ಸ್ತ್ರೀವಾದ ಮತ್ತು ಆಧುನಿಕೋತ್ತರ ವಾದ

ಸೀಮಿಯಾಲಜಿ ಮತ್ತು ಆಧುನಿಕೋತ್ತರ ವಾದಗಳು ಬೇರೆ ಬೇರೆ ಎಂದು ಮೊದಲೇ ಹೇಳಿದ್ದೇನೆ. ಕೆಲವು ಸಂಗತಿಗಳಲ್ಲಿ ಅವುಗಳಲ್ಲಿ ಸಮಾನ ಅಂಶಗಳಿವೆ. ಈ ಬಗ್ಗೆ ನಾವೀಗ ವಿಚಾರ ಮಾಡಬೇಕಾಗಿದೆ.

ಆಧುನಿಕೋತ್ತರ ಚಿಂತನೆಗಳು ಸೀಮಿಯಾಲಜಿಯ ಚಿಂತನೆಗಳೊಡನೆ ಕೆಲವು ಸಮಾನಾಂಶಗಳನ್ನು ಹೊಂದಿದೆ ಎಂದು ಹೇಳಿದಾಗ, ಅವುಗಳ ನಡುವೆ ಒಂದು ಬಗೆಯ ವೈಚಾರಿಕ ನಿರಂತರತೆ ಇದೆ ಎಂದು ನನ್ನ ಅರ್ಥ. ಸೀಮಿಯಾಲಜಿ ಮಾನವತಾವಾದವನ್ನು ನಿರಾಕರಿಸಿದರೆ, ಆಧುನಿಕೋತ್ತರವಾದವೂ ತನ್ನದೇ ಆದ ಬಗೆಯಲ್ಲಿ ಆ ವಿಚಾರಧಾರೆಯನ್ನು ಮುಂದುವರೆಸುತ್ತದೆ. ಸೀಮಿಯಾಲಜಿಯಲ್ಲಿ ಮುಂಚೂಣಿಗೆ ಬರುವ ಚಿಂತನೆಗಳು (ಉದಾಹರಣೆಗೆ, ಸಸೂರ್‌ನ ಭಾಷಾತತ್ವ ಮತ್ತು ಫ್ರಾಯ್ಡ್ ಹಾಗೂ ಲಕಾನ್‌ರ ಮನೋವಿಶ್ಲೇಷಣಾತ್ಮಕ ತತ್ವಗಳು) ಆಧುನಿಕೋತ್ತರ ಚಿಂತನೆಗಳಲ್ಲಿ ಇದ್ದರೂ, ಅಷ್ಟು ಪ್ರಧಾನವಾಗಿಲ್ಲ. ಕೊಂಚ ಹಿನ್ನೆಲೆಗೆ ಸರಿದಿವೆ. ಸೀಮಿಯಾಲಜಿಯ ಭಾಷಾತತ್ವವನ್ನೇ ಆಧುನಿಕೋತ್ತರವಾದ ಆಧರಿಸಿದೆ. ಹಾಗೆ ನೋಡಿದರೆ, ಭಾಷಾತತ್ವಗಳ ನಿಟ್ಟಿನಲ್ಲಿ ಈ ಎರಡೂ ಚಿಂತನಾಪ್ರಸ್ಥಾನಗಳ ನಡುವೆ ಅಷ್ಟು ವ್ಯತ್ಯಾಸಗಳಿಲ್ಲ. ಆಧುನಿಕೋತ್ತರ ವಾದವು ಭಾಷೆಗೆ ನೀಡುವ ಮಹತ್ವ ಮಾತ್ರ ಕೊಂಚ ತಗ್ಗಿದೆ.

ಸ್ತ್ರೀವಾದದ ನಿಟ್ಟಿನಲ್ಲಿ ಕೆಲವು ನಿರಂತರತೆಗಳಿವೆ. ಸೀಮಿಯಾಲಿಜಿಸ್ಟರಾದ ಇರಿಗೆರೆ ಮತ್ತು ಕ್ರಿಸ್ತೀವಾ ಹೇಳುವ ಹೆಂಗಸರ ಅಂಚಿನ ಅಸ್ತಿತ್ವದ ವಿಚಾರವನ್ನು ಆಧುನಿಕೋತ್ತರ ಸ್ತ್ರೀವಾದಿಗಳೂ ಒಪ್ಪುತ್ತಾರೆ. ಇರಿಗೆರೆ ಬಹುತ್ವದ ಮೇಲೆ ನೀಡುವ ಒತ್ತು ಆಧುನಿಕೋತ್ತರ ವಾದಿಗಳಿಗೂ ಸಮ್ಮತವೇ. ಈಗಾಗಲೇ ಗುರುತಿಸಿದಂತೆ ಜ್ಯೂಲಿಯಾ ಕ್ರಿಸ್ತೀವಾಳ ಚಿಂತನೆಗಳು ಆಧುನಿಕೋತ್ತರ ಸ್ತ್ರೀವಾದಿಗಳಿಗೆ ಅಗತ್ಯ ಭೂಮಿಕೆಯನ್ನು ಒದಗಿಸಿವೆ.

ಆದರೂ ಕೆಲವು ಬಿರುಕುಗಳಿವೆ. ಆಧುನಿಕೋತ್ತರವಾದವು ಎಲ್ಲ ಸಾರ್ವತ್ರೀಕರಣ ಸಿದ್ಧಾಂತಗಳನ್ನೂ ಸಂದೇಹದಿಂದ ನೋಡಿ ಪ್ರತಿರೋಧಿಸುತ್ತದೆ ಎಂದು ಮೊದಲಲ್ಲೇ ಹೇಳಿದ್ದೇನೆ. ಈ ಪ್ರತಿರೋಧ ಸ್ತ್ರೀವಾದಿಗಳಲ್ಲೂ ಇರುವುದೇ ಆಗಿದೆ. ಏಕೆಂದರೆ, ‘ಮನುಷ್ಯ’ ಎಂಬ ಸಾರ್ವತ್ರಿಕ ವ್ಯಕ್ತಿಯ ಬಗ್ಗೆ ಬಂದಿರುವ ರಾಶಿಗಟ್ಟಲೆ ಬರೆಹಗಳು ಒಂದೇ ಸಮನೆ ಹೆಂಗಸನ್ನು ತಪ್ಪಾಗಿ ಪ್ರತಿನಿಧಿಸಿವೆ, ಇಲ್ಲವೇ ಆಕೆಯನ್ನು ಹೊರಗೆ ತಳ್ಳಿವೆ. ಇಂಥದೇ ಸಾರ್ವತ್ರಿಕ ಸಿದ್ಧಾಂತಗಳನ್ನು ತಮ್ಮದೇ ಆದ ಬಗೆಯಲ್ಲಿ ರೂಪಿಸಿ ಬರೆಯುವ ಆಸಕ್ತಿ ಸ್ತ್ರೀವಾದಿಗಳಲ್ಲಿಲ್ಲ. ಆ ತಪ್ಪನ್ನು ಅವರು ಮಾಡಲಾರರು. ಏಕೆಂದರೆ, ಇಂಥ ತತ್ವಗಳನ್ನು ಆಧರಿಸಿದ ಬರೆಹಗಳನ್ನು ಯಾರೇ ಬರೆದರೂ ಕೊನೆಗೆ ‘ಭಿನ್ನ’ ಹೆಂಗಸರನ್ನು ‘ಅನ್ಯ’ರನ್ನಾಗಿಸಿ ಅವರನ್ನು ಹೊರಗಿರಿಸುತ್ತವೆ.

ಆಧುನಿಕೋತ್ತರ ವಾದಿಗಳು ಇಂತಹ ಸಾರ್ವತ್ರೀಕರಣ ಯತ್ನಗಳನ್ನು (ವೈಶ್ವಿಕ ನೆಲೆಗಳಿಗಾಗಿ ಭಿನ್ನತೆಗಳನ್ನು ಅಳಿಸಿ ಹಾಕುವುದು) ‘‘ಸಾರಾಸಗಟು ಕಲ್ಪನೆಗಳು’’ ಎನ್ನುತ್ತಾರೆ. ಇಂಥ ಕಲ್ಪನೆಗಳು ಅಗತ್ಯವಿಲ್ಲದ್ದನ್ನು ಹೊರಗಿಡುವ ಮೂಲಕವೇ ಸಾರರೂಪಕ್ಕೆ ಒಂದು ಬಗೆಯ ಬಂಧ ಮತ್ತು ಚೆಲುವು ಒದಗುವುದೆಂಬ ಕತೆಯನ್ನು ಕಟ್ಟುತ್ತವೆ. ಅನ್ಯಾಯದ ಅಧಿಕಾರ ಬಳಸಿ ಬೇಡವೆನಿಸಿದ್ದನ್ನು ಅಳಿಸಿ ಹಾಕುತ್ತವೆ. ಸ್ತ್ರೀವಾದವು ಎಲ್ಲ ಹೆಂಗಸರನ್ನೂ ಪ್ರತಿನಿಧಿಸುತ್ತೇನೆಂದು ಹೇಳಿಕೊಂಡರೂ, ೧೯೮೦ ರ ನಂತರ ಹೆಚ್ಚಿನ ಹೆಂಗಸರು, ತಮ್ಮನ್ನು ಅಂಚಿಗೆ ಸರಿಸಿ ಹೊರಗೆ ತಳ್ಳುತ್ತಿದೆ ಎಂದು ಪ್ರತಿಭಟಿಸತೊಡಗಿದರು. ಅಂದರೆ, ಸಾರ್ವತ್ರೀಕರಣಗೊಳಿಸುವ ಪ್ರವೃತ್ತಿಯ ಬಗ್ಗೆ ಇದ್ದ ಸೈದ್ಧಾಂತಿಕ ವಿರೋಧಗಳು ನಿಜವಾಗಿಯೂ ಮೈದಳೆಯತೊಡಗಿದವು.

ನಾನು ಸೀಮಿಯಾಲಜಿ ಎಂಬ ಚೌಕಟ್ಟಿನಲ್ಲಿ ಸೇರಿಸಿರುವ ಪ್ರತಿಯೊಂದು ಚಿಂತನೆಯೂ ಸಾರಾಸಗಟು ಕಲ್ಪನೆಗಳನ್ನೇ ಬಹುವಾಗಿ ಅವಲಂಬಿಸಿದೆ. ಮನೋವಿಶ್ಲೇಷಣೆಯ ಸಿದ್ಧಾಂತಗಳೇ ಇದಕ್ಕೊಂದು ಕಣ್ಣುಕುಕ್ಕುವ ಉದಾಹರಣೆ. ಫ್ರಾಯ್ಡ್ ಅನುಯಾಯಿಗಳಾದ ಕೆಲವು ಸ್ತ್ರೀವಾದಿಗಳು ಮನೋವಿಶ್ಲೇಷಣೆಯು ಚರಿತ್ರೆಯ ಬಂಧಗಳಿಂದ ಹೊರಗಿದೆ ಎಂದೂ, ಭಿನ್ನ ಸಂಸ್ಕೃತಿಗಳು ರಚಿಸುವ ಜಂಡರ್‌ಚೌಕಟ್ಟುಗಳು ಇದಕ್ಕೆ ಅನ್ವಯಿಸುವುದಿಲ್ಲವೆಂದೂ ವಾದಿಸಿದ್ದಾರೆ. ಹಾಗೆ ನೋಡಿದರೆ, ಕಳೆದ ಶತಮಾನದ ತಿರುವಿನಲ್ಲಿ ಯೂರೋಪಿನ ಮೇಲೆ ಮಧ್ಯಮ ವರ್ಗದ ಕೌಟುಂಬಿಕ ಸಂಬಂಧಗಳು ಮತ್ತು ಶಿಶುಪಾಲನಾ ವಿಧಾನಗಳು (ಇವೇ ಫ್ರಾಯ್ಡ್ ಗೆ ಮಾದರಿಗಳಾಗಿದ್ದವು.) ವೈಶ್ವಿಕ ನೆಲೆಯನ್ನು ತೊರೆದಿದ್ದವು. ಹಾಗಾಗಿ, ಸ್ತ್ರೀವಾದಿ ಆಧುನಿಕೋತ್ತರವಾದಿಗಳು ಮನೋವಿಶ್ಲೇಷಣೆಯನ್ನು ದೂರವೇ ಇರಿಸುತ್ತಾರೆ.

ಸ್ತ್ರೀವಾದಿ ಭಾಷಾಶಾಸ್ತ್ರದ ದೃಷ್ಟಿಯಿಂದ ಆಧುನಿಕೋತ್ತರ ಚಿಂತನೆಗಳು ಇತರ ಸ್ತ್ರೀವಾದಿಗಳಂತೆ ಹೆಂಗಸಿನ ಅಧಿಕೃತ ಭಾಷೆಗಾಗಿ ಹುಡುಕದೆ, ಅಂಥ ಪ್ರಯತ್ನಗಳೆಲ್ಲ ನಿಷ್ಪಯೋಜಕ ಮತ್ತು ತಪ್ಪುದಾರಿಗೆ ಒಯ್ಯುವಂಥವು ಎಂದು ಹೇಳಿದ್ದು ಬಹಳ ಮುಖ್ಯವೆನಿಸಿದೆ. ಅಮೆರಿಕದ ವಿಜ್ಞಾನಿ ಮತ್ತು ತತ್ವಶಾಸ್ತ್ರಜ್ಞೆ ಡೋನಾ ಹರಾವೆ ಯ ನೇರ ಮಾತುಗಳಲ್ಲಿ ಹೇಳುವುದಾದರೆ, ‘‘ನಿಜವಾಗಿಯೂ ಪರಿಪೂರ್ಣ ಭಾಷೆಯನ್ನು ಬಯಸುವ ಕನಸಿನಂತೆಯೇ, ಸ್ತ್ರೀವಾದಿಗಳು ಎಲ್ಲ ಹೆಣ್ಣುಗಳಿಗಾಗಿ ಕಂಡ ಸಾಮಾನ್ಯಭಾಷೆಯ ಕನಸು ಕೂಡಾ ಇದೆ. ಇದು ಪರಿಪೂರ್ಣವಾದ ಅನುಭವ ಅಭಿವ್ಯಕ್ತಿಯ ಸಾಧನವೊಂದರ ಹುಡುಕಾಟ. ಇದು ಸಾರಾಸಗಟಿನ ನೆಲೆಯಲ್ಲಿದ್ದು ಸಾಮ್ರಾಜ್ಯಶಾಹಿ ಧೋರಣೆಯನ್ನು ಪ್ರಕಟಿಸುತ್ತಿದೆ.’’

ಡೋನಾ ಹರಾವೆ ೧೯೮೫ ರಲ್ಲಿ ಬರೆದ ‘‘A manifesto for Cyborgs’’ ಎಂಬ ಪ್ರಭಾವಶಾಲಿ ಲೇಖನದಿಂದ ಈ ಉಲ್ಲೇಖವನ್ನು ಆಯ್ದುಕೊಳ್ಳಲಾಗಿದೆ. ಈ ಉಲ್ಲೇಖವನ್ನು ಕೊಂಚ ವಿವರವಾಗಿ ನೋಡೋಣ. ಹೀಗೆ ನೋಡುವುದಕ್ಕೆ ಇದು ಆಧುನಿಕೋತ್ತರ ಸ್ತ್ರೀವಾದಿ ಚಿಂತನೆಗಳ ಸಾರಸಂಗ್ರಹವಾಗಿದೆ ಎಂಬುದು ಕಾರಣವಲ್ಲ(ಹಾಗೆ ನೋಡಿದರೆ ಎಷ್ಟೇ ಪ್ರಭಾವಶಾಲಿ ವಾಕ್ಯವಾದರೂ ಹೀಗೆ ಚಿಂತನೆಯೊಂದರ ಸಾರಸಂಗ್ರಹವಾಗಿರಲು ಸಾಧ್ಯವಿಲ್ಲ.). ಅದಕ್ಕಿಂತ ಹೆಚ್ಚಾಗಿ ಭಾಷೆಯನ್ನು ಕುರಿತಂತೆ ಚೋದಕ ನೆಲೆಯ ಚಿಂತನೆಗಳನ್ನು ಇದು ಉಂಟುಮಾಡಬಲ್ಲದೆಂಬುದು ಮುಖ್ಯವಾಗಿದೆ.

‘ಸಾಮಾನ್ಯ ಭಾಷೆಯೊಂದರ ಕನಸು’ ಎಂಬ ಮಾತು ಆಡ್ರಿನ್ ರಿಚ್ ಎಂಬ ಖ್ಯಾತ ಕವಯಿತ್ರಿಯದು. ಇದನ್ನು ಡೊನಾ ಹರಾವೇ ಇಂದಿನ ಸ್ತ್ರೀವಾದಿ ಭಾಷಾತತ್ವಗಳಿಗೆ ತಕ್ಕಂತೆ ಅನ್ವಯಿಸಿದ್ದಾಳೆ. ಉದಾಹರಣೆಗೆ, ಭಾಷೆಯಲ್ಲಿರುವ ಲೈಂಗಿಕತಾರತಮ್ಯವನ್ನು ಕುರಿತು ಚರ್ಚಿಸುವ ಹೆಚ್ಚಿನ ಸ್ತ್ರೀವಾದಿಚಿಂತನೆಗಳು ಎಲ್ಲ ಹೆಂಗಸರನ್ನೂ ಒಂದು ವೇದಿಕೆಯಲ್ಲಿ ಒಗ್ಗೂಡಿಸಲು ಯತ್ನಿಸುತ್ತವೆ. ಈ ವೇದಿಕೆ ವಾಸ್ತವ ಇಲ್ಲವೇ ಕಲ್ಪಿತ ಆಗಿರಬಹುದು. ಡೇಲ್ ಸ್ಪೆಂಡರ್ ಕೂಡಾ ಹೆಂಗಸರಿಗಾಗಿ ಸಾಮಾನ್ಯಭಾಷೆಯೊಂದನ್ನು ಹುಡುಕುತ್ತಿದ್ದಾಳೆ. ಅವರೆಲ್ಲರಿಗೂ ಸಮಾನವೆಂದು ಹೇಳಲಾದ ಅನುಭವಗಳನ್ನು ಮಂಡಿಸಲು ಅಂಥ ಭಾಷೆಯು ಅಗತ್ಯ ಎನಿಸಿದೆ. ಸೂಜೆಟ್ ಹೇಡನ್ ಎಲ್ಗಿನ್‌ಳ ಕಾದಂಬರಿ Native tougue ನಲ್ಲಿ ಲಾಡಾನ್ ಎಂಬ ಭಾಷೆಯನ್ನು ಸೃಷ್ಟಿಸುವ ಹೆಣ್ಣು ಭಾಷಾಶಾಸ್ತ್ರಜ್ಞರು ತಾವು ಎಲ್ಲ ಹೆಂಗಸರ ಗ್ರಹಿಕೆಗಳ ಅಭಿವ್ಯಕ್ತಿಗೆ ತಕ್ಕ ಮಾಧ್ಯಮವನ್ನು ಸೃಷ್ಟಿಸುತ್ತಿರುವುದಾಗಿ ಉದ್ದಕ್ಕೂ ನಂಬಿರುತ್ತಾರೆ. ಲಕಾನ್ ಅನುಯಾಯಿಗಳೂ ಕೂಡಾ ಹೆಣ್ಣುಭಾಷೆಗೂ ಹೆಣ್ಣುದೇಹಕ್ಕೂ ನಂಟು ಕಲ್ಪಿಸುವ ಮೂಲಕ ಹೆಂಗಸರ ಮಾತು ಬರೆಹಗಳಿಗೂ ಒಂದು ಸಮಾನ ವಾಸ್ತವವಿದೆ ಎಂದು ನಂಬುತ್ತಾರೆ.

ಸ್ತ್ರೀವಾದಿಗಳಲ್ಲಿ ಸಾಮಾನ್ಯ ಭಾಷೆಗಾಗಿ ಮತ್ತೆ ಮತ್ತೆ ತಲೆ ಎತ್ತುತ್ತಿರುವ ಬಯಕೆಯನ್ನೇ ಹರಾವೆ ಸಾಮ್ರಾಜ್ಯಶಾಹಿ ಧೋರಣೆ ಮತ್ತು ಭಿನ್ನತೆಗಳನ್ನು ಅಳಿಸುವ ಮನೋಭಾವ ಎನ್ನುತ್ತಾಳೆ. ಎಲ್ಲ ಹೆಂಗಸರಿಗೂ ಸಮಾನವಾದ ಅನುಭವಗಳಿರುತ್ತವೆ ಎಂಬ ನಂಬಿಕೆಯು ಜಂಡರ್ ವಿಭಜನೆಯ ಅಸ್ಥಿರತೆಯನ್ನು ಮತ್ತು ಹೆಂಗಸರಲ್ಲೇ ಇರುವ ಭಿನ್ನತೆಗಳನ್ನೂ ಮರೆಯುತ್ತದೆ. ಜ್ಯೂಲಿಯಾ ಕ್ರಿಸ್ತೀವಾಳ ಮಾತಿನಲ್ಲಿ ಹೇಳುವುದಾದರೆ, ಇದು ಹೆಂಗಸರು ಎಂಬ ಅಮೂರ್ತ ಅಧಿಭೌತಿಕ ರಚನೆಗಾಗಿ ಮಾಡಿದ ಬಲಿದಾನ. ಈ ಮೂಲಕ ಹೆಣ್ಣು ಗಂಡು ಎಂಬ ದ್ವಿದಾ ವಿಭಜನೆಯನ್ನು ಪ್ರಶ್ನಿಸದೆ ಒಪ್ಪಿಕೊಂಡು ಪಿತೃಪ್ರಧಾನ ವ್ಯವಸ್ಥೆಯ ಬಲೆಗೆ ಬಿದ್ದಂತೆ ಆಗಿದೆ. ಅಲ್ಲದೆ, ಇಂಥ ವಾದಗಳು ಕೆಲವು ಹೆಂಗಸರು (ಸಾಮಾನ್ಯವಾಗಿ ಇವರು ಶ್ವೇತವರ್ಣದ ಪಾಶ್ಚಾತ್ಯ ಬುದ್ದಿಜೀವಿಗಳು) ಎಲ್ಲ ಹೆಂಗಸರ ಪರವಾಗಿ ನುಡಿಯಲು ಅನುಮತಿ ನೀಡುತ್ತದೆ. ಎಲ್ಲರೂ ತಮ್ಮಂತೆಯೇ ಎಂದು ಹಾಗೆ ನುಡಿಯುವವರು ಭಾವಿಸುತ್ತಾರೆ. ಈ ಹಾದಿ ಹಿಡಿಯುವ ಸ್ತ್ರೀವಾದಿಗಳು ಒಂದೋ ಹೆಂಗಸರ ವಾಸ್ತವಗಳನ್ನು ಕಡೆಗಣಿಸುತ್ತಾರೆ, ಇಲ್ಲವೇ ತಮ್ಮ ಮೂಗಿನ ನೇರದ ಚಿಂತನೆಯ ಚೌಕಟ್ಟಿಗೆ ಆ ವಾಸ್ತವಗಳನ್ನು ಹೊಂದಿಸುತ್ತಾರೆ. ಇದು ಒಂದು ಬಗೆಯ ಸಾಮ್ರಾಜ್ಯಶಾಹಿ ಧೋರಣೆ.

‘‘ಸಾಮಾನ್ಯ ಭಾಷೆಯ ಕನಸು’’ ಎಂಬುದು ಹರಾವೆ ಪ್ರಕಾರ ಪರಿಪೂರ್ಣತೆಯ ಮತ್ತು ಮೇಳನದ ಬಯಕೆ. ಈಡನ್ ತೋಟಕ್ಕೆ ಹಿಂತಿರುಗುವ ಅಪೇಕ್ಷೆ. ಇಂಥ ಹಳಹಳಿಕೆಗಳನ್ನು ಸಂದೇಹದಿಂದ ನೋಡಬೇಕೆಂದು ಆಕೆ ಹೇಳುತ್ತಾಳೆ. ಇಂಥ ಬಯಕೆಗಳು ಭಿನ್ನತೆಗಳನ್ನು ಅಳಿಸುವ ಜೊತೆಗೆ ಸಾಮ್ರಾಜ್ಯಶಾಹಿ ನೆಲೆಯನ್ನು ಹೊಂದಿರುತ್ತದೆ. ಜನರು ಮತ್ತು ಸಾಮಾಜಿಕ ಸಂಬಂಧಗಳು ಜಗತ್ತಿನ ಪ್ರತಿಯೊಂದು ಪ್ರದೇಶದಲ್ಲೂ ಭಗ್ನಗೊಂಡಿರುವ ಚಾರಿತ್ರಿಕ ಸಂದರ್ಭದಲ್ಲಿ ಇಂಥ ಬಯಕೆಗಳು ಮೂಡಿರುವುದು ಒಂದು ವ್ಯಂಗ್ಯ.

ಡೊನಾ ಹರಾವೆ ಇತರ ಸ್ತ್ರೀವಾದಿಗಳಂತಲ್ಲದೆ, ಸ್ವತಃ ಒಬ್ವ ವಿಜ್ಞಾನಿ. ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ವಲಯಗಳಲ್ಲಿ ನಡೆದಿರುವ ಈಚಿನ ಬೆಳವಣಿಗೆಗಳು ಜಗತ್ತಿನಾದ್ಯಂತ ಹೆಂಗಸರಿಗೆ ಹೊಸ ಸಾಮಾಜಿಕ ಸಂಬಂಧಗಳನ್ನು ತೆರೆದಿವೆ ಎನ್ನುತ್ತಾಳೆ. ಜೈವಿಕ ತಂತ್ರಜ್ಞಾನವು ಹೆಂಗಸರ ಪ್ರಜನನ ಕ್ರಿಯಾವರ್ತಕ್ಕೂ ಅವರ ದೇಹಕ್ಕೂ ಇರುವ ಸಂಬಂಧವನ್ನು ಬದಲಿಸಿದೆ. ಮಾಹಿತಿ ತಂತ್ರಜ್ಞಾನವು ತೀವ್ರತರದ ತಾಂತ್ರಿಕ ನೆಲೆಯ ಉತ್ಪಾದನಾ ಸಾಧ್ಯತೆಗಳನ್ನು ತೋರಿಸಿದೆ. ಇಂಥ ಪರಿಸ್ಥಿತಿಯಲ್ಲಿ ದುಡಿಯುವ ವರ್ಗದ ಹೆಂಗಸರು ಖಿನ್ನರಾಗುತ್ತಾರೆ, ಪ್ರತ್ಯೇಕಗೊಳ್ಳುತ್ತಾರೆ, ಅವರ ಕೌಶಲಗಳು ಬೇಡವಾಗುತ್ತವೆ, ದುಡಿಮೆಯ ಮಾರುಕಟ್ಟೆಯಲ್ಲಿ ಅವರನ್ನು ಬೇಕಾದಾಗ ಬಳಸಿ ಬೇಡವಾದಾಗ ಹೊರ ತಳ್ಳಬಹುದು. ಅವರನ್ನು ವ್ಯಕ್ತಿಗಳೆಂದು ತಿಳಿಯದೆ ಯಂತ್ರವೊಂದರ ಬಿಡಿಭಾಗದಂತೆ ನೋಡಲಾಗುತ್ತದೆ. (೧೯ನೆಯ ಶತಮಾನದಲ್ಲೇ ಕೈಗಾರಿಕಾ ಬಂಡವಾಳಶಾಹಿಯು ಜನರನ್ನು ಯಂತ್ರಗಳನ್ನಾಗಿ ಬದಲಿಸುವುದೆಂದು ಮಾರ್ಕ್ಸ್ ಹೇಳಿದ್ದನು. ಆಧುನಿಕೋತ್ತರ ವಾದಿಗಳು ಈ ಪರಿವರ್ತನೆ ಈಗ ತೀವ್ರಗೊಂಡಿದೆ ಮತ್ತು ಹೆಚ್ಚು ಢಾಳಾಗಿ ಕಾಣುತ್ತಿದೆ ಎನ್ನುತ್ತಾರೆ.)

ಈ ಬೆಳವಣಿಗೆಗಳಿಂದಾಗಿ ವ್ಯಕ್ತಿಗಳು ಬಿಡಿಭಾಗಗಳಾಗಿದ್ದು ಅವರನ್ನು ದೊಡ್ಡ ಯಂತ್ರ ವ್ಯವಸ್ಥೆಯಲ್ಲಿ ಅಗತ್ಯ ಕಂಡಂತೆ ಬಳಸಬಹುದಾಗಿದೆ. ಹಳೆಯ ದ್ವಿದಾ ಜೋಡಿಗಳಾದ ಪ್ರಕೃತಿ/ಸಂಸ್ಕೃತಿ, ಸಾವಯವತೆ/ಯಾಂತ್ರಿಕತೆ, ಸಾರ್ವಜನಿಕ/ಖಾಸಗಿ ಮುಂತಾದವುಗಳೆಲ್ಲ ಹೆಂಗಸರ ಬದುಕಿನಲ್ಲಿ ನಿರರ್ಥಕವೆನಿಸಿವೆ. ಹರಾವೆ ಲೇಖನದಲ್ಲಿ ಬಳಸಿದ Cyborg ಎಂಬ ಪದವು ಮಾನವ ಮತ್ತು ಯಂತ್ರಗಳ ಸಮ್ಮಿಶ್ರಣದ ಕಲ್ಪನೆ. ಅಂದರೆ, ಆಧುನಿಕೋತ್ತರ ಬದುಕಿನ ಸಾರ್ವಜನಿಕ ಮತ್ತು ಖಾಸಗಿ ವ್ಯಕ್ತಿತ್ವಗಳನ್ನು ಒಡೆದು ಮತ್ತೆ ಕಟ್ಟಿದ ಪಾತ್ರ. ಹರಾವೆ ಹೇಳುವಂತೆ ಹೆಂಗಸರು ಈ ನೆಲೆಗೆ ದಾಟಬೇಕಾಗಿದೆ.

ಇದು ಸುಲಭವಲ್ಲ. ಸುಲಭವಾಗಿರಬೇಕೆಂದು ಯಾರೂ ತಿಳಿದಿಲ್ಲ. Cyborg ನೆಲೆಗೆ ಎಲ್ಲ ಸ್ತ್ರೀವಾದಿಗಳೂ ಧಾವಿಸಬೇಕೆಂದು ಆಕೆ ಹೇಳಿದ್ದನ್ನು ಗಮನಿಸೋಣ. ಸುಮ್ಮನೆ ಹೊಸ ಬದಲಾವಣೆಗಳನ್ನು ಪ್ರತಿರೋಧಿಸುವುದರಲ್ಲಿ, ಮತ್ತು ಹಳೆಯ ಹತಾರಗಳನ್ನು ಅದರ ವಿರುದ್ಧ ಬಳಸುವುದರಲ್ಲಿ ಏನೂ ಅರ್ಥವಿಲ್ಲ. ಉದಾಹರಣೆಗೆ, ನಾವು ಯಂತ್ರಗಳಲ್ಲ ವ್ಯಕ್ತಿಗಳು, ನಾವು ಹಳೆಯ ಪರಿಪೂರ್ಣ ಜೀವನಶೈಲಿಗೆ ಮರಳಬೇಕು ಎಂದು ಹೇಳುವುದರಿಂದ ಏನು ಉಪಯೋಗ? ಒಂದು ವೇಳೆ ಹಿಂದೊಮ್ಮೆ ಅಂಥ ಪರಿಪೂರ್ಣ ಜೀವನಕ್ರಮ ಇದ್ದಿತೆಂದು ತಿಳಿದರೂ ಅದು ಈಗ ಮತ್ತೆ ಉಸಿರಾಡಬಹುದೇ? ನಾವು ಗಡಿಯಾರವನ್ನು ಹಿಂದಕ್ಕೆ ತಿರುಗಿಸಲಾರೆವು. ಬದಲಿಗೆ Cyborg ಒದಗಿಸಿರುವ ಹೊಸ ಅವಕಾಶವನ್ನು ಬಾಚಿಕೊಳ್ಳಬೇಕು.

ಹರಾವೆ ವ್ಯಕ್ತಿತ್ವವನ್ನು Cyborg ನೆಲೆಗೆ ಒಯ್ದು ವ್ಯಾಖ್ಯಾನಿಸಬೇಕು ಎಂದು ಹೇಳಿದಾಗ, Cyborg ನ ಸ್ವರೂಪ ಇನ್ನೂ ಖಚಿತವಾಗಿಲ್ಲ ಎಂದು ಹೇಳಿದಂತಾಗಿದೆ. ಈ ಮೂಲಕ ನಮ್ಮ ಲೋಕವನ್ನು ರೂಪಿಸುವಲ್ಲಿ ಭಾಷೆ ಮತ್ತು ಅರ್ಥಗಳಿಗೆ ಇರುವ ಮಹತ್ವವನ್ನು ಎತ್ತಿ ಹೇಳಿದಂತಾಯಿತು. ಈ ಹೊಣೆಯನ್ನು ಸ್ತ್ರೀವಾದಿಗಳು ಹೇಗೆ ನಿರ್ವಹಿಸುತ್ತಾರೆ ಎಂಬುದೇ ಮುಂದಿನ ಪ್ರಶ್ನೆ.

ಭಿನ್ನತೆಗಳನ್ನು ಅಳಿಸಿ ಹಾಕಬಾರದೆಂಬ ಉದ್ದೇಶದಿಂದಲೇ ಹರಾವೆ ಈ ಪ್ರಶ್ನೆಗೆ ಉತ್ತರ ನೀಡಿಲ್ಲವೆಂದು ತೋರುತ್ತದೆ. ಅದಕ್ಕಾಗಿಯೇ ತನ್ನ ಪ್ರಬಂಧದ ಕೊನೆಗೆ ‘‘ಇದು ಸಾಮಾನ್ಯ ಭಾಷೆಗಾಗಿ ತವಕಿಸುವ ಕನಸಲ್ಲ. ಬದಲಿಗೆ ಶಕ್ತಿಯುತವಾದ, ಚಲನಶೀಲವಾದ, ಬಹ್ವರ್ಥದ ನೆಲೆಯನ್ನು ಕಾಣುವ ಅಪೇಕ್ಷೆ’’ ಎಂದು ಹೇಳುತ್ತಾಳೆ. ಬಹ್ವರ್ಥ ಎಂದರೆ, ‘ವಿವಿಧ ಮತ್ತು ಭಿನ್ನ’ ಎಂದರ್ಥ. ಹಾಗೆಯೇ ಚಲನಶೀಲ ಎಂದರೆ, ‘ನಂಬಿಕೆಗೆ ಕಟ್ಟು ಬೀಳದ’ ಎಂದರ್ಥ. ಡೊನಾ ಹರಾವೆ ನೂರು ಸ್ವರಗಳನ್ನು ಕೇಳ ಬಯಸುತ್ತಾಳೆ. ಆದರೆ ಒಂದೊಂದು ಸ್ವರವೂ ಸ್ಥಿರನೆಲೆಗಳನ್ನು ಒಡೆಯುವಂಥದ್ದು. ತನ್ನ ಸಂಸ್ಕೃತಿಯ ಸಾಂಪ್ರದಾಯಿಕ ನಂಬಿಕೆಗಳ ಜೊತೆಗಿರುವ ನಂಟನ್ನು ಬಿಟ್ಟುಕೊಡುವಂಥದ್ದು. ಹೀಗಾದಾಗಲೂ, ಹೆಂಗಸರು ಸಂಸ್ಕೃತಿಗೆ ಹೊರಗಿನವರೇ ಆಗುತ್ತಾರೆ. ಅಂಚಿನಲ್ಲಿ ನಿಂತು ಮಾತಾಡುತ್ತಾರೆ.

ಲೂಸ್ ಇರಿಗೆರೆ ಇಲ್ಲವೇ ಜ್ಯೂಲಿಯಾ ಕ್ರಿಸ್ತ್ರೀವಾ ಅವರ ಸಿದ್ದಾಂತಗಳಿಗೂ, ಹರಾವೆಯ ಆಧುನಿಕೋತ್ತರ ವಾದಕ್ಕೂ ಈ ಅಂಚಿನ ಸ್ಥಿತಿಯೊಂದೇ ಗಡಿಗೆರೆಯಲ್ಲ. ದಿಟವಾಗಿ ಹರಾವೆ ವಿವಿಧತೆ ಮತ್ತು ಬಹುತ್ವಗಳಿಗೆ ಅವಧಾರಣೆ ನೀಡುತ್ತಾಳೆ. (ಇರಿಗೆರೆಯು ಭಾಷೆಯಲ್ಲಿ ಅರ್ಥಬಾಹುಳ್ಯವಿರಬೇಕೆಂದು ಹೇಳಿದ್ದಾಳೆ. ಆದರೆ, ಹೆಣ್ಣು ಭಾಷೆಗಳೇ ಹಲವು ಇರಬಹುದೆಂದು ಹೇಳಿಲ್ಲ.) ಆಧುನಿಕೋತ್ತರ ವಾದಿಗಳು ಬಹುದನಿಗಳ ಪರವಾದವರು. ಈ ದನಿಗಳು ಯಾರ ಬಾಯನ್ನೂ ಕಟ್ಟುವುದಿಲ್ಲ. ಯಾರ ದನಿಯೂ ಉಡುಗುವಂತೆ ಮಾಡುವುದಿಲ್ಲ.

ಆಧುನಿಕೋತ್ತರ ಸ್ತ್ರೀವಾದವು ಸೀಮಿಯಾಲಜಿಯ ಅನುಯಾಯಿಗಳು ಮಂಡಿಸಿದ ಚಿಂತನೆಗಳನ್ನು ವಿಸ್ತರಿಸುತ್ತಲೇ ತನ್ನ ತಗಾದೆಗಳನ್ನು ಮಂಡಿಸುತ್ತಿದೆ. ಲಕಾನ್ ಅನುಯಾಯಿಗಳು ಭಾಷೆಯಲ್ಲಿರುವ ಗಂಡು ಹೆಣ್ಣು ಕರ್ತೃನೆಲೆಗಳ ಜಟಿಲ ಸಂಬಂಧವನ್ನು ನಿರೂಪಿಸುತ್ತಾರೆ. ಕೆಲವೊಮ್ಮೆ (ಉದಾಹರಣೆಗೆ, ಜ್ಯೂಲಿಯಾ ಕ್ರಿಸ್ತೀವಾ) ಈ ಕರ್ತೃತ್ವ ವಿಭಜನೆ ಎಂಬ ಕಾಲ್ಪನಿಕ ರಚನೆಯೇ ಇಲ್ಲದಿರುವ ನಾಳೆಗಳನ್ನು ಬಯಸುತ್ತಾರೆ. ಆಧುನಿಕೋತ್ತರ ವಾದಿಗಳು ನಾವು ಈಗಾಗಲೇ ಅಂಥ ಲೋಕದಲ್ಲಿ ಬದುಕುತ್ತಿದ್ದೇವೆ ಎನ್ನುತ್ತಾರೆ. ಆದರೆ, ಅದರ ಸಾಧ್ಯತೆಗಳನ್ನು ನಾವಿನ್ನೂ ಕಂಡುಕೊಳ್ಳಬೇಕಾಗಿದೆ. ಲಕಾನ್ ಅನುಯಾಯಿಗಳು ದಮನಗೊಂಡ ಹೆಣ್ಣುಭಾಷೆಯು ಮರಳಿ ತಲೆ ಎತ್ತಿ ಹೆಂಗಸರಿಗೆ ತಪ್ಪಿ ಹೋದ ಅವಕಾಶವನ್ನು ಒದಗಿಸಲಿದೆ ಎನ್ನುತ್ತಾರೆ. ಆಧುನಿಕೋತ್ತರ ವಾದಿಗಳಿಗೆ ಹೆಣ್ಣುತನ ಎಂಬುದೇ ಒಂದು ಮಿಥ್ಯಾಕಲ್ಪನೆ. ‘‘ಇಷ್ಟಕ್ಕೂ ಜಂಡರ್ ಎಂಬುದು ಒಂದು ಜಾಗತಿಕ ನೆಲೆಯ ಅಸ್ಮಿತೆ ಅಲ್ಲದಿರಬಹುದು. ಅದು ಚಾರಿತ್ರಿಕವಾಗಿ ಗಹನವಾದ ನೆಲೆಗಟ್ಟಾಗಿದ್ದರೂ ಅದೊಂದು ಅವಾಸ್ತವವೇ ಆಗಿದೆ’’ ಎಂದು ಡೊನಾ ಹರಾವೆ ಹೇಳುತ್ತಾಳೆ.

Cyborg ಭಾಷೆ ಹೇಗಿರುತ್ತದೆ? ‘‘Cyborg ಬರವಣಿಗೆಯು ಜನ್ಮಜಾತವಾದ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ಬದುಕುವುದಿಲ್ಲ. ತಮ್ಮನ್ನು ಅನ್ಯರೆಂದು ಗುರುತಿಸಲು ಬಳಸಿದ ಹತಾರಗಳನ್ನೇ ಹಿಡಿದು ಲೋಕವನ್ನು ವ್ಯಾಖ್ಯಾನಿಸುತ್ತದೆ.’’ ಅಂದರೆ, ನಿಮ್ಮಿಂದ ಕಸಿದುಕೊಂಡ ಹಳೆಯ ಭಾಷೆಯನ್ನು, ಇಲ್ಲವೇ ಹೊಸ ಭಾಷೆಯೊಂದನ್ನು ಹುಡುಕಬೇಕಿಲ್ಲ. ಈಗಿರುವುದನ್ನೇ ನಿಮ್ಮ ಗುರಿಗೆ ತಕ್ಕಂತೆ ಬಗ್ಗಿಸಿ ದುಡಿಸಿಕೊಳ್ಳಬೇಕು. ಚಿಕಾನ ದೇಶದ ಸ್ತ್ರೀವಾದಿ ಚೆರಿ ಮೊರಾಗಾ ಬರವಣಿಗೆಯನ್ನು ಉದಾಹರಣೆಯನ್ನಾಗಿ ನೀಡುತ್ತಾಳೆ. ಆಕೆ ಚಾರಿತ್ರಿಕವಾಗಿ ವಸಾಹತುಶಾಹಿ ಭಾಷೆಗಳಾದ ಇಂಗ್ಲಿಶ್ ಮತ್ತು ಸ್ಪ್ಯಾನಿಶ್ ಭಾಷೆಗಳ ನಡುವಣ ಪರಸ್ಪರ ವಿರುದ್ಧ ಅಸ್ಮಿತೆಗಳನ್ನು ಬೆಸೆಯುತ್ತಾಳೆ. ಅಂದರೆ, ತೆಪ್ಪಗೆ ಶೋಷಕರ ಭಾಷೆಗೆ ಒಪ್ಪಿಸಿಕೊಳ್ಳುವುದೆಂದಲ್ಲ. ನಮಗೆ ತುತ್ತಿಡುವ ಕೈಗಳನ್ನು ಕಚ್ಚಬೇಕೆಂದು ಹರಾವೆ ಹೇಳುತ್ತಾಳೆ. ಆದರೆ, ಅದಕ್ಕಾಗಿ ಅಚಾರಿತ್ರಿಕವಾದ ಭಾಷೆಗೆ ಹುಡುಕಾಟ ನಡೆಸಬೇಕಿಲ್ಲ. ಕಲ್ಮಶವಿಲ್ಲದ ಸಮಾನ ಸ್ಕಂಧತೆಯ ಜಗತ್ತೊಂದನ್ನು ಕನಸುತ್ತಾ ಕೂರಬೇಕಿಲ್ಲ.

ಸಮಸ್ಯೆಗಳು

ನಾನು ಈವರೆಗೆ ಮಂಡಿಸಿದ ತಾತ್ತ್ವಿಕ ಬೆಳವಣಿಗೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಭಾವಶಾಲಿಯಾಗಿವೆ. ಆದರೆ, ಎಲ್ಲರೂ ಅವುಗಳನ್ನು ಒಪ್ಪಿದ್ದಾರೆಂದಲ್ಲ. ಈ ಹೊಸ ಚಿಂತನೆಗಳು ಮೈಮೇಲೆ ಎಳೆದುಕೊಂಡಿರುವ ಕೆಲವು ಸಮಸ್ಯೆಗಳನ್ನು ನೋಡೋಣ.

ಭಾಷೆ, ದೇಹಗಳು, ಚರಿತ್ರೆ

ಲಕಾನ್ ಅನುಯಾಯಿಗಳು ಭಾಷೆ ಮತ್ತು ದೇಹಕ್ಕೆ, ಅದರಲ್ಲೂ ಹೆಣ್ಣಿನ ದೇಹಕ್ಕೆ, ಸಂಬಂಧವಿದೆ ಎಂದು ಹೇಳುತ್ತಾರೆ. ಅಲ್ಲದೆ ಇದೊಂದು ಸಕಾರಾತ್ಮಕ ಸಂಬಂಧವೆಂದೂ ವಾದಿಸುತ್ತಾರೆ. ಇತರ ಸ್ತ್ರೀವಾದಿಗಳು ಇದನ್ನು ಒಪ್ಪುತ್ತಿಲ್ಲ. ವಿರೋಧಿ ಗುಂಪಿನ ಫ್ರೆಂಚ್ ಸ್ತ್ರೀವಾದಿ ಪತ್ರಿಕೆ Questions feminists ನಲ್ಲಿ ಈ ವಾದ ಮಂಡಿತವಾಗಿದೆ. ‘‘ಎಷ್ಟೋ ವೇಳೆ ಹೆಂಗಸರ ಭಾಷೆಯು ದೇಹಕ್ಕೆ, ಲೈಂಗಿಕ ಆನಂದಕ್ಕೆ ಸಮೀಪವಾಗಿರುವುದೆಂದೂ, ಐಂದ್ರಿಯಿಕ ಅನುಭವಗಳಿಗೆ ತೆರೆದುಕೊಳ್ಳುವುದೆಂದೂ ಹೇಳಲಾಗಿದೆ. ಅಂದರೆ, ಯಾವುದೇ ವಿಶೇಷ ಮಧ್ಯವರ್ತಿಯ ನೆರವಿಲ್ಲದೆಯೂ ದೇಹವು ನೇರವಾಗಿ ಅಭಿವ್ಯಕ್ತಿಸಬಲ್ಲದು ಎಂದಾಯ್ತು. ಅಲ್ಲದೆ, ಹೀಗೆ ದೇಹಕ್ಕೆ ಮತ್ತು ಪ್ರಕೃತಿಗೆ ಸಮೀಪವಾಗಿರುವುದೇ ಒಂದು ಬಂಡಾಯ ಎನ್ನಲಾಗಿದೆ. ನಮ್ಮ ದೃಷ್ಟಿಯಲ್ಲಿ ಹಾಗೆ ದೇಹದೊಡನೆ ಯಾವ ನೇರ ಸಂಬಂಧವೂ ಇರುವುದಿಲ್ಲ. ದೇಹದೊಡನೆ ಇರುವ ಸಂಬಂಧವೇ ಒಂದು ಬಂಡಾಯ ಎಂದು ಹೇಳಲಾಗುವುದಿಲ್ಲ. ಹಾಗೆ ಹೇಳಿದರೆ, ಎಲ್ಲ ಸಾಮಾಜಿಕ ಮಧ್ಯವರ್ತಿ ನೆಲೆಗಳ ಸಾಮಾರ್ಥ್ಯವನ್ನೂ, ವಾಸ್ತವವನ್ನೂ, ಅಲ್ಲಗಳೆದಂತಾಯಿತು. ಆದರೆ ಈ ಅಲ್ಲಗಳೆದ ಸಂಗತಿಗಳೇ ನಮ್ಮನ್ನು ನಮ್ಮ ದೇಹದಲ್ಲಿ ಹತ್ತಿಕ್ಕಿ ಬಂಧಿಸಿವೆ. ಬೇಕೆಂದರೆ, ದೇಹವು ಭಿನ್ನವಾದ ಬಗೆಯಲ್ಲಿ ಸಾಮಾಜೀಕರಣ ಆಗುವುದೆಂದು ಹೇಳಲಿ. ಆದರೆ, ಅದಕ್ಕಾಗಿ ಯಾವುದೋ ನೈಜ ಮತ್ತು ಚಿರಂತನ ಪ್ರಕೃತಿಯನ್ನು ಹುಡುಕಬೇಕಿಲ್ಲ. ಹೀಗೆ ಹುಡುಕ ಹೊರಟರೆ ಸಾಮಾಜಿಕ, ಚಾರಿತ್ರಿಕ ಸಂದರ್ಭಗಳ ವಿರುದ್ಧ ನಮ್ಮ ಹೋರಾಟವನ್ನು ಬಿಟ್ಟು ಕೊಟ್ಟಂತಾಗುತ್ತದೆ. ಈ ಸಂದರ್ಭಗಳೇ ಮಾನವ ಜೀವಿಗಳನ್ನು ಬಂಧನದಲ್ಲಿರಿಸಿದೆ. ಮುಂದೆಯೂ ಇರಿಸಲಿದೆ.’’

ಈ ಟೀಕೆಯು ದೇಹದ ಸಾಮಾಜಿಕ ಸ್ವರೂಪವನ್ನು ಕುರಿತು ಹೇಳುತ್ತಿದೆ. ಇದನ್ನು ಬರೆದವರು ಭಾಷೆಯೂ ಕೂಡಾ ಪ್ರಾಕೃತಿಕ ವಲಯಕ್ಕೆ ಸೇರದೆ, ಸಾಂಸ್ಕೃತಿಕ ನೆಲೆಗೆ ಸೇರಿದ್ದೆಂದೂ, ಅದರಿಂದ ಭಾಷೆಗೆ ಬಿಡುಗಡೆ ಇಲ್ಲವೆಂದೂ ನಂಬಿದ್ದಾರೆ. ಸಾಹಿತ್ಯ ವಿಮರ್ಶಕಿ ಮೇರಿ ಯಾಕೊಬಸ್ ಹೇಳುವಂತೆ, ‘‘ದೇಹವೇ ನಮ್ಮ ಅಂತಿಮ ಎಂದಲ್ಲವಾದರೆ, ಭಾಷೆ ಕೂಡಾ ಅಲ್ಲ.’’

ಈ ಸಮಸ್ಯೆಯನ್ನು ‘ದೇಹಬದ್ಧತೆ’ (ದೇಹವೇ ಅಂತಿಮ) ಇಲ್ಲವೇ ‘‘ಸಾರವಾದ’’ (ಗಂಡಸರು, ಹೆಂಗಸರು ಸದಾ ಬೇರೆ ಬೇರೆ. ಆದರೆ, ಎಲ್ಲ ಹೆಂಗಸರೂ ಒಂದೇ. ಹಾಗೆ ಎಲ್ಲ ಗಂಡಸರೂ ಒಂದೇ.) ಇಲ್ಲವೇ ‘‘ಅಚಾರಿತ್ರಿಕ ವಾದ’’ (ಹೆಂಗಸಿನ ಸ್ಥಾನಮಾನಗಳು ನಿರ್ದಿಷ್ಟ ಕಾಲ ದೇಶಗಳಿಂದ ನಿರ್ದೇಶಿತವಾಗುತ್ತವೆ ಎಂಬ ಸತ್ಯವನ್ನು ಕಡೆಗಣಿಸುವುದು.) ಎಂದು ಕರೆಯಬಹುದು. ದೇಹಬದ್ಧತೆಯನ್ನು ಒಪ್ಪುವ ಲಕಾನ್ ಅನುಯಾಯಿಗಳು, ಅಚಾರಿತ್ರಿಕತೆಯ ನೆಲೆಯನ್ನು ಒಪ್ಪುವವರು. ಏಕೆಂದರೆ, ಅವರು ಮನೋವಿಶ್ಲೇಷಣಾತ್ಮಕ ಸಿದ್ಧಾಂತಗಳು ಯಾವ ಸಂಸ್ಕೃತಿ ಇಲ್ಲವೇ ಕಾಲಕ್ಕಾಗಲೀ ಬದ್ಧವಾಗದೆ ವೈಶ್ವಿಕವಾಗಿರುವುದೆಂದು ನಂಬುತ್ತಾರೆ. ಅಣುಕುಟುಂಬದಲ್ಲಿ ಬೆಳೆದ ಮಗುವಿನ ಮಾದರಿಯನ್ನು ಒಪ್ಪಿ ಸಿದ್ಧಾಂತ ರೂಪಿಸಿರುವ ಇವರ ದಿಟ್ಟತನ ಅಚ್ಚರಿ ತರುತ್ತದೆ. ಆಧುನಿಕೋತ್ತರ ವಾದಿಗಳೂ ಸೇರಿದಂತೆ ಹಲವು ಸ್ತ್ರೀವಾದಿಗಳು ಇಂತಹ ನಿಲುವುಗಳನ್ನು ಸಂಶಯದಿಂದ ನೋಡಿದ್ದಾರೆ.

ಕೆಲವೊಮ್ಮೆ ನಾವು ಫ್ರಾಯ್ಡ್‌ನ ಮಾದರಿಗಳು ಕೆಲವು ಸಂಸ್ಕೃತಿಗಳಿಗೆ ಪ್ರಸ್ತುತವಾಗಿವೆ ಎಂದು ಹೇಳಿದರೂ, (ಉದಾಹರಣೆಗೆ, ಇಂದಿನ ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಅಣು ಕುಟುಂಬಗಳು ಸರ್ವೇಸಾಮಾನ್ಯವಾಗಿವೆ ಎಂದು ತಿಳಿಯುವುದು. ವಾಸ್ತವದಲ್ಲಿ ಅವು ನಿಜ ಪರಿಸ್ಥಿತಿಯನ್ನು ಬಿಂಬಿಸದೆ ಇರಬಹುದು) ಕೆಲವು ಸಮಸ್ಯೆಗಳು ಉಳಿದೇ ಉಳಿಯುತ್ತವೆ. ಜಂಡರ್ ರೂಪುಗೊಳ್ಳುವಿಕೆ ಮತ್ತು ಭಾಷಾಸಾಮರ್ಥ್ಯ ಗಳಿಕೆಯಂತಹ ಪ್ರಕ್ರಿಯೆಗಳನ್ನು ಲಕಾನ್ ಸಿದ್ಧಾಂತಗಳು ಹೇಗೆ ವಿವರಿಸುತ್ತವೆ?

ಎಲ್ಲ ಸಿದ್ಧಾಂತಗಳಂತೆ ಮನೋವಿಶ್ಲೇಷಣೆಯೂ ಕೆಲವು ಸಂಗತಿಗಳನ್ನು ಹೊರಗಿಟ್ಟು ಉಳಿದವುಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಒಂದು ವೇಳೆ ಶಿಶುಗಳು ಭಾಷಾ ಸಾಮರ್ಥ್ಯವನ್ನು ಮತ್ತು ಜಂಡರ್‌ಯುಕ್ತ ಕರ್ತೃತ್ವವನ್ನು ಸಂಪೂರ್ಣವಾಗಿ ಖಾಸಗಿಯಾದ ಮನೋಲೈಂಗಿಕ ನೆಲೆಯ ಕುಟುಂಬ ವ್ಯವಹಾರದ ಮೂಲಕ ಪಡೆದುಕೊಳ್ಳುತ್ತವೆ ಎಂದು ಈ ಸಿದ್ದಾಂತಗಳು ಹೇಳಿದರೆ, ಅದೊಂದು ತಪ್ಪು ಗ್ರಹಿಕೆಯೇ ಸರಿ. ಶಿಶುಗಳು ಹುಟ್ಟಿದ ಗಳಿಗೆಯಿಂದಲೇ ಹೆಣ್ಣೋ ಗಂಡೋ ಎಂಬುದನ್ನವಲಂಬಿಸಿ ಕುಟುಂಬದ ಒಳಗೆ ಮತ್ತು ಹೊರಗೆ ಭಿನ್ನನೆಲೆಗಳಲ್ಲಿ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತವೆ. ಅವರಿಗಾಗಿ ತಕ್ಕ ಜಂಡರ್ ವರ್ತನಾಮಾದರಿಗಳನ್ನು ಕಟ್ಟಿ ಶಿಶುಗಳಿಗೆ ಕಲಿಸಲಾಗುತ್ತದೆ. ಸಮಾನ ವಯಸ್ಕರ ಗುಂಪುಗಳು ಮತ್ತು ಸಾಮಾಜಿಕ ಸಂಸ್ಥೆಗಳು (ಶಾಲೆ ಮತ್ತು ಸಮೂಹ ಮಾಧ್ಯಮಗಳು) ನಿರಂತರವಾಗಿ ಗಂಡುತನ ಮತ್ತು ಹೆಣ್ಣುತನಗಳನ್ನು ಸ್ಥಿರೀಕರಿಸುತ್ತವೆ. ಈ ಎಲ್ಲ ಸಾಮಾಜಿಕ ಪ್ರಕ್ರಿಯೆಗಳೂ ಭಾಷೆಯಲ್ಲಿ ಅಂತಸ್ಥವಾಗಿವೆ. ಅಲ್ಲದೆ, ಶಿಶುವಿನ ಭಾಷಿಕ ಬೆಳವಣಿಗೆಯನ್ನು ಪ್ರಭಾವಿಸುತ್ತವೆ. ಹಾಗಾಗಿ, ಸ್ತ್ರೀವಾದಿ ಭಾಷಾಶಾಸ್ತ್ರವು ಎಲ್ಲ ಮಾದರಿಗಳಿಗಿಂತ ಮನೋವಿಶ್ಲೇಷಣಾ ಮಾದರಿಯೇ ಸರಿ ಎಂದು ತಿಳಿದರೆ, ಆಗ ಅಗತ್ಯವಾದ ಎಷ್ಟೋ ಸಂಗತಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

ಲಕಾನ್ ಅನುಯಾಯಿಗಳು ಭಾಷೆ ಮತ್ತು ಜಂಡರ್ ಬಗ್ಗೆ ಹೊಂದಿರುವ ನಿಲುವುಗಳನ್ನು ಭಾಷಾಸಾಮರ್ಥ್ಯ ಗ್ರಹಿಕೆಯ ಬಗ್ಗೆ ನಡೆದಿರುವ ಇತ್ತೀಚಿನ ಬಹುಪಾಲು ಅಧ್ಯಯನಗಳು ನಿರಾಕರಿಸುತ್ತವೆ. ಏಕೆಂದರೆ, ಭಾಷಾಸಾಮರ್ಥ್ಯ ಗ್ರಹಿಕೆಯ ಹಂತದಲ್ಲಿ ಲೈಂಗಿಕ ಭಿನ್ನತೆಗಳು ಇರುವುದನ್ನು ಈಗ ಗುರುತಿಸಲಾಗಿದೆ. (ಲಕಾನ್ ಅನುಯಾಯಿಗಳೂ ಕೂಡಾ ಮಗುವಿನ ಜಂಡರ್ ನೆಲೆಗಳಿಗೂ ಅದರ ಜೈವಿಕ ಲಿಂಗಕ್ಕೂ ಸಂಬಂಧವಿರಲೇ ಬೇಕೆಂದಿಲ್ಲವೆಂದು ಹೇಳುತ್ತಾರೆ. ಆದರೆ, ಕೆಲವು ಸಂದರ್ಭಗಳಲ್ಲಿ ಇಂಥ ಸಂಬಂಧ ಇರಲೂಬಹುದು. ಹಾಗಿಲ್ಲವಾದರೆ, ಕರ್ತೃತ್ವಗಳನ್ನು ಹೆಣ್ಣು ಮತ್ತು ಗಂಡು ಎಂದು ಹೇಳುವುದೇಕೆ? ಆ ಮೂಲಕ ಹೆಂಗಸರ ದಮನಿತ ಸ್ಥಿತಿಯನ್ನು ಅರಿಯಲು ಸಾಧ್ಯವೆಂದು ವಾದಿಸುವುದೇಕೆ?)

ಸಾಂಕೇತಿಕ ಭಾಷೆಗೆ ಸ್ತ್ರೀ ಕರ್ತೃಗಳು ಅಂಚಿನವರಾಗುತ್ತಾರೆ ಎಂದು ವಾದಿಸಿದ್ದರ ಬಗ್ಗೆ ಇತ್ತೀಚಿನ ಶೋಧಗಳು ಹೇಳುವುದಿಷ್ಟು. ಹುಡುಗಿಯರು ಹುಡುಗರಿಗಿಂತ ಬೇಗ ಮತ್ತು ಪೂರ್ಣವಾಗಿ ಹೊಂದಿಕೊಳ್ಳುತ್ತಾರೆ. ಭಾಷಿಕ ಬೆಳವಣಿಗೆಯು ಅವರಲ್ಲಿ ವೇಗವಾಗಿ ನಡೆಯುತ್ತದೆ. ಹುಡುಗಿಯರು ಭಾಷಾವಿಕಲತೆಗೆ ತುತ್ತಾಗುವ ಸಂಭವ ಕಡಿಮೆ.

ಈ ಆಕ್ಷೇಪಗಳಿಗೆ ಲಕಾನ್ ವಾದಿಗಳು ಉತ್ತರಿಸುವಾಗ ನಾವು ಸಾಂಕೇತಿಕ ವ್ಯವಸ್ಥೆ ಎಂದು ಕರೆದಿರುವುದೂ, ಭಾಷಾಶಾಸ್ತ್ರಜ್ಞರು ವ್ಯಾಖ್ಯಾನಿಸುವ ಭಾಷೆ, ಇವೆರಡೂ ಒಂದೇ ಅಲ್ಲ ಎನ್ನಬಹುದು; ಹಾಗಾಗಿ ಪ್ರಾಯೋಗಿಕ ಮಾಹಿತಿಗಳು, ಶೋಧಗಳು ನಿರುಪಯುಕ್ತ ಎನ್ನುತ್ತಾರೆ. ಹಾಗಿದ್ದರೆ, ಸಾಂಕೇತಿಕ ವ್ಯವಸ್ಥೆ ಎಂದರೇನು ಎಂಬ ಪ್ರಶ್ನೆಯನ್ನು ಕೇಳಬಯಸುತ್ತೇನೆ. ಅಲ್ಲದೆ, ಅದನ್ನು ಯಾವಾಗಲೂ ಭಾಷೆಗೆ ಸಮೀಕರಿಸುವುದೇಕೆ? ‘ಭಾಷೆಗೆ ಸಂಬಂಧಿಸಿದ ವರ್ತನೆಗಳನ್ನು ಪ್ರಾಯೋಗಿಕ ಮತ್ತು ಐಂದ್ರಿಯಿಕ ಮಾಹಿತಿ ಎಂದು ಹೇಳಿ ನಿರಾಕರಿಸುವ ಮೂಲಕ ಲಕಾನ್ ವಾದಿಗಳು ತಮ್ಮ ಸಿದ್ಧಾಂತವು ತನ್ನಲ್ಲೇ ಪರಿಪೂರ್ಣವೆಂದು ವಾದಿಸುತ್ತಾರೆ. ಅಂದರೆ, ಒಂದು ನಿರ್ದಿಷ್ಟ ಬಗೆಯಲ್ಲಿ ಭಾಷೆಯನ್ನು ಬಳಸುವ ಗಂಡಾಗಲೀ ಹೆಣ್ಣಾಗಲೀ ಹೆಣ್ಣುಕರ್ತೃಗಳಾಗಬಹುದು. ಹೆಣ್ಣುಕರ್ತೃಗಳು ಅಂಚಿಗೆ ಸೇರಿದ್ದಾರೆ ಎಂದು ಮೌಲ್ಯಮಾಪನ ಮಾಡಲು ಯಾವ ಆಧಾರವೂ ಇಲ್ಲ. ಇಂಥ ಹೇಳಿಕೆಯು ಸರ್ವಸಮ್ಮತವೆಂಬಂತೆ ತಿಳಿಯಲಾಗಿದೆ. ಸ್ತ್ರೀವಾದಿಗಳಿಗೆ ಈ ವಾದಗಳು ನಿರುಪಯುಕ್ತ. ಲಕಾನ್ ಸಿದ್ಧಾಂತಗಳು ಭಾಷೆಯ ಪಾತ್ರ, ಲೈಂಗಿಕತೆ ಮತ್ತು ಕರ್ತೃತ್ವಗಳ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಎತ್ತಿದರೂ, ಉತ್ತರಿಸುವಾಗ ಕುರುಡು ಸಿದ್ಧಾಂತದ ಅಧಿಕಾರದ ನೆಲೆಗೆ ಹೋಗಿಬಿಡುತ್ತವೆ.

ಭಾಷೆ, ಜಂಡರ್, ವಿಚ್ಛಿದ್ರೀಕರಣ

ಲಕಾನ್ ಸಿದ್ದಾಂತವು ಇದೇ ಸರಿ ಎಂಬ ನೆಲೆಯ ಹಟ ತೋರುವುದನ್ನೂ, ಅಚಾರಿತ್ರಿಕ ನೆಲೆಯಲ್ಲಿ ವ್ಯವಹರಿಸುವುದನ್ನೂ ಕಂಡು ಆಧುನಿಕೋತ್ತರ ಸ್ತ್ರೀವಾದಿಗಳು ಅದನ್ನು ನಿರಾಕರಿಸಿದರು. ಹೀಗಿದ್ದರೂ ಅವರ ಚಿಂತನೆಗಳಲ್ಲಿ ಕೆಲವು ಸಮಸ್ಯೆಗಳಿವೆ. ಈ ಸಮಸ್ಯೆಗಳು ಈಗಾಗಲೇ ಉಲ್ಲೇಖಿಸಿದ ಹಾಗೆ ಸಿಮೊನ್ ದ ಬೊವಾ ಕೇಳಿದ ‘‘ಹೆಂಗಸರೆಂಬುವರು ಇದ್ದಾರೆಯೇ?’’ಎಂಬ ಪ್ರಶ್ನೆಯ ಕಡೆಗೆ ಎಳೆದೊಯ್ಯುತ್ತವೆ.

ಇಂದಿನ ಸ್ತ್ರೀವಾದಿಗಳು ‘ಹೆಂಗಸು’ ಎಂಬ ವೈಶ್ವಿಕನೆಲೆಯ ಚರಿತ್ರೆಯನ್ನು ಮೀರಿದ, ಸಂಸ್ಕೃತಿಯ ನಂಟಿಲ್ಲದ ಪರಿಕಲ್ಪನೆ ಅಸಾಧ್ಯವೆಂದು ಒಪ್ಪುತ್ತಾರೆ. ಕೆಲವು ಹೆಂಗಸರು ಎಲ್ಲ ಹೆಂಗಸರೂ ತಮ್ಮಂತೆಯೇ ಇದ್ದಾರೆಂದು ಕಲ್ಪಿಸಿದರು. ಅದು ಇತರ ಹೆಂಗಸರು ತಾವು ಎಲ್ಲರಂತಲ್ಲ ಎಂದು ತಕರಾರು ಎತ್ತಿದ ಕೂಡಲೇ ಭಗ್ನವಾಯಿತು. ಆದರೆ, ‘ಹೆಂಗಸರು’ ಎಂಬ ಮಾನವಜೀವಿ ಗುಂಪನ್ನು ಅದರ ಲಿಂಗವನ್ನು ಆಧರಿಸಿ ಒಂದು ಘಟಕವನ್ನಾಗಿ ನೋಡದಿದ್ದರೆ, ಆಗ ಸ್ತ್ರೀವಾದ ಎಂಬುದಕ್ಕೆ ನೆಲೆ ಎಲ್ಲಿರುತ್ತದೆ?

ಆಧುನಿಕೋತ್ತರ ವಾದವು ಮಂಡಿಸುವ ವೈವಿಧ್ಯ ಮತ್ತು ಬಹುದನಿಯ ನೆಲೆಗಳು ವೈಶ್ವಿಕ ಹೆಣ್ಣಿನ ಆದರ್ಶ ಪರಿಕಲ್ಪನೆಯನ್ನು ನಿರಾಕರಿಸುತ್ತವೆ. ಆದರೆ, ಈ ಹೊಸ ಚಿಂತನೆಗಳನ್ನು ಈಗ ಪ್ರಶ್ನಿಸಲಾಗುತ್ತಿದೆ. ಇದೂ ಕೂಡಾ ಅವಾಸ್ತವ ಆದರ್ಶವೇ. ಇದು ವಾಸ್ತವ ಜಗತ್ತನ್ನು ಕಡೆಗಣಿಸುತ್ತದೆ.

ಜಂಡರ್ ವಿಭಜನೆಗಳಿಗೆ ಗಹನವಾದ ಚಾರಿತ್ರಿಕ ಮಹತ್ವವಿದೆ ಎಂದು ಡೋನಾ ಹರಾವೆ ಒಪ್ಪುತ್ತಾಳೆ. ಸಾಂಸ್ಕೃತಿಕ ನೆಲೆಯ ಸಾರ್ವತ್ರಿಕ ಅಂಶಗಳನ್ನು ಹುಡುಕಲು ಹೊರಟ ಸಿದ್ಧಾಂತಿಗಳು ಭಿನ್ನತೆಗಳನ್ನು ಅಳಿಸಿ ಹಾಕಲು ಮುಂದಾದರು. ಜಂಡರ್ ವಿಚಾರದಲ್ಲಿಯೂ ಹೀಗೆಯೇ ಆದದ್ದು. ನಾವು ಬಲ್ಲ ಪ್ರತಿಯೊಂದು ಸಮಾಜವೂ ಹೆಣ್ಣು ಗಂಡುಗಳನ್ನು ಬೇರೆ ಮಾಡುತ್ತದೆ. ಹೆಚ್ಚು ಸಮಾಜಗಳು ಗಂಡಿನ ಅಧಿಕಾರವನ್ನು ಒಪ್ಪಿಕೊಂಡಿವೆ. ಹಲವು ಮಾನವಶಾಸ್ತ್ರಜ್ಞರು ಲಿಂಗಸಮಾನತೆಯುಳ್ಳ ಸಮಾಜಗಳಿವೆ ಎಂದು ವಾದಿಸಿದರೂ (ಈಗಲೂ ಅಂಥವರಿದ್ದಾರೆ) ಯಾವ ಸಮಾಜದಲ್ಲಾದರೂ ಹೆಂಗಸರೇ ಗಂಡಸರ ಮೇಲೆ ಅಧಿಕಾರ ಹೊಂದಿರುವ ಉದಾಹರಣೆಗಳಿಲ್ಲ. ನನ್ನ ಮಟ್ಟಿಗೆ ಈ ಸಂಗತಿ ಮುಖ್ಯ. ಇದನ್ನು ಸುಲಭವಾಗಿ ತಳ್ಳಿ ಹಾಕಲಾಗುವುದಿಲ್ಲ.

ಜಂಡರ್ ವಿಭಜನೆಗಳ ಸ್ವರೂಪ ಮತ್ತು ಜಂಡರ್ ಅಸಮಾನತೆಗಳ ಪ್ರಮಾಣವು ಕಾಲದೇಶಗಳಿಗನುಗುಣವಾಗಿ ತೀವ್ರವಾಗಿ ಬದಲಾಗಿದೆ. ನಿಜ. ಬೇಟೆಯಾಡಿ ಆಹಾರ ಸಂಗ್ರಹಿಸುತ್ತಿದ್ದ ಸಮಾಜಗಳಲ್ಲಿನ ಹೆಂಗಸು, ವಿಕ್ಟೋರಿಯನ್ ಯುಗದ ಮೇಲು ಮಧ್ಯಮವರ್ಗದ ಗೃಹಿಣಿ, ಸಿಲಿಕಾನ್ ವ್ಯಾಲಿಯ ಎಲೆಕ್ಟ್ರಾನಿಕ್ ಕಾರ್ಖಾನೆಯ ಜೋಡಣಾ ವಿಭಾಗದ ಕೆಲಸಗಾರ್ತಿ ಇವರೆಲ್ಲರೂ ಅವರವರ ಅನುಭವಗಳಿಗನುಗುಣವಾಗಿ ಭಿನ್ನರೇ ಆಗಿದ್ದಾರೆ. ಗುಲಾಮ ಹೆಂಗಸು ಮತ್ತು ಪ್ಲಾಂಟೇಶನ್ ಮಾಲೀಕನ ಹೆಂಡತಿ- ಇವರ ಸಂಬಂಧಗಳು ನಾಗರಿಕ ಯುದ್ಧದ ಮೊದಲಿನ ಅಮೆರಿಕದಲ್ಲಿ ಸೋದರಿ ಭಾವದ ಇಲ್ಲವೇ ಜಂಡರ್ ಒಗ್ಗಟ್ಟಿನ ನೆಲೆಯಲ್ಲಿ ಇರಲಿಲ್ಲ.

ಹೀಗೆಂದಾಗ ಸ್ತ್ರೀವಾದಿ ವಿಶ್ಲೇಷಣೆಗೆ ಜಂಡರ್ ಅನ್ನು ಆಧಾರವಾಗಿ ಇರಿಸಿಕೊಳ್ಳುವುದನ್ನು ಕೈಬಿಡಲಾದೀತೇನು? ಹಾಗೆ ಮಾಡಿದರೆ ಸ್ತ್ರೀವಾದವನ್ನೇ ಮುಳುಗಿಸಿದಂತೆ. ಎಲ್ಲ ವಾದಗಳಿಗೂ ಒಂದಷ್ಟು ಅಮೂರ್ತ ನೆಲೆಗಳು ಬೇಕೇ ಬೇಕು. ಪ್ರತಿಯೊಬ್ಬ ಹೆಂಗಸಿನ ಬದುಕಿನಲ್ಲಿ ಇರುವ ಅನುಭವಗಳಲ್ಲಿ ಸಮಾನಾಂಶಗಳು ಇವೆ ಎನ್ನುವುದಕ್ಕಿಂತ, ಸ್ತ್ರೀವಾದವು ನೆಲೆಗೊಳ್ಳಲು ಅಗತ್ಯವಾದ ಅಮೂರ್ತ ನೆಲೆಗಳನ್ನು ಕಲ್ಪಿಸಿಕೊಳ್ಳುವುದು ಮುಖ್ಯ. ಪ್ರತಿಯೊಬ್ಬ ಹೆಂಗಸೂ ಹೆಂಗಸಾಗಿರುವುದರಿಂದಲೇ ಭಿನ್ನ ಸಂದರ್ಭಗಳಲ್ಲಿ ಬದುಕಿದ್ದರೂ, ಕೆಲವು ನೆಲೆಗಳಲ್ಲಿ ಎಲ್ಲ ಹೆಂಗಸರೂ ಅಸ್ಮಿತೆಯನ್ನು ಹಂಚಿಕೊಳ್ಳುತ್ತಾರೆ ಎಂಬುದು ವಿವಾದಾತೀತ. ಹೀಗೆ ಹೇಳುವುದೇ ಭಿನ್ನತೆಯ ನಿರಾಕರಣೆ ಮತ್ತು ಸಾಮ್ರಾಜ್ಯಶಾಹಿ ಧೋರಣೆ ಎನ್ನುವುದಾದರೆ, ಅಂಥ ಆರೋಪಕ್ಕೆ ಎಲ್ಲ ಸೈದ್ಧಾಂತಿಕ ಸಂಕಥನಗಳೂ ಗುರಿಯಾಗುತ್ತವೆ. ನಮ್ಮ ಸ್ವಂತ ಬದುಕಿನ ದಿನನಿತ್ಯದ ವ್ಯವಹಾರಗಳ ಸಾಕ್ಷ್ಯವನ್ನು ಬಿಟ್ಟು ಆಚೆಗೆ ದಾಟುವ ಎಲ್ಲ ಪ್ರಯತ್ನಗಳೂ ನಿರರ್ಥಕವೆನಿಸಿಬಿಡಬಹುದು.

ಅಧುನಿಕೋತ್ತರ ವಾದಿಗಳ ಜಂಡರ್ ಸಂದೇಹವಾದವನ್ನು ಕೆಲವು ಸ್ತ್ರೀವಾದಿಗಳು ದಿಗ್ಭ್ರಮೆಯಿಂದ ನೋಡುತ್ತಾರೆ. ಹಲವಾರು ಶತಮಾನಗಳ ಪ್ರಯತ್ನದಿಂದ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡವರು ಗಂಡಸರು. ಹೆಂಗಸರಾದರೋ ಇಪ್ಪತ್ತು ವರ್ಷಗಳಲ್ಲೇ ತಮ್ಮ ಕಾಲಿಗೆ ತಾವೇ ಕೊಡಲಿಯೇಟು ಹಾಕುತ್ತಿದ್ದಾರೆ. ಸ್ತ್ರೀವಾದಿಗಳು ಸಮಾನತೆಯನ್ನು ಸಾಧಿಸಿ ಸಾಮಾಜಿಕ ಪರಿವರ್ತನೆಯನ್ನು ಕಾಣುವ ನೆಲೆಯತ್ತ ಹೆಜ್ಜೆ ಹಾಕುವ ಮೊದಲೇ ತಮ್ಮ ವೈಚಾರಿಕ ತಳಹದಿಯನ್ನೇ ಕಿತ್ತು ಹಾಕುವುದನ್ನು ನೋಡುತ್ತಿದ್ದಾರೆ. ಎಲ್ಲ ಹೆಂಗಸರ ಪರವಾಗಿ ಮಾತನಾಡಲು ನಿಮಗೇನು ಹಕ್ಕಿದೆ ಎಂಬ ಪ್ರಶ್ನೆಯನ್ನು ಹೆಂಗಸರಿಂದಲೇ ಎದುರಿಸುತ್ತಿದ್ದಾರೆ. ಪರಿಣಾಮಕಾರಿ ರಾಜಕಾರಣಕ್ಕೆ ಅಗತ್ಯವಾದ ಒಗ್ಗಟ್ಟಿನ ಅಸ್ಮಿತೆಯು ಈಗ ಇಲ್ಲವಾಗುತ್ತಿದೆ.

ಮೊದಲು ಆಧುನಿಕೋತ್ತರವಾದಿ ಭಾಷಾಚಿಂತನಕಾರರು ಸಾರ್ವತ್ರೀಕರಣದ ವಿರುದ್ಧ ದನಿ ಎತ್ತಿದ್ದನ್ನು, ಹಿಂದಿನ ಸ್ತ್ರೀ ವಾದಿಗಳು ಕಂಡ ‘ಸಾಮಾನ್ಯ ಭಾಷೆಯ ಕನಸನ್ನು’ ತಳ್ಳಿ ಹಾಕಿದ್ದನ್ನು ಮತ್ತೊಮ್ಮೆ ಪರಿಶೀಲಿಸೋಣ. ಒಂದು ನೆಲೆಯಲ್ಲಿ ಇಂಥ ವಿರೋಧವನ್ನು ಒಪ್ಪಿದರೂ, ಸಮಸ್ಯೆಗಳು ಹಾಗೇ ಉಳಿಯುತ್ತವೆ. ಸಾಮ್ರಾಜ್ಯಶಾಹಿ ಧೋರಣೆಯ ಪ್ರಶ್ನೆಯನ್ನು ಒತ್ತಟ್ಟಿಗಿಡೋಣ. ಸಮರ್ಥವಾದ ಪರಿಪೂರ್ಣ ಭಾಷೆಯೊಂದು ಅನುಭವಗಳನ್ನು ಪ್ರಾಮಾಣಿಕವಾಗಿ ಬಿಂಬಿಸಬಲ್ಲದೆಂದು ಕಲ್ಪಿಸುವುದು ಅಸಾಧ್ಯವೇ ಸರಿ. ಭಾಷಾಶಾಸ್ತ್ರಜ್ಞರೂ ಕೂಡಾ ಯಾವ ವ್ಯಕ್ತಿಯಾಗಲೀ ‘‘ಭಾಷೆ’’ಯನ್ನು ಬಳಸುತ್ತಾರೆಂದು ಹೇಳುವುದಿಲ್ಲ. ಏಕೆಂದರೆ ಭಾಷೆಯೆಂಬುದು ಅಮೂರ್ತ. ಇರುವುದು ‘‘ಭಾಷೆಗಳು’’. ಇಂಥ ವಾಸ್ತವವನ್ನು ಹೆಂಗಸರಾದರೂ ಹೇಗೆ ಮೀರುವುದು ಸಾಧ್ಯ?

ಸಾಮಾನ್ಯ ಭಾಷೆ ಎಂಬುದನ್ನು ವಾಚ್ಯದ ನೆಲೆಯಲ್ಲಿ ನೋಡಬಾರದು. ಅದೊಂದು ರೂಪಕ. ಈ ರೂಪಕದ ಹಿಂದೆ ಏಕಾಕಾರದ ಭಾಷೆಯ ಕಲ್ಪನೆ ಇಲ್ಲ. ಬದಲಿಗೆ, ಹೆಂಗಸರು ಒಬ್ಬರಿಗೊಬ್ಬರು ಮಾತಾಡಲು, ಕೇಳಿಸಿಕೊಳ್ಳಲು, ಅರ್ಥ ಮಾಡಿಕೊಳ್ಳಲು ಸಾಧ್ಯವಾಗ ಬೇಕೆಂಬ ಆಕಾಂಕ್ಷೆ ಇದೆ. ಆಡ್ರಿನ್ ರಿಚ್ ಬಳಸಿದ ‘ಸಾಮಾನ್ಯ ಭಾಷೆಯ ಕನಸು’ ಎಂಬುದನ್ನು ಉಲ್ಲೇಖಿಸುವಾಗ ಅದು ಬಳಕೆಯಾದ ಸಂದರ್ಭವನ್ನು ಮರೆತು ಬಿಡುತ್ತಾರೆ.

No one lives in this room
without confronting the whiteness of the wall
behind the poem, planks of books,
Photographs of dead heroins
without contenplating last and late
the true nature of poetry. The drive
to connect the dream of a common lauguage

ಇಲ್ಲಿರುವುದು ಭಿನ್ನತೆಯ ಅಳಿವಿನ ಬಯಕೆಯಲ್ಲ. ಚರಿತ್ರೆಯ ನಿರಾಕರಣೆಯಲ್ಲ. ಎಲ್ಲರನ್ನೂ ತಲುಪುವ ಬಯಕೆ ತುಂಬಿ ಹರಿದಿದೆ.

ಒಪ್ಪೋಣ. ಇದೊಂದು ವಿನೀತ ಭಾವ. ಒಂದು ಬಗೆಯಲ್ಲಿ ಅದಿಭೌತಿಕವಾದ, ದೂರ ಸಂವೇದಿಯಾದ, ಏಕತೆಯನ್ನು ಕುರಿತು ಮಾಡಿಕೊಂಡ ಕಾಲ್ಪನಿಕ ನೆಲೆ. ಸೂಜನ್ ಏಡನ್ ಎಲ್ಗಿನ್ ಕಲ್ಪಿಸಿದ ಲಾಡನ್ ಮಾದರಿಯದ್ದಲ್ಲ. ಅಲ್ಲಿರುವುದು ಹೆಂಗಸಿನ ಅನುಭವಗಳನ್ನು ಪ್ರಾಮಾಣಿಕವಾಗಿ ಮಂಡಿಸುವ ಭಾಷೆಯ ಬಯಕೆ. ಹೀಗಿದ್ದರೂ, ನಾನು ಇಂತಹ ಬಯಕೆಗಳನ್ನು ಭಿನ್ನತೆಯ ನಿರಾಕರಣೆ ಮತ್ತು ಸಾಮ್ರಾಜ್ಯಶಾಹಿ ಧೋರಣೆ ಎಂದು ತಳ್ಳಿಹಾಕಲು ಸಿದ್ಧಳಿಲ್ಲ.

ಡೋನಾ ಹರಾವೇ ಮತ್ತಿತರರು ಹೆಂಗಸರ ವೈವಿಧ್ಯವನ್ನು ಅವರ ದನಿಗಳ ಮಹತ್ವವನ್ನು ಎತ್ತಿ ಹೇಳಿದ್ದು ಸರಿಯೇ. ಆದರೆ, ಸಂವಹನ ಪ್ರಕ್ರಿಯೆಯಲ್ಲಿ ಭಾಗೀದಾರರೆಲ್ಲರೂ ಒಂದೇ ದನಿಯಲ್ಲಿ ಮಾತಾಡುವುದಿಲ್ಲ! ಸಂವಹನ ಪೂರ್ಣಗೊಳ್ಳಲು ಭಿನ್ನತೆಯ ಅರಿವಿರಬೇಕು. ಅದನ್ನು ಜಾಗ್ರತವಾಗಿ ಗಮನಿಸುತ್ತಾ ಇನ್ನೊಬ್ಬರು ಏನು ಹೇಳುತ್ತಾರೆ ಎಂಬುದನ್ನು ತಿಳಿಯುವ ಬಯಕೆ ಇರಬೇಕು. ಸ್ತ್ರೀವಾದಿಗಳು ಬಯಸುವ ‘ಸಮಾನ ಭಾಷೆ’ ಎಂಬುದು ಹೆಂಗಸರು ಒಬ್ಬರನ್ನೊಬ್ಬರು ತಂತಮ್ಮ ನೆಲೆಗಳಿಂದಲೇ ಮಾತಾಡುತ್ತಾ ಅರ್ಥ ಮಾಡಿಕೊಳ್ಳಬೇಕೆಂಬ ಬಯಕೆಯಿಂದ ಹುಟ್ಟಿದ್ದೇ ಹೊರತು, ಭಿನ್ನತೆಯನ್ನು ಅಳಿಸಿಹಾಕಬೇಕೆಂಬ ಇರಾದೆಯಿಂದ ಅಲ್ಲ.

ಆಧುನಿಕೋತ್ತರ ವಾದಿಗಳು ಬಯಸುವ ದನಿಗಳ ಬಹುತ್ವವೂ ಇದೇ ಅಲ್ಲವೇ? ಆದರೆ, ಅವರು ಮಾತಿಗಿಂತ ಬರೆಹಕ್ಕೆ ಒತ್ತು ಕೊಡುತ್ತಾರೆ. ಕೇಳಿಸಿಕೊಳ್ಳುವುದು ಅವರಿಗೆ ಮುಖ್ಯವಾಗಿಲ್ಲ. ಡೋನಾ ಹರಾವೇ ಹೇಳುವ ಶಕ್ತಿಯುತವೂ, ಯಾವ ನಂಬಿಕೆಗೂ ಕಟ್ಟಿ ಬೀಳದಂತಹುದೂ ಆದ ಬಹುಭಾಷಿಕತೆಯ ಸಂದರ್ಭದಲ್ಲಿ ಯಾರು ಕೇಳಿಸಿಕೊಳ್ಳುವವರು? ಆಕೆಯ ಪ್ರಣಾಳಿಕೆಯಲ್ಲಿ ಸಂವಹನ ಎಂಬುದಕ್ಕೆ ನಕಾರಾತ್ಮಕ ನೆಲೆ ಇದೆ. ಉದಾಹರಣೆಗೆ ‘‘ಸಂವಹನ ನಿರ್ವಹಣೆ’’ ಎಂದರೆ ಹೆಂಗಸರನ್ನು ಪಿತೃಪ್ರಧಾನ ಬಂಡವಾಳಶಾಹಿ ಎಂಬ ಸಂಯೋಜಿತ ಪ್ರವಹನಜಾಲದಲ್ಲಿ ಇರಿಸುವುದು ಎಂಬ ಅರ್ಥವನ್ನು ಹೊಂದಿದೆ. ವಾಸ್ತವವಾಗಿ ಹೆಂಗಸರು, ಅದರಲ್ಲೂ ಅವಕಾಶ ವಂಚಿತ ಹೆಂಗಸರು ನಿಡುಗಾಲದಿಂದ ಕೇಳಿಸಿಕೊಳ್ಳುತ್ತಲೇ ಇದ್ದಾರೆ. ಹೀಗಿರುವಾಗ ಅವರು ತಮ್ಮ ಬಗ್ಗೆ ‘‘ಶಕ್ತಿಯುತವಾಗಿ’’ ಮಾತಾಡಲು ಏನೂ ಇಲ್ಲ.

ಆಧುನಿಕೋತ್ತರ ವಾದಿಗಳು ಹೇಳುವ ಭಿನ್ನತೆಯನ್ನು ಅಳಿಸುವ ಮಾತಿಗೆ ಬರೋಣ. ಸ್ತ್ರೀವಾದವು ಒಂದು ನಿರ್ದಿಷ್ಟ ಸಂದರ್ಭದ ವಿಶಿಷ್ಟತೆಯನ್ನು ದಾಟಿ ಹೋಗುವುದನ್ನು ನಿರಾಕರಿಸಿದರೆ, ಆಗ ಅದು ತಪ್ಪಾಗುತ್ತದೆ. ಸ್ತ್ರೀವಾದವು ಹುಸಿ ನೆಲೆಯಲ್ಲಿ ನಿಂತ ‘‘ಹೆಣ್ಣು’’ ಎಂಬ ಒಂದು ತುದಿ, ಹಿಡಿತಕ್ಕೆ ಸಿಗದ ‘ವೈರುಧ್ಯ’ವೆಂಬ ಇನ್ನೊಂದು ತುದಿಗಳ ನಡುವೆ ಚಲಿಸಬೇಕು. ಈ ಎರಡು ಅತಿಗಳ ನಡುವೆಯೇ ಭಾಷೆ ಮತ್ತದರ ಸಂವಹನ ಸಾಮರ್ಥ್ಯ ಅಡಗಿದೆ. ಈ ಕುರಿತು ಕೊಂಚ ವಿಚಾರಿಸೋಣ.

ಸಮಾರೋಪ : ಸಂವಹನದ ಬಗ್ಗೆ

ಖಾಸಗಿ ಅನುಭವವನ್ನು ಹೊರಗಿಡಲು ಮಾನವರು ಬಳಸುವ ಸಾಮಾಜಿಕ ಚಟುವಟಿಕೆಯೇ ಭಾಷಾಬಳಕೆ. ಭಾಷಿಕ ಆಕಾರಕ್ಕೆ ಬಾರದುದು ಅತಿ ಖಾಸಗಿ. (ವ್ಯಕ್ತಿಗೂ ಅದು ಅಸ್ಪಷ್ಟವೇ ಆಗಿರಬಹುದು.) ಹಾಗೆಂದರೆ, ಭಾಷೆಯು ಪರಿಪೂರ್ಣ ಅಭಿವ್ಯಕ್ತಿ ಸಾಧನ ಎಂದಲ್ಲ. ಬದಲಿಗೆ ಭಾಷೆಯು ಸಾಮಾಜಿಕ ಮತ್ತು ಸಾರ್ವಜನಿಕವಾದುದರಿಂದ ಅದನ್ನು ಚರಿತ್ರೆ ಮತ್ತು ಅಧಿಕಾರಗಳೂ ರೂಪಿಸುತ್ತವೆ. ಅದರ ಮೂಲಕ ವ್ಯಕ್ತಿಯ ನಿರ್ಧಾರಗಳು ಮಂಡನೆಯಾಗಲಾರದು. ಏಕೆಂದರೆ, ಕೆಲವರಿಗೆ ಅದು ಹಿತಕರವೆನಸದಿರ ಬಹುದು. ಇಂಥ ಕೊರತೆಗಳಿದ್ದರೂ ಮೂರ್ತನೆಲೆಯ ವಾಸ್ತವವನ್ನು ಸೃಷ್ಟಿಸಲು ಭಾಷೆಯೊಂದೇ ನಮಗಿರುವ ಸಾಧನ.

ಡೋನಾ ಹರಾವೇಯಂಥ ಆಧುನಿಕೋತ್ತರ ವಾದಿಗಳು ಮೂರ್ತವಾಸ್ತವವನ್ನು (ಸರ್ವಸಮ್ಮತವಾಗಿರಬೇಕಿಲ್ಲ) ಸೃಷ್ಟಿಸುವ ಪ್ರಕ್ರಿಯೆಯನ್ನು ಹೇಗೆ ಪರಿಗಣಿಸುತ್ತಾರೋ ಗೊತ್ತಿಲ್ಲ. ಅಂಥ ವಾಸ್ತವವು ಭಿನ್ನತೆಯನ್ನು ಅಳಿಸಿ ಸಾಮ್ರಾಜ್ಯಶಾಹಿ ಧೋರಣೆ ಹೊಂದಿರುವುದೇ? ಅಥವಾ ಹರಾವೇ ಕೂಡಾ ‘ತನ್ನ Manifesto for cyborgs ನಲ್ಲಿ ಇದೇ ಪ್ರಕ್ರಿಯೆಯಲ್ಲಿ ತೊಡಗಿದ್ದಾಳೆಯೇ? ಆಧುನಿಕೋತ್ತರವಾದಿಗಳ ಚಿಂತನೆಯನ್ನು ತಾರ್ಕಿಕವಾದ ವಿವೇಚನೆಗೆ ಗುರಿಪಡಿಸಿದಾಗ ಇಂಥ ವಿರೋಧಾಭಾಸಗಳು ಎದ್ದು ಕಾಣುತ್ತವೆ. (ಹೆಂಗಸರಿಗೆ ಭಾಷೆ ದುರ್ಲಭವೆಂದು ಲಕಾನ್ ವಾದಿಗಳು ಹೇಳುವುದೂ, ಹೆಂಗಸರಿಗೆ ಭಾಷೆಯು ಗಂಡು ಕಟ್ಟಿದ್ದು ಎಂಬುದು ಗೊತ್ತಾಗದಿರಲು ಕಾರಣವೆಂದರೆ ಭಾಷೆಯನ್ನು ಗಂಡುಕಟ್ಟಿದ್ದೇ ಆಗಿದೆ ಎಂದು ತೀವ್ರವಾದಿ ಸ್ತ್ರೀವಾದಿಗಳು ಹೇಳುವುದೂ ಇಂಥವೇ ವಿರೋಧಾಭಾಸಗಳು.) ಮೇಲ್ನೋಟಕ್ಕೆ ಆಕಾರರಹಿತವೆಂದು ತೋರುವುದನ್ನು ವ್ಯವಸ್ಥಿತವಾಗಿ ಅಳವಡಿಸುವುದೇ ಎಲ್ಲ ಸಿದ್ಧಾಂತಗಳ (ಎಲ್ಲ ಮಾತು ಬರೆಹಗಳ) ಮೂಲೋದ್ದೇಶ. ಗ್ರಹಿಕೆಗೆ ಅನುವಾಗುವಂತೆ ಮಾಡುವುದೇ ಭಾಷೆಯ ಉದ್ದೇಶ. ಅಂಥ ಪ್ರಕ್ರಿಯೆಯ ಮಾಧ್ಯಮವೂ ಕೂಡಾ ಭಾಷೆಯೇ ಆಗಿದೆ. ಆದ್ದರಿಂದ ಭಾಷೆಯನ್ನು ಕುರಿತ ಸಿದ್ಧಾಂತವೊಂದು ಅತ್ಯಗತ್ಯ.

ಸಂವಹನದ ಸಮಸ್ಯೆಯನ್ನು ತಳ್ಳಿ ಹಾಕುವ, ಇಲ್ಲವೇ ಕಡೆಗಣಿಸುವ ಭಾಷಾತತ್ವಗಳು ವಾಸ್ತವವನ್ನು ಮರೆತಿರುತ್ತವೆ. ಭಾಷಾಬಳಕೆಯ ಸಾಮಾಜಿಕ ನಡವಳಿಯು ಕೇವಲ ಮಾತಾಡುವ ಇಲ್ಲವೇ/ ಮತ್ತು ಬರೆಯುವ ಕ್ರಿಯೆಗೆ ಸೀಮಿತವಲ್ಲ. ಅದನ್ನು ಭಾಷೆಯ ರಚನೆಯಿಂದ ವಿವರಿಸಲು ಆಗದು. ಈ ಸಾಮಾಜಿಕ ನಡವಳಿಯನ್ನು ಗೊತ್ತಾದ ಉದ್ದೇಶಕ್ಕೆ, ಗೊತ್ತಾದ ಸಂದರ್ಭದಲ್ಲಿ, ಯಾರನ್ನೋ ಉದ್ದೇಶಿಸಿ ಭಾಷೆಯನ್ನು ಬಳಸುವ ಕ್ರಿಯೆಯಿಂದ ವ್ಯಾಖ್ಯಾನಿಸಬಹುದು.

ಭಾಷೆಯ ಈ ನೆಲೆಯನ್ನೇ ಸೀಮಿಯಾಲಜಿ, ಆಧುನಿಕೋತ್ತರವಾದ ಮತ್ತು ಕೆಲವು ಭಾಷಾಸಿದ್ಧಾಂತಗಳು ಮರೆತಿವೆ. ಆದರೆ ಸ್ತ್ರೀವಾದಿಗಳು ಈ ತಪ್ಪು ಮಾಡಬಾರದು. ಬಹಳ ಮುಖ್ಯವಾದ ಸಂಗತಿಯಿದು. ಹೆಂಗಸರನ್ನು ಯಾರೂ ಗಂಡಸರನ್ನು ಸಂಬೋಧಿಸುವಂತೆ ಮಾತನಾಡಿಸಲಾರರು. ಹಾಗೆಯೇ ಹೆಂಗಸರೂ ಕೂಡಾ ಗಂಡಸರಂತೆ ಇತರರೊಡನೆ ಮಾತನಾಡಲಾರರು. ಎಲ್ಲ ಸಂವಹನ ಸಂದರ್ಭಗಳಲ್ಲೂ ಪಿತೃಪ್ರಧಾನ ಸಂಬಂಧಗಳು ಬೆರೆತು ಹೋಗಿವೆ. ಹೆಂಗಸಿನ ಅಧೀನತೆಗೆ ಭಾಷೆಯು ಹೇಗೆ ಕಾರಣವಾಗಿದೆ ಮತ್ತು ಆಕೆಯ ಬಿಡುಗಡೆಗೆ ಅದು ಹೇಗೆ ನೆರವಾಗಬಲ್ಲದು ಎಂಬುದನ್ನು ತಿಳಿಯಬೇಕಾದರೆ, ನಾವು ಸಂವಹನದ ಸಮಸ್ಯೆಯನ್ನು ಗಮನಿಸಲೇಬೇಕು.

ಆಕರ : Feminism and Linguistic Theory
ಡೆಬೊರಾ ಕೆಮೊರೋನ್