ಪೀಠಿಕೆ

ಲೈಂಗಿಕತಾವಾದಿ ಭಾಷೆಯ ಮೂಲಕ ಜಗತ್ತನ್ನು ತಪ್ಪಾಗಿ ಪ್ರತಿನಿಧಿಸುವ ಕೆಲಸವು ನಿರಂತರವಾಗಿ ನಡೆದಿದೆ. ಅದರಿಂದ ಸಾಕಷ್ಟು ಅಪಾಯಗಳು ಆಗಿವೆ. ಇದರ ವಿರುದ್ಧ ಕಳೆದ ಮೂರು ದಶಕಗಳಲ್ಲಿ ವ್ಯಾಪಕವಾದ ಪ್ರತಿಭಟನೆಗಳು ನಡೆದಿವೆ. ಲೈಂಗಿಕತಾವಾದಿ ಭಾಷೆಯು ಹೆಂಗಸರನ್ನು ಎರಡನೆಯ ದರ್ಜೆಯ ನಾಗರಿಕರನ್ನಾಗಿ ಬಿಂಬಿಸುತ್ತದೆ. ಅವರು ಯಾರಿಗೂ ಕಾಣಿಸರು. ಅವರ ಮಾತು ಯಾರಿಗೂ ಕೇಳದು. ಯಾವಾಗಲೂ ಲೈಂಗಿಕ ಕೆಡುಕಿನ ಪ್ರತಿರೂಪಗಳೆಂಬಂತೆ ಮಂಡಿತವಾಗುತ್ತಾರೆ. ‘ತಾತ್ತ್ವಿಕ ಸುಧಾರಣಾವಾದ’ ಎಂಬ ಚೌಕಟ್ಟಿನಲ್ಲಿ ಸ್ತ್ರೀವಾದಿಗಳಾಗಿ ನಮ್ಮ ಪ್ರತಿಕ್ರಿಯೆ ಸ್ಪಷ್ಟವಾಗಿದೆ. ಭಾಷೆಯ ಈ ‘ಹುಸಿತನ’ವನ್ನು ನಾವು ಬಯಲಿಗೆಳೆಯಬೇಕು. ಅದು ಬಳಕೆಯಾಗುತ್ತ ಮುಂದುವರೆ ಯುವುದನ್ನು ಸಹಿಸಲು ನಿರಾಕರಿಸಬೇಕು. ಸಾಧ್ಯವಿದ್ದಲ್ಲಿ ತಟಸ್ಥವಾದ, ಕೆರಳಿಸದ  ಬದಲಿ ರೂಪಗಳನ್ನು ಒದಗಿಸಬೇಕು.

ಆದರೆ, ಇಷ್ಟು ಸರಳವೆಂದು ತೋರುವ ನೆಲೆಯು ಭಾಷೆಯ ವ್ಯಾಖ್ಯಾನದ ನಿಟ್ಟಿನಲ್ಲಿ ಸೋಲೊಪ್ಪಿದೆ. ಅಂದರೆ ಭಾಷೆ ಏನು ಮಾಡುತ್ತದೆ, ಅದಕ್ಕಾಗಿ ಭಾಷೆ ಅನುಸರಿಸುವ ದಾರಿಗಳಾವುವು ಎಂಬುದನ್ನು ಗುರುತಿಸಲು ಆಗಿಲ್ಲ. ಹಲವು ಸ್ತ್ರೀವಾದಿಗಳು ಸಂಸ್ಕೃತಿಯಲ್ಲಿ ಭಾಷೆಯ ಸ್ಥಾನವನ್ನು ಕುರಿತಂತೆ ನಿಶಿತವಾದ ವಿಶ್ಲೇಷಣೆಗಳನ್ನು ಮಂಡಿಸಿದ್ದಾರೆ. ಈ ಮೂಲಕ ಹೆಂಗಸರ ದಮನದ ನೆಲೆಗೆ ಭಾಷೆ ಕಾರಣವಾಗುವ ಬಗೆಯನ್ನು ತೋರಿಸಿದ್ದಾರೆ.

ಈಗ ಸುಧಾರಣಾವಾದದ ಬದಲಿಗೆ ಹೆಚ್ಚು ಪರಿಪೂರ್ಣವಾದ ಮತ್ತು ತಾತ್ತ್ವಿಕವಾದ ಚೌಕಟ್ಟೊಂದನ್ನು ಹುಡುಕುವ ಕಡೆಗೆ ಹೊರಡಬೇಕಿದೆ. ಭಾಷೆಯು ವಾಸ್ತವದ ಬಿಂಬ ಎಂಬ ಚಿಂತನೆಯನ್ನು ನಿರಾಕರಿಸಿದರೆ, ಬಳಕೆದಾರರು ತಮಗೆ ಬೇಕೆಂದಾಗ, ಮತ್ತು ಪರಿಸ್ಥಿತಿಯನ್ನು ಅನುಸರಿಸಿ ತಮ್ಮ ಭಾಷಿಕ ಅಭಿವ್ಯಕ್ತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಲ್ಲರು ಎಂಬ ನಿಲುವನ್ನು ಒಪ್ಪಲಾಗದಿದ್ದರೆ, ನಾವು ಇದಕ್ಕೆ ಪರ್ಯಾಯವಾಗಿ ಏನನ್ನು ಮಂಡಿಸಬಹುದು?

ನಾವೀಗ ಸುಧಾರಣಾವಾದದ ತತ್ವ ಮತ್ತು ಆಚರಣೆಯ ನೆಲೆಗಳನ್ನು ದಾಟಿ ಹೋಗಲು, ಮುಖ್ಯ ಉದ್ದೇಶವನ್ನು ಬಿಟ್ಟುಕೊಡದ ಸ್ತ್ರೀವಾದಿ ಭಾಷಾಸಿದ್ಧಾಂತಗಳನ್ನು ಹುಡುಕಬೇಕಾಗಿದೆ. ಇದು ಸಾಂಪ್ರದಾಯಿಕವಾಗಿ ಒಪ್ಪಿತವಾದ ‘ನಿಸರ್ಗಕ್ಕೆ ಹಿಡಿದ ಕನ್ನಡಿ’ ಎಂಬ ದೃಷ್ಟಿಕೋನವನ್ನು ತಳ್ಳಿ ಹಾಕಬೇಕಾಗಿದೆ.

ತೀವ್ರವಾದಿ ಸ್ತ್ರೀವಾದಿ ಸಿದ್ಧಾಂತಕಾರರು

ಮೊದಲಿಗೆ ತೀವ್ರವಾದಿ ಸ್ತ್ರೀವಾದವನ್ನು ಅರಿಯೋಣ. ಬಹುಮಟ್ಟಿಗೆ ಇಂಗ್ಲಿಶ್ ಭಾಷಿಕ ಸಂಸ್ಕೃತಿಗಳಲ್ಲಿ (೧೯೬೦ ರ ಬಳಿಕ ನಡೆದ ಸಾಮಾಜಿಕ ಒಳದಂಗೆಗಳ ಪರಿಣಾಮವಾಗಿ ಸಂಯುಕ್ತ ಸಂಸ್ಥಾನಗಳಲ್ಲಿ ಇದು ಹುಟ್ಟಿಕೊಂಡಿತು. ಜೊತೆಗೆ, ಬ್ರಿಟನ್ ಮತ್ತು ಆಸ್ಟ್ರೇಲಿಯಗಳಲ್ಲಿ ಕೂಡಾ) ಚಾಲ್ತಿಯಲ್ಲಿದ್ದ ಅಲೋಚನಾಕ್ರಮ ಮತ್ತು ಕ್ರಿಯಾವಿಧಾನಗಳನ್ನು ಈ ಹೆಸರಿನಿಂದ ಕರೆದಿದ್ದೇನೆ. ಇದರಲ್ಲಿ ಹಲವು ಎಳೆಗಳಿವೆ. ವಿಸ್ತಾರಗೊಳ್ಳುತ್ತಾ ಹೋದಂತೆ ಅದರ ವೈವಿಧ್ಯಗಳೂ ಹೆಚ್ಚುತ್ತಾ ಹೋಗಿವೆ. ಆದರೆ ಇವೆಲ್ಲಕ್ಕೂ ಸಮಾನವಾದ ಚರಿತ್ರೆಯೊಂದು ಇರುವುದರಿಂದ ಒಂದೇ ಸೂತ್ರದಲ್ಲಿ ಇರಿಸಬಯಸುತ್ತೇನೆ. ತೀವ್ರ ಪ್ರತಿಭಟನೆ ಇದರ ಮುಖ್ಯ ಚಹರೆ. ಚಿಕ್ಕ ಚಿಕ್ಕ ಗುಂಪುಗಳನ್ನು ಕಟ್ಟಿಕೊಂಡಿರುತ್ತದೆ. (ಆ ಗುಂಪುಗಳಲ್ಲಿ ಸಾಮಾನ್ಯವಾಗಿ ಗಂಡಸರಿರುವುದಿಲ್ಲ). ಜಂಡರ್ ಕುರಿತ ವಿಷಯಗಳು ಇದರ ಮುಖ್ಯ ಕಾರ್ಯಸೂಚಿ. (ಈ ನೆಲೆಯಲ್ಲಿ ಸಮಾಜವಾದಿ ಸ್ತ್ರೀವಾದ ಮತ್ತು ಆಧುನಿಕೋತ್ತರ ಸ್ತ್ರೀವಾದಗಳಿಗಿಂತ ಇದು ಭಿನ್ನ)

ನಾನು ತೀವ್ರವಾದಿ ಸಿದ್ಧಾಂತಕಾರರೆಂದು ಗುರುತಿಸುವ ಹೆಂಗಸರು ಲೈಂಗಿಕತಾವಾದಿ ಮಾತುಗಳಿಗೆ ಬದಲಾಗಿ ಲೈಂಗಿಕತಾವಾದಿಯಲ್ಲದ ಮಾತುಗಳನ್ನು ಬಳಸಿದರಷ್ಟೇ ಸಾಕು ಎನ್ನುವುದನ್ನು ಒಪ್ಪುವುದಿಲ್ಲ. ಏಕೆಂದರೆ, ಈಗ ಅಂಥ ತಟಸ್ಥ ಭಾಷೆ ಎಂಬುದೇ ಇಲ್ಲ. ಗಂಡಸರಿಗೆ ಸೇರಿದ ಮತ್ತು ಅವರಿಂದ ನಿಯಂತ್ರಿತವಾದ ಇಡೀ ವ್ಯವಸ್ಥೆಯು ಲೈಂಗಿಕತಾವಾದದಿಂದ ತುಂಬಿ ತುಳುಕುತ್ತಿದೆ. ಅಲ್ಲದೆ ಗಂಡುಭಾಷೆ ಎಂಬುದು ಆರ್ವೆಲ್ ಹೇಳಿದಂತೆ ಯೋಚನಾ ವಿಧಾನವನ್ನು ನಿಯಂತ್ರಿಸುವ ಮಾದರಿಯದ್ದು. ಏಕೆಂದರೆ ಭಾಷೆಯ ಮೂಲಕವೇ ನಾವು ವಾಸ್ತವವನ್ನು ಕಟ್ಟಿಕೊಳ್ಳುತ್ತೇವೆಂದು ಈ ಸಿದ್ಧಾಂತಕಾರರು ನಂಬುತ್ತಾರೆ. ಭಾಷೆಗೊಂದು ಮಿತಿ ಇದೆ ಎಂದು ಹೇಳುವವರೆಲ್ಲರೂ, ತಮ್ಮ ದೃಷ್ಟಿಕೋನದಲ್ಲಿ ಜಗತ್ತನ್ನು ಗ್ರಹಿಸುವ ಹಾಗೆ ನಮ್ಮನ್ನು ಒತ್ತಾಯಿಸುತ್ತಿರುತ್ತಾರೆ.

ಸ್ತ್ರೀವಾದಿ ಚಳುವಳಿಯಲ್ಲಿ ಈ ದೃಷ್ಟಿಕೋನವು ತುಂಬಾ ಪ್ರಭಾವಶಾಲಿಯಾಗಿದೆ. ಈ ತೀವ್ರವಾದಿ ಸ್ತ್ರೀ ವಾದಿಗಳ ಬರವಣಿಗೆಯ ತುಂಬಾ ‘ಬಾಯಿಮುಚ್ಚಿಸುವಿಕೆ’, ‘ಪ್ರತ್ಯೇಕೀಕರಣ’ ಮತ್ತು ‘ಬಳಸಿಕೊಳ್ಳುವಿಕೆ’  ಎಂಬ ಮಾತುಗಳು ಕಾಣಿಸಿಕೊಳ್ಳುತ್ತವೆ. ನಮ್ಮ ಭಾಷೆಯು  ಅನಧಿಕೃತವಾಗುವುದರಿಂದಾಗಿ ನಮ್ಮನ್ನು ಮತ್ತು ನಾವು ಬದುಕುತ್ತಿರುವ ಲೋಕವನ್ನು ಬದಲಿಸಲು ನಮಗಿರುವ ಸಾಮರ್ಥ್ಯವನ್ನು ಕಡೆಗಣಿಸುವಂತಾಗಿದೆ. ಇದೇ ಮಾತನ್ನು ಮೇರಿ ಡೇಲಿ ಹೀಗೆ ಹೇಳಿದ್ದಾಳೆ -‘ನಾನು ಹೆಂಗಸು ಎಂದು ಹೇಳಿದಾಗ ಅಥವಾ ಬರೆದಾಗ, ಅಂಥ ಪ್ರತಿಯೊಂದು ಸಂದರ್ಭದಲ್ಲೂ ಆಕೆ ತನ್ನಿಂದ ಬೇರೆಯೇ ಆಗಿರುತ್ತಾಳೆ. ಆಕೆ ಮಾತಾಡಲು, ಬರೆಯಲು, ಭಾಷೆಯೊಳಗೆ ಪ್ರವೇಶಿಸಬೇಕಾಗಿರುವುದರಿಂದ ಈ ಒಡಕು ಕಾಣಿಸಿಕೊಳ್ಳುತ್ತದೆ. ‘ನಾನು’ ಎಂಬುದು ಹೀಗೆ ಒಡೆದು ಹೋಗುವುದರಿಂದ ಆಕೆಯ ಅಂತರಂಗ ಹಾಗೂ ಆಕೆಯಲ್ಲಿರುವ ಭಾವಿಸುವ, ಅರಿಯುವ ಸಾಮರ್ಥ್ಯದ ಸಮಗ್ರತೆ ಕೂಡಾ ಒಡೆದು ಹೋಗುತ್ತದೆ. ಆಗ ಆಕೆಯ ಒಳಜಗತ್ತಿನ ದನಿಯು ಮೂಕವಾಗ ಬೇಕಾಗುತ್ತದೆ.  ಹೊರಗಿನ ದನಿಯು ತನಗೇ ಅಪರಿಚಿತವಾದ, ತನ್ನಿಂದ ಬೇರೆಯೇ ಆದ ನುಡಿಗಟ್ಟುಗಳಲ್ಲಿ ಗಳಹುತ್ತಿರುತ್ತದೆ.’

ಅಥವಾ ಆಡ್ರಿನ್ ರಿಚ್ ಮಾತಿನಲ್ಲಿ ಹೇಳುವುದಾದರೆ, ಅದು ಹೀಗಿದೆ – ‘ನಾವು ಬಳಸುತ್ತಿರುವ ಭಾಷೆಯ ಬಗೆಗೆ ನಾವು ಎಚ್ಚರಗೊಂಡಾಗ ನಮಗೆ ಗಲಿಬಿಲಿ ಉಂಟಾಗುತ್ತದೆ. ನಾವು ಅದನ್ನು ಬಳಸುತ್ತಿಲ್ಲ, ಅದು ನಮ್ಮನ್ನು ಬಳಸುತ್ತಿದೆ ಎಂಬುದು ಗೊತ್ತಾಗುತ್ತದೆ. ಆಗ ಈವರೆಗೆ ಹೆಂಗಸರು ಒಟ್ಟಾಗಿ ಎಂದೂ ಬಳಸದ ಸಂಪನ್ಮೂಲವೊಂದರ ಸುಳಿವು ದೊರೆಯುತ್ತದೆ. … ಎಲ್ಲಿಯವರೆಗೆ ನಮ್ಮ ಭಾಷೆಯಲ್ಲಿ ಕೊರತೆಗಳಿರುತ್ತವೋ ಅಲ್ಲಿಯವರೆಗೆ ನಮ್ಮ ದೃಷ್ಟಿಕೋನಕ್ಕೆ ಆಕಾರವಿರುವುದಿಲ್ಲ. ನಮ್ಮ ಭಾವನೆ ಮತ್ತು ಆಲೋಚನೆಗಳು ಹಳೆಯ ಚಕ್ರಗಳಿಗೆ ಸಿಲುಕಿ ಕೊಂಡಿರುತ್ತವೆ. ನಾವು ‘ಕ್ರಾಂತಿಕಾರಿ’ಗಳಂತೆ ಕಾಣಿಸಿಕೊಂಡರೂ ಪರಿವರ್ತನೆಗೆ ಕಾರಣಕರ್ತರಾಗಿರುವುದಿಲ್ಲ’.

ಮೇರಿ ಡೇಲಿ ಮತ್ತು ಆಡ್ರಿನ್ ರಿಚ್‌ರ ಈ ಮಾತುಗಳು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಂಗಸರ ಅನುಭವಗಳು ಅನಧಿಕೃತಗೊಳ್ಳುವ, ಪ್ರತ್ಯೇಕಗೊಳ್ಳುವ ಬಗೆಯನ್ನು ಹೇಳುತ್ತವೆ. ಆದರೆ, ಎಲ್ಲಿಯೋ ಅಧಿಕೃತವಾದ ಮತ್ತು ಇಡಿಯಾದ ಹೆಣ್ಣುತನವೊಂದನ್ನು ಗಳಿಸಲು ಸಾಧ್ಯವಿದೆ ಎಂಬ ಆಶಾತಂತುವೂ ಈ ಮಾತುಗಳಲ್ಲಿದೆ. ಡೇಲಿ ಮತ್ತು ರಿಚ್ – ಇಬ್ಬರೂ ಹೇಳುವಂತೆ ನಾವೀಗ ಪ್ರತ್ಯೇಕಗೊಂಡಿರುವುದಕ್ಕೆ ಭಾಷೆಯೇ ಮೂಲಕಾರಣ. ಅದನ್ನು ಕುರಿತು ನಾವು ಗಮನ ಹರಿಸದಿದ್ದರೆ, ಪರಿವರ್ತನೆಗಾಗಿ ನಾವು ನಡೆಸುವ ಎಲ್ಲ ಯತ್ನಗಳೂ ವಿಫಲವಾಗುತ್ತವೆ. ಅಲ್ಲದೆ, ಒಮ್ಮೆ ಗಮನ ಹರಿಸಿದೆವೆಂದರೆ, ಅದೇ ನಮ್ಮ ಪರಿವರ್ತನೆಗೆ ಬೇಕಾದ ಸಾಮಗ್ರಿಯನ್ನು ನೀಡಬಲ್ಲದು. ಭಾಷೆ ನಮ್ಮನ್ನು ‘ಒಡೆಯುತ್ತದೆ’ ಅದನ್ನು ನಾವು ಮರುಗಳಿಸಿದರೆ ಅದು ನಮ್ಮನ್ನು ಮರಳಿ ‘ಕಟ್ಟಬಲ್ಲದು’.

ಈ ಬಗೆಯ ಚಿಂತನೆಯನ್ನು ಒಪ್ಪುವ ಭಾಷಾತತ್ವ ಯಾವುದು? ನಾನಿಲ್ಲಿ ಪ್ರಸ್ತುತವೆನಿಸುವ ಎರಡು ಸ್ತ್ರೀವಾದಿ ಭಾಷಾತತ್ತ್ವಗಳನ್ನು ಪರಿಶೀಲಿಸುತ್ತೇನೆ. ಶೆರ್ಲಿ ಮತ್ತು ಎಡ್ವಿನ್ ಆರ್ಡೆನರ್ ಅವರು ಪ್ರಸ್ತುತ ಪಡಿಸಿದ ‘ಮೂಕಗೊಂಡ ಸಮೂಹ’ ಸಿದ್ಧಾಂತ ಒಂದು. ಇನ್ನೊಂದು ಡೇಲ್ ಸ್ಪೆಂಡರ್ ಮಂಡಿಸಿದ ‘ಗಂಡು ಕಟ್ಟಿದ ಭಾಷೆ’ ಸಿದ್ಧಾಂತ. ಇದರೊಡನೆ ಸೂಜೆಟ್ ಹೇಡನ್ ಎಲ್ಲಿನ್ ಮಂಡಿಸಿದ ತೀವ್ರವಾದಿ ಸ್ತ್ರೀವಾದಿ ಸಿದ್ಧಾಂತವೆನಿಸಿದ ‘Native tongue’ ಕೃತಿಯನ್ನೂ ಗಮನಿಸಲಿದ್ದೇನೆ. ಹಲವು ವಿಷಯಗಳಲ್ಲಿ ಮತ್ತು ಗ್ರಹಿಕೆಗಳಲ್ಲಿ ಈ ಸಿದ್ಧಾಂತಕಾರರು ಸಮಾನರಾಗಿರುವುದರಿಂದ ಇವರನ್ನು ಒಟ್ಟಾಗಿ ಪರಿಶೀಲಿಸುತ್ತಿದ್ದೇನೆ.

ಇವರಲ್ಲಿರುವ ಸಮಾನ ಅಂಶಗಳಲ್ಲಿ ಭಾಷಿಕ ವಿಧಿವಾದವೂ ಒಂದು. ತೀವ್ರವಾದಿ ಸ್ತ್ರೀವಾದಿ ಭಾಷಿಕಸಿದ್ಧಾಂತಗಳು ನಮ್ಮ ಚಿಂತನೆ ಮತ್ತು ಗ್ರಹಿಕೆಗಳನ್ನು, ಹಾಗೂ ಆ ಮೂಲಕ ನಮ್ಮ ವಾಸ್ತವವನ್ನು ಭಾಷೆಯೇ ನಿರ್ಧರಿಸುತ್ತದೆ ಎಂದು ತಿಳಿಯುತ್ತವೆ. (ಇವರಲ್ಲಿ ಕೆಲವರು ಇಷ್ಟು ತೀವ್ರವಾಗಿ ವಾದಿಸದಿದ್ದರೂ ಭಾಷೆಯು ನಮ್ಮ ಗ್ರಹಿಕೆಗಳನ್ನು ನಿಯಂತ್ರಿಸುವುದೆಂದು ಹೇಳುತ್ತಾರೆ.) ಇವರ ಎರಡನೆಯ ಸಮಾನ ಗ್ರಹಿಕೆ ಎಂದರೆ, ಪಿತೃಪ್ರಧಾನವ್ಯವಸ್ಥೆಯಲ್ಲಿ ಎಲ್ಲ ಸಂಪನ್ಮೂಲಗಳನ್ನೂ ಹಿಡಿತದಲ್ಲಿಟ್ಟು ಕೊಂಡಿರುವ ಗಂಡಸರೇ ಭಾಷೆಯನ್ನೂ ನಿಯಂತ್ರಿಸುತ್ತಾರೆ ಎಂಬುದಾಗಿದೆ. ಭಾಷೆಯನ್ನು ಹೇಗೆ ಬಳಸಬೇಕು, ಅದರಿಂದ ಯಾವ ಅರ್ಥವನ್ನು ಪಡೆದುಕೊಳ್ಳಬೇಕು ಎಂಬುದು ಗಂಡಸರ ನಿಯಂತ್ರಣದಲ್ಲಿದೆ. ಆದ್ದರಿಂದ ಭಾಷೆಯಲ್ಲಿ ಲೋಕವನ್ನು ಗಂಡುನೆಲೆಯಿಂದ ನೋಡುವ ಬಗೆ ಬೇರು ಬಿಟ್ಟಿದೆ. ಮೂರನೆಯದಾಗಿ, ಭಾಷೆಯ ಬಳಕೆದಾರರಾಗಿ ಹೆಂಗಸರಿಗೆ ಇರುವ ಅವಕಾಶಗಳು ಕುಂಠಿತಗೊಂಡಿವೆ ಎಂದು ಈ ಸ್ತ್ರೀವಾದಿಗಳು ಹೇಳುತ್ತಾರೆ. ಅವರು ‘ಗಂಡು’ ಭಾಷೆಯನ್ನು ಬಳಸಬಹುದು. ಆದರೆ ಅದರಿಂದ ಅವರು ತಮ್ಮ ಅನುಭವ ಮತ್ತು ಗ್ರಹಿಕೆಗಳನ್ನು ಹುಸಿಗೊಳಿಸಿಕೊಳ್ಳುತ್ತಾರೆ. ಇದೇ ‘ಪ್ರತ್ಯೇಕೀಕರಣ’. ಇಲ್ಲವೇ ಅವರು ಹೆಚ್ಚು ಅಧಿಕೃತವಾಗಿ ತಮ್ಮನ್ನು ಮಂಡಿಸಿಕೊಳ್ಳಲು ಮುಂದಾಗಲೂಬಹುದು. ಆದರೆ, ಅದಕ್ಕೆ ಬೇಕಾದ ಭಾಷಿಕ ಸಂಪನ್ಮೂಲಗಳ ಕೊರತೆ ಇದೆಯೆಂದು ಗೊತ್ತಾದಾಗ ‘ಮೌನ’ದ ಮೊರೆ ಹೋಗುತ್ತಾರೆ.

ಗಂಡು ಕಟ್ಟಿದ ಸಾಂಕೇತಿಕ ವಿಶ್ವದಲ್ಲಿ ಬದುಕುವ, ಮಾತಾಡುವ, ಇಲ್ಲವೇ ಸಂಕೇತಿಸುವ ಹೆಣ್ಣಿಗೆ ಇರುವ ನೆಲೆಗಳನ್ನು ಮೇಲಿನ ಚಿಂತನೆಗಳು ಹೇಳುತ್ತಿವೆ. ಭಾಷಿಕವಾಗಿ ಅಧಿಕೃತಗೊಂಡ ಗಂಡುಲೋಕದೃಷ್ಟಿ ಮತ್ತು ತಾವು ಅಭಿವ್ಯಕ್ತಿಸಲಾಗದ ತಮ್ಮ ಲೋಕದೃಷ್ಟಿಗಳ ನಡುವೆ ಧ್ರುವಗಳ ಅಂತರವಿರುವುದನ್ನು ಅರಿಯುತ್ತಾರೆ; ಅದನ್ನು ನಿಭಾಯಿಸಬೇಕಾದ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಬಗೆಯ ಸಿದ್ಧಾಂತಕಾರರಲ್ಲಿ ಕೆಲವರು ಹೆಂಗಸರಿಗೆ ಈ ನಿಭಾವಣೆ ಅಸಾಧ್ಯ ಎನ್ನುತ್ತಾರೆ. ಹೆಂಗಸರು ಭಾಷೆಯಿಂದ ಮಾತ್ರವಲ್ಲದೆ, ಅದು ಸಂಕೇತಿಸಲಾಗದ (ಪ್ರತಿನಿಧಿಸಲಾಗದ) ಹೆಣ್ಣುಅನುಭವದ ಲೋಕದಿಂದಲೂ ಪ್ರತ್ಯೇಕಿತರಾಗುತ್ತಾರೆ. ಈ ಸಿದ್ಧಾಂತಗಳನ್ನು ನಾವೀಗ ಪರಿಶೀಲಿಸೋಣ. ಇದರ ಮಿತಿಗಳನ್ನು ಕುರಿತು ಪ್ರಶ್ನೆಗಳನ್ನು ಎತ್ತೋಣ. ಮೊದಲಿಗೆ, ವಿಧಿವಾದ ಮತ್ತು ಗಂಡು ನಿಯಂತ್ರಣದ ನೆಲೆಯನ್ನು ಕೈಗೆತ್ತಿಕೊಳ್ಳಬಹುದು.

ವಿಧಿವಾದ

ಪ್ರಚಲಿತವಿರುವ ತೀವ್ರವಾದಿ ಸ್ತ್ರೀವಾದಿ ಭಾಷಾಸಿದ್ಧಾಂತಗಳಲ್ಲಿ ಭಾಷೆಯು ನಮ್ಮ ಲೋಕಗ್ರಹಿಕೆಯನ್ನು ನಿರ್ಧರಿಸುತ್ತದೆ; ಹೀಗೆ ನಿರ್ಧಾರಗೊಳ್ಳುವುದೇ ‘ವಾಸ್ತವ’ ಎಂಬ ವಿಚಾರವು ಪ್ರಮುಖವಾಗಿದೆ. ಆದರೆ, ಭಾಷಾಶಾಸ್ತ್ರಜ್ಞರ ದೃಷ್ಟಿಯಿಂದ ಇದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ. ಇದನ್ನು ಸಾಧಿತ ಸತ್ಯವೆಂದು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ನಾವು ಒಂದು ಹೆಜ್ಜೆ ಹಿಂದೆ ಹೋಗಿ ಭಾಷಾ ವಿಧಿವಾದವನ್ನು ಸ್ತ್ರೀವಾದಿಗಳು ರೂಪಿಸಿಕೊಂಡ ತಾತ್ವಿಕ ಹಿನ್ನೆಲೆಯನ್ನು ನೋಡಬೇಕಾಗಿದೆ.

ಭಾಷೆ ಮತ್ತು ವಾಸ್ತವತೆ

ಭಾಷಾ ವಿಧಿವಾದವನ್ನು ಕುರಿತ ಎಲ್ಲ ಚರ್ಚೆಗಳೂ ವಾಸ್ತವತೆಯನ್ನು ನಿರ್ದಿಷ್ಟ ಬಗೆಯಲ್ಲಿ ನೋಡುವ ಸಂದರ್ಭಗಳಲ್ಲಿ ನಡೆಯುತ್ತಿವೆ. ಏಕೆಂದರೆ, ನಾವು ವಾಸ್ತವವೆಂದು ಪರಿಗಣಿಸುವುದರ ಹಿಂದೆ ಮಾನವ ಗ್ರಹಿಕೆಯ ಪ್ರಕ್ರಿಯೆಗಳು ಕಾರ್ಯನಿರತವಾಗಿರುತ್ತವೆ, ‘ಆ ವಾಸ್ತವತೆ ನಮ್ಮಿಂದ ಹೊರಗಡೆ ಸ್ವತಂತ್ರವಾಗಿ ಇದ್ದು, ಸುಮ್ಮನೆ ನಮ್ಮ ಗ್ರಹಿಕೆಗೆ ದಕ್ಕುವುದೆಂದು ತಿಳಿಯುವಂತಿಲ್ಲ’ ಎಂದು ಒಪ್ಪದ ಹೊರತು ನಮ್ಮ ಗ್ರಹಿಕೆಯ ಮೇಲೆ ಭಾಷೆಯು ಪ್ರಭಾವ ಬೀರುವ ಪ್ರಶ್ನೆ ಮಹತ್ವವನ್ನು ಪಡೆಯುವುದಿಲ್ಲ. ಹಾಗೆ ನೋಡಿದರೆ ಕೆಲವರು ನಿಜಜಗತ್ತೆಂಬುದು ನಮ್ಮಿಂದ ಹೊರಗೆ ಸ್ವತಂತ್ರವಾಗಿ ಇದೆ ಎಂದೂ, ಅದನ್ನು ನಾವು ರೂಪಿಸುವುದಿಲ್ಲವೆಂದೂ ಹೇಳುತ್ತಾರೆ. ಅಂದರೆ, ಭಾಷೆಯು ಆ ವಾಸ್ತವವನ್ನು ವಿಕೃತಗೊಳಿಸಬಹುದು; ಅಥವಾ ಆ ವಾಸ್ತವವನ್ನು ನಾವು ಗ್ರಹಿಸಲಾಗದೆ ಹೋಗಬಹುದು. ವಾಸ್ತವ ಮಾತ್ರ ತನ್ನ ಪಾಡಿಗೆ ತಾನು ಇದ್ದೇ ಇರುತ್ತದೆ.

ಇತರ ಸಿದ್ಧಾಂತಕಾರರು ವಾಸ್ತವವನ್ನು ಸೃಷ್ಟಿಸುವಲ್ಲಿ ನಮ್ಮ ಪಾತ್ರವೂ ಇದೆ ಎಂದು ವಾದಿಸುತ್ತಾರೆ. ಅದರಲ್ಲೂ ಸಾಮಾಜಿಕ ವಾಸ್ತವದ ಮಟ್ಟಿಗಂತೂ ಈ ಮಾತು ನಿಜ ಎನ್ನುತ್ತಾರೆ. (ಭೌತಜಗತ್ತಿನ ಗುರುತ್ವಾಕರ್ಷಣೆ ಮುಂತಾದ ಸಂಗತಿಗಳಿಗೆ ಇದು ಅನ್ವಯವಾಗದಿರಬಹುದು) ನಮ್ಮ ಪ್ರಜ್ಞೆಗೆ ಕೋಟ್ಯಂತರ ಚೋದಕಗಳು ಪ್ರತಿಕ್ಷಣವೂ ದಾಳಿ ಮಾಡುತ್ತವೆ. ಒಂದು ವೇಳೆ ನಾವು ಖಾಲಿ ತೆರೆಗಳಂತಿದ್ದು ಆ ಎಲ್ಲ ಚೋದಕಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದರೆ, ನಮ್ಮ ಮನಸ್ಸಿನಲ್ಲಿ ಗುರುತು ಚಹರೆ ಇಲ್ಲದ, ಅರ್ಥವಿಹೀನ ಗೊಂದಲವಷ್ಟೇ ಉಳಿಯಬೇಕಿತ್ತು. ಈ ಲೋಕ ನಮಗೆ ಅರ್ಥಪೂರ್ಣವಾಗಿ ಗೋಚರವಾಗಬೇಕಾದರೆ ನಾವು ಕೆಲವು ಸಂಗತಿಗಳ ಕಡೆಗೆ ಗಮನ ಹರಿಸುತ್ತ, ಮತ್ತೆ ಕೆಲವನ್ನು ಕಡೆಗಣಿಸುತ್ತಾ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಳ ಬರುವ ಚೋದಕಗಳನ್ನು ವರ್ಗೀಕರಿಸಿ ಅರ್ಥೈಸಬೇಕಾಗುತ್ತದೆ.

ಹಾಗಿದ್ದಲ್ಲಿ, ವ್ಯಕ್ತಿಯು ಕಲಿಯುವ ಭಾಷೆಯು, ವರ್ಗೀಕರಣ ಮತ್ತು ಅರ್ಥೈಸುವಿಕೆಯ ಪ್ರಕ್ರಿಯೆಯಲ್ಲಿ ಪಾತ್ರ ವಹಿಸುವುದೇ ಎಂದು ಕೇಳುವುದು ಯುಕ್ತವಾಗುತ್ತದೆ. ಈ ಲೋಕವನ್ನು ಜನರು ಅರ್ಥೈಸುವಲ್ಲಿ ಸಾಂಸ್ಕೃತಿಕ ನೆಲೆಯ ಭಿನ್ನತೆಗಳು ಇವೆಯಾಗಿ ಮೇಲೆ ಹೇಳಿದ ಪ್ರಶ್ನೆ ಮತ್ತಷ್ಟು ಬಲಗೊಳ್ಳುತ್ತದೆ. ಭಾಷೆಗಳಲ್ಲಿ ವರ್ಗೀಕರಣ ವ್ಯವಸ್ಥೆಯು ಸಿದ್ಧಗೊಂಡು ಮೊದಲೇ ಇರುವುದರಿಂದ ಅದನ್ನು ಬಳಸುವವರ ಗಮನವನ್ನು ನಿರ್ದಿಷ್ಟ ಸಂಗತಿಗಳ ಕಡೆಗೆ ಹರಿಯುವಂತೆ ಮಾಡಬಲ್ಲುದು. ಭಾಷೆಯನ್ನು ಬಳಸುವ ಜೀವಿಯು ಕ್ರೂರ ವಾಸ್ತವವನ್ನು ಎದುರಿಸಬೇಕಿಲ್ಲ. ಹಲವಾರು ಪರಿಕಲ್ಪನೆಗಳ ಜಾಲದ ಮೂಲಕ ಸೋಸಿ ಬಂದ ವಾಸ್ತವದ ಒಂದು ಪಾಠಾಂತರವನ್ನು ತಿಳಿದರೆ ಸಾಕಾಗುತ್ತದೆ. ಭಾಷೆಯ ಬಳಕೆದಾರರಿಗೆ ಈ ಸೌಲಭ್ಯವು ಲಭ್ಯವಿರುತ್ತದೆ.

ಆದರೆ, ಇದೊಂದೇ ಸಾಧ್ಯವಿರುವ ವಿವರಣೆಯಲ್ಲ. ತಾತ್ವಿಕ ಸುಧಾರಣಾಕಾರರು ಭಾವಿಸುವಂತೆ ಭಾಷೆಯು ಆಲೋಚನೆಯ ಸಾಧನ. ಜನರು ಇರುವ ಭಿನ್ನ ಪರಿಸರ ಮತ್ತು ಅನುಭವಗಳಿಂದ ಪ್ರಭಾವಿತವಾದ ಗ್ರಹಿಕೆಗಳನ್ನು ಭಾಷೆಯಲ್ಲಿ ಸಂಕೇತೀಕರಣ ಗೊಳಿಸಲಾಗುತ್ತದೆ. ಹೀಗಾದಾಗ, ವಾಸ್ತವವನ್ನು ಸಾಮಾಜಿಕವಾಗಿ ಕಟ್ಟಿದ್ದರೂ, ಅದು ಸಾಂಸ್ಕೃತಿಕವಾಗಿ ಭಿನ್ನವಾಗಿದ್ದರೂ, ಸ್ವತಂತ್ರವಾಗಿ ಮೈತಳೆದ ವಿಚಾರಗಳು ಭಾಷೆಯ ಮೂಲಕ ಅಭಿವ್ಯಕ್ತಗೊಳ್ಳುತ್ತವೆ. ಅಂದರೆ, ಭಾಷೆಯು ಗ್ರಹಿಕೆಗಳನ್ನು ಬಿಂಬಿಸುವುದೇ ಹೊರತು ನಿರ್ಧರಿಸುವದಿಲ್ಲ. ಹಲವು ಸ್ತ್ರೀವಾದಿಗಳು ಈಚಿನ ವರ್ಷಗಳಲ್ಲಿ ಎರಡನೆಯ ಸಿದ್ಧಾಂತಕ್ಕಿಂತ, ಮೊದಲನೆಯ ಸಿದ್ಧಾಂತವನ್ನೇ ಒಪ್ಪುತ್ತಿದ್ದಾರೆ. ತೀವ್ರವಾದಿ ಸ್ತ್ರೀವಾದಿಗಳಂತೂ ಭಾಷೆಯನ್ನು ವರ್ಗೀಕರಣ ಸೌಲಭ್ಯವುಳ್ಳ ವ್ಯವಸ್ಥೆ ಎಂದು ತಿಳಿಯುವುದಕ್ಕಿಂತ, ಅದೊಂದು ಕಣ್ಣುಪಟ್ಟಿ ಎಂದೇ ತಿಳಿಯುತ್ತಾರೆ. ಬೇಡವೆಂದರೂ ಹೆಂಗಸರು ತಮ್ಮ ಅನುಭವಗಳನ್ನು ಅದರೊಳಗೆ ಹೇಗೋ ಹೊಂದಿಸಬೇಕಾಗುತ್ತದೆ. ಪಿತೃಪ್ರಧಾನ ಗಾಜಿನ ಚಪ್ಪಲಿಯೊಳಗೆ ಕುರೂಪಿ ಸೋದರಿಯ ಪಾದಗಳು ಹೊಂದಿ ಕೊಳ್ಳಲಿಲ್ಲವಷ್ಟೇ? ಈ ಸ್ತ್ರೀವಾದಿಗಳ ಭಾಷೆಯು ಅಭಿಪ್ರಾಯದಂತೆ ಪುರುಷ ಕೇಂದ್ರಿತವಾಗಿದೆ. ಹಾಗಾಗಿ, ಅದು ನಮ್ಮ ವಾಸ್ತವವನ್ನು ಸೋಸುವುದು ಮಾತ್ರವಲ್ಲದೆ, ಅದನ್ನು ವಿಕೃತಗೊಳಿಸಿ ಬಿಡುತ್ತದೆ.

ಈ ನೆಲೆಯಲ್ಲಿ ಚಿಂತಿಸುವ ಸ್ತ್ರೀವಾದಿಗಳು ಸಸೂರ್‌ನ ಭಾಷಾಸಿದ್ಧಾಂತಗಳನ್ನು ನೆಮ್ಮಲು ಹೋಗುತ್ತಾರೆ. ಜೊತೆಗೆ ಸಪೀರ್ ಮತ್ತು ವೂರ್ಫ್‌ರ ಸಿದ್ಧಾಂತಗಳನ್ನು ಆಶ್ರಯಿಸುತ್ತಾರೆ. ಹಾಗಾಗಿ, ಅವರು ಹಿಂದೆ ಬಿದ್ದಿರುವ ಸಿದ್ಧಾಂತಗಳನ್ನು ಮೊದಲು ಪರಿಶೀಲಿಸುವುದು ಒಳ್ಳೆಯದು. ಅವು ಏನು ಹೇಳುತ್ತವೆ, ಅವುಗಳ ಪರ ಮತ್ತು ವಿರೋಧವಾಗಿ ಏನು ಹೇಳಲಾಗಿದೆ, ಮತ್ತು ಸ್ತ್ರೀವಾದಿ ಚಿಂತನೆಗಳು ಮೂಲ ಸಿದ್ಧಾಂತಕ್ಕೆ ಎಷ್ಟು ನಿಷ್ಠವಾಗಿವೆ – ಮುಂತಾದ ಸಂಗತಿಗಳನ್ನು ನೋಡೋಣ.

ವಿಧಿವಾದದ ಸೈದ್ಧಾಂತಿಕ ಬೇರುಗಳು
ಸಸೂರ್

ಭಾಷಾ ವಿಧಿವಾದವನ್ನು ಒಂದು ಸೈದ್ಧಾಂತಿಕ ವಿಚಾರವನ್ನಾಗಿ ಇಲ್ಲಿ ಚರ್ಚಿಸುತ್ತಿದ್ದೇನೆ. ಈ ವೈಚಾರಿಕ ನೆಲೆಯನ್ನು ಆಧುನಿಕ ಭಾಷಾವಿಜ್ಞಾನದ ಜನಕನೆಂದು ಹೆಸರಾದ ಸಸೂರ್‌ನ ಚಿಂತನೆಗಳಿಂದ ಮೊದಲು ಮಾಡುವುದು ಅಗತ್ಯವಾಗಿದೆ.

ಸಸೂರ್ ತನ್ನ ‘Course in linguistics’ ಗ್ರಂಥದಲ್ಲಿ ಭಾಷೆಯು ಈಗಾಗಲೇ ಇರುವ ವೈಚಾರಿಕ ಆಕೃತಿಗಳನ್ನು ಬಿಂಬಿಸುತ್ತದೆ ಎಂಬ ನಿಲುವನ್ನು ನಿರಾಕರಿಸಿದ್ದಾನೆ. ‘ನಮ್ಮ ಚಿಂತನೆಗಳು ಮನೋಸ್ತರದಲ್ಲಿ ಆಕಾರವಿಲ್ಲದೆ ಅಸ್ಪಷ್ಟವಾಗಿ ಇರುತ್ತವೆ. ಸಂಕೇತಗಳ ನೆರವಿಲ್ಲದೆ ಎರಡು ವಿಚಾರಗಳ ನಡುವೆ ಇರುವ ಭಿನ್ನತೆಯನ್ನು ಗುರುತಿಸಲು ಸಾಧ್ಯವಿಲ್ಲವೆಂದು ತತ್ತ್ವಶಾಸ್ತ್ರಜ್ಞರು ಮತ್ತು ಭಾಷಾಶಾಸ್ತ್ರಜ್ಞರು ಒಪ್ಪಿದ್ದಾರೆ. ಭಾಷೆ ಇಲ್ಲದ ಆಲೋಚನೆ ಎಂಬುದು ಅಸ್ಪಷ್ಟ. ಅದಕ್ಕೆ ಚಹರೆಗಳಿರುವುದಿಲ್ಲ. ಪೂರ್ವನಿರ್ಧಾರಿತ ವೈಚಾರಿಕ ಆಕೃತಿಗಳು ಇರುವುದಿಲ್ಲ. ಅದರಲ್ಲೂ ಭಾಷೆಯು ಅದಕ್ಕೊಂದು ಆಕಾರಕೊಡುವ ಮೊದಲಂತೂ ಅಂಥಾ ಆಕೃತಿಗಳು ಇರಲಾರವು’.

ಈ ಉಲ್ಲೇಖವನ್ನು ಭಾಷಾ ವಿಧಿವಾದವೆಂದು ಒಮ್ಮೆಲೇ ತೀರ್ಮಾನಿಸುವುದು ಸಮಸ್ಯಾತ್ಮಕವಾದುದು. ಸಸೂರ್‌ನ ಗ್ರಂಥವು ಪದಗಳನ್ನು ಹೆಸರುಗಳೆಂದು ತಿಳಿಯುವ ವಾದವನ್ನು ನಿರಾಕರಿಸುತ್ತದೆ. ಆದರೆ, ತನ್ನ ನಿಲುವನ್ನು ಒಂದು ಅತಿಗೆ ಒಯ್ಯುವುದಿಲ್ಲ. ಪೂರ್ವನಿಶ್ಚಿತ (ಮನೋಗತ) ವೈಚಾರಿಕ ಆಕೃತಿಗಳು ಇರುವುದಿಲ್ಲ ಎಂದು ಹೇಳಿದ ಮಾತ್ರಕ್ಕೆ ಸಂಕೇತಗಳು ನಮ್ಮ ಗ್ರಹಿಕೆಗಳನ್ನು ನಿಯಂತ್ರಿಸುತ್ತವೆ ಎಂದು ಹೇಳಿದಂತೇನೂ ಆಗಲಿಲ್ಲ. ಭಾಷೆ ಮತ್ತು ಆಲೋಚನೆಗಳನ್ನು ಬೇರ್ಪಡಿಸುವುದು ಸಾಧ್ಯವಿಲ್ಲ; ಆದರೆ, ಅವುಗಳಲ್ಲಿ ಯಾವುದು ಮೊದಲು, ಯಾವುದು ಬಳಿಕ ಎಂಬ ಪ್ರಶ್ನೆಯೇ ಇಲ್ಲ – ಇದು ಸಸೂರ್‌ನ ನಿಲುವು.

ಸಸೂರ್‌ನ ಚಿಂತನೆಗಳನ್ನು ಬೆಳೆಸಿದ ಲಕಾನ್ ವಿಧಿವಾದವು, ಸಂಕೇತವೆಂಬುದು ಯಾದೃಚ್ಛಿತ ಎನ್ನುವ ಸಿದ್ಧಾಂತದಲ್ಲಿಯೇ ಅಡಕಗೊಂಡಿದೆ ಎಂದು ವಾದಿಸುತ್ತಾನೆ. ಈ ಸಂಕೇತವು ವ್ಯವಸ್ಥೆಯಲ್ಲಿರುವ ಇತರ ಸಂಕೇತಗಳ ಸಂಬಂಧದಲ್ಲಿ ಮಾತ್ರ ತನ್ನ ಅರ್ಥವನ್ನು ಕಂಡುಕೊಳ್ಳುತ್ತದೆ. ಆದರೆ, ಸಸೂರ್‌ನ ವಿಚಾರಗಳಿಗೆ ಲಕಾನ್ ಮತ್ತಷ್ಟನ್ನು ಸೇರಿಸುತ್ತಾನೆ. ನಾವು ಈ ಸಂಕೇತ ವ್ಯವಸ್ಥೆಯನ್ನು ಅರಿಯುವ ಮೂಲಕವೇ ಸಂಸ್ಕೃತಿಯಲ್ಲಿ ನೆಲೆಗೊಳ್ಳುತ್ತೇವೆ ಎಂಬುದು ಲಕಾನ್ ಸೇರಿಸಿದ ಹೊಸ ವಿಚಾರ. ಈ ವಾದವನ್ನು ಒಪ್ಪಿದರೆ, ಲೋಕವನ್ನು ಸಂಕೇತಗಳು ಯಾದೃಚ್ಚಿಕವಾಗಿ ವಿಭಜಿಸುವ ನೆಲೆಗೆ ಹೆಚ್ಚಿನ ಮಹತ್ವ ಬರುತ್ತದೆ. ಏಕೆಂದರೆ, ಇದನ್ನು ಹೊರತು ಪಡಿಸಿ ಬೇರೆ ವಾಸ್ತವವಿಲ್ಲ. ಮಗು ಭಾಷೆಯನ್ನು ಕಲಿಯುವಾಗ ಅದರಲ್ಲಿ ರಚನೆಗೊಂಡ ವಾಸ್ತವವನ್ನೂ ತನ್ನದಾಗಿಸಿಕೊಂಡು ಬಿಡುತ್ತದೆ. ಲಕಾನ್ ಪ್ರಕಾರ ‘ಅರ್ಥವೆಂಬುದು ಹೇಳುವವರಲ್ಲಿ ಇರುವುದಿಲ್ಲ. ಅದಿರುವುದು ಸಂಕೇತಗಳ ವ್ಯವಸ್ಥೆಯಲ್ಲಿ’.

ಭಾಷೆಯ ಒಂದು ಸ್ತರವಾದ langue ಎಂಬುದು ಸಮೂಹಪ್ರಜ್ಞೆಗೆ ಸೇರಿದ್ದು. ಸಸೂರ್ ಇದನ್ನು ‘ಇದು ಮಾತಿನ ಸಾಮಾಜಿಕ ನೆಲೆ. ವ್ಯಕ್ತಿಯ ಹೊರಗಿರುವ ಈ ಸ್ತರವನ್ನು ಯಾರೂ ಸೃಷ್ಟಿಸಲಾರರು, ಇಲ್ಲವೇ ಪರಿವರ್ತಿಸಲಾರರು’ ಎನ್ನುತ್ತಾನೆ. ಇದು ಸಸೂರ್‌ನ ಹೊಸ ವಿಚಾರ.  ಇದರ ಬೆನ್ನು ಹತ್ತಿದ ಲಕಾನ್ ಇನ್ನೊಂದು ಅತಿಯ ಕಡೆಗೆ ಹೋಗುತ್ತಾನೆ. ಇದು ಸಮಸ್ಯೆಗಳಿಗೆ ಕಾರಣವಾಗಿದೆ.

ಲಕಾನ್‌ಪ್ರಣೀತ ಸ್ತ್ರೀವಾದವನ್ನು ನಾವಿಲ್ಲಿ ಚರ್ಚಿಸುವುದು ಬೇಡ. ನಾವೀಗ ಪರಿಶೀಲಿಸುತ್ತಿರುವ ತೀವ್ರವಾದಿ ಸ್ತ್ರೀವಾದಗಳಿಗೆ ಅಂಟಿಕೊಂಡಿರುವ ವಿಧಿವಾದದ ಹಣೆಪಟ್ಟಿಗೆ ಬೇರೊಂದು ವೈಚಾರಿಕ ಆಕರವಿದೆ. ಇದು ಸಪೀರ್ ಮತ್ತು ವೂರ್ಫ್ ಮಂಡಿಸಿದ ಚಿಂತನೆಗಳು.

ಸಪೀರ್ ಮತ್ತು ವೂರ್ಫ್

ಎರಡನೆಯ ಮಹಾಯುದ್ಧಕ್ಕಿಂತ ಮೊದಲು ಕ್ರಿಯಾಶೀಲರಾಗಿದ್ದ ಮಾನವ ಭಾಷಾಶಾಸ್ತ್ರಜ್ಞರಾದ ಸಪೀರ್ ಮತ್ತು ವೂರ್ಫ್‌ರ ವಿಚಾರಗಳು ವಿಧಿವಾದದ ಬೇರುಗಳೆಂದು ಭಾಷಾಶಾಸ್ತ್ರ ಗುರುತಿಸುತ್ತದೆ. ಹಾಗೆ ನೋಡಿದರೆ ಭಾಷೆಯು ಲೋಕದೃಷ್ಟಿಯನ್ನು ನಿರ್ಧರಿಸುತ್ತದೆ ಎಂಬ ವಿಚಾರವನ್ನು ಭಾಷಾಶಾಸ್ತ್ರಜ್ಞರು ಸಪೀರ್-ವ್ಯೂರ್ಫ್ ಪ್ರಮೇಯ ಎಂದೇ ಕರೆದಿದ್ದಾರೆ.

ಸಪೀರ್ ಮತ್ತು ವೂರ್ಫ್ ವಿಧಿವಾದವು ಸಸೂರ್‌ನ ಸಿದ್ಧಾಂತಗಳಿಗಿಂತ ಭಿನ್ನವಾದ ಮೂಲವನ್ನು ಹೊಂದಿದೆ. ಇದಕ್ಕೆ ಇವರಿಬ್ಬರೂ ಮಾನವಶಾಸ್ತ್ರಜ್ಞರಾಗಿದ್ದುದೇ ಕಾರಣ. ಇವರು ಅಮೆರಿಕದ ಮೂಲನಿವಾಸಿಗಳ ಸಂಸ್ಕೃತಿಯನ್ನು ವ್ಯಾಪಕವಾಗಿ ಅಧ್ಯಯನ ಮಾಡಿದವರು. ಒಂದೇ ಸಂಗತಿಯನ್ನು ಭಿನ್ನ ಸಂಸ್ಕೃತಿಗಳು ಭಿನ್ನವಾಗಿ ಗ್ರಹಿಸುವುದನ್ನು ಗುರುತಿಸಿದರು. ಉದಾಹರಣೆಗೆ, ಕಾಲ ಮತ್ತು ದೇಶಗಳು, ವರ್ಣಪಟಲ, ಚೇತನ ಮತ್ತು ಅಚೇತನ ವಸ್ತುಗಳ ವಿಭಜನೆ, ಇಲ್ಲವೇ ವಸ್ತುಗಳು ಮತ್ತು ಘಟನೆಗಳನ್ನು ವಿಭಜಿಸುವ ಕ್ರಮ – ಇವೆಲ್ಲವನ್ನೂ ಸಂಸ್ಕೃತಿಗಳು ಬೇರೆ ಬೇರೆ ರೀತಿಯಲ್ಲೇ ಗ್ರಹಿಸುತ್ತವೆ ಎಂಬುದನ್ನು ಗುರುತಿಸಿದರು.

ಈ ಗಮರ್ನಾಹವಾದ ಗ್ರಹಿಕೆಯ ಭಿನ್ನತೆಗಳಿಗೆ ಭಾಷೆಯೇ ಮೂಲಕಾರಣವೆಂದು ಸಪೀರ್ ಮತ್ತು ವೂರ್ಫ್ ವಾದಿಸಿದರು. ‘ಮಾನವ ಜೀವಿಗಳು ನಿರ್ದಿಷ್ಟ ಭಾಷೆಯ ಕೃಪೆಗೆ ಒಳಗಾಗಿದ್ದಾರೆ. ಈ ಭಾಷೆಯು ಅವರ ಸಮಾಜದ ಅಭಿವ್ಯಕ್ತಿ ಮಾಧ್ಯಮವಾಗಿರುತ್ತದೆ. ‘ನಿಜಜಗತ್ತೆಂ’ಬುದು ಬಹುಮಟ್ಟಿಗೆ ಅಪ್ರಜ್ಞಾಪೂರ್ವಕವಾಗಿ ಈ ಸಮುದಾಯದ ಭಾಷೆಯ ವರಸೆಗಳಲ್ಲಿ ಅಡಕಗೊಂಡಿರುತ್ತದೆ. ಒಂದೇ ಸಾಮಾಜಿಕ ವಾಸ್ತವವನ್ನು ಎರಡು ಭಾಷೆಗಳು ಒಂದೇ ರೀತಿಯಲ್ಲಿ ಪ್ರತಿನಿಧಿಸಲಾರವು. ಭಿನ್ನ ಸಮಾಜಗಳು ಬದುಕುತ್ತಿರುವ ಲೋಕಗಳು ತಾವೂ ಭಿನ್ನವಾಗಿರುತ್ತವೆಯೇ ಹೊರತು ಒಂದೇ ಲೋಕ ಬೇರೆ ಬೇರೆಯವರಲ್ಲಿ ಬೇರೆ ಬೇರೆ ಹಣೆಪಟ್ಟಿಯೊಡನೆ ಪ್ರತಿನಿಧಿತವಾಗಿರುವುದಿಲ್ಲ’ ಎಂದು ಸಪೀರ್ ಹೇಳುತ್ತಾನೆ.

ಪ್ರತಿಯೊಂದು ಭಾಷೆಯಲ್ಲೂ ಇಂಥ ಸುಪ್ತ ಹಿನ್ನೆಲೆ ಇದ್ದೇ ಇರುವುದೆಂದು ವೂರ್ಫ್ ಕೂಡಾ ಹೇಳುತ್ತಾನೆ. ‘ಯಾವೊಬ್ಬ ವ್ಯಕ್ತಿಯೂ ಲೋಕವನ್ನು ಸಂಪೂರ್ಣವಾಗಿ, ನಿಷ್ಪಕ್ಷಪಾತವಾಗಿ ಬಣ್ಣಿಸಲು ಸಾಧ್ಯವಿಲ್ಲ. ತಾನು ಸ್ವತಂತ್ರವಾಗಿರುವುದಾಗಿ ಭಾವಿಸಿದರೂ ನಿರ್ದಿಷ್ಟ ಬಗೆಯ ಪ್ರತಿನಿಧೀಕರಣಗಳಿಂದ ನಿಯಂತ್ರಣಕ್ಕೆ ಆ ವ್ಯಕ್ತಿ ಒಳಗಾಗುತ್ತಿರುವುದು ಖಂಡಿತ’ ಎಂದು ವೂರ್ಫ್ ಹೇಳಿದ್ದಾನೆ.

ಒಂದೆರಡು ಉದಾಹರಣೆಗಳ ಮೂಲಕ ಸಪೀರ್ ಮತ್ತು ವೂರ್ಫ್‌ರ ಮನಸ್ಸಿನಲ್ಲಿ ಇದ್ದುದೇನು ಎಂಬುದನ್ನು ತಿಳಿಯಲು ಯತ್ನಿಸಬಹುದು. ಏಕೆಂದರೆ, ಕೆಲವು ಸ್ತ್ರೀವಾದಿಗಳು ಸಪೀರ್ ಮತ್ತು ವೂರ್ಫ್‌ರ ನಿಲುವುಗಳನ್ನು ತುಂಬಾ ಸರಳೀಕರಸಿದ್ದಾರೆ. ವೂರ್ಫ್ ಪ್ರಣೀತ ವಿಧಿವಾದವು ವ್ಯಾಕರಣಲಕ್ಷಣಗಳ (ವಾಕ್ಯರಚನಾ ವಿಧಾನ, ಪದಾಂಗಗಳು) ಮೇಲೆ ಒತ್ತು ನೀಡುತ್ತದೆ. ಪದಗಳ ಅರ್ಥ ಈ ನಿಲುವಿಗೆ ಅಷ್ಟು ಮುಖ್ಯವಲ್ಲ. ವ್ಯಾಕರಣ ಎಂಬುದು ಹಿನ್ನೆಲೆಯಲ್ಲಿ ಇದ್ದುಕೊಂಡು ಕಾರ್ಯ ನಿರ್ವಹಿಸುವುದರಿಂದ ಅದರ ಪ್ರಭಾವ ಗಾಢವಾದುದು ಎಂದು ವೂರ್ಫ್ ಹೇಳುತ್ತಾನೆ. ಈ ಲಕ್ಷಣಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಭಾಷೆಯ ಬಳಕೆದಾರರು ಪದಗಳ ಅರ್ಥಗಳನ್ನು ಗಮನಿಸಿದರೂ, ಅಂತಸ್ಥವಾದ ವ್ಯಾಕರಣ ನಿಯಮಗಳು ಅವರ ಗಮನಕ್ಕೆ ಬಾರದೆ ಹೋಗುತ್ತದೆ.

ತನ್ನ ವಾದವನ್ನು ಸಮರ್ಥಿಸಲು ವೂರ್ಫ್ ಹೀಗೆ ಹೇಳುತ್ತಾನೆ – ಮಾತಾಡುವವರು ತಮ್ಮ ಲೋಕಗ್ರಹಿಕೆಯನ್ನು ರೂಪಿಸಿಕೊಳ್ಳುವಾಗ ಅವರ ಭಾಷೆಯ ವ್ಯಾಕರಣ ನಿಯಮವು ನಿರ್ದೇಶಿಸುವ ಪದವರ್ಗದಿಂದ (ನಾಮಪದ ಇಲ್ಲವೇ ಕ್ರಿಯಾಪದ) ಪ್ರಭಾವಿತರಾಗುತ್ತಾರೆ. ಇಂಗ್ಲಿಶ್ ಭಾಷಿಕರು fire ಎಂಬ ಪದವನ್ನು ಒಂದು ವಸ್ತುವೆಂದು ಗ್ರಹಿಸುತ್ತಾರೆ. ಹೀಗೆ ಗ್ರಹಿಸಲು ಆ ಭಾಷೆಯ ವ್ಯಾಕರಣದಲ್ಲಿ fire ಎಂಬುದನ್ನು ನಾಮಪದವೆಂದು ಗುರುತಿಸಿರುವುದೇ ಕಾರಣ. ಆ ಪದದ ಅರ್ಥ ಭಾಷಿಕರ ಗ್ರಹಿಕೆಯ ಮೇಲೆ ಪ್ರಭಾವ ಬೀರುವುದಿಲ್ಲ. ಆದರೆ ಬೆಂಕಿ ಎಂಬುದು ಒಂದು ಪ್ರಕ್ರಿಯೆಯೇ ಹೊರತು ಒಂದು ವಸ್ತುವಲ್ಲ. ಅದನ್ನು ನಾಮಪದ ವರ್ಗಕ್ಕೆ ಸೇರಿಸಿರುವುದು ಎಲ್ಲ ಭಾಷೆಗಳಿಗೂ ಸಮಾನವಾದ ಅಂಶವಲ್ಲ. ಹೀಗೆ ವರ್ಗೀಕರಣಗೊಂಡಿದ್ದರಿಂದ ಭಾಷಿಕರು ತಮ್ಮ ಗ್ರಹಿಕೆಯನ್ನು ಮಿತಿಗೊಳಪಡಿಸಿಕೊಳ್ಳಬೇಕಾಗುತ್ತದೆ. ಇದೇ ಮಾತು ‘fist’ ಪದಕ್ಕೂ ಅನ್ವಯಿಸುತ್ತದೆ. Kick ಎಂಬುದು ಕ್ರಿಯಾಪದವಾದರೆ, fist ಏಕಲ್ಲ? ಇದು ಕೂಡಾ ದೇಹದ ಕೆಲವು ಅಂಗಗಳ ಚಲನೆಯನ್ನು ಒಳಗೊಂಡಿದೆಯಷ್ಟೇ?

ನಾಮಪದಗಳು ಸೂಚಿಸುವುದನ್ನು ವಸ್ತುಗಳೆಂದೂ, ಕ್ರಿಯಾಪದಗಳು ಸೂಚಿಸುವುದನ್ನು ಪ್ರಕ್ರಿಯೆಗಳೆಂದೂ ಗ್ರಹಿಸುವ ಪ್ರವೃತ್ತಿಯು ನಮ್ಮಲ್ಲಿದೆ ಎಂದು ವೂರ್ಫ್ ಹೇಳುತ್ತಿದ್ದಾನೆ. ಈ ಪ್ರವೃತ್ತಿಗೆ ನಿರ್ದಿಷ್ಟ ವ್ಯಾಕರಣಗಳ ಯಾದೃಚ್ಛಿಕ ಮತ್ತು ವ್ಯತ್ಯಸ್ತ ಲಕ್ಷಣಗಳೇ ಕಾರಣ. ನಾವು ಲೋಕವನ್ನು ನೋಡುವ ರೀತಿಯನ್ನು ಇದು ಪ್ರಭಾವಿಸಿದರೂ ಹಾಗಾಗುತ್ತಿರುವುದು ನಮಗೆ ಗೊತ್ತಾಗುವುದೇ ಇಲ್ಲ.

ಈ ‘ಹಿನೆಲೆ’ಯ ಒತ್ತಡಗಳಿಂದ ನಾವು ಇನ್ನೊಂದು ಭಾಷೆಯೊಡನೆ ಸಂಪರ್ಕ ಪಡೆದಾಗ ಬಿಡುಗಡೆಯನ್ನು ಪಡೆಯುತ್ತೇವೆ. ಏಕೆಂದರೆ, ಆ ಭಾಷೆ ಅಡಕಗೊಳಿಸಿಕೊಂಡಿರುವ ಬಗೆಯೇ ಭಿನ್ನವಾದುದು. ಒಂದೇ ಭಾಷಾವಂಶಕ್ಕೆ ಸೇರಿದ ಯೂರೋಪಿಯನ್ ಭಾಷೆಗಳನ್ನು ಬಳಸುವ ಭಾಷಿಕರು ಬಹುದೀರ್ಘಕಾಲದ ಸಂಪರ್ಕದಿಂದಾಗಿ ಮತ್ತು ನಿಡುಗಾಲದ ಸಮಾನ ಚಾರಿತ್ರಿಕ ನೆಲೆಯಿಂದಾಗಿ, ತಮ್ಮ ಗ್ರಹಿಕೆಗಳನ್ನು ಮಾನವ ಗ್ರಹಿಕೆಗಳ ಮಾದರಿಗಳೆಂದು ನಂಬಿ ಬಿಟ್ಟಿದ್ದಾರೆ.  ಅಮೆರಿಕನ್ ಮೂಲನಿವಾಸಿಗಳ ಮತ್ತು ಇತರ ಭಾಷೆಗಳ ಅಧ್ಯಯನಗಳು ಈ ನಂಬಿಕೆಯನ್ನು ಛಿದ್ರಗೊಳಿಸುತ್ತಿವೆ.

ಇನ್ನೊಂದು ಉದಾಹರಣೆ : ಯುರೋಪಿನ ಭಾಷಿಕರು ಒಂದು ಘಟನೆಯನ್ನು ವರದಿ ಮಾಡುವಾಗ ಕಾಲಸಂಬಂಧಿ ನೆಲೆಗಳನ್ನು ಅಡಕಗೊಳಿಸುತ್ತಾರೆ. ಅಂದರೆ, ಘಟನೆ ನಡೆದ ಕಾಲ, ಮತ್ತು ಅದನ್ನು ವರದಿ ಮಾಡುತ್ತಿರುವ ಕಾಲಗಳ ನಡುವೆ ಇರುವ ಸಾಪೇಕ್ಷ ಅಂತರಕ್ಕೆ ಗಮನ ನೀಡುತ್ತಾರೆ. ಇಂಗ್ಲಿಶ್‌ನಂತಹ ಭಾಷೆಯಲ್ಲಿ ಕಾಲಸೂಚನೆ ಇಲ್ಲದೆ ಒಂದು ವಾಕ್ಯವನ್ನು ರಚಿಸುವುದು ಅಸಾಧ್ಯ. ವೂರ್ಫ್ ಅಧ್ಯಯನ ಮಾಡಿದ ಅಮೆರಿಕದ ಮೂಲನಿವಾಸಿಗಳಾದ ಹೋಪಿ ಜನರಲ್ಲಿ ಒಂದು ಸಂಗತಿಯನ್ನು ವರದಿ ಮಾಡುವಾಗ ಆ ಸಂಗತಿಯನ್ನು ವರದಿ ಮಾಡುತ್ತಿರುವ ವ್ಯಕ್ತಿ ತಾನೇ ಕಂಡದ್ದೋ ಅಥವಾ ಬೇರೆಯವರಿಂದ ಕೇಳಿದ್ದೋ ಎಂಬುದನ್ನು ಸೂಚಿಸುವ ವ್ಯಾಕರಣಾಂಶವನ್ನು ಸೇರಿಸುವುದು ಸಹಜ, ಅಲ್ಲದೆ, ಅನಿವಾರ್ಯವೂ ಕೂಡಾ. ಆದರೆ ಇಂಗ್ಲಿಶ್‌ನಲ್ಲಿ ಹಾಗಿಲ್ಲ. ಒಂದು ವೇಳೆ ಹಾಗೆ ಹೇಳಬೇಕೆಂದರೆ ಸುತ್ತು ಬಳಸಿ ‘I heard that….’ ಎಂದು ಹೇಳಬೇಕೇ ಹೊರತು, ವಾಕ್ಯಾಂಶದ ಮೂಲಕ ಹೇಳುವುದು ಆಗದ ಮಾತು. ಇಂಗ್ಲಿಶ್ ಭಾಷಿಕರಿಗೆ ಪ್ರತಿಯೊಂದು ಸಂಕಥನಕ್ಕೂ ಕಾಲಸೂಚನೆ ಸಹಜ ಮತ್ತು ಅನಿವಾರ್ಯ. ಏಕೆಂದರೆ, ಕಾಲಸೂಚನೆ ಇಂಗ್ಲಿಶ್ ವ್ಯಾಕರಣಕ್ಕೆ ಮೂಲಭೂತವಾದುದು. ಇಂಥ ನೆಲೆಗಟ್ಟು ಇಲ್ಲದ ಹೋಪಿ ಭಾಷೆಯು ಕಾಲಸೂಚನೆಯನ್ನು ಸುಲಭವಾಗಿ ಬಿಟ್ಟುಕೊಡಬಲ್ಲದು.

ಈ ಉದಾಹರಣೆಗಳಲ್ಲಿ ಅಡಕಗೊಂಡ ಸಂಗತಿಗಳನ್ನು ನೋಡೋಣ. ಯಾವುದೇ ಭಾಷೆಯ ವ್ಯಾಕರಣ ರಚನೆಗಳು ಮತ್ತು ನಿಯಮಗಳು, ಭಾಷಿಕರು ಈ ಲೋಕವನ್ನು ಗ್ರಹಿಸುವ ರೀತಿಯನ್ನು, ಹಿನ್ನೆಲೆಯಲ್ಲಿದ್ದುಕೊಂಡು ರೂಪಿಸುತ್ತಿರುತ್ತವೆ. ಹಾಗಾಗಿ, ಅಪ್ರಜ್ಞಾಪೂರ್ವಕವಾದ ಗ್ರಹಿಕೆಯ ಪೂರ್ವಾಗ್ರಹಗಳು ನೆಲೆಗೊಳ್ಳಬಹುದು. ಒಂದಕ್ಕೊಂದು ಅರ್ಥಾತ್ ಸಂಬಂಧವಿಲ್ಲದ (ಇಂಗ್ಲಿಶ್ ಮತ್ತು ಹೋಪಿ) ವ್ಯಾಕರಣಗಳು, ಆಯಾ ಭಾಷೆಗಳನ್ನಾಡುವವರಲ್ಲಿ ಅರ್ಥಾತ್ ಸಂಬಂಧವಿಲ್ಲದ ಲೋಕವಾಸ್ತವಗಳನ್ನು ನೆಲೆಗೊಳಿಸುತ್ತದೆ. ಹೀಗಿದ್ದರೂ, ಸಪೀರ್ ಈ ಬಗೆಯ ಭಾಷಿಕ ಪೂರ್ವಾಗ್ರಹಗಳನ್ನು ಮೀರಿ ನಿಲ್ಲಲು ಸಾಧ್ಯವಿಲ್ಲವೆಂದು ತಿಳಿಯಲಿಲ್ಲ. ‘ನಮ್ಮ ಅನುಭವ ಜಗತ್ತು ಬೆಳೆಯುತ್ತಾ ಹೋದಂತೆ ಭಾಷೆಯ ಇಂಥ ಹಿಡಿತಗಳ ವಿರುದ್ಧ ಹೋರಾಡುವುದನ್ನು ನಾವು ಕಲಿಯಬೇಕು’ ಎನ್ನುತ್ತಾನೆ.

ಈ ಮಾತು ಹೇಳಲು ಕಾರಣವಿದೆ. ಸಪೀರ್ ಮತ್ತು ವೂರ್ಫ್ ರನ್ನು ಅತಿರಂಜಿತ ನೆಲೆಯಲ್ಲಿ ಗ್ರಹಿಸಿ ಅವರು ಎಂದೂ ಬದಲಾಗದ ನೆಲೆಗಳನ್ನು ಮಂಡಿಸಿದವರೆಂದು ಈಚೆಗೆ ಟೀಕಿಸುವುದು ಹೆಚ್ಚಾಗಿದೆ. ಉದಾಹರಣೆಗೆ, ಭಾಷೆಯು ಆಲೋಚನೆಯನ್ನು ನಿಯಂತ್ರಿಸುವುದೇ ನಿಜವಿದ್ದರೆ, ಆಗ ಭಾಷಾಂತರ ಮತ್ತು ಅನ್ಯಭಾಷಾಕಲಿಕೆಯಂತಹ ಕೆಲಸಗಳು ಅಸಾಧ್ಯವೆನಿಸುವಷ್ಟು ಕಷ್ಟಕರವಾಗಬೇಕು. ಅಲ್ಲದೆ, ನವನವೀನವಾದ ಚಿಂತನಾಕ್ರಮ ವೆಂಬುದು ಹುಟ್ಟುವುದೇ ಸಾಧ್ಯವಾಗುವುದಿಲ್ಲ. ಮನಃಶಾಸ್ತ್ರ ಮತ್ತು ಭಾಷಾಶಾಸ್ತ್ರಗಳಲ್ಲಿ ನಡೆದ ಪ್ರಯೋಗಗಳಿಂದ ಮಾನವರು ವ್ಯಾಕರಣ ವರ್ಗೀಕರಣದ ಕೊರಕಲನ್ನು ಬಳಸಿಕೊಂಡು ಹೋಗಬಲ್ಲರೆಂದು ತಿಳಿದು ಬಂದಿದೆ. ಅಂದರೆ, ಸಾಂಸ್ಕೃತಿಕ ಸಾಪೇಕ್ಷತೆ ಎಂಬುದು ಕೇವಲ ಭಾಷಿಕ ನೆಲೆಗೆ ಸಂಬಂಧಿಸಿದ್ದಲ್ಲ.

ಹೀಗೆಲ್ಲ ಹೇಳಿದಾಗ ಮೂಲ ವಾದವನ್ನು ತೀರಾ ಸರಳಗೊಳಿಸಿದಂತೆ ಆಗುತ್ತದೆ. ಏಕೆಂದರೆ, ಆ ವಾದಗಳು ಪ್ರವೃತ್ತಿಗಳನ್ನು ಹೇಳುತ್ತವೆಯೇ ಹೊರತು ಗ್ರಹಿಕೆಯ ಅನನ್ಯ ಮಾದರಿಯನ್ನಲ್ಲ. ಅಲ್ಲದೆ, ಅವರ ಕಾಲದಲ್ಲಿ ನಡೆಯುತ್ತಿದ್ದ ವಾಗ್ವಾದಗಳ ಹಿನ್ನೆಲೆಯಲ್ಲಿ ಈ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಅಂಥ ವಾಗ್ವಾದಗಳಲ್ಲಿ ಒಂದು, ಸಾಂಸ್ಕೃತಿಕ ವ್ಯತ್ಯಾಸದ ಸ್ವರೂಪ ಮತ್ತು ಮಹತ್ವವನ್ನು ಕುರಿತದ್ದಾಗಿತ್ತು. ಸಪೀರ್ ಮತ್ತು ವೂರ್ಫ್ ಇಬ್ಬರೂ ಫ್ರಾಂಜ್ ಬೊಅಸ್‌ನ ಅನುಯಾಯಿಗಳು. ಇಬ್ಬರೂ ಆದಿಮ ಸಂಸ್ಕೃತಿಗಳ ಸಮರ್ಥಕರು. ಆ ಸಂಸ್ಕೃತಿಗಳ ಭಾಷೆ ಮತ್ತು ಆಲೋಚನೆಗಳನ್ನು ಭಿನ್ನವೆಂದು ತೋರಿಸಿಕೊಟ್ಟರೂ, ಅವು ಕೀಳು ಎಂಬುದನ್ನು ಒಪ್ಪದವರು. ಈ ಸಾಪೇಕ್ಷತೆಯ ನೆಲೆಯನ್ನು ಅನುಸರಿಸುವ ಮೂಲಕ ತಮಗಿಂತ ಮೊದಲು ಬಂದು ಹೋದ ಮಾನವಶಾಸ್ತ್ರಜ್ಞರ ಜನಾಂಗವಾದಿ ವಿಕಾಸ ಸಿದ್ಧಾಂತಗಳನ್ನು ಪ್ರಜ್ಞಾಪೂರ್ವಕವಾಗಿಯೇ ಎದುರಿಸುತ್ತಿದ್ದವರು. ಈಗ ಜನಾಂಗೀಯ ವಾದವು ಮಹತ್ವವನ್ನು ಕಳೆದುಕೊಂಡಿರುವುದರಿಂದ ಅದರ ವಿರುದ್ಧ ಹುಟ್ಟಿದ ಸಪೀರ್ ಮತ್ತು ವೂರ್ಫ್‌ರ ಚಿಂತನೆಗಳೂ ಚಲಾವಣೆ ಕಳೆದುಕೊಂಡಿವೆ. ಆದಿಮ ಭಾಷೆಗಳು ಎಂಬವು ಇಲ್ಲ. ಈ ನಿಲುವನ್ನು ಒಪ್ಪಿಕೊಂಡ ಭಾಷಾಶಾಸ್ತ್ರಜ್ಞರು ಈಗ ಭಾಷೆಗಳ ನಡುವಣ ವ್ಯತ್ಯಾಸಕ್ಕಿಂತ ಭಾಷಿಕ ಸಮಾನಾಂಶಗಳ ಶೋಧಕ್ಕೆ ಹೊರಟಿದ್ದಾರೆ. ಎರಡನೆಯ ಮಹಾಯುದ್ಧಕ್ಕೆ ಮೊದಲು ಈ ಪ್ರವೃತ್ತಿ ಹಿಮ್ಮೊಗವಾಗಿತ್ತು.

ಸಪೀರ್ ವೂರ್ಫ್ ಪ್ರಮೆಯವು ಚರ್ಚಿಸುವ ಇನ್ನೊಂದು ಪ್ರಶ್ನೆ ವೈಜ್ಞಾನಿಕ ವರ್ಣನೆಯು ಎಷ್ಟು ‘ವಸ್ತುನಿಷ್ಠ’ ವಾಗಿರಬಲ್ಲದು ಎಂಬುದು. ಇಂದಿನ ದಿನಗಳಲ್ಲಿ ವರ್ಣಿಸುವವರು ಸಾಂಸ್ಕೃತಿಕ ಪೂರ್ವಾಗ್ರಹಗಳಿಂದ ಪ್ರೇರಿತರಾಗಿರುತ್ತಾರೆ. ಸಪೀರ್ ಮತ್ತು ವೂರ್ಫ್‌ರು ಇಂದು ಮುಂದುವರೆದಿರುವ ಈ ವಾಗ್ದಾದದ ಆರಂಭದ ದಿನಗಳಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದರು.

ಜನರು ತಮ್ಮ ಭಾಷೆಯಲ್ಲಿರುವ ಪೂರ್ವನಿಶ್ಚಿತ ನೆಲೆಗಳಿಗೂ, ಲೋಕವನ್ನು ಕುರಿತು ಅವರು ರೂಪಿಸಿಕೊಳ್ಳುವ ಪರಿಕಲ್ಪನೆಗಳಿಗೂ ಹೊಂದಿಕೆಯಾಗುವುದಿಲ್ಲ ಎಂಬುದನ್ನು ಸಪೀರ್ ಮತ್ತು ವೂರ್ಫ್ ನಿರಾಕರಿಸುವುದಿಲ್ಲ. ಭಾಷೆಯ ಒತ್ತಾಯಗಳನ್ನು ಜನರು ಮೀರಬಲ್ಲರು, ಅದಕ್ಕಾಗಿ ಅವರು ತುಂಬಾ ಶ್ರಮ ವಹಿಸಬೇಕಾಗುತ್ತದೆಂದು ಅವರು ಹೇಳಿದರು. ಭಾಷಿಕ ಅಧ್ಯಯನಗಳು ಜನರಿಗೆ ತಮ್ಮ ಭಾಷೆಯ ಹಿಡಿತಗಳಿಂದ ಹೊರಬರಲು ನೆರವಾಗುವುದೆಂದು ಸಪೀರ್ ನಂಬಿದನು. ಹೀಗಾಗಿ, ವಿಧಿವಾದವನ್ನು ಇವರು ಮಂಡಿಸಿದರೆಂದು ಹೇಳಲಾಗುವುದಿಲ್ಲ. ಆದರೆ, ಭಾಷಿಕ ರಚನೆಗಳಿಂದ ನಾವು ಪ್ರಭಾವಿತರಾಗುತ್ತೇವೆ ಎಂದು ಹೇಳಿದ್ದು ಮಾತ್ರ ನನ್ನ ಪ್ರಕಾರ ಇನ್ನೂ ಕುತೂಹಲ ಕೆರಳಿಸುತ್ತದೆ.

ವೂರ್ಫ್ ಪ್ರಣೀತ ವಿಧಿವಾದದ ಬಗ್ಗೆ ಎತ್ತಿದ ಒಂದು ಪ್ರಶ್ನೆಯು ಸರಿಯಾದುದೆಂದು ತೋರುತ್ತದೆ. ನಿರ್ದಿಷ್ಟ ಭಾಷೆಯಲ್ಲಿ ಅಡಕವಾಗಿರುವ ಹಿನ್ನೆಲೆಯ ಗ್ರಹಿಕೆಗಳು ಕೇವಲ ಯಾದೃಚ್ಛಿಕ ಭಾಷಿಕ ಲಕ್ಷಣಗಳೇ, ಅಥವಾ ಅವು ಭಾಷೆಯಾಚೆಗಿನ ಸಾಂಸ್ಕೃತಿಕ ಆಸಕ್ತಿಗಳನ್ನು ಬಿಂಬಿಸುತ್ತವೆಯೇ? ಬೇರೆ ಮಾತುಗಳಲ್ಲಿ ಹೇಳುವುದಾದರೆ ವೂರ್ಫಿಯನ್ನರು ಪರಿಕಲ್ಪನೆಗಳ ಕುದುರೆಯನ್ನು ಹಿಂದಿರಿಸಿ ಭಾಷಿಕ ಬಂಡಿಯನ್ನು ಅದರ ಮುಂದೆ ತಂದು ನಿಲ್ಲಿಸಿದ್ದಾರೇನು? ಅವರು ನೀಡುವ ಕೆಲವು ಉದಾಹರಣೆಗಳನ್ನು (ನಾಮಪದ ಮತ್ತು ಕ್ರಿಯಾಪದಗಳನ್ನು ಕುರಿತದ್ದು) ಒಪ್ಪಬೇಕೆನಿಸುತ್ತದೆ. ಆದರೆ, ಇತರ ಉಲ್ಲೇಖಗಳ ಉದಾಹರಣೆಗಳು ಹೆಚ್ಚು ಜನಪ್ರಿಯವಾಗಿದ್ದರೂ, (ಆರ್ಕ್‌ಟಿಕ್ ಭೂಭಾಗದಲ್ಲಿನ ಜನರ ಭಾಷೆಯಲ್ಲಿ ಹಿಮ ಎನ್ನುವುದಕ್ಕೆ ಪದಗಳೇ ಇಲ್ಲ) ಅವುಗಳನ್ನು ಒಪ್ಪಲು ಸಾಧ್ಯವಾಗುತ್ತಿಲ್ಲ. ಭಾಷೆಯು ಸಾಂಸ್ಕೃತಿಕವಾಗಿ ಮಹತ್ವವಾದದ್ದನ್ನು ಬಿಂಬಿಸುತ್ತದೆ ಎಂದು ಹೇಳಬಹುದೇ ಹೊರತು, ಅದೇ, ಎಲ್ಲವನ್ನೂ ನಿರ್ಧರಿಸುವುದೆಂದು ಹೇಳಲಾಗುವುದಿಲ್ಲ.

ವೂರ್ಫ್‌ನ ವಿಚಾರಗಳ ಬೆನ್ನು ಹತ್ತಿದ ಸ್ತ್ರೀವಾದಿಗಳು ಹಲವು ಭಾಷೆಗಳಲ್ಲಿ ಲೈಂಗಿಕತಾವಾದವು ‘ಹಿನ್ನೆಲೆಯ ಗ್ರಹಿಕೆ’ಯಾಗಿ ನೆಲೆನಿಂತಿರುವುದೆಂದು ವಾದಿಸುತ್ತಾರೆ. ಇದು ಆಯಾ ಸಂಸ್ಕೃತಿಗಳು ಜಂಡರ್ ಕುರಿತು ಹೊಂದುವ ಗ್ರಹಿಕೆಗಳನ್ನು ಪ್ರಭಾವಿಸುತ್ತದೆ. ವಿಧಿವಾದವನ್ನು ಟೀಕಿಸಿದವರ ವಿಚಾರಗಳಲ್ಲಿ ಇರುವ ಅಸೂಕ್ಷ್ಮತೆಗಳು ಇವರ ಚರ್ಚೆಗಳಲ್ಲಿ ತಲೆ ಹಾಕುತ್ತವೆ. ತಮ್ಮ ವಾದಗಳು ಎಬ್ಬಿಸುವ ಪ್ರಶ್ನೆಗಳನ್ನು ನಿವಾರಿಸುತ್ತ ಇವರು ಗಮನ ಹರಿಸುವುದಿಲ್ಲ. ಹಿನ್ನೆಲೆಯ ಗ್ರಹಿಕೆಗಳು ಶುದ್ಧಾಂಗವಾಗಿ ಭಾಷಿಕವೇ ಎಂಬ ಪ್ರಶ್ನೆಯು ಭಾಷೆಯು ಲೈಂಗಿಕತಾವಾದವನ್ನು ಬಿಂಬಿಸುತ್ತದೋ, ಅಥವಾ ತಾನೇ ಅದಕ್ಕೆ ಕಾರಣವಾಗುತ್ತದೋ ಎಂಬ ಸ್ತ್ರೀವಾದಿ ವಾಗ್ವಾದಕ್ಕೆ ಅತ್ಯಗತ್ಯವಾದುದು. ಒಂದು ವೇಳೆ ಇಂಗ್ಲಿಶ್ ವ್ಯಾಕರಣವು ಭಾಷೇತರವಾದ ಸಾಂಸ್ಕೃತಿಕ ಪ್ರಮಾಣಗಳಿಗೆ ಅನುಗುಣವಾಗಿ (ಲೈಂಗಿಕ ತಾರತಮ್ಯ, ಹೆಂಗಸಿನ ಕೀಳ್ಮೆ ಮುಂತಾದವು) ಪರಿಕಲ್ಪನೆಗಳ ಜಗತ್ತನ್ನು ವರ್ಗೀಕರಿಸುತ್ತದೆ ಎಂದು ವಾದಿಸಿದರೆ, ಆಗ ಭಾಷೆಯು ಲೋಕದೃಷ್ಟಿಯನ್ನು ರೂಪಿಸುತ್ತದೆ ಎನ್ನುವುದಕ್ಕಿಂತ ಲೋಕದೃಷ್ಟಿಗೆ ವಿಧೇಯವಾಗಿರುತ್ತದೆ ಎಂದು ಹೇಳುವುದು ಹೆಚ್ಚು ಸರಿಯಾಗುತ್ತದೆ.