ಪದರಚನೆ

ಪದರಚನೆಯಲ್ಲಿ ಧ್ವನಿಗಳು ಒಗ್ಗೂಡಿ ಅರ್ಥವುಳ್ಳ ಪದಗಳಾಗಿ ಕಟ್ಟಿಕೊಳ್ಳುವುದನ್ನು ಪರಿಶೀಲಿಸಲಾಗುತ್ತದೆ. ಕೆರೆ, ಗೆರೆ, ತೆರೆ, ನೆರೆ, ಮೊರೆ, ತೊರೆ -ಮುಂತಾದ ಪದಗಳ ಅರ್ಥಕ್ಕೂ ಅವುಗಳಲ್ಲಿರುವ ಧ್ವನಿಗಳಿಗೂ ಸಂಬಂಧವಿಲ್ಲ. ಈ ಪದಗಳನ್ನು ಧ್ವನಿಗಳಾಗಿ ಒಡೆಯಬಹುದೇ ಹೊರತು ಅರ್ಥವುಳ್ಳ ಇನ್ನೂ ಚಿಕ್ಕ ಘಟಕಗಳನ್ನು ಈ ಪದಗಳಲ್ಲಿ ನೋಡಲಾಗುವುದಿಲ್ಲ. ಮಳೆಗಾಲ, ಹಿಂಬದಿ, ತಂಗಾಳಿ -ಮುಂತಾದ ಪದಗಳಲ್ಲೂ ಧ್ವನಿಗಳಿಗೆ ಅರ್ಥವಿಲ್ಲವಾದರೂ ಆ ಪದಗಳಲ್ಲಿ ಅರ್ಥವುಳ್ಳ ಚಿಕ್ಕ ಘಟಕಗಳಿವೆ. ಮತ್ತೆ ಕೆಲವು ಪದಗಳನ್ನು ಚಿಕ್ಕ ಘಟಕಗಳಾಗಿ ಒಡೆದಾಗ ದೊರೆಯುವ ಘಟಕಗಳಿಗೆ ಗೊತ್ತಾದ ಅರ್ಥವಿಲ್ಲದಿದ್ದರೂ ವ್ಯಾಕರಣದ ನೆಲೆಯಲ್ಲಿ ಅವುಗಳಿಗೆ ಕೆಲಸವಿರುತ್ತದೆ. ಮನೆಗಳು ಎಂಬ ಪದದಲ್ಲಿ ಇರುವ ‘ಗಳು’ ಎಂಬ ಘಟಕಕ್ಕೆ ಬಹುವಚನವನ್ನು ಹೇಳುವ ಕೆಲಸವಿದೆ.

ಸದ್ಯಕ್ಕೆ ಅರ್ಥವುಳ್ಳ ಪದಗಳನ್ನು, ಪದಘಟಕಗಳನ್ನು ನಾವು ಪರಿಶೀಲಿಸೋಣ. ನಾಯಿ, ಕುಣಿ -ಮುಂತಾದ ಪದಗಳನ್ನು ನಾವು ದಿನವೂ ಮಾತಿನಲ್ಲಿ ಗೊತ್ತಾದ ಅರ್ಥದಲ್ಲಿ ಬಳಸುತ್ತೇವೆ. ವ್ಯಾಕರಣದ ನೆಲೆಯ ಪದಘಟಕಗಳನ್ನು ‘ಪ್ರತ್ಯಯಗಳು’ ಎನ್ನುತ್ತಾರೆ.  ಇವುಗಳಿಗೆ ಸ್ವತಂತ್ರ ಬಳಕೆ ಇಲ್ಲ. ಅರ್ಥವುಳ್ಳ ಪದದೊಡನೆ ಮಾತ್ರ ಬಳಕೆಯಾಗ ಬಲ್ಲವು.  ಹೊಸ ಪದದೊಡನೆ ಮಾತ್ರ ಬಳಕೆಯಾಗಬಲ್ಲವು. ಹೊಸ ಪದಗಳನ್ನು ಕಟ್ಟಲು ಈ ಪ್ರತ್ಯಯಗಳು ನೆರವಾಗುತ್ತವೆ. ಈ ಪ್ರತ್ಯಯಗಳಲ್ಲಿ ಕೆಲವು ಹೆಚ್ಚು ಬಳಕೆಯಾದರೆ ಮತ್ತೆ ಕೆಲವು ಬಳಕೆ ಆಗದೆಯೂ ಇರಬಹುದು. ‘ಗ’ಎಂಬ ಪ್ರತ್ಯಯ ಬಳಸಿ ಕ್ರಿಯಾಪದವನ್ನು ನಾಮಪದವನ್ನಾಗಿ ಮಾಡಲು ಸಾಧ್ಯ. ಉದಾಹರಣೆಗೆ, ಕೇಳುಗ, ಓದುಗ, ನೋಡುಗ-ಇತ್ಯಾದಿ.  ಆದರೆ, ಈ ಪ್ರತ್ಯಯವನ್ನು ಬಳಸಿ ಈಗ ಹೊಸಪದಗಳನ್ನು ಯಾರೂ ಕಟ್ಟುವುದಿಲ್ಲ. ಆದರೆ, ‘ಇಕೆ’ಪ್ರತ್ಯಯವನ್ನು ಕ್ರಿಯಾಪದದ ಅಭೂತ ನ್ಯೂನರೂಪಕ್ಕೆ ಸೇರಿಸಿ ನಾಮಪದ ಮಾಡಬಹುದು. ಉದಾಹರಣೆಗೆ ಹೇಳುವಿಕೆ, ಕೊಡುವಿಕೆ, ನೋಡುವಿಕೆ ಇತ್ಯಾದಿ. ಈ ಬಗೆಯ ಪದರಚನೆಯನ್ನು ಯಾವ ಕ್ರಿಯಾಪದವನ್ನು ಬಳಸಿಯಾದರೂ ಈಗಲೂ ಮುಂದುವರೆಸಿರುವುದನ್ನು ನೋಡುತ್ತೇವೆ.

ವ್ಯಾಕರಣದಲ್ಲಿ ಜಂಡರ್

ಕೆಲವು ಪ್ರತ್ಯಯಗಳು ತಮ್ಮೊಳಗೆ ಜಂಡರ್ ಅನ್ನು ಹುದುಗಿಸಿಕೊಂಡಿರುತ್ತವೆ. ಈ ಜಂಡರ್ ಇರುವ ಪ್ರತ್ಯಯಗಳ ಬಳಕೆಯ ಮೂಲಕ ಭಾಷೆಯು ಬಳಕೆದಾರರಲ್ಲಿ ಜಂಡರ್ ಕುರಿತ ನಂಬಿಕೆಗಳನ್ನು ಬಲಪಡಿಸುತ್ತದೆ. ಮಾತಾಡುವವರು ಯಾರೊಡನೆ ಮಾತಾಡು ತ್ತಿದ್ದಾರೋ ಅವರ ಜೊತೆ ಇರುವ ಜಂಡರ್ ನೆಲೆಯ ಸಂಬಂಧಗಳು ಈ ಮೂಲಕ ಹೊರಪಡುತ್ತವೆ. ಎಷ್ಟೋ ಭಾಷೆಗಳಲ್ಲಿ ನಾಮಪದ ರಚನೆ ಮತ್ತು ಕ್ರಿಯಾಪದದ ರಚನೆಯಲ್ಲಿ ಜಂಡರ್ ಸೇರಿಕೊಂಡಿರುತ್ತದೆ. ಅಭಿಜಾತ ಅರಾಬಿಕ್ ಭಾಷೆಯಲ್ಲಿ ದ್ವಿತೀಯ ಪುರುಷ ಸರ್ವನಾಮ ಮತ್ತು ಕ್ರಿಯಾಪದ ರೂಪಗಳಿಗೆ ಏಕವಚನ ಮತ್ತು ಬಹುವಚನ ರೂಪಗಳಿವೆ. ಹಾಗೆಯೇ ಪ್ರಥಮ ಪುರುಷವಾಗಿ ಏಕ, ದ್ವಿ ಮತ್ತು ಬಹುವಚನ ರೂಪಗಳಿವೆ. ಇವೆಲ್ಲವೂ ಮಾತಾಡುತ್ತಿರುವವರು ಮತ್ತು ಯಾರೊಡನೆ ಮಾತಾಡುತ್ತಿದ್ದಾರೋ ಅವರು ಗಂಡೋ, ಹೆಣ್ಣೋ ಎಂಬುದನ್ನು ಅವಲಂಬಿಸಿ ಪ್ರಕಟಗೊಳ್ಳುತ್ತದೆ.

katabta :ನೀನು (ಗಂ. ಏ.) ಬರೆದಿರುವೆ.

katabti  : ನೀನು (ಹೆಂ. ಏ)ಬರೆದಿದ್ದೀ

katabtum : ನೀವು (ಗಂ. ಬ) ಬರೆದಿರುವಿರಿ.

katabtunna :    ನೀವು (ಹೆಂ. ಬ)ಬರೆದಿದ್ದೀರಿ.

kataba : ಆತ ಬರೆದಿದ್ದಾನೆ.

katabat  : ಆಕೆ ಬರೆದಿದ್ದಾಳೆ.

kataba : ಅವರಿಬ್ಬರೂ (ಗಂ)ಬರೆದಿದ್ದಾರೆ.

katabata  : ಅವರಿಬ್ಬರೂ (ಹೆಂ) ಬರೆದಿದ್ದಾರೆ.

katabu : ಅವರು (ಗಂ. ಬ)ಬರೆದಿದ್ದಾರೆ.

katabna : ಅವರು (ಹೆಂ. ಬ) ಬರೆದಿದ್ದಾರೆ.

ಇಂಗ್ಲಿಶ್‌ನ ಈ ವಾಕ್ಯವನ್ನು ನೋಡಿ. Some one called but he didn’t leave his name. ಎಂದು ಹೇಳಿದಾಗ, some one ಎಂಬುದು ಗಂಡಸು ಎಂಬ ಸೂಚನೆಯನ್ನು ನೀಡುತ್ತದೆ.  ಅಂದರೆ ಪ್ರಥಮ ಪುರುಷ ಏಕವಚನ ಸರ್ವನಾಮ ರೂಪಕ್ಕೆ ಹೀಗೆ ನಿರ್ದಿಷ್ಟ ವ್ಯಕ್ತಿಯು ಗಂಡಸೋ ಹೆಂಗಸೋ ಎಂಬ ಸೂಚನೆಯನ್ನು ನೀಡುವಂತೆ ಮಾಡಬಹುದು. ಈ ಉದಾಹರಣೆಗಳಿಂದ ಅರಾಬಿಕ್ ಮತ್ತು ಇಂಗ್ಲಿಶ್ ಭಾಷೆಗಳು ಸರ್ವನಾಮಗಳನ್ನು ಜಂಡರ್ ಸೂಚಕಗಳನ್ನಾಗಿ ಬಳಸುವಾಗ ಹೇಗೆ ಬೇರೆಯಾಗುತ್ತವೆ ಎನ್ನುವುದು ತಿಳಿಯುತ್ತದೆ.

ಕೆಲವು ಭಾಷೆಗಳಲ್ಲಿ ನಾಮಪದ ವರ್ಗದ ಬಳಕೆಗೆ ಗೊತ್ತಾದ ಕಟ್ಟುಪಾಡುಗಳಿರುತ್ತವೆ. ಸ್ವಾಹಿಲಿ ಮತ್ತು ಇತರ ಬಂಟು ಭಾಷೆಗಳಲ್ಲಿ ಬೇರೆ ಬೇರೆ ಬಗೆಯ ಬಹುವಚನ ಪ್ರತ್ಯಯಗಳು ಇದ್ದು, ಅವು ನಾಮಪದದ ಜಂಡರ್‌ಗೆ ಅನುಗುಣವಾಗಿ ಬಳಕೆಯಾಗಬೇಕೆಂಬ ನಿಯಮವಿದೆ. ಇದೇ ಬಗೆಯ ನಿಯಮ ನಾಮವಿಶೇಷಣಕ್ಕೂ, ಸರ್ವನಾಮಗಳಿಗೂ ಕೂಡಾ ಇದೆ. ಅಂದರೆ, ಈ ಭಾಷೆಗಳಲ್ಲಿ ಲೋಕದಲ್ಲಿ ಇರುವ ಜಂಡರ್ ವ್ಯವಸ್ಥೆಗೂ, ಭಾಷೆಯು ಅನುಸರಿಸುವ ಜಂಡರ್ ವ್ಯವಸ್ಥೆಗೂ ನೇರ ಸಂಬಂಧವಿಲ್ಲ. (ಹಿಂದಿ ಭಾಷೆಯಲ್ಲಿ ಇದೇ ಬಗೆ ಇರುವುದನ್ನು ಗಮನಿಸಬಹುದು)

ನಮ್ಮ ಓದುಗರಿಗೆ ಯಾವುದಾದರೂ ಒಂದು ಇಂಡೋಯೂರೋಪಿಯನ್ ಭಾಷೆಯ ಪರಿಚಯವಿದೆ ಎಂದುಕೊಂಡಿದ್ದೇವೆ. ರಷಿಯನ್, ಫ್ರೆಂಚ್, ಸ್ಪಾನಿಶ್, ಇಟಾಲಿಯನ್, ಹಿಂದಿ-ಇವೇ ಮುಂತಾದ ಈ ಭಾಷಾವರ್ಗದ ಭಾಷೆಗಳಲ್ಲಿ ವ್ಯಾಕರಣವು ಅನುಸರಿಸುವ ಜಂಡರ್ ವ್ಯಾಖ್ಯೆಗೂ, ಸಾಮಾಜಿಕ ಜಂಡರ್‌ಗೂ ಸಂಬಂಧವಿರುವುದಿಲ್ಲ. ಹೆಂಗಸನ್ನು ಉದ್ದೇಶಿಸುವ ಎಷ್ಟೋ ಪದಗಳು ಈ ಭಾಷೆಗಳಲ್ಲಿ ಸ್ತ್ರೀವಾಚಿಗಳಾಗಿರುತ್ತವೆ, ಹಾಗೆಯೇ ಗಂಡಸನ್ನು ಕುರಿತ ಪದಗಳು ಪುರುಷವಾಚಿಗಳಾಗಿವೆ. ಆದರೆ, ಇನ್ನೂ ಎಷ್ಟೋ ಪದಗಳು ವ್ಯಾಕರಣ ನೆಲೆಯಲ್ಲಿ ಸ್ತ್ರೀವಾಚಿಗಳಾಗಿದ್ದರೂ ಲೋಕದಲ್ಲಿ ಅವು ಪುರುಷವಾಚಿಕ ಗಳಾಗಿರುತ್ತವೆ. ಹಾಗೆಯೇ ಲೋಕದಲ್ಲಿ ಸ್ತ್ರೀವಾಚಿಗಳಾಗಿರುವಂಥವು ವ್ಯಾಕರಣದಲ್ಲಿ ಪುರುಷವಾಚಿಕಗಳಾಗಿರಬಹದು.  ಫ್ರೆಂಚ್ ಭಾಷೆಯಲ್ಲಿ personne(ವ್ಯಕ್ತಿ) ಮತ್ತು lume (ಚಂದ್ರ) ಸ್ತ್ರೀಲಿಂಗ ರೂಪಗಳು. ಜರ್ಮನ್ ಭಾಷೆಯಲ್ಲಿ mädchen(ಹುಡುಗಿ) ನಪುಂಸಕ ಲಿಂಗಕ್ಕೆ ಸೇರುತ್ತದೆ. ಅದೇ ಭಾಷೆಯಲ್ಲಿ mond(ಚಂದ್ರ) ಪುಲ್ಲಿಂಗವಾಗಿದೆ. ಈ ಉದಾಹರಣೆಗಳು ವ್ಯಾಕರಣದ ನೆಲೆ ಮತ್ತು ಸಾಮಾಜಿಕ ನೆಲೆ ಇವೆರಡೂ ಭಾಷೆಯಲ್ಲಿ ಸಂಪರ್ಕ ಪಡೆದುಕೊಳ್ಳದೆಯೂ ಇರಬಹುದು ಎಂಬ ನಿಲುವಿಗೆ ಬರುವಂತೆ ಭಾಷಾಶಾಸ್ತ್ರಜ್ಞರನ್ನು ಒತ್ತಾಯಿಸಿವೆ. ಆದರೆ, ಈ ಪ್ರಸಂಗವನ್ನು ಇನ್ನಷ್ಟು ವಿವರವಾಗಿ ನೋಡೋಣ.

ಫ್ರೆಂಚ್ ಭಾಷೆಯಲ್ಲಿ ನಾಮಪದಗಳನ್ನು ಪುಲ್ಲಿಂಗ ರೂಪ ಮತ್ತು ಸ್ತ್ರೀಲಿಂಗ ರೂಪ ಎಂದು ವರ್ಗೀಕರಿಸಲಾಗಿದೆ. ಅಂದರೆ, ಈ ನಾಮಪದಗಳಿಗೆ ವಿಶೇಷಣಗಳಾಗಿ ಬರುವ ಪದಗಳೂ ಕೂಡ, ನಾಮಪದಗಳ ಲಿಂಗರೂಪಕ್ಕೆ ಹೊಂದಿಕೆಯಾಗುವಂತಿರಬೇಕು. ನಾಮಪದದ ಬದಲಿಗೆ ಬಳಕೆಯಾಗುವ ಸರ್ವನಾಮವೂ ಕೂಡ ತಾನು ಪ್ರತಿನಿಧಿಸುವ ನಾಮಪದದ ಲಿಂಗರೂಪಕ್ಕೆ ಅನುಗುಣವಾಗಿರಬೇಕು. ಒಂದು ಉದಾಹರಣೆ ನೋಡೋಣ:

regardez la maison. elle est grande
ಆ ಮನೆಯನ್ನು ನೋಡು. ಅದು ದೊಡ್ಡದಾಗಿದೆ.

rendez le camion. il est grand.
ಆ ಲಾರಿಯನ್ನು ನೋಡು. ಅದು ದೊಡ್ಡದಾಗಿದೆ.

maison ಎನ್ನುವುದು ಸ್ತ್ರೀಲಿಂಗವಾದರೆ, camion ಎನ್ನುವುದು ಪುಲ್ಲಿಂಗ ರೂಪ. ಈ ನಾಮಪದಗಳನ್ನು ಪ್ರತಿನಿಧಿಸುವ ಸರ್ವನಾಮ ರೂಪಗಳು ಕೂಡಾ ಕ್ರಮವಾಗಿ ಸ್ತ್ರೀಲಿಂಗ ಮತ್ತು ಪುಲ್ಲಿಂಗ ರೂಪದಲ್ಲಿದೆ.

ಇದಿಷ್ಟೂ ವ್ಯಾಕರಣಕ್ಕೆ ಸಂಬಂಧಿಸಿದ ಸಂಗತಿಯೇನೋ ನಿಜ. ಆದರೆ, ಇವೇ ಸರ್ವನಾಮಗಳು ಮತ್ತು ವಿಶೇಷಣಗಳು ಯಾವ ವ್ಯಕ್ತಿಯನ್ನು ಕುರಿತು ಬಳಕೆಯಾಗುತ್ತವೋ ಆ ವ್ಯಕ್ತಿಯ ಸಾಮಾಜಿಕ ಜಂಡರ್ ಅನ್ನು ಸೂಚಿಸಬೇಕೆಂಬ ನಿಯಮವೂ ಇದೆ.

regardez marie elle est grande
ಮೇರಿಯನ್ನು ನೋಡು. ಅವಳು ದೊಡ್ಡದಾಗಿದ್ದಾಳೆ.

regardez jacques. eil est grand.
ಜಾಕ್‌ನನ್ನು ನೋಡು ಅವನು ದೊಡ್ಡದಾಗಿದ್ದಾನೆ.

ಎರಡನೆಯ ಗುಂಪಿನ ಉದಾಹರಣೆಯಲ್ಲಿ ಸರ್ವನಾಮಗಳನ್ನು ಸೂಚಕಗಳೆಂದೂ, ಮೊದಲನೆಯ ಗುಂಪಿನ ಉದಾಹರಣೆಯಲ್ಲಿ ಸರ್ವನಾಮಗಳನ್ನು ಅನಾಫೋರಾಗಳೆಂದೂ ಕರೆಯಲಾಗುತ್ತದೆ.ಸೂಚಕಗಳಾಗಿ ಬಳಕೆಗೊಂಡಾಗ ಸರ್ವನಾಮಗಳು ಸಾಮಾಜಿಕ ಜಂಡರ್ ಅನ್ನು ಒಳಗೊಳ್ಳಬೇಕು. ಒಂದು ಪ್ರಸಂಗದಲ್ಲಿ ಪುರುಷವಾಚಿಯಾದ ನಾಮಪದವನ್ನು ಹೆಂಗಸಿಗೆ ಬಳಸಬೇಕಾಗಿ ಬಂದರೆ(ಫ್ರೆಂಚ್‌ನ ಪುಲ್ಲಿಂಗ ರೂಪ le professeur) ಆಗ ಪುರುವಾಚಿಯನ್ನು ಬಳಸಿ ಮುಂದಿನ ವಾಕ್ಯದಲ್ಲಿ ಈ ನಾಮಪದಕ್ಕೆ ಬದಲಾಗಿ ಬಳಸುವ ಸರ್ವನಾಮವು ಸ್ತ್ರೀಲಿಂಗದಲ್ಲಿರುತ್ತದೆ.  ಫ್ರಾನ್ಸ್ ಮತ್ತು ಕೆನಡಾ ದೇಶಗಳಲ್ಲಿ ಹೆಂಗಸರು ಹೊಸ ಹೊಸ ವೃತ್ತಿಗಳಲ್ಲಿ ತೊಡಗಿಕೊಂಡಿದ್ದರಿಂದ, ಹೊಸ ಸ್ತ್ರೀಲಿಂಗರೂಪಗಳನ್ನು ಸೃಷ್ಟಿಸಿಕೊಂಡದ್ದು ಕಂಡುಬಂದಿದೆ. ಉದಾಹರಣೆಗೆ la professeur ಅಥವಾ le professeur ಅಥವಾ la professeuse ಎಂಬ ಪದಗಳನ್ನು le professeur ಎಂಬ ಪುಲ್ಲಿಂಗವಾಚಿಯ ಸ್ತ್ರೀವಾಚಿ ರೂಪವಾಗಿ ಬಳಸುತ್ತಿದ್ದಾರೆ. ವ್ಯಾಕರಣದ ನೆಲೆಯ ಜಂಡರ್ ಅನ್ನು ಬಳಸುವ ಇತರ ಇಂಡೋ ಯೂರೋಪಿಯನ್ ಭಾಷೆಗಳಲ್ಲಿ ಇಂಥದೇ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.   ಹೀಗೆ ಬೇರೆ ಬೇರೆ ವೃತ್ತಿಸೂಚಕ ಪದಗಳಿಗೆ ಸ್ತ್ರೀಲಿಂಗ ರೂಪಗಳನ್ನು ಹೊಸದಾಗಿ ಸೃಷ್ಟಿಸುವ ಮೂಲಕ ಒಂದು ಬಗೆಯ ಜಂಡರ್ ನೆಲೆಯ ಸಮತೋಲನವನ್ನು ಕಾಯ್ದುಕೊಳ್ಳಲು ಯತ್ನಿಸಿದಂತೆ ತೋರುತ್ತದೆ. ಇದರ ಜೊತೆಗೆ ಸರ್ವನಾಮಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕಾದ ಇಕ್ಕಟ್ಟಿನಿಂದಲೂ ಭಾಷಿಕರನ್ನು ಪಾರುಮಾಡಿದಂತಾಗಿದೆ. ವ್ಯಾಕರಣ ನೆಲೆಯ ಜಂಡರ್ ಅನ್ನು ಬಳಸುವ ಭಾಷೆಗಳಲ್ಲಿ ಸರ್ವನಾಮವು ತಾನು ಗುರುತಿಸುವ ನಾಮಪದದ ಲಿಂಗಕ್ಕೆ ಹೊಂದಿಕೊಳ್ಳಬೇಕು ಎಂಬ ನಿಯಮವಿರುತ್ತದೆ. ಕೇವಲ ಸೂಚಕಗಳಾಗಿ ಸರ್ವನಾಮಗಳು ಬಳಕೆಯಾದಾಗ ಅವು ತಾವು ಸೂಚಿಸುವ ವ್ಯಕ್ತಿಯ ಸಾಮಾಜಿಕ ಜಂಡರ್‌ಗೆ ಹೊಂದಿಕೊಳ್ಳಬೇಕು. ಪದಕೋಶದಲ್ಲಿ ಮೇಲೆ ಹೇಳಿದಂತೆ ಹೊಸ ಸ್ತ್ರೀಲಿಂಗವಾಚಿಪದಗಳು ನೆಲೆಗೊಂಡರೆ ಭಾಷಿಕರು ಸರ್ವನಾಮಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಕಷ್ಟದಿಂದ ಹೊರಬರುತ್ತಾರೆ.

ಲಿಂಗಸೂಚಕ ನೆಲೆಯು ಕೇವಲ ಮಾನವಲೋಕದ ನಾಮಪದಗಳಿಗೆ ಮಾತ್ರ ಸಂಬಂಧಿಸಿದ್ದೆಂದು ತಿಳಿಯುವಂತಿಲ್ಲ. ಫ್ರೆಂಚ್ ಭಾಷೆಯಲ್ಲಿ ಸಾಕುಪ್ರಾಣಿಗಳನ್ನು(ನಾಯಿ, ಬೆಕ್ಕು, ಹಸು, ಕೋಳಿ…) ಹೀಗೆ ಲಿಂಗಸೂಚಕ ಸರ್ವನಾಮಗಳಿಂದ ಉಲ್ಲೇಖಿಸುವ ಪರಿಪಾಠವಿದೆ. ಅಂದರೆ, ಆ ಪ್ರಾಣಿಯನ್ನು ಸೂಚಿಸುವ ಪದದ ಜಂಡರ್ ಯಾವುದೇ ಇರಲಿ ಅದು ಗಂಡೋ ಹೆಣ್ಣೋ ಎಂಬುದನ್ನು ಅವಲಂಬಿಸಿ ಸರ್ವನಾಮಗಳನ್ನು ಆಯ್ದುಕೊಳ್ಲುತ್ತಾರೆ.) ಆದರೆ, ಸಾಕುಪ್ರಾಣಿಗಳಲ್ಲದ ಪ್ರಾಣಿಗಳ(ಇಲಿ, ಹಾವು, ಹೆಗ್ಗಣ…) ವಿಷಯದಲ್ಲಿ ಈ ಗೊಂದಲವಿಲ್ಲ. ಇಲಿ ಮರಿಗಳು ಸ್ತ್ರೀಲಿಂಗವಾಚಿ ಪದಗಳನ್ನು ಪಡೆದಿದ್ದರೆ, ಹಾವುಗಳಿಗೆ ಪುಲ್ಲಿಂಗವಾಚಿ ಪದಗಳು.

ಈಗಾಗಲೇ ಹೇಳಿದಂತೆ, ವ್ಯಾಕರಣ ನೆಲೆಯ ಜಂಡರ್ ಜೀವಜಗತ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ.  ಫ್ರೆಂಚ್ ಭಾಷೆಯ ಉಳಿದ ಪದಕೋಶವನ್ನು ಸ್ತ್ರೀಲಿಂಗ ಪುಲ್ಲಿಂಗಗಳೆಂದು ವಿಭಜಿಸಲಾಗಿದೆ(ಟೇಬಲ್, ಕೋಪ, ಶಾಲೆ ಸ್ತ್ರೀಲಿಂಗಗಳಾದರೆ, ಮರ, ವೃತ್ತ, ಆಸ್ಪತ್ರೆ ಪುಲ್ಲಿಂಗ ರೂಪಗಳು).  ವಾಸ್ತವವಾಗಿ ಈ ಪದಗಳು ಸೂಚಿಸುವ ವಸ್ತುಜಗತ್ತಿನಲ್ಲಿ ಲಿಂಗ ಬೇಧವೇ ಇಲ್ಲ. ಹೀಗಾಗಿ ಟೇಬಲ್ ಇಲ್ಲವೇ ಮರವನ್ನು ಸೂಚಿಸುವ ಸರ್ವನಾಮಗಳು ಸಾಮಾಜಿಕ ಜಂಡರ್ ಅನ್ನು ಅನುಸರಿಸಿ ಆಯ್ಕೆಗೊಳ್ಳುವ ಪ್ರಸಂಗವೇ ಉಂಟಾಗದು. ಇಂಥ ಪ್ರಸಂಗಗಳಲ್ಲಿ ಆ ನಾಮಪದದ ಲಿಂಗಕ್ಕೆ (ಪದಕೋಶ ಸೂಚಿತ) ಹೊಂದುವ ಸರ್ವನಾಮವನ್ನೇ ಬಳಸಿ ಬಿಡುತ್ತಾರೆ.  ಇಂಗ್ಲಿಶ್‌ನಲ್ಲಿ ಯಾವುದಾದರೂ ದೊಡ್ಡ ವಸ್ತುವನ್ನು ಬಣ್ಣಿಸುವಾಗ it is big ಎಂದು ಹೇಳುತ್ತಾರೆ. ಅದು ಟೇಬಲ್ ಇಲ್ಲವೇ ಮರ ಎಂಬುದನ್ನು ಅವಲಂಬಿಸಿ ಬದಲಾಗುವುದಿಲ್ಲ.  ಆದರೆ, ಫ್ರೆಂಚ್‌ನಲ್ಲಿ ದೊಡ್ಡ ಟೇಬಲ್ elle est grande ಆದರೆ ದೊಡ್ಡ ಮರ il est gros ಎಂದಾಗುತ್ತದೆ. ಈ ವ್ಯತ್ಯಾಸ ಬೆಳೆದು ಬಂದದ್ದಕ್ಕೆ ಚಾರಿತ್ರಿಕ ಕಾರಣಗಳಿವೆ. ಹೀಗಿದ್ದರೂ ಜನರು ಸ್ತ್ರೀಲಿಂಗ ಮತ್ತು ಪುಲ್ಲಿಂಗ ನಾಮಪದಗಳನ್ನು ರೂಪಿಸಿದ್ದರ ಹಿಂದೆ ಇರುವ ತಾತ್ತ್ವಿಕತೆಯ ಬಗ್ಗೆ ಏನೇನೋ ಕತೆಗಳನ್ನು ಹೇಳುತ್ತಾರೆ. ಎಷ್ಟೋ ವೇಳೆ ಅಂಥ ಕತೆಗಳು ಸಾಂಸ್ಕೃತಿಕ ಸಂಗತಿಗಳಿಂದ ಹುಟ್ಟಿಕೊಂಡಿರುತ್ತವೆಯೇ ಹೊರತು ಅವು ನಿಜವಾಗಿ ಭಾಷೆಯ ರಚನೆಯನ್ನು ಕುರಿತು ಏನೂ ಹೇಳುವುದಿಲ್ಲ.

ಬೇರೆ ಬೇರೆ ಜಂಡರ್‌ಗಳಿಗೆ ಸೇರಿದ ನಾಮಪದಗಳ ಅರ್ಥಜಗತ್ತಿನಲ್ಲಿ ಯಾವ ಒಳಸಂಬಂಧಗಳೂ ಇಲ್ಲವಾದರೂ, ವ್ಯಾಕರಣದ ನೆಲೆಯ ಜಂಡರ್‌ಗೂ ಸಾಮಾಜಿಕ ಜಂಡರ್‌ಗೂ ನಂಟಿದೆ ಎಂದು ಮತ್ತೊಮ್ಮೆ ಹೇಳಬಯಸುತ್ತೇನೆ. ಈಗಾಗಲೇ ಪ್ರಥಮ ಪುರುಷ ವ್ಯಕ್ತಿಸೂಚಕ ಪದಗಳ ಬಗ್ಗೆ ಹೇಳಿದ್ದೇವೆ. ಇಲ್ಲಿ ಇನ್ನಷ್ಟು ದಟ್ಟವಾದ ಸಂಬಂಧವಿದೆ.  ಫ್ರೆಂಚ್‌ನಲ್ಲಿ Je ಎಂಬ ಸರ್ವನಾಮ ರೂಪವಿದೆ. ಇದು ಪ್ರಥಮ ಪುರುಷ ಸೂಚಕ.  ಇದಕ್ಕೆ ಲಿಂಗಸೂಚಕ ನೆಲೆ ಇಲ್ಲ. ಮಾತನಾಡುವವರು ತಮ್ಮ ಬಗ್ಗೆ ತಾವೇ ಮಾತಾಡುವಾಗ ಈ ಸರ್ವನಾಮವನ್ನು ಬಳಸಬೇಕಾಗುತ್ತದೆ ಎಂದಿಟ್ಟುಕೊಳ್ಳೋಣ. ಅವರ ವಾಕ್ಯಗಳಲ್ಲಿ ನಾಮವಿಶೇಷಣಗಳು ಬಳಕೆಯಾದರೆ ಅವುಗಳಿಗೆ ಒಂದು ಕಟ್ಟುಪಾಡಿದೆ. ತಮ್ಮ ಬಗ್ಗೆ ಹೇಳಿಕೊಳ್ಳುತ್ತಿರುವವರು ಹೆಂಗಸರಾದರೆ ವಿಶೇಷಣಗಳು ಸ್ತ್ರೀಲಿಂಗ ರೂಪದಲ್ಲಿರಬೇಕು.  ಒಂದು ವೇಳೆ ಅವರು ಗಂಡಸರಾಗಿದ್ದರೆ ವಿಶೇಷಣಗಳ ಪುಲ್ಲಿಂಗ ರೂಪಗಳು ಬಳಕೆಯಾಗಬೇಕು. ಎಷ್ಟೋ ವೇಳೆ ನಾಮಪದಗಳಿಗೆ ನೀಡಲಾದ ವ್ಯಾಕರಣದ ನೆಲೆಯ ಜಂಡರ್‌ಗೂ ಸಾಮಾಜಿಕ ಜಂಡರ್‌ಗೂ ಸಂಬಂಧವಿರುವುದಿಲ್ಲ ವಾದರೂ ವ್ಯಾಕರಣದ ನೆಲೆಯ ಜಂಡರ್ ಬಳಕೆಗೆ ವಿಧಿಸಲಾಗಿರುವ ನಿಯಮಗಳು ಮಾತ್ರ ಬಳಸುವವರ ಸಾಮಾಜಿಕ ಜಂಡರ್‌ನ ಜೊತೆಗೆ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತವೆ. ಫ್ರೆಂಚ್ ಭಾಷೆಯಲ್ಲಿ la lune ಎಂಬ ಪದರಚನೆಯನ್ನು ಒಮ್ಮೆ ಬಳಸಿದರೆ ಆ ಕಥನದಲ್ಲಿ ಸರ್ವನಾಮವಾಗಿ elle (ಅವಳು) ಎಂಬ ರೂಪವನ್ನೇ ಬಳಸಬೇಕಾಗುತ್ತದೆ. ಅಂದರೆ, ಸಾಮಾಜಿಕ ನೆಲೆಯ ಸ್ತ್ರೀಲಿಂಗ ರೂಪಗಳನ್ನು ಹೊಂದಿಸಿಕೊಂಡಂತಾಯ್ತು. ಜರ್ಮನ್ ಭಾಷೆಯಲ್ಲಿ ಹೀಗೆಯೇ dermond ವಾಕ್ಯದ ನಾಮಪದದ ಸರ್ವನಾಮ ಪದ er (ಅವನು) ಎಂದಾಗುತ್ತದೆ. ಈ ಎರಡೂ ಭಾಷೆಯ ಕವಿಗಳು ಮಾತ್ರ ಚಂದ್ರನನ್ನು ಕುರಿತು ಬರೆದಿರುವುದು ಭಿನ್ನವಾದ ರೀತಿಯಲ್ಲಿ. ಮನಃಶಾಸ್ತ್ರಜ್ಞೆ ಲೆರಾ ಬೊರೋಡಿಟ್‌ಸ್ಕೈ ಒಂದು ಪ್ರಯೋಗ ಮಾಡಿದ್ದಾರೆ. ಅವರ ಪ್ರಯೋಗದ ಫಲಿತಗಳು ಹೀಗಿವೆ.  ಜರ್ಮನ್ ಅನ್ನು ಮೊದಲ ಭಾಷೆಯಾಗಿ ಆಡುವ ಜನರು ಟೇಬಲ್ ಕುರಿತು ಮಾತಾಡುವುದನ್ನು ಗಮನಿಸ ಲಾಯಿತು. ಆ ಭಾಷೆಯಲ್ಲಿ ಈ ವಸ್ತು ಪುಲ್ಲಿಂಗವಾಗಿದೆ(der tisch). ಇವರೆಲ್ಲರೂ ಟೇಬಲ್‌ಗೆ ಗಂಡುಗುಣಗಳನ್ನೇ ಆರೋಪಿಸಿದರು. ಟೇಬಲ್‌ಗೆ ಫ್ರೆಂಚ್ ಭಾಷೆಯ ಪದ ಸ್ತ್ರೀಲಿಂಗದಲ್ಲಿದೆ. ಫ್ರೆಂಚ್ ಮೊದಲ ಭಾಷೆಯಾಗಿರುವ ಜನರು ಈ ಪ್ರಯೋಗದಲ್ಲಿ ಭಾಗಿಯಾದಾಗ ಟೇಬಲ್‌ಗೆ ಹೆಣ್ಣುಗುಣಗಳನ್ನು ಆರೋಪಿಸಿದರು. ಅಂದರೆ, ಭಾಷಿಕರಲ್ಲಿ ಸಾಮಾಜಿಕವಾಗಿ ನೆಲೆಗೊಂಡ ಹೆಣ್ಣು ಗಂಡು ವ್ಯತ್ಯಾಸಗಳು ಅವರಿಗೇ ಗೊತ್ತಿಲ್ಲದಂತೆ ವ್ಯಾಕರಣದ ನೆಲೆಯ ಜಂಡರ್ ಪರಿಕಲ್ಪನೆಗೆ ನಂಟು ಕಲ್ಪಿಸಿಕೊಂಡಿರುತ್ತವೆ.

ಪದರಚನೆಯ ವಲಯದಲ್ಲಿ ಜಂಡರ್ ಪ್ರವೇಶ ಪಡೆಯುವ ಇನ್ನೊಂದು ನೆಲೆಯಿದೆ. ಪುಲ್ಲಿಂಗ ನಾಮಪದವನ್ನು ಸ್ತ್ರೀಲಿಂಗ ನಾಮಪದವನ್ನಾಗಿ ಬದಲಾಯಿಸುವ ಪದರಚನೆಯ ನಿಯಮಗಳಲ್ಲಿ ಈ ನೆಲೆ ಸೇರಿಕೊಂಡಿದೆ. ಇಂಗ್ಲಿಶ್‌ನಲ್ಲಿ Actress, Waitress, Stewardess ಎಂಬ ಸ್ತ್ರೀವಾಚಿ ಪದಗಳು ರಚನೆಯಾಗುವ ಬಗೆಯನ್ನು ನೋಡಿ (ess ಪ್ರತ್ಯಯ ಫ್ರೆಂಚ್ ಭಾಷೆಯಿಂದ ಬಂದದ್ದು)  ಈ ಪ್ರತ್ಯಯ ಸೇರ್ಪಡೆಯಾಗುವ ನಾಮ ಪದಗಳನ್ನು ಪುಲ್ಲಿಂಗ ಎಂದು ತಿಳಿಯಲಾಗುವುದೇ ಹೊರತು ನಿಜದಲ್ಲಿ ಅವು ಗಂಡಸನ್ನು ಸೂಚಿಸಬೇಕಂಬ ನಿಯಮವಿಲ್ಲ. Actor ಇಲ್ಲವೇ Waiter ಅನ್ನು ಗಂಡಸು ಎಂದುಕೊಂಡು ಬಿಡುತ್ತೇವೆ. ಆದರೆ driver ಇಲ್ಲವೇ murderer ಪದಗಳು ಸೂಚಿಸುವ ವ್ಯಕ್ತಿ ಗಂಡಾದರೂ ಆಗಬಹುದು, ಹೆಣ್ಣಾದರೂ ಆಗಿರಬಹುದು.  (murderesses ಪದ ಇದೆ. ಆದರೆ killeresses , driveresses ಇಲ್ಲವೇ painteresses ಪದಗಳಿಲ್ಲ)  ಅಂದರೆ ಸಾಧಿತವಲ್ಲದ ಪ್ರಕೃತಿ ರೂಪದಲ್ಲಿರುವ ನಾಮಪದಗಳು ಗಂಡು, ಇಲ್ಲವೇ ಹೆಣ್ಣನ್ನು ಸೂಚಿಸಬಹುದು. ಆದರೆ ess ಪ್ರತ್ಯಯ ಸೇರಿದ ಮೇಲೆ ಅದು ಹೆಣ್ಣನ್ನೇ ಸೂಚಿಸಬೇಕು.  lioness ಎಂದರೆ ಹೆಣ್ಣು ಸಿಂಹ ಮಾತ್ರ.

ಗಂಡಸರನ್ನು ಸೂಚಿಸುವ ಪದಗಳು ಗಂಡಸು ಮತ್ತು ಹೆಂಗಸು ಇಬ್ಬರನ್ನೂ ಒಳಗೊಳ್ಳುವಂತೆ ಬಳಕೆಯಾಗಬಹುದಾದರೂ, ಹೆಂಗಸನ್ನು ಮಾತ್ರ ಸೂಚಿಸುವ ಪದಗಳಿಗೆ ಈ ಬಗೆಯ ಬಳಕೆ ಸಾಧ್ಯವಿಲ್ಲ. ಒಂದು ಗುಂಪನ್ನು ಉದ್ದೇಶಿಸಿ ಯಾರಾದರೂ you guys ಎಂದು ಕರೆದರೆ, ಆ ಗುಂಪಿನಲ್ಲಿ ಗಂಡಸರು, ಹೆಂಗಸರು ಒಟ್ಟಾಗಿ ಇದ್ದಿರಲೂಬಹುದು. ಆದರೆ you gals ಎಂದು ಒಂದು ಗುಂಪನ್ನು ಸಂಬೋಧಿಸಿದರೆ, ಅಲ್ಲಿ ಹೆಂಗಸರಷ್ಟೇ ಇರಬೇಕು. ಒಂದು ನಾಮಪದಕ್ಕೆ ಪ್ರತ್ಯಯ ಸೇರಿಸಿ ಸ್ತ್ರೀಲಿಂಗ ರೂಪವನ್ನು ಪಡೆದುಕೊಂಡಾಗ ಕೇವಲ ಒಂದು ಪದಸೃಷ್ಟಿ ಮಾತ್ರವೇ ಆಗುವುದಿಲ್ಲ. ಗಂಡು ಹೆಣ್ಣುಗಳನ್ನು, ಅದರಲ್ಲೂ ಆ ಪದಗಳು ಸೂಚಿಸುವ ಗಂಡು ಹೆಣ್ಣುಗಳನ್ನು, ಸಮಾಜವು ಪರಿಗಣಿಸುವ ತಾರತಮ್ಯದ ನೆಲೆಯೂ ಆ ಪದಗಳಲ್ಲಿ ಸೇರಿಕೊಳ್ಳುತ್ತದೆ. ಮಾಸ್ಟರ್ ಪದದ ಸ್ತ್ರೀವಾಚಿ ಮಿಸ್ಟ್ರೆಸ್ ಪದವಿದೆ. ಹಾಗೆಯೇ ಗೌರ್ನರ್ ಪದದ ಸ್ತ್ರೀವಾಚಿಯಾಗಿ ಗೌರ್ನೆಸ್ ಇದೆ, ಇವು ಕೇವಲ ಸಾಮಾಜಿಕ ಲಿಂಗಸೂಚಕ ಪದಗಳಷ್ಟೇ ಅಲ್ಲ. ಮಿಸ್ಟ್ರೆಸ್ ಮತ್ತು ಗೌರ್ನೆಸ್ ಪದಗಳು ಆಯಾ ಹೆಂಗಸರ ಸಾಮಾಜಿಕ ಸ್ಥಾನವನ್ನು ಸೂಚಿಸುತ್ತವೆ. ಇದಕ್ಕೆ ಚಾರಿತ್ರಿಕ ಕಾರಣಗಳಿವೆ. ಡ್ಯೂಕ್ ಒಬ್ಬನನ್ನು ಮದುವೆಯಾದ ಹೆಂಗಸು ಡಚಸ್ ಎಂದು ಕರೆಸಿಕೊಳುತ್ತಿದ್ದಳು. ಆದರೆ, ಈಗಾಗಲೇ ಡಚಸ್ ಆಗಿರುವ ಹೆಂಗಸನ್ನು ಮದುವೆಯಾದ ಗಂಡಸು ಡ್ಯೂಕ್ ಎಂದು ಕರೆಸಿಕೊಳ್ಳುವುದು  ಸಾಧ್ಯವಿರಲಿಲ್ಲ.

ಭಾಷೆಯನ್ನು ಬಳಸುವವರು ಅದರಲ್ಲಿ ನೆಲೆಗೊಂಡ ಈ ಜಂಡರ್‌ನ ಎಳೆಗಳನ್ನು ಗುರುತಿಸದೇ ಅದರ ಕಟ್ಟು ಪಾಡುಗಳನ್ನು ಪಾಲಿಸದೆ, ಮಾತನಾಡುವುದು ಸಾಧ್ಯವೇ ಇಲ್ಲ. ಕೆಲವೊಮ್ಮೆ ಹೊಸ ಸ್ತ್ರೀವಾಚಿ ಪದಗಳು, ಸಮಾಜದಲ್ಲಿ ಬೇರು ಬಿಟ್ಟಿದ್ದ ಪದ್ಧತಿಗಳನ್ನು ಸೂಚಿಸುತ್ತವೆ.  Actress ಪದ ಇದೇ ಬಗೆಯದು. acter ಮತ್ತು actrress ಗಳು ಕೇವಲ ಗಂಡು, ಹೆಣ್ಣು ಎಂದು ಮಾತ್ರ ಸೂಚಿಸುವುದಿಲ್ಲ. ಆಯಾ ವ್ಯಕ್ತಿಗಳಿಗೆ ಸಮಾಜ ವಿಧಿಸಿದ ಚೌಕಟ್ಟುಗಳೂ ಆ ಪದಗಳಲ್ಲಿ ಬೇರು ಬಿಡುತ್ತವೆ. ಒಂದು ಶತಮಾನದ ಹಿಂದೆ ಹೆಂಗಸರು ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿರಲಿಲ್ಲ. ಹಾಗೆ ರಂಗಭೂಮಿಗೆ ಮೊದಲು ನಟಿಸಲು ಬಂದ ಹೆಂಗಸರಿಗಾಗಿ actress ಪದ ಹುಟ್ಟಿಕೊಂಡಿತು. ಜೊತೆಗೆ, ಸಡಿಲ ನಡವಳಿಕೆಯ ಹೆಂಗಸು ಎಂಬ ಅರ್ಥ ಕೂಡಾ ಅದಕ್ಕೆ ಬೆರೆಯಿತು.

ಸ್ತ್ರೀವಾಚಿಗಳನ್ನು ರೂಪಿಸುವ ಪ್ರತ್ಯಯಗಳಿಗೆ ಸಾಮಾಜಿಕ ನೆಲೆಯ ಬೇರೆ ಅರ್ಥಗಳೂ ಸೇರಿಕೊಳ್ಳುತ್ತವೆ. ಉದಾಹರಣೆಗೆ ette ಎಂಬ ಪ್ರತ್ಯಯವನ್ನು ಗಮನಿಸಿ. ರೇ ಚಾರ್ಲ್ಸ್ ಎಂಬ ಗಾಯಕನ ಜೊತೆ ಹಾಡುತ್ತಿದ್ದ ಹಿಮ್ಮೇಳದ ಗಾಯಕಿಯರನ್ನು ರೇಲೆಟ್ಸ್ ಎಂದು ಕರೆಯುತ್ತಿದ್ದರು. ರೇಲೆಟ್ ಎಂಬುದು ಸ್ತ್ರೀವಾಚಿಯಷ್ಟೇ ಅಲ್ಲ. ಪ್ರಮುಖವಲ್ಲದ ಕೆಲಸ ಮಾಡುವ ಹಿಮ್ಮೇಳದ ಮುದ್ದಾದ ಪುಟ್ಟ ಹೆಂಗಸು ಎಂಬ ಅರ್ಥವನ್ನೂ ಪಡೆದಿದೆ. ette ಪ್ರತ್ಯಯಕ್ಕೆ ಹೀಗೆ ಕ್ಷುದ್ರಗೊಳಿಸುವ ಕೆಲಸವೂ ಇದೆ ಎಂಬುದಕ್ಕೆ ಇನ್ನೊಂದು ಉದಾಹರಣೆಯನ್ನು ನೋಡಿ. ಬಾರ್ಬಿ – ದ ಕನಜ್ಯೂಮರೆಟ್ (ಜೆನೆಟ್ ಹೋಮ್ಸ್ – ೨೦೦೧) ಇಂಥದೇ ಒಂದು ಚಾರಿತ್ರಿಕ ಉದಾಹರಣೆಯದು. ಹೆಂಗಸರಿಗೆ ಮತ ನೀಡುವ ಹಕ್ಕು ಇರಬೇಕೆಂದು ಹೋರಾಡುತ್ತಿದ್ದವರನ್ನೆಲ್ಲ ಸೇರಿಸಿ ಅವರನ್ನು ಸಫ್ರಜಿಸ್ಟ್‌ಸ್ ಎಂದು ಕರೆದರು. ಇವರಲ್ಲಿ ಹೆಂಗಸರಂತೆ ಗಂಡಸರೂ ಇದ್ದರು. ಆ ಬಳಿಕ, ಹೆಂಗಸರಿಗೆ ಮತ ನೀಡುವ ಹಕ್ಕನ್ನು ಕೊಡಬಾರದೆಂದು ಹೇಳುವವರು ಈ ಹೋರಾಟಗಾರರನ್ನು ಸಫ್ರಗೆಟ್ ಎಂದು ಕರೆದರು. ಈ ಹೋರಾಟವನ್ನು ಕ್ಷುದ್ರಗೊಳಿಸಿ ಗೇಲಿ ಮಾಡುವುದು, ಇದರೊಡನೆ ನಂಟು ಬೆಳೆಸಿದ ಹೆಂಗಸರನ್ನು ನಗೆಪಾಟಲು ಮಾಡುವುದು, ಈ ಪದದ ಉದ್ದೇಶವಾಗಿತ್ತು. ೧೯೬೦-೭೦ ರ ನಡುವಣ ಸ್ತ್ರೀಪರ ಹೋರಾಟವನ್ನು ಸೂಚಿಸಲು ವಿಮೆನ್ಸ್ ಲಿಬರೇಶನ್ ಬದಲು ವಿಮೆನ್ಸ್ ಲಿಬ್ ಎಂಬ ಪದ ಬಳಸಿದರು. ಹಾಗೆಯೇ ಲಿಬರೇಶನಿಸ್ಟ್‌ಸ್ ಪದಕ್ಕೆ ಬದಲಾಗಿ ಲಬರ್ಸ್ ಪದ ಬಳಕೆಯಾಯಿತು. ಇಲ್ಲಿಯೂ ಮಹತ್ವವನ್ನು ಅಲ್ಲಗಳೆಯುವ ಗುರಿಯೇ ಇದೆ.

ಪದಕೋಶ

ಒಂದು ಭಾಷೆಯ ಪದಕೋಶದಲ್ಲಿ ಭಾಷಿಕರು ಬಳಸುವ, ಅರಿಯುವ ಪದಗಳೆಲ್ಲವೂ ಪಟ್ಟಿಯಾಗಿರುತ್ತವೆ. ಪದಕೋಶಕ್ಕೆ ಸಾಂಸ್ಕೃತಿಕ ಸಂಬಂಧವಿರುವುದರಿಂದ ಪದಕ್ಕೂ ಜಂಡರ್‌ಗೂ ಆಳವಾದ, ಅಷ್ಟೇ ವಿಸ್ತಾರವಾದ ನಂಟಿದೆ. ಭಾಷೆಯಲ್ಲಿ ಹೆಚ್ಚು ಬದಲಾವಣೆ ಕಾಣುವ ವಲಯವೆಂದರೆ ಪದಕೋಶ. ಹೊಸ ಚಿಂತನೆಗಳೂ ಇಲ್ಲಿಯೇ ಮೊದಲು ನೆಲೆಗೊಳ್ಳುತ್ತವೆ.  ಪದಗಳಿಗೆ ಬೇರೆ ಬೇರೆ ವಲಯಗಳಲ್ಲಿ ಬೇರೆ ಬೇರೆ ಅರ್ಥಗಳಿರುತ್ತವೆ. ಹಾಗಾಗಿ, ಭಾಷಿಕರಲ್ಲಿ ಬೇರೆ ಬೇರೆಯವರು ಬೇರೆಬೇರೆಯದೇ ಪದಕೋಶಗಳನ್ನೇ (ಅರ್ಥದ ನೆಲೆಯಲ್ಲಿ) ಹೊಂದಿರುತ್ತಾರೆ. ಭಾಷಾಶಾಸ್ತ್ರಜ್ಞರಿಗೆ ಅವರದೇ ಪಾರಿಭಾಷಿಕ ಪದಕೋಶವಿದ್ದರೆ, ಹದಿಹರೆಯದವರಿಗೆ ಅವರದ್ದೇ ಪದಕೋಶವಿರುತ್ತದೆ. ದುಡಿಮೆಯನ್ನು ಜಂಡರ್ ನೆಲೆಯಲ್ಲಿ ವಿಭಜಿಸುವ ಸಾಮಾಜಿಕ ಪ್ರವೃತ್ತಿಗಳು ಕೂಡಾ ಭಾಷಿಕರ ಪದಕೋಶದಲ್ಲಿ ಜಾಗ ಪಡೆದಿರುತ್ತವೆ.

ನಾಮಪದ ಮತ್ತು ಕ್ರಿಯಾಪದಗಳಿಗಿಂತ ಸರ್ವನಾಮಗಳು ಹೆಚ್ಚು ಗಟ್ಟಿಯಾಗಿ ನೆಲೆಯೂರಿರುತ್ತವೆ. ಬಳಕೆಯಲ್ಲಿರುವ ಸರ್ವನಾಮಗಳು ಕಳೆದು ಹೋಗುವುದು, ಹೊಸವು ಬಂದು ಸೇರುವುದು ಬಲು ನಿಧಾನವಾಗಿ ನಡೆಯುತ್ತದೆ. ತಲೆಮಾರುಗಳು ಕಳೆದರೂ ಬದಲಾವಣೆ ಗೊತ್ತಾಗದಿರಬಹುದು. gusset ಮತ್ತು salvage (ಹೊಲಿಗೆಗೆ ಸಂಬಂಧಪಟ್ಟ ಪದಗಳು) ಹೆಂಗಸರಿಗೆ ಗೊತ್ತಿರುವ ಸಾಧ್ಯತೆ ಹೆಚ್ಚು. ಹಾಗೆಯೇ torque ಮತ್ತು tachometer (ಯಂತ್ರಗಳಿಗೆ ಸಂಬಂಧಿಸಿದ ಪದಗಳು) ಗಂಡಸರಿಗೆ ಗೊತ್ತಿರುತ್ತವೆ.  ಕೆಲವು ಪದಗಳನ್ನು ಬಳಸುವ ನೆಲೆಯಲ್ಲೂ ಜಂಡರ್ ಸಂಬಂಧದ ನಿಯಮಗಳಿರುತ್ತವೆ.  ಕ್ಷುದ್ರಪದಗಳನ್ನು ಹೆಂಗಸರಿಗಿಂತ ಗಂಡಸರೇ ಹೆಚ್ಚು ಬಳಸುತ್ತಾರೆಂದೂ, ಗಂಡಸರೂ ಹೆಂಗಸರು ಎದುರಿಗಿರುವಾಗ ಅಂಥ ಪದಗಳನ್ನು ಬಳಸಲಾರರೆಂದೂ ನಂಬಿಕೆಗಳಿವೆ.  ಪದಕೋಶದಲ್ಲಿ ಇರುವ ನಿಷಿದ್ಧ ಪದಗಳನ್ನು ಯಾರು ಎಲ್ಲಿ ಬಳಸುತ್ತಾರೆ ಎಂಬುದೂ ಕೂಡ ಜಂಡರ್‌ನೊಡನೆ ಸಂಬಂಧ ಹೊಂದಿದೆ. ಕೆನಡದ ಕ್ಯುಬೆಕ್ ಪ್ರದೇಶದ ಫ್ರೆಂಚ್ ಭಾಷೆಯಲ್ಲಿ ಇರುವ ಧರ್ಮಕ್ಕೆ ಸಂಬಂಧಿಸಿದ ಕ್ಷುದ್ರಪದಗಳ ಬಳಕೆ ಕುರಿತು ಡಯಾನ- ವಿನ್ಸೆಂಟ್(೧೯೮೨) ಒಂದು ಅಧ್ಯಯನ ನಡೆಸಿದ್ದಾರೆ. ಅದರಂತೆ ಮುದುಕರು ಮುದುಕಿ ಯರಿಗಿಂತ ಹೆಚ್ಚಾಗಿ ಈ ಪದಗಳನ್ನು ಬಳಸಿದರೆ, ಕಿರಿಯ ವಯಸ್ಸಿನ ಗಂಡುಹೆಣ್ಣುಗಳಲ್ಲಿ ಒಂದೇ ಪ್ರಮಾಣದ ಬಳಕೆ ಕಂಡುಬಂದಿದೆ. ಇಂಥ ಪದಗಳನ್ನು ಬಳಸುವ ಬಗ್ಗೆ ಜನರು ಹೊಂದಿರುವ ದೃಷ್ಟಿಕೋನ ಕೂಡಾ ಅವರ ವಯಸ್ಸನ್ನು ಅನುಸರಿಸಿ ಬದಲಾಗುತ್ತದೆ. ಹೆಂಗಸರು ಇಂಥ ಪದಗಳನ್ನು ಬಳಸಿದರೆ ಅಸಹ್ಯವೆಂದು, ಹೈಸ್ಕೂಲು ವಿದ್ಯಾರ್ಥಿಗಳಿಗಿಂತ ನಿವೃತ್ತಿ ಹೊಂದಿದವರು ಹೇಳಿದರು. ಚಿಕ್ಕವರಲ್ಲೂ ಕೂಡಾ ಹುಡುಗಿಯರಿಗಿಂತ ಹುಡುಗರಿಗೆ ಹೆಂಗಸರ ಬಾಯಲ್ಲಿ ಈ ಪದಗಳನ್ನು ಕೇಳುವುದು ಹೆಚ್ಚು ಅಸಹ್ಯವೆನಿಸಿತ್ತು. ಇನ್ನೂ ಕುತೂಹಲದ ವಿಷಯವೊಂದಿದೆ. ಗಂಡಸರಷ್ಟೇ ಹೆಂಗಸರೂ ಬೈಗುಳಗಳನ್ನು ಬಳಸುತ್ತಾರೆಂದು ಮುದುಕಿಯರು ಗಟ್ಟಿಯಾಗಿ ವಾದಿಸಿದರು. ಪಾಲಕರು ಬೈಗುಳ ಬಳಸುವ ಬಗ್ಗೆ ಈ ವರದಿಯಲ್ಲಿ ವಿವರಗಳಿವೆ. ನಿವೃತ್ತರು ತಮ್ಮ ತಾಯಂದಿರು ಯಾವತ್ತೂ ಬೈದದ್ದೇ ಇಲ್ಲ ಎಂದರು. ಆದರೆ, ಅವರ ಅಪ್ಪಂದಿರು ಅಷ್ಟಿಷ್ಟು ಬೈಯುತ್ತಿ ದ್ದರಂತೆ. ಹೈಸ್ಕೂಲ್ ವಿದ್ಯಾರ್ಥಿಗಳ ಅನಿಸಿಕೆ ಬೇರೆಯೇ ಥರದಲ್ಲಿತ್ತು. ಹುಡುಗಿಯರು ತಮ್ಮ ತಾಯಂದಿರು ಬೈಯುತ್ತಾರೆಂದು ಹೇಳಿದ ಪ್ರಮಾಣ ಹುಡುಗರು ಅವರ ತಾಯಂದಿರು ಬೈಗುಳ ಬಳಸುವ ಬಗೆಗೆ ಹೇಳಿದ್ದಕ್ಕಿಂತ ಹೆಚ್ಚಿತ್ತು. ಅಮೆರಿಕದ ಕಾಲೇಜು ವಿದ್ಯಾರ್ಥಿಗಳು ಲೈಂಗಿಕ, ಧಾರ್ಮಿಕ ಮತ್ತು ಮಲಮೂತ್ರ ವಿಸರ್ಜನೆಗಳಿಗೆ ಸಂಬಂಧಿಸಿದ ಕ್ಷುದ್ರಪದಗಳನ್ನು ಬಳಸುವ ಬಗೆಗೆ ಗ್ಯಾರಿ ಸೆಲ್ನೋವ್ (೧೯೮೫) ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನವು ಮೇಲಿನ ವರದಿಯ ತೀರ್ಮಾನಗಳನ್ನು ಸಮರ್ಥಿಸುವಂತಿದೆ. ಇಲ್ಲಿಯೂ ಅಪ್ಪಂದಿರು ಹೆಚ್ಚು ಬೈಯುತ್ತಿದ್ದರೆಂದು ಗಂಡು ಹೆಣ್ಣುಗಳಿಬ್ಬರೂ ವರದಿ ಮಾಡಿದರು. ಆದರೆ, ಅಮ್ಮಂದಿರು ಹೆಚ್ಚು ಬೈಯುತ್ತಿದ್ದರೆಂದು ಹುಡುಗಿಯರು ಹೇಳಿದರೆ, ಹುಡುಗರು ಅಮ್ಮಂದಿರು ಅಷ್ಟೇನೂ ಬೈಯುತ್ತಿರಲಿಲ್ಲವೆಂದು ಹೇಳಿದರು.

ಕೆಲವು ಜಂಡರ್ ಸೂಚಕಗಳನ್ನು ಬಳಸಲೇಬೇಕೆಂಬ ನಿಮಯಗಳೇನೂ ಇಲ್ಲ. ಆದರೆ, ಮಾತಾಡುವವರು ಅವುಗಳನ್ನು ತಮಗೆ ಬೇಕೆಂದಾಗ ಬಳಸುತ್ತಾರೆ. ಉದಾಹರಣೆಗೆ ಲೇಡಿ ಡಾಕ್ಟರ್, ಮೇಲ್ ನರ್ಸ್ ಮುಂತಾದ ಪದಗಳು. ಈ ಪದಗಳನ್ನು ಬಳಸುವವರು ತಾವು ಸೂಚಿಸುವ ವ್ಯಕ್ತಿಯ ಜಂಡರ್ ಅನ್ನು ಹೇಳುತ್ತಿರುವುದಷ್ಟೇ ಅಲ್ಲದೆ, ಸಾಮಾನ್ಯ ವಾಗಿ ಡಾಕ್ಟರ್‌ಗಳು ಗಂಡಸರಾಗಿರುತ್ತಾರೆ ಹಾಗೂ ನರ್ಸ್‌ಗಳು ಹೆಂಗಸರಾಗಿರುತ್ತಾರೆ ಎಂಬ ನಂಬಿಕೆಯನ್ನು ಗಟ್ಟಿಮಾಡುತ್ತಿದ್ದಾರೆ. ಬಳಸಲೇಬೇಕೆಂಬ ನಿಯಮವಿರುವ ಸೂಚಕಗಳಿವೆ. ಉದಾಹರಣೆಗೆ, ಸರ್ವನಾಮಗಳು. ಆದರೆ, ಜನರು ತಮ್ಮ ಆಯ್ಕೆಯಿಂದ ಬಳಸುವ ಜಂಡರ್ ಸೂಚಕಗಳು ಸಾಮಾಜಿಕವಾಗಿ ಜಂಡರ್ ಬಗ್ಗೆ ಇರುವ ನಂಬಿಕೆಗಳನ್ನು ಒಪ್ಪುತ್ತಾ ಮತ್ತಷ್ಟು ಗಟ್ಟಿಗೊಳಿಸುತ್ತವೆ.

ಈ ಭಾಷಿಕ ಸಂಪನ್ಮೂಲಗಳೆಲ್ಲ ಈಗಾಗಲೇ ಸಿದ್ಧರೂಪದಲ್ಲಿ ಇರುವಂಥವು. ಇವುಗಳಿಗೆ ತಮ್ಮದೇ ಆದ ಚರಿತ್ರೆ ಇರುತ್ತವೆ. ಹೊಸ ಪದರಚನೆಗಳನ್ನು ಸಂದರ್ಭಾನುಸಾರ ಬಳಸಿ ಜಾರಿಗೊಳಿಸಬಹುದು. ಚಲಾವಣೆಗೆ ತರಬಹುದು. ಮೋನಿಕಾ ಗೇಟ್ ಎಂಬ ಪದ ಚಲಾವಣೆಗೆ ಬಂದು ಒಪ್ಪಿತವಾಗಲು ಭಾಷಿಕರಿಗೆ ವಾಟರ್‌ಗೇಟ್ ಪದ ಈಗಾಗಲೇ ಪರಿಚಿತವಿದ್ದುದೇ ಕಾರಣ.  ಎರಡೂ ಸಂದರ್ಭಗಳಲ್ಲಿ ಇದ್ದ ಸಾಮಾಜಿಕ ನೆಲೆಯ ಸಮಾನಾಂಶಗಳು ಇಂಥ ಪದಗಳ ಹುಟ್ಟು ಮತ್ತು ಚಲಾವಣೆಗೆ ಕಾರಣವಾಗುತ್ತವೆ.  ೨೧ನೇ ಶತಮಾನದವರೆಗೂ ಅಂತರ್ಜಾಲವನ್ನು ಬಳಸಿ ಅಗಾಧ ಪ್ರಮಾಣದ ಹಣ ಕೂಡಿ ಹಾಕಿದ ವ್ಯಕ್ತಿಯನ್ನು ಗುರುತಿಸಲು ಡಾಟ್‌ಕಾಮರ್ ಎಂಬ ಪದ ಬಳಸುವುದು ಸಾಧ್ಯ ವಿರಲಿಲ್ಲ. ಈ ಪದ ಕೇವಲ ವಿವರಣೆ ಮಾತ್ರ ನೀಡುವುದಿಲ್ಲ. ಅಂಥ ವ್ಯಕ್ತಿಯ ಜೀವನ ಶೈಲಿಯನ್ನು ಕುರಿತು ಮೌಲ್ಯಾತ್ಮಕವಾದ ನಿರ್ಣಯಗಳನ್ನೂ ಹೇಳುತ್ತದೆ. ಇಂಥವರು ಅಗಾಧ ಪ್ರಮಾಣದಲ್ಲಿ ಹಣ ಸಂಪಾದಿಸಿ ದುಂದುವೆಚ್ಚ ಮಾಡುವವರಾಗಿರುತ್ತಾರೆ. ಅಭಿರುಚಿಗೂ ಅವರಿಗೂ ಗಾವುದ ದೂರ. ಸಿಲಿಕಾನ್ ವ್ಯಾಲಿಯಲ್ಲಿ ಹೊಸ ತಲೆಮಾರಿನವರು ಹೀಗೆ ಐಶ್ವರ್ಯವಂತರಾದ್ದರಿಂದ ಅಲ್ಲಿನ ಜೀವನ ವೆಚ್ಚ ಸಹಿಸಲಾರದಷ್ಟು ಹೆಚ್ಚಿತ್ತು. ಇದನ್ನು ತಿರಸ್ಕಾರದಿಂದ ನೋಡುವವರಿಂದ ಈ ಪದ ಹುಟ್ಟಿಕೊಂಡಿತು. ಆದರೆ, ಡಾಟ್‌ಕಾಮರ್ ಹುಟ್ಟಲು ಆ ಹೊತ್ತಿಗೆ ಡಾಟ್‌ಕಾಮ್ ಪದ ಪರಿಚಿತವಾಗಿದ್ದದ್ದೇ ಕಾರಣ. ಅಂದರೆ ಹೊಸ ಪದವನ್ನು ಚಲಾವಣೆಗೆ ತರುವುದೆಂದರೆ ಹೊಸ ದೃಷ್ಟಿಕೋನವನ್ನು ಮಂಡಿಸುವುದು ಎಂದರ್ಥ.

ವಾಕ್ಯರಚನೆ

ಪದಗಳಿಂದ ವಾಕ್ಯರಚನೆಯಾಗುತ್ತದೆ. ವಾಕ್ಯಗಳು ಭಾಷೆಯ ಪ್ರಸ್ತಾವನೆಗಳನ್ನು ಮಂಡಿಸಲು ಅನುವು ಮಾಡಿಕೊಡುತ್ತವೆ. ವಾಕ್ಯಗಳು ಹೇಳುವವರ, ಕೇಳುವವರ ಮತ್ತು ರಚನೆಯಾದ ಸಂದರ್ಭದ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ‘ಜೋನ್ ಕಿಸ್ಡ್ ಜಾನ್’ ಮತ್ತು ‘ಜಾನ್ ಕಿಸ್ಡ್ ಜೋನ್’ ಎಂಬ ವಾಕ್ಯಗಳಲ್ಲಿ ಅವವೇ ಪದಗಳಿವೆ.  ಆದರೆ ಅರ್ಥ ವ್ಯತ್ಯಾಸ ವಾಕ್ಯರಚನೆಯಲ್ಲಿದೆ. ಮೊದಲ ವಾಕ್ಯದಲ್ಲಿ ಜೋನ್ ಕ್ರಿಯೆಗೆ(ಕಿಸ್) ಕಾರಣಕರ್ತಳು. ಜಾನ್ ಕ್ರಿಯೆಯ ಅನುಭೋಗಿ. ಎರಡನೇ ವಾಕ್ಯದಲ್ಲಿ ಜಾನ್ ಕರ್ತೃವಾದರೆ ಜೋನ್ ಅನುಭೋಗಿಯಾಗುತ್ತಾಳೆ. ಈ ವಾಕ್ಯಗಳಲ್ಲಿ ಜಂಡರ್ ಸಂಬಂಧದ ನೆಲೆಗಳು ಇಲ್ಲ.  ಅಂದರೆ ವಾಕ್ಯರಚನೆಯ ನಿಯಮಗಳಲ್ಲಿ ಕರ್ತೃ ಮತ್ತು ಅನುಭೋಗಿಗಳು ಯಾರು ಆಗಬೇಕು ಎಂಬ ಕಟ್ಟುಪಾಡುಗಳನ್ನು ವಿಧಿಸಿಲ್ಲ. ಹೀಗಿದ್ದರೂ, ಪಠ್ಯಪುಸ್ತಕಗಳು ಹಾಗೂ ಭಾಷಾ ಕಲಿಕೆಯ ಕೈಪಿಡಿಗಳು ರಚಿಸಿಕೊಡುವ ಉದಾಹರಣೆಯ ವಾಕ್ಯಗಳಲ್ಲಿ ಹೆಚ್ಚುಪಾಲು ಗಂಡಸರೇ ಕರ್ತೃಗಳಾಗಿರುತ್ತಾರೆ. ಹೆಂಗಸರು ಅನುಭೋಗಿಗಳಾಗಿರುತ್ತಾರೆ. ಆದ್ದರಿಂದ ವಾಕ್ಯಗಳಿಂದ ಕಟ್ಟಲಾಗುವ ಕಥನಗಳಲ್ಲಿ ಸಮಾಜದ ಜಂಡರ್ ಆಧಾರಿತ ನಂಬಿಕೆಗಳು ಪ್ರಕಟಗೊಳ್ಳುತ್ತವೆ.

ವಾಕ್ಯಗಳಲ್ಲಿ ಕರ್ಮಣಿ ಪ್ರಯೋಗ ಎಂಬ ಸಾಧ್ಯತೆಯೂ ಇದೆ. ಒಂದೇ ಘಟನೆಯಲ್ಲಿ ಭಾಗಿಗಳಾಗಿರುವವರ ಸ್ಥಾನಪಲ್ಲಟ ಮಾಡದೆ (ಮೇಲೆ ನೀಡಿದ ಉದಹಾರಣೆಯಲ್ಲಿ ಹಾಗೆ ಪಲ್ಲಟವಾಗಿದೆ.) ವಿಷಯವನ್ನು ಮಂಡಿಸುವ ಕ್ರಮವನ್ನು ಬದಲಾಯಿಸಬಹುದು. ಜೋನ್ ಕಿಸ್ಡ್ ಜಾನ್ ವಾಕ್ಯದ ಕರ್ಮಣಿ ಪ್ರಯೋಗ ಜಾನ್ ವಾಸ್ ಕಿಸ್ಡ್ ಬೈ ಜೋನ್ ಎಂದಾಗುತ್ತದೆ. ಎರಡೂ ವಾಕ್ಯಗಳಲ್ಲಿ ಕರ್ತೃ ಜೋನ್ ಆಗಿದ್ದರೆ, ಅನುಭೋಗಿ ಜಾನ್ ಆಗಿದ್ದಾನೆ. ಇಂತಹ ವಾಕ್ಯಗಳಲ್ಲಿ ಕೆಲವೊಮ್ಮೆ ಕರ್ತೃವನ್ನು ಸೂಚಿಸದೆಯೂ ಇರಬಹುದು.  ಈ ಬಗೆಯ ಕರ್ಮಣಿ ಪ್ರಯೋಗಗಳಿಗೆ ಕರ್ತೃರಹಿತ ಕರ್ಮಣಿ ಎನ್ನುತ್ತಾರೆ. ಉದಾಹರಣೆಗೆ ದ ಹೌಸ್ ವಾಸ್ ಬಿಲ್ಟ್ ಇನ್ ೧೯೩೦ ಎಂಬ ವಾಕ್ಯದಲ್ಲಿ ಮನೆಯನ್ನು ಕಟ್ಟಿದವರ ಅಂದರೆ ಕರ್ತೃವಿನ ಉಲ್ಲೇಖವಿಲ್ಲ. ಭಾಷಾಶಾಸ್ತ್ರಜ್ಞೆ ಜೂಲಿಯಾ ಪೆನೆಲೊಪೆ (೧೯೯೦) ಹೇಳುವಂತೆ, ಇಂತಹ ಕರ್ತೃರಹಿತ ಕರ್ಮಣಿ ಪ್ರಯೋಗಗಳಿಗೆ ಒಂದು ಜಂಡರ್ ನೆಲೆಯ ಉದ್ದೇಶವಿದೆ. ಗಂಡಸು ಹೆಂಗಸನ್ನು ಶೋಷಿಸುವ ನೆಲೆಯಲ್ಲಿ ಕರ್ತೃವಾಗಿ ಗಂಡಸಿನ ಪಾತ್ರವನ್ನು ಹೇಳುವಲ್ಲಿ  ಇಂಥ ವಾಕ್ಯಗಳು ಬಳಕೆಯಾಗುತ್ತವೆ. She was raped ಎಂಬ ವಾಕ್ಯ ವರದಿಯೊಂದರಲ್ಲಿ ಇದೆ ಎಂದುಕೊಳ್ಳಿ rapeನ ಕರ್ತೃವನ್ನು ವಾಕ್ಯ ಹೇಳುವುದಿಲ್ಲ. ಒಂದು ವೇಳೆ ವರದಿಯಲ್ಲಿ ಆಕೆಯು ದೇಹ ತೋರಿಸುವ ಮೇಲಂಗಿ, ಬಿಗಿ ಕೆಳಯುಡುಗೆಗಳನ್ನು ಕಟ್ಟಿದ್ದಳೆಂಬ ವಿವರ ಇದ್ದರಂತೂ rape ಎಂಬ ಅಪರಾಧಕ್ಕೆ ಅವಳೇ ಕರ್ತೃ ಎಂಬ ಭಾವ ಮೂಡುವಂತಾಗುತ್ತದೆ. ಅವಳೇ ಆರೋಪಿ ಎನಿಸಬಹುದು. ವಾಕ್ಯವು ಜಂಡರ್ ಇಲ್ಲವೇ ಲೈಂಗಿಕತೆಗೆ ಸಂಬಂಧ ಪಟ್ಟಿದ್ದರೆ, ಆ ವಾಕ್ಯರಚನೆಗೆ ಆಯ್ದುಕೊಂಡ ಮಾದರಿಯು ಸಮಾಜವು ನಂಬಿದ ಜಂಡರ್ ತಾತ್ವಿಕತೆಯನ್ನು ಪ್ರತಿನಿಧಿಸುತ್ತದೆ. ವಾಕ್ಯವೇ ನೇರವಾಗಿ ಈ ಅರ್ಥವನ್ನು ಹೇಳುತ್ತದೆಂದಲ್ಲ. ವಾಕ್ಯದ ಅರ್ಥವನ್ನು ಸಾಮಾಜಿಕ ಚೌಕಟ್ಟಿನಲ್ಲಿ ಗ್ರಹಿಸುವಾಗ ಈ ಸಾಧ್ಯತೆ ಮುಂಚೂಣಿಗೆ ಬರುತ್ತದೆಂದು ತಿಳಿಯಬೇಕು.

ಕಥನ

ವಾಕ್ಯಗಳಿಂದ ರಚನೆಗೊಂಡ ನಿರೂಪಣೆಯನ್ನು ಕಥನ ಎನ್ನುತ್ತಾರೆ. ಕಥನದಲ್ಲಿ ವಾಕ್ಯಕ್ಕೆ ಅದರದೇ ಅರ್ಥವಿರುವಂತೆ, ಜೊತೆಯಲ್ಲಿರುವ ವಾಕ್ಯಗಳ ಮೂಲಕವೂ ಹೆಚ್ಚಿನ, ಕೆಲವೊಮ್ಮೆ ಬೇರೆಯೇ ಆದ ಅರ್ಥವೂ ಇರುತ್ತದೆ. ಒಂದು ಕಥನದಲ್ಲಿ ಒಬ್ಬರಿಗಿಂತ ಹೆಚ್ಚು ಜನ ಭಾಗೀದಾರರಿಬಹುದು. ಉದಾಹರಣೆಗೆ ಸಂಭಾಷಣೆಗಳು. ಇಂಥ ಕಥನಗಳಲ್ಲಿ ಗಂಡುಹೆಣ್ಣುಗಳು ಕಥನದ ವಿಷಯವಾಗಿರುವಂತೆ ಅದರ ಭಾಗೀದಾರರೂ ಆಗಿರುತ್ತಾರೆ.  ಆಗ ವಾಕ್ಯರಚನೆಯ ನಿಯಮಗಳ ಜೊತೆಗೆ ಜಂಡರ್ ಸಂಬಂಧದ ಸಿದ್ಧ ಆಕೃತಿಗಳು ಅದರೊಳಗೆ ಸೇರಿಕೊಳ್ಳುತ್ತವೆ.