ವಿಶ್ಲೇಷಣೆ

ಭಾಷೆ ಮತ್ತು ಜಂಡರ್‌ಗಳ ಅಧ್ಯಯನವು ಭಾಷಿಕ ಸಂಪನ್ಮೂಲಗಳನ್ನು ಸಾಮಾಜಿಕ ಉದ್ದೇಶಗಳಿಗಾಗಿ ಬಳಸುವ ಬಗೆಯನ್ನು ವಿಶ್ಲೇಷಿಸಬೇಕಾಗುತ್ತದೆ. ಸಾಮಾಜಿಕ ಉದ್ದೇಶಗಳು ಯಾವುವು, ಭಾಷಿಕ ಸಂಪನ್ಮೂಗಳು ಈ ಗುರಿಗಳ ಪೂರೈಕೆಗೆ ಹೇಗೆ ನೆರವಾಗುತ್ತವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಜಂಡರ್‌ನ ತಾತ್ವಿಕತೆಯು ವಹಿಸುವ ಪಾತ್ರವು ನಮ್ಮ ಆಲೋಚನಾ ಕ್ರಮದಲ್ಲಿ ಅಡಕಗೊಂಡಿರುವುದರಿಂದ ವಿಶ್ಲೇಷಣೆಯಲ್ಲಿ ಕೆಲವೊಮ್ಮೆ ಊಹೆಗಳನ್ನು ಮಾಡಬೇಕಾಗುತ್ತದೆ. ಭಾಷಿಕ ಸಂಪನ್ಮೂಲಗಳ ಸ್ವರೂಪ ಮತ್ತು ಸಾಮಾಜಿಕ ಉದ್ದೇಶಗಳ ಸಾಧನೆಗಳ ಸಂಬಂಧವನ್ನು ಒಪ್ಪುವಂತೆ ಮಂಡಿಸಿದಾಗ ವಿಶ್ಲೇಷಣೆ ಗೆಲ್ಲುತ್ತದೆ.  

ಭಾಷೆ ಮತ್ತು ಜಂಡರ್‌ಗಳ ಮುಖಾಮುಖಿಯ ಬಗ್ಗೆ ತಾತ್ವಿಕ ನಿರೂಪಣೆಗಳನ್ನು ಮಾಡುವವರೆಲ್ಲರೂ ಯಾವುದೋ ಒಂದು ಅಂಶದ ಕಡೆಗೆ ಮಾತ್ರ ಗಮನ ಹರಿಸಿರುತ್ತಾರೆ.  ಹೀಗಾಗಿ ಈ ತಾತ್ತ್ವಿಕ ನಿರೂಪಣೆಗಳು ಅತಿವ್ಯಾಪ್ತಿ ದೋಷಕ್ಕೆ ಒಳಗಾಗುವುದುಂಟು.  ಅಧಿಕಾರ ಮತ್ತು ಪುರುಷ ಯಜಮಾನ್ಯ ಕೆಲವರಿಗೆ ಮುಖ್ಯವಾಗಿ ಕಂಡರೆ, ಜಂಡರ್‌ಗಳ ಪ್ರತ್ಯೇಕತೆ ಮತ್ತು ಅದರಿಂದಾದ ತಾರತಮ್ಯ ಮತ್ತೆ ಕೆಲವರಿಗೆ ಮುಖ್ಯವೆನಿಸುತ್ತದೆ.  ಒಂದೊಂದು ತಾತ್ತ್ವಿಕ ನಿರೂಪಣೆಯೂ ತನ್ನ ಮಟ್ಟಿಗೆ ಸತ್ಯಾಂಶವನ್ನೇ ಮಂಡಿಸುತ್ತಿದ್ದರೂ ಅವು ಇಡೀ ಚಿತ್ರವನ್ನು ಪೂರ್ಣಗೊಳಿಸುವುದಿಲ್ಲ. ಒಂದು ಅಂಶಕ್ಕೆ ಮಾತ್ರ ಒತ್ತು ಕೊಡುವುದರಿಂದ, ಮುಖ್ಯವೆನಿಸುವ ಹಲವು ಸಂಗತಿಗಳು ಬಿಟ್ಟುಹೋಗುತ್ತವೆ.  ಜಂಡರ್‌ಗಳ ತಾರತಮ್ಯವನ್ನು ಕುರಿತು ಒತ್ತು ಕೊಡುವ ಚಿಂತನೆಯನ್ನು ಪರಿಗಣಿಸಿದರೆ, ಅದು ಪುರುಷರ ಯಜಮಾನ್ಯದ ಸಂರಚನೆಯ ಮಹತ್ವವನ್ನು ಕಿರಿದುಗೊಳಿಸುತ್ತದೆ. ಹಾಗೆಯೇ ಯಾಜಮಾನ್ಯಕ್ಕೆ ಮಣೆಹಾಕುವ ತಾತ್ತ್ವಿಕತೆಗಳು ಜಂಡರ್ ಎಂಬುದು ದಿನದಿನದ ನಡವಳಿಯಲ್ಲಿ ಚಲನಶೀಲವಾಗಿ ಆಕಾರ ಪಡೆಯುವುದನ್ನು, ಮತ್ತು ಅದರಲ್ಲಿ ನಡೆಯುತ್ತಿರುವ ಪರಿವರ್ತನೆಗಳನ್ನು ಗಮನಿಸುವುದಿಲ್ಲ. ವ್ಯಕ್ತಿಯ ಅನುಭವಗಳನ್ನು ಮುಂದಿಟ್ಟುಕೊಂಡು ನಡೆಸಿದ ಅಧ್ಯಯನಗಳು ಸಾಮಾಜಿಕ ವ್ಯವಸ್ಥೆಯ ಲಕ್ಷಣಗಳನ್ನು ಗ್ರಹಿಸಲಾರವು.  ಹಾಗೆಯೇ, ಸಾಮಾಜಿಕ ನೆಲೆಯಿಂದ ನಡೆಸಿದ ಅಧ್ಯಯನಗಳು ವ್ಯಕ್ತಿಯ ಸಾಧ್ಯತೆಗಳನ್ನು ಮೊಟಕುಗೊಳಿಸುತ್ತವೆ. ಇದು ಅಧ್ಯಯನದ ವೈಧಾನಿಕತೆಯ ಸಮಸ್ಯೆ. ಈ ಸಮಸ್ಯೆಯ ಅರಿವು ಇರುವುದರಿಂದ ಅದರಿಂದ ಬಿಡುಗಡೆ ಪಡೆಯುವ ದಾರಿಗಳನ್ನು ಹುಡುಕಿಕೊಳ್ಳಬೇಕು.

ಕನ್ನಡಿಗಳ ಕೋಣೆ

ಜಂಡರ್ ವ್ಯತ್ಯಾಸಗಳನ್ನು ಗಮನಿಸುವವರಿಗೆ ಭಾಷಿಕ ಸಿದ್ಧರೂಪಗಳು ಮನಸೆಳೆಯುತ್ತವೆ.  ಏಕೆಂದರೆ ಅವುಗಳ ನೆರವಿನಿಂದ ಸುಲಭವಾದ ತೀರ್ಮಾನಗಳಿಗೆ ಬರಬಹುದು. ಮತ್ತೆ ಕೆಲವರು ತಮ್ಮ ಪ್ರಮೇಯಗಳನ್ನು ಮಂಡಿಸಲು ಈ ಸಿದ್ಧರೂಪಗಳನ್ನು ಬಳಸಿಕೊಳ್ಳುತ್ತಾರೆ.  ಹೀಗಾಗಿ ಈ ವಲಯದ ಅಧ್ಯಯನಗಳು ಅಪರಿಪೂರ್ಣವಾಗಿವೆ, ಇಲ್ಲವೇ ನಕಾರಾತ್ಮಕ ನೆಲೆಗಳಲ್ಲಿ ನಿಂತಿವೆ. ಈ ಪರಿಸ್ಥಿತಿಯನ್ನು ವಿವರಿಸಲೆಂದೇ ಶಾನ್ ವೇರಿಂಗ್(೧೯೯೬) ಒಂದು ರೂಪಕವನ್ನು ಬಳಸಿದ್ದಾರೆ. ಅವರು ಹೇಳುವಂತೆ ಇದೊಂದು ‘ಕನ್ನಡಿಗಳಿರುವ ಕೋಣೆ’.

ರೊನಾಲ್ಡೆ ಮೆಖಾಲೆ (೧೯೭೮) ಬಹು ಹಿಂದೆಯೇ ಈ ಅಧ್ಯಯನಗಳು ಹೀಗೆಯೇ ಸಾಗಬಹುದು ಎಂದು ಊಹಿಸಿದ್ದರು. ಉದಾಹರಣೆಗೆ, ಎಷ್ಟೋ ಅಧ್ಯಯನಗಳು ಹುಡುಗಿಯರು ಹುಡುಗರಿಗಿಂತ ವೇಗವಾಗಿ ಭಾಷಾಕೌಶಲಗಳನ್ನು ಪಡೆಯುತ್ತಾರೆಂದೂ, ಉತ್ತಮ ಭಾಷಾಸಾಮರ್ಥ್ಯವನ್ನು ಹೊಂದಿರುತ್ತಾರೆಂದೂ ಘೋಷಿಸಿದ್ದವು. ಆದರೆ ಮೆಖಾಲೆಯವರು ಕಂಡುಕೊಂಡಂತೆ ಈ ತೀರ್ಮಾನಗಳನ್ನು ಸಮರ್ಥಿಸುವಷ್ಟು ಪುರಾವೆಗಳು ದೊರಕಿಲ್ಲ.

ಈ ಅಧ್ಯಯನಗಳ ಮೌಲ್ಯಮಾಪನ ಮಾಡಲು ಮೊದಲು ಭಾಷಾಸಾಮರ್ಥ್ಯವೆಂದರೇನು ಎಂಬುದನ್ನು ತಿಳಿದುಕೊಳ್ಳಬೇಕು. ಅಲ್ಲದೆ, ಮಕ್ಕಳಲ್ಲಿ ಈ ಸಾಮರ್ಥ್ಯವನ್ನು ಗುರುತಿಸಿ ಮೌಲ್ಯಮಾಪನ ಮಾಡಲು ಸೂಕ್ಷ್ಮವಾದ ಪರಿಕರಗಳು ಬೇಕು. ಹೆಚ್ಚು ಜನ ಅಧ್ಯಯನಕಾರರು ಕೌಟುಂಬಿಕ ಪರಿಸರವನ್ನಷ್ಟೇ ಗಮನಿಸಿರುತ್ತಾರೆ. ಹೀಗಾಗಿ, ಅಧ್ಯಯನದ ನಿರ್ಣಯಗಳು ಭದ್ರ ಬುನಾದಿಯ ಮೇಲೆ ನಿಲ್ಲುವುದಿಲ್ಲ. ಭಾಷಾಸಾಮರ್ಥ್ಯವನ್ನು (೧) ‘ಇತರ ಮಕ್ಕಳೊಡನೆ ಹೆಚ್ಚು ಮಾತಾಡುವುದು’ (೨) ‘ಸಿನಿಮಾ ನೋಡುವಾಗ ಸೂಕ್ತ ಪ್ರತಿಕ್ರಿಯೆಯನ್ನು ಮಾತಿನಲ್ಲಿ ನೀಡುವುದು’ (೩) ‘ತಾಯಿಯ ಬಳಿ ಹೆಚ್ಚಿನ ಮಾಹಿತಿಗಾಗಿ ಕೋರುವುದು’ (೪) ‘ಮಾತಾಡದೆ ಸುಮ್ಮನಿರುವುದು. ಆಹಾ ಓಹೋ ಎಂದು ಉದ್ಗರಿಸದೆ’- ಎಂದೆಲ್ಲಾ ಹೇಳಲಾಗಿದೆ. ಇವೆಲ್ಲ ಮಾತಿನ ಶೈಲಿಗಳೇ ಹೊರತು ಭಾಷಾಸಾಮರ್ಥ್ಯವನ್ನು ಅಳೆಯಲು ನೆರವಾಗುವ ಮಾಪಕಗಳಲ್ಲ.

ಈ ತೀರ್ಮಾನಗಳು ಸರಿ ಎಂದೇ ತಿಳಿಯೋಣ. ಆದರೆ ಹೆಂಗಸರಲ್ಲಿರುವ ಭಾಷಾ ಸಾಮರ್ಥ್ಯ ಮೇಲ್ಮಟ್ಟದ್ದು ಎಂದು ತೋರಿಸಲು ಇನ್ನೂ ಹೆಚ್ಚಿನ ತೌಲನಿಕ ಮಾಹಿತಿ ಅಗತ್ಯವಾಗುತ್ತದೆ.  ಮೆಖಾಲೆಯವರಿಗೆ ಈ ಬಗೆಯ ಮಾಹಿತಿ ದೊರಕಲಿಲ್ಲ. ಹೆಚ್ಚೆಂದರೆ ಕೆಲವು ಅಧ್ಯಯನಗಳು ಹೆಂಗಸು ಮೇಲುಗೈ ಪಡೆದದ್ದನ್ನು ತೋರಿಸಿದರೆ, ಹೆಚ್ಚಿನ ಅಧ್ಯಯನಗಳಲ್ಲಿ ಭಾಷಾಸಾಮರ್ಥ್ಯದ ವ್ಯತ್ಯಾಸಗಳಿಗೆ ಜಂಡರ್ ನೆಲೆಯ ಕಾರಣಗಳನ್ನು ಹುಡುಕುವುದು ಸಾಧ್ಯವಾಗಿರಲಿಲ್ಲ. ಹೆಂಗಸರು ಮೈಲುಗೈ ಪಡೆದ ಅಧ್ಯಯನಗಳಲ್ಲೂ ಕೂಡಾ ಗಂಡು ಹೆಣ್ಣುಗಳ ಭಾಷಾಸಾಮರ್ಥ್ಯದಲ್ಲಿ ವ್ಯತ್ಯಾಸ ಗಮನಾರ್ಹ ಆಗಿರಲಿಲ್ಲ. ಅಂದರೆ ಸಂಖ್ಯಾಶಾಸ್ತ್ರದ ಪರಿಕರಗಳನ್ನು ಬಳಸಿ ನೋಡಿದರೆ, ಆ ವ್ಯತ್ಯಾಸಕ್ಕೆ ಕಾರಣ ಪ್ರಯೋಗದ ದೋಷವೂ ಆಗಿರಬಹುದು. ಅದರ ಬದಲಿಗೆ ಮೆಖಾಲೆ ಕಂಡುಕೊಂಡಂತೆ ಭಾಷಾಸಾಮರ್ಥ್ಯಗಳ ವ್ಯತ್ಯಾಸಗಳಿಗೆ ಸಾಮಾಜಿಕ, ಆರ್ಥಿಕ ಹಿನ್ನೆಲೆಗಳ ಸಂಬಂಧ ಇದ್ದಂತೆ ಕಂಡು ಬಂತು. ಮೆಖಾಲೆ ಇನ್ನೂ ಮುಂದುವರೆದು ಇಂಥ ಅಧ್ಯಯನಗಳನ್ನು ಮಾಡಿದವರು ಗಂಡಸೋ ಹೆಂಗಸೋ ಎಂಬ ಅಂಶವೂ ಕೂಡ ಪ್ರಯೋಗ ಫಲಿತಗಳ ಮೆಲೆ ಪ್ರಭಾವ ಬೀರಿದೆ ಎಂದಿದ್ದಾರೆ. ಮಕ್ಕಳ ಭಾಷಾ ಬೆಳವಣಿಗೆಯ ಅಧ್ಯಯನ ಮಾಡಿದ ಹೆಚ್ಚಿನವರು ಹೆಂಗಸರೇ ಆಗಿದ್ದಾರೆ. ಆದ್ದರಿಂದ ಈ ನೆಲೆಯಿಂದಲೂ ಈ ಅಧ್ಯಯನಗಳ ಮೌಲ್ಯಮಾಪನ ಮಾಡಬೇಕಾಗಿದೆ.

ಇಂಥ ಅಧ್ಯಯನಗಳಿಂದ ಹೊರಪಟ್ಟ ಮಹತ್ವದ ಅಂಶವೊಂದಿದೆ. ಹುಡುಗರು, ಭಾಷಾವಿಕಲತೆ ಎನ್ನಬಹುದಾದ ತೊದಲುವಿಕೆಯನ್ನು ಬೆಳಸಿಕೊಳ್ಳುವ ಪ್ರಮಾಣ ಹುಡುಗಿಯರಲ್ಲಿ ಅದು ಬೆಳೆಯುವ ಪ್ರಮಾಣಕ್ಕಿಂತ ಹೆಚ್ಚಾಗಿದ್ದುದು ಕಂಡುಬಂತು. ಆದರೆ, ಇದರಿಂದ ಭಾಷಾವಿಕಲತೆಗಳಿಗೆ ಜಂಡರ್ ನೆಲೆಯ ಮೂಲ ಕಾರಣಗಳನ್ನು ಸಾಧಿಸಿ ತೋರಿಸಲು ಆಗುವುದಿಲ್ಲ.

ಈ ಅಧ್ಯಯನಕಾರರು ಜಂಡರ್ ತಾರತಮ್ಯಗಳು ಇರುವುದನ್ನು ಮೊದಲೇ ಗಮನಿಸಿದ್ದರು.ಹಾಗಾಗಿ, ಅಧ್ಯಯನಕ್ಕೆ ಮೊದಲೇ ಈ ತಾರತಮ್ಯಕ್ಕೂ ಭಾಷಾ ಸಾಮರ್ಥ್ಯಕ್ಕೂ ಯಾವುದೋ ಒಂದು ಬಗೆಯ ಸಂಬಂಧ ಇದ್ದೇ ತೀರಬೇಕೆಂಬ ನಿಲುವನ್ನು ಹೊಂದಿದ್ದರು. ಆದ್ದರಿಂದ, ಸಾಕಷ್ಟು ಮಾಹಿತಿ ಇಲ್ಲದಿದ್ದರೂ ತಮ್ಮ ಪ್ರಮೇಯಗಳಿಗೇ ಕಟ್ಟುಬಿದ್ದರು. ಈ ಅಂಶವನ್ನು ವಿವರಿಸಲು ಮೆಖಾಲೆ ಒಂದು ಅಧ್ಯಯನವನ್ನು ಉಲ್ಲೇಖಿಸುತ್ತಾರೆ. ಮೂರ್ ಟಿ (೧೯೬೭) ಎಂಬುವವರು ಎಂಟು ವರ್ಷದವರೆಗಿನ ಮಕ್ಕಳಲ್ಲಿ ಭಾಷಾಬೆಳವಣಿಗೆ ನಡೆಯುವ ಬಗೆಯನ್ನು ಅಧ್ಯಯನ ಮಾಡಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರನ್ನೂ ಒಳಗೊಂಡ ಈ ಅಧ್ಯಯನದಲ್ಲಿ ಮಕ್ಕಳನ್ನು ಆರನೆಯ ತಿಂಗಳು, ಹದಿನೆಂಟನೇ ತಿಂಗಳು, ಮೂರನೇ ವರ್ಷ, ಐದನೇ ವರ್ಷ, ಮತ್ತು ಎಂಟನೇ ವರ್ಷ – ಹೀಗೆ ಐದು ಹಂತಗಳಲ್ಲಿ ಅಧ್ಯಯನಕ್ಕೆ ಒಳಗು ಮಾಡಿದ್ದಾರೆ. ಪ್ರತಿ ಹಂತದಲ್ಲಿ ಆರು ಭಾಷಾಂಶಗಳ ಬೆಳವಣಿಗೆಯನ್ನು ಗಮನಿಸಲಾಗಿದೆ.  ಎಲ್ಲ ಹಂತಗಳಲ್ಲೂ ಈ ಎಲ್ಲ ಆರನ್ನೂ ಬಳಸಿಲ್ಲ. ಒಟ್ಟಾರೆ ಅಧ್ಯಯನಕಾರರಿಗೆ ಜಂಡರ್ ತಾರತಮ್ಯ ಕಾಣಿಸಿಕೊಳ್ಳಬಹುದಾದ ಹದಿನಾರು ನೆಲೆಗಳು ಕಂಡುಬಂದಿವೆ. ಮೂರ್ ಅವರಿಗೆ ತಾವು ಬಳಸಿದ ಆರು ಭಾಷಾಂಶ ಬೆಳವಣಿಗೆಯ ಮಾಪಕಗಳಲ್ಲಿ ಹದಿನೆಂಟನೇ ತಿಂಗಳಲ್ಲಿ ನಡೆಸಿದ ಅಧ್ಯಯನಗಳಲ್ಲಿ ಒಂದು ಭಾಷಾಂಶ ಮಾತ್ರ ಜಂಡರ್ ತಾರತಮ್ಯದಿಂದ ಪ್ರಭಾವಿತವಾದಂತೆ ಕಂಡುಬಂತು. ಅವರ ಮಾತುಗಳನ್ನು ನೋಡಿ : ‘ಮುಂದೆ ತಾನು ಹೆಂಡತಿಯಾಗಿ, ತಾಯಿಯಾಗಿ, ಕುಟುಂಬದ ವಕ್ತಾರೆಯಾಗಿ ವಹಿಸಬೇಕಾದ ಪಾತ್ರಗಳಿಗೆ ಈಗಲೇ ಸಿದ್ಧತೆ ಮಾಡಿಕೊಳ್ಳುವಂತೆ ಚಿಕ್ಕ ಹುಡುಗಿ ಅದಕ್ಕೆ ತಕ್ಕ ಮನೆಯಾಟಗಳನ್ನು ಆಡುತ್ತಲೇ ಭಾಷಾಸಾಮರ್ಥ್ಯಗಳನ್ನು ಪಡೆದುಕೊಳ್ಳುತ್ತಾಳೆ. ಈ ಹಂತದಲ್ಲಿ ಕುಟುಂಬದ ಒಂದು ಮುಖ್ಯ ನೆಲೆಯಾದ ‘ಸಾಕುವಿಕೆ’ ಅವಳ ಪ್ರಧಾನ ಆಸಕ್ತಿ. ಗುರುತಿಸಿಕೊಳ್ಳಲು ಬೇಕಾದ ದಾರಿಗಳನ್ನು ಆಕೆ ತನ್ನ ತಾಯಿಯೊಡನೆ ಮಾತಾಡುತ್ತಾ ಕಲಿಯುತ್ತಾಳೆ. ಈ ಹಂತದಲ್ಲಿ ತಾಯಿಯ ಮಾತನ್ನೇ ಅನುಕರಿಸುತ್ತಾ ಭಾಷಾಸಾಮರ್ಥ್ಯ ಗಳನ್ನು ನೆಲೆಗೊಳಿಸಿಕೊಳ್ಳುತ್ತಾಳೆ.   ಈ ಸಾಮರ್ಥ್ಯಗಳು ಮೊದಮೊದಲು ಮನೆಗೆಲಸಗಳಿಗೆ ಸೀಮಿತವಾದಂತೆ ಕಂಡರೂ, ಬಳಿಕ ಇನ್ನೂ ಹೆಚ್ಚಿನ ಬಳಕೆಗಳಿಗೆ ಹೊಂದಿಕೊಳ್ಳುತ್ತವೆ. ಈ ಮಾತುಕತೆಗಳ ಚಹರೆ ಎಲ್ಲರಿಗೂ ಗೊತ್ತಿರುವಂಥದು. ಅವಳಿರುವ ಕುಟುಂಬದ ವಾತಾವರಣ ಒತ್ತಾಸೆ ನೀಡಿದರೆ ಆಕೆಯ ಕಲಿಕೆ ಸುಗಮವಾಗಿ ನಡೆದುಹೋಗುತ್ತದೆ.

ಗಂಡು ಮಕ್ಕಳಲ್ಲೂ ಹೆಚ್ಚೂ ಕಡಿಮೆ ಹೀಗೆ ಇರುತ್ತದಾದರೂ ಅವರೆಲ್ಲರಿಗೂ ಸಮಾನವಾದ ಆಸಕ್ತಿಗಳು ಇರುವುದು ಕಡಿಮೆಯಾದ್ದರಿಂದ ಅವರ ಭಾಷಾಸಾಮರ್ಥ್ಯಗಳು ಬೇರೆ ಬಗೆಯಾಗಿರುತ್ತವೆ. ಹುಡುಗರು ಉಪಕರಣಗಳನ್ನು ಬಳಸಿ ಆಟ ಆಡುವುದು ತಾಯಿಗೇನೂ ಇಷ್ಟವಾಗುವುದಿಲ್ಲ. ಅಪ್ಪಂದಿರಂತೂ ಎಲ್ಲದರಿಂದ ದೂರವೇ ಇರುತ್ತಾರೆ. ಹೀಗಾಗಿ, ಗಂಡು ಮಕ್ಕಳಲ್ಲಿ ಮನೆಗೆಲಸದ ಬಗ್ಗೆ ಒಲವು ಮೂಡದು. ಆ ಸಂಬಂಧದ ಸಂವಹನ ಕೌಶಲಗಳೂ ಅವರಿಗೆ ದೊರಕುವುದಿಲ್ಲ. ಎಲ್ಲವನ್ನೂ ಅವರು ಗಮನಿಸಿರುತ್ತಾರೆ. ಆದರೆ, ಅದು ಮಾತಾಗಿ ಪರಿವರ್ತನೆ ಹೊಂದುವುದಿಲ್ಲ. ಮುಂದೆ ತಾನು ಈ ವಯಸ್ಸಿನಲ್ಲಿ ಕಂಡದ್ದನ್ನೆಲ್ಲಾ ನೆನಪಿಟ್ಟುಕೊಂಡು ಬೆಳೆವ ಹಂತದಲ್ಲಿ ತನ್ನ ಭಾಷಾಕೌಶಲಗಳ ಬೆಳವಣಿಗೆಗೆ ನೆರವನ್ನು ಪಡೆದುಕೊಳ್ಳುತ್ತಾನೆ. ಹಾಗಾಗಿ, ಹುಡುಗಿಯರಷ್ಟು ನಿರರ್ಗಳವಾಗಿ ಹುಡುಗರು ಮಾತಾಡುವುದಿಲ್ಲ ಎನಿಸುತ್ತದೆ. ಹುಡುಗರಲ್ಲಿ ಕಾಣುವ ಈ ‘ಕೊರತೆ’ಯೇ ಅವರಲ್ಲಿ ಮುಂದೆ ಬೆಳೆಯಲಿರುವ ವಿಶ್ಲೇಷಣಾ ಸ್ವಭಾವಕ್ಕೆ ಕಾರಣವಾಗಬಹುದು.

ಹುಡುಗಿ ಮನುಷ್ಯ ವರ್ತನೆಗಳ ಸ್ವರೂಪಗಳನ್ನು ನಿಕಟವಾಗಿ ಅರಿತುಕೊಳ್ಳುತ್ತಾಳೆ. ಆ ಮೂಲಕವೇ ನಾವೀಗ ‘ಸ್ತ್ರೀ ಅಂತಃಸ್ಫೂರ್ತಿ’ ಎಂದು ಕರೆಯುವ ಕೌಶಲ ಬೆಳೆಯುತ್ತದೆ.  ಮನುಷ್ಯ ವರ್ತನೆಗಳು ಹೀಗೆಯೇ ಇರುತ್ತವೆಂದು ಹೇಳಲಾಗುವುದಿಲ್ಲ. ಇದನ್ನು ಗ್ರಹಿಸುವ ಹುಡುಗಿಯರಲ್ಲಿ ಈ ಕಾರಣದಿಂದಲೇ ತಾರ್ಕಿಕ ಮನೋಭಾವ ಬೆಳೆಯುವ ಸಾಧ್ಯತೆ ಕಡಿಮೆ.  ವಸ್ತುಜಗತ್ತಿನೊಡನೆ ಸಂವಾದಿಸುವ ಹುಡುಗರಿಗೆ ಹೆಚ್ಚು ನಿಯತವಾದ ಕಾರ್ಯಕಾರಣ ಸಂಬಂಧಗಳು ಗೋಚರಿಸುತ್ತವೆ. ಅವರು ತರ್ಕಬದ್ಧ ಚಿಂತನೆಗಳಿಗೆ ಬೇಕಾದ ನೆಲೆಗಟ್ಟನ್ನು ಆ ಮೂಲಕ ಪಡೆದುಕೊಳ್ಳುತ್ತಾರೆ.’’ (ಮೂರ್ ಟಿ- ೧೯೬೭)

ಇಂದಿನ ದಿನಗಳಲ್ಲಿ ಹೀಗೆ ಜಂಡರ್‌ನ ಸಿದ್ಧಮಾದರಿಗಳನ್ನು ಯಾರೂ ಪ್ರಸ್ತಾಪಿಸುವುದಿಲ್ಲ.  ಮೊದಮೊದಲು ಅಧ್ಯಯನ ಮಾಡಿದವರು ಜಂಡರ್ ತಾರತಮ್ಯವನ್ನು ದೊಡ್ಡದು ಮಾಡಿ ಹೇಳಲು ಹೋಗಲಿಲ್ಲ. ಅವರನ್ನು ಉಲ್ಲೇಖಿಸುತ್ತಿದ್ದ ಮುಂದಿನವರು ಅವರ ನಿಲುವುಗಳಿಗೆ ಇಲ್ಲದ ಬಣ್ಣವನ್ನು ಹಚ್ಚಿದ್ದಾರೆ. ಕನ್ನಡಿಗಳ ಕೋಣೆಯೊಳಗೆ ಒಯ್ದ ಬಿಂಬಕ್ಕಿಂತ ದೊಡ್ಡದಾದ ಪ್ರತಿಬಿಂಬವನ್ನು ತೋರಿಸಲು ಹೋರಟಿದ್ದಾರೆ. ಇಂದಿನ ಅಧ್ಯಯನಕಾರರು ಹೀಗೆ ಎಲ್ಲವನ್ನೂ ಅತಿಗೆ ಒಯ್ಯುವ ಅಪಾಯದ ಬಗೆಗೆ ಎಚ್ಚರ ತಳೆಯುತ್ತಾರೆ.

ಹೆಚ್ಚಿನ ಅಧ್ಯಯನಗಳು ಗಂಡು ಹೆಣ್ಣುಗಳ ಭಾಷಿಕ ವರ್ತನೆಗಳಲ್ಲಿ ಎದ್ದುಕಾಣುವ ವ್ಯತ್ಯಾಸವಿದೆ ಎಂದು ಸಾಧಿಸಲು ಹೊರಡುವುದಿಲ್ಲ. ಕೆಲವರು ಮಾತ್ರ ಇರುವ ಅಷ್ಟಿಷ್ಟು ವ್ಯತ್ಯಾಸಗಳನ್ನು ದೊಡ್ಡದು ಮಾಡಿ ಮಂಡಿಸುತ್ತಾರೆ ಎಂಬುದು ಹೀಗೆ ಗುರುತಿಸಲಾದ ವ್ಯತ್ಯಾಸಗಳಲ್ಲೊಂದು.

ಇದು ನಿಜವೆಂದು ಸಾಧಿಸುವುದು ಹೇಗೆ? ‘ತಲೆ ತೂರಿಸುವಿಕೆ’ ಎಂಬುದು ನಾವು ತಿಳಿದಷ್ಟು ಸರಳವಾದುದಲ್ಲ. ಆದರೆ ಹೆಚ್ಚಿನ ಸಂಶೋಧನೆಗಳು ಗಂಡಸು ತಲೆತೂರಿಸುವವನು ಎಂಬ ಸಿದ್ಧನಿರ್ಣಯವನ್ನು ಎತ್ತಿ ಹಿಡಿಯಲು ತಮ್ಮ ಮಾಹಿತಿಗಳನ್ನೇ ತಿರುಚುತ್ತಿವೆ. ೧೯೬೫ ರಿಂದ ೯೧ ರವರೆಗೆ ನಡೆದ ಈ ನಿಟ್ಟಿನ ಎಲ್ಲ ಅಧ್ಯಯನಗಳನ್ನೂ ಸಮೀಕ್ಷಿಸಿದ ಡಬೊರಾ ಜೇಮ್ಸ್ ಮತ್ತು ಸಾಂಡ್ರಾ ಕ್ಲರ್ಕ್(೧೯೯೩)  ಇವರು ಮಾತುಕತೆಯಲ್ಲಿ ತಲೆತೂರಿಸುವಿಕೆಗೂ ಭಾಗೀದಾರರ ಜಂಡರ್‌ಗೂ ನಿಶ್ಚಿತವಾದ ಸಂಬಂಧವನ್ನು ಗುರುತಿಸುವುದು ಸಾಧ್ಯವಾಗಿಲ್ಲ ಎಂದೇ ಹೇಳುತ್ತಾರೆ.

ಒಟ್ಟಾರೆ, ಈ ಸಮೀಕ್ಷೆಯಲ್ಲಿ ಪರಿಶೀಲಿಸಲಾದ ಹದಿಮೂರು ಅಧ್ಯಯನಗಳು ಗಂಡಸು ಹೆಚ್ಚು ತಲೆತೂರಿಸುವುದನ್ನು ಸ್ಥಾಪಿಸಿದರೆ, ಎಂಟು ಅಧ್ಯಯನಗಳು ಹಾಗೆ ತಲೆತೂರಿಸುವವರು ಹೆಂಗಸರೇ ಎಂದು ಹೇಳುತ್ತಿವೆ. ಆದರೆ ಮೂವತ್ನಾಲ್ಕು ಅಧ್ಯಯನಗಳು ತಲೆತೂರಿಸುವುದಕ್ಕೂ ಜಂಡರ್ ವ್ಯತ್ಯಾಸಗಳಿಗೂ ಸಂಬಂಧವಿಲ್ಲವೆಂದೇ ಹೇಳುತ್ತಿವೆ. ಈ ಅಧ್ಯಯನಗಳಲ್ಲಿ ಗಂಡು ಹೆಣ್ಣು ಬೆರೆತು ನಡೆಸಿದ ಮಾತುಕತೆಗಳ ಸಂದರ್ಭಗಳಿದ್ದಂತೆ, ಅವರವರೇ ಇದ್ದ ಗುಂಪುಗಳ ಮಾತುಕತೆಯ ಸಂದರ್ಭಗಳೂ ಸೇರಿವೆ. ಈ ವಿವರಗಳನ್ನು ಗಮನಿಸಿದರೂ, ಗಂಡಸರೇ ತಲೆತೂರಿಸುವವರು ಎಂಬುದನ್ನು ನಿರ್ವಿವಾದವಾಗಿ ಸ್ಥಾಪಿಸುವುದು ಸಾಧ್ಯವಾಗುತ್ತಿಲ್ಲ.

ಸಮಾಜದಲ್ಲಿ ಗಂಡಸಿಗೆ ಹೆಚ್ಚು ಅಧಿಕಾರವಿದೆ ನಿಜ. ಇದರಿಂದಾಗಿಯೇ ಅವರು ಹೆಂಗಸರೊಡನೆ ಮಾತಾಡುವಾಗ ತಮ್ಮ ಅಧಿಕಾರ ಬಳಸಲು ಹೆಚ್ಚು ತಲೆತೂರಿಸುತ್ತಾರೆ ಎಂಬ ‘ಅನಿಸಿಕೆ’ ಚಾಲ್ತಿಗೆ ಬರುವುದು ಸಹಜವೇ ಆಗಿದೆ. ಗಂಡಸಿನಲ್ಲಿರುವ ಪೈಪೋಟಿ ಮತ್ತು ಮುನ್ನುಗ್ಗುವ ಗುಣಗಳು ಹೆಂಗಸಿನಲ್ಲಿರುವ ತಗಾದೆ ಮಾಡದ, ಸಹಕರಿಸುವ ಗುಣಗಳು ಈ ವಿವರಣೆಯ ಹಿನ್ನೆಲೆಯಲ್ಲಿ ಸೂಕ್ತವಾಗಿವೆ ಎಂದೂ ಅನಿಸುತ್ತದೆ. ಹೆಂಗಸರ ಈ ‘ನಮ್ರ’ ನೆಲೆ ಸಮಾಜದಲ್ಲಿ ಮತ್ತು ಜಂಡರ್ ಕುರಿತ ಬರಹಗಳಲ್ಲಿ ಆಳವಾಗಿ ಬೇರೂರಿದೆ. ಈ ತೀರ್ಮಾನವನ್ನು ಸಮರ್ಥಿಸುವ ಭಾಷಾಬಳಕೆಯ ಪ್ರಸಂಗಗಳ ವಿಶ್ಲೇಷಣೆ ಮಾತ್ರ ನಡೆದಿಲ್ಲ.  ಬದಲಿಗೆ ಇಂಥ ವಿಶ್ಲೇಷಣೆಗಳೆಲ್ಲ ಈಗಾಗಲೇ ಬೇರೂರಿದ ನಿಲುವನ್ನು ಸರಿ ಎಂದು ತಿಳಿದು ಹೊರಟು ಮತ್ತೆ ಅಲ್ಲಿಗೇ ಬಂದು ಸೇರುತ್ತವೆ.

ಅಧ್ಯಯನ ವಿಧಾನವನ್ನು ಕುರಿತು ಭಾಷೆ ಮತ್ತು ಜಂಡರ್ ಸಂಶೋಧನೆಯಲ್ಲಿ ಸಿದ್ಧಮಾದರಿಗಳು

ಮೆಲಾನಿ ಆನ್ ಫಿಲಿಪ್ಸ್ ಅವರು ಅಂತರಜಾಲದಲ್ಲಿ ಒಂದು ಕೈಪಿಡಿಯನ್ನು ಒದಗಿಸಿದ್ದಾರೆ (೧೯೮೯-೨೦೦೦). ಈ ಕೈಪಿಡಿಯು ಹೆಂಗಸಿನಂತೆ ಮಾತಾಡಲು ಬಯಸುವ ಗಂಡಸರಿಗೆ ಕೆಲವು ಸೂಚನೆಗಳನ್ನೂ ಮಾದರಿಗಳನ್ನೂ ಒದಗಿಸುತ್ತದೆ. ಅಲ್ಲಿರುವ ವಿವರ ನೋಡಿ : ‘‘…ಹೆಂಗಸು ಮಾತಾಡುವಾಗ ಬಳಸುವ ವಾಕ್ಯಗಳಲ್ಲಿ ಅಕ್ಕಪಕ್ಕದ ಯಾವುದೇ ಎರಡು ಪದಗಳನ್ನು ಒಂದೇ ಶ್ರುತಿಯಲ್ಲಿ ಉಚ್ಚರಿಸುವುದಿಲ್ಲ. ಹಾಗಾಗಿಯೇ, ಹೆಂಗಸರು ‘ರಾಗವಾಗಿ’ಮಾತಾಡಿದಂತೆ ಭಾಸವಾಗುತ್ತದೆ.  ನಿಜ ಅವರು ಹಾಡುತ್ತಿರುತ್ತಾರೆ.

ಕೆಲವೊಮ್ಮೆ ಈ ಶ್ರುತಿಯ ಏರಿಳಿತದಲ್ಲಿ ಕೆಳಶ್ರುತಿಗೆ ಹೋದಾಗ ಏನೋ ಗುಟ್ಟಿನ ಮಾತಿನ ದನಿ ಕೇಳಿಸುತ್ತದೆ. ಶ್ರುತಿ ಏರಿದಾಗ ಭಾವೋದ್ರೇಕ ಉಂಟಾದಂತೆ ತೋರುತ್ತದೆ. ಈ ಏರಿಳಿತಗಳು ಅಲೆಗಳಂತೆ ಚಲಿಸುತ್ತವೆ. ಇನ್ನೊಬ್ಬರೊಡನೆ ಮಾತನಾಡುವ ಮೂಲಕವೇ ಶ್ರುತಿಯ ಏರಿಳಿತದ ಬಗೆಯನ್ನು ಕಲಿತುಕೊಳ್ಳಲು ಸಾಧ್ಯ. ಅದು ತಂತಾನೇ ಸಿದ್ಧರೂಪದಲ್ಲಿ ಇರುವುದಿಲ್ಲ.’’

ಇದನ್ನು ಓದಿದವರಿಗೆ ಈ ವಿವರಣೆಯು ಹೆಂಗಸರು ಮಾತನಾಡುವ ಬಗೆಯನ್ನು ಒಂದು ಸಿದ್ಧಮಾದರಿಯಲ್ಲಿ ವಿವರಿಸುತ್ತಿದೆ ಎಂದು ಗೊತ್ತಾಗುತ್ತಿದೆ. ಹೆಂಗಸರ ಮಾತು ನಿಜವಾಗಿಯೂ ಹೇಗಿರುತ್ತದೆಂದು ಗೊತ್ತುಮಾಡುವ ಬಗೆ ಯಾವುದು? ಮೊದಲಿಗೆ ಹೆಂಗಸರು ಗಂಡಸರಿಗಿಂತ ಹೆಚ್ಚು ‘ರಾಗಬದ್ಧ’ ವಾಗಿ ಮಾತಾಡುತ್ತಾರೆಯೇ ಎಂಬುದನ್ನು ಪರಿಶೀಲಿಸೋಣ. ಈ ಪ್ರಶ್ನೆಗೆ ಉತ್ತರ ಹೇಳುವ ಮೊದಲಿಗೆ ಇನ್ನೊಂದು ಜಿಗುಟಾದ ಪ್ರಶ್ನೆ ಇದೆ. ‘ರಾಗಬದ್ಧವಾದ’ ಮಾತು ಎಂದರೇನು? ಭಾಷಿಕವಾಗಿ ಅದನ್ನು ವಿವರಿಸುವುದು ಹೇಗೆ? ಕೇಳಿದಾಗ, ಗುರುತಿಸುವುದು ಹೇಗೆ? ಒಂದು ವೇಳೆ ‘ರಾಗಬದ್ಧ’ ಮಾತನ್ನು ಗುರುತಿಸಲು ಬೇಕಾದ ಮಾನದಂಡಗಳು ದೊರಕಿದವು ಎಂದುಕೊಳ್ಳೋಣ. ನಾನು ಈಗ ಯಾವ ಹೆಂಗಸರನ್ನು ಯಾವ ಗಂಡಸರನ್ನು ಹೋಲಿಸಬೇಕು? ಹೆಂಗಸರೇ ‘ರಾಗಬದ್ಧ’ ಮಾತನ್ನಾಡುವರೆಂದು ಸಾಧಿಸಲು ಅಗತ್ಯವಾದ ವಿಶ್ಲೇಷಣಾ ವಿಧಾನವನ್ನು ಕಂಡುಕೊಳ್ಳುವುದು ಹೇಗೆ? ಇದಕ್ಕೆ ಯಾವ ಮಾಹಿತಿ ಸಂಗ್ರಹಿಸಬೇಕು? ಒಬ್ಬೊಬ್ಬರನ್ನೇ ಮಾತನಾಡಿಸುವುದೇನು? ಒಂದೇ ಜಂಡರ್‌ನ ಗುಂಪುಗಳ ಮಾತುಕತೆಯೇ, ಇಬ್ಬರೂ ಜೊತೆಗಿರುವ ಗುಂಪುಗಳ ಮಾತುಕತೆಯೋ? ಆ ಗುಂಪುಗಳ ಭಾಗೀದಾರರು ಪರಿಚಿತರಾಗಿರಬೇಕೇ, ಅಪರಿಚಿತ ರಾಗಿರಬೇಕೇ? ಔಪಚಾರಿಕ ಸನ್ನಿವೇಶಗಳೋ, ಹರಟೆಯ ಸನ್ನಿವೇಶಗಳೋ? ಮಾತುಕತೆಗೆ ಗೊತ್ತಾದ ವಿಷಯವನ್ನು ನಿಗದಿಪಡಿಬೇಕೇ? ದೊರೆತ ಮಾಹಿತಿಯನ್ನು ಬಳಸಿ ‘ಇದೇ ಹೆಂಗಸಿನ ಮಾತಿನ ಬಗೆ’ ಎಂದು ನಿರ್ಧರಿಸಲು ಯಾವ ಸಾಂಖ್ಯಿಕ ವಿಧಾನವನ್ನು ಬಳಸಬೇಕು? ಗಂಡಸರಲ್ಲಿ ಮತ್ತು ಹೆಂಗಸರಲ್ಲಿ ಕಂಡುಬರಬಹುದಾದ ಸಾಮಾನ್ಯ ಮಾದರಿಗಳನ್ನು ಹೋಲಿಸುವ ಪರಿಕರಗಳು ಯಾವುವು?  ಅವುಗಳಿಗೂ ಭಾಷೆಯ ಸಾಮಾಜಿಕ, ಇಲ್ಲವೇ ಪ್ರಾದೇಶಿಕ ಉಪಭಾಷೆಗಳಿಗೂ ಸಂಬಂಧ ಇರಬಹುದೇ? ಬೇರೆ ಬೇರೆ ಉಪಭಾಷೆಗಳ ಸಂದರ್ಭದಲ್ಲಿ ಈ ಮಾಹಿತಿಯನ್ನು ಬಳಸುವುದು ಹೇಗೆ?

ಭಾಷೆ ಮತ್ತು ಜಂಡರ್ ಕುರಿತ ಹೆಚ್ಚಿನ ಅಧ್ಯಯನಗಳಿಗೆ ಪೂರ್ವಸಿದ್ಧ ಮಾದರಿಗಳೇ ಮೊದಲ ನೆಲೆಗಳಾಗಿರುತ್ತವೆ. ಅದನ್ನೇ ಪ್ರಮೇಯವನ್ನಾಗಿ ಇರಿಸಿಕೊಳ್ಳುವುದು. ನಮ್ಮ ಭಾಷಿಕ ನೆಲೆಗಳಲ್ಲೂ ಈ ಮಾದರಿಗಳು ಕಾಣುತ್ತವೆ ಎನ್ನುವುದಕ್ಕಿಂತ ಸಾಮಾಜಿಕವಾಗಿ ಒಪ್ಪಿತವಾದ ಜಂಡರ್ ತಾತ್ತ್ವಿಕತೆಯಲ್ಲಿ ಇವು ನೆಲೆ ನಿಂತಿವೆ ಎನ್ನುವುದು ಹೆಚ್ಚು ಸರಿ. ಇವು ‘ಸುಳ್ಳು’ ಎಂದೇನಲ್ಲ.  ಆದರೆ ಎಳ್ಳಿನ ಕಾಳಷ್ಟನ್ನು ಬೆಟ್ಟ ಮಾಡಿ ಹೇಳುತ್ತವೆ. ಹೀಗೆ ಅತಿ ಮಾಡುವುದೂ ಉದ್ದೇಶ ಪೂರ್ವಕವಾಗಿಯೇ.  ಮೊದಲಿಗೆ ಹೆಂಗಸರ ಮಾತು ರಾಗಬದ್ಧವಾಗಿರುತ್ತವೆ ಎಂಬ ನಂಬಿಕೆಯನ್ನೇ ನೋಡೋಣ. ಇದು ಒಬ್ಬ ವ್ಯಕ್ತಿಗೆ ಹೆಂಗಸಿನ ಚಹರೆ ನೀಡುವುದಷ್ಟೇ ಅಲ್ಲದೆ ಗಂಡಸರಿಗೂ ಹೆಂಗಸರಿಗೂ ಇರುವ ವ್ಯತ್ಯಾಸವನ್ನು ಸ್ಥಾಪಿಸುತ್ತದೆ. ಸರಿ. ಹೆಂಗಸರ ಮಾತು ರಾಗಬದ್ಧವಾಗಿದ್ದರೆ ಗಂಡಸರ ಮಾತು ಹೇಗಿರುತ್ತದೆ? ಹೀಗೆ ಹೆಂಗಸರ ಮಾತಿಗೊಂದು ಲಕ್ಷಣವನ್ನು ಹೇಳುವುದರ ಹಿಂದಿನ ಸಾಮಾಜಿಕ ನೆಲೆಯ ಉದ್ದೇಶಗಳೇನು? ಇದರಿಂದ ಜಂಡರ್‌ಗಳ ನಡುವೆ ನೆಲೆಗೊಂಡ ವ್ಯವಸ್ಥೆಯನ್ನು ಮುಂದುವರೆಸುವ ಉದ್ದೇಶವಿದೆಯೇ? ನಗೆಯುಕ್ಕಿಸುವ ಅಣಕ ಮಾಡುವ ಸಂದರ್ಭಗಳಲ್ಲಿ ಈ ನಂಬಿಕೆಯನ್ನು ಹೇಗೆ ಬಳಸುತ್ತಾರೆ, ಮತ್ತು ಏಕೆ ಬಳಸುತ್ತಾರೆ?

ನಾವು ಹಿಂದೆ ಉಲ್ಲೇಖಿಸಿದ ಫಿಲಿಪ್ ಅವರ ಕೈಪಿಡಿಯಲ್ಲಿ ರಾಗಬದ್ಧ ಮಾತನ್ನು ವಿವರಿಸಿದ ಬಳಿಕ ಹೇಳುವುದನ್ನು ಗಮನಿಸಿ: ‘ಕೆಲವು ಪದಗಳಿಗೆ ಪುರುಷಗುಣಗಳಿದ್ದರೆ ಮತ್ತೆ ಕೆಲವು ಪದಗಳಿಗೆ ಸ್ತ್ರೀಗುಣಗಳು ಇರುತ್ತವೆ. ಅಧಿಕಾರದ ಹಂಚಿಕೆಯ ಪರಿಣಾಮ ವಾಗಿ ಪದಗಳಿಗೆ ಆಯಾ ಗುಣಗಳು ಲಭಿಸಿವೆ. ಗಂಡಸು ತನಗೆ ಏನೋ ‘ಬೇಕು’ ಎಂದು ಹೇಳುತ್ತಾನೆ. ಆದರೆ ಹೆಂಗಸು ಕೇವಲ ‘ಬಯಸು’ತ್ತಾಳೆ. ಬೇಕು ಎಂದು ಹೇಳಿದಾಗ ತನ್ನಲ್ಲಿ ಏನೋ ಇಲ್ಲ, ತನಗೆ ಅದು ಅಗತ್ಯ ಎಂದು ತಿಳಿಸಿದ್ದಲ್ಲದೆ, ಅದನ್ನು ಹೊಂದುವ ಹಕ್ಕು ತನಗಿದೆ ಎಂದೂ ಗಂಡಸು ಹೇಳಿದಂತಾಯಿತು. ತನಗೆ ದೊರೆತ ಅಧಿಕಾರದ ಪರಿಣಾಮವಾಗಿ, ಗಂಡಸು ಹೆಚ್ಚು ಮುನ್ನುಗ್ಗಿ ಪಡೆದುಕೊಳ್ಳುವ ಸ್ವಭಾವವನ್ನು ತೋರಿಸುತ್ತಾನೆ.

ಆದರೆ ‘ಬಯಸು’ವವರು ಕೇವಲ ಆಯ್ಕೆಯನ್ನು ಮಾತ್ರ ಮುಂದಿಡುತ್ತಾರೆ. ತನ್ನ ಬಯಕೆಯ ವಸ್ತು ಬೇರಾರಿಗಾದರೂ ಬೇಕಾಗಿದೆಯೋ, ಅದರ ಮೇಲೆ ಅವರು ಹಕ್ಕು ಚಲಾಯಿಸುತ್ತಿದ್ದಾರೆಯೋ ಎಂಬೆಲ್ಲ ಸಂಗತಿಗಳನ್ನು ತಿಳಿದುಕೊಳ್ಳುವ ನೆಲೆಯಲ್ಲಿ ಈ ಪದ ಬಳಕೆಯಾಗುತ್ತದೆ. ಅಧಿಕಾರ ಹಂಚಿಕೆಯಲ್ಲಿ ಅಧೀನಳಾಗಿರುವ ಹೆಂಗಸಿನ ಸ್ವಭಾವವನ್ನು ಈ ಪದದ ಬಳಕೆ ಬಿಂಬಿಸುತ್ತದೆ.

ಒಂದು ಫಾಸ್ಟ್‌ಫುಡ್ ರೆಸ್ಟೋರೆಂಟಿಗೆ ಹೋದ ಗಂಡಸು ಮತ್ತು ಹೆಂಗಸು ಅಲ್ಲಿ ಉಪಹಾರಕ್ಕೆ ಕೋರಿಕೆ ಸಲ್ಲಿಸುವ ರೀತಿಯಲ್ಲಿ ಇರುವ ವ್ಯತ್ಯಾಸವನ್ನು ನೋಡಿ : ಗಂಡಸು ‘I want a big mac’ ಎಂದು ಹೇಳಿದರೆ ಹೆಂಗಸು ‘I would like a salad, please’ ಎನ್ನುತ್ತಾಳೆ.

ಇಡೀ ವಿವರಣೆಯಲ್ಲಿ ಗಂಡಸು ಯಜಮಾನ, ಹೆಂಗಸು ಅಡಿಯಾಳು ಎನ್ನುವ ತಿಳಿವಳಿಕೆ ಸಿದ್ಧಮಾದರಿಯಾಗಿ ಸ್ವೀಕೃತಗೊಂಡು, ಅದು ಮಾತಿನಲ್ಲಿ ತಲೆಹಾಕಿದೆ ಎಂಬ ಭಾವನೆ ಇದೆ. ನಿಜಜೀವನದಲ್ಲಿ ಇವೆಲ್ಲವೂ ಹೀಗೇ ಆಗುತ್ತದೆಂದು ಯಾರಿಗೂ ಹೇಳಲಾಗದು. ಎಷ್ಟೋ ವೇಳೆ ಹೀಗೆ ಉಪಹಾರಕ್ಕೆ ಕೋರಿಕೆಯನ್ನು ಪಡೆಯುತ್ತಿರುವ ರೆಸ್ಟೋರಾಂಟ್ ಕೆಲಸಗಾರರ ಜಂಡರ್ ಯಾವುದು ಎಂಬುದೂ ಕೂಡ ಗ್ರಾಹಕರ ಮಾತನ್ನು ನಿಯಂತ್ರಿಸುತ್ತದೆ.

ಇಷ್ಟೆಲ್ಲ ಹೇಳಿದ ಮೇಲೆ ಖಚಿತವಾಗುವುದೇನು? ಜಂಡರ್ ಸಿದ್ಧಮಾದರಿಗಳಿಗೂ, ನಿಜಜೀವನದಲ್ಲಿ ಜನರು ನಡೆದುಕೊಳ್ಳುವ ಬಗೆಗೂ ತುಂಬಾ ಅಂತರವಿದೆ. ಆದರೆ, ಈ ಸಿದ್ಧಮಾದರಿಗಳಿಗೂ, ನಡೆದುಕೊಳ್ಳುವ ಬಗೆಗೂ ನಂಟನ್ನು ಕಲ್ಪಿಸಿದ್ದೇ ಕುತೂಹಲಕಾರಿ ಯಾಗಿದೆ.  ಏಕೆಂದರೆ, ವ್ಯಕ್ತಿಗಳು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಸೂಚಿಸುವ ರೀತಿಯಲ್ಲಿ ಈ ಸಿದ್ಧಮಾದರಿಗಳಿರುತ್ತವೆ. ಅಂದರೆ, ಅವುಗಳನ್ನು ಕಡ್ಡಾಯವಾಗಿ ಪಾಲಿಸದಿದ್ದರೂ ನಮ್ಮ ಮಾನಸಿಕ ಬೆಳವಣಿಗೆಯಲ್ಲಿ ಈ ನಡೆದುಕೊಳ್ಳಬೇಕಾದ ಬಗೆ ಯನ್ನು ನೆಲೆಗೊಳಿಸಲು ಎಡಬಿಡದೆ ಪ್ರಯತ್ನಗಳು ಸಾಗುತ್ತಿರುತ್ತವೆ. ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವ ಹುನ್ನಾರವಾಗಿ, ತಾತ್ತ್ವಿಕತೆಯ ಚೌಕಟ್ಟಾಗಿ ಇವು ಬಳಕೆ ಯಾಗುತ್ತವೆ. ಇವುಗಳ ಹಿನ್ನೆಲೆಯಲ್ಲೇ ನಾವೆಲ್ಲರೂ ನಮ್ಮನ್ನು ಗುರುತಿಸಿಕೊಳ್ಳುತ್ತೇವೆ, ಮತ್ತು ಇತರರ ನಡವಳಿಗಳನ್ನು ಮೌಲ್ಯಮಾಪನ ಮಾಡುತ್ತೇವೆ. ಈ ಕಾರಣದಿಂದಲೇ ಜಂಡರ್ ಸಿದ್ಧಮಾದರಿಗಳು ಮತ್ತು ಅವುಗಳಿಂದ ಪ್ರೇರಿತವಾಗಿವೆ ಎಂದು ತಿಳಿಯಲಾದ ಭಾಷಿಕ ವರ್ತನೆಗಳು ಭಾಷೆ ಮತ್ತು ಜಂಡರ್ ಕುರಿತ ಅಧ್ಯಯನಗಳಿಗೆ ಅಗತ್ಯವಾಗುತ್ತವೆ. ಆದರೆ, ಇಂತಹ ಅಧ್ಯಯನಗಳು ಎಡಹುವುದು ಎಲ್ಲಿ?  ಈ ಸಿದ್ಧಮಾದರಿ ಮತ್ತು ಭಾಷಿಕ ವರ್ತನೆಯ ಸಂಬಂಧವನ್ನೇ ತಮ್ಮ ಅಧ್ಯಯನದ ವಸ್ತುವನ್ನಾಗಿ ಮಾಡಿಕೊಂಡರೆ ಆಗ ಹೊರಟಲ್ಲಿಗೇ ಮರಳಿ ಬಂದು ಸೇರುವ ವೈಧಾನಿಕತೆಯ್ನು ಆಯ್ಕೆ ಮಾಡಿಕೊಂಡಂತಾಗುತ್ತದೆ. ಚಲನೆಯನ್ನು ಕುರಿತು ಇರುವ ಜನಪ್ರಿಯ ತಿಳಿವಳಿಕೆಯನ್ನು ಆಧರಿಸಿ ಭೌತಶಾಸ್ತ್ರ ತನ್ನ ಅಧ್ಯಯನವನ್ನು ನಡೆಸಲು ಸಾಧ್ಯವಿಲ್ಲ. ಹಾಗೆಯೇ ಜಂಡರ್ ಕುರಿತ ಜನಪ್ರಿಯ ನಂಬಿಕೆ ಗಳನ್ನು ಆಧರಿಸಿ ಜಂಡರ್ ಅಧ್ಯಯನಗಳು ನಡೆಯಬಾರದು. ಮತ್ತೊಮ್ಮೆ ಸ್ಪಷ್ಟ ಪಡಿಸಬೇಕಾದ ಸಂಗತಿಯೊಂದಿದೆ. ಇಷ್ಟೆಲ್ಲ ಹೇಳುವಾಗಲೂ ಜಂಡರ್ ಸಿದ್ಧಮಾದರಿಗಳನ್ನು ನಾವು ನಿರಾಕರಿಸುತ್ತಿಲ್ಲ. ಅವುಗಳನ್ನು ಎಚ್ಚರಿಕೆಯಿಂದ ಗಮನಿಸಲೇಬೇಕು. ಆದರೆ, ಅಧ್ಯಯನಕ್ಕೆ ಅವುಗಳು ಮಾತ್ರವೇ ಆಧಾರ ಮತ್ತು ಭಿತ್ತಿಗಳೆನಿಸಿದರೆ, ಆಗ ಹಳ್ಳಕ್ಕೆ ಬಿದ್ದಂತೆಯೇ ಸರಿ. ಏಕೆಂದರೆ ಈ ಹಾದಿ ಹಿಡಿದ ಅಧ್ಯಯನಗಳು ತಮಗೇ ತಿಳಿಯದೆ ನಂಬಿಕೆಗಳನ್ನು ಬಲಪಡಿಸುವ ಕೆಲಸವನ್ನು ಮಾಡತೊಡಗುತ್ತವೆ.

ಪರಿಶೀಲನೆಯಿಂದ ತೀರ್ಮಾನದ ಕಡೆಗೆ

ಗಂಡಸರು ಮೇಲುಕೀಳುಗಳನ್ನು ಒಪ್ಪುವ ವ್ಯವಸ್ಥೆಗೆ ಬದ್ಧರು, ಹೆಂಗಸರು ಅಂಥಾ ಮೇಲುಕೀಳು ಭಾವನೆಗೆ ಹೊರತಾದವರು ಎಂಬ ತೀರ್ಮಾನವನ್ನು ಮೊದಲು ಪರಿಶೀಲಿಸೋಣ.  ಜನರೊಡನೆ ವ್ಯವಹರಿಸುವ ಪ್ರಯೋಗಗಳನ್ನು ಮಾಡಿದವರು ಈ ತೀರ್ಮಾನವನ್ನು ಆ ಪ್ರಯೋಗಗಳ ಫಲಿತಾಂಶವಾಗಿ ನಿರೂಪಿಸಿದ್ದೇವೆಂದು ಹೇಳುತ್ತಾರೆ. ಇದಲ್ಲದೆ, ಸಮಾಜ ಮತ್ತು ವಿಕಾಸ ಜೀವಶಾಸ್ತ್ರಗಳ ಸಂಬಂಧವನ್ನು ಅಧ್ಯಯನ ಮಾಡಿದವರು ಕೂಡ ಇದೇ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಲಾಗಿದೆ. (೧೯೭೦ ರ ಸುಮಾರಿನಲ್ಲಿ ಸಾಮಾಜಿಕ ಜೀವಶಾಸ್ತ್ರ ಎಂಬ ಅಧ್ಯಯನ ಶಾಖೆ ಬೆಳೆದಿತ್ತು. ಅದೀಗ ವಿಕಾಸ ಮನಃಶಾಸ್ತ್ರ ಎಂದು ಬದಲಿ ಹೆಸರಿನಲ್ಲಿ ಚಾಲ್ತಿಯಲ್ಲಿದೆ. ಆದರೆ, ಈ ಎರಡೂ ಅಧ್ಯಯನ ಶಾಖೆಗಳೂ ಜಂಡರ್ ವ್ಯತ್ಯಾಸವನ್ನು ಅಧ್ಯಯನ ಮಾಡುವಾಗ ಯಾವುದೇ ಜೀವಪ್ರಭೇದದ ಗಂಡು ಹೆಣ್ಣು ಜೀವಿಗಳನ್ನು ಯಥಾನುಸಾರ ಪರಿಶೀಲಿಸಿ ನಿರ್ಣಯಕ್ಕೆ ಬರುವ ವಿಧಾನಕ್ಕಿಂತ ಹೆಚ್ಚಾಗಿ, ಚಾಲ್ತಿಯಲ್ಲಿರುವ ಜಂಡರ್ ತಾತ್ತ್ವಿಕತೆ ಮತ್ತು ಸಿದ್ಧಮಾದರಿಗಳ ಚೌಕಟ್ಟನ್ನು ಹೆಚ್ಚು ನಂಬಿಬಿಟ್ಟಿವೆ. ಮಾನವರೂ ಒಂದು ಜೀವಶಾಸ್ತ್ರ ಪ್ರಭೇದಕ್ಕೆ ಸೇರಿದವರು, ಸಂತಾನಾಭಿವೃದ್ದಿಯು ವ್ಯಕ್ತಿಗಳ ಮತ್ತು ಜೀವಪ್ರಭೇದದ ವಿಕಾಸದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆಂಬ ಸಂಗತಿಗಳನ್ನು ನಾವು ನಿರಾಕರಿಸುತ್ತಿಲ್ಲ. ನಮ್ಮ ಜೀವಪ್ರಭೇದಕ್ಕೆ ಒಂದು ವೈಶಿಷ್ಟ್ಯವಿದೆ. ನಾವು ಸಾಮಾಜಿಕರು, ಮತ್ತು ನಾವು ನಮ್ಮ ಕ್ರಿಯೆಗಳನ್ನು ಕುರಿತು ನಾವೇ ಪರಿಭಾವಿಸಬಲ್ಲವರು. ಈವರೆಗಿನ ಅಧ್ಯಯನಗಳು ಒದಗಿಸಿರುವ ಮಾಹಿತಿಯನ್ನು ಗಮನಿಸಿದರೆ, ಒಂದು ಜಂಡರ್‌ಗೆ ಸೇರಿದ ಜೀವಿಗಳ ಪ್ರತಿಯೊಂದು ಗುಣ ಮತ್ತು ಸಾಮರ್ಥ್ಯಗಳಿಗೆ ಅಗಾಧ ಪ್ರಮಾಣದ ವೈರುಧ್ಯವಿದೆ. ಅಲ್ಲದೆ, ಇಂಥ ಎಷ್ಟೋ ಗುಣ ಮತ್ತು ಸಾಮರ್ಥ್ಯಗಳು ಎಲ್ಲ ಜಂಡರ್‌ಗಳಲ್ಲೂ ಕಂಡು ಬರುತ್ತವೆ.) ಮೇಲು ಕೀಳು ಎಂಬ ನಂಬಿಕೆಯನ್ನು ಹೊಂದಿರುವುದೆಂದರೆ ತನ್ನ ಸುತ್ತಣ ಜಗತ್ತಿನಲ್ಲಿಯೂ ಅದೇ ಲಕ್ಷಣವನ್ನು ಕಾಣುವುದು ಮತ್ತು ಅಂಥ ವ್ಯವಸ್ಥೆಯಲ್ಲಿ ತನ್ನ ಸ್ಥಾನವನ್ನು ಗುರುತಿಸಿಕೊಳ್ಳುವುದು ಎಂದರ್ಥ. ಇಂಥ ವ್ಯಕ್ತಿ ಇನ್ನೊಬ್ಬರೊಡನೆ ವ್ಯವಹರಿಸುವಾಗ ಆ ಇನ್ನೊಬ್ಬ ವ್ಯಕ್ತಿ ಈ ವ್ಯವಸ್ಥೆಯಲ್ಲಿ ಯಾವ ಸ್ಥಾನದಲ್ಲಿ ಇದ್ದಾರೆ ಎನ್ನುವುದನ್ನು ಅವಲಂಬಿಸಿ ಆ ವ್ಯವಹಾರ ಆಕಾರ ಪಡೆಯುತ್ತದೆ. ವ್ಯಕ್ತಿಯಲ್ಲಿ ಪೈಪೋಟಿಯ ಮನೋಭಾವವಿದ್ದರೆ, ಆ ವ್ಯಕ್ತಿ ತನ್ನ ಸ್ಥಾನ ಯಾವಾಗಲೂ ಇತರರಿಗಿಂತ ಮೇಲಿನದಾಗಿರಬೇಕು ಎಂದು ಬಯಸುವುದು ಸಹಜ.  ಹೀಗಾಗಬೇಕಾದರೆ, ಮೊದಲು ಆ ವ್ಯಕ್ತಿ ಮೇಲುಕೀಳಿನ ವ್ಯವಸ್ಥೆಯನ್ನು ಒಪ್ಪಬೇಕಾಗುತ್ತದೆ.  ಆದರೆ, ನಿಜಜೀವನದಲ್ಲಿ ವ್ಯಕ್ತಿಯು ಪೈಪೋಟಿಯನ್ನು ತೋರಿಸುವುದಕ್ಕೂ ಈಡೀ ವ್ಯವಸ್ಥೆಯನ್ನು ಮೇಲುಕೀಳಿನ ನೆಲೆಯಲ್ಲಿ ಗ್ರಹಿಸುವುದಕ್ಕೂ ತುಂಬಾ ವ್ಯತ್ಯಾಸಗಳಿವೆ.  ಹಾಗೆ ನೋಡಿದರೆ, ಹೆಂಗಸರಿಗಿಂತ ಗಂಡಸರು ಮೇಲುಕೀಳೆಂಬ ನೆಲೆಗಟ್ಟನ್ನು ಹೆಚ್ಚು ಒಪ್ಪಿಕೊಳ್ಳುತ್ತಾರೆ ಎನ್ನುವುದಕ್ಕಿಂತ ಗಂಡಸರಿಗೆ ಹೀಗೆ ಅಂತಸ್ತನ್ನು ಸೂಚಿಸುವ ಅವಕಾಶಗಳು ಹೆಚ್ಚಿವೆ, ಇತರರಿಗೆ ಅದನ್ನು ತೋರಿಸುವ ಸಂದರ್ಭಗಳು ಅವರಿಗೆ ದೊರಕುತ್ತವೆ ಎಂದು ಹೇಳುವುದು ಸರಿಯಾದೀತು. ನಾವು ನಮ್ಮ ಗುಣಲಕ್ಷಣ, ಮನೋಭಾವ, ಅಂತರಂಗ ಮುಂತಾದವುಗಳನ್ನು ಕುರಿತು ಮಾತನಾಡುವವರು. ಹೀಗಾಗಿ, ಕೇವಲ ಹೊರಗೆ ಹೇಗೆ ನಡೆದುಕೊಳ್ಳುತ್ತೇವೆ ಎಂದಷ್ಟೇ ಗಮನಿಸಿ ಯಾವುದೇ ತೀರ್ಮಾನಕ್ಕೆ ಬರುವುದು ಸರಿಯಾಗುವುದಿಲ್ಲ. ಗಂಡಸು ಮೇಲುಕೀಳು ಇರುವ ವ್ಯವಸ್ಥೆಯ ಪರವಾಗಿ ಇರುತ್ತಾನೆಂಬ ತೀರ್ಮಾನಕ್ಕೆ ಬಂದವರೆಲ್ಲ ಒಂದು ನಿರ್ದಿಷ್ಟ ಪ್ರಯೋಗವನ್ನು ಮಾಡಿದ್ದಾರೆ. ಗಂಡಸರು ಮಾತ್ರವೇ ಇರುವ ಗುಂಪುಗಳು, ಕೇವಲ ಹೆಂಗಸರು ಇರುವ ಗುಂಪುಗಳು, ಮತ್ತು ಗಂಡಸರು ಹೆಂಗಸರು ಜೊತೆಯಾಗಿರುವ ಗುಂಪುಗಳನ್ನು ಆಯ್ದುಕೊಂಡು, ಗುಂಪು ಚಟುವಟಿಕೆಗಳನ್ನು ಆಯ್ದುಕೊಂಡು, ಗುಂಪು ಚಟುವಟಿಕೆಯಲ್ಲಿ ತೊಡಗಿಸಿದ್ದಾರೆ. ಬರೀ ಗಂಡಸರ ಗುಂಪುಗಳಲ್ಲಿ ಗಂಡಸರು ಮೇಲು ಕೀಳು ಎಂಬ ನೆಲೆಯನ್ನು ಪ್ರದರ್ಶಿಸುವವರು ಎಂಬ ತೀರ್ಮಾನಕ್ಕೆ ಬರಲಾಗಿದೆ. ಉದಾಹರಣೆಗೆ ಒಬ್ಬ ಗಂಡಸು ಹೆಚ್ಚು ಮತಾಡುತ್ತಿರುವಾಗ ಉಳಿದವರು ಆ ಗಂಪಿನಲ್ಲಿ ಹಿನ್ನೆಲೆಗೆ ಸರಿಯುತ್ತಾರೆ. ಹೆಂಗಸರು ಮಾತಾಡಲು ತಮಗೆ ಸಿಕ್ಕ ಅವಕಾಶವನ್ನು ಇತರರೊಡನೆ ಹಂಚಿಕೊಳ್ಳುತ್ತಾರೆ. ಆದರೆ, ಈ ಪ್ರಯೋಗಗಳಿಂದ ಏನು ತೀರ್ಮಾನಿಸಿ ದಂತಾಯಿತು? ಹೋಗಲಿ, ಈ ಪ್ರಯೋಗಗಳು ಏನನ್ನು ತೋರಿಸಿವೆ ನೋಡೋಣ.  ಇಂಥ ಪ್ರಯೋಗಗಲ್ಲಿ ಭಾಗಿಯಾದ ಗಂಡಸರು(ಇದರಲ್ಲಿ ಹೆಚ್ಚು ಜನ ಅಮೆರಿಕನ್ ವಿಶ್ವವಿದ್ಯಾಲಯಗಳಲ್ಲಿ ಇದ್ದ ಬಿಳಿಯ, ಮಧ್ಯಮ ವರ್ಗದ ವಿದ್ಯಾರ್ಥಿಗಳು) ಚಿಕ್ಕಚಿಕ್ಕ ಮಾತುತಕೆಗಳ ಘಟನೆಗಳಲ್ಲಿ ಮೇಲುಕೀಳೆಂಬ ವರ್ತನೆಯನ್ನು ರೂಪಿಸಿಕೊಳ್ಳುತ್ತಾರೆ.  (ಇದನ್ನು ಗಮನಿಸುವವರೂ ಈ ಗಂಡಸರಿಗೆ ಪರಿಚಿತರಲ್ಲ ಎಂಬುದನ್ನು ಮರೆಯುವಂತಿಲ್ಲ).  ಆದರೆ ಇಂಥದೇ ಪ್ರಯೋಗಗಳಲ್ಲಿ ಭಾಗಿಯಾದ ಹೆಂಗಸರಲ್ಲಿ(ಅಮೆರಿಕನ್ ವಿಶ್ವವಿದ್ಯಾಲಯ ಗಳಲ್ಲಿ ಓದುತ್ತಿದ್ದ ಬಿಳಿಯ ಮಧ್ಯಮ ವರ್ಗದ ವಿದ್ಯಾರ್ಥಿನಿಯರು) ಈ ಮನೋಭಾವ ಕಂಡುಬರಲಿಲ್ಲ. ಇದಕ್ಕೂ ಗಂಡಸರು ಎಲ್ಲೆಲ್ಲೂ ಪೈಪೋಟಿ ತೋರುತ್ತಾರೆ, ಮೆಲುಕೀಳೆಂಬ ಅಂತಸ್ತಿನ ನೆಲೆಯನ್ನು ಆಚರಿಸುತ್ತಾರೆ ಎಂಬ ತೀರ್ಮಾನಕ್ಕೂ ಸಂಬಂಧವೆಲ್ಲಿದೆ?

ಹಾಗೆ ನೋಡಿದರೆ, ಹೆಂಗಸರು ಗಂಡಸರಿಗಿಂತ ಹೆಚ್ಚು ಪೈಪೋಟಿ ತೋರುವವರೂ, ಅಂತಸ್ತಿನ ಪರಿಕಲ್ಪನೆಯನ್ನು ಒಪ್ಪಿದವರು ಎಂದು ತೋರಿಸುವ ಮಾಹಿತಿ ಸಾಕಷ್ಟಿದೆ. ಹಾಗಾಗಿ, ಪೈಪೋಟಿ ತೋರುವವರು, ಅಂತಸ್ತನ್ನು ಒಪ್ಪುವವರು, ಗಂಡಸರೋ ಹೆಂಗಸರೋ ಎಂಬುದು ಮುಖ್ಯ ಪ್ರಶ್ನೆಯಲ್ಲ. ಯಾರು, ಯಾವಾಗ, ಹೇಗೆ, ಈ ಮನೋಭಾವಗಳನ್ನು ತೋರಿಸುತ್ತಾರೆ ಎನ್ನುವುದೇ ಮುಖ್ಯ ಪ್ರಶ್ನೆ. ಫಿಲಿಡೆಲ್ಫಿಯಾದ ಒಂದು ಪ್ರದೇಶದಲ್ಲಿ ಇದ್ದ ಹರೆಯಪೂರ್ವ ವಯಸ್ಸಿನ ಮಕ್ಕಳನ್ನು ಸಾಕಷ್ಟು ಕಾಲ ಗಮನಿಸುವ ಒಂದು ಪ್ರಯೋಗದಲ್ಲಿ ಮರಿಯೋರಿ ಹಾರ್ನೆಸ್ ಗುಡ್‌ವಿನ್(೧೯೯೦) ಅವರು ತೊಡಗಿಸಿಕೊಂಡರು. ಅವರು ಕಂಡದ್ದು ಏನೆಂಬುದನ್ನು ನೋಡೋಣ. ಹುಡುಗರು ಒಟ್ಟಾಗಿ ಸೇರಿ ಒಂದೇ ಕೆಲಸ ಮಾಡುವಾಗ (ಬಿಲ್ಲುಬಾಣ ತಯಾರಿಸುವುದು) ತಂತಮ್ಮಲ್ಲಿ ಒಂದು ಶ್ರೇಣಿಯನ್ನು ರೂಪಿಸಿಕೊಳ್ಳುತ್ತಾರೆ. ಇದೇ ವಯಸ್ಸಿನ ಹುಡುಗಿಯರು ಒಟ್ಟಾಗಿ ಸೇರಿ ಒಂದೇ ಕೆಲಸ ಮಾಡುವಾಗ (ಬಾಟಲ್ ಮುಚ್ಚಳಗಳಿಂದ ಸರ ತಯಾರಿಸುವುದು) ಕೆಲಸವನ್ನು ತಂತಮ್ಮಲ್ಲಿ ಹಂಚಿಕೊಳ್ಳುವುದು ಕಂಡುಬಂತು. ಆದರೆ, ಹುಡುಗಿಯರ ಮಾತುಕತೆಗಳನ್ನು ಗಮನಿಸಿದಾಗ ಅವರು ತಂತಮ್ಮಲ್ಲೇ ಒಂದು ಶ್ರೇಣಿಯನ್ನು ಕಟ್ಟಿಕೊಂಡಿದ್ದರು. ಹುಡುಗರು ಮಾತ್ರ ಎಂದಿನಂತೆ ತಮ್ಮ ಆಟಗಳಲ್ಲಿ ತೊಡಗಿಕೊಂಡಿದ್ದರು. ಇನ್ನೂ ಮುಂದುವರೆದು ಗಮನಿಸಿದಾಗ ಹುಡುಗಿಯರು ಶ್ರೇಣಿಯನ್ನು ಕಟ್ಟಿಕೊಂಡದ್ದಲ್ಲದೆ, ತಮಗೆ ಬೇಡವೆನಿಸಿದ ಹುಡುಗಿಯರನ್ನು ಗುಂಪಿನಿಂದ ಹೊರಗಿಡಲೂ ಯತ್ನಿಸುತ್ತಿದ್ದುದು ಕಂಡುಬಂತು. ಇಂಥದೇ ಒಂದು ಪ್ರಯೋಗವನ್ನು ಎಕರ್ಟ್(೧೯೮೯) ಮಾಡಿದ್ದಾರೆ. ಇಲ್ಲಿ ಭಾಗೀದಾರರು ಹೈಸ್ಕೂಲು ವಿದ್ಯಾರ್ಥಿಗಳು. ಹುಡುಗಿಯರು ಇತರರ ಗಮನವನ್ನು ತಾವು ಸೆಳೆಯಬೇಕೆಂದಾಗ ತಮ್ಮಲ್ಲೇ ಪೈಪೋಟಿ ಮತ್ತು ಶ್ರೇಣಿಯನ್ನು ರೂಪಿಸಿಕೊಳ್ಳುತ್ತಿದ್ದರು.  ಹುಡುಗರು ತಂತಮ್ಮ ಕೌಶಲಗಳಲ್ಲಿ ಪೈಪೋಟಿ ತೋರಿದರೂ, ಯಾವಾಗಲೂ ಮುಂದಾಗಿರಬೇಕೆಂಬ ಮನೋಭಾವ ತೋರಲಿಲ್ಲ. ಹೀಗಾಗಿ ಗಂಡಸರು ಅಂತಸ್ತನ್ನು ಒಪ್ಪುತ್ತಾರೆ ಎನ್ನುವ ತೀರ್ಮಾನ ಕೇವಲ ನಿರ್ದಿಷ್ಟ ಸಂದರ್ಭಗಳಿಂದಷ್ಟೇ ಹುಟ್ಟಿಕೊಂಡದ್ದು. ಹೆಂಗಸರಲ್ಲಿ ದೀರ್ಘಾವಧಿಯ ವರ್ತನೆಗಳನ್ನು ಗಮನಿಸಿದರೆ, ಅವರೂ ಅಂತಸ್ತನ್ನು ಒಪ್ಪುವವರೇ ಎಂದು ಹೇಳಬೇಕಾಗುತ್ತದೆ. ಒಟ್ಟಾರೆ ಏನಾಯಿತು? ನೀವು ಹೇಗೆ ಅಧ್ಯಯನ ಮಾಡುತ್ತೀರೋ ಅದಕ್ಕನುಗುಣವಾಗಿ ಫಲಿತಗಳು ದೊರಕುತ್ತವೆ ಎನ್ನಬೇಕಾಗುತ್ತದೆ. ಪ್ರಯೋಗಗಳನ್ನು ಆಧರಿಸಿದ ಅಧ್ಯಯನಗಳು ಕ್ಲುಪ್ತ ಕಾಲಾವಧಿಯಲ್ಲಿ ಏನಾಗುವುದು ಎಂಬುದನ್ನು ತಿಳಿಸುತ್ತವೆ. ಆದರೆ, ದೀರ್ಘಾವಧಿಯಲ್ಲಿ ಮತ್ತು ಪ್ರಯೋಗಕ್ಕೆ ಒಳಪಡಲಾಗದ ಸಂದರ್ಭಗಳಲ್ಲಿ ಏನಾಗುವುದು ಎಂಬುದನ್ನು ಈ ಅಧ್ಯಯನಗಳು ಗುರುತಿಸುವುದೇ ಇಲ್ಲ.

ಅಧ್ಯಯನವನ್ನು ಪ್ರೇರೇಪಿಸಬೇಕಾದ ಪ್ರಶ್ನೆಗಳು ಹೆಚ್ಚು ಸಾರ್ವತ್ರಿಕ ನೆಲೆಯನ್ನು ಹೊಂದಿರಬೇಕು. ಕ್ಲುಪ್ತ ಅವಧಿಯನ್ನು ಆಧರಿಸಿ ನಡೆಸಿದ ಅಧ್ಯಯನಗಳಿಂದ ಪಡೆದುಕೊಳ್ಳುವ ತೀರ್ಮಾನಗಳು ಸಾರ್ವತ್ರಿಕವಾಗಿ ಹೊಂದಿಕೊಳ್ಳಲಾರವು. ಅಲ್ಲದೆ, ಇಂತಹ ಅಧ್ಯಯನಗಳು ಸಿದ್ಧಮಾದರಿಗಳನ್ನು ಒಪ್ಪಿಕೊಂಡೇ ಹೊರಡುವುದರಿಂದ, ಆ ಮಾದರಿಗಳನ್ನು ಒಪ್ಪುವ ಇಲ್ಲವೇ ತಿರಸ್ಕರಿಸುವ ಗುರಿಗೆ ಸೀಮಿತವಾಗಿ ಬಿಡುತ್ತವೆ. ಇಂದಿನ ಉತ್ತರ ಅಮೆರಿಕದಲ್ಲಿ ಗಂಡಸರಿರಲಿ, ಹೆಂಗಸರಿರಲಿ ಅಂತಸ್ತುಗಳನ್ನು ಕಲ್ಪಿಸಿಕೊಳ್ಳುವುದು ಬೇರೆ ಬೇರೆ ಉದ್ದೇಶಗಳಿಂದಾಗಿ. ಹಾಗೆಯೇ ಕಲ್ಪಿಸಿಕೊಂಡ ಅಂತಸ್ತಿನ ಸ್ವರೂಪವು ಕೂಡಾ ಬೇರೆಬೇರೆಯಾಗಿಯೇ ಇರುತ್ತವೆ. ಬೇರೆಬೇರೆ ಜನರು ಅಂತಸ್ತಿನ ಪರಿಕಲ್ಪನೆಯನ್ನು ರೂಪಿಸಿಕೊಳ್ಳುವ ಬಗೆ, ಮತ್ತು ಅದರ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ ಕ್ರಿಯಾಶೀಲರಾಗುವ ಬಗೆ, ಕ್ರಿಯಾಶೀಲತೆಗೂ ಜಂಡರ್‌ಗೂ ಇರುವ ಸಂಬಂಧ – ಮುಂತಾದವು ಈ ಅಧ್ಯಯನಗಳನ್ನು ಪ್ರೇರೇಪಿಸುವ ಪ್ರಶ್ನೆಗಳಾಗಬೇಕು.

ಈ ಅಧ್ಯಯನಗಳಲ್ಲಿ ದೊರೆತ ಮಾಹಿತಿಯಿಂದ ಜಂಡರ್ ವ್ಯತ್ಯಾಸಗಳನ್ನು ವ್ಯಾಖ್ಯಾನಿಸುವಲ್ಲಿ ಇನ್ನೊಂದು ಬಗೆಯ ತಪ್ಪು ಕೂಡಾ ನಡೆಯಬಹುದಾಗಿದೆ. ಮಾಹಿತಿಯನ್ನು ಭಾಷಿಕ ನೆಲೆಯಲ್ಲಿಸಂಗ್ರಹಿಸುವುದು ಒಂದು ನೆಲೆಯಾದರೆ, ಆ ಮಾಹಿತಿಯನ್ನು ವ್ಯಾಖ್ಯಾನ ಮಾಡುವಾಗ ಒಂದು ತರ್ಕವನ್ನು ಹೊಂದಿರುವುದು ಇನ್ನೊಂದು ನೆಲೆ. ಉದಾಹರಣೆಗೆ, ಮಾತಿನ ಮಧ್ಯೆ ತಲೆತೂರಿಸುವಿಕೆಯ ಸಂದರ್ಭಗಳ ಮಾಹಿತಿಯನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದನ್ನು ನೋಡೋಣ. ಮಾತನಾಡುವ ಇಬ್ಬರಲ್ಲಿ ಒಬ್ಬರು ಯಜಮಾನಿಕೆ ತೋರಲು ಹೀಗೆ ತಲೆತೂರಿಸುತ್ತಾರೆಂದು ಸುಮ್ಮನೆ ಹೇಳಿದರೆ ಆಗುವುದಿಲ್ಲ ಏಕೆಂದರೆ ಈ ಪ್ರಕ್ರಿಯೆಯು ತುಂಬಾ ಸಂಕೀರ್ಣವಾದುದು. ತಲೆತೂರಿಸುವ ಎಷ್ಟೋ ಸಂದರ್ಭಗಳಲ್ಲಿ ಮಾತನ್ನು ತಡೆಯುತ್ತಿರುವವರು ಇನ್ನೊಬ್ಬರಿಗೆ ನೆರವಾಗುತ್ತಲೂ ಇರಬಹುದೆಂದು ಡೆಬೋರಾ ಟ್ಯಾನಿನ್(೧೯೮೯)  ಹೇಳುತ್ತಾರೆ. ಎಷ್ಟೋ ಸಾಮಾಜಿಕ ಗುಂಪುಗಳಲ್ಲಿ ಹೀಗೆ ನಡುನಡುವೆ ಮಾತಾಡುವುದು ಮಾತಿನ ಒಂದು ಶೈಲಿಯೇ ಆಗಿದೆ. ಆದ್ದರಿಂದ, ಭಾಷಿಕ ವರ್ತನೆಗೂ, ಸಾಮಾಜಿಕ ನೆಲೆಗೂ ಇರುವ ಸಂಬಂಧ ನಾವು ತಿಳಿದಷ್ಟು ಸರಳವಾದುದಲ್ಲ. ಆದರೆ, ಅಧ್ಯಯನಗಳು ಜಂಡರ್ ಸಿದ್ಧಮಾದರಿಗಳನ್ನು ಇಟ್ಟುಕೊಂಡು ವ್ಯಾಖ್ಯಾನಕ್ಕೆ ತೊಡಗಿದ ಕೂಡಲೇ ಮಾಹಿತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ತೀರ್ಮಾನಕ್ಕೆ ಬರುವ ಅವಕಾಶವನ್ನು ಬಿಟ್ಟುಕೊಡುತ್ತವೆ.

ಇಷ್ಟೆಲ್ಲ ಹೇಳಿದಾಗ ಭಾಷಾಬಳಕೆಯಲ್ಲಿ ಜಂಡರ್ ವ್ಯತ್ಯಾಸಗಳನ್ನು ಕಾಣುವ ಅಧ್ಯಯನಗಳನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಮೇಲುನೋಟಕ್ಕೆ ತೋರಬಹುದು.  ಆದರೆ, ಅದು ಹಾಗಲ್ಲ. ಅಂತಹ ವ್ಯತ್ಯಾಸಗಳು ಇಲ್ಲವೆಂದು ಸಾಧಿಸಲು ನಾವು ಹೊರಟಿಲ್ಲ. ಅಧ್ಯಯನಗಳು ಇಂಥ ವ್ಯತ್ಯಾಸಗಳನ್ನು ಗುರುತಿಸಿ ವಿವರಿಸಲು ಅನುಸರಿಸುವ ವಿಧಾನಗಳನ್ನು ಕುರಿತಂತೆ ಗಮನ ಸೆಳೆಯುವುದು ನಮ್ಮ ಗುರಿಯಾಗಿದೆ. ಗಂಡಸರ ಗುಂಪು ಮತ್ತು ಹೆಂಗಸರ ಗುಂಪುಗಳ ವರ್ತನೆಗಳಲ್ಲಿ ಗೆರೆಯೆಳೆದು ತೋರಬಹುದಾದಷ್ಟು ನೇರವಾದ ವ್ಯತ್ಯಾಸಗಳು ತೋರುವುದಿಲ್ಲವಷ್ಟೇ? ಜಂಡರ್ ಎಂಬುದು ಕೇವಲ ವ್ಯತ್ಯಾಸ ಮಾತ್ರವಲ್ಲ.  ಅದು ಗಂಡು ಹೆಣ್ಣುಗಳ ನಡುವೆ ಇರುವ ಎಷ್ಟೋ ಸಮಾನ ಅಂಶಗಳಲ್ಲೂ ತನ್ನ ಚಹರೆಯನ್ನು ತೋರಿಸುತ್ತದೆ. ಅಲ್ಲದೆ, ಈ ವ್ಯತ್ಯಾಸಗಳು ಎಂದೋ ಒಮ್ಮೊಮ್ಮೆ ಕಂಡು ಮರೆಯಾಗುವಂಥವಲ್ಲ. ಜೀವನದುದ್ದಕ್ಕೂ ಗಂಡು ಹೆಣ್ಣುಗಳು ತೊಡಗಿಕೊಳ್ಳುವ ಹತ್ತಾರು ವಲಯಗಳ ಅನುಭವದ ಲೋಕಗಳೊಡನೆ ಹೆಣೆದುಕೊಳ್ಳುವಂಥದು. ಜಂಡರ್ ಅನ್ನು ಸಾಮಾಜಿಕ ಜೀವನದ ಉಳಿದೆಲ್ಲ ನೆಲೆಗಳಿಂದಲೂ ಕತ್ತರಿಸಿ ತೆಗೆದು ನೋಡಲು ಆಗುವುದಿಲ್ಲ.  ಹಾಗೆ ಮಾಡುವುದು ಸರಿಯೂ ಅಲ್ಲ. ಒಟ್ಟಾರೆ ಹೇಳುವುದಾದರೆ ಗಂಡು ಹೆಣ್ಣುಗಳು ಭಾಷೆಯನ್ನು ಹೇಗೆ ಬಳಸುತ್ತಾರೆ ಎಂಬ ಪ್ರಶ್ನೆಯ ಜೊತೆಗೆ ತಾವು ಗಂಡು ಇಲ್ಲವೇ ಹೆಣ್ಣು ಎಂಬುದರ ಕಡೆಗೆ ಗಮನ ಸೆಳೆಯುವಂತೆ ಮಾಡಲು ಎಚ್ಚರದ ಸ್ಥಿತಿಯಲ್ಲಿ ಅವರು ಭಾಷೆಯನ್ನು ಹೇಗೆ ಬಳಸುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳ ಬೇಕಾಗಿದೆ. ಇದರ ಜೊತೆಗೆ ಜಂಡರ್ ವ್ಯವಸ್ಥೆಯನ್ನು ರೂಪಿಸಿ ನಿರ್ವಹಿಸಲು ಜನರು ಭಾಷೆಯನ್ನು ಹೇಗೆ ಬಳಸುತ್ತಾರೆ, ತಮ್ಮ ಜಂಡರ್ ತಾತ್ತ್ವಿಕತೆಯ ಹಿತಾಸಕ್ತಿಯನ್ನು ಕಾಪಾಡಲು ಭಾಷಿಕ ಸಂಪನ್ಮೂಲಗಳನ್ನು ಹೇಗೆ ಬಳಸುತ್ತಾರೆ, ದಿನದಿನದ ಮಾತುಕತೆಗಳಲ್ಲಿ ಜಂಡರ್ ತಾತ್ತ್ವಿಕತೆಗಳು ಮರುಹುಟ್ಟು ಪಡೆಯುವ ಮತ್ತು ಅದಕ್ಕೆ ವಿರುದ್ಧವಾದ ತಾತ್ತ್ವಿಕತೆಗಳು ಕರಗಿಹೋಗುವ ಬಗೆ ಹೇಗೆ, ಇವೆಲ್ಲವೂ ಕೂಡಾ ನಮ್ಮ ಮುಂದಿನ ಅಧ್ಯಯನಗಳಿಗೆ ನೆಲೆಗಟ್ಟನ್ನು ಒದಗಿಸಬೇಕಾಗಿದೆ.

—-
ಮೂಲ
: Language and Gender Penelope Eckert and Sally Mccnnellginet