ಸ್ತ್ರೀವಾದಿಗಳು ಮತ್ತು ವ್ಯಾಕರಣ : ತಟಸ್ಥಭಾಷೆ ಎಂಬ ಮಿಥ್ಯಾಕಲ್ಪನೆ

ಇಂಗ್ಲಿಶ್ ಭಾಷೆಯ ಲೈಂಗಿಕತಾವಾದಿ ನೆಲೆಯ ಅತ್ಯುತ್ತಮ ನಿದರ್ಶನವೆಂದರೆ ಅದರ he/man ಬಳಕೆ. ಅದರೆ, ಸಮೂಹವಾಚಿಯಾಗಿ ಪುಲ್ಲಿಂಗ ಸರ್ವನಾಮದ ಬಳಕೆ ಮತ್ತು man (kind) ಮಾದರಿಯ ರಚನೆಗಳು. ಈ ವಲಯದಲ್ಲಿ ಹಲವು ಬದಲಾವಣೆಗಳನ್ನು ಜಾರಿಗೆ ತರಲು ಪ್ರಯತ್ನಗಳು ನಡೆದಿವೆ. ಏಕೆಂದರೆ, ನಮ್ಮ ಲೋಕಗ್ರಹಿಕೆಯ ಮೇಲೆ ಅಜ್ಞಾತವಾದ ಪರಿಣಾಮಗಳನ್ನು ಉಂಟುಮಾಡುವ ಸಾಮರ್ಥ್ಯ ಸರ್ವನಾಮಗಳಿಗೆ ಇದೆ ಎಂದು ಹಲವು ಸ್ತ್ರೀವಾದಿಗಳು ತಿಳಿಯುತ್ತಾರೆ.

ಉದಾಹರಣೆಗೆ ‘ಪ್ರಮಾಣಿತ ಇಂಗ್ಲಿಶ್ ಬಳಕೆಯು ಗಂಡಸರ ಬಗ್ಗೆ ಹೇಳುವಾಗ, ಅವರೇ ಮಾನವಜೀವಿಗಳೆಂದು ಸೂಚಿಸುತ್ತದೆ’ ಎಂದು ಮಿಲ್ಲರ್ ಮತ್ತು ಸ್ವಿಫ್ಟ್ ಹೇಳುತ್ತಾರೆ. ಅಂದರೆ, ಹೆಂಗಸರು ಈ ಮಾನವಜೀವಿತವರ್ಗಕ್ಕೆ ಅಧೀನವಾದ ಉಪವರ್ಗವೆಂದು ಪರಿಗಣಿಸಿ ಬಿಡುತ್ತದೆ. ಪ್ರಮಾಣಿತ ಇಂಗ್ಲಿಶ್ ಮಟ್ಟಿಗೆ ಇದೇನೂ ಕ್ಷುಲ್ಲಕ ವಿಷಯವಲ್ಲ. ಆದ್ದರಿಂದ ಸುಧಾರಣಾವಾದಿಗಳಾದ ಮಿಲ್ಲರ್ ಮತ್ತು ಸ್ವಿಫ್ಟ್ ಅವರಂಥವರು ಲೈಂಗಿಕತಾವಾದಿ ನೆಲೆಯಿಂದ ದೂರವಾದ ಭಾಷೆಯ ಬಳಕೆಯ ಮೂಲಕ ಈ ತಪ್ಪನ್ನು ತಿದ್ದಬೇಕೆಂದು ಬಯಸುತ್ತಾರೆ.

ಲೈಂಗಿಕತಾವಾದಿ ನೆಲೆಯಿಂದ ದೂರವಾದ ಭಾಷೆ ಎಂದು ಹೇಳುವಾಗ ಅದು ತಟಸ್ಥ, ಇಲ್ಲವೇ ಎಲ್ಲ ಜಂಡರ್‌ಗಳನ್ನೂ ಒಳಗೊಳ್ಳುವ ಭಾಷೆ ಎಂದು ಹೇಳಲಾಗಿದೆ. ಅಂದರೆ, ಹೆಂಗಸರನ್ನಾಗಲೀ ಗಂಡಸರನ್ನಾಗಲೀ ಹೊರಗಿಡುವ ವಾಕ್ಯರಚನೆಯನ್ನು ಬದಲಾಯಿಸಿ ಅದು ಒಳಗೊಳ್ಳುವ ಬಗೆಯಲ್ಲಿ ಇರುವಂತೆ ಮರುರೂಪಿಸಬೇಕಾಗುತ್ತದೆ. ಆಗ mankind ಬದಲು humanity, craftsman ಬದಲು artisan, forefathers ಬದಲು ancestors, spaceman ಬದಲು astronaut – ಗಳನ್ನು ಬಳಸಬೇಕಾಗುತ್ತದೆ. ಆಗ ಸರ್ವನಾಮಗಳನ್ನು ಜೊತೆ ಜೊತೆಯಾಗಿ, ಅಂದರೆ, he or she, her or his, ಬಗೆಯಲ್ಲಿ ಬಳಸಬೇಕಾಗುತ್ತದೆ. ಅಥವಾ ಏಕವಚನದ ಅರ್ಥದಲ್ಲಿ they ಎಂಬುದನ್ನು ಬಳಸಬೇಕು. (ಯಾರೂ ಬೇಕೆಂದು ತಾವೇ ಲೈಂಗಿಕತಾವಾದಿ ನೆಲೆಯ ಭಾಷೆಯನ್ನು ಬಳಸುವುದಿಲ್ಲ).  ಅಥವಾ ಬದಲಿಗೆ, ವಾಕ್ಯರಚನೆಯ ರೀತಿಯನ್ನು ಬದಲಾಯಿಸಿ ಸರ್ವನಾಮಗಳ ಸಮಸ್ಯೆಯನ್ನು ನಿವಾರಿಸಬಹುದು. (ಉದಾಹರಣೆಗೆ, pick up baby when he cries ಎನ್ನುವ ಬದಲು always pickup a crying baby ಎಂದು ಹೇಳಬಹುದು) ಇಲ್ಲವೇ, ಬಹುವಚನ ರೂಪಗಳನ್ನು ಬಳಸಬಹುದು. (pick up babies when they cry)

ಕಳೆದ ಹಲವು ವರ್ಷಗಳಿಂದೀಚೆಗೆ ವ್ಯವಹಾರಗಳಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಪುಸ್ತಕ ಪ್ರಕಟಣೆಯಲ್ಲಿ (ಅದರಲ್ಲೂ ಶೈಕ್ಷಣಿಕ ಪುಸ್ತಕಗಳಲ್ಲಿ) ಲೈಂಗಿಕತಾವಾದಿ ನೆಲೆಯಿಂದ ಹೊರಗಿರುವ ಭಾಷೆಯನ್ನು ಬಳಸಬೇಕೆಂದು ಸಲಹೆಗಳು ಮಂಡಿತವಾಗುತ್ತಿವೆ. ಹಾಗೇ ಮಾಡಬೇಕೆಂದು ಶರತ್ತು ವಿಧಿಸುವುದು ಆಗಿಲ್ಲ. ಸಂಯುಕ್ತ ಸಂಸ್ಥಾನಗಳ ಶಾಲೆಗಳಲ್ಲಿ ನಿಗದಿಗೊಂಡ ವ್ಯಾಕರಣ ಮತ್ತು ಭಾಷಾಬಳಕೆಯ ಪಠ್ಯ ಪುಸ್ತಕಗಳನ್ನು ೧೯೭೫ ರಲ್ಲಿ ಆನ್ ಬಾಡಿನ್ ಸಮೀಕ್ಷೆ ಮಾಡಿದಳು. ಸಮೂಹವಾಚಿ ಪುಲ್ಲಿಂಗ ರೂಪವನ್ನು ತಿಳಿಸಿಕೊಡುವಾಗ ಈ ಪುಸ್ತಕಗಳು ಯಾವ ಸಮಸ್ಯೆಯನ್ನೂ ಎದುರಿಸಿದಂತೆ ಆಕೆಗೆ ತೋರಲಿಲ್ಲ. ಆದರೆ ಅವುಗಳ ಬಳಕೆಯ ಬಗೆಗೆ ಹೇಳಿದ ನಿಯಮಗಳಿಗೆ ತಾರ್ಕಿಕ ಆಧಾರಗಳಿರಲಿಲ್ಲ. (ತನ್ನ ಲೇಖನದಲ್ಲಿ ಆಕೆ ಇನ್ನೂರು ವರ್ಷಗಳ ಹಿಂದೆ ಈ ನಿಯಮಗಳನ್ನು ನಿರೂಪಿಸುವಾಗ ಅವುಗಳು ಭಾಷೆಯ ರಚನೆಯ ಅವಿನಾ ಭಾಗಗಳೆಂದು ಹೇಳುವ ಪದ್ಧತಿ ಇತ್ತೆಂದು ತಿಳಿಸುತ್ತಾಳೆ. ಅಲ್ಲದೆ, ಪುಲ್ಲಿಂಗವು ಶ್ರೇಷ್ಠ ಜಂಡರ್ ಆದ್ದರಿಂದ ನಿಸರ್ಗದಲ್ಲಿರುವಂತೆ ವ್ಯಾಕರಣದಲ್ಲೂ ಮಹತ್ವವನ್ನು ಪಡೆಯಬೇಕೆಂದು ಆ ವ್ಯಾಕರಣಗಳು ವಾದಿಸುತ್ತಿದ್ದವು) ಆದರೆ, ಈಗ ಪರಿಸ್ಥಿತಿ ಹಿಂದಿನಂತಿಲ್ಲ.

ಬಾಡಿನ್ ಸಮೀಕ್ಷೆ ನಡೆಸಿದ ಹದಿನೈದು ವರ್ಷಗಳ ಅನಂತರದಲ್ಲಿ ನೋಡಿದರೆ, ಪಠ್ಯಪುಸ್ತಕಗಳು ಲೈಂಗಿಕತಾವಾದಿ ನೆಲೆಯಿಂದ ದೂರವುಳಿದ ಭಾಷೆಯನ್ನು ಬಳಸಲು ಸೂಚಿಸುವುದು ಕಂಡು ಬಂದಿದೆ. ಅದರಲ್ಲೂ ಬಹುವಚನ ಬಳಕೆಗೆ ಒತ್ತು ನೀಡಲಾಗುತ್ತಿದೆ. ಸಂಯುಕ್ತ ಸಂಸ್ಥಾನಗಳ ಕಾಲೆಜ್ ಲೇಖನ ಕೈಪಿಡಿಗಳನ್ನು ಸಮೀಕ್ಷಿಸಿದ ವರದಿಯೊಂದು ಪ್ರಕಟವಾಗಿದೆ. (ಈ ಪುಸ್ತಕಗಳನ್ನು ಬೇಗ ಬೇಗ ಪರಿಷ್ಕರಿಸುತ್ತಾರೆ. ಹಾಗಾಗಿ, ಬದಲಾಗುತ್ತಿರುವ ಪ್ರಮಾಣಗಳು ಯಾವುವು ಎಂಬುದನ್ನು ತಿಳಿಯಲು ಒಳ್ಳೆಯ ಆಕರಗಳಾಗಿವೆ). ಈ ಸಮೀಕ್ಷೆ ನಡೆಸಿದಾಕೆ ಶರೂನ್ ಜುಬೇರ್. ಆಕೆ ಹೇಳುವಂತೆ ಈ ಪಠ್ಯಗಳು  ಪ್ರಭಾವಶಾಲಿಯಾಗಿವೆ. ಇವುಗಳ ಕರ್ತೃಗಳು ಮೊದಲಮೊದಲು ಸ್ತ್ರೀವಾದಿಗಳು ಸಮೂಹವಾಚಿಯಾಗಿ he ಪದವನ್ನು ಬಳಸುವ ಬಗ್ಗೆ ಎತ್ತುತ್ತಿದ್ದ ತಕರಾರುಗಳನ್ನು ದಾಖಲಿಸುತ್ತಿದ್ದರು. ಅನಂತರ ಬರೆಯುವವರು ಲೈಂಗಿಕತಾವಾದಿಯಲ್ಲದ ಭಾಷೆಯನ್ನು ಬಳಸುವ ಆಯ್ಕೆಯ ಕಡೆಗೆ ಓಲುವೆ ತೋರಬೇಕೆಂದು ಸಲಹೆ ನೀಡತೊಡಗಿದ್ದಾರೆ. ಕೆಲವೊಮ್ಮೆ ಅಂಥ ಭಾಷೆಯೇ ಸೂಕ್ತ ಎಂದು ಹೇಳಿರುವುದೂ ಉಂಟು.

ನಿಜ, ಈ ಬಗೆಯ ಕೈಪಿಡಿಗಳನ್ನು ಓದಿ ಬರವಣಿಗೆ ಕಲಿತ ಹಲವರು he ಎಂಬ ಸಮೂಹವಾಚಿಯನ್ನು ‘ವ್ಯಾಕರಣದ ನಿಯಮ’ ಎಂದೇ ಈಗಲೂ ತಿಳಿದಿದ್ದಾರೆ. ಸ್ತ್ರೀವಾದಿಗಳ ತಾಳಕ್ಕೆ ಕುಣಿಯಲು ಈ ರೂಪಗಳನ್ನೆಲ್ಲ ಬದಲಿಸುವ ಅಗತ್ಯ ಇಲ್ಲವೆಂದು ಹೇಳುತ್ತಿದ್ದಾರೆ. ಅಂಥವರ ಬರವಣಿಗೆಯಲ್ಲೂ ಲೈಂಗಿಕತಾವಾದಿ ನೆಲೆಗಳು ಇರಕೂಡದು ಎನ್ನುವ ಒತ್ತಾಯವು ಕೆಲವು ವಲಯಗಳಿಂದ ಮೂಡಿ ಬರುತ್ತಿರಬಹುದು. ವಾಸ್ತವವಾಗಿ ಇವರಿಗೆಲ್ಲ ಪದಗಳ ಚರಿತ್ರೆ ಸರಿಯಾಗಿ ಗೊತ್ತಿರುವುದಿಲ್ಲ. ಸ್ತ್ರೀವಾದಿಗಳನ್ನು ಹತ್ತಿಕ್ಕುವವರ ಇಚ್ಛೆಗನುಗುಣವಾಗಿ ಈ ಬಗೆಯ ನಿಯಮಗಳನ್ನು ಮಾಡಲಾಗಿದೆ ಎಂಬುದನ್ನು ಅವರು ಅರಿತಿಲ್ಲ.

ನನ್ನ ಅಭಿಪ್ರಾಯದಲ್ಲಿ ಬಾಡಿನ್ ಒಂದು ಸಂಗತಿಯನ್ನು ಖಚಿತವಾಗಿ ಗುರುತಿಸುತ್ತಾಳೆ. ಅದೆಂದರೆ, ಬ್ರಿಟಿಶರಿಗಿಂತ ಅಮೆರಿಕನ್ನರು ಇಂಥ ವಿಚಾರಗಳಲ್ಲಿ ಹೆಚ್ಚು ಸಂಪ್ರದಾಯಶೀಲರು. ಸಾಂಸ್ಥಿಕ ಹಂತದ ಪ್ರಯತ್ನಗಳ (ಕೈಪಿಡಿಗಳು, ವ್ಯಾಕರಣಗಳು, ಪಠ್ಯಪುಸ್ತಕಗಳು, ಪುಸ್ತಕ ಪ್ರಕಟಣೆಕಾರರ ಕೈಪಿಡಿಗಳು) ಹಿಂದೆ  ಸ್ತ್ರೀವಾದಿ ಸುಧಾರಣೆಗಳಿಗೆ ಇಂಗ್ಲಿಶ್ ಭಾಷಿಕರು ತೋರುವ ಪ್ರತಿರೋಧಗಳು ಕೆಲಸ ಮಾಡುತ್ತಿರುವಂತೆ ತೋರುತ್ತದೆ.

ಹೀಗೆ ಪ್ರತಿರೋಧ ತೋರುವವರು ‘ಭಾಷೆ ಏನು ಮಹಾ! ಅದೊಂದು ಕ್ಷುಲ್ಲಕ ಸಂಗತಿ’ ಎಂಬ ನಿಲುವನ್ನು ಹೊಂದಿರುತ್ತಾರೆ. ಹಾಗಾಗಿ ಅವರ ಪ್ರಕಾರ ಭಾಷಿಕ ಸುಧಾರಣೆಗಳನ್ನು ತರುವ ಶ್ರಮವೆಲ್ಲ ವ್ಯರ್ಥ. ಈ ಪ್ರತಿರೋಧಕ್ಕೆ ಎದುರಾಗಿ ಹೂಡುವ ವಾದಗಳಿಗೆ ಎರಡು ನೆಲೆಗಳಿರುತ್ತವೆ. ಒಂದು, ಭಾಷಿಕ ಆಯ್ಕೆಗಳ ಸಾಂಕೇತಿಕ ಮೌಲ್ಯವನ್ನು ವಿವರಿಸುವದು. (ಲೈಂಗಿಕತಾವಾದಿ ಭಾಷೆಯು ಹೆಂಗಸರನ್ನು ಹೀನಾಯ ಗೊಳಿಸುತ್ತದೆ) ಇಲ್ಲವೇ ಎರಡು, ಇಂಥ ಬಳಕೆಗಳು ನಮ್ಮ ಗ್ರಹಿಕೆಗಳನ್ನು ಪ್ರಭಾವಿಸುವ ಬಗೆಯನ್ನು ವಿವರಿಸುವುದು. ಇದೊಂದು ವಿವಾದದ ಸಂಗತಿಯಾಗಿದ್ದರೂ, ಈ ಮಾರ್ಗವನ್ನು ಹಿಡಿಯುವುದು ತಪ್ಪಲ್ಲ.(ಲೈಂಗಿಕತಾವಾದಿ ಭಾಷೆಯು ಖಚಿತವಲ್ಲ, ಮತ್ತು ದಾರಿ ತಪ್ಪಿಸುವಂಥದು ಎಂದು ವಾದಿಸುವುದು) ಬಹುಪಾಲು ಸ್ತ್ರೀವಾದಿಗಳು ಈ ಎರಡೂ ದಾರಿಗಳನ್ನು ಹಿಡಿಯ ಬಯಸುತ್ತಾರೆ. ಅವೆರಡರ ನಡುವೆ ಸಂಬಂಧವಿದೆ ಎಂದು ತಿಳಿಯುತ್ತಾರೆ.

ನಾವೀಗಾಗಲೇ ಗಮನಿಸಿರುವಂತೆ ಮಿಲ್ಲರ್ ಮತ್ತು ಸ್ವಿಫ್ಟ್ ರಂತಹ ಸುಧಾರಣಾವಾದಿಗಳು ಲೈಂಗಿಕತಾವಾದಿ ಭಾಷೆಯು ಖಚಿತವಾಗಿರುವುದಿಲ್ಲ ಮತ್ತು ದಾರಿ ತಪ್ಪಿಸುತ್ತದೆ ಎಂಬ ನೆಲೆಯ ಮೇಲೆ ಒತ್ತು ಕೊಡಬಯಸುತ್ತಾರೆ. ಈ ಊಹಾಕಲ್ಪನೆಯನ್ನು ಸಮರ್ಥಿಸುವ ಹಲವು ಪ್ರಾಯೋಗಿಕ ಅಧ್ಯಯನಗಳನ್ನು ಭಾಷಾಶಾಸ್ತ್ರಾಜ್ಞರು ಮತ್ತು ಮನಃಶಾಸ್ತ್ರಜ್ಞರು ಕೈಗೊಂಡಿದ್ದಾರೆ. ಅವರ ಪ್ರಕಾರ ಇಂದಿನ ಇಂಗ್ಲಿಶ್ ಭಾಷಿಕರು ಸಮೂಹವಾಚಿ ಪುಲ್ಲಿಂಗ ಸರ್ವನಾಮಗಳನ್ನು ಸಮೂಹವಾಚಿ ಅರ್ಥದಲ್ಲಿ ಗ್ರಹಿಸದೆ, ಪುಲ್ಲಿಂಗ ರೂಪವೆಂದೇ ಗ್ರಹಿಸುತ್ತಾರೆ. ಸಮೂಹವಾಚಿಯಾಗಿ manಪದ ಬಳಕೆಯಾಗುವ ಬಗೆಯನ್ನು ಅಧ್ಯಯನ ಮಾಡಿದ ಪ್ರಯೋಗಗಳನ್ನು ಬಿಟ್ಟರೆ, ಉಳಿದವುಗಳ ಫಲಿತಾಂಶ ಗೆರೆ ಕೊರೆದಂತೆ ಸ್ಪಷ್ಟವಾಗಿಲ್ಲವೆಂಬುದನ್ನು ಇಲ್ಲಿ ಗಮನಿಸಬೇಕು.

ಭಾಷೆಯನ್ನು ಕುರಿತ ನನ್ನ ದೃಷ್ಟಿಕೋನದಂತೆ ಅರ್ಥವೆಂಬುದು ನಿಶ್ಚಿತವಲ್ಲ. ಸಂದರ್ಭಾನುಸಾರಿಯಾಗಿ ಬದಲಾಗುವಂಥದು. ಕೆಲವು ಸ್ತ್ರೀವಾದಿಗಳು he ಇಲ್ಲವೇ manಗೆ ನೀಡುವ ಮಹತ್ವವನ್ನು ನಾನು ಒಪ್ಪುವುದಿಲ್ಲ. ಅದೇನೂ ಅಷ್ಟು ಮುಖ್ಯವಾದುದಲ್ಲ. ಇಂಥ  ಪದಗಳು ನಿರ್ವಹಿಸುವ ಸಾಂಕೇತಿಕ ಮೌಲ್ಯವು ಅದಕ್ಕಿಂತ ಮುಖ್ಯವೆಂದು ನನ್ನ ತಿಳುವಳಿಕೆ. ಭಾಷೆಯಲ್ಲಿ ಖಚಿತತೆ ಎಂಬುದಕ್ಕೆ ಅಷ್ಟೇನೂ ಮಹತ್ವವಿಲ್ಲ ಎಂದು ಸದ್ಯದಲ್ಲೇ ವಾದಿಸಲಿದ್ದೇನೆ. ಅದಿರಲಿ. ಸ್ತ್ರೀವಾದಿ ಸುಧಾರಣಾಕಾರರು ಖಚಿತತೆಗೆ ಮಹತ್ವ ನೀಡುವ ಮೂಲಕ ತಮಗೇ ಗೊತ್ತಿಲ್ಲದಂತೆ ಖಚಿತತೆಯ ಶೋಧ ನಿರುಪಯುಕ್ತವಾದುದೆಂದು ತೋರಿಸಿ ಬಿಟ್ಟಿದ್ದಾರೆ.

ಹಾಗಿದ್ದಲ್ಲಿ, ವ್ಯಾಕರಣವನ್ನು ಕುರಿತಂತೆ ಇರುವ ಸಾಂಕೇತಿಕ ಮೌಲ್ಯ ವಿಧಾನವಾದರೂ ಯಾವುದು? ಡಗ್ಲಸ್ ಹಾಫ್‌ಸ್ಟಡ್‌ಟರ್ ಒಂದು ಪ್ರಬಂಧ ಬರೆದಿದ್ದಾನೆ. Person paper on purity in language ಎಂಬುದು ಅದರ ಶೀರ್ಷಿಕೆ. ಇದರಲ್ಲಿ ಲೈಂಗಿಕತಾವಾದಿ ಭಾಷೆಯು ಹೆಂಗಸರನ್ನು ಸಾಂಕೇತಿಕ ನೆಲೆಯಲ್ಲಿ ಹೀನಾಯಗೊಳಿಸುತ್ತದೆಂದು ವಾದಿಸಿದ್ದಾನೆ. ಅದಕ್ಕಾಗಿ ಒಂದು ಹೋಲಿಕೆಯನ್ನು ನೀಡಲಾಗಿದೆ. ಸಂಕಥನಗಳಲ್ಲಿ ಬರುವ man ಮತ್ತು woman ಎಂಬ ಪದಗಳ ಬದಲು white ಮತ್ತು black ಎಂಬ ಪದಗಳನ್ನು ಬಳಸಿದರೆ ಹೇಗಿರುತ್ತದೆ ನೋಡಿ ಎಂದು ತೋರಿಸಿದ್ದಾನೆ. ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ ನುಡಿದ ಬಹು ಪ್ರಖ್ಯಾತವಾದ ವಾಕ್ಯದಲ್ಲಿ ಈ ಪ್ರಯೋಗ ಮಾಡಿದ್ದಾನೆ. ಆ ವಾಕ್ಯವನ್ನೀಗ ‘one small step for a white ; one giant leap for white kind’ ಎಂದು ಬದಲಾಯಿಸಬೇಕಾಗುತ್ತದೆ. ಇಲ್ಲಿ ಎದ್ದು ಕಾಣುವ ಜನಾಂಗವಾದ ಕಣ್ಣಿಗೆ ರಾಚುವುದಿಲ್ಲವೇ? ಸಮೂಹವಾಚಿ ಪುಲ್ಲಿಂಗ ರೂಪಗಳಿಂದ ಹೆಂಗಸರನ್ನು ದೂರವಿಡುವ ಬಗೆಯು ಇಂಥದೇ ಪ್ರತಿಕ್ರಿಯೆಯನ್ನು ಏಕೆ ಪಡೆಯಬಾರದು?

ಲೈಂಗಿಕತಾವಾದ ಮತ್ತು ಜನಾಂಗವಾದಗಳನ್ನು ಹೀಗೆ ಹೋಲಿಸುವುದರಿಂದ ಹೆಚ್ಚಿನ ಪ್ರಯೋಜನವೇನೂ ಇಲ್ಲ. ಆದರೆ, ಈ ಪ್ರಸಂಗದಲ್ಲಿ ಒಂದು ಮುಖ್ಯ ಸಂಗತಿಯನ್ನು ಗುರುತಿಸಲಾಗಿದೆ. ವ್ಯಕ್ತಿಗಳು ಹೇಗೇ ವ್ಯಾಖ್ಯಾನಿಸಲಿ, ಸಮೂಹವಾಚಿ man ಎಂಬುದು ಗಂಡಸರ  ಮೇಲ್ಮೆಯನ್ನು ಎತ್ತಿ ಹಿಡಿಯುವುದಂತೂ ನಿಜ. ಇದು ಸಾಂಕೇತಿಕವಾಗಿದ್ದರೂ ಅಲ್ಲಗಳೆಯುವಂಥದ್ದಲ್ಲ. ಲೈಂಗಿಕತಾವಾದಿಯಲ್ಲದ ಭಾಷೆಯನ್ನು ಬಳಸುವ ಮೂಲಕ ಕೊನೆಯ ಪಕ್ಷ ಗಂಡಸರೇ ಮಾನವಜೀವಿವರ್ಗದಲ್ಲಿ ಪ್ರಮುಖರು ಮತ್ತು ಅವರೇ ಪ್ರಮಾಣ ನೆಲೆಯ ಪ್ರತಿನಿಧಿಗಳು ಎಂದು ಹೇಳುವುದನ್ನಾದರೂ ತಪ್ಪಿಸಬಹುದು.

ಇದೇ ವೇಳೆಗೆ ಜನರು ಹೆಂಗಸರ ಸ್ಥಿತಿಗತಿಗಳ ಬಗ್ಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುವಂತೆ ಮಾಡಲು ಸಾಧ್ಯವೇ ಎಂಬುದು ಬಗೆಹರಿಯಲಾಗದ ಪ್ರಶ್ನೆ. ಅಮೆರಿಕದ ಸುಪ್ರೀಂಕೋರ್ಟು ಮಿಸೋರಿ ರಾಜ್ಯದಲ್ಲಿ ಹೆಂಗಸರಿಗೆ ಗರ್ಭಪಾತದ ಹಕ್ಕನ್ನು ನಿರಾಕರಿಸಲು ಜಾರಿಗೆ ತಂದಿದ್ದ ಕಾನೂನನ್ನು ಜುಲೈ ೧೯೮೯ ರಲ್ಲಿ ಎತ್ತಿ ಹಿಡಿದಾಗ ಈ ಮೇಲಿನ ಸಮಸ್ಯೆ ಢಾಳಾಗಿ ಕಾಣಿಸಿಕೊಂಡಿತು. ಹೆಂಗಸರಿಗೆ ಇಂಥ ಹಕ್ಕು ಇರಬೇಕೆಂದು ಹೋರಾಟ ಮಾಡುತ್ತಿದ್ದ NARAL ಎಂಬ ಸಂಸ್ಥೆಯು ನೂಯಾರ್ಕ್ ಟೈಮ್ಸ್‌ನಲ್ಲಿ ಒಂದು ಪುಟದಷ್ಟು ದೊಡ್ಡದಾದ ಜಾಹೀರಾತನ್ನು ನೀಡಿತು. ಈ ಜಾಹಿರಾತಿನ ಪಠ್ಯಭಾಗ ಹೀಗಿತ್ತು: ಜುಲೈ ೩ರಂದು ಅಮೇರಿಕನ್ನರು ತಮ್ಮ ಮೂಲಭೂತ ಸ್ವಾತಂತ್ರ್ಯವೊಂದನ್ನು ಕಳೆದುಕೊಂಡರು. ಆಯ್ಕೆ ಮಾಡಿಕೊಳ್ಳುವ ಈ ಹಕ್ಕನ್ನು ಮರಳಿ ಗೆದ್ದುಕೊಳ್ಳುವುದು ನಿಮಗೆ ಬಿಟ್ಟಿದ್ದು’. ಪಠ್ಯದ ಮುಂದುವರೆದ ಭಾಗದಲ್ಲಿ (‘ಗರ್ಭಪಾತವನ್ನು ಮಾಡಿಸಿಕೊಳ್ಳಬೇಕೋ ಅಥವಾ ಬೇಡವೋ ಎಂಬ ಆ ವೈಯಕ್ತಿಕ ಆಯ್ಕೆಯನ್ನು ಮಾಡಿಕೊಳ್ಳುವ ನೆಲೆಯೊಳಗೆ ತಲೆತೂರಿಸಲು ರಾಜಕಾರಣಿಗಳಿಗೆ ಸುಪ್ರೀಂಕೋರ್ಟಿನ ತೀರ್ಪು ಅವಕಾಶವನ್ನು ಕಲ್ಪಿಸಿದೆ’).

NARAL ಈ ಜಾಹಿರಾತಿನಲ್ಲಿ ಬೇಕೆಂತಲೇ woman ಪದದ ಬದಲು ಲೈಂಗಿಕವಾಗಿ ತಟಸ್ಥವಾದ American ಪದವನ್ನು ಬಳಸಿದೆ. ಸಂದರ್ಭನುಸಾರ ಅರ್ಥ ಸ್ಪಷ್ಟವಾಗುತ್ತದೆ. ಇಲ್ಲಿ ಅಮೆರಿಕನ್ ಎಂದರೆ ಅಮೆರಿಕದ ಹೆಂಗಸರು ಎಂದೇ ಅರ್ಥ. ಏಕೆಂzರೆ, ಗರ್ಭಪಾತದ ಬಗ್ಗೆ ಅತ್ಯಂತ ‘ವೈಯಕ್ತಿಕ ನೆಲೆಯ ಆಯ್ಕೆಯನ್ನು ಮಾಡಬೇಕಾದ ಅಮೆರಿಕನ್ನರು’ ಅಮೆರಿಕದ ಹೆಂಗಸರೇ ಹೊರತು ಗಂಡಸರಲ್ಲ. ನನ್ನ ದೃಷ್ಟಿಯಲ್ಲಿ ಹೀಗೆ ವಾಗ್ವೈಖರಿಯ ತಂತ್ರಗಳನ್ನು ಅನುಸರಿಸುವುದೇ ಸರಿಯಾದದ್ದು. ಏಕೆಂದರೆ, ಅದರಿಂದ ಓದಿದವರು ಕಣ್ಣುಜ್ಜಿಕೊಂಡು ಜಾಗ್ರತರಾಗುತ್ತಾರೆ. ಇದರಿಂದ ಇನ್ನೂ ಒಂದು ಪ್ರಯೋಜನವಿದೆ. ಗರ್ಭಪಾತವನ್ನು ವಿರೋಧಿಸುವವರು ದೇಶದ್ರೋಹಿಗಳೆಂದೂ, ಪ್ರಚಲಿತ ಅಮೆರಿಕನ್ ಮೌಲ್ಯಗಳಿಗೆ ಹೊಂದಿಕೊಳ್ಳುವವರಲ್ಲವೆಂದೂ ಸೂಚ್ಯವಾಗಿ ಹೇಳಿದಂತಾಯಿತು. ಮುಖ್ಯವಾಗಿ ಹೆಂಗಸರೂ ಅಮೆರಿಕನ್ನರೇ ಎನ್ನುವುದನ್ನು ತೋರಿಸಿದಂತಾಯಿತು. ಸಂಯುಕ್ತ ಸಂಸ್ಥಾನಗಳ ಸಂವಿಧಾನವು ಅಮೆರಿಕದ ನಾಗರಿಕರಿಗೆ ನೀಡಿರುವ ಸ್ವಾತಂತ್ರ್ಯ ಮತ್ತು ಹಕ್ಕುಗಳಿಂದ ಹೆಂಗಸರು ವಂಚಿತರಾಗಬಾರದೆಂದು ತಿಳಿಸಿದಂತಾಯಿತು.

ಒಂದು ವೇಳೆ ಜಾಹಿರಾತಿನಲ್ಲಿ ಹೆಂಗಸಿನ ಚಿತ್ರವಿದ್ದಿದ್ದರೆ, ಆಗ Americans ಎಂಬ ಪದದ ಬಳಕೆ ಮಾಡುವ ಭಾಷಿಕ ತಂತ್ರಗಾರಿಕೆ ನಿರುಪಯುಕ್ತವಾಗುತ್ತಿತ್ತು. ನ್ಯೂಯಾರ್ಕ್ ಟೈಮ್ಸ್‌ನ ಓದುಗರಿಗೆ ಹೆಂಗಸರ ಹಕ್ಕುಗಳಿಗೆ ಧಕ್ಕೆಯೊದಗಿದರೆ ಅದು ಅಮೆರಿಕನ್ನರ ಹಕ್ಕುಗಳಿಗೆ ಧಕ್ಕೆಯೊದಗಿದಂತೆ ಎಂದು ಗ್ರಹಿಸಲು NARAL ಸೂಚಿಸುತ್ತಿದೆ. ಪರೋಕ್ಷವಾಗಿ ಅಮೆರಿಕನ್ನರು ಎಂಬ ಗುಂಪಿನಲ್ಲಿ ಹೆಂಗಸರೂ ಸದಸ್ಯರಾಗಿದ್ದಾರೆಂಬ ಸಂಗತಿಯನ್ನು ಗುರುತಿಸಿ ಒಪ್ಪುವಲ್ಲಿ ಸುಪ್ರೀಂಕೋರ್ಟ್ ತೀರ್ಪು ಸೋತಿದೆ ಎಂದೂ ಹೇಳಿದಂತಾಗಿದೆ. ಒಂದು ವೇಳೆ American ಮತ್ತು American woman – ಇವೆರಡೂ ತಂತಾನೇ ಸಮಾನ ನೆಲೆಯನ್ನು ಹೊಂದಿವೆ ಎಂಬ ಅನಿಸಿಕೆ ಮೂಡುವಂತಿದ್ದರೆ ಜಾಹಿರಾತಿನ ಸಂದೇಶ ನಿರುಪಯುಕ್ತವಾಗುತ್ತಿತ್ತು. (ಕೆಲವು ತಿಂಗಳ ಬಳಿಕ ಅಧ್ಯಕ್ಷ ಜಾರ್ಜ್ ಬುಶ್ ಅವರು woman ಮತ್ತು American citizens- ಇವೆರಡೂ ಸಮಾನಾರ್ಥಕಗಳಲ್ಲವೆಂದು ಸ್ಪಷ್ಟ ಪಡಿಸಿದರು. ಪನಾಮ ದೇಶದ ಮೇಲೆ ಸಂಯುಕ್ತ ಸಂಸ್ಥಾನ ದಾಳಿಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದ ಅಧ್ಯಕ್ಷರು ‘ಒಬ್ಬ ಅಮೆರಿಕದ ನಾಗರಿಕನ ಹೆಂಡತಿಯ ಮೇಲೆ’ ದಾಳಿ ನಡೆದರೆ ತಾವು ಅದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದರು. ಇಲ್ಲಿ ಉಲ್ಲೇಖಿಸಲಾದ ದಾಳಿಗೊಳಗಾದ ಹೆಂಗಸು ಅಮೆರಿಕನ್ ಆಗಿಲ್ಲದೆಯೂ ಇರಬಹುದೆಂಬ ಪುರಾವೆಗಳನ್ನು ಹುಡುಕಲು ನಾನು ನಡೆಸಿದ ಪ್ರಯತ್ನಗಳೆಲ್ಲ ವ್ಯರ್ಥವಾದವು)

ಲೈಂಗಿಕತಾವಾದಿಯಲ್ಲದ ಭಾಷೆಯನ್ನು ಪ್ರಮಾಣಬದ್ಧ ನೆಲೆಯಲ್ಲಿ ಬಳಸುವುದಕ್ಕೆ NARAL ಜಾಹಿರಾತು ಒಂದು ಉದಾಹರಣೆ. ಆದರೆ, ಒಂದು ವಿಷಯವನ್ನು ತಿಳಿಸಿಹೇಳಲು ಸಾಮಾನ್ಯವಾಗಿ ಯಾವ ಸಂದರ್ಭಗಳಲ್ಲಿ ಹೆಂಗಸರನ್ನು ಕುರಿತು ಯೋಚಿಸುವುದಿಲ್ಲವೋ, (ಎಂದರೆ, ಅವರೂ ಸಾಂವಿಧಾನಿಕ ಹಕ್ಕುಗಳಿಗೆ ವಾರಸುದಾರರೆಂದು ತಿಳಿಯುವುದು) ಅಂಥ ಸಂದರ್ಭಗಳಲ್ಲಿ ಹೆಂಗಸರ ಬಗ್ಗೆ ಚಿಂತಿಸುವಂತೆ ಮಾಡಲು ಇಂಥ ಜಾಹಿರಾತು ನೆರವಾಗುತ್ತದೆ. ಇದು ಗರ್ಭಪಾತವನ್ನು ಕುರಿತ ವಿಷಯವಲ್ಲವಾಗಿದ್ದಿದ್ದರೆ, ಸ್ಪಷ್ಟವಾಗಿ ಹೆಂಗಸರಿಗೆ ಸಂಬಂಧಿಸಿದ್ದೆಂದು ತೀರ್ಮಾನಿಸಲು ಆಗದಿದ್ದಿದ್ದರೆ, ಈ ಜಾಹಿರಾತಿನಿಂದ ಸರಿಯಾದ ಪರಿಣಾಮ ಉಂಟಾಗುತ್ತಿರಲಿಲ್ಲ. ಈಗ ತಾನೇ ನಾನು ಉಲ್ಲೇಖಿಸಿದ ಜಾರ್ಜ್‌ಬುಶ್‌ನ ಮಾತಿನಲ್ಲಿ ತಟಸ್ಥವೆಂದು ತಿಳಿದ ಪದಗಳು (ಉದಾಗೆ, citizen) ಯಾವಾಗಲೂ ಲೈಂಗಿಕತಾವಾದಿ ನಿಲುವನ್ನು ತೊರೆದಿರಲೇ ಬೇಕೆಂದೇನಿಲ್ಲ. ತಟಸ್ಥ ಭಾಷೆಯು ಅದನ್ನು ತಿದ್ದಿ ಬರೆದ ಭಾಷೆಯಷ್ಟು ಕೆರಳಿಸದಿದ್ದರೂ, ಅದು ಹಲವೊಮ್ಮೆ ನಿರುಪಯುಕ್ತವೆನಿಸಬಾರದು. ಏಕೆಂದರೆ, ಆ ಭಾಷೆಯನ್ನು ಓದುವ ಜನರ ಮನಸ್ಸಿನಲ್ಲಿ ಹೆಂಗಸರ ಸ್ಥಿತಿಗತಿಗಳು ಜಾಗ್ರತಗೊಳ್ಳದೆಯೂ ಇರಬಹುದು.

Spaceman ಎಂಬ ಪದವು ಪೂರ್ವಾಗ್ರಹವುಳ್ಳ ಪದಕೋಶದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ಸುಧಾರಣಾವಾದಿಗಳು ತಿಳಿಯುತ್ತಾರೆ. ಏಕೆಂದರೆ, ಅದರಲ್ಲಿ man ಎಂಬ ಪದ ಸೇರ್ಪಡೆಯಾಗಿದೆ. ಆ ಪದಕ್ಕೆ ಎಂದೋ ಏನೇ ಅರ್ಥವಿದ್ದಿರಲಿ, ಇಂದಿನ ಇಂಗ್ಲಿಶ್‌ನಲ್ಲಂತೂ ಅದು ಗಂಡಸನ್ನೇ ಸೂಚಿಸುವುದು. ಬದಲಾಗಿ Astronaut ಎಂಬ ಪದವನ್ನು ಬಳಸಿಬಿಟ್ಟರೆ ಆಗ man ಪದವನ್ನು ಓಡಿಸಿದಂತಾಯಿತು. ಹಾಗೆಯೇ ವ್ರೋವ್ಯವಹಾರಕ್ಕೆ ಹೆಂಗಸನ್ನೂ ಸೇರಿಸಿಕೊಂಡಂತಾಯಿತು.

 ಒಂದು ವೇಳೆ astronaut ಎಂಬ ಪದವನ್ನೂ ಇಂಗ್ಲಿಶ್ ಭಾಷಿಕರು ಅದೊಂದು ಪುಲ್ಲಿಂಗವಾಚಿ ಎಂಬಂತೆ ಬಳಸತೊಡಗಿದರೆ ಆಗ ಸುಧಾರಣಾವಾದಿಗಳ ಸಿದ್ಧಾಂತ ವೇನಾಗುತ್ತದೆ? astronaut ಪದದ ಒಳರಚನೆಯಲ್ಲಿ ಜಂಡರ್ ಸೂಚಕ ಭಾಷಾಂಗವು ಇಲ್ಲವಾದರೂ ಬಳಕೆದಾರರು ಅದನ್ನು ಗಂಡಸರ ಪದವೆಂದು ತಿಳಿಯಬಹುದಲ್ಲ. ಜಾರ್ಜ್ ಬುಶ್‌ನ ಮಾತಿನಲ್ಲಿ ಇದು ಸ್ಪಷ್ಟವಾಗಿದೆ. ಈ ಪದ ಕೂಡಾ ಇದೇ ಗತಿಯನ್ನು ಪಡೆಯುವುದರಲ್ಲಿ ಸಂದೇಹವಿಲ್ಲ. ಹೀಗಾಗುವುದಕ್ಕೂ ವಾಸ್ತವಕ್ಕೂ ಸಂಬಂಧವೇನೂ ಇಲ್ಲ. ಅಂದರೆ, ಹೆಚ್ಚು ಜನ astronaut ಗಳು ಗಂಡಸರೇ ಆಗಿದ್ದು, ಅದೊಂದು ಸಾಹಸವನ್ನು ಬಯಸುವ ವೃತ್ತಿ ಎಂದು ನಂಬಲಾಗಿದೆ. ಜಂಡರ್ ತಟಸ್ಥವಾದ ಪದಗಳನ್ನು ತಟಸ್ಥವಲ್ಲದ ರೀತಿಯಲ್ಲಿ ಬಳಸಿದರೂ (Citizen ಪದವನ್ನು ಬಳಸಿದಂತೆ) ಭಾಷಿಕರ ಸಾಮಾನ್ಯ ತಿಳುವಳಿಕೆಯ  ನೆಲೆಯಲ್ಲಿ ಅದನ್ನು ವಿವರಿಸುವುದು ಸಾಧ್ಯವಾಗುವುದಿಲ್ಲ. ಅವರು ಕೆಲವು ಕೆಲಸಗಳನ್ನು ಗಂಡಸರು, ಮತ್ತೆ ಕೆಲವನ್ನು ಹೆಂಗಸರು ಮಾಡುತ್ತಾರೆಂದು ನಂಬಿರುತ್ತಾರೆ. ಅವರು ವಾಸ್ತವವನ್ನು ಅರಿಯುವಂತೆ ಮಾಡಲು ಇರುವ ದಾರಿ ಒಂದೇ. ಇದನ್ನೇ ಮಿಲ್ಲರ್ ಮತ್ತು ಸ್ವಿಫ್ಟ್ ಸೂಚಿಸಿದ್ದಾರೆ. ಅದೆಂದರೆ ಸಮೂಹವಾಚಿ ಪುಲ್ಲಿಂಗದ ಬಳಕೆಯನ್ನು ಟೀಕಿಸುವುದು. ಅಂದರೆ, ಮಾನವ ಜೀವಿವರ್ಗದ ವಾಪ್ತಿಯು ಗಂಡಸರನ್ನು ಒಳಗೊಂಡು ವಿಶಾಲವಾಗಿದೆ.

ಜಾರ್ಜ್ ಬುಶ್‌ನ ಮಾತಿನಲ್ಲಿ ಇರುವ ನೆಲೆಗಳು ಎಲ್ಲರಿಗೂ ಗೊತ್ತಾಗುವುದಿಲ್ಲ ಎಂದುಕೊಳ್ಳೋಣ. ಆದರೆ, ಸಂಡೇ ಟೈಮ್ಸ್ ಪತ್ರಿಕೆಯಿಂದ ಆಯ್ದ ಈ ಉಲ್ಲೇಖವನ್ನು ನೋಡಿ – ಇದು ನಿರಾಶ್ರಿತರ ಶಿಬಿರವೊಂದನ್ನು ಕುರಿತ ವರದಿಯಾಗಿದೆ- ‘‘ಇಲ್ಲಿ ಯುವ ವಯಸ್ಕರು ಕಡಿಮೆ ಸಂಖ್ಯೆಯಲ್ಲಿರುವುದರಿಂದಾಗಿ ನಿರುತ್ಸಾಹವೇ ಮಡುಗಟ್ಟಿದೆ. ಅವರೆಲ್ಲ ಕೆಲಸಕ್ಕೆ, ಇಲ್ಲವೇ ಕೆಲಸವನ್ನು ಹುಡುಕುತ್ತಾ ಹೊರ ಹೋಗಿದ್ದಾರೆ. ಉಳಿದವರು ವೃದ್ಧರು, ವಿಕಲಾಂಗರು, ಹೆಂಗಸರು ಮತ್ತು ಮಕ್ಕಳು’’ ಅಥವಾ ಗಾರ್ಡಿಯನ್ ಪತ್ರಿಕೆಯಲ್ಲಿ ಬಂದ ನ್ಯಾಯಾಲಯದ ವರದಿಯೊಂದನ್ನು ನೋಡಿ –ವರ್ಣೀಯ ದಕ್ಷಿಣ ಆಫ್ರಿಕದ ಪ್ರಜೆಯೊಬ್ಬ ಜನಾಂಗೀಯ ಟೀಕೆಗೆ ತನ್ನ ನೆರೆಯವರಿಂದ ಗುರಿಯಾದಾಗ, ಆತ ಕೆರಳಿ ಕೈಲಿದ್ದ ಕತ್ತಿಯಿಂದ ನೆರೆಯವನ ಹೆಂಡತಿಯನ್ನು ಕೊಚ್ಚಿ ಹಾಕಿದನೆಂದು ಬರ್ನಿಂಗ್‌ಹ್ಯಾಂ ಕ್ರೌನ್ ಕೋರ್ಟ್‌ಗೆ ನಿನ್ನೆ ವರದಿ ಮಾಡಲಾಯಿತು’ ಇಂಥ ಅಸಂಖ್ಯ ಉದಾಹರಣೆಗಳನ್ನು ಆಯ್ದು ಕೊಡುತ್ತಲೇ ಹೋಗಬಹುದು. ಇವೆಲ್ಲವೂ ಕೇವಲ ಲೈಂಗಿಕತಾವಾದಿ ವಾಸ್ತವದ ಪತ್ರಿಫಲನಗಳು ಮಾತ್ರವಲ್ಲ. ಉದಾಹರಣೆಗೆ ಯಾರೂ ಕೂಡಾ ‘ದಷ್ಟಪುಷ್ಟ ವಯಸ್ಕರು’ ಎಂದ ಕೂಡಲೇ ಅವರನ್ನು ಕೇವಲ ಗಂಡಸರೆಂದು ತೀರ್ಮಾನಿಸಲಾರರು. ಏಕೆಂದರೆ, ಅವರಲ್ಲಿ ಅರ್ಧದಷ್ಟು ಹೆಂಗಸರಿರುತ್ತಾರೆ. ಮೇಲಿನ ವರದಿಯಲ್ಲಿ ವೃದ್ಧ ವಿಕಲಾಂಗ ಮತ್ತು ವಯಸ್ಕರಲ್ಲದ ವ್ಯಕ್ತಿಗಳನ್ನು ದಷ್ಟಪುಷ್ಟ ವಯಸ್ಕರ ವ್ಯಾಪ್ತಿಯಿಂದ ಹೊರಗಿಟ್ಟಿದ್ದು ಸರಿಯೇ ಇದ್ದೀತು. ಆದರೆ, ವಯಸ್ಕ ಎಂದರೆ ವಯಸ್ಕ ಗಂಡಸು ಎಂದಷ್ಟೇ ತೀರ್ಮಾನವಾದ ಹೊರತು ಅದರ ವ್ಯಾಪ್ತಿಯಿಂದ ಹೆಂಗಸರನ್ನು ಹೊರಗಿರಿಸಲು ಬರುವುದಿಲ್ಲ. ಎರಡನೆಯ ಉದಾಹರಣೆಯಲ್ಲಿ, ಕೊಲೆಯಾದ ಹೆಂಗಸು ದಾಳಿ ಮಾಡಿದ ವ್ಯಕ್ತಿಯ ನೆರೆಮನೆಯಲ್ಲಿ ವಾಸ ಮಾಡುತ್ತಿದ್ದಳೆಂಬುದು ಖಚಿತವಾಗಿದೆ. ಆದರೆ, ಆಕೆಯನ್ನು ‘his next door neighbour’ಎಂದು ಉಲ್ಲೇಖಿಸದೆ ‘his next door neighbours’ wife’ ಎಂದೇಕೆ ಉಲ್ಲೇಖಿಸಲಾಗಿದೆ?

astronaut ಮತ್ತು artisan ಎಂಬ ಪದಗಳು ಬೇರೆ ಬೇರೆ ಯಾವುದೋ ಕಾರಣಗಳಿಂದ ಗಂಡಸರನ್ನು ಸೂಚಿಸುತ್ತದೆಯೇ ಹೊರತು ಹೆಂಗಸರನ್ನಲ್ಲ ಎಂದು ಸದ್ಯ ತಿಳಿಯೋಣ. ಆದರೆ, ಇದೇ ಗತಿ adult, neighbour ಮತ್ತು citizen ಪದಗಳಿಗೂ ಒದಗಿದರೆ, ಆಗೇನು ಮಾಡುವುದು? ಅಂದರೆ, man ಪದವನ್ನು ಕೈ ಬಿಡುವ ಮೇಲು ಮೇಲಿನ ಬದಲಾವಣೆಯಿಂದ ಹೆಚ್ಚಿನ ಪ್ರಯೋಜನವೇನೂ ಆಗುವುದಿಲ್ಲ. ಅದರಿಂದ, ಭಾಷಿಕ ‘ತಟಸ್ಥತೆ’ಯು ಸಾಧ್ಯವಾಗುವುದಿಲ್ಲ.

ಇಲ್ಲಿಯೇ ನಾವು ಲಿಂಗತಟಸ್ಥ ಸರ್ವನಾಮ ರೂಪವಾದ person (chairperson, sopkesperson ಗಳಲ್ಲಿರುವಂತೆ) ಎಂಬ ಪದದ ಅಲ್ಪಾಯುಷಿ ಕಥನವನ್ನು ಪರಿಗಣಿಸಬಹುದು. ಸಮೂಹವಾಚಿ man ಬದಲಿಗೆ ಈ ಪದವನ್ನು ಚಾಲ್ತಿಗೆ ತರಲಾಯಿತು. ಇದು astromaut ಪದದಲ್ಲಾದಂತೆ ಪುಲ್ಲಿಂಗ ರೂಪವನ್ನೇ ಸೂಚಿಸುವ ಬಲೆಗೆ ಬೀಳಲಿಲ್ಲ. ಬದಲಿಗೆ, person ಎಂದು ಹೇಳಿದಾಗಲೆಲ್ಲಾ, ‘ಹೆಂಗಸು’ ಎಂದು ಹೇಳುವ ಪರ್ಯಾಯ ಪದವಾಗಿ ಬಿಟ್ಟಿದೆ. ಅಂದರೆ, ಇದು ಗಂಡು ಹೆಣ್ಣುಗಳೆರಡನ್ನೂ ಸೂಚಿಸುವ ಬದಲು ಹೆಂಗಸಿಗೆ ಸೌಮ್ಯೋಕ್ತಿಯಾಗಿ ಮಾರ್ಪಟ್ಟಿದೆ. ಮಾತಿನಲ್ಲಂತೂ ಈ ಪದ ಗಂಡಸನ್ನು ಸೂಚಿಸಿದ ಪ್ರಸಂಗಗಳಂತೂ ಇಲ್ಲವೇ ಇಲ್ಲ. ಈ ಬಗ್ಗೆ ಸಂಡೇ ಟೈಮ್ಸ್ ಪತ್ರಿಕೆಯ ವರದಿಯೊಂದನ್ನು ಗಮನಿಸುವುದು ಒಳ್ಳೆಯದು. – ‘Ofcourse, full justice to a steamed pudding can only be done by a true trencher man. This term is used advisedly, for I have never encountered a feminine trencher person whose curves could easily expand, to accommodate a second helping’- ಇಲ್ಲಿ ಈ ಮಾತನ್ನು ಹೇಳುತ್ತಿರುವವರು ಸ್ತ್ರೀವಾದಿ ಸುಧಾರಣೆಗಳನ್ನು ಪದಶಃ ಅರಿಯಲು ಯತ್ನಿಸುತ್ತಿದ್ದಾರೆಯೇ ಹೊರತು ಅವುಗಳ ಹಿಂದಿರುವ ಉದ್ದೇಶವನ್ನಲ್ಲ. (ಹುಡುಗಿಯರಿಗೆ ಅವರನ್ನು man ಎಂದು ಕರೆದರೆ ಇಷ್ಟವಾಗುವುದಿಲ್ಲ. ಹೋಗಲಿ ಬಿಡಿ. ಅವರು ಒತ್ತಾಯಿಸಿದರೆ ಅವರನ್ನು persons ಎಂದು ಕರೆದುಬಿಡೋಣ’) ಅಂದರೆ, ಹಿಂದಿನಿಂದಲೂ woman ಎಂಬ ಪದ ಮುಜುಗರವನ್ನು ಉಂಟು ಮಾಡುತ್ತಿತ್ತು. ಜೊತೆಗೆ ಕೀಳುಗೈಯುತ್ತಿತ್ತು.  person ಎಂದು ಬಳಸಿದಾಗಲೂ ಆ ಹಿಂದಿನ ಅರ್ಥ ಪರಂಪರೆಯೇ ಮತ್ತೆ ಪುಷ್ಠಿಯನ್ನು ಪಡೆದುಕೊಂಡಂತಾಯಿತು. (ವಿಕ್ಟೋರಿಯನ್ ಯುಗದ ಜನರು woman ಪದವನ್ನು ಕಾಮ ಮತ್ತು ಸಾಮಾಜಿಕ ಕೆಳಸ್ತರಕ್ಕೆ ಸಂವಾದಿಯಾಗಿ ಗುರುತಿಸುತ್ತಿದ್ದರು.) ಮೊದಲು ನಾವು men ಮತ್ತು women ಆಗಿದ್ದು, ಈಗ men ಮತ್ತು persons ಆಗಿ ಬಿಟ್ಟಿದ್ದೇವೆ. ಯಾವುದಾದರೊಂದು ಪದ ಬಳಕೆದಾರರು ಎಷ್ಟೇ ಹತ್ತಿಕ್ಕಿದರೂ ಮತ್ತೆ ಮತ್ತೆ ಯಾವ ರೂಪದಲ್ಲಾದರೂ ತಲೆ ಎತ್ತುವುದಕ್ಕೆ ಉದಾಹರಣೆ ನೀಡಬೇಕೆಂದರೆ women ಪದ ಅತ್ಯುತ್ತಮವಾಗಿದೆ.

ಬ್ರಿಟನ್ ಮತ್ತು ಆಸ್ಟ್ರೇಲಿಯಾಗಳಲ್ಲಿ Ms ಪದಕ್ಕೂ ಇದೇ ಗತಿ ಬಂದೊದಗಿತು. ಅದು Mrs ಮತ್ತು Miss ಪದಗಳನ್ನು ಸ್ಥಳಾಂತರಿಸುವ ಬದಲು ಹೆಂಗಸರನ್ನು ಗುರುತಿಸುವ ಮೂರನೆಯ ಪದವಾಗಿ ಸೇರಿಕೊಂಡಿತು. ಹಲವರು ಈ ಪದವನ್ನು ಅವಿವಾಹಿತ ಹೆಂಗಸರಿಗೆ, ವಿಚ್ಛೇದಿತ ಹೆಂಗಸರಿಗೆ ಮತ್ತು ‘ಹಠಮಾರಿ ಸ್ತ್ರೀವಾದಿಗಳಿಗೆ’ ಬಳಸುತ್ತಾರೆ. ಅಂದರೆ, ಈ ಪದವು ‘ಅಸಹಜ’ರಾದ ಹೆಂಗಸರಿಗೆ, ಮತ್ತು ಗಂಡಸನ್ನು ಪಡೆದುಕೊಳ್ಳಲಾಗದ, ಇಲ್ಲವೇ ಆತನೊಡನೆ ಬಾಳಲಾಗದ ‘ಹೆಣ್ಣತನವಿರದ’ ಹೆಂಗಸರಿಗೆ ಹೊಂದುವ ಪದವೆಂದು ಜನ ತಿಳಿದರು.

ಈ ಪ್ರಸಂಗಗಳೆಲ್ಲ ಸುಧಾರಣಾ ಹೆಜ್ಜೆಗಳು ಪರಿಣಾಮಕಾರಿಯಾಗಲಿಲ್ಲ ಎಂಬುದನ್ನು ಹೇಳುವ ಜೊತೆಗೆ, ಈ ಸುಧಾರಣೆಗಳು ಮಂಡಿಸುವ ಪದ ಮತ್ತು ಅವುಗಳ ಅರ್ಥಗಳನ್ನು ಒಪ್ಪುವ ಮತ್ತು ಪ್ರಸಾರ ಮಾಡುವ ಹೊಣೆಗಾರಿಕೆಯನ್ನು ನಿರ್ವಹಿಸುವುದು ಆಗದ ಮಾತು ಎಂದು ತೋರಿಸಿಕೊಟ್ಟವು. ಸ್ತ್ರೀವಾದಿಗಳು ಸುಧಾರಿತ ರೂಪಗಳನ್ನು ಸೂಚಿಸಬಹುದೇ ಹೊರತು, ಈ ರೂಪಗಳು ಏನಾಗುತ್ತವೆ ಎಂಬುದರ ಮೇಲಿನ ಹಿಡಿತ ಅವರಿಗಿರುವುದಿಲ್ಲ. ಭಾಷೆಯ ನೆಲೆಯ ಹೋರಾಟಗಳು ನಿಡುಗಾಲ ನಡೆಯುವಂಥವು. ಬಳಕೆದಾರರಿಗೆ ಹೊಸತು ಏಕೆ ಬೇಕಿದೆ ಎಂಬುದನ್ನು ಸುಲಭವಾಗಿ ತಿಳಿಸಲು ಆಗುವುದಿಲ್ಲ. ಇನ್ನು ಅಂಥ ಸುಧಾರಣೆಗಳ ಗುಣಾತ್ಮಕ ನೆಲೆಯನ್ನು ತಿಳಿಸುವುದಂತೂ ದೂರದ ಮಾತು. ಸ್ತ್ರೀವಾದಿಗಳು ಲೈಂಗಿಕತಾವಾದಿ ಭಾಷೆಯನ್ನು ವಿರೋಧಿಸಿದರೆ, ಬಳಕೆದಾರರು ಆ ಭಾಷೆಗೆ ಇರುವ ಪರ್ಯಾಯಗಳನ್ನು ನಿರಾಕರಿಸುತ್ತಿದ್ದಾರೆ.

ಸುಧಾರಣೆಯನ್ನು ತಾತ್ವಿಕವಾಗಿ ಗ್ರಹಿಸುವವರಿಗೆ ಇದೆಲ್ಲವೂ ಗೋಜಲಾಗಿ ತೋರುತ್ತದೆ. ನಾವೀಗಾಗಲೇ ಗಮನಿಸಿರುವಂತೆ ಮಿಲ್ಲರ್ ಮತ್ತು ಸ್ವಿಫ್ಟ್ ಮಾದರಿಯ ಸುಧಾರಕರು ತಟಸ್ಥವಾದ ಲೈಂಗಿಕತಾವಾದಿಯಲ್ಲದ ಭಾಷೆಯು ಅತ್ಯಗತ್ಯ ಮತ್ತು ಅದರಿಂದ ನಮ್ಮ ಮಾತು ಮತ್ತು ಬರೆಹ ಹೆಚ್ಚು ಖಚಿತವಾಗುತ್ತದೆ ಎಂದು ತಿಳಿದಿದ್ದಾರೆ. ‘ನಾವು ಅರ್ಥ ಪರಿವರ್ತನೆಯನ್ನು ಗುರುತಿಸುವುದೇ ಮುಖ್ಯವಲ್ಲ. ನಾವು ಹೇಳುವುದು ಖಚಿತವಾಗಿರಬೇಕಾದರೆ, ಇನ್ನೊಬ್ಬರಿಗೆ ತಿಳಿಯುವಂತಿರಬೇಕಿದ್ದರೆ, ಅಂಥ ಅರ್ಥ ಪರಿವರ್ತನೆಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು’ ಎಂದಿದ್ದಾರೆ. ಹೀಗಿದ್ದ ಮೇಲೆ ಎಷ್ಟೋ ಜನ ಇಂಗ್ಲಿಶ್ ಭಾಷಿಕರು ಅಂತಸ್ಥವಾಗಿ ತಪ್ಪರ್ಥ ನೀಡುವ ಪದಗಳನ್ನು ತಮ್ಮ ಮಾತಿನಲ್ಲಿ ಖಚಿತತೆಯನ್ನು ತಂದುಕೊಳ್ಳುವುದಕ್ಕೋಸ್ಕರ, ಇಲ್ಲವೇ ಬೇಕೆಂತಲೇ ತಪ್ಪರ್ಥ ನೀಡುವಂತೆ ಮಾಡಲೆಂದೇ ಬದಲಿಸಿಕೊಳ್ಳಬೇಕೆನ್ನುವುದು ವಿಚಿತ್ರವಾಗಿದೆ. ಇವರಿಗೆಲ್ಲ ತಾವು ಆಡಿದ ಮಾತು ಇನ್ನೊಬ್ಬರಿಗೆ ತಿಳಿಯಬೇಕೆಂಬ ಕಾಳಜಿ ಇಲ್ಲವೇ?

ಸುಧಾರಕರು ಒಂದು ಸಾಮಾನ್ಯವಾದ ಮತ್ತು ಮೂಲಭೂತವಾದ ತಪ್ಪನ್ನು ಮಾಡುತ್ತಾರೆ. ಇವರೆಲ್ಲರೂ ಭಾಷೆಯು ವಾಸ್ತವದ ಯಥಾವತ್ ಬಿಂಬವಾಗಿರುತ್ತದೆ ಎಂದು ತಿಳಿಯುತ್ತಾರೆ. ಅಷ್ಟೇಕೆ, ಬಿಂಬಿಸಬೇಕು ಎಂದು ಕೂಡಾ ನಂಬಿರುತ್ತಾರೆ. ಇದನ್ನು ‘ಪ್ರಕೃತಿಗೆ ಹಿಡಿದ ಕನ್ನಡಿ’ ಎಂದು ಭಾವಿಸುತ್ತಾರೆ. ಆದರೆ ಸಸೂರ್ ಎಚ್ಚರಿಸಿದಂತೆ ಇದೆಲ್ಲ ಹಾಗಿಲ್ಲ. ಸಂಕೇತ ವ್ಯವಸ್ಥೆಯು ಈ ಲೋಕವನ್ನು ವ್ಯವಸ್ಥಿತ ರೂಪದಲ್ಲಿ ಮಂಡಿಸುವುದೇ ಹೊರತು ಬಿಂಬಿಸುವುದಿಲ್ಲ. ಈ ಸಂಕೇತಗಳು ಹೀಗೆ ಮಾಡುವಾಗ ಸಾಂಸ್ಕೃತಿಕ ನೆಲೆಯ ನಂಬಿಕೆಗಳನ್ನು ಆಶ್ರಯಿಸುತ್ತವೆ. ಈ ನಂಬಿಕೆಗಳು ಸ್ವತಃ ತಾವೇ ವ್ಯವಸ್ಥಿತವಾಗಿರುವುದಿಲ್ಲ. ಅಷ್ಟಲ್ಲದೆ ಅವುಗಳ ಹಿಂದೆ ಬುದ್ದಿಪ್ರಧಾನತೆಯು ಎದ್ದು ಕಾಣುವುದಿಲ್ಲ. ಅಂಥ ಸಾಂಸ್ಕೃತಿಕ ನಂಬಿಕೆಗಳಲ್ಲಿ  ಲೈಂಗಿಕತಾವಾದವೂ ಒಂದಾಗಿದೆ.

ಜನರು ತಾವು ನೋಡುತ್ತಿರುವುದಕ್ಕೂ ಮತ್ತು ತಾವು ನಂಬಿರುವುದಕ್ಕೂ ಅಗಾಧವಾದ  ಮತ್ತು ಅಸಹನೀಯವಾದ ವೈರುಧ್ಯಗಳನ್ನು ಕಾಣತೊಡಗಿದರೆ, ಆಗ ಲೈಂಗಿಕತಾವಾದ ಎಂಬುದು ಚಿಟಿಕೆ ಹೊಡೆಯುವಷ್ಟರಲ್ಲಿ ಕುಸಿದು ಬೀಳುತ್ತದೆ. ಉದಾಹರಣೆಗೆ, ಅಂಗಡಿಯಲ್ಲಿ ಕೊಂಡ ಸಾಮಾನುಗಳ ಹೊರೆ ಹೊತ್ತು ಜೊತೆಗೆ ಮೂರು ವರ್ಷದ ಕೂಸನ್ನೂ ಎತ್ತಿಕೊಂಡಿರುವ ಹೆಂಗಸನ್ನು ಎಷ್ಟು ಜನ ಕಂಡಿದ್ದಾರೆ? ಅಥವಾ ಮನೆಯಲ್ಲಿರುವ ಅರೆಮರುಳು ಹಿರಿಯ ಸಂಬಂಧಿಯ ಮೈ ತೊಳೆದು, ಆ ಬಳಿಕವೂ ತನ್ನ ಬದುಕಿಗಾಗಿ ಹೆಂಗಸಿಗೆ ತಕ್ಕುದಲ್ಲದ ಕೊಳಕು ಮತ್ತು ಶ್ರಮದಾಯಕ ಕೆಲಸಗಳನ್ನು ಮಾಡುತ್ತಿರುವ ಹೆಂಗಸನ್ನು ಜನರು ಕಾಣ ಬಯಸುತ್ತಾರೆಯೇ? ಎಷ್ಟೋ ವೇಳೆ ಒಂಟಿಯಾಗಿದ್ದುಕೊಂಡು ಮಕ್ಕಳನ್ನು ಸಲಹುತ್ತಿರುವ ಹೆಂಗಸರೇ ಗಂಡು ಹೆಣ್ಣುಗಳಿಗೆ ಸಮಾನವೇತನ ಎಂಬುದು ನ್ಯಾಯಬದ್ಧವಲ್ಲ; ಏಕೆಂದರೆ, ಪಾಪ ಗಂಡಸು ಒಂದು ಕುಟುಂಬವನ್ನು ಪೋಷಿಸಬೇಕಲ್ಲವೇ ಎಂದು ವಾದಿಸುವುದನ್ನು ನಾವು ಕೇಳಿಲ್ಲವೇ?

adult ಮತ್ತು neighbour ಎಂಬ ಪದಗಳು ಕೇವಲ ಪುಲ್ಲಿಂಗ ಸೂಚಕಗಳೆಂದು ತಿಳಿಯುವುದು ಮೇಲೆ ಹೇಳಿದ್ದಕ್ಕಿಂತ ಬೇರೇನೂ ಅಲ್ಲ. ಎರಡೂ ಅರ್ಥಹೀನವಾದವು. ಭಾಷೆ ತಪ್ಪು ದಾರಿ ಹಿಡಿಯುವಂತೆ ಮಾಡುತ್ತದೆ ಎಂದು ಟೀಕಿಸುವುದು ಹೇಗಿದೆಯೆಂದರೆ, ನಿಜಜಗತ್ತಿನಲ್ಲಿ ಗಾಳಿಯಂತ್ರಗಳು ಓರೆಯಾಗಿ ಸುತ್ತುತ್ತಿವೆ ಎಂದು ವಾದಿಸಿದಂತೆ. ಏಕೆಂದರೆ, ಚರಿತ್ರೆ ಮತ್ತು ಐಡಿಯಾಲಜಿಗಳು ನಡೆಸಿದ ಕದನಗಳ ಅಳಿದುಳಿದ ಅವಶೇಷಗಳನ್ನು ತೋರಿಸುವ ಕದಡಿದ ನೀರಿನ ಕೊಳದಂತೆ ಭಾಷೆ ಇದೆಯೇ ಹೊರತು ಅದು ‘ಸತ್ಯ’ ವನ್ನು ನಮಗೆ ತೋರಿಸುವ ತಿಳಿನೀರಿನ ಕೊಳವಲ್ಲ.

ಭಾಷೆಯಲ್ಲಿ ಆಗುವ ಬದಲಾವಣೆಗಳಿಗೆ ಜನರು ಭಯ ಪಡುತ್ತಾರೆ. ಏಕೆಂದರೆ, ‘ಈ ಬದಲಾವಣೆಗಳು ಸಾಮಾಜಿಕ ನಡವಳಿಯಲ್ಲಿ ಆಗಲಿರುವ ಬದಲಾವಣೆಗಳ ಸೂಚಕಗಳಾಗಿವೆ’ ಎಂದು ಜನರು ತಿಳಿಯುತ್ತಾರೆ. ಇದು ಮಿಲ್ಲರ್ ಮತ್ತು ಸ್ವಿಫ್ಟ್ ಅವರ ನಂಬಿಕೆ. ಆದರೆ, ಇದು ಅರ್ಧಸತ್ಯ. ಸಾಂಸ್ಥಿಕ ನೆಲೆಯಲ್ಲಿ ಜಾರಿಗೆ ತರುವ ಭಾಷಿಕ ಬದಲಾವಣೆಗಳು ಈ ಲೋಕವನ್ನು ಬೇರೊಂದು ರೀತಿಯಲ್ಲಿ ವ್ಯವಸ್ಥಿತಗೊಳಿಸುವುದು ಸಾಧ್ಯವೆಂದು ಅಧಿಕಾರಸ್ಥರಿಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಸುವ ಉದ್ದೇಶವನ್ನು ಹೊಂದಿರುತ್ತವೆ. (ಈ ಹೊಸ ವ್ಯವಸ್ಥೆ ವಾಸ್ತವತೆಗೆ ಹತ್ತಿರವಿರುವುದೇ ಇಲ್ಲವೇ ಎಂಬ ಪ್ರಶ್ನೆ ಮುಖ್ಯವಲ್ಲ.) ಇಂಥ ಉದ್ದೇಶವುಳ್ಳ ಭಾಷಿಕ ಬದಲಾವಣೆಗಳನ್ನು ಒಪ್ಪದಿರಲು, ಅವು ಈಗಾಗಲೇ ಸ್ಥಾಪಿತವಾಗಿರುವ ಮತ್ತು ಎಂದೆಂದೂ ಬದಲಾಗದೆಂದು ತಿಳಿದಿರುವ ‘ಸತ್ಯ’ಕ್ಕೆ ಸವಾಲನ್ನು ಹಾಕುವಂತಿರುತ್ತದೆ ಎಂಬುದೇ  ಕಾರಣವಾಗಿರುತ್ತದೆ.

ಜನರು ಸಂಪ್ರದಾಯವಾದಿಗಳಂತೆ ತೋರುವುದಕ್ಕೆ ಅವರು ಸ್ತ್ರೀವಾದಿ ವಿರೋಧಿಗಳಾಗಿರುವುದಷ್ಟೇ ಕಾರಣವಲ್ಲ. ಸಂಪ್ರದಾಯವಾದಿಗಳು ಭಾಷೆಗೆ ಮಹತ್ವವನ್ನು ನೀಡುತ್ತಾರೆಯೇ ಹೊರತು ಅದು ಸಾಮಾಜಿಕ ನಡವಳಿಯ ಸೂಚಕ ಎಂದು ನಂಬುವುದಿಲ್ಲ. ಈ  ಅಂಶವನ್ನು ಮಿಲ್ಲರ್ ಮತ್ತು ಸ್ವಿಫ್ಟ್ ಗುರುತಿಸುವುದಿಲ್ಲ. ಭಾಷೆಯು ಅನುಭವಗಳ ಪ್ರವಾಹದಲ್ಲಿ ಎಂದೂ ಅಲುಗಾಡದ ಸ್ತಂಭ ಎಂದೂ, ಅದರಲ್ಲಿ ಅಡಕಗೊಂಡಿರುವ ಭದ್ರವಾದ ಸತ್ಯಗಳಿಗೆ ಅಂಟಿಕೊಳ್ಳುವ ಮೂಲಕ ಪ್ರವಾಹವನ್ನು ಎದುರಿಸಲು ಸಾಧ್ಯವೆಂದೂ ಜನರು ನಂಬಿರುವುದರಿಂದಲೇ ಅವರು ಭಾಷೆಯಲ್ಲಿ ತರಲಿರುವ ಬದಲಾವಣೆಗಳನ್ನು ವಿರೋಧಿಸುತ್ತಾರೆ. ಶಬ್ದವೆಂಬುದು ಪವಿತ್ರವಾದುದು. ಹಾಗಲ್ಲವೆಂದು ಹೇಳಿದರೆ ಅವರು ನಂಬಿಕೆದ್ರೋಹಿಗಳೆನಿಸುತ್ತಾರೆ.

ಆಧುನಿಕ ಸಮಾಜದಲ್ಲೂ ಇಂಥ ಮೂಢನಂಬಿಕೆಗಳು ಇರುವುದು ನಮ್ಮಲ್ಲಿ ಅಚ್ಚರಿ ಮೂಡಿಸಬಹುದು. (ಸಂಪ್ರದಾಯವಾದಿಗಳು ಭೂತಕಾಲಕ್ಕೆ ಮುಖ ಮಾಡಿರುವುದರಿಂದ ಅವರಿಗದು ಸಮಸ್ಯೆಯಲ್ಲ.) ಆದರೆ, ಚಾರಿತ್ರಿಕವಾಗಿ ಗಮನಿಸಿದರೆ, ಭಾಷೆಯ ಬಗ್ಗೆ ಇರುವ ಈ  ಗೌರವವು ಆಳವಾಗಿ ಬೇರು ಬಿಟ್ಟಿರುವುದು ಮತ್ತು ಪ್ರಭಾವಶಾಲಿಯಾಗಿರುವುದು ಗೊತ್ತಾಗುತ್ತದೆ. ಚೀನಾದ ಸಂತ ಕನ್‌ಫ್ಯೂಶಿಯಸ್ ‘ಹೆಸರುಗಳನ್ನು ತಿದ್ದುವ’ ಸಿದ್ಧಾಂತವನ್ನು ಮಂಡಿಸಿದ್ದ. ಅದರಂತೆ ಪದಗಳು ಹೇಗಿವೆಯೋ ಅವು ಸೂಚಿಸುವ ವಸ್ತುಗಳೂ ಹಾಗೆಯೇ ಇರಬೇಕು. ಹಲವು ಸಂಸ್ಕೃತಿಗಳಲ್ಲಿ ‘ಸರಿಯಾದ’ ಭಾಷಾಬಳಕೆಗೆ ಮಾಂತ್ರಿಕ ಶಕ್ತಿ ಉಂಟೆಂಬ ನಂಬಿಕೆ ಇದೆ. ‘ಪದಗಳ ಭ್ರಮಾತ್ಮಕ ಚಹರೆಗೂ ಲೋಕಕ್ಕೂ ಅವಿನಾಭಾವವನ್ನು ಕಲ್ಪಿಸಿದ್ದರಿಂದಲೇ ಮಂತ್ರಶಕ್ತಿ ಎಂಬ ಕಲ್ಪನೆ ಹುಟ್ಟಲು ಕಾರಣವಾಯಿತು’ ಎಂದು ಸಪೀರ್ ಒಂದು ಕಡೆ ಹೇಳಿದ್ದಾನೆ. ಪಾಶ್ಚಾತ್ಯ ಸಮಾಜಗಳು ಪ್ರಗತಿಹೊಂದಿದ್ದರೂ ಈ ನಿಲುವು ಇನ್ನೂ ಇದೆಯೆಂದು ತೋರುತ್ತದೆ. ಅದರಿಂದಾಗಿಯೇ ಹಳೆಯ ವ್ಯಾಕರಣದ ನಿಯಮಗಳು, ಆಕ್ಸ್‌ಫರ್ಡ್ ಇಂಗ್ಲಿಶ್ ಡಿಕ್ಷ್‌ನರಿ, ಮತ್ತಿತರ ‘ಮಾಂತ್ರಿಕ ಅಧಿಕಾರಸ್ಥ’ ನೆಲೆಗಳ ಹೆಸರು ಕೇಳಿದರೆ ಸಾಕು; ರೋಮಾಂಚನಗೊಂಡು ಮೈಯುಬ್ಬಿ ಕುಣಿಯುತ್ತಾರೆ. ‘ಭಾಷೆಯ ರಿಪೇರಿ’ ಮಾಡಹೊರಟಿರುವ ಸ್ತ್ರೀವಾದಿಗಳನ್ನು ಕಂಡರೆ ಅವರಿಗೆ ಕೋಪ ಉಕ್ಕಿ ಬರುತ್ತದೆ. ಹೀಗೆ ಭಾಷೆಯನ್ನು ರಿಪೇರಿ ಮಾಡುವ ಸ್ತ್ರೀವಾದಿಗಳು ವಾಸ್ತವವನ್ನೂ ಎಲ್ಲಿ ರಿಪೇರಿ ಮಾಡಿ ಬಿಡುತ್ತಾರೋ ಎಂಬ ಭಯ ಅವರಲ್ಲಿದೆ. ಇದನ್ನು ಹಲವು ಸ್ತ್ರೀವಾದಿಗಳೂ ನಂಬಿದ್ದಾರೆಂಬುದು ಸೋಜಿಗ ತರುವ ಸಂಗತಿ.

ಬ್ರಿಟಿಶ್ ಸಂಪ್ರದಾಯವಾದಿ ರೋಜರ್ ಸ್ಕ್ರೂಟನ್ ಸ್ತ್ರೀವಾದಿ ಭಾಷಾಸುಧಾರಣೆಗಳ ಬಗ್ಗೆ ತನಗಿರುವ ಅಸಹನೆಯನ್ನು ಕೊಂಚ ಒರಟಾಗಿಯೇ ಹೇಳಿದ್ದಾನೆ. ‘ನಾವೆಲ್ಲರೂ ಹಲವು ತಲೆಮಾರುಗಳ ವಿವೇಕವನ್ನು ಭಾಷೆಯ ಮೂಲಕ ಅನುವಂಶಿಕವಾಗಿ ಪಡೆದುಕೊಂಡಿದ್ದೇವೆ. ಮಾನವರ ಅನುಭವಗಳ ಈ ಮಹಾನ್ ಸಂಗ್ರಹವನ್ನು ವಿಕೃತಗೊಳಿಸುವುದೆಂದರೆ ನಮ್ಮ ಮೂಲಭೂತ ಗ್ರಹಿಕೆಗಳನ್ನು ವಿಕೃತಗೊಳಿಸಿದಂತೆಯೇ ಸರಿ.’ ಹಲವು ತಲೆಮಾರುಗಳ ವಿವೇಕ ಎಂಬುದು ನಿರ್ಮಮ ಸ್ವರೂಪಿಯಲ್ಲ. ಅಷ್ಟೇಕೆ, ಅದು ವಿವೇಕವೂ ಅಲ್ಲದಿರಬಹುದು ಎಂಬುದನ್ನು ಸ್ತ್ರೀವಾದಿಗಳು ದಿಟ್ಟತನದಿಂದ ಹೇಳಲು ಮುಂದಾಗಿದ್ದಾರೆ. ಮಾನವರ ಅನುಭವ ಎಂದರೆ, ಗಂಡಸರ ಅನುಭವವಷ್ಟೇ ಅಲ್ಲ, ಈ ಗಂಡಸರ ‘ಮೂಲಭೂತ ಗ್ರಹಿಕೆಗಳೇ’ ಹೆಂಗಸರನ್ನು ಅಧೀನತೆಗೆ ಗುರಿ ಮಾಡಿವೆ ಎಂದು ತೋರಿಸಿ ಕೊಡುತ್ತಿದ್ದಾರೆ. ಭಾಷೆಯು ಏಕಾಕೃತಿಯದ್ದಲ್ಲ. ಅದರಲ್ಲಿ ಬದಲಾಗದ ಚಿರಂತನ ಸತ್ಯ ಎಂಬುದು ಇರುವುದೆಂಬ ನಂಬಿಕೆಗೆ ಬುಡವಿಲ್ಲ. ಇದೂ ಕೂಡಾ ಸ್ತ್ರೀವಾದಿಗಳ ನಿಲುವಾಗಿದೆ. ಇಂಥ ಸವಾಲನ್ನು ಹಾಕುವಾಗ ಅದು ತರುವ ಹೊಣೆಗಾರಿಕೆಯ ಹೊರೆಯನ್ನು ಹೊರಲು ನಾವು ಸಿದ್ಧರಿರಬೇಕು.

ಸಮಾರೋಪ : ಲೈಂಗಿಕತಾವಾದಿಯಲ್ಲದ ಭಾಷೆ ಇರುವುದು ಸಾಧ್ಯವೇ?

ಪಿತೃಪ್ರಧಾನ ಸಮಾಜಗಳ ಕಾರ್ಯವೈಖರಿಯನ್ನು ವಿಶ್ಲೇಷಿಸುವ ಸ್ತ್ರೀವಾದಿಗಳಿಗೆ ಭಾಷೆಗಳು ಮತ್ತು ಅವುಗಳ ಚರಿತ್ರೆಗಳು ಅಮೂಲ್ಯ ಆಕರಗಳಾಗಿವೆ. ಕಳೆದ ಮೂರು ದಶಕಗಳಲ್ಲಿ ಸ್ತ್ರೀವಾದಿಗಳು ಹಲವು ಭಾಷೆಗಳ ಬಳಕೆ ರೂಪಗಳಲ್ಲಿ ಲೈಂಗಿಕತಾವಾದಿ ನೆಲೆಗಳು ಇರುವ ಕಡೆಗೆ ಗಮನ ಸೆಳೆದಿದ್ದಾರೆ. ಲೈಂಗಿಕತಾವಾದಿ ನೆಲೆಗಳನ್ನು ಅಳಿಸಿ ಹಾಕಲು ಭಾಷಾ ಸುಧಾರಣೆಗಳ ಮೂಲಕ ಕೆಲಸ ಮಾಡುವುದು ಅಸಾಧ್ಯವಾಗಿದೆ. ಅದರಲ್ಲೂ ಭಾಷೆ ಎಂದರೇನು, ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಸರಳವಾಗಿ ಗ್ರಹಿಸಿದರಂತೂ ಇದು ಇನ್ನಷ್ಟು ಕಷ್ಟ ತಂದೊಡ್ಡುತ್ತದೆ. ಮಿಲ್ಲರ್ ಮತ್ತು ಸ್ವಿಫ್ಟ್ ಅವರು ಮಾಡಿದಂತೆ ‘ವಾಸ್ತವತೆ’ ಮತ್ತು ‘ಸತ್ಯ’ಗಳಿಗೆ ಜೋತು ಬಿದ್ದರೆ ಸಾಲದು. ಆದೇಶಗಳ ಮೂಲಕ ಪೂರ್ವಾಗ್ರಹಗಳನ್ನು ಕಿತ್ತೊಗೆಯಲು ಆಗುವುದಿಲ್ಲ. ಅಥವಾ ಲೈಂಗಿಕತಾವಾದಿ ನೆಲೆಗಳು ಇರುವುದನ್ನು ಬಯಲಿಗೆಳೆದುಬಿಟ್ಟರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಜನರು ಏನು ಹೇಳುತ್ತಾರೆ. ಮತ್ತು ಏನು ಉದ್ದೇಶಿಸಿರುತ್ತಾರೆ ಎಂಬ ಸಂಗತಿಗಳ ಮೇಲೆ ಲೈಂಗಿಕತಾವಾದಿ ಬಳಕೆಗಳನ್ನು ಸಮರ್ಥಿಸುವ ವೈಯಾಕರಣರು ಬಲವಾದ ಹಿಡಿತ ಹೊಂದಿದ್ದಾರೆ. ಅಷ್ಟು ಹಿಡಿತ ನಮಗಿಲ್ಲ. ಲೈಂಗಿಕತಾವಾದಿಗಳ ಮಾತುಗಳಲ್ಲಿ ಭಾಷೆ ಆ ಧೋರಣೆಯನ್ನು ಕಾಯ್ದುಕೊಂಡಿರುತ್ತದೆ.

ಹಾಗಿದ್ದರೆ, ನಾವು ಏನೂ ಮಾಡದೆ, ಸುಮ್ಮನೆ ಕುಳಿತಿರಬೇಕು ಎಂದೇನು? ಈ ಸಂಗತಿಯನ್ನು ಕುರಿತು ನನ್ನೊಡನೆ ಸಾರಾ ಮಿಲ್ಸ್ ಒಂದು ವಾಗ್ವಾದಕ್ಕೆ ಮುಂದಾಗಿದ್ದಾಳೆ. ಭಾಷಾ ಸುಧಾರಣೆಗಳು ಅಸಾಧ್ಯವೆಂದು ಹೇಳುವುದು ನಿರಾಶಾವಾದಿ ಧೋರಣೆ ಎಂಬುದು ಆಕೆಯ ನಿಲುವು. ಹೀಗೆ ಮಾಡುವುದರಿಂದ ಲೈಂಗಿಕತಾವಾದಿ ಭಾಷಾಬಳಕೆಯನ್ನು ಎದುರಿಸುವ ಹೆಂಗಸರು ಏನೂ ಮಾಡಲಾಗದೆ ಸುಮ್ಮನಾಗಿಬಿಡಬೇಕಾಗುತ್ತದೆ ಎಂದು ಹೇಳುತ್ತಾಳೆ. ಆಕೆಯ ಮಾತು ನ್ಯಾಯಯುತವೇ ಆಗಿದೆ. ಏಕೆಂದರೆ ಹೆಂಗಸರ ದಿನನಿತ್ಯದ ಅನುಭವಗಳು ಅವರಲ್ಲಿ ಕಿರಿಕಿರಿ ಉಂಟು ಮಾಡುತ್ತಿವೆ. ಭಾಷಾಬಳಕೆಯ ದಾಳಿಯಂತೂ ಅವ್ಯಾಹತವಾಗಿದೆ. ಇದೊಂದು ಸಮಸ್ಯೆಯೇ ಸರಿ.

ನಮ್ಮನ್ನು ಡಾರ್ಲಿಂಗ್ ಎಂದು ಕರೆಯುವ ಗಂಡಸರ ಮೇಲೆ ಗೆರಿಲ್ಲಾ ಮಾದರಿಯಲ್ಲಿ ದಾಳಿ ಮಾಡುವುದರಿಂದ ಹಿಡಿದು ಸಾಂಸ್ಥಿಕ ನೆಲೆಯ ದಳಗಳಾದ ನಿಘಂಟುಗಳ ಮೇಲೆ ಪೂರ್ಣ ಪ್ರಮಾಣದ ಯುದ್ಧ ಹೂಡುವವರೆಗೆ ಸ್ತ್ರೀವಾದಿ ಪ್ರತಿರೋಧವನ್ನು ಬೆಳೆಸುವುದು ನಿರುಪಯುಕ್ತವೆಂದು ಸೂಚಿಸುವುದು ನನ್ನ ಉದ್ದೇಶವಲ್ಲ. ಕಳೆದ ಎರಡು ಮೂರುದಶಕಗಳ ಪ್ರತಿರೋಧ ಏನನ್ನೂ ಸಾಧಿಸಿಲ್ಲವೆಂದು ಹೇಳುವುದು ಮೂರ್ಖತನವಾದಿತು. ಏಕೆಂದರೆ, ಅದರಿಂದ ಎದ್ದು ಕಾಣುವ ಮಹತ್ವದ ಬದಲಾವಣೆಗಳಾಗಿವೆ. ಮಿಲ್ಲರ್ ಮತ್ತು ಸ್ವಿಫ್ಟ್ ಅವರ ಕೈ ಪಿಡಿಯು ತುಂಬಾ ಪರಿಣಾಮ ಬೀರಿದ ಪಠ್ಯವಾಗಿದೆ. ಅದು ಮತ್ತು ಅದರಂತಹ ಪುಸ್ತಕಗಳಿಗೆ ಈಗ ಹೆಚ್ಚಿನ ಬೇಡಿಕೆ ಇದೆ.

ಹೀಗಿದ್ದರೂ, ನಾವೇನು ಮಾಡುತ್ತಿದ್ದೇವೆ ಎಂಬುದನ್ನು ರಾಜಕೀಯ ನೆಲೆಯಲ್ಲಿ ಅರ್ಥ ಮಾಡಿಕೊಂಡು ಇನ್ನಷ್ಟು ಗಟ್ಟಿಯಾಗಿ ಕಾರ್ಯ ನಿರ್ವಹಿಸುವುದರಿಂದ ಸ್ತ್ರೀವಾದಿಗಳು ಹೆಚ್ಚಿನ ಸಾಧನೆಗಳನ್ನು ಮಾಡಬಹುದು. ನಾವು ‘ಸತ್ಯ’ವನ್ನು ಬಯಲಿಗೆಳೆಯಲು ಭಾಷೆಯನ್ನು ವಿಕೃತಗೊಳಿಸಬೇಕಾಗಿಲ್ಲ. ಬದಲಿಗೆ, ಅದರೊಳಗೆ ಅಡಗಿರುವ ‘ದೆವ್ವ’ವನ್ನು ಓಡಿಸಲು ಹಾಗೆ ಮಾಡಬೇಕಾಗಿದೆ. ನಾವು ಮುಂದಿಡುವ ಸುಧಾರಣೆಗಳು ಸಾಂಪ್ರದಾಯಿಕ ಬಳಕೆಗಳಿಗಿಂತ ಹೆಚ್ಚು ‘ಉತ್ತಮ’ (ಹೆಚ್ಚು ಖಚಿತ, ಹೆಚ್ಚು ಸತ್ಯಕ್ಕೆ ಹತ್ತಿರ)ವಾಗಿರುತ್ತವೆಂದು ಹೇಳಿದರೆ ಸಾಲದು. ಏಕೆಂದರೆ, ಸುಧಾರಣೆಗಳ ಹಿಂದೆ ರಾಜಕೀಯ ಮತ್ತು ಸೈದ್ಧಾಂತಿಕ ಆಯ್ಕೆಗಳಿವೆ. ಸಾಂಪ್ರದಾಯಿಕ ಬಳಕೆಗಳು ತಳೆದಿರುವ ಲೋಕದೃಷ್ಟಿ ಒಂದಾದರೆ, ಸ್ತ್ರೀವಾದಿಗಳು ಹೊಂದಿರುವ ಪರ್ಯಾಯ ಲೋಕದೃಷ್ಟಿ ಮತ್ತೊಂದಾಗಿದೆ. ಈ ಎರಡೂ ಲೋಕದೃಷ್ಟಿಗಳು ರಾಜಕೀಯ ನೆಲೆಯಲ್ಲಿ ತಟಸ್ಥವಲ್ಲ. ನಿರ್ದಿಷ್ಟ ಉದ್ದೇಶವನ್ನು ಹೊಂದಿರುವುದನ್ನು ನಾವು ಸ್ಪಷ್ಟ ಪಡಿಸಬೇಕು. ಹಾಗಾಗಿ ಭಾಷಿಕ ಸುಧಾರಣೆಗಳು ಭಾಷೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ನಡೆಯುತ್ತಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ನಮ್ಮ ಯತ್ನಗಳು ಪ್ರಜ್ಞಾಸ್ಥರವನ್ನು ಎಚ್ಚರಿಸಲು, ಲೈಂಗಿಕತಾವಾದವನ್ನು ಧಿಕ್ಕರಿಸಲು, ಮತ್ತು ಹೆಂಗಸರನ್ನು ಸಮರ್ಥರನ್ನಾಗಿಸಲು ನಡೆದಿವೆ ಎಂಬುದನ್ನು ಖಚಿತ ಪಡಿಸಬೇಕು.

ಒಂದು ಉದಾಹರಣೆಯ ಮೂಲಕ ನಾನು ಹೇಳುತ್ತಿರುವುದನ್ನು ಸ್ಪಷ್ಟ ಪಡಿಸುತ್ತೇನೆ. ನನ್ನ ಬರೆಹದಲ್ಲಿ ಭಾಷಾಶಾಸ್ತ್ರಜ್ಞರು ಹೇಳುವ ‘ಇತ್ಯಾತ್ಮಕ’ ಭಾಷೆಯನ್ನು, ಇಲ್ಲವೇ ‘ತೆರೆದ ನೆಲೆಯ ಭಾಷೆ’ಯನ್ನು ಬಳಸಿದ್ದೇನೆ. ಅಂದರೆ ಇಲ್ಲಿ ಸಮೂಹವಾಚಿ ಸರ್ವನಾಮಗಳು.  she/her ಎಂದೇ ಇವೆ. ನನ್ನ ಈ ಆಯ್ಕೆ ಓದುಗರಿಗೆ ಒಪ್ಪಿಗೆಯಾಗದಿರಬಹುದು. ಖಚಿತತೆ, ತಟಸ್ಥತೆ, ಸತ್ಯ, ನ್ಯಾಯಪರತೆಗಳನ್ನು ಎತ್ತಿ ಹೇಳುವ ಸುಧಾರಣಾಕಾರರಿಗೂ ಇದು ಸಮ್ಮತವಲ್ಲದಿರಬಹುದು. ಒಳ್ಳೆಯ ಅಭಿರುಚಿಯಲ್ಲ, ತಪ್ಪು ದಾರಿಗೆ ಎಳೆಯುವಂಥದು ಎಂದೂ ಹೇಳಿಯಾರು. ನನ್ನ ಓದುಗರಲ್ಲಿ ಹಲವರು ಗಂಡಸರು ಇರುತ್ತಾರಲ್ಲವೇ ಎಂಬುದು ಸುಧಾರಣಾಕಾರರ ಅಳಲು. ನಿಜ. ನನ್ನ ಈ ಸಮೂಹವಾಚಿ ಸ್ತ್ರೀಲಿಂಗ ರೂಪಗಳು ಗಂಡಸರೇ ಇರುವ ಗುಂಪುಗಳನ್ನು (ಭಾಷಾಶಾಸ್ತ್ರಜ್ಞರು, ನಿಘಂಟು ರಚನಕಾರರು, ವಿಜ್ಞಾನಿಗಳು ಮತ್ತಿತರರು) ಗುರಿಯಾಗಿರಿಸಿಕೊಂಡಿವೆ. ಅವರನ್ನು she ಎಂದು ಕರೆಯುವುದರಿಂದ ನನ್ನ ಬರೆಹ ಖಚಿತತೆಯನ್ನು ಕಳೆದುಕೊಳ್ಳುತ್ತದೆ. ಅಪರಿಚಿತವೂ, ಅನುಚಿತವೂ ಆದ ಇಂಥ ಪ್ರಯೋಗಗಳು ಅವರನ್ನು ಕೆರಳಿಸುತ್ತವೆ. ಇರಲಿ. ಬರೆಯುವ ಗಂಡಸರು he ಬಳಸಿ ನನ್ನನ್ನು ಕೆರಳಿಸುವುದನ್ನು ಕೂಡಾ ನಾನು ಇಷ್ಟಪಡಲಾರೆ.

ಚರಿತ್ರೆಯ ಈ ಹಂತದಲ್ಲಿ ನನ್ನ ವಾದದ ಸಮರ್ಥನೆಗಾಗಿ ನನ್ನ ಮಾತು ಮತ್ತು ಬರೆಹಗಳಲ್ಲಿ ಎರಡು ಪ್ರಯೋಗಗಳನ್ನು ಮಾಡುವುದು ಉಪಯುಕ್ತವೆಂದು ತಿಳಿದಿದ್ದೇನೆ. ಲೋಕದಲ್ಲಿ ಹೆಂಗಸರೂ ಇದ್ದಾರೆ ಎಂಬುದನ್ನು ಒತ್ತಿ ಹೇಳುವುದು ಮೊದಲನೆಯದು. ತಟಸ್ಥ ಭಾಷೆಯು ಈ ಕೆಲಸವನ್ನು ತಂತಾನೇ ಮಾಡುವುದಿಲ್ಲವೆಂಬುದನ್ನು ತೋರಿಸಿಕೊಟ್ಟಿದ್ದೇನೆ. ಅದು ಎಷ್ಟೇ ನ್ಯಾಯಪರತೆ ಇಲ್ಲವೇ ಖಚಿತತೆಯನ್ನು ಹೊಂದಿದ್ದರೂ ಈ ರಾಜಕಾರಣವನ್ನು ನಿರ್ವಹಿಸಲಾರದು. ಜನರ ಪೂರ್ವಾಗ್ರಹಗಳನ್ನು ಬಯಲಿಗೆಳೆದು ಅವರನ್ನು ಪ್ರಜ್ಞಾವಂತರನ್ನಾಗಿ ಮಾಡುವುದು ಎರಡನೆಯ ಗುರಿ. ನಾನು ಸರ್ವನಾಮಗಳನ್ನು ಬದಲಿಸಿ ಬಳಸುವುದು ಕದ್ದು ಮುಚ್ಚಿ ಮಾಡುವಂಥದಲ್ಲ. ಅವರ ಗಮನವನ್ನು ಅದು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತೇನೆ. ಓದುಗರು ಅದನ್ನು ಕುರಿತು ಎಚ್ಚರಗೊಂಡು ತಮಗೆ ಬೇಕಾದ ನಿರ್ಣಯಗಳನ್ನು ತಾವೇ ಮಾಡಿಕೊಳ್ಳಲಿ.

ಸಮೂಹವಾಚಿಯಾಗಿ she ರೂಪವನ್ನು ಹೇಳುವುದು ಮತ್ತು ಬರೆಯುವುದು ಸರಿಯಲ್ಲ ಎಂಬ ಪೂರ್ವಾಗ್ರಹ ಬಹಳ ದಟ್ಟವಾಗಿದೆ. he ರೂಪವನ್ನು ಬಳಸುವ ಅಭ್ಯಾಸ ಅಲುಗಾಡದಂತೆ ಬೇರು ಬಿಟ್ಟಿದೆ. ಶೈಕ್ಷಣಿಕ ಬರವಣಿಗೆಯಲ್ಲಿ she ಯನ್ನು ಬಳಸಬಹುದೇ ಎಂಬ ಚರ್ಚೆಯೊಂದು ನಡೆಯಿತು. ನನ್ನ ವಿದ್ಯಾರ್ಥಿನಿಯೊಬ್ಬಳು ಅದು ತನಗೆ ಸಮ್ಮತವಲ್ಲ ಎಂದಳು. ಏಕೆಂದರೆ, ಅವಳ ಅಧ್ಯಯನ ಶಾಖೆ ದೈವಶಾಸ್ತ್ರವಾಗಿತ್ತು. ಯಾರಾದರೂ ಆಕೆಯನ್ನು ದೇವರು ಗಂಡಸೋ ಹೆಂಗಸೋ ಎಂದು ಕೇಳಿದರೆ ಆಕೆ ‘ಎರಡೂ ಅಲ್ಲ. ನಾನು ಆತನನ್ನು ಪರಮಶಕ್ತ ಎಂದು ತಿಳಿದಿದ್ದೇನೆ’ ಎನ್ನುತ್ತಾಳಂತೆ. ಈ ಮಾತು ಕೇಳಿ ನಾವೆಲ್ಲ ನಕ್ಕೆವು. ಈ ಬಗ್ಗೆ ನಾವು ಹೆಚ್ಚು ಪ್ರಜ್ಞಾವಂತರಾಗಬೇಕಿದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.

ಎಂದೋ ಒಂದು ದಿನ ಪ್ರಜ್ಞೆಯ ಫಲ ಉನ್ನತಗೊಂಡಾಗ ಸಮೂಹವಾಚಿ she ಬಳಕೆಯು ಓದುಗರನ್ನು ಬೆಚ್ಚಿ ಬೀಳುವಂತೆ ಮಾಡದಿರಬಹುದು. ನಾನು ಬೇಕೆಂದೇ ಅದನ್ನು ಈಗ ಬಳಸುವುದರ ಪ್ರಯೋಜನ ಅಲ್ಲಿಗೆ ಸಾಧಿಕವಾಯಿತು. ಮುಂದೆ ಏನು ಮಾಡಬೇಕೆಂದು ಆಗ ಯೋಚಿಸುತ್ತೇನೆ. ಇತ್ಯಾತ್ಮಕ ಭಾಷೆಯ ಬಳಕೆಯು ಇತ್ಯಾತ್ಮಕ ತಾರತಮ್ಯ ಕ್ರಿಯೆಯಂತೆ. ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರ ಪರವಾಗಿ ತೋರುವ ತಾರಮ್ಯಕ್ರಮಗಳು ನ್ಯಾಯಬದ್ಧವಾದರೆ ನನ್ನ ಭಾಷಾಬಳಕೆಯೂ ನ್ಯಾಯಬದ್ಧವೇ. ಇದು ಮಧ್ಯವರ್ತಿ ಕ್ರಮ. ಬಿಡುಗಡೆ ಮತ್ತು ನ್ಯಾಯಗಳನ್ನು ಎಲ್ಲರಿಗೂ ದೊರಕಿಸುವ ದೀರ್ಘಚಾರಿತ್ರಿಕ ಪಯಣದಲ್ಲಿ ಅಗತ್ಯವಾದ ಒಂದು ಹಂತ.

ಇತರ ಬರೆಹಗಾರರು ಬೇರೆ ಆಯ್ಕೆಗಳನ್ನು ಮಾಡಿಯಾರು. ಅದಕ್ಕೆ ನಾನು ತಲೆಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ, ಈಗಿರುವ ಯಾವ ಬಳಕೆಯೂ ರಾಜಕೀಯವಾಗಿ ತಟಸ್ಥವಲ್ಲ. ಒಂದಕ್ಕಿಂತ ಇನ್ನೊಂದು ಉತ್ತಮವೆಂದು ಆಯ್ದುಕೊಳ್ಳುವ ಅವಕಾಶವೇ ಇಲ್ಲ. ಪರ್ಯಾಯಗಳನ್ನು ಆಯ್ದುಕೊಳ್ಳಲು ಜನರು ಸಿದ್ಧರಿರುವ ಭಾಷಾಜಗತ್ತನ್ನು ನಾನು ಕಲ್ಪಿಸಿಕೊಳ್ಳುತ್ತಿದ್ದೇನೆ. ಆ ಜಗತ್ತಿನಲ್ಲಿ ಮಾತ್ರ ಜನರು ಆಯ್ಕೆಗಳನ್ನು ಮಾಡಬಲ್ಲರು. ಅವರ ಮೇಲೆ ಹೇರಲಾದ ‘ಸರಿಯಾದ ರೂಪ’ಗಳನ್ನು ನಿರಾಕರಿಸಲು ಮುಂದಾಗಬಲ್ಲರು. ಎಲ್ಲ ಬಗೆಯ ಅಧಿಕಾರ ಕೇಂದ್ರಗಳನ್ನು ಧಿಕ್ಕರಿಸುವ ವಿದ್ಯಾವಂತರೂ ಕೂಡಾ ಭಾಷೆಗೆ ಸಂಬಂಧಿಸಿದ ವಿಷಯ ಬಂದಾಗ ಕುಂಯ್‌ಕುಂಯ್‌ಗುಡುವುದು ನನಗೆ ಅಚ್ಚರಿ ತರುತ್ತದೆ. ಜೊತೆಗೆ ತಲೆ ತಿನ್ನುವ ವಿಷಯವೂ ಆಗಿದೆ.

ಹಾಗಿದ್ದರೆ ಭಾಷೆಯಲ್ಲಿರುವ ಲೈಂಗಿಕತಾವಾದಿ ನೆಲೆಗಳ ಬಗ್ಗೆ ಏನು ಮಾಡಬೇಕು? ಜನರು ಬಳಸುತ್ತಿರುವ ಮಾತಿನ ಪರಿಣಾಮಗಳ ಬಗ್ಗೆ ಅವರೇ ಯೋಚಿಸುವಂತೆ ಮಾಡುವುದು ಅತ್ಯಂತ ಪರಿಣಾಮಕಾರಿ ಎಂದು ತಿಳಿದಿದ್ದೇನೆ. ಸ್ತ್ರೀವಾದಿಗಳು ಒಂದು ನಿರ್ದಿಷ್ಟ ಪರ್ಯಾಯ ರೂಪವನ್ನು ಮುಂದಿಟ್ಟು ಅದು ಲೈಂಗಿಕತಾವಾದಿ ನೆಲೆಯಿಂದ ಮುಕ್ತವಾದ ಪ್ರಮಾಣಿತ ರೂಪ ಎಂದು ಹೇಳುವುದಕ್ಕಿಂತ ಜನರು ಬಳಸುವ ಭಾಷೆ ತಟಸ್ಥವಾಗಿಲ್ಲ ಎಂಬುದನ್ನು ಅವರಿಗೇ ತೋರಿಸಿಕೊಡುವ ಕಡೆಗೆ ಗಮನ ಹರಿಸುವುದು ಸರಿಯಾದುದೆಂದು ತಿಳಿದಿದ್ದೇನೆ.

—-
ಆಕರ : Feminism and lingustic theory – Deborah Cameron.