ಪೀಠಿಕೆ

ಸ್ತ್ರೀವಾದಕ್ಕೆ ಮತ್ತು ಡೇಲ್ ಸ್ಪೆಂಡರ್ ಹಾಗೂ ಆರ್ಡೆನರ್ ದಂಪತಿ ಮುಂದಿಟ್ಟ ಭಾಷಾಸಿದ್ಧಾಂತಗಳಿಗೆ ಕಳೆದ ಒಂದು ದಶಕದಲ್ಲಿ ತುಂಬಾ ವಿರೋಧಗಳು ವ್ಯಕ್ತವಾಗಿವೆ. ಸೀಮಿಯಾಲಜಿ ಮತ್ತು ಆಧುನಿಕೋತ್ತರವಾದ ಎಂಬ ಬೌದ್ದಿಕ ಚಳುವಳಿಗಳು ಈ ವಿರೋಧವನ್ನು ಹುಟ್ಟು ಹಾಕಿದವು. ಈ ಎರಡೂ ಚಿಂತನಾ ಕ್ರಮಗಳ ಒಳಗೇ ಹಲವಾರು ಒಳಧಾರೆಗಳಿವೆ. ಅಲ್ಲದೆ, ಇವೆರಡರ ನಡುವೆ ಹೊಂದಿಕೆಯಾಗದಷ್ಟು ವಿರೋಧವಿದೆ. ಹೀಗಿದ್ದರೂ ಚಾರಿತ್ರಿಕವಾಗಿ, ವಿಷಯಗಳ ನೆಲೆಯಲ್ಲಿ, ಮತ್ತು ರಾಜಕೀಯವಾಗಿ ಇವುಗಳ ನಡುವೆ ಸಮಾನ ಆಸಕ್ತಿಗಳಿವೆ. ಈ ಕಾರಣದಿಂದ ನಾನು ಇವೆರಡನ್ನೂ ಒಟ್ಟಿಗೆ ಇರಿಸಿ ನನ್ನ ವಿರೋಧವನ್ನು ವ್ಯಕ್ತಪಡಿಸುತ್ತಿದ್ದೇನೆ.

ಸೀಮಿಯಾಲಜಿ, ಇಲ್ಲವೇ ಆಧುನಿಕೋತ್ತರ ವಾದಗಳ ಚಿಂತಕರಿಗೆ, ನಾನು ಇವೆರಡನ್ನೂ ಒಟ್ಟಿಗೆ ಇರಿಸುವುದನ್ನು ಕಂಡರೆ ನಗೆ ಉಕ್ಕಬಹುದು. ನನ್ನ ಅಜ್ಞಾನಕ್ಕೆ ಮರುಗಲೂ ಬಹುದು, ಇರಲಿ. ಮುಂದೆ ನಾನು ಇವೆರಡರ ನಡುವೆ ಇರುವ ವ್ಯತ್ಯಾಸವನ್ನೂ ಪರಿಗಣಿಸಲಿದ್ದೇನೆ. ಸ್ತ್ರೀವಾದಿ ಭಾಷಾಶಾಸ್ತ್ರದ ದೃಷ್ಟಿಯಿಂದ ಇವೆರಡನ್ನೂ ಒಟ್ಟಿಗೆ ಇರಿಸಿ ನೋಡುವುದೇ ಸೂಕ್ತ. ಏಕೆಂದರೆ, ಸ್ತ್ರೀವಾದಿ ದೃಷ್ಟಿಕೋನವನ್ನು ವಿರೋಧಿಸುವ ನೆಲೆಯಲ್ಲಿ ಇವೆರಡೂ ಒಂದೇ ಚೌಕಟ್ಟನ್ನು ಹೊಂದಿವೆ.

ಇವೆರಡೂ ಸುಮಾರು ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮೈದಳೆದವು. ೧೯೭೦ ರ ಸರಿಸುಮಾರಿನ ಸ್ತ್ರೀವಾದಿ ರಚನಾವಾದ ಮತ್ತು ರಚನೋತ್ತರ ವಾದಗಳ ಚಿಂತಕರಾದ ರೋಲಾ ಬಾರ್ತ್, ಜಾರ್ಜ್ ಡೆರಿಡಾ ಮತ್ತು ಮನೋವಿಶ್ಲೇಷಕ ಜಾಕ್ ಲಕಾನ್ ಮುಂತಾದವರ ಶೈಕ್ಷಣಿಕ ಚಿಂತನಾ ಚೌಕಟ್ಟುಗಳಿಂದ ಪ್ರಭಾವಿತವಾಗಿತ್ತು. ಇದೆಲ್ಲವನ್ನೂ ನಾನು ಸದ್ಯ ಸೀಮಿಯಾಲಜಿ ಎಂದು ಕರೆಯಲು ಕಾರಣವಿದೆ. ಏಕೆಂದರೆ, ಸಸೂರ್ ಪ್ರಣೀತ ಭಾಷಿಕ ಮಾದರಿಯಿಂದ ಇವರ ಚಿಂತನೆಗಳು ಪ್ರಭಾವಿತವಾಗಿವೆ. ೧೯೮೦ ರ ಅನಂತರ ಯುರೋಪಿನ ತತ್ವಶಾಸ್ತ್ರಜ್ಞರಿಂದ ಪ್ರಭಾವಿತವಾದ ಹೊಸ ಚಿಂತನಾಕ್ರಮವು ಆಧುನಿಕೋತ್ತರ ವಾದ ಎಂಬ ಹೆಸರಿನಲ್ಲಿ ತಲೆ ಎತ್ತಿದೆ. ಇದೂ ಕೂಡಾ ಸ್ತ್ರೀವಾದದ ಮೇಲೆ ಪ್ರಭಾವ ಬೀರಿದೆ.

ಆರ್ಡೆನರ್ ದಂಪತಿ ಮತ್ತು ಡೇಲ್ ಸ್ಪೆಂಡರ್ ಬಗೆಯ ಸ್ತ್ರೀವಾದಿ ಸೀಮಿಯಾಲಜಿಸ್ಟರು ಮತ್ತು ಆಧುನಿಕೋತ್ತರ ವಾದಿಗಳು ಭಾಷೆ ಮತ್ತು ಭಾಷಾಸಿದ್ಧಾಂತಗಳ ಮೇಲೆ ಒತ್ತು ನೀಡಿದ್ದಾರೆ. ಭಾಷೆ, ಜಂಡರ್ ಮತ್ತು ಸ್ತ್ರೀವಾದವನ್ನು ಕುರಿತ ಅವರ ಪರಿಕಲ್ಪನೆಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಹಾಗೆ ನೋಡಿದರೆ, ಇತರ ಸ್ತ್ರೀವಾದಿ ಚಿಂತನೆಗಳ ನೆಲೆಗಟ್ಟುಗಳನ್ನು ಇವರ ಪರಿಕಲ್ಪನೆಗಳು ಪ್ರಶ್ನಿಸುತ್ತವೆ. ಇತರ ಸ್ತ್ರೀವಾದಿ ಚಿಂತಕರು ‘‘ಮಾನವತಾವಾದಿ’’ಗಳಾದರೆ, ಸೀಮಿಯಾಲಜಿ ಮತ್ತು ಆಧುನಿಕೋತ್ತರ ವಾದದ ಚಿಂತಕರು ಮಾನವತಾ ವಾದವನ್ನು ನಿರಾಕರಿಸುತ್ತಾರೆ.

ಹೀಗೆಂದರೇನು? ಇದನ್ನು ಅರಿಯಲು ನಾವು ಡೇಲ್ ಸ್ಪೆಂಡರ್ ಬರೆದ Man Made language ಕೃತಿಯ ಬಗ್ಗೆ ಸ್ತ್ರೀ ವಾದಿಗಳಾದ ಮರಿಯಾ ಬ್ಲಾಕ್ ಮತ್ತು ರೋಜಲಿಂಡ್ ಕವಾರ್ಡ್ ಬರೆದ ವಿಮರ್ಶೆಯನ್ನು ಗಮನಿಸಬೇಕು. ಈ ವಿಮರ್ಶಕರು ಮಾನವತಾ ವಾದವನ್ನು ನಿರಾಕರಿಸುವ ನೆಲೆಯಲ್ಲಿ ಚಿಂತಿಸುವವರು. ಈ ವಿಮರ್ಶೆಯಲ್ಲಿ ಹಲವಾರು ಕುತೂಹಲಕಾರಿಯಾದ ದೃಷ್ಟಿಕೋನ ಸಂಬಂಧಿ ವಿವರಗಳಿವೆ. ನಾವು ಸದ್ಯ ಅವರ ವಾದವನ್ನು ಹೀಗೆ ಸಂಗ್ರಹಿಸೋಣ. ಇವರು ‘‘ಅಧಿಕಾರ’’ ಮತ್ತು ‘‘ಅರ್ಥ’’ಗಳನ್ನು ಕುರಿತಂತೆ ತಮ್ಮ ಚಿಂತನೆಗಳನ್ನು ಮಂಡಿಸಿದ್ದಾರೆ. ಜೊತೆಗೆ ಮನೋವಿಶ್ಲೇಷಣೆಯು ಮಾನವ ಸ್ವಭಾವವನ್ನು ಕುರಿತು ನೀಡುವ ಒಳನೋಟಗಳನ್ನು ಬಳಸಿಕೊಂಡಿದ್ದಾರೆ. ಏಕೆಂದರೆ, ಸಮಕಾಲೀನ ಸ್ತ್ರೀವಾದದಲ್ಲಿ ಮಾನವ ‘‘ಕರ್ತೃ’’ವನ್ನು ಕುರಿತ ಚರ್ಚೆಯು ಒಂದು ಪ್ರಧಾನ ಆಸಕ್ತಿಯಾಗಿದೆ.

ಡೇಲ್ ಸ್ಪೆಂಡರ್ ಕುರಿತ ವಿಮರ್ಶೆ
ಅಧಿಕಾರ

ಅಧಿಕಾರವನ್ನು ಕುರಿತಂತೆ ಡೇಲ್ ಸ್ಪೆಂಡರ್ ಗ್ರಹಿಕೆಗಳು ಸರಳವಾಗಿವೆ. ಎಲ್ಲ ಗಂಡಸರಿಗೂ ಹೆಂಗಸರ ಮೇಲೆ ಅಧಿಕಾರವಿದೆ. ಗಂಡಸರು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ. ಭಾಷೆಯೂ ಸೇರಿದಂತೆ ಪ್ರತಿಯೊಂದೂ ಅವರಿಗಾಗಿಯೇ ಸೊಂಟ ಕಟ್ಟಿ ನಿಂತಿದೆ.

ಬ್ಲಾಕ್ ಮತ್ತು ಕವಾರ್ಡ್ ಈ ಗ್ರಹಿಕೆಯನ್ನು ಕುರಿತು ಎರಡು ತಕರಾರುಗಳನ್ನೆತ್ತಿದ್ದಾರೆ. ಮೊದಲನೆಯದು, ಸಮಾಜದಲ್ಲಿ ಅಧಿಕಾರಕ್ಕೆ ಹಲವು ಆಯಾಮಗಳಿವೆ. ಜಂಡರ್ ಅಲ್ಲದೆ ವರ್ಗ, ವರ್ಣ ಮುಂತಾದವೂ ಅಧಿಕಾರದ ನೆಲೆಗಳೇ ಆಗಿವೆ. ಹೀಗಿರುವುದರಿಂದ, ‘‘ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅಧಿಕಾರ ಹೊಂದಿರುತ್ತದೆ’’ ಎಂದು ಹೇಳುವುದು ಸರಿಯಾಗಲಾರದು. ಉದಾಹರಣೆಗೆ, ಮಧ್ಯಮ ವರ್ಗದ ಶ್ವೇತವರ್ಣದ ಹೆಂಗಸು ಕಪ್ಪು ಇಲ್ಲವೇ ದುಡಿಯುವ ವರ್ಗದ ಅಧೀನ ಗಂಡಸರ ಮೇಲೆ ಅಧಿಕಾರವನ್ನು ಹೊಂದಿರಬಹುದು. ಆದರೆ ಸ್ವತಃ ಆಕೆ ಮಧ್ಯಮ ವರ್ಗದ ಗಂಡನ ಅಧೀನಳಾಗಿ ಬದುಕುತ್ತಿರಬಹುದು. ಆಧುನಿಕೋತ್ತರ ನೆಲೆಯ ಸ್ತ್ರೀವಾದದಲ್ಲಿ ಅಧಿಕಾರವನ್ನು ಬಹು ಆಯಾಮಗಳ ನೆಲೆಯಿಂದ ನೋಡುವ ದೃಷ್ಟಿಕೋನ ಬೆಳೆದಿರುವುದನ್ನು ಮುಂದೆ ನೋಡುತ್ತೇವೆ.

ಎರಡನೆಯದು, ಗಂಡಸರು ಬೇಕೆಂತಲೇ ತಮ್ಮ ಹಿತಾಸಕ್ತಿ ರಕ್ಷಣೆಗೆ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟಿಕೊಂಡಿರುವ ಮತ್ತು ಆ ಮೂಲಕ ಹೆಂಗಸರು ಎಲ್ಲಿರಬೇಕೋ ಅಲ್ಲಿರುವಂತೆ ಮಾಡಲು ದಮನಕಾರಿ ನಡವಳಿಕೆಯಲ್ಲಿ ತೊಡಗುವ ವ್ಯಾಖ್ಯೆ ಬ್ಲಾಕ್ ಮತ್ತು ಕವಾರ್ಡ್‌ರಿಗೆ ಹಿಡಿಸುವುದಿಲ್ಲ. ಐರೋಪ್ಯ ಚಿಂತಕರಾದ ಲೂಯಿ ಆಲ್‌ತುಸರ್ ಮತ್ತು ಮಿಶೆಲ್ ಪೂಕೋ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ಬ್ಲಾಕ್ ಮತ್ತು ಕವಾರ್ಡ್‌ರು ಅಧಿಕಾರವನ್ನು ತುಂಬಾ ಸಂಕೀರ್ಣ ಹಾಗೂ ಸೂಕ್ಷ್ಮ ಸಂಗತಿ ಎಂದು ಪರಿಗಣಿಸುತ್ತಾರೆ. ಅಧಿಕಾರವು ಐಡಿಯಾಲಜಿ ಇಲ್ಲವೇ ಸಂಕಥನಗಳ ಮೂಲಕ ಜಾರಿಗೊಳ್ಳುವುದೇ ಹೊರತು ದಮನಕಾರಿ ನಡವಳಿಕೆಯಿಂದಲ್ಲ. (ಉದಾಹರಣೆಗೆ, ಚಿಕ್ಕ ಹುಡುಗಿಯರು ‘‘ಹೆಣ್ಣು ವಸ್ತು’’ಗಳಾದ ಬೊಂಬೆಗಳು ಮತ್ತು ಚಂದದ ಉಡುಗೆಗಳನ್ನು ಬಯಸುವಂತೆ ಮಾಡಲು ಯಾರೂ ಹಿಂಸೆಯ ಮಾರ್ಗಗಳನ್ನು ಅನುಸರಿಸಬೇಕಾಗಿಲ್ಲ. ಒಂದು ವೇಳೆ ಲೈಂಗಿಕತಾ ನೆಲೆಗಳನ್ನು ವಿರೋಧಿಸುವ ಪಾಲಕರು ಮತ್ತು ಶಿಕ್ಷಕರು ಹೆಣ್ಣು ಮಕ್ಕಳು ಇಂಥ ಹೆಣ್ಣುವಸ್ತುಗಳನ್ನು ಬಯಸದಂತೆ ಮಾಡಲು ಹೊರಟರೆ ತಲೆಹುಯ್ದು ಕೊಳ್ಳಬೇಕಾಗುತ್ತದೆ.)

ಅಲ್ಲದೆ, ಯಾವುದೋ ಒಂದು ಗುಂಪು ಬೇಕೆಂತಲೇ ಅಧಿಕಾರವನ್ನು ‘‘ಚಲಾಯಿಸುತ್ತಿದೆ’’ ಎಂದು ವಾದಿಸುವುದೇ ತಪ್ಪು ಗ್ರಹಿಕೆ. ಮಧ್ಯಮ ವರ್ಗದ ಶ್ವೇತ ಗಂಡಸರೂ ಸೇರಿದಂತೆ,ಯಾವ ಗಂಡಸರೂ ಕೂಡಾ ಹೆಂಗಸರನ್ನು ಹೇಗೆ ತಮ್ಮ ಅಧೀನದಲ್ಲಿ ಇರಿಸಿಕೊಳ್ಳಬಹುದು ಎಂದು ಚಿಂತಿಸಲು ಗುಪ್ತ ಸಭೆಗಳನ್ನು ನಡೆಸುವುದಿಲ್ಲ. (ಇಂಥ ಸಭೆಗಳು ನಡೆದವೇನು? ಇತಿಹಾಸದ ಉದಯ ಕಾಲದಲ್ಲೋ ಅಥವಾ ವಾರಕ್ಕೊಮ್ಮೆಯೋ ಸಭೆ ನಡೆದವೇನು?) ಬ್ಲಾಕ್ ಮತ್ತು ಕವಾರ್ಡ್‌ರಿಗೆ ಹೀಗೆ ಕಲ್ಪಿಸಿಕೊಳ್ಳುವುದೇ ಅಸಂಗತವೆನಿಸಿತು. ಹೆಂಗಸರಂತೆ ಗಂಡಸರೂ ಕೂಡಾ ಸಾಮಾಜಿಕ ರಚನೆಗಳನ್ನೂ, ಬದುಕುವ ಕ್ರಮದ ರಚಿತ ವಿಧಾನಗಳನ್ನೂ, ತಮ್ಮ ಹಿಂದಿನ ತಲೆಮಾರಿನಿಂದ ಪಡೆದುಕೊಳ್ಳುತ್ತಾರೆ. ಹಾಗಾಗಿ, ಅಧಿಕಾರ ಚಲಾಯಿಸುವ ಮಾತನ್ನು ಒಪ್ಪಲಾಗುವುದಿಲ್ಲ. (ಪೂಕೋ ಹೀಗೆ ಚಿಂತಿಸುವುದನ್ನು ಬಲೆಗೆ ಹೋಲಿಸುತ್ತಾನೆ.) ಡೇಲ್ ಸ್ಪೆಂಡರ್ ಹೇಳುವಂತೆ ಇದೊಂದು ಪ್ರಜ್ಞಾಪೂರ್ವಕ ಚಟುವಟಿಕೆಯಂತೂ ಅಲ್ಲವೇ ಅಲ್ಲ.

ಅರ್ಥ

ಅಧಿಕಾರವನ್ನು ಕುರಿತ ವಾದವು ಅರ್ಥವನ್ನು ಕುರಿತ ವಾದದೊಡನೆ ಬೆಸೆದುಕೊಳ್ಳುತ್ತದೆ. ಡೇಲ್ ಸ್ಪೆಂಡರ್ (ಮತ್ತು ಆರ್ಡೆನರ್ ದಂಪತಿ) ಪ್ರಕಾರ ಹೆಂಗಸರಿಗೆ ಭಿನ್ನ ಅನುಭವಗಳಿರುವುದರಿಂದ ಅವರ ವಾಸ್ತವಗಳೂ ಭಿನ್ನವಾಗಿರುತ್ತವೆ. ಆದರೆ, ಅನುಭವದ ಅರ್ಥವನ್ನು ಭಾಷಿಕರೂಪದಲ್ಲಿ ಅಭಿವ್ಯಕ್ತಿಸುವ ಪ್ರಕ್ರಿಯೆಗಳ ಮೇಲೆ ಗಂಡಸರು ಹಿಡಿತವಿರಿಸಿಕೊಂಡಿರುವುದು ಹೆಂಗಸರಿಗೆ ಸಮಸ್ಯೆಯಾಗಿದೆ. ಹಾಗಾಗಿ, ಭಾಷೆಯಲ್ಲಿ ರುವುದೆಲ್ಲಾ ಕೇವಲ ‘‘ಗಂಡು’’ ಅರ್ಥಗಳು.

ಬ್ಲಾಕ್ ಮತ್ತು ಕವಾರ್ಡ್‌ರು ಹೀಗೆ ವಾದಿಸುವುದರ ಪರಿಣಾಮಗಳನ್ನು ಹೀಗೆ ಹೇಳುತ್ತಾರೆ: ಭಾಷೆಯು ಅನುಭವದ ನೇರ ಪ್ರತಿಬಿಂಬವೆಂದು ಸ್ಪೆಂಡರ್ ತಿಳಿದಿದ್ದಾಳೆ. ಒಂದೇ ಬಗೆಯ ಅನುಭವಗಳುಳ್ಳ ಜನರು ಮಾತ್ರ ಒಂದೇ ಬಗೆಯ ಅರ್ಥಗಳನ್ನು ಹೊಂದಿರಲು ಸಾಧ್ಯ. ಹಾಗಿಲ್ಲದಿದ್ದರೆ (ಗಂಡಸರು ಮತ್ತು ಹೆಂಗಸರಲ್ಲಿ ಆಗಿರುವಂತೆ), ಅವರು ಅರ್ಥ ಸಮಾನತೆಯನ್ನು ಹೊಂದುವುದಿಲ್ಲ. ಹೀಗೆ ವಾದಿಸುವುದು ಬ್ಲಾಕ್ ಮತ್ತು ಕವಾಡ್  ಪ್ರಕಾರ ತುಂಬಾ ಒರಟು. ಏಕೆಂದರೆ ‘‘ಅನುಭವ ಮತ್ತು ಅಸ್ಮಿತೆಗಳು ಅರ್ಥದ ಉಗಮಕ್ಕೆ ಕಾರಣಗಳಲ್ಲ. ಅರ್ಥದಿಂದಾಗಿ ಇವು ಹುಟ್ಟಿಕೊಳ್ಳುತ್ತವೆ.’’

ಮಾನವತಾವಾದಿ/ಐಂದ್ರಿಯಿಕವಾದಿ ಸ್ತ್ರೀವಾದಿ ಭಾಷಾಚಿಂತನೆಗಳು ಮತ್ತು ಮಾನವತಾವಾದವನ್ನು ನಿರಾಕರಿಸುವ ಮತ್ತು ಐಂದ್ರಯಿಕತೆಯನ್ನು ಆಧಾರವಾಗಿ ಇರಿಸಿಕೊಳ್ಳದ ಸ್ತ್ರೀವಾದಿ ಭಾಷಾಚಿಂತನೆಗಳು ಪರಸ್ಪರ ಮುಖಾಮುಖಿಯಾಗಿರುವುದು ಮೇಲೆ ಹೇಳಿದ ನೆಲೆಗಳಲ್ಲಿ. ಪಾರಂಪರಿಕವಾದ ಮತ್ತು ಜ್ಞಾನಯುಗದಿಂದ ಬೆಳೆದು ಬಂದ ಸಾಮಾನ್ಯ ತಿಳುವಳಿಕೆಯು ಭಾಷೆಯು ಆಡುವವರ ಮೂಲಕ ಅವತರಿಸುತ್ತದೆ ಎನ್ನುತ್ತದೆ. ನಾನು ಒಂದು ವೇಳೆ ‘‘ನಾನು ಈ ಪುಸ್ತಕದ ಕರ್ತೃ’’ ಎಂದು ಹೇಳಿದರೆ ಇಲ್ಲಿರುವ ‘‘ನಾನು’’ ಎಂಬುದನ್ನು ಪ್ರತಿನಿಧಿಸುವ ವಾಸ್ತವವೊಂದು ವಾಕ್ಯವನ್ನು ನುಡಿಯುವುದಕ್ಕೆ ಮೊದಲೇ ಅಸ್ತಿತ್ವದಲ್ಲಿರಬೇಕು. ಆ ನಿರ್ದಿಷ್ಟ ವ್ಯಕ್ತಿಯ ಪದಗಳೂ ಇಲ್ಲಿರಬೇಕು. ಇದನ್ನು ಕೆಲವೊಮ್ಮೆ ‘‘ಮಾನವತಾ ವಾದಿ’’ ಚಿಂತನೆ ಎನ್ನುತ್ತಾರೆ. ಏಕೆಂದರೆ, ಇಲ್ಲಿರುವ ಅರ್ಥದ ಉಗಮ ಮತ್ತು ವಾಕ್ಯದ ವ್ಯಾಖ್ಯಾನ, ಇಲ್ಲವೇ ಅದು ನಿಜವೋ ಸುಳ್ಳೋ ಎಂಬ ಮೌಲ್ಯಮಾಪನ ಮುಂತಾದವೆಲ್ಲ ಯಾರು ವಾಕ್ಯವನ್ನು ಹೇಳಿದರೋ ಅವರಲ್ಲಿ ನೆಲೆಗೊಂಡಿದೆ ಎಂದು ತಿಳಿಯಲಾಗುತ್ತದೆ.

ಈ ಗ್ರಹಿಕೆಯು ತುಂಬಾ ಸರಳೀಕರಣದ ನೆಲೆಯಲ್ಲಿದೆ ಎಂದು ಬ್ಲಾಕ್ ಮತ್ತು ಕವಾರ್ಡ್ ಸೂಚಿಸುತ್ತಿದ್ದಾರೆ. ಆದರೆ ಅವರು ಹೀಗೆ ಹೇಳುವ ಬದಲು ಸುತ್ತು ಬಳಸಿದ ದಾರಿ ಹಿಡಿದಂತಿದೆ. ‘‘ನಾನು’’ ಎಂಬ ಪದಕ್ಕಿಂತ ಮೊದಲು ಯಾವುದೇ ವ್ಯಕ್ತಿಗೆ ಸ್ವತಂತ್ರ ವಾಸ್ತವವಿಲ್ಲ. ‘ನಾನು’ ಎಂಬ ಭಾಷಿಕ ರಚನೆ ಮಾತಾಡುತ್ತಿರುವ ವ್ಯಕ್ತಿಯ ಅಸ್ಮಿತೆಯನ್ನು ಸೃಷ್ಟಿಸುತ್ತದೆ. ತತ್ತ್ವಶಾಸ್ತ್ರಜ್ಞರು ಹೇಳುವಂತೆ ‘ನಾನು’ ಎಂಬುದು ಕರ್ತೃವಿನ ಸ್ಥಾನವನ್ನು ರೂಪಿಸುತ್ತದೆ. ಇದು ಸಾಂಸ್ಕೃತಿಕವಾಗಿ ಮನ್ನಣೆ ಪಡೆದ ಸ್ಥಾನ. ವ್ಯಕ್ತಿಗಳು ಆ ಸ್ಥಾನದಲ್ಲಿ ತಮ್ಮನ್ನು ಇರಿಸಿಕೊಳ್ಳುತ್ತಾರೆ.

ಹೀಗೆ ಸ್ಥಾನ ಪಡೆಯುವಿಕೆಯನ್ನು ಆಲ್‌ತುಸರ್ ‘Interpellation’ ಎಂದು ಕರೆಯುತ್ತಾನೆ. ಬೀದಿಯಲ್ಲಿ ಹೋಗುವ ಯಾರೋ ‘ಹೇ, ನೀನು’ ಎಂದು ಕೂಗಿದರೆ ನೀವು ತಿರುಗಿ ನೋಡುತ್ತೀರಿ. ಕರೆದದ್ದು ನಿಮ್ಮನ್ನೇ ಎಂದು ಗುರುತಿಸಿಕೊಳ್ಳುತ್ತೀರಿ. ಆಲ್ತುಸರ್ ಹೇಳುವಂತೆ ಸಾಮಾಜಿಕ ಸಂಸ್ಥೆಗಳು ಹೀಗೆ ನಾವು ಯಾರಾಗಿರಬೇಕೋ ಆ ಸ್ಥಾನದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತದೆ. ಉದಾಹರಣೆಗೆ, ಒಂದು ವರ್ಗಕ್ಕೆ ಸೇರಿದವರೆಂದು ಗುರುತಿಸಿಕೊಳ್ಳುವುದು. ಇದರಿಂದ ನಮ್ಮ ಸಾಮಾಜಿಕ ಚಹರೆಗಳು ಖಚಿತಗೊಳ್ಳುತ್ತವೆ. ಭಾಷಾಸಾಮರ್ಥ್ಯವನ್ನು ಪಡೆಯದಿರುವ ಮಗು, ಇಲ್ಲವೇ ಮನೋವೈಕಲ್ಯಕ್ಕೆ ತುತ್ತಾದ ವ್ಯಕ್ತಿ- ಇವರಾರೂ ಸಾಮಾಜಿಕ ಜೀವಿಗಳಲ್ಲ. ಏಕೆಂದರೆ, ಅವರು ಗೊತ್ತಾದ ಸ್ಥಾನಗಳಲ್ಲಿ ತಮ್ಮನ್ನು ತಾವು ಪ್ರತಿಕ್ಷಣವೂ ಗುರುತಿಸಿಕೊಳ್ಳಲಾರರು. ಇತರರು ಆ ಸ್ಥಾನದಲ್ಲಿ ಇವರನ್ನು ಗುರುತಿಸಿದರೂ ಅದಕ್ಕೆ ಪ್ರತಿಸ್ಪಂದಿಸಲಾರರು.

ಹೆಣ್ಣು ಮತ್ತು ಗಂಡು ಕರ್ತೃಸ್ಥಾನಗಳನ್ನು ಗುರುತಿಸುವಾಗ ಸಂಸ್ಕೃತಿಗಳು ನೆಲೆಗೊಳಿಸುವ ಭಿನ್ನತೆಯನ್ನು ಒಂದು ಚಿಕ್ಕ ಉದಾಹರಣೆಯಿಂದ ತಿಳಿಯಬಹುದು. ಈಚೆಗೆ ಮಗುವನ್ನು ಹೆತ್ತ ಹೆಂಗಸೊಬ್ಬಳು ನನಗೆ ಹೇಳಿದ ಘಟನೆಯಿದು. ಆಕೆ ಇದ್ದ ಆಸ್ಪತ್ರೆಯ ಶಿಶುಗೃಹದಲ್ಲಿ ಆಗ ತಾನೇ ಹುಟ್ಟಿದ ಮಕ್ಕಳಿಗೆ ಅವರ ಲಿಂಗ ಯಾವುದೆಂದು ಸೂಚಿಸುವ ಪಟ್ಟಿಕೆಗಳನ್ನು ಬರೆದು ತೊಟ್ಟಿಲಿಗೆ ಅಂಟಿಸುತ್ತಿದ್ದರಂತೆ. ಆ ಪಟ್ಟಿಕೆಗಳಲ್ಲಿ ಎರಡು ವಿಧ. ‘ನಾನು ಹುಡುಗ’ ಇಲ್ಲವೇ, ‘ಇದು ಹುಡುಗಿ’ ಎಂಬವು. ಈ ಯಾವ ಮಗುವಿಗೂ ಮಾತು ಬರುತ್ತಿರಲಿಲ್ಲ. ಆದರೆ, ಅವರು ಹುಟ್ಟಿದಾಗ ಸಂಸ್ಕೃತಿಯು ಅವರನ್ನು ಭಿನ್ನವಾಗಿ ಗುರುತಿಸಿತು. ಹುಡುಗರು ಕ್ರಿಯಾಶಾಲಿಗಳಂತೆ ಮಾತಾಡುವ ಕರ್ತೃಗಳಾಗಿ ಗುರುತು ಪಡೆದರು. ಅವರ ಪಟ್ಟಿಕೆಯಲ್ಲಿದ್ದ ‘ನಾನು’ ಎಂಬುದು ಇದನ್ನು ನಿಸ್ಸಂದೇಹವಾಗಿ ಸೂಚಿಸುತ್ತದೆ. ಆದರೆ, ಹೆಣ್ಣು ಮಕ್ಕಳಿಗೆ ಈ ಸ್ಥಾನ ನಿರ್ದೇಶವಿಲ್ಲ. ಅವರು ಬೆಳೆದಂತೆ ಸ್ಥಾನ ನಿರ್ದೇಶವಿಲ್ಲದ ವ್ಯವಸ್ಥೆಯಲ್ಲೇ ಇರಬೇಕಾಗುತ್ತದೆ.

ಸಾಮಾಜಿಕ ಕರ್ತೃಗಳಾಗುವ ಪ್ರಕ್ರಿಯೆ ಎಂದರೆ ಭಾಷೆಯನ್ನು ಕಲಿತು ಅದರಿಂದ ತನ್ನ ಸ್ಥಾನವನ್ನು ಗುರುತಿಸಿಕೊಳ್ಳುವುದು ಎಂದರ್ಥ. ಬ್ಲಾಕ್ ಮತ್ತು ಕವಾರ್ಡ್ ರು ಅಸ್ಮಿತೆ ಮತ್ತು ಅನುಭವಗಳು ಅರ್ಥದ ಉಗಮಗಳಲ್ಲ, ಅರ್ಥದಿಂದ ಇವೆರಡೂ ಹುಟ್ಟುತ್ತವೆ ಎಂದು ಹೇಳಿದ್ದರ ಅರ್ಥ ಇದೇ ಆಗಿದೆ. ‘‘ಭಾಷೆಯು ನಮ್ಮ ಸಾಧ್ಯತೆಗಳನ್ನೂ, ಮಿತಿಗಳನ್ನೂ ವ್ಯಾಖ್ಯಾನಿಸುತ್ತದೆ ಮತ್ತು ನಮ್ಮ ಕರ್ತೃತ್ವವನ್ನು ರಚಿಸುತ್ತದೆ’’ ಎಂಬ ಅವರ ಮಾತಿನ ಅರ್ಥ ಕೂಡಾ ಈ ನೆಲೆಯಲ್ಲೇ ಇದೆ.

ಮನೋವಿಶ್ಲೇಷಣೆ

ಬ್ಲಾಕ್ ಮತ್ತು ಕವಾರ್ಡ್‌ರು ಮನೋವಿಶ್ಲೇಷಣೆಯನ್ನು ಕುರಿತು ಹೇಳದಿದ್ದರೂ ಅವರು ಮನೋವಿಶ್ಲೇಷಣೆಯ ಸಿದ್ಧಾಂತಗಳನ್ನು ಒಳಗೊಳಗೇ ಬಳಸಿಕೊಂಡಿದ್ದಾರೆ. ಅದರಲ್ಲೂ ಕರ್ತೃತ್ವ ಎಂಬುದು ಭಾಷೆಯ ಮೂಲಕ ರಚನೆಗೊಳ್ಳುವ ಬಗ್ಗೆ ಲಕಾನ್ ಪ್ರಸ್ಥಾನವು ಹೇಳಿದ್ದನ್ನು ಇವರು ಅನುಸರಿಸಿದ್ದಾರೆ. ಇದು ಸೀಮಿಯಾಲಜಿ ಮತ್ತು ಆಧುನಿಕೋತ್ತರ ನೆಲೆಯ ಸ್ತ್ರೀವಾದಗಳಲ್ಲಿ ಒಂದು ಮುಖ್ಯ ವಿಷಯವಾಗಿರುವುದರಿಂದ ಈ ಬಗ್ಗೆಯೂ ಕೆಲವು ಮಾತುಗಳನ್ನು ಹೇಳಬೇಕಾಗಿದೆ.

ಸಮಕಾಲೀನ ಸ್ತ್ರೀವಾದಿಗಳು ಫ್ರಾಯ್ಡ್ ಮತ್ತು ಆತನ ಅನುಯಾಯಿಗಳ ಚಿಂತನೆಗಳಿಂದ ಏಕೆ ಇಷ್ಟೊಂದು ಪ್ರಭಾವಿತರಾಗಿದ್ದಾರೆ ಎಂದು ಕೇಳಬೇಕಾಗಿದೆ. ಮನೋವಿಶ್ಲೇಷಣೆಯು ಹೆಂಗಸರ ಬಗ್ಗೆ ದಮನಕಾರಿ ಧೋರಣೆಯನ್ನು ಹೊಂದಿದ್ದು, ಅವರು ಬಲಾತ್ಕಾರವಾಗಿ ನಿಷ್ಕ್ರಿಯತೆಯ ಸ್ಥಾನವನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ ಎಂಬ ಬಗ್ಗೆ ಯಾವ ಸಂಶಯವೂ ಇಲ್ಲ. ಅಲ್ಲದೆ, ಸಾಂಸ್ಕೃತಿಕವಾಗಿ ದತ್ತವಾದ ಹೆಣ್ಣುಪಾತ್ರವನ್ನು ಒಪ್ಪಿಕೊಳ್ಳುವ ಮೂಲಕ ಸ್ವಹಿಂಸೆಯನ್ನು ಮಾಡಿಕೊಳ್ಳುವಂತೆ ಒತ್ತಾಯಿಸುತ್ತದೆ. ಆದರೆ, ಲಕಾನ್ ಪ್ರಣೀತ ಮನೋವಿಶ್ಲೇಷಣೆಯ ಸಿದ್ಧಾಂತವು ಈಗ ಸ್ತ್ರೀವಾದಿಗಳಲ್ಲಿ ಜನಪ್ರಿಯವಾಗಿದೆ. ಏಕೆಂದರೆ, ಅಧೀನತೆಯು ನಮ್ಮ ವ್ಯಕ್ತಿತ್ವದಲ್ಲಿ ಅಂತಸ್ಥವಾಗುವ ಬಗೆಯನ್ನು ಲಕಾನ್ ಸಿದ್ಧಾಂತ ವಿವರಿಸುತ್ತದೆ. ಹೀಗೆ ಅಂತಸ್ಥಗೊಂಡ ಅಧೀನತೆಯು ಹೊರ ಆವರಣ ಬದಲಾದಾಗಲೂ ಹಾಗೆಯೇ ಇರುತ್ತದೆ ಎಂಬುದನ್ನೂ ಅಲ್ಲಿ ವಿವರಿಸಲಾಗಿದೆ. ಜಂಡರ್ ಅಸ್ಮಿತೆಗಳೂ ಸೇರಿದಂತೆ ನಮ್ಮ ಎಲ್ಲಾ ಅಸ್ಮಿತೆಗಳು ಮತ್ತು ನಮ್ಮ ಲೈಂಗಿಕ ಕಾಮನೆಗಳು (ನಮಗೇ ಅರಿವಿಲ್ಲದಂತೆ ಇವು ನಮ್ಮನ್ನು ಚಲನಶೀಲವಾಗಿಸುತ್ತವೆ.) ನಮ್ಮ ಎಳವೆಯಲ್ಲೇ ಕೌಟುಂಬಿಕ ಸಂಬಂಧಗಳೊಡನೆ ಹೆಣೆದುಕೊಳ್ಳುತ್ತವೆಂದು ಈ ಸಿದ್ಧಾಂತ ಹೇಳುತ್ತದೆ. ತಲೆಮಾರಿನಿಂದ ತಲೆಮಾರಿಗೆ ಸಾಮಾಜಿಕವಾಗಿ ಸ್ಥಿರಗೊಂಡ ಗಂಡು ಹೆಣ್ಣು ನೆಲೆಗಳು ಹೀಗೆ ದಾಟಿ ಬರುತ್ತವೆಂಬುದು ನಿಜವಿದ್ದರೆ, ಆಗ ಸ್ತ್ರೀವಾದಿಗಳಿಗೆ ಮನೋವಿಶ್ಲೇಷಣಾ ಸಿದ್ಧಾಂತಗಳು ಆಸಕ್ತಿದಾಯಕವಾಗಿರುವುದು ಸಹಜವೇ ಆಗಿದೆ.

ಮೊದಲೇ ಹೇಳಿದಂತೆ ಇದು ಆಧುನಿಕೋತ್ತರ ದೃಷ್ಟಿಕೋನದಲ್ಲೂ ಪ್ರಮುಖವಾಗಿದೆ. ಆಧುನಿಕೋತ್ತರ ಚಿಂತನೆಗಳು ಹೇಳುವಂತೆ ಕರ್ತೃ ಎಂಬುದು ಕೇಂದ್ರದಿಂದ ಪಲ್ಲಟಗೊಳ್ಳುತ್ತದೆ. (ಈ ನೆಲೆಯಲ್ಲಿ ಸೀಮಿಯಾಲಜಿ ಕೂಡಾ ಇದೇ ವಿವರಣೆಯನ್ನು ಒಪ್ಪುತ್ತದೆ.) ಜ್ಞಾನೋದಯದ ಯುಗದ ಪರಿಣಾಮವಾಗಿ ಕರ್ತೃ ವಿಶ್ವದ ಕೇಂದ್ರದಲ್ಲಿ ಸ್ಥಾಪಿತವಾಗಿದೆ. (ಆ ಯುಗಕ್ಕೂ ಮುನ್ನ ದೇವರು ಕೇಂದ್ರದಲ್ಲಿ ಇದ್ದು, ಆ ಬಳಿಕ ಆ ಸ್ಥಾನದಿಂದ ದೇವರನ್ನು ಚ್ಯುತಗೊಳಿಸಲಾಯಿತು. ಆ ಜಾಗದಲ್ಲಿ ‘‘ಮನುಷ್ಯ’’ ಬಂದನು. ಹಾಗಾಗಿಯೇ ಈ ಪ್ರಕ್ರಿಯೆಯನ್ನು ಮಾನವತಾವಾದ ಎನ್ನಲಾಗಿದೆ.) ಆಧುನಿಕೋತ್ತರರು ಮಾನವತಾವಾದದ ವಿರೋಧಿಗಳು. ಏಕೆಂದರೆ, ಮಾನವಜೀವಿಗಳನ್ನು ಅವರು ಪರಿಗ್ರಹಿಸಿರುವ ಬಗೆಯೇ ಬೇರೆ. ಇದಕ್ಕೆಲ್ಲಾ ಫ್ರಾಯ್ಡ್‌ನ ವಿಚಾರಗಳು ಆಧಾರವಾಗಿದೆ. ನಮಗೆಲ್ಲರಿಗೂ ವ್ಯಕ್ತಿತ್ವಗಳೂ ಅನುಭವಗಳೂ ಇವೆ ಎಂದೂ, ನಾವು ಏಕತ್ರಗೊಂಡ ಘಟಕಗಳೆಂದೂ ನಮ್ಮ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ಫ್ರಾಯ್ಡ್‌ನ ಪ್ರಕಾರ ನಮ್ಮ ವರ್ತನೆಗಳನ್ನೂ ರೂಪಿಸುವ ಮೂಲ ಸುಪ್ತಪ್ರಜ್ಞೆಯಾಗಿದೆ. ನಮ್ಮ ಪ್ರಜ್ಞಾಪೂರ್ವಕ ಚಿಂತನೆಗಳನ್ನು ನಮ್ಮ ಅರಿವಿಗೆ ಬಾರದ ಬಹು ನೆಲೆಯ ಶಕ್ತಿಗಳು ನಿಯಂತ್ರಿಸುತ್ತಿವೆ. ಹಾಗಾಗಿ ಜ್ಞಾನೋದಯ ಯುಗವು ರೂಪಿಸಿದಂತೆ ಮನುಷ್ಯ ಸ್ಥಿರ ಮತ್ತು ಬುದ್ದಿಪ್ರಧಾನ ಜೀವಿ ಎಂಬುದು ಭ್ರಮೆಯಾಗಿ ಬಿಡುತ್ತದೆ.

ಸರಿ. ಇದಕ್ಕೂ ಭಾಷೆಗೂ ಏನು ಸಂಬಂಧ? ಸಾಂಕೇತಿಕ ವ್ಯವಸ್ಥೆ(ಇದು ಲಕಾನ್ ಚಿಂತನೆ) ಎಂಬುದೇ ಈ ಸಂಬಂಧದ ನೆಲೆಗಟ್ಟು. ಸಂಸ್ಕೃತಿಯನ್ನು ವ್ಯಾಖ್ಯಾನಿಸುವ ಅರ್ಥಗಳು ಈ ಸಾಂಕೇತಿಕ ವ್ಯವಸ್ಥೆಯಿಂದ ಹುಟ್ಟಿಕೊಳ್ಳುತ್ತದೆ. ಅದರಿಂದ ನಮಗೆ ಕರ್ತೃ ಸ್ಥಾನದ ಸ್ವರೂಪ ಗೊತ್ತಾಗುತ್ತದೆ. ಈಗ ತಿಳಿದಿರುವಂತೆ ಭಾಷೆಯೇ ಈ ಸಾಂಕೇತಿಕ ವ್ಯವಸ್ಥೆಯಾಗಿದೆ. (ಸಸೂರ್ ಹೇಳುವ Langue) ‘‘ಸಾಮಾಜಿಕ ಎನ್ನುವ ಎಲ್ಲ ಚಟುವಟಿಕೆಗಳೂ ಭಾಷೆಯ ಮೂಲಕವೇ ನಡೆಯುವುದರಿಂದ, ಸಾಮಾಜಿಕ ವ್ಯಕ್ತಿಯು ರಚನೆಯಾಗುವುದೇ ಭಾಷೆಯಲ್ಲಿ ಎಂದು ಹೇಳುವುದು ಸರಿಯಾಗಿದೆ.’’ ಇಂದು ಕವಾರ್ಡ್ ಮತ್ತು ಎಲಿಸ್‌ರ ವಿವರಣೆ.

ಸಾಮಾಜಿಕ ವ್ಯಕ್ತಿಯೇ ಕರ್ತೃ- ಹೀಗೆಂದು ಹೇಳುವುದೇ ಶ್ಲೇಷೆಯಾಗಿದೆ. ಏಕೆಂದರೆ, ಸಾಮಾಜಿಕ ವ್ಯಕ್ತಿಯು ತನ್ನ ಗ್ರಹಿಕೆಗಳಿಗೆ ತಾನೇ ಕರ್ತೃವೂ ಆಗಿದ್ದು, ಕರ್ತೃವೆಂಬ ಪಾತ್ರವನ್ನೂ ನಿರ್ವಹಿಸಬೇಕಾಗಿದೆ. ಅಂದರೆ ಯಾರದೋ ಅಧಿಕಾರ ಚಲಾವಣೆಯ ಉಪಕರಣ ಆಗಬೇಕಾಗಿದೆ. ನಾವೆಲ್ಲರೂ ಭಾಷೆಯ ನಿಯಮಗಳಿಗೆ ಅಧೀನರು. ಈ ನಿಯಮಗಳು ನಾವು ಹುಟ್ಟುವುದಕ್ಕೆ ಮೊದಲೇ ಇದ್ದಂಥವು. ಸಸೂರ್ ಹೇಳುವಂತೆ ‘‘ಈ ನಿಯಮಗಳು ವ್ಯಕ್ತಿಯ ಹೊರಗಿರುತ್ತವೆ. ವ್ಯಕ್ತಿಯು ಅವುಗಳನ್ನು ತಾನೇ ಸೃಷ್ಟಿಸಲಾರ, ಇಲ್ಲವೇ ಬದಲಿಸಲಾರ.’’ ಮಕ್ಕಳಾಗಿದ್ದಾಗ ಈ ಸಾಂಕೇತಿಕ ವ್ಯವಸ್ಥೆಯಲ್ಲಿ ನಾವು ನೆಲೆಗೊಳ್ಳುವುದು ಒಂದು ಪ್ರಕ್ರಿಯೆ. ಈ ವ್ಯವಸ್ಥೆಯನ್ನು ಒಪ್ಪಿ ಅದರಲ್ಲಿ ನಮ್ಮ ಸ್ಥಾನವನ್ನು ಗುರುತಿಸಿಕೊಳ್ಳುತ್ತೇವೆ. ಆಗ ಮಾತ್ರ ಸಂಸ್ಕೃತಿಯ ಸದಸ್ಯರಾಗಿ ಇತರರೊಡನೆ ಮಾತಾಡಬಲ್ಲೆವು. ಹೀಗಾಗದಿದ್ದರೆ, ಅದರ ಪರಿಣಾಮವೇ ಮನೋವೈಕಲ್ಯ.

ಸ್ತ್ರೀವಾದಿ ಭಾಷಾಶಾಸ್ತ್ರಕ್ಕೆ ಇದು ನೀಡುವ ಕೊಡುಗೆಯನ್ನು ನೋಡೋಣ. ಮೊದಲನೆಯದಾಗಿ, ಕರ್ತೃತ್ವ, ಅಸ್ಮಿತೆ ಮತ್ತು ಲೈಂಗಿಕತೆಗಳು ಹೇಗೆ ರಚನೆಯಾಗುತ್ತವೆ ಎಂಬುದನ್ನು ಸ್ತ್ರೀವಾದಿಗಳು ಅರ್ಥ ಮಾಡಿಕೊಳ್ಳಬೇಕು. ಇದೆಲ್ಲವೂ ಭಾಷೆಯ ಮೂಲಕ ರಚಿತವಾಗುತ್ತವೆಂದು ಲಕಾನ್ ಸಿದ್ಧಾಂತ ಹೇಳುತ್ತದೆ. ಹುಡುಗಿಯರು ಮತ್ತು ಹುಡುಗರು ಈ ಸಾಂಕೇತಿಕ ವ್ಯವಸ್ಥೆಯೊಳಗೆ ಭಿನ್ನವಾಗಿ ಪ್ರವೇಶ ಪಡೆಯುವುದೇ ಇದಕ್ಕೆ ಕಾರಣ. ಅಂದರೆ, ಸ್ತ್ರೀವಾದಿಗಳಿಗೆ ಭಾಷೆ ಮತ್ತು ಭಾಷಾಶಾಸ್ತ್ರಗಳು ಮುಖ್ಯವಾಗುತ್ತವೆ.

ಈ ತಿಳುವಳಿಕೆಯ ಬಳಿಕ ನಿಜವಾಗಿ ಸ್ತ್ರೀವಾದಿಗಳು ಪರಿಸ್ಥಿತಿಯನ್ನು ಬದಲು ಮಾಡಲು ಏನು ಮಾಡಬಹುದು ಎಂಬ ಚರ್ಚೆ ಮೊದಲಾಗಬೇಕು. ಲಕಾನ್ ನಿರೂಪಿಸುವ ಜಂಡರ್‌ಯುಕ್ತ ಕರ್ತೃತ್ವ ಮತ್ತು ಆ ಕರ್ತೃತ್ವಗಳಿಗೆ ಲಭಿಸಿರುವ ಮೌಲ್ಯಗಳನ್ನು ಗಮನಿಸಿದರೆ ಗಂಡುಕರ್ತೃತ್ವ ಸಹಜ ಮತ್ತು ಪ್ರಮಾಣವೆಂದೂ, ಮತ್ತು ಹೆಣ್ಣುಕರ್ತೃತ್ವ ಅಂಚಿನ ನೆಲೆಯದ್ದೆಂದೂ ತಿಳಿದಿರುವುದು ಸ್ತ್ರೀವಾದಿಗಳಿಗೆ ಸಮ್ಮತವಲ್ಲದ ಮಾತು. ಅದರಲ್ಲೂ ಇದು ಸಾಮಾಜಿಕ ಮನ್ನಣೆಯನ್ನು ಪಡೆದರಂತೂ ಎಂದೆಂದೂ ಬದಲಾಗದ್ದು ಎಂಬ ಹಣೆಪಟ್ಟಿ ಅಂಟಿಕೊಳ್ಳುತ್ತದೆ.

ಕರ್ತೃತ್ವ ನೆಲೆಗೊಳ್ಳುವ ಪ್ರಕ್ರಿಯೆಯನ್ನು ಬದಲಿಸುವ ಒಂದು ಬಗೆ ಎಂದರೆ, ಅದು ಕ್ರಿಯಾಶೀಲವಾಗುವ ಕೌಟುಂಬಿಕ ಸಂಬಂಧಗಳನ್ನು ಬದಲಿಸುವುದು. ನ್ಯಾನ್ಸಿ, ಚೊಡೊಕಾರಂತಹ ಲಕಾನ್ ವಾದದ ವಿರೋಧಿಗಳು ಇದನ್ನೇ ಹೇಳುತ್ತಾರೆ. ತಾಯಂದಿರಂತೆ ತಂದೆಯರೂ ಕೂಡಾ ಮಕ್ಕಳೊಡನೆ ಪಾಲನೆಯ ಬಂಧಗಳನ್ನು ಕಟ್ಟಿಕೊಳ್ಳಬೇಕು. ಇದರಿಂದ ತಾಯಿಯು ಎಲ್ಲರ ಭಾವುಕ ಕೇಂದ್ರವಾಗುವ, ತಂದೆಯು ಅಧಿಕಾರದ ನೆಲೆಯಾಗುವ ಮನೋವಿಶ್ಲೇಷಣಾತ್ಮಕ ನಿರೂಪಣೆಗಳು ಬದಲಾಗುತ್ತವೆ.

ಆದರೆ, ಲಕಾನ್ ಭಾಷಿಕನೆಲೆಯ ಮೇಲೆ ಒತ್ತು ಕೊಡುತ್ತಾನೆ. ಕರ್ತೃತ್ವವು ಭಾಷೆಯಲ್ಲಿ ರಚನೆಯಾಗುವ ಬಗೆಯನ್ನು ಬದಲಿಸಿದರೆ, ಕರ್ತೃತ್ವದ ರಚನೆಗಳೂ ಬದಲಾಗಬಹುದು. ಇದೆಲ್ಲ ಸಂಭವಿಸಲು ಭಾಷೆಯಲ್ಲಿ ಕ್ರಾಂತಿಯೇ ಆಗಬೇಕು. ಅದಾಗುವವರೆಗೆ ಕೊನೆಯಪಕ್ಷ ಅಂಚಿನ ಕರ್ತೃತ್ವಕ್ಕೂ ಬೆಲೆಯುಂಟೆಂದು ಸಾಧಿಸುವುದೂ ಕೂಡಾ ಒಂದು ತಂತ್ರವಾಗಬಹುದು. ಲಕಾನ್ ಸಿದ್ಧಾಂತಗಳನ್ನು ಅನುಸರಿಸಿ ತಮ್ಮ ಭಾಷಾ ತತ್ವಗಳನ್ನು ರೂಪಿಸಿಕೊಂಡ ಸ್ತ್ರೀವಾದಿಗಳು, ಹೆಂಗಸರು ತಾವು ಗಂಡಸರಿಂದ ಹೇಗೆ ಭಿನ್ನ ಎಂಬುದನ್ನು ತೋರಿಸಿಕೊಡುವ ಮತ್ತು ತಮ್ಮ ಭಿನ್ನತೆಯನ್ನೇ ಮೆಚ್ಚಿಕೊಳ್ಳುವ ಬಗೆಯಲ್ಲಿ ಮಾತಾಡಬೇಕು, ಬರೆಯಬೇಕು ಎಂದು ಹೇಳುತ್ತಾರೆ. ಇದನ್ನು ‘‘ದೇಹ ವೈಭವೀಕರಣ’’ ಎಂದು ಕೆಲವರು ಕರೆದಿದ್ದಾರೆ. ಹೀಗೆ ನಂಬುವುದರಿಂದ ಹೆಂಗಸರು ಮುಖ್ಯ ಧಾರೆಯಲ್ಲಿ ಇಲ್ಲದಿದ್ದರೂ, ತಮ್ಮದೇ ಆದ ಬಗೆಯಲ್ಲಿ ತಮ್ಮ ನೆಲೆಗಳನ್ನು ಮುಂದಿಡಬಹುದಾಗಿದೆ.

ಕಳೆದ ಕೆಲವು ದಶಕಗಳಲ್ಲಿ ಸ್ತ್ರೀವಾದಿಗಳು ಈ ಬಗ್ಗೆ ದೊಡ್ಡ ಚರ್ಚೆಯನ್ನೇ ಮಾಡಿದ್ದಾರೆ. ಲಕಾನ್ ಮಾದರಿಯು ಸ್ತ್ರೀವಾದ ಮತ್ತು ಸ್ತ್ರೀವಾದಿ ಭಾಷಾಶಾಸ್ತ್ರಕ್ಕೆ ಎಷ್ಟು ಅಗತ್ಯ ಎಂಬುದನ್ನು ಮುಂದೆ ಚರ್ಚಿಸುತ್ತೇನೆ. ಬಳಿಕ ಇಬ್ಬರು ಭಿನ್ನ ಸ್ತ್ರೀವಾದಿ ಚಿಂತಕರಾದ ಲೂಸ್ ಇರಿಗೆರೆ ಮತ್ತು ಜ್ಯೂಲಿಯಾ ಕ್ರಿಸ್ತೀವಾ ಇವರು ಲಕಾನ್ ಅನ್ನು ಹೇಗೆ ಅಳವಡಿಸಿಕೊಂಡಿದ್ದಾರೆ ಎಂಬುದನ್ನೂ ಚರ್ಚಿಸುತ್ತೇನೆ.

ಲಕಾನ್

ಸಸೂರ್ ಪ್ರಣೀತ ಭಾಷಾಮಾದರಿಯನ್ನು ಅನುಸರಿಸಿದ ಲಕಾನ್ ಈ ಸಾಂಕೇತಿಕ ವ್ಯವಸ್ಥೆಯಲ್ಲಿ ಮಕ್ಕಳು ತಮ್ಮ ಸ್ಥಾನವನ್ನು ಕಂಡುಕೊಳ್ಳುವ ಕ್ರಮವನ್ನು ವಿವರಿಸಿದ್ದಾನೆ. ಹೀಗೆ ಸ್ಥಾನ ಕಂಡುಕೊಂಡು ಸಮಾಜದ ಸದಸ್ಯರಾಗಿ ಮನುಷ್ಯ ಜೀವಿಗಳಾಗುತ್ತಾರೆ. ಹಲವು ಹಂತಗಳ ಈ ಪ್ರಕ್ರಿಯೆಯನ್ನು ಆತ ‘ಭಗ್ನತೆ’ ಎನ್ನುತ್ತಾನೆ. ಮೊದಲು ಮಗು ತಾಯಿಯ ದೇಹದಿಂದ ಬೇರೆಯಾಗಿ ತಾನು ಸ್ವತಂತ್ರ ಘಟಕವೆಂಬ ನೆಲೆಗೆ ಬರಬೇಕು. (ಲಕಾನ್ ಇದನ್ನು ‘ಕನ್ನಡಿ ಹಂತ’ ಎನ್ನುತ್ತಾನೆ. ಈ ಹಂತದಲ್ಲಿ ಮಗು ತಾನು ಕಂಡದ್ದೆಲ್ಲ ತನ್ನದೇ ಬಿಂಬವೆಂದುಕೊಳ್ಳುತ್ತದೆ.) ಜೊತೆಗೆ, ತನಗೂ(ನಾನು) ಮತ್ತು ತನ್ನೆದುರಿಗೆ ಇರುವವರಿಗೂ (ನೀನು) ಹಾಗೂ ಯಾರನ್ನು ಕುರಿತು ಮಾತಾಡುತ್ತೇವೆಯೋ ಅವರಿಗೂ (ಅವಳು/ನು) ಇರುವ ವ್ಯತ್ಯಾಸಗಳನ್ನು ಅರಿತುಕೊಳ್ಳಬೇಕು. ಭಾಷೆಯ ಕಟ್ಟುಗಳನ್ನು ಅರಿತಾಗಲೇ ಈ ಕೊನೆಯ ಹಂತದ ಒಡೆಯುವಿಕೆ ಸಾಧ್ಯ. ಅಂದರೆ, ಭಾಷೆಯ ಕಲಿಕೆಯಲ್ಲಿ ವ್ಯಕ್ತೀಕರಣ ಮತ್ತು ಸಾಮಾಜೀಕರಣಗಳು ಒಟ್ಟಿಗೆ ನಡೆಯುತ್ತವೆ.

ಸ್ತ್ರೀವಾದಿ ದೃಷ್ಟಿಕೋನಕ್ಕೆ ಮುಖ್ಯವೆನಿಸುವ ಸಂಗತಿಯೆಂದರೆ, ಗಂಡು ಮತ್ತು ಹೆಣ್ಣು ಮಕ್ಕಳು ಈ ಸಾಂಕೇತಿಕ ವ್ಯವಸ್ಥೆಯೊಳಗೆ ಭಿನ್ನವಾಗಿ ಪ್ರವೇಶ ಪಡೆಯುತ್ತಾರೆಂದು ಲಕಾನ್ ಹೇಳಿದ್ದು. ಹೀಗೆ ಭಿನ್ನವಾಗಲು ಶಿಶ್ನವೇ ಕಾರಣ. ಇಡೀ ವ್ಯವಸ್ಥೆಯನ್ನು ಆಳುವ ಸಂಕೇತವಿದು. ಲೈಂಗಿಕ ವ್ಯತ್ಯಾಸಗಳನ್ನು ಗುರುತಿಸುವ ನೆಲೆಯೂ ಹೌದು.

ಸಾಂಕೇತಿಕ ವ್ಯವಸ್ಥೆಯನ್ನು ಶಿಶ್ನವು ಆಳುವುದೇಕೆ ಎಂಬುದನ್ನು ತಿಳಿಯಲು, ಶಿಶುವಿನ ಮನೋಲೈಂಗಿಕ ಬೆಳವಣಿಗೆಯ ಬಗ್ಗೆ ಫ್ರಾಯ್ಢ್ ಹೇಳಿದ್ದನ್ನು ತಿಳಿಯಬೇಕು. ಫ್ರಾಯ್ಡ್ ಪ್ರಕಾರ ಲೈಂಗಿಕತೆ ಎಂಬುದು ನಮನಶೀಲವಾದುದು. ಯಾವ ಲಿಂಗ, ಇಲ್ಲವೇ ಲೈಂಗಿಕ ತೃಪ್ತಿ ಹೇಗೆ ಸಾಧಿತವಾಗಬೇಕು ಎಂಬ ಬಗ್ಗೆ ಸಿದ್ಧ ನಿಯಮಗಳಿಲ್ಲ. ಆದರೆ, ಮಾನವ ಬದುಕಿಗೆ ಪ್ರಜನನ ಲೈಂಗಿಕತೆ ಅಗತ್ಯವಾದ್ದರಿಂದ ಶಿಶುವು ತನ್ನ ಆಯ್ಕೆಗಳನ್ನು ಕಿರಿದುಗೊಳಿಸುತ್ತಾ ಹೋಗಿ, ಕೊನೆಗೆ ಗಂಡು ಇಲ್ಲವೇ ಹೆಣ್ಣು ಎಂಬ ಲಿಂಗಭೇದಕ್ಕೆ ನೆಲೆಗೊಳ್ಳುತ್ತದೆ. ಜೊತೆಗೆ ಈ ಎರಡು ಸಾಧ್ಯತೆಗಳು ಒಂದಕ್ಕೊಂದು ವಿರುದ್ಧವೆಂಬ ನೆಲೆಯೂ ತಲೆದೋರುತ್ತದೆ.

ಈ ಪ್ರಕ್ರಿಯೆಯು ಶಿಶು ಮತ್ತು ಪಾಲಕರ ನಡುವೆ ಮೈದಳೆಯುವ ಉದ್ವಿಗ್ನಮಯವಾದ ಸಂಬಂಧದಲ್ಲಿ ಆಕಾರ ಪಡೆಯುತ್ತದೆ ಎಂದು ಫ್ರಾಯ್ಡ್ ಹೇಳಿದನು. ತನ್ನ ‘‘ರೋಗಿ’’ಗಳ ಅನುಭವಗಳನ್ನು ವ್ಯಾಖ್ಯಾನಿಸುತ್ತಾ ‘‘ಈಡಿಪಸ್ ಕಾಂಪ್ಲೆಕ್ಸ್ ’’ ಎಂಬ ಪರಿಕಲ್ಪನೆಯನ್ನು ಮುಂದಿಟ್ಟನು. ಈ ಕಾಂಪ್ಲೆಕ್ಸ್‌ನಿಂದಾಗಿ ಶಿಶುವು ತಾಯಿಯನ್ನು ‘‘ಬಯಸು’’ತ್ತದೆ. ತನ್ನ ತಾಯಿಯ ಒಲವಿನಲ್ಲಿ ಭಾಗೀದಾರನಾಗುವ ತಂದೆಯ ಬಗ್ಗೆ ಕ್ರೋಧತಪ್ತವಾಗುತ್ತದೆ. ಈ ಇಕ್ಕಟ್ಟಿನಿಂದ ಪಾರಾಗಲು ಶಿಶ್ನಭಗ್ನತೆಯ ಕಾಂಪ್ಲೆಕ್ಸ್‌ಗೆ ಒಳಗಾಗಬೇಕಾಗುತ್ತದೆ. ಈಗ ಲೈಂಗಿಕ ನೆಲೆಯ ಭೇದಗಳು ಸ್ಥಿರಗೊಳ್ಳುತ್ತವೆ. ಹುಡುಗರು ತಂದೆಯು ತಮ್ಮನ್ನು ಶಿಕ್ಷಿಸುವನೆಂಬ ಭಯದಿಂದ ತಾಯಿಯ ಬಗ್ಗೆ ತಮಗಿರುವ ನಿಷಿದ್ಧ ಬಯಕೆಯನ್ನು ಬಿಟ್ಟು ಕೊಡುತ್ತಾರೆ. ತಮ್ಮಂತೆ ಶಿಶ್ನವಿರುವ ತಂದೆಯೊಡನೆ ತಮ್ಮನ್ನು ಗುರುತಿಸಿಕೊಂಡು ದಿನ ಕಳೆದಂತೆ ಅವನ ಅಧಿಕಾರ ಸ್ಥಾನವನ್ನು ಆರೋಪಿಸಿಕೊಳ್ಳುತ್ತಾರೆ. ಹುಡುಗಿಯರಾದರೋ ತಾವು ಈಗಾಗಲೇ ‘‘ಶಿಶ್ನರಹಿತ’’ರೆಂಬ ಅರಿವನ್ನು ಪಡೆದು ‘‘ಹೆಣ್ಣು’’ಗಳಾಗುತ್ತಾರೆ. ಕೊನೆಗೆ ಮಕ್ಕಳನ್ನು ಪಡೆಯುವ ಮೂಲಕ ಬಾಲ್ಯದಲ್ಲಿ ಇಲ್ಲದಿದ್ದ ಶಿಶ್ನವನ್ನು ಪಡೆದುಕೊಳ್ಳುತ್ತಾರೆ. ಗಂಡಾಗಲೀ ಹೆಣ್ಣಾಗಲೀ, ಮಕ್ಕಳು ಇಂಥ ಪ್ರಕ್ರಿಯೆಯನ್ನು ಅನುಭವಿಸಿಯೇ ತಮ್ಮ ಲಿಂಗಚಹರೆಯನ್ನು ಪಡೆದುಕೊಳ್ಳಬೇಕು.

ಲಕಾನ್ ಈ ನಿರೂಪಣೆಯನ್ನು ವಾಸ್ತವವೆಂದು ತಿಳಿಯದೆ ಸಾಂಕೇತಿಕ ನೆಲೆಯಲ್ಲಿ ವ್ಯಾಖ್ಯಾನಿಸುತ್ತಾನೆ. ಆತ ಹೇಳುವಂತೆ ಶಿಶ್ನ ಎಂಬುದು ಒಂದು ಮಾಂಸದ ತುಂಡು ಅಲ್ಲ. ಅದು ಲಿಂಗ. ಅದು ಪುರುಷತ್ವದ ಸಾಂಸ್ಕೃತಿಕ ಚಿಹ್ನೆ. ಸಂಸ್ಕೃತಿಯ ನಿಯಮಗಳು ಆಯ್ಕೆಗಳನ್ನು ಮಾಡಿಕೊಳ್ಳುವಂತೆ ಒತ್ತಾಯಿಸುತ್ತವೆ. ಲಿಂಗಯುಕ್ತ ಇಲ್ಲವೇ ಲಿಂಗರಹಿತ ಎಂಬುದಷ್ಟೇ ಆಯ್ಕೆ. ಇದು ದೇಹರಚನೆಗೆ ಸಂಬಂಧಿಸಿದ್ದಲ್ಲ. ಶಿಶ್ನವಿರಲಿ, ಇಲ್ಲದಿರಲಿ, ಲಿಂಗಯುಕ್ತ ಆಗಿರುವುದು ಒಂದು ಸಾಧ್ಯತೆ. ಅಂಥವರು ದೈಹಿಕವಾಗಿ ಏನೇ ಆಗಿದ್ದರೂ ಜಂಡರ್‌ಯುಕ್ತ ಕರ್ತೃ ಸ್ಥಾನವನ್ನು ಆರೋಪಿಸಿಕೊಳ್ಳಬಹುದು. ಆದರೆ, ಶಿಶ್ನಭಗ್ನತೆಯ ಕಾಂಪ್ಲೆಕ್ಸ್‌ನಿಂದಾಗಿ ಯಾವುದಾದರೊಂದು ಲಿಂಗಚಹರೆಯನ್ನು ಆಯ್ದುಕೊಳ್ಳುವುದು ಅನಿವಾರ್ಯವಾಗುತ್ತದೆ.

ಇದಕ್ಕೂ ಮೊದಲು ಶಿಶುವು ಸಾಂಕೇತಿಕ ವ್ಯವಸ್ಥೆಯಲ್ಲಿ ಪ್ರವೇಶ ಪಡೆಯದೆ ಒಂದು ಕಾಲ್ಪನಿಕ ಅವಸ್ಥೆಯಲ್ಲಿರುತ್ತದೆ ಎಂದು ಲಕಾನ್ ವಾದಿಸುತ್ತಾನೆ. ಈ ಹಂತದಲ್ಲಿ ಶಿಶುವು ತಾಯಿಯ ದೇಹದೊಡನೆ ಒಂದಾಗಿರುವುದರಿಂದ ಅದಕ್ಕೆ ಕೊರತೆ, ಪೂರ್ಣತೆ, ಭಿನ್ನತೆ, ಅಸಂತೃಪ್ತತೆ, ಇವು ಯಾವುವೂ ಇರುವುದಿಲ್ಲ. ತಾಯಿ ಮಗುವಿನ ಜೋಡಿ ಭಗ್ನವಾದಾಗಲೇ ಲಿಂಗವೆಂಬ ಸಂಕೇತದಿಂದಾಗಿ ಹೊಸ ಭಯಗಳು ಹುಟ್ಟಿಕೊಳ್ಳುತ್ತವೆ.

ಈ ಪರಿಸ್ಥಿತಿಯಿಂದಾಗಿ ಶಿಶುವಿನಲ್ಲಿ ಲಿಂಗದ ಬಗ್ಗೆ ಎರಡು ಶಕ್ತಿಯುತ ಅರ್ಥ ಪರಂಪರೆಗಳು ಹುಟ್ಟಿಕೊಳ್ಳುತ್ತವೆ. ಮೊದಲನೆಯದು ‘ಕೊರತೆ’. ಇದು ತಾಯಿಯ ದೇಹವನ್ನು ಕಳೆದುಕೊಂಡ ಭಾವ. ಮಾತೃ ಗಮನದ ನಿಷಿದ್ಧತೆ ಮತ್ತು ತಂದೆಯ ಭಯದಿಂದಾಗಿ ತಾಯಿ ಮಗುವಿನ ನಡುವೆ ಮೊದಲಿನ ಸಂಬಂಧ ಮರಳಲಾರದು. ಎರಡನೆಯದಾಗಿ, ಲಿಂಗವು ನಿಷೇಧಗಳನ್ನು ಮತ್ತು ಅದರಿಂದ ಮಗುವು ಅನುಭವಿಸುವ ದಿಗಿಲನ್ನು ಸಂಕೇತಿಸುತ್ತದೆ. ಇದು ವಾಸ್ತವವಾಗಿ ಸಾಮಾಜಿಕ ನೆಲೆಯ ನಿಯಮಗಳನ್ನು ಸೂಚಿಸುತ್ತದೆ. ಪರೋಕ್ಷವಾಗಿ ಪಿತೃಪ್ರಧಾನತೆಯ ನೆಲೆಯನ್ನು ಬಿಂಬಿಸುತ್ತದೆ.

ಈ ಎರಡೂ ಪರಿಕಲ್ಪನೆಗಳೊಡನೆ, ಅಂದರೆ ಕೊರತೆ ಇಲ್ಲವೇ ಬಯಕೆ, ಮತ್ತು ನಿಯಮ ಇಲ್ಲವೇ ಅಧಿಕಾರಗಳೊಡನೆ, ಭಾಷೆಗೆ ಸಂಬಂಧವಿದೆ ಎಂದು ಲಕಾನ್ ಹೇಳುತ್ತಾನೆ. ಒಂದು ಪದ, ಯಾವಾಗ ಇಲ್ಲದಿರುವ ಇಲ್ಲವೇ ಕೊರತೆಯಾಗಿರುವ ಸಂಗತಿಯನ್ನು ಸೂಚಿಸುತ್ತದೋ ಆ ಪದ ಮಾತ್ರ ಮಗುವಿನ ಗ್ರಹಿಕೆಗೆ ದಕ್ಕುತ್ತದೆ ಎನ್ನಲಾಗಿದೆ. ಮಾತೃದೇಹದೊಡನೆ ಇದ್ದ ಕಾಲ್ಪನಿಕ ಹಂತದಲ್ಲಿ ಸಾಂಕೇತಿಕ ನೆಲೆಯ ಭಾಷೆಯ ಅಗತ್ಯವಿಲ್ಲ. ಏಕೆಂದರೆ ಅಲ್ಲಿ ಕೊರತೆಯೇ ಇಲ್ಲ. ಈ ಕಾರಣದಿಂದ ಸಾಂಕೇತಿಕ ವ್ಯವಸ್ಥೆಯು ಲಿಂಗದ ಅಧಿಕಾರಕ್ಕೆ ಒಳಪಟ್ಟಿದೆ ಎಂದು ಲಕಾನ್ ವಾದಿಸುತ್ತಾನೆ. ತಾಯಿಯ ದೇಹದ ಕೊರತೆಯ ಜೊತೆಗೆ ತಂದೆಯ ಅಧಿಕಾರ ಬೆರೆತಾಗ ಭಾಷೆ ಅಗತ್ಯವಾಗುತ್ತದೆ.

ಸ್ತ್ರೀವಾದಿ ನೆಲೆಯಿಂದ ಈ ವಿವರಣೆಯನ್ನು ನೋಡೋಣ. ಫ್ರಾಯ್ಡ್‌ನ ಸಿದ್ಧಾಂತಗಳನ್ನು ಈಗಾಗಲೇ ಲೈಂಗಿಕತಾರತಮ್ಯ ಮತ್ತು ಶಿಶ್ನಕೇಂದ್ರಿತ ಎಂಬ ಟೀಕೆಗಳಿಂದ ಬಡಿದು ಹಾಕಲಾಗಿದೆ. ಆದರೆ ಲಕಾನ್ ಶಿಶ್ನವನ್ನು ಲಿಂಗವೆಂಬ ಸಂಕೇತಕ್ಕೆ ಪರಿವರ್ತಿಸಿ ಇಂಥ ಟೀಕೆಗಳಿಗೆ ಹೊರತಾಗಿದ್ದಾನೆಂದು ಅವನ ಅನುಯಾಯಿಗಳು ಹೇಳುತ್ತಾರೆ. ಅವರ ವಾದವನ್ನು ನಾವು ಒಪ್ಪಬಹುದೇ?

ಗಂಡಿನ ಶಿಶ್ನಭಗ್ನತೆಯ ಭಯ ಮತ್ತು ಹೆಣ್ಣಿಗಿರುವ ಶಿಶ್ನದ್ವೇಷಗಳನ್ನು ಮನೋವಿಶ್ಲೇಷಣಾತ್ಮಕ ಸಿದ್ಧಾಂತದಲ್ಲಿ ಸುಪ್ತ ಕಲ್ಪನೆಗಳಿಂದ ತಿಳಿಯಲಾಗಿದೆಯೇ ಹೊರತು, ಎಚ್ಚರದ, ತಿಳಿವಿಗೆ ಬರುವ ನಂಬಿಕೆಗಳಿಂದಲ್ಲ. ಈ ಕಲ್ಪನೆಗಳು ಲಿಂಗ ನಿರ್ಧಾರಗೊಳ್ಳುವಾಗ ಬೇರೆ ರಚನೆಗಿಂತಲೂ ಮಿಗಿಲಾಗಿ ಪಾತ್ರ ನಿರ್ವಹಿಸುತ್ತವೆ. ಕೆಲವು ಫ್ರಾಯ್ಡ್ ಅನುಯಾಯಿಗಳು ಈ ಕಲ್ಪನೆ ಮತ್ತು ದೇಹರಚನೆ ಎರಡೂ ಬೇರೆ ಬೇರೆ ಎಂದಿದ್ದಾರೆ. ಒಂದು ಇನ್ನೊಂದರ ಪ್ರತಿಬಿಂಬದಂತೆಯೂ ವರ್ತಿಸಬಹುದು. ಶಿಶ್ನವುಳ್ಳ ಹುಡುಗರು ಅದು ಇಲ್ಲದವರನ್ನು ಕಂಡಾಗ ತಾವೂ ಅದನ್ನು ಕಳೆದುಕೊಳ್ಳಬಹುದೆಂಬ ಭಯಕ್ಕೆ ತುತ್ತಾಗುತ್ತಾರೆ. ಅದಿಲ್ಲದ ಹುಡುಗಿಯರು ಅದಿರುವವರನ್ನು ಕಂಡಾಗ ತಮಗೂ ಅದು ಲಭಿಸಬಹುದೆಂದುಕೊಳ್ಳುತ್ತಾರೆ.