ಡೇಲ್ ಸ್ಪೆಂಡರ್‌ಳ ವಿಶ್ಲೇಷಣೆಗಳನ್ನು ಒಪ್ಪದಿರಲು ಬೇರೆ ಕಾರಣಗಳೂ ಇವೆ. ಆಕೆಯ ಎರಡನೆಯ ನಿಯಮದಲ್ಲಿ ‘‘ಹೀನಾರ್ಥ’’ಎಂಬ ಪದವೊಂದಿದೆ. ಆದರೆ ಆ ಪದಕ್ಕೆ ನಿಯತವಾದ ವಿವರಣೆಯನ್ನು ಕೊಡುವುದು ಕಷ್ಟ. ವಾಕ್ಯದ ರಾಚನಿಕ ನಿಯಮಗಳನ್ನು ಮತ್ತು ಅವುಗಳನ್ನು ರೂಪಿಸಿದ ಪರಿಕಲ್ಪನೆಗಳನ್ನು ನಿಯತವಾದ ವ್ಯಾಖ್ಯೆಗೆ ಗುರಿಪಡಿಸಲು ಸಾಧ್ಯ ಎನ್ನುವುದು ಭಾಷಾಶಾಸ್ತ್ರದ ನಿಲುವು. ಆದರೆ, ಡೇಲ್ ಸ್ಪೆಂಡರ್ ಹೇಳಿದ ನಿಯಮ ಹೀಗಿಲ್ಲ.  ಮೊದಲನೆಯದಾಗಿ ನಾವು ವಾಕ್ಯಗಳನ್ನು ಈ ನಿಯಮದಡಿಯಲ್ಲಿ ಗಮನಿಸುತ್ತಿಲ್ಲ. ಏಕೆಂದರೆ, ಆ ರಚನೆಯಲ್ಲಿರುವ ಧ್ವನ್ಯಾತ್ಮಕ, ವಾಕ್ಯಾತ್ಮಕ, ಮತ್ತು ಅರ್ಥರಚನೆಯ ನೆಲೆಯ ನಿಯಮಗಳನ್ನು ಬಳಸಿ ಬೇರೆಯೇ ಅರ್ಥವುಳ್ಳ ರಚನೆಗಳನ್ನು ಕಟ್ಟಬಹುದು. ವಾಕ್ಯ ೧೬ ಮತ್ತು ೧೭ ನ್ನು ಗಮನಿಸಿ –

೧೬.  John is talking to that woman again.

೧೭.  He really behaved like a man.

ಈ ಎರಡೂ ವಾಕ್ಯಗಳನ್ನು ಯಾರು ಹೇಳಿದರು ಮತ್ತು ಯಾವಾಗ ಹೇಳಿದರು ಎಂಬುದನ್ನು ಗಮನಿಸಿದಾಗ ಮಾತ್ರ ಅಲ್ಲಿ ಹೀನಾರ್ಥವಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.

ಡೇಲ್ ಸ್ಪೆಂಡರ್‌ಳ ಅರ್ಥರಚನೆ ನಿಯಮಗಳು ಸೈದ್ಧಾಂತಿಕ ನೆಲೆಯಲ್ಲಿ ನಿಯಮಗಳೇ ಅಲ್ಲ. ಅವು ಕೇವಲ ಭಾಷಾರಚನೆಗಳ ಅರ್ಥ ವಿವರಣೆಗೆ ನೆರವಾಗುವ ಪರಿಕರಗಳಾಗಿವೆ. ಇವುಗಳನ್ನು ಎಲ್ಲ ಸಂದರ್ಭಗಳಲ್ಲೂ ಬಳಸಬಹುದೇ ಎಂದೂ ಮತ್ತು ಯಾರೇ ಹೇಳಿದ್ದರೂ ಆ ರಚನೆಗಳಲ್ಲಿ ಹೀನಾರ್ಥ ಇದ್ದೇ ಇರುವುದೆಂದೂ ಹೇಳಲಾಗುವುದೇ? ವಾಕ್ಯ ೧೬, ೧೭ ಮಾದರಿಯ ಎಷ್ಟೋ ವಾಕ್ಯಗಳನ್ನು ರಚಿಸಬಹುದು. ಆದರೆ ಅವುಗಳಲ್ಲಿ ಹೀನಾರ್ಥವಿದೆ ಎಂದು ಸಾಧಿಸಲು ಆಗುವುದಿಲ್ಲ. ಇಲ್ಲಿಯೇ ಏನನ್ನು ಹೇಳಲಾಯಿತು ಮತ್ತು ಯಾರು ಹೇಳಿದರು – ಈ ಎರಡೂ ಸಂಬಂಧಗಳು ಮುಖ್ಯವಾಗುತ್ತವೆ. ಆದರೆ, ಈಕೆ ಆ ಬಗ್ಗೆ ಮೌನವಾಗಿದ್ದಾಳೆ. ಈ ಸಂಬಂಧದ ಸ್ವರೂಪವನ್ನು ಆಕೆ ಗ್ರಹಿಸದೇ ಇರುವುದೇ ಈ ಮೌನಕ್ಕೆ ಕಾರಣ. ಆಕೆ ಭಾಷೆಯನ್ನು ಕುರಿತ ಅಸ್ಪಷ್ಟವಾದ ವಿವರಣೆಯನ್ನು ನಂಬಿ, ಹೇಳುವ ಕೇಳುವ ಸಂಬಂಧದಲ್ಲಿ ಯಾವಾಗಲೂ ಭಾಗೀದಾರರಿಗೆ ಬೇರೆ ಬೇರೆ ‘ಭಾಷೆ’ಗಳನ್ನೇ ಒದಗಿಸಬೇಕಾಗುವುದೆಂದು ನಂಬಿಬಿಡುತ್ತಾಳೆ. ಇಲ್ಲವೇ ಭಾಷಾ ಸಿದ್ಧಾಂತಗಳಲ್ಲಿ ರಚನೆಗಳನ್ನು ವಿವರಿಸುವ ಕೆಲವು ಪರಿಕಲ್ಪನೆಗಳನ್ನು ಬಳಸಿಕೊಂಡರೂ ಒಂದು ಗೊತ್ತಾದ ಸಂದರ್ಭದಲ್ಲಿ ಆ ಪರಿಕಲ್ಪನೆಗಳನ್ನು ಸರಿಯಾಗಿ ವ್ಯಾಖ್ಯಾನಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ನಮಗೆ ಭಿನ್ನ ಪರಿಕಲ್ಪನೆಗಳೇ ಬೇಕಾಗಿವೆ. ಸ್ತ್ರೀವಾದಿಗಳು ಗಮನಿಸುತ್ತಿರುವ ಸಂಗತಿಗೂ, ಭಾಷಾರಚನೆಗೂ ಯಾವ ಸಂಬಂಧವೂ ಇಲ್ಲ. ನಾವೀಗಾಗಲೇ ಗಮನಿಸಿರುವಂತೆ ಭಾಷೆಯು ತಂತಾನೇ ಲಿಂಗತಾರತಮ್ಯವನ್ನು ಪ್ರಕಟಿಸುವುದಿಲ್ಲ. ಅಲ್ಲದೆ, ಅದು ಗಂಡಸು ಕಟ್ಟಿದ್ದಲ್ಲ. ಗಂಡಸು ಮತ್ತು ಹೆಂಗಸರ ಸ್ಥಾನಮಾನಗಳು ಮತ್ತು ಭಿನ್ನ ವರ್ಗೀಕರಣಗಳನ್ನು ಅರಿತುಕೊಳ್ಳಲು ಬೇಕಾದ ತಳಹದಿಯನ್ನು ಭಾಷೆ ನೀಡಬಲ್ಲದು. ಈ ನಿಟ್ಟಿನಲ್ಲಿ ಸ್ತ್ರೀವಾದಿ ವಿಶ್ಲೇಷಣೆಗಳು ಮುಂದುವರೆಯಬೇಕೇ ಹೊರತು ಭಾಷಾರಚನೆಯ ವಿಶ್ಲೇಷಣೆಯ ಕಡೆಗಲ್ಲ.

ಆದರೆ ಸ್ತ್ರೀವಾದಿಗಳು ಸುಮ್ಮನೆ ತೆಗೆದುಕೊಂಡು ಬಸಬಹುದಾದ ಯಾವುದೇ ಸೈದ್ಧಾಂತಿಕ ಚೌಕಟ್ಟು ಇನ್ನೂ ಸಿದ್ಧವಾಗಿಲ್ಲ. ಆಧುನಿಕ ಭಾಷಾಶಾಸ್ತ್ರದಲ್ಲಿ ಬೆಳೆದಿರುವ ಸಂಕಥನ ವಿಶ್ಲೇಷಣೆಯ ಪರಿಕರಗಳೂ ಕೂಡಾ ಸ್ತ್ರೀವಾದಿಗಳ ನೆರವಿಗೆ ಬರುವಂತಿಲ್ಲ. ವಾಕ್ಯ ೧ ರಿಂದ ೧೧ ರವರೆಗಿನ ಸಂಗತಿಗಳನ್ನು ಸಾಮಾಜಿಕ ಸಂದರ್ಭ ಮತ್ತು ಪೂರ್ವ ನಿರ್ಧಾರಗಳನ್ನು ಅವಲಂಬಿಸಿ ವಿವರಿಸಬಹುದು. ಭಾಷೆಯು ಇಂಥ ಕಡೆ ಕನ್ನಡಿ ಮಾತ್ರ. People, Americans ಇಲ್ಲವೇ nurse – ಮುಂತಾದ ಪದಗಳಿಗೆ ಜಂಡರ್ ನೆಲೆಯಲ್ಲಿ ನಿರ್ಧಿಷ್ಟವಾದ ಅರ್ಥಗಳಿಲ್ಲ. ಅವುಗಳು ಯಾವ ಜಂಡರ್ ಅನ್ನು ಸೂಚಿಸಬೇಕೆಂಬುದನ್ನು ಅಧಿಕಾರ , ಉನ್ನತ ಅಂತಸ್ತು – ಮುಂತಾದ ಭಾಷೇತರ ನಂಬಿಕೆಗಳು ನಿಯಂತ್ರಿಸುತ್ತವೆ. ಈ ನಿಟ್ಟಿನಲ್ಲೂ ಹಲವು ಸಮಸ್ಯೆಗಳಿವೆ. ಸಾಮಾಜಿಕ ನಂಬಿಕೆಗಳು ಎಂಬ ಚೀಲದಲ್ಲಿ ಏನನ್ನು ಬೇಕಾದರೂ ತುಂಬಿ ಬಿಡಬಹುದು. ಸಂಕಥನದ ಆಚೆಗಿನ ಸಂಗತಿಗಳನ್ನು ಬೆನ್ನು ಹತ್ತಿ ಹೊರಟು ಕೊನೆಗೆ ಅವೆಲ್ಲವೂ ವಾಸ್ತವದ, ಇಲ್ಲವೇ ಸಮಾಜದ ಪ್ರತಿಬಿಂಬಗಳೆಂದು ಹೇಳತೊಡಗುತ್ತೇವೆ. ಸಂಕಥನಗಳು ಏನನ್ನು ಬಿಂಬಿಸುತ್ತವೆ ಮತ್ತು ಅವುಗಳ ಕರ್ತೃ ಯಾರು ಎಂಬುದನ್ನು ನಿರ್ಧರಿಸುವುದು ಸಂಕಥನದ ಆಚೆಗಿರುವ ಸಂಗತಿಗಳಾಗಿವೆ. ಇಲ್ಲಿಯೂ ಒಂದು ವಿರೋಧಾಭಾಸವಿದೆ. ಯಾವುದನ್ನು ಸಂಕಥನಗಳು ಕಟ್ಟಿ ವ್ಯವಸ್ಥೆ ಗೊಳಿಸುತ್ತವೆ ಎಂದು ನಂಬುತ್ತೇವೋ, ಅವುಗಳೇ ಸಂಕಥನಗಳಿಗೆ ಮೂಲಗಳಾಗಿ, ಕಾರಣಗಳಾಗಿ ತೋರುವಂತೆಯೂ ಆಗುತ್ತಿದೆ.

ಈ ಎಲ್ಲ ಸಮಸ್ಯೆಗಳ ನಡುವೆಯೂ ನಿರ್ಧಿಷ್ಟ ಸಾಮಾಜಿಕ ಮತ್ತು ಲೈಂಗಿಕ ಸಂಬಂಧಗಳನ್ನು ಸೂಚಿಸುವ ಪದಗಳ ವ್ಯಾಖ್ಯಾನಕ್ಕೆ ಬೇರೆಯೇ ಸಾಧ್ಯತೆ ಇದೆ. ಆದರೆ, ಹೆಂಗಸರನ್ನು ಮನುಷ್ಯರೆಂದು ಗುರುತಿಸುವುದಿಲ್ಲ, ಮತ್ತು ಅವರನ್ನು ಗಂಡಸರಿಗೆ ಸಮಾನರೆಂದು ಪರಿಗಣಿಸುವುದಿಲ್ಲ ಎಂಬ ವಿವರಣೆಯನ್ನು ಹೇಗೆ ನಿರ್ವಹಿಸಬೇಕೆಂಬುದು ಗೊತ್ತಾಗುತ್ತಿಲ್ಲ. man, human, people – ಮುಂತಾದ ಪದಗಳನ್ನು ಗಂಡಸರಿಗೆ ಮಾತ್ರ ಅನ್ವಯಿಸುವುದು, ಕೆಲವೊಮ್ಮೆ ಗಂಡು ಹೆಣ್ಣುಗಳಿಬ್ಬರಿಗೂ ಅನ್ವಯಿಸುವುದು ಸಾಧ್ಯವಾಗದು.  ಕೇವಲ ಗಂಡು ಹೆಣ್ಣುಗಳನ್ನಷ್ಟೇ ಸೂಚಿಸುವಂತೆ ಏಕೆ ಬಳಸಲಾಗುತ್ತಿಲ್ಲ? ವಾಕ್ಯ ೧ ಮತ್ತು ೨ ನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ೩ ನ್ನಲ್ಲ. ಈ ವಿರೋಧವನ್ನು ನಾವು ಗ್ರಹಿಸಬೇಕಾಗಿದೆ. ಮುಂದಿನ ಕೆಲವು ವಾಕ್ಯಗಳನ್ನು ನೋಡಿ –

೧೮.      This theiving  gang consists of three people from Latin America and a woman

೧೯.       Normal people do not go around raping and murdering women.

೨೦.      Well, it’s only human nature. ಇಂಥ ವಾಕ್ಯಗಳು ತಂದೊಡ್ಡುವ ಇಕ್ಕಟ್ಟನ್ನು ಪರಿಗಣಿಸಬೇಕು.

೨೧.      This Theiving gang consists of three people from Latin America and a man.

೨೨.       The Commettee was appointed to review the problems of special groups, the handicapped, ethnic groups, aborigionals and men.

೨೩.       You can’t orgue with Jame’s typically human logic / notions.

ಈ ಮೇಲಿನ ವಾಕ್ಯಗಳಲ್ಲಿ ಮನುಷ್ಯ ಎಂಬ ಪದದ ಭಿನ್ನ ಆವಿಷ್ಕಾರಗಳನ್ನಾಗಿ ಗಂಡು ಮತ್ತು ಹೆಣ್ಣು ಎಂಬ ಅರ್ಥಗಳನ್ನು ವ್ಯವಸ್ಥಿತವಾಗಿ ಬಳಸಲಾಗಿದೆ. ಇದನ್ನು ಡೇಲ್ ಸ್ಪೆಂಡರ್ ಭಾಷೆಯ ಸಾಮಾನ್ಯ ನಿಯಮ ಎಂದ ಹೇಳುತ್ತಾಳೆ. ಆದರೆ, ಭಾಷೆಯನ್ನು ಇಷ್ಟು ಸರಳವಾಗಿ ಗ್ರಹಿಸಲಾಗುವುದಿಲ್ಲ. ಬೇರೆಯೇ ಮಾತಿನಲ್ಲಿ ಹೇಳುವುದಾದರೆ, ನಾವು ಭಾಷಿಕ ತಳಹದಿಗೂ ಅರ್ಥಾನ್ವಯದ ನೆಲೆಗೂ ಇರುವ ಸಂಬಂಧಾಂತರಗಳನ್ನು ಅರಿಯಬೇಕು. ನಾವು ಪರಿಶೀಲಿಸುತ್ತಿರುವ ಸಮಸ್ಯೆಯು ಅರ್ಥಾನ್ವಯಕ್ಕೆ ಸಂಬಂಧಿಸಿದೆ. ನಿರ್ದಿಷ್ಟ ಉಕ್ತಿಗಳಿಂದ ಲಿಂಗಸಂಬಂಧೀ ಅರ್ಥಗಳು ಹೇಗೆ ಹುಟ್ಟುತ್ತವೆ ಎಂಬುದನ್ನು ನಾವು ಹುಡುಕಬೇಕಾಗಿದೆ.

ಅರ್ಥಾನ್ವಯರ ರಚನೆಗಳು

ಈವರೆಗಿನ ಚರ್ಚೆಯಿಂದ ಸ್ಪಷ್ಟವಾಗಿದ್ದಿಷ್ಟು. ಪದಗಳಿಂದ ಕಟ್ಟಿದ ಉಕ್ತಿಯ ರಾಚನಿಕ ವ್ಯವಸ್ಥೆಯನ್ನು ಬಿಟ್ಟು ನಾವು ಅದರ ಅರ್ಥವನ್ನು ಗುರುತಿಸಲು ಸಾಧ್ಯವಿಲ್ಲ. ಒಂದು ಉಕ್ತಿರಚನೆಯಲ್ಲಿ ಇರುವ ಅರ್ಥವು ಘಟಕಗಳ ಜೋಡಣೆಯಿಂದ ಮತ್ತು ಜೊತೆಯಲ್ಲಿರುವ ಇನ್ನಿತರ ಉಕ್ತಿರಚನೆಗಳ ಸಂಬಂಧದಿಂದ ನಿರ್ಧಾರಿತವಾಗುತ್ತದೆ. ಅಂದರೆ, ಅರ್ಥಾನ್ವಯದಿಂದ ಮಾತ್ರವೇ ನಾವು ಉಕ್ತಿಯ ಕರ್ತೃ, ವಿಷಯ – ಇತ್ಯಾದಿಗಳನ್ನು ಅರಿಯಬಲ್ಲೆವೇ ಹೊರತು ಸಮೂಹ ಅನುಭವಗಳಿಂದ ಹುಟ್ಟಿದ ಸ್ಥಿರ ಅರ್ಥಗಳಿಂದಲ್ಲ.  ಹೀಗಾದರೂ ಭಾಷೆಯಲ್ಲಿ ಹೆಂಗಸನ್ನು ಹೀನಾಯಗೊಳಿಸುವ ಸಮಸ್ಯೆಗೆ ಪರಿಹಾರ ದೊರೆತಂತಾಗಲಿಲ್ಲ. ಹೀನಾಯಗೊಳಿಸುವುದಕ್ಕೂ, ಸಾಮಾಜಿಕ ವ್ಯವಸ್ಥೆ ಮತ್ತು ಭಿನ್ನ ಲಿಂಗಗಳ ನಡುವಣ ಸಂಬಂಧಕ್ಕೂ ಏನು ನಂಟಿದೆ ಎಂಬುದು ಗೊತ್ತಾಗಲಿಲ್ಲ. ಇದಕ್ಕಾಗಿ, ಈಗಾಗಲೇ ನೆಲೆಗೊಂಡು ಬಳಕೆಯಲ್ಲಿರುವ ಸಾಂಸ್ಕೃತಿಕ ಸಂಕೇತಗಳನ್ನು ಚಲಾವಣೆಯಲ್ಲಿಡುವ ಬಗೆ ಮತ್ತು ಸಮಾಜದ ಮೇಲೆ ಅವು ಬೀರುವ ಪರಿಣಾಮಗಳನ್ನು ತಿಳಿಯಬೇಕಾಗುತ್ತದೆ. ಈಗ ಮತ್ತೆ ನಾವು ಐಡಿಯಾಲಜಿ ಮತ್ತು ಭಾಷೆಗಳ ಚರ್ಚೆಯನ್ನು ಮಾರ್ಕ್ಸ್‌ವಾದವು ಬೆಳೆಸಿದ ರೀತಿಯನ್ನು ನೋಡಬೇಕಾಗಿದೆ. ಹಲವು ಸಮಾಜವಾದಿ ಸ್ತ್ರೀವಾದಿಗಳು ಮಾರ್ಕ್ಸ್‌ವಾದಿ ಚಿಂತನೆಗಳನ್ನು ಲೈಂಗಿಕ ನೆಲೆಗಳ ಶೋಧನೆಗೆ ನೆರವಾಗುವ ಪರಿಕಲ್ಪನೆ ಎಂದು ಭಾವಿಸಿದರು. ಈ ಲೈಂಗಿಕ ನೆಲೆಯು ಕೊಂಚ ಮಟ್ಟಿಗೆ ಸ್ವಾಯತ್ತವಾದರೂ, ಆರ್ಥಿಕ ಸಂರಚನೆಯಿಂದ ಮುಕ್ತವಲ್ಲ ಎಂದು ಭಾವಿಸಿದರು. ಈ ಶೋಧ ಮುಗಿಯುವ ಮೊದಲೇ ಸಮಾಜವಾದಿ ಸ್ತ್ರೀವಾದವು ನೆಲಕಚ್ಚಿದ್ದಕ್ಕೆ ಎರಡು ಕಾರಣಗಳಿವೆ. ಮಾರ್ಕ್ಸ್‌ವಾದವನ್ನು ಬೌದ್ದಿಕ ಶಿಸ್ತು ಎಂದೂ, ಮತ್ತು ರಾಜಕೀಯ ತತ್ವವೆಂದೂ ಭಾವಿಸಿ, ಸಾಮಾಜಿಕ ರಚನೆಗಳ ನಡುವೆ ಇರುವ ಕಾರಣ ಸಂಬಂಧಗಳನ್ನು ಹುಡುಕಲು ಹೊರಟದ್ದು ಸೋಲಿನ ಮೊದಲ ಕಾರಣ. ಈಗಾಗಲೇ ಗೊತ್ತಿರುವಂತೆ ಈ ಬಗೆಯ ಹುಡುಕಾಟವು ಆರ್ಥಿಕ ವರ್ಗಶತೃತ್ವವೇ ಎಲ್ಲಕ್ಕೂ ನಿರ್ಧಾರಕ ಸಂಗತಿಯನ್ನಾಗಿ ಪರಿಗಣಿಸಿತ್ತು. ಇದರ ಜೊತೆಗೆ ಸೈದ್ಧಾಂತಿಕ ಹೋರಾಟಗಳು ರಾಜಕೀಯವಾಗಿ ಅಧೀನ ನೆಲೆಯಲ್ಲಿ ಇರಬೇಕೆಂದು ವಾದಿಸಿದ್ದರು. ಸಮಾಜವಾದಿ ಸ್ತ್ರೀವಾದಿಗಳು ಲಿಂಗ ಮತ್ತು ವರ್ಗಗಳ ನೆಲೆಯನ್ನು ವಿವರಿಸಲು ಮಾರ್ಕ್ಸ್‌ವಾದ ನೆರವಾಗುವುದೆಂದು ನಂಬಿದ್ದರು. ಆದರೆ, ಇವೆರಡರ ನಡುವೆ ಕಾರಣಸಂಬಂಧಗಳು ಇಲ್ಲದಿರುವುದರಿಂದ ಯಾವ ವಿವರಣೆಯನ್ನೂ ನೀಡಲಾಗಲಿಲ್ಲ. ಒಂದು ವೇಳೆ ಆರ್ಥಿಕ ಉತ್ಪಾದನಾ ನೆಲೆಗೂ, ಲೈಂಗಿಕ ಅಧೀನತೆಯ ನೆಲೆಗೂ ಕಾರ್ಯಕಾರಣ ಸಂಬಂಧವಿಲ್ಲ ಎನ್ನುವುದಾದರೆ, ಈ ಲೈಂಗಿಕ ಅಧೀನತೆಯು ಅವಿರ್ಭವಿಸಿದ್ದು ಹೇಗೆ? ಗಂಡು ಹೆಣ್ಣುಗಳ ನಡುವೆ ಇರುವ ಯಾವುದೋ ಮೂಲಭೂತ ವಿಭಜನೆಯಿಂದಾಗಿ ಹುಟ್ಟಿಕೊಂಡಿತೇ? ಒಂದು ವೇಳೆ, ಇದೇ ನಿಜವಿದ್ದರೆ, ಈ ಮೂಲಭೂತ ವಿಭಜನೆಯು ವರ್ಗವಿಭಜನೆಯೊಡನೆ ಯಾವ ಸಂಬಂಧವನ್ನು ಹೊಂದಿದೆ? ಒಂದು ಇನ್ನೊಂದಕ್ಕೆ ಕಾರಣವಾಗಿದೆಯೋ ಅಥವಾ ಒಂದು ಇನ್ನೊಂದನ್ನು ಮಾದರಿಯನ್ನಾಗಿ ಪರಿಗಣಿಸಿದೆಯೋ? ಹೀಗಿದ್ದರೆ, ಮಾರ್ಕ್ಸ್‌ವಾದವು ವರ್ಗವಿಭಜನೆಯ ನೈಸರ್ಗಿಕ, ಮಾನವ ರಚಿತವಾದದ್ದಲ್ಲ. ಎನ್ನುವ ನಿಲುವನ್ನು ಪ್ರಶ್ನಿಸಿದ್ದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಇನ್ನೊಂದು ಕಡೆ, ಸೈದ್ಧಾಂತಿಕವಾದ ಪರಿಕಲ್ಪನೆಗಳನ್ನು ಅರಿಯುವ ಕ್ರಿಯೆಯನ್ನು ಕಡೆಗಣಿಸಿ, ಅದು ಯಾವಾಗಲೂ ಸಾಮಾನ್ಯೀಕರಿಸುವ ಮತ್ತು ವಿಶ್ವಾತ್ಮಕವಾಗಿಸುವ ಕೆಲಸವನ್ನು ಮಾಡುತ್ತದೆಂದು ಟೀಕಿಸಲಾಯಿತು.  ಮೊದಲು ಸಮಾಜ ಮತ್ತು ಮಾನವ ಪ್ರಜ್ಞೆ ಇರುತ್ತದೆ. ಅದರಿಂದ ಸಾಮಾಜಿಕ ವಾಸ್ತವತೆಯು ಐಡಿಯಾಲಜಿಯಾಗಿ ರೂಪುಗೊಳ್ಳುತ್ತದೆ ಎಂದು ವಾದಿಸಲಾಗಿದೆ. ಈ ಐಡಿಯಾಲಜಿಯು ಮಂಡಿಸುವ ವಿವರಣೆಗಳು ಕೆಲವು ಅಂಧಶ್ರದ್ಧೆಗಳನ್ನು ಬೆಳೆಸಬಹುದು. ಹಾಗಾದಾಗ ಅರ್ಥಾನ್ವಯದ ನೆಲೆಗಳು ಪರಿಣಾಮಕಾರಿಯಾಗದೆ ಹೋಗಬಹುದು. ಅದಕ್ಕಾಗಿಯೇ ಅರ್ಥಾನ್ವಯದ ರಚನೆಗಳನ್ನು ಎಚ್ಚರಿಕೆಯಿಂದ ಕಾಯ್ದುಕೊಳ್ಳಬೇಕೆಂದು ಒತ್ತಿ ಹೇಳಲಾಗಿದೆ. ಈ ಮೂಲಕ ಮಾತ್ರವೇ ಸಾಮಾಜಿಕ ರಚನೆ ಮತ್ತು ಮನುಷ್ಯನ ಮನಸ್ಸಿನ ಚಟುವಟಿಕೆಗಳ ಸಂಬಂಧಗಳ ಬಗ್ಗೆ ಸಾಮಾನ್ಯೀಕರಿಸಿದ ನಿರ್ಧಾರಗಳನ್ನು ಮಾಡುವ ಅಪಾಯದಿಂದ ಪಾರಾಗಲು ಸಾಧ್ಯ. ಉಕ್ತಿಗಳು ಹಾಗೂ ಪ್ರಸ್ತಾವಗಳಲ್ಲಿರುವ ನಿಯತತೆಯನ್ನು  ಗ್ರಹಿಸಲು ಈ ಜಾಗ್ರತಿಯು ರೂಪುಗೊಂಡಿದೆ ಎಂದು ಫೂಕೋ(೧೯೭೨) ಹೇಳುತ್ತಾನೆ. ‘‘ವಾಕ್ಯಗಳನ್ನು ನುಡಿಯುವವರಿಗೆ, ಆ ವಾಕ್ಯಗಳ ನಡುವಣ ವಾಕ್ಯಗಳ ನಡುವೆಯೂ ಸಂಬಂಧಗಳಿರಬಹುದು.  ಯಾರು ವಾಕ್ಯಗಳನ್ನು ನುಡಿಯುತ್ತಿದ್ದಾರೆಂಬುದು ನಮಗೆ ಅರಿವಿಲ್ಲದಿರುವಾಗಲೂ, ಆ ವಾಕ್ಯಗಳ ನಡುವೆ ಸಂಬಂಧವಿರಬಹುದು – ಈ ಸಂಬಂಧವನ್ನು ನಾವು ಹುಡುಕಬೇಕಾಗುತ್ತದೆ.  ಬೇರೆ ಬೇರೆ ವಾಕ್ಯಸಮೂಹಗಳ ನಡುವೆ ಸಂಬಂಧಗಳಿರಬಹುದು. ಈ ವಾಕ್ಯ ಸಮೂಹಗಳು ಒಂದೇ ವಿಷಯವನ್ನು ಕುರಿತು ಇಲ್ಲದಿರಬಹುದು.  ಇಲ್ಲವೇ, ಪರಸ್ಪರ ಸಂಬಂಧವಿರುವ ವಿಷಯಗಳ ಬಗ್ಗೆ ಹೇಳಿದ ವಾಕ್ಯಸಮೂಹಗಳಲ್ಲದಿದ್ದರೂ, ಅವುಗಳ ನಡುವೆ ಸಂಬಂಧವಿರಬಹುದು.  ಈ ವಾಕ್ಯಸಮೂಹಗಳ ರಾಚನಿಕ ಸ್ವರೂಪವು ಬೇರೆ ಬೇರೆಯಾಗಿದ್ದರೂ, ಅವುಗಳ ನಡುವೆ ಸಂಬಂಧವಿರಬಹುದು.  ಈ ವಾಕ್ಯ ಸಮೂಹಗಳ ಗುರಿ ಪರಸ್ಪರ ಸಂವಾದವನ್ನು ರಚಿಸಿಕೊಳ್ಳುವ ನೆಲೆಯಲ್ಲಿ ಇಲ್ಲದಿದ್ದರೂ, ಅವುಗಳ ನಡುವೆ ಸಂಬಂಧವಿರಬಹುದು – ಈ ಸಂಬಂಧವನ್ನು ನಾವು ಹುಡುಕಬೇಕಾಗುತ್ತದೆ.   ಬೇರೆ ಬೇರೆ ಪ್ರಸ್ತಾವಗಳು ಮತ್ತು ವಾಕ್ಯಸಮೂಹಗಳು ಮತ್ತು ಭಿನ್ನ ಬಗೆಯ ಸಂಬಂಧಗಳ  (ತಾಂತ್ರಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ) ನಡುವೆ ಸಂಬಂಧಗಳಿರಬಹುದು – ಈ ಸಂಬಂಧಗಳನ್ನು ನಾವು ಹುಡುಕಬೇಕಾಗುತ್ತದೆ.  ಅರ್ಥಾನ್ವಯದ ಘಟನೆಗಳು ಸೂಚಿತವಾಗುವ ಸಂಬಂಧಗಳನ್ನು ಎಲ್ಲ ಹೊರಚಾಚುಗಳಿಂದ ಬೇರ್ಪಡಿಸಿ, ಅದನ್ನಷ್ಟೇ ಶುದ್ಧಾಂಗವಾಗಿ ನೋಡುವುದು ನಮ್ಮ ಗುರಿಯಲ್ಲ ; ಅದನ್ನೊಂದು ಮುಚ್ಚಿದ ಜಗತ್ತಾಗಿ ಮಾಡಬೇಕಾಗಿಲ್ಲ; ಅದರೊಳಗೆ ಮತ್ತು ಹೊರಗೆ ಇರುವ ಸಂಬಂಧಾಂತರಗಳ ನಡುವೆ ನಡೆಯುವ ಕೊಡುಕೊಳೆಗಳನ್ನು ಅರಿಯಲು ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಳ್ಳುವುದು ನಮ್ಮ ಗುರಿ.’’ ಐಡಿಯಾಲಜಿ ಎಂಬ ಪದವನ್ನು ಹೀಗೆ ದೂರಕೈಸೆಯುವುದು ಆತುರದ ತೀರ್ಮಾನವೆಂದು ಕೆಲವರು ಹೇಳಬಹುದು. ಐಡಿಯಾಲಜಿಗಳು ಸಾಮಾಜಿಕ ರಚನೆಯ ಹಿಂದಿರುವ ನಿಯಮಗಳನ್ನು ಬಿಂಬಿಸುತ್ತವೆ ಎಂಬ ತಿಳುವಳಿಕೆಯನ್ನು ಕೈಬಿಟ್ಟು ಅವುಗಳು ಕೇವಲ ಪ್ರತಿನಿಧಿಸುವ ವ್ಯವಸ್ಥೆಗಳೆಂದು ಭಾವಿಸಿದರೆ, ಆಗ ಐಡಿಯಾಲಜಿಗಳನ್ನು ಕೈ ಬಿಡದೆಯೂ ಇರಬಹುದು.

ಚರ್ಚೆಯ ಕೇಂದ್ರ ಯಾವುದೇ ಇರಲಿ, ಹೇಳುವ ಮಾತೆಲ್ಲ ಒಂದೇ ಆಗಿರುತ್ತದೆ. ಭಾಷೆ ಮತ್ತು ಅದರಿಂದ ಉತ್ಪನ್ನವಾಗುವ ಅರ್ಥಗಳು ವರ್ಗ, ಲಿಂಗ, ಮತ್ತಿತರ ಯಾವುದೇ ಸಾಮಾಜಿಕ ವಿಭಜನೆಯನ್ನು ಅಭಿವ್ಯಕ್ತಿಸುವುದಿಲ್ಲ. ನಾವು ಭಾಷೆಯನ್ನು ವರ್ಗ, ಇಲ್ಲವೇ ಲಿಂಗವಿಭಜನೆಯನ್ನು ಅಭಿವ್ಯಕ್ತಿಸುವ ಉಪಕರಣಗಳನ್ನಾಗಿ ನೋಡದೆ, ಅದನ್ನು ಹೆಚ್ಚು ಸೃಜನಶೀಲ ನೆಲೆಯಲ್ಲಿ ಇರಿಸಬೇಕಾದರೆ, ಐಡಿಯಾಲಜಿ ಕುರಿತು ಈಚೆಗೆ ನಡೆದಿರುವ ಚರ್ಚೆಗಳನ್ನು ನೋಡಬೇಕು. ಈ ಚರ್ಚೆಗಳು ಒಂದು ಬಗೆಯ ಸಾಮಾಜಿಕ ಆಚರಣೆಗಳು ಮತ್ತೊಂದು ಬಗೆಯ ಸಾಮಾಜಿಕ ಆಚರಣೆಯಲ್ಲಿ ತಮ್ಮದೇ ಆದ ಪಾತ್ರವನ್ನು ಹೇಗೆ ಪಡೆದುಕೊಂಡಿರುತ್ತವೆ ಎಂಬ ಬಗ್ಗೆ ಗಮನಹರಿಸುತ್ತವೆ. ಅಲ್ಲದೆ, ಸಾಮಾಜಿಕ ಆಚರಣೆಗಳ ಪರಿಣಾಮಗಳು ಒಂದರಿಂದೊಂದು ಪ್ರಭಾವಿತವಾಗುವುದನ್ನು ಗುರುತಿಸುತ್ತವೆ. ಈ ನಿಟ್ಟಿನಲ್ಲಿ ನೋಡಿದಾಗ ಭಾಷೆಗೆ ಒಂದು ಭೌತಿಕ ಅಸ್ತಿತ್ವವಿದೆ. ಸಾಮಾಜಿಕ ರಚನೆಯಲ್ಲಿ ಅದರ ಪಾತ್ರವಿದೆ. ಅದು ನಮ್ಮ ಸಾಧ್ಯತೆಗಳನ್ನು ಮತ್ತು ಮಿತಿಗಳನ್ನು ತೋರಿಸಿಕೊಡುತ್ತದೆ. ನಮ್ಮ ಕರ್ತೃಸ್ಥಾನವನ್ನು ನಿಯಂತ್ರಿಸುತ್ತದೆ. ಮಾರ್ಕ್ಸ್‌ವಾದಿ ಸ್ತ್ರೀವಾದಿಗಳು ನಡೆಸುತ್ತಿದ್ದ ಚರ್ಚೆಗಳು ಎಲ್ಲಿ ನಿಂತುಹೋಗಿದ್ದವೋ, ಅಲ್ಲಿಂದ ಮತ್ತೆ ಚರ್ಚೆಯನ್ನು ಆರಂಭಿಸಬೇಕೆಂದು ಹೇಳುತ್ತಿರುವುದು ಮಾರ್ಕ್ಸ್‌ವಾದ ಇಲ್ಲವೇ ಸಮಾಜವಾದದ ಬಗ್ಗೆ ಇರುವ ವ್ಯಾಮೋಹದಿಂದಲ್ಲ. ಹಾಗೆ ಅದಕ್ಕೆ ಕಟ್ಟು ಬೀಳಬೇಕಾಗಿಲ್ಲ. ಐಡಿಯಾಲಜಿ ಮತ್ತು ಭಾಷೆಗಳ ಸಂಬಂಧದ ಚರ್ಚೆಯು, ಸಾಮಾಜಿಕ ರಚನೆಯಲ್ಲಿ ಅವುಗಳ ಪಾತ್ರವನ್ನು ಸರಳೀಕರಿಸಿ ದುಂಡುಸುತ್ತಿ ಹೇಳುವ ವಿಧಾನವನ್ನು ನಿರಾಕರಿಸಿದ್ದರಿಂದ, ಈ ಹೊಸ ಚರ್ಚೆಯ ಮುಂದುವರಿಕೆ ಅಗತ್ಯವಾಗಿದೆ. ಸರಳಗೊಳಿಸಿದ ವಿವರಣೆಗಳು ಲೈಂಗಿಕ ಮತ್ತು ಐಡಿಯಾಲಜಿಯ ನೆಲೆಯಿಂದ, ಹಾಗೂ ಆರ್ಥಿಕ ಮತ್ತು ರಾಜಕೀಯ ನಡವಳಿಗಳಿಂದ ಹೆಂಗಸಿನ ಅಧೀನತೆಯನ್ನು ನಿರಾಕರಿಸುವ ಗುರಿಯನ್ನು ಹೊಂದಿವೆ. ಆದರೆ, ಭಾಷೆ ಮತ್ತು ಪ್ರತಿನಿಧೀಕರಣದ ಮಾದರಿಗಳಲ್ಲಿ ಹೆಂಗಸನ್ನು ಅಧೀನಗೊಳಿಸುವ ಅರ್ಥರಚನಾ ವ್ಯವಸ್ಥಗಳು ಇವೆ ಎಂದು ವಾದಿಸಲಾಗುತ್ತಿದೆ. ಇವೆಲ್ಲವನ್ನೂ ವರ್ಗ ವಿಭಜನೆಯ ಮೂಲಕ ಮಾತ್ರವೇ ವಿಶ್ಲೇಷಿಸಲು ಸಾಧ್ಯವಾಗುತ್ತಿಲ್ಲವೆಂದೂ ಹೇಳಲಾಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪ್ರತಿನಿಧೀಕರಣ ವ್ಯವಸ್ಥೆಗಳು ಮತ್ತು ಭಾಷೆ, ಹೆಂಗಸನ್ನು ಹೀನಾಯ ಮಾಡುವ ದೃಷ್ಟಿಕೋನ ಮತ್ತು ಚಟುವಟಿಕೆಗಳನ್ನು ಕಟ್ಟುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕಾದರೆ, ಭಾಷೆಯು ಈಗಾಗಲೇ ಇರುವ ಗುಂಪುಗಳ ಸ್ಥಾನಮಾನಗಳನ್ನು ಹೇಳುವ ಉಪಕರಣ ಮಾತ್ರ ಎಂಬ ನಿಲುವನ್ನು ಬಿಟ್ಟುಕೊಡಬೇಕಾಗುತ್ತದೆ.

ಅರ್ಥಾನ್ವಯದ ಬಗೆಗಳು, ಅವುಗಳ ಪರಿಣಾಮಗಳು – ಮುಂತಾದವನ್ನು ಹೆಚ್ಚು ಗಮನವಿಟ್ಟು ಪರಿಶೀಲಿಸಬೇಕು ಎಂದು ಹೇಳಿದೆವು. ಕೆಲವರು ವಿಶ್ಲೇಷಣೆಗೆ ಹೆದರಿ ಇಂಥ ನಿಲುವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ. ವಿಷಯವನ್ನು ಸಂಕೀರ್ಣ ನೆಲೆಯಲ್ಲಿ ನೋಡುವುದು ಮತ್ತು ಸರಳೀಕರಣವನ್ನು ವಿರೋಧಿಸುವುದು ಕೆಲವರಿಗೆ ಇಷ್ಟವಿಲ್ಲ. ಸುಲಭವಾದ ಪರಿಹಾರವನ್ನು ಕೈಗೆ ಬರುವಂತೆ ಪಡೆಯಲಾಗುವುದಿಲ್ಲವಲ್ಲಾ ಎಂದು ಕೊರಗುತ್ತಾರೆ. ಸುಲಭ ಉತ್ತರಗಳಿಗಾಗಿ ಹುಡುಕುವ ಬದಲು ಬೇರೆ ದಾರಿಯನ್ನು ಏಕೆ ಅನುಸರಿಸಬೇಕು ಎಂಬುದನ್ನು ಈಗಾಗಲೇ ವಿವರಿಸಿದ್ದೇವೆ. ಮಾರ್ಕ್ಸ್‌ವಾದಿ ಚರ್ಚೆಗಳು ಕಾರಣಗಳನ್ನು ಹುಡುಕುತ್ತವೆ. ಈ ಕಾರಣಗಳಿಂದಲೇ ಎಲ್ಲವನ್ನೂ ವಿವರಿಸಬಹುದೆಂದು ನಂಬುತ್ತವೆ. ಆದರೆ, ಇಂಥವು ಅಂಧಶ್ರದ್ಧೆಗಳನ್ನು ಮಾತ್ರ ಬೆಳೆಸಬಲ್ಲವು ಎಂದು ತೋರಿಸಿಕೊಟ್ಟಿದ್ದೇವೆ. ಜೊತೆಗೆ, ಸರಳೀಕೃತ ಹೇಳಿಕೆಗಳು ಭಾಷೆಯನ್ನು ಈಗಾಗಲೇ ಇರುವ ಗುಂಪುಗಳ ಅಭಿವ್ಯಕ್ತಿಗೆ ಮೀಸಲಾದ ಉಪಕರಣ ಮಾತ್ರವೆಂದು ಹೇಳುತ್ತವೆ. ನಾವು ಈ ನಿಲುವನ್ನೇ ನಿರಾಕರಿಸುತ್ತಿದ್ದೇವೆ.

ಜಂಡರ್ ರಹಿತ ಗಂಡಸು ; ಅರ್ಥಾತ್ ವಿನಾಶದೆಡೆಗೆ ಸಾಗುತ್ತಿರುವ ಜೀವಿ

ಸಾಮಾಜಿಕ ಆಚರಣೆಗಳಲ್ಲಿ ಕಾಣುವ ನಿಯಮಗಳನ್ನೇ ಸಮಾಜವೆಂದು ತಿಳಿಯುವುದು ಸರಿಯಲ್ಲ ಎಂದು ನಾವು ವಾದಿಸುತ್ತಿದ್ದೇವೆ. Man made language ಕೃತಿಯ ನೆಲೆಗಟ್ಟನ್ನು ಮತ್ತೊಮ್ಮೆ ಪರಿಶೀಲಿಸುವ ಮೂಲಕ ನಮ್ಮ ವಾದಕ್ಕೆ ಬೇಕಾದ ಬೆಂಬಲವನ್ನು ಪಡೆಯಬಹುದಾಗಿದೆ. ಈ ಕೃತಿಯಲ್ಲಿ, ‘ಗಂಡು ಅರ್ಥರಚನೆಯ ನಿಯಮಗಳು ಇವೆಯೆಂದೂ, ಅವು ಗಂಡಸೇನೇ ಮಾನವಜಾತಿಗೆ ಪ್ರಮಾಣವೆಂದೂ, ಹೆಂಗಸು ನಕಾರಾತ್ಮಕ ಮತ್ತು ಹೀನಾಯಳೆಂದೂ ತಿಳಿದಿವೆ’ ಎಂದು ಹೇಳಲಾಗಿದೆ. ಮೊದಲನೆಯದಾಗಿ, ಈ ನಿಯಮ ಹುಟ್ಟಿದ್ದು ಹೇಗೆಂಬುದೇ ಒಂದು ಸಮಸ್ಯೆ. ಅಲ್ಲದೆ, ಒಂದು ಕಡೆ ಈವರೆಗೆ ಪಿತೃಪ್ರಧಾನತೆಯೇ ಮೇಲುಗೈ ಪಡೆದಿದೆ ಎಂದು ಸೂಚಿಸಲಾಗಿದೆ. ಗಂಡಸರೇ ಯಜಮಾನರಾದ್ದರಿಂದ ಗಂಡುವ್ಯಾಖ್ಯಾನಗಳೇ ಮೇಲುಗೈ ಪಡೆದಿರುತ್ತವೆ ಎಂದೂ ಹೇಳಲಾಗಿದೆ. ಇನ್ನೊಂದೆಡೆ, ಡೇಲ್ ಸ್ಪೆಂಡರ್ ಒದಗಿಸುವ ಪದ ವ್ಯುತ್ಪತ್ತಿಯ ಬದಲಾವಣೆಯ ವಿವರಣೆಗಳು ಬೇರೆ ಏನನ್ನೋ ಹೇಳುತ್ತವೆ. ಕೆಲವು ಪದಗಳು ಸ್ತ್ರೀಲಿಂಗ ರೂಪವನ್ನು ಪಡೆದುಕೊಂಡಾಗ, ಲೈಂಗಿಕ ನೆಲೆಯ ಸೂಚ್ಯಾರ್ಥಗಳನ್ನು ಹೊಂದಿ ಅಪಮೌಲ್ಯಗೊಂಡಿವೆ ಎಂದು ಆಕೆ ಹೇಳುತ್ತಾಳೆ. ಹಾಗಾಗಿ, Mistress, hostess, dame – ಮುಂತಾದ ಪದಗಳು ತಮಗೆ ಮೊದಲು ಇದ್ದ ಸ್ಥಾನವನ್ನು ಕಳೆದುಕೊಂಡು ಈಗ ಹೀನಾರ್ಥ ಹೊಂದಿವೆ ಎಂದು ಹೇಳಿದ್ದಾಳೆ.  ಹೀಗೆ ಭಾಷಿಕ ಮಾಹಿತಿಯನ್ನು ವಿವರಿಸುವ ಬಗೆಯನ್ನೇ ನಾವು ಪ್ರಶ್ನಿಸಬೇಕಾಗಿದೆ. ಪದ ವ್ಯುತ್ಪತ್ತಿ ಮಾಹಿತಿ ಅತ್ಯಗತ್ಯ ಎಂಬುದು ನಿಜ. ಆದರೆ, ಬೇರೆ ಬದಲಾವಣೆಗಳನ್ನು ಮತ್ತು ಭಾಷೆಯ ಬಳಕೆಯನ್ನು ದೂರವಿರಿಸಿ ಅದನ್ನಷ್ಟೇ ನೋಡಿದರೆ, ತಪ್ಪಾಗುತ್ತದೆ. ಉದಾಹರಣೆಗೆ, Mistress ಎಂಬ ಪದ ನಲ್ಲೆ ಎಂಬ ಅರ್ಥದಲ್ಲಿ ಲೈಂಗಿಕ ನೆಲೆಯ ಪದವಾಗಿ ಬಹು ಹಿಂದಿನಿಂದಲೂ ಬಳಕೆಯಾಗುತ್ತಿದೆ. ಮನೆಯ ಒಡತಿ ಎನ್ನುವ ಅರ್ಥದಲ್ಲಿದ್ದ Mistress ಪದ ಆ ಸ್ಥಾನವನ್ನು ಕಳೆದುಕೊಂಡದ್ದಕ್ಕೂ, House wife ಎಂಬ ಪದ ಹೊಸದಾಗಿ ಬಳಕೆಗೆ ಬಂದದ್ದಕ್ಕೂ ಸಂಬಂಧವಿದೆ. ಈ ಹೊಸಪದವು ಮನೆಗಳ ನಿರ್ವಹಣೆಯಲ್ಲಿ ಮತ್ತು ಹೆಂಗಸು ವಹಿಸುತ್ತಿದ್ದ ಪಾತ್ರದಲ್ಲಿ ಆದ ಬದಲಾವಣೆಗಳಿಂದಾಗಿ ಬಳಕೆಗೆ ಬಂದಿದೆ. ಭಾಷೆಯು ಹಿಂದೆ ಏನಿತ್ತು, ಇಲ್ಲವೇ ಈಗ ಏನಿದೆ ಎಂದಷ್ಟನ್ನೇ ತೋರಿಸುವ ಕನ್ನಡಿಯಲ್ಲ. ಪದಗಳಿಗಿರುವ ಅರ್ಥವನ್ನು ಭಾಷೆಯ ಸಂಪೂರ್ಣ ರಚನೆಯೊಡನೆ ಅದು ಹೊಂದಿರುವ ಸಂಬಂಧದ ಚೌಕಟ್ಟಿನಲ್ಲಿ ನೋಡಬೇಕು. ಪದಗಳ ಚರಿತ್ರೆ ಮಾತ್ರವೇ ಮುಖ್ಯವಲ್ಲ. ಒಂದು ಪದ ಇನ್ನೊಂದು ಪದದೊಡನೆ ಹೊಂದಿರುವ ಸಂಬಂಧವೂ ನಮಗೆ ಮುಖ್ಯವಾಗಬೇಕು. ಅಲ್ಲದೆ, ಒಂದು ಪ್ರಸ್ತಾವದ ಘಟಕಗಳಲ್ಲಿ ಇರುವ ಸಂಬಂಧ ಮತ್ತು ಬೇರೆ ಬೇರೆ ಪ್ರಸ್ತಾವಗಳ ನಡುವಣ ಸಂಬಂಧ ಕೂಡಾ ಪರಿಗಣನೆಗೆ ತಕ್ಕುದಾಗಿದೆ. ಇಲ್ಲಿಯೇ ನಮಗೂ ಡೇಲ್ ಸ್ಪೆಂಡರ್‌ಗೂ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತವೆ. ಪಿತೃಪ್ರಧಾನತೆ, ಬಂಡವಾಳಶಾಹಿ ಮುಂತಾದ ‘ವಾಸ್ತವತೆ’ಗಳನ್ನು ಮುಂದಿಡುವ ಸಾಮಾಜಿಕ ರಚನೆಯನ್ನು ಭಾಷೆಯು ಸುಮ್ಮನೆ ಬಿಂಬಿಸುತ್ತದೆ ಎಂಬ ವಾದವೇ ನಮಗೆ ಒಪ್ಪಿಗೆಯಿಲ್ಲ. ಇದರ ಬದಲು ಗೊತ್ತಾದ ಅಸ್ತಿತ್ವವುಳ್ಳ ಅರ್ಥಾನ್ವಯ ರಚನೆಗಳು ಹೇಗೆ ಕ್ರಿಯಾಶೀಲ ವಾಗಿರುತ್ತವೆ ಎಂಬುದೇ ನಮಗೆ ಮುಖ್ಯವೆನಿಸುತ್ತದೆ. ಹೀಗೆ ತಿಳಿದಾಗ ಭಾಷಾವ್ಯಾಪಾರವನ್ನು ಕೇವಲ ಚಾರಿತ್ರಿಕ ನೆಲೆಯಲ್ಲಿ ಇಲ್ಲವೇ ಸದ್ಯದ ವಾಸ್ತವದಲ್ಲಿ ನೋಡುವ ಬಗೆಯನ್ನು ನಿರಾಕರಿಸುತ್ತೇವೆ. ಡೇಲ್ ಸ್ಪೆಂಡರ್‌ಳ ಅರ್ಥರಚನೆಯ ನಿಯಮಗಳನ್ನು ಪರಿಷ್ಕರಿಸಿದರೆ ಆಗ ನಾವು ಹೇಳುವ ಮಾತು ಇನ್ನಷ್ಟು ಸ್ಪಷ್ಟವಾಗುತ್ತದೆ. ಈ ಎರಡೂ ನಿಯಮಗಳನ್ನು ಕೆಲವೊಮ್ಮೆ ಒಂದೇ ಚೌಕಟ್ಟಿನಲ್ಲಿ ಇರಿಸಲಾಗಿದೆ. ಭಾಷೆಯು ‘ಹೆಂಗಸನ್ನು ನಕಾರಾತ್ಮಕವಾಗಿ ವ್ಯಾಖ್ಯಾನಿಸುತ್ತದೆ’ ಎಂಬುದೇ ಆ ಚೌಕಟ್ಟು. ನಕಾರಾತ್ಮಕವೆಂದರೆ, ಅರ್ಥದ ವ್ಯಾಪ್ತಿಯಿಂದ ಹೆಂಗಸನ್ನು ಹೊರಗಿಡಲಾಗಿದೆ ಮತ್ತು ಆಕೆಯನ್ನು ಕೀಳುಗೈಯಲಾಗಿದೆ ಎಂದರ್ಥ. ಹೀಗೆ ಎರಡು ನಿಯಮಗಳನ್ನು ಒಂದೇ ಚೌಕಟ್ಟಿಗೆ ತಂದಿರುವುದೇ ಸರಿಯಲ್ಲ. ಅವೆರಡೂ ಬೇರೆ ಬೇರೆ ಸಂಗತಿಗಳನ್ನೇ ಹೇಳುತ್ತಿವೆ. ಆದ್ದರಿಂದ ಅವನ್ನು ಬೇರೆ ಬೇರೆಯಾಗಿಯೇ ವಿಶ್ಲೇಷಿಸಬೇಕು. ಹೆಂಗಸನ್ನು ಇಡೀ ಮಾನವ ವರ್ಗದ ಚೌಕಟ್ಟಿನಿಂದ ಹೊರಗಿಟ್ಟಿರುವುದಕ್ಕೆ ಅರ್ಥರಚನೆಯ ನಿಯಮಗಳು ಕಾರಣವಲ್ಲ ಎಂದು ಈಗಾಗಲೇ ಹೇಳಿದ್ದೇವೆ. She was so wretched she looked hardly human ಎಂಬ ವಾಕ್ಯದಲ್ಲಿ ಅಸಂಭಾವ್ಯವಾದದ್ದು ಏನೂ ಇಲ್ಲ. ಅಂದರೆ, ಹೆಂಗಸೂ ಕೂಡಾ ಮಾನವವರ್ಗದ ಪ್ರತಿನಿಧೀಕರಣ ಮಾಡಬಲ್ಲಳು. ಪ್ರಾಣಿಗಳಿಂದ ಬೇರೆಯಾಗಿ ಮನುಷ್ಯರು ಹೊಂದಿರುವ ಸಾಮಾನ್ಯ ಲಕ್ಷಣಗಳು ಆಕೆಯಲ್ಲೂ ಇದ್ದೇ ಇರುತ್ತವೆ. ಕೆಲವೊಮ್ಮೆ, ಮಾನವಜೀವಿಗಳನ್ನು ಸೂಚಿಸುವ Mankind ಮಾದರಿಯ ಪದಗಳು ಹೆಂಗಸನ್ನು ಒಳಗೊಂಡಂತೆ ತೋರುವುದಿಲ್ಲ. ಹೀಗೆ, ಆಕೆಯನ್ನು ಹೊರಗಿಟ್ಟಿರುವುದಕ್ಕೂ, ಆ ಪದದಲ್ಲಿರುವ Man ಗೂ ಸಂಬಂಧವಿಲ್ಲ. ಇದೇ ಮಾತನ್ನು ನಾವು People, Americans- ಮುಂತಾದ ಪದಗಳ ಸಂದರ್ಭದಲ್ಲೂ ಹೇಳಿದ್ದೇವೆ. ಇಂಥ ಪದಗಳಲ್ಲಿ ಪುಲ್ಲಿಂಗವು ‘ಗುಟ್ಟಾಗಿ ಅಡಗಿದೆ’ ಎಂದು ಹೇಳುವುದರಿಂದ ಪ್ರಯೋಜನವಿಲ್ಲ. ಅದರ ಬದಲು ಕೆಲವು ರಚನೆಗಳಲ್ಲಿ Man ಪದಕ್ಕೆ ಇರುವ ಪುಲ್ಲಿಂಗ ಲಕ್ಷಣವೇ ಕಳೆದುಹೋಗಿ ಅದೊಂದು ಜಂಡರ್ ರಹಿತ ಪದವಾಗುತ್ತದೆಂದು ಹೇಳಬಹುದು. ಆದರೆ, ಹೆಂಗಸು ಎಂದೂ ತನ್ನ ಸ್ತ್ರೀಲಿಂಗ ಚಹರೆಯನ್ನು ಕಳೆದುಕೊಂಡು ಜಂಡರ್ ರಹಿತ ಪದವಾಗುವುದಿಲ್ಲ. ಅಂದರೆ, ಹೆಂಗಸನ್ನು ಖಚಿತವಾಗಿ ವಿವರಿಸಬಹುದು. ಆಕೆಯನ್ನು ಎಲ್ಲರ, ಇಡೀ ಮಾನವರ ಪ್ರತಿನಿಧಿ ಎಂಬ ಸಾಮಾನ್ಯ ನೆಲೆಗೆ ತಳ್ಳಲಾಗುವುದಿಲ್ಲ. ಆಕೆ ಎಂದೆಂದೂ ಹೆಣ್ಣು; ತನ್ನ ಲೈಂಗಿಕ ಚಹರೆಗಳಾದ ಸೂಳೆ, ಮೋಜುಗಾರ್ತಿ, ತಾಯಿ, ಕನ್ಯೆ, ಮನೆಯೊಡತಿ – ಹೀಗೆ ಏನಾಗಿದ್ದರೂ ಹೆಂಗಸೇ ಆಗಿರುತ್ತಾಳೆ. ನಕಾರಾತ್ಮಕ ಎಂಬುದು ಹೀನಾರ್ಥಕ ಎಂಬುದಕ್ಕೆ ಸಂವಾದಿ ಪದವಲ್ಲ. ಹೆಂಗಸರು ಪ್ರಮಾಣಗಳಲ್ಲ; ಹಾಗೆಂದ ಮಾತ್ರಕ್ಕೆ ಅವರನ್ನು ವ್ಯಾಖ್ಯಾನಿಸಲಾಗಿಲ್ಲ ಎಂದಲ್ಲ. ಅದಕ್ಕಾಗಿಯೇ ಆಕೆಯನ್ನು ವ್ಯಾಖ್ಯಾನಿಸಲು ಹೆಚ್ಚಿನ ಲಕ್ಷಣಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಹೆಂಗಸರ ಬಗೆಗಳೆಲ್ಲವೂ ಅದರಲ್ಲಿ ಸೇರುತ್ತವೆ. ಆದರೆ, ಗಂಡಸರನ್ನು ಕುರಿತ ವ್ಯಾಖ್ಯೆಯಲ್ಲಿ ಇಂಥ ವಿಪುಲತೆ ಇಲ್ಲ. ಅವರೆಲ್ಲರಿಗೂ ಒಂದೇ ಮಂತ್ರ ಸಾಕು. ಹೆಚ್ಚೆಂದರೆ, ಅವರ ವೃತ್ತಿಗಳು ಮತ್ತುಸಾಮಾನ್ಯ ಮನುಷ್ಯಜೀವಿಗಳ ಲಕ್ಷಣಗಳನ್ನು ಸೇರಿಸಿಕೊಂಡರೆ ಸಾಕು. ಉದಾಹರಣೆಗೆ, ಸಭ್ಯ, ದಯಾಪರ, ಪ್ರಾಮಾಣಿಕ, ಬಲಶಾಲಿ – ಮುಂತಾದ ವಿಶೇಷಣಗಳು ಬೇಕಾಗಬಹುದು. ಗಂಡಸರು ಯಾವಾಗಲೂ ಗಂಡಸರೇ; ಹೆಂಗಸರು ಮಾತ್ರ ಗಂಡಸರು ಮತ್ತು ಇತರ ನೆಲೆಗಳೊಡನೆ ಅವರು ಹೊಂದಿರುವ ಸಂಬಂಧಾನುಸಾರ ಬೇರೆ ಬೇರೆಯಾಗುತ್ತಾರೆ. ನಿರ್ದಿಷ್ಟಗೊಳ್ಳುತ್ತಾರೆ. ‘ಪ್ರಿನ್ಸ್‌ಚಾರ್ಲ್ಸ್ ಮತ್ತು ಲೇಡಿ ಡಯಾನಾ ಸ್ಪೆನ್ಸರ್ ಚರ್ಚಿನೊಳಗೆ ಹೋಗಿ ಮಾಯವಾಗಿ ಗಂಡ ಹೆಂಡತಿಯರಾಗಿ ಹೊರಬಂದರು’, ಗಂಡಸು ಎಂದು ಹೇಳುವುದರಿಂದ ಗಂಡುತನದ ಲಕ್ಷಣಗಳನ್ನು ಹೇಳಿದಂತಾಗಲಿಲ್ಲ. ಬದಲಿಗೆ, ಅದರಿಂದ ಜಂಡರ್‌ರಹಿತ ನೆಲೆಯನ್ನು ನೀಡಿದಂತಾಗುತ್ತದೆ. ಭಾಷೆಯಲ್ಲಿ ಜಂಡರ್ ಹೇಗೆ ಮೈದಳೆಯುತ್ತದೆ ಎಂಬುದನ್ನು ಅರಿಯಲು ಈ ಮೂಲಕ ನಮಗೆ ಕೆಲವು ಅರ್ಥಾನ್ವಯದ ನೆಲೆಗಳು ದೊರಕುತ್ತವೆ. ಪೌರತ್ವ, ಕಾನೂನು, ಲೈಂಗಿಕತೆ, ಮಾನವಶಾಸ್ತ್ರ – ಮುಂತಾದ ಸಂಕಥನಗಳ ಬೆಳವಣಿಗೆಯಲ್ಲಿ ಈ ಅರ್ಥಾನ್ವಯದ ನೆಲೆಗಳು ನಿರ್ಧಿಷ್ಟ ರೂಪದಲ್ಲಿ ಬೇರು ಬಿಟ್ಟಿರುವುದನ್ನು ನೋಡುತ್ತೇವೆ.

ಪಾಶ್ಚಾತ್ಯ ಬಂಡವಾಳಶಾಹಿಯಲ್ಲಿ ರಾಜ್ಯಶಕ್ತಿಯು ಒಂದು ರಾಜಕೀಯ ಅರ್ಥ ಪರಂಪರೆಯನ್ನು ಬೆಳೆಸಿದೆ. ಇದು ಬೇರೆ ಬೇರೆ ಗುಂಪುಗಳ ಮತ್ತು ಹಿತಾಸಕ್ತಿಗಳ ಉಲ್ಲೇಖವನ್ನು ಹತ್ತಿಕ್ಕುತ್ತದೆ. ಸಾಂಪ್ರದಾಯಿಕ ಮಾರ್ಕ್ಸ್‌ವಾದವು ರಾಜ್ಯಶಕ್ತಿಯನ್ನು ವಿವರಿಸಿದ ಬಗೆಯನ್ನು ಇಲ್ಲಿ ನೆನೆಯುವುದು ಸೂಕ್ತ. ರಾಜ್ಯಶಕ್ತಿಯು ವ್ಯಕ್ತಿಯನ್ನು ಮೀರಿದ ನೆಲೆಯಲ್ಲಿ ವರ್ಗಹಿತಾಸಕ್ತಿಗಳನ್ನು ನಿಯಂತ್ರಿಸಲೆಂದೇ ಬೆಳೆದಿದೆ. ಹಾಗಾಗಿ, ವ್ಯಕ್ತಿಗಳ ವಿಶಿಷ್ಟ ಹಿತಾಸಕ್ತಿಗಳು (ಮಾರ್ಕ್ಸ್/ಏಂಗೆಲ್ಸ್ ಹೇಳುವಂತೆ ವ್ಯಕ್ತಿಗಳು ಮತ್ತು ಅವರ ಕುಟುಂಬಗಳ ಹಿತಾಸಕ್ತಿ.) ಸಾಮಾನ್ಯ ನೆಲೆಯ ಹಿತಾಸಕ್ತಿಗಳಿಂದ ರಕ್ಷಿತವಾಗುತ್ತದೆ. ಈ ಸಾಮಾನ್ಯ ನೆಲೆಯ ಹಿತಾಸಕ್ತಿಗಳನ್ನು ರಾಜಕೀಯ ಹಂತದಲ್ಲಿ ನಿರ್ಧರಿಸಲಾಗುತ್ತದೆ. ಮಾರ್ಕ್ಸ್‌ವಾದವನ್ನು ಟೀಕಿಸುವವರು ಈ ರಾಜಕೀಯ ಹಂತವು ಯಾವುದೋ ಒಂದು ಗುಂಪಿನ ಪರವಾಗಿ ಕೆಲಸ ಮಾಡುತ್ತದೆಂದು ವಾದಿಸುತ್ತಾರೆ. ಸದ್ಯ ಅವರ ಟೀಕೆಯನ್ನು ಬದಿಗಿಟ್ಟರೂ, ರಾಜ್ಯಶಕ್ತಿ ಕುರಿತ ನಮ್ಮ ಚರ್ಚೆಗೆ ಇದು ಸೂಕ್ತ ಚೌಕಟ್ಟನ್ನು ಒದಗಿಸಿದೆ. ಅಂದರೆ, ಇಂಥ ವ್ಯವಸ್ಥೆಯಲ್ಲಿ ಎಲ್ಲ ಜನರನ್ನೂ ಪ್ರತಿನಿಧಿಸುವ ಒಂದು ಸಾಮಾನ್ಯೀಕೃತ ರಾಜಕೀಯ ಕರ್ತೃ ನಿರ್ಮಾಣಗೊಳ್ಳುತ್ತದೆ. ಈ ಕರ್ತೃ ಉಳಿದೆಲ್ಲ ಹಿತಾಸಕ್ತಿಗಳ ನಡುವಣ ಸಂಘರ್ಷವನ್ನೂ ಹತ್ತಿಕ್ಕುತ್ತದೆ. ಆಧುನಿಕ ರಾಜ್ಯಶಕ್ತಿಯು ಊಳಿಗಮಾನ್ಯ ಪದ್ಧತಿಯಲ್ಲಿದ್ದ ಸಡಿಲವಾದ ಶ್ರೇಣೀಕರಣವು ವಿಘಟಿಕವಾದಾಗ ತಲೆ ಎತ್ತಿದೆ. ಇದಕ್ಕೂ ಮೊದಲು ನಿರ್ಧಿಷ್ಟ ಶ್ರೇಣೀಕರಣದಲ್ಲಿ ದೊರೆತ ಅಂತಸ್ತಿಗೆ ಅನುಗುಣವಾಗಿ ರಾಜಕೀಯ ಹಕ್ಕು ಮತ್ತು ಕರ್ತವ್ಯಗಳು ಲಭಿಸುತ್ತಿದ್ದವು. ಬಂಡವಾಳ ವ್ಯವಸ್ಥೆಯು ತೀರಾ ಸಾಮಾನ್ಯೀಕೃತ ರಾಜಕೀಯ ಪ್ರತಿನಿಧಿ ಎನ್ನಬಹುದಾದ ‘ಪೌರ’ನನ್ನು ಹುಟ್ಟು ಹಾಕಿತು. ಈ ಪೌರನಿಗೆ ಲಿಂಗವಿಲ್ಲ, ವರ್ಗವಿಲ್ಲ, ಹಾಗೆ ನೋಡಿದರೆ, ದೇಶವೂ ಇಲ್ಲ. ಈ ಬಗೆಯ ರಾಜಕೀಯ ಪ್ರತಿನಿಧೀಕರಣಗಳ ಜೊತೆಗೆ ಹೊಸ ಬಗೆಯ ಕಾನೂನು ವ್ಯವಸ್ಥೆಗಳೂ ಹುಟ್ಟಿಕೊಂಡವು. ಊಳಿಗಮಾನ್ಯ ಪದ್ಧತಿಗಳ ಬಗೆ ಹೋಗಿ ಮುಕ್ತವ್ಯಕ್ತಿಯ ಹಕ್ಕುಗಳನ್ನು ಎತ್ತಿ ಹಿಡಿಯುವ ಕಾನೂನುಗಳು ಜಾರಿಗೆ ಬಂದವು. ಆಧುನಿಕ ರಾಜ್ಯಶಕ್ತಿ, ಮತ್ತದರ ರಾಜಕೀಯ ಪ್ರತಿನಿಧೀಕರಣಗಳು ಕಟ್ಟುನಿಟ್ಟಾದ ವರ್ಗಸಮಾಜವನ್ನು ಬಿಟ್ಟುಕೊಟ್ಟು ವಾಸ್ತವದಲ್ಲಿ ಒಂದು ಪಿತೃಪ್ರಧಾನ ಸಮಾಜವನ್ನು ಒಪ್ಪಿಕೊಂಡಿತು. ಪೌರ ಮತ್ತು ಮುಕ್ತವ್ಯಕ್ತಿಯಾಗಿ ಅವನ ಹಕ್ಕುಗಳು ವರ್ಗವಿಭಜನೆಯನ್ನು ಮೀರಿ ನಿಲ್ಲಲಿಲ್ಲ. ಆದರೆ, ಕೆಲವು ಆಸ್ತಿವಂತ ಗುಂಪುಗಳಿಗೆ ಸೇರಿದ ಜನರು ತಮ್ಮ ಕುಟುಂಬಗಳನ್ನು ಪ್ರತಿನಿಧಿಸುವ ಹಕ್ಕನ್ನು ಪಡೆದಿರುತ್ತಾರೆ ಎನ್ನುವ ಅಂಶವನ್ನು ಮರೆಮಾಚಿತು.

೧೯ನೇ ಶತಮಾನದಲ್ಲಿ ಸ್ತ್ರೀವಾದಿಗಳು ರಾಜಕಾರಣದಿಂದ ಹೆಂಗಸರನ್ನು ಹೊರಗಿಟ್ಟಿರುವ ಬಗ್ಗೆ ಪ್ರಶ್ನಿಸಿದರು. ಜೊತೆಗೆ ರಾಜ್ಯಶಕ್ತಿಯ ವ್ಯಾಪ್ತಿಗೆ ಬರುತ್ತಿದ್ದ ಕೆಲವು ವೃತ್ತಿಗಳಲ್ಲಿ ಹೆಂಗಸರಿಗೆ ಪ್ರವೇಶ ದೊರೆಯಬೇಕೆಂದರು. ಉದಾಹರಣೆಗೆ, ವೈದ್ಯಕೀಯ, ಶೈಕ್ಷಣಿಕ, ಕಾನೂನು – ಮುಂತಾದ ವಲಯಗಳು. ಸ್ತ್ರೀವಾದಿಗಳ ಈ ಸವಾಲಿನಿಂದ ಪೌರತ್ವ ಕುರಿತ ಐಡಿಯಾಲಜಿಯ ಬಣ್ಣ ಬಯಲಾಯಿತು. ಏಕೆಂದರೆ, ಅದರ ವ್ಯಾಪ್ತಿಯಲ್ಲಿ ಹೆಂಗಸರು ಸೇರಿರಲೇ ಇಲ್ಲ. ರಾಜಕೀಯ ಮತ್ತು ಕಾನೂನಿನ ಸಂಸ್ಥೆಗಳಲ್ಲಿ ಮತ್ತು ಕೆಲವು ವೃತ್ತಿಗಳಲ್ಲಿ, ಹೆಂಗಸರಿಗೆ ಪ್ರವೇಶವನ್ನು  ನಿಷೇಧಿಸುವ ಎಷ್ಟೋ ನ್ಯಾಯಾಲಯ ತೀರ್ಮಾನಗಳು ೧೯ನೇ ಶತಮಾನದ ಉತ್ತರಾರ್ಧದಲ್ಲಿ ಹೊರಬಿದ್ದವು. ವ್ಯಕ್ತಿಯ ಹಕ್ಕುಗಳನ್ನು ಆಧರಿಸಿದ ಪೌರತ್ವದ ಚೌಕಟ್ಟಿನಲ್ಲಿ ಹೆಂಗಸರಿಗೆ ಜಾಗವಿರಲಿಲ್ಲ. ಇದೇ ಅವಧಿಯಲ್ಲಿ ಹೆಂಗಸರನ್ನು ಅವರ ಲೈಂಗಿಕ ನೆಲೆಯಿಂದ ವ್ಯಾಖ್ಯಾನಿಸುವ ಪ್ರಯತ್ನಗಳು ಮುಂಚೂಣಿಗೆ ಬಂದದ್ದು ಕೇವಲ ಆಕಸ್ಮಿಕವಲ್ಲ. ಹೆಂಗಸರ ಸ್ಥಾನನಿರ್ದೇಶನವನ್ನು ಮಾಡುವ ಗುರಿ ಈ ನ್ಯಾಯಾಲಯ ತೀರ್ಮಾನಗಳಿಗೆ ಇದೆ. ಗಂಡಸರಿಗೆ ಸಾರ್ವಜನಿಕ ಜವಾಬ್ದಾರಿಗಳಿದ್ದರೆ, ಹೆಂಗಸರಿಗೆ ಖಾಸಗಿ ಕರ್ತವ್ಯಗಳಿರುತ್ತವೆ. ಗಂಡಸರು ರಾಜ್ಯಶಕ್ತಿಯ ಉನ್ನತಾಧಿಕಾರಿಗಳು. ಹೆಂಗಸರು ಮನೆಯಲ್ಲಿ ಪರಮಾಧಿಕಾರವುಳ್ಳವರು. ಫೂಕೋ ಹೇಳುವಂತೆ (೧೯೭೮) ಈ ಅವಧಿಯಲ್ಲಿ ರಾಜ್ಯಶಕ್ತಿಯ ಚಟುವಟಿಕೆಗಳು ತೀವ್ರಗೊಂಡವು. ೧೮೮೦-೧೯೦೦ ಅವಧಿಯ ಇಂಗ್ಲೆಂಡ್‌ನಲ್ಲಿ ಗೃಹ ನಿರ್ಮಾಣ, ಆರೋಗ್ಯ, ಶಿಕ್ಷಣ – ಮುಂತಾದ ವಲಯಗಳಲ್ಲಿ ರಾಜ್ಯಶಕ್ತಿ ಪ್ರವೇಶಿಸಿ ಕ್ರಿಯಾಶೀಲವಾಗಿತ್ತು.  ಇದೇ ಅವಧಿಯಲ್ಲಿ ಕುಟುಂಬದ ಹೊಸ ವ್ಯಾಖ್ಯಾನ ಮೂಡತೊಡಗಿತೆಂದು ಹೇಳಲಾಗಿದೆ. ಈ ಹೊಸ ವ್ಯಾಖ್ಯಾನವು ಲೈಂಗಿಕ ನೆಲೆಯನ್ನು ಮುಖ್ಯವಾಗಿಸಿತ್ತು. ಈ ವ್ಯಾಖ್ಯಾನವನ್ನು ರಾಜ್ಯಶಕ್ತಿಯು ಸಮರ್ಥಿಸುವಂತೆ ವರ್ತಿಸಿತು. ಆ ಮೂಲಕ ತಾನು ಸಾಮಾಜಿಕ ಬಿಕ್ಕಟ್ಟುಗಳು ಉಂಟಾಗದಂತೆ ನೋಡಿಕೊಳ್ಳುತ್ತಿರುವುದಾಗಿ ವಿವರಿಸಿತು. ಇದೇ ಅವಧಿಯಲ್ಲಿ ಲೈಂಗಿಕತೆಯನ್ನು ಕುರಿತಂತೆ ‘ವೈಜ್ಞಾನಿಕ’ ಶೋಧಗಳು ಹೆಚ್ಚಿದ್ದನ್ನು ನೋಡುತ್ತೇವೆ. ಆಗಲೇ ಸಲಿಂಗಕಾಮಿ ಎಂಬ ವರ್ಗವನ್ನು ವ್ಯಾಖ್ಯಾನಿಸಲಾಯಿತು. ಕೊನೆಗೆ, ಈ ಸಂದರ್ಭದಲ್ಲೇ ಮನುಷ್ಯವರ್ಗವನ್ನು ಇತರ ಪ್ರಾಣಿಗಳೊಡನೆ ಇರಿಸಿ ನೋಡುವ ಜನಪ್ರಿಯ ಚಿಂತನೆಗಳು ತಲೆಎತ್ತಿದವು. ಗಂಡಸು ತನ್ನ ಮನೆಯೊಳಗೆ ಸಾರ್ವಭೌಮ ಎಂಬ ಚಿಂತನೆಯನ್ನು ಆಧರಿಸಿದ ರಾಜಕೀಯ ಸಿದ್ಧಾಂತಗಳು ವಿಘಟಿತಗೊಂಡು ‘ಮಾನವತೆ’ ಎಂಬ ಪರಿಕಲ್ಪನೆಯ ವ್ಯಾಖ್ಯಾನಗಳು ನಡೆಯತೊಡಗಿದವು. ೧೯ ನೆಯ ಶತಮಾನದಲ್ಲಿ ಇಷ್ಟೆಲ್ಲ ಸಂಭವಿಸಿದರೂ ಸಮಾಜದ ಸ್ವರೂಪವನ್ನು ಕುರಿತ ಸಿದ್ಧಾಂತಗಳಲ್ಲಿ ಅದರ ಪಳೆಯುಳಿಕೆಗಳು ಉಳಿದುಕೊಂಡಿವೆ. ಆ ಅವಧಿಯಲ್ಲಿ ನಡೆದ ಎಲ್ಲ ಚಿಂತನೆಗಳೂ ‘ಪುರುಷ ಕೇಂದ್ರಿತ’ವಾಗಿದ್ದವು. ಅಂದರೆ, ಯಾವುದೇ ಸಮಾಜದ ರಾಜಕೀಯ ಕರ್ತೃಸ್ಥಾನ ಗಂಡಸಿಗೇ ಮೀಸಲೆಂದು ನಂಬಲಾಗಿತ್ತು. ಈ ಎಲ್ಲ ವಿವರಣೆಗಳ ಉದ್ದೇಶವಿಷ್ಟೇ. ಗಂಡಸು ಜಂಡರ್‌ರಹಿತ ನೆಲೆಗೆ ಹೋಗುತ್ತಿರುವುದಕ್ಕೂ, ಹೆಂಗಸರು ನಿರ್ಧಿಷ್ಟ ನೆಲೆಯಲ್ಲಿ ಚಹರೆಗಳನ್ನು ಪಡೆಯುತ್ತಿರುವುದಕ್ಕೂ ಮೇಲೆ ಹೇಳಿದ ಎಲ್ಲವೂ ಕಾರಣವಾಗಿರಬಹುದು. ನಿಜ.  ಹೀಗೆ ಹೇಳಿದ ಮಾತ್ರಕ್ಕೆ ಡೇಲ್ ಸ್ಪೆಂಡರ್ ತಲುಪಿದ ತೀರ್ಮಾನಗಳೇನೂ ಬದಲಾಗಿ ಬಿಡುವುದಿಲ್ಲ. ಆದರೆ, ನಮ್ಮ ಈ ಭಿನ್ನ ವ್ಯಾಖ್ಯಾನ ಮತ್ತು ವಿಧಾನ ಬೇರೆಯದೇ ಆದ ರಾಜಕೀಯ ಪರಿಣಾಮಗಳನ್ನು ಪಡೆದಿವೆ.

ಡೇಲ್ ಸ್ಪೆಂಡರ್ ಸ್ತ್ರೀವಾದವು ‘ಹೊಸ ಅರ್ಥವನ್ನು ಕಟ್ಟುವ’ ರಾಜಕಾರಣವೆಂದು ಹೇಳುತ್ತಾಳೆ. – ‘‘ತಾಯ್ತನಕ್ಕೆ ವ್ಯಕ್ತಿಗತ ನೆಲೆಯ ಪರ್ಯಾಯ ಅರ್ಥವನ್ನು ನೀಡುವುದರಿಂದ ಹಿಡಿದು, ಮನೆಗೆಲಸ ಕುರಿತ ಚರ್ಚೆಯನ್ನು ಭಿನ್ನರೀತಿಯಲ್ಲಿ ಅರ್ಥಮಾಡಿಕೊಳ್ಳುವುದರವರೆಗೆ ಹೆಂಗಸರು ತಮ್ಮದೇ ಅರ್ಥಗಳನ್ನು ಮುಂದಿಡುವ ಮತ್ತು ಇತರ ಹೆಂಗಸರ ಅರ್ಥಗಳಿಗೆ ಮಾನ್ಯತೆ ಒದಗಿಸುವ ಯಾವ ಅವಕಾಶವನ್ನೂ ಕಳೆದುಕೊಳ್ಳಬಾರದು.’’

ನಾವು ಸಮಸ್ಯೆ ಇರುವುದು ಹೆಣ್ಣಿನ ಅರ್ಥಗಳನ್ನು ಹತ್ತಿಕ್ಕುವುದರಲ್ಲಿ ಎಂದು ತಿಳಿದಿಲ್ಲ. ಹಾಗೆಯೇ ಹೆಂಗಸು ಈಗಾಗಲೇ  ಇರುವ ಹೆಣ್ಣುಮೌಲ್ಯಗಳನ್ನು ತನ್ನ ಪ್ರತಿಯೊಂದು ಕ್ರಿಯೆಯಲ್ಲೂ ಅಭಿವ್ಯಕ್ತಿಸುತ್ತಿದ್ದಾಳೆ ಎಂದು ತಿಳಿದು, ಅದಕ್ಕೆ ಮನ್ನಣೆ ನೀಡಿದರೆ ಪರಿಹಾರ ದೊರೆತಂತೆ ಎಂದು ಕೂಡ ತಿಳಿದಿಲ್ಲ. ಈಗಿರುವ ಪ್ರಮುಖ ರಾಜಕೀಯ ಸಮಸ್ಯೆಯೆಂದರೆ, ಗಂಡಸರು ತಮ್ಮನ್ನು ತಾವು ಗಂಡಸರು ಎಂದು ಗುರುತಿಸಿಕೊಳ್ಳುವಂತೆ ಒತ್ತಾಯಿಸುವುದೇ ಆಗಿದೆ. ಗಂಡಸರು ತಾವು ಜಂಡರ್‌ರಹಿತರೆಂದೂ, ಮತ್ತು ಹೆಂಗಸರು ಅವರ ಲೈಂಗಿಕ ನೆಲೆಯಲ್ಲಿ ಗುರುತುಗಳನ್ನು ಪಡೆಯುತ್ತಾರೆಂದೂ ಹೇಳುವ ಅರ್ಥಾನ್ವಯ ಪರಂಪರೆಗೆ ನಿರ್ಧಿಷ್ಟ ಪರಿಣಾಮಗಳಿವೆ. ಹೀಗೆ ಮಾಡಿದಾಗ, ಗಂಡಸರು ಜಂಡರ್ ನೆಲೆಯ ಕರ್ತೃಗಳಾಗಿ ಹೆಂಗಸರನ್ನು ಅಧೀನಗೊಳಿಸುವುದು ಸಾಧ್ಯವಾಗುವುದಿಲ್ಲ. ಅಲ್ಲದೆ, ಗಂಡುತನವೇ ಪ್ರಮಾಣವೆಂದು ಗಂಡಸರೆಲ್ಲ ಗುಟ್ಟಾಗಿ ನಂಬಿದ್ದಾರೆಂದಲ್ಲ. ಈಗಿರುವ ಸಂಕಥನಗಳಲ್ಲಿ ಜಂಡರ್ ಮತ್ತು ಲೈಂಗಿಕ ಚಹರೆಗಳು ಗೈರುಹಾಜರಾಗಿವೆ. ಇದರಿಂದಾಗಿಯೇ ಪಾಲ್ ಹರ್ಸ್ಟ್ ಮುಂದೆ ಹೇಳಿದ ಮಾತನ್ನು ಮಂಡಿಸುವುದು ಸಾಧ್ಯವಾಗುತ್ತದೆ. -‘ಗಂಡಸು ಎಂಬ ಗೊತ್ತಾದ ಚಹರೆಯುಳ್ಳ ವರ್ಗವೊಂದಿದೆ ಎಂದು ಹೇಳುವ ಬಗ್ಗೆ ನನ್ನ ತರಕಾರಿದೆ. ನಾನು ನನ್ನನ್ನು ಗಂಡಸು ಎಂದು ಗುರುತಿಸಿಕೊಳ್ಳುವುದಿಲ್ಲ’. (೧೯೮೧) ಗಂಡಸರು ಹೀಗೆ ಗಂಡುತನದ ಪರಿಣಾಮಗಳನ್ನು ಗುರುತಿಸಲು ನಿರಾಕರಿಸುತ್ತಿರುವುದೇ ಹೆಂಗಸರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಸ್ತ್ರೀ ಪರ ಚಳುವಳಿಗಳೆಲ್ಲ ಹೇಳುತ್ತಿರುವುದೇನು? ನಾವು ಎಷ್ಟೇ ಭಿನ್ನರಾಗಿರಲಿ ನಮ್ಮ ಆಚರಣೆಗಳು, ಸಂಕಥನಗಳು ಎಷ್ಟೇ ಬೇರೆ ಬೇರೆಯಾಗಿರಲಿ, ನಮ್ಮೆಲ್ಲರನ್ನೂ – ಹೆಂಗಸರನ್ನು – ಯಾವಾಗಲೂ ‘ಹೆಂಗಸು’ ಎಂದೇ ಗುರುತಿಸಲಾಗುತ್ತಿದೆ. ಹೀಗಲ್ಲದೆ, ಬೇರೆ ದಾರಿ ಇಲ್ಲವೆಂದು ನಂಬಿಸಲಾಗುತ್ತಿದೆ. ಇದು ಇಂಥ ಚಳುವಳಿಗಳ ಹಿಂದಿರುವ ಗ್ರಹಿಕೆ. ಆದರೆ, ಗಂಡಸರಿಗಾದರೋ ತಮ್ಮನ್ನು ತಾವು ಜನರೆಂದೂ, ಮಾನವರೆಂದೂ, ಮನುಷ್ಯವರ್ಗದ ಪ್ರತಿನಿಧಿಗಳೆಂದೂ ಹೇಳಿಕೊಳ್ಳಲು ನೆರವಾಗುವ ಅನೇಕ ಸಂಕಥನಗಳಿವೆ. ಇವೆಲ್ಲವೂ ಹೆಂಗಸನ್ನು ಕೇವಲ ಒಂದು ಲೈಂಗಿಕವರ್ಗವೆಂದು ಪರಿಗಣಿಸಿ ಆಕೆಯನ್ನು ಅಂಚಿಗೆ ತಳ್ಳಿ ಹೊರದೂಡುತ್ತವೆ. ಹೆಂಗಸರ ಹೊಸ ಅರ್ಥಗಳಿಗೆ ಮಾನ್ಯತೆ ದೊರಕಿಸುವುದಷ್ಟೇ ನಮ್ಮ ಗುರಿಯಾಗಬಾರದು. ಗಂಡಸರನ್ನು ಅವರ ಗಂಡುತನದ ನೆಲೆಯಲ್ಲಿಯೇ ಎದುರಿಸಬೇಕಾಗಿದೆ. ಅಂದರೆ, ಗಂಡಸಿನಂತೆ ವರ್ತಿಸುವುದಲ್ಲ. ತಕ್ಕ ಅರ್ಥಾನ್ವಯ ನಡಾವಳಿಗಳನ್ನು ರೂಪಿಸುವುದು. ಗಂಡಸರು ತಾವು ಗಂಡಸರಾಗಿರುವುದರಿಂದ ದೊರೆಯುವ ಹಕ್ಕುಗಳಿಗಷ್ಟೇ ಹೊಣೆಗಾರರು. ಗಂಡಸರು ‘ಜನ’ರನ್ನು ಪ್ರತಿನಿಧಿಸುತ್ತಾರೆಂದು ಭಾವಿಸುವುದರಿಂದ ದೊರೆಯುವ ಸ್ಥಾನಮಾನಗಳಿಂದಾಗಿ ಅವರು ತಮ್ಮ ಗಂಡುತನವನ್ನು ಪ್ರತಿನಿಧಿಸುವ ಕರ್ತವ್ಯವನ್ನು ಮರೆತು ಬಿಟ್ಟಿದ್ದಾರೆ. ಅವರು ತಮ್ಮ ಗಂಡುತನವು ಒಂದು ಸಮಸ್ಯೆ ಎಂದು ತಿಳಿಯಬೇಕಾಗಿಲ್ಲ. ಎಲ್ಲಿಯವರೆಗೆ ಗಂಡಸರು ತಮ್ಮನ್ನು ತಾವು ಕೇವಲ ಗಂಡಸರು ಎಂದು ಪರಿಗಣಿಸುವುದಿಲ್ಲವೋ, ಮತ್ತು ಹಾಗಿರುವುದರಿಂದ ಒದಗುವ ಜವಾಬ್ದಾರಿಗಳನ್ನು ನಿರ್ವಹಿಸುವುದಿಲ್ಲವೋ, ಅಲ್ಲಿಯವರೆಗೆ ಅವರು ರಂಗಮಂಚದಲ್ಲಿ ಕೇಂದ್ರಪಾತ್ರವಾಗಿ ಮಿಂಚುವುದನ್ನು ತಡೆಯುವುದು ಸಾಧ್ಯವೇ ಇಲ್ಲ.

—-
ಆಕರ : Screen Education – ೩೯(೧೯೮೧. Maria Black and Rolalind Coward