ಭಾಷೆ ಎಂಬುದು ಒಂದು ವ್ಯವಸ್ಥೆ. ಅದನ್ನು ಬಳಸಿ ಸಂವಹನ ಕ್ರಿಯೆಗಳಲ್ಲಿ ತೊಡಗುತ್ತೇವೆ.  ಈ ಭಾಷೆಯನ್ನು ಕುರಿತು ಅಧ್ಯಯನ ಮಾಡುವ ವಲಯವೇ ಭಾಷಾಶಾಸ್ತ್ರ. ಭಾಷಾ ಮಾನವಶಾಸ್ತ್ರ ಮತ್ತು ಸಾಮಾಜಿಕ ಭಾಷಾಶಾಸ್ತ್ರ ವಲಯಗಳು ಸಂವಹನ ವಿಧಾನಗಳನ್ನು ಹೆಚ್ಚು ವ್ಯಾಪಕ ನೆಲೆಯಲ್ಲಿ ಪರಿಶೀಲಿಸುತ್ತವೆ. ಭಾಷೆ ಮತ್ತು ಜಂಡರ್‌ಗಳ ಸಂಬಂಧವನ್ನು ಈ ವ್ಯಾಪಕ ನೆಲೆಯಲ್ಲೇ ಪರಿಗಣಿಸಬೇಕಾಗಿದೆ.

ಹಲವು ಭಾಷಾಶಾಸ್ತ್ರಜ್ಞರು ವ್ಯಕ್ತಿಗೆ ಇರುವ ಭಾಷಾ ಸಾಮರ್ಥ್ಯವನ್ನು ಆ ವ್ಯಕ್ತಿ ತಾನೇ ಏನನ್ನಾದರೂ ಹೇಳುವ ಮತ್ತು ಇತರರು ಹೇಳಿದ್ದನ್ನು ಅರಿತುಕೊಳ್ಳುವ ಸಾಮರ್ಥ್ಯ ಎಂದು ವಿವರಿಸುತ್ತಾರೆ. ಉದಾಹರಣೆಗೆ The cat chased the rat ಎಂಬುದು ಒಂದು ಇಂಗ್ಲಿಶ್ ವಾಕ್ಯ(ಅದಕ್ಕೊಂದು ಗೊತ್ತಾದ ಅರ್ಥವೂ ಇದೆ). ಆದರೆ cat the rat chased ಎನ್ನುವುದು ವಾಕ್ಯವೂ ಅಲ್ಲ, ಅದಕ್ಕೆ ಅರ್ಥವೂ ಇಲ್ಲ. ಸಾಮಾಜಿಕ ಭಾಷಾಶಾಸ್ತ್ರಜ್ಞರು ಮತ್ತು ಭಾಷಾ ಮಾನವ ಶಾಸ್ತ್ರಜ್ಞರು ವ್ಯಕ್ತಿಗೆ ಒಂದು ಭಾಷೆಯ ವ್ಯಾಕರಣ ನಿಯಮಗಳು ತಿಳಿದಿರುವುದಷ್ಟೇ ಆ ವ್ಯಕ್ತಿ ಭಾಷೆಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಭಾಗಿಯಾಗಲು ಸಾಕಾಗುವುದಿಲ್ಲ ಎಂದು ತಿಳಿಯುತ್ತಾರೆ. ಇಂಥ ವ್ಯವಹಾರಗಳಲ್ಲಿ ತೊಡಗುವ ಜನರು ಅನುಸರಿಸುವ ಪದ್ಧತಿಗಳು ಕೂಡಾ ಗೊತ್ತಿರಬೇಕಾಗುತ್ತದೆ. ಜನರು ಭಾಷಿಕ ಸಾಮರ್ಥ್ಯವನ್ನು ಬಳಸುತ್ತಾ ಅದನ್ನು ಪಡೆದುಕೊಳ್ಳುತ್ತಾರೆ. ಈ ಸಾಮರ್ಥ್ಯವನ್ನು ಪಡೆಯುವಾಗಲೇ ಸಾಮಾಜಿಕ ಸಂದರ್ಭಗಳಲ್ಲಿ ಅದನ್ನು ಹೇಗೆ ಬಳಸಬೇಕೆಂಬುದನ್ನು ಕೂಡಾ ಕಲಿಯುತ್ತಾರೆ. ಅಂದರೆ, ಜನ ಕಲಿಯುವುದು ಕೇವಲ ಭಾಷಿಕ ಸಾಮರ್ಥ್ಯವನ್ನು ಮಾತ್ರವಲ್ಲ. ಅದರೊಡನೆ ಸಂವಹನ ಸಾಮರ್ಥ್ಯವನ್ನೂ ಅವರು ಕಲಿಯುತ್ತಾರೆ (ಗಂಫರ್ಜ್ ಮತ್ತು ಹೈನ್ಸ್-೧೯೭೨). ನಾವೀಗ ಭಾಷೆಯನ್ನು ಕುರಿತ ಚರ್ಚೆಗೆ ಅನುಕೂಲವಾಗುವ ಕೆಲವು ಪರಿಕಲ್ಪನೆಗಳನ್ನು ತಿಳಿಯೋಣ. ಮೊದಲು ಭಾಷಿಕ ವ್ಯವಹಾರಗಳ ಸಾಮಾಜಿಕ ನೆಲೆ ಗಳನ್ನು, ಆ ಬಳಿಕ ಭಾಷಾ ವ್ಯವಸ್ಥೆಯನ್ನು ಅರಿಯಲು ತೊಡಗಬಹುದು.

ಮೊದಲಿಗೆ, ಗಮನಿಸಬೇಕಾದ ಸಂಗತಿಯೊಂದಿದೆ. ಭಾಷೆಯಾಗಲೀ ಸಾಮಾಜಿಕ ವಲಯವಾಗಲೀ ಸಿದ್ಧರೂಪದಲ್ಲಿ ದೊರಕುವುದಿಲ್ಲ, ಹಾಗೆಯೇ ಭಾಷೆಯಾಗಲೀ, ಸಾಮಾಜಿಕ ವಲಯವಾಗಲೀ ಎಂದೂ ಬದಲಾಗದ ಸಂಗತಿಗಳೂ ಅಲ್ಲ. ವಿವರಣೆಯ ಉದ್ದೇಶದಿಂದ ಭಾಷೆ ಮತ್ತು ಸಮಾಜಗಳನ್ನು ಬೇರೆ ಬೇರೆಯಾಗಿ ಹಾಗೂ ಸ್ಥಿರವಾಗಿ ಇರುವ ವ್ಯವಸ್ಥೆಗಳೆಂದು ತಿಳಿಯಬಹುದಾದರೂ, ಇವೆರಡೂ ದಿನದಿನದ ವ್ಯವಹಾರಗಳಲ್ಲ, ಒಂದು ಇನ್ನೊಂದರೊಡನೆ ಸಂಬಂಧ ಹೊಂದಿದೆ ಎಂದೂ, ಒಂದು ಇನ್ನೊಂದನ್ನು ಬದಲಿಸಬಲ್ಲದು ಎಂದೂ ತಿಳಿಯುವುದೇ ಸರಿ.

ಬದಲಾಗುವ ಪದ್ಧತಿಗಳು, ಬದಲಾಗುವ ತಾತ್ತ್ವಿಕತೆಗಳು

ಹೆಂಗಸರ ಹಕ್ಕುಗಳ ಬಗ್ಗೆ ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ನಡೆದ ಚರ್ಚೆಗಳನ್ನು ಗಮನಿಸಿದರೆ ಪ್ರಧಾನ ತಾತ್ತ್ವಿಕತೆ ಮತ್ತು ಭಾಷಿಕ ಪದ್ಧತಿಗಳು ಬದಲಾಗು ತ್ತಿದ್ದ ನಿದರ್ಶನಗಳು ಕಾಣುತ್ತವೆ. ಇವೆರಡೂ ನಿರಂತರವಾಗಿ ಬೆಳೆಯುತ್ತಿದ್ದವು, ವಿಸ್ತಾರಗೊಳ್ಳುತ್ತಿದ್ದವು, ಬಳಕೆಯೊಡನೆ ಬದಲಾಗುತ್ತಿದ್ದವು. ಮಾತಿನ ವರಸೆಯಲ್ಲಿ ಇವೆಲ್ಲದಕ್ಕೂ ಉದಾಹರಣೆಗಳಿವೆ. ಬದಲಾವಣೆಗಳು ಯಾರೋ ಒಬ್ಬರಿಂದ ನಡೆಯುವಂಥವಲ್ಲ. ಇಡೀ ಸಮಾಜರಚನೆಯ ಎಳೆ ಎಳೆಗಳು ಒಟ್ಟಾಗಿ ಸೇರಿ ಇಂಥ ಬದಲಾವಣೆಗಳಿಗೆ ಕಾರಣವಾಗುತ್ತವೆ.

ವ್ಯವಹಾರದಲ್ಲಿ ತೊಡಗಿರುವ ಜನರು ಒಮ್ಮಗೇ ಒಬ್ಬ ಹೆಂಗಸು ಮ್ಯಾನೇಜರ್ ಆಗಿ ಬಂದದ್ದನ್ನು ಎದುರಿಸುವ ಪ್ರಸಂಗವನ್ನು ನೋಡೋಣ. ಆವರೆಗೆ ಮ್ಯಾನೇಜರ್ ಅನ್ನು ‘ಸರ್’ ಎಂದು ಕರೆಯುತ್ತಿದ್ದರು. ಆದರೆ ಈಗೇನು ಮಾಡುವುದು? ‘ಸರ್’ಗೆ ಸಾಟಿಯಾದ ಹೆಣ್ಣು ಪದ ಇಲ್ಲ. ಹೀಗೆ ಒಂದು ಪದ ಇಲ್ಲದಿರುವುದು ಕೇವಲ ಭಾಷೆಗೆ ಸಂಬಂಧಿಸಿದ ಸಂಗತಿಯಲ್ಲ. ಅದು ವ್ಯವಹಾರ ಜಗತ್ತಿನಲ್ಲಿ ಹೆಣ್ಣು ಭಾಗವಹಿಸುವುದನ್ನು ಕುರಿತ ಎತೆಯೇ ಆಗಿದೆ. ಇದರೊಡನೆ ಹೆಂಗಸರೊಡನೆ ಹೆಂಗಸರ ಬಗ್ಗೆ ಮಾತಾಡುವ ಬಗೆಯನ್ನು ಹೇಳುತ್ತದೆ. ಪದದ ಕೊರತೆ ಇರುವುದು ನಮಗೆ ಗೊತ್ತಾಗದಿರುವುದಕ್ಕೂ ಒಂದು ಚರಿತ್ರೆ ಇದೆ. ಉನ್ನತ ಸ್ಥಾನಮಾನಗಳಲ್ಲಿ ಹೆಂಗಸರು ಇರುತ್ತಿರಲಿಲ್ಲ. ಹಾಗಾಗಿ, ಪದದ ಕೊರತೆ ಗಮನಕ್ಕೆ ಬರುತ್ತಿರಲಿಲ್ಲ. ಅಲ್ಲದೆ, ‘ಸರ್’ ಎಂಬ ಪದವನ್ನೂ ಗಂಡಸರನ್ನು ಉದ್ದೇಶಿಸಿ ಬಳಸುವ ಪದ್ಧತಿಯು ಕಾಲ ಕಳೆದಂತೆ ಜನರಿಗೆ ಮುಜುಗರ ತರಬಹುದು. ಅಥವಾ ‘ಸರ್’ ಎಂಬ ಪದವನ್ನೂ ಗಂಡಸರನ್ನು ಉದ್ದೇಶಿಸಿ ಬಳಸುವ ಪದ್ಧತಿಯು ಕಾಲ ಕಳೆದಂತೆ ಜನರಿಗೆ ಮುಜುಗರ ತರಬಹುದು. ಅಥವಾ ‘ಸರ್’ ಪದವನ್ನು ಹೆಂಗಸರನ್ನೂ ಒಳಗೊಂಡಂತೆ ಬಳಸಲು ಜನ ಸಿದ್ಧರಾಗಬಹುದು. ಪೋಲಿಸ್ ಅಧಿಕಾರಿಗಳ ವಿಷಯದಲ್ಲಿ ಹೀಗಾಗಿದೆ (ಮೆಕ್‌ಎಲ್ಹಿನಿ ೧೯೯೫). (ಹಿಂದಿ ಭಾಷಿಕರಲ್ಲಿ ಉನ್ನತಾಧಿಕಾರದ ಹೆಂಗಸರಿಗೆ ಸರ್ ಪದವನ್ನು ಬಳಸುವುದು ಈಗ ವ್ಯಾಪದವಾಗಿ ಕಂಡು ಬರುತ್ತಿದೆ. ರಾಜಕಾರಣಿ, ಪೋಲಿಸ್ ಆಫೀಸರ್ ಮುಂತಾದವರನ್ನು ‘ಸರ್ ಜೀ’ ಎಮದು ಕರೆಯುತ್ತಾರೆ) ಅಮೆರಿಕದ ದಕ್ಷಿಣ ರಾಜ್ಯಗಳಲ್ಲಿ ಹೆಚ್ಚಾಗಿ ‘ಮ್ಯಾಮ್’ ಪದ ಬಳಕೆಯಲ್ಲಿದೆ. ಈ ಪದವು ತನ್ನ ಬಳಕೆಯ ವಲಯವನ್ನು ಹೆಚ್ಚಿಸಿಕೊಂಡು ಎಲ್ಲ ಕಡೆಯೂ ನೆಲೆಗೊಳ್ಳಲೂಬಹುದು. ಹೀಗೇ ಆಗುವುದೆಂದು ಕಣಿ ಹೇಳುವುದು ದಡ್ಡತನಾಗಬಹುದು. ಏಕೆಂದರೆ, ಬದಲಾವಣೆಗೆ ಹಲವು ಹೊರಚಾಚುಗಳಿವೆ. ಒಂದೊಂದಕ್ಕೂ, ತನ್ನದೇ ಆದ ಗೊತ್ತಾದ ಸಮಾಜಿಕ ಸಂದರ್ಭಗಳಿವೆ. ಭಾಷೆಯು ಮತ್ತೆ ಮತ್ತೆ ಬಳಕೆಯಾಗುವ ಮೂಲಕ, ನಿರಂತರವಾಗಿ ಜನ ಸಂಪರ್ಕದಲ್ಲಿ ಇರುವ ಮೂಲಕ ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ತನ್ನದೇ ಆದ ಬಳಕೆಯ ಚರಿತ್ರೆಯನ್ನು ಕಟ್ಟಿಕೊಳ್ಳುತ್ತದೆ. ಈ ಚರಿತ್ರೆಯಲ್ಲಿ ಕೇವಲ ಪದಗಳ ಕತೆ ಮಾತ್ರ ಇರುವುದಿಲ್ಲ. ಆ ಪದಗಳನ್ನು ಬಳಸಿದ ಜನರ ಚಹರೆ ಮತ್ತು ಅಂತಸ್ತುಗಳು ಕೂಡಾ ಹೆಣೆದುಕೊಂಡಿರುತ್ತವೆ. ಯಾರೋ ಒಬ್ಬರು ಮಾತಾಡಿದ್ದು ಕೂಡಾ ಹೆಚ್ಚು ಜನರ ಮಾತುಕತೆಯಲ್ಲಿ ಸೇರಿಕೊಂಡು ನೆಲೆಗೊಳ್ಳಬಹುದು. ತನ್ನದೇ ಆದ ಚರಿತ್ರೆಯನ್ನು ಕಟ್ಟಿಕೊಳ್ಳಬುಹುದು. ಆಗ ಒಬ್ಬರು ಬಳಸಿದ್ದನ್ನು ಬೇರೆಯವರು ಹೇಗೆ ಮತ್ತು ಯಾರು ತಮ್ಮ ಬಳಕೆಗೆ ಸೇರಿಸಿಕೊಂಡರು, ಬೇರೆ ಇತರ ಜನಕ್ಕೆ ವ್ಯವಹಾರಗಳಲ್ಲಿ ಅದು ಸೇರಿಕೊಂಡದ್ದು ಹೇಗೆ ಎಂಬುದೆಲ್ಲಾ ಈ ಚರಿತ್ರೆಯಲ್ಲಿ ಅಡಕವಾಗುತ್ತದೆ.

ಕಳೆದ ಶತಮಾನದ ಆರನೆಯ ದಶಕದ ಕೊನೆಕೊನೆಗೆ ಅಮೆರಿಕದ ಸ್ತ್ರೀವಾದಿಗಳು ಒಟ್ಟುಗೂಡಿ Ms ಎಂಬ ಹೊಸ ಪದವೊಂದನ್ನು ಸಾಮಾಜಿಕ ನೆಲೆಯ ಬಳಕೆಯಲ್ಲಿ ಚಾಲ್ತಿಗೆ ತಂದರು.  ಇದು ಮಿಸ್ಟರ್ ಎಂಬುದಕ್ಕೆ ಸರಿಸಾಟಿಯಾದ ಪದವಾಗಬೇಕು ಎಂಬ ಉದ್ದೇಶವಿತ್ತು. ಮಿಸ್ಟರ್ ಪದ ಜಂಡರ್ ಅನ್ನು ಸೂಚಿಸಿದರೂ ವ್ಯಕ್ತಿಯು ವಿವಾಹಿತನೋ ಅಲ್ಲವೋ ಎಂಬುದನ್ನು ಹೇಳುತ್ತಿರಲಿಲ್ಲ.  Ms ಪದವೂ ಕೂಡ ಹೀಗೇ ಇರಬೇಕೆಂಬುದು ಸ್ತ್ರೀವಾದಿಗಳ ಉದ್ದೇಶ. ಏಕೆಂದರೆ, ಹೆಂಗಸರು ಮದುವೆಯಾಗಿದ್ದಾರೋ ಇಲ್ಲವೋ ಎನ್ನುವುದನ್ನು ಅವಲಂಬಿಸಿಯೇ ಅವರ ಬಗ್ಗೆ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಅವರ ಅರ್ಹತೆ, ಅನರ್ಹತೆಗಳೂ ಅದರಂದಲೇ ಪ್ರಭಾವಿತವಾಗುತ್ತಿದ್ದವು. ಗಂಡಸರಿಗೆ ಈ ನೆಲೆಯ ಇಕ್ಕಟ್ಟುಗಳು ಎದುರಾಗುತ್ತಿರಲಿಲ್ಲ. ಹಾಗಾಗಿ, Ms ಎಂಬ ಪದದ ಬಳಕೆಯ ಅಗತ್ಯವನ್ನು ಮುಂದಿಡಲಾಯಿತು. ಆವರೆಗೆ ಇದ್ದ ಪದ್ಧತಿಗಳೇನು? ಹೆಂಗಸು ಮದುವೆಯಾದ ಕೂಡಲೇ ಓದುವುದನ್ನು ನಿಲ್ಲಿಸಬೇಕಿತ್ತು. ಕೆಲಸ ತೊರೆಯಬೇಕಿತ್ತು. ಮದುವೆಯಾಗದೆ ಉಳಿದ ಹೆಂಗಸರನ್ನು ಸೋಲುಂಡ ಜೀವಿ ಗಳೆಂದು ಪರಿಗಣಿಸುತ್ತಿದ್ದರು. ಮದುವೆಯಾಗದೆ ಮಕ್ಕಳನ್ನು ಪಡೆದ ಹೆಂಗಸರನ್ನಂತೂ ಅನೈತಿಕ ನೆಲೆಯಲ್ಲಿ ನೋಡಲಾಗುತ್ತಿತ್ತು. ಮಿಸ್ ಇಲ್ಲವೇ ಮಿಸೆಸ್ ಎಂಬ ಪದಗಳ ಬಳಕೆ ಹೆಂಗಸಿನ ಬಗ್ಗೆ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲು ಉದ್ದೇಶಪೂರ್ವಕವಾಗಿಯೇ ಬಳಕೆಯಾಗುತ್ತಿದ್ದವು. (ಹೆಂಗಸಿನ ಹೆಸರನ್ನು ಕೇಳಿದ ಕೂಡಲೇ ಬರುತ್ತಿದ್ದ ಪ್ರಶ್ನೆಯೊಂದು ಸಾಮಾನ್ಯವಾಗಿ ಹೀಗಿರುತ್ತಿತ್ತು- it  is Miss, is’nt it? Ms ಎಂಬ ಹೊಸ ಪದವೊಂದನ್ನು ಬಳಕೆಗೆ ತರುವ ಮೂಲಕ ಹೆಂಗಸಿನ ಸ್ಥಾನಮಾನವನ್ನು ಜಂಡರ್ ನೆಲೆಯಲ್ಲಿ ಮೇಲೆತ್ತುವ, ಗಂಡಸಿನೊಡನೆ ಸಮಾನತೆಯನ್ನು ನೀಡುವ, ಆಕೆಗೆ ಆವರೆಗೆ ಇದ್ದ ಇಕ್ಕಟ್ಟುಗಳಿಂದ ಬಿಡುಗಡೆ ಮಾಡುವ ಗುರಿಗಳನ್ನು ಹೊಂದಿತ್ತು. ಮೊದಮೊದಲು ಇಂಗ್ಲಿಶ್ ಮಾತಾಡುವವರು ಇದನ್ನೆಲ್ಲ ವ್ಯರ್ಥವೆಂದು ಗೇಲಿ ಮಾಡಿದರು. ಮತ್ತೆ ಕೆಲವರು ಹೀಗೆ ಬಳಸುವವರು ಸ್ತ್ರೀವಾದಿಗಳೆಂದೂ, ತಾವು ಮದುವೆಯಾಗಿದ್ದಾರೋ ಇಲ್ಲವೋ ಎಂಬುದನ್ನು ಮುಚ್ಚಿಟ್ಟುಕೊಳ್ಳಲು ಈ ತಂತ್ರದ ಮೊರೆ ಹೋಗಿದ್ದಾರೆಂದೂ ಹೇಳಿಕೊಂಡರು. ಆದರೆ, ‘Ms’ ಪದದ ಬಳಕೆ ನೆಲೆ ಕಂಡುಕೊಂಡಿತು. ಇದಕ್ಕೆ ನೆರವಾದದ್ದು ಜಾಹಿರಾತು ಉದ್ಯಮ.  ಈ ಉದ್ಯಮದವರಿಗೆ ಸ್ತ್ರೀ ಸಮಾನತೆಯ ಬಗ್ಗೆ ಕಾಳಜಿ ಏನೂ ಇರಲಿಲ್ಲ. ಆದರೆ, ತಮ್ಮ ಜಾಹೀರಾತುಗಳಲ್ಲಿ ಪಾಲ್ಗೊಳ್ಳುತ್ತಿದ್ದ ಹೆಂಗಸರು ಮದುವೆಯಾಗಿದ್ದಾರೋ, ಇಲ್ಲವೋ ಎಂಬುದನ್ನು ಪ್ರಕಟಿಸದೇ ಇರುವುದು ಅವರ ವ್ಯಾಪಾರದ ನೆಲೆಯಿಂದ ಅಗತ್ಯವಾಗಿತ್ತು.  ದಿನನಿತ್ಯದ ಬಳಕೆಯಲ್ಲಿ ಇಂದಿಗೂ ತಾತ್ತ್ವಿಕ ವಾಗ್ವಾದಗಳು ಮತ್ತು ಬದಲಾವಣೆಯ ಜೊತೆಗೆ ಬರುವ ಏರುಪೇರುಗಳು ಹಾಗೆಯೇ ಉಳಿದಿವೆ. ಅಧಿಕೃತ ಮಾಹಿತಿ ನಮೂನೆಗಳನ್ನು ಬಳಸಲು ಹೆಂಗಸರು ತಮ್ಮನ್ನು ತಾವು Mrs, Miss, Ms ಎಂದು ಗುರುತಿಸಿಕೊಳ್ಳುವ ಅವಕಾಶವನ್ನು ನೀಡುತ್ತದೆ. Ms ಎಂಬ ಆಯ್ಕೆಯನ್ನು ಮಾಡಿಕೊಂಡರೆ ಅದರಿಂದ ಯಾವ ಹೊಸ ಮಾಹಿತಿ ನೀಡಿದಂತಾಯಿತು? ಇದು ಹೆಚ್ಚು ಕಡಿಮೆ ಜನಾಂಗ ಇಲ್ಲವೇ ಧರ್ಮ ಕುರಿತ ಕಾಲಂಗಳನ್ನು ಖಾಲಿ ಬಿಡುವ ಮಾದರಿಯನ್ನೇ ಹೋಲುತ್ತದೆ. ಅಮೆರಿಕದ ಎಳೆಹರೆಯದ ಹುಡುಗಿಯರು Ms ಎಂಬುದನ್ನು ಬಳಸುತ್ತಾರಾದರೂ ಅವರಲ್ಲಿ ಹಲವರು ಮದುವೆಯಾದ ಬಳಕ Mrs ಎಂದು ಬದಲಿಸಿಕೊಳ್ಳಲು ಸಿದ್ಧರಿರುತ್ತಾರೆ. ವಯಸ್ಸಾದ ಹೆಂಗಸರು Ms ಎಂಬುದಕ್ಕೆ ಸ್ತ್ರೀವಾದಿ ನಂಟು ಇದೆ ಎಂದು ನಂಬುತ್ತಾರೆ. ಇಂಥವರು ತಮ್ಮ ರಾಜಕೀಯ ಓಲುವೆಗಳಿಗೆ ತಕ್ಕಂತೆ Ms ಎಂಬುದನ್ನೂ, Miss/Mrs ಎಂಬುದನ್ನೂ ಬಳಸುತ್ತಾರೆ.  ಮಧ್ಯವಯಸ್ಸಿನ ವಿಚ್ಛೇದನಗೊಂಡ ಹೆಂಗಸರು ಮತ್ತು ವೃತ್ತಿಪರ ಹೆಂಗಸರು Ms ಎಂಬುದನ್ನು ತಮ್ಮ ಹೆಸರಿನೊಡನೆ ಬಳಸಿದರೂ, ಆ ಮೂಲಕ ತಾವೊಂದು ರಾಜಕೀಯ ನಿಲುವನ್ನು ಮುಂದಿಡುತ್ತಿದ್ದೇವೆಂದು ತಿಳಿಯುವುದಿಲ್ಲ. ಅರವತ್ತರ ಕೊನೆಯ ಭಾಗದಲ್ಲಿ ಈ ಹೊಸ ಪದವನ್ನು ಬಳಕೆಗೆ ತರಬಯಸಿದ ಸ್ತ್ರೀವಾದಿಗಳು ಹೀಗಾಗುವುದೆಂದು, ಇಲ್ಲವೇ ಹೀಗಾಗಬೇಕೆಂದು ಬಯಸಿರಲಿಲ್ಲ. ಅವರೆಲ್ಲ ಒಟ್ಟಾಗಿ ನಡೆಸಿದ ಯತ್ನ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿತ್ತು. ಈ ಬದಲಾವಣೆಯನ್ನು ಜಾರಿಗೊಳಿಸಿದ ಸಮುದಾಯದ ಕೈಯಳತೆ ಮೀರಿ ತನ್ನದೇ ಆದ ಚರಿತ್ರೆಯೊಂದನ್ನು ಈ ಪದಪ್ರಯೋಗ ಕಟ್ಟಿಕೊಂಡಿದೆ.

ಇಂಥಧೇ ಇನ್ನೊಂದು ಬದಲಾವಣೆಯನ್ನು ನೋಡೋಣ. ಹೆಂಗಸರ ಕ್ರೀಡಾ ಪತ್ರಿಕೆಗಳಲ್ಲಿ ಜಾರಿಗೆ ಬಂದ ಬದಲಾವಣೆಯೊಂದು ನನ್ನ ಗಮನದಲ್ಲಿದೆ. ಕ್ರೀಡಾ ವಲಯದ ಹೆಂಗಸರನ್ನು ಉತ್ತೇಜಿಸುವ ಮತ್ತು ಅವರಿಗೆ ಅನುಕೂಲಕರವಾಗುವ ಬಗೆಯಲ್ಲಿ ಈ ಪತ್ರಿಕೆಗಳನ್ನು ಮರುರೂಪಿಸಬೇಕೆಂದು ಕೆಲವರು ಯೋಜಿಸಿದರು. ಹೆಂಗಸರೂ ಕೂಡ ಉತ್ತಮ ಕ್ರೀಡಾಪಟುಗಳು ಎಂದು ತೋರಿಸುವುದೇ ಇವರ ಗುರಿ ಯಾಗಿತ್ತು. ಆದರೆ, ಕ್ರೀಡಾಪತ್ರಿಕೆಗಳು ಗಂಡಸರನ್ನು ಬಿಂಬಿಸುವ ಬಗೆಯಲ್ಲಿ ಈ ಪತ್ರಿಕೆ ಗಳು ಹೆಣ್ಣು ಕ್ರೀಡಾಪಟುಗಳನ್ನು ಬಿಂಬಿಸಲಿಲ್ಲ. ಅದಕ್ಕಾಗಿ ಒಂದು ಹೊಸ ಬೆರಕೆಯ ಮಾದರಿಯನ್ನು ರೂಪಿಸಿಕೊಂಡರು.  ಕೆಲವು ನೆಲೆಗಳಲ್ಲಿ ಈ ಹೊಸ ಪತ್ರಿಕೆಗಳು ಸಾಂಪ್ರದಾಯಿಕ ಸ್ತ್ರೀ ಕೇಂದ್ರಿತ ಪತ್ರಿಕೆಗಳಂತೆ ಇದ್ದವು. ಇಲ್ಲಿಯೂ ಕೂಡಾ ಕ್ರೀಡಾಪಟುವಿನ ಸಾಮರ್ಥ್ಯದ ಜೊತೆಗೆ ದೇಹ ಸೌಂದರ್ಯಕ್ಕೂ ಒತ್ತನ್ನು ನೀಡಲಾಗಿತ್ತು. ಲೈಂಗಿಕವಾಗಿ ಆಕರ್ಷಕವಾದ ಹೆಣ್ಣುದೇಹದ ಲಕ್ಷಣಗಳನ್ನು ಕ್ರೀಡಾಪಟುಗಳ ದೇಹದಲ್ಲಿ ಒಟ್ಟುಗೂಡಿಸಲು ಮುಂದಾದವು. ಅಂದರೆ ಕ್ರೀಡಾಪಟುಗಳಾಗಿ ತಮ್ಮ ಅವಕಾಶಗಳನ್ನು ಹೆಚ್ಚಿಸಿಕೊಳ್ಳಬೇಕಾದ ಹೆಂಗಸರು ಈಗ ಹೊಸದಾಗಿ ಬೆಳದುನಿಂತ ಹೆಣ್ಣುದೇಹದ ಸಂಕಥನಕ್ಕೂ ತಮ್ಮನ್ನು ತಾವು ಒಗ್ಗಿಸಿಕೊಳ್ಳ ಬೇಕಾಯಿತು. ಈ ಹೊಸ ಸಂಕಥನವು ಸಾಮಾಜಿಕ ನೆಲೆಗೆ ಸೇರಿದೆ. ಅದರಲ್ಲಿ ಹೆಣ್ಣಿನ ದೇಹ ಮತ್ತು ದೈಹಿಕ ಚಟುವಟಿಕೆಗಳನ್ನು ಕುರಿತಂತೆ ಒಂದು ಹೊಸ ವ್ಯಾಖ್ಯಾನವೇ ಬೆಳೆದಿದೆ.

ಈ ಎರಡೂ ಸಂದರ್ಭಗಳಲ್ಲಿ ಯಾವುದೋ ಒಂದು ಗುಂಪು ಗೊತ್ತಾದ ಗುರಿಯೊಂದನ್ನು ಸಾಧಿಸಲು ಬದಲಾವಣೆಗೆ ಗುರಿಯಾಗಿತ್ತು. ಮೊದಲ ಉದಾಹರಣೆಯಲ್ಲಿ ಭಾಷೆಯಲ್ಲಿ ಬದಲಾವಣೆ ತರಲಾಯಿತು. ಎರಡನೆಯದರಲ್ಲಿ ಮುದ್ರಣ ಮಾಧ್ಯಮವನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿದೆ. ಎರಡೂ ಬದಲಾವಣೆಗಳು ಸಂವಹನ ಚಟುವಟಿಕೆಗಳ ವ್ಯಾಪ್ತಿಯಲ್ಲೇ ಇದ್ದವು. ಬದಲಾವಣೆ ಮೊದಲು ಮಾಡುವುದಷ್ಟೇ ಈ ಗುಂಪುಗಳ ಹಿಡಿತದಲ್ಲಿದ್ದ ಸಂಗತಿ. ಆ ಬಳಿಕ ಮಾರುಕಟ್ಟೆ ತನ್ನ ಹಿಡಿತಕ್ಕೆ ಈ ಬದಲಾವಣೆಗಳನ್ನು ಒಗ್ಗಿಸಿಕೊಳ್ಳುತ್ತದೆ.  ಅಂದರೆ ನಮ್ಮ ಮಾತುಗಳನ್ನು. ಪದಪ್ರಯೋಗಗಳನ್ನು ಮಾರುಕಟ್ಟೆಯಲ್ಲಿ ಬಿಕರಿಗೆ ಇರಿಸಿದಂತಾಯಿತು. ಒಮ್ಮೆ ಮಾರುಕಟ್ಟೆಗೆ ಮಾಲು ಬಂತೆಂದರೆ ಅದರ ಹಣೆಬರಹವನ್ನು ಬಿಕರಿ ಮಾಡಲು ಬಂದವರು ನಿರ್ಧರಿಸುವಂತಿಲ್ಲ. ಮಾರುಕಟ್ಟೆಯ ನಿಯಮಗಳು ಮೇಲುಗೈ ಪಡೆಯುತ್ತವೆ.

ಬದಲಾವಣೆಯ ಸಾಮಾಜಿಕ ನೆಲೆಗಳು

ನಮ್ಮ ವಿವರಣೆಯಲ್ಲಿ ಭಾಷಿಕ ಮತ್ತು ಸಾಮಾಜಿಕ ಬದಲಾವಣೆಗಳನ್ನು ಮುಂಚೂಣಿಗೆ ತಂದೆವೆಂದರೆ, ಆಗ ಬದಲಾವಣೆಯು ಹಲವು ಸೂಕ್ಷ್ಮ ನೆಲೆಗಳಲ್ಲಿ ಜಾರಿಗೊಳ್ಳುತ್ತದೆಂಬ ಸಂಗತಿ ಗೊತ್ತಾಗುತ್ತದೆ. ಯಾವುದೇ ಚಾರಿತ್ರಿಕ ಹಂತದಲ್ಲಾಗಲೀ, ಜಂಡರ್ ವ್ಯವಸ್ಥೆ ಮತ್ತು ಭಾಷಿಕ ನಡವಳಿಗಳು ನಮ್ಮ ಚಿಂತನೆ ಮತ್ತು ಕ್ರಿಯೆಗಳನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿರುತ್ತವೆ. ಹಲವಾರು ತಲೆಮಾರುಗಳಿಂದ ಮತ್ತು ನಮ್ಮ ಜೀವನದುದ್ದಕ್ಕೂ ಬಳಸುತ್ತಾ ಬಂದಿರುವ ಹಾದಿಗಳಲ್ಲೇ ಸಾಗಬೇಕೆಂದು ಒತ್ತಾಯಿಸುತ್ತದೆ. ಈ ನಡವಳಿಗಳಿಗೆ ತಡೆಯೊಡ್ಡದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಕೆಲವೊಮ್ಮೆ ಈ ತಡೆಹಿಡಿಯುವಿಕೆ ಇದ್ದಕ್ಕಿದ್ದಂತೆ ನಡೆದು ಹೋಗಬಹುದು. ಅತಿ ಸಾಮಾನ್ಯವಾದ, ನಮ್ಮ ಗಮನಕ್ಕೆ ಬಾರದೆ ಹೋಗುವ ಸಂಗತಿಗಳ ಮೂಲಕವೂ ಇದು ಸಂಭವಿಸಬಹುದು. ನಮ್ಮ ಚಿಕ್ಕ ಚಿಕ್ಕ ಕ್ರಿಯೆಗಳಲ್ಲೂ ಜಂಡರ್ ಕುರಿತ ನಡವಳಿ ಅಡಕಗೊಂಡಿರುತ್ತದಷ್ಟೇ? ಇಂಥ ಚಿಕ್ಕ ಚಿಕ್ಕ ಕ್ರಿಯೆಗಳು ಒಟ್ಟುಗೂಡಿಯೇ ಜಂಡರ್ ವ್ಯವಸ್ಥೆ ನೆಲೆಗೊಳ್ಳುತ್ತದೆ. ಅಂದರೆ, ಜಂಡರ್ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದರೆ ನಮ್ಮ ಚಿಕ್ಕ ಚಿಕ್ಕ ಕ್ರಿಯೆಗಳಲ್ಲೂ ಅದು ಮೈದಳೆಯಬೇಕಾಗುತ್ತದೆ. ಭಾಷಿಕ ವ್ಯತ್ಯಾಸಗಳು ಈ ಜಂಡರ್ ರಚನೆಯೊಳಗೆ ಸೇರಿಕೊಳ್ಳುತ್ತವೆ. ಹೀಗಾಗುವಾಗ ತುಂಬಾ ಚಿಕ್ಕ ಕ್ರಿಯೆಗಳಲ್ಲೂ ಇವು ಪ್ರವೇಶ ಪಡೆಯು ತ್ತವೆ. ಭಾಷಿಕ ಪರಿಕರಗಳ ಬಳಕೆಯಲ್ಲಿ ಚಿಕ್ಕ ಪಲ್ಲಟಗಳು ಕಾಣತೊಡಗುತ್ತವೆ.

ಸಮುದಾಯಗಳ ನಡವಳಿಗಳಲ್ಲಿ ಪಾಲ್ಗೊಳ್ಳುವ ಮೂಲಕವೇ ಜನರು ಒಟ್ಟು ಸಮಾಜದಲ್ಲಿ ತಾವು ಯಾವ ಸ್ಥಾನವನ್ನು ಹೊಂದಿದ್ದೇವೆ ಮತ್ತು ತಮ್ಮ ಅವಕಾಶಗಳೇನು ಎಂಬುದನ್ನು ತಿಳಿದುಕೊಳ್ಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ಅನುಭವಕ್ಕೂ ಒಟ್ಟಾರೆ ಸಮಾಜ ವ್ಯವಸ್ಥೆಗೂ ಇರುವ ಸಂಬಂಧವನ್ನು, ಅಂತರ್ಗತವಾಗಿರುವ ಸಮುದಾಯದ ನಡವಳಿಗಳ ಜಾಲವೇ ನಿರ್ಧರಿಸುತ್ತದೆ ಒಂದು ಗುಂಪಿನ ಜನರು ತಮ್ಮೊಳಗಿನ ಅಗತ್ಯಗಳಿಗೆ ಪ್ರತಿಕ್ರಿಯೆ ತೋರುವ ಮೂಲಕವೇ, ಸಮುದಾಯದ ನಡವಳಿಗಳು ಆಕಾರ ಪಡೆಯುತ್ತವೆ. ಒಂದು ಜನರ ಗುಂಪು ಉದ್ಯಾನದಲ್ಲಿ ಬ್ಯಾಸ್ಕೆಟ್‌ಬಾಲ್ ಆಡಲು ಮೊದಲು ಮಾಡುತ್ತದೆ. ತಮ್ಮ ಹಕ್ಕುಗಳಿಗೆ ಧಕ್ಕೆಯೊದಗಿದೆ ಎಂದುಕೊಂಡ ಜನರು ತಮ್ಮ ಅಳಲು ಮಂಡಿಸುವ ಪದಗಳನ್ನು ಕೇಳಿಸುತ್ತಾರೆ.  ಇನ್ನೊಂದು ಗುಂಪಿನ ಪಾಲಕರು ಮಕ್ಕಳ ಸುರಕ್ಷೆಗೆ ಕಾರ್ಯಕ್ರಮ ಮೊದಲು ಮಾಡುತ್ತಾರೆ.  ಅಂದರೆ, ಒಂದೊಂದು ಗುಂಪಿಗೂ ಗೊತ್ತಾದ ಕಾಲದಲ್ಲಿ ಒಂದು ಗೊತ್ತಾದ ಸಮಾನ ಆಸಕ್ತಿ ಇರುವುದರಿಂದ ಅವರೆಲ್ಲರೂ ಒಂದು ನಡವಳಿಯಲ್ಲಿ ತೊಡಗುತ್ತಾರೆ. ಇವು ಎರ್ರಾಬಿರ್ರಿಯಾಗಿರುವುದಿಲ್ಲ. ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಸ್ಥಾನಕ್ಕೆ ಅನುಗುಣವಾಗಿ ಬೇರೆಬೇರೆ ಬಗೆಯಲ್ಲಿ ರಚನೆಯಾಗುತ್ತವೆ. ಜಂಡರ್, ವರ್ಗ ಮತ್ತು ಜನಾಂಗ – ಇವೆಲ್ಲ ಅನುಭವಗಳ ಮೊತ್ತ. ಪ್ರತಿಯೊಬ್ಬರೂ ಭಾಗಿಯಾಗುವ ನಡವಳಿಗಳಿಂದ ಇವು ಮೈದಳೆ ಯುತ್ತವೆ. ಸಮುದಾಯಗಳಲ್ಲಿ ಇರುವ ಜನರು ಒಪ್ಪಿಸುವ ಬಗೆಯನ್ನು ಅವಲಂಬಿಸಿ ಈ ನಡವಳಿಗಳು ರೂಪುಗೊಳ್ಳುತ್ತವೆ. ಗಂಡಸರಿಗಿಂತ ಹೆಂಗಸರು ಕಾರ್‌ಪೂಲ್‌ಗಳು, ಮಕ್ಕಳ ಸುರಕ್ಷೆಯ ಗುಂಪುಗಳು, ವ್ಯಾಯಾಮ ತರಗತಿಗಳು – ಮುಂತಾದ ಗುಂಪು ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ನೆರೆಹೊರೆಯ ಸ್ನೇಹಕೂಟಗಳು, ಕೂಡು ಕುಟುಂಬಗಳು – ಮುಂತಾದ ಕಡೆ ಮಧ್ಯಮ ವರ್ಗದ ಹೆಂಗಸರಿಗಿಂತ ದುಡಿಯುವ ವರ್ಗದ ಹೆಂಗಸರು ಭಾಗಿಗಳಾಗುತ್ತಾರೆ. ಕೆಲವು ಸಮುದಾಯ ನಡವಳಿಗಳಲ್ಲಿ ಕೇವಲ ಗಂಡಸರು ಇಲ್ಲವೇ ಕೇವಲ ಹೆಂಗಸರು ಸೇರಬಹುದು. ಕೆಲವು ನಡವಳಿಗಳಲ್ಲಿ ಗಂಡಸರು ಮತ್ತು ಹೆಂಗಸರಿಗೆ ಬೇರೆಬೇರೆ ಪಾತ್ರಗಳು ಇರಬಹುದು. ಮತ್ತೆ ಕೆಲವು ಕಡೆ ಗಂಡಸರಿಗೆ ದೊರೆಯುವ ಪಾತ್ರಕ್ಕಿಂತ ಹೆಂಗಸರಿಗೆ ಸಿಗುವ ಪಾತ್ರ ಕೆಳಸ್ತರದ್ದಾಗಿರಬಹುದು.

ಜನರು ತಮ್ಮ ದಿನದಿನದ ಅನುಭವಗಳಲ್ಲಿ ತಾವು ಸಾಮಾಜಿಕ ವ್ಯವಸ್ಥೆಯಲ್ಲಿ ತಾವು ಸೇರಿಕೊಂಡಿರುವುದನ್ನು ತಿಳಿದುಕೊಳ್ಳುವುದೇ ಈ ನಡವಳಿಗಳ ಮೂಲಕ. ಹೈಸ್ಕೂಲು ಓದುವ ವಿದ್ಯಾರ್ಥಿಗಳು ಒಂದೇ ಪ್ರದೇಶದಿಂದ ಬಂದವರೆಂಬ ಕಾರಣಕ್ಕೆ ಒಂದು ಗುಂಪಾಗಬಹುದು, ಸಂಗೀತವನ್ನು ಇಷ್ಟಪಡುವವರು ಒಂದು ಗುಂಪಾಗಬಹುದು, ಮತ್ತೆ ಕೆಲವರು ತಮಗೇ ತಿಳಿಯದ ಯಾವುದೋ ಕಾರಣದಿಂದ ಜೊತೆಯಾಗಿರಬೇಕಾಗಿ ಬಂದು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿರಬಹುದು. ಈ ಗುಂಪುಗಳಲ್ಲಿ ಸೇರಿದವರೆಲ್ಲ ಪರಸ್ಪರ ಗೆಳೆತನ ಬೆಳೆಸಿಕೊಂಡಿರಬೇಕಿಲ್ಲ. ಹಾಗಾಗಿ, ಪ್ರತಿ ಗುಂಪಿನಲ್ಲಿಯೂ ಒಳಗುಂಪುಗಳು ಇರಬಹುದು.  ಗುಂಪಿನಲ್ಲಿ ಒಬ್ಬರು ನಾಯಕರಾಗಬಹುದು, ಮತ್ತೊಬ್ಬರು ಜೋಕರ್ ಆಗಬಹುದು. ಮತ್ತೆ ಕೆಲವರು ಯಾವಾಗಲೂ ಮತ್ತೊಬ್ಬರ ಸಲಹೆ ಸಾಂತ್ವನಗಳನ್ನು ಬಯಸುವವರಾಗಬಹುದು.  ಗುಂಪಿನ ನಡವಳಿಯಲ್ಲಿ ಭಾಗಿಗಳಾಗುತ್ತಾ ಹೋದಂತೆ ಒಬ್ಬರಿಗೊಬ್ಬರು ತೋರುವ ಕಾಳಜಿ ಮತ್ತು ಆ ಕಾಳಜಿ ವ್ಯಕ್ತವಾಗುವ ಬಗೆಗಳು ಆಕಾರ ಪಡೆಯುತ್ತವೆ. ತಮ್ಮೊಟ್ಟಿಗೆ ನಗೆಹನಿಗಳನ್ನು ಕಟ್ಟಬಹುದು, ಶುಭಾಶಯಗಳನ್ನು ಹೇಳಿಕೊಂಡಾರು, ಅಡ್ಡಹೆಸರು ಇಟ್ಟುಕೊಳ್ಳಬಹುದು, ಹಾಗೆಯೇ ಮಾತಾಡುವ ಬಗೆಯಲ್ಲೂ ಬದಲಾವಣೆ ಮಾಡಿಕೊಳ್ಳಬಹುದು. ಹೊರಗೆ ಹೋದಾಗ ಹೋಟೆಲಿನಲ್ಲಿ ಒಂದೇ ಟೇಬಲ್ ಸುತ್ತ ಕೂರಬಹುದು. ಹಾಗೆ ಮಾಡುವ ಮೂಲಕ ಬೇರೆ ಟೇಬಲ್ ಸುತ್ತ ಕುಳಿತ ಗುಂಪುಗಳೊಡನೆ ತಮಗಿರುವ ಸಂಬಂಧವನ್ನು ಕಂಡುಕೊಳ್ಳಲು ಯತ್ನಿಸಬಹುದು. ಮಾಲ್‌ಗಳಿಗೆ, ಆಟದ ಮೈದಾನಕ್ಕೆ, ರಾಕ್ ಕನ್ಸರ್ಟ್‌ಗಳಿಗೆ ಒಟ್ಟೊಟ್ಟಿಗೆ ಹೋಗಬಹುದು. ಹೀಗೆ, ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳುತ್ತಾರೆ. ಇದು ಕೇವಲ ಶಾಲೆ ಎಂಬ ಸಾಮಾಜಿಕ ವ್ಯವಸ್ಥೆಯ ಭಾಗಕ್ಕೆ ಮಾತ್ರ ಸೀಮಿತವಲ್ಲ. ಅದರಾಚೆಗೂ ವರ್ಗ, ಜಂಡರ್, ಜನಾಂಗ, ಕುಲ -ಮುಂತಾದ ನೆಲೆಗಳಿಗೂ ದಾಟುತ್ತದೆ. ಈ ಗುಂಪಿನ ಪ್ರತಿಯೊಬ್ಬ ಸದಸ್ಯರೂ ತಮ್ಮ ಕ್ರಿಯೆಗಳನ್ನು ತಾವು ಭಾಗಿಯಾಗುವ ಇತರ ಬೇರೆ ಬೇರೆ ಗುಂಪುಗಳ ಚಟುವಟಿಕೆಯಲ್ಲಿ ಹೊಂದಿಸಿಕೊಳ್ಳಲು ಯತ್ನಿಸುತ್ತಾರೆ. ಈ ಸದಸ್ಯರಿಗೆ ತಮ್ಮ ಚಹರೆಯನ್ನು ಕಂಡುಕೊಳ್ಳಲು ಯಾವುದೋ ಒಂದು ಗುಂಪಿನ ಕ್ರಿಯೆಗಳು ಮುಖ್ಯವೆನಿಸಬಹುದು. ಆಗ ಉಳಿದವು ಪೂರಕ ಕ್ರಿಯೆಗಳಾಗುತ್ತವೆ.  ಬೇರೆ ಬೇರೆ ಗುಂಪುಗಳ ಚಟುವಟಿಕೆಯಲ್ಲಿ ಭಾಗಿಯಾಗುತ್ತಲೇ ತನ್ನ ಸ್ವಂತ ಚಹರೆಯನ್ನು ಕಟ್ಟಿಕೊಳ್ಳುವ ಕೆಲಸವನ್ನು ಪ್ರತಿಯೊಬ್ಬರೂ ಮಾಡುತ್ತಾರೆ.

ಮುಖ

ಸ್ವಂತಿಕೆಯನ್ನು ಕಂಡುಕೊಳ್ಳುವ ಕೆಲಸ ಮುಖಾಮುಖಿ ಸಂಘರ್ಷದಿಂದ ಮೊದಲಾಗುತ್ತದೆ.  ಸಾಮಾಜಿಕ ಬದುಕಿಗೆ ಮುಖಾಮುಖಿ ಸಂಪರ್ಕ ಅತ್ಯಗತ್ಯ. ಜಂಡರ್ ಚಹರೆಗಳನ್ನೂ, ಜಂಡರ್ ತಾತ್ತ್ವಿಕತೆ ಮತ್ತು ಸಂಬಂಧಗಳನ್ನೂ ಕಟ್ಟಿಕೊಳ್ಳಲು ದಿನದಿನದ ಮಾತುಕತೆಗಳು ನೆರವಿಗೆ ಬರುತ್ತವೆ. ಇಂಥ ಮಾತುಕತೆಗಳಲ್ಲೇ ಜನರು ತಮ್ಮ ನಿಲುವನ್ನು ಮುಂದಿಡುತ್ತಾರೆ.  ಹಾಗೆಯೇ ಬೇರೆಯವರ ನಿಲುವೇನೆಂದು ತಿಳಿಯುವುದು, ಹಾಗೆ ತಿಳಿದದ್ದನ್ನು ಒಪ್ಪುವುದು ಇಲ್ಲವೇ ಬಿಡುವುದು — ಈ ಎಲ್ಲವೂ ಈ ಮಾತುಕತೆಗಳಲ್ಲಿ ಸಾಧ್ಯವಾಗುತ್ತದೆ. ಇಲ್ಲಿ ಒಪ್ಪಿತವಾದದ್ದು ಇನ್ನೂ ವಿಸ್ತಾರವಾದ ಕಥನದಲ್ಲಿ ಸೇರ್ಪಡೆಯಾದೀತು. ಇಲ್ಲಿ ಒಪ್ಪಿಗೆಯಾಗದಿದ್ದರೆ ಅದಕ್ಕೆ ಮುಂದೆ ಚಾಲ್ತಿ ಇಲ್ಲ. ಇಂಥ ಮಾತುಕತೆಗಳಲ್ಲಿ ನಾವು ಯಾರು, ನಮಗೂ ಇತರರಿಗೂ ಇರುವ ಸಂಬಂಧವೇನು, ನಮ್ಮ ಯಾವ ನೆಲೆಗಳು ಇತರರಿಗೆ ಒಪ್ಪಿತವಾಗುತ್ತದೆ ಎಂಬುದೆಲ್ಲ ಗೊತ್ತಾಗುತ್ತದೆ. ಎರ್ವಿನ್ ಗಾಫ್‌ಮನ್ (೧೯೬೭) ಮುಖಾಮುಖಿ ಸಂವಹನದ ಮಹತ್ವವನ್ನು ಕುರಿತು ಉತ್ತಮ ಒಳನೋಟಗಳನ್ನು ನೀಡಿದ್ದಾರೆ:

‘‘ಮುಖ ಎಂಬುದು ನನ್ನದು ಮಾತ್ರವಲ್ಲ. ಇನ್ನೊಬ್ಬರು ನನ್ನನ್ನು ಗುರುತಿಸಲು ಇರುವ ಸಾಧನ ಕೂಡಾ ಹೌದು. ಮುಖ ಎಂಬುದು ವ್ಯಕ್ತಿ ತನ್ನದು ಎಂದು ಕರೆದು ಕೊಳ್ಳುವ, ಇತರರು ತನ್ನನ್ನು ಗುರುತಿಸಲು ಬಳಸುವ ಸಾಮಾಜಿಕ ಸಂಗತಿ’’. ಯಾವುದೇ ಸಾಮಾಜಿಕ ವ್ಯವಹಾರದಲ್ಲಿ ಭಾಗಿಯಾಗಬೇಕಾದರೆ, ಅದರಲ್ಲಿ ತೊಡಗಿರುವ ವ್ಯಕ್ತಿಗಳಲ್ಲೂ ಸಮ್ಮತಿಯ ನೆಲೆಯೊಂದು ಇರಬೇಕಾಗುತ್ತದೆ. ಪ್ರತಿ ವ್ಯಕ್ತಿಯೂ ತನ್ನದು ಎಂಬ ಒಂದು ಸಂಗತಿಯನ್ನು, ಆ ಗುಂಪಿನಲ್ಲಿ ಇರುವವರು ಅದನ್ನು ಗುರುತಿಸಿ ಒಪ್ಪಿಕೊಳ್ಳುವ ನೆಲೆಯಲ್ಲಿ ಮಂಡಿಸುತ್ತಾರೆ. ಇನ್ನೊಬ್ಬರೊಡನೆ ವ್ಯವಹರಿಸುವಾಗ ನಮ್ಮ ಸೋಲು ಗೆಲುವುಗಳನ್ನು ತಿಳಿಯುವುದು ಮುಖದ ಮೂಲಕ ತಾನೇ? (ಕನ್ನಡದಲ್ಲಿ ಮುಖ ಕಳೆದುಕೊಳ್ಳುವುದು, ಮುಖ ಉಳಿಸಿಕೊಳ್ಳುವುದು ಎಂಬ ಹಲವು ಬಳಕೆ ಮಾತುಗಳನ್ನು ನೋಡಬಹುದು) ನಮ್ಮನ್ನು ನಾವು ಮಂಡಿಸಿಕೊಳ್ಳುವುದು ಮುಖದ ಮೂಲಕವೇ. ಇತರರನ್ನು ಇಂತಿಂಥವರೆಂದು ಗುರುತಿಸುವುದು ಕೂಡಾ ಮುಖದಿಂದಲೇ. ಇನ್ನೊಬ್ಬರೊಡನೆ ಮಾತಾಡುವಾಗ ನಾವು ಸಾಮಾಜಿಕ ರಚನೆಯೊಳಗೆ ನಮ್ಮನ್ನೂ ಮತ್ತು ನಮ್ಮೊಡನೆ ಮಾತಾಡುತ್ತಿರುವವರನ್ನೂ ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ಇರಿಸಿಕೊಳ್ಳುತ್ತೇವೆ. ಇಂಥ ವಿನ್ಯಾಸಗಳಲ್ಲಿ ಜಂಡರ್ ಕೂಡಾ ಒಂದು. ಬೇರೆ ಬೇರೆ ಸಮುದಾಯಗಳ ನಡವಳಿಕೆ ಗಳಲ್ಲಿರುವ ಬೇರೆ ಬೇರೆ ಸಂದರ್ಭಗಳು ಮತ್ತು ಬೇರೆ ಬೇರೆ ಸಂಗತಿಗಳು ನಮ್ಮನ್ನು ಮಂಡನೆ ಮಾಡಿಕೊಳ್ಳುವ ಬಗೆಯಲ್ಲೂ ಬದಲಾವಣೆಗಳನ್ನು ಬಯಸುತ್ತವೆ. ಮುಖದ ಮೂಲಕವೇ ಜನರು ಇನ್ನೊಬ್ಬರನ್ನು ಒಪ್ಪಿದ್ದು ಅಥವಾ ನಿರಾಕರಿಸಿದ್ದು ಗೊತ್ತಾಗುವುದು.

ಜಂಡರ್ ತಾತ್ತ್ವಿಕತೆ ಮತ್ತು ನಾವು ಒಪ್ಪಿಕೊಂಡ ಜಂಡರ್ ತಾತ್ತ್ವಿಕತೆ – ಇವೆರಡೂ ವ್ಯಕ್ತಿಯನ್ನು ಒಂದು ಸಾಮಾಜಿಕ ಸಂದರ್ಭದಲ್ಲಿ ಪಾಲ್ಗೊಳ್ಳುವಾಗ ಯಾವ ಬಗೆಯಲ್ಲಿ ತನ್ನ ಚಹರೆಗಳನ್ನು ಮಂಡಿಸಬೇಕು ಮತ್ತು ಕಾಯ್ದುಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತವೆ. ಜಂಡರ್ ವ್ಯವಸ್ಥೆಯನ್ನು ಕಾಯ್ದುಕೊಂಡಿರುವ ಮತ್ತು ಅದರಲ್ಲಿ ಬದಲಾವಣೆಯಾಗದಂತೆ ತಡೆದಿರುವ ಸಂಗತಿಗಳಿವೆ. ಜನರು ಮುಖಭಂಗವಾಗುವ ಸನ್ನಿವೇಶ ಇಲ್ಲವೇ ಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಹಿಂಜರಿಯುವುದು ಅವುಗಳಲ್ಲಿ ಒಂದು. ಉದಾಹರಣೆಗೆ, ಒಬ್ಬ ಹುಡುಗನಿಗೆ ಪರ್ಸುಗಳೆಂದರೆ ಇಷ್ಟ ಎಂದುಕೊಳ್ಳೋಣ. ಅದನ್ನು ಆತ ಸಾರ್ವಜನಿಕ ಪ್ರದೇಶಗಳಿಗೆ ಒಯ್ದರೆ ಗೇಲಿಗೊಳಗಾಗುತ್ತಾನೆ. ಹಾಗಾಗಿ, ತಾನು ಪರ್ಸುಗಳನ್ನು ಇಷ್ಟಪಟ್ಟರೂ ಹೊರಗೆ ಹೋಗುವಾಗ ಒಯ್ಯದಿರುವುದನ್ನು ಕಲಿತುಕೊಳ್ಳು ತ್ತಾನೆ. ಹೆಂಗಸೊಬ್ಬಳಿಗೆ ಬಾಯಾರಿಕೆಯಾದರೂ ಬಾರ್‌ಗೆ ಹೋಗುವುದಿಲ್ಲ. ಅಲ್ಲಿ ಹೋದರೆ ಬೇಡದ ಲೈಂಗಿಕ ಮಾತುಕತೆಗಳನ್ನು ಕೇಳಬೇಕಾಗುತ್ತದೆಂದು ಅವಳಿಗೆ ಗೊತ್ತು. ಮುಖಹೇಡಿಯಾದ ಹುಡುಗನೊಬ್ಬ ಹೆಚ್ಚು ಜನಪ್ರಿಯಳಾದ ಹುಡುಗಿಯೊಡನೆ ಮಾತಿಗೆ ಮುಂದಾಗಲಾರ. ಅವಳು ತನ್ನನ್ನು ತಿರಸ್ಕರಿಸಬಹುದೆಂಬ ಭಯ ಅವನಲ್ಲಿರುತ್ತದೆ. ತನ್ನನ್ನು ಸಲಿಂಗಕಾಮಿ ಎಂದು ಇತರರು ತಿಳಿಯಬಾರದೆಂಬ ಎಚ್ಚರದಿಂದ ಗಂಡಸೊಬ್ಬ ತನ್ನ ದನಿಯ ಗಡುಸುತನವನ್ನು ಕಾಯ್ದುಕೊಳ್ಳುತ್ತಾನೆ. ಯುವತಿಯೊಬ್ಬಳು ಇತರರು ತನ್ನ ಅಧಿಕಾರವನ್ನು ಪ್ರಶ್ನಿಸಬಹುದೆಂಬ ಭಯದಿಂದ ಮಾತಿನ ನಡುವೆ ಕೊಂಡಿಗಳನ್ನು ಸೇರಿಸುತ್ತಾಳೆ.

ಭಾಷಿಕ ಸಂಪನ್ಮೂಲಗಳು

ಭಾಷೆ ಎಂಬುದು ಸಂಕೇತಗಳಿಂದ ರಚನೆಯಾದ ಒಂದು ವ್ಯವಸ್ಥೆ. ಸಂಕೇತಗಳಲ್ಲಿ ಅರ್ಥ ಮತ್ತು ರೂಪಗಳು ಬೆರೆತಿರುತ್ತದೆ. ಈ ಸಂಕೇತಗಳಲ್ಲಿ ಜಂಡರ್ ಅಂತಸ್ಥವಾಗಿರುತ್ತದೆ.  ಸಂಕೇತಗಳ ಬಗೆಬಗೆಯ ಬಳಕೆಗಳಲ್ಲಿ ಜಂಡರ್ ಅಭಿವ್ಯಕ್ತವಾಗುತ್ತದೆ. ಭಾಷಿಕ ಸಂಕೇತ ದಲ್ಲಿ ಜಂಡರ್ ಅರ್ಥದ ನೆಲೆಯೂ ಆಗಿರಬಹುದು. ಉದಾಹರಣೆಗೆ, ಇಂಗ್ಲಿಶ್ಭಾಷೆಯ ಪ್ರಥಮ ಪುರುಷ ಸರ್ವನಾಮ ರೂಪಗಳು ಗಂಡು, ಹೆಣ್ಣು, ಮತ್ತು ನಿರ್ಜೀವ ವಸ್ತುಗಳನ್ನು ಸೂಚಿಸುತ್ತವೆ. (he/ him/ his, she/ her/ her, ಮತ್ತು it) ess ಎಂಬ ಪ್ರತ್ಯಯವು ಪುರುಷ ಸಮೂಹವಾಚಿಯಾದ ನಾಮಪದವನ್ನು ಸ್ತ್ರೀಸಮೂಹವಾಚಿಯಾಗಿ ಬದಲಿಸುವುದು. (heir : heiress ಪದಗಳು ನೇರವಾಗಿ ಗಂಡಸು ಇಲ್ಲವೇ ಹೆಂಗಸನ್ನು ಸೂಚಿಸಬಹುದು. (boy and girl) ಬೇರೆ ಸಂದರ್ಭದಲ್ಲಿ ಭಾಷಿಕ ಸಂಕೇತ ಮತ್ತು ಸಾಮಾಜಿಕ ಜಂಡರ್‌ಗಳ ನಡುವೆ ಇರುವ ಸಂಬಂಧ ಗೌಣವಾಗಿರುತ್ತದೆ. ಉದಾಹರಣೆಗೆ Pretty ಮತ್ತು handsome ಎಂಬ ಗುಣವಾಚಿಗಳಿಗೆ ‘ಚೆನ್ನಾಗಿ ಕಾಣುವ’ ಎಂಬ ಅರ್ಥವಿದೆ. ಆದರೆ ಸಾಂಸ್ಕೃತಿಕವಾಗಿ ಚೆನ್ನಾಗಿ ಕಾಣುವ ಹೆಂಗಸು ಮತ್ತು ಚೆನ್ನಾಗಿ ಕಾಣುವ ಗಂಡಸು ಎಂಬ ನೆಲೆಯ ನಂಬಿಕೆಗಳಿಗೂ, ಈ ಮೇಲಿನ ಗುಣವಾಚಿಗಳಿಗೂ  ನೇರವಾಗಿ ಸಂಬಂಧವಿದೆ. ಅಂದರೆ pretty ಎಂಬುದನ್ನು ಹೆಂಗಸು, ಇಲ್ಲವೇ ಆಕೆಗೆ ಸಂಬಂಧಿಸಿದ ಗುಣಗಳಿರುವ ನಾಮಪದದೊಡನೆ ಮಾತ್ರ ಬಳಸಬಹುದು. ಹಾಗೆಯೇ handsome ಪದವನ್ನು ಗಂಡಸು, ಇಲ್ಲವೇ ಆತನಿಗೆ ಸಂಬಂಧಿಸಿದ ಗುಣಗಳಿರುವ ನಾಮಪದದೊಡನೆ ಮಾತ್ರ ಬಳಸಬಹುದು. ಉದಾಹರಣೆಗೆ, ಮನೆಗಳು, ಇಲ್ಲವೇ ಹೂಗಳು ಈ ಪದಗಳೊಡನೆ pretty ಮತ್ತು handsome ಪದಗಳನ್ನು ಗುಣವಾಚಿಯನ್ನಾಗಿ ಬಳಸಿ ನೋಡಬಹುದು. ಯಾರೋ ಒಬ್ಬ ಹೆಂಗಸನ್ನು handsome Woman ಎಂದು ಹೇಳುವುದು ಅಷ್ಟೇನೂ ಮುಜುಗರ ತರದಿದ್ದರೂ pretty boy ಎನ್ನುವುದಂತೂ ಗೇಲಿ ಮಾಡಲೆಂದೇ ಬಳಕೆಯಾಗುವಂಥದು. ಅಂದರೆ, ನಾವು ಯಾವುದೇ ವಿಷಯಕ್ಕೆ ಬೇಕಾದರೂ ಜಂಡರ್ ಅನ್ನು ಲೇಪಿಸಬಹುದು. ಬೇರೇನೋ ವಿಷಯ ಕುರಿತು ಮಾತಾಡುತ್ತಿದ್ದರೂ, ಅದರಲ್ಲಿ ಜಂಡರ್ ಲೇಪನ ಸಾಧ್ಯ.

ಭಾಷೆಯನ್ನು ಬಳಸುವಾಗ ನಾವು ನಮಗೂ ಕನ್ನಡಿ ಹಿಡಿದುಕೊಳ್ಳುತ್ತೇವೆ. ಬೇಕೆಂದರೆ, ನಾವು ಇತರರಿಗೆ ಹೇಗೆ ಕಾಣಬೇಕೆಂದು ಬಯಸುತ್ತೇವೋ ಹಾಗೆ ಕಾಣುವಂತೆ ಮಾಡಲು ಭಾಷೆಯನ್ನು ಬಳಸಬಹುದು. ನಮ್ಮ ನಿಲುವನ್ನು ಮಂಡಿಸಲು, ವಿಷಯಗಳ ಹರಿವನ್ನು ನಿಯಂತ್ರಿಸಲು ಭಾಷೆ ನೆರವಾಗುತ್ತದೆ. ಇದೆಲ್ಲದರಲ್ಲೂ ಜಂಡರ್ ಬಗೆಬಗೆಯಲ್ಲಿ ಬೆರೆತುಕೊಳ್ಳುತ್ತದೆ. ಧ್ವನಿಯ ಏರಿಳಿತ, ಶ್ರುತಿ, ಕಾಕು, ಪದಗಳ ಆಯ್ಕೆ, ಉಚ್ಚಾರಣೆಗಳು, ವ್ಯಾಕರಣ ನಿಯಮಗಳು -ಇವೆಲ್ಲ ಮಾತಾಡುತ್ತಿರುವವರು ತಮ್ಮನ್ನು ತಾವು ಮಂಡಿಸಿಕೊಳ್ಳುವ ಬಗೆಯಲ್ಲಿ ಅಡಕಗೊಂಡ ಜಂಡರ್ ಎಳೆಗಳನ್ನು ಸೂಚಿಸುತ್ತವೆ. ತಮ್ಮೊಡನೆ ಮಾತಾಡುತ್ತಿರು ವವರ ಜಂಡರ್ ಅನ್ನು ತಾನು ಗುರುತಿಸುತ್ತಿದ್ದೇನೆ. ಇಲ್ಲವೇ ಅವರ ಮೇಲೆ ಜಂಡರ್ ಕುರಿತ ತನ್ನ ನಂಬಿಕೆಗಳನ್ನು ಹೇರುತ್ತಿದ್ದೇನೆ ಎಂಬುದನ್ನು ತೋರಿಸುವುದಕ್ಕೆ ಕೂಡಾ ಇವೆಲ್ಲ ನೆರವಾಗುತ್ತವೆ. ಜೊತೆಗೆ ಈ ಭಾಷಾಪರಿಕರಗಳಿಗೆ ಅಂಟಿಕೊಂಡ ಹೆಣ್ಣುತನ, ಇಲ್ಲವೇ ಗಂಡುತನದ ಮಾದರಿಗಳಿಂದಾಗಿ ಒಂದು ಕಥನದ ಸ್ತ್ರೀತ್ವ ಇಲ್ಲವೇ ಪುರುಷತ್ವಗಳನ್ನು ನಿರ್ಧರಿಸುತ್ತದೆ. ಮೆಲ್ಲಗೆ ಮೇಲಿನ ಶ್ರುತಿಯಲ್ಲಿ ಮಾತಾಡಿದರೆ ಅದು ಹೆಣ್ಣುತನ ಮತ್ತು ಸೂಕ್ಷ್ಮತೆಗಳನ್ನು ಮುಂಚೂಣಿಗೆ ತರುತ್ತದೆ. ಒರಟಾದ ಮಾತುಗಳನ್ನು ಬಳಸದೆ, ಸೌಮ್ಯ ಉಕ್ತಿಗಳನ್ನು ಮೊರೆಹೋಗುವ ಮೂಲಕ ಹೆಣ್ಣುತನಕ್ಕೂ, ಔಚಿತ್ಯದ ನೆಲೆಗೂ ಇರುವ ಸಂಬಂಧದ ಬಗ್ಗೆ ನಮ್ಮ ನಂಬಿಕೆಗಳು ಪ್ರಕಟಗೊಳ್ಳುತ್ತವೆ.

ವಿಶೇಷವಾಗಿ ಭಾಷಾಶಾಸ್ತ್ರಜ್ಞರು ಭಾಷೆಯನ್ನು ಹಲವು ಸ್ಥರಗಳಲ್ಲಿ ವಿಂಗಡಿಸಿ ಕೊಳ್ಳುತ್ತಾರೆ. ಪ್ರತಿ ಸ್ಥರಕ್ಕೂ ಅದರದೇ ಆದ ವಿಶ್ಲೇಷಣಾ ನೆಲೆ ಮತ್ತು ತಾತ್ತ್ವಿಕ ನೆಲೆಗಳಿವೆ. ಮುಂದೆ ಅಂತಹ ಮೂರು ಸ್ಥರಗಳನ್ನು ನಾವು ಗಮನಿಸಲಿದ್ದೇವೆ. ಆ ಸ್ಥರಗಳು ಸಾಮಾಜಿಕ ಅರ್ಥವನ್ನು ಒಳಗೊಳ್ಳುವ ಬಗೆಯನ್ನು ಗುರುತಿಸುವುದು ನಮ್ಮ ಗುರಿ. ಈ ಸ್ಥರಗಳಿಗೂ ಮತ್ತು ಅವುಗಳ ಸಾಮಾಜಿಕ ನಿಯಮಗಳಿಗೂ ನೇರವಾದ ಸಂಬಂಧವಿಲ್ಲ. ಹಾಗಾಗಿ, ಈ ಭಾಷಿಕ ಪರಿಕರಗಳನ್ನು ಬಳಸುವ ವಿವಿಧ ಬಗೆಗಳನ್ನು ಗುರುತಿಸುವ ಕಡೆಗೆ ನಮ್ಮ ಗಮನ ಹರಿಯಬೇಕು. ನಾವಿಲ್ಲಿ ಜಂಡರ್ ಕುರಿತ ತತ್ತ್ವಗಳನ್ನಾಗಲೀ, ಭಾಷೆ ಮತ್ತು ಜಂಡರ್‌ಗಳೊಸಂಬಂಧದ ತತ್ತ್ವಗಳನ್ನಾಗಲೀ ಚರ್ಚಿಸುತ್ತಿಲ್ಲ. ಹಾಗಾಗಿ, ಯಜಮಾನಿಕೆ, ಭಿನ್ನತೆ, ಇಲ್ಲವೇ ಅಧಿಕಾರ ಎಂಬ ಪರಿಕಲ್ಪನೆಗಳನ್ನು ಇಲ್ಲಿ ಪರಿಗಣಿಸಿಲ್ಲ. ಭಾಷೆಯು ಸಾಮಾಜಿಕ ರಚನೆಯನ್ನು ಕಟ್ಟಿಕೊಡುವ ಮತ್ತು ಬಿಂಬಿಸುವ ಬಗೆಯನ್ನು ನಾವು ಇಲ್ಲಿ ಚರ್ಚಿಸುತ್ತೇವೆ. ಕೆಲವು ಭಾಷಿಕಪರಿಕರಗಳು ಜಂಡರ್‌ನೊಡನೆ ದಟ್ಟವಾದ ಸಂಬಂಧಗಳನ್ನು ಹೊಂದಿರಬಹುದಾದರೂ ನಮ್ಮ ಚರ್ಚೆಯಲ್ಲಿ ಮೂರು ಭಾಷಾ ಸ್ಥರಗಳ ಪರಿಶೀಲನೆಯನ್ನು ಬೇರೆ ಬೇರೆಯಾಗಿ ಮತ್ತು ವಿವರಣೆಯ ನೆಲೆಯಲ್ಲಿ ನಿರ್ವಹಿಸಿದ್ದೇವೆ. ಭಾಷಾಶಾಸ್ತ್ರದ ಪರಿಚಯವಿಲ್ಲದವರಿಗೆ ಇಲ್ಲಿನ ಕೆಲವು ವಿವರಗಳು ಅಗತ್ಯ. ಪರಿಚಯವಿರುವವರಿಗೆ ಅವು ಹೆಚ್ಚು ಎನಿಸಬಹುದು.

ಧ್ವನಿರಚನೆ

ಭಾಷೆಯ ರಚನೆಯಲ್ಲಿ ಧ್ವನಿರಚನೆಯ ಸ್ಥರವೂ ಒಂದಾಗಿದೆ. ಭಾಷಾ ಸಂಕೇತಗಳಲ್ಲಿ ಇರುವ ಧ್ವನಿಗಳನ್ನು ಈ ಸ್ಥರದಲ್ಲಿ ವಿಶ್ಲೇಷಿಸಲಾಗುತ್ತದೆ (ಮೂಕರ ಭಾಷೆಗಳಲ್ಲಿ ಧ್ವನಿಗಳ ಬದಲು ಆಂಗಿಕ ವಿನ್ಯಾಸಗಳ ವಿಶ್ಲೇಷಣೆಯಾಗುತ್ತದೆ). ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಭಾಷಾಧ್ವನಿಗಳಿದ್ದು ಅವುಗಳ ನಡುವೆ ನಿಯತವಾದ ರಚನೆಯೊಂದು ರೂಪಗೊಂಡಿರುತ್ತದೆ. ಕೇರು, ತೇರು, ಸೇರು, ಮೇರು, ದೇರು -ಈ ಪದಗಳ ನಡುವೆ ಇರುವ ಧ್ವನಿರಚನೆಯ ವ್ಯತ್ಯಾಸ (ಅರ್ಥವಲ್ಲ) ಆಯಾ ಪದಗಳ ಮೊದಲ ವ್ಯಂಜನಗಳಾದ ಕ್, ತ್, ಸ್, ಮ್, ದ್ -ಗಳಲ್ಲಿ ಇದೆ. ಸ್ವತಃ ಈ ಧ್ವನಿಗಳಿಗೇ ಅರ್ಥವಿಲ್ಲ.  ಆದರೆ ಧ್ವನಿರಚನೆಗಳಲ್ಲಿ ಅರ್ಥವ್ಯತ್ಯಾಸ ಉಂಟುಮಾಡಬಲ್ಲ ಸಾಮರ್ಥ್ಯ ಈ ಧ್ವನಿಗಳಿಗೆ  ಇದೆ. ಅಂದರೆ, ಧ್ವನಿಗಳ ನಡುವೆ ಇರುವ ಅರ್ಥವ್ಯತ್ಯಾಸವನ್ನು ಬಳಸಿಕೊಂಡು ಪದಗಳ ಅರ್ಥದ ವ್ಯತ್ಯಾಸ ರೂಪುಗೊಂಡಿದೆ.

ಒಂದು ಧ್ವನಿಯ ಉಚ್ಚಾರಣಾ ರೂಪದೊಳಗೆ ಜಂಡರ್ ಅಡಕಗೊಳ್ಳಬಹುದಾಗಿದೆ. Sick ಎಂಬ ಪದದ ಮೊದಲ ಧ್ವನಿಯ ಉಚ್ಚಾರ ಗಮನಿಸೋಣ. ನಾಲಿಗೆ ಮತ್ತು ಮೇಲಿನ ಹಲ್ಲಿನ ಸಾಲಿನ ಹಿಂಬದಿಗಳ ನಡುವೆ ಹೆಚ್ಚು ಒತ್ತಡದಿಂದ ಹೊರಡುವ ನಿಃಶ್ವಾಸದಿಂದ ಇಲ್ಲಿನ ಎಸ್ ಅನ್ನು ಉಚ್ಚರಿಸುತ್ತೇವೆ. ಇಲ್ಲಿ ನಾಲಿಗೆಯ ತುದಿಯನ್ನು ಬಳಸಬಹುದು, ಇಲ್ಲವೇ ತುದಿಯ ಹಿಂಬದಿಯ ಫಲಕವನ್ನಾದರೂ ಬಳಸಬಹುದು. ಈ ನಾಲಿಗೆಯ ಭಾಗ ಹಲ್ಲಿನ ಸಾಲಿನ ಹಿಂಬದಿಯ ಮೇಲ್ಭಾಗ ಇಲ್ಲವೇ ಕೆಳಭಾಗವನ್ನು ಮುಟ್ಟುತ್ತಿರಬಹುದು. ಇವೆಲ್ಲ ಸಂದರ್ಭಗಳಲ್ಲೂ ಉಂಟಾಗುವ ಧ್ವನಿಗಳು, ಅಷ್ಟಿಷ್ಟು ಬೇರೆಯಾಗಿದ್ದರೂ ಇಂಗ್ಲಿಶ್‌ನಲ್ಲಿ ಅವೆಲ್ಲವೂ ‘ಎಸ್’ ಎಂದೇ ಗ್ರಹೀತವಾಗುತ್ತದೆ.  ಒಂದು ವೇಳೆ ನಾಲಿಗೆ ಹಲ್ಲಿನ ಸಾಲಿನ ಕಡೆಗೆ ಚಲಿಸಿದಾಗ ಮಾತ್ರ ಗೊಂದಲ ಉಂಟಾಗುತ್ತದೆ. ಏಕೆಂದರೆ, ಆಗ ‘ಸ್’ ಬದಲು thick ಪದದಲ್ಲಿರುವ ಮೊದಲ ಧ್ವನಿ (q\’20- ತೀಟಾ – ಥ – ಧ್ವನಿ) ಕೇಳಿಸಬಹುದು.  ‘ಸ್’ ಉಚ್ಚರಿಸಲು ಇರುವ ಜಾಗಗಳಲ್ಲಿ ಎಲ್ಲಿಂದ ಬೇಕಾದರೂ ಅದನ್ನು ಹೊರಡಿಸಬಹುದಾಗಿದೆ.  ಬೇರೆ ಬೇರೆ ರೀತಿ ಉಂಟಾಗುವ ಸ್ ಧ್ವನಿಗಳನ್ನು ಸಾಮಾಜಿಕ ಅರ್ಥಗಳನ್ನು ಸೂಚಿಸಲು, ಜಂಡರ್ ಸೂಚಿಸಲು ಬಳಲಾಗುತ್ತದೆ. ಅಮೆರಿಕದ ಉತ್ತರ ರಾಜ್ಯಗಳ ಇಂಗ್ಲಿಶ್‌ನಲ್ಲಿ ನಾಲಿಗೆಯ ತುದಿಯನ್ನು ಬಳಸಿ ‘ಸ್’ಧ್ವನಿಯನ್ನು ಉಚ್ಚರಿಸುತ್ತಾರೆ. ಒಂದು ವೇಳೆ ಈ ಪ್ರದೇಶದ ಜನರೇ ನಾಲಿಗೆಯ ತುದಿಯನ್ನು ಮೇಲಿನ ಹಲ್ಲಿನ ಸಾಲಿನ ಹಿಂಬದಿಯ ಹತ್ತಿರ ತಂದು ಉಚ್ಚರಿಸಿದರೆ ಅದನ್ನು ‘ಲಿಸ್ಪ್’ಎನ್ನುತ್ತಾರೆ. ಈ ‘ಲಿಸ್ಪ್’ಮಾದರಿಯ ‘ಸ್’ಉಚ್ಚಾರಣೆಗೂ, ಹೆಣ್ಣುತನಕ್ಕೂ ಸಂಬಂಧ ಕಲ್ಪಿಸಲಾಗಿದೆ. ಒಂದು ವೇಳೆ ಗಂಡಸರು ‘ಸ್’ ಅನ್ನು ಹೀಗೆ ಉಚ್ಛರಿಸಿದರೆ ಅವರು ಸಲಿಂಗಕಾಮಿಗಳೆಂದು ತಿಳಿಯುವುದುಂಟು. ಹೀಗಾಗಿ, ಧ್ವನಿರಚನೆಗೆ ಸ್ವತಂತ್ರವಾದ ಅರ್ಥ ಇಲ್ಲದಿದ್ದರೂ ಅದು ಸಾಮಾಜಿಕ ಅರ್ಥಗಳನ್ನು ತನ್ನೊಳಗೆ ಅಡಗಿಸಿಕೊಂಡಿರಬಹುದು.

ಧ್ವನಿಗಳನ್ನು ನಾವು ತೀರಾ ತಾಂತ್ರಿಕವಾಗಿ ಗ್ರಹಿಸುವುದಿಲ್ಲ. ಬೇರೆ ಬೇರೆ ಜನರ ಬೇರೆ ಬೇರೆ ಬಗೆಯ ಉಚ್ಚಾರಣೆಗಳಿಗೆ ಹೊಂದಿಕೊಂಡು ಅವರ ಧ್ವನಿಗಳನ್ನು ನಾವು ಗ್ರಹಿಸಬಲ್ಲೆವು. ಧ್ವನಿಯನ್ನು ಗುರುತಿಸುವ ಯಂತ್ರಗಳಲ್ಲಿ ಈ ಸಾಧ್ಯತೆಗಳನ್ನು ಅಳವಡಿಸು ವುದು ಇನ್ನೂ ಆಗಿಲ್ಲ. ನಾವು ಕೇವಲ ಏನನ್ನು ಕೇಳಿಸಿಕೊಳ್ಳುತ್ತಿದ್ದೇವೋ ಅದಕ್ಕೆ ಮಾತ್ರ ಹೊಂದಿಕೊಳ್ಳುತ್ತಿರುವುದಿಲ್ಲ. ಏನನ್ನು ಕೇಳಬಯಸುತ್ತೇವೆಯೋ ಅದಕ್ಕೆ ತಕ್ಕಂತೆ ಕೂಡಾ ಹೊಂದಾಣಿಕೆ ನಡೆಯುತ್ತದೆ.

ಜೋನ್ ರೂಬಿನ್(೧೯೯೨) ನಡೆಸಿದ ಒಂದು ಪ್ರಯೋಗದ ವಿವರ ಹೀಗಿದೆ: ಇಂಗ್ಲಿಶ್‌ನ್ನು ಮೊದಲ ಭಾಷೆಯಾಗುಳ್ಳ ವ್ಯಕ್ತಿಯೊಬ್ಬರು ಮಾಡಿದ ಉಪನ್ಯಾಸವನ್ನು ಧ್ವನಿ ಮುದ್ರಿಸಿಕೊಳ್ಳಲಾಯಿತು.  ಈ ಉಪನ್ಯಾಸವನ್ನು ಪದವಿ ತರಗತಿಯ ವಿದ್ಯಾರ್ಥಿಗಳ ಎರಡು ಬೇರೆ ಬೇರೆ ಗುಂಪುಗಳಿಗೆ ಕೇಳಿಸಲಾಯಿತು. ಹಾಗೆ ಮಾಡುವಾಗ ಉಪನ್ಯಾಸ ಮಾಡಿದವರ ಭಾವಚಿತ್ರವೆಂದು ಒಬ್ಬ ವ್ಯಕ್ತಿಯ ಭಾವಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದರು. ಒಂದು ಗುಂಪಿನ ವಿದ್ಯಾರ್ಥಿಗಳಿಗೆ ಬಿಳಿಯ ಹೆಂಗಸೊಬ್ಬರ ಭಾವಚಿತ್ರ ತೋರಿಸಿದ್ದರೆ, ಇನ್ನೊಂದು ಗುಂಪಿನ ವಿದ್ಯಾರ್ಥಿಗಳಿಗೆ ಏಷಿಯನ್ ಮೂಲದ ಹೆಂಗಸಿನ ಭಾವಚಿತ್ರವನ್ನು ತೋರಿಸಲಾಗಿತ್ತು.  ಏಷಿಯನ್ ಮೂಲದ ಹೆಂಗಸು ಈ ಉಪನ್ಯಾಸ ನೀಡಿದವರು ಎಂದು ತಿಳಿದ ವಿದ್ಯಾರ್ಥಿಗಳು ಉಪನ್ಯಾಸಕರ ಉಚ್ಚಾರಣೆಯಲ್ಲಿ ಸಹಜತೆ ಇಲ್ಲ, ಅದರಲ್ಲಿ ಅನ್ಯಭಾಷೆಯ ಉಚ್ಚಾರಣೆಯ ಸೊಗಡು ಇದೆ ಎಂದು ವರದಿ ಮಾಡಿದರು. ಅಷ್ಟೇ ಅಲ್ಲ, ಈ ಉಪನ್ಯಾಸವನ್ನು ಕೇಳಿಸಿಕೊಂಡಿದ್ದರೂ, ಅದರ ಸಾರ ಗ್ರಹಣ ಕುರಿತಂತೆ ನಡೆಸಿದ ಪರೀಕ್ಷೆಯಲ್ಲಿ ಇನ್ನೊಂದು ಗುಂಪಿನ ವಿದ್ಯಾರ್ಥಿಗಳಿಗಿಂತ ಕಡಿಮೆ ಅಂಕಗಳನ್ನು ಪಡೆದರು.

ಎಲಿಜಬತ್ ಸ್ಟ್ರಾಂಡ್ ಮತ್ತು ಹೀಥ್ ಜಾನ್ಸನ್ (೧೯೯೬) ಎಂಬ ಧ್ವನಿರಚನಾ ಶಾಸ್ತ್ರಜ್ಞರು ಇಂಥದೇ ಒಂದು ಪ್ರಯೋಗ ಮಾಡಿದರು. ಮಾತನಾಡುವವರ ಜಂಡರ್ ಬಗೆಗೆ ಕೇಳುವವರು ಹೊಂದಿರುವ ನಂಬಿಕೆಗೂ, ಅವರು ಮಾತನಾಡಿದವರ ಧ್ವನಿಗಳನ್ನು ಗ್ರಹಿಸುವ ಬಗೆಗೂ ಸಂಬಂಧವಿರುತ್ತದೆ ಎನ್ನುವುದು ಈ ಪ್ರಯೋಗದ ಪ್ರಮೇಯವಾಗಿತ್ತು. ಈಗಾಗಲೇ ಹೇಳಿದಂತೆ ಎಸ್ ಧ್ವನಿಯನ್ನು ಹೆಂಗಸರು ಗಂಡಸರಿಗಿಂತ ಹೆಚ್ಚಿನ ಶ್ರುತಿಯಲ್ಲಿ ಉಚ್ಚರಿಸುತ್ತಾರೆ. ಈ ಹೆಚ್ಚಿನ ಶ್ರುತಿಯಿಂದಾಗಿ ಹೆಂಗಸರು sim ಮತ್ತು Shim ಪದಗಳನ್ನು ಉಚ್ಚರಿಸುವಾಗ ಅವರ ಉಚ್ಚಾರಣೆಯಲ್ಲಿ ಈ ಎರಡೂ ಪದಗಳ ಮೊದಲ ಧ್ವನಿಗಳು ಒಂದೇ ಎಂಬಂತೆ ತೋರುತ್ತದೆ. ಈ ಪ್ರಯೋಗದಲ್ಲಿ sod ಎಂಬ ಪದವನ್ನು ಹಲವು ರೀತಿಗಳಲ್ಲಿ ಉಚ್ಚರಿಸಿದ್ದನ್ನು ಧ್ವನಿ ಮುದ್ರಿಸಿಕೊಳ್ಳಲಾಗಿತ್ತು. ಕೆಲವು ಉಚ್ಚಾರಣೆಗಳು Sim ಪದದ ಮೊದಲ ಧ್ವನಿಯ ಶ್ರುತಿಗೆ ಹತ್ತಿರವಿರುವಂತೆ, ಕೆಲವು ಉಚ್ಚಾರಗಳಲ್ಲಿ ಅದು Shim ಪದದ ಮೊದಲ ಧ್ವನಿಯ ಶ್ರುತಿಗೆ ಹತ್ತಿರವಿರುವಂತೆ ಮಾಡಲಾಗಿತ್ತು. ಈ ಉಚ್ಚಾರಣೆಗಳನ್ನು ಬೇರೆಬೇರೆಯವರಿಗೆ ಕೇಳಿಸಿದರು. ಹೀಗೆ ಕೇಳಿಸುವಾಗ ಉಚ್ಚಾರಣೆಯ ಜೊತೆಗೆ, ದೃಶ್ಯದ ತುಣುಕುಗಳು ಇದ್ದವು. ಆ ಉಚ್ಚಾರಣೆಗಳನ್ನು ತುಣುಕುಗಳಲ್ಲಿರುವ ವ್ಯಕ್ತಿಗಳೇ ಉಚ್ಚರಿಸುತ್ತಿದ್ದಾರೆ ಎಂದು ಭಾವಿಸು ವಂತೆ ಮಾಡಲಾಗಿತ್ತು. ಕೆಲವು ತುಣುಕುಗಳಲ್ಲಿ ಗಂಡಸರಿದ್ದರೆ ಮತ್ತೆ ಕೆಲವು  ತುಣುಕುಗಳಲ್ಲಿ ಹೆಂಗಸರಿದ್ದರು. ಹೀಗೆ ಕೇಳಿಸಿಕೊಂಡವರಿಗೆ ಒಂದು ಪ್ರಶ್ನೆಯನ್ನು ಕೇಳಿದರು.  ‘ನೀವು ಕೇಳಿಸಿಕೊಂಡ ಪದ sod ಆಗಿತ್ತೋ ಇಲ್ಲವೇ Shod ಆಗಿತ್ತೋ’ ಎಂಬುದೇ ಆ ಪ್ರಶ್ನೆ.  ಈ ಪ್ರಯೋಗದಿಂದ ಕೇಳಿಸಿಕೊಳ್ಳುವವರು sod ಮತ್ತು shod ಪದಗಳ ಮೊದಲ ಧ್ವನಿಗಳ ನಡುವಣ ವ್ಯತ್ಯಾಸವನ್ನು ಗ್ರಹಿಸುವಾಗ ತಮ್ಮ ಕಿವಿಗಳಿಗಿಂತ, ತಾವು ಕಣ್ಣುಗಳಿಂದ ನೋಡುತ್ತಿದ್ದ ಮಾತನಾಡುವವರು ಗಂಡಸರೋ ಇಲ್ಲವೇ ಹೆಂಗಸರೋ ಎಂಬುದನ್ನು ಹೆಚ್ಚು ಅವಲಂಬಿಸಿದ್ದು ಕಂಡುಬಂತು. ಕಡಿಮೆ ಶ್ರುತಿಯಲ್ಲಿ ಧ್ವನಿಯನ್ನು ಉಚ್ಚರಿಸಿದ್ದರೂ ನೋಡಿದ ಚಿತ್ರ ಹೆಂಗಸಿನದ್ದಾಗಿದ್ದರೆ ಅದನ್ನವರು ಹೆಚ್ಚಿನ ಶ್ರುತಿಯ ಉಚ್ಚಾರಣೆ ಎಂದೇ ಕೇಳಿಸಿಕೊಂಡು ಅದನ್ನು shod ಎಂದು ಗುರುತಿಸಿದ್ದರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಧ್ವನಿಗಳಲ್ಲಿರುವ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸುವುದನ್ನು ಕಲಿತುಕೊಳ್ಳುವ ಭಾಷಿಕರು ತಮಗೆ ಗೊತ್ತಿಲ್ಲದಂತೆ, ಅದನ್ನು ಕೆಲವು ಸಾಮಾಜಿಕ ಸಂಗತಿಗಳೊಡನೆ ಕೂಡಿಸಿಕೊಳ್ಳುತ್ತಾರೆ ಎಂದಾಯ್ತು. ನಮ್ಮ ಭಾಷಿಕ ತಿಳಿವಳಿಕೆಗೂ, ಜಂಡರ್‌ನ ಸಾಮಾಜಿಕ ಪರಿಣಾಮಗಳಿಗೂ ನಂಟಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಧ್ವನಿರಚನೆಯಂತೆ ಛಂದೋಸ್ತರವೂ ಕೂಡಾ ಸಾಮಾಜಿಕ ಅರ್ಥಗ್ರಹಿಕೆಗಳನ್ನು ಬಿಂಬಿಸಬಲ್ಲುದು. ಛಂದೋಸ್ಥರದಲ್ಲಿ ಉಚ್ಚಾರಣೆಯ ಲಯ, ಮತ್ತು ಕಾಕುಗಳು ಸೇರಿರುತ್ತವೆ.  ಜಂಡರ್ ಪೂರ್ವಾಗ್ರಹಗಳನ್ನು ಈ ಭಾಷಾಂಶಗಳ ಮೂಲಕ ಪ್ರಕಟಿಸುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಧ್ಯಯನಗಳು ಈಚಿನ ವರ್ಷಗಳಲ್ಲಿ ನಡೆದಿದೆ. ಹೀಗಿದ್ದರೂ, ಭಾಷಾಂಶಗಳಿಗೂ, ಜಂಡರ್‌ಗೂ ಇರುವ ಸಂಬಂಧವು ಧ್ವನಿರಚನೆಯ ಹಂತದಲ್ಲಿ ಕಾಣಿಸುವ ಬಗ್ಗೆ ಹೇಳಬಹುದಾದಷ್ಟು ಖಚಿತವಾದ ಮಾತುಗಳನ್ನು ಛಂದೋರಚನೆಯ ನೆಲೆಯಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ.