ಇದೆಲ್ಲವನ್ನೂ ಗಮನಿಸಿದಾಗ, ಒಟ್ಟಾರೆ ವಾಗ್ವಾದದಿಂದ ಏನೂ ಫಲಿತ ದೊರೆತಂತಾಗಲಿಲ್ಲ. ಒಂದು ವೇಳೆ (ಚಾರಿತ್ರಿಕ ಮಾಹಿತಿ ಸಮರ್ಥಿಸುವಂತೆ) ಸಮೂಹವಾಚಿ ಪುಲ್ಲಿಂಗ ಸರ್ವನಾಮದಂತಹ ವ್ಯಾಕರಣಾಂಶಗಳು ಭಾಷೆಯ ಆಚೆಗಿರುವ ಸಾಂಸ್ಕೃತಿಕ ಪೂರ್ವಾಗ್ರಹಗಳಿಂದ ಹುಟ್ಟಿ ಬಂದಿದ್ದರೂ, ಈಗ ಅದು ಇಂಗ್ಲಿಶ್ ವ್ಯಾಕರಣದ ‘ಹಿನ್ನೆಲೆಯ ಗ್ರಹಿಕೆ’ ಆಗಿದೆ ಎಂದು ವಾದಿಸಬಹುದು. (ಉದಾಹರಣೆಗೆ, ವೂರ್ಫ್ ಹೇಳಿದ ಮಾತುಗಳಲ್ಲೇ ವ್ಯಕ್ತಿಯನ್ನು he ಎಂಬ ಸರ್ವನಾಮದಿಂದ ಪ್ರತಿನಿಧೀಕರಿಸಲಾಗಿದೆ) ಈ ಹಿನ್ನೆಲೆಯ ಗ್ರಹಿಕೆಗಳು ನಮ್ಮ ನೋಟಗಳನ್ನು ಪ್ರಭಾವಿಸುತ್ತವೆ. ಅಲ್ಲದೆ, ಸುಪ್ತ ಸ್ಥಿತಿಯಲ್ಲಾದರೂ ಸೂಕ್ಷ್ಮವಾಗಿ ಲೈಂಗಿಕತಾವಾದಿ ಪೂರ್ವಾಗ್ರಹಗಳನ್ನು ಮರುಚಾಲನೆಗೆ ತರುತ್ತವೆ.

ಸಾರಾಂಶ ರೂಪದಲ್ಲಿ ಹೇಳುವುದಾದರೆ, ಸಪೀರ್ ವೂರ್ಫ್ ಪ್ರಮೇಯದಲ್ಲಿ ಸ್ತ್ರೀವಾದಿಗಳಿಗೆ ಆಸಕ್ತಿ ತರುವ ಅಂಶಗಳಿವೆ. ಆದರೆ, ವೂರ್ಫ್‌ನ ಬೆನ್ನು ಹತ್ತಿದ ಸ್ತ್ರೀವಾದಿಗಳು ಮಾತ್ರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ವಿಧಿವಾದಿ ನೆಲೆಗಳು ವಾಗ್ವಾದಕ್ಕೆ ತಕ್ಕ ಪ್ರಮುಖ ವಿಷಯಗಳಾಗಿವೆ. ಅಂಥ ಚರ್ಚೆ ನಡೆಯಬೇಕಿದೆ. ಆದರೆ, ಒತ್ತಾಯಪೂರ್ವಕವಾಗಿ ಜಗ್ಗುವುದು ಸರಿಯಲ್ಲ. ಲೈಂಗಿಕತಾವಾದಿ ಪ್ರಭಾವಗಳನ್ನು ಬೀರುವ ಹಲವು ಅಂಶಗಳಲ್ಲಿ ಭಾಷೆಯೂ ಒಂದು. ಆದರೆ ಅದಷ್ಟೇ ನಮ್ಮ ಗ್ರಹಿಕೆಯನ್ನು ನಿರ್ಧರಿಸಲಾರದು.

ಡೇಲ್ ಸ್ಪೆಂಡರ್‌ಳಂಥ ಸ್ತ್ರೀವಾದಿಗಳು ಸಪೀರ್ ವೂರ್ಫ್‌ರ ವಿಧಿವಾದವನ್ನು ಹೇಗೆ ಬಳಸಿದ್ದಾರೆ ಎನ್ನುವುದನ್ನು ನೋಡುವ ಮೊದಲು ಗಂಡಸರು ಭಾಷೆಯನ್ನು ತಮ್ಮ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದಾರೆ ಎಂಬ ಸ್ತ್ರೀವಾದಿ ಸಾಧಿತ ಸತ್ಯವನ್ನು ಒರೆಗೆ ಹಚ್ಚಬೇಕಾಗಿದೆ. ಅವರಲ್ಲಿ ಈ ನಿಲುವು ನೆಲೆಯೂರಲು ಇದ್ದ ಕಾರಣಗಳೇನು?

ನಿಯಂತ್ರಣ

ಗಂಡಸರು ಭಾಷೆಯನ್ನು ನಿಯಂತ್ರಿಸುತ್ತಾರೆಂಬ ತೀವ್ರವಾದಿ ಸ್ತ್ರೀವಾದಿಗಳ ನಿಲುವು ಭಾಷಾಶಾಸ್ತ್ರಜ್ಞರ ಅಧ್ಯಯನಗಳಿಂದ ಪ್ರೇರಿತವಾದದ್ದಲ್ಲ. ಒಂದು ಬಗೆಯಲ್ಲಿ ಅದು ವೂರ್ಫ್‌ನ ವಿಚಾರಗಳ ಮುಂದುವರಿಕೆಯಾಗಿ ತೋರಿದರೂ, ಇಪ್ಪತ್ತನೆಯ ಶತಮಾನದ ಪಾಶ್ಚಾತ್ಯ ಸಂಸ್ಕೃತಿಯು ಭಾಷೆಯನ್ನು ದಮನಕಾರಿ ರಾಜಕೀಯ ಉಪಕರಣವನ್ನಾಗಿ ಬಳಸಲಾಗುತ್ತಿದೆ ಎಂದು ಭಾವಿಸಿದ್ಧರ ಪರಿಣಾಮವಾಗಿದೆ. ಸ್ತ್ರೀವಾದ ನೆಲೆಯೂರುವ ಮೊದಲಿಂದರೂ ರಾಜಕೀಯ ಉದ್ದೇಶಗಳಿಗಾಗಿ ಭಾಷೆಯ ಮೇಲೆ ನಿಯಂತ್ರಣವಿಟ್ಟು ಕೊಳ್ಳುವುದು ರಾಜ್ಯಶಕ್ತಿಯ ಒಂದು ತಂತ್ರವೆಂದು ಭಾವಿಸಲಾಗಿದೆ.

ಈ ಸಂಕಥನವು ಪಾಶ್ಚಾತ್ಯ ಬೌದ್ದಿಕ ಪರಂಪರೆಯಲ್ಲಿ ಮೊದಲಿನಿಂದಲೂ ಹರಡಿಕೊಂಡಿದೆ. ಆದರೆ ಅದರ ಇಂದಿನ ರೂಪಕ್ಕೆ ಆಧುನಿಕ ಚಾರಿತ್ರಿಕ ಸಂದರ್ಭವೇ ಕಾರಣವಾಗಿದೆ. ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರತ್ವಗಳ ನಡುವಣ ಚರ್ಚೆಯು ಯೂರೋಪಿನಲ್ಲಿ ತಲೆಎತ್ತಿದ್ದ ಫ್ಯಾಸಿಸಂನಿಂದಾಗಿ ಮೊದಲಾಗಿತ್ತು. ಜೊತೆಗೆ ನಾಜಿ ಮರಣಕೂಪಗಳ ಮತ್ತು ಸ್ಟಾಲಿನ್‌ನ ದಮನಕಾರಿ ಆಡಳಿತದ ವಿವರಗಳು ತೆರೆದುಕೊಂಡಿದ್ದವು. ಇಷ್ಟೆಲ್ಲ ಭಯಾನಕವಾದ ಸಂಗತಿಗಳು ನಡೆದಿದ್ದರೂ ಜನ ಸಮುದಾಯ ಅದಕ್ಕೂ ತನಗೂ ಸಂಬಂಧವೇ ಇಲ್ಲದಂತೆ ಇದ್ದುದಾದರೂ ಹೇಗೆ? ಪ್ರಚಾರತಂತ್ರದ ಪಾತ್ರವೇನು?  ಸರ್ವಾಧಿಕಾರ ನೆಲೆಯೂರುವಲ್ಲಿ ಭಾಷೆಯ ಕೆಲಸವಾದರೂ ಏನು? ಜಾರ್ಜ್ ಆರ್ವೆಲ್ ಮತ್ತು ಜಾರ್ಜ್ ಸ್ಟೀನರ್ ರಂತಹ ಬರೆಹಗಾರರು ಎರಡನೇ ಜಾಗತಿಕ ಯುದ್ಧದ ಬಳಿಕ ಈ ಪ್ರಶ್ನೆಗಳನ್ನು ಕುರಿತು ಚಿಂತಿಸಿದರು. ಆರ್ವೆಲ್ ತನ್ನ ಕಾದಂಬರಿ ‘Nineteen Eighty four’ ನಲ್ಲಿ ಸರ್ವಾಧಿಕಾರಿ ಸಮಾಜವೊಂದು ಕಾರ್ಯ ನಿರ್ವಹಿಸಲು ಅಗತ್ಯವಿದ್ದ Newspeak ಎಂಬ ಭಾಷಾ ಪ್ರಭೇದವನ್ನು ಕಲ್ಪಿಸಿದ. ಇದೊಂದು ಕಾಲ್ಪನಿಕವಾದ, ಭ್ರಷ್ಟಗೊಂಡ, ಪೇಲವ ಭಾಷಾರೂಪ. ಈ ಮೂಲಕ ಆರ್ವೆಲ್ ತನ್ನ ಕಾಳಜಿಗಳನ್ನು ಮಂಡಿಸಿದ.

ಅಕ್ರಮವಾದ ಅಧಿಕಾರವು ತನ್ನ ಹಿತಾಸಕ್ತಿಗಾಗಿ ಭಾಷೆಯನ್ನು ನಿಯಂತ್ರಿಸುತ್ತದೆ, ಇಲ್ಲವೇ ಭ್ರಷ್ಟಗೊಳಿಸುತ್ತದೆ ಎಂದು ಒಪ್ಪಬೇಕಾದರೆ, ಮೊದಲು ಭಾಷೆಯನ್ನು ಒಂದು ಶಕ್ತಗುಂಪು ಸಂಪನ್ಮೂಲದಂತೆ (ಹಣ ಇಲ್ಲವೇ ಕಾಮದಂತೆ) ಬಳಸಬಹುದೆಂದು ಒಪ್ಪಬೇಕು. ಜೊತೆಗೆ ಒಂದು ಬಗೆಯ ವಿಧಿವಾದವನ್ನೂ ಸಮರ್ಥಿಸಬೇಕಾಗುತ್ತದೆ. ಏಕೆಂದರೆ, ಭಾಷೆಯನ್ನು ನಿಯಂತ್ರಿಸುವುದೆಂದರೆ ಜನರು ಏನನ್ನು ಕುರಿತು ಯೋಚಿಸಬಲ್ಲರೋ, ಯಾವುದು ಅವರ ಯೋಚನೆಗೆ ನ್ಯಾಯಬದ್ಧವಾದದ್ದೋ, ಅದನ್ನು ನಿಯಂತ್ರಿಸುವುದು ಎಂದರ್ಥವಾಗುತ್ತದೆ. ಈ ಎರಡೂ ಗ್ರಹಿಕೆಗಳನ್ನು ಪ್ರಶ್ನಿಸಬಹುದು. ಆ ಕೆಲಸ ನಾನು ಮಾಡಲಿದ್ದೇನೆ. ಅದಕ್ಕೂ ಮೊದಲು ಆರ್ವೆಲ್ ಹೇಳಿದ ನಿಯಂತ್ರಣಕ್ಕೂ ವಿಧಿವಾದಕ್ಕೂ ಇರುವ ಸಂಬಂಧವನ್ನು ನೋಡೋಣ.

ಏನು ಮಾತಾಡಬಹುದು ಇಲ್ಲವೇ ಬರೆಯಬಹುದು ಎಂಬುದನ್ನು ನಿಯಂತ್ರಿಸುವುದಕ್ಕೆ ಸಾಕಷ್ಟು ಅಧಿಕಾರ ಬೇಕಾಗುತ್ತದೆ. (ಸೆನ್ಸಾರ್ ಮಾಡುವ ಕ್ರಮವನ್ನು ರಾಜ್ಯಶಕ್ತಿ ಬಳಸುತ್ತದೆ. ಹಾಗೆಯೇ ಅಲ್ಪಸಂಖ್ಯಾತ ಭಾಷೆಗಳಾದ ವೆಲ್ಷ್ ಮತ್ತು ಕೆಟಲನ್‌ಗಳನ್ನು ಹತ್ತಿಕ್ಕಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ) ಆದರೆ ಆರ್ವೆಲ್ ಮತ್ತಷ್ಟು ಮುಂದುವರೆದು ಹೋಗುತ್ತಾನೆ. ಸರ್ವಾಧಿಕಾರಿ ಆಡಳಿತಗಳು ನೀವು ಏನನ್ನು ಹೇಳಬಾರದು ಎಂಬುದನ್ನು ನಿಯಂತ್ರಿಸುವುದಕ್ಕಿಂತ, ಏನನ್ನು ಹೇಳಬೇಕೆಂದು ಕೊಂಡಿರುತ್ತೀರೋ ಅದನ್ನು ಹತ್ತಿಕುತ್ತದೆ. ಏಕೆಂದರೆ, ರಾಜ್ಯಶಕ್ತಿ ಇಲ್ಲವೇ ಇತರ ದಮನಕಾರಿ ನೆಲೆಗಳು ನೀವು ಬಳಸುವ ಪದಗಳನ್ನೇ ಭ್ರಷ್ಟಗೊಳಿಸಿರುತ್ತದೆ. ನೀವು ಅವುಗಳನ್ನು ಬಳಸಿದರೂ ಹೇಳಬೇಕಾದ್ದನ್ನು ಹೇಳಲಾರಿರಿ. Nineteen eighty four ಕಾದಂಬರಿಯಲ್ಲಿ ಭಿನ್ನಮತಕ್ಕೆ ಶಿಕ್ಷೆ ಇದೆಯಾದರೂ, ಅದನ್ನು ಮೂಲದಲ್ಲೇ ಹತ್ತಿಕ್ಕುವ ಕಡೆಗೆ ಯತ್ನವಿದೆ. ಏಕೆಂದರೆ, ಭಿನ್ನಮತವನ್ನು ಮಂಡಿಸಲು ಬೇಕಾದ ಪದಗಳೇ ಇರುವುದಿಲ್ಲ ಎಂದರೆ, ಪ್ರತಿರೋಧದ ಚಿಂತನೆಗಳು ತಲೆಎತ್ತುವುದೇ ಇಲ್ಲ.

Nineteen Eighty four ಒಂದು ಕಾದಂಬರಿಯಾದರೂ ಅದು ಮಂಡಿಸುವ ಭಾಷಿಕ ದೃಷ್ಟಿಕೋನವನ್ನು ಬಹುಮಟ್ಟಿಗೆ ಈಗ ವಾಸ್ತವದ ಸೂಕ್ತಗ್ರಹಿಕೆ ಎಂದು ಒಪ್ಪಲಾಗಿದೆ. ಸಂಪ್ರದಾಯವಾದಿಗಳಂತೆ ತೀವ್ರವಾದಿಗಳೂ ಈ ನಿಲುವನ್ನು ಚರ್ಚಿಸುತ್ತಾರೆ. ನಾನು ಈ ಹಿಂದೆ ಉಲ್ಲೇಖಿಸಿದ ಬ್ರಿಟಿಶ್ ಸಂಪ್ರದಾಯವಾದಿ ತತ್ವಶಾಸ್ತ್ರಜ್ಞ ರೋಜರ್ ಸ್ಕ್ರೂಟನ್ ರಷಿಯನ್ ಭಾಷೆಯನ್ನು ಸೋವಿಯತ್ ಕಮ್ಯುನಿಸ್ಟರು, ಇಂಗ್ಲಿಶ್ ಭಾಷೆಯನ್ನು ಸ್ತ್ರೀವಾದಿಗಳು (ಲಿಂಗವ್ಯತ್ಯಾಸವನ್ನು ಹುಟ್ಟು ಹಾಕುವ ಮೂಲಕ ಗ್ರಹಿಕೆಯ ಸಾಧ್ಯತೆಯನ್ನೇ ಅಸಾಧ್ಯವಾಗಿಸಿದ್ದಾರೆ) ಭ್ರಷ್ಟಗೊಳಿಸಿದ್ದಾರೆಂದು ಆರೋಪಿಸುತ್ತಾನೆ. ಇನ್ನೊಂದು ಕಡೆ ಶಾಂತಿ ಚಳುವಳಿಯ ಕಾರ್ಯಕರ್ತರು, Nuke speak ಎಂಬುದನ್ನು ವಿಶ್ಲೇಷಿಸುತ್ತಾ, ಕ್ಲಿಪಣಿಯೊಂದನ್ನು peace keeper ಎಂದು ಹೆಸರಿಸಿ, ಮತ್ತು ‘Render inoperative’ ನಂತಹ ಉಕ್ತಿಗಳನ್ನು ಬಳಸಿ ಪೆಂಟಗಾನ್ ಚಿಂತನೆಯನ್ನು ನಿಯಂತ್ರಿಸುತ್ತಿದೆ ಎಂದು ವಾದಿಸುತ್ತಾರೆ. (Render inoperative ಎಂಬ ಉಕ್ತಿಯನ್ನು ಬಳಸಿದರೂ ಅದರ ಅರ್ಥ to kill ಎಂಬುದೇ ಆಗಿರುತ್ತದೆ). ಲೈಂಗಿಕತಾವಾದಿಯಲ್ಲದ ಭಾಷೆಯ ಪರವಾಗಿ ವಾದಿಸುವ ಸ್ತ್ರೀವಾದಿಗಳೂ ಕೂಡಾ ಗಂಡಸರು ಇಂಥದೇ ನಿಯಂತ್ರಣ ತಂತ್ರಗಳನ್ನು ಬಳಸುತ್ತಾರೆಂದು ಹೇಳಿದ್ದಾರೆ.

ಎಡಪಂಥೀಯರಾಗಲೀ ಬಲಪಂಥೀಯರಾಗಲೀ, ಸ್ತ್ರೀವಾದಿಗಳಾಗಲೀ ಸ್ತ್ರೀವಾದ ವಿರೋಧಿಗಳಾಗಲೀ, ಮಂಡಿಸುವ ವಾದ ಪ್ರತಿವಾದಗಳು ಭಾಷೆಯ ಮೂಲಕ ಆಲೋಚನೆಯನ್ನು ಕಿಂಚಿತ್ತಾದರೂ ನಿಯಂತ್ರಿಸಲು ಸಾಧ್ಯವಿದೆಯೇ ಎಂದು ನಮ್ಮನ್ನು ನಾವೇ ಕೇಳಿಕೊಳ್ಳುವಂತೆ ಮಾಡುತ್ತವೆ. ಏಕೆಂದರೆ, ಇಡೀ ವಾಗ್ವಾದವೇ ಗೊಂದಲಗಳಿಂದ ತುಂಬಿದೆ. ಎಲ್ಲರೂ ಚೀರುದನಿಯಲ್ಲಿ ವಾದಿಸುತ್ತಿದ್ದಾರೆ. ರಾಜಕೀಯ ಪಾರಿಭಾಷಿಕ ಪದಗಳನ್ನು ಕುರಿತ ಸೋವಿಯತ್ ನಿಘಂಟೊಂದನ್ನು ಸಮೀಕ್ಷಿಸುತ್ತಾ, ಕಮ್ಯುನಿಸ್ಟ್ ರಾಜ್ಯಾಡಳಿತವು, ಪ್ರಜಾಪ್ರಭುತ್ವ ಇಲ್ಲವೇ ಉದಾರವಾದ ಮುಂತಾದ ಪದಗಳ ಬಗ್ಗೆ ಪೂರ್ವಾಗ್ರಹಗಳಿಂದ ಕೂಡಿದ ವ್ಯಾಖ್ಯೆಯನ್ನು ನೀಡುವ ಮೂಲಕ ತನ್ನ ಪ್ರಜೆಗಳನ್ನು ತಪ್ಪು ದಾರಿಗೆಳೆಯುತ್ತಿರುವುದು ದುರದೃಷ್ಟಕರ ಎಂದು ರೋಜನ್ ಸ್ಕ್ರೂಟನ್ ಹೇಳುತ್ತಾನೆ. ಒಂದು ರಾಜಕೀಯ ಪದವನ್ನು ಪೂರ್ವಾಗ್ರಹವಿಲ್ಲದೆ ಯಾರಾದರೂ ವ್ಯಾಖ್ಯಾನಿಸಬಲ್ಲರೇ ಎಂಬ ಪ್ರಶ್ನೆಯನ್ನು ಬದಿಗಿಟ್ಟರೂ, ನಿಘಂಟುಗಳ ಓದುಗರು ಅಂಥ ವ್ಯಾಖ್ಯಾನಗಳನ್ನು ನಂಬುತ್ತಾರೆಯೇ ಎಂಬ ಪ್ರಶ್ನೆ ಮಾತ್ರ ಮುಂಚೂಣಿಗೆ ಬರುತ್ತದೆ. ಇತ್ತೀಚಿನ ಘಟನೆಗಳನ್ನು ಕಂಡಾಗ ಜನರು ಮೂರ್ಖರಾಗಿರಲಿಲ್ಲ ಎನ್ನುವುದು ಗೊತ್ತಾಗುತ್ತದೆ. ರಾಜ್ಯಾಡಳಿತದ ಭಾಷಿಕ ಗೊಡ್ಡುತನದ ವಿರುದ್ಧ ಸೋವಿಯತ್ ನಾಗರಿಕರು ಹೊರಗೆ ಯಾವ ಪ್ರತಿರೋಧವನ್ನೂ ತೋರಲಿಲ್ಲ. ಹಾಗಿದ್ದ ಮಾತ್ರಕ್ಕೆ ಇದನ್ನು ಈ ತಪ್ಪುದಾರಿಗೆಳೆಯುವ ಯತ್ನದ ಯಶಸ್ಸು ಎನ್ನಬಹುದೇ? ಅಥವಾ ಜನರು ತಮ್ಮ ನಿಜಾಭಿಪ್ರಾಯವನ್ನು ಬಚ್ಚಿಟ್ಟುಕೊಂಡು ಜಾಣತನ ತೋರಿದರೇ? ಹೀಗಾಗಿ ಆಲೋಚನೆಯ ನಿಯಂತ್ರಣ ಎಂಬುದು ನನಗೆ ಒಂದು ವಾಗಾಡಂಬರದ ಮಾತೆಂದು ತೋರುತ್ತದೆ. ಭಾಷಿಕ ಆಯ್ಕೆಗಳು ನಮಗೇ ಅರಿವಿಲ್ಲದಂತೆ ಏನು ಪರಿಣಾಮ ಬೀರಬಲ್ಲವು ಎನ್ನುವ ಚರ್ಚೆಯನ್ನು ಹತ್ತಿಕ್ಕಿ, ಭಾಷೆಯ ಪರಮಾಧಿಕಾರವನ್ನು ಎತ್ತಿ ಹಿಡಿಯುವ ಯತ್ನದಂತೆ ತೋರುತ್ತದೆ.

ಇದಲ್ಲದೆ, ಈ ನಿಲುವು ಇನ್ನೊಂದು ಸಮಸ್ಯೆಯನ್ನು ಬದಿಗೆ ಸರಿಸುತ್ತಿದೆ. ಅದೆಂದರೆ, ಅಲ್ಪಸಂಖ್ಯಾತವಾದ ಅಧಿಕಾರಕೇಂದ್ರವೊಂದು ಭಾಷೆಯ ಮೇಲೆ ನಿಯಂತ್ರಣವನ್ನು ಸಾಧಿಸುವುದಾದರೂ ಹೇಗೆ? ಆ ಭಾಷೆಯನ್ನು ಇಡೀ ಸಮಾಜ ನಿರಂತರವಾಗಿ ಬಳಸುತ್ತಲೇ ಇರುತ್ತದಲ್ಲವೇ? ಭಾಷೆಯೆಂಬುದು ಎಲ್ಲ ಅಳಿಸಿ ಮೊದಲಿಂದ ಆರಂಭಗೊಳಿಸುವ ಮಾದರಿಯ ಆಟವಲ್ಲ. ಪದಗಳು ಮತ್ತು ಅರ್ಥಗಳು ಆರ್ಥಿಕ ಸಾಮಗ್ರಿಗಳಂತಲ್ಲ. ಅವೆಲ್ಲವೂ ಸಮಾನವೆಂದು ತಿಳಿದರೆ, ಭಾಷೆಯು ತನ್ನ ಭಾಷಿಕರಿಂದ ಹೊರತಾಗಿರುವ ಒಂದು ಏಕಾಕೃತಿಯ ಘಟಕವೆಂದು ತಿಳಿದಂತಾಗುತ್ತದೆ. ಆಗ ಮಾತ್ರ ಒಂದು ಪದದ ಅರ್ಥ ಇಂಥದೇ ಎಂದು ನಿರ್ಧರಿಸುವ ನಿಘಂಟುಕಾರರು ಆ ಪದವನ್ನು ಯಾರು ಯಾವಾಗ ಬಳಸಿದರೂ ಅದೇ ಅರ್ಥದಲ್ಲಿ ಬಳಸುವಂತೆ ನಿಯಂತ್ರಿಸುತ್ತಾರೆ ಎಂದು ಹೇಳಿದಂತಾಗುತ್ತದೆ. ನಿಘಂಟುಕಾರರು ಅಷ್ಟಿಷ್ಟು ಪ್ರಭಾವ ಬೀರಿದರೂ, ಅವರಿಗಿಂತ ನಿಘಂಟು ರಚನೆಯ ಹಿಂದಿರುವ ರಾಜಕಾರಣವನ್ನು ವಿಶ್ಲೇಷಿಸಿ ಅದನ್ನು ಪರಿವರ್ತಿಸುವುದು ಅಗತ್ಯವಾಗುತ್ತದೆ. ಇಷ್ಟೆಲ್ಲ ಆದರೂ ಭಾಷೆಯ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಅಸಾಧ್ಯವೇ ಸರಿ. (ಗಂಡಸರು ಎಂಬ ಒಂದು ಗುಂಪು ಅರ್ಥದ ಮೇಲೆ ಉಡದ ಹಿಡಿತವನ್ನು ಇರಿಸಿಕೊಳ್ಳಬಲ್ಲರು ಎಂಬುದನ್ನು ಒಪ್ಪುವುದಂತೂ ಇನ್ನೂ ಕಷ್ಟ.)

ತೀವ್ರವಾದಿ ಸ್ತ್ರೀವಾದಿ ಭಾಷಾಸಿದ್ಧಾಂತಗಳು ವಿಧಿವಾದ ಮತ್ತು ನಿಯಂತ್ರಣಗಳನ್ನು ಆಧಾರಸ್ತಂಭಗಳನ್ನಾಗಿ ಇರಿಸಿಕೊಂಡಿವೆ. ನಾವಿಲ್ಲಿ ಎತ್ತಿದ ಸಾಮಾನ್ಯ ಪ್ರಶ್ನೆಗಳನ್ನು ಈ ಸಿದ್ಧಾಂತಗಳು ಹೇಗೆ ಎದುರಿಸುತ್ತವೆ ಎನ್ನುವುದನ್ನು ಮುಂದೆ ನೋಡೋಣ. ಭಾಷೆಯು ಆಲೋಚನೆ ಮತ್ತು ಗ್ರಹಿಕೆಗಳನ್ನು ನಿಯಂತ್ರಿಸುತ್ತದೆಯೇ? ಭಾಷೆಯ ಮೇಲಿನ ಗಂಡು ಹಿಡಿತದ ನೆಲೆಗಳು ಯಾವುವು? ಅದು ಎಷ್ಟು ದಮನಕಾರಿ? ಅದಕ್ಕೆ ಲೈಂಗಿಕತಾವಾದಿ ಗುರಿಗಳು ಇವೆಯೇ? ಇದ್ದರೆ ಅದನ್ನು ಸಾಧಿಸಲು ಅನುಸರಿಸುವ ವಿಧಾನಗಳು ಯಾವುವು -ಇವೇ ಮುಂತಾದ ಪ್ರಶ್ನೆಗಳನ್ನು ಮುಂದಿನ ಭಾಗದಲ್ಲಿ ವಿವರವಾಗಿ ಚರ್ಚಿಸುತ್ತೇನೆ.

ಬಾಯಿಕಟ್ಟಿದ ಹೆಂಗಸು ಮತ್ತು ಗಂಡುಕಟ್ಟಿದ ಭಾಷೆ: ಕೆಲವು ತೀವ್ರವಾದಿ ಸ್ತ್ರೀವಾದಿ ಭಾಷಿಕ ಸಿದ್ಧಾಂತಗಳು : ಬಾಯಾಳಿ ಮತ್ತು ಬಾಯಿಕಟ್ಟಿದವಳು :ಹೆಂಗಸಿನ ವಾಸ್ತವ, ಗಂಡಸರ ಪ್ರತಿನಿಧೀಕರಣ

ಸಂಸ್ಕೃತಿಯಲ್ಲಿ ಭಾಷೆಯು ಕೆಲಸ ಮಾಡುವ ಬಗೆ ಮತ್ತು ಜಂಡರ್ ಭಾಷೆಯನ್ನು ಪ್ರಭಾವಿಸುವ ಕ್ರಮ – ಈ ಎರಡು ನೆಲೆಗಳು ಬ್ರಿಟನ್‌ನ ಮಾನವಶಾಸ್ತ್ರಜ್ಞರಾದ ಎಡ್ವಿನ್ ಮತ್ತು ಶೆರ್ಲಿ ಆರ್ಡೆನರ್ ಅವರ ‘ಬಾಯಾಳಿ ಮತ್ತು ಬಾಯಿಕಟ್ಟಿದ’ ಹೆಂಗಸಿನ ಪರಿಕಲ್ಪನೆಗೆ ಆಧಾರವಾಗಿವೆ. ಇವರಿಬ್ಬರೂ ಸ್ತ್ರೀವಾದಿಗಳಲ್ಲದಿದ್ದರೂ, ಡೇಲ್ ಸ್ಪೆಂಡರ್ ಮತ್ತು ಚೆರಿ ಕ್ರಮಾರೆಯರಂತಹ ತೀವ್ರವಾದಿ ಸ್ತ್ರೀವಾದಿಗಳು ಇವರ ವಿಚಾರಗಳನ್ನು ಸ್ವೀಕರಿಸಿದ್ದಾರೆ.

ಸಮಾಜದಲ್ಲಿರುವ ಒಂದೊಂದು ಗುಂಪೂ ವಾಸ್ತವವನ್ನು ತನ್ನದೇ ಆದ ಬಗೆಯಲ್ಲಿ ನೋಡಿದರೂ, ಎಲ್ಲ ಗುಂಪುಗಳಿಗೂ ಅದನ್ನು ಗುರುತಿಸಿ ಮಂಡಿಸುವ ಉಪಕರಣಗಳು ಲಭ್ಯವಿರುವುದಿಲ್ಲ. ವಾಸ್ತವತೆಗಳನ್ನು ಹೊರಗೆ ಹಾಕಲು ಬೇಕಾದ ಭಾಷಿಕವ್ಯವಸ್ಥೆಯು ಎಲ್ಲರಿಗೂ ಸಮಪ್ರಮಾಣದಲ್ಲಿ ದೊರಕುವುದಿಲ್ಲ. ಇದು ಆರ್ಡೆನರ್ ಚಿಂತನೆ. ಅಧಿಕಾರವುಳ್ಳ ಗುಂಪುಗಳು ಭಾಷಿಕ ಸಂಪನ್ಮೂಲವನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡಿರುತ್ತದೆ. ಅಧಿಕಾರವಿಲ್ಲದ ಗುಂಪುಗಳ ಬಾಯಿ ಕಟ್ಟಿದಂತಾಗುತ್ತದೆ. ಅವರ ವಾಸ್ತವತೆ ಪ್ರತಿನಿಧೀಕರಣಗೊಳ್ಳುವುದಿಲ್ಲ. ‘ಯಾವುದೇ ಸಮಾಜದಲ್ಲಿ ಪ್ರಧಾನ ರಚನೆಗಳಿಂದ ಹುಟ್ಟಿಕೊಂಡ ಆಧಿಕಾರಿಕ ಅಭಿವ್ಯಕ್ತಿಕ್ರಮಗಳು ಇರುತ್ತವೆ. ಒಂದು ಸಂದರ್ಭದಲ್ಲಿ ಮುಂಚೂಣಿಯ ಗುಂಪಿನ ಅಧಿಕಾರವಾಣಿಯನ್ನು ಮಾತ್ರ ಇತರರು ಕೇಳಿಸಿಕೊಳ್ಳುತ್ತಾರೆ. ಎಲ್ಲ ಸಂದರ್ಭಗಳಲ್ಲೂ ಬಾಯಿಕಟ್ಟಿದ ಗುಂಪುಗಳು ಏನಾದರೂ ಹೇಳಬೇಕೆಂದರೆ ಇದೇ ಅಭಿವ್ಯಕ್ತಿ ಮಾದರಿಗಳನ್ನು ಅನುಸರಿಸಬೇಕೇ ಹೊರತು ತಾವೇ ಸ್ವತಂತ್ರವಾಗಿ ರೂಪಿಸಿಕೊಂಡ ಮಾದರಿಗಳಲ್ಲಿ ಅಲ್ಲ’ ಎಂದು ಶೆರ್ಲಿ ಆರ್ಡೆನರ್ ಹೇಳುತ್ತಾಳೆ.

ಅಂದರೆ, ಬಾಯಿ ಕಟ್ಟಿದ ಗುಂಪುಗಳು ಒಂದು ಬಗೆಯ ಅನುವಾದ ಕ್ರಿಯೆಯಲ್ಲಿ ತೊಡಗಿರುತ್ತವೆ. ಅವರ ವಾಸ್ತವತೆಗಳು ಅಧಿಕಾರವುಳ್ಳವರ ವಾಸ್ತವತೆಗಿಂತ ಭಿನ್ನ. ಆದರೆ, ಅದನ್ನು ಮುಂದಿಡಲು ಅವರಿಗೆ ಆಗುವುದಿಲ್ಲ. ಇದರ ಪರಿಣಾಮವನ್ನು ಶೆರ್ಲಿ ಆರ್ಡೆನರ್ ಹೀಗೆ ಹೇಳುತ್ತಾಳೆ : ‘ಅಧಿಕಾರ ಉಳ್ಳವರ ಮಾದರಿಯು ಲೋಕದ ಪರ್ಯಾಯ ವಾಸ್ತವಗಳು ಮಂಡಿತವಾಗುವುದನ್ನು ಹತ್ತಿಕ್ಕ ಬಹುದು. ಈ ಪರ್ಯಾಯಗಳನ್ನು ಹೊಂದಿರುವ ಅಧೀನ ಗುಂಪುಗಳು ಪ್ರತಿಯೊಂದು ತಲೆಮಾರಿನಲ್ಲೂ ತಮ್ಮ ವಾಸ್ತವವನ್ನು ಹೊರಹಾಕಲು ಸೋಲುತ್ತವೆ. ಅಧಿಕಾರವುಳ್ಳ ಗುಂಪುಗಳ ಮಾದರಿಯಲ್ಲಿ ತಾವೂ ಕೂಡಾ ತಮ್ಮ ವಾಸ್ತವವನ್ನು ಮಂಡಿಸಲು ಈ ಅಧೀನ ಗುಂಪುಗಳು ಕಲಿಯಬೇಕಾಗುತ್ತದೆ. ಆಗ ಅವರ ಮಾದರಿಗಳು ಸ್ವೀಕೃತ ಮಾದರಿಗಳಿಗೆ ತಕ್ಕಂತೆ ಬದಲಾಗುತ್ತವೆ’. ಹೀಗೆ ಬಾಯಿ ಕಟ್ಟಿದ ಗುಂಪುಗಳಲ್ಲಿ ಒಂದು ಹೆಂಗಸರದು. ಹೆಂಗಸರಲ್ಲಿ ಭಿನ್ನ ವಾಸ್ತವಗಳಿದ್ದರೂ ಅವರು ಗಂಡಸರ ವಾಸ್ತವದ ಚೌಕಟ್ಟಿನಲ್ಲಿ ತಮ್ಮ ವಾಸ್ತವವನ್ನು ಅಳವಡಿಸಬೇಕಾದ ಒತ್ತಾಯಕ್ಕೆ ಒಳಗಾಗುತ್ತಾರೆ.

ಬಾಯಿಕಟ್ಟುವಿಕೆಯನ್ನು ‘ಮೌನ’ ಎಂದು ತಿಳಿಯಬಾರದು. ‘ಬಾಯಿ ಕಟ್ಟಿದ ಗುಂಪುಗಳು ಹೆಚ್ಚು ಮಾತಾಡಬಹುದು. ನಿಜವೆಂದರೆ, ಅವರು ತಾವು ಹೇಳಬೇಕಾದ್ದನ್ನು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಹೇಳಲು ಸಾಧ್ಯವೇ ಎಂಬುದೇ ಪ್ರಶ್ನೆ’ ಎಂದು ಶೆರ್ಲಿ ಅರ್ಡೆನರ್  ಹೇಳುತ್ತಾಳೆ. ಬಾಯಿ ಕಟ್ಟುವಿಕೆ ಎಂದರೆ, ಆ ಗುಂಪಿಗೆ ವಿಶಿಷ್ಟವಾದ ಹಾಗೂ ಹೇಳಿಕೊಳ್ಳಬೇಕಾದ ವಾಸ್ತವತೆಯ ಗ್ರಹಿಕೆಯೊಂದು ಇಲ್ಲದಿರುವುದು ಎಂದಲ್ಲ. ‘ಬಾಯಿ ಕಟ್ಟಿದ ರಚನೆಗಳು ಇರುತ್ತವೆ. ಅವು ಭಾಷೆಯಲ್ಲಿ ಮೈದಳೆಯಲಾರವು’ ಎಂದು ಎಡ್ವಿನ್ ಆರ್ಡೆನರ್ ಹೇಳುತ್ತಾನೆ. ಇವರಿಬ್ಬರೂ ಹೇಳುವಂತೆ ಹೆಂಗಸರಲ್ಲಿ ಅವರದ್ದೇ ಆದ ಲೋಕಮಾದರಿಯೊಂದು ಇರುತ್ತದೆ. ಅವರು ಭಾಷೆಯನ್ನು ಬಳಸಬಲ್ಲವರು. ಇವೆರಡೂ ಅಂಶಗಳು ಒಂದಕ್ಕೊಂದು ಹೊಂದಿಕೆಯಾಗದಿರುವುದೇ ಅವರ ಸಮಸ್ಯೆ. ಆದರೆ, ಅಧಿಕಾರವುಳ್ಳ ಗುಂಪಿಗೆ ಸೇರಿದ ಗಂಡಸರಲ್ಲಿ ಲೋಕಕಲ್ಪನೆ ಮತ್ತು ಭಾಷೆ ಯಾವ ಸಮಸ್ಯೆಯೂ ಇಲ್ಲದಂತೆ ಒಂದರೊಡನೊಂದು ಹೊಂದಿಕೊಳ್ಳುತ್ತದೆ.

ಚೆರಿ ಕ್ರಮಾರೆ ಭಾಷೆ ಮತ್ತು ಜಂಡರ್‌ಗಳ ಅಧ್ಯಯನಕ್ಕೆ ಬೇಕಾದ ವಿಶ್ಲೇಷಣೆಯ ಚೌಕಟ್ಟನ್ನಾಗಿ, ಬಾಯಾಳಿ ಮತ್ತು ಬಾಯಿ ಕಟ್ಟಿದ ಮಾದರಿಯನ್ನು ಆಯ್ದುಕೊಳ್ಳುತ್ತಾಳೆ. ಹಲವು ಪ್ರಮೇಯಗಳನ್ನು ರೂಪಿಸಿಕೊಂಡು, ಬಳಿಕ ಮಾಹಿತಿಗಳನ್ನು ಆಧರಿಸಿ ಆ ಪ್ರಮೇಯಗಳನ್ನು ಪರೀಕ್ಷಿಸುತ್ತಾಳೆ. ಹೆಂಗಸರು ಬಾಯಿ ಕಟ್ಟಿದ ಗುಂಪಿಗೆ ಸೆರಿದವರೆಂಬ ವಿಚಾರದಿಂದ ಅವಳು ರೂಪಿಸಿಕೊಂಡ ಒಂದು ಪ್ರಮೇಯವೆಂದರೆ, ಹೆಂಗಸರಿಗೆ ಗಂಡಸರನ್ನು ಅರ್ಥ ಮಾಡಿಕೊಳ್ಳುವುದು ಸುಲಭ. ಆದರೆ, ಗಂಡಸರಿಗೆ ಹಾಗಾಗುವುದಿಲ್ಲ ಎನ್ನುವುದಾಗಿದೆ (ಬಾಯಿ ಕಟ್ಟಿದ ಗುಂಪುಗಳು ಅಧಿಕಾರವುಳ್ಳವರ ಮಾದರಿಯನ್ನು ತಮ್ಮ ಮಾದರಿಗೆ ಅನುವಾದಿಸಿಕೊಳ್ಳಬಲ್ಲರು. ಆದರೆ, ಇದರ ಹಿಂಚಲನೆ ಸಾಧ್ಯವಿಲ್ಲ) ಇನ್ನೊಂದು ಪ್ರಮೇಯವೆಂದರೆ, ಆಧಿಕಾರಿಕ ಅಭಿವ್ಯಕ್ತಿ ಮಾದರಿಗಳ ಬಗ್ಗೆ ಹೆಂಗಸರಿಗೆ ಅತೃಪ್ತಿ ಇದ್ದು ಅದಕ್ಕೆ ಪಯಾರ್ಯಗಳನ್ನು ಹುಡುಕುತ್ತಾರೆ ಎನ್ನುವುದು. ಹೆಂಗಸರು ಸಾರ್ವಜನಿಕವಾಗಿ ಮಾತಾಡಲು ಕಷ್ಟಪಡುತ್ತಾರೆ. ಅವರ ಮಾದರಿಯ ಹಾಸ್ಯ ಗಂಡಸರದಕ್ಕಿಂತ ಭಿನ್ನವಾದುದು. ಇದೂ ಕೂಡಾ ಕ್ರಮಾರೆ ಹೇಳುವ ಪ್ರಮೇಯವೇ.

ಈ ಪ್ರಮೇಯಗಳ ಸಮರ್ಥನೆಗೆ ಪುರಾವೆಗಳನ್ನು ಕ್ರಮಾರೆ ಹುಡುಕಿದ್ದಾಳೆ. ಉದಾಹರಣೆಗೆ, ಗಂಡು ಹೆಣ್ಣುಗಳಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಬಗ್ಗೆ ಆಕೆ ಹಲವು ಪ್ರಸಂಗಗಳನ್ನು, ಸಮೀಕ್ಷೆಯ ಮಾಹಿತಿಯನ್ನು ಹೇಳಿ, ಗಂಡಸರು ಯಾವಾಗಲೂ ಹೆಂಗಸರ ಮಾತಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ. ಅವರಿಗೇನು ಬೇಕು ಎಂಬುದನ್ನು ತಿಳಿಯುವುದು ಕಷ್ಟವೆನ್ನುತ್ತಾರೆ. ಇದನ್ನು ಕ್ರಮಾರೆ ವಿವರಿಸಿದ್ದಾಳೆ. ಆದರೆ ಹೆಂಗಸರಿಗೆ ಗಂಡಸರು ಇಷ್ಟೊಂದು ತಲೆ ತಿನ್ನುವುದಿಲ್ಲ. ಹೆಂಗಸರು ಆಧಿಕಾರಿಕ ಅಭಿವ್ಯಕ್ತಿ ಮಾದರಿಯ ಬಗ್ಗೆ ತಳೆದಿರುವ ಅತೃಪ್ತಿ ಮತ್ತು ಅವರು ಸಾರ್ವಜನಿಕವಾಗಿ ಮಾತನಾಡಲಾಗದ ಪ್ರಮೇಯಗಳನ್ನು ಚರ್ಚಿಸುತ್ತಾ, ಇಂದಿನ ಸ್ತ್ರೀವಾದಿಗಳ ನಡಾವಳಿಗಳ ಕಡೆಗೆ ಗಮನ ಸೆಳೆಯುತ್ತಾಳೆ. ಈ ಸ್ತ್ರೀವಾದಿಗಳು ಯಾವಾಗಲೂ ಅನೌಪಚಾರಿಕವಾಗಿರುತ್ತಾರೆ, ಒಬ್ಬರಿಗೊಬ್ಬರು ಸಹಕರಿಸುತ್ತಾರೆ. ಸಾಂಪ್ರದಾಯಿಕ ವಾಗಾಡಂಬರ ಅವರಿಗೆ ಹಿಡಿಸುವುದಿಲ್ಲ ಎನ್ನುತ್ತಾಳೆ.

ಹೆಂಗಸರನ್ನು ಬಾಯಿಕಟ್ಟಿದ ಗುಂಪು ಎಂದು ಹೇಳಿದ ಚೌಕಟ್ಟಿಗೆ, ಈವರೆಗೆ ಒದಗಿಸಿದ ಪುರಾವೆಗಳು ಸಮರ್ಥನೆಯನ್ನು ನೀಡುತ್ತವೆಯೇ ಎಂಬುದು ಒಂದು ಪ್ರಶ್ನೆಯೇ ಸರಿ. ಗಂಡಸರನ್ನು ಹೆಂಗಸರು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಿದ್ದರೆ, ಅದಕ್ಕೆ ಭಾಷೇತರ ಕಾರಣಗಳಿರಬಹುದು. ಅವರು ಭಾವನಾತ್ಮಕವಾಗಿ, ಆರ್ಥಿಕವಾಗಿ ಗಂಡಸರನ್ನು ಅವಲಂಬಿಸಿರುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ. ಹಾಗಾಗಿ, ಅವರು ಗಂಡಸರ ನಡವಳಿಕೆಗಳನ್ನು ಎಚ್ಚರಿಕೆಯಿಂದ ಗಮನಿಸಿರುತ್ತಾರೆ ಮತ್ತು ಅವರ ಆಸೆಗಳನ್ನು ಪೂರೈಸುತ್ತಾರೆ. ಇದರಿಂದ ಅವರಿಗೆ ಪ್ರಯೋಜನವಿದೆ. ಅಲ್ಲದೆ, ಸ್ತ್ರೀವಾದಿಗಳು ಒಪ್ಪುವ ಮಾತಿನ ಶೈಲಿಗೆ ಒಂದು ರಾಜಕೀಯ ನೆಲೆಯ ಸಮರ್ಥನೆ ಇದೆ. ನಿಜ. ಪಾರಂಪರಿಕ ವಾಗಾಡಂಬರದ ಮಾದರಿಗಳನ್ನು ಇಚ್ಛೆಪಡದೆ ಇರಬಹುದು. ಹಾಗೆಂದ ಮಾತ್ರಕ್ಕೆ ಅವು ಹೆಂಗಸರಿಗೆ ಅಪಥ್ಯವೆಂದೇನೂ ಅಲ್ಲ.

ಅರ್ಡೆನರ್ ದಂಪತಿಯ ಮಾದರಿಯನ್ನು ಮಾಹಿತಿಗಳ ನೆರವಿನಿಂದ ಸಮರ್ಥಿಸುವುದು ಇಲ್ಲವೇ ನಿರಾಕರಿಸುವುದು ಆಗದ ಮಾತು. ಏಕೆಂದರೆ, ಅದು ವ್ಯಾಖ್ಯಾನಾತ್ಮಕವಾದುದು. ಅದರಲ್ಲಿರುವ ಸಮಸ್ಯೆಯೇ ಬೇರೆ. ಆ ಮಾದರಿಯೊಳಗೇ ಒಂದಕ್ಕೊಂದು ಹೊಂದಿಕೆಯಾಗದ ಸಂಗತಿಗಳಿವೆ. ಈ ಅಂಶವನ್ನೀಗ ನಾನು ಚರ್ಚಿಸಲಿದ್ದೇನೆ.

ನಿಯಂತ್ರಣದ ಸಮಸ್ಯೆ

ಹೆಂಗಸರು ತಮ್ಮದೇ ಆದ ಅಭಿವ್ಯಕ್ತಿ ಮಾದರಿಗಳನ್ನು ರೂಪಿಸಿಕೊಳ್ಳಲು ಆಗದಿರುವುದಕ್ಕೆ ಇರುವ ಭಾಷಿಕ ಕಾರಣಗಳು ನನಗೆ ತಿಳಿಯದು. ಹಾಗೆ ನೋಡಿದರೆ, ಅವರು ಅಂಥ ಪರ್ಯಾಯ ಮಾದರಿಗಳನ್ನು ಕಟ್ಟಿಕೊಳ್ಳುವುದೇ ಇಲ್ಲ ಎನ್ನಲಾಗದು. ಎಡ್ವಿನ್ ಆರ್ಡೆನರ್ ಮಂಡಿಸಿದ ‘Beleif and the Problem of Women’ ಪ್ರಬಂಧದಲ್ಲಿ ಬಕ್ವೇರಿ ಬುಡಕಟ್ಟಿನ ಹೆಂಗಸರ ‘ರಹಸ್ಯಭಾಷೆ’ಯಾದ ಲೈಂಗು ನುಡಿಯನ್ನು ಕುರಿತು ಚರ್ಚಿಸಿದ್ದಾನೆ. ಹೆಂಗಸರು ತಮ್ಮ ವಾಸ್ತವವನ್ನು ಮಂಡಿಸಲು ಹೊಸದಾರಿಗಳನ್ನು ಕಂಡುಕೊಳ್ಳುತ್ತಾರೆನ್ನುವುದಕ್ಕೆ ಇದೊಂದು ಉದಾಹರಣೆ ಇದ್ದೀತು.

ಆದರೆ ನಿಯಂತ್ರಣದ ಸಮಸ್ಯೆಯನ್ನು ನೋಡುವ ಇನ್ನೊಂದು ಬಗೆಯನ್ನು ಆರ್ಡೆನರ್ ದಂಪತಿ ಸೂಚಿಸುತ್ತಾರೆ. ಬಾಯಿಕಟ್ಟಿಸುವ ಕ್ರಮವನ್ನು ಹೆಂಗಸರ ಅಭಿವ್ಯಕ್ತಿಯನ್ನು ಗಂಡಸರು ಹತ್ತಿಕ್ಕುವ ಪ್ರಸಂಗವೆಂದು ಗಮನಿಸಬೇಕಿಲ್ಲ. ಇದನ್ನು ರೂಪಾಂತರವೆಂದು ಇವರು ಕರೆಯುತ್ತಾರೆ. ಅಂದರೆ, ಗಂಡಸರು ತಮ್ಮ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಮಾಡಲು ಹೆಂಗಸರು ತಮ್ಮ ಅನುಭವಗಳನ್ನು ಗಂಡು ಮಾದರಿಗಳಿಗೆ ಅನುವಾದಿಸುವ ತಂತ್ರವನ್ನು ರೂಪಿಸಿಕೊಂಡಿದ್ದಾರೆ ಎಂದೂ ವ್ಯಾಖ್ಯಾನಿಸಬಹುದು. ‘ಆಧಿಕಾರಿಕ ಅಭಿವ್ಯಕ್ತಿಗೆ ಮಾತ್ರ ಚಲಾವಣೆ ಇರುತ್ತದೆ’ ಎಂದು ಶೆರ್ಲಿ ಆರ್ಡೆನರ್ ಹೇಳಿದ್ದಾಳೆ. ಹಾಗೆಂದ ಮಾತ್ರಕ್ಕೆ ಅಧಿಕಾರಿಕ ಮಾದರಿಯಷ್ಟೇ ಇರುತ್ತದೆ, ಬೇರಾವುದೂ ಇರುವುದಿಲ್ಲ ಎಂದು ಹೇಳಲಾಗದು. ಶೆರ್ಲಿಯ ಮಾತು ಸಾಮಾಜಿಕ ನೆಲೆಗೆ ಸೇರಿದ್ದು. ಅದು ಭಾಷಿಕ ನೆಲೆಯದ್ದಲ್ಲ.

ನಾನಿಲ್ಲಿ ಬಣ್ಣಿಸುತ್ತಿರುವ ಒಂದು ಊಹೆಯ ಪ್ರಸಂಗಕ್ಕೆ ಹಲವು ಸಮಾನ ಉದಾಹರಣೆಗಳಿವೆ. ಇಲ್ಲಿ ಹೆಂಗಸರು ಇನ್ನೊಬ್ಬರಿಗೆ ವಿಷಯ ತಿಳಿಸಲೆಂದು ಅನುವಾದದ ತಂತ್ರ ಬಳಸುತ್ತಾರೆ. ಉದಾಹರಣೆಗೆ, ಒಂದು ಔಪಚಾರಿಕ ಸಭೆಯಲ್ಲಿ ಯಾರಾದರೂ ಒಂದು ಸಲಹೆಯನ್ನು ಮಂಡಿಸಬೇಕಾದರೆ, ತಮ್ಮ ಮಾತನ್ನು ಗೊತ್ತಾದ ಸಾಂವಿಧಾನಿಕ ಶೈಲಿಯಲ್ಲಿ ರೂಪಿಸಿಕೊಳ್ಳಬೇಕು. ಹಾಗೆಯೇ, ಹೆಂಗಸೂ ಕೂಡಾ ತನಗೆ ಅನಿಸಿದ್ದನ್ನು ಹಾಗೇ ಹೇಳಿದರೆ ಅವಳ ಮಾತನ್ನು ಕಡೆಗಣಿಸಲಾಗುತ್ತದೆ. ಅಲ್ಲಿರುವವರಿಗೆ ಅದು ಅರ್ಥವಾಗುತ್ತದೋ ಇಲ್ಲವೋ ಎಂಬುದು ಮುಖ್ಯವಲ್ಲ. ಅದು ಅಸಂಗತ ಕೂಡಾ. ಆದರೆ, ಹಾಗೆ ಕಡೆಗಣಿಸುವುದು ಒಂದು ಸಾಮಾಜಿಕ ನಡವಳಿ. ಅದನ್ನು ಮೀರುವುದು ಅಸಾಧ್ಯವೇನಲ್ಲ. ಅದಕ್ಕಾಗಿ ತಕ್ಕ ದಾರಿಗಳನ್ನು ಹುಡುಕಬೇಕು.

ನಾವೀಗ ಗಮನಿಸುತ್ತಿರುವ ಪ್ರಸಂಗದಲ್ಲಿ ಹೆಂಗಸರು ಇಲ್ಲವೇ ಯಾವುದೇ ಬಾಯಿಕಟ್ಟಿದ ಗುಂಪುಗಳು ಅಧಿಕಾರ ಉಳ್ಳ ಗುಂಪುಗಳ ಆಯ್ಕೆಯನ್ನು ಗೌರವಿಸಬೇಕಾಗುತ್ತದೆ. ‘ಗಂಡಸರು ಒಪ್ಪುವ ಮಾದರಿಯಲ್ಲಿ ಹೆಂಗಸರ ದೃಷ್ಟಿಕೋನಗಳು ಮಂಡನೆಯಾಗದಿದ್ದಲ್ಲಿ ಅವರ ಮಾತುಗಳನ್ನು ಯಾರೂ ಗಮನಿಸುವುದೇ ಇಲ್ಲ’ ಎಂದು ಶೆರ್ಲಿ ಆರ್ಡೆನರ್ ಹೇಳುತ್ತಾಳೆ.  ಸಾಂವಿಧಾನಿಕ ಶೈಲಿಯಲ್ಲಿರದ ಮಾತುಗಳನ್ನು ಸಭೆಗಳು ತಳ್ಳಿ ಹಾಕುತ್ತವಷ್ಟೇ?  ಅಧಿಕಾರವುಳ್ಳವರು ತಮ್ಮ ಆಯ್ಕೆಗಳನ್ನು ಹೇರುವ ಹಕ್ಕನ್ನು ಬಿಟ್ಟುಕೊಡುವುದಿಲ್ಲ. ಅವರು ಗೈರುಹಾಜರಾದ ಸಂದರ್ಭಗಳಲ್ಲಿ, ಅಂದರೆ ಹೆಂಗಸರು ಪರಸ್ಪರ ಮಾತಾಡಿ ಕೊಳ್ಳುವಾಗ, ಅಧಿಕಾರವಿರದವರು ತಂತಮ್ಮ ಆಯ್ಕೆಯ ಮಾದರಿಗಳಲ್ಲಿ ಮಾತಾಡಬಹುದು.

ಬಾಯಿಕಟ್ಟುವುದನ್ನು ಹೀಗೆ ವಿವರಿಸುವುದರಿಂದ ಆಗುವ ಪ್ರಯೋಜನವೇನು? ಈ ವಿವರಣೆಯಿಂದ ಬಾಯಿಕಟ್ಟುವ ಪ್ರಕ್ರಿಯೆ ಮಾಯವಾಗುವುದಿಲ್ಲ. ತನ್ನದಲ್ಲದ ಭಾಷೆಗೆ ಅನುವಾದಿಸಿಕೊಂಡು ಮಾತಾಡಬೇಕಾಗುವುದು ಭಾರೀ ಹೊರೆಯೇ ಸರಿ. ಭಾಷೆಯ ಕೆಲವು ರೂಪಗಳು ಗಂಡಸರಿಗೆ ಹೊಂದಿಕೊಳ್ಳುವಷ್ಟು ಹೆಂಗಸರಿಗೆ ಹೊಂದಿಕೊಳ್ಳುವುದಿಲ್ಲ. ಆದರೆ, ಹೆಂಗಸರು ತಮ್ಮ ವಾಸ್ತವವನ್ನು ಭಾಷಿಕವಾಗಿ ಮಂಡಿಸುವ ದಾರಿಗಳನ್ನು ಹೊಂದಿಲ್ಲ ಎಂದು ಹೇಳುವುದಕ್ಕೂ, ಅಂಥ ದಾರಿಗಳಿದ್ದೂ ಆ ದಾರಿಗಳು ಗಂಡಸರಿಗೆ ಸಮ್ಮತವಲ್ಲವಾದ್ದರಿಂದ ಅವುಗಳನ್ನು ಹೆಂಗಸರು ಬಳಸಲಾರರು ಎಂದು ಹೇಳುವುದಕ್ಕೂ ವ್ಯತ್ಯಾಸವಿದೆ. ಮೊದಲನೆಯದನ್ನು ಒಪ್ಪಿದರೆ, ಹೆಂಗಸರ ಸಮಸ್ಯೆ ಭಾಷಿಕವಾಗುತ್ತದೆ. ಎರಡನೆಯದನ್ನು ಒಪ್ಪಿದರೆ, ಅವರ ಸಮಸ್ಯೆ ಅಧಿಕಾರ ಮತ್ತು ಸಾಮಾಜಿಕ ಅಸಮಾನತೆಗೆ ಸಂಬಂಧಿಸಿರುತ್ತದೆ. ಈ ವ್ಯತ್ಯಾಸಗಳು ಆರ್ಡೆನರ್ ದಂಪತಿ ಮಂಡಿಸಿದ ಚೌಕಟ್ಟನ್ನು ಒಪ್ಪಲು ಅಡ್ಡಿಯಾಗುತ್ತದೆ.

ವಿಧಿವಾದದ ಸಮಸ್ಯೆ

ಭಾಷೆಯು ಗ್ರಹಿಕೆಯನ್ನು ನಿರ್ಧರಿಸುತ್ತದೆ ಎನ್ನುವ ಬಗ್ಗೆ ಆರ್ಡೆನರ್ ದಂಪತಿಯ ನಿಲುವು ಸ್ಪಷ್ಟವಾಗಿದೆ. ಒಂದರ್ಥದಲ್ಲಿ ಅವರು ವಿಧಿವಾದವನ್ನು ನಿರಾಕರಿಸುತ್ತಾರೆ. ‘ಬಾಯಿಕಟ್ಟಿದವರ ರಚನೆಗಳು ಬೇರೆಯೇ ಇರುತ್ತವೆ’ ಎಂದು ಎಡ್ವಿನ್ ಆರ್ಡೆನರ್ ಹೇಳುತ್ತಾನೆ. ಆದರೆ, ಅವು ಚಾಲ್ತಿಯಲ್ಲಿರುವ ಭಾಷೆಯಲ್ಲಿ ಮೈದಳೆಯಲಾರವು. ಶೆರ್ಲಿ ಆರ್ಡೆನರ್ ಆಧಿಕಾರಿಕ ಮಾದರಿಗಳು ಬಾಯಿಕಟ್ಟಿದ ಮಾದರಿಗಳನ್ನು ಹತ್ತಿಕ್ಕುವುದಷ್ಟೇ ಅಲ್ಲ, ಅಂಥ ಮಾದರಿಗಳು ರೂಪ ತಳೆಯುವುದನ್ನೇ ತಡೆಯುತ್ತವೆ ಎಂದು ವಾದಿಸುತ್ತಾಳೆ. ಜೊತೆಗೆ ‘ಹೇಳಿದ ಮಾತುಗಳೆಲ್ಲ ಯಾರ ಕಿವಿಗೂ ಬೀಳದಂತಾದಾಗ ಕೊನೆಗೆ ಆ ಮಾತುಗಳನ್ನು ಆಡುವುದನ್ನೇ ನಿಲ್ಲಿಸಬಹುದು. ಇಲ್ಲವೇ ಹಾಗೆ ಮಾತಾಡಬೇಕೆಂದು ಯೋಚಿಸುವುದನ್ನು ನಿಲ್ಲಿಸಬಹುದು’ ಎನ್ನುತ್ತಾಳೆ. ಮುಂದುವರೆದು ‘ಹೆಂಗಸರು ತಮ್ಮ ಗ್ರಹಿಕೆಗಳನ್ನು ಮಂಡಿಸಲು ಬೇಕಾದ ಭಾಷಿಕಪರಿಕರಗಳನ್ನು ರೂಪಿಸುವ ಕಡೆಗೆ ಯೋಚಿಸಿದ್ದಾರೆಯೇ?’ ಎಂದೂ ಕೇಳುತ್ತಾಳೆ.

ಇವೆಲ್ಲ ಕುತೂಹಲಕಾರಿ ಪ್ರಶ್ನೆಗಳು. ಆದರೆ ಇದು ವೈಚಾರಿಕ ಚೌಕಟ್ಟಿನಲ್ಲಿ ವಿರೋಧವಿರುವುದನ್ನು ಬಯಲು ಮಾಡುತ್ತದೆ. ಒಂದು ವೇಳೆ ಭಾಷೆಯು ಜನರ  ಆಲೋಚನೆಗಳನ್ನು ನಿರ್ಧರಿಸುತ್ತದೆ ಎಂದು ಒಪ್ಪಿದರೆ, ಮತ್ತು ಬಾಯಿಕಟ್ಟಿದ ಗುಂಪಾದ ಹೆಂಗಸರು ತಮ್ಮ ಆಲೋಚನೆಗಳನ್ನು ಮಂಡಿಸಲು ಬೇಕಾದ ಭಾಷಿಕ ಪರಿಕರಗಳನ್ನು ಹೊಂದಿಲ್ಲವೆಂದು ನಂಬಿದರೆ ಆಗ, ಬಾಯಿಕಟ್ಟಿದವರ ರಚನೆಗಳು ಬೇರೆಯೇ ಇರುತ್ತವೆ ಎಂದು ಒಪ್ಪುವುದು ಹೇಗೆ?  ಅವು ಇರುವುದಾದರೂ ಏಕೆ? ನಿಜ. ಆಧಿಕಾರಿಕ ಗಂಡುಭಾಷೆ ಎಲ್ಲರ ವಾಸ್ತವವನ್ನೂ ನಿರ್ಧರಿಸುವುದು ಎನ್ನೋಣ. ಒಂದು ವೇಳೆ ವಿಧಿವಾದವನ್ನು ನಿರಾಕರಿಸಿದರೆ ಮತ್ತು ಹೆಂಗಸರಿಗೆ ತಮ್ಮ ವಾಸ್ತವವನ್ನು ಮಂಡಿಸಲು ಬೇಕಾದ ಮಾದರಿಗಳನ್ನು ರಚಿಸುವ ಅವಕಾಶವಿದೆ ಎಂದು ಹೇಳಿದರೆ ಆಗ ಇನ್ನೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಬಾಯಿಕಟ್ಟಿದ ಗುಂಪು ತಮ್ಮ ವಾಸ್ತವವನ್ನು ಮಂಡಿಸಲು ಬೇಕಾದ ಅಭಿವ್ಯಕ್ತಿ ಮಾದರಿಗಳನ್ನು ಕಟ್ಟಿಕೊಳ್ಳದಂತೆ ಅಡ್ಡಿಯೊಡ್ಡುತ್ತಿರುವವರು ಯಾರು?

ಅಧಿಕಾರವುಳ್ಳ ಗುಂಪುಗಳು ಅರ್ಥವನ್ನು ನಿಯಂತ್ರಿಸುವ ಮೂಲಕ ಅಡ್ಡಿಪಡಿಸುತ್ತಿವೆ ಎಂಬುದು ಮೇಲಿನ ಪ್ರಶ್ನೆಗೆ ಉತ್ತರವಾದೀತು. ಆದರೆ, ಅದನ್ನವರು ಹೇಗೆ ಜಾರಿಗೆ ಕೊಡುತ್ತಾರೆ? ಮತ್ತು  ಬಾಯಿಕಟ್ಟಿದ ಗುಂಪುಗಳು ಕೂಡಾ ಹಾಗೆ ಮಾಡಲು ಇರುವ ಅಡ್ಡಿಗಳೇನು? ವಿಧಿವಾದವನ್ನು ಇಡಿಯಾಗಿ ಒಪ್ಪಿದರೆ ಗಂಡು ಕಟ್ಟಿದ ಭಾಷೆಯನ್ನು ಬಿಟ್ಟು ಹೆಂಗಸರು ಎಂದೂ ವಾಸ್ತವವನ್ನು ಗ್ರಹಿಸಲು ಸಾಧ್ಯವಿಲ್ಲ ಎನ್ನಬೇಕಾಗುತ್ತದೆ. ಅಂಥ ವಾಸ್ತವಕ್ಕೆ ಚಹರೆಯೂ ಇಲ್ಲ, ಬೇರುಗಳೂ ಇಲ್ಲ. ಆರ್ಡೆನರ್ ದಂಪತಿ ವಿಧಿವಾದವನ್ನು ಇಡಿಯಾಗಿ ಒಪ್ಪುತ್ತಿಲ್ಲವಾದರೆ, ಆಧಿಕಾರಿಕ ಗುಂಪು ಹೊಂದಿರುವ ನಿಯಂತ್ರಣವನ್ನು ಹೇಗೆ ವಿವರಿಸುವುದು?

ಅಧಿಕಾರದ ಸಮಸ್ಯೆ

ಬಾಯಾಳಿ/ ಬಾಯಿಕಟ್ಟಿದ ಮಾದರಿಯು ಅಧಿಕಾರದ ಬಗ್ಗೆ ಏನೂ ಮಾತನಾಡದಿರುವುದು ಅಚ್ಚರಿ ಎನಿಸುತ್ತದೆ. ‘ಅಧಿಕಾರವುಳ್ಳವರನ್ನು ಬಾಯಿಕಟ್ಟಿದವರಿಂದ ಪ್ರತ್ಯೇಕಗೊಳಿಸಿ ನೋಡುವ ಮಾದರಿಯು ‘ಗಂಡಸರ ಯಜಮಾನಿಕೆ’ ಇಲ್ಲವೇ ‘ಹೆಂಗಸರ ಶೋಷಣೆ’ ಎಂಬ ಪರಿಭಾಷೆಗಳಲ್ಲೇ ಪರ್ಯವಸಾನಗೊಳ್ಳಬೇಕೆಂಬ ಒತ್ತಾಯವೇನೂಇಲ್ಲ’ ಎಂದು ಶೆಲ್ಲಿ ಆರ್ಡೆನರ್ ಹೇಳುತ್ತಾಳೆ. ಒಂದು ವೇಳೆ ಈ ಪರಿಭಾಷೆಯಲ್ಲೇ ವಿವರಿಸಲು ಹೊರಟರೆ, ಆಗ ಅದೊಂದು ಉದ್ದೇಶ ಪೂರ್ವಕವಾಗಿ ಗಂಡಸರು ಮಾಡುವ ಕೆಲಸವೆಂದು ಹೇಳಬೇಕಾಗುತ್ತದೆ. ಈ ಬಗೆಯ ಗಂಡು ನಿಯಂತ್ರಣದ ಸಂಚಿನ ಸಿದ್ಧಾಂತಗಳನ್ನು ಶೆರ್ಲಿ ನಿರಾಕರಿಸುತ್ತಿದ್ದರೆ ಅದು ಸರಿಯಾಗಿಯೇ ಇದೆ. ಸ್ತ್ರೀವಾದಿಗಳಿಗೆ ಈ ವ್ಯಾಖ್ಯೆ ಹಿಡಿಸದಿರಬಹುದು. ಗಂಡಸರು ವ್ಯವಸ್ಥಿತ ಯೋಜನೆಗಳ ಮೂಲಕ ಹೆಂಗಸರ ವಾಸ್ತವವನ್ನು ಹತ್ತಿಕ್ಕುವ ಕೆಲಸ ಮಾಡಲಾರರು. ಕೆಲವು ಕಟ್ಟುಗಳ  ನೆಲೆಗಟ್ಟಿನಲ್ಲಿ ರಚನೆಗೊಂಡ ಸಂಸ್ಕೃತಿ ಮತ್ತು ಪರಂಪರೆಗೆ ಅವರು ವಾರಸುದಾರರಾಗುತ್ತಾರೆ. ಅದರಿಂದಾಗಿಯೇ ಅವರ ವರ್ತನೆಗಳು ಆ ಕಟ್ಟುಗಳನ್ನು ಮರಳಿ ನೆಲೆಗೊಳಿಸುತ್ತವೆ. ಹೆಂಗಸರೂ ಕೂಡಾ ಇದೇ ಕೆಲಸವನ್ನು ಮಾಡುತ್ತಿರುತ್ತಾರೆ.

ಹೀಗಿದ್ದರೂ ಈ ವರ್ತನೆಗಳು ಕೊನೆಗೆ ಗಂಡಸಿನ ಯಜಮಾನಿಕೆ ಮತ್ತು ಹೆಂಗಸಿನ ದಮನಗಳಾಗಿ ಕೊನೆಗೊಳ್ಳುತ್ತವೆ ಎಂದು ಹೇಳುವುದು ಕಷ್ಟ. ಶೆರ್ಲಿ ಹೇಳುವಂತೆ ಭಾಷಿಕ ದಮನಗಳು ಉದ್ದೇಶಪೂರ್ವಕವಾಗಿ ನಡೆದ ಗಂಡು ಕ್ರಿಯೆಗಳು. ಹೆಂಗಸರು ಮಾತನಾಡುವ ರೀತಿಯನ್ನು, ಅದರಲ್ಲೂ ಮನೆಯ ಹೊರಗೆ ಮಾತಾಡುವ ಬಗೆಯನ್ನು ಹಲವು ಸಂಸ್ಕೃತಿಗಳು ನಿಯಂತ್ರಿಸುತ್ತವೆ. ಈ ನಿಯಂತ್ರಣವನ್ನು ಕೆಲವೊಮ್ಮೆ ಹೆಂಗಸರೇ ಸಮರ್ಥಿಸಿದರೂ (ತಾಯಂದಿರು, ಅತ್ತೆಯಂದಿರು) ಇದರ ಉದ್ದೇಶ ಗಂಡಸರ ಯಜಮಾನಿಕೆಯನ್ನು ಕಾಯ್ದುಕೊಳ್ಳುವುದೇ ಆಗಿದೆ. ‘ಗಂಡಸರ ಯಜಮಾನಿಕೆ’ ಎನ್ನುವ ಬದಲು ‘ಅಧಿಕಾರದ ರಚನೆಗಳು’ ಎಂದು ಹೇಳಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯಲಿಲ್ಲ. ಸಂಸ್ಕೃತಿಯ ಯಾವ ಸಂದರ್ಭಗಳಲ್ಲಿ ಮತ್ತು ಯಾವ ಸಾಮಾಜಿಕ ಉದ್ದೇಶಗಳಿಗಾಗಿ ಬಾಯುಳ್ಳವರ ಮತ್ತು ಬಾಯಿಕಟ್ಟಿದವರ ನಡುವೆ ತಾರತಮ್ಯ ಹುಟ್ಟುತ್ತದೆ? ಏಕೆ ಹೆಂಗಸರೇ ಬಾಯಿಕಟ್ಟಿದವರಾಗುತ್ತಾರೆ? ಈ ಸ್ಥಿತಿ ಗಂಡಸರಿಗೇಕಿಲ್ಲ?

ಸಾರಾಂಶ

ಸಮಾಜದೊಳಗಿರುವ ಭಿನ್ನ ಗುಂಪುಗಳ ‘ಗ್ರಹಿಕೆಗಳ ಬಗೆಗಳಲ್ಲಿ ಇರುವ ವ್ಯತ್ಯಾಸಗಳನ್ನು’ ಕುರಿತು ಆರ್ಡೆನರ್ ದಂಪತಿ ಮಾದರಿಯು ಹುಟ್ಟು ಹಾಕುವ ಪ್ರಶ್ನೆಗಳು ಮುಖ್ಯವಾಗಿವೆ. ಇಲ್ಲಿ ಸ್ತ್ರೀವಾದಿಗಳ ಚಿಂತನೆಗೆ ಸಾಕಷ್ಟು ಆಹಾರವಿದೆ. ಇದರಲ್ಲಿ ಕೆಲವು ಸಮಸ್ಯೆಗಳೂ ಇವೆ. ಏಕೆ ಬಾಯಿಕಟ್ಟಿದ ಗುಂಪುಗಳು ಒಳಸ್ತರದ ವಾಸ್ತವವನ್ನು ರೂಪಿಸಿಕೊಂಡರೂ, ಅದನ್ನು ಸೂಕ್ತ ಅಭಿವ್ಯಕ್ತಿ ಮಾದರಿಗಳ ಮೂಲಕ ಹೊರಸ್ತರಕ್ಕೆ ತರಲು ಸೋಲುತ್ತವೆ ಎಂಬುದನ್ನು ಈ ಚರ್ಚೆಗಳು ಪರಿಹರಿಸಿಲ್ಲ. ಯಾವುದೇ ಪರ್ಯಾಯಗಳಿಗೆ ಅವಕಾಶವಿಲ್ಲದಂತೆ ಎಲ್ಲ ಸಂವಹನಮಾರ್ಗಗಳ ಮೇಲೂ ಅಧಿಕಾರವುಳ್ಳ ಗುಂಪು ನಿಯಂತ್ರಣವನ್ನು ಹೇಗೆ ಸಾಧಿಸುತ್ತದೆ? ಇವರು ಇಂಥ ನಿಯಂತ್ರಣವನ್ನು ಸಾಧಿಸಿದ್ದಾರೆಂಬುದಕ್ಕೂ ಬಾಯಿಕಟ್ಟಿದವರ ಭಾಷಿಕವರ್ತನೆಗಳಿಗೂ ಹೊಂದಿಕೆ ಯಾಗುತ್ತಿದೆಯೇ? (ಉದಾಹರಣೆಗೆ, ಸಂಸ್ಕೃತಿಯ ಒಳಗೇ ಹಲವು ಶೈಲಿಗಳು, ಪ್ರಭೇದಗಳೂ ಇರುತ್ತವೆ. ಆಚರಣೆಯ ಭಾಷೆಯೊಂದಿರುತ್ತದೆ. ಸಮವಯಸ್ಕ ಹೆಂಗಸರ ಗುಂಪುಗಳ ಸಂಭಾಷಣಾ ಶೈಲಿಯೊಂದಿರುತ್ತದೆ.) ಬಾಯಿಕಟ್ಟುವುದು ಎಂದರೆ ಭಾಷಿಕ ಸಂಪನ್ಮೂಲಗಳ ಕೊರತೆಯೇನು? ಅಥವಾ ಗಂಡು ಪ್ರಧಾನವಾದ ವಿಸ್ತೃತ ಸಂಸ್ಕೃತಿಯಲ್ಲಿ ಹೆಂಗಸರ ಭಾಷೆಗೆ ಸಮ್ಮತಿ ಇಲ್ಲದಿರುವುರಿಂದ ಬಾಯಿಕಟ್ಟುವಿಕೆ ಉಂಟಾಗುವುದೇ?

ಈ ಪ್ರಶ್ನೆಗಳಿಗೆ ರಾಜಕೀಯ ಮತ್ತು ಸೈದ್ಧಾಂತಿಕ ನೆಲೆಗಳಿವೆ. ಆರ್ಡೆನರ್ ದಂಪತಿಯ ವಾದದಲ್ಲಿ ಒಳವಿರೋಧಗಳಿದ್ದರೂ ಅವರು ಹೆಂಗಸರನ್ನು ಕ್ರಿಯಾಶೀಲ ಸಾಮಾಜಿಕ ಮತ್ತು ಭಾಷಿಕ ಕರ್ತೃಗಳೆಂದು ಪರಿಗಣಿಸುವುದಿಲ್ಲ ಎಂಬುದು ಖಚಿತ. (ಹಾಗೆ ನೋಡಿದರೆ ಅವರು ಗಂಡಸರ ಪಾತ್ರವನ್ನು ಅಷ್ಟು ಮಹತ್ವದ್ವೆಂದು ಪರಿಗಣಿಸುವುದಿಲ್ಲ) ಇದರಿಂದ ಸ್ತ್ರೀವಾದಿ ಸಂಶೋಧಕರು ಈ ವಾದವನ್ನು ಸ್ವೀಕರಿಸುವುದು ಕಷ್ಟವಾಗುತ್ತದೆ. ಏಕೆಂದರೆ ಇವರು ಹೆಂಗಸರ ಶಾಬ್ದಿಕ ಸಂಸ್ಕೃತಿಯ ಚೈತನ್ಯ ಮತ್ತು ಕ್ರಿಯಾಶೀಲತೆಯನ್ನು ಎತ್ತಿ ಹೇಳಿದ್ದಾರೆ. ಅಲ್ಲದೆ ಆರ್ಡೆನರ್ ದಂಪತಿಯ ನಿಲುವಿನ ಬೆನ್ನು ಹತ್ತಿದರೆ ಬಾಯಿಕಟ್ಟಿದ ಗುಂಪುಗಳನ್ನು ಅವುಗಳು ಈಗಿರುವ ಅಧೀನ ಭಾಷಿಕ ನೆಲೆಯಿಂದ ಹೊರತರಲು ಖಂಡಿತ ಸಾಧ್ಯವಾಗುವುದಿಲ್ಲ.

ಗಂಡು ಕಟ್ಟಿದ ಭಾಷೆ : ಪಿತೃಪ್ರಧಾನತೆ ಮತ್ತು ವ್ಯಾಖ್ಯಾನ ಸಾಮರ್ಥ್ಯ

೧೯೮೦ ರಲ್ಲಿ ಡೇಲ್ ಸ್ಪೆಂಡರ್‌ಳ ‘Man made language’ ಪುಸ್ತಕ ಪ್ರಕಟವಾಯಿತು. ಸ್ತ್ರೀವಾದಿ ಓದುಗರಿಗಾಗಿ ಈ ಪುಸ್ತಕವನ್ನು ಬರೆಯಲಾಗಿದೆ. ಭಾಷೆಯ ಬಗ್ಗೆ ಸ್ತ್ರೀವಾದಿಗಳ ತಿಳಿವನ್ನು ಈ ಪುಸ್ತಕದಷ್ಟು ಮತ್ತಾವುದೂ ಜಾಗ್ರತಗೊಳಿಸಲಿಲ್ಲ. ಈ ಪುಸ್ತಕದ ವಿದ್ವತ್ತಿನ ಬಗ್ಗೆ ಭಾಷಾಶಾಸ್ತ್ರಜ್ಞರು ಏನೇ ಟೀಕೆ ಮಾಡಿದ್ದರೂ, ಇದನ್ನು ಗಮನಿಸದೇ ಇರುವುದಂತೂ ಸಾಧ್ಯವಿಲ್ಲ.

Man made language ಒಂದು ದಿಟ್ಟವಾದ ತೀವ್ರವಾದಿ ಸ್ತ್ರೀವಾದ ಕೃತಿ. ಆರ್ಡೆನರ್ ದಂಪತಿ ಸಾಮಾನ್ಯೀಕರಿಸಲು ಹಿಂಜರಿಯುವ ಬಗೆಯನ್ನು ಈ ಪುಸ್ತಕ ಅನುಸರಿಸುವುದಿಲ್ಲ. ನೇರ ಹೊಡೆತಗಳ ಮೂಲಕ ತನ್ನ ನಿಲುವನ್ನು ಪ್ರತಿಪಾದಿಸುತ್ತದೆ. ಗಂಡಸರು ಅರ್ಥವನ್ನು ನಿಯಂತ್ರಿಸುತ್ತಾರೆ, ಎಲ್ಲರ ಮೇಲೂ ತಮ್ಮ ಲೋಕದೃಷ್ಟಿಯನ್ನು ಹೇರಿದ್ದಾರೆ ಎಂದು ಹೇಳುತ್ತದೆ. ಗಂಡು ಭಾಷೆಯಲ್ಲೂ ತಮ್ಮ ಅನುಭವಗಳನ್ನು ಸಂಕೇತೀಕರಿಸಲು ಹೆಂಗಸರಿಗೆ ಆಗುತ್ತಿಲ್ಲ. ಗಂಡಸರ ವಾಸ್ತವವನ್ನು ತಮ್ಮದೆಂದು ಒಪ್ಪಿಕೊಳ್ಳಲು ಕೂಡಾ ಸಾಧ್ಯವಾಗುತ್ತಿಲ್ಲ. (ಪ್ರತ್ಯೇಕೀಕರಣ) ತಾವು ಏನನ್ನೂ ಹೇಳಲಾಗದ ಸ್ಥಿತಿಯಲ್ಲಿದ್ದರೆ (ಮೌನ) ಈ ನಿಲುವು ಕೂಡಾ ಕೆಲವು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ.