ವ್ಯತ್ಯಾಸವನ್ನು ಭಾಷಿಕವಾಗಿ ಗುರುತಿಸುವುದು ಹೇಗೆ ?

ಗಂಡಸರ ಮತ್ತು ಹೆಂಗಸರ ಬರವಣಿಗೆಗಳು ಬೇರೆ ಬೇರೆ ಶೈಲಿಗಳಲ್ಲಿರುತ್ತವೆ ಎನ್ನುವ ನಿಲುವನ್ನು ಪರಿಶೀಲಿಸಲು ಪ್ರಯತ್ನಿಸುವ ಹತ್ತಾರು ಪ್ರಾಯೋಗಿಕ ಅಧ್ಯಯನಗಳು ಈಗಾಗಲೇ  ನಡೆದಿವೆ. ಗಂಡಸರ ಬರವಣಿಗೆಗಿಂತ ಹೆಂಗಸರ ಬರವಣಿಗೆ ಭಿನ್ನವಾಗಲು ಅವರವರು ಬಳಸುವ ಭಾಷಾಂಶಗಳ ವ್ಯಾಪಕತೆಯಲ್ಲಿ ಇರುವ ವ್ಯತ್ಯಾಸವೇ ಕಾರಣ ಎಂಬ ಪ್ರಮೇಯವನ್ನು  ಮೇರಿ ಹೇಯ್ಟ್ (೧೯೭೭)ರೂಪಿಸಿದ್ದಾಳೆ. ಅದಕ್ಕಾಗಿ ಆಕೆ ಜನಪ್ರಿಯ ಕಥನ ಸಾಹಿತ್ಯ ಮತ್ತು ವೈಚಾರಿಕ ಬರವಣಿಗೆಗಳಿಂದ ನೂರು ಮಾದರಿಗಳನ್ನು ಆಯ್ದುಕೊಂಡಳು. ಅವುಗಳನ್ನು ವಿಶ್ಲೇಷಿಸುವಾಗ ಆಕೆ ವಿಷಯ ವಿಶ್ಲೇಷಣೆಯನ್ನೇ ಭಾಷಿಕ ವಿಶ್ಲೇಷಣೆ ಎಂದು ತಿಳಿದು ಗೊಂದಲ ಮಾಡಿಕೊಂಡಿದ್ದಾಳೆ. ಹಾಗಾಗಿ, ಸ್ತ್ರೀಯರು ಸೃಷ್ಟಿಸುವ ಸಿದ್ಧಮಾದರಿಗಳನ್ನೇ ಮತ್ತೆಮತ್ತೆ ವಿವರಿಸುತ್ತಾಳೆ. ಉದಾಹರಣೆಗೆ ‘‘ಹೆಂಗಸರು ಎಲ್ಲರನ್ನೂ ಸಂತೃಪ್ತಿಪಡಿಸುವ ಗುರಿಯನ್ನೇ ಹೊಂದಿರುತ್ತಾರೆ. ಹೆಂಗಸರನ್ನು ಟೀಕಿಸುವವರು ಸಾಮಾನ್ಯವಾಗಿ ಆಕೆ ಎಲ್ಲರ ಸಮ್ಮತಿಗಾಗಿ ಹಾತೊರೆಯುವಳು ಎನ್ನುತಾರಷ್ಟೇ. ಈ ಗುಣವೇ ಅವಳ ಬರವಣಿಗೆಯಲ್ಲೂ ಮೈದಳೆದಂತಿದೆ. ಒಂದು ಬಗೆಯಲ್ಲಿ ಎಲ್ಲರನ್ನೂ ಮೋಹಕ ಜಾಲದಲ್ಲಿ ಸಿಲುಕಿಸಿ ಗೆಲ್ಲುವ ತಾವು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವವರಲ್ಲವೆಂದು ತೋರುವ ಮಾದರಿಗೇ ಹೆಂಗಸು ಕಟ್ಟುಬೀಳುತ್ತಾಳೆ’’. (ಹೇಯ್ಟ್-೧೯೭೭) ಇದು ಶಿಶ್ನಕೇಂದ್ರಿತ ಚಿಂತನೆಯ ಮೂಲಕ ನೆಲೆಗೊಂಡ ವಿಶ್ಲೇಷಣೆಯೇ ಸರಿ. ತಾನು ಗಂಡಸರು ಮತ್ತು ಹೆಂಗಸರು ಬರೆದ ಪುಸ್ತಕಗಳಿಂದ ಮಾದರಿಗಳನ್ನು ಆಯ್ದಕೊಂಡಿದ್ದೇನೆಂದು ಹೇಳುವಾಗ ಅವರವರ ಬರವಣಿಗೆಯ ಶೈಲಿಯಲ್ಲಿ ಭಿನ್ನತೆ ಇದೆ ಎಂಬುದನ್ನು ಗುರುತಿಸಿರುವುದಾಗಿ ಹೇಳುತ್ತಾಳೆ. ಉದಾಹರಣೆಗೆ, ಹೆಂಗಸರು ಸಾಮಾನ್ಯವಾಗಿ ಚಿಕ್ಕವಾಕ್ಯಗಳನ್ನು ಬರೆಯುತ್ತಾರೆ. ಚಿಕ್ಕವಾಕ್ಯಗಳು ದೊಡ್ಡವಾಕ್ಯಗಳಿಗಿಂತ ಕಡಿಮೆ ಸಂಕೀರ್ಣವಾಗಿರುವುದೇ ಇದಕ್ಕೆ ಕಾರಣ ಎಂದು ವಾದಿಸಿದ್ದಾಳೆ. ಈ ಸಂಕೀರ್ಣತೆಯ ಮಾತೇ ಚರ್ಚಾರ್ಹವಾದುದು. ಮುಂದುವರೆದು ಆಕೆ ಹೀಗೆ ಚಿಕ್ಕವಾಕ್ಯಗಳನ್ನಷ್ಟೇ ಬರೆಯುವುದರಿಂದಾಗಿ, ಅವರ ಬರವಣಿಗೆಯಲ್ಲಿ ವೈವಿಧ್ಯವಿಲ್ಲವೆಂದೂ, ಗಂಡಸರ ಬರವಣಿಗೆಯಲ್ಲಿ ಕಂಡು ಬರುವಷ್ಟು ವೈವಿಧ್ಯ ಎಲ್ಲೋ ಕೆಲವು ಹೆಂಗಸರ ಬರವಣಿಗೆಯಲ್ಲಿ ಕಾಣುವುದು ಎಂದೂ ಹೇಳುತ್ತಾಳೆ.(ಹೇಯ್ಟ್-೧೯೭೭) ಹೆಂಗಸರ ಕಥನ ಸಾಹಿತ್ಯದ ಶೈಲಿಯು ಸಂಕೀರ್ಣವೂ ವೈವಿಧ್ಯಮಯವೂ ಆಗಿರುವುದೆಂದು ಹೇಯ್ಟ್ ವಾದಿಸಿದರೂ, ಅದು ಗಂಡಸರ ಬರವಣಿಗೆಯಲ್ಲಿ ಕಾಣಿಸುವಷ್ಟು ಪ್ರಮಾಣದಲ್ಲಿಲ್ಲ; ಬಹುಶಃ ಹೆಂಗಸರಾರೂ ಮೇಯ್ಲರ್ ಹಾಗೆ ‘ದಿಟ್ಟ’ತನದಿಂದ ಬರೆಯಲು ಮುಂದಾಗದೆ ಹೋದುದೇ ಇದಕ್ಕೆ ಕಾರಣ ಎನ್ನುತ್ತಾಳೆ.  ಹೇಯ್ಟ್‌ಗೆ ಹೆಣ್ಣು ಮತ್ತು ಹೆಣ್ಣುತನ ಇವೆರಡೂ ಬೇರೆ ಬೇರೆ ಎಂದು ತೋರಲಿಲ್ಲ. ಹಾಗಾಗಿಯೇ, ಅವಳು ‘ಹೆಣ್ಣು ಶೈಲಿ’ ಎಂದು ಯಾವುದನ್ನು ವಿವರಿಸುತ್ತಾಳೋ ಅದನ್ನೇ‘ಹೆಂಗಸರ ಶೈಲಿ’ಎಂದು ನಂಬುತ್ತಾಳೆ.

ವಾಕ್ಯಗಳ ಉದ್ದವನ್ನಷ್ಟೇ ಅಲ್ಲದೆ, ಹೆಂಗಸರು ಉದ್ಗಾರ ವಾಚಕಗಳನ್ನು, ವಿವರಣಾ ವಾಕ್ಯಖಂಡಗಳನ್ನು ಬಳಸುವ ಪ್ರಮಾಣವನ್ನು ಹೇಯ್ಟ್ ಗುರುತಿಸಿದ್ದಾಳೆ. ಇವೆಲ್ಲವನ್ನೂ ಹೆಚ್ಚು ಪ್ರಮಾಣದಲ್ಲಿ ಬಳಸುವುದು ಹೆಂಗಸರ ಬರವಣಿಗೆಯ ಲಕ್ಷಣ ಎನ್ನವುದು ಆಕೆಯ ವ್ಯಾಖ್ಯಾನ. ತಾನು ಆಯ್ಕೆ ಮಾಡಿದ ಬರೆಹಮಾದರಿಗಳಲ್ಲಿ ಹೆಂಗಸರು ಗಂಡಸರಿಗಿಂತ ವಿವರಣಾ ವಾಕ್ಯಖಂಡಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವರೆಂದು ಗುರುತಿಸುತ್ತಾ ಅದಕ್ಕೆ ಕಾರಣವನ್ನು ನಮೂದಿಸುತ್ತಾಳೆ. ‘‘ವಿವರಣಾ ವಾಕ್ಯಖಂಡಗಳು ನಿರೂಪಣೆಗೆ ಅಗತ್ಯವಲ್ಲ ಎಂದು ಪರಿಗಣಿಸುವುದಾದರೆ ಆಗ ಹೆಣ್ಣು ಕಥನಕಾರರು ತಮ್ಮ ಬರವಣಿಗೆಯ ಹೆಚ್ಚು ಪಾಲು ಬೇಡವಾದ ಸಾಮಗ್ರಿಯಿಂದ ತುಂಬಿರುವುದೆಂದು ಭಾವಿಸುತ್ತಾರೆ.’’ (೧೯೭೭)  ಮುಂದುವರೆದು ಹೆಂಗಸರ ಶೈಲಿಯು ಗಂಡಸರ ಶೈಲಿಯಷ್ಟು ಅಧಿಕಾರಯುತವಾಗಿ ಇರುವುದಿಲ್ಲ ಎಂಬ ನಿಲುವನ್ನು ಮಂಡಿಸುತ್ತಾಳೆ. ಗಂಡಸರು ಮತ್ತು ಹೆಂಗಸರು ಬಳಸುವ ಕ್ರಿಯಾವಿಶೇಷಣೆಗಳ ಸ್ವರೂಪವನ್ನು ಗಮನಿಸಿ ಒಂದು ಚರ್ಚೆ ಬೆಳೆಸಿದ್ದಾಳೆ. ‘‘ಗಂಡಸರ ಕಥನ ಸಾಹಿತ್ಯವು ಹೆಚ್ಚು ಕ್ರಿಯಾಶೀಲವಾಗಿದ್ದು, ಹೆಂಗಸರ ಕಥನ ಸಾಹಿತ್ಯವು ಭಾವುಕತೆಯ ನೆಲೆಯಲ್ಲಿ ಇರುತ್ತದೆ. ಇದಕ್ಕೆ ಅವರವರು ಬಳಸುವ ಕ್ರಿಯಾ ವಿಶೇಷಣಗಳೇ ಕಾರಣ’’.(೧೯೭೭) ಹೆಂಗಸರು‘really’ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ಅವರಲ್ಲಿರುವ ಹಿಂಜರಿಕೆಯನ್ನು ಈ ಬಳಕೆ ಬಿಂಬಿಸುತ್ತದೆ ಎನ್ನುತ್ತಾಳೆ. really ಎಂಬುದನ್ನು ಹೆಚ್ಚಾಗಿ ಬಳಸುವುದು ನಿಜಕ್ಕೂ ಹಿಂಜರಿಕೆಯಿಂದಲೇ ಎಂಬ ಪ್ರಶ್ನೆಯನ್ನು ಕೇಳಬೇಕೆನಿಸುತ್ತದೆ. ಹೇಯ್ಟ್ ನ ಕೊನೆಯ ತೀರ್ಮಾನ ಹೀಗಿದೆ: ಹೆಂಗಸರ ಬರವಣಿಗೆ ಗಂಡಸರ ಬರವಣಿಗೆಗಿಂತ ಸಾಮಾನ್ಯ ದರ್ಜೆಯದು. ಅದರಲ್ಲಿ ನಿಯತತೆ ಹೆಚ್ಚಿರುತ್ತದೆ. ವೈವಿಧ ಕಡಿಮೆ. ಇದೇಕೆ ಹೀಗೆ ಎಂದು ಯಾರಾದರೂ ಕೇಳಬಹುದು. ಹೆಂಗಸರು ಅಲ್ಪಸಂಖ್ಯಾತರಾಗಿರುವುದರಿಂದ ದಿಟ್ಟತನದಿಂದ ಮುನ್ನುಗುವ ಬದಲು ಹೇಗೋ ಹೊಂದಿಕೊಂಡು ಹೋಗಲು ಮನಸ್ಸು ಮಾಡುವುದೇ ಇದಕ್ಕೆ ಕಾರಣ—ತಾವಿರುವ ಪರಿಸ್ಥಿತಿಯಿಂದಾಗಿ ತಾವು ಹೇಳಿದ್ದನ್ನು ಯಾರಾದರೂ ನಂಬಬಹುದೇ ಎನ್ನುವ ಆತಂಕ, ಹಿಂಜರಿಕೆಗಳು ಅವರಲ್ಲಿರುತ್ತವೆ. ಆದರಿಂದ ಯಾವ ತೀರ್ಮಾನಕ್ಕೂ ಅವರು ಬರಲು ಮುಂದಾಗಲಾರರು. ಹೇಗೋ ನಗುಮೊಗವನ್ನು ತೋರಲು ಅಗತ್ಯಕ್ಕಿಂತ ಹೆಚ್ಚು ಪ್ರಯತ್ನಿಸುತ್ತಾರೆ.’’(ಹೇಯ್ಟ್-೧೯೭೯)ಅಲ್ಲಿಯೇ ಮುಂದುವರೆದು,‘‘ಕ್ರಿಯಾಶೀಲ ಜಗತ್ತಿಗೆ ಹೆಂಗಸಿಗೆ ಪ್ರವೇಶವಿಲ್ಲವಾದ್ದರಿಂದ ಅವರ ಬರವಣಿಗೆ ಹೆಚ್ಚು ವಿವರಣೆಗಳಿಂದ  ತುಂಬಿರುತ್ತದೆ’’.  ಎನ್ನುತ್ತಾಳೆ .  ಹೇಯ್ಟ್‌ನ ತೀರ್ಮಾನಗಳನ್ನು ಒಪ್ಪುವ ಮೊದಲು ಹೆಂಗಸರು ಮತ್ತು ಗಂಡಸರ ಬರವಣಿಗೆಯಲ್ಲಿರುವ ಭಿನ್ನತೆಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ಹೀಗೆ ಮಾಡಿದಾಗ ಅವರ ಬರವಣಿಗೆಗಳಲ್ಲಿರುವ ಅಷ್ಟಿಷ್ಟು ವ್ಯತ್ಯಾಸಗಳನ್ನೇ ಹೇಯ್ಟ್ ದೊಡ್ಡದು ಮಾಡಿ ಆ ಮೂಲಕ ಸಾಮಾನ್ಯ ಸೂತ್ರಗಳನ್ನು ಮಂಡಿಸಿದಂತೆ ತೋರುತ್ತದೆ. ಅಲ್ಲದೆ, ಹೆಂಗಸಿನ ಬರವಣಿಗೆಗಳಲ್ಲಿ ಆಕೆ ಕಾಣುವ ಲಕ್ಷಣಗಳನ್ನು ನಕಾರಾತ್ಮಕ ನೆಲೆಯಲ್ಲೇ ಗ್ರಹಿಸಿದಂತಿದೆ. ಹೀಗೆ ಮಾಡುವ ಮೂಲಕ ತಾನು ಒಂದು ಗೊಂದಲವನ್ನು ಹುಟ್ಟುಹಾಕುತ್ತಿರುವ ಪರಿವೆ ಆಕೆಗೆ ಇದ್ದಂತಿಲ್ಲ. ಕಳೆದ ಇಪ್ಪತ್ತು ವರ್ಷಗಳಲ್ಲಿ ಸ್ತ್ರೀವಾದಿ ಚಿಂತನೆಗಳು ‘ಹೆಂಗಸು’ಎಂಬುದಕ್ಕೆ ಕಾಲದೇಶಗಳನ್ನು ಮೀರಿದ ವಾಖ್ಯೆಯನ್ನು ನೀಡುವುದಕ್ಕಿಂತ ಹೆಚ್ಚಾಗಿ, ಅದರೊಳಗೆ ಇರುವ ವೈವಿಧ್ಯಗಳನ್ನು ಗುರುತಿಸಲು ಆಸಕ್ತವಾಗಿವೆ.

ಸುಸಾನ್ ಲಿಯೊನಾರ್ಡಿ ಭಾಷಾಪರಿಕರಗಳ ನೆಲೆಯಲ್ಲಿ ‘ಹೆಣ್ಣುವಾಕ್ಯ’ಗಳನ್ನು ವಿವರಿಸಲು ಮುಂದಾದ ಇನ್ನೊಬ್ಬ ಚಿಂತಕಿ. ಅದಕ್ಕಾಗಿ ವೂಲ್ಫ್‌ಳ ಕಥನ ಸಾಹಿತ್ಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ವಾಕ್ಯಗಳ ರಚನೆ. ವಿಷಯ ವಿನ್ಯಾಸ, ಆಂತರಿಕ ತರ್ಕ, ಪೂರ್ಣತೆ ಮುಂತಾದ ನೆಲೆಗಳಲ್ಲಿ ಹೆಣ್ಣುವಾಕ್ಯಗಳನ್ನು ವಿಶ್ಲೇಷಿಸಲು ಸಾಧ್ಯ ಎಂಬುದು ಆಕೆಯ ನಿಲುವು, ವೂಲ್ಛ್ ಗಂಡುವಾಕ್ಯಗಳನ್ನು ನಿರಾಕರಿಸುವಳು. ತಾನು ಬರೆಯುತ್ತಿರುವ ಸಾಹಿತ್ಯ ಪರಂಪರೆಯಲ್ಲಿ ನೆಲೆ ನಿಂತ ಈ ಗಂಡುವಾಕ್ಯಗಳು ಅಂತಸ್ತನ್ನು ಸಮರ್ಥಿಸುವಂಥವು. ಈ ವಾಕ್ಯಗಳಲ್ಲಿ ಅಧೀನತೆಯನ್ನು ರಾಚನಿಕವಾಗಿ ಹೆಣೆಯಲಾಗಿದೆ. ಇದನ್ನು ನಿರಾಕರಿಸುವ ಮೂಲಕ ಯಾವುದು ಬೇಕು,ಯಾವುದು ಬೇಡ ಎಂಬುದನ್ನು ವೂಲ್ಛ್ ಸೃಷ್ಟಿಗೊಳಿಸಿದ್ದಾಳೆಂದು ಲಿಯೋನಾರ್ಡಿ ತಿಳಿಸುತ್ತಾಳೆ(೧೯೮೬) ವೂಲ್ಛ್‌ಳ ಬರವಣಿಗೆಯನ್ನು ಸಾಂಖ್ಯಿಕ ವಿಶ್ಲೇಷಣೆಗೆ ಗುರಿಪಡಿಸಿದ ಡೇವಿಡ್ ಟ್ಯಾಲೆಂಟೈರ್ (೧೯೮೬) ವೂಲ್ಛ್ ಅಧೀನ ವಾಕ್ಯಖಂಡಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಆಕೆಯ ಬರವಣಿಗೆಯಲ್ಲಿ ಸಂಯೋಗಾತ್ಮಕ ವಾಕ್ಯಗಳು ಹೆಚ್ಚಿವೆ. ಪಠ್ಯವೊಂದರಲ್ಲಿ ಸಂಯೋಗ ವಾಕ್ಯಗಳನ್ನು ಬಳಸಿದರೆ ಆ ಪಠ್ಯ ತೀರಾ ಸರಳವಾಗುವುದು ಎಂಬ ತೀರ್ಮಾನ ಇದೆಯಾಗಿ ವೂಲ್ಛ್‌ಳ ಬರವಣಿಗೆಯಲ್ಲಿ ಕಾಣಲಾಗದ ಈ ಲಕ್ಷಣ ಕುತುಹಲಕಾರಿಯಾಗಿದೆ. ಗಂಡುವಾಕ್ಯಗಳು ಅಂತಸ್ತನ್ನು ಅಂತರ್ಗತ ಮಾಡಿಕೊಂಡಿರುತ್ತವೆ ಎಂದು ವೂಲ್ಛ್ ಹೇಳಿದ್ದನ್ನು ಗಮನಿಸುತ್ತಾ,‘‘ಅಂತಸ್ತನ್ನು ಸಮರ್ಥಿಸುವ ವಾಕ್ಯಗಳು ವ್ಯವಸ್ಥಿತ ಜಗತ್ತಿಗೆ ಮತ್ತು ವ್ಯವಸ್ಥಿತ ಸಂಬಂಧಗಳಿಗೆ ರಚಿಸಿದ ರೂಪಕಗಳಾಗಿರುತ್ತವೆ’’  ಎಂದು ಲಿಯೋನಾರ್ಡಿ ಹೇಳುತ್ತಾಳೆ. ಗಂಡುವಾಕ್ಯಗಳಲ್ಲಿ ಅಧೀನ ವಾಕ್ಯಖಂಡಗಳು ಹೆಚ್ಚಿರುತ್ತವೆ ಎಂದಾದರೆ, ಅದಕ್ಕೇನು ವಿವರಣೆ? ಅಂತಸ್ತು ಸಮರ್ಥನೆ ಮತ್ತು ವ್ಯವಸ್ಥೆಯ ಸಮರ್ಥನೆಗಳೇ ಇಂಥ ವಾಕ್ಯಗಳ ಹಿಂದಿರುವ ಪ್ರೇರಣೆ ಎಂದು ವ್ಯಾಖ್ಯಾನ ಮಾಡಲಾಗಿದೆ. ಆದರೆ, ಹೆಣ್ಣುವಾಕ್ಯಗಳಲ್ಲೂ  ಹೀಗೆ ಅಧೀನ ವಾಕ್ಯಖಂಡಗಳಿರುವ ಉದಾಹರಣೆಗಳನ್ನು ತೆಗೆದು ತೋರಿಸಬಹುದು. ಇದಕ್ಕೆ ಕಾರಣಗಳನ್ನು ಬೇರೆಯ ನೆಲೆಯಲ್ಲೇ ಹುಡುಕಲಾಗಿದೆ. ಇಲ್ಲಿ ಮುಗಿತಾಯವನ್ನು ಮುಂದೂಡುವುದು, ನಿರ್ಧಾರಾತ್ಮಕ ನೆಲೆಯನ್ನು ತಲುಪಲು ಮುಂದಾಗದಿರುವುದು – ಇಂಥ ರಚನೆಗಳಿಗೆ ಪ್ರೇರಣೆ ಎನ್ನಲಾಗಿದೆ. ಅಂದರೆ, ವಾಕ್ಯರಚನೆಯ ಹೊರ ಚಹರೆಗಳು ಏನನ್ನೂ ಹೇಳುವುದಿಲ್ಲ, ವಿಶ್ಲೇಷಿಸಲು ಬಳಸಲಾದ ಚೌಕಟ್ಟಿನಲ್ಲಿ ಭಿನ್ನತೆ ಎಂಬುದು ಅಡಗಿದೆ ಎಂದಾಯ್ತ.

ವೂಲ್ಛ್‌ಳ ಬರವಣಿಗೆಯಲ್ಲಿ ವಾಕ್ಯಗಳು ಅಪೂರ್ಣವಾಗಿ ಇರುತ್ತವೆಂಬುದನ್ನು ಲಿಯೊನಾರ್ಡಿ ಗುರುತಿಸುತ್ತಾಳೆ . ಅದು ಹೆಣ್ಣುವಾಕ್ಯಗಳ ಲಕ್ಷಣವೆಂದು ಹೇಳಲಾಗಿದೆಯಷ್ಟೇ. ಆದರೆ, ವಾಕ್ಯಗಳೆಂದರೇನೇ ಒಂದು ಪೂರ್ಣರಚನೆ. ಈ ವ್ಯಾಖ್ಯೆಯನ್ನು ಗಮನದಲ್ಲಿ ಇಟ್ಟುಕೊಂಡರೆ, ಅಪೂರ್ಣ ವಾಕ್ಯಗಳ ಮಾತು ಒಂದು ವೈರುಧ್ಯವನ್ನು ಸೃಷ್ಟಿಸುತ್ತದೆ. ವಾಕ್ಯದ ಘಟಕಗಳ  ಪೂರ್ಣತೆಯ ನೆಲೆಯನ್ನು ಬದಿಗಿಟ್ಟು, ಭಾಷೆಯ ಸ್ಪರೂಪವನ್ನು ಚರ್ಚಿಸುವ ಸಾಧ್ಯತೆಗಳು ಇರುವಂತಿದೆ. ಲಿಯೊನಾರ್ಡಿ ಹೆಂಗಸರ ಬರವಣಿಗೆ ಕುರಿತು ಇರುವ ಜನಪ್ರಿಯ ನಂಬಿಕೆಯೊಂದನ್ನು ಪರಿಶೀಲಿಸುತ್ತಾಳೆ. ಹೆಂಗಸರ ಬರವಣಿಗೆಯಲ್ಲಿ ತರ್ಕ ಮತ್ತು ದಿಟ್ಟತನಗಳು ಇರುವುದಿಲ್ಲ ಎನ್ನುವುದು ಪ್ರಚಲಿತ ನಂಬಿಕೆ. ಅಂದರೆ, ಹೆಣ್ಣುವಾಕ್ಯಗಳಲ್ಲಿ  ಬರೆಹಗಾರ್ತಿ ತನ್ನ ಭಾವನೆಗಳನ್ನು ಸುಮ್ಮನೆ ತುಂಬಿ ಉಕ್ಕಿಹರಿಯುವಂತೆ ಮಾಡುತ್ತಾಳೆ ಎಂದಾಯಿತು. ಯಾವುದೇ ರಚನೆ, ಇಲ್ಲವೇ ಯೋಜನೆಗಳಿಗೆ  ಕಟ್ಟು ಬೀಳದೆ ತನ್ನನ್ನು ತಾನು ವಾಕ್ಯಗಳಲ್ಲಿ ಮಂಡಿಸುತ್ತಾಳೆ ಎನ್ನಲಾಗಿದೆ. ಗಂಡುವಾಕ್ಯಗಳು ಹಾಗಲ್ಲ. ಅವುಗಳಿಗೆ ಒಂದು ನಿಯಂತ್ರಣ ಬಿಂದು ಇರುತ್ತದೆ. ಬರೆಹಗಾರ ಈ ನಿಯಂತ್ರಣ ಬಿಂದು ಯಾವುದಾಗಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಪಡೆದಿರುತ್ತಾನೆ. ಹೀಗಾಗಿಯೇ, ಹೊಸ ಕಾಲದ ಬರೆಹಗಾರರು ತಮ್ಮ ಹೆಣ್ಣುಬರವಣಿಗೆ ಕುರಿತು ವಿಮರ್ಶಾತ್ಮಕವಾದ ಗಂಡು ಪ್ರಬಂಧಗಳನ್ನು ಬರೆಯಬಲ್ಲರು. ಆ ಮೂಲಕ ಅವರು ಹೆಣ್ಣು ಬರವಣಿಗೆಯ ಮಾದರಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ತಮ್ಮದಾಗಿದೆ ಎಂದು ತೋರಿಸಿ ಕೊಡುತ್ತಾರೆ. ಇದರಿಂದ ಹೆಂಗಸರು ತರ್ಕಬದ್ದವಾಗಿ ಬರೆಯುವುದಿಲ್ಲ. ಅವರ ಬರವಣಿಗೆಗೆ ಒಂದು ನಿಯಂತ್ರಣ ಬಿಂದು ಇರುವುದಿಲ್ಲ ಮತ್ತು ಹೇಗೆ ಬರೆಯಬೇಕು ಎನ್ನುವ ಆಯ್ಕೆ ಕೂಡಾ ಅವರಿಗಿಲ್ಲ ಎಂದು ಹೇಳಿದಂತಾಯಿತು. ಸಿಮೊನ್ ದ ಬೊವಾ ಬರವಣಿಗೆಯನ್ನು ಕುರಿತು ಬರೆದ ಮೇರಿ ಎಲ್ಮನ್ ಅವಳ ಗದ್ಯದಲ್ಲಿ ಕಾಣುವ ದಿಟ್ಟತನವನ್ನು ಟೀಕಿಸುತ್ತಾಳೆ.(೧೯೬೮) ತರ್ಕಬದ್ದತೆ, ಬುದ್ದಿ ಪ್ರಧಾನತೆ  ಮುಂತಾದವುಗಳನ್ನು ಹೇಗೆ ವಿವರಿಸಿಕೊಂಡರೂ, ಅವೆಲ್ಲವೂ ಗಂಡಸರ ಸೊತ್ತೆಂದೂ, ಹೆಂಗಸರಿಗೆ ಅವು ಅಲಭ್ಯವೆಂದೂ ತಿಳಿಯಲು ಕಷ್ಟವಾಗುತ್ತದೆ. ಗಂಡು ವಾಕ್ಯಗಳು ಸ್ಪಷ್ಟ ಮತ್ತು ಬುದ್ದಿಪ್ರಧಾನವಾಗಿದ್ದು, ಆ ವಾಕ್ಯಗಳನ್ನು ಬರೆದಾತ ತನ್ನ ನಿಯಂತ್ರಣವನ್ನು ಸದಾ ಕಾಯ್ದುಕೊಳ್ಳುತ್ತಾನೆ ಎಂದು ನಂಬಬೇಕಾಗುತ್ತದೆ. ಇಂಥ ವಾಕ್ಯಗಳು ಅಧಿಕಾರದ ಬಿಂಬಗಳು. ಹೀಗಿರುವಾಗ, ಇದನ್ನು ವಾಕ್ಯದ ಲಕ್ಷಣ ಎಂದು ಪರಿಗಣಿಸಬೇಕೋ, ಅಥವಾ ನಮ್ಮ ಸಮಾಜದಲ್ಲಿ ಗಂಡಸಿನ ಬಗ್ಗೆ ಇರುವ ಸಿದ್ದಮಾದರಿಯು ಪ್ರೇರೇಪಿಸುರುವ ಗ್ರಹಿಕೆ ಎನ್ನಬೇಕೋ?

ಮುಂದೆ ಲಿಯೊನಾರ್ಡಿ ವಸ್ತುವಿಷಯವನ್ನು ಕುರಿತು ಚರ್ಚಿಸುತ್ತಾಳೆ. ಹೆಚ್ಚಿನ ವಿಮರ್ಶಕರು ಹೆಣ್ಣು ಅನುಭವವನ್ನು ಮಂಡಿಸಲು ಬಳಸುವ ವಾಕ್ಯಗಳನ್ನೇ ‘ಹೆಣ್ಣುವಾಕ್ಯ’ ಗಳೆಂದು ನಂಬಿ ದಿಕ್ಕು ತಪ್ಪಿದ್ದಾರೆ. ಈ ಮಾತನ್ನು ಒಪ್ಪಿದರೆ ಗಂಡು ಅನುಭವಗಳನ್ನು ಹೇಳಲು ಗಂಡುವಾಕ್ಯಗಳೇ ಬೇಕಾಗುತ್ತವೆ ಎಂದು ಹೇಳಿದಂತಾಯಿತು. ಪಾಶ್ಚಾತ್ಯ ಸಾಹಿತ್ಯದ ಬಹುಪಾಲು ಹೆಣ್ಣುಅನುಭವವನ್ನು ಗಂಡುಕಣ್ಣುಗಳಿಂದ ನೋಡಿದ್ದನ್ನು ಒಳಗೊಂಡಿದೆ. ಹಾಗಿದ್ದರೆ, ಈ ಸಾಹಿತ್ಯದ ವಾಕ್ಯಗಳು ಗಂಡೋ ಹೆಣ್ಣೋ? ಅಲ್ಲದೆ ರಚನೋತ್ತರವಾದಿಗಳ ನೆಲೆಯಿಂದ ನೋಡುವುದಾದರೆ, ಬರವಣಿಗೆಯಲ್ಲಿ ನಿಜಜೀವನದ ಅನುಭವವೇ ಇರುವುದೆಂಬ ತಿಳುವಳಿಕೆಯೇ ಪ್ರಶ್ನಾರ್ಹವಾದುದಾಗುತ್ತದೆ. ಅಂದರೆ, ಎಕ್ರಿಚೂರ್ ಫೆಮಿನೈನ್ ನ ಪರಿಚಯವಿರುವ ಯಾವ ಗಂಡಸಾದರೂ ಹೆಣ್ಣುಬರಹ ಸೃಷ್ಟಿಸಬಲ್ಲ, ಹಾಗೆಯೇ ಹೆಂಗಸು ಗಂಡುವಾಕ್ಯಗಳನ್ನು ಬರೆಯಬಲ್ಲಳು.

ನಾನು ಸ್ಬ್ರಾಥ್‌ಕ್ಲೆಡ್ ವಿಶ್ವವಿದ್ಯಾಲಯ ದ ವಿದ್ಯಾರ್ಥಿ ಸಮೂಹವೊಂದಕ್ಕೆ ಒಂದು ಪ್ರಶ್ನೆ ಮುಂದಿಟ್ಟೆ. ‘ನಿಮ್ಮ ದೃಷ್ಟಿಯಲ್ಲಿ ಗಂಡುವಾಕ್ಯ ಮತ್ತು ಹೆಣ್ಣುವಾಕ್ಯ ಎಂದರೆ ಏನು? ಅವುಗಳಿಗೆ ತಕ್ಕ ಉದಾಹರಣೆ ನೀಡಿ ಎಂದೆ. ಅವರು ಸಿದ್ದಮಾದರಿಗಳ ದೃಷ್ಟಿಯಿಂದ ಭಿನ್ನವೆನಿಸುವ ಹಲವು ವಾಕ್ಯಗಳನ್ನು ನನ್ನ ಮುಂದಿಟ್ಟರು.

೧. I came, I saw, I conquered—ಇದು ಗಂಡುವಾಕ್ಯ.

Shelie felt as if her whole being was conquered by this man whom she hardly knew— ಇದು ಹೆಣ್ಣುವಾಕ್ಯ.

೨.  I am hungry and I want something to eat —-ಇದು ಗಂಡುವಾಕ್ಯ.

I wonder if there is something to eat —-ಇದು ಹೆಣ್ಣುವಾಕ್ಯ.

ಈ ವಾಕ್ಯಗಳನ್ನು ಅವುಗಳಲ್ಲಿರುವ ವಸ್ತುವಿನ್ಯಾಸಕ್ಕನುಗುಣವಾಗಿ ಗಂಡು ಇಲ್ಲವೇ ಹೆಣ್ಣು ಎಂದು ವರ್ಗೀಕರಿಸಲು ಸಾಧ್ಯವಿದ್ದೀತು. ಅದಕ್ಕಿಂತ ಹೆಚ್ಚಾಗಿ ಅವುಗಳ ಭಾಷಿಕ ಲಕ್ಷಣಗಳನ್ನು ಗಮನಿಸಿದರೂ ಇಂಥ ವರ್ಗೀಕರಣ ಸಾಧ್ಯವೆಂದು ತೋರುತ್ತದೆ. ಮೊದಲನೆಯ ಉದಾಹರಣೆಯನ್ನು ನೋಡೋಣ. ಗಂಡುವಾಕ್ಯ ಎಂದು ಗುರುತಿಸಲಾದ ವಾಕ್ಯದಲ್ಲಿ ರಭಸದ ಜೊತೆಗೆ ವಾಕ್ಯವೇ ತುಂಬಾ ಚಿಕ್ಕದಾಗಿದೆ.(ಇದಕ್ಕೆ ಸಂಧರ್ಭವೂ ಕಾರಣವಿದ್ದೀತು)ಹೆಣ್ಣುವಾಕ್ಯ ಹೆಚ್ಚು ಸಂಕೀರ್ಣವಾಗಿದೆ. ಅದರ ಪದಗುಚ್ಛಗಳನ್ನು ಜೋಡಿಸಿರುವ ಕ್ರಮದಲ್ಲಿ ಈ ಸಂಕೀರ್ಣತೆ ಗೋಚರಿಸುತ್ತದೆ. ಆದರೆ, ಈ ವಾಕ್ಯದಲ್ಲಿರುವ ಭಾವನೆ ಮತ್ತು ದಿಗ್ಬ್ರಮೆಗಳನ್ನು ಮಾತ್ರ ಗಮನಿಸಿ ಇದನ್ನೊಂದು ಹೆಣ್ಣುವಾಕ್ಯವೆಂದು ಹೇಳಲಾಗುತ್ತಿದೆ. ಎರಡನೆಯ ಉದಾಹರಣೆಯಲ್ಲಿರುವ ವಾಕ್ಯಗಳನ್ನು ವಸ್ತುವಿನ್ಯಾಸದ ದೃಷ್ಟಿಯಿಂದ ವರ್ಗೀಕರಿಸಲು ಆಗುವುದಿಲ್ಲ. ಬದಲಿಗೆ, ಹೇಳುವ ಕ್ರಮದಲ್ಲಿ ಇರುವ ವ್ಯತ್ಯಾಸವನ್ನು ಗಮನಿಸಿಯೇ ವರ್ಗೀಕರಿಸಬೇಕಾಗುತ್ತದೆ. ಆದ್ದರಿಂದ ವಸ್ತು ವಿನ್ಯಾಸವನ್ನಷ್ಟೇ ಗಮನಿಸಿದರೆ ಸಾಕು, ವಾಕ್ಯಗಳು ಗಂಡೋ ಹೆಣ್ಣೋ ಎಂಬುದು ಗೊತ್ತಾಗುತ್ತದೆ ಎಂದು ಹಲವರು ತಿಳಿಯುತ್ತಾರೆ. ಆದರೆ ಉಳಿದ ಇನ್ನೆಷ್ಟೋ ಸಂಗತಿಗಳನ್ನು ಮರೆತು,ಇಲ್ಲವೇ ಕೈ ಬಿಟ್ಟು ಹೀಗೆ ವರ್ಗೀಕರಿಸುವುದು ತಪ್ಪಾಗುತ್ತದೆ.

ಇನ್ನೂ ಕೆಲವು ಸ್ತ್ರೀವಾದಿ ಚಿಂತಕರು ರೂಪಕಗಳ ಬಳಕೆಯನ್ನು ಗಮನಿಸಿ ಬರಹದ ಗಂಡುತನ , ಇಲ್ಲವೇ ಹೆಣ್ಣುತನಗಳನ್ನು ಗುರುತಿಸಲು ಸಾಧ್ಯ ಎನ್ನುತ್ತಾರೆ. ಉದಾಹರಣೆಗೆ, ಎಲೆನ್ ಮೋರ್ಸ್ ಹೆಂಗಸರು ಹೆಣ್ಣು ಪಾತ್ರಗಳನ್ನು ಬಣ್ಣಿಸುವಾಗ ಪಕ್ಷಿರೂಪಕಗಳನ್ನು ಬಳಸುತ್ತಾರೆ ಎಂದು ಹೇಳುತ್ತಾಳೆ. ನಿದರ್ಶನವಾಗಿ ಕ್ರಿಸ್ಟೀನಾ ರೊಸೆಟ್ಟಿಯ ಕವಿತೆಯಿಂದ ಒಂದು ಸಾಲನ್ನು ಉಲ್ಲೇಖಿಸಿದ್ದಾಳೆ. ‘‘My heart is like a singing bird / whose nest is a watered shoot’’. ಇದಲ್ಲದೆ, ಮುಂದಿನ ವಾಕ್ಯವನ್ನು ಉದಹರಿಸಿದ್ದಾಳೆ – ‘‘Me, poor dove that must not coo eagle that must not soar’’.  ಮೋರ್ಸ್ ತನ್ನ ವ್ಯಾಖ್ಯಾನವನ್ನು ಮುಂದುವರೆಸುತ್ತಾ’’ ಹಕ್ಕಿಗಳು ಪುಟ್ಟದಾಗಿರುವುದನ್ನು ಸೂಚಿಸಲು ಬಳಸುವ ರೂಪಕಗಳೇ?  ಅಥವಾ ಚಿಕ್ಕಹುಡುಗಿಯರನ್ನು ಹುಡುಗರು ಹಿಂಸಿಸುವಂತೆ ಹಕ್ಕಿಗಳನ್ನು ಜನರು ಹಿಂಸಿಸುವುದರಿಂದ ಅವುಗಳು ಹೀಗೆ ರೂಪಕಗಳಾದವೇ? ಅಥವಾ ನೋವುಂಡ ಹಕ್ಕಿಗಳನ್ನು ನೋವುಣ್ಣುವ ಹುಡುಗಿಯರು ಸಾಕಿ ಸಲಹುತ್ತಾರೆಂದೇ?  ಅಥವಾ ಕೈ ಗೆಟುಕಿಯೂ ದೊರಕದ ಸಿಕ್ಕಿಯೂ ಸಿಗದಂತಹ ಕಟ್ಟು ಪಾಡುಗಳಿಗೆ ಒಳಗಾದ ಐಂದ್ರಿಯಿಕ ಅನುಭವಗಳಂತೆ ಹಕ್ಕಿಗಳೂ ಕೂಡ ಕೈಗೆಟುಕದ ಸುಂದರ ಜಗತ್ತಿನ ಅತಿಥಿಗಳೇ?  ಅಥವಾ ಹಕ್ಕಿಗಳು ಮೃದುವಾಗಿ, ದುಂಡಾಗಿ, ಬೆಚ್ಚಗಿರುವುದು. ಕೈಯಲ್ಲಿ ಹಿಡಿದಾಗ ಮಿಡಿದು ಪಟಪಟ ರೆಕ್ಕೆ ಬಡಿಯುವುದು, ಇಲ್ಲವೇ ಅವು ಸೊಗಸಾಗಿ ಹಾಡುವುದು – ಇವೆಲ್ಲವೂ ಅವುಗಳನ್ನು ಹೆಂಗಸರ ರೂಪಕಗಳನ್ನಾಗಿ ಮಾಡಲು ಕಾರಣವೇ?’’ ಎಂದು ಕೇಳುತ್ತಾಳೆ.  ಈ ವಾಖ್ಯೆಯು ಹಕ್ಕಿಗಳನ್ನು ಹೆಂಗಸರಿಗೆ ರೂಪಕಗಳನ್ನಾಗಿ ಬಳಸುವುದಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಟು, ಹೆಂಗಸಿನ ಬಗೆಗೆ ಕೆಲವು ಇಕ್ಕಟ್ಟಿನ ತೀರ್ಮಾನಗಳನ್ನು ಮಂಡಿಸಿ ಬಿಡುತ್ತವೆ. ಈ ವ್ಯಾಖ್ಯಾನದ ಹಿನ್ನೆಲೆಯಲ್ಲಿ ನೋಡಿದರೆ ಹೆಂಗಸರು ದುರ್ಬಲರು, ಬಲಿಪಶುಗಳು, ಮತ್ತು ಇಂದ್ರಿಯಾನುಭವಕ್ಕಾಗಿ ಹಾತೊರೆಯುವವರು ಎಂದು ಹೇಳಬೇಕಾಗುತ್ತದೆ. ಮೋರ್ಸ್ ಇನ್ನೂ ಮುಂದುವರೆದು ಹೇಳುವ ಮಾತನ್ನು ನೋಡೋಣ ‘‘ಮೇರಿ ವೂಲ್ಸ್‌ಟನ್ ಕ್ರಾಫ್ಟ್‌ಳ ಮರಿಯಾದಿಂದ ಹಿಡಿದು ಬ್ರಾಂಟೆಯ ಜೇನ್ ಐರ್, ಅಷ್ಟೇಕೆ, ಆನ್ ಫ್ರಾಂಕ್‌ಳ ‘ಡೈರಿ ಆಫ್ ಎ ಯಂಗ್ ಗರ್ಲ್’ವರಗೆ ನೋಡಿದರೆ ನಮಗೆ ಕಾಣುವುದು ಪಂಜರದ ಪಕ್ಷಿಗಳ ರೂಪಕಗಳೇ. ಇದು ಹೆಂಗಸಿನ ನಿಜಸ್ಥಿತಿಯ ಬಿಂಬಗಳೇ ತಾನೇ?’’. ಹಾರ್ನರ್ ಮತ್ತು ಜ್ಲೋಸಿಕ್ ಅವರು ಇಂಥದೇ ವಾದವನ್ನು ಮುಂದಿಡುತ್ತಾರೆ. ಹೆಂಗಸರ ಬರವಣಿಗೆಯಲ್ಲಿ ಒಂದು ನಿರ್ದಿಷ್ಟ ಮಾದರಿಯ ರೂಪಕಗಳೇ ಅಧಿಕ ಪ್ರಮಾಣದಲ್ಲಿ ಇರುತ್ತವೆಂದು ವಾದಿಸುತ್ತಾಳೆ ‘‘ಹತ್ತೊಂಬತ್ತನೇ ಶತಮಾನದ ಕೊನೆಯಭಾಗ ಮತ್ತು ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಬರೆದ ಬರೆಹಗಾರ್ತಿಯರ ಕಾದಂಬರಿಗಳಲ್ಲಿ ಒಂದೇ ಬಗೆಯ ರೂಪಕಗಳು ಇರುವುದನ್ನು ಕಾಣುತ್ತೇವೆ. ಇವು ಎಂಥ ರೂಪಕಗಳು?  ಕೋಣೆ, ಮನೆ, ಭೂಮಿ ಮತ್ತು ಸಮುದ್ರ – ಈ ನಾಲ್ಕನ್ನು ಹೆಣೆದುಕೊಳ್ಳುವ ರೂಪಕ ವಿನ್ಯಾಸವನ್ನು ಕಂಡಾಗ ಈ ವಿವರಗಳು ಕೇವಲ ಕಾದಂಬರಿಗಳ ವಸ್ತು ಜಗತ್ತಿಗೆ ಮಾತ್ರ ಸೇರಿದ್ದಲ್ಲ ಎನ್ನುವುದನ್ನು ಗುರುತಿಸುತ್ತೇವೆ’’(೧೯೯೦) ಈ ಬರೆಹಗಾರ್ತಿಯರು ಮುಚ್ಚಿದ ಕೋಣೆ ಮತ್ತು ತೆರೆದ ಬಯಲುಗಳ ಸಂಬಂಧವನ್ನು ಶೋಧಿಸುವ ರೂಪಕಗಳನ್ನು ತಮ್ಮ ಕೃತಿಗಳಲ್ಲಿ ಹುಟ್ಟುಹಾಕಿದ್ದಾರೆ ಎಂದು ಈ ವಿಮರ್ಶಕರು ಹೇಳುತ್ತಾರೆ. ಒಂದು ಕಾಲದ ಕೆಲವು ಬರೆಹಗಾರ್ತಿಯರ ಬರವಣಿಗೆಯ ಕೆಲವು ಲಕ್ಷಣಗಳನ್ನು ಎಲ್ಲಾ ಬರೆಹಗಾರ್ತಿಯರ ಬರೆಹಗಳಿಗೆ ಹೊಂದಿಸಲು ಹೊರಟರೆ ಸಮಸ್ಯೆಗಳು ಉಂಟಾಗುತ್ತವೆ.

ಹೆಂಗಸರ ಬರವಣಿಗೆಗಳನ್ನು ವಿಷಯ ವಿಶ್ಲೇಷಣೆಗೆ ಮಾತ್ರ ಗುರಿಪಡಿಸುವುದರ ಬದಲು ಬೇರೆಯ ಸಾಧ್ಯತೆಗಳನ್ನು ಹುಡಕಬೇಕೆಂದು ಕ್ಯಾಮರಾನ್ ಮುಂತಾದ ಚಿಂತಕಿಯರು ಹೇಳುತ್ತಾರೆ. ನಾವು ದಿನವೂ ಓದುವ ನೂರಾರು ವಾಕ್ಯಗಳು ಗಂಡಸರು ಓದುತ್ತಿದ್ದಾರೆಂದು ತಿಳಿದು ಬರೆದಿರುವಂಥವು. ಹಾಗಾಗಿ ಇಂಥ ವಾಕ್ಯಗಳನ್ನು ಗಂಡುವಾಕ್ಯದ ಮಾದರಿಗಳೆಂದು ತಿಳಿಯಬಹುದು. ಒಂದು ಉದಾಹರಣೆಯನ್ನು ನೋಡೋಣ‘‘The lack of vitality is aggrevated by the fact that there are so few able bodied young adults about. They have all gone off to work or look forword, leaving behind . the old, the disabled, the women and the childern’’. ಈ ವಾಕ್ಯದಲ್ಲಿ ಹೆಂಗಸರನ್ನು ಸಾಮಾನ್ಯ ನಾಗರಿಕರ ವ್ಯಾಖ್ಯೆಯಿಂದ ಹೊರಗಿಡಲಾಗಿದೆ.‘Young adults’ ಎಂಬ ಸಮೂಹಸೂಚಕ ನಾಮಪದವು ಕೇವಲ ಗಂಡಸರನ್ನು ಒಳಗೊಂಡಿದೆಯೇ ಹೊರತು ಹೆಂಗಸರನ್ನಲ್ಲ. ಇದನ್ನು ಓದಿದ ಹೆಂಗಸರಿಗೆ ತಮ್ಮನ್ನು ಹೀಗೆ ಹೊರಗಿರಿಸಿರುವುದರ ಅರಿವಾಗಲೂ ಬಹುದು. ಈ ವಾಕ್ಯವು ‘adult’ಪದವನ್ನು ‘ಗಂಡಸು’ಎಂಬುದಕ್ಕೆ ಸಮಾನವಾಗಿ ಬಳಸಿ ಅದು ಒಳಗೊಳ್ಳುವ ಜಗತ್ತಿನಿಂದ ಹೆಂಗಸನ್ನು ಹೊರತಳ್ಳಿದೆ. ಇಂಥ ಪಠ್ಯಗಳು ತಮಗೇ ತಿಳಿಯದಂತೆ ಗಂಡು ಹೆಣ್ಣುಗಳನ್ನು ಅಸಮಾನ ನೆಲೆಗಳಲ್ಲಿ ಇರಿಸುತ್ತವೆ. ಅರಿವು ಜಾಗ್ರತಗೊಂಡ ಓದುಗಳಿಗೆ ತನ್ನನ್ನು ಹೊರಗಿರಿಸಿರುವುದು ಗೊತ್ತಾಗುತ್ತದೆ.

ಕೊನೆಗೆ, ಈ ಎಲ್ಲ ಅಂಶಗಳ ಜೊತೆಗೆ ಗಮನಿಸಬೇಕಾದ ಸಂಗತಿಯೊಂದಿದೆ. ಜಂಡರ್‌ಯುಕ್ತ ವಾಕ್ಯಗಳು ನಮಗೆ ಅರ್ಥವನ್ನು ಪ್ರತೀತಿಗೊಳಿಸುವಾಗ, ಅವು ಯಾರಿಂದ ರಚಿತವಾದವು ಎಂಬ ಅಂಶ ಮುಖ್ಯವಾಗುತ್ತದೆ. ಗಂಡಸರು ಬರೆದ ವಾಕ್ಯಗಳ ಅರ್ಥ, ಹೆಂಗಸರು ಬರೆದ ವಾಕ್ಯಗಳ ಅರ್ಥಕ್ಕಿಂತ ಬೇರೆಯಾಗಿರುತ್ತದೆ . ಗಂಡುವಾಕ್ಯಗಳಲ್ಲಿ ಅರ್ಥ ಸರಳ. ಅಲ್ಲಿ ಭಾಷೆ ಪಾರದರ್ಶಕ ಮಾಧ್ಯಮ.ಅದು ತನ್ನ ಕಡೆಗೆ ಓದುಗರ ಗಮನವನ್ನು ಸೆಳೆದುಕೊಳ್ಳುವುದು. ಉದ್ದೇಶಿತ ಅರ್ಥವನ್ನು ತಲುಪಿಸುವುದಷ್ಟೇ ಮಾಧ್ಯಮದ ಗುರಿ. ಹೀಗೆ ಉದ್ದೇಶಿತವಾದ ಅರ್ಥವು ಬುದ್ದಿಪ್ರಧಾನವಾಗಿ, ಅಧಿಕಾರಯುತವಾಗಿ ಹಾಗೂ ಸ್ಪಷ್ಟವಾಗಿ ಇರುತ್ತದೆ.  ಈ ವಾಕ್ಯಗಳ ಅರ್ಥಕ್ಕೆ ನೀಡಲಾದ ಲಕ್ಷಣಗಳು ವಾಸ್ತವವಾಗಿ ಗಂಡುವ್ಯಕ್ತಿತ್ವಕ್ಕೆ ನೀಡಿರುವಂಥವೇ. ಹೆಣ್ಣುವಾಕ್ಯಗಳಲ್ಲಿ ಭಾಷೆ, ಪಾರದರ್ಶಕವಾಗಿರುವುದಿಲ್ಲ.ಅವುಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ.

ಈ ನಿಲುವುಗಳನ್ನು ಪ್ರಶ್ನಿಸಬೇಕಾದರೆ, ಇಂತಹ ತಾತ್ತ್ವಿಕ ನೆಲೆಗಳನ್ನು ಮಂಡಿಸಿದವರು ಗಂಡುವಾಕ್ಯ ಮತ್ತು ಹೆಣ್ಣುವಾಕ್ಯ ಎಂದು ಗುರುತಿಸುವ ಮಾದರಿಗಳನ್ನು ನಾವು ಮತ್ತೊಮ್ಮೆ ವಿಶ್ಲೇಷಿಸಬೇಕಾಗುತ್ತದೆ.ಕೆಳಗಿನ ಎರಡು ವಾಕ್ಯವೇಷ್ಟನಗಳನ್ನು ಗಂಡು ವಾಕ್ಯಗಳಿಗೆ ಮಾದರಿ ಎಂದು ಉದಾಹರಿಸಲಾಗಿದೆ.

1. This incident which might be said  to have added to his undoing, did not arise out off Mr.Stone‘s passion for garden. Gardening as he practiced it was no more than a means, well suited to his age, which was ೬೨, of exhausting the spare time and energy with which his undemanding duties in one of the departments of the excel company his status as a bachelor and his still excellent physique amply provided him.

2. I went to the cloak room and put on my overcoat and cap. I could never bring myself to sport trilby or a bowler ;the cap provided some protection , even though it signally failed to cover the ear. I could not descend to the Arthur Woolly beret level. I set off down the stairs. I always used the lift  to comeup, the stairs to come down. The lift carried the hazardes of social life. It was a conecession to old age that I no longer walked up.

ಮೇಲೆ ಹೇಳಿದ ಚೌಕಟ್ಟುಗಳನ್ನು ಅನುಸರಿಸಿ ಈ ಎರಡೂ ವಾಕ್ಯವೇಷ್ಟನಗಳನ್ನು ಗಂಡುವಾಕ್ಯಗಳ ಮಾದರಿ ಎಂದು ಗುರುತಿಸಲಾಗಿದೆ. ಎರಡೂ ಪಠ್ಯಗಳಲ್ಲಿ ಅಧೀನ ವಾಕ್ಯಗಳು ಇಡಿಕಿರಿದಿವೆ. ಇವೆಲ್ಲ ಸಂರ್ಕೀರ್ಣವಾಕ್ಯಗಳು ಬುದ್ದಿಪ್ರಧಾನವಾದವು. ಹೇಳ ಬೇಕಾದ್ದನ್ನು ನೇರವಾಗಿ ಹೇಳಲು ಬಯಸುವಂಥವು. ಎರಡೂ ಪಠ್ಯಗಳ ನಿರೂಪಕರು ಗಂಡಸರು. ಈ ಸಂಗತಿಗಳಿಂದಾಗಿ, ಈ ಪಠ್ಯಗಳನ್ನು ಬರೆದವರು ಗಂಡಸರೆಂದು ನಾವು ತೀರ್ಮಾನಿಸಿ ಬಿಡುತ್ತೇವೆ. ಆದರೆ, ಮೊದಲ ಪಠ್ಯದ ಕರ್ತೃ ವಿ. ಎಸ್. ನೈಪಾಲ್. ಎರಡನೇ ಪಠ್ಯದ ಕರ್ತೃ ಐರಿಸ್ ಮುರ್ಡೋಕ್.

ಈಗ ಹೆಣ್ಣುವಾಕ್ಯಗಳ ಮಾದರಿಗಳನ್ನು ನೋಡೋಣ.

3. O! tell me about

Anne Livia! I want to hear all about Anne Livia. Well, you know Anne Livia? Yes,  ofcourse, we all know Anne Livia. Tell me all. Tell me now. You will die when you hear. Well, you know when the old ched went futt and did what he knows. Yes I know, go on. Wash, quit and don’t be dabbling. Tuck up your sleeves and loosen your talk tales and don’t butt me – hike– ! When you bend or whatever it was threed to make out when he chried in the fiendish park.

4. She is giving birth with the strength of a lioness of a plant of a cosmogony of a woman…. a desire for text ! Confusion ! What possesses her? A child ! Paper ! Intoxication ! My breasts overflow ! Milk. Ink – The moment of sulking and I ? I am too hungry. The taste of milk of ink.

ಎರಡೂ ಪಠ್ಯಗಳಲ್ಲಿ ಹೆಣ್ಣುವಾಕ್ಯಗಳಿವೆ ಎನ್ನಲಾಗಿದೆ. ಎರಡರಲ್ಲೂ ಅಧೀನ ವಾಕ್ಯಗಳಿಲ್ಲ.  ವಾಕ್ಯಾಂಗಗಳನ್ನು ಬಿಡಿಬಿಡಿಯಾಗಿ ಇರಿಸಲಾಗಿದೆ. ಎಷ್ಟೋ ವಾಕ್ಯಾಂಗಗಳು ಅಪೂರ್ಣವಾಗಿವೆ. ಈ ಪಠ್ಯಗಳನ್ನು ಬುದ್ದಿಪ್ರಧಾನವೆಂದೂ, ಅಧಿಕಾರದ ನೆಲೆಯಿಂದ ಹುಟ್ಟಿದವೆಂದೂ ಹೇಳಲಾಗದು. (ಎರಡೂ ಪಠ್ಯಗಳಲ್ಲಿ ಯಾವುದೇ ಒಂದು ದನಿ ಮುಂಚೂಣಿಯಲ್ಲಿ ಇದ್ದಂತಿಲ್ಲ) ಎರಡೂ ಪಠ್ಯಗಳು ಹೆಂಗಸರ ಅನುಭವಗಳನ್ನು ಹೇಳುತ್ತಿವೆ. ಎರಡೂ ಪಠ್ಯಗಳ ಭಾಷೆ ತನ್ನೆಡೆಗೆ ಓದುಗರ ಗಮನವನ್ನು ಸೆಳೆಯುತ್ತವೆ. ಅಲ್ಲದೆ, ಇವುಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ. ಹೀಗಿದ್ದರೂ ಮೂರನೆಯ ವಾಕ್ಯವಷ್ಟನ್ನೇ ಬರೆದದ್ದು ಜೇಮ್ಸ್ ಜಾಯ್ಸ್. ನಾಲ್ಕನೆಯ ಪಠ್ಯವನ್ನು ಬರೆದವಳು ಹೆಲೆನ್ ಸೀಕ್ಸೂ. ಆದ್ದರಿಂದ ಈ ಯಾವುದೇ ವ್ಯಾಖ್ಯಾನದ ಬೆನ್ನು ಹತ್ತಿದರೂ ವಾಕ್ಯಗಳನ್ನು ಗಂಡು ಹೆಣ್ಣು ಎಂದು ವರ್ಗೀಕರಿಸಲು ನೆರವು ಸಿಗುತ್ತಿಲ್ಲ. ಬಹುಮಟ್ಟಿಗೆ ಪ್ರಯೋಗಶೀಲ ಬರಹಗಳನ್ನೇ ಹೆಣ್ಣು ಬರವಣಿಗೆಗಳೆಂದು ಗುರುತಿಸುತ್ತಿರುವಂತಿದೆ.

ಜಂಡರ್‌ಯುಕ್ತ ವಾಕ್ಯಗಳ ಸವಾಲುಗಳು

ಇಷ್ಟೆಲ್ಲ ಚರ್ಚೆಯಾದರೂ ಯಾವ ತೀರ್ಮಾನಕ್ಕೂ ಬರಲಾರದೆ ಹೋಗಿದ್ದೇವೆ. ಇದರಿಂದ ಹೊರಬರಲು ಮೋನಿಕ್ ವಿಟಿಗ್‌ಳ ಮಾತುಗಳನ್ನು ಗಮನಿಸೋಣ. ಇತರ ಫ್ರೆಂಚ್ ಸ್ತ್ರೀವಾದಿಗಳಿಗಿಂತ ಈಕೆಯ ನಿಲುವುಗಳು ಬೇರೆಯೇ ಆಗಿವೆ. ಮುಖ್ಯ ವ್ಯತ್ಯಾಸವೆಂದರೆ, ಈಕೆ ಗಂಡು ಮತ್ತು ಹೆಣ್ಣು ವಾಕ್ಯಗಳ ನಡುವೆ ಇದೆಯೆನ್ನಲಾದ ಭಿನ್ನತೆಯನ್ನು ವಿರಚನೆ ಮಾಡಲು ಮುಂದಾಗುತ್ತಾಳೆ. ‘ಮೊದಲಿಗೆ, ಒಂದು ಸಂಗತಿಯನ್ನು ಒಪ್ಪಿಕೊಳ್ಳೋಣ. ಹೆಣ್ಣು ಬರವಣಿಗೆ ಎಂಬುದು ಇಲ್ಲ. ಇಂಥದೊಂದು ಬರವಣಿಗೆ ಮಾದರಿ ಇದೆಯೆಂದು ಹೇಳುವವರು ತಪ್ಪು ಮಾಡುತ್ತಾರೆ. ಹೆಣ್ಣು ಬರವಣಿಗೆಯಲ್ಲಿ ಇರುವ ‘ಹೆಣ್ಣುತನ’ ಯಾವುದು? ಅದು ಹೆಂಗಸನ್ನು ಪ್ರತಿನಿಧಿಸುವುದಾದರೆ, ಈವರೆಗೆ ರೂಢಿಯಲ್ಲಿರುವ ‘ಹೆಂಗಸು’ ಎಂಬ ಮಿಥ್ಯಾಕಲ್ಪನೆಯನ್ನೇ ಮತ್ತೆ ಸಮರ್ಥಿಸಿದಂತಾಯ್ತು. ‘ಹೆಂಗಸು’ ಎಂಬುದೇ ಒಂದು ಊಹಾರಚನೆ. ಅದಕ್ಕೆ ವಾಸ್ತವದ ನೆಲೆಯ ತಳಹದಿ ಇಲ್ಲ. ಹಾಗಾಗಿ, ಬರವಣಿಗೆಗೂ ಹೆಂಗಸಿಗೂ ನಂಟು ಕಲ್ಪಿಸಲು ಬರುವುದಿಲ್ಲ. ಯುದ್ಧ ಮುಗಿದ ರಣರಂಗದಲ್ಲಿ ಹರಿದು ಬಿದ್ದಿರುವ ಬಾವುಟವನ್ನು ಎತ್ತಿ ಹಿಡಿದು ಪಂಥಾಹ್ವಾನ ಮಾಡಿದಂತಿದೆ (೧೯೮೩) ಹೀಗಾಗಿ, ಹೆಣ್ಣು ಎಂಬ ಏಕಶಿಲಾಕೃತಿಯ ಮಿಥ್ಯಾ ಕಲ್ಪನೆಯನ್ನೇ ಕೈ ಬಿಡಬೇಕೆಂಬುದು ವಿಟಿಗ್‌ಳ ನಿಲುವಾಗಿದೆ.  ಮುಂದುವರೆದು ಆಕೆ ‘‘ ‘ಹೆಂಗಸು’ ತನ್ನ ಅಸಮತೆಯ ಪರಿಸ್ಥಿತಿಯಿಂದ ಹೊರಬರಲು ಒತ್ತಾಯಪೂರ್ವಕವಾಗಿ ಇಂಥ ‘ಹೆಣ್ಣು ಬರವಣಿಗೆ’ ಎಂಬ ರೂಪಕವನ್ನು ಸೃಷ್ಟಿಸಲಾಗಿದೆ. ಈ ಮೂಲಕ ‘ಹೆಣ್ಣುತನ’ ಎಂಬುದರ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಯೋಜಿಸಲಾಗಿದೆ’’ (೧೯೮೩) ಎನ್ನುತ್ತಾಳೆ. ಹೆಣ್ಣುತನ ಎಂಬ ರೂಪಕವನ್ನು ಬಳಸಿ ಗಂಡು ಬರವಣಿಗೆಯಂತೆ ಹೆಣ್ಣು ಬರವಣಿಗೆಯೂ ಒಂದು ಉತ್ಪಾದನಾ ಪ್ರಕ್ರಿಯೆಯಾಗಿರುತ್ತದೆಂಬ ಅಂಶವನ್ನು ಮರೆಮಾಚಲಾಗುತ್ತಿದೆ ಎಂದು ವಿಟಿಗ್ ಹೇಳುತ್ತಾಳೆ. ಎಕ್ರಿಚೂರ್ ಫೆಮಿನೈನ್ ಎನ್ನುವುದು ಒಂದು ಜೈವಿಕ ಪ್ರಕ್ರಿಯೆಯನ್ನು ಸೂಚಿಸುವಂತಿದೆ ಎನ್ನುವ ವಿಟಿಗ್ ಅದನ್ನು ‘ಸ್ರವಿಸುವಿಕೆಗೆ’ ಸಂವಾದಿಯಾಗಿ ಗುರುತಿಸುತ್ತಾಳೆ.

ಆದ್ದರಿಂದ, ಗಂಡುತನ/ಗಂಡು, ಅಥವಾ ಹೆಣ್ಣುತನ/ಹೆಣ್ಣು ಎಂದು ಯಾವುದಾದರೂ ಒಂದು ಸಂಗತಿಯನ್ನು ಗುರುತಿಸಿ ಹೆಸರಿಸುವುದಕ್ಕೂ ಜೈವಿಕವಾಗಿ ಇರುವ ಲಿಂಗವ್ಯತ್ಯಾಸಗಳಿಗೂ ನೇರ ಸಂಬಂಧವಿಲ್ಲ. ಆದರೆ ಹಾಗೆ ಗುರುತಿಸಿದ ಸಂಗತಿಗಳಿಗೂ, ಅಧಿಕಾರ ಸಂಬಂಧಗಳಿಗೂ ನಂಟು ಇದೆ. ಹೆಣ್ಣುವಾಕ್ಯಗಳನ್ನು ನಾವು ಗುರುತಿಸುವಾಗ ಹೆಣ್ಣನ್ನು ವ್ಯಾಖ್ಯಾನಿಸುತ್ತಿದ್ದೇವೆಯೇ ಹೊರತು ವಾಕ್ಯವನ್ನಲ್ಲ. ಇದೊಂದು ತಾತ್ತ್ವಿಕ ನೆಲೆಯ ವ್ಯಾಪಾರವಾಗಿದೆ. ಆದರೆ, ಗಂಡನ್ನು ಮಾತ್ರ ಹೀಗೆ ವ್ಯಾಖ್ಯಾನಿಸಲು ಮುಂದಾಗುವುದಿಲ್ಲ. ‘‘ಎಲ್ಲಿಯವರೆಗೆ, ಸಾಮಾಜಿಕ ಅಸಮಾನತೆಗಳು ಮುಂದುವರೆ ಯುತ್ತವೋ ಹಾಗೂ ಆ ಮುಂದುವರಿಕೆಗೆ ಸಿದ್ಧಮಾದರಿಗಳು ಬೆಂಬಲ ನೀಡುತ್ತವೋ ಅಲ್ಲಿಯವರೆಗೆ ಸಿದ್ಧಮಾದರಿಗಳು, ಅವು ಎಷ್ಟೇ ಹುಸಿಯಾಗಿದ್ದರೂ, ಚಾಲ್ತಿಯಲ್ಲಿ ಉಳಿದೇ ತೀರುತ್ತವೆ.’’ (ಕ್ಯಾಮರಾನ್ – ೧೯೮೫) ಹೆಣ್ಣು ವಾಕ್ಯಗಳಲ್ಲಿ ಬುದ್ದಿಪ್ರಧಾನತೆ, ಆಂತರಿಕ ಹೊಂದಾಣಿಕೆ, ದಿಟ್ಟತನ – ಮುಂತಾದವುಗಳು ಇರುವುದಿಲ್ಲ ಎಂದು ಹೇಳುವ ಮೂಲಕ ನಿಜ  ಜಗತ್ತಿನಲ್ಲಿ ಹೆಂಗಸಿನ ಸ್ಥಾನವನ್ನು ಗುರುತಿಸುತ್ತಿರುತ್ತೇವೆ.

ಒಟ್ಟಾರೆ, ಈ ಎಲ್ಲ ವಿವಾದಗಳನ್ನು ಸಂಗ್ರಹಿಸಿ ಹೇಳುವುದಾದರೆ ವಾಕ್ಯಗಳನ್ನು ಗಂಡು, ಹೆಣ್ಣು ಎಂದು ವರ್ಗೀಕರಿಸುವ ಬಗೆಯನ್ನು ನಾನು ಮೂರು ನೆಲೆಗಳಲ್ಲಿ ಪ್ರಶ್ನಿಸಲು ಬಯಸುತ್ತೇನೆ. (೧)  ಸ್ತ್ರೀವಾದಿಗಳು ಮತ್ತು ಸ್ತ್ರೀವಾದ ವಿರೋಧಿಗಳು ವಾಕ್ಯಗಳಿಗೆ ಗಂಡು, ಹೆಣ್ಣು ಗುಣವನ್ನು ಅಂಟಿಸಲು ಹೊರಟು ಒಂದೇ ಬಗೆಯ ತಾತ್ತ್ವಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ. ಗಂಡುವಾಕ್ಯಗಳಲ್ಲಿ ಗಂಡಸರಲ್ಲಿ ಇರುವ ಎಲ್ಲ ಗುಣಗಳೂ ಇವೆಯಾದ್ದರಿಂದ, ಆ ವಾಕ್ಯಗಳೇ ಉತ್ತಮ ಎಂದು ಸ್ತ್ರೀವಾದ ವಿರೋಧಿಗಳು ಹೇಳಿದರೆ, ಇದೇ ತರ್ಕವನ್ನು ಮುಂದೊಡ್ಡಿ ಸ್ತ್ರೀವಾದಿಗಳು ಹೆಣ್ಣುವಾಕ್ಯಗಳನ್ನು ಎತ್ತಿಹಿಡಿಯುತ್ತಾರೆ.  ಇಬ್ಬರೂ ಸಾರವಾದಿಗಳೇ. ಸ್ತ್ರೀವಾದಿಗಳು ಇಂಥ ನೆಲೆಯನ್ನು ನಂಬಿ ಹೊರಟರೆ, ಅವರು ಯಾವ ಬದಲಾವಣೆಯನ್ನಾಗಲೀ, ಪರಿಣಾಮಕಾರಿ ರಾಜಕೀಯ ಕ್ರಿಯೆಯನ್ನಾಗಲೀ ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ.

೨.ವೂಲ್ಫ್ ಮತ್ತು ಇತರೆ ಹಲವು ಫ್ರೆಂಚ್ ಸ್ತ್ರೀವಾದಿಗಳು ಗಂಡುವಾಕ್ಯ ಮತ್ತು ಹೆಣ್ಣುವಾಕ್ಯಗಳ ನಡುವೆ ಸುಲಭವಾಗಿ ಗುರುತಿಸಬಹುದಾದ ಮಹತ್ವದ ಭಿನ್ನತೆಗಳಿರುತ್ತವೆ ಎಂದು ನಂಬುತ್ತಾರೆ. ಅವರು ಹೇಳುವಂತೆ ಗಂಡುವಾಕ್ಯಗಳು ಅಧಿಕಾರವನ್ನು ಸಮರ್ಥಿಸಿಕೊಳ್ಳಬಲ್ಲವು. ಅವು ಸ್ಪಷ್ಟವಾಗಿರುತ್ತವೆ. ಅಲ್ಲದೆ, ಈ ಗುಣಗಳನ್ನು ಹೊಂದಿರದ ವಾಕ್ಯಗಳಿಂದ ಬೇರೆಯಾಗಿ ಗುರುತಿಸುವುದು ಸುಲಭ ಎನ್ನುತ್ತಾರೆ. ನಾವು ಸಸೂರ್ ಪ್ರಣೀತ ಭಾಷಾ ವ್ಯಾಖ್ಯೆಯನ್ನು ಒಪ್ಪಿ ಭಾಷೆಯು ಒಂದು ಸಲಕರಣೆ ಎನ್ನುವ ನಿಲುವನ್ನು ಬಿಟ್ಟುಕೊಟ್ಟೆವಾದರೆ, ಆಗ ವಾಕ್ಯದಲ್ಲಿ ಬುದ್ದಿಪ್ರಧಾನತೆ, ಸ್ಪಷ್ಟತೆ ಮತ್ತು ಅಧಿಕಾರ ಸಮರ್ಥನೆ – ಇವೆಲ್ಲ ಇರುತ್ತವೆಂಬ ತಿಳಿವಳಿಕೆಯೇ ಹುಸಿಯಾಗುತ್ತದೆ. ನಾವು ಎಲ್ಲ ಗಂಡುವಾಕ್ಯಗಳೂ ಒಂದೇ ರೀತಿಯಲ್ಲಿ ಇರುತ್ತವೆಂದು ನಂಬಬೇಕೇನು? ಅಥವಾ ಬರೆಹಗಾರನೊಬ್ಬ ಅಧಿಕಾರ ಸಮರ್ಥನೆಗೆ ಮುಂದಾದ ಕೂಡಲೇ ಇನ್ನೂ ಎಷ್ಟೋ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾನೆ ಎಂದು ತಿಳಿಯಬೇಕಲ್ಲವೇ? ಬರೆಹಗಾರ ತನಗೆ ಗೊತ್ತಿಲ್ಲದಂತೆ ಬಡಿದೆಬ್ಬಿಸುವ ಇಂಥ ಪ್ರಶ್ನೆಗಳನ್ನು ಪಠ್ಯದ ‘ಅವ್ಯಕ್ತ’ ನೆಲೆ ಎಂದು ಮೆಖೆರೆ ಹೇಳಿದ್ದನ್ನು ನೆನಪು ಮಾಡಿಕೊಳ್ಳಬಹುದು (೧೯೭೮). ಭಾಷೆಯನ್ನು ಇನ್ನಷ್ಟು ಸಂಕೀರ್ಣ ನೆಲೆಯಿಂದ ನೋಡತೊಡಗಿದ ಕೂಡಲೇ ಗಂಡು, ಹೆಣ್ಣು ಬರವಣಿಗೆ ಎಂಬ ವರ್ಗೀಕರಣಕ್ಕೆ ಮುಂದಾಗುವುದು ಸಾಧ್ಯವೇ ಆಗದು. ಬರೆಹಗಾರರಿಗೆ ದೊರಕುವ ಅವಕಾಶದಲ್ಲಿ ಅವರು ಜಂಡರ್ ನೆಲೆಯ ಯಾವುದೇ ಚಹರೆಯನ್ನು ಬೇಕಾದರೂ ಅಳವಡಿಸಿಕೊಳ್ಳಬಹುದು.  ಆದ್ದರಿಂದ, ಹೆಣ್ಣುಬರೆಹಗಾರರು ತಾವು ಹೆಂಗಸರಾಗಿರು ವುದರಿಂದಲೇ ಯಾವುದೋ ಒಂದು ಗೊತ್ತಾದ ಬಗೆಯಲ್ಲಿ ಬರೆಯುತ್ತಾರೆ ಎಂದು ತಿಳಿಯುವುದಕ್ಕಿಂತ ತಮಗೆ ಲಭ್ಯವಿರುವ ಹಲವು ಸಾಧ್ಯತೆಗಳನ್ನು ಬಳಸಿಕೊಳ್ಳುತ್ತಾರೆ ಎನ್ನುವುದು ಹೆಚ್ಚು ಸರಿ. ಹೀಗೆ ಮಾಡುವಾಗ ತಾವು ಗಂಡು ಪರಂಪರೆ, ಇಲ್ಲವೇ ಹೆಣ್ಣು ಪರಂಪರೆಯಲ್ಲಿ ತಮ್ಮ ಸ್ಥಾನವನ್ನು ಹೇಗೆ ಗುರುತಿಸಿಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.

೩. ಮೂರನೆಯದಾಗಿ, ವಿಟಿಗ್‌ಳ ವಾದವನ್ನು ನೋಡೋಣ. ಆಕೆ, ಗಂಡು ಮತ್ತು ಹೆಣ್ಣುವಾಕ್ಯಗಳ ಭಿನ್ನತೆಯನ್ನು ದೂರೀಕರಿಸುವುದಿರಲಿ, ಗಂಡು ಮತ್ತು ಹೆಣ್ಣುಗಳ ನಡುವೆ ‘ಸಹಜವಾಗಿ’ ಇದೆ ಎಂದು ತಿಳಿಯಲಾದ ಭಿನ್ನತೆಯನ್ನೇ ನಿರಾಕರಿಸುತ್ತಾಳೆ. ‘ಲೆಸ್ಬಿಯನ್ ಸಮಾಜವನ್ನು ಪರಿಶೀಲಿಸಿದರೆ, ಗಂಡಸರ ದೃಷ್ಟಿಯಲ್ಲಿ ಒಂದು ವಸ್ತುವಾಗಿರುವ ಸ್ಥಿತಿಯ ಹಿಂದಿನ ರಾಜಕಾರಣ ಗೊತ್ತಾಗುತ್ತದೆ. ಅಲ್ಲದೆ, ಈ ಸಮಾಜವು ಸಿದ್ಧಮಾದರಿಯನ್ನು ಒಡೆಯುವುದು ಸಾಧ್ಯವೆಂದೂ ತೋರಿಸಿದೆ’’ ಎನ್ನುತ್ತಾಳೆ. (ವಿಟಿಗ್ – ೧೯೮೧)  ಲಿಂಗ ವ್ಯತ್ಯಾಸವೆನ್ನುವುದು ‘ಸಹಜ’ವೆಂದು ಒಪ್ಪುವುದು ಆಕೆ ಹೇಳುವಂತೆ ಅಪಾಯಕಾರಿ. ‘‘ಗಂಡು, ಹೆಣ್ಣುಗಳ ನಡುವೆ ಸಹಜ ವ್ಯತ್ಯಾಸಗಳಿವೆ ಎಂದು ಒಪ್ಪುವ ಮೂಲಕ ನಾವು ಈವರೆಗಿನ ಚರಿತ್ರೆಯನ್ನು ‘ಸಹಜ’ಗೊಳಿಸಿ ಬಿಡುತ್ತೇವೆ. ಗಂಡು ಹೆಣ್ಣುಗಳು ಎಂದಿನಿಂದಲೂ ಇದ್ದವರೇ ಮುಂದೆಯೂ ಇರುವವರೇ ಎಂದು ಒಪ್ಪಿ ಬಿಡುತ್ತೇವೆ. ಚರಿತ್ರೆಯನ್ನು ಸಹಜಗೊಳಿಸುವ ಮೂಲಕ ನಾವು ನಮ್ಮ ಶೋಷಣೆಯನ್ನು ಮೈಗೂಡಿಸಿಕೊಂಡ ಸಾಮಾಜಿಕ ವ್ಯವಸ್ಥೆಯನ್ನು ಸಹಜವೆಂದು ಒಪ್ಪಿಬಿಡುತ್ತೇವೆ. ಆಗ ಬದಲಾವಣೆ ಎನ್ನುವುದೇ ಅಸಾದ್ಯವಾಗುತ್ತದೆ.