ವಿಧಿವಾz

ಸಪೀರ್-ವೂರ್ಫ್ ಪ್ರಮೇಯವನ್ನು ಪೂರ್ಣವಾಗಿ ಸರಿ ಎಂದು ಡೇಲ್ ಸ್ಪೆಂಡರ್  ಒಪ್ಪಿಕೊಳ್ಳುತ್ತಾಳೆ. ‘ಲೋಕವನ್ನು ವರ್ಗೀಕರಿಸಿ ವ್ಯವಸ್ಥಿತಗೊಳಿಸಲು ನಮಗಿರುವ ಉಪಕರಣಭಾಷೆ.’ ‘ಇದು ವಾಸ್ತವವನ್ನು ಹಿಡಿತಕ್ಕೆ ಪಡೆಯಲು ಇರುವ ಸಾಧನ. ಭಾಷೆಯ ಅಂಗವೇ ಆದ ಅರ್ಥದ ನಿಯಮಗಳು ನೈಸರ್ಗಿಕವಾಗಿಲ್ಲ. ಅವುಗಳನ್ನು ಮಾನವರು ಕಂಡುಕೊಳ್ಳಬೇಕಾಗಿದೆ. ಹುಡುಕಿ ತೆಗೆಯುವ ಬದಲಿಗೆ, ಈಗ ಹುಟ್ಟಿ ಹಾಕಲಾಗುತ್ತಿದೆ. ಅರ್ಥವಿಲ್ಲದೆ ಮುಂದುವರೆಯುವುದು ಸಾಧ್ಯವಿಲ್ಲ. ಯಾವ ವ್ಯವಸ್ಥೆಯಾಗಲೀ, ಪ್ರತಿನಿಧೀಕರಣವಾಗಲೀ, ತಿಳುವಳಿಕೆಯಾಗಲೀ ಆಗ ದೂರದ ಮಾತಾಗುತ್ತದೆ’.

‘ಒಂದು ಕಡೆ, ಒಂದೇ ಸಂಗತಿಯನ್ನು ಎಲ್ಲ ಮಾನವ ಜೀವಿಗಳೂ ಒಂದೇ ರೀತಿಯಲ್ಲಿ ಗ್ರಹಿಸುತ್ತಿಲ್ಲ ಎಂದು ಹೇಳಲು ಪುರಾವೆಗಳಿವೆ. ಇನ್ನೊಂದು ಕಡೆ ಹೀಗಾಗಲು ಭಾಷೆಯೇ ಕಾರಣ ಎಂದು ಹೇಳುವ ಸಪೀರ್-ವೂರ್ಫ್ ಪ್ರಮೇಯವಿದೆ. ಭಾಷೆಯು ನಮ್ಮ ಲೋಕದ ಮಿತಿಗಳನ್ನು ನಿರ್ಧರಿಸುತ್ತದೆ, ನಮ್ಮ ವಾಸ್ತವವನ್ನು ರಚಿಸುತ್ತದೆ. ಮಾನವ ಜೀವಿಗಳು ವಿಶ್ವವನ್ನು ನಿಷ್ಪಕ್ಷಪಾತವಾಗಿ ಬಣ್ಣಿಸಲಾರರು. ಏಕೆಂದರೆ, ಬಣ್ಣಿಸಲು ಅವರಿಗೆ ಮೊದಲು ವರ್ಗೀಕರಣ ವ್ಯವಸ್ಥೆಯೊಂದು ಬೇಕು. ವಿರೋಧಾಭಾಸವೆಂದರೆ, ಒಮ್ಮೆ ಈ ವರ್ಗೀಕರಣ ವ್ಯವಸ್ಥೆ ದೊರಕಿತೆಂದರೆ, ಅವರಿಗೊಂದು ಭಾಷೆ ದೊರಕಿದಂತೆ. ಆಗ ಅವರಿಗೆ ಕೇವಲ ನಿರ್ದಿಷ್ಟ ಯಾದೃಚ್ಛಿಕ ಸಂಗತಿಗಳು ಮಾತ್ರ ಕಾಣತೊಡಗುತ್ತವೆ’ ಎನ್ನುತ್ತಾಳೆ ಸ್ಪೆಂಡರ್.

ಇಷ್ಟು ದೀರ್ಘ ಉಲ್ಲೇಖ ನೀಡಿದ್ದಕ್ಕೆ ಕಾರಣಗಳಿವೆ. ನಾವೀಗಾಗಲೇ ಗಮನಿಸಿದಂತೆ ಸಪೀರ್-ವೂರ್ಫ್‌ರ ಪ್ರಮೇಯವನ್ನು ಒಪ್ಪುವ ಡೇಲ್‌ಸ್ಪೆಂಡರ್ ನಿಲುವು, ಭಾಷಿಕ ವಿಧಿವಾದದ ಒಂದು ಅತಿಯನ್ನು ಪ್ರತಿನಿಧಿಸುತ್ತದೆ. ಭಾಷೆಯು ವಿಧಿಸುವ ಕಟ್ಟುಪಾಡುಗಳನ್ನು ಮೀರುವುದಾಗಲೀ, ಬದಲಿಸುವುದಾಗಲೀ, ಸಾಧ್ಯವೇ ಇಲ್ಲವೆಂದು ಹೇಳುತ್ತದೆ.

ಸಪೀರ್ ಮತ್ತು ವೂರ್ಫ್‌ರ ನಿಲುವಿನಿಂದ ಡೇಲ್ ಸ್ಪೆಂಡರ್ ಕೊಂಚ ಭಿನ್ನವಾಗುವುದೂ ಉಂಟು. ಭಾಷೆ ಮತ್ತು ಸಂಸ್ಕೃತಿಗಳ ಪ್ರಕ್ರಿಯೆಗಳು ಬೇರೆ ಬೇರೆ; ಭಾಷಿಕ ಪ್ರಕ್ರಿಯೆಯು ಮೊದಲು, ಬಳಿಕ ಸಾಂಸ್ಕೃತಿಕ ಪ್ರಕ್ರಿಯೆ ಎನ್ನುವುದೇ ಈ ಭಿನ್ನತೆ. ಸಪೀರ್ ಇವೆರಡೂ ಪ್ರಕ್ರಿಯೆಗಳು ಒಂದರೊಡನೊಂದು ಬೆರೆತು ಹೋಗುತ್ತವೆ ಎನ್ನುತ್ತಾನೆ. ಭಾಷೆ ಮತ್ತು ಸಂಸ್ಕೃತಿಗಳು ಒಟ್ಟಿಗೆ ವಿಕಾಸಹೊಂದುತ್ತವೆಂದು ಹೇಳುತ್ತಾನೆ. ಆದರೆ, ಸ್ಪೆಂಡರ್ ನಮಗೊಂದು ಮಹಾಸ್ಪೋಟದ ಮಾದರಿಯನ್ನು ನೀಡುತ್ತಾಳೆ. ಇಲ್ಲಿ ವ್ಯಾಖ್ಯೆಯ ನಿಯಮಗಳು ಮೊದಲು ಸಿದ್ಧಗೊಳ್ಳುತ್ತವೆ. ಇವುಗಳ ಬದಲಾಗದ ಚೌಕಟ್ಟಿನಲ್ಲಿ ಉಳಿದೆಲ್ಲ ಸಂಗತಿಗಳನ್ನು ‘ಹುಡುಕಿಕೊಳ್ಳುತ್ತೇವೆ’ ಹೀಗೆ ದೊರಕುವ ನಿಯಮಗಳು ಗಂಡಸರಿಗೆ ಬೇಕಾದಂತೆ ಲೋಕವನ್ನು ಬಣ್ಣಿಸುತ್ತವೆ ಎಂಬುದೇ ಸ್ಪೆಂಡರ್‌ಳ ತಕರಾರು. ಈ ವ್ಯಾಖ್ಯೆಗಳು ಹೆಂಗಸನ್ನು ‘ಅನ್ಯ’ಳನ್ನಾಗಿಸುತ್ತವೆ.

‘ಗಂಡಸನ್ನು ಸಕಾರಾತ್ಮಕವಾಗಿ ಹೆಂಗಸನ್ನು ನಕಾರಾತ್ಮಕವಾಗಿ ಇರಿಸುವ ಎರಡು ವರ್ಗಗಳಲ್ಲಿ ಲೋಕವನ್ನು ವರ್ಗೀಕರಿಸಬಹುದು ಎಂದಾಗಲೇ ಪಿತೃಪ್ರಧಾನ ವ್ಯವಸ್ಥೆ ತಲೆ ಎತ್ತಿತ್ತು ಎಂದರ್ಥ. ಈ ಸಾಂಕೇತಿಕ ವ್ಯವಸ್ಥೆಯಲ್ಲಿ ನಾವು ಹುಟ್ಟಿದ್ದೇವೆ. ಈ ಸಂಕೇತಗಳು ಪ್ರತಿನಿಧಿಸುವ ಅರ್ಥವನ್ನೇ ಪಡೆದುಕೊಂಡು ಅದಕ್ಕನುಗುಣವಾಗಿ ಲೋಕವನ್ನು ರಚಿಸುತ್ತಾ, ಸಂಕೇತಗಳನ್ನು ಒಪ್ಪಿಕೊಳ್ಳುತ್ತೇವೆ. ಪಿತೃಪ್ರಧಾನತೆಯ ಅರ್ಥದಲ್ಲಿ ನೆಲೆಗೊಂಡು ಅದನ್ನು ಬಲಗೊಳಿಸುತ್ತಾ ಅದು ನಿಜವೆಸಲು ನೆರವಾಗುತ್ತೇವೆ.

ಡೇಲ್ ಸ್ಪೆಂಡರ್ ನಿಲುವಿನಲ್ಲಿ ಪೂರ್ವನಿಯೋಜಿತವಾದ ಪಿತೃಪ್ರಧಾನ ವ್ಯವಸ್ಥೆ  ನಿರಂತರವಾಗಿ ನೆಲೆಗೊಳ್ಳುತ್ತಿರುವುದೇ ಈಗ ಕ್ರಿಯಾತ್ಮಕತೆಯಾಗಿದೆ. ಇಂಥ ವಿಧಿವಾದವನ್ನು ನಾವು ಅಚ್ಚರಿಯಿಂದ ನೋಡಬೇಕಾಗುತ್ತದೆ. ಭಾಷೆಯ ಬಳಕೆದಾರರನ್ನು ಹಿಡಿದಿಟ್ಟಿರುವ ನಿಯಮಗಳ ಕಡೆಗೆ ಗಮನ ಸೆಳೆದು ಅವುಗಳನ್ನು ನಿರಾಕರಿಸುವಂತೆ ಮಾಡಲು ಈ ಲೇಖಕರಿಗೆ ಇರುವ ಅಡ್ಡಿಗಳಾದರೂ ಏನು?

ನಾನಿಲ್ಲಿ ಜನರು ತಮ್ಮ ಭಾಷೆಯಲ್ಲಿ ಅಂತಸ್ಥವಾಗಿರುವ ನಂಬಿಕೆಗಳ ಬಗ್ಗೆ ಅರಿವನ್ನು ಪಡೆದಿಲ್ಲವೆಂದು ಹೇಳುವುದನ್ನು ನಿರಾಕರಿಸುತ್ತೇನೆ. ಅಲ್ಲದೆ, ಈ ಲೋಕವನ್ನು ಅರ್ಥಪೂರ್ಣವಾಗಿ ಗ್ರಹಿಸಲು ಹೊರಟರೂ ಚಾರಿತ್ರಿಕವಾಗಿ ನಮ್ಮ ಸಂಸ್ಕೃತಿಯನ್ನು ನೆಲೆಗೊಂಡ ಪಾರಂಪರಿಕ ಚೌಕಟ್ಟಿನಲ್ಲೇ ಗ್ರಹಿಸುತ್ತ ಚಲಿಸುತ್ತೇವೆ ಎನ್ನುವುದನ್ನೂ ಒಪ್ಪುತ್ತೇನೆ. (ಇದಕ್ಕೆ ಡೇಲ್ ಸ್ಪೆಂಡರ್ ಒಳ್ಳೆಯ ಉದಾಹರಣೆಗಳನ್ನು ನೀಡುತ್ತಾಳೆ. ವ್ರೋಇರುವ  ವಸ್ತುಗಳನ್ನು ಗುರುತಿಸುವಾಗ ಹೆಂಗಸು ಬಳಸುವ ಪದರಚನೆ field dependance. ಆದರೆ, ಇದಕ್ಕೆ ಗಂಡಸು field independantಎಂಬ ಪದರಚನೆ ಬಳಸುತ್ತಾನೆ. ಹೀಗಾಗಲು, ಹೆಂಗಸಿನ ಕ್ರಿಯಾಶೀಲತೆಯ ಕೊರತೆಯೇ ಕಾರಣ. ಇದರ ಬದಲು context awareness ಎಂಬ ಪದರಚನೆ ಬಳಸಿದ್ದರೆ, ಹೆಂಗಸರ ಗ್ರಹಿಕೆಯ ಸಕಾರಾತ್ಮಕ ನೆಲೆಯನ್ನು ಗುರುತಿಸಿದಂತಾಗುತ್ತಿತ್ತು. ಆದರೆ, ಈ ಪದರಚನೆ ಹೊಳೆಯಲೇ ಇಲ್ಲ) ಒಂದು ವೇಳೆ, ಈ ನಿಲುವನ್ನು ಒಪ್ಪಿದರೆ, ಪರಂಪರೆಯನ್ನು ಮೀರುವ ವರ್ತನೆಗಳು ಸೈದ್ಧಾಂತಿಕವಾಗಿಯೂ, ಇಲ್ಲವೇ ಇಲ್ಲವೆಂದು ವಾದಿಸಿದಂತಾಗುತ್ತದೆ.

ಸ್ಪೆಂಡರ್‌ಳ ವಿವರಣೆಯಲ್ಲಿ ವಿಧಿವಾದಕ್ಕಿಂತ ಸಮಸ್ಯಾತ್ಮಕವಾದ ನೆಲೆಯೊಂದಿದೆ. ಅದೆಂದರೆ, ಪಿತೃಪ್ರಧಾನತೆಯ ಉಗಮವನ್ನು ಕುರಿತ ಮಿಥ್ಯಾಕಲ್ಪನೆ. ಇದು ಇದ್ದಕ್ಕಿದ್ದಂತೆ ಎಲ್ಲಿಂದಲೋ ಅವತಾರ ಪಡೆದಂತೆ ಬಣ್ಣಿಸಲಾಗಿದೆ. – ಎಲ್ಲಕ್ಕಿಂತ ಮೊದಲು ಈ ಲೋಕವನ್ನು, ಗಂಡನ್ನು ಮೆಚ್ಚುವ, ಹೆಣ್ಣನ್ನು ಕಡೆಗಣಿಸುವ ಬಗೆಯಲ್ಲೇ ವರ್ಗೀಕರಿಸುವ ಒಪ್ಪಿತ ನಿಯಮವೊಂದು ಇದ್ದಿತು’ ಎಂದು ಹೇಳಿದಂತಿದೆ. ಯಾರು ಈ ನಿಯಮವನ್ನು ಮಾಡಿದರು, ಮತ್ತು ಏಕೆ? ಈ ಪ್ರಶ್ನೆಯೊಡನೆ ಭಾಷೆಯ ಮೇಲೆ ಗಂಡಸು ಹೊಂದಿರುವ ನಿಯಂತ್ರಣದ ಸಮಸ್ಯೆಯೆಡೆಗೆ ಬರುತ್ತೇವೆ.

ನಿಯಂತ್ರಣ

ಡೇಲ್ ಸ್ಪೆಂಡರ್ ಪುಸ್ತಕದ ಶೀರ್ಷಿಕೆ Man made language. ಇದು ಒಂದು ರೂಪಕದಂತಿದೆ. ಜೊತೆಗೆ ವಿವರಣೆಯೂ ಆಗಿದೆ. ಗಂಡಸರು ಭಾಷೆಯನ್ನು ಕಟ್ಟಿದರು, ಹಾಗಾಗಿ, ಅವರು ಅದನ್ನು ನಿಯಂತ್ರಿಸುತ್ತಾರೆ. ಭಾಷೆಯನ್ನು ಗಂಡಸರು ಕಟ್ಟಿದರು ಎಂದು ಹೇಳುವಾಗ ಡೇಲ್ ಸ್ಪೆಂಡರ್ ಯಾವ ಅರ್ಥವನ್ನು ಹೊಂದಿದ್ದಳು ಎಂಬುದನ್ನು ಮೊದಲು ಗಮನಿಸೋಣ. ಗಂಡಸರೇ ಪದಗಳನ್ನು ಟಂಕಿಸಿದರು, ವ್ಯಾಕರಣವನ್ನು ರಚಿಸಿದರು – ಎನ್ನುವುದು ಆಕೆಯ ಉದ್ದೇಶವಲ್ಲ. ಹೆಂಗಸರನ್ನು ಹೊರಗಿರಿಸಿದ ತಮ್ಮ ದೃಷ್ಟಿಕೋನದಿಂದ ಭಾಷಿಕರೂಪಗಳನ್ನು ಗಂಡಸರು ವ್ಯಾಖ್ಯಾನಿಸಿದರು ಎಂಬುದು ಅವಳ ಅರ್ಥ. ಎಲ್ಲಕ್ಕಿಂತ ಮುಖ್ಯವಾಗಿ ಗಂಡಸರು ವರ್ಗೀಕರಣ ಸೂತ್ರವನ್ನು ರಚಿಸಿದರು. ಅದರಲ್ಲಿ ಗಂಡಸು ಧನಧ್ರುವ, ಹೆಂಗಸು ಋಣಧ್ರುವ; ಇದಕ್ಕನುಗುಣವಾಗಿ ಉಳಿದೆಲ್ಲವೂ ಮುಂದೆ ವ್ಯಾಖ್ಯಾನಕ್ಕೆ ಒಳಗಾದವು ಎಂದು ಹೇಳುವುದು ಅವಳ ಉದ್ದೇಶ.

ಉದಾಹರಣೆಗೆ, motherhood ಎಂಬ ಪದರಚನೆಯನ್ನು ಗಮನಿಸೋಣ. ಗಂಡಸರು ಈ ರಚನೆಯನ್ನು ಸಕಾರಾತ್ಮವಾಗಿ ವ್ಯಾಖ್ಯಾನಿಸಿದ್ದಾರೆ (ಭಾವುಕ ನೆಲೆಯಲ್ಲಲ್ಲ) ಎಂದು ಸ್ಪೆಂಡರ್ ಹೇಳುತ್ತಾಳೆ. ಹೀಗಾಗಿದ್ದರಿಂದ ತಾಯ್ತನದೊಡನೆ ಹೆಣೆದುಕೊಳ್ಳುವ ಸಕಾರಾತ್ಮಕ ಮತ್ತು ನಕಾರಾತ್ಮಕ ಅನುಭವಗಳನ್ನು ಒಟ್ಟಾಗಿ ಗ್ರಹಿಸುವುದು ಹೆಂಗಸಿಗೆ ಸಾಧ್ಯವೇ ಆಗುವುದಿಲ್ಲ. ಅನುಭವ ಮತ್ತು ಭಾಷೆಗಳ ಈ ಕಂದಕದಿಂದಾಗಿ ಹೆಂಗಸು ಮೌನಿಯಾಗುತ್ತಾಳೆ. ಏಕೆಂದರೆ, ದುಃಖ ತರುವ ತಾಯ್ತನವೆಂಬುದು ಒಂದು ವಿರೋಧಾಭಾಸ ರಚನೆಯಾಗಿ ಬಿಟ್ಟರೆ, ಹೆಂಗಸು ತಾನು ಹೇಳಬೇಕಾದ್ದನ್ನು ಹೇಳಲಾಗದೆ ಹೋಗುವಂತಾಗುವುದು, ಇನ್ನಷ್ಟು ಬಿಕ್ಕಟ್ಟನ್ನು ಸೃಷ್ಟಿಸುತ್ತದೆಯಲ್ಲವೇ? ಒಂದು ವೇಳೆ, ಆಕೆ ಬಳಸುಮಾತಿನ ಮೊರೆ ಹೊಕ್ಕರೆ, ಅವಳನ್ನು ಅಸಹಜ ಮತ್ತು ವಕ್ರ ಎನ್ನಲಾಗುತ್ತದೆ. ಗಂಡಸು ವರ್ಣಿಸಿದ ಬಗೆಯ ತಾಯಿಯಾಗಲು ಅವಳು ಲಾಯಕ್ಕಲ್ಲ.

ಇಡೀ ಪದಕೋಶವನ್ನು ಹೀಗೆಯೇ ವಿಶ್ಲೇಷಿಸಬಹುದೆಂದು ಸ್ಪೆಂಡರ್ ವಾದಿಸುತ್ತಾಳೆ. ಎಲ್ಲ ಪದಗಳಲ್ಲೂ ಗಂಡು ದೃಷ್ಟಿಕೋನ ಬೇರು ಬಿಟ್ಟಿದೆ (ಇದು ದಿಟವಾಗಿ ಗಂಡು ಮೇಲ್ಮೆಯ ಭಾವನೆ. ಇದಕ್ಕಾಗಿಯೇ ಹೆಂಗಸಿಗೆ ಸಂಬಂಧಿಸಿದ ಅರ್ಥದ ನಿಯಮಗಳು ನಕಾರಾತ್ಮಕ ಮತ್ತು ಹೀನಾರ್ಥದ ಕಡೆಗೆ ತುಯ್ಯುತ್ತವೆ.) ಈ ನೆಲೆಯು ಹೆಂಗಸಿನ ಅನುಭವಕ್ಕೆ ಹೊರತು. ಆಗವಳು ಅದನ್ನು ಸುಮ್ಮನೆ ಒಪ್ಪಬೇಕು (ಪ್ರತ್ಯೇಕೀಕರಣ) ಇಲ್ಲವೇ, ತಿರಸ್ಕರಿಸಬೇಕು (ಮೌನ).

ದುಃಖ ತರುವ ತಾಯ್ತನ ಎಂಬ ಪದರಚನೆಯನ್ನು ಉದಾಹರಣೆಯನ್ನಾಗಿ ಆಯ್ದದ್ದು ಸರಿಯಲ್ಲದಿರಬಹುದು. ಏಕೆಂದರೆ, ಪಿತೃಪ್ರಧಾನ ದೃಷ್ಟಿಗೆ ಈ ಉಕ್ತಿ ವಿಚಿತ್ರವೆನಿಸದೆಯೂ ಇರಬಹುದು. ಡೇಲ್ ಸ್ಪೆಂಡರ್ ಮಂಡಿಸಿದ ತೀವ್ರ ವಿಧಿವಾದದ ಜಗತ್ತಿನಲ್ಲಿ ಹೆಂಗಸಿಗೆ ಈ ಲೋಕದಲ್ಲಿ ಪರ‍್ಯಾಯ ಅನುಭವಗಳು ಇರುವುದು ಸಾಧ್ಯವೇ ಎಂಬ ಪ್ರಶ್ನೆ ತಲೆ ಎತ್ತುತ್ತದೆ. ಒಂದು ವೇಳೆ ಭಾಷೆಯೇ ವಾಸ್ತವತೆಯನ್ನು ಅರಿಯುವ ಮಾಪಕವಾದರೆ, ಹೆಂಗಸರು ಯಾವುದರಿಂದ ಪ್ರತ್ಯೇಕಿತರಾಗಿದ್ದಾರೆ? ಅಥವಾ ಯಾವುದರ ಬಗ್ಗೆ ಮೌನವಾಗಿದ್ದಾರೆ?

ಗಂಡಸರು ತಮಗೆ ಬೇಕಾದಂತೆ ವಾಸ್ತವವನ್ನು ವ್ಯಾಖ್ಯಾನಿಸಿ ಮೊದಲಿಂದಲೂ ನಿಯಮಗಳನ್ನು ನಿಗದಿಪಡಿಸುತ್ತಾರೆ ಎನ್ನುವ ಸ್ಪೆಂಡರ್‌ಳ ನಿಲುವಿಗೆ ಮತ್ತೆ ಹಿಂತಿರುಗೋಣ. ಗಂಡಸರು ಹೀಗೆ ಮಾಡುವುದು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡುವುದು ಸಹಜವೇ. ಭಾಷೆಯ ಉಗಮ ಮತ್ತು ಯಾರೋ ಅದನ್ನು ಸೃಷ್ಟಿಸಿದರು ಎಂದು ಊಹಿಸುವುದು- ಇವೆಲ್ಲವೂ ಇಂದಿನ ಭಾಷಾಶಾಸ್ತ್ರದಲ್ಲಿ ಚರ್ಚೆಗೆ ಬರುವುದಿಲ್ಲ. ಏಕೆಂದರೆ, ಏನೆಲ್ಲ ಆಯಿತು ಎನ್ನುವುದನ್ನು ಖಚಿತವಾಗಿ ತಿಳಿಯಲು ಸಾಧ್ಯವಿಲ್ಲ. ಆದರೂ, ಡೊರೊತಿ ಸ್ಮಿತ್ ಜ್ಞಾನರಚನೆಯನ್ನು ಕುರಿತು ಹೇಳಿದ ವಿವರಗಳನ್ನು ಬಳಸಿ  ಭಾಷೆಯ ಚರ್ಚೆಯನ್ನು ಸ್ಪೆಂಡರ್ ಮುಂದುವರೆಸುತ್ತಾಳೆ -‘ಪರಂಪರೆಯೊಂದು ಹೀಗೆ ರೂಪುಗೊಳ್ಳುತ್ತದೆ. ಮುದ್ರಿತ ಪದಗಳು ಮತ್ತು ಮಾತುಗಳ ಮಾಧ್ಯಮದ ಮೂಲಕ ಚಿಂತನೆಯ ಕ್ರಮವೊಂದು ಮೈದಳೆಯುತ್ತದೆ. ಅದರಲ್ಲಿ ಪ್ರಶ್ನೆಗಳು, ಪರಿಹಾರಗಳು, ವಿಷಯಗಳು, ಶೈಲಿಗಳು, ಲೋಕದೃಷ್ಟಿಗಳು ಇರುತ್ತವೆ. ಹಳೆಯದರ ಮೇಲೆ ಹೊಸದು ತಲೆ ಎತ್ತುತ್ತದೆ. ಈ ಎಲ್ಲದರಿಂದ ಹೆಂಗಸರನ್ನು ಹೊರಗಿಡಲಾಗಿದೆ. ಅವರ ಅನುಭವಗಳನ್ನು ಅಭಿವ್ಯಕ್ತಿಸಲು, ಅವರ ಕಾಳಜಿ ಮತ್ತು ಸಂದರ್ಭಗಳನ್ನು ವ್ಯಾಖ್ಯಾನಿಸಲು ಮತ್ತು ಯುಕ್ತ ಚಿಂತನೆಗಳನ್ನು ಕಟ್ಟಿಕೊಳ್ಳಲು ಬೇಕಾದ ಹಾದಿಗಳೇ ಅವರಿಗಿಲ್ಲ. ಒಂದು ಪರಂಪರೆಯನ್ನು ತಮಗಾಗಿ ಕಟ್ಟಿಕೊಳ್ಳಲು ಅಗತ್ಯವಾದ ವಸ್ತು ಸಂಪನ್ಮೂಲ, ಇಲ್ಲವೇ ಸಾಮಾಜಿಕ ನೆಲೆಗಳು ಅವರ ಹಿಡಿತಕ್ಕೆ ಸಿಕ್ಕಿಲ್ಲ. ಬುದ್ದಿಜೀವಿಗಳ ಸಂಕಥನದಲ್ಲಿ ಸಮಾನಸ್ಕಂಧರಾಗಿ ಭಾಗೀದಾರರಾಗುವ ಅವಕಾಶ ದೊರಕಿಲ್ಲ.’

ಹೀಗೆಂದು ಹೇಳುವ ಸ್ಮಿತ್, ಗಂಡಸರು ಪಾರಂಪರಿಕ ವಿವೇಕಕ್ಕೆ ಹಕ್ಕುದಾರರಾಗಿದ್ದಾರೆ ಎನ್ನುತ್ತಾಳೆ. ಅದರಲ್ಲಿ ಸಂಗತಿಗಳು, ಸಿದ್ಧಾಂತಗಳು, ಲೋಕದೃಷ್ಟಿಗಳು, ಲೋಕ ವ್ಯಾಖ್ಯೆಗಳು – ಸೇರಿಕೊಂಡಿವೆ. ಇಂದು ಮತ್ತು ಹಿಂದಿನ ಗಂಡಸರ ಕೊಡುಗೆಗಳಿಂದ ಇದು ಸಂಪುಷ್ಠಗೊಂಡಿದೆ. ಈ ಪ್ರಭಾವ ವಲಯದಲ್ಲಿ ಇರುವ ಯಾರೂ ಹೆಂಗಸರಿಗೆ ಇಲ್ಲಿನ ಕ್ರಮಗಳು ನ್ಯಾಯಸಮ್ಮತವೆಂದು ತೋರುತ್ತವೆಯೇ ಎಂಬ ಪ್ರಶ್ನೆಯನ್ನು ಕೇಳುವುದಿಲ್ಲ. ಇಲ್ಲವೇ ಹೆಂಗಸರು ಭಿನ್ನ ರೀತಿಯಲ್ಲಿ ವಿಶ್ಲೇಷಿಸಬಲ್ಲರೇ ಎಂದೂ ತಿಳಿದುಕೊಳ್ಳುವುದಿಲ್ಲ.

ಹಲವಾರು ಸಂಕಥನಗಳನ್ನು ನೋಡಿದರೆ, ಮೇಲೆ ಹೇಳಿದ ವಿವರಣೆಯನ್ನು ಒಪ್ಪದಿರಲು ಕಾರಣಗಳು ನನಗೆ ತೋರುತ್ತಿಲ್ಲ. ಅರಿಸ್ಟಾಟಲ್‌ನಿಂದ ಮೊದಲಾಗಿ ಫ್ರಾಯ್ಡ್ ವರೆಗಿನ ಎಲ್ಲ ತಾತ್ತ್ವಿಕ ಮತ್ತು ವೈಜ್ಞಾನಿಕ ಚಿಂತಕರೂ ಹೆಂಗಸರ ಮನಸ್ಸು, ದೇಹ ಮತ್ತು ಲೈಂಗಿಕತೆಗಳನ್ನು ಕುರಿತು ವಿವೇಚಿಸುತ್ತಿದ್ದರೂ, ಹಾಗೆ ಮಾಡುವಾಗ ಅವರು ಗಂಡಸರ ಪ್ರಭಾವವಲಯದೊಳಗೇ ಇದ್ದರು. ಹೆಂಗಸರ ಜ್ಞಾನಪರಂಪರೆಗಳಿಗೆ ಮನ್ನಣೆ ಇರಲಿಲ್ಲ. ಪ್ರಜನನ ವ್ಯವಸ್ಥೆಯ ಬಗ್ಗೆ ಹೆಂಗಸರು ಹೊಂದಿದ್ದ ಜ್ಞಾನಪರಂಪರೆಯನ್ನು ಹೆಚ್ಚೂ ಕಡಿಮೆ ಹತ್ತಿಕ್ಕಲಾಗಿತ್ತು. ಈಗಲೂ ಹೆಂಗಸರ ಜ್ಞಾನವಲಯದಲ್ಲಿ ಹೆಚ್ಚು ಜನರಿಲ್ಲ. ಹಣ, ಶಿಕ್ಷಣ – ಮುಂತಾದವುಗಳಾಗಲಿ, ಗಂಡಸರ ಗೇಲಿ ಮತ್ತು ಕಿರುಕುಳದಿಂದ ಬಿಡುಗಡೆ ಪಡೆದ ಸಾಮಾಜಿಕ ಪರಿಸ್ಥಿತಿಯಾಗಲಿ ಎಂದೂ ಇರಲಿಲ್ಲ. ಗಂಡಸರೊಡನೆ ಸರಿಸಮಾನರಾಗಿ ಬೌದ್ದಿಕ ಜೀವನದಲ್ಲಿ ಅವರು ಭಾಗಿಯಾಗಲಿಲ್ಲ. ಈಗಲೂ ಆಗುತ್ತಿಲ್ಲ. ತತ್ತ್ವಜ್ಞಾನ ಇಲ್ಲವೇ ವಿಜ್ಞಾನಗಳ ಪರಂಪರೆಗಳು ಚಾರಿತ್ರಿಕವಾಗಿ ಗಂಡಸರಿಗೆ ಸೇರಿವೆ, ಮತ್ತು ಹೆಂಗಸರನ್ನು ಹೊರಗಿಟ್ಟವೆ ಎಂದುಹೇಳುವುದು ಸರಿಯಾಗಿಯೇ ಇದೆ.

ಸಾಂಸ್ಥಿಕ ಜ್ಞಾನಶಾಖೆಗಳಾದ ತತ್ತ್ವಶಾಸ್ತ್ರ ಮತ್ತು ವಿಜ್ಞಾನಗಳ ಚೌಕಟ್ಟಿನಿಂದ ಹೆಂಗಸರನ್ನು ಹೊರಗಿಡಲಾಗಿತ್ತು ಎಂದ ಮಾತ್ರಕ್ಕೆ ದಿನನಿತ್ಯದ ಭಾಷೆಯಿಂದಲೂ ಹೊರಗಿಡಲಾಗಿತ್ತು ಎಂದು ತೀರ್ಮಾನಿಸುವುದು ಸರಿಯೇ? ಜ್ಞಾನವಲಯದಿಂದ ಹೆಂಗಸರು ಹೊರಗಿದ್ದರು; ಅದರಿಂದಾಗಿ ನಮ್ಮ ಸಂಸ್ಕೃತಿಯ ಗೌರವಾನ್ವಿತ ತತ್ವಶಾಸ್ತ್ರಜ್ಞರ, ವಿಜ್ಞಾನಿಗಳ ಬಳಗದಲ್ಲಿ ಅವರಿಲ್ಲ. ಹಾಗಿದ್ದರೂ ಗಂಡಸರಂತೆ ಹೆಂಗಸರು ದಿನನಿತ್ಯದ ಭಾಷೆಯನ್ನು ಬಳಸಲಿಲ್ಲವೆಂದು ಯಾರೂ ಹೇಳಿಲ್ಲ. ಹಾಗಿದ್ದಲ್ಲಿ, ಭಾಷೆಯನ್ನು ಗಂಡು ಕಟ್ಟಿದ್ದೆಂದು ಹೇಗೆ ಹೇಳುವುದು? ಹೆಂಗಸರು ತಮ್ಮ ಗ್ರಹಿಕೆಗಳಿಗೆ ತಕ್ಕಂತೆ ಭಾಷೆಯನ್ನು ಬಳಸಲಾಗದಂತೆ ತಡೆಹಿಡಿದದ್ದು ಯಾರು? (ಅವರು ನಿಘಂಟುಗಳನ್ನು ತಮಗೆ ಅನುಕೂಲವಾಗುವಂತೆ ರಚಿಸಿಕೊಳ್ಳಲು ಅಡ್ಡಿ ಮಾಡಿರಬಹುದು. ಆದರೆ, ನಿಘಂಟೇ ಭಾಷೆಯಲ್ಲವಲ್ಲ!)

ಭಾಷಿಕರು ತಲೆಮಾರುಗಳಿಂದ ದಾಟಿಬಂದ ಮತ್ತು ವ್ಯವಸ್ಥೆಗೊಂಡ ಅರ್ಥ ಜಗತ್ತಿನೊಳಗೆ ಪ್ರವೇಶ ಪಡೆಯುವರೆಂದು ಹೇಳಿದ ಲಕಾನ್‌ನ ನಿಲುವನ್ನು ಸ್ಪೆಂಡರ್ ಎಚ್ಚರಿಕೆಯಿಂದ ಬಳಸಿಕೊಳ್ಳುತ್ತಾಳೆ. ಆದರೆ, ಗಂಡಸರು ಪಿತೃಪ್ರಧಾನ ಅರ್ಥರಚನೆಯನ್ನು ಕಟ್ಟುತ್ತಾರೆಂದೂ ಆಕೆ ಹೇಳುವುದರಿಂದ ಆಕೆಯ ವಾದಕ್ಕೆ ಹಿನ್ನಡೆ ಆದಂತಿದೆ.

ಆರ್ಡೆನರ್ ದಂಪತಿ ಮಂಡಿಸುವ ಮಾದರಿಯಲ್ಲಿ ಯಾವ ಭಾಷಿಕರಿಗೂ ಕರ್ತೃತ್ವವಿಲ್ಲ. ಸ್ಪೆಂಡರ್ ಮಾದರಿಯಲ್ಲಿ ಗಂಡಿಗೆ ಕರ್ತೃತ್ವವಿದ್ದರೆ, ಹೆಂಗಸಿಗೆ ಅದು ಅಲಭ್ಯ. ಇದಕ್ಕೆ ಲಾಗಾಯತಿನಿಂದ ಗಂಡಸರು ಹೆಂಗಸರ ಮೇಲೆ ಹೊಂದಿರುವ ಯಜಮಾನಿಕೆಯೇ ಕಾರಣ. ಆದರೆ, ಇದರ ಜೊತೆಗೆ ಗಂಡಸು ಸಂಚುಗಾರನೆಂಬ ಸೂಚನೆಯೂ ಇದೆ. ಆರ್ವೆಲ್‌ನ Nineteen Eighty four ಕಾದಂಬರಿಯಲ್ಲಿ ಮಂಡಿಸಿದ ಕಾಲ್ಪನಿಕ ಲೋಕದಲ್ಲಿ ಇಂಥ ಸಂಚು ನಡೆಯುವುದಷ್ಟೇ? ಈ ನಿಲುವನ್ನು ಒಪ್ಪಿದರೆ ಸ್ತ್ರೀವಾದಿಗಳು ಈಚೆಗೆ ಚರ್ಚಿಸುತ್ತಿರುವ ಸಮಸ್ಯೆಯೊಂದಕ್ಕೆ ಉತ್ತರಿಸುವುದು ಕಷ್ಟ. ಲೈಂಗಿಕತಾವಾದಿ ನೆಲೆಗಳನ್ನು ಬಲಪಡಿಸುವಲ್ಲಿ ಹೆಂಗಸರೂ ಪಾತ್ರವಹಿಸುವುದೇಕೆ ಎಂಬುದೇ ಆ ಪ್ರಶ್ನೆ. ಸ್ತ್ರೀವಾದಿಗಳು ಬದಲಿಸಲು ಯತ್ನಿಸುತ್ತಿರುವ ಅರ್ಥಗಳನ್ನು ಗಂಡಸರು ಮಾತ್ರ ರೂಪಿಸಿದ್ದಾರೆಯೇ? ಭಾಷೆಗೂ ಅಧಿಕಾರಕ್ಕೂ ಇರುವ ಸಂಬಂಧವೇನು? ಸ್ಪೆಂಡರ್‌ಳ ಕೃತಿಯನ್ನು ಚರ್ಚಿಸುವಾಗ ಈ ಎಲ್ಲ ಪ್ರಶ್ನೆಗಳನ್ನೂ ಕೇಳಬೇಕಾಗುತ್ತದೆ.

ಅಧಿಕಾರ

ಹೆಂಗಸರು ತಮ್ಮದೇ ಅರ್ಥಗಳನ್ನು ಸಂಕೇತೀಕರಿಸಲು ಸೋತಿರುವ ಸಂಗತಿಯು ಸ್ಪೆಂಡರ್ ಮಂಡಿಸುವ ವಾದದ ಹಿನ್ನೆಲೆಯಲ್ಲಿ ಮತ್ತಷ್ಟು ಜಟಿಲವಾಗುತ್ತದೆ. ರಾಜಕೀಯ ಪ್ರತಿರೋಧವೆಂಬಂತೆ ಹೆಂಗಸರು  ಈವರೆಗೆ ಆಗದುದನ್ನು ಮಾಡಬೇಕು ಮತ್ತು ಮಾಡಲು ಸಾಧ್ಯ ಎಂದು ಈಕೆ ಹೇಳುತ್ತಾಳೆ. Man made language ಕೃತಿಯ ಬೆನ್ನುಡಿ ಈ ನಿಲುವನ್ನು ಸ್ಪಷ್ಟವಾಗಿಯೇ ಹೇಳುತ್ತದೆ -‘ಗಂಡು ಅರ್ಥಗಳ ಹುಸಿತನವನ್ನು ಬಯಲಿಗೆಳೆದು ತಮ್ಮದೇ ಅರ್ಥಗಳನ್ನು ಹೆಂಗಸರು ಕಟ್ಟತೊಡಗಿದ ಕೂಡಲೇ, ಭಾಷೆ ಮತ್ತು ಸಮಾಜಗಳು ಹೊಸ ರೂಪವನ್ನು ಪಡೆಯುತ್ತವೆ. ಮತ್ತು ಹೆಂಗಸರು ಸ್ವಾಯತ್ತತೆ ಹಾಗೂ ಆತ್ಮ ನಿರ್ಭರತೆಗಳ ಕಡೆಗೆ ಸಾಗಬಹುದು.’

ಇದೊಂದು ಮೊಟ್ಟೆ ಮತ್ತು ಕೋಳಿಯ ಸಮಸ್ಯೆ. ವಿಧಿವಾದ ಮತ್ತು ನಿಯಂತ್ರಣಗಳನ್ನು ಆಧರಿಸಿದ ಸಮಸ್ಯೆ. ಹೆಂಗಸರಿಗೆ ಅಧಿಕಾರವಿಲ್ಲದಿರುವುದರಿಂದ ಭಾಷೆಯನ್ನು ಪ್ರಭಾವಿಸಲಾರರು ಎನ್ನುವುದಾದರೆ, ತಮ್ಮ ಸ್ಥಾನಮಾನಗಳನ್ನು ಮೊದಲು ಬದಲಿಸಿದ ಹೊರತು ತಮ್ಮ ಅರ್ಥಗಳನ್ನು ಕಟ್ಟಲಾರರು. ಅಥವಾ ಭಾಷಿಕ ಸಂಪನ್ಮೂಲಗಳ ಕೊರತೆಯಿಂದಾಗಿ ಅವರು ಅಬಲೆಯರಾಗಿದ್ದಾರೆಯೇ? ಈ ಬಗ್ಗೆ ಸ್ಪೆಂಡರ್ ಎರಡು ಪರ್ಯಾಯಗಳನ್ನು ಇರಿಸಿಕೊಂಡು, ಅವೆರಡರ ನಡುವೆ ತೂಗುಯ್ಯಾಲೆಯಾಡುತ್ತಿದ್ದಾಳೆ. ಸಪೀರ್ ವೂರ್ಫ್ ಪ್ರಮೇಯವನ್ನು ಆಕೆ ಅವಲಂಬಿಸಿದ್ದರೂ ಒಂದು ಹಂತದಲ್ಲಿ ಹೀಗೆ ಹೇಳಿದ್ದಾಳೆ. ‘ಗಂಡಸರ ಅಧಿಕಾರದ ಮೇಲೆ ದಾಳಿ ಮಾಡದೆ ಕೇವಲ ಅವರ ಮೇಲ್ಮೆಯ ಹುಸಿತನವನ್ನು ಬಯಲಿಗೆಳೆದರೆ ಅದು ಹುತ್ತವನ್ನು ಬಡಿದಂತೆ. ಗಂಡಸರ ಮೇಲ್ಮೆಯ ನೆರಳಿನಲ್ಲಿ ಬದುಕುತ್ತಿರುವ ಜನರಲ್ಲಿ ಸಾಕಷ್ಟು ಜನರು ಅದರ ವಿರುದ್ಧ ದನಿ ಎತ್ತದೆ, ಸವಾಲು ಹಾಕದೆ ಹೋದರೆ, ಆಗ ಆ ಅಧಿಕಾರವನ್ನು ಯಾರೂ ಸಮರ್ಥಿಸಬೇಕಾಗಿಲ್ಲ; ಇಲ್ಲವೇ ಬದಲಿಸಬೇಕಾಗಿಲ್ಲ’.

ಇಲ್ಲಿಗಂಡಸರ ಮೇಲ್ಮೆಗಿಂತಲೂ ಬೇರೆ ಯಾವುದೋ ಕಾರಣದಿಂದ ಗಂಡು ಅಧಿಕಾರ ನೆಲೆಗೊಂಡಿದೆ; ಅದರಿಂದಲೇ ಆ ಅಧಿಕಾರ ಸಮರ್ಥಿತವಾಗುತ್ತಿದೆ, (ಭಾಷೆ ಮತ್ತು ಇತರ ಸಾಂಸ್ಕೃತಿಕ ರೂಪಗಳಲ್ಲಿ ಇದು ಕಾಣುತ್ತದೆ) ಎಂದು ಸ್ಪೆಂಡರ್ ಹೇಳುತ್ತಾಳೆ. ಅಧಿಕಾರದ ಸಮರ್ಥನೆ ನೈಸರ್ಗಿಕವೂ ಇಲ್ಲ, ಅದು ನಿಜವೂ ಅಲ್ಲ, ಎಂದು ತೋರಿಸಲು ಗಂಡಸರು ಒದಗಿಸಿದ ವ್ಯಾಖ್ಯೆಗಳನ್ನು ನಿರಾಕರಿಸಿ ಸವಾಲೆಸೆದರೆ, ಆಗ ಗಂಡಸರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸೋಲುತ್ತಾರೆ; ಹೆಂಗಸರು ದಾಳಿಗೆ ಮುಂದಾಗುತ್ತಾರೆ. ಗಂಡಸರಿಗೆ ತಮ್ಮ ಅಧಿಕಾರದ ಪೊಳ್ಳುತನ ತಾವು ಹೊರಗಿಟ್ಟ ಹೆಂಗಸರಿಗೆ ತಿಳಿದುಹೋಯಿತೆಂಬ ಅರಿವು ಮೂಡುತ್ತದೆ.

ಇದಕ್ಕೆ ಪರ್ಯಾಯವಾಗಿ ಸ್ಪೆಂಡರ್ ನೀಡುವ ಮಾದರಿಯು ಮಾರ್ಕ್ಸ್‌ವಾದದ ನೆಲೆಗಟ್ಟಿನಲ್ಲಿದೆ. ಸ್ತ್ರೀವಾದಿಗಳು ಮಂಡಿಸುವ ವೂರ್ಫ್ ಸಿದ್ಧಾಂತಗಳ ಪ್ರಕಾರ ಅಧಿಕಾರದೊಡನೆ ಅಧಿಕಾರದ ಸಮರ್ಥನೆಯೂ ಜೊತೆಯಾಗಿ ಬರುತ್ತದೆ. ಆದರೆ, ಸಾಂಪ್ರದಾಯಿಕ ಮಾರ್ಕ್ಸ್‌ವಾದವು, ಶೋಷಿತ ವರ್ಗಗಳ ದುಮ್ಮಾನಗಳನ್ನು ಭಾಷೆ ಮುಚ್ಚಿಡುತ್ತದೆ ಮತ್ತು ಆ ವರ್ಗಕ್ಕೆ ಅದು ತಿಳಿಯುವುದೇ ಇಲ್ಲ ಎನ್ನುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಭಾಷೆಯಂತಹ ಸೈದ್ಧಾಂತಿಕ ಕಟ್ಟಡಗಳನ್ನು ಉರುಳಿಸಬೇಕಾಗುತ್ತದೆ. ಆಗ ಮಾತ್ರ ದಮನಗೊಂಡವರು ದಾರಿ ತಪ್ಪುವುದಿಲ್ಲ. ಒಗ್ಗಟ್ಟಾಗಿ ಕ್ರಾಂತಿಪಥದಲ್ಲಿ ಸಾಗುತ್ತಾರೆ. ವೂರ್ಫ್‌ವಾದದ ನಿಟ್ಟಿನಲ್ಲಿ ಭಾಷೆಯನ್ನು ಒಡೆದು ಕಟ್ಟುವುದರಿಂದಲೇ ಕ್ರಾಂತಿಯಾಗಿ ಬಿಡುತ್ತದೆ. ಭಾಷೆಯನ್ನು ಒಡೆದುಕಟ್ಟುವುದು ಮಾರ್ಕ್ಸ್‌ವಾದಕ್ಕೆ ಸಾಧನವಾದರೆ, ವೂರ್ಫ್‌ವಾದಕ್ಕೆ ಅದೇ ಗುರಿ.

ಈ ಚೌಕಟ್ಟುಗಳ ನಡುವೆ ಇರುವ ಭಿನ್ನತೆ ಗಮನಾರ್ಹ. ಏಕೆಂದರೆ, ಸ್ತ್ರೀವಾದಿ ರಾಜಕೀಯ ಕ್ರಿಯೆಗಳಿಗೂ, ಸ್ತ್ರೀವಾದಿ ಭಾಷಾಸಿದ್ಧಾಂತಗಳಿಗೂ ಸಂಬಂಧವಿದೆ. ಬಾಯಿ ಕಟ್ಟಿದವರ ಸಿದ್ಧಾಂತ ಮತ್ತು ಗಂಡು ಕಟ್ಟಿದ ಭಾಷೆಯ ಸಿದ್ಧಾಂತ- ಇವೆರಡೂ ಸ್ತ್ರೀವಾದಿಗಳು ಭಾಷೆಯ ಮೇಲೆ ಗಂಡಸು ಹೊಂದಿರುವ ನಿಯಂತ್ರಣವನ್ನು ಪ್ರತಿರೋಧಿಸುವ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ. ಇದು ಹೇಗೆ ಸಾಧ್ಯವಾಗುತ್ತದೆ? ಸ್ತ್ರೀ ವಿಮೋಚನೆಯ ಅಂತಿಮ ಗುರಿಗೆ ಇದು ಎಷ್ಟು ಮುಖ್ಯ? ನಾನೀವರೆಗೆ ಚರ್ಚಿಸಿದಂತೆ ಈ ಎರಡೂ ಮಾದರಿಗಳು ಈ ಪ್ರಶ್ನೆಗಳಿಗೆ ಸ್ಪಷ್ಟವಾದ, ಖಚಿತವಾದ ಉತ್ತರಗಳನ್ನು ನೀಡುವುದಿಲ್ಲ. ಇನ್ನಷ್ಟು ವಿವರಗಳೊಂದಿಗೆ ಈ ಚರ್ಚೆಯನ್ನು ಮುಗಿಸುತ್ತೇನೆ.

ಪ್ರತಿರೋಧ : ‘ಸಾಮಾನ್ಯ ಭಾಷೆಯ ಕನಸು

ಬಾಯಿ ಕಟ್ಟಿದವರ ಸಿದ್ಧಾಂತ ಮತ್ತು ಗಂಡು ಕಟ್ಟಿದ ಭಾಷೆಯ ಸಿದ್ಧಾಂತ – ಇವೆರಡೂ ದಮನವನ್ನು ಎದುರಿಸುವ ಸ್ತ್ರೀವಾದಿ ಪ್ರತಿರೋಧದ ಸಮಸ್ಯೆಗಳ ಬಗ್ಗೆ ಗೊಂದಲವನ್ನು ಉಂಟು ಮಾಡಿವೆ. ಹೆಂಗಸು ಭಾಷೆಯನ್ನು ಹಿಡಿತಕ್ಕೆ ತೆಗೆದುಕೊಂಡು ತನ್ನ ಅರ್ಥಗಳನ್ನು ಕಟ್ಟಬೇಕೆಂದು ಸ್ಪೆಂಡರ್ ಹೇಳುತ್ತಾಳೆ. ವೂರ್ಫ್ ಮಂಡಿಸುವ ಭಾಷಿಕ ವಿಧಿವಾದದ ದೃಷ್ಟಿಯಲ್ಲಿ ಇದು ಅಸಾಧ್ಯ. ಏಕೆಂದರೆ, ಭಾಷಿಕ ಲೋಕದಲ್ಲಿ ಗಂಡಸರದ್ದೇ ಆಧಿಪತ್ಯ. ಅದರೊಳಗೇ ಇದ್ದೂ ಪ್ರತ್ಯೇಕಿತವಾಗಿರುವ ಹೆಂಗಸು ಒಳಗಿನಿಂದಲೇ ಅದನ್ನು ಭಿನ್ನವಾಗಿ ನೋಡುವುದು ಹೇಗೆ ಸಾಧ್ಯ?

ಒಂದು ವೇಳೆ ವಿಧಿವಾದ ಮತ್ತು ನಿಯಂತ್ರಣದ ಮಾದರಿಯನ್ನು ಕೊಂಚ ಸಡಿಲಗೊಳಿಸಿದರೆ ಸಮಸ್ಯೆಗೆ ಪರಿಹಾರ ಸಿಗಬಹುದು. ಸಪೀರ್ ಸೂಚಿಸಿದಂತೆ ಮತ್ತು ಜಾರ್ಜ್ ಆರ್ವೆಲ್ ತನ್ನ ‘Politics and the english Language’ ಲೇಖನದಲ್ಲಿ ಹೇಳಿದಂತೆ ನಾವು ಬರೆಯುವ ಮತ್ತು ಮಾತಾಡುವ ಪ್ರತಿಯೊಂದು ಪದವನ್ನೂ ಎಚ್ಚರಿಕೆಯಿಂದ ಗಮನಿಸತೊಡಗಿದಾಗ ಪದಗಳು ಭ್ರಷ್ಟಗೊಳ್ಳುವುದನ್ನು ಪ್ರತಿರೋಧಿಸ ಬಹುದು. ಸುಧಾರಣಾವಾದಿಗಳ ದೃಷ್ಟಿ ಇದೇ ಆಗಿದೆ. ಅಲ್ಲದೆ, ಈ ಸಮಸ್ಯೆಯಲ್ಲಿ ಅಡಕಗೊಂಡಿರುವ ರಾಜಕಾರಣವನ್ನು ಅವರು ಬೇರೆಯಾಗಿಯೇ ಗ್ರಹಿಸುತ್ತಾರೆ.

ತೀವ್ರವಾದಿ ಸ್ತ್ರೀವಾದಿ ಸಿದ್ಧಾಂತಕಾರರಿಗೆ ಹೊಸ ಉಕ್ತಿವಿಧಾನಗಳನ್ನು ರೂಪಿಸಿ ಪ್ರಚುರ ಪಡಿಸುವುದು ಸರಿಯಾದ ದಾರಿ ಎನಿಸುತ್ತದೆ. ಕೆರಳಿಸುವ ಪದ ಬಳಕೆ, ಹೊಸ ಪದವನ್ನು ಟಂಕಿಸುವುದು ಸರಿಯಾದುದೆಂದು ಮೇರಿ ಡೇಲಿ ಹೇಳಿದಳು. ಕೆಲವರು ಹೆಣ್ಣು ಕಟ್ಟಿದ ಭಾಷೆಯನ್ನೂ ಪ್ರತಿಪಾದಿಸುತ್ತಾರೆ.

೧೯೮೦ ರ ಆಸುಪಾಸಿನಲ್ಲಿ ಭಾಷಾಶಾಸ್ತ್ರಜ್ಞೆ ಮತ್ತು ವಿಜ್ಞಾನ ಕಾಲ್ಪನಿಕ ಕತೆಗಳ ರಚಯಿತ್ರಿ ಸೂಜೆಟ್ ಹೇಡನ್ ಎಲ್ಗಿನ್ ಈ ನಿಟ್ಟಿನಲ್ಲಿ ಚಿಂತಿಸಿ Native tongue ಎಂಬ ಕಾದಂಬರಿಯನ್ನು ಬರೆದಳು. ಅದನ್ನಿಲ್ಲಿ ಗಮನಿಸುವುದು ಅಗತ್ಯ. ಈ ಕಾದಂಬರಿಯ ಹಿನ್ನೆಲೆಯಲ್ಲಿ ವೂರ್ಫ್ ಪ್ರಣೀತ ಲೋಕವಿದೆ. ಅಲ್ಲಿ ಭಾಷೆಯು ವಾಸ್ತವವನ್ನು ನಿರ್ಧರಿಸುತ್ತದೆ. ಇಂಥ ಲೋಕದಲ್ಲಿ ಹೆಂಗಸರು ಲಾಡಾನ್ ಎಂಬ ‘ಹೆಂಗಸರ ಭಾಷೆ’ಯನ್ನು ಗುಟ್ಟಾಗಿ ನಿರ್ಮಿಸಿ ರಕ್ತರಹಿತ ಕ್ರಾಂತಿ ಮಾಡಿ ವಾಸ್ತವವನ್ನು ಬದಲಿಸುತ್ತಾರೆ.

ಕಾದಂಬರಿಯು ಭವಿಷ್ಯತ್ತಿನಲ್ಲಿ ಸಂಭವಿಸುತ್ತದೆ. ಸ್ಥಳ ಉತ್ತರ ಅಮೆರಿಕ. ಇಲ್ಲಿ ಹೆಂಗಸರಿಗೆ ಪೌರ ಹಕ್ಕುಗಳಿಲ್ಲ. ಸಂಪೂರ್ಣವಾಗಿ ಗಂಡಸರಿಗೆ ಅಧೀನವಾಗಿ ಬದುಕುತ್ತಿದ್ದಾರೆ. ಬಾಹ್ಯಾಂತರಿಕ್ಷದಲ್ಲಿ ಶೋಧನೆಗಳನ್ನು ನಡೆಸಿ ವಸಾಹತುಗಳನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗುತ್ತಿರುತ್ತದೆ. ಭೂ ಸರ್ಕಾರಗಳು ಅನೂಹ್ಯ ಲೋಕದವರೊಡನೆ ತುದಿ ಮೊದಲಿಲ್ಲದ ಸಂಧಾನಗಳಲ್ಲಿ ನಿರತರಾಗಿರುತ್ತಾರೆ. ಈ ಅನೂಹ್ಯರೊಡನೆ ಸಂಪರ್ಕ ಪಡೆದಿದ್ದರಿಂದ ಭಾಷಾಶಾಸ್ತ್ರಜ್ಞರು ಅವರ ಭಾಷೆಗಳನ್ನು ಅರಿತುಕೊಳ್ಳುವ ಸಾಮಾಜಿಕ ಹೊಣೆಯನ್ನು ನಿರ್ವಹಿಸುತ್ತಿರುತ್ತಾರೆ. ಭಾಷಾಶಾಸ್ತ್ರಜ್ಞರ ಬಗ್ಗೆ ಎಲ್ಲರಿಗೂ ದ್ವೇಷ. ಅವರನ್ನು ಆಗಿಂದಾಗ್ಗೆ ಹಿಂಸಿಸಲಾಗುತ್ತದೆ. ಆದರೆ, ಅವರು ಪ್ರಬಲರಾಗಿರುತ್ತಾರೆ. ಭಾಷಾಶಾಸ್ತ್ರಜ್ಞರಾದ ಹೆಂಗಸರೂ ಇರುತ್ತಾರೆ. ಆದರೆ,ಅವರಿಗೆ ಇತರ ಹೆಂಗಸರಿಗಿರುವ ಕಟ್ಟಳೆಗಳು, ಸಾಮಾಜಿಕ ನ್ಯೂನತೆಗಳು ಅನ್ವಯಿಸುತ್ತವೆ.  ಹೀಗಿದ್ದರೂ ಅವರ ಸೇವೆ ಅಗತ್ಯವಾದ್ದರಿಂದ ಅವರಿಗೆ ಕೊಂಚ ಸ್ವಾಯತ್ತತೆ ಇದೆ. ಅವರು ಮಕ್ಕಳನ್ನು ಹೆರಬಲ್ಲ ವಯಸ್ಸು ದಾಟಿದ ಮೇಲೆ ಅವರನ್ನು ಕೂಡಾ ಸಾಮುದಾಯಿಕ ಗೃಹಗಳಲ್ಲಿ ಕೇವಲ ಹೆಂಗಸರೊಡನೆ ಬದುಕುವಂತೆ ನಿರ್ಬಂಧಿಸಲಾಗುತ್ತದೆ.

ಇಂಥ ‘ಬರಡುಮನೆ’ಗಳೊಳಗೆ ಬುಡಮೇಲು ಕೃತ್ಯಗಳ ನಕಾಶೆ ಸಿದ್ಧಗೊಳ್ಳುತ್ತದೆ. ಹೆಂಗಸರಿಗೆ ಹಿಂದೊಮ್ಮೆ ಇದ್ದ ಹಕ್ಕುಗಳ ಪಳೆಯುಳಿಕೆಗಳನ್ನು ಇಲ್ಲಿ ಬಿಚ್ಚಿಟ್ಟಿರುತ್ತಾರೆ. ಗರ್ಭಪಾತ ಮಾಡುವ ಉಪಕರಣಗಳನ್ನು ಮುಚ್ಚಿಟ್ಟುಕೊಂಡಿರುತ್ತಾರೆ. ಗರ್ಭನಿರೋಧಕ ಔಷಧಗಳನ್ನು ಇರಿಸಿಕೊಂಡಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾದ ಮಹಾರಹಸ್ಯವೆಂದರೆ, ಅವರು ತೊಡಗಿಕೊಂಡಿರುವ ಹೆಣ್ಣುಭಾಷೆ ಲಾಡಾನ್‌ನ ರಚನೆಯ ಕೆಲಸ.

ಲಾಡಾನ್ ಸೃಷ್ಟಿ ಹಲವು ಸ್ಥರಗಳಲ್ಲಿ ನಡೆಯುತ್ತದೆ. ತಜ್ಞಭಾಷಾಶಾಸ್ತ್ರ ಪಂಡಿತರಾದ ಹೆಂಗಸರಿಗಿದು ಸುಲಭದ ಕೆಲಸ. ಭಾಷೆಗೊಂದು ಧ್ವನಿರಚನೆ, ಇಲ್ಲವೇ ಪದರಚನೆಯ ನಿಯಮಗಳನ್ನು ರೂಪಿಸುವುದು ಅವರಿಗೆ ಕಷ್ಟವೇನಿಲ್ಲ. ಆದರೆ ಅರ್ಥವನ್ನು ಸಂಕೇತೀಕರಿಸುವ ಪ್ರಕ್ರಿಯೆ ಕಷ್ಟಕರವಾಗಿರುತ್ತದೆ. ಏಕೆಂದರೆ, ಈ ಭಾಷೆ ಹೆಂಗಸರ ಗ್ರಹಿಕೆಗಳನ್ನು ಪದಗಳ ಮೂಲಕ ಮಂಡಿಸಬೇಕಿರುತ್ತದೆ. ಈವರೆಗೆ ಯಾವ ‘ಗಂಡು ಕಟ್ಟಿದ ಭಾಷೆ’ಯಲ್ಲೂ ಈ ಗ್ರಹಿಕೆಗಳು ಮಂಡಿತವಾಗಿರುವುದಿಲ್ಲ. ಅಂಥ ಭಾಷೆಗಳ ಮುಖಾಂತರ ಈ ಗ್ರಹಿಕೆಗಳನ್ನು ಮಂಡಿಸಲು ಹೆಂಗಸರು ಸಮಯ ವ್ಯಯ ಮಾಡಿಕೊಂಡು ಬಳಸು ಮಾರ್ಗ ಹಿಡಿದು ಹೈರಾಣಾಗಿದ್ದಾರೆ.

‘ಈವರೆಗೆ ಯಾವ ‘ಮಾನವ ಭಾಷೆ’ಯೂ ಹೆಸರಿಸಲು ಆಯ್ಕೆ ಮಾಡಿಕೊಳ್ಳದ ಲೋಕಾಂಶವನ್ನು ಹೆಸರಿಸುವುದೇ ಸಂಕೇತೀಕರಣ.’ ‘ಇದು ಹೇಗೆ ಸಂಭವಿಸುತ್ತದೆ ಎನ್ನುವುದು ತಿಳಿಯದು. ಆದರೆ, ಅದರ ಅಗತ್ಯ ನಮಗಿದೆ. ಹುಡುಕುತ್ತಾ ಹೋದರೆ ಕಾಣುವುದಿಲ್ಲ. ಗೆರೆ ಎಳೆದಂತೆ ಅಚ್ಚುಕಟ್ಟಾದ ಮೂರ್ತರೂಪದಲ್ಲಿ ನಿಮ್ಮೆದುರು ನಿಂತು ‘ನನಗೆ ಹೆಸರಿಡಿ’ ಎಂದು ಹೇಳುವುದಿಲ್ಲ. ಇವು ಹೆಂಗಸರಿಗೆ ಮುಖ್ಯವಾದವು. ಹಾಗಾಗಿಯೇ ಈವರೆಗೆ ಅವುಗಳನ್ನು ಹೆಸರಿಸಿಲ್ಲ. ಇವು ಹೆಂಗಸರ ವಾಸ್ತವದ ಪ್ರತೀಕಗಳು. ಗಂಡಸರ ವಾಸ್ತವದ ಆಚೆಗಿರುವಂಥವು.

ಉದಾಹರಣೆಗೆ, ಬಂಜೆತನವೆಂಬ ಪರಿಕಲ್ಪನೆಯನ್ನು ಸಕಾರಾತ್ಮಕವಾಗಿ ಸಂಕೇತಿಸಲು ಹೆಂಗಸರು ಬಯಸಿದರೆಂದುಕೊಳ್ಳಿ. ಗಂಡಸರು ಬಳಸುವ barren ಪದ ಮುಟ್ಟುನಿಂತ ಮೇಲಿನ ಹೆಂಗಸರ ಅವಸ್ಥೆಯನ್ನು, ಮತ್ತು ಫಲವಂತಿಕೆಯಿಲ್ಲದ ಹೆಂಗಸಿನ ಚಹರೆಯನ್ನು ಹೇಳುತ್ತದೆ. ಇವರು ಮುಖ್ಯಧಾರೆಯಿಂದ ಹೊರಗುಳಿದು ನಕಾರಾತ್ಮಕ ಅರ್ಥಭಾರಕ್ಕೆ ಸಿಲುಕುತ್ತಾರೆ. ಈ ಪದಕ್ಕೆ ತಟಸ್ಥವಾದ, ಇಲ್ಲವೇ ಸಕಾರಾತ್ಮಕವಾದ ಪರ್ಯಾಯವಿಲ್ಲ. ಹೀಗಾಗಿ, ಇದು ಆ ಹೆಂಗಸರ ವಾಸ್ತವವನ್ನು ಮಂಡಿಸಲಾರದು. (ನಾನು ಈ ಉದಾಹರಣೆಯನ್ನು ಆಯ್ದುಕೊಳ್ಳಲು ಕಾರಣವಿದೆ. ನಿಜಲೋಕದಲ್ಲಿ ಇಂತಹ ಪರಿಸ್ಥಿತಿ ಯಲ್ಲಿರುವ ಇಂಗ್ಲಿಶ್ ಭಾಷಿಕ ಹೆಂಗಸರು child free ಎಂಬ ಉಕ್ತಿಯನ್ನು ರಚಿಸಿಯಾರು. ನನಗೆ ಈ ಪದ ತೃಪ್ತಿಕರವೆನಿಸಿಲ್ಲ. ಏಕೆಂದರೆ, ಇದು ಮಕ್ಕಳನ್ನು ಅಸಹನೀಯ ಹೊರೆ ಎಂದು ಸೂಚಿಸುತ್ತದೆ.  ಅಂದರೆ ಮಕ್ಕಳನ್ನು ಹೊಂದಿರುವ ಮತ್ತು ಮಕ್ಕಳನ್ನು ಹೊಂದಿರದ ಎರಡೂ ಸ್ಥಿತಿಗಳನ್ನು, ಒಂದು ಇನ್ನೊಂದಕ್ಕೆ ವಿರೋಧವೆನಿಸದಂತೆ ಸಕಾರಾತ್ಮಕವಾಗಿ ಸೂಚಿಸುವ ಪದ ಇಂಗ್ಲಿಶ್‌ನಲ್ಲಿ ಇಲ್ಲ. ಇಂಥ ಸೂಕ್ಷ್ಮ ಸಮಸ್ಯೆಗಳನ್ನು ಹೆಣ್ಣು ಭಾಷೆಯ ಸಂಕೇತೀಕರಣ ಕ್ರಿಯೆ ಎದುರಿಸುತ್ತದೆ)

ಕೃತಿಯ ಕೊನೆಗೆ ಹೆಂಗಸರು ಲಾಡಾನ್ ಭಾಷೆಯನ್ನು ಚಿಕ್ಕ ಹುಡುಗಿಯರಿಗೆ ಹೇಳಿಕೊಡಲು ಮೊದಲು ಮಾಡುತ್ತಾರೆ. ಮುಂದೊಂದು ಕಾಲಕ್ಕೆ, ಎಷ್ಟೋ ತಲೆಮಾರುಗಳ ಬಳಿಕ ಈ ಭಾಷೆ ಕೃತಕ ಭಾಷೆಯಾಗಿ ಉಳಿಯದೆ ‘ಹೆಂಗಸರ ಸಹಜ ಭಾಷೆ’ಯಾಗಿ ಅವರ Native tongue ಆಗಿ ಮಾರ್ಪಡುವುದೆಂದು ಕಾಯುತ್ತಾ ಕೂರುತ್ತಾರೆ. ಇದರಿಂದ ಒಂದು ರಾಜಕೀಯ ಸಮಸ್ಯೆ ಎದುರಾಗುತ್ತದೆ. ತಮ್ಮದೇ ಭಾಷೆಯಿಂದ ಸಬಲೀಕರಣಗೊಂಡ ಹೆಂಗಸರು ಈ ಭಾಷೆಯನ್ನು ಮತ್ತೆ ಗುಟ್ಟಾಗಿ ಇಡಲಾರರು, ಇಲ್ಲವೇ ಇಡಬೇಕಿಲ್ಲ. ಹಾಗಾದಾಗ, ಹೆಂಗಸರು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುತ್ತಾ ಕೊನೆಗೆ ಬಿಡುಗಡೆ ಪಡೆಯಲು ಏನು ಮಾಡಬೇಕು?

ನಾನಿಲ್ಲಿ ಕೃತಿಯ ಅಂತ್ಯವನ್ನು ಬಯಲು ಮಾಡುವುದಿಲ್ಲ. ಆದರೂ ಇದೊಂದು ವೂರ್ಫ್ ಮಾದರಿಯ ವಿರೋಧಾಭಾಸದಂತಿದೆ. ಕಾದಂಬರಿಯ ನಾಯಕಿ ಕೇಳುವಂತೆ ‘ನಾವೇನು ಮಾಡಬೇಕು’ ಎಂಬ ಪ್ರಶ್ನೆಯು, ಪರಿಸ್ಥಿತಿಯನ್ನು ಹೆಂಗಸರು ಹೇಗೆ ಗ್ರಹಿಸಿದ್ದಾರೆ ಮತ್ತು ಹಳೆಯ ಲಾಡಾನ್ ಪೂರ್ವಸ್ಥಿತಿಯಲ್ಲಿ ನೋಡಿದಾಗ, ಮುಂದೇನಾಗಬಹುದು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದನ್ನು ಅವಲಂಬಿಸಿದೆ. ಆದರೆ ಲಾಡಾನ್ ಹೊಸ ವಾಸ್ತವವನ್ನು ಕಟ್ಟಿಕೊಟ್ಟಿದೆ. ಈಗ ಹಳೆಯ ಲೆಕ್ಕಾಚಾರಗಳೆಲ್ಲ ದಿಕ್ಕಾಪಾಲಾಗಿ ಹೋಗಿವೆ.

ಈ ಕೃತಿಯ ಅಂತ್ಯ ನನಗೆ ಗಮನಾರ್ಹವೆಂದು ತೋರಿದೆ. ಇದು ಕೃತಿಯ ಉದ್ದೇಶ ಹೌದೋ ಅಲ್ಲವೋ ಎಂಬುದು ಮುಖ್ಯವಲ್ಲ. ವೂರ್ಫ್‌ನ ಸಿದ್ಧಾಂತಗಳನ್ನು ಬೆನ್ನು ಹತ್ತಿ ಹೋದರೆ, ರಾಜಕೀಯ ನೆಲೆಯಲ್ಲಿ ಸ್ತ್ರೀವಾದಿ ಚಟುವಟಿಕೆಗಳು ತಲುಪುವ ಬಿಕ್ಕಟ್ಟುಗಳನ್ನು ಇದು ಸೂಚಿಸುತ್ತದೆ. ಲಾಡಾನ್ ಬದಲಿಸುವ ವಾಸ್ತವತೆ ಯಾವುದು ಮತ್ತು ಯಾರದ್ದು? ಖಂಡಿತ ಹೆಂಗಸರದ್ದು; ಗಂಡಸರದಲ್ಲ. ಏಕೆಂದರೆ, ಗಂಡಸರಿಗೆ ಲಾಡಾನ್ ತಿಳಿಯುವುದಿಲ್ಲ. ಹಾಗಾಗಿ ಅದರಿಂದ ಇಡೀ ಸಂಸ್ಕೃತಿಯ ವಾಸ್ತವವನ್ನು ಬದಲಿಸಲಾಗದು. ಏಕೆಂದರೆ, ಸಂಸ್ಕೃತಿ ಗಂಡಸರ ನಿಯಂತ್ರಣಕ್ಕೆ ಒಳಗಾಗಿದೆ. ದಿಟ. ಹೆಂಗಸರಲ್ಲಿ ಒಗ್ಗಟ್ಟು ಮತ್ತು ಸಮಗ್ರತೆಯನ್ನು ತರುವ ‘ಅಧಿಕೃತ’ ಭಾಷೆಯೊಂದು ಕರಗತವಾಯಿತು. ಆದರೆ, ಅದರಿಂದ ಅವರಿಗೆ ಅಧಿಕಾರವೇನೂ ಸಿಕ್ಕಿದಂತಾಗಲಿಲ್ಲ.

ಇನ್ನೂ ಒಂದು ಬಗೆಯಲ್ಲಿ ತರ್ಕಿಸಬಹುದು. ಕಾದಂಬರಿಯ ಲೋಕದಲ್ಲಿ ಮತ್ತು ಡೇಲ್ ಸ್ಪೆಂಡರ್ ಇಲ್ಲವೇ ಮೇರಿ ಡೇಲಿ ಬಗೆಯ ತೀವ್ರವಾದಿ ಸ್ತ್ರೀವಾದಿಗಳ ಚಿಂತನೆಯಲ್ಲಿ ಗಂಡಸರು ವ್ಯಾಖ್ಯಾನಿಸುವ ಬಗೆಯ ಅಧಿಕಾರ ಹೆಂಗಸರಿಗೆ ಬೇಕಿಲ್ಲವೋ ಏನೋ. ಆ ಮಾದರಿಯ ಅಧಿಕಾರದಲ್ಲಿ ಯಜಮಾನಿಕೆ, ಹಿಂಸೆ ರಕ್ತಪಾತಗಳಿರುತ್ತವೆ. ವಿಚಿತ್ರವೆಂದರೆ ಲಾಡಾನ್‌ಗೆ ಆತಂಕಕಾರಿ ಪರಿಸ್ಥಿತಿ ಉಂಟಾದಾಗ ಒಬ್ಬ ಹೆಂಗಸು ಹಿಂಸಾತ್ಮಕ ಮಾರ್ಗದಲ್ಲಿ ಅದನ್ನು ರಕ್ಷಿಸುತ್ತಾಳೆ. ಹೀಗೆ ಅಧಿಕಾರ ತನ್ನ ನೆಲೆಗಳನ್ನು ರೂಪಿಸಿಕೊಳ್ಳದಿದ್ದರೆ, ಹೆಂಗಸರ ರಕ್ತಪಾತ ರಹಿತ ಕ್ರಾಂತಿಯು ಶೈಶವದಲ್ಲೇ ಅಳಿದು ಹೋಗುತ್ತದೆ.

ಈ ವಾದವನ್ನು ಕೊಂಚ ಸೈದ್ಧಾಂತಿಕವಾಗಿ ಮಂಡಿಸುತ್ತೇನೆ. ವೂರ್ಫ್ ಸಿದ್ಧಾಂತವು ಸಾಂಸ್ಕೃತಿಕ ಸಾಪೇಕ್ಷತೆಯನ್ನು ಮಂಡಿಸುತ್ತದೆ. ಸಂಸ್ಕೃತಿಗಳ ಲೋಕದೃಷ್ಟಿಗಳಲ್ಲಿ ಭಿನ್ನತೆ ಇರುವುದೆಂದು ಹೇಳಿದರೂ, ಅವುಗಳಲ್ಲಿ ತರತಮ ಭಾವವಿದೆ ಎಂದು ಹೇಳಿಲ್ಲ. ಈ ಸಿದ್ಧಾಂತವನ್ನು ಒಪ್ಪುವ ಸ್ತ್ರೀವಾದಿಗಳು ಒಂದೇ ಸಂಸ್ಕೃತಿಯಲ್ಲಿ ಗಂಡು ಹೆಣ್ಣುಗಳಿಗೆ ಬೇರೆ ಬೇರೆ ವಾಸ್ತವಗಳಿರುವ ಮಾದರಿಯನ್ನು ರೂಪಿಸಲು ಮುಂದಾಗಬೇಕು. ಈ ನೆಲೆಯು ಬಾಯಿ ಕಟ್ಟಿದವರ ಮಾದರಿ ಮತ್ತು ಬಾಯಾಳಿಗಳ ಮಾದರಿ ಎನ್ನುವಂಥದು ಡೇಲ್ ಸ್ಪೆಂಡರ್‌ಳ ಕೃತಿಯ ಹಿಂದೆ ಕ್ರಿಯಾಶೀಲವಾಗಿದೆ. ಈ ಮಾದರಿ ಸ್ಥಾವರ ರೂಪಿ. ‘ನಿನಗೆ ನಿನ್ನ ವಾಸ್ತವ. ನಮಗೆ ನಮ್ಮದು’ ಎನ್ನುವ ಬಗೆಯದು. ಡೇಲ್ ಸ್ಪೆಂಡರ್‌ಳನ್ನು ಟೀಕಿಸುವ ಆನ್ ಬೀಜರ್, ಇದು ರಾಜಕೀಯವಾಗಿ ತುಂಬಾ ಸರಳವಾದ ತೀರ್ಮಾನ ಎನ್ನುತ್ತಾಳೆ. ಜಂಡರ್ ನೆಲೆಯಲ್ಲಂತೂ ವಾಸ್ತವಗಳು ಭಿನ್ನವಷ್ಟೇ ಅಲ್ಲ; ಒಂದು  ಇನ್ನೊಂದನ್ನು ಹತ್ತಿಕ್ಕುತ್ತಿರುತ್ತದೆ. ಗಂಡು ಹೆಣ್ಣುಗಳು ಭಿನ್ನರಾಗಿರುವಂತೆ ಅಸಮಾನತೆಯ ಸಂಬಂಧವನ್ನು ಹೊಂದಿರುವವರೂ ಆಗಿದ್ದಾರೆ.

ವಿ.ಎಲ್. ವೊಲೊಸಿನೊವ್ ಎಂಬ ಮಾರ್ಕ್ಸ್‌ವಾದಿ ಭಾಷಾಶಾಸ್ತ್ರಜ್ಞ ಮತ್ತು ತತ್ತ್ವಶಾಸ್ತ್ರಜ್ಞನ ವಿಚಾರಗಳನ್ನು ಬಳಸಿಕೊಂಡು ಬೀಜರ್ ತನ್ನ ವಾದವನ್ನು ಮಂಡಿಸಿದ್ದಾಳೆ. ಭಾಷೆ ಮತ್ತು ಸಂಕಥನಗಳ ಸಾಮರ್ಥ್ಯವೆಷ್ಟೆಂದರೆ ಅದರಿಂದ ಅದು ನಿಮ್ಮ ವಾಸ್ತವವು ಸಹಜ ಮತ್ತು ಸರ್ವಸಮ್ಮತಿಯುಳ್ಳದ್ದು ಎಂದು ನಂಬಿಸಬಲ್ಲದು. ಹೀಗೆ ನಂಬಿಸುವಾಗ ಅದಕ್ಕೆ ವಿರುದ್ಧವಾದ ಹಲವು ವಾಸ್ತವಗಳಿದ್ದರೂ ನಿಮ್ಮ ವಾಸ್ತವದ ಮಂಡನೆಗೆ ಅಧಿಕೃತತೆ ದೊರಕುವಂತೆ ಮಾಡಬಲ್ಲದು. ಈ ಮಾತು ಹೇಳುವಾಗ ಏನನ್ನೂ ಬದಲಿಸಬೇಕಾಗಿಲ್ಲ. ಅಧಿಕಾರ ಉಳ್ಳವರು ಸುಮ್ಮನೆ ಎಂದಿನಂತೆ ಭುಜ ಕುಣಿಸಿ ಮುಂದೆ ಹೋಗಲು ಅವಕಾಶವಿರುವುದಿಲ್ಲ. ಮತ್ತು ಅಧಿಕಾರವಿಲ್ಲದವರು ನಮ್ಮ ಆಲೋಚನೇಗಳೇ ಬೇರೆ ಎಂದು ಹೇಳುತ್ತಾ ಬಚ್ಚಿಟ್ಟುಕೊಂಡು ಕೂರಲು ಸಾಧ್ಯವಿಲ್ಲ. ತಮ್ಮ ವ್ಯಾಖ್ಯೆಯು ಮೌಲ್ಯಯುತವಾದದ್ದು, ಅದನ್ನು ಒಪ್ಪಬೇಕು ಎಂದು ಇತರರನ್ನು ತಮ್ಮ ತೆಕ್ಕೆಗೆ ಸೆಳೆಯಬೇಕು. ಅಂದರೆ, ಸಾಮಾಜಿಕ ಅರ್ಥಗಳು ಸಾಪೇಕ್ಷವಾಗಿದ್ದರೆ ಸಾಲದು. ಅವುಗಳನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸಬೇಕಾಗುತ್ತದೆ.

‘‘ಹೆಂಗಸರು ಹಾರ್ಮೋನ್‌ಗಳಿಗೆ ಅಧೀನರು’’ ಎಂಬ ವಿಚಾರಹೀನ ಹೇಳಿಕೆಗೆ ಸ್ತ್ರೀವಾದಿಗಳ ಸರಿಯಾದ ಪ್ರತಿಕ್ರಿಯೆ ಏನಿದ್ದೀತು ಎಂದು ನೋಡೋಣ. ‘‘ಹೌದೇ? ಅದು ನಿಮ್ಮ ಅನುಭವದಲ್ಲಿ ನಿಜವಿದ್ದೀತು. ನಮ್ಮ ಮಟ್ಟಿಗೆ ಅದು ನಿಜವಲ್ಲ ’’ ಎಂದಾರು. (ಅದಕ್ಕೆ ವಿಚಾರಹೀನ ಕಟ್ಟಾಳು ಹೀಗೆ ಹೇಳಬಹುದು – ‘ಹಾಗೋ? ನಿಮ್ಮ ವಾಸ್ತವದಲ್ಲಿ ತಕ್ಕ ಕೆಲಸ ಹುಡುಕಿಕೋ ಹೋಗು. ನೀನು ಹಾರ್ಮೋನುಗಳಿಗೆ ಅಧೀನಳು. ನಿನಗೆ ನಾನು ಕೆಲಸ ಕೊಡಲಾರೆ’ ಎನ್ನುವುದು ಖಂಡಿತ.) ಅಥವಾ ‘ಗಂಡಸರು ಹಾರ್ಮೋನುಗಳಿಗೆ ಅಧೀನರು ಎಂದು ಹೇಳಬಹುದಾದ ಅರ್ಥಪೂರ್ಣ ಪ್ರತಿಭಾಷೆಯೊಂದನ್ನು ಸ್ತ್ರೀವಾದಿಗಳು ಸೃಷ್ಟಿಸಬೇಕೇ?  ಇಲ್ಲಿ ತಾಕಲಾಟದ ಮಾತೇ ಇಲ್ಲ. ಅಂಥಾ ವಿಚಾರಹೀನ ಹೇಳಿಕೆಗೆ ‘ಶುದ್ದ ತಲೆಹರಟೆ ಎನ್ನುವುದೇ  ಸರಿಯಾದ ಪ್ರತಿಕ್ರಿಯೆ. ಸ್ತ್ರೀವಾದಿಗಳು ತಮ್ಮ ಪ್ರಸ್ತಾವಗಳು ‘ಹೆಂಗಸರು ತಮ್ಮ ಹಾರ್ಮೋನುಗಳಿಗೆ ಅಧೀನರು’ ಎಂಬ ಹೇಳಿಕೆಗಳು ಅರ್ಥಹೀನ ಎಂದು ತೋರಿಸುವಂತೆ ಇರಬೇಕು ಎಂದು ಬಯಸುತ್ತಾರೆ. ಆದರೆ, ಇಂಥ ಲೈಂಗಕತಾವಾದಿ ಹೇಳಿಕೆಗಳಲ್ಲಿ ಅಂತಸ್ಥವಾಗಿರುವ ಸಂಕಥನಗಳ ಕಡೆಗೆ ಕಣ್ಣುಮುಚ್ಚಿ ಕೂರಲಾಗುವುದಿಲ್ಲ. ಅವುಗಳಿಗೆ ಸವಾಲು ಹಾಕಲೇಬೇಕು.

ಈ ನಿಟ್ಟಿನಲ್ಲಿ, ಹೆಂಗಸರ ಭಾಷೆಗಾಗಿ ನಡೆಸುವ ಹುಡುಕಾಟ ಆಂಶಿಕ ಪರಿಹಾರವನ್ನು ಒದಗಿಸಬಲ್ಲದು. ಇನ್ನೊಂದು ಸಮಸ್ಯೆಯೆಂದರೆ, ಈ ಪರಿಹಾರ ಸಾಧ್ಯವಾಗುವುದು ಆದರ್ಶ ಸ್ಥಿತಿಯಲ್ಲಿ ಮಾತ್ರ. ಅಲ್ಲದೆ, ಅದಕ್ಕೆ ಚರಿತ್ರೆಯ ಬೆಂಬಲವಿಲ್ಲ. ಹೊಸ ಭಾಷೆಯ ಸೃಷ್ಟಿಯ ಮಾತು ಮನಸೆಳೆಯುತ್ತದೆ. ಎಲ್ಲವನ್ನೂ ಅಳಿಸಿ ನಾವೇ ಟಂಕಿಸಿದ ಪದಗಳಿಗೆ ನಮ್ಮದೇ ಅರ್ಥಗಳನ್ನು ತುಂಬಬಹುದೆಂಬ ಆಸೆ ಕೆರಳುತ್ತದೆ. ಈ ಕಾರಣಕ್ಕಾಗಿಯೇ ಇದು ಕಾರ್ಯಸಾಧುವಾಗದು ಎನಿಸುತ್ತದೆ. ನೀವು ಸುಮ್ಮನೆ ಚರಿತ್ರೆಯನ್ನು ಬದಿಗೆ ಸರಿಸಿ ಯಾವುದೋ ಕಾಲ್ಪನಿಕ ಗುಳ್ಳೆಯ ಮೇಲೆ ಭಾಷೆ ಇಲ್ಲವೇ ಅರ್ಥಗಳನ್ನು ಮೂಡಿಸಲಾರಿರಿ.  ನೀವು ಕೇವಲ ಆರಂಭಿಸಬಹುದು, ಬದಲಾವಣೆಗೆ ಯತ್ನಿಸಬಹುದು ಅಷ್ಟೇ.

ನಾವಿಲ್ಲಿ ಸ್ತ್ರೀವಾದಿಗಳು ಹೊಸ ಪದಗಳನ್ನು ಟಂಕಿಸಬಾರದು, ಅಥವಾ ಹೊಸ ವಿಚಾರಗಳನ್ನು ಭಾಷಿಕವಾಗಿ ಸಂಕೇತಿಸಬಾರದು ಎಂದು ಹೇಳುತ್ತಿಲ್ಲ. ಹಾಗೆ ನೋಡಿದರೆ, ಇದು ಅತ್ಯಗತ್ಯ ಕ್ರಮ. ಆದರೆ, ನಮ್ಮ ಗ್ರಹಿಕೆಗಳು ಮತ್ತು ಪದಗಳು ಹೊರಜಗತ್ತಿನಿಂದಾಗಿ ಅಶುದ್ಧಗೊಳ್ಳದೆ ಉಳಿಯುತ್ತವೆಂದೂ, ತಮ್ಮ ಪ್ರಭಾವವನ್ನು ಕಾಯ್ದುಕೊಳ್ಳುತ್ತವೆಂದೂ ಯೋಚಿಸುವುದು ತರವಲ್ಲ. ನಾವು ಸೃಷ್ಟಿಸಿದ ಪ್ರತಿಯೊಂದೂ ಚರಿತ್ರೆಯ ಜತೆಗೆ, ಸಹ ಬಾಳ್ವೆ ಮಾಡಬೇಕಾಗಿದೆ.  (ಸ್ತ್ರೀವಾದ ಎಂಬ ಪದದ ಈಚಿನ ಚರಿತ್ರೆಯನ್ನೇ ನೋಡಿ. ತಮ್ಮ ಚಳುವಳಿಯನ್ನು ಈ ಹೆಸರಿನಿಂದ ಕರೆದ ಹೆಂಗಸರು ಅದನ್ನು ಶುದ್ಧವಾಗಿ, ಮತ್ತು ಸಕಾರಾತ್ಮಕವಾಗಿ ಇರುವಂತೆ ನೋಡಿಕೊಳ್ಳುವಲ್ಲಿ ಸಫಲರಾಗಿಲ್ಲ.)

ಚರಿತ್ರೆಯ ಪ್ರಭಾವವನ್ನೂ ಮತ್ತು ಅಸಮಾನತೆಯ ಮುಂದುವರಿಕೆಯನ್ನೂ ನೀವು ಒಪ್ಪುವಿರಾದರೆ, (ಹಾಗೆ ಒಪ್ಪದಿರಲು ಸಾಧ್ಯವಿಲ್ಲ) ಆಗ ಲಾಡಾನ್ ಒಂದು ಭಾಷೆಯಾಗದೆ, ಕೇವಲ ‘ಪ್ರತಿಭಾಷೆ’ಯಾಗುತ್ತದೆ. Pig latin ಇಲ್ಲವೇ ಬೀದಿಗುಂಪುಗಳ ಭಾಷೆಗಳು ಹೀಗೆ ಪ್ರತಿಭಾಷೆಗಳಾಗಿರುತ್ತವೆ. ಗುಂಪಿನೊಳಗಿನ ಒಗ್ಗಟ್ಟನ್ನು ಕಾಯ್ದುಕೊಳ್ಳಲು ‘ಪ್ರತಿಭಾಷೆ’ಗಳು ನೆರವಾಗುತ್ತವೆ. ಆದರೆ ಪ್ರತಿರೋಧದ ಉಪಕರಣಗಳಾಗಿ ಸೋಲುತ್ತವೆ. ‘‘ಬೇರೆ ಬೇರೆ ವಾಸ್ತವ’’ಗಳನ್ನು ಆಧರಿಸಿದ ಯಾವುದೇ ಭಾಷಿಕ ತಂತ್ರವು ಹೀಗೆ ರಾಜಕೀಯವಾಗಿ ಕುಂಠಿತವಾಗುತ್ತದೆ. ಹೆಂಗಸರ ಭಾಷೆಯನ್ನು ಸೃಷ್ಟಿಸುವ ಕ್ರಿಯೆಯಷ್ಟು ಈ ತಂತ್ರಗಳು ತೀವ್ರವಾಗಿಲ್ಲದಿದ್ದರೂ ಅವುಗಳು ಕೊರತೆಯಿಂದ ಕೂಡಿರುತ್ತವೆ. ಒಂದೋ, ಅವುಗಳನ್ನು ಬಳಸಲಾಗುವುದಿಲ್ಲ, ಇಲ್ಲವೇ ಬಳಸಿದರೂ ಏನೂ ವ್ಯತ್ಯಾಸ ಉಂಟಾಗುವುದಿಲ್ಲ.

‘‘ಬೇರೆ ಬೇರೆ ವಾಸ್ತವಗಳ’’ ನೆಲೆಯು ಸೃಷ್ಟಿಸುವ ಸಮಸ್ಯೆಗಳು ಮತ್ತಷ್ಟಿವೆ. ಎಲ್ಲ ಹೆಂಗಸರೂ ಒಂದೇ ಬಗೆಯ ಗ್ರಹಿಕೆಗಳನ್ನು ಮತ್ತು ಅನುಭವಗಳನ್ನು ಹೊಂದಿರುತ್ತಾರೆಯೇ?  ಹೀಗಿದ್ದಾಗ ಮಾತ್ರ ಒಂದು ಭಾಷೆ ‘‘ಹೆಂಗಸರ ವಾಸ್ತವವನ್ನು ಹಿಡಿದಿಡಲು ಸಾಧ್ಯವಾಗುತ್ತದೆಯಲ್ಲವೇ? ಅಥವಾ ಹೆಂಗಸರ ವೈವಿಧ್ಯಮಯ ಅನುಭವಗಳನ್ನೆಲ್ಲ ಒಂದೇ ಚೌಕಟ್ಟಿನ ಸಾಮಾನ್ಯೀಕರಣಕ್ಕೆ ಒಳಪಡಿಸುತ್ತಿದ್ದೇವೆಯೇ? ಅಥವಾ ಅಧಿಕಾರವುಳ್ಳವರು ದುರ್ಬಲರಾದ ಅನ್ಯರನ್ನು ಕುರಿತು ‘ಅವರೆಲ್ಲ ಒಂದೇ’ ಎಂದು ಹೇಳುವ ಸುಳ್ಳನ್ನು ನಂಬಿ ನಾವು ‘ಸಾಮಾನ್ಯ ಭಾಷೆಯ ಕನಸನ್ನು’ ಕಾಣುತ್ತಿದ್ದೇವೆಯೇ? ಹೆಣ್ಣುಗಳದೆಂದು ಹೇಳಲಾದ (ಪಾಲನೆ, ಅಹಿಂಸೆ, ಪ್ರಕೃತಿ ಪ್ರೇಮ ಇತ್ಯಾದಿ) ಲಕ್ಷಣಗಳನ್ನು ‘ಸಾಕಾರರೂಪಕ್ಕೆ’ ಪರಿವರ್ತಿಸಿ ನಾವು ಈ ಪ್ರಯತ್ನದಲ್ಲಿ ತೊಡಗಿದ್ದೇವೆಯೇ? ನಿಜವಾಗಿ ಹೆಣ್ಣುತನವನ್ನು ಇಷ್ಟು ಸೀಮಿತ ಲಕ್ಷಣಗಳಲ್ಲಿ ವ್ಯಾಖ್ಯಾನಿಸುವ ಯತ್ನಗಳನ್ನು ನಿರಾಕರಿಸುವುದು ನಮ್ಮ ಗುರಿಯಲ್ಲವೇ?

Native tongue ನಲ್ಲಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಆದರೆ, ಈಚಿನ ವರ್ಷಗಳಲ್ಲಿ ಸ್ತ್ರೀವಾದಿಗಳು ಸಮಾನ ಅನುಭವಗಳು, ಇಲ್ಲವೇ ವಿಶ್ವಸೋದರಿತನ ಎಂಬ ಚೌಕಟ್ಟಿನೊಳಗೆ ಸಿಲುಕಿ ತಮ್ಮಲ್ಲೇ ಇರುವ ಭಿನ್ನತೆಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲವೆಂಬುದು ಸ್ಪಷ್ಟವಾಗಿದೆ.  ಹೆಣ್ಣುಸ್ವಭಾವವೆಂಬ ಸಾಮಾನ್ಯೀಕೃತ ವ್ಯಾಖ್ಯೆಯನ್ನೀಗ ಸಂದೇಹದಿಂದ ನೋಡಲಾಗುತ್ತಿದೆ. ಕಾಲ್ಪನಿಕ ಕತೆಯಾದ Native tongue ಸಾಮಾನ್ಯ ಭಾಷೆಯ ಕನಸನ್ನು ಒಂದು ಅತಿಗೆ ಒಯ್ದಿದೆ. ಸ್ತ್ರೀವಾದದ ಮೊದಮೊದಲ ಹಂತಗಳಿಗೆ ಇಂಥ ರಮ್ಯಕಲ್ಪನೆಗಳು ಆಕರ್ಷಕವಾಗಿದ್ದವು.  ಆದರೆ, ಈಗ ಹಲವು ಹೆಂಗಸರು ಅಂಥವುಗಳನ್ನು ಸರ್ವಾಧಿಕಾರತ್ವದ ದುಃಸ್ವಪ್ನಗಳೆಂದು ಹೇಳುತ್ತಿದ್ದಾರೆ.

ಸಮಾರೋಪ

ತೀವ್ರವಾದಿ ಸ್ತ್ರೀವಾದದ ಭಾಷಾಸಿದ್ಧಾಂತಗಳನ್ನು ವೂರ್ಫ್ ಮತ್ತು ಆರ್ವೆಲ್‌ರ ಚಿಂತನೆಗಳ ಮಿಶ್ರಣ ಎನ್ನಬಹುದು. ಭಾಷೆ ಒಂದು ನಿರ್ದಿಷ್ಟ ವಾಸ್ತವನ್ನು ರಚಿಸುತ್ತದೆ. ಹೀಗೆ ರಚಿಸುವವರು ಗಂಡಸರಾದ್ದರಿಂದ ಅವರು ಹೆಂಗಸರನ್ನು ತಮ್ಮ ಪ್ರಭಾ ವಲಯದಿಂದ ಹೊರಗಿಡುತ್ತಾರೆ. ಹೀಗೆ ರಚನೆಗೊಂಡ ವಾಸ್ತವ ಗಂಡು ಪರವಾಗಿರುತ್ತದೆ. ನಾವು ಈ ಲೋಕವನ್ನು ಗ್ರಹಿಸುವ ಬಗೆಯನ್ನು ಭಾಷೆ ನಿಯಂತ್ರಿಸುವುದರಿಂದ ಭಾಷೆಯ ಗಂಡುಪರ ನೆಲೆಗಳು ಅದನ್ನು ಕಲಿಯುವ ಪ್ರತಿಯೊಂದು ತಲೆಮಾರಿನಲ್ಲೂ ಸಾಂಸ್ಕೃತಿಕವಾಗಿ ಆವರ್ತನಗೊಳಿಸುತ್ತದೆ.  ಇದನ್ನು ಅರಿತ ಹೆಂಗಸರು ‘‘ತಮ್ಮ’’ ವಾಸ್ತವನ್ನು ಮಂಡಿಸಲು ತಕ್ಕ ಭಾಷೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

ನಾವಿಲ್ಲಿ ಪರಿಶೀಲಿಸಿದ ಸಿದ್ಧಾಂತಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಕೆಲವು ವೈರುಧ್ಯಗಳು ತಲೆಹಾಕಿವೆ. ಭಾಷೆಯು ವಾಸ್ತವವನ್ನು ಸೃಷ್ಟಿಸುವುದಾದರೆ, ಹೆಂಗಸರ ಪರ್ಯಾಯ ವಾಸ್ತವವನ್ನು ನಾವು ಎಲ್ಲಿ ನೆಲೆಗೊಳಿಸುವುದು? ಭಾಷೆಯ ಮೇಲೆ ಸಂಪೂರ್ಣ ಹಿಡಿತ ಗಂಡಸಿಗೆ ಇರುವುದಾದರೆ, ಹೆಂಗಸರು ಅವರಿಂದ ಭಾಷೆಯನ್ನು ಹೇಗೆ ಬಿಡಿಸಿಕೊಳ್ಳುತ್ತಾರೆ? ‘‘ನಮ್ಮದೇ ಭಾಷೆ’’ ಹೆಂಗಸರ ಸಮಸ್ಯೆಗಳನ್ನು ಪರಿಹರಿಸಬಲ್ಲದೇ, ಮತ್ತು ಹೆಂಗಸರ ವೈವಿಧ್ಯಮಯ ಅನುಭವಗಳು ಒಂದೇ ಅರ್ಥವ್ಯವಸ್ಥೆಗೆ ಹೊಂದಿಕೊಳ್ಳುತ್ತವೆಯೇ?

ಇವೆಲ್ಲ ಉತ್ತರವಿಲ್ಲದ ಪ್ರಶ್ನೆಗಳಂತೆ ತೋರುತ್ತವೆ. ನಾವು ಬಳಸಿದ ಸಿದ್ಧಾಂತಗಳು ನಮ್ಮನ್ನು ಎಲ್ಲಿಗೆ ಕರೆದೊಯ್ಯಬಲ್ಲವು ಎಂಬುದನ್ನು ಮುಂದಾಗಿ ಚಿಂತಿಸುವುದು ಅಗತ್ಯ.  ನಿಜ, ಪರಿಪೂರ್ಣತೆಯನ್ನು ಬಯಸುವುದು ತಪ್ಪು. ಆದರೆ, ವಿಧಿವಾದ ಮತ್ತು ನಿಯಂತ್ರಣಗಳ ನೆಲೆಗಳನ್ನು ಉದಾರವಾದಿ ಮನಸ್ಸಿನ ಸುಧಾರಕರು ಬದಿಗೆ ಸರಿಸಿದರೆ, ಆ ನೆಲೆಗಳನ್ನು ಒಪ್ಪಿದ ತೀವ್ರವಾದಿಗಳು ಇನ್ನೊಂದು ಅತಿಗೆ ಹೋಗುತ್ತಾರೆ.

Making Changes : The debate on sexist language.
– Silence Alienation and oppression:Feminist
models of Language Soure:Feminism
and Lingustic Theroy
-Deborah Cameron ೧೯೮೫