ಬರೆಹಗಾರ್ತಿಯರು ಗಂಡಸರು ಬರೆಯುವ ವಾಕ್ಯಗಳಿಗಿಂತ ಬೇರೆಯದೇ ಆದ ಬಗೆಯ ವಾಕ್ಯಗಳನ್ನು ರಚಿಸುತ್ತಾರೆಯೇ ಎನ್ನುವುದು ಸ್ತ್ರೀವಾದಿ ಸಾಹಿತ್ಯ ವಿಶ್ಲೇಷಣೆಯಲ್ಲಿ ಮೇಲಿಂದ ಮೇಲೆ ಚರ್ಚೆಗೆ ಬರುತ್ತಿರುವ ಪ್ರಶ್ನೆಯಾಗಿದೆ. ವರ್ಜಿನಿಯಾ ವೂಲ್ಫ್, ಬರೆಹಗಾರ್ತಿಯರು ತಮ್ಮದೇ ಆದ ವಾಕ್ಯಮಾದರಿಗಳನ್ನು ಬರೆಯುತ್ತಾರೆಂದೂ, ಆ ವಾಕ್ಯಗಳಿಗೆ ಸ್ತ್ರೀವಾಕ್ಯಗಳೆಂದೋ ಇಲ್ಲವೇ ಸ್ತ್ರೀಲಿಂಗೀ ವಾಕ್ಯಗಳೆಂದೋ ಕರೆಯಬೇಕೆಂದೂ (೧೯೨೯) ಹೇಳಿದ ಮೆಲೆ ಈ ಚರ್ಚೆ ಮೊದಲಾಗಿದೆ. ಕೆಲವು ಬರೆಹಗಾರ್ತಿಯರು ಗಂಡಸರ ವಾಕ್ಯರಚನೆಯಲ್ಲಿರುವ ಬಿಗಿ ಕಟ್ಟಡದ ರೀತಿಯನ್ನು ಬಿಟ್ಟುಕೊಟ್ಟು ವಾಕ್ಯ ಬರೆಯುವರೆಂದು ವೂಲ್ಫ್ ತಿಳಿದಿದ್ದಳು.  ಫ್ರೆಂಚ್ ಸ್ತ್ರೀವಾದಿಗಳಾದ ಲ್ಯೂಸ್ ಇರಿಗೆರೆ ಮತ್ತು ಹೆಲನ್ ಸಿಕ್ಸೂ ಅವರ ಚಿಂತನೆಗಳು ಬೇರೊಂದು ಬಗೆಯಲ್ಲಿ ವೂಲ್ಫ್‌ಳ ವಿಚಾರಗಳನ್ನು ಮುಂದುವರೆಸಿದವು. (ಇರಿಗೆರೆ ೧೯೮೫; ಸಿಕ್ಸೂ – ೧೯೭೬)  ಇವರೆಲ್ಲ ಗಂಡಸರು ಮತ್ತು ಹೆಂಗಸರ ವಾಕ್ಯರಚನೆಗಳು ಬೇರೆ ಬೇರೆಯಾಗಿರುತ್ತವೆ ಎಂದು ಹೇಳಿದರೂ ಅವರ ವಿಚಾರ ಮಂಡನೆಗಳು ಅಮೂರ್ತವಾಗಿಯೇ ಉಳಿದಿವೆ. ಏಕೆಂದರೆ, ಅವರು ತಮ್ಮ ಚಿಂತನೆಗಳನ್ನು ಸ್ಪಷ್ಟಪಡಿಸಲು ತಕ್ಕ ಉದಾಹರಣೆಗಳನ್ನು ನೀಡುವುದಿಲ್ಲ.

ನಾನೀಗ ಅಂಥ ಪ್ರಯತ್ನಕ್ಕೆ ತೊಡಗುತ್ತೇನೆ. ಜಂಡರ್‌ಲೇಪಿತ ವಾಕ್ಯ ಎಂಬುದು ಇದೆಯೇ ಎನ್ನುವುದನ್ನು ಪರಿಶೀಲಿಸುತ್ತೇನೆ. ಭಾಷಾಶಾಸ್ತ್ರಜ್ಞರು ಹೆಂಗಸರ ಮಾತಿನ ಬಗೆಯು ಗಂಡಸರ ಮಾತಿನ ಬಗೆಗಿಂತ ಬೇರೆಯಾಗಿರುವದೆಂದು ತೋರಿಸಿಕೊಟ್ಟಿದ್ದಾರೆ. ಈ ಭಿನ್ನತೆಯ ಮಾದರಿಯನ್ನು ಮೊದಲು ನೋಡೋಣ. ಬಳಿಕ, ಬರವಣಿಗೆಯಲ್ಲೂ ಈ ಭಿನ್ನತೆ ಇದೆಯೇ ಎಂಬುದನ್ನು ಪರಿಶೀಲಿಸಬಹುದು. ಅನಂತರ, ವೂಲ್ಫ್, ಸಿಕ್ಸೂ, ಇರಿಗೆರೆಯವರ ವಿಶ್ಲೇಷಣೆಗಳನ್ನು ಬಳಸಿಕೊಂಡು ಚರ್ಚೆಯನ್ನು ಮುಂದುವರೆಸಬಹುದು. ಭಾಷಾಶಾಸ್ತ್ರಜ್ಞರು ಬರವಣಿಗೆಯ ನೆಲೆಯಲ್ಲೂ ಗಂಡಸರು ಮತ್ತು ಹೆಂಗಸರು ತೋರಿಸುವ ವ್ಯತ್ಯಾಸಗಳನ್ನು ಗುರುತಿಸಿದ್ದಾರೆ. ನಮ್ಮ ಚರ್ಚೆಗೆ ಈ ನೆಲಯಿಂದಲೂ ಮಾಹಿತಿಗಳನ್ನು ಪಡೆದುಕೊಳ್ಳೋಣ.

ನನ್ನ ಪ್ರಮೇಯವೊಂದಿದೆ. ಅದನ್ನು ಮೊದಲಿಗೆ ಹೇಳುತ್ತೇನೆ. ಮಾನಿಕ್ ವಿಟಿಗ್ (೧೯೮೩) ಅವರು, ಗಂಡಸರು ಮತ್ತು ಹೆಂಗಸರು ಬೇರೆ ಬೇರೆ ಬಗೆಯಲ್ಲಿ ಬರೆಯುತ್ತಾರೆ ಎನ್ನುವ ವಿಚಾರವನ್ನು ನಿರಾಕರಿಸುತ್ತಾರೆ. ನಾನೂ ಈ ಪಕ್ಷದವಳೇ. ಪಠ್ಯವನ್ನು ಕಟ್ಟುವಲ್ಲಿ ಜಂಡರ್‌ನ ಪಾತ್ರವೇನು? ಅದಕ್ಕೇನೂ ಪಾತ್ರವಿಲ್ಲವೆ? ಸಾಂದ್ರಾಗಿಲ್‌ಬರ್ಟ್ ಮತ್ತು ಸೂಸನ್ ಗುಬರ್ (೧೯೮೮)  ಈ ಬಗ್ಗೆ ಒಂದು ವಿಚಾರವನ್ನು ಮಂಡಿಸಿದ್ದಾರೆ. ಅವರ ಪ್ರಕಾರ ಬರೆಹಗಾರ್ತಿಯರಲ್ಲಿ ಎರಡು ಬಗೆಯವರಿದ್ದಾರೆ. ಮೊದಲ ಬಗೆಯವರು ಮುಖ್ಯಧಾರೆಯ  ಅಂದರೆ, ಪುರುಷ ಮಾದರಿಯ, ಅನುಕರಣೆಗಾಗಿ ಹೆಣಗುತ್ತಾರೆ.  ಎರಡನೇ ಬಗೆಯವರು ಅಲ್ಪಸಂಖ್ಯಾತರು. ಅವರು ಬೇರೆ ರೀತಿಯಲ್ಲಿ ಬರೆಯ ಬೇಕೆನ್ನುವವರು. ಇಬ್ಬರೂ ಎಚ್ಚರದಲ್ಲೇ ತಮ್ಮ ಈ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಬರೆಹಗಾರ್ತಿಯರ ಬರವಣಿಗೆಯಲ್ಲಿ ಈ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವೆಂಬುದು ನನ್ನ ಪ್ರಮೇಯ. ಇದಕ್ಕೊಂದು ಶರಾ ಕೂಡಾ ಇದೆ. ಬರೆಹಗಾರ್ತಿಯರ ಬರವಣಿಗೆಯನ್ನು ನೋಡುವ, ಮೌಲ್ಯಮಾಪನ ಮಾಡುವ ನೆಲೆಯೇ ಬೇರೆಯಾಗಿರುತ್ತದೆ ಎಂಬ ಚಿಂತನೆಯೊಂದಿದೆ. ಹೀಗೆ ಬೇರೆ ರೀತಿಯಲ್ಲಿ ಮೌಲ್ಯಮಾಪನ ಮಾಡುವ ಬಗೆಯೇ ಬರೆಹಗಾರರ ಮತ್ತು ಬರೆಹಗಾರ್ತಿಯರ ಬರವಣಿಗೆಗಳು ಭಿನ್ನವಾಗಿ ತೋರಲು ಒಂದು ಕಾರಣವಾಗಿದೆ.

ವರ್ಜಿನಿಯಾ ವೂಲ್ಫ್ ಮತ್ತು ಫ್ರೆಂಚ್ ಸ್ತ್ರೀವಾದಿಗಳನ್ನು ಒಟ್ಟಾಗಿ ಇರಿಸಿ ಚರ್ಚಿಸುವುದು ಅಪರೂಪ. ಆದರೆ, ಭಾಷೆ, ಬರವಣಿಗೆ ಮತ್ತು ಜಂಡರ್ ಕುರಿತು ಇವರೆಲ್ಲರೂ ಮಂಡಿಸುವ ವಿಚಾರಗಳಲ್ಲಿ ಅಚ್ಚರಿ ತರುವ ಹೋಲಿಕೆಗಳಿವೆ. ಪರಿಭಾಷೆ ಬೇರೆಯಾದರೂ, ನಿಲುವುಗಳಲ್ಲಿ ಸಮಾನತೆಯಿದೆ. ಅದರಿಂದಾಗಿಯೇ ಒಂದೇ ಬಗೆಯ ಗೊಂದಲಕ್ಕೆ ಅವರೆಲ್ಲರ ಬರವಣಿಗೆಗಳೂ ಕಾರಣವಾಗಿವೆ. ಸ್ತ್ರೀ ಮತ್ತು ಸ್ತ್ರೀತ್ವ ಕುರಿತು ನಡೆಸುವ ಚರ್ಚೆಗಳೆಲ್ಲ ಒಂದಲ್ಲ ಒಂದು ವಿಧದಲ್ಲಿ ಪುರುಷ ಮತ್ತು ಪುರುಷತ್ವಗಳ ಜೊತೆಯ ಹೋಲಿಕೆಯೊಡನೆ ಮೊದಲಾಗಿ ಅಲ್ಲಿಯೇ ಕೊನೆಗೊಳ್ಳುತ್ತವೆ. ವ್ಯತ್ಯಾಸವನ್ನು ಗುರುತಿಸುವುದೇ ಗುರಿಯಾಗಿಬಿಡುತ್ತದೆ.  ಬರೆಹಗಾರ್ತಿಯರ ವಾಕ್ಯಸ್ವರೂಪವನ್ನು ಚರ್ಚಿಸುವವರೂ ಇದೇ ಹಾದಿ ಹಿಡಿಯುತ್ತಾರೆ.  ಗಂಡಸರ ವಾಕ್ಯಗಳು ಪ್ರಮಾಣಬದ್ಧವೆನಿಸಿ ಅದಕ್ಕಿಂತ ಹೆಂಗಸರ ವಾಕ್ಯಗಳು ಹೆಗೆ ಬೇರೆ ಅಥವಾ ಬೇರೆಯಲ್ಲ ಎಂಬ ನೆಲೆಯಲ್ಲೇ ಜಾಡು ಸವೆಸುತ್ತವೆ. ಈ ಮಾದರಿಯನ್ನು ಶಿಶ್ನಕೇಂದ್ರಿತ ಎನ್ನುತ್ತಾರೆ. (ಎಲ್ಮನ್ ೧೯೬೮) ಶಿಶ್ನಕೇಂದ್ರಿತ ಚಿಂತನೆಗಳು ತಾತ್ತ್ವಿಕ ಚರ್ಚೆಗಳಲ್ಲಿ ಗಂಡಸನ್ನು ಕೇಂದ್ರದಲ್ಲಿ ಇರಿಸಿಕೊಳ್ಳುತ್ತವೆ. ಆತನನ್ನು ಎಲ್ಲ ಮಾನವಜೀವಿಗಳ ಪ್ರತಿನಿಧಿ ಎಂದು ತಿಳಿಯುತ್ತವೆ. ಆದರೆ, ಮಾನಿಕ್ ವಿಟಿಗ್ ಹೇಳುವುದನ್ನು ಕೇಳಿ : ‘‘ಎರಡು ಜಂಡರ್‌ಗಳಿಲ್ಲ. ಇರುವುದೊಂದೇ. ಅದೇ ಸ್ತ್ರೀತ್ವ.  ಏಕೆಂದರೆ, ಪುರುಷತ್ವ ಎಂಬುದು ಜಂಡರ್ ಅಲ್ಲ. ಪುರುಷತ್ವವನ್ನು ಪುರುಷರಿಗೆ ಮಾತ್ರ ಅನ್ವಯಿಸದೆ, ಎಲ್ಲ ಮಾನವರಿಗೂ ಅನ್ವಯಿಸುವುದೇ ಇದಕ್ಕೆ ಕಾರಣ’’ (೧೯೮೩).

ಹೆಂಗಸರ ಮಾತು?

ಹೆಂಗಸರ ಮಾತುನ್ನು ಅಧ್ಯಯನ ಮಾಡುತ್ತಿರುವ ಭಾಷಾಶಾಸ್ತ್ರಜ್ಞರ ಚಿಂತನೆಗಳಲ್ಲಿ ಶಿಶ್ನಕೇಂದ್ರಿತ ನೆಲೆ ಇರುವುದನ್ನು ಈ ಹಂತದಲ್ಲಿ ಪರಿಶೀಲಿಸುವುದು ಉಪಯುಕ್ತ.  ಸ್ತ್ರೀವಾದಿಗಳೂ ಮತ್ತು ಸ್ತ್ರೀವಾದ ವಿರೋಧಿಗಳೂ ಹೆಂಗಸರು ಗಂಡಸರಿಗಿಂತ ಬೇರೆ ರೀತಿಯಲ್ಲಿ ಮಾತಾಡುವರೆಂಬುದನ್ನು ವಿವರಿಸಲು ಮತ್ತು ಅದಕ್ಕೊಂದು ತಾತ್ತ್ವಿಕ ನೆಲೆ ನೀಡಲು ಯತ್ನಿಸಿದ್ದಾರೆ. (ಇಲ್ಲಿಯೂ ಗಂಡಸನ್ನೇ ಪ್ರಮಾಣಬದ್ಧ ಎಂದು ಪರಿಗಣಿಸಿ, ಹೆಂಗಸನ್ನು ಅವನಿಗೆ ಹೋಲಿಸುವುದನ್ನು ಗಮನಿಸಬಹುದು) ಗಂಡಸರು ಎಲ್ಲ ಮಾನವರನ್ನು ಪ್ರತಿನಿಧಿಸುತ್ತಾರೆಂದು ನಂಬಿದ್ದರಿಂದ, ಅವರ ಮಾತಿನ ವಿಧಾನವೇ ಪ್ರಮಾಣಬದ್ಧವಾಗಿದೆ, ಹೆಂಗಸಿನ ಮಾತಿನ ವಿಧಾನ ಒಂದು ವಿಕಲ್ಪವಾಗಿ ಕಂಡಿದೆ. ಇಂಗ್ಲಿಶ್ ಭಾಷೆ ಹಾಗಿರಲಿ ಕೋಆಸ್ಟಿ(Koasti) ಭಾಷೆಯನ್ನು ಮೇಲಿಂದ ಮೇಲೆ ಉಲ್ಲೇಖಿಸುವವರು, ಆ ಭಾಷೆಯಲ್ಲಿ ಹೆಂಗಸರು ಬಳಸುವ ಎಷ್ಟೋ ಪದಗಳು ಗಂಡಸರ ಬಳಕೆಗೆ ದೊರಕುವುದಿಲ್ಲ ಎಂದು ಹೇಳುತ್ತಲೇ ಇದ್ದಾರೆ. ಹೀಗಿದ್ದರೂ, ಹೆಂಗಸರ ಭಾಷೆಯನ್ನು ಒಂದು ವಿಕಲ್ಪ ಎಂದೇ ಹೇಳುವುದು ಮಾತ್ರ ನಿಂತೇ ಇಲ್ಲ. ಮೊದಮೊದಲು ಈ ಕುರಿತು ಅಧ್ಯಯನ ಮಾಡಿದ ಉದಾರವಾದಿ ಸ್ತ್ರೀವಾದಿಯಾಗಿದ್ದ ರಾಬಿನ್ ಲೆಕಾಫ್ (೧೯೭೫) ಮತ್ತು ಸ್ತ್ರೀವಾದಿ ಯಾಗಿದ್ದ ಡೇಲ್ ಸ್ಪೆಂಡರ್ (೧೯೮೦) ಮುಂತಾದವರು ಹೆಂಗಸರು ಗಂಡಸರಿಗಿಂತ ಬೇರೆ ಬಗೆಯಲ್ಲಿ ಮಾತಾಡುತ್ತಾರೆಂದೂ, ‘ಹೆಂಗಸರ ಭಾಷೆ’ ಎಂಬುದೊಂದು ಇದೆಯೆಂದೂ ವಾದಿಸಿದರು.  ಗಂಡುಹೆಣ್ಣುಗಳ ನಡುವೆ ಇರುವ ಅಧಿಕಾರ ಹಂಚಿಕೆಯ ತಾರತಮ್ಯವೇ ಈ ಭಾಷೆಯ ಹುಟ್ಟಿಗೆ ಕಾರಣವೆಂದೂ ವಾದಿಸಿದರು. ಇವರು ಹೆಂಗಸಿನ ಭಾಷೆಯ ಲಕ್ಷಣಗಳನ್ನಷ್ಟು ಪಟ್ಟಿ ಮಾಡಿದ್ದಾರೆ. ಮಾತಿನಲ್ಲಿ ಹಿಂಜರಿಕೆ, ನಿರರ್ಗಳವಾಗಿ ಮಾತಾಡದಿರುವುದು, ತರ್ಕಕ್ಕೆ ಹೆಚ್ಚು ಕಟ್ಟು ಬೀಳದಿರುವುದು, ತನ್ನ ಅಭಿಪ್ರಾಯವನ್ನು ಗಟ್ಟಿಯಾಗಿ ಮುಂದಿಡದಿರುವುದು – ಇವೆಲ್ಲ  ಅಂಥ ಲಕ್ಷಣಗಳು. ಅವರು ಹೇಳುವಂತೆ ಹೆಂಗಸರು ಹೆಚ್ಚು ಮೌನಿಗಳು. ಮಾತುಕತೆಗಳ ನಡುವೆ ಗಂಡಸರಷ್ಟು ಹೆಚ್ಚಾಗಿ ತಲೆತೂರಿಸುವುದಿಲ್ಲ. ಹೌದು, ಇಲ್ಲ ಎಂಬ ಉತ್ತರ ಬಯಸುವ ಪ್ರಶ್ನೆಗಳನ್ನು ಹೆಚ್ಚು ಕೇಳುತ್ತಾರೆ. ಮಾತುಕತೆಗಳಲ್ಲಿ ಪೋಟಿ ಹೂಡುವುದಕ್ಕಿಂತ ಸಹಕರಿಸಿ ಮುಂದುವರೆಯುವ ಹಾದಿ ಹಿಡಿಯುತ್ತಾರೆ. ಇಂಥ ಅಧ್ಯಯನಗಳು ಹೆಂಗಸರು ತಮ್ಮ ಭಾಷೆಯನ್ನು ರೂಪಿಸಿಕೊಳ್ಳಲು, ಗಂಡಸರ ಮಾದರಿಗಿಂತ ಬೇರೆಯದೇ ಹಾದಿ ಹಿಡಿಯುತ್ತಾರೆಂದು ನೇರವಾಗಿ ಎಲ್ಲೂ ಹೇಳುವುದಿಲ್ಲ. ಅಂದರೆ, ಗಂಡಸರ ಮಾದರಿ ಪ್ರಮಾಣಬದ್ಧವೆಂದು ಒಪ್ಪಿಕೊಂಡು ಮುಂದುವರೆದಂತೆ ತೋರುವುದಿಲ್ಲ.

ಈಚೆಗೆ ಈ ವಲಯದಲ್ಲಿ ಕೆಲಸ ಮಾಡಿದವರೆಂದರೆ ಡೆಬೋರಾ ಕ್ಯಾಮರಾನ್(೧೯೮೭) ಮತ್ತು ಜೆನ್ನಿಫರ್ ಕೋಟ್ಸ್ (೧೯೮೬). ಇವರು, ಮೇಲೆ ಹೇಳಿದ ಅಧ್ಯಯನಗಳನ್ನು ಸ್ತ್ರೀವಾದಿಗಳೇ ನಡೆಸಿದ್ದರೂ ಅವರು ಪುರುಷ ಭಾಷಾಶಾಸ್ತ್ರಜ್ಞರು ಹಾಕಿಕೊಟ್ಟ ಚೌಕಟ್ಟುಗಳನ್ನು ಇರುವಂತೆಯೇ ಪಾಲಿಸುವವ ಎನ್ನುತ್ತಾರೆ. ಅಂದರೆ, ಹೆಂಗಸರು ಗಂಡಸರಷ್ಟು ಪರಿಪೂರ್ಣರಲ್ಲ ಎಂಬ ಚೌಕಟ್ಟನ್ನು ತಮಗೇ ಗೊತ್ತಿಲ್ಲದಂತೆ ಒಪ್ಪಿಕೊಂಡಿರುತ್ತಾರೆ. ಲಿಂಗಾಧಾರಿತ ವ್ಯತ್ಯಾಸಗಳನ್ನು ಗುರಿಯಾಗಿಟ್ಟುಕೊಂಡ ಅಧ್ಯಯನಗಳಲ್ಲಿ ಬಹುಪಾಲು ಸ್ತ್ರೀಯರ ಅಧೀನತೆಯನ್ನೇ ವಿವರವಾಗಿ ಸಮರ್ಥಿಸುತ್ತವೆ ಎಂದೂ, ಹಾಗೆ ಮಾಡುತ್ತಿರುವುದು ಅಂಥ ಅಧ್ಯಯನಕಾರರಿಗೆ ತಿಳಿದಿರಲಿಲ್ಲವೆಂದೂ’’ ಕ್ಯಾಮರಾನ್ ಹೇಳುತ್ತಾರೆ. (೧೯೮೫) ಹೀಗಾಗಿ ಲೆಕಾಫ್ ಮುಂತಾದವರ ನಿಲುವುಗಳನ್ನು ಪ್ರಶ್ನಿಸಲಾಗಿದೆ. ತಾವು ಮೊದಲೇ ನಂಬಿದ್ದನ್ನು ಒಪ್ಪುವ ಮಾಹಿತಿಯನ್ನಷ್ಟೇ ಈ ಅಧ್ಯಯನಕಾರರು ಗಮನಿಸಿದರೇ ಹೊರತು ಅದಕ್ಕೆ ವಿರುದ್ಧವಾದ ನಿಲುವನ್ನು ಮಂಡಿಸಲು ನೆರವಾಗುತ್ತಿದ್ದ ಮಾಹಿತಿಗಳನ್ನು ನಿರಾಕರಿಸಿದರು.  ಉದಾಹರಣೆಗೆ, ಗಂಡಸರ ಮಾತಿನಲ್ಲೂ ಹಿಂಜರಿಕೆ, ತರ್ಕಶೂನ್ಯತೆ ಇರುವ ಬಗ್ಗೆ ಮಾಹಿತಿ ಇದೆಯಷ್ಟೇ? ಈ ಅಧ್ಯಯನಗಳಲ್ಲಿ ಇನ್ನೊಂದು ದೋಷ ಇದೆ. ಮಾತುಕತೆಗಳಲ್ಲಿ ಸ್ತ್ರೀಸಂಬಂಧಿ ನೆಲೆಗಳನ್ನು ಗುರುತಿಸುವಾಗ ಅವರು ಸಾಮಾನ್ಯವಾಗಿ ಯಾವುದನ್ನು ಮಾತಿನ ಕೊರತೆಯ ಅಂಶಗಳು ಎಂದು ತಿಳಿಯಲಾಗಿತ್ತೋ ಅದನ್ನಷ್ಟೇ ನೆಮ್ಮಿದರು. ಇದಕ್ಕೆ ಪರ್ಯಾಯವಾದ ಒಂದು ಮಾದರಿಯನ್ನು ನೋಡೋಣ. ಈಸ್ಟ್ ಆಂಗ್ಲಿಯಾದ ದುಡಿಯುವ ವರ್ಗದ ಜನರ ಭಾಷಾಂಶಗಳನ್ನು ಪೀಟರ್ ಟ್ರಡ್‌ಗಿಲ್(೧೯೭೨) ಅಧ್ಯಯನ ಮಾಡಿದ್ದಾರೆ.  ಅವರು ಹೇಳುವಂತೆ, ಬ್ರಿಟನ್‌ನ ದುಡಿಯುವ ಮಹಿಳೆಯರು ತಮ್ಮ ಸಾಮಾಜಿಕ ವರ್ಗಕ್ಕಿಂತ ಮೇಲಿರುವ ಸಾಮಾಜಿಕ ವರ್ಗದ ಭಾಷಾಂಶಗಳನ್ನು ಹೆಚ್ಚಾಗಿ ಬಳಸುತ್ತಾರೆಂದೂ, ಹೀಗಾಗಿ ಅವರ ಮಾತಿನ ಪದ್ಧತಿ ಹೆಚ್ಚು ಸಂಪ್ರದಾಯ ಬದ್ಧವಾಗಿರುತ್ತದೆಂದೂ ಹೇಳಿದ್ದಾರೆ. ಆದರೆ, ಈ ತಂತ್ರವನ್ನು ದುಡಿಯುವ ವರ್ಗದ ಗಂಡಸರು ಅನುಸರಿಸುವುದಿಲ್ಲ. ತಮ್ಮ ಸಾಮಾಜಿಕ ವರ್ಗದ ಭಾಷಾಂಶಗಳನ್ನು ಹೆಚ್ಚು ಹೆಚ್ಚು ಬಳಸಿ, ಆ ಮೂಲಕವೇ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾರೆಂದು ನಿರೂಪಿಸಿದ್ದಾರೆ. ಇಲ್ಲಿ ಗಂಡಸರ ಭಾಷಾಬಳಕೆಯನ್ನು ಗುಣಾತ್ಮಕವಾಗಿ ನೋಡಿದ್ದರೆ, ಹೆಂಗಸರ ಭಾಷಾಬಳಕೆಗೆ ಋಣಾತ್ಮಕ ಲೇಪವಿದೆ.  ಮಡಗಾಸ್ಕರ್‌ನಲ್ಲಿ ಗಂಡಸರ ಭಾಷೆ ಹೆಚ್ಚು ಸಂಪ್ರದಾಯಶೀಲವಾಗಿರುತ್ತದೆ. ಅಲ್ಲಿ ಭಾಷಾಶಾಸ್ತ್ರಜ್ಞರಿಗೆ ಈ ಅಂಶವೇ ಧನಾತ್ಮಕವಾಗಿ ಬದಲಾಗಿಬಿಡುತ್ತದೆ. ಡೆಬೊರಾ ಕ್ಯಾಮರಾನ್ ಈ ಗೋಜಲನ್ನು ವಿವರಿಸಲು ಯತ್ನಿಸಿದ್ದಾರೆ. ಸಾಮಾಜಿಕ ಭಾಷಾಶಾಸ್ತ್ರದ ಅಧ್ಯಯನಗಳಲ್ಲಿ ಲೈಂಗಿಕತಾವಾದವು ಪ್ರಮೇಯಗಳ ಮಂಡನೆ, ಮತ್ತು ಮಾಹಿತಿಗಳ ವಿಶ್ಲೇಷಣೆಯಲ್ಲಿ ಬೆರೆತುಹೋಗಿರುತ್ತದೆ. ಇದು ಶಿಶ್ನಕೇಂದ್ರಿತ ಮಾದರಿ. ಗಂಡಸರ ಮಾತಿನ ಬಗೆಯೇ ಸ್ಥಾಯಿಯಾದುದೆಂದೂ ಹೆಂಗಸಿನ ಮಾತು ಅದರ ವಿಕಲ್ಪವೆಂದೂ ವಾದಿಸುತ್ತಾರೆ. ಈ ವಿಶ್ಲೇಷಣೆಯ ಚೌಕಟ್ಟೇ ಬರೆಹಗಾರ್ತಿಯರ ಭಾಷೆಯ ಅಧ್ಯಯನಗಳಲ್ಲೂ ಯಥಾಕ್ರಮವಾಗಿ ಅನುಕರಣೆಗೊಂಡಿದೆ.

ಹೆಣ್ಣುವಾಕ್ಯ (ecriture feminine)

ನಾವೀಗ ಸಾಹಿತ್ಯ ಬರೆಹಗಳಲ್ಲಿ ಗಂಡು ಮತ್ತು ಹೆಣ್ಣು ವಾಕ್ಯಗಳ ಚರ್ಚೆಗೆ ಹೋಗೋಣ. ಈ ಬಗ್ಗೆ ಈವರೆಗೆ ನಡೆದಿರುವ ಚರ್ಚೆಯನ್ನು ಮೊದಲು ಮಾಡಿದಾಕೆ ವರ್ಜಿನಿಯಾ ವೂಲ್ಫ್. ಆಕೆಯೇ ‘ಹೆಣ್ಣುವಾಕ್ಯ’ದ ಚಹರೆಗಳನ್ನು ಹೇಳಿದ್ದು.  ಆದ್ದರಿಂದ, ಅವರ ಮಾತಿನಿಂದಲೇ ಮೊದಲು ಮಾಡುವುದು ಸೂಕ್ತ. ‘‘ಹೆಂಗಸು ತನಗೆ ಬೇಕಾದ ಹಾಗೆ ಬರೆಯಲು ಹೊರಟಾಗ ಎಷ್ಟೋ ಕೋಟಲೆಗಳನ್ನು ಎದುರಿಸಬೇಕಾಗುತ್ತದೆ.  ಅವುಗಳಲ್ಲಿ ಮೊದಲನೆಯದು ಮೇಲ್ನೋಟಕ್ಕೆ ತುಂಬಾ ಸರಳವಾಗಿ ಕಾಣುವ ತಾಂತ್ರಿಕ ಕಷ್ಟ.  ಆದರೆ, ದಿಟವಾಗಿಯೂ ಇದು ಕಂಗೆಡಿಸುವಂಥದ್ದು. ವಾಕ್ಯಗಳ ಸ್ವರೂಪವೇ ಅವಳಿಗೆ ಹೊಂದಿಕೆಯಾಗುವಂತಿಲ್ಲ. ಈ ವಾಕ್ಯಗಳ ಕಟ್ಟೋಣವನ್ನು ಮಾಡಿದವನು ಗಂಡಸು. ಉದ್ದಕ್ಕೆ,  ಬಿಗುವಿಲ್ಲದೆ, ಭಾರವಾಗಿ, ಮೆರವಣಿಗೆ ಹೊರಡುವ ಈ ವಾಕ್ಯಗಳು ಹೆಂಗಸಿಗೆ ಹೊಂದುವುದಿಲ್ಲ.  ಒಂದು ಕಾದಂಬರಿ ಬರೆಯುವಾಗ ಎಷ್ಟೊಂದು ವಿವರಣೆಗಳನ್ನು ನೀಡಬೇಕಾಗುತ್ತದೆ!  ಅವುಗಳಲ್ಲೆಷ್ಟೋ ದಿನದಿನದ ಸಣ್ಣ ಸಂಗತಿಗಳು. ಓದುಗರು ಈ ಕಾದಂಬರಿ ಜಗತ್ತಿನ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಸರಾಗವಾಗಿ ಹೋಗಲು ನೆರವಾಗುವ ಹೊಸಬಗೆಯ ವಾಕ್ಯಗಳನ್ನು ಕಟ್ಟಬೇಕು. ಹೆಂಗಸು ಈಗಿರುವ ವಾಕ್ಯಗಳನ್ನೇ ಬಳಸಿಕೊಂಡು ಅದರಲ್ಲಿ ಬೇಕಾದ ಬದಲಾವಣೆ ಮಾಡುತ್ತ ತನ್ನ ಆಲೋಚನೆಗಳನ್ನು ನಾಶಮಾಡದ, ಸೊಟ್ಟಗಾಗಿಸದ ಹೊಸಬಗೆಯ ವಾಕ್ಯಗಳನ್ನು ಕಟ್ಟಿಕೊಳ್ಳಬೇಕು.

ಈ ಮಾತು ಹೇಳುವಾಗ ವೂಲ್ಫ್ ‘ಭಾಷೆ ದಿಟವಾಗಿ ಗಂಡಸು ರಚಿಸಿದ್ದು’  ಎಂದು ಮುಂದೆ ಎಂದೋ ಡೇಲ್ ಸ್ಪೆಂಡರ್ ಹೇಳಿದ ಮಾತನ್ನು ಮೊದಲೇ ಕಣಿ ನುಡಿದಂತಿದೆ. ಸ್ಪೆಂಡರ್ ಹೇಳುವಂತೆ ಗಂಡಸರ ಅಗತ್ಯಗಳಿಗೆ ತಕ್ಕಂತಿರುವ ಭಾಷೆಯಲ್ಲಿ ಹೆಂಗಸರು ತಮ್ಮ ವಿಚಾರ ಅನಿಸಿಕೆಗಳನ್ನು ತಿಳಿದಿರಲಾರರು. (ಸ್ಪೆಂಡರ್ -೧೯೮೦) ಆದ್ದರಿಂದ, ಹೆಂಗಸರು ತಮ್ಮದೇ ಭಾಷೆಯೊಂದನ್ನು ಕಟ್ಟಿಕೊಳ್ಳಬೇಕೆಂಬುದು ವೂಲ್ಳ್ ನಿಲುವು. ಆಕೆ ಡರೋತಿ ರಿಚರ್ಡ್‌ಸನ್ ಅವರ ಬರವಣಿಗೆಯ ಬಗ್ಗೆ ಮಾತಾಡುವಾಗ, ಈ ಬರೆಹಗಾರ್ತಿ ‘ಸ್ತ್ರೀಲಿಂಗಿಯಾದ ಮಾನಶಾಸ್ತ್ರೀಯ ನೆಲೆಯ ವಾಕ್ಯವನ್ನು ನಿರ್ಮಿಸಿಕೊಂಡಿದ್ದಾಳೆ. ಈ ಹೆಣ್ಣುವಾಕ್ಯಗಳು ಹಳೆಯ ವಾಕ್ಯಗಳಿಗಿಂತ ಹೆಚ್ಚು ಬಾಗು ಬಳುಕುಗಳನ್ನು ಹೊಂದಿರುತ್ತವೆ. ಎಷ್ಟಾದರೂ ಹಿಗ್ಗಿಸಬಹುದಾದಂಥದು. ಅವುಗಳಲ್ಲಿ ಅತಿ ಸಣ್ಣ ಕಣಗಳನ್ನು ತೂರಿ ಬಿಡಬಹುದು. ತೀರಾ ಅಸ್ಪಷ್ಟ ಆಕಾರಗಳನ್ನು ಕಟ್ಟಿಕೊಡಬಹುದು’ ಎಂದಳು. (ವೂಲ್ಫ್ – ೧೯೬೫).

ಗಂಡುವಾಕ್ಯಗಳು ಬರೆಹಗಾರ್ತಿಯರಿಗೆ ಅಪರಿಪೂರ್ಣವಾಗಿ ತೋರುತ್ತದೆಂದು ವೂಲ್ಫ್ ಹೇಳುತ್ತಾಳೆ. ವೂಲ್ಫ್ ನೀಡುವ ಗಂಡುವಾಕ್ಯದ ಮಾದರಿಯೊಂದನ್ನು ನೋಡಿ : ‘‘The grandeur of their works was an arguement with them not to stop short but to proceed.’’ ಈ ವಾಕ್ಯದಲ್ಲಿ ಗಂಡಸರು ಹೆಂಗಸರಿಗಿಂತ ಹೆಚ್ಚು ಔಪಚಾರಿಕ ಮಾದರಿಗಳನ್ನು ಅನುಸರಿಸುತ್ತಾರೆ; ನಾಮಪದೀಕರಣವನ್ನು ಬಳಸುತ್ತಾರೆ; ಕ್ರಿಯಾಪದಗಳು ಮತ್ತು ಗುಣವಾಚಕಗಳು ಹಿನ್ನೆಲೆಗೆ ಸರಿಯುತ್ತವೆ. not to/but to ಮಾದರಿಯ ಸಮಾಂತರ ರಚನೆಗಳು ಹೆಚ್ಚು ಔಪಚಾರಿಕವಾದವು. ನಾಮಪದೀಕರಣದಿಂದಾಗಿ ಕ್ರಿಯೆಯನ್ನು ಯಾರು ಮಾಡಿದರು ಎಂಬುದು ಗೊತ್ತಾಗುವುದಿಲ್ಲ. ಆಗ ವಾಕ್ಯ ಹೆಚ್ಚು ವ್ಯಕ್ತ್ಯತೀತವಾಗಿ ಬಿಡುತ್ತದೆ. ವೂಲ್ಫ್ ನೀಡುವ ಈ ವಿಶ್ಲೇಷಣೆ ವಾಕ್ಯದ ಗಂಡುತನ ಮತ್ತು ಅದನ್ನು ಬಳಸಿದ ಸಾರ್ವಜನಿಕ ವಲಯಗಳ ನಡುವೆ ಗೊಂದಲವನ್ನು ಮಾಡಿಕೊಂಡಂತಿದೆ ನಿಜ. ಈ ವಾಕ್ಯದ ಔಪಚಾರಿಕ ಸ್ವರೂಪಕ್ಕೂ ಅದನ್ನು ಸಾರ್ವಜನಿಕ ವಲಯದಲ್ಲಿ ಮಂಡಿಸಿರುವುದಕ್ಕೂ ಸಂಬಂಧವಿದೆ.  ಆದರೆ, ಈ ಔಪಚಾರಿಕತೆಯೇ ಹೆಣ್ಣು, ಗಂಡು ವಾಕ್ಯಗಳ ಚಹರೆಗಳನ್ನು ನಿರ್ಧರಿಸಲಾರವು.

ಆದ್ದರಿಂದ ವಾಕ್ಯದ ಹೆಣ್ಣು, ಗಂಡುತನವನ್ನು ಕುರಿತಂತೆ ವೂಲ್ಳ್ ತಳೆದ ನಿಲುವಿನಲ್ಲಿ ಅಸ್ಪೃಶ್ಯತೆ ಇದೆ. ಅಲ್ಲದೆ, ಎಮಿಲಿ ಬ್ರಾಂಟೆ ಮತ್ತು ಜೇನ್ ಆಸ್ಯಾನ್ – ಇವರು ಹೆಣ್ಣು ವಾಕ್ಯಗಳನ್ನು ಬರೆಯುತ್ತಾರೆಂದು ಹೊಗಳುವ ವೂಲ್ಫ್ ಹೆಂಗಸಿನಂತೆ ಬರೆಯುತ್ತಾಳೆ ಎಂದು ಚಾರ್ಲೆಟ್ ಬ್ರಾಂಟೆಯ ಬರಹವನ್ನು ಟೀಕಿಸುತ್ತಾಳೆ. ‘‘ತಾನು ಯಾವ ಲಿಂಗಕ್ಕೆ ಸೇರಿದ್ದೇನೆ ಎಂಬುದನ್ನು ಧ್ಯಾನಿಸುತ್ತಾ ಬರೆಯುವುದು ಆತ್ಮಹತ್ಯೆಯ ಮಾರ್ಗವೇ ಸರಿ’’ ಎಂದು ಹೇಳುತ್ತಾಳೆ – (ವೂಲ್ಫ್ – ೧೯೭೭) ಹೆಣ್ಣು, ಅಸಮಾನತೆಯಿಂದಾಗಿ ನರಳುತ್ತಿದ್ದಾಳೆ ಎಂಬ ಕೋಪದಿಂದ ಬರೆಯ ಹೊರಟರೆ ಅಂತ ಬರವಣಿಗೆ ಬಡವಾಗುತ್ತದೆ ಎನ್ನುತ್ತಾಳೆ.  ಶೇಕ್ಸ್‌ಪಿಯರ್‌ಗೆ ‘ಪ್ರತಿಭಟಿಸುವ, ಬೋಧಿಸುವ, ಗಾಯಗಳನ್ನು ತೆರೆದು ತೋರಿಸುವ, ಸೇಡು ತೀರಿಸಿಕೊಳ್ಳುವ ತವಕವಿರಲಿಲ್ಲವಾದ್ದರಿಂದ ಆತ ಮಹಾನ್ ಬರೆಹಗಾರನಾದ’’. (ವೂಲ್ಫ್ – ೧೯೭೭) ಬರವಣಿಗೆಗೆ ಲಿಂಗಬೆಧವಿಲ್ಲ ಎಂಬುದು ನೆಲೆಗೊಂಡಿರುವ ನಂಬಿಕೆ. ಜಾಯ್ಸ್ ಕೆರೋಲ್ ಓಟ್ಸ್ ಅವರು ಹೇಳುವುದನ್ನು ಕೇಳಿ : ‘‘ಗುರುತು ಹಿಡಿಯಬಹುದಾದ ಹೆಣ್ಣುದನಿ, ಇಲ್ಲವೇ ಗುರುತು ಹಿಡಿಯಬಹುದಾದ ಗಂಡುದನಿಯನ್ನು ಒಂದು ಬರವಣಿಗೆಯಲ್ಲಿ ಕಾಣುವುದು ಸಾಧ್ಯವಿದ್ದರೆ ಅಂಥ ಬರವಣಿಗೆ ಕೀಳು ದರ್ಜೆಯದ್ದೇ ಸರಿ. ನಿಜವಾಗಿ ಮಹತ್ವದ ಕಲಾತ್ಮಕ ಬರವಣಿಗೆಗಳಲ್ಲಿ ವ್ಯಕ್ತಿಗತ ಶೈಲಿಗಳಿರುತ್ತವೆಯೇ ಹೊರತು, ಲಿಂಗದ ಕುರುಹುಗಳಿರುವುದಿಲ್ಲ’’ (೧೯೮೬) ಅಂದರೆ ವೂಲ್ಫ್ ಮತ್ತು ಓಟ್ಸ್ ಇಬ್ಬರೂ ಒಳ್ಳೆಯ ಬರವಣಿಗೆಗೆ ಲಿಂಗ ಬೇಧವಿಲ್ಲವೆಂದು ಹೇಳಿದಂತಾಯಿತು. ಈ ಲಿಂಗಬೇಧರಹಿತ ಸ್ಥಿತಿ ವಾಸ್ತವದಲ್ಲಿ ಗಂಡಸನ್ನಷ್ಟೇ ಪ್ರತಿನಿಧಿಸುತ್ತದೆ. ವೂಲ್ಫ್ ಗಂಡುವಾಕ್ಯ ಮತ್ತು ಹೆಣ್ಣುವಾಕ್ಯಗಳನ್ನು ಬೇರ್ಪಡಿಸಲು ಸೂಚಿಸುವ ದಾರಿಗಳನ್ನು ನೋಡಿದರೆ, ಆಕೆ ಹೆಂಗಸು ‘ಹೇಗೆ’ ಬರೆಯಬೆಕು, ಹೇಗೆ ಬರೆದರೆ ಮಾತ್ರ ಸರಿ, ಎಂಬ ಬಗ್ಗೆ ಹೇಳುವುದನ್ನೂ ಜೊತೆಯಲ್ಲಿ ಗಮನಿಸಬೇಕಾಗುತ್ತದೆ. ಹೆಂಗಸಿಗೆ ವೂಲ್ಫ್ ರೂಪಿಸಿಕೊಡುವ ಗುರಿಯನ್ನು ಹೇಳುವ ವಾಕ್ಯವೇ ಆಕೆ ನಿರ್ವಚಿಸುವ ಗಂಡುವಾಕ್ಯದ ಮಾದರಿಯಂತಿದೆ. ‘‘ಶಾಂತಳಾಗಿ ಬರೆಯಬೇಕೆಂಬ ನಿರೀಕ್ಷೆ ಇದ್ದಾಗ ಆಕೆ ಉದ್ವಿಗ್ನಳಾಗಿ ಬರೆಯುತ್ತಾಳೆ. ಜಾಣರಾಗಿ ಬರೆಯಬೇಕೆಂಬ ನಿರೀಕ್ಷೆ ಇದ್ದಾಗ ಮೂರ್ಖಳಂತೆ ಬರೆಯುತ್ತಾಳೆ. ತನ್ನ ಪಾತ್ರಗಳ ಬಗ್ಗೆ ಬರೆಯಬೇಕಾಗಿರುವಾಗ ತನ್ನ ಬಗ್ಗೆಯೇ ಬರೆದುಕೊಳ್ಳುತ್ತಾಳೆ. ತನ್ನ ಸಮುದಾಯದೊಡನೆ ಕದನಕ್ಕಿಳಿಯುತ್ತಾಳೆ. (ವೂಲ್ಫ್- ೧೯೭೭) ಅಂದರೆ, ತಟಸ್ಥವಾಗಿರುತ್ತ ದೆಂದು ಹೇಳಲಾದ ಗಂಡುವಾಕ್ಯವು ಶಾಂತತೆಯನ್ನೂ ಒಳಗೊಂಡು ವಸ್ತುನಿಷ್ಠ ನೆಲೆಯಲ್ಲಿ ವ್ಯವಹರಿಸುತ್ತದೆ ಎಂದು ಹೇಳಿದಂತಾಯ್ತು.

ಈ ಬಗೆಯ ವಾಕ್ಯಗಳಲ್ಲಿ ಇರುವ ವ್ಯತ್ಯಾಸಗಳಿಗೆ ವಾಕ್ಯರಚನೆಯೇ ಭಾಗಶಃ ಕಾರಣವಾಗಿರುತ್ತದೆ. ಡರೋತಿ ರಿಚರ್ಡ್‌ಸನ್ ಬರವಣಿಗೆಯ ಲಕ್ಷಣಗಳಿಗೆ ಅವಳು ಬರೆಯುತ್ತಿದ್ದ ಕಾಲ ಮತ್ತು ಎಲ್ಲವನ್ನೂ ಹೊಸದಾಗಿ ನೋಡಬೇಕೆಂಬ ಚಿಂತನೆಯು ಆಕೆಯ ಪರಿಸರದಲ್ಲಿ ಇದ್ದುದೇ ಕಾರಣ. ವೂಲ್ಫ್ ಹೆಣ್ಣುವಾಕ್ಯವೆಂದು ಹೇಳುತ್ತಿರುವುದು ಶೈಲಿ ಅಥವಾ ಭಾಷೆಗೆ ಸಂಬಂಧಿಸಿರದೆ, ಅದರ ವಸ್ತು ವಿನ್ಯಾಸವನ್ನು ಗಮನದಲ್ಲಿಟ್ಟು ಕೊಂಡಂತಿದೆ.  ಫ್ರೆಂಚ್ ಸ್ತ್ರೀವಾದಿಗಳಲ್ಲಿರುವ ಅಸ್ಪಷ್ಟತೆಯೇ ವೂಲ್ಫ್‌ಳಲ್ಲೂ ಇದ್ದಂತಿದೆ. ಆ ಸ್ತ್ರೀವಾದಿಗಳು ಗಂಡಸರೂ ಹೆಣ್ಣುವಾಕ್ಯಗಳನ್ನು ಗಂಡಸರೂ ಬರೆಯಬಲ್ಲರು ಎಂದಿದ್ದರು. ವೂಲ್ಫ್ ಕೂಡಾ ಇದನ್ನೇ ನಂಬುವಂತಿದೆ. ಮತ್ತೆಲ್ಲೋ ಒಂದು ಕಡೆ ಬರೆಯುವಾಗ ‘ಉತ್ತಮ ಬರವಣಿಗೆಗೆ ಲಿಂಗಬೇಧವಿಲ್ಲ ಎನ್ನುವುದಕ್ಕಿಂತ ಅದು ದ್ವಿಲಿಂಗಿಯಾಗಿರುತ್ತದೆ’ ಎಂದಿದ್ದಾಳೆ.  ಈ ನಿಲುವು ಹೆಲೆನ್ ಸೀಕ್ಸೂ ಮಂಡಿಸಿದ ವಿಚಾರಗಳಿಗೆ ಹತ್ತಿರವಾಗಿದೆ.

ನಾವೀಗ ಫ್ರೆಂಚ್ ಸ್ತ್ರೀವಾದಿಗಳನ್ನು ನೋಡೋಣ. ಅವರ ತಾತ್ತ್ವಿಕ ಚೌಕಟ್ಟು ಸಂಪೂರ್ಣವಾಗಿ ಬೇರೆಯೇ ಆಗಿದ್ದರೂ ಅವರ ನಿಲುವುಗಳು ವೂಲ್ಫ್‌ಳ ನಿಲುವುಗಳನ್ನೇ ಹೋಲುತ್ತಿರುವುದು ಅಚ್ಚರಿ ತರುತ್ತದೆ. ಹೆಚ್ಚಿನ ಫ್ರೆಂಚ್ ಸ್ತ್ರೀವಾದಿಗಳು ಜಾಕ್ ಲಕಾನ್‌ನ ತಾತ್ತ್ವಿಕ ವಿಚಾರಗಳ ಪರಂಪರೆಗೆ ಸೇರಿದವರು, ಇಲ್ಲವೇ ಅದಕ್ಕೆ ಪ್ರತಿಕ್ರಿಯೆಯನ್ನು ಹುಟ್ಟುಹಾಕುತ್ತಿರುವವರು. ‘‘ಲೆಕಾನಿಯನ್ ಸಿದ್ಧಾಂತವೂ ‘ನಾನು’ ಎಂಬುದನ್ನು ಗಂಡಸಿಗೆ ಮಾತ್ರ ಮೀಸಲಿಡುತ್ತದೆ. ಅದು ಹೆಂಗಸನ್ನು ಒಳಗೊಳ್ಳದು. ಏಕೆಂದರೆ ಜಂಡರ್‌ನ ಸಂಕೇತವಾದ ಶಿಶ್ನ ಆಕೆಗೆ ಇಲ್ಲ. ಲೋಕದ ಮೇಲೆ ಅಧಿಕಾರವಿರುವುದು ಈ ಜಂಡರ್‌ಗೆ ಮಾತ್ರ. ಭಾಷೆಯೂ ಕೂಡ ಅದನ್ನೇ ಅವಲಂಬಿಸಿ ರಚನೆಯಾಗಿದೆ. ಆ ಭಾಷೆಯಲ್ಲಿ ಹೆಂಗಸಿಗೆ ನಕಾರಾತ್ಮಕ ಸ್ಥಾನ’’ ಎಂದು ಆನ್‌ರೋಜಲಿಂಡ್ ಜೋನ್ಸ್ ಬರೆಯುತ್ತಾಳೆ (೧೯೮೫). ಹೆಲೆನ್ ಸೀಕ್ಸೂ ಮತ್ತಿತರ ಸ್ತ್ರೀವಾದಿಗಳು ಭಾಷೆಯಲ್ಲಿ ಹೆಂಗಸಿಗೆ ಇರುವ ನಕಾರಾತ್ಮಕ ಸ್ಥಾನವನ್ನು ಹಾಡಿ ಹೊಗಳಬೇಕೆನ್ನುತ್ತಾರೆ. ಈ ನಕಾರಾತ್ಮಕ ಸ್ಥಾನಕ್ಕೆ ಅವರಿಟ್ಟ ಹೆಸರು ‘ecriture feminine’. ಲಕಾನ್ ಚಿಂತನೆಗಳಲ್ಲಿ ಯಾವುದನ್ನು ಹೆಂಗಸಿನ ‘ಕೊರತೆ’ ಎನ್ನಲಾಗಿದೆಯೋ ಅದನ್ನು ಹೆಲೆನ್ ಸೀಕ್ಸೂ ನಿರಾಕರಿಸಿ ಆ ಸ್ಥಿತಿಯೇ ಹೆಂಗಸಿನ ‘ಸಮೃದ್ದಿ’ಎನ್ನುತ್ತಾಳೆ.  ಸಮಾಜವು ಹೆಂಗಸಿಗೆ ಆರೋಪಿಸಿರುವ ಹಿಂಜರಿಕೆ ಮತ್ತು ತರ್ಕರಹಿತತೆಗಳನ್ನು ಆಕೆ ಇವೇ ಹೆಂಗಸಿನ ಗುಣಗಳು ಎನ್ನುತ್ತಾಳೆ. ಹೆಂಗಸರ ಬರವಣಿಗೆಯನ್ನು ಒಂದು ವಿಶಿಷ್ಟ ಮಾದರಿ ಎಂದು ಪರಿಗಣಿಸುವ ಹೆಲೆನ್ ಸೀಕ್ಸೂ ಅದರಲ್ಲಿ ಬಹುತ್ವ ಎಂಬುದು ಬೇರುಬಿಟ್ಟಿರುವುದನ್ನು ಗುರುತಿಸುತ್ತಾಳೆ. ಅಲ್ಲಿಯವರೆಗೆ, ಫ್ರೆಂಚ್ ಭಾಷೆಯಲ್ಲಿ ಹೆಂಗಸರ ಬರವಣಿಗೆಗಳ ಬಗ್ಗೆ ನಡೆದ ಚರ್ಚೆಗಳಲ್ಲಿ ತಳೆದಿದ್ದ ನಿಲುವು ಹೀಗಿತ್ತು – ಹೆಂಗಸು ತನ್ನ ಅನುಭವಗಳನ್ನು ಬರೆದರೂ ಅದು ಆವರೆಗೆ ನೆಲೆಗೊಂಡ ಗಂಡು ಸಿದ್ಧಮಾದರಿಗಳನ್ನು ಪ್ರಶ್ನಿಸಲಿಲ್ಲ. ಹಾಗಾಗಿ, ಎಕ್ರಿಚ್ಯೂರ್ ಫೆಮಿನೈನ್ ಎಂಬುದನ್ನು ಹೀನಾರ್ಥದಲ್ಲಿ ಬಳಸುತ್ತಿದ್ದರು. ಈ ನಿಲುವನ್ನು ಸೀಕ್ಸೂ ಪ್ರಶ್ನಿಸುತ್ತಾ ಅದಕ್ಕೆ ಪ್ರತಿಕ್ರಿಯೆಯಾಗಿ ಹೊಸ ವ್ಯಾಖ್ಯಾನವನ್ನು ಮಂಡಿಸಿದಳು. ಇದರಿಂದ ಆವರೆಗೆ ಹೆಂಗಸರ ಬರವಣಿಗೆಗಳನ್ನು ಆಕಾರರಹಿತ, ವ್ಯಕ್ತಿನಿಷ್ಠ ಅಭಿವ್ಯಕ್ತಿಗಳೆಂದೂ, ಇವೆಲ್ಲವೂ ಒಂದು ನೆಲೆಯಲ್ಲಿ ಹೆಂಗಸರಲ್ಲಿ ಮತ್ತು ಹೆಂಗಸರ ಬರವಣಿಗೆಗಳಲ್ಲಿ ಇರಬೇಕೆಂದು ಗಂಡಸರು ಬಯಸುತ್ತಿದ್ದ ಲಕ್ಷಣಗಳೆಂದೂ ತಿಳಿಯುವುದನ್ನು ಸೀಕ್ಸೂ ಬುಡಮೇಲು ಮಾಡಿದಂತಾಯಿತು.

ಎಕ್ರಿಚೂರ್ ಫೆಮಿನೈನ್‌ಗೆ ಗಂಡಸರು ನೀಡಿದ ವ್ಯಾಖ್ಯೆಯನ್ನು ಬದಲಿಸಿದ್ದೇನೋ ಆಯ್ತು.  ಆದರೂ ಮತ್ತೆ ಗಂಡಸರ ಭಾಷೆಯು ಪ್ರಮಾಣಬದ್ಧವಾದುದು, ಹೆಂಗಸರ ಭಾಷೆಯು ಅದರ ವಿಕಲ್ಪ ಮಾತ್ರ; ಅದು ಬಲಹೀನವಾದುದು, ಅಧೀನತೆಯನ್ನು ಪ್ರದರ್ಶಿಸುವಂಥದ್ದು ಎಂಬ ಇಕ್ಕಟ್ಟಿನಲ್ಲೇ ಇನ್ನೂ ಸಿಲುಕಿದಂತಿದೆ. ಹಾಗಲ್ಲವೆಂದು ಎಷ್ಟು ಕೂಗಿ ಹೇಳಿದರೂ ಅದನ್ನು ಸಾಧಿಸಿ ತೋರಿಸಲು ಆಗಿಲ್ಲ. ಸೀಕ್ಸೂ ಹೆಂಗಸರ ಭಾಷೆಯನ್ನು ಸಕಾರಾತ್ಮಕವಾಗಿ ನೋಡಿದ್ದನ್ನು ಕ್ರಾಂತಿಕಾರಕ ದೃಷ್ಟಿ ಎಂದು ಹೇಳಲಾಗಿದೆ. ‘‘ನಾವೀಗ ಸಹಸ್ರಾರು ವರ್ಷಗಳ ಅವಧಿಯಲ್ಲಿ ನೆಲೆಗೊಂಡಿರುವ ಪರಿಕಲ್ಪನೆಯ ಕೋಟೆಯೊಂದನ್ನು ಭೇದಿಸಲು ಸುರಂಗವನ್ನು ಕೊರೆಯುತ್ತಿರುವ ಕಾಲಮಾನದಲ್ಲಿ ಇದ್ದೇವೆ’’ ಎಂದು ಸೀಕ್ಸೂ ಹೇಳುತ್ತಾಳೆ (೧೯೮೧) ಹೀಗೆ ಸುರಂಗವನ್ನು ತೋಡುತ್ತಿರುವವರು ಹೆಂಗಸರು. ಅವರು ಪಿತೃಪ್ರಧಾನ ನೆಲೆಯಲ್ಲಿ ಬೆಳೆದಿರುವ ವಾಕ್ಯರಚನೆಯನ್ನು ಬುಡಮೇಲು ಮಾಡಬಲ್ಲರು. ಇದನ್ನು ಅವರು ತಮ್ಮ ಬರವಣಿಗೆಯ ಮೂಲಕ ಬದಲಿಸುತ್ತಿದ್ದಾರೆ. ಮುಂದುವರೆದು ‘‘ಪುರುಷರ ಮತ್ತು ಸ್ತ್ರೀಯರ ರಾಜಕೀಯ ಆರ್ಥಿಕತೆಗಳಿಗೆ ಬೇರೆ ಬೇರೆ ಅಗತ್ಯಗಳಿವೆ. ಹಾಗೆಯೇ ಬೇರೆ ಬೇರೆ ಕಟ್ಟುಪಾಡುಗಳಿವೆ. ಇವುಗಳು ಸಾಮಾಜಿಕ ನೆಲೆಯಲ್ಲಿ ರೂಪಕಗಳಾಗಿ ಪರಿವರ್ತನೆಯಾಗುವಾಗ, ಅವರವರಿಗೇ ಅನನ್ಯವೆನಿಸುವ ಸಂಕೇತಗಳನ್ನು, ಅಧಿಕಾರ ಸಂಬಂಧಗಳನ್ನು, ಉತ್ಪಾದನಾ ಸಂಬಂಧಗಳನ್ನು, ಸಂತಾನಾಭಿವೃದ್ದಿ ಸಂಬಂಧಗಳನ್ನು ಹುಟ್ಟುಹಾಕುತ್ತವೆ’’ ಎಂದು ಸೀಕ್ಸೂ ಹೇಳುತ್ತಾಳೆ. (೧೯೮೧) ಈ ರಾಜಕೀಯ ಆರ್ಥಿಕತೆಯ ರಚನೆಗಳಲ್ಲಿ ಏನಾದರೂ ಬದಲಾವಣೆಗಳಾದರೆ, ನಾವು ಗಂಡುತನ ಮತ್ತು ಹೆಣ್ಣುತನ ಎಂದು ತಿಳಿದಿರುವ ಚೌಕಟ್ಟುಗಳಲ್ಲಿ ಬದಲಾಗುತ್ತವೆ. ಈ ಮಾತನ್ನು ಸೀಕ್ಸೂ ಹೇಳುತ್ತಿರುವುದರಿಂದ ಆಕೆ ಹೆಂಗಸರನ್ನು ಎಂದೆಂದೂ ಬದಲಾಗದ ಕೆಟಗರಿ ಎಂದೂ, ಅವರ ವರ್ತನೆಗಳು ಕೂಡಾ ನಿಶ್ಚಿತವಾಗಿಯೇ ಇರುತ್ತವೆಂದೂ, ಹೇಳುತ್ತಿಲ್ಲವೆನ್ನುವುದು ಖಚಿತವಾಗುತ್ತದೆ.

ಲೂಸ್ ಇರಿಗೆರೆಯಂತೆ ಸೀಕ್ಸೂ ಕೂಡಾ ತನ್ನ ವಿಮರ್ಶಾತ್ಮಕ ಚಿಂತನೆಗಳನ್ನು ಸೃಜನಶೀಲತೆಯೊಡನೆ ಬೆಸೆದಿದ್ದಾಳೆ. ಎಕ್ರಿಚೂರ್ ಫೆಮಿನೈನ್ ಎಂದರೇನು ಎಂಬುದನ್ನು ತಾನೇ ಪ್ರಯೋಗಿಸಿ ನೋಡಿದ್ದಾಳೆ. ತನ್ನ ವಿದ್ಯಾರ್ಥಿಗಳ ಕನಸುಗಳ ವರದಿ, ಮನೋವಿಶ್ಲೇಷಣೆಗೆ ಒಳಗಾದವರ ನಿರೂಪಣೆಗಳು, ಧಾರ್ಮಿಕ ಪ್ರವಚನಗಳು – ಮುಂತಾದವುಗಳನ್ನು ಆಕೆ ಪರಿಶೀಲಿಸಿದ್ದಾಳೆ. ಇಷ್ಟಾದರೂ ‘‘ಸ್ತ್ರೀ ಮಾದರಿಯೊಂದನ್ನು ಹೀಗೆ ಇರುತ್ತದೆಂದು ಗುರುತಿಸಲು ಆಗುವುದಿಲ್ಲ. ಏಕೆಂದರೆ, ಅದನ್ನೊಂದು ತಾತ್ತ್ವಿಕ ನೆಲೆಗೆ ಮಿತಗೊಳಿಸಲಾಗುವುದಿಲ್ಲ, ಚೌಕಟ್ಟುಗಳಲ್ಲಿ ಇರಿಸಲಾಗುವುದಿಲ್ಲ. ಅದರ ಗುಣ ಲಕ್ಷಣಗಳನ್ನು ಸೂತ್ರೀಕರಿಸಲು ಆಗುವುದಿಲ್ಲ. ಹೀಗೆಂದ ಮಾತ್ರಕ್ಕೆ ಅಂಥ ಮಾದರಿಯೊಂದು ಇಲ್ಲವೇ ಇಲ್ಲವೆಂದಲ್ಲ. ಅದು ಯಾವಾಗಲೂ ಶಿಶ್ನಕೇಂದ್ರಿತ ವ್ಯವಸ್ಥೆಯ ನಿಯಂತ್ರಣಕ್ಕೆ ಒಳಪಡುವ ನಿರೂಪಣಾ ಮಾದರಿಯನ್ನು ಮೀರಿನಿಲ್ಲುತ್ತದೆ’’ ಎನ್ನುತ್ತಾಳೆ. (೧೯೮೧) ತನ್ನ ಮುಂದಿನ ಬರವಣಿಗೆಗಳಲ್ಲಿ ಸೀಕ್ಸೂ ಕೊಂಚ ಬದಲಾದಂತೆ ತೋರುತ್ತದೆ. ವೂಲ್ಫ್ ಹೇಳಿದಂತೆ ಈಕೆಯೂ ಕೂಡ ಈ ಸ್ತ್ರೀ ಮಾದರಿಯ ಕಡೆ ಒಲುವು ತೋರುವವರು ಹೆಚ್ಚಾಗಿ ಹೆಂಗಸರು ಮಾತ್ರ.  ಬರವಣಿಗೆಯು ದ್ವಿಲಿಂಗಿಯಾಗಿರಬೇಕು (ವೂಲ್ಫ್ ಮಾತುಗಳನ್ನು ನೆನಪಿಸಿಕೊಳ್ಳಿ) ‘‘ಒಂದು ಬಗೆಯ ಸಲಿಂಗಿ ಸ್ವರೂಪವನ್ನು ಅಳವಡಿಸಿಕೊಳ್ಳದಿದ್ದರೆ ಕಾವ್ಯ ಕಾದಂಬರಿಗಳು ಹುಟ್ಟಲಾರವು. ತನ್ನಂತಿರುವ ಇನ್ನೊಂದನ್ನು ಸೃಷ್ಟಿಸಲು ಸಾಧ್ಯವಾಗದು’’ ಎನ್ನುತ್ತಾಳೆ.

ಲೂಸ್ ಇರಿಗೆರೆಯೂ ಲಕಾನ್ ಪ್ರಣೀತ ಮನೋವಿಶ್ಲೇಷಣೆಯ ಎಷ್ಟೋ ಅಂಶಗಳನ್ನು ತನ್ನ ಬರವಣಿಗೆಯಲ್ಲಿ ಅಳವಡಿಸಿಕೊಂಡಿದ್ದಾಳೆ. ಹೆಂಗಸಿನ ಬರವಣಿಗೆಯನ್ನು ಆಕೆ‘ಹೆಣ್ಣು ಮಾತು’(parler femme) ಎನ್ನುತ್ತಾಳೆ. ‘ಆಕೆ’ ಈ ಭಾಷೆಯಲ್ಲಿ ಮಾತನಾಡಿದರೆ/ಬರೆದರೆ, ಎಲ್ಲ ದಿಕ್ಕುಗಳಲ್ಲೂ ಹರಡಿಕೊಳ್ಳಬಲ್ಲಳು. ‘ಆತ’ನಿಗೆ ಅದನ್ನು ಅರಿಯುವುದೇ ಅಸಾಧ್ಯವಾಗುತ್ತದೆ. ತರ್ಕಬದ್ಧ ಚಿಂತನೆಗಳಿಗೆ ಸವಾಲಾಗುವ ಬಗೆಯಲ್ಲಿ ಪದಗಳು ಬಳಕೆಯಾಗುತ್ತವೆ. ಒಂದು ಮಾದರಿಯ ಕೇಳುವಿಕೆಗೆ ಕಿವಿಯನ್ನು ಒಗ್ಗಿಸಿಕೊಂಡ ಆತನಿಗೆ ಆಕೆ ಹೇಳುವುದು ಕೇಳಿಸುವುದೇ ಇಲ್ಲ ’’(ಇರಿಗೆರೆ -೧೯೮೫). ಇಲ್ಲಿಯೂ ಕೂಡಾ ಗಂಡಸರು ಹೆಂಗಸರಿಗೆ ಆರೋಪಿಸಿದ ಗುಣಗಳನ್ನು ಸುಮ್ಮನೆ ಒಪ್ಪಿಕೊಂಡಂತೆ ಆಗಿದೆ.  ಇರಿಗೆರೆಯ ನಂಬಿಕೆಯಂತೆ ಹೆಂಗಸರು ಈ ಬಗೆಯ ಭಾಷೆಯನ್ನು ಬಳಸಲು ಅವರ ಲಿಂಗರಚನೆಯು ಬಹುತ್ವದ ನೆಲೆಯಲ್ಲಿಯೂ ಇರುವುದೇ ಕಾರಣ. ಆ ನೆಲೆಗಳೆಲ್ಲವೂ ಛಿದ್ರಗೊಂಡಿರದೆ, ಒಂದು ಬಗೆಯ ನಿರಂತರತೆಯನ್ನು ಕಾಯ್ದುಕೊಂಡಿದೆ. ಆದರೆ, ಗಂಡಸಿನ ಲಿಂಗರಚನೆ ಏಕರೂಪಿಯಾದದ್ದು. ಇದರಿಂದಾಗಿ, ಗಂಡು ಹೆಣ್ಣುಗಳ ಭಾಷಾ ಬಳಕೆಯಲ್ಲಿ ವ್ಯತ್ಯಾಸವಿದೆ. ‘‘ಆಕೆಯ ಮಾತುಗಳನ್ನು ಬೇರೆ ರೀತಿಯಲ್ಲಿ ಕೇಳಿಸಿಕೊಂಡ ಹೊರತು ಅದರಲ್ಲಿರುವ ‘ಇನ್ನೊಂದು ಅರ್ಥ’ಅರಿವಿಗೆ ಬರುವುದಿಲ್ಲ. ಈ ಇನ್ನೊಂದು ಅರ್ಥವೂ ನಿರಂತರವಾಗಿ ತನ್ನನ್ನು ತಾನು ನೇಯ್ದುಕೊಳ್ಳುತ್ತಿರುತ್ತದೆ. ಜೊತೆಗೆ ಪದಗಳನ್ನು ತನ್ನ ಒಡನಾಡಿಗಳನ್ನಾಗಿ ಮಾಡಿಕೊಳ್ಳುತ್ತಾ ಎಲ್ಲಿ ನಿಯತ ಅರ್ಥಕ್ಕೆ ಕಟ್ಟುಬಿದ್ದು ಚಲನಶೀಲತೆಯನ್ನು ಕಳೆದುಕೊಳ್ಳುವೆನೋ ಎಂಬ ಆತಂಕದಿಂದ ಆ ಪದಗಳನ್ನು ದೂರೀಕರಿಸುತ್ತದೆ. ಆಕೆಯ ಮಾತಿನ ಬದಲಿಗೆ ಇನ್ನೊಂದು ಮಾತನ್ನು ಹೇಳಲಾಗುವುದಿಲ್ಲ.  ನಿರಂತರತೆಯೇ ಅದರ ಮುಖ್ಯ ಚಹರೆ.’’(ಇರಿಗೆರೆ -೧೯೮೫).

ಇರಿಗೆರೆ ತತ್ವಶಾಸ್ತ್ರ ಮತ್ತು ಮನೋವಿಶ್ಲೇಷಣೆಗಳ ಬಗ್ಗೆ ಬರೆಯುತ್ತಿದ್ದವಳು. ಮುಂದೆ ಸ್ವತಂತ್ರ ಗದ್ಯ ಬರಹಗಳನ್ನು ಬರೆದಳು. ಸಾಂಪ್ರದಾಯಿಕ ವಾಕ್ಯವಿಶ್ಲೇಷಣೆಯಲ್ಲಿ ಹೇಳಲಾಗುವ ಕರ್ತೃ/ಅನುಭೋಗಿ ಎಂಬ ವಿಭಜನೆಯನ್ನು ಆಕೆ ಒಪ್ಪುವುದಿಲ್ಲ. ತನ್ನ ಬರವಣಿಗೆಯಲ್ಲಿ ಕ್ರಿಯಾಪದಗಳನ್ನು ಬಿಟ್ಟುಬಿಡುತ್ತಾಳೆ. ಹೀಗಾಗಿ, ಅವಳ ಬರೆಹದ ಶೈಲಿ ಟೆಲಿಗ್ರಾಫಿಕ್ ಸಂದೇಶದಂತಿರುತ್ತದೆ. ಶಬ್ದ ಚಾತುರ್ಯಗಳು ತುಂಬಿಕೊಂಡಿರುತ್ತವೆ. ಅವಳ ಬರೆಹಪಠ್ಯಗಳಲ್ಲಿ ಪುನರಾವರ್ತನೆಗಳು ಹೆಚ್ಚಿರುತ್ತವೆ. ಸರಳ ರೇಖೆಯ ಚಲನೆಗಿಂತ ಹಿಂದೆ ಮುಂದೆ ಚಲಿಸುವುದು ಅದರ ಲಕ್ಷಣ. ಕಥನದ ನಿರೂಪಣೆಯಲ್ಲಿ ಒಬ್ಬರಿಗಿಂತ ಹೆಚ್ಚು ನಿರೂಪಕರಿರುತ್ತಾರೆ. ಕೆಲವೊಮ್ಮೆ ಹೇಗೆ ಕೊನೆಯಾಯಿತೆಂಬುದೇ ಗೊತ್ತಾಗುವುದಿಲ್ಲ.

ಜೂಲಿಯಾ ಕ್ರಿಸ್ತೀವಾ ಕೂಡ ಸೀಕ್ಸೂ ಮತ್ತು ಇರಿಗೆರೆಯರಂತೆ ಲಕಾನ್ ಚಿಂತನೆಗಳ ಚೌಕಟ್ಟಿನಲ್ಲೇ ತನ್ನ ಚಿಂತನೆಗಳನ್ನು ರೂಪಿಸಿದ್ದಾಳೆ. ಆದರೆ, ಆಕೆ ಎಕ್ರಿಚೂರ್ ಫೆಮಿನೈನ್ ಎಂಬ ಪರಿಕಲ್ಪನೆಯ ಕಟ್ಟಾ ವಿರೋಧಿ. ಮಗುವಿನ ಬೆಳವಣಿಗೆಯಲ್ಲಿ ಭಾಷೆ ಒಂದು ಕೌಶಲವಾಗಿ ಮೈದೋರುವ ಹಂತವನ್ನು ಸೀಮಿಯಾಟಿಕ್ ಎಂಬ ಪರಿಕಲ್ಪನೆಯ ಮೂಲಕ ವಿವರಿಸುತ್ತಾಳೆ. ಇದು ಭಾಷೆ ಎಂಬ ಸಂಕೇತ ವ್ಯವಸ್ಥೆಗಿಂತ ಬೇರೆಯಾದದ್ದು. ಸೀಮಿಯಾಟಿಕ್ ಎಂಬುದು ಅರಾಜಕವಾಗಿದ್ದು, ಭಾಷೆಯ ಲಯ, ಬಣ್ಣ ಮತ್ತು ಆಟಗಳ ನೆಲೆಯನ್ನು ಬಿಂಬಿಸುತ್ತದೆ. ಕೆಲವೊಮ್ಮೆ ಸೀಮಿಯಾಟಿಕ್ ಸಂಕೇತ ವ್ಯವಸ್ಥೆಯೂ ಆಗಿ ಮಾರ್ಪಡುವುದುಂಟು. ಕವಿತೆಯ ಬರವಣಿಗೆ ಅದಕ್ಕೊಂದು ಮಾದರಿ. ತಾಯಿಯೊಡನೆ ಮಗು ಹೊಂದಿರುವ ಸಂಬಂಧ ಭಗ್ನಗೊಳ್ಳದ ಹಂತವೆನಿಸಿದ ಈಡಿಪಸ್ ಕಾಂಪ್ಲೆಕ್ಸ್ ಪೂರ್ವದ ನೆಲೆಯನ್ನು ಸೂಚಿಸುತ್ತದೆ. ಇದು ಸುಪ್ತಪ್ರಜ್ಞೆಯಲ್ಲಿ ಒತ್ತಾಯಪೂರ್ವಕವಾಗಿ ಹುದುಗಿಕೊಳ್ಳುತ್ತದೆ. ತಂದೆ ಎಂಬ ವ್ಯವಸ್ಥೆಯನ್ನು ಪ್ರತಿನಿಧಿಸುವ ನಿಯಮಗಳ ಚೌಕಟ್ಟಿಗೆ ಮಗು ಒಳಪಟ್ಟಾಗ ಹೀಗೆ ಸುಪ್ತಪ್ರಜ್ಞೈಯೊಳಗೆ ಸೀಮಿಯಾಟಿಕ್ ಪ್ರವೇಶಿಸುತ್ತದೆ. ಸಾಂಕೇತಿಕ ವ್ಯವಸ್ಥೆಯಲ್ಲಿ ಹೆಂಗಸಿಗೆ ತಕ್ಕ ಸ್ಥಾನವಿಲ್ಲ. ಹಾಗಾಗಿ, ಅವರು ಸೀಮಿಯಾಟಿಕ್ ಅನ್ನು ಆಶ್ರಯಿಸಬೇಕಾಗುತ್ತದೆ ಎಂಬುದು ಕ್ರಿಸ್ತೀವಾ ಚಿಂತನೆ. ಆಕೆ ಎಕ್ರಿಚೂರ್ ಫೆಮಿನೈನ್ ಅನ್ನು ವಿರೋಧಿಸಿದರೂ ಹೆಂಗಸಿಗೆ ಸೀಮಿಯಾಟಿಕ್‌ನ ಸಂಬಂಧದಂತಹ ಸೌಲಭ್ಯವಿದೆ ಎಂದೂ, ಈ ಸೌಲಭ್ಯದ ನೆರವನ್ನು ತನ್ನ ಬರವಣಿಗೆಯಲ್ಲಿ ಹೆಂಗಸು ಚೆನ್ನಾಗಿ ಬಳಸಿಕೊಳ್ಳುವಳೆಂದೂ ಹೇಳುತ್ತಾಳೆ. ಹೀಗಿದ್ದರೂ ಸಾಹಿತ್ಯದಲ್ಲಿ ಸೀಮಿಯಾಟಿಕ್ ಭಗ್ನಗೊಳ್ಳುವುದನ್ನು ವಿವರಿಸುವಾಗ ಕ್ರಿಸ್ತೀವಾ ಪುರುಷ ಬರಹಗಾರರನ್ನಷ್ಟೇ ನಿದರ್ಶನವಾಗಿ ಇರಿಸಿಕೊಂಡು ಚರ್ಚಿಸಿರುವುದು ಒಂದು  ವಿರೋಧಾಬಾಸ. ಬಹುಶಃ ಮಾತನಾಡಲು ಬಲ್ಲವರಲ್ಲಿ ಯಾರು ದ್ವಿಲಿಂಗ ಸ್ಥರವನ್ನು ನೆಮ್ಮಲು ಸಿದ್ಧರಿರುತ್ತಾರೋ ಅವರಿಗೆಲ್ಲಾ ಈ ಸೀಮಿಯಾಟಿಕ್ ನೆಲೆಯ ಸೌಲಭ್ಯ ದೊರಕುವುದೆಂದು ಕ್ರಿಸ್ತೀವಾ ಹೇಳುತ್ತಿರಲೂಬಹುದು .‘‘ಪ್ರತಿಯೊಬ್ಬ ವ್ಯಕ್ತಿಗೂ ದ್ವಿಲಿಂಗಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಆದ್ದರಿಂದಲೇ,  ಸೂಚಕಗಳನ್ನು  ರೂಪಿಸುವ  ಅವುಗಳಿಗೆ  ಅರ್ಥಪ್ರದಾನ  ಮಾಡುವ, ಕೊನೆಗೆ ಅವು ಜೀವಂತಿಕೆಯಿಂದ ಮಿಡಿಯುವಂತೆ ಮಾಡುವ ಅವಕಾಶ ಅವರಿಗೆ ಲಭ್ಯವಿರುತ್ತದೆ’’. (ಕ್ರಿಸ್ತೀವಾ-೧೯೮೧) ಈ ಮಾತು ವೂಲ್ಬ್, ಸೀಕ್ಸೂ ಮತ್ತು ಇರಿಗೆರೆಯವರ  ನಿಲುವಿಗೆ ಹತ್ತಿರವಾಗಿದೆ. ಅಂದರೆ, ಹೆಂಗಸರ ಬರವಣಿಗೆ ಗಂಡಸರ ಬರವಣಿಗೆಗಿಂತ  ಭಿನ್ನವೇ ಆಗಿದ್ದರೂ, ಇಂಥ ಭಿನ್ನ ಬರವಣಿಗೆಯನ್ನು ಪ್ರಯೋಗ ಶೀಲರಾದ ಗಂಡಸರೂ ಕೂಡ ತಮ್ಮದನ್ನಾಗಿಸಿಕೊಳ್ಳಲು ಸಾಧ್ಯವಾಗಿದೆ. ಹಾಗೆ ನೋಡಿದರೆ ಅಂಥ ಬರವಣಿಗೆಯ ಮಾದರಿಗಳು ಗಂಡಸರಲ್ಲೇ ಹೆಚ್ಚಾಗಿ ದೊರೆಯುತ್ತವೆ. ಹೀಗೆಂದ ಮಾತ್ರಕ್ಕೆ ಹೆಂಗಸರು ಹೀಗೆ ಬರೆದಿಲ್ಲವೆಂದಲ್ಲ. ಅವರ ಬರವಣಿಗೆಯನ್ನು ವಿಶ್ಲೇಷಿಸುವಾಗ ಅವರೂ ಈ ಹಾದಿಯನ್ನು ತುಳಿಯುತ್ತಿದ್ದಾರೆಂಬುದು ಗೊತ್ತಾಗುತ್ತದೆ.

ಸಾಹಿತ್ಯದಲ್ಲಿ ಸೀಮಿಯಾಟಿಕ್‌ನ ಬಳಕೆ ಕ್ರಾಂತಿಕಾರಕವಾದುದು ಎಂದು ಕ್ರಿಸ್ತೀವಾ ನಂಬಿದ್ದಾಳೆ‘‘ಸಾಂಕೇತಿಕವಾದದ್ದನ್ನು ವಿರೋಧಿಸುವ ಯಾವ ಚಟುವಟಿಕೆಯಾದರೂ ಕ್ರಾಂತಿಕಾರಕವೇ’’ ಎಂಬುದು ಅವಳ ನಿಲುವು (೧೯೮೧) ಆದ್ದರಿಂದ, ಸೀಕ್ಯೂ ಮತ್ತು ಇರಿಗೆರೆಯರಂತೆ ಭಾಷೆಯ ಮೂಲಕವೇ ಗಮನಾರ್ಹವಾದ ರಾಜಕೀಯ ಕ್ರಿಯಾಶೀಲತೆಯನ್ನು ತೋರಬಹುದೆಂದು ಕ್ರಿಸ್ತೀವಾ ಒಪ್ಪುತ್ತಾಳೆ ‘‘ಮಾತುಗಾರಿಕೆಗೆ ಹೆಸರಾದ ವ್ಯಕ್ತಿಗಳು ಯಾವ ಸಂಸ್ಕೃತಿಯಲ್ಲಿ ಮುಂಚೂಣಿಯಲ್ಲಿರುತ್ತಾರೋ ಅಂಥಲ್ಲಿ ಅವರ ಸ್ಥಾನವನ್ನು ‘ಶಿಶ್ನ ಪ್ರಧಾನ’ನೆಲೆ ಎಂದು ಹೇಳಬಹುದು. ಇಂತಹ ಮಾತು ಪ್ರಧಾನನೆಲೆಯನ್ನು ಪ್ರಶ್ನಿಸುವ ಪ್ರವೃತ್ತಿಯನ್ನು ತೋರಬೇಕಾದರೆ ಭಾಷೆಯನ್ನು ಮರು ರೂಪಿಸಲೇ ಬೇಕಾಗುತ್ತದೆ.’’.(೧೯೮೧) ಈ ಮೂಲಕ ಸಾಹಿತ್ಯದಲ್ಲಿ ಸೀಮಿಯಾಟಿಕ್‌ನ ನೆಲೆಯನ್ನು ಎತ್ತಿ ಹಿಡಿದು ಶಿಶ್ನ ಕೇಂದ್ರಿತ ನೆಲೆಯನ್ನು ಕ್ರಿಸ್ತೀವಾ ಸ್ಪೋಟಿಸುತ್ತಾಳೆ.

ವೂಲ್ಛ್ ಮತ್ತು ಫ್ರೆಂಚ್ ಸ್ತ್ರೀವಾದಿಗಳು ಹೇಳಿದ್ದನ್ನು ಒಮ್ಮೆ ಸಂಗ್ರಹಿಸೋಣ. ಇವರೆಲ್ಲರೂ ಹೆಂಗಸಿನ ಬರವಣಿಗೆಯ ಭಾಷಿಕ ರಚನೆ ಮತ್ತು ಅಂತಃಸ್ಸತ್ವಗಳ ನೆಲೆಯಲ್ಲಿ ಗಂಡಸರ ಬರವಣಿಗೆಗಿಂತ ಸಂಪೂರ್ಣವಾಗಿ ಭಿನ್ನ ಎಂಬ ನಿಲುವನ್ನು ಮೊದಲಿಗೇ ಒಪ್ಪಿಕೊಂಡವರು. ವೂಲ್ಛ್‌ಳನ್ನು ಬಿಟ್ಟರೆ, ಉಳಿದವರಾರೂ ‘ಗಂಡು ವಾಕ್ಯ’ದ ಲಕ್ಷಣವನ್ನು ತೋರಿಸಲು ಹೊರಡಲಿಲ್ಲ. ವೂಲ್ಛ್ ಗಂಡುವಾಕ್ಯವೆಂದು ಒಂದು ಉದಾಹರಣೆ ನೀಡಿದರೂ ಅದನ್ನು ಭಾಷಿಕ  ನೆಲೆಯಲ್ಲಿ ವಿಶ್ಲೇಷಿಸಿ ಸಾಮಾನ್ಯ ಸೂತ್ರಗಳನ್ನು ನೀಡಲು ಮುಂದಾಗಲಿಲ್ಲ. ಬಹುಶಃ ನಮಗೆಲ್ಲಾ ಇದು ಗೊತ್ತಿರುವ ವಿಷಯವೇ ಅಲ್ಲವೇ ಎಂದು ತಿಳಿದಳೋ ಏನೋ!  ಇವರೆಲ್ಲರೂ ದ್ವಿಲಿಂಗಿ ಸ್ಥರವನ್ನು ನೆಮ್ಮುವ ಯಾರಾದರೂ ಈ ಭಿನ್ನಮಾದರಿಯ ಬರವಣಿಗೆಯನ್ನು ಸೃಷ್ಟಿಸಬಲ್ಲರು ಎಂದೇ ಹೇಳಿದ್ದರೆ.  ಗಂಡು ವಾಕ್ಯವನ್ನು ಹೆಂಗಸು  ಬಳಸಲು ಸಾಧ್ಯವೇ?  ಹಾಗೆ ಬಳಸುವುದು ಸಾಧ್ಯವಿದ್ದರೆ  ಇದಕ್ಕೆ ಇರುವ ಹಾದಿಗಳಾವುವು ಎನ್ನುವುದನ್ನು ಇವರು ವಿವರಿಸಲಿಲ್ಲ. ಕೊನೆಗೆ, ಈ ‘ಹೆಣ್ಣುವಾಕ್ಯ’ಗಳನ್ನು ಹೆಂಗಸರು ಅಪ್ರಜ್ಞಾಪೂರ್ವಕವಾಗಿ ಬಳಸುವ ಅವಕಾಶವನ್ನು ಪಡೆದಿರುತ್ತಾರೋ,  ಇಲ್ಲವೇ  ಹೆಂಗಸರು  ತಮ್ಮ   ಸೃಜನಶೀಲತೆಯ  ನೆಲೆಯಲ್ಲಿ  ಇಂಥ ವಾಕ್ಯಗಳ ಸೃಷ್ಟಿಗೆ ಪ್ರಜ್ಞಾಪೂರ್ವಕ ನಿರ್ಧಾರವನ್ನು ಮಾಡುತ್ತಾರೋ ಎನ್ನುವ ಪ್ರಶ್ನೆಯನ್ನೂ ಈ ಚಿಂತಕರು ಸ್ಪಷ್ಟಪಡಿಸಲಿಲ್ಲ.