. ಸ್ತ್ರೀವಾದ ಮತ್ತು ಭಾಷೆ

ಸ್ತ್ರೀವಾದವು ಈ ಶತಮಾನದ ಪ್ರಮುಖ ಸಾಮಾಜಿಕ ಚಳುವಳಿಯಲ್ಲಿ ಒಂದಾಗಿರುವುದಂತೂ ಖಂಡಿತ. ಜಗತ್ತಿನ ಹಲವು ಸಮಾಜಗಳ ಮೇಲೆ ಮತ್ತು ಬದುಕಿನ ಹಲವು ವಲಯಗಳ ಮೇಲೆ ಸ್ತ್ರೀವಾದದ ಪರಿಣಾಮ ಉಂಟಾಗಿದೆ.  ಸ್ತ್ರೀವಾದಿ ಚಳುವಳಿಗಳು ಎಲ್ಲಕ್ಕಿಂತ ಮುಖ್ಯವಾಗಿ ಜಂಡರ್ ತಾರತಮ್ಯವನ್ನು ನಿವಾರಿಸಲು ಹೋರಾಡುತ್ತಿವೆ. ಅಲ್ಲದೆ, ಸಮಾಜಕ್ಕೆ ಹೆಂಗಸರು ನೀಡಿದ ಕೊಡುಗೆಗಳಿಗೆ ಹೆಚ್ಚಿನ ಮನ್ನಣೆಯನ್ನು ದೊರಕಿಸಿಕೊಡುವುದು; ಪಿತೃಪ್ರಧಾನ ಮೌಲ್ಯವ್ಯವಸ್ಥೆಯನ್ನು ಬಲಗೊಳಿಸುತ್ತಿರುವ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ನಡಾವಳಿಗಳನ್ನು ಬದಲಿಸುವುದು ಕೂಡಾ ಈ ಚಳುವಳಿಯ ಗುರಿಯಾಗಿವೆ. ಪಿತೃಪ್ರಧಾನತೆಯು ಬಳಸುತ್ತಿರುವ ಪ್ರಧಾನ ಅಸ್ತ್ರಗಳಲ್ಲಿ ಭಾಷೆಯೂ ಒಂದೆಂಬುದನ್ನು ಸ್ತ್ರೀವಾದಿಗಳು ಬಲ್ಲರು: ಉದಾಹರಣೆಗೆ, ಸ್ತ್ರೀವಾದಿಯಾದ ಡೇಲ್ ಸ್ಪೆಂಡರ್ ಇಂಗ್ಲಿಶ್ ಭಾಷೆಯನ್ನು ಗಂಡು ನಿರ್ಮಿತವೆಂದೂ, ಅದು ಹೆಣ್ಣಿನ ಶೋಷಣೆಗೆ ಒತ್ತಾಸೆಯಾಗಿದೆಯೆಂದೂ ಹೇಳಿದಳು. (೧೯೮೦), ಹೀಗಾಗಿ ಭಾಷೆ ಮತ್ತು ಸಂಕಥನದ ಬಗೆಗಳನ್ನು ಸ್ತ್ರೀವಾದಿಗಳು ತೀವ್ರ ಪರಿಶೀಲನೆಗೆ ಗುರಿಪಡಿಸಿದರು. ಆ ಮೂಲಕ ಭಾಷಾಬಳಕೆಯಲ್ಲಿ ನೆಲೆಯೂರಿರುವ ಲಿಂಗತಾರತಮ್ಯದ ಪ್ರಕ್ರಿಯೆಯನ್ನು ವಿವರವಾಗಿ ಮಂಡಿಸಿದ್ದಾರೆ.

. ಸ್ತ್ರೀವಾದ ಮತ್ತು ಭಾಷಾಸುಧಾರಣೆ

ಪಾಶ್ಚಾತ್ಯ ಸಮಾಜಗಳಲ್ಲಿರುವ ಸ್ತ್ರೀವಾದಿಗಳು ಭಾಷೆಯ ಪಿತೃಪ್ರಧಾನ ಮತ್ತು ಲಿಂಗತಾರಮ್ಯದ ನೆಲೆಗಳನ್ನು ಬದಲಾಯಿಸಬೇಕೆಂದು ಮುಂದಾದರು; ಮತ್ತು ಅದಕ್ಕೆ ಅಗತ್ಯವಾದ ಹಲವು ಬಗೆಯ ಭಾಷಾಸುಧಾರಣೆ, ಇಲ್ಲವೇ ಭಾಷಾಯೋಜನೆಗೆ ಕಾರ್ಯಕ್ರಮವನ್ನು ರೂಪಿಸಿದರು. ಹಲವು ಸ್ತ್ರೀವಾದಿಗಳು ಭಾಷಿಕ ಮತ್ತು ಸಂಕಥನದ ನಡವಳಿಗಳನ್ನು ಬದಲಾಯಿಸುವುದು ಹೆಂಗಸಿನ ಬಿಡುಗಡೆಗೆ ಅಗತ್ಯ ಎಂದು ನಂಬಿದ್ದರಾದರೂ, ಅವರೆಲ್ಲರೂ ನಡೆಸಿದ ಪ್ರಯತ್ನಗಳು ಒಂದೇ ಬಗೆಯಲ್ಲಿರಲಿಲ್ಲ. ಸ್ತ್ರೀವಾದಿ ಚಳುವಳಿಗಳಲ್ಲಿರುವ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಮತ್ತು ತಾತ್ತ್ವಿಕ ವೈವಿಧ್ಯಗಳು ಸ್ತ್ರೀವಾದಿ ಭಾಷಾಸುಧಾರಣೆಗೆ ಕೈಗೊಂಡ ಹಾದಿ ಮತ್ತು ಗುರಿಗಳ ವೈವಿಧ್ಯಕ್ಕೂ ಕಾರಣವಾಯಿತು. ಉದಾಹರಣೆಗೆ, ಎಲ್ಲ ಸ್ತ್ರೀವಾದಿಗಳೂ ಗಂಡು, ಹೆಣ್ಣುಗಳ ನಡುವೆ ಸಮಾನತೆಯನ್ನು ಸಾಧಿಸಲು ಹೆಂಗಸಿನ ಬಿಡುಗಡೆಯೇ ಮುಖ್ಯವೆಂದು ವ್ಯಾಖ್ಯಾನಿಸುವುದಿಲ್ಲ. ಹಾಗೆಯೇ, ಸ್ತ್ರೀವಾದಿಗಳು ಸೂಚಿಸಿದ ಎಲ್ಲ ಭಾಷಾಸುಧಾರಣೆಗಳಿಗೂ ಗಂಡು, ಹೆಣ್ಣುಗಳ ನಡುವೆ ಭಾಷಿಕ ಸಮಾನತೆಯನ್ನು ತರುವ ಗುರಿ ನಿಗದಿಯಾಗಿಲ್ಲ.

ಕೆಲವು ಸುಧಾರಣೆಗಳು ಭಾಷೆಯಲ್ಲಿರುವ  ಲಿಂಗತಾರತಮ್ಯಕ್ಕೆ ಪಿತೃಪ್ರಧಾನತೆಯು ಕಾರಣವಾಗಿರುವುದನ್ನು ತೆರೆದು ತೋರಿಸುತ್ತಿವೆ. ಅದಕ್ಕಾಗಿ ಬೇಕಾದ ಭಾಷಾವಿಚ್ಛೇದಗಳನ್ನು ಒಂದು ಹುನ್ನಾರವಾಗಿ ರೂಪಿಸಿವೆ. ಹೀಗೆ ಭಾಷಾವಿಚ್ಛೇದಗಳನ್ನು ರೂಪಿಸಲೆಂದು ಭಾಷಾಂಶಗಳಲ್ಲಿ ಹಲವು ಪ್ರಯೋಗಗಳನ್ನು ಮತ್ತು ಹೊಸ ರಚನೆಗಳನ್ನು ಮಾಡಲಾಗಿದೆ.  ಉದಾಹರಣೆಗೆ, History ಎಂಬುದರ ಬದಲು Herstory ಎಂಬ ಪದ ಬಳಸಿದಾಗ ಚರಿತ್ರೆಯು ಕೇವಲ ಗಂಡಸಿಗೆ ಮಾತ್ರ ಸಂಬಂಧಿಸಿದ್ದಲ್ಲ ಎಂಬುದನ್ನು ಹೇಳಿದಂತಾಯಿತು. ಇದೊಂದು ಭಾಷಾವಿಚ್ಛೇದ. history ಪದದಲ್ಲಿ ಈವರೆಗೆ ಇಲ್ಲದಿದ್ದ ‘his’ ಎಂಬ ಪದಭಾಗವನ್ನು ಆರೋಪಿಸಿ, ಅದರ ಬದಲು ‘her’ಪದವನ್ನು ಬಳಸಿ ಹೊಸ ಅರ್ಥವನ್ನು ಸೃಷ್ಟಿಸಲಾಗಿದೆ.

ಸ್ತ್ರೀಕೇಂದ್ರಿತ ಭಾಷೆಯನ್ನು ಸೃಷ್ಟಿಸಿ ಆ ಮೂಲಕ ವಾಸ್ತವವನ್ನು ಹೆಂಗಸಿನ ದೃಷ್ಟಿಯಿಂದ ಮಂಡಿಸಲು ಅನುವು ಮಾಡಿಕೊಡುವುದು ಸ್ತ್ರೀವಾದಿ ಭಾಷಾಯೋಜನೆಯ ಮತ್ತೊಂದು ಗುರಿಯಾಗಿದೆ. ಇದಕ್ಕಾಗಿ Witch, hag, ಮುಂತಾದ ಪದಗಳಿಗೆ ಸ್ತ್ರೀ ಕೇಂದ್ರಿತವಾದ ಅರ್ಥಗಳನ್ನು ನೀಡಲಾಗಿದೆ. malestream, femocrat ಮುಂತಾದ ಹೊಸ ಪದಗಳನ್ನು ರಚಿಸಲಾಗಿದೆ ;ಹಾಗೆಯೇ ಬರೆಯುವ ವಿಧಾನದಲ್ಲಿ ಬದಲಾವಣೆ ತಂದು Women ಎನ್ನುವುದನ್ನು Womyn ಇಲ್ಲವೇ Wimminಎಂದು ಬರೆಯಲಾಗುತ್ತಿದೆ. ಹೀಗೆಯೇ ಸ್ತ್ರೀಕೇಂದ್ರಿತವಾದ ಸಂಕಥನಗಳನ್ನು, ಅಷ್ಟೇಕೆ ಅವರಿಗೇ ಒಂದು ಹೊಸ ಭಾಷೆಯನ್ನು, ರೂಪಿಸಲಾಗುತ್ತಿದೆ. ಸೂಜೆಟ್ ಹೇಡನ್ ಎಲ್ಗಿನ್ ಎಂಬ ವೈಜ್ಞಾನಿಕ ಕಾದಂಬರಿಕಾರ್ತಿ ಮತ್ತು ಭಾಷಾಶಾಸ್ತ್ರಜ್ಞೆ Laadan ಎಂಬ ಹೊಸ ಭಾಷೆಯೊಂದನ್ನೇ ಸೃಷ್ಟಿಸಿದ್ದಾಳೆ.  ಇದನ್ನು ‘‘ಹೆಂಗಸರ ಗ್ರಹಿಕೆಗಳನ್ನು ಮಂಡಿಸಲು ನೆರವಾಗುವ ನಿರ್ದಿಷ್ಟ ಉದ್ದೇಶಕ್ಕಾಗಿಯೇ ರಚನೆಯಾದ ಭಾಷೆ’’ಎಂದು ಹೇಳಿದ್ದಾಳೆ. (ಎಲ್ಗಿನ್ ೧೯೮೮)

ಸ್ತ್ರೀವಾದಿ ಭಾಷಾಯೋಜನೆಗಳಲ್ಲಿ ನಡೆದ ಸುಧಾರಣಾ ಚಟುವಟಿಕೆಗಳಲ್ಲಿ ಮತ್ತು ಗುರಿಗಳಲ್ಲಿ ಎಷ್ಟೇ ವೈವಿಧ್ಯಗಳಿದ್ದರೂ ಬಹು ಜನರಿಗೆ ‘ಸ್ತ್ರೀವಾದಿ ಭಾಷಾ ಯೋಜನೆ’ಎಂದರೆ, ಗಂಡು ಹೆಣ್ಣುಗಳ ನಡುವೆ ಭಾಷಾ ಸಮಾನತೆಯನ್ನು ತರುವ ಉದ್ದೇಶದಿಂದ ನಡೆಯುತ್ತಿರುವ ಚಟುವಟಿಕೆ ಎಂದಷ್ಟೇ ಪರಿಚಿತವಾಗಿದೆ. ಸಾರ್ವಜನಿಕ ವಲಯಗಳಲ್ಲಿ ಉದಾರವಾದಿ ಸ್ತ್ರೀವಾದಿ ನೆಲೆಗಳು ಲಿಂಗಸಮಾನತೆಯನ್ನೇ ಮುಖ್ಯ ಗುರಿಯನ್ನಾಗಿ ಪ್ರತಿಪಾದಿಸುತ್ತಿರುವುದೇ ಹೀಗಾಗಲು ಕಾರಣ. ಲಿಂಗತಾರತಮ್ಯದ ಒಂದು ನೆಲೆಯನ್ನಾಗಿ ಭಾಷಾತಾರತಮ್ಯವನ್ನು ಪರಿಗಣಿಸಿದಾಗ, ಲಿಂಗತಾರತಮ್ಯ ನಿವಾರಣೆಗೆ ಕೈಗೊಳ್ಳುವ ಕಾರ್ಯಕ್ರಮಗಳನ್ನು (ಉದಾಹರಣೆಗೆ ಉದ್ಯೋಗಾವಕಾಶ) ಭಾಷೆಯ ನೆಲೆಯಲ್ಲೂ ಕೈಗೊಳ್ಳಬೇಕಾಗುತ್ತದೆ. ವೃತ್ತಿಯ ಹೆಸರುಗಳಲ್ಲಿ ಇರುವ ಜಂಡರ್ ಪೂರ್ವಾಗ್ರಹಗಳು ನೇರವಾಗಿ ಉದ್ಯೋಗ ವಲಯದ ಲಿಂಗತಾರತಮ್ಯಗಳನ್ನು ಪ್ರತಿಬಿಂಬಿಸುತ್ತದೆ. ಈ ಭಾಷಾಸಮಾನತೆಯ ಗುರಿಗೆ ದೊರಕಿರುವ ಮನ್ನಣೆಗೆ ಲಿಂಗಬೇಧವಿಲ್ಲದ ಭಾಷಾಬಳಕೆ ಮಾಡಬೇಕೆಂದು ಸಮೂಹ ಮಾಧ್ಯಮಗಳಿಗೆ ನೀಡಿರುವ ಮಾರ್ಗದರ್ಶಕ ಸೂತ್ರಗಳು ಕಾರಣವಾಗಿವೆ. ಹೀಗಾಗಿಯೇ ಈ ಸಮೂಹ ಮಾಧ್ಯಮಗಳು ಸ್ತ್ರೀವಾದಿ ಭಾಷಾಸುಧಾರಣೆಗಳ ಜಾರಿಗೆ ಮುಖ್ಯ ಉಪಕರಣಗಳಾಗಿವೆ. ಭಾಷಾ ಸಮಾನತೆಯನ್ನು ಪ್ರತಿಪಾದಿಸುವವರು ಜಂಡರ್ ತಟಸ್ಥೀಕರಣವನ್ನು (ಕೆಲವೊಮ್ಮೆ ಜಂಡರ್ ಅನ್ನು ಅಮೂರ್ತಗೊಳಿಸುವುದು) ಮತ್ತು /ಅಥವಾ ಜಂಡರ್ ನಿರ್ದಿಷ್ಟತೆಯನ್ನು (ಸ್ತ್ರೀಕರಣ) ಮುಖ್ಯ ತಂತ್ರಗಳನ್ನಾಗಿ ರೂಪಿಸಿವೆ. ಈ ಮೂಲಕ ಗಂಡು ಹೆಣ್ಣುಗಳ ನಡುವೆ ಸಮಾನ ಪ್ರತಿನಿಧೀಕರಣಕ್ಕೆ ಅನುವು ಮಾಡಿಕೊಡುವ ಭಾಷಾವ್ಯವಸ್ಥೆಯನ್ನು ರೂಪಿಸಲು ಸಾಧ್ಯವೆಂದು ಹೇಳುತ್ತವೆ. ಜಂಡರ್ ತಟಸ್ಥೀಕರಣಕ್ಕಾಗಿ ಜಂಡರ್ ವಿಶಿಷ್ಟವಾದ ಉಕ್ತಿಗಳು ಮತ್ತು ರಚನೆಗಳನ್ನು ಕಡಿಮೆ ಮಾಡಬೇಕು, ಇಲ್ಲವೇ ಕಿತ್ತೊಗೆಯಬೇಕು. ಅಂದರೆ ಯಾವುದೇ ಪದದ, ವಾಕ್ಯರಚನೆಯ, ಇಲ್ಲವೇ, ಪದಕೋಶದ ಘಟಕವು ನಾಮಪದ ಮತ್ತು ಸರ್ವನಾಮಗಳಲ್ಲಿ ಕರ್ತೃವನ್ನು ಗಂಡು ಇಲ್ಲವೇ ಹೆಣ್ಣು ಎಂದು ಸೂಚಿಸುತ್ತಿದ್ದರೆ ಅದನ್ನು ತಟಸ್ಥಗೊಳಿಸಬೇಕು. ಎಲ್ಲರಿಗೂ ಅನ್ವಯಿಸುವಂತೆ ಬದಲಿಸಬೇಕು. ಉದಾಹರಣೆಗೆ, ಇಂಗ್ಲಿಶ್‌ನಲ್ಲಿರುವ ಜಂಡರ್ ವಿಶಿಷ್ಟ ಪ್ರತ್ಯಯಗಳಾದ -ess, -ette, (tr) is  ಮುಂತಾದವನ್ನು ಕೈ ಬಿಡಬೇಕು. ಅವು ಸೃಷ್ಟಿಸುವ ಪದಗಳನ್ನು (hostess, aviatris, usherette, ಎಂದು ಬದಲಿಸಬೇಕು. ಗಂಡಸನ್ನು ಮಾತ್ರ ಸೂಚಿಸುವಂತಿರುವ ಸಂಯುಕ್ತ ನಾಮಪದಗಳನ್ನು ಬದಲಿಸುವುದು. (Chairman – Chairperson, tradesman – tradesperson) ಮತ್ತು ಎಲ್ಲ ಮನುಷ್ಯರಿಗೂ ಅನ್ವಯಿಸುವಂತೆ he ಪದದ ಬಳಕೆಯನ್ನು ತಡೆ ಹಿಡಿಯಬೇಕು.  ಜಂಡರ್ ವಿಶಿಷ್ಟೀಕರಣ (ಇದನ್ನು ಸ್ತ್ರೀಕರಣವೆಂದೂ ಹೇಳಬಹುದು) ತಂತ್ರವನ್ನು ಬಳಸಿ ಈವರೆಗೆ ಅದೃಶ್ಯವಾಗಿರುವ ಲಿಂಗವನ್ನು (ಬಹುಮಟ್ಟಿಗೆ ಹೆಂಗಸು) ನಿರ್ದಿಷ್ಟ ಮತ್ತು ವ್ಯವಸ್ಥಿತ ಬದಲಾವಣೆಗಳ ಮುಖಾಂತರ ಕಣ್ಣಿಗೆ ಕಾಣುವಂತೆ ಮಾಡಿ ಭಾಷಿಕ ಸಮಾನತೆಯನ್ನು ಸಾಧಿಸಲಾಗುತ್ತದೆ.  ಇಂಗ್ಲಿಶ್ ಭಾಷೆಯಲ್ಲಿ ಈ ತಂತ್ರವನ್ನು ಹೆಚ್ಚು ಬಳಸುವುದಿಲ್ಲ. ವ್ಯಾಕರಣದ ನೆಲೆಯ ಜಂಡರ್ ವ್ಯವಸ್ಥೆಯಲ್ಲಿರುವ ಭಾಷೆಗಳಲ್ಲಿ ಈ ತಂತ್ರ ಬಳಕೆಯಾಗುತ್ತದೆ. ಆದರೂ ಇಂಗ್ಲಿಶ್‌ನಲ್ಲಿ ಎಲ್ಲ ಜನರಿಗೂ ಅನ್ವಯವಾಗುವ ಸಂದರ್ಭಗಳಲ್ಲಿ he or she ಎಂದೂ, police women and men ಎಂದೂ Actors and Actresses ಎಂದೂ ಬಳಸುವುದು ಒಂದು ಜಂಡರ್ ವಿಶಿಷ್ಟೀಕರಣ ತಂತ್ರವೇ ಆಗಿದೆ. ಭಾಷಿಕ ಸಮಾನತೆಯನ್ನು ತರಲೆಂದು ಭಾಷಾಸುಧಾರಣೆಗಳನ್ನು ಮಾಡುವ ಪ್ರಕ್ರಿಯೆಯ ಹಿಂದೆ ಇಂತಹ ಸುಧಾರಿತ ಭಾಷಾ ಪ್ರಯೋಗಗಳು ಅಂತಿಮವಾಗಿ ಲಿಂಗಬೇಧರಹಿತ ಭಾಷೆಯನ್ನು ರೂಪಿಸುತ್ತದೆ ಎಂಬ ನಂಬಿಕೆ ಇದೆ.

. ಸ್ತ್ರೀವಾದಿ ಭಾಷಾಸುಧಾರಣೆಗಳ ಮೌಲ್ಯಮಾಪನ

ಸ್ತ್ರೀವಾದಿ ಭಾಷಾಸುಧಾರಣೆಗಳ ಹಲವು ಬಗೆಗಳಲ್ಲಿ ಭಾಷಿಕ ಸಮಾನತೆಯನ್ನು ತರುವ ಬಗೆಯು ಮುಖ್ಯವಾದುದು ಮತ್ತು ವ್ಯಾಪಕವಾದುದು. ಈ ಬಗೆಯು ಎಷ್ಟು ಫಲಪ್ರದವಾಗಿದೆ ಎಂಬುದನ್ನೀಗ ನೋಡೋಣ.

ಯಾವುದೇ ಭಾಷಾಯೋಜನೆಯಲ್ಲಿ ಫಲಿತಗಳನ್ನು ಮೌಲ್ಯಮಾಪನ ಮಾಡುವುದು ಬಹು ಮುಖ್ಯವಾದ ಹಂತ. ಭಾಷಾಯೋಜಕರು ಮತ್ತು ಈ ಯೋಜನೆಯ ಕಾರ್ಯಕ್ರಮಗಳನ್ನು ಬೆಂಬಲಿಸಿ ಜಾರಿಗೆ ತರಲು ನೆರವಾದ ಆಸಕ್ತ ಗುಂಪುಗಳು ಯೋಜನೆಯ ಪ್ರಭಾವವು ವ್ಯಕ್ತಿಗಳ, ಸಮೂಹಗಳ ಭಾಷಿಕವರ್ತನೆಗಳಲ್ಲಿ ಯಾವ ಬದಲಾವಣೆಗಳನ್ನು ತಂದಿದೆ ಎಂಬುದನ್ನು ತಿಳಿಯಲು ಆಸಕ್ತರಾಗಿರುತ್ತಾರೆ. ಭಾಷಾ ಸುಧಾರಣೆಯನ್ನು ಬಯಸುವವರು, ಇಲ್ಲವೇ ವಿರೋಧಿಸುವವರು ಪ್ರಸ್ತಾವಿತ ಸುಧಾರಣೆಗಳನ್ನು ಒಪ್ಪಿಕೊಳ್ಳಲಾಗಿದೆಯೋ, ಇಲ್ಲವೇ ತಿರಸ್ಕರಿಸಲಾಗಿದೆಯೋ ಎಂಬ ಬಗ್ಗೆ ಮಾತ್ರ ಆಸಕ್ತರಾಗಿರುತ್ತಾರೆ. ಆದರೆ ಭಾಷಾಯೋಜಕರಿಗೆ ಮೌಲ್ಯಮಾಪನ ಪ್ರಕ್ರಿಯೆಯು ಭಾಷಾಯೋಜನೆಯ ಸ್ವರೂಪದ ಬಗೆಗೆ ಬೆಲೆಯುಳ್ಳ ಮಾಹಿತಿಯನ್ನು ಒದಗಿಸುತ್ತದೆ. ಬದಲಾವಣೆಗೆ ಅನುಕೂಲಕರವಾದ, ಇಲ್ಲವೇ ಅಡ್ಡಿ ತರುವ ಸಂಗತಿಗಳು ಅವರಿಗೆ ಗೊತ್ತಾಗುತ್ತದೆ. ಭಾಷಾಯೋಜಕರು ಭಾಷಾಶಾಸ್ತ್ರಜ್ಞರೂ ಆಗಿರುವುದರಿಂದ ಭಾಷೆಯಲ್ಲಿ ನಡೆಯುವ ಯೋಜಿತವಾದ ಮತ್ತು ಯೋಜಿತವಲ್ಲದ ಬದಲಾವಣೆಗಳನ್ನು ಹೋಲಿಸಿ ನೋಡುವ ಅವಕಾಶವಿರುತ್ತದೆ. ಆದ್ದರಿಂದ ಭಾಷಾಬದಲಾವಣೆಗಳನ್ನು ಇನ್ನೂ ಹೆಚ್ಚು ಚೆನ್ನಾಗಿ ಅವರು ಅರ್ಥ ಮಾಡಿಕೊಳ್ಳಬಲ್ಲರು.

ನಾನಿಲ್ಲಿ ಸ್ತ್ರೀವಾದಿ ಭಾಷಾಯೋಜನೆಯ ಮೌಲ್ಯಮಾಪನದಲ್ಲಿ ಅಡಕಗೊಂಡ ಎರಡು ಮುಖ್ಯ ನೆಲೆಗಳನ್ನು ಪರಿಶೀಲಿಸುತ್ತಿದ್ದೇನೆ. ೧. ಸ್ತ್ರೀವಾದಿ ಭಾಷಾಪ್ರಸ್ತಾವನೆಗಳನ್ನು ಅಳವಡಿಸಿಕೊಂಡಿರುವುದಕ್ಕೆ ಇರುವ ಪುರಾವೆಗಳು ೨. ಸ್ತ್ರೀವಾದಿ ಭಾಷಾಬದಲಾವಣೆಗಳು ಭಾಷಿಕಸಮುದಾಯಗಳಲ್ಲಿ ವ್ಯಾಪಕವಾಗಿ ಹರಡುವ ಬಗೆಗಳನ್ನು ಕುರಿತಂತೆ ಇರುವ ಒಳನೋಟಗಳು.

ಸ್ತ್ರೀವಾದಿ ಭಾಷಾಸುಧಾರಣೆಗಳಲ್ಲಿ ಪ್ರಸ್ತಾವಗೊಂಡ ಬದಲಾವಣೆಗಳನ್ನು ಒಪ್ಪಿ ಬಳಸುತ್ತಿರುವ ನೆಲೆಯನ್ನು ಪರಿಶೀಲಿಸುವಾಗ ಭಾಷಾಸಮಾನತೆಯನ್ನು ಬಯಸುವ ಸ್ತ್ರೀವಾದಿ ಪ್ರಸ್ತಾವಗಳನ್ನಷ್ಟೇ ಪರಿಶೀಲಿಸಲಾಗುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ-ಜಂಡರ್ ತಟಸ್ಥ ಮತ್ತು ಇಲ್ಲವೇ ಜಂಡರ್ ಒಳಗೊಳ್ಳುವ ವೃತ್ತಿನಾಮಗಳು ಮತ್ತು ಬಿರುದುಗಳು. ಈ ಚರ್ಚೆಗೆ ಬೇಕಾದ ಮಾಹಿತಿಯನ್ನು ಇಂಗ್ಲಿಶ್ ಭಾಷೆಯಿಂದ ಪಡೆದುಕೊಳ್ಳಲಾಗಿದೆ. ಅಲ್ಲಲ್ಲಿ ಡಚ್, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳ ಮಾಹಿತಿಗಳೂ ಸೇರಿಕೊಂಡಿವೆ. ಭಾಷಾಸುಧಾರಣೆಗಳು ಹರಡುವ ಬಗೆಯು ಇನ್ನೂ ಹೆಚ್ಚು ಶೋಧನೆಗೆ ಒಳಗಾಗಬೇಕಾಗಿರುವ ವಲಯ. ಹಾಗಾಗಿ, ಇಲ್ಲಿ ಕೇವಲ ಕೆಲವು ಪ್ರವೃತ್ತಿಗಳನ್ನು ಮಾತ್ರ ಗುರುತಿಸಲಾಗಿದೆ.

. ಸ್ತ್ರೀವಾದಿ ಭಾಷಾಸುಧಾರಣೆಗಳ ಬಳಕೆ ಗೆಲುವೋಸೋಲೋ?

ವೃತ್ತಿಯ ಹೆಸರುಗಳು ಹಲವು ಪಾಶ್ಚಾತ್ಯ ಸಮಾಜಗಳಲ್ಲಿ ವೃತ್ತಿಯ ಹೆಸರುಗಳಿಗೆ ಜಂಡರ್ ಪೂರ್ವಾಗ್ರಹ ಇರುವುದು ಸ್ತ್ರೀವಾದಿಗಳ ಗಮನವನ್ನು ಸೆಳೆದಿತ್ತು. ಅಲ್ಲದೆ, ಇಂತಹ ಜಂಡರ್ ಪೂರ್ವಾಗ್ರಹದಿಂದಾಗಿ ಲಿಂಗತಾರತಮ್ಯವು ಜಾರಿಗೆ ಬರುವುದನ್ನು ಗಮನಿಸಿದ್ದರು. ಇದರಿಂದ ಉದ್ಯೋಗದಲ್ಲಿ ಈ ಬಗೆಯ ತಾರತಮ್ಯ ನಿವಾರಣೆಗೆ ಬೇಕಾದ ಕಾನೂನಿನ ಕ್ರಮಗಳನ್ನು ಕೈಗೊಳ್ಳಲು ಹೋರಾಟ ನಡೆಸಿದರು. ಸ್ತ್ರೀವಾದಿಗಳು ಮತ್ತು ಕಾರ್ಯಕರ್ತರುಗಳು ಈ ವೃತ್ತಿಯ ಹೆಸರುಗಳಲ್ಲಿ ಮತ್ತು ಬಳಕೆಯಲ್ಲಿ ಗಂಡಸರಿಗೆ ಅನುಕೂಲಕರವಾದ ಸಂದರ್ಭವನ್ನು ಸೃಷ್ಟಿಸಿರುವುದನ್ನು ಮತ್ತು ಇದರಿಂದಾಗಿ ಈ ವಲಯಗಳಲ್ಲಿ ಹೆಂಗಸರು ‘ಕಾಣದಂತಾಗಿರು’ವುದನ್ನು ಗುರುತಿಸಿದರು. ಉದಾಹರಣೆಗೆ, ಎಷ್ಟೋ ವರ್ಗೀಕೃತ ಜಾಹಿರಾತುಗಳಲ್ಲಿ ಗಂಡಸರು ಮಾತ್ರ ಅರ್ಹ ಅಭ್ಯರ್ಥಿಗಳು ಎಂದು ಸೂಚಿಸುವ ಭಾಷಿಕ ಪರಿಪಾಠವಿದೆ. ಅಭ್ಯರ್ಥಿಗಳ ಅರ್ಹತೆಗಳನ್ನು ಬಣ್ಣಿಸುವ ಪದಗಳಲ್ಲಿ (ದಿಟ್ಟ, ಮುನ್ನುಗ್ಗುವ ಸ್ವಭಾವದ ಮುಂತಾದವು) ಗಂಡು ಸಿದ್ಧಮಾದರಿಯ ಭಾಷೆ ಬಳಕೆಯಾಗಿರುತ್ತದೆ. ಸಮೂಹವಾಚಿ ನಾಮಪದಗಳನ್ನು ಬಳಸಬೇಕಾದಾಗ ಗಂಡು ನಾಮಪದ ಮತ್ತು ಸರ್ವನಾಮಗಳನ್ನು ಬಳಸುವುದು (the applicant storeman, tradesman, Cameraman) .  ಈ ಬಳಕೆಗಳಿಂದಾಗಿ ಅರ್ಹ ಅಭ್ಯರ್ಥಿಯಲ್ಲಿ ಗಂಡು ಚಹರೆಗಳು ಇರಬೇಕೆಂದು ಹೇಳಿದಂತಾಗುತ್ತದೆ. ೧೯೭೦ -೮೦ ರ ದಶಕಗಳಲ್ಲಿ ನಡೆದ ಸಂಶೋಧನೆಗಳು ಹೀಗೆ, ಪುರುಷವಾಚಿ ಸಮೂಹ ನಾಮಪದಗಳನ್ನೂ ಸರ್ವನಾಮಗಳನ್ನೂ ಬಳಸಿದಾಗ, ಓದಿದವರು ಅವುಗಳನ್ನು ಕೇವಲ ಸಮೂಹ ವಾಚಿಗಳೆಂದೂ, ಇಲ್ಲವೇ ಜಂಡರ್ ತಟಸ್ಥ ಪದಗಳೆಂದೂ ಪರಿಗಣಿಸಲಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿವೆ. ಬದಲಿಗೆ ಭಾಷಾಬಳಕೆದಾರರು ಆ ಪದಗಳ ಮೂಲಕ ಗಂಡಸಿಗೆ ಸಂಬಂಧಿಸಿದ ಚಿತ್ರಗಳನ್ನೇ ಕಲ್ಪಿಸಿಕೊಂಡರು.

ವೃತ್ತಿಯ ಹೆಸರುಗಳಲ್ಲಿರುವ ಜಂಡರ್ ಪೂರ್ವಾಗ್ರಹಗಳನ್ನು ಕಿತ್ತು ಹಾಕಲು ಎರಡು ಮುಖ್ಯ ತಂತ್ರಗಳನ್ನು ಯೋಜಿಸಲಾಯಿತು: ೧) ಜಂಡರ್ ತಟಸ್ಥೀಕರಣ ೨) ಜಂಡರ್ ವಿಶಿಷ್ಟೀಕರಣ. (ಸ್ತ್ರೀಕರಣ) ಇವುಗಳಲ್ಲಿ ಯಾವುದನ್ನು ಇನ್ನೊಂದರ ಬದಲು ಆಯ್ಕೆ ಮಾಡಬೇಕೆಂಬುದು ಆಯಾ ಭಾಷೆಗಳ ಸ್ವರೂಪವನ್ನು ಅವಲಂಬಿಸಿದೆ. ವ್ಯಾಕರಣಾತ್ಮಕ ಜಂಡರನ್ನು ಹೊಂದಿರುವ ಭಾಷೆಗಳಲ್ಲಿ (ಜರ್ಮನ್, ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್) ಜಂಡರ್ ವಿಶಿಷ್ಟೀಕರಣವನ್ನು ಮುಖ್ಯ ತಂತ್ರವನ್ನಾಗಿ ಬಳಸಬೇಕಾಗಿದೆ. ಸಹಜ ಜಂಡರ್ ವ್ಯವಸ್ಥೆಯನ್ನು ಹೊಂದಿರುವ ಭಾಷೆಗಳಲ್ಲಿ, ಇಲ್ಲವೇ ಲಿಂಗಸೂಚಕ ಪ್ರತ್ಯಯಗಳು ಕಡಿಮೆ ಇರುವ ಭಾಷೆಗಳಲ್ಲಿ, ಇಲ್ಲವೇ ಅಂತಹ ಪ್ರತ್ಯಯಗಳಿದ್ದೂ ಈಗ ಅವು ಉತ್ಪಾದಕತೆಯನ್ನು ಕಳೆದುಕೊಂಡಿರುವ ಭಾಷೆಗಳಲ್ಲಿ (ಡೇನಿಷ್, ಸ್ಪೀಡಿಷ್, ಮತ್ತು ಡಚ್) ಹೆಚ್ಚಾಗಿ ಜಂಡರ್ ತಟಸ್ಥೀಕರಣ ತಂತ್ರವನ್ನು ಬಳಸಲಾಗಿದೆ.

ಹೀಗಿದ್ದರೂ, ಯಾವ ತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಭಾಷೆಯ ಆಚೆಗಿನ, ಇಲ್ಲವೇ ಸಾಮಾಜಿಕ ನೆಲೆಯ ವಿಚಾರಗಳೂ ಕೂಡಾ ಪ್ರಭಾವಿಸಿವೆ. ‘ಜಂಡರ್ ಅನ್ನು ವೃತ್ತಿಯ ವಲಯದಿಂದ ಹೊರಗಿಡುವುದು’ ಜಂಡರ್ ತಟಸ್ಥೀಕರಣದ ಮುಖ್ಯ ಗುರಿ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ವ್ಯಕ್ತಿಯು ಯಾವ ಲಿಂಗಕ್ಕೆ ಸೇರಿದವರೆಂಬ ಅಂಶವು ವೃತ್ತಿಗೆ ಮಹತ್ವದ್ದೂ, ಇಲ್ಲವೇ ಪ್ರಸ್ತುತದ್ದೂ ಆಗಿರದ ಸಾಮಾಜಿಕ ಸನ್ನಿವೇಶವನ್ನು ರೂಪಿಸುವ ಉದ್ದೇಶವಿದೆ. ಸ್ತ್ರೀಕರಣ ತಂತ್ರವನ್ನು ಮುಂದಿಟ್ಟವರು ಹೂಡುವ ವಾದವೇ ಬೇರೆ. ದುಡಿಯುವ ಜನವರ್ಗಗಳಲ್ಲಿ ಹೆಂಗಸರ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ, ವೃತ್ತಿಗಳಲ್ಲಿ ಭಾಷಿಕ ಸಮಾನತೆಯನ್ನು ಸ್ಥಾಪಿಸುವುದು ಪ್ರಭಾವಶಾಲಿಯಾಗುತ್ತದೆ ಎನ್ನುತ್ತಾರೆ. ಅಂದರೆ, ಜಂಡರ್ ವಿಶಿಷ್ಟೀಕರಣ ಅಥವಾ ಸ್ತ್ರೀಕರಣ ತಂತ್ರದ ಮೂಲಕ, ಹೆಂಗಸರು ದುಡಿಯುವ ವರ್ಗದಲ್ಲಿ ಪಾಲ್ಗೊಳ್ಳುತ್ತಿರುವುದು ಕಣ್ಣಿಗೆ ಕಾಣುವಂತಾಗುತ್ತದೆ ಎಂಬುದು ಇವರ ವಾದ.

ಈ ಭಾಷಾಬಳಕೆಯ ವಲಯದಲ್ಲಿ ಇಂಥ ಸ್ತ್ರೀವಾದಿ ಭಾಷಾಸುಧಾರಣೆಗಳನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ ಎಂಬುದನ್ನು ತೋರಿಸಬೇಕಾದರೆ, ಜಂಡರ್ ಪೂರ್ವಾಗ್ರಹ ರೂಪಗಳಿಗಿಂತ ಸ್ತ್ರೀವಾದಿ ಪರ್ಯಾಯಗಳನ್ನು ಆಯ್ದು ಬಳಸುವುದು ಹೆಚ್ಚಾಗುತ್ತಿದೆ, ಮತ್ತು ಇಂತಹ ಪರ್ಯಾಯಗಳ ಬಳಕೆ ಅವುಗಳ ಉದ್ದೇಶಿತ ನೆಲೆಯಲ್ಲೇ ಇದೆ ಎಂಬುದಕ್ಕೆ ಪುರಾವೆಗಳನ್ನು ಹುಡುಕಬೇಕಾಗುತ್ತದೆ. ಭಾಷಾಯೋಜನೆಯ ಪರಿಭಾಷೆಯಲ್ಲಿ ಹೇಳುವುದಾದರೆ, ಸ್ತ್ರೀವಾದಿ ಭಾಷಾಸುಧಾರಣೆಗಳು ಯಶಸ್ವಿಯಾಗಿವೆ ಎನ್ನುವುದು ಖಚಿತವಾಗಬೇಕಾದರೆ,  ಇಂಥ ಪರ್ಯಾಯ ರೂಪಗಳು ‘ಬೇಡದ’, ‘ನಿರಾಕರಿಸಿದ’, ಸ್ಥಿತಿಯಿಂದ ‘ಒಪ್ಪಿಕೊಳ್ಳುವ’ ಸ್ಥಿತಿಗೆ ಬಂದಿವೆ ಎಂಬುದನ್ನು ತೋರಿಸ ಬೇಕಾಗುತ್ತದೆ. ಅಲ್ಲಿಂದ ಮುಂದುವರೆದು ಈ ಪರ್ಯಾಯ ರಚನೆಗಳನ್ನು ಬಳಕೆದಾರರು ಎಚ್ಚರದಿಂದ ‘‘ಆಯ್ಕೆ ಮಾಡಿಕೊಳ್ಳು’’ವುದನ್ನು  ಇಲ್ಲವೇ ಅವುಗಳ ಬಳಕೆಯನ್ನು ಬೆಂಬಲಿಸುವುದನ್ನು ಪುರಾವೆಗಳಿಂದ ತೋರಿಸಬೇಕು.

ಡಚ್, ಇಂಗ್ಲಿಶ್, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ನಡೆದಿರುವ ಸಂಶೋಧನೆಗಳಿಂದ ಆಯಾ ಭಾಷೆಗಳಲ್ಲಿ ಲಿಂಗ/ಬೇಧರಹಿತ ವೃತ್ತಿನಾಮಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿರುವುದು ಗೊತ್ತಾಗಿದೆ. ಈ ಅಳವಡಿಕೆ ಎಲ್ಲ ಭಾಷೆಗಳಲ್ಲೂ ಒಂದೇ ಪ್ರಮಾಣದಲ್ಲಿ ಇಲ್ಲ. ಆಯಾ ಭಾಷಾ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುತ್ತಿದೆ. ಈ ಅಧ್ಯಯನಕ್ಕಾಗಿ ಮುದ್ರಣ ಮಾಧ್ಯಮದಲ್ಲಿ ದೊರಕುವ ಪುರಾವೆಗಳನ್ನು ಪರಿಶೀಲಿಸಲಾಗಿದೆ.

ಸ್ತ್ರೀವಾದಿ ಭಾಷಾ ಪರ್ಯಾಯಗಳನ್ನು ವೃತ್ತಿನಾಮಗಳ ಸಂದರ್ಭದಲ್ಲಿ ಬಳಸಿಕೊಳ್ಳಲು ಇಂಗ್ಲಿಶ್ ಭಾಷಿಕ ಸಮುದಾಯಗಳು ಹೆಚ್ಚು ಉತ್ಸುಕವಾಗಿವೆ. ಸ್ತ್ರೀವಾದಿ ಭಾಷಾ ಯೋಜನೆಯು ಗಂಡು ಸಮೂಹವಾಚಿ, ಸರ್ವನಾಮ, ಮತ್ತು ನಾಮಪದಗಳ ಬಳಕೆಯ ಮೇಲೆ ಬೀರಿರುವ ಪರಿಣಾಮವನ್ನು ಕೂಪರ್ (೧೯೮೪) ಅಧ್ಯಯನ ಮಾಡಿದ್ದಾರೆ. ಅದಕ್ಕಾಗಿ ಅಮೆರಿಕದ ವಾರ್ತಾಪತ್ರಿಕೆಗಳಿಂದ ಆಯ್ದ ಐದು ಲಕ್ಷ ಪದಗಳ ಕೋಶವನ್ನು ಗಮನಿಸಿದ್ದಾರೆ. ಈ ವಾರ್ತಾಪತ್ರಿಕೆಗಳ ಜೊತೆಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಇರುವ ಪತ್ರಿಕೆಗಳೂ, ಹೆಂಗಸರ ಪತ್ರಿಕೆಗಳೂ ಸೇರಿವೆ. ಇದಕ್ಕಾಗಿ ೧೯೭೧ ರಿಂದ ೭೯ ರ ಅವಧಿಯ ಮುದ್ರಣಗಳನ್ನು ಆಯ್ದುಕೊಳ್ಳಲಾಗಿದೆ. ಅವರ ಅಧ್ಯಯನವು ಗಂಡು ಸಮೂಹವಾಚಿ ಪದಗಳ ಬಳಕೆ (ಅದರಲ್ಲೂ man ಮತ್ತು he ಬಳಕೆ)ಯು ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿರುವುದನ್ನು ತೋರಿಸಿಕೊಟ್ಟಿವೆ. ಪ್ರತಿ ಐದು ಸಾವಿರ ಪದಗಳಿಗೆ ಇಂಥ ಪದಗಳು ೧೯೭೧ ರಲ್ಲಿ ೧೨. ೩ % ಬಳಕೆಯಾಗುತ್ತಿದ್ದರೆ, ೧೯೭೯ ರ ವೇಳೆಗೆ ಅವುಗಳ ಬಳಕೆಯ ಪ್ರಮಾಣ ೪. ೩ % ಗೆ ಇಳಿದಿತ್ತು.  ನ್ಯೂಜಿಲೆಂಡ್‌ನಲ್ಲಿ ಮೇಯರ್ ಹಾಫ್ (೧೯೮೪) ಇಂಥದೇ ಅಧ್ಯಯನವನ್ನು ಕೈಗೊಂಡಳು. ಬೇರೆ ಬೇರೆ ಓದುಗರನ್ನು ಗುರಿಯಾಗಿಟ್ಟುಕೊಂಡ (ರಾಷ್ಟ್ರೀಯ, ಪ್ರಾದೇಶಿಕ ದಿನಪತ್ರಿಕೆಗಳು, ವಿದ್ಯಾರ್ಥಿ ವಾರ್ತಾಪತ್ರಿಕೆ, ಒಂದು ಟಿ.ವಿ. ಮ್ಯಾಗಜಿನ್, ಮತ್ತೊಂದು ಹೆಂಗಸರ ಪತ್ರಿಕೆ) ಐದು ವಾರ್ತಾ ಪತ್ರಿಕೆಗಳಿಂದ ಒಂದೂವರೆ ಲಕ್ಷ ಪದಗಳ ಕೋಶದಲ್ಲಿ ಗಂಡು ಸಮೂಹವಾಚಿ ನಾಮಪದಗಳ ಬಳಕೆಯನ್ನು ವಿಶ್ಲೇಷಿಸಿದಳು.  ಆಕೆಯ ಅಧ್ಯಯನದಿಂದ ಗಂಡು ಸಮೂಹವಾಚಿ ನಾಮಪದ ಮತ್ತು ಸರ್ವನಾಮ ಪದಗಳ ಬಳಕೆ ಗಮನಾರ್ಹವಾಗಿ ಕಡಿಮೆಯಾದುದು ಕಂಡು ಬಂತು. ಅದರಲ್ಲೂ ವಿದ್ಯಾರ್ಥಿ ವಾರ್ತಾಪತ್ರಿಕೆ ಮತ್ತು ಪತ್ರಕರ್ತರ ಸಂಘ ಪ್ರಕಟಿಸುತ್ತಿದ್ದ ಪತ್ರಿಕೆಯಲ್ಲಿ ಈ ಬಳಕೆ ತೀವ್ರವಾಗಿ ಕುಗ್ಗಿತ್ತು. ನ್ಯೂಜಿಲೆಂಡ್‌ನ ಇಂಗ್ಲಿಶ್ ಬರವಣಿಗೆಯನ್ನು ಆಧರಿಸಿದ ಒಂದು ಪದಕೋಶ ಇದೆ. ಇದನ್ನು ವೆಲಿಂಗ್‌ಟನ್ ಕೋಶ ಎನ್ನುತ್ತಾರೆ. ೧೯೮೬ ರಿಂದ ೮೯ ರ ಅವಧಿಯಲ್ಲಿ person ಬದಲಿಗೆ man ಮತ್ತು woman ಪದಗಳನ್ನು ಬಳಸಿ ಸಂಯುಕ್ತ ನಾಮಪದಗಳನ್ನು ರಚಿಸುವ ಪ್ರವತ್ತಿಯನ್ನು ಈ ವೆಲಿಂಗ್‌ಟನ್ ಕೋಶವನ್ನು ಆಧರಿಸಿ ಹೋಮ್ಸ್ ವಿಶ್ಲೇಷಿಸಿದಳು. ಆಕೆಯ ಅಧ್ಯಯನದಂತೆ spokesperson, Chairperson ಎಂಬ ಪದಗಳನ್ನು ಬಿಟ್ಟರೆ, ಹತ್ತು ಲಕ್ಷ ಪದಗಳಲ್ಲಿ ಒಂದು ಪದರಚನೆ ಕೂಡಾ ಹೊಸ ಮಾದರಿಯನ್ನು ಅನುಸರಿಸಿರಲಿಲ್ಲ. ಬಳಕೆಯಾದ ಈ ಎರಡು ಪದಗಳು ಕೂಡಾ Spokesman ಮತ್ತು Chairman ಪದಗಳ ಬಳಕೆಯ ಪ್ರಮಾಣದೊಡನೆ ಸ್ಪರ್ಧಿಸುವಂತಿರಲಿಲ್ಲ. ೧೦೯ Chairman / men  ಬಳಕೆಗಳಿದ್ದರೆ, Chairperson (s) ಪದ ೬ ಬಾರಿ ಬಳಕೆಯಾಗಿದೆ.  Chairwoman (women) ಪದ ಎರಡು ಬಾರಿ, Spokesperson (s) ಪದ ನಾಲ್ಕು ಬಾರಿ ಬಳಕೆಯಾಗಿದೆ.  Spokes people ಎಂಬುದು ಒಮ್ಮೆ ಬಳಕೆಯಾಗಿತ್ತು. Spokeswoman / Women  ಎರಡು ಬಾರಿ ಬಳಕೆಯಾಗಿದ್ದರೆ, Spokesman / man  ಮೂವತ್ತಾರುಬಾರಿ ಬಳಕೆಯಾಗಿದೆ. ‘‘ಬಹಳ ಸಂದರ್ಭಗಳಲ್ಲಿ Chairman ಎಂದರೆ ಗಂಡಸು ಎಂದೇ ತಿಳಿಯಲಾಗುತ್ತಿತ್ತು. ಈ ಸ್ಥಾನದಲ್ಲಿ ಇರುವವರು ಗಂಡಸರೇ ಆಗಿರುತ್ತಾರೆ ಎಂಬ ಸಾಮಾಜಿಕ ಸತ್ಯ ೧೯೮೬ ರಲ್ಲೂ ಕಣ್ಣಿಗೆ ರಾಚುವಂತಿತ್ತು’’ ಎಂದು ಹೋಮ್ಸ್ ಹೇಳುತ್ತಾಳೆ. Chairman ಎಂದು ಬಳಸಿಯೂ ಅದು ಹೆಂಗಸನ್ನು ಸೂಚಿಸುತ್ತಿದ್ದ ನಾಲ್ಕು ಉಲ್ಲೇಖನಗಳನ್ನು ಆಕೆ ಶೋಧಿಸಿದ್ದಾಳೆ. ನಾನು ಆಸ್ಟ್ರೇಲಿಯದ ಎರಡು ರಾಷ್ಟ್ರೀಯ ವಾರ್ತಾಪತ್ರಿಕೆಗಳ ೧೯೯೨ ರಿಂದ ೯೬ ರವರೆಗಿನ ಸಂಚಿಕೆಗಳಿಂದ ಸಂಗ್ರಹಿಸಿದ ಎರಡು ಲಕ್ಷ ಪದಗಳನ್ನು ಅಧ್ಯಯನ ಮಾಡಿದ್ದೇನೆ. ನನ್ನ ಅಧ್ಯಯನದಿಂದಲೂ man ಮತ್ತು Woman ಸಂಯುಕ್ತ ರೂಪಗಳ ಬಳಕೆ ತುಂಬಾ ಕಡಿಮೆ ಇರುವುದು ಕಂಡು ಬಂದಿದೆ.  Chairman / Chair woman / Chair person ಪದಗಳಲ್ಲಿ Chairman ಪದವೇ ಹೆಚ್ಚು ಬಳಕೆಯಾಗಿದೆ. ಈ ಪದವು ಯಾರನ್ನು ಸೂಚಿಸುತ್ತದೆ ಎಂಬುದನ್ನು ಗುರುತಿಸಲು ಹೊರಟಾಗ ಅತ್ಯಧಿಕ ಸಂದರ್ಭಗಳಲ್ಲಿ ಅದು ಗಂಡಸನ್ನೇ ಸೂಚಿಸುತ್ತದೆ. Chairperson ಮತ್ತು Chair ಎಂಬ ಪದಗಳು ಅಲ್ಲಲ್ಲಿ ಬಳಕೆಯಾಗಿದ್ದರೂ (ನೋಡಿ ಕೋಷ್ಟಕ ಒಂದು) ಅವುಗಳಿಂದ ಯಾವ ಹೊಸ ಪ್ರವೃತ್ತಿಯನ್ನು ತಿಳಿಯುವುದೂ ಸಾಧ್ಯವಾಗುವುದಿಲ್ಲ. Chirman ಪದದ ಬಳಕೆಯ ಬಗ್ಗೆ ಹೋಮ್ಸ್ ಮಾಡಿದ ವ್ಯಾಖ್ಯಾನವನ್ನು ನಾನು ಒಪ್ಪಲೇಬೇಕಾಗಿದೆ. ಅಂದರೆ ಈ ಪದ ನಿರಂತರವಾಗಿ, ಮತ್ತು ಹೆಚ್ಚಾಗಿ ಬಳಕೆಯಾಗುತ್ತಿರುವುದು, ಆ ಸ್ಥಾನದಲ್ಲಿ ಹೆಂಗಸರಿಗಿಂತ ಗಂಡಸರೇ ಹೆಚ್ಚು ಇರುತ್ತಾರೆ ಎಂಬುದನ್ನು ಬಿಂಬಿಸುತ್ತಿದೆ. ಈ ಪದವು ಸಮೂಹವಾಚಿಯಾಗಿ ಬಳಕೆಯಾಗುವ ಬಗೆಯನ್ನು ಅರಿಯಲು ವಾರ್ತಾಪತ್ರಿಕೆಗಳ ಬರಹಗಳು ತಕ್ಕ ಆಕರಗಳಲ್ಲ ಎನ್ನುವುದನ್ನು ಗಮನಿಸಬೇಕು. ಏಕೆಂದರೆ, ಇಂಥ ಬರಹಗಳು ಈಗ ಆ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳನ್ನಷ್ಟೇ ಗಮನಿಸಿರುತ್ತವೆ. Spokesman / Spokes woman / Spokesperson ಎಂಬೀ ಪದಗಳ ಬಳಕೆಯಲ್ಲಿ ಎದ್ದು ಕಾಣುವ ಬದಲಾವಣೆ ಇದೆ.  ಮೂವತ್ತೆಂಟು ಉಲ್ಲೇಖಗಳಲ್ಲಿ  Spokes man ಎಂದು ಬಳಕೆಯಾಗಿದ್ದರೆ, Spokes person ಎಂಬುದು  ಮೂವತ್ತೆರಡು ಬಾರಿ ಬಳಕೆಯಾಗಿದೆ. ಈ ಪದಗಳು ಗಂಡಸನ್ನು ಹೇಳುತ್ತವೋ, ಹೆಂಗಸನ್ನು ಹೇಳುತ್ತವೋ ಎಂಬುದನ್ನು ಗುರುತಿಸಿದಾಗ Spokesman ಪದವು ೪೭% ರಷ್ಟು ಗಂಡಸನ್ನು ಸೂಚಿಸುತ್ತಿತ್ತು, ಮತ್ತು ಈ ಪದವು ನಿರ್ದಿಷ್ಟವಾಗಿ ಹೆಂಗಸನ್ನು ಸೂಚಿಸಲು ಬಳಕೆಯಾಗಿರಲಿಲ್ಲ. Spokes person ಪದದ ಬಳಕೆಯಲ್ಲಿ ಯಾರನ್ನು ಸೂಚಿಸುತ್ತಿದೆ ಎಂಬುದು ನಿರ್ದಿಷ್ಟವಾಗಿ ತಿಳಿಯುವಂತಿರಲಿಲ್ಲ. ಈ ಪದವು ಇಬ್ಬರನ್ನೂ ಸೂಚಿಸಲು ಬಳಕೆಯಾಗುತ್ತಿರಬಹುದು ಎಂದು ತಿಳಿಯಲು ಅವಕಾಶಗಳಿವೆ. ಅಂದರೆ, person ಇರುವ ಸಂಯುಕ್ತ ನಾಮಪದವನ್ನು Woman ಇರುವ ಸಂಯುಕ್ತ ನಾಮಪದದ ಬಳಕೆಯನ್ನು ತಪ್ಪಿಸಿಕೊಳ್ಳಲು ಆಶ್ರಯಿಸಿದಂತಿದೆ.

ಕೋಷ್ಟಕ ೧: Chairman/Spokesman ಮತ್ತು ಇವುಗಳ ಲಿಂಗಭೇದರಹಿತ ಪರ್ಯಾಯಗಳು

ಪದ

ಬಳಕೆಯ ಪ್ರಸಂಗಗಳು

ಉಲ್ಲೇಖ ಗಂಡೋ ಹೆಣ್ಣೋ ಗೊತ್ತಿಲ್ಲ

ಗಂಡು

ಹೆಣ್ಣು

Chairman 33 04 28 01
Chair woman 04 00 00 04
Chair person 01 00 00 01
Chair 03 01 01 01
Spokes man 38 20 18 00
Spokes woman 08 00 00 08
Spokes person 32 21 08 03

ಆಸ್ಟ್ರೇಲಿಯದಲ್ಲಿ ನಡೆದ ಸಂಶೋಧನೆಯನ್ನು ಹೊರಗೆಡಹಿತು. ಜಂಡರ್ ವಿಶಿಷ್ಟೀಕಣಕ್ಕಾಗಿ driver / Woman driver ಅಥವಾ nurse / male nurse ಎಂಬ ಮಾದರಿಯ ರಚನೆಗಳನ್ನು ಮಾಡುವುದನ್ನು ಅನುಸರಿಸಿದ್ದು ತೀರಾ ಕಡಿಮೆ ಎಂಬುದು ಗೊತ್ತಾಯಿತು. ಅಂತಹ ಏಳು ಪ್ರಸಂಗಗಳಷ್ಟೇ ಕಂಡುಬಂದವು. female judge (ಒಂದು ಬಾರಿ) woman engineer (ಎರಡು ಬಾರಿ)  Woman Politician (ಎರಡು ಬಾರಿ ) Woman Publican (ಒಂದು ಬಾರಿ)ಮತ್ತು  lady taxi driver ( ಒಂದು ಬಾರಿ)

ಕೆನಡದ ವಾರ್ತಾಪತ್ರಿಕೆಗಳಲ್ಲಿ ಸ್ತ್ರೀವಾದಿ ಭಾಷಾ ಸುಧಾರಣೆಗಳು ಬಳಕೆಯಾಗುವ ರೀತಿಯನ್ನು ಕುರಿತು ನಡೆಸಿದ ಒಂದು ಅಧ್ಯಯನವನ್ನು ಎರ್ಲಿಕ್ ಮತ್ತು ಕಿಂಗ್ (೧೯೯೨)ವರದಿ ಮಾಡಿದ್ದಾರೆ. ಲಿಂಗಭೇದರಹಿತ ಪರ್ಯಾಯ ಪದಗಳನ್ನು ಬಳಸಿದ್ದಕ್ಕೆ ಉದಾಹರಣೆಗಳು ದೊರಕಿದವು. Person ಇರುವ ಸಂಯುಕ್ತ ನಾಮಪದಗಳನ್ನು ಬಳಸಿದ್ದರೂ ಅದನ್ನು ಎಷ್ಟೋ ವೇಳೆ ತಪ್ಪಾಗಿ ಬಳಸಿದ್ದು ಕಂಡುಬಂತು. ಹುದ್ದೆಯಲ್ಲಿರುವವರು ಹೆಂಗಸರಾಗಿದ್ದಾಗ ಮಾತ್ರ ಈ Person ಯುಕ್ತ ನಾಮಪದ ಬಳಸಿ, ಅವರು ಗಂಡಸರಾಗಿದ್ದರೆ man ಯುಕ್ತ ನಾಮಪದಗಳನ್ನೇ ಬಳಸಿದ್ದರು. ಹೆಂಗಸರನ್ನು Chairperson ಎಂದು ನಿರ್ದಿಷ್ಟಗೊಳಿಸುತ್ತಾ, ಗಂಡಸರನ್ನು Chairman ಎಂದೇ ಕರೆಯುವ ಪ್ರವೃತ್ತಿ ಮುಂದುವರೆದಿರುವುದನ್ನು ದುಬಾಯ್ ಮತ್ತು ಕ್ರೋಚ್ (೧೯೮೭) ವರದಿ ಮಾಡಿದ್ದಾರೆ.

ಈ ಅಧ್ಯಯನಗಳ ವ್ಯಾಪ್ತಿ ನಿಜವಾಗಿಯೂ ಸೀಮಿತವಾದದ್ದು ಎಂದು ಒಪ್ಪಿಕೊಳ್ಳೋಣ. ಹೀಗಿದ್ದರೂ ಈಗ ‘ಸಹಿಸಿಕೊಳ್ಳುತ್ತಿರುವ’ಪದಗಳಿಗೆ ಮನ್ನಣೆ ನೀಡಿ ಅವುಗಳ ಬಳಕೆಯನ್ನು ಬೆಂಬಲಿಸುವ ಹಂತಕ್ಕೆ ಸಾಗಬೇಕಾದ ದಾರಿ ತುಂಬಾ ದೀರ್ಘವಾಗಿದೆ ಎಂಬುದಂತೂ ನಿಜ.  man ಯುಕ್ತ ನಾಮಪದಗಳನ್ನು ಗಂಡು ಹೆಣ್ಣುಗಳಿಬ್ಬರಿಗೂ ಅನ್ವಯಿಸುವಂತೆ ಬಳಸುವುದು ಕಡಿಮೆಯಾಗಿದೆ ಎಂಬುದೇನೋ ನಿಜ. Spokesman ಮತ್ತು Chairman ಎಂಬ ಪದಗಳನ್ನು ತಿಳಿದೋ ತಿಳಿಯದೆಯೋ ಗಂಡಸರನ್ನು ನಿರ್ದಿಷ್ಟವಾಗಿ ಸೂಚಿಸಲು ಬಳಸುವುದು ಕಂಡು ಬರುತ್ತಿದೆ. ನಿರ್ದಿಷ್ಟವಾಗಿ ಹೆಂಗಸನ್ನೇ ಸೂಚಿಸಬೇಕಾಗಿ ಬಂದಾಗ ಈ ಪದಗಳನ್ನು ಬಳಸುತ್ತಿಲ್ಲ. ಹೆಂಗಸರನ್ನು ಸ್ತ್ರೀವಿಶಿಷ್ಟ ಪದಗಳನ್ನು ಬಳಸಿ (Spokes woman, Chairwoman, business woman) ಸೂಚಿಸಲಾಗುತ್ತದೆ, ಅಥವಾ ಅವರಿಗೆ person ಯುಕ್ತ ನಾಮಪದಗಳನ್ನು ಬಳಸಲಾಗುತ್ತದೆ. ಈ ಹಂತದಲ್ಲಿ ಸಮೂಹವಾಚಿಯಾಗಿ man ಯುಕ್ತ ನಾಮಪದಗಳ ಸ್ಥಾನಕ್ಕೆ ಹೊಸದಾಗಿ ರಚನೆಯಾದ person ಯುಕ್ತ ನಾಮಪದ ಸವಾಲು ಹಾಕುವಷ್ಟು ಗೆಲುವನ್ನು ಪಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಖಂಡಿತವಾಗಿಯೂ Chairperson ನಂತಹ ಪದಗಳನ್ನು ಕೇವಲ ಹೆಂಗಸರನ್ನು ಸೂಚಿಸಲು ಬಳಸಲಾಗುತ್ತಿದೆಯೇ ಹೊರತು ಗಂಡಸರನ್ನಲ್ಲ ಎಂಬುದಕ್ಕೆ ಪುರಾವೆಗಳಿವೆ. ಈ ಪರಿಸ್ಥಿತಿಯನ್ನು ಕುರಿತು ‘‘ಲಿಂಗತಾರತಮ್ಯವನ್ನು ಆಚರಿಸುವವರ ಬಾಯಲ್ಲಿ ಹೊರಡುವ ಭಾಷೆಗೆ ಲಿಂಗತಾರತಮ್ಯದ ನಂಟು ಉಳಿದೇ ಇರುತ್ತದೆ’’ ಎಂದು ಕ್ಯಾಮರಾನ್ ಹೇಳುತ್ತಾಳೆ. (೧೯೮೫) ಆದರೆ person ಯುಕ್ತ ಇತರ ನಾಮಪದಗಳ ವಿಚಾರದಲ್ಲಿ (Sports person) ಇಂಥ ಪ್ರವೃತ್ತಿ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಆಸ್ಟ್ರೇಲಿಯದಲ್ಲಿ ನಡೆದ ಒಂದು ಅಧ್ಯಯನದಲ್ಲಿ Spokes person ಎಂಬ ಪದ ಬಳಕೆಯಾಗುವುದನ್ನು ಪರಿಶೀಲಿಸಲಾಯಿತು. ಸೂಚಿಸುತ್ತಿರುವುದು ಗಂಡನ್ನೋ ಹೆಣ್ಣನ್ನೋ ಎಂಬುದು ಗೊತ್ತಿಲ್ಲದೆ ಇದ್ದಾಗ Spokes peson  ಮತ್ತು Spokesmanಎಂಬ ಎರಡೂ ಪದಗಳನ್ನೂ ಬಳಸುವ ಪ್ರಮಾಣ ಸಮನಾಗಿದ್ದದ್ದು ಕಂಡು ಬಂತು.

ಕೆಲಸಗಳಿಗಾಗಿ ವೃತ್ತಪತ್ರಿಕೆಗಳಲ್ಲಿ ನೀಡುವ ವರ್ಗೀಕೃತ ಜಾಹಿರಾತುಗಳನ್ನು ನೋಡಿದಾಗ ಒಂದು ಬದಲಾವಣೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದು ಒಂದು ಸಕಾರಾತ್ಮಕ ಬದಲಾವಣೆಯಾಗಿದೆ. ಇಂಗ್ಲಿಶ್‌ನ ಮಟ್ಟಿಗಂತೂ ಈ ಮಾತು ನಿಜ. ೧೯೬೭ ರಿಂದ ೧೯೮೩ ರವರೆಗೆ ಇಂಗ್ಲಿಶ್ ಮತ್ತು ಜರ್ಮನ್ ವಾರ್ತಾಪತ್ರಿಕೆಗಳಲ್ಲಿ ಪ್ರಕಟಗೊಂಡ ಐದು ಸಾವಿರ ಕೆಲಸದ ಜಾಹಿರಾತುಗಳನ್ನು ಫ್ಲೇಯಿಶ್ ಹಾರ್ (೧೯೮೩) ಅಧ್ಯಯನ ಮಾಡಿದ್ದಾರೆ. ೧೯೬೭ ರಲ್ಲಿ ಇಂಗ್ಲಿಶ್‌ನಲ್ಲಿ ಪ್ರಕಟಗೊಳ್ಳುತ್ತಿದ್ದ ಇಂಥ ಜಾಹಿರಾತುಗಳಲ್ಲಿ ಶೇಕಡ ೧೫ ರಿಂದ ೨೫ ರಷ್ಟು ಮಾತ್ರ ಲಿಂಗತಾರತಮ್ಯವನ್ನು ತೋರುತ್ತಿರಲಿಲ್ಲ. ೧೯೮೩ ರ ಹೊತ್ತಿಗೆ ಇಂಥ ಜಾಹಿರಾತುಗಳ ಪ್ರಮಾಣ ಶೇಕಡ ೪೦ ರಷ್ಟಿತ್ತು. ಆಸ್ಟ್ರೇಲಿಯದ ಹತ್ತು ವಾರ್ತಾಪತ್ರಿಕೆಗಳಲ್ಲಿ ೧೯೯೬ ರಲ್ಲಿ ಪ್ರಕಟಗೊಂಡ ೨೦೦೦ ಕೆಲಸದ ಜಾಹಿರಾತುಗಳನ್ನು ನಾನೇ ಅಧ್ಯಯನ ಮಾಡಿದ್ದೇನೆ. (೧೯೯೭) ಇಲ್ಲಿ ಚಿತ್ರ ಹೆಚ್ಚು ಆಶಾದಾಯಕವಾಗಿದೆ. ಈ ಜಾಹಿರಾತುಗಳಲ್ಲಿ ಇದ್ದ ವೃತ್ತಿನಾಮಗಳಲ್ಲಿ ಜಂಡರ್ ಅನ್ನು ನಿರ್ದಿಷ್ಟವಾಗಿ ಸೂಚಿಸುತ್ತಿದ್ದ ಪದಗಳು ಕೇವಲ ಶೇಕಡ ೫.೪ ರಷ್ಟು ಇರಬಹುದು. ಈ ಪದಗಳು ಬಳಕೆಯಾದ ಸಂದರ್ಭಗಳಲ್ಲಿ ಜಂಡರ್ ವಿಶಿಷ್ಟ ವ್ಯಕ್ತಿಗಳನ್ನೇ ಸೂಚಿಸುವಂತಿದ್ದವು. ಈ ಅಧ್ಯಯನದಲ್ಲಿ ೧೨೮ ವಿವಿಧ ಬಗೆಯ ವೃತ್ತಿನಾಮಗಳು ಜಂಡರ್ ತಟಸ್ಥ ನೆಲೆಯಲ್ಲಿದ್ದುದು ಕಂಡು ಬಂತು. Accountant, Physiotherapist, Secretary, Welder ಇಂಥ ಪದಗಳು. ಶೇಕಡ ೧೧ ರಷ್ಟು ಪದಗಳು ಜಂಡರ್ ವಿಶಿಷ್ಟವಾಗಿದ್ದುದು ಕಂಡು ಬಂತು. Chairman, Draftsman, Foreman, handyman, Salesman, Storeman, Grounds man, Tradesman, Cleaning lady ಮತ್ತು Waitress -ಇಂಥ ಪದಗಳು.  ಇವುಗಳಲ್ಲಿ man ಯುಕ್ತ ಪದಗಳು ಹೆಚ್ಚಿವೆ. Chairman ಮತ್ತು handman ಪದಗಳನ್ನು ಬಿಟ್ಟರೆ ಉಳಿದೆಲ್ಲ man ಯುಕ್ತ ಪದಗಳ ಬಳಕೆ person ಯುಕ್ತ ಪದಗಳ ಬಳಕೆಗಿಂತ ಕಡಿಮೆ ಇತ್ತು. ಉದಾಹರಣೆಗೆ, foreperson  ಎಂಬ ಪದ ಶೇಕಡ ೮೧ ರಷ್ಟು ಬಳಕೆಯಾಗಿತ್ತು. tradesman ಗೆ ಜಂಡರ್ ತಟಸ್ಥ ಪರ್ಯಾಯವಾದ trades person  ಎಂಬುದು ಶೇಕಡ ೯ ರಷ್ಟು ಪ್ರಸಂಗಗಳಲ್ಲಿ ಬಳಕೆಯಾಗಿತ್ತು. ಕೇವಲ ಹೆಂಗಸರನ್ನಷ್ಟೇ ಸೂಚಿಸುವ ಪದಗಳು ಬಳಕೆಯಾಗಿರಲೇ ಇಲ್ಲ. Cleaning lady ಎಂಬುದು ಒಮ್ಮೆ ಬಳಕೆಯಾದರೆ, manageress ಮತ್ತು Waitress ಎಂಬ ess ಪ್ರತ್ಯಯದ ಪದಗಳು ಒಂದೊಂದು ಬಾರಿ ಬಳಕೆಯಾಗಿದ್ದವು.  ಕುತೂಹಲದ ಸಂಗತಿಯೆಂದರೆ, barman, barmaid, sales man, Sales girl.  ಇಲ್ಲವೇ Store man -ಎಂಬ ಪದಗಳ ಬಳಕೆ ಇರಲೇ ಇಲ್ಲ. ಅವುಗಳ ಬದಲಿಗೆ barterder, Sales person/ sales people ಮತ್ತು Store person ಪದಗಳು ಬಳಕೆಯಾಗಿದ್ದವು. ಅರ್ಹ ಅಭ್ಯರ್ಥಿಗಳ ಬಗೆಗೆ ಜಂಡರ್ ತಟಸ್ಥ ಪದಗಳು ಬಳಕೆಯಾಗಿದ್ದವು. ಉದಾಹರಣೆಗೆ, the successful applicant, the person, the individual ಇತ್ಯಾದಿ. ಹೀಗೆ ಮಾಡುವ ಮೂಲಕ ಸರ್ವನಾಮಗಳ ಬಳಕೆಯನ್ನು ಕುಗ್ಗಿಸಲಾಗಿದೆ. ಅಂದರೆ, ಈ ಅಧ್ಯಯನದ ಮುಖಾಂತರ ಲಿಂಗತಾರತಮ್ಯ ರಹಿತ ಪರ್ಯಾಯ ವೃತ್ತಿನಾಮಗಳ ಬಳಕೆ ‘ಸಹಿಸಿಕೊಳ್ಳುವ’ಹಂತದಿಂದ ‘ಆಯ್ಕೆ’ಯ ಹಂತಕ್ಕೆ ದಾಟಿರುವುದು ಸ್ಪಷ್ಟವಾಗಿದೆ.

ಕೆಲಸಗಳಿಗಾಗಿ ನೀಡುವ ವರ್ಗೀಕೃತ ಜಾಹಿರಾತುಗಳನ್ನು ಡಚ್, ಫ್ರೆಂಚ್ ಮತ್ತು ಜರ್ಮನ್ ಭಾಷಾಸಂದರ್ಭಗಳಲ್ಲಿ ಗಮನಿಸಿದಾಗ ಇದೇ ಬಗೆಯ ಬದಲಾವಣೆಗಳು ನಡೆಯುತ್ತಿರುವುದು ಖಚಿತವಾಗಿದೆ. ಆದರೆ, ಬದಲಾವಣೆಯ ವೇಗ ಮಾತ್ರ ಏಕ ಪ್ರಕಾರವಾಗಿಲ್ಲ. ನೆದರ್‌ಲ್ಯಾಂಡ್‌ನಲ್ಲಿ ಕೆಲಸದ ವರ್ಗೀಕೃತ ಜಾಹಿರಾತುಗಳೊಳಗೆ ಲಿಂಗತಾರತಮ್ಯರಹಿತ ಪದಗಳ ಬಳಕೆ ಬಹಳ ಮುಂದುವರೆದಿರುವುದು ಕಂಡು ಬಂದಿದೆ. ಅಲ್ಲಿನ ಎರಡು ರಾಷ್ಟ್ರೀಯ ವಾರ್ತಾಪತ್ರಿಕೆಗಳಾದ De volkskrant ಮತ್ತು NRC Handelsdlad -ಗಳಲ್ಲಿ ಬಂದ ೨೦೦೦ ಕೆಲಸದ ಜಾಹಿರಾತುಗಳನ್ನು (೧೯೯೧ -೯೩ ರ ಅವಧಿ) ನಾನು ಅಧ್ಯಯನ ಮಾಡಿದ್ದೇನೆ.  ಬಹುಪಾಲು ಜಾಹಿರಾತುಗಳಲ್ಲಿ ಲಿಂಗತಾರತಮ್ಯ ಇರಲಿಲ್ಲ. ೧೯೯೧ರಲ್ಲಿ ಸುಮಾರು ಶೇಕಡ ೮೦ ರಷ್ಟು ಜಾಹಿರಾತುಗಳು ಗಂಡಸು ಮತ್ತು ಹೆಂಗಸು ಇಬ್ಬರನ್ನೂ ಒಳಗೊಳ್ಳುತ್ತಿದ್ದು, ಜಂಡರ್ ವಿಶಿಷ್ಟ ವಿವರಣೆಗಳು ಅಲ್ಲಿ ಇರುತ್ತಿರಲಿಲ್ಲ. ೧೯೯೩ ರ ವೇಳೆಗೆ ಇಂಥ ಜಾಹಿರಾತುಗಳು ಶೇಕಡ ೯೦ ರಷ್ಟಿದ್ದವು. ಈ ಅಂಕಿಅಂಶಗಳು ಗೆಲುವಿನ ಕತೆಯನ್ನು ಹೇಳುತ್ತವೆಂದು ಭಾವಿಸುವ ಮೊದಲು ಕೊಂಚ ಎಚ್ಚರ ವಹಿಸಬೇಕು. ಎಷ್ಟೋ ಜಾಹಿರಾತುಗಳಲ್ಲಿ ಜಂಡರ್ ಪೂರ್ವಾಗ್ರಹವನ್ನು ತೆಗೆದು ಹಾಕಲು m / v ಎಂಬ ವಿವರಣೆಯನ್ನು ಸೇರಿಸಲಾಗಿತ್ತು. ಇದು mannelijk (male) / Vrouwelij (female) ಎಂಬುದರ ಸಂಕ್ಷೇಪ ರೂಪಗಳು ಅಥವಾ ಕೆಲವೊಮ್ಮೆ man / vrouw ಎಂದು ಸೂಚಿಸಲಾಗುತ್ತಿತ್ತು. (man / woman) ಹೀಗೆ ಸೂಚಿತವಾದ ಹುದ್ದೆಗಳೆಲ್ಲ ಪುರುಷ ವೃತ್ತಿನಾಮಪದಗಳೇ ಆಗಿರುತ್ತಿದ್ದವು. ಉದಾಹರಣೆಗೆ, direkteur m/ v (director m/ f) assistant – geoloog m/ v (assistant geologist m/ f ), groepsleider m/ v (team leader m/ f) ಸ್ತ್ರೀವಾಚಿ ವೃತ್ತಿನಾಮಪದವೆನಿಸಿದ sekretaresse (secreatary) ಎಂಬುದಕ್ಕೆ m/ v ಎಂಬ ವಿವರಣೆ ನೀಡಲಾಗಿತ್ತು. ಡಚ್ ಜಾಹಿರಾತುಗಳಲ್ಲಿ ಕಂಡು ಬರುವ ಈ ಪ್ರವೃತ್ತಿಯು ಜಂಡರ್ ತಟಸ್ಥೀಕರಣ ಮತ್ತು ಜಂಡರ್ ವಿಶಿಷ್ಟ್ರೀಕರಣ (ಸ್ತ್ರೀಕರಣ) ತಂತ್ರಗಳ ನಡುವೆ ಏರ್ಪಟ್ಟಿದ್ದ ಸ್ಪರ್ಧೆಯನ್ನು ಸೂಚಿಸುವಂತಿದೆ. ಡಚ್ ಭಾಷೆಯು management ಮತ್ತು Computer ಪರಿಣತಿಯ ವಲಯಗಳ ವೃತ್ತಿನಾಮಗಳನ್ನು ಇಂಗ್ಲಿಶ್ ಭಾಷೆಯಿಂದ ಹೆಚ್ಚಾಗಿ ಸ್ವೀಕರಿಸಿರುವುದರಿಂದ ಜಂಡರ್‌ತಟಸ್ಥ ರೂಪಗಳ ಕಡೆಗೆ ಹೆಚ್ಚು ಓಲುವೆ ಇದ್ದಂತಿದೆ. ಕೆಲವು ಸಂದರ್ಭಗಳಲ್ಲಿ ಜಂಡರ್ ವಿಚ್ಛೇದನವನ್ನೂ ಒಂದು ತಂತ್ರವಾಗಿ ಬಳಸಲಾಗಿದೆ. ಉದಾಹರಣೆಗೆ, docent/e (ವಿಶ್ವವಿದ್ಯಾಲಯದ ಅಧ್ಯಾಪಕ /ಕಿ) redaktteur / redaktrice (editor ಸಂಪಾದಕ/ಕಿ).

ಹಲವಾರು ಜರ್ಮನ್ ಅಧ್ಯಯನಗಳಲ್ಲಿ ಲಿಂಗತಾರತಮ್ಯರಹಿತ ವೃತ್ತಿನಾಮಗಳ ಬಳಕೆಯನ್ನು ಅರಿಯಲು ಯತ್ನಿಸಲಾಗಿದೆ. ಇಂಗ್ಲಿಶ್ ಮತ್ತು ಜರ್ಮನ್ ಭಾಷೆಗಳಲ್ಲಿದ್ದ ೧೯೮೦ ರ  ಐದು ಸಾವಿರ ಉದ್ಯೋಗ ಜಾಹಿರಾತುಗಳನ್ನು ಹೋಲಿಸಿ ಫ್ಲೇಯಿಶ್ ಹಾರ್ (೧೯೮೩) ಅವರು ಮಾಡಿದ ಅಧ್ಯಯನವು ಅಷ್ಟೇನೂ ಆಶಾದಾಯಕವಾದ ಚಿತ್ರವನ್ನು ನೀಡುವುದಿಲ್ಲ. ೧೯೬೭ ಜಾಹಿರಾತುಗಳನ್ನು ಜರ್ಮನ್ ವಾರ್ತಾಪತ್ರಿಕೆಗಳಲ್ಲಿ ಗಮನಿಸಿದಾಗ ಅವು ಅಭ್ಯರ್ಥಿಯು ಗಂಡಾಗಿರಬೇಕೋ, ಹೆಣ್ಣಾಗಿರಬೇಕೋ ಎಂಬುದನ್ನವಲಂಬಿಸಿ ರಚಿತವಾಗಿದ್ದವು. ಅಂದರೆ, ಪುರುಷ ಮತ್ತು ಸ್ತ್ರೀ ಜಾಹಿರಾತುಗಳಿಗೆ ಬೇರೆ ಬೇರೆ ಕಾರಣಗಳಿದ್ದವು Frankfurter, Allgemeine ಎಂಬ ವಾರ್ತಾಪತ್ರಿಕೆಗಳಲ್ಲಿ ಶೇಕಡ ೭೭ ಜಾಹಿರಾತುಗಳಲ್ಲಿ ಸಮೂಹವಾಚಿ ಪುಲ್ಲಿಂಗಗಳಿದ್ದವು. ಅಧ್ಯಯನಕಾರರು ೧೯೮೩ ರ ಹೊತ್ತಿಗೂ ಏನೂ ಬದಲಾವಣೆಯಾಗಿಲ್ಲ ಎಂದು ಹೇಳಿದ್ದಾರೆ. ಬಹುಪಾಲು ಜಾಹಿರಾತುಗಳು ಸಮೂಹವಾಚಿ ಪುಲ್ಲಿಂಗದಲ್ಲಿದ್ದು ಅಲ್ಲಲ್ಲಿ ಜಂಡರ್‌ತಟಸ್ಥ ಮತ್ತು ಜಂಡರ್ ವಿಚ್ಛೇದಿತ ರೂಪಗಳು ಬಳಕೆಯಾದದ್ದು ಕಂಡುಬಂತು.  ಉದ್ಯೋಗದಲ್ಲಿ ತಾರತಮ್ಯ ನೀತಿಯನ್ನು ವಿರೋಧಿಸುವ ಕಾನೂನು ಜಾರಿಗೆ ಬಂದ ಮೇಲೂ ಜರ್ಮನ್ ವಾರ್ತಾ ಪತ್ರಿಕೆಗಳಲ್ಲಿ ಬಳಸುವ ಭಾಷೆಯಲ್ಲಿ ಏನೂ ವ್ಯತ್ಯಾಸವಾಗಿಲ್ಲವೆಂದು ಆರು ಸಾವಿರ ಜಾಹಿರಾತುಗಳನ್ನು ಪರಿಶೀಲಿಸಿ ಬ್ರಾಕ್ ಹಾಫ್ (೧೯೮೭) ವರದಿ ಮಾಡಿದ್ದಾಳೆ. ಆಕೆ ಹೇಳುವಂತೆ ಶೇಕಡ ೫೦ ಜಾಹಿರಾತುಗಳು ಗಂಡಸರನ್ನು ಉದ್ದೇಶಿಸಿದ್ದವು, ಶೇಕಡ ೨೫ ಹೆಂಗಸರನ್ನು ಉದ್ದೇಶಿಸಿದ್ದರೆ, ಶೇಕಡ ೨೧ ಜಂಡರ್‌ತಟಸ್ಥ ಪದಗಳನ್ನು ಬಳಸಿದ್ದವು.  ಜರ್ಮನಿಯ ರಾಷ್ಟ್ರೀಯ ಮತ್ತು ಪ್ರಾದೇಶಿಕ ವಾರ್ತಾಪತ್ರಿಕೆಗಳಲ್ಲಿ ಪ್ರಕಟಗೊಂಡ ೧೯೬೩ ಉದ್ಯೋಗ ಜಾಹಿರಾತುಗಳನ್ನು ಅಧ್ಯಯನ ಮಾಡಿದ ಓಲ್ಡೆನ್ ಬರ್ಗ್ (೧೯೮೮) ಅವರು ೧೯೮೦ ರ ದಶಕದಿಂದೀಚೆಗೆ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದೆ ಎಂದಿದ್ದಾರೆ. ಶೇಕಡ ೪೪. ೮ ಜಾಹಿರಾತುಗಳು ಲಿಂಗತಾರತಮ್ಯವನ್ನು ಬಿಟ್ಟುಕೊಟ್ಟಿದ್ದವು. (ಬ್ರಾಕ್ ಹಾಫ್ ಅವರ ಅಧ್ಯಯನದಲ್ಲಿ ಇದು ಶೇ. ೨೧ ಆಗಿತ್ತು. ಇವುಗಳಲ್ಲಿ ಶೇ. ೩೩ ರಷ್ಟು ಜಾಹಿರಾತುಗಳು ಜಂಡರ್ ವಿಚ್ಛೇದಿತ ತಂತ್ರವನ್ನು ಬಳಸಿದ್ದವು. (assistant /e) ಮತ್ತು ಶೇ. ೧೮ ರಷ್ಟು ಜಂಡರ್ ಅನ್ನು ಅಮೂರ್ತಗೊಳಿದ್ದವು. (ಉದಾ. Burohilfe = office assistant) ಲಿಂಗತಾರತಮ್ಯವಿಲ್ಲದ ಉದ್ಯೋಗ ವರ್ಣನೆಗಳು ಸಾರ್ವಜನಿಕ ಸೇವಾವಲಯದ ಜಾಹಿರಾತುಗಳಲ್ಲಿ ಹೆಚ್ಚಾಗಿ ಕಂಡು ಬಂದಿವೆ. (ಶೇ. ೮೯. ೭ ) ವ್ಯಾಪಾರ ಮತ್ತು ದೈಹಿಕ ದುಡಿಮೆಯ ಜಾಹಿರಾತುಗಳು ಅತಿ ಕಡಿಮೆ ಇದ್ದವು. (ಶೇ. ೧೫. ೫)

ಪ್ರಚಲಿತ ಸಂಗತಿಗಳನ್ನು ಕುರಿತ ಫ್ರೆಂಚ್ ವಾರಪತ್ರಿಕೆ  l’express ನ ೧೯೯೨ ರ  ೭೦೦ ಉದ್ಯೋಗ ಜಾಹಿರಾತುಗಳನ್ನು ಗಮನಿಸಿದಾಗ ಅಲ್ಲಿದ್ದ ೧೮೧ ವಿವಿಧ ವೃತ್ತಿ ಹೆಸರುಗಳಲ್ಲಿ ಶೇ. ೧೨. ೫ ರಷ್ಟು ಜಾಹಿರಾತುಗಳಲ್ಲಿ ಮಾತ್ರ ಲಿಂಗತಾರತಮ್ಯ ಇರಲಿಲ್ಲ. ಇನ್ನೂ ವಿವರವಾಗಿ ಗಮನಿಸಿದರೆ ಶೇ. ೩. ೩ ರಲ್ಲಿ ಸ್ತ್ರೀಕರಣ ತಂತ್ರವನ್ನು ಬಳಸಲಾಗಿತ್ತು. (Unce) assistant (e) ಶೇ. ೭.೭ ಬಣ್ಣನೆಗಳು ಸಮೂಹವಾಚಿ ಪುಲ್ಲಿಂಗ ವೃತ್ತಿನಾಮಗಳಿಗೆ HF ಎಂಬ ವಿವರಣೆ ಸೇರಿದ್ದವು. (Homme / Femme = man/ woman ಶೇ ೧.೧ ರಲ್ಲಿ ಎಲ್ಲರನ್ನೂ ಒಳಗೊಳ್ಳುವ ದೃಶ್ಯವಿವರಗಳನ್ನು ನೀಡಿದ್ದವು. ಮತ್ತು ಶೇ ೧.೧ ತಟಸ್ಥ ಭಾಷೆಯನ್ನು ಬಳಸಿದ್ದವು. ಸ್ತ್ರೀಕರಣ ತಂತ್ರವನ್ನು ಬರೆಹಗಾರ್ತಿಯರನ್ನು ಸೂಚಿಸುವಾಗಲೂ ಬಳಸುವುದು ಫ್ರೆಂಚ್ ಭಾಷೆಯಲ್ಲಿ ಕಂಡುಬಂದಿದೆ. ಸಾಂಪ್ರದಾಯಿಕ ಫ್ರೆಂಚ್ ಭಾಷೆಯಲ್ಲಿ auteur (author) ಮತ್ತು ecrivain (writer) ಗಳಿಗೆ ಸ್ತ್ರೀಲಿಂಗ ರೂಪಗಳಿಲ್ಲ. ಆದರೆ, ಕೆನಡ ಮತ್ತು ಫ್ರಾನ್ಸ್‌ನ ಕೆಲವು ಸುಧಾರಕರು auteure ಮತ್ತು ecrivaine ಎಂಬ ಪದಗಳನ್ನು ಬಳಸಲು ಸೂಚಿಸಿದ್ದಾರೆ. ೧೯೯೧ ರಲ್ಲಿ ಫ್ರಾನ್ಸ್‌ನ ಎರಡು ರಾಷ್ಟ್ರೀಯ ಪತ್ರಿಕೆಗಳಾದ Liberation ಮತ್ತು Lemande ( September ಸಂಚಿಕೆಗಳು) ಗಳನ್ನು ಪರಿಶೀಲಿಸಿದಾಗ ಈ ಹೊಸ ಪದಗಳನ್ನು ಅಳವಡಿಸಿಕೊಂಡದ್ದು ಕಂಡು ಬರಲಿಲ್ಲ.  ಫ್ರೆಂಚ್ ಮಾಧ್ಯಮಗಳು ಸ್ತ್ರೀವಾದಿ ಭಾಷಾಸುಧಾರಣೆಗಳನ್ನು ಒಪ್ಪಿಕೊಳ್ಳಲು ಉತ್ಸಾಹವನ್ನು ತೋರಿಲ್ಲವೆಂಬುದು ಸ್ಪಷ್ಟವಾಗಿದೆ.

ವೃತ್ತಿನಾಮಗಳಿಗೆ ಸ್ತ್ರೀವಾದ ಪರ್ಯಾಯಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡದ್ದಕ್ಕೆ ಪುರಾವೆ ಇದೆಯೇ ಎಂದು ಕೇಳಿದರೆ, ಹೌದು ಎಂದು ಉತ್ತರಿಸಬಹುದಾದರೂ ಇನ್ನಷ್ಟು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನೋಡಬೇಕೆನಿಸುತ್ತದೆ. ಸ್ತ್ರೀವಾದಿ ಭಾಷಾಪ್ರಸ್ತಾವಗಳು ಭಾಷಾಬಳಕೆಯ ಮೇಲೆ ಅಷ್ಟಿಷ್ಟು ಪರಿಣಾಮ ಬೀರಿದೆ. ಜಾಡಿಗೆ ಬಿದ್ದ ಬಳಕೆಯ ವಿಧಾನಗಳನ್ನು ಅಸ್ಥಿರಗೊಳಿಸುವುದೂ ಉಂಟು. ಕೆಲವು ದೇಶಗಳಲ್ಲಿ ಪ್ರಸ್ತಾವಿತ ರೂಪಗಳನ್ನು ‘ಸಹಿಸಿಕೊಳ್ಳುವ’ ರೀತಿಯೂ ಕಂಡು ಬಂದಿದೆ. ಲಿಂಗತಾರತಮ್ಯರಹಿತ ಮತ್ತು ಸ್ತ್ರೀವಾದಿ ಪರ್ಯಾಯಗಳನ್ನು ಬಳಸುವಾಗ ಕಂಡುಬಂದಿರುವ ಏರುಪೇರುಗಳು ಇನ್ನೂ ಬದಲಾವಣೆ ಮುಂದುವರೆಯುತ್ತಿರುವುದನ್ನು ಸೂಚಿಸುತ್ತವೆ. ಅಂದರೆ, ಅಳವಡಿಸಿಕೊಳ್ಳುತ್ತಿರುವುದಕ್ಕೆ ಪುರಾವೆಗಳಿವೆ. ಆದರೆ, ಗೆಲುವಿನ ಪ್ರಮಾಣ ಎಷ್ಟೆಂಬುದನ್ನು ತಿಳಿಯಲು ಇನ್ನೂ ಕಾಯ್ದು ನೋಡಬೇಕಾಗಿದೆ. ಲಿಂಗತಾರತಮ್ಯರಹಿತ, ಇಲ್ಲವೇ ಸ್ತ್ರೀವಾದಿ ಪರ್ಯಾಯ ಪದಗಳನ್ನು ಜಂಡರ್ ಪೂರ್ವಾಗ್ರಹವಿರುವ ಬಗೆಯಲ್ಲಿ ಬಳಸುವುದು ಕಂಡುಬಂದಿದೆ. ಭಾಷಾ ಬಳಕೆಯಲ್ಲಿ ಸಮಾನತೆಯನ್ನು ತರುವ ಉದ್ದೇಶದ ಬದಲಾವಣೆಗಳಿಗೆ ಇಂತಹ ಸಮಸ್ಯೆ ಇದ್ದದ್ದೇ. ಏಕೆಂದರೆ ಇಂಥ ಬದಲಾವಣೆಗಳು ಒಂದು ರೂಪಕ್ಕೆ ಬದಲಾಗಿ ಇನ್ನೊಂದು ರೂಪವನ್ನು ಬಳಸುವುದೇ ಪರಿಣಾಮಕಾರಿ ತಂತ್ರವೆಂದು ನಂಬುತ್ತದೆ. ಆದರೆ, ರೂಪಗಳನ್ನು ಬದಲಿಸಿದ ಮಾತ್ರಕ್ಕೆ ಅರ್ಥ ಮತ್ತು ಬಳಕೆಯ ವಿಧಾನದಲ್ಲಿ ಬದಲಾವಣೆ ಆಗಿಯೇ ತೀರುತ್ತದೆಂದು ಹೇಳಲಾಗುವುದಿಲ್ಲ.

. ಸ್ತ್ರೀವಾದಿ ಭಾಷಾಬದಲಾವಣೆಗಳ ಪ್ರಸರಣ

ಸ್ತ್ರೀವಾದಿ ಭಾಷಾಬದಲಾವಣೆಗಳ ಪ್ರಸರಣದ ಪ್ರಶ್ನೆಯನ್ನು ಕೈಗೆತ್ತಿಕೊಳ್ಳುವ ಹಂತಕ್ಕೆ ಈ ಅಧ್ಯಯನವು ಬೆಳೆದಿಲ್ಲ. ಈಗ ದೊರೆತ ಮಾಹಿತಿಯ ವಿಶ್ಲೇಷಣೆ ಮತ್ತು ಚರ್ಚೆಗಳ ನೆರವಿನಿಂದ ಮೇಲಿನ ಪ್ರಶ್ನೆಗೆ ಸ್ಥೂಲವಾದ ಉತ್ತರವನ್ನಷ್ಟೇ ಕೊಡಬಹುದು. ೧) ಬದಲಾವಣೆಯು ಔಪಚಾರಿಕ ಬರೆಹಗಳ ಸಂದರ್ಭದಿಂದ ಅನೌಪಚಾರಿಕ ಸಂದರ್ಭಗಳ ಕಡೆಗೆ ನಡೆದಂತೆ ತೋರುತ್ತದೆ. ಜಂಡರ್‌ತಟಸ್ಥಗೊಳಿಸುವ ವೃತ್ತಿನಾಮಗಳು, ಮತ್ತಿತರ ಪದಗಳು ಉದ್ಯೋಗ ಜಾಹಿರಾತುಗಳಲ್ಲಿ ಹೆಚ್ಚು ಅವಕಾಶವನ್ನು ಪಡೆಯುವಂತೆ ತೋರುತ್ತದೆ. ಸಮೂಹ ಮಾಧ್ಯಮದ ಇತರ ವಲಯಗಳಲ್ಲಿ ಇವುಗಳ ಬಳಕೆ ಕಡಿಮೆ. ಉದ್ಯೋಗ ಜಾಹಿರಾತುಗಳು ನಿಶ್ಚಿತ ಚೌಕಟ್ಟಿನಲ್ಲಿ ರಚನೆಯಾಗುವುದೇ ಇದಕ್ಕೆ ಕಾರಣವಿರಬೇಕು. ಅಲ್ಲದೆ, ಜಂಡರ್ ಪೂರ್ವಾಗ್ರಹವಿಲ್ಲದಿರುವ ಭಾಷೆಯನ್ನು ಬಳಸಿದರೆ ಜಾಹಿರಾತುದಾರರು ದಂಡ ತೆರಬೇಕಾಗಿ ಬರುವುದು ಇನ್ನೊಂದು ಕಾರಣವಿದ್ದೀತು. ವಾರ್ತಾಪತ್ರಿಕೆಗಳ ಇನ್ನುಳಿದ ಭಾಗಗಳಲ್ಲಿ ಲಿಂಗತಾರತಮ್ಯವಿಲ್ಲದ ಭಾಷೆಯನ್ನು ಬಳಸಬೇಕೆಂಬ ಸೂಚನೆಗಳಿದ್ದರೂ, ಅದನ್ನು ಪಾಲಿಸಲೇಬೇಕೆಂಬ ಕಟ್ಟು ಪಾಡುಗಳೇನಿಲ್ಲ.

೨) ಈ ಬದಲಾವಣೆಯ ಪ್ರಸರಣಕ್ಕೆ ಅರ್ಥದ ನೆಲೆಯ ಆಯಾಮವಿದ್ದಂತಿದೆ. ಅಂದರೆ, ಸ್ತ್ರೀವಾದಿ ಭಾಷಾಪರ್ಯಾಯ ರೂಪಗಳು ನಾಮಪದಗಳ ಸಾಮಾಜಿಕ ಅರ್ಥವನ್ನು ಅವಲಂಬಿಸಿ ಆ ಪದವರ್ಗಗಳಲ್ಲಿ ನಿಧಾನವಾಗಿ ಹರಡುವಂತೆ ತೋರುತ್ತದೆ. ಉದಾಹರಣೆಗೆ, Spokesman ಎಂಬುದಕ್ಕೆ ಬದಲಾಗಿ, ಸ್ತ್ರೀವಾದಿ ಪರ್ಯಾಯವಾದ spokesperson ಎಂಬುದನ್ನು ಒಪ್ಪಿಕೊಂಡಷ್ಟು ಸುಲಭವಾಗಿ Chairman ಗೆ ಬದಲಾಗಿ Chairperson ಅನ್ನು ಒಪ್ಪಿಕೊಂಡಿಲ್ಲ.  Chairman ಎಂಬ ಪದವು ಸೂಚಿಸುವ ಹುದ್ದೆಯಲ್ಲಿರುವ ವ್ಯಕ್ತಿಗೆ spokesman ಪದ ಸೂಚಿಸುವ ಹುದ್ದೆಯಲ್ಲಿರುವ ವ್ಯಕ್ತಿಗಿಂತ ಸಾಮಜಿಕವಾಗಿ ಉನ್ನತ ಸ್ಥಾನಮಾನಗಳಿರುವುದರಿಂದ ಬದಲಾವಣೆಗೆ ತಡೆಗಳುಂಟಾಗುತ್ತಿದೆ. ಅಲ್ಲದೆ, ಈ ವ್ಯತ್ಯಾಸಕ್ಕೆ ಈ ಎರಡೂ ಪದಗಳಿಗೆ ಅನ್ವಯಿಸುವ ಸಾಮಾಜಿಕ ಜಂಡರ್‌ನಲ್ಲಿ ಇರುವ ವ್ಯತ್ಯಾಸವೂ ಕಾರಣವಿರಬೇಕು. ಏಕೆಂದರೆ, ಇಂದಿನ ಜಗತ್ತಿನಲ್ಲೂ ಕೂಡಾ ಒಂದು ಕಂಪನಿಯ ಇಲ್ಲವೇ ಸಭೆಯ Chairman ಎಂದಾಗ ಅದು ಗಂಡಸೇ ಆಗಿರಬೇಕೆಂಬ ಊಹೆ ಗಟ್ಟಿಯಾಗಿದೆ. ಆದರೆ Spokesman ಎಂದಾಗ ಅದನ್ನು ಗಂಡಸಿನ ಜೊತೆಗೆ ಕಲ್ಪಿಸಿಕೊಳ್ಳಬೇಕಾದ ಒತ್ತಾಯವಿಲ್ಲದಿರುವುದರಿಂದ Spokesperson ಎಂಬ ಪದವನ್ನು ಸುಲಭವಾಗಿ ಒಪ್ಪಿಕೊಳ್ಳಲಾಗಿದೆ. ಒಟ್ಟಾರೆ ಹೇಳುವುದಾದರೆ ನಾನು ಮೇಲೆ ಹೇಳಿದ ತೀರ್ಮಾನಗಳು ಪ್ರಮೇಯ ರೂಪದಲ್ಲಿವೆ. ಇನ್ನೂ ಹೆಚ್ಚಿನ ಅಧ್ಯಯನಗಳು ಈ ದಿಸೆಯಲ್ಲಿ ನಡೆಯಬೇಕಿದೆ.

. ಸಾರಾಂಶ

ಈ ಪ್ರಬಂಧದಲ್ಲಿ ನಾನು ಸ್ತ್ರೀವಾದಿ ಭಾಷಾ ರೂಪಗಳ ಬಗ್ಗೆ ಜನತೆಯ ಮೌಲ್ಯಮಾಪನ ಸಮಸ್ಯೆಯನ್ನು ಚರ್ಚಿಸಿದ್ದೇನೆ. ನನ್ನೆದುರು ಎರಡು ಪ್ರಶ್ನೆಗಳಿದ್ದವು. ಸ್ತ್ರೀವಾದಿ ಭಾಷಾ ಪರ್ಯಾಯ ರೂಪಗಳನ್ನು ಜಂಡರ್ ಪೂರ್ವಾಗ್ರಹವುಳ್ಳ ವೃತ್ತಿನಾಮಗಳ ಬದಲಿಗೆ ಬಳಸುವ ಪ್ರಕ್ರಿಯೆಯ ಯಶಸ್ಸಿಗೆ ಪುರಾವೆಗಳಿವೆಯೇ ಎಂಬುದು ಮೊದಲನೆಯ ಪ್ರಶ್ನೆ. ಇಂಗ್ಲಿಶ್ ಭಾಷಾಸಮುದಾಯಗಳಲ್ಲಿ ಇಂಥ ಪದಗಳನ್ನು ಅಳವಡಿಸಿ ಕೊಳ್ಳುತ್ತಿರುವುದಕ್ಕೆ ನಿದರ್ಶನಗಳು ಸಾಕಷ್ಟು ದೊರಕಿವೆ. ಸ್ತ್ರೀವಾದಿ ಭಾಷಾ ಪರ್ಯಾಯಗಳು ಪ್ರಸರಣ ಪಡೆಯುತ್ತಿರುವ ಬಗೆಯನ್ನು ಕುರಿತದ್ದು ಎರಡನೆಯ ಪ್ರಶ್ನೆ. ಈ ದಿಕ್ಕಿನಲ್ಲಿ ಹೆಚ್ಚು ಮಾಹಿತಿ ದೊರತಿಲ್ಲ. ಆದರೂ ಪರ್ಯಾಯ ಭಾಷಾ ರೂಪಗಳು ಸಂದರ್ಭವನ್ನು ಅವಲಂಬಿಸಿ ಹರಡುತ್ತವೆ, ಮತ್ತು ಈ ಹರಡುವಿಕೆಗೆ ಒಂದು ಅರ್ಥದ ಆಯಾಮವಿದೆ ಎಂದು ಹೇಳಬಹುದು.

—-
ಆಕರ : Linguistic Online –೧, Jan, ೧೯೯೮ – Anne Pauwels Feminist Language Planning :  Has it been worthwhile?