ನಿಷ್ಪತ್ತಿ ಹೇಳುತ್ತಿರುವುದನ್ನು ಡೆನಿಸ್ ಬಾರನ್ ದಾಖಲಿಸಿದ್ದಾನೆ.)

ಪದರಚನೆ, ಅದರ ಕಾಗುಣಿತ ಮತ್ತು ಅದರ ಚರಿತ್ರೆ – ಇವೆಲ್ಲವನ್ನೂ ಸೃಜನಾತ್ಮಕವಾಗಿ ಬಳಸುವುದು ಸ್ತ್ರೀವಾದಿ ಬರವಣಿಗೆಗಳ ಒಂದು ಲಕ್ಷಣವಾಗಿದೆ. ಈ ಹಾದಿಯನ್ನು ಸ್ತ್ರೀವಾದಿ ತೀವ್ರಗಾಮಿಗಳು, ಆಧುನಿಕೋತ್ತರವಾದಿಗಳು, ಸಂಜ್ಞಾಶಾಸ್ತ್ರಜ್ಞರು – ಸಮಾನವಾಗಿಯೇ ಬಳಸಿದ್ದಾರೆ. ಮೇರಿ ಡೇಲಿ ಬರೆದ Gyn l Ecology ಗ್ರಂಥ ತೀವ್ರಗಾಮಿ ಸ್ತ್ರೀವಾದಿ ಪದಕ್ರೀಡೆಗೆ ಒಳ್ಳೆಯ ಉದಾಹರಣೆ. ಡೇಲಿ ಹೊಸ ಪದಗಳನ್ನು ಹುಟ್ಟು ಹಾಕುತ್ತಾಳೆ. ಪದಗಳನ್ನು ಕೆರಳಿಸುವಂತೆ ಒಡೆಯುತ್ತಾಳೆ. ಕಟಕಿಯಾಡುವಂತೆ ಬಳಸುತ್ತಾಳೆ. (ಶೀರ್ಷಿಕೆಯಂತೂ ಸರಿ. Therapist ಪದ ಅವಳಲ್ಲಿ The -rapist ಆಗುತ್ತದೆ). ಹಾಗೆಯೇ ಪದಗಳ ಹಳೆಯ ಅರ್ಥವನ್ನು ಆಗಾಗ ಬಳಸಿಕೊಳ್ಳುತ್ತಾಳೆ. glamour ಪದ ಇದಕ್ಕೊಂದು ಉದಾಹರಣೆ. (ಮೊದಲು ಈ ಪದಕ್ಕೆ ‘ಮಾಂತ್ರಿಕ ಶಕ್ತಿ ಇರುವ’ ಎಂಬ ಅರ್ಥವಿತ್ತು). ಹಾಗೆಯೇ haggard ಪದ ಕೂಡಾ. (ಇದು ಮಾಟಗಾರರಿಗೆ ಸಂಬಂಧಿಸಿದ ಪದ) spinster ಪದವನ್ನು ಹೊಸದಾರವನ್ನು ಮಾಡುವವಳು ಎಂಬರ್ಥದಲ್ಲಿ ಬಳಸುತ್ತಾಳೆ. ಈ ಪದಗಳು ಹಿಂದೊಮ್ಮೆ ತಮ್ಮೊಳಗೆ ಹೆಂಗಸರ ಸಾಮರ್ಥ್ಯಗಳನ್ನು ಅಡಗಿಸಿಕೊಂಡಿದ್ದವೆಂದೂ, ಬಳಕೆಯಲ್ಲಿ ಆ ಅರ್ಥಗಳನ್ನು ಅಳಿಸಿ ಹಾಕಲಾಗಿದೆಯೆಂದೂ ಡೇಲಿ ವಾದಿಸುತ್ತಾಳೆ. ಹೀಗಿರುವಾಗ ಹೆಂಗಸರು ನಾವೇಕೆ ಆ ಪದಗಳಿಂದ ಹೊಸ ಅರ್ಥಗಳನ್ನು ಹಿಂಡಿ ತೆಗೆಯಬಾರದು ಎಂದು ಕೇಳುತ್ತಾಳೆ. ಒಳ್ಳೆಯ ಪ್ರಶ್ನೆ. ಡೇಲಿ ನಡೆಸಿರುವ ಇನ್ನೊಂದು ಇತ್ತೀಚಿನ ಪದ ಸಬಲೀಕರಣದ ಚರ್ಚೆಯಲ್ಲಿ ನಾನು ಈ ಪ್ರಶ್ನೆಯನ್ನು ಮತ್ತೆ ಪರಿಗಣಿಸುತ್ತೇನೆ.

ಡೇಲಿ, ಹೆಲೆನ್ ಸೀಕ್ಸೂ – ಮಂತಾದವರು ನಡೆಸಿರುವ ಪ್ರಯತ್ನಗಳು ಕೆಲವು ಸ್ತ್ರೀವಾದಿಗಳಿಗೆ ಸಮಸ್ಯೆಯನ್ನು ತಂದೊಡ್ಡಿವೆ. ಈ ಪ್ರಯತ್ನಗಳು ಬುದ್ದಿ ಪ್ರಧಾನತೆಯನ್ನು ಆಶ್ರಯಿಸಿರುವುದರಿಂದ ಇವುಗಳ ಸಾರ್ವತ್ರಿಕತೆಯ ಬಗ್ಗೆ ಸಂಶಯ ಮೂಡುವಂತಾಗಿದೆ. ಹೊಸ ಪದರಚನೆ, ಶ್ಲೇಷಾರ್ಥ, ಪದಕ್ರೀಡೆ- ಮುಂತಾದವೆಲ್ಲ ಎಷ್ಟೋ ಓದುಗರಿಗೆ ಸುಲಭವಾಗಿ ದಕ್ಕುವುದಿಲ್ಲ. ಇಂಥ ಪ್ರಯತ್ನಗಳನ್ನು ನಿರಂತರವಾಗಿ ಬರವಣಿಗೆಯಲ್ಲಿ ನೆಲೆಗೊಳಿಸಬಹುದೇ ಹೊರತು ದಿನದಿನದ ಮಾತುಕತೆಗಳಲ್ಲಲ್ಲ. ಹೀಗೆ ಮಾತಿನಲ್ಲೂ ಬಳಸುತ್ತ ಹೋದರೆ ಕಿರಿಕಿರಿಯಾಗುತ್ತದೆ. ನಿಜ, ಅವುಗಳ ಮಹತ್ವವಿರುವುದು ಅವುಗಳ ಉದ್ದೇಶದಲ್ಲಿ (ಈ ಹಿಂದೆ ನಾವು ಗಮನಿಸಿದ ಮಿಲ್ಲರ್ ಮತ್ತು ಸ್ವಿಫ್ಟ್ ಮಂಡಿಸಿದ ಸಾಮಾನ್ಯ ನೆಲೆಯ ತಿಳುವಳಿಕೆಗಿಂತ ಇದು ಭಿನ್ನ.) ಹೊಸ ಪದಗಳನ್ನು ಬಳಸುವವರು ಈಗ ಬಳಕೆಯಲ್ಲಿರುವ ಪದಗಳು ದಿನನಿತ್ಯದ ವ್ಯವಹಾರದಲ್ಲಿ. ತಮ್ಮ ಅರ್ಥ ಸಾಧ್ಯತೆಯ ಕಿಂಚಿತ್ತು ಭಾಗವನ್ನಷ್ಟೇ ಪ್ರಕಟಿಸುತ್ತಿವೆ ಎಂದು ತಿಳಿದಿದ್ದಾರೆ. ನಮ್ಮ ಸಂಸ್ಕೃತಿಯು ಹತ್ತಿಕ್ಕುತ್ತಿರುವ ಪರ್ಯಾಯ ಅರ್ಥಗಳನ್ನು ಮತ್ತು ಭಾಷಿಕ ಸೃಜನಶೀಲತೆಯನ್ನು ಸುಮ್ಮನೆ ತಳ್ಳಿ ಹಾಕಲಾಗುವುದಿಲ್ಲ. ಒಂದು ವೇಳೆ ಸ್ತ್ರೀವಾದಿಗಳು ಪದಗಳ ಅವ್ಯಕ್ತ ಅರ್ಥ ಸಾಧ್ಯತೆಗಳನ್ನು ಅನಾವರಣಗೊಳಿಸಿದರೆ ಅದು ಯಥಾಸ್ಥಿತಿ ವಾದಕ್ಕೆ ಅವರು ತೋರುತ್ತಿರುವ ಪ್ರತಿರೋಧದ ಒಂದು ಬಗೆಯಾಗಿ ಬಿಡುತ್ತದೆ. ‘ಅದರ ಅರ್ಥಹಾಗಲ್ಲ’! ಇಲ್ಲವೇ, ‘ನೀನು ಹಾಗೆಲ್ಲ ಬಳಸುವಂತಿಲ್ಲ’ ಎಂದು ಹೇಳುವ ಜನರು ತಮ್ಮ ವಾದವನ್ನು ಸಮರ್ಥಿಸಲು ಭಾಷಿಕ ಸಂಗತಿಗಳನ್ನು ಆಶ್ರಯಿಸಿರುವುದಿಲ್ಲ. ಬದಲಿಗೆ, ಅಧಿಕಾರದ ಪೊಗರನ್ನು ತೋರಿಸುತ್ತಿರುತ್ತಾರೆ.

ಭಾಷೆಯಲ್ಲಿ ಸಾಂಸ್ಥಿಕ ನೆಲೆಯ ಲೈಂಗಿಕತಾವಾದ : ನಿಘಂಟುಗಳು ಮತ್ತು ವ್ಯಾಕರಣಗಳು

ಅನಿಯಂತ್ರಿತ ಸಂದರ್ಭಗಳಲ್ಲಿ (ಹೆಂಗಸರಿಗೆ ಬಳಸುವ ಮುಚ್ಚಟೆ ಪದಗಳು) ಕಂಡು ಬರುವ ಲೈಂಗಿಕತಾವಾದಕ್ಕೂ, ನಿಘಂಟುಗಳು, ವ್ಯಾಕರಣ ಗ್ರಂಥಗಳು, ಮತ್ತು ಬಳಕೆಯ ಕೈಪಿಡಿಗಳು – ಮುಂತಾದ ಆಕರ ಗ್ರಂಥಗಳಲ್ಲಿ ದಾಖಲೆಗೊಳ್ಳುವ ಮೂಲಕ ಅಧಿಕೃತತೆಯನ್ನು ಪಡೆದುಕೊಳ್ಳುವ ಭಾಷಿಕ ಲೈಂಗಿಕತಾವಾದಿ ನೆಲೆಗೂ, ಇರುವ ವ್ಯತ್ಯಾಸವನ್ನು ಈ ಮೊದಲೇ ಚರ್ಚಿಸಿದ್ದೇವೆ. (ಭಾಷೆಯ ಪ್ರಮಾಣೀಕೃತ ರೂಪಗಳನ್ನು ಕಟ್ಟುವ ಕ್ರಮಕ್ಕೆ ಸಂಕೇತೀಕರಣ ಎನ್ನುತ್ತಾರೆ. ಬೈಗುಳಗಳು ಹೀಗೆ ಪ್ರಮಾಣೀಕರಣಗೊಳ್ಳುವುದಿಲ್ಲ. ಆದರೆ, ಸರ್ವನಾಮಗಳು, ಪದಗಳ ಕಾಗುಣಿತ – ಇವೆಲ್ಲವೂ ಸಂಕೇತೀಕರಣಗೊಂಡಿರುತ್ತವೆ) ಈ ಬಗೆಯ ಸಾಂಸ್ಥಿಕ ನೆಲೆಯ ಲೈಂಗಿಕತಾವಾದವನ್ನು ಗಮನಿಸಿ, ಸ್ತ್ರೀವಾದಿಗಳು ಅವುಗಳನ್ನು ಬದಲಿಸುವ ಸವಾಲನ್ನು ಎದುರಿಸಬೇಕಾಗುತ್ತದೆ. ಇಂಥ ಪ್ರಯತ್ನಗಳನ್ನು ಸ್ತ್ರೀವಾದಿಗಳು ಕೈಗೊಂಡಿದ್ದಾರೆ. ಅವರ ಸುಧಾರಣಾಕ್ರಮಗಳನ್ನು ನಾನೀಗ ಪರಿಶೀಲಿಸಲಿದ್ದೇನೆ. ಮೊದಲಿಗೆ, ಪದಕೋಶದಲ್ಲಿ (ಪದಕೋಶದ ಅಧಿಕೃತ ದಾಖಲೆಯಾದ ನಿಘಂಟುಗಳಲ್ಲಿ) ಮಾಡಿದ ಸುಧಾರಣೆಗಳನ್ನು ನೋಡೋಣ. ಆ ಬಳಿಕ ವ್ಯಾಕರಣದಲ್ಲಿ ಕಂಡ ಸುಧಾರಣೆಗಳನ್ನು ಗಮನಿಸಬಹುದು.

ಪದ ಪ್ರಸಾರ : ದ್ವಾರಪಾಲಕರು

ಸ್ತ್ರೀವಾದಿಗಳನ್ನು ಟೀಕಿಸುವವರು ಭಾಷೆಯು ತಂತಾನೇ ಬದಲಾಗುವುದೆಂದೂ, ಅದನ್ನು ಸ್ತ್ರೀವಾದಿಗಳು ಬೇಕೆಂದೇ ಬದಲಿಸುತ್ತಿದ್ದಾರೆಂದೂ ಗೊಣಗುತ್ತಾರೆ. ಭಾಷೆಯಲ್ಲಿ ಸ್ವಾಭಾವಿಕವಾಗಿ ಆಗುವ ಬದಲಾವಣೆಗಳನ್ನು ಯಾರೂ ತಡೆಯಲಾರರು ಎಂಬುದು ಈ ಟೀಕಾಕಾರರ ನಿಲುವು. ಈ ಮಾತು ಅಷ್ಟು ಸರಿಯಲ್ಲ. ಏಕೆಂದರೆ, ಭಾಷಿಕರನ್ನು ಹೊರತು ಪಡಿಸಿ ಭಾಷೆಗೆ ಸ್ವತಂತ್ರ ಅಸ್ತಿತ್ವವೆನ್ನುವುದು ಇಲ್ಲ. ಮತ್ತು ಬದಲಾವಣೆಗಳನ್ನು ಜಾರಿಗೆ ಕೊಡುವವರು ಭಾಷಿಕರೇ ಆಗಿರುತ್ತಾರೆ. ಆದರೂ, ಟೀಕಾಕಾರರ ಒಟ್ಟಭಿಪ್ರಾಯವನ್ನು ಸದ್ಯ ಒಪ್ರೋನಮ್ಮ ಪದಕೋಶ ಮತ್ತು ಅವುಗಳ ಅರ್ಥ ಯಾವಾಗಲೂ ಸ್ಥಿರವಾಗಿ ಉಳಿಯಲಾರದು. ಹೀಗೆ ಸ್ಥಿರವಾಗಿ ಇರಬೇಕೆಂದು ಬಯಸುವವರು ಇಂದಿಗೂ ನಮ್ಮ ನಡುವೆ ಇದ್ದಾರೆ. ಆದರೆ ನಾವು ಹೊಸಪದಗಳನ್ನು ಟಂಕಿಸುತ್ತೇವೆ, ಹೊಸ ಪದಗಳನ್ನು ಎರವಲು ಪಡೆಯುತ್ತೇವೆ, ಇರುವ ಪದ ಪದಾಂಗಗಳ ಮರುಜೋಡಣೆಯಿಂದ ಹೊಸ ಪದಗಳನ್ನು ಕಟ್ಟುತ್ತೇವೆ, ಹಳೆಯ ಪದಗಳ ಅರ್ಥ ನಿಧಾನವಾಗಿ ಬದಲಾಗುತ್ತಿರುತ್ತದೆ.

ಪದಗಳ ಅರ್ಥ ಬದಲಾಗುವುದಕ್ಕೆ ಮುಖ್ಯ ಕಾರಣವೆಂದರೆ ಅವುಗಳನ್ನು ಬಳಸುವವರು ಬಳಕೆಯ ಪ್ರಸಂಗಗಳಿಂದ ಅವುಗಳ ಅರ್ಥವನ್ನು ಗ್ರಹಿಸಿರುತ್ತಾರೆಯೇ ಹೊರತು, ನಿಘಂಟುಗಳಲ್ಲಿ ಅರ್ಥವೇನಿದೆ ಎಂದು ತಿಳಿಯುವ ಮೂಲಕ ಅಲ್ಲ. ಹೀಗಾಗಿ ಪ್ರಸಂಗಾನುಸಾರ ಅರ್ಥಗ್ರಹಿಕೆಯೂ ಕೂಡಾ ಬದಲಾಗಬಹುದು. ಉದಾಹರಣೆಗೆ, ಫಾಕ್‌ಲ್ಯಾಂಡ್ ಯುದ್ಧ ನಡೆದಾಗ Mrs ಥ್ಯಾಚೆರ್ ಅರ್ಜೆಂಟೇನಿಯಾ ದೇಶವನ್ನು ಟೀಕಿಸುತ್ತಾ,  Prevarication ಎಂಬ ಪದವನ್ನು ಬಳಸಿದರು. ಇಷ್ಟು ಕಟುವಾದ ಅರ್ಥವುಳ್ಳ ಪದವನ್ನು ಬಳಸಿದ್ದನ್ನು ಕಂಡು ಹಲವರು ಗಾಬರಿಯಾದರು. ಏಕೆಂದರೆ, ನಿಘಂಟುಗಳನ್ನು ನೋಡಿದರೆ, ಅಲ್ಲಿ Prevaricate ಎಂಬ ಪದಕ್ಕೆ ಸುಳ್ಳು ಹೇಳು ಎಂಬ ಅರ್ಥವಿದೆ. ಆದರೆ, ಥ್ಯಾಚರ್ ಉದ್ದೇಶ ಹಾಗೆ ಹೇಳುವುದಾಗಿರಲಿಲ್ಲ. ಆಕೆ ಸಮಯಕ್ಕಾಗಿ ಕಾಯುವುದು ಎಂಬ ಅರ್ಥದಲ್ಲಿ ಈ ಪದವನ್ನು ಬಳಸಿದ್ದಂತೆ ತೋರುತ್ತಿತ್ತು. ಹಲವು ಜನ ಭಾಷಿಕರಿಗೆ Prevaricate ಎಂದರೆ ಇದೇ ಅರ್ಥವಿದೆ ಎಂಬ ಭಾವನೆ ಇದೆ. ಏಕೆಂದರೆ, ಈ ಪದ Procrastinate ಎಂಬ ಪದಕ್ಕೆ ಉಚ್ಛಾರಣೆಯಲ್ಲಿ ಹತ್ತಿರವಿದೆ. Procrastinate ಎಂದರೆ ನಾಳೆಗೆ ಮುಂದೂಡು ಎಂದರ್ಥ. ಇದಿಷ್ಟೇ ಸಂಗತಿಗಳಿಂದ ಭಾಷಿಕರು prevaricate ಎಂದಾಗ ನಿಲ್ಲಿಸು, ತಡೆಯೊಡ್ಡು, ಎಂಬ ಅರ್ಥವನ್ನು ಗ್ರಹಿಸುತ್ತಾರೆ. ಅದಕ್ಕಿರುವ ‘ಸುಳ್ಳು ಹೇಳು’, ಎಂಬ ಅರ್ಥ ಈಗ ಹಳತಾಗಿ ಕಳೆದು ಹೋಗಿದೆ. ‘ಓ! ನೀವು ತಪ್ಪರ್ಥದಲ್ಲಿ ಬಳಸುತ್ತಿದ್ದೀರಿ’ ಎಂದು ಭಾಷಿಕರಿಗೆ ತಿಳಿಹೇಳುವುದರಲ್ಲಿ ಅರ್ಥವಿಲ್ಲ. ಏಕೆಂದರೆ, ಅರ್ಥಕ್ಕೆ ಬಳಕೆಯೇ ಆಧಾರ.

ಇನ್ನೊಂದು ಕಡೆಯಿಂದ ನೋಡಿದಾಗ ಇದೆಲ್ಲವನ್ನೂ ಹೀಗೆ ತಿಳಿಯುವುದು ಅಷ್ಟು ಸರಿಯಲ್ಲ ಎನಿಸುತ್ತದೆ. ಕೆಲವು ಜನರ ಬಳಕೆಯು ಇತರರ ಬಳಕೆಗಿಂತ ಪ್ರಭಾವಶಾಲಿಯಾಗಿರುತ್ತದೆ. ಹಾಗಾಗಿ, ಹೊಸಪದಗಳನ್ನು ಮತ್ತು ಹೊಸ ಅರ್ಥಗಳನ್ನು ಎಲ್ಲ ಕಡೆಗೂ ಪಸರಿಸಲು ಇರುವ ಹಾದಿಗಳು ಯಾವುವು ಎಂಬುದನ್ನು ಅವಲಂಬಿಸಿ ಅವುಗಳು ಸ್ವೀಕೃತವಾಗುತ್ತವೋ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ. ಶೈಕ್ಷಣಿಕ ನಡವಳಿಗಳು ಬದಲಾವಣೆಗಳ ವೇಗವನ್ನು ಕಡಿಮೆ ಮಾಡಬಲ್ಲವು; ಇಲ್ಲವೇ ಈ ಬದಲಾವಣೆಗಳನ್ನು ಕಪ್ಪುಪಟ್ಟಿಗೆ ಸೇರಿಸಬಲ್ಲವು. (ಇಂದಿಗೂ ಅಧ್ಯಾಪಕರು ಸಮೂಹವಾಚಿ he ಪದವನ್ನು ಬಳಸಬೇಕೆಂದು ಒತ್ತಾಯಿಸುವುದನ್ನು ಗಮನಿಸಿ.) ಪ್ರಕಟಣೆ ಮತ್ತು ಸಮೂಹ ಮಾಧ್ಯಮಗಳು ಒಂದು ಪದವನ್ನು ಜನಪ್ರಿಯಗೊಳಿಸುತ್ತವೆಯಾದರೂ, ಅವುಗಳಿಗೆ ಅಧಿಕೃತ ಸ್ಥಾನಮಾನವನ್ನು ತಂದುಕೊಡಲಾರವು (ಉದಾಗೆ, ಬಹುಖ್ಯಾತ ಪತ್ರಿಕೆಯಾದ ನೂಯಾರ್ಕ್ ಟೈಮ್ಸ್ ಎಷ್ಟೋ ವರ್ಷಗಳ ಕಾಲ Ms ಎಂಬ ಪ್ರಯೋಗವನ್ನು ಮುದ್ರಿಸಲು ಒಪ್ಪಲಿಲ್ಲ. ತಮ್ಮನ್ನು ಇದೇ ಸೂಚಕದಿಂದ ನಿರ್ದೇಶಿಸಬೇಕೆಂದು ಹಲವು ಹೆಂಗಸರು ಒತ್ತಾಯಿಸಿದರೂ ಅದಕ್ಕೂ ಪತ್ರಿಕೆ ಜಗ್ಗಿರಲಿಲ್ಲ.) ಒಂದು ಪದವನ್ನು ಮತ್ತದರ ಅರ್ಥವನ್ನು ಹೆಚ್ಚು ಜನ ಒಪ್ಪುವಂತೆ ಮಾಡುವಲ್ಲಿ ನಿಘಂಟುಗಳಿಗೆ ಒಂದು ಮುಖ್ಯವಾದ ಪಾತ್ರವಿದೆ.

ಭಾಷೆಯ ಲೈಂಗಿಕತಾವಾದಿ ನೆಲೆಯಲ್ಲಿ ಆಗುವ ಬದಲಾವಣೇಗಳಿಗೆ ಹೆಂಗಸರು ತಂದಿರುವ ಸುಧಾರಣೆಗಳು ಕಾರಣವೋ, ಅಥವಾ ಪ್ರಜ್ಞಾಪೂರ್ವಕವಾಗಿ ನಡೆಸಿರುವ ಪ್ರಯತ್ನಗಳು ಕಾರಣವೋ ಎಂಬುದು ಮುಖ್ಯವಲ್ಲ. ಈ ಬದಲಾವಣೆಗಳು ಭಾಷಿಕ ಮುಕ್ತ ಮಾರುಕಟ್ಟೆಯಲ್ಲಿ  ತಮ್ಮಿಂದ ತಾವೇ ಜೀವಿಸಬಲ್ಲವು ಎಂದು ತಿಳಿಯುವುದು ಸರಿಯಲ್ಲ. ಇದೆಲ್ಲವನ್ನೂ ನಿಯಂತ್ರಿಸುವ ಸಂಸ್ಥೆಗಳು ದ್ವಾರಪಾಲಕರಂತೆ ಒಳಗೆ ಬಿಡುವ, ಇಲ್ಲವೇ ಹೊರಗೇ ನಿಲ್ಲಿಸುವ ಕೆಲಸವನ್ನು ಮಾಡುತ್ತಿರುತ್ತವೆ. ಶಿಕ್ಷಣ, ಪ್ರಕಟಣೆ, ಮಾಧ್ಯಮಗಳು, ನಿಘಂಟುಗಳು, ವ್ಯಾಕರಣಗಳು – ಇವೇ ದ್ವಾರಪಾಲಕರ ಕೆಲಸ ಮಾಡುವ ಸಂಸ್ಥೆಗಳು. ಭಾಷೆಯ ಸಾರ್ವಜನಿಕ ಬಳಕೆಯ ವಲಯದಲ್ಲಿ (ಅಧಿಕೃತ ದಾಖಲೆಗಳು, ಟಿವಿ ವಾರ್ತೆಗಳು) ಸ್ತ್ರೀವಾದಿ ಸುಧಾರಣೆಗಳು ಒಪ್ಪಿಗೆಯನ್ನು ಪಡೆಯಬೇಕಾದರೆ, ಈ ದ್ವಾರಪಾಲಕರ ಸಮ್ಮತಿ ಬೇಕಾಗುತ್ತದೆ. ಈ ದ್ವಾರಪಾಲಕರಾದರೋ, ತಟಸ್ಥರಲ್ಲ. ಅವು ಕೂಡಾ, ರಾಜಕೀಯ ಸಂಸ್ಥೆಗಳೇ ಆಗಿವೆ.

ಇಂಥ ಕಡೆ ನಮ್ಮ ಹಕ್ಕನ್ನು ಸಾಧಿಸಿಕೊಳ್ಳಲು ಇರುವ ಒಂದು ವಿಧಾನವೆಂದರೆ, ಈ ಸಂಸ್ಥೆಗಳಿಗೆ ಇರುವ ಅಧಿಕಾರವನ್ನು ಪ್ರಶ್ನಿಸುವುದು, ಇಲ್ಲವೇ ಅವುಗಳನ್ನು ಬುಡಮೇಲು ಮಾಡುವುದು. ಕಳೆದ ಒಂದು ದಶಕದಿಂದೀಚೆಗೆ ಸ್ತ್ರೀವಾದಿಗಳು ಲೈಂಗಿಕತಾವಾದದ ಬಗ್ಗೆ ತಲೆಕೆಡಿಸಿಕೊಳ್ಳದ ನಿಘಂಟುಗಳನ್ನು ಕೈ ಬಿಟ್ಟು ಸ್ತ್ರೀವಾದಿ ನಿಘಂಟುಗಳನ್ನು ರಚಿಸುತ್ತಿದ್ದಾರೆ. ಹೀಗೆ ಮಾಡುವ ಮೂಲಕ ನಿಘಂಟು ರಚನೆಯ ತಳಹದಿಯನ್ನೇ ಅಲುಗಾಡಿಸುತ್ತಿದ್ದಾರೆ.

ಸ್ತ್ರೀವಾದಿಗಳು ಮತ್ತು ನಿಘಂಟು ರಚ : ‘‘ನಮಗೆ ಬೇಕಾಗಿರುವುದು Dictionary ಯೇ ಹೊರತು Dick-tionary ಯಲ್ಲ’’

ಭಾಷಾಶಾಸ್ತ್ರಜ್ಞರಂತೆ ನಿಘಂಟುರಚಕರೂ ಕೂಡಾ ತಾವು ಜನರು ಪದಗಳನ್ನು ಬಳಸುವ ಬಗೆಯನ್ನು ಯಾವುದೇ ಓಲುವೆ ಇಲ್ಲವೇ ಭಯಗಳಿಲ್ಲದೆ ವಿವರಣಾತ್ಮಕವಾಗಿ ದಾಖಲಿಸುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ಇದೊಂದು ಹುಸಿ ಮಾತು ಎಂದೂ ಸಾಧಿಸಲಾಗದು. ಒಂದು ಪದವನ್ನು ಹೇಗೆ ಬಳಸುತ್ತೇವೆಂದು ತಿಳಿಯಲು ನಾನು ನಿಘಂಟನ್ನೇಕೆ ನೋಡಬೇಕು? ಆ ಪದವನ್ನು ಹೇಗೆ ಬಳಸಬೇಕೆಂದು ತಿಳಿಯಬೇಕಾದಾಗ ನಾನು ನಿಘಂಟನ್ನು ತೆರೆಯುತ್ತೇನೆ. ನಿಘಂಟುಗಳಲ್ಲಿ ಪದಗಳಿಗೆ ನೀಡುವ ವ್ಯಾಖ್ಯಾನಗಳಿಗೂ, ನನ್ನ ಬಳಕೆಯ ವ್ಯಾಖ್ಯೆಗೂ ಗಾವುದ  ದೂರವಿರುತ್ತದೆ. ಇದು ನನ್ನಂತೆ ಹಲವರ ಅನುಭವ. woman ಎಂಬ ಪದಕ್ಕೆ ದುರ್ಬಲ, ಸಾಮರ್ಥ್ಯಹೀನ ಎಂಬ ಅರ್ಥವಿದೆ ಎಂದುಕೊಳ್ಳಿ. ಹೀಗನಿಸುವುದು ಯಾರಿಗೆ?  ಭಗಾಂಕುರ ಎಂದರೆ ಶಿಶ್ನವನ್ನು ಹೋಲುವ, ಹೆಂಗಸರಲ್ಲಿ ಇರುವ ಬೆಳೆಯದ ಲೈಂಗಿಕ ಅಂಗ ಎಂದು ಹೇಳುವವರು ಯಾರು? Unfeminine ಎಂದರೆ ಹೆಂಗಸಿಗೆ ತಕ್ಕುದಲ್ಲದ ಲಕ್ಷಣ ಎಂದಾದರೆ, ಪ್ರತಿಯೊಬ್ಬ ಹೆಂಗಸಿನ ದೇಹದ ಮೇಲೆ ಇರುವ ಕೂದಲನ್ನು Unfeminine hair ಎಂದೇಕೆ ಕರೆಯಬೇಕು?

ಈ ಬರೆಹವನ್ನು ಬರೆಯುತ್ತಿರುವಾಗ ನನ್ನ ಮನೆಯಲ್ಲಿ ನನಗೆ ದೊರಕಿದ ನಿಘಂಟಿನಿಂದ ನಾನು ಮೇಲಿನ ವ್ಯಾಖ್ಯಾನಗಳನ್ನು ಸಂಗ್ರಹಿಸಿದ್ದೇನೆ. ನನ್ನ ಮಟ್ಟಿಗೆ ಇವೆಲ್ಲವೂ ಪೂರ್ವಾಗ್ರಹಗಳಿಂದ ಕೂಡಿವೆ. ಹೀಗಾಗಲೇ ಬೇಕೆಂದಿಲ್ಲ. ಏಕೆಂದರೆ, ಇಂಗ್ಲಿಶ್ ಭಾಷೆ ಮಾತಾಡುವ ಪ್ರತಿಯೊಬ್ಬರ ಬಳಕೆಯನ್ನೂ ದಾಖಲಿಸುವುದು ಅಸಾಧ್ಯವೇ ಸರಿ. ಹಾಗಾಗಿ, ನಿಘಂಟುಗಳು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಸಮಸ್ಯೆಯೆಂದರೆ ತಾವು ಹೀಗೆ ಆಯ್ಕೆ ಮಾಡಿಕೊಳ್ಳುತ್ತಿರುವುದನ್ನು ಒಪ್ಪಿಕೊಳ್ಳಲು ನಿಘಂಟುಗಳು ಸಿದ್ಧವಿಲ್ಲ. (ಎಷ್ಟೋ ವೇಳೆ ಪೂರ್ವಾಗ್ರಹಗಳು ಎಷ್ಟು ದೃಢವಾಗಿರುತ್ತ ವೆಂದರೆ, ಅವುಗಳನ್ನು ಅಲುಗಾಡಿಸುವುದು ಕಷ್ಟವಾಗುತ್ತದೆ). ಬದಲಿಗೆ, ತಾವು ಸರ್ವಸಮ್ಮತವಾದ, ಅಧಿಕೃತವಾದ, ಪ್ರಮಾಣಬದ್ಧವಾದ ಬಳಕೆಗಳನ್ನು ದಾಖಲಿಸುತ್ತಿ ರುವುದಾಗಿ ನಿಘಂಟುಗಳು ಘೋಷಿಸಿಕೊಳ್ಳುತ್ತವೆ. ಇದನ್ನು ಬಣ್ಣಿಸಲು ಸರ್ವಾಧಿಕಾರತ್ವ ಎಂಬ ಪದವೇ ಸರಿ ಎಂದು ತೋರುತ್ತದೆ.

ನಿಘಂಟುಗಳು ಬರೆಹದ ರೂಪಗಳಿಗೆ ಕೊಡುವ ಮಾನ್ಯತೆಯನ್ನು ಮಾತಿಗೆ ನೀಡುವುದಿಲ್ಲ ಎಂಬುದೇ ಅವುಗಳ ಪೂರ್ವಾಗ್ರಹಗಳ ಬಹುಮುಖ್ಯ ಮಾದರಿಯಾಗಿದೆ. ಪದಗಳಿಗೆ ಹುಡುಕಾಟವನ್ನು ಜನಮಧ್ಯದಿಂದ ಆರಂಭಿಸದೆ, ಗ್ರಂಥಾಲಯಗಳಲ್ಲಿ ಮೊದಲು ಮಾಡುತ್ತವೆ. ಅದರಲ್ಲೂ ವೈಚಾರಿಕ ಬರೆಹಗಳಿಗೆ, ಉನ್ನತ ಸ್ತರದ ಸೃಜನಶೀಲ ಬರವಣಿಗೆಗೆ ತಮ್ಮ ಆಯ್ಕೆಗಳನ್ನು ಸೀಮಿತಗೊಳಿಸುತ್ತವೆ. (ಈಚಿನ ದಿನಗಳಲ್ಲಿ, ಅದರಲ್ಲೂ ಉತ್ತರ ಅಮೆರಿಕದಲ್ಲಿ ಸಾಹಿತ್ಯ ಕೃತಿಗಳ ಬದಲು ನಿಯತಕಾಲಿಕೆಗಳನ್ನು ಆಕರಗಳನ್ನಾಗಿ ಬಳಸುವುದು ಕಂಡು ಬರುತ್ತಿದೆ. ಇಲ್ಲಿಯೂ ಕೂಡಾ ಬುದ್ದಿವಂತರ ನಿಯತಕಾಲಿಕೆಗಳಿಗೆ ದೊರೆಯುವ ಮನ್ನಣೆ  ಕಾಮಿಕ್ ಪುಸ್ತಕಗಳಿಗೆ, ಕರಪತ್ರಗಳಿಗೆ, ಟಿವಿ ಧಾರವಾಹಿಗಳ ಚಿತ್ರಕಲೆಗಳಿಗೆ ದೊರೆಯುವುದಿಲ್ಲ) ನಿಘಂಟುಗಳಲ್ಲಿskive ಮತ್ತು naff ಮಾದರಿಯ ಪದಗಳು ನಿಮಗೆ ಕಾಣಸಿಗುವುದಿಲ್ಲ. (ಕಂಡರೂ ಅವುಗಳ ಮುಂದೆ ಉಪಭಾಷಿಕ, ಇಲ್ಲವೇ ಆಡುಮಾತು ಎಂಬ ಗುರುತು ಇರುತ್ತದೆ) ಆದರೆ, ಯಾರೋ ಒಬ್ಬ ಖ್ಯಾತಲೇಖಕ ಒಮ್ಮೆ ಮಾತ್ರ ಬಳಸಿದ scrolloping ಎಂಬ ಪದಕ್ಕೆ ಮನ್ನಣೆ ಇರುತ್ತದೆ. ಕೆಲವು ವಲಯಗಳಿಗೆ ಸೇರಿದ ವಿಶಿಷ್ಟ ಪದಗಳನ್ನು ಬಿಟ್ಟರೆ, ನಿಮಗೆ ದುಡಿಯುವ ಜನರ, ಕಪ್ಪು ಜನರ, ಹೆಂಗಸರ ದಿನಬಳಕೆಯ ಪದಗಳು ನಿಘಂಟುಗಳಲ್ಲಿ ದೊರೆಯುವುದಿಲ್ಲ. ಈ ಪದಗಳು ಅಕಸ್ಮಾತ್ ಬರೆಹದೊಳಗೆ ನುಸುಳಿದ್ದರೂ, ನಿಘಂಟುಕಾರರು ಮಾತ್ರ ನಿಘಂಟಿನ ಪ್ರಾಕಾರದೊಳಕ್ಕೆ ಅವನ್ನು ಬಿಟ್ಟುಕೊಳ್ಳುವುದಿಲ್ಲ.

ಹಾಗೆ ನೋಡಿದರೆ, ಇದರಲ್ಲೇನೂ ಅಚ್ಚರಿ ಇಲ್ಲ. ನಿಘಂಟುಗಳು ಏನೇ ಹೇಳಲಿ. ಅವೆಲ್ಲವೂ ನಿರ್ದೇಶಾತ್ಮಕ ನೆಲೆಯಲ್ಲಿಯೇ ಇರುತ್ತವೆ. ಹಾಗಾಗಿ, ಅವು ಪ್ರತಿಷ್ಠಿತವಲ್ಲದ ಪದಗಳನ್ನು ಕೈಬಿಡುತ್ತವೆ. fuck ಪದದ ಅರ್ಥವೇನೆಂದು ಎಲ್ಲ ಇಂಗ್ಲಿಶ್ ಭಾಷಿಕರಿಗೂ ಗೊತ್ತಿದ್ದರೂ, ನಿಘಂಟುಗಳು ಕಣ್ಣು ಮುಚ್ಚಿರುತ್ತವೆ. (ಆಕ್ಸ್‌ಫರ್ಡ್ ಇಂಗ್ಲಿಶ್ ನಿಘಂಟು ಕೊನೆಗೂ ತಲೆಬಾಗಿ ಒಳಗೊಳ್ಳುವ ಅಧ್ಯಯನ ಪ್ರವೃತ್ತಿಯನ್ನು ತೋರುವ ನೆಪದಲ್ಲಿ ಈ ಪದವನ್ನು ಸೇರಿಸಿಕೊಂಡಿದೆ) ಆದರೆ, ಸ್ತ್ರೀವಾದಿಗಳ ಸಮಸ್ಯೆಯೇ ಬೇರೆ. ನಿಘಂಟುಗಳು ಲೈಂಗಿಕತಾವಾದಿ ವ್ಯಾಖ್ಯಾನ ಮತ್ತು ಉದಾಹರಣೆಗಳನ್ನು ಸೇರ್ಪಡೆ ಮಾಡಿಕೊಂಡು ಸ್ತ್ರೀವಾದಿಗಳ ಪದಗಳನ್ನು, ವ್ಯಾಖ್ಯೆಗಳನ್ನು ದೂರವಿರಿಸಿದರೆ ಏನು ಮಾಡುವುದು? ನಿಘಂಟುಗಳು ಎಲ್ಲರಿಗೂ ಅಧಿಕೃತವಾಗಿರುತ್ತವೆ. ಅಂತಹ ಮನ್ನಣೆಗೆ ಅವು ಅರ್ಹವೋ ಅಲ್ಲವೋ ಎಂಬುದು ಯಾರಿಗೂ ಬೇಕಿಲ್ಲ.

ಅಲ್ಮಾ ಗ್ರಹಾಮ್ ‘The making of sexist dictionary’ ಎಂಬ ತನ್ನ ಲೇಖನದಲ್ಲಿ ತಾನು ಪರಿಶೀಲಿಸಿದ ಶಾಲಾ ಬಳಕೆಯ ನಿಘಂಟುಳೆಲ್ಲವೂ ಲೈಂಗಿಕತಾವಾದಿ ನಿಲುವುಗಳನ್ನು ಸಮರ್ಥಿಸುವಂಥವೇ ಆಗಿದ್ದುದನ್ನು ಗುರುತಿಸಿದ್ದಾಳೆ. ವ್ಯಾಖ್ಯೆಗಳು ಮತ್ತು ಉದಾಹರಣೆಗಳು ಈ ನಿಲುವನ್ನು ಪೋಷಿಸುವಂತೆ ಇದ್ದವು. ಉದಾಹರಣೆಗಳಿಗಾಗಿ ಆಶ್ರಯಿಸಿದ ಆಕರಗಳು ಗಂಡುನೆಲೆಯನ್ನು ಹೊಂದಿದ್ದವು. ಇದರಿಂದಾಗಿ, ಈ ನಿಘಂಟುಗಳನ್ನು ಬಳಸುತ್ತಿದ್ದ ವಿದ್ಯಾರ್ಥಿಗಳು ಹೆಂಗಸರಿಗಿಂತ ಗಂಡಸರೇ ಮುಖ್ಯರೆಂದು ಭಾವಿಸುವಂತೆ ಆಗುತ್ತದೆಂದು ಗ್ರಹಾಮ್ ತಿಳಿಯುತ್ತಾಳೆ. ಇದಕ್ಕಾಗಿ ಪೂರ್ವಾಗ್ರಹಗಳಿಲ್ಲದ, ಹೆಚ್ಚು ಪ್ರಾತಿನಿಧಿಕವಾದ ನಿಘಂಟನ್ನು ರಚಿಸಲು ಮುಂದಾದಳು. ಗಂಡಸರ ಬಳಕೆಗಳಲ್ಲದೆ, ಹೆಂಗಸರ ಬಳಕೆಗಳನ್ನೂ ಆಕರಗಳನ್ನಾಗಿ ಇರಿಸಿಕೊಂಡು ಲೈಂಗಿಕತಾವಾದಿ ವ್ಯಾಖ್ಯೆಗಳನ್ನು ಕೈಬಿಡುವುದು ಅಗತ್ಯವೆಂದು ಆಕೆಗೆ ತೋರಿತು. (ಇದಾದ ಕೆಲವು ವರ್ಷಗಳ ನಂತರ ರೊಜೆಟ್ ಅವರ Thesaures ಅನ್ನು ಕೂಡಾ ಹೀಗೆಯೇ ಪರಿಷ್ಕರಿಸುವ ಕೆಲಸವನ್ನು ಹೆಂಗಸರೊಬ್ಬರು ಸಂಪಾದಕರಾಗಿ ಮಾಡಿ ಮುಗಿಸಿದರು.)

ಮತ್ತೆ ಕೆಲವು ಸ್ತ್ರೀವಾದಿಗಳು ಇನ್ನೂ ಮುಂದುವರೆದಿದ್ದಾರೆ. ಚೆರಿಸ್ ಕ್ರಮಾರೆ ಮತ್ತು ಪೌಲಾ ಎ ಟ್ರೈಚಿಲರ್ ಅವರು ಸಂಪಾದಿಸಿದ A feminist dictionary ಇದಕ್ಕೊಂದು ಉದಾಹರಣೆ. ಇದು ಪ್ರಚಲಿತ ನಿಘಂಟನ್ನು ಲೈಂಗಿಕತಾವಾದಿ ಕಟ್ಟಿನಿಂದ ಹೊರತರುವ ಪ್ರಯತ್ನವಷ್ಟೇ ಆಗಿರಲಿಲ್ಲ. ಜೊತೆಗೆ, ನಿಘಂಟುಗಳು ಹೊಂದಿದ್ದ ಏಕಾಕೃತಿಯ ಅಧಿಕಾರದ ನೆಲೆಗಳನ್ನು ಒಡೆಯುವುದೂ ಇದರ ಗುರಿಯಾಗಿತ್ತು. ಪದಗಳನ್ನು ಹೇಗೆ ಬಳಸಬೇಕು ಎಂಬುದನ್ನು ಹೇಳುವುದು ಈ ನಿಘಂಟಿನ ಗುರಿಯಲ್ಲ. ಬದಲಿಗೆ, ಬೇರೆ ಬೇರೆ ಹೆಂಗಸರ ಕೃತಿಗಳಿಂದ ತೆಗೆದುಕೊಂಡ ಉಲ್ಲೇಖಗಳು ಆಯಾ ಪದಗಳಿಗೆ ನೀಡುವ ಭಿನ್ನ ಮತ್ತು ಸೃಜನಶೀಲ ವ್ಯಾಖ್ಯೆಗಳನ್ನು ಈ ನಿಘಂಟು ಮುಂದಿಡುತ್ತದೆ. ಸ್ತ್ರೀವಾದಿ ಚೌಕಟ್ಟಿನಲ್ಲಿ ನೋಡಿದಾಗ ದೊರೆಯುವ ಭಿನ್ನಚಿತ್ರ ನಮಗೆ ಲಭ್ಯವಾಗುತ್ತದೆ. (ತಮಾಷೆಗಾಗಿ ಈ ಉಪ ಅಧ್ಯಾಯಕ್ಕೆ ನೀಡಿದ ‘we need a dictionary not a dick – tionary’ ಎಂಬುದು ಈ A feninist dictionary ಯಿಂದ ತೆಗೆದುಕೊಂಡದ್ದು)

home ಎಂಬ ನಮೂದಿಗೆ ಈ ಕೃತಿಯಲ್ಲಿ ದೊರೆಯುವ ಹಲವು ವ್ಯಾಖ್ಯೆಗಳನ್ನು ನೋಡಿದರೆ, ಅವುಗಳಲ್ಲಿ ಹಲವನ್ನು ಗಂಡು ನಿಘಂಟುಕಾರರು ಎಂದಾದರೂ ಗಮನಿಸಿದ್ದಾರೆಯೇ ಎಂಬ ಸಂದೇಹ ಉಂಟಾಗುತ್ತದೆ. ಆದರೆ, home ಎಂಬುದು ಹಲವು ಹೆಂಗಸರ ಕ್ರಿಯಾಕ್ಷೇತ್ರ. ಈ ನಮೂದಿನಲ್ಲಿ ‘A comfortable concentration camp’ ಎಂಬ ಬೆಟ್ಟಿ ಫ್ರೀಡನ್‌ಳ ಮಾತು ಸೇರಿದೆ. ‘ನಿಘಂಟುಗಳು ಹೀಗಿರಬಾರದು, ಅಲ್ಲವೆ’? ಎಂದು ಜಾಣರು ಕೇಳಬಹುದು. ಇಂಥ ವಿಚಿತ್ರ ಉಲ್ಲೇಖಗಳಿಂದಾಗಿ ನಿಘಂಟನ್ನು ಪರಿಶೀಲಿಸುವ ಯಾರಿಗಾದರೂ home ಪದದ ‘ನಿಜವಾದ’ ಮತ್ತು ‘ಮೂಲ ಅರ್ಥ’ ತಿಳಿಯಲು ಸಾಧ್ಯವೇ ಎಂದೂ ಕೇಳಿಯಾರು. ಇಂಥ ಪ್ರಶ್ನೆಗಳಿಗೆ ಉತ್ತರವಿಷ್ಟೇ. ಭಾಷೆಯನ್ನು ಬಳಸುವ ಯಾರಿಗಾದರೂ home ಪದದ ‘ನಿಜವ್ಯಾಖ್ಯೆ’ಯನ್ನು ಪಡೆಯಲು ನಿಘಂಟನ್ನು ನೋಡಬೇಕಾದ ಅಗತ್ಯ ಬರುವುದಿಲ್ಲ. ಅಲ್ಲದೆ, ನಿಘಂಟುಗಳು ಹೇಳುವ ಮತ್ತು ‘ಸರಿ’ ಎಂದು ನಂಬುವ ವ್ಯಾಖ್ಯೆಗಳನ್ನು ಎಲ್ಲ ಪದಗಳೂ, ಅವುಗಳು ಬಳಕೆಯಾಗುವ ಪ್ರತಿ ಸಂದರ್ಭದಲ್ಲೂ, ಹೊಂದಿರುತ್ತವೆಂದು ಹೇಳಬಹುದೇನು?  ಒಂದು ವ್ಯಾಖ್ಯೆ ಇನ್ನೊಂದು ವ್ಯಾಖ್ಯೆಗಿಂತ ‘ನಿಜ’ ಇಲ್ಲವೇ ‘ಕಡಿಮೆ ಪೂರ್ವಾಗ್ರಹವುಳ್ಳದ್ದು’ ಎಂದು ಹೇಳುವುದು ಹೇಗೆ?

ನನ್ನ ಪ್ರಕಾರ A feminist dictionary ಯ ಅತ್ಯುತ್ತಮ ಅಂಶ ಒಂದಿದೆ. ಅದೆಂದರೆ ಒಂದು ಪದಕ್ಕೆ ಯಾವ ಅರ್ಥವಿದೆ ಎಂಬ ಬಗ್ಗೆ ಬಳಕೆದಾರರು ಒಮ್ಮತ ಹೊಂದಿರುವುದಿಲ್ಲ ಎನ್ನುವ ಸಂಗತಿಯನ್ನು ಈ ಕೃತಿ ತೆರೆದು ತೋರಿಸುತ್ತದೆ. ಈ ಅಂಶ ಒಂದು ರಾಜಕೀಯ ಚರ್ಚೆಗೆ ಅನುವು ಮಾಡಿಕೊಡುವಂತಿದೆ. ಸ್ತ್ರೀವಾದಿ ಎಂಬ ಪದವೇ, ಹಾಗೆಂದು ತಮ್ಮನ್ನು ಕರೆದುಕೊಳ್ಳುವವರಲ್ಲೂ ಒಮ್ಮತದ ಅರ್ಥವನ್ನು ಹೊಂದಿಲ್ಲ. ಕ್ರಮಾರೆ ಮತ್ತು ಟ್ರೈಚ್‌ಲರ್ ಈ ಸಂಬಂದದಲ್ಲಿ ರೆಬೆಕಾ ವೆಸ್ಟ್ ನೀಡಿದ ಕಿಲಾಡಿ ಮಾತೊಂದನ್ನು ಉಲ್ಲೇಖಿಸುತ್ತಾರೆ. ರೆಬೆಕಾ ವೆಸ್ಟ್‌ಳ ಪ್ರಕಾರ ಆಕೆಗೆ ಸ್ತ್ರೀವಾದಿ ಎಂದರೆ ಯಾರೆಂಬುದು ತಿಳಿದಿಲ್ಲ. ಆದರೆ, ಕಾಲೊರೆಸು ಮಾಡುವ ಕೆಲಸಕ್ಕಿಂತ ಭಿನ್ನವಾದ ಯಾವ ಕೆಲಸವನ್ನು ಮಾಡಿದರೂ ಅಂಥ ಹೆಂಗಸರನ್ನು ಗಂಡಸರು ಸ್ತ್ರೀವಾದಿಗಳೆನ್ನುತ್ತಾರೆ ಎಂದು ಮಾತ್ರ ಆಕೆಗೆ ಗೊತ್ತು. ಈ ಇಬ್ಬರೂ ನಿಘಂಟುಕಾರ್ತಿಯರು ಮುಖ್ಯಧಾರೆಯ ನಿಘಂಟುಗಳು ಅಧಿಕೃತವೆಂದು ಘೋಷಿಸುವ ನಿಲುವುಗಳನ್ನು ಮತ್ತೆ ಮತ್ತೆ ನಿರಾಕರಿಸುತ್ತಾರೆ. ಅಲ್ಲದೆ, ಕೆಲವೊಮ್ಮೆ ಗೇಲಿಗೂ ಗುರಿಮಾಡುತ್ತಾರೆ. ಕೊನೆಗೂ ‘dick-tionary’ ಇರಲಿ, ‘dictionary’ ಇರಲಿ – ಅವುಗಳ ಉಪಯೋಗ ಏನೂ ಇಲ್ಲ ಎಂದು ಹೇಳುವಂತೆ ತೋರುತ್ತದೆ. ಲೈಂಗಿಕತಾವಾದಿ ಧೋರಣೆಯಂತೆಯೇ ಸ್ತ್ರೀವಾದಿಗಳ ಸಂಪ್ರದಾಯ ಶೀಲತೆಯೂ ವಿಚಿತ್ರವಾಗಿ ತೋರುತ್ತದೆ.

ಸ್ತ್ರೀವಾದಿ ನಿಘಂಟು ರಚನೆಯ ಈಚಿನ ಪ್ರಯತ್ನವೊಂದಿದೆ. ಅದೇ ಮೇರಿ ಡೇಲಿ ಮತ್ತು ಜೇನ್ ಕಪುಟಿ ಅವರ ‘webster’s first intergalactic wickedary of English language’ ಈ ಶೀರ್ಷಿಕೆಯ ಮಹತ್ವ ತಿಳಿಯಬೇಕಾದರೆ ಸಂಯುಕ್ತ ಸಂಸ್ಥಾನಗಳಲ್ಲಿ webster’s ಅಧಿಕೃತ ನಿಘಂಟೆಂದು ಪರಿಗಣಿತವಾಗಿರುವುದು ಗೊತ್ತಿರಬೇಕು. ಇದನ್ನು ಒಬ್ಬ ದೇಶಭಕ್ತ ವಿದ್ವಾಂಸ ನೋಹ್ ವೆಬ್‌ಸ್ಟರ್ ರಚಿಸಿದನು. ಆದರೆ, webster ಎಂಬ ಪದಕ್ಕೆ woman weaver ಎಂಬ ಅರ್ಥವಿದೆ. (-ster ಎಂಬ ಸ್ತ್ರೀಲಿಂಗ ಸೂಚಕ ಪ್ರತ್ಯಯ ಇಂಗ್ಲಿಶ್‌ನಲ್ಲಿದೆ. ಉದಾಗೆ – spinster) ಡೇಲಿ ಮತ್ತು ಕಪುಟಿಯವರು ಪದ ಮತ್ತು ಅರ್ಥಗಳ  ಜಾಲದಲ್ಲಿ ಒಂದು ಊಹಾತ್ಮಕ ಪಯಣವನ್ನು ಕೈಗೊಳ್ಳುತ್ತಾರೆ. ಈ ಜಾಲವು ಹೆಂಗಸರಿಗಾಗಿ ಹೆಂಗಸರೇ ನೇಯ್ದದ್ದು. ಈ ಮಾತನ್ನು ಹೇಳಲು ಕಾರಣವಿದೆ. ‘ಪ್ರಮಾಣಿತ’ ನಿಘಂಟುಗಳು ಸೂಚಿಸುವ ಮತ್ತು ಸಾಮಾನ್ಯ ಬಳಕೆಗಳಿಂದ ತಿಳಿಯುವ ಅರ್ಥಸಾಧ್ಯತೆಗಳಾಚೆಗೆ ಪದಗಳು ಯಾನ ಕೈಗೊಳ್ಳಬಲ್ಲವು ಎಂಬುದನ್ನು ಒಪ್ಪಬೇಕು. ಡೇಲಿ ಮತ್ತು ಕಪುಟಿಯವರು ಹಿಂದೊಮ್ಮೆ ಹೆಂಗಸರಲ್ಲಿ ಅಂತಸ್ಥವಾಗಿದ್ದ ಆಧ್ಯಾತ್ಮಿಕ ಶಕ್ತಿಗಳನ್ನು ಮರಳಿ ಪಡೆದುಕೊಳ್ಳುವ ಕಾರ್ಯ ಯೋಜನೆಯೊಂದನ್ನು ಕೈಗೊಂಡಿದ್ದಾರೆ. (ಈ ಪ್ರಬಂಧದಲ್ಲಿ ಒಂದು ಕಡೆ glamour ಪದಕ್ಕೆ ತಿಳಿಸಿದ ನಿಷ್ಪತ್ತಿಯನ್ನು ನೆನಪಿಸಿಕೊಳ್ಳಿ.)

Womanwords ಎಂಬ ಕೃತಿಯೊಂದು ಈಚೆಗೆ ಪ್ರಕಟಗೊಂಡಿದೆ. ಮಾರ್ಕ್ಸ್‌ವಾದಿ ಚಿಂತಕ ರೇಮಾಂಡ್ ವಿಲಿಯಂಸ್ ರಚಿಸಿದ keywords ಕೃತಿಯಿಂದ ಪ್ರೇರೇಪಿತವಾಗಿರುವುದಾಗಿ ಈ ಕೃತಿಯಲ್ಲಿ ಸೂಚಿಸಲಾಗಿದೆ. ನಿಘಂಟು ರಚನೆಯ ಹಿಂದಿರುವ ರಾಜಕಾರಣವನ್ನು ವಿಲಿಯಂಸ್ ಚೆನ್ನಾಗಿ ಮಂಡಿಸಿದ್ದಾನೆ. ಆತನ ಮಾತನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ – ‘ಇದು ಪದಗಳ ಅರ್ಥಗಳನ್ನು ತಟಸ್ಥ ನೆಲೆಯಿಂದ ನೋಡುವ ಕೆಲಸವಲ್ಲ. ನಿರ್ದಿಷ್ಟ ಸಾಮಾಜಿಕ ಮತ್ತು ಚಾರಿತ್ರಿಕ ಸಂದರ್ಭಗಳಲ್ಲಿ ತಲೆಮಾರಿನಿಂದ ತಲೆಮಾರಿಗೆ ಆಸ್ತಿಯೆಂಬಂತೆ ದಾಟಿ ಬಂದಿರುವ ಪದಕೋಶವನ್ನು ಶೋಧಿಸುವ ಕೆಲಸ. ಇದೊಂದು ಪ್ರಜ್ಞಾಪೂರ್ವಕವಾದ ಮತ್ತು ವಿಮರ್ಶಾತ್ಮಕವಾದ ನೆಲೆಯಲ್ಲಿ ನಡೆಯಬೇಕಾದ ಕೆಲಸ. ಇಲ್ಲಿ ನಿರಂತರತೆಯೊಡನೆ ಪರಿವರ್ತನೆಯನ್ನು ಗಮನಿಸಬೇಕು. ಈ ಪದಗಳನ್ನು ಬಳಸುವ ಮಿಲಿಯಗಟ್ಟಲೆ ಜನರಲ್ಲಿ ಇದು ಕ್ರಿಯಾಶೀಲ ಪದಕೋಶ ಎಂಬ ನಂಬಿಕೆ ನೆಲೆಯೂರಬೇಕಾದರೆ, ಈ ಕೆಲಸ ಅಗತ್ಯ.  ‘ಕ್ರಿಯಾಶೀಲ’ ಎಂದಾಗ ಅದನ್ನು ‘ಕಲಿತುಕೊಳ್ಳಬೇಕಾದ ಪರಂಪರೆ’ ಎಂದಾಗಲೀ, ‘ಒಪ್ಪಿಕೊಳ್ಳಬೇಕಾದ ಸಹಮತ’ ಎಂದಾಗಲೀ ತಿಳಿಯಬಾರದು. ಇದು ಬಳಸಬೇಕಾದ ಪದಕೋಶ. ದಾರಿಗಳನ್ನಿದು ತೋರಿಸಬೇಕಾಗಿದೆ. ಅಗತ್ಯವಾದಾಗ ನಾವು ಪರಿವರ್ತಿಸಬೇಕಾಗಿದೆ. ಆಗ ನಮ್ಮದೇ ಆದ ಭಾಷೆ ಮತ್ತು ಚರಿತ್ರೆಯನ್ನು ನಾವು ನಿರ್ಮಿಸುತ್ತಿರುತ್ತೇವೆ. ಸ್ತ್ರೀವಾದಿ ನಿಘಂಟುಗಳು ಅರ್ಥಗಳನ್ನು ಹೆಂಗಸರಿಗೆ ತಿಳಿಸಿಕೊಡುವಾಗ ಆ ಅರ್ಥಗಳು  ‘ಪ್ರಜ್ಞಾಪೂರ್ವಕ ಮತ್ತು ವಿಮರ್ಶಾತ್ಮಕ’ ನೆಲೆಯಲ್ಲಿ ಇದೆ ಎಂಬುದನ್ನು ತೋರಿಸಿ ಕೊಡುತ್ತವೆ. ಜೊತೆಗೆ ಬದಲಾವಣೆಯ ಸಾಧ್ಯತೆಯನ್ನೂ ಸೂಚಿಸುತ್ತವೆ.