ಮಾನವ ಶಾಸ್ತ್ರಜ್ಞರಾದ ಮಾಲ್ಟ್‌ಜ್ ಮತ್ತು ಬೋರ್ಕರ್ ತಮ್ಮ ೧೯೮೨ರ ಅಧ್ಯಯನದಲ್ಲಿ ಅಮೆರಿಕದ ಹೆಂಗಸರು ಮತ್ತು ಗಂಡಸರ ಮಾತಿನಲ್ಲಿರುವ ಭಿನ್ನತೆಯನ್ನು ಅರ್ಥ ಮಾಡಿಕೊಳ್ಳಲು ಒಂದು ಚೌಕಟ್ಟನ್ನು ಸೂಚಿಸಿದರು. ಹಲವು ಅಧ್ಯಯನಕಾರರನ್ನು ಈ ಚೌಕಟ್ಟು ಆಕರ್ಷಿಸಿದೆ. ಅದನ್ನು ಅವಲಂಬಿಸಿ ಹಲವು ಅಧ್ಯಯನಗಳೂ ನಡೆದಿವೆ. ಈ ಚೌಕಟ್ಟಿನ ಪ್ರಕಾರ ಲಿಂಗಭಿನ್ನತೆ ಎಂಬುದು ಸಾಂಸ್ಕೃತಿಕ ಭಿನ್ನತೆ. ಆದ್ದರಿಂದ ಗಂಡು ಮತ್ತು ಹೆಣ್ಣು ಮಾತಾಡುವಾಗ ಎರಡು ಭಿನ್ನ ಸಂಸ್ಕೃತಿಗಳಿಗೆ ಸೇರಿದವರ ನಡುವೆ ಮಾತುಕತೆ ನಡೆದಂತಿರುತ್ತದೆ. ಗಂಡು ಹೆಣ್ಣುಗಳು ಸಾಮಾಜಿಕ ಭಾಷಿಕನೆಲೆಯ ಉಪಸಂಸ್ಕೃತಿಗಳಿಂದ ಬಂದವರಾಗಿರುತ್ತಾರೆ. ಏಕೆಂದರೆ ಅನೌಪಚಾರಿಕ ಮಾತುಕತೆಯ ನಿಯಮಗಳನ್ನು ಕಲಿಯುವುದು ಬಾಲ್ಯದಲ್ಲಿ. ಆಗ ಹುಡುಗರೂ ಮತ್ತ ಹುಡುಗಿಯರೂ ಹೆಚ್ಚಾಗಿ ತಂತಮ್ಮ ಲಿಂಗಕ್ಕೆ ಸೇರಿದವರೊಡನೆ ಆಡುತ್ತಾ, ಮಾತಾಡುತ್ತಾ ಬೆಳೆಯುತ್ತಾರೆ. ಆದರೆ, ಗಂಡಸರು ಮತ್ತು ಹೆಂಗಸರು ಮಾತುಕತೆಗಳಲ್ಲಿ ಪದಗಳನ್ನು ಹೇಗೆ ಬೇರೆಯಾಗಿ ಬಳಸಬೇಕು ಎನ್ನುವುದನ್ನು ಬೆಳೆದ ಮೇಲೆ ಕಲಿಯಬೇಕು.

ಭಿನ್ನ ಸಂಸ್ಕೃತಿಗಳಿಗೆ ಸೇರಿದವರೆಂಬ ಚಿಂತನೆಗೆ ಗುಂಫರ್ ಮಂಡಿಸಿದ ಇನ್ನೊಂದು ಚೌಕಟ್ಟು ಕಾರಣ. ಆತ ಬೇರೆ ಬೇರೆ ಕುಲಸಂಸ್ಕೃತಿ ಸಮುದಾಯಗಳ ನಡುವೆ ನಡೆಯುವ ಸಂವಹನದ ಸಮಸ್ಯೆಗಳನ್ನು ಅಧ್ಯಯನ ಮಾಡುತ್ತಿದ್ದ. ಬೇರೆ ಬೇರೆ ಸಂಸ್ಕೃತಿಗಳಿಗೆ ಸೇರಿದವರು ಪರಸ್ಪರ ಒಂದು ಸಂವಹನ ಸಂದರ್ಭದಲ್ಲಿ ಭಾಗಿಗಳಾದಾಗ, ತಂತಮ್ಮ ಸಂಸ್ಕೃತಿಯ ನಂಬಿಕೆ ಮತ್ತು ನಿಯಮಗಳನ್ನು ಇಲ್ಲಿಯೂ ಬಳಸಲು ತೊಡಗುತ್ತಾರೆ. ಈ ನಂಬಿಕೆಗಳಲ್ಲಿರುವ ಭಿನ್ನತೆಯಿಂದಾಗಿ ಒಂದೋ ಸಂವಹನ ಮುರಿದು ಬೀಳುತ್ತದೆ, ಇಲ್ಲವೇ ಒಬ್ಬರನ್ನೊಬ್ಬರು ತಪ್ಪಾಗಿ ಗ್ರಹಿಸುತ್ತಿರುತ್ತಾರೆ. ಈ ತಪ್ಪು ಗ್ರಹಿಕೆಗಳಿಗೆ ಸಾಮಾನ್ಯವಾಗಿ ವ್ಯಕ್ತಿಗಳಲ್ಲಿರುವ  ಅರಿಯುವ ಕೊರತೆಯನ್ನೋ ಅಥವಾ ಸಾಂಸ್ಕೃತಿಕ ಸಿದ್ಧಮಾದರಿಗಳನ್ನೋ ಕಾರಣವಾಗಿ ಹೇಳಲಾಗುತ್ತದೆ. ಇದೇ ಬಗೆಯ ತೊಂದರೆ ಗಂಡು ಹೆಣ್ಣುಗಳ ಮಾತುಕತೆಯಲ್ಲೂ ಇರುವುದೆಂದು ಮಾಲ್ಟ್‌ಜ್ ಮತ್ತು ಬೋರ್ಕರ್ ಹೇಳುತ್ತಾರೆ. ಹೆಣ್ಣು ಗಂಡುಗಳಿಬ್ಬರೂ ತಂತಮ್ಮ ಎಳವೆಯಲ್ಲಿ ತಮ್ಮ ಲಿಂಗಕ್ಕೆ ಸೇರಿದವರೊಡನೆ ಮಾತಾಡುತ್ತಾ ಕಲಿತ ಮಾತುಕತೆಯ ಬಗೆಗಳನ್ನು ಈಗ ಬೆಳೆದ ಮೇಲೂ ಬಳಸತೊಡಗುತ್ತಾರೆ. ಇವರು ಪಡೆದುಕೊಂಡಿರುವ ಮಾತುಕತೆಯ ರೀತಿಗಳಲ್ಲಿ ಇರುವ ಭಿನ್ನತೆಯಿಂದಾಗಿ ಹೆಣ್ಣುಗಂಡುಗಳ ಎಳೆತನದ ಮಾತುಕತೆಗಳಲ್ಲಿ ಕೂಡಾ ತಿಕ್ಕಾಟಗಳು, ಅಪಾರ್ಥಗಳು ಉಂಟಾಗಲು ಕಾರಣವಾಗುತ್ತದೆ.  ಅಂದರೆ, ಲಿಂಗವ್ಯತ್ಯಾಸದ ಸಮಸ್ಯೆ ಗಳನ್ನೂ, ಭಿನ್ನ ಸಂಸ್ಕೃತಿಗಳ ನಡುವಣ ಸಂವಹನದ ಸಮಸ್ಯೆಗಳನ್ನೂ ಜೊತೆಗಿರಿಸಿ ನೋಡಬೇಕು.

ಭಾಷಾಶಾಸ್ತ್ರಜ್ಞರು ಹೆಣ್ಣು ಗಂಡುಗಳ ಮಾತಿನ ರೀತಿಗಳಲ್ಲಿ ಇರುವ ವ್ಯತ್ಯಾಸಗಳಿಗೆ ಯಜಮಾನಿಕೆಯನ್ನು ಒಂದು ಕಾರಣವೆಂದು ಗುರುತಿಸಿದ್ದರು. ಈಗ ಈ ವ್ಯತ್ಯಾಸಗಳಿಗೆ ಭಿನ್ನ ಸಂಸ್ಕೃತಿಗಳ ಮಾತುಕತೆಯ ಚೌಕಟ್ಟಿನ ಮೂಲಕ ಒಂದು ಪರ‍್ಯಾಯ ವಿವರಣೆ ದೊರಕಿದಂತಾಯಿತು. ಭಿನ್ನ ಸಂಸ್ಕೃತಿಗಳ ಚೌಕಟ್ಟಿನ ಮಾದರಿಯು ಹೆಣ್ಣು ಗಂಡುಗಳ ಮಾತಿನಲ್ಲಿರುವ ವ್ಯತ್ಯಾಸಕ್ಕೆ ಯಜಮಾನಿಕೆ ಮುಖ್ಯ ಕಾರಣವೆಂಬುದನ್ನು ಒಪ್ಪುವುದಿಲ್ಲ.  ಮಾತುಕತೆಗಳ ಒಟ್ಟು ಫಲಿತದಲ್ಲಿ ಗಂಡಸೇ ಮೇಲುಗೈ ಪಡೆಯುವುದು ನಿಜವಿದ್ದರೂ, ಆ ಮಾತುಕತೆಯಲ್ಲಿ ತೊಡಗಿದ ಗಂಡಸರಿಗೆ ತಾವು ಯಜಮಾನಿಕೆಯ ಸೌಲಭ್ಯವನ್ನು ಪಡೆದಿದ್ದೇವೆಂಬ ಪ್ರಜ್ಞಾಪೂರ್ವಕ ಅರಿವು ಇರುವುದಿಲ್ಲ. ಹಾಗೆ ನೋಡಿದರೆ, ಮಾತುಕತೆಯಾಡುತ್ತಿರುವ ಹೆಣ್ಣ ಗಂಡುಗಳು ಒಬ್ಬರನ್ನೊಬ್ಬರು ಸಮಾನರೆಂದು ಎಚ್ಚರಿಕೆಯಿಂದ ಪರಿಗಣಿಸುತ್ತಿದ್ದರೂ, ಅಪಾರ್ಥಗಳು ಹುಟ್ಟಿಕೊಳ್ಳುತ್ತವೆ. ಯಜಮಾನಿಕೆಯ ಚೌಕಟ್ಟಿನ ಬದಲು ಭಿನ್ನ ಸಂಸ್ಕೃತಿಯ ಚೌಕಟ್ಟನ್ನು ಬಳಸುವುದರಿಂದ ಅಪಾರ್ಥ ಸೃಷ್ಟಿಗೆ ನಾವು ನಿರ್ದಿಷ್ಟವಾಗಿ ಹೆಂಗಸರನ್ನಾಗಲೀ, ಇಲ್ಲವೇ ಗಂಡಸನ್ನಾಗಲೀ ಗುರಿ ಮಾಡಿ ದೂಷಿಸಬೇಕಾಗಿ ಬರುವುದಿಲ್ಲ.

ಆದರೆ, ಈ ಚೌಕಟ್ಟು ಎಷ್ಟು ಸರಿ? ಈ ನಿಟ್ಟಿನಲ್ಲಿ ಎರಡು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ. ಈ ಎರಡು ಪ್ರಶ್ನೆಗಳು ಯಜಮಾನಿಕೆ ಮತ್ತು (ಸಾಂಸ್ಕೃತಿಕ) ಭಿನ್ನತೆಗಳನ್ನು ಪರಸ್ಪರ ಎದುರು ಬದರು ನಿಲ್ಲಿಸುವುದರಿಂದ ಹುಟ್ಟಿಕೊಂಡಿದೆ. ನನ್ನ ಮೊದಲನೆಯ ವಾದ ಹೀಗಿದೆ -ಭಿನ್ನ ಸಂಸ್ಕೃತಿಯ ಮಾದರಿಯನ್ನು ಮುಂದಿಡುವವರು ಯಜಮಾನಿಕೆ ಮತ್ತು ಗಂಡಸಿನ ಮೇಲುಗೈ ಕುರಿತ ಪ್ರತಿಯೊಂದು ಸಂದರ್ಭವನ್ನೂ ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ. ನನ್ನ ಎರಡನೆಯ ವಾದ ಹೀಗಿದೆ -ಗಂಡು ಹೆಣ್ಣುಗಳ ನಡುವೆ ಇರುವ ಸಂಸ್ಕೃತಿ ಮತ್ತು ಯಜಮಾನಿಕೆಯ ನೆಲೆಗಳನ್ನು ಬೇರೆ ಬೇರೆಯಾಗಿ ಇಡುವುದೇ ತಪ್ಪು. ಅವೆರಡನ್ನೂ ಸ್ವತಂತ್ರವಾದ ನೆಲೆಗಳೆಂದು ತಿಳಿದು ಅವುಗಳಲ್ಲಿ ಒಂದನ್ನು ಬಳಸಿ ಹೆಣ್ಣು ಗಂಡಿನ ಮಾತುಕತೆಯ ಸಮಸ್ಯೆಗಳನ್ನು ಬಿಡಿಸಲು ಹೊರಡುವುದು ಸರಿಯಲ್ಲ. ಭಿನ್ನ ಸಂಸ್ಕೃತಿಯ ಚೌಕಟ್ಟಿನವರು ಅಧಿಕಾರ ರಚನೆ ಮತ್ತು ಯಜಮಾನಿಕೆಗಳ ಪ್ರಭಾವಗಳನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಇದು ಅಪಾಯಕಾರಿ. ಈ ಎರಡೂ ನೆಲೆಗಳನ್ನು ಮುಂದೆ ಚರ್ಚಿಸಲಿದ್ದೇನೆ.

ಗಂಡು ಹೆಣ್ಣುಗಳ ನಡುವಣ ಸಾಂಸ್ಕೃತಿಕ ಭಿನ್ನತೆ : ಒಂದು ಪರಿಚಯ

ಅಮೆರಿಕದ ಹೆಣ್ಣು ಮತ್ತು ಗಂಡುಗಳ ಮಾತಿನ ರೀತಿಗಳಲ್ಲಿರುವ ವ್ಯತ್ಯಾಸಗಳನ್ನು ಗ್ರಹಿಸಲು ಕೆಲವು ಸೂಚನೆಗಳನ್ನು ಮಾಲ್ಟ್‌ಜ್ ಮತ್ತ ಬೊರ್ಕರ್ ನೀಡಿದ್ದಾರೆ. ಹಿಂದೆಯೇ ಹೇಳಿದಂತೆ, ಈ ಮಾತಿನ ರೀತಿಗಳನ್ನು ಹೆಣ್ಣು ಗಂಡುಗಳು ತಮ್ಮ ಎಳವೆಯಲ್ಲಿ ಪಡೆದುಕೊಂಡಿರುತ್ತಾರೆ. ಭಿನ್ನ ಸಂಸ್ಕೃತಿ ಚೌಕಟ್ಟಿನವರು ಮುಂದಿಡುತ್ತಿರುವ ಹೆಣ್ಣು ಗಂಡುಗಳ ಸಾಂಸ್ಕೃತಿಕ ಭಿನ್ನತೆಯ ನೆಲೆಗಳನ್ನು ಈಗ ಸ್ಥೂಲವಾಗಿ ಗಮನಿಸೋಣ.

ಮಾಲ್ಟ್‌ಜ್ ಮತ್ತು ಬೋರ್ಕರ್ ಅವರು, ಅಮೆರಿಕದ ಹುಡುಗರು ಮತ್ತು ಹುಡುಗಿಯರು  ತಂತಮ್ಮ ಲಿಂಗಕ್ಕೆ ಸೇರಿದ ಸಮವಯಸ್ಕರೊಡನೆ ಆಟಪಾಠಗಳಲ್ಲಿ ತೊಡಗಿರುವುದನ್ನು ಅಧ್ಯಯನ ಮಾಡಿದವರು ನೀಡಿರುವ ತೀರ್ಮಾನಗಳನ್ನು ಅವಲಂಬಿಸಿ, ಈ ಹುಡುಗ ಹುಡುಗಿಯರು ಭಾಷೆಯನ್ನು ಬಳಸುವಲ್ಲಿ ಈ ಮುಂದಿನ ಭಿನ್ನತೆಗಳನ್ನು ತೋರುತ್ತಾರೆಂದು ಹೇಳಿದ್ದಾರೆ. ಹುಡುಗಿಯರು ಸಂಬಂಧಗಳನ್ನು ಕಟ್ಟಿಕೊಳ್ಳುವ, ನಿಕಟಗೊಳಿಸುವ, ಮತ್ತು ಸಮಾನತೆಯನ್ನು ಬೆಳೆಸಿಕೊಳ್ಳುವ ನೆಲೆಗಳನ್ನು ಕಲಿತುಕೊಳ್ಳುತ್ತಾರೆ. ಬೇರೆಯವರ ರೀತಿನೀತಿಗಳನ್ನು ಟೀಕಿಸಿದರೂ ಅವರ ಮನ ನೋಯದಂತೆ ನೋಡಿ ಕೊಳ್ಳುತ್ತಾರೆ. ಇತರ ಹುಡುಗಿಯರ ಮಾತನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿಯುತ್ತಾರೆ.  ಹುಡುಗರಾದರೋ ಯಜಮಾನಿಕೆ ಸಾಧಿಸುವುದನ್ನು ಕಲಿಯುತ್ತಾರೆ. ಬೇರೆಯವರ ಗಮನ ಸೆಳೆಯುವುದು, ತಾವು ಹೇಳಿದ್ದನ್ನು ಕೇಳಿಸಿಕೊಳ್ಳುವವರನ್ನು ಹುಡುಕುವುದು ಅವರ ಗುರಿ.  ಬೇರೆಯವರು ಮಾತಾಡುತ್ತಿದ್ದರೂ, ತಮ್ಮ ದನಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದನ್ನು ಅವರು ಕಲಿಯುತ್ತಾರೆ. ಇತ್ತೀಚೆಗೆ ನಡೆದ ಅಧ್ಯಯನಗಳೂ ಕೂಡಾ ಇದೇ ಮಾದರಿಯನ್ನು ಒಪ್ಪಿಕೊಂಡಿವೆ. ಮಕ್ಕಳು ಯಾವಾಗಲೂ ಗುಂಪಲ್ಲಿದ್ದುಕೊಂಡು ತಮ್ಮ ಲಿಂಗಕ್ಕೆ ಸೇರಿದವರೊಡನೆ ವಿಶೇಷವಾಗಿ ಬೆರೆಯುತ್ತಾ ಬೆಳೆಯುವ ಮೂಲಕವೇ, ಅವರ ಸಾಮಾಜೀಕರಣ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆಂಬ ಪ್ರಮೇಯವನ್ನು ಇಂಥ ಅಧ್ಯಯನಗಳು ನಂಬಿಕೊಂಡಿವೆ. ಹಾಗಾಗಿ ಬೆಳೆಯುವಾಗ ಹೀಗೆ ಬೇರ್ಪಡುವುದರಿಂದ ಹೆಣ್ಣು ಗಂಡುಗಳು ತಮ್ಮದೇ ಆದ ಸಂಸ್ಕೃತಿಯನ್ನು ರೂಪಿಸಿಕೊಳ್ಳುತ್ತಾರೆಂದು ತೀರ್ಮಾನಿಸುತ್ತಾರೆ.

ಅಮೆರಿಕದ ವಯಸ್ಕರು ತಮ್ಮ ಲಿಂಗದವರೊಡನೆ ಮಾತಾಡುವ ರೀತಿಗೂ, ಮಕ್ಕಳು ಇದೇ ಸಂದರ್ಭದಲ್ಲಿ ಮಾತಾಡುವ ರೀತಿಗೂ ಹೋಲಿಕೆ ಇರುತ್ತದೆ. ಹೆಂಗಸರ ಸಂಕಥನಗಳನ್ನು ಕುರಿತು ನಡೆಸಿದ ಹಲವಾರು ಅಧ್ಯಯನಗಳು, ಅವರು ಚಿಕ್ಕವರಾಗಿದ್ದಾಗ ಕಲಿತ ಮಾತುಕತೆಯ ಬಗೆಯನ್ನೇ ವಯಸ್ಕರಾದಾಗಲೂ ಬಳಸುವುದನ್ನು ತೋರಿಸಿಕೊಟ್ಟಿವೆ. ಹೆಂಗಸರು ನಗೆಹನಿಗಳನ್ನು ಹೇಳುವುದು. ಅವರ ಗೋಡೆಬರಹಗಳು, ಹರಟೆಗಳು, ಗೆಳತಿಯರೊಡನೆ ಸಲ್ಲಾಪಗಳು, ಶೈಕ್ಷಣಿಕ ವಲಯದ ಮಾತುಗಳು ಇವೆಲ್ಲವನ್ನೂ ಗಮನಿಸಿದರೆ, ಹೆಂಗಸರ ಮಾತುಕತೆಗಳಲ್ಲಿ ‘ಸಾಹಚರ್ಯದ, ಸಹಭಾಗಿತ್ವದ, ಸಂಬಂಧ ಬೆಳೆಸುವ’ನೆಲೆಗಳು ಇರುವುದು ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ಹೆಂಗಸರ ಮಾತನ್ನು ಗಮನಿಸಿದರೆ ಅಲ್ಲಿ ಕಾಣುವ ಲಕ್ಷಣಗಳು ಹೀಗಿವೆ :  ತಾವು ಕೇಳುತ್ತಿದ್ದೇವೆಂದು ಸೂಚಿಸಲು ಕನಿಷ್ಠ ಪ್ರತಿಕ್ರಿಯೆ ನೀಡುವುದು, ಆಪ್ತ ಮತ್ತು ವ್ಯಾವರ್ತಕ ಸರ್ವನಾಮಗಳ ವ್ಯಾಪಕ ಬಳಕೆ, ಆಸಕ್ತಿ ಮತ್ತು ಗಮನ ಹರಿಸುವಿಕೆಯನ್ನು ಸೂಚಿಸುವಿಕೆ – ಈ ಎಲ್ಲ ಲಕ್ಷಣಗಳೂ ಹೆಂಗಸರು ತೊಡಗಿಸಿಕೊಳ್ಳುವ ಸಂಕಥನಗಳಲ್ಲಿ ಸಹಕಾರ ಮತ್ತು ಸಹಭಾಗಿತ್ವಗಳು ಇರುವಂತೆ ನೋಡಿಕೊಳ್ಳುತ್ತವೆ.  ಟ್ಯಾನನ್ (೧೯೯೦) ಇದನ್ನು ‘ಗೆಳೆತನ ಬೆಳೆಸುವ ಮಾತುಕತೆ’ ಎನ್ನುತ್ತಾಳೆ. ಇದು ವರದಿ ಮಾತುಕತೆಗಳಿಗಿಂತ ಬೇರೆಯಾದುದು. ವರದಿ ಮಾತುಕತೆಗೆ ಬೇಕಾದ ತಂತ್ರಗಳೇ ಬೇರೆ.  ಅದರಲ್ಲಿ ಗಂಡಸರು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ.

ಒಂದೇ ಲಿಂಗಕ್ಕೆ ಸೇರಿದವರು ನಡೆಸುವ ಮಾತುಕತೆಯ ರೀತಿಗಳ ನಿಟ್ಟಿನಿಂದ ನೋಡಿದಾಗ ಹೆಣ್ಣು ಮತ್ತು ಗಂಡುಗಳು ಸ್ವಲ್ಪವಾದರೂ ಭಿನ್ನ ಸಂಸ್ಕೃತಿಯ ನಿಯಮಗಳನ್ನು ಹೊಂದಿರುತ್ತಾರೆಂದು ತಿಳಿಯುವುದು ಸಹಜವಾಗಿದೆ. ಆದರೆ, ನಾನೀಗಾಗಲೇ ಹೇಳಿದಂತೆ ಇಂಥ ಭಿನ್ನತೆಗಳನ್ನು ಗುರುತಿಸಿದವರೆಲ್ಲ ಒಂದೇ ಲಿಂಗಕ್ಕೆ ಸೇರಿದವರ ಮಾತುಕತೆಗಳನ್ನು ಹೋಲಿಸಿ ನೋಡಿ ತಮ್ಮ ತೀರ್ಮಾನಗಳನ್ನು ಮಂಡಿಸಿದ್ದಾರೆ. ಹೆಣ್ಣು ಗಂಡುಗಳ ನಡುವಣ ಸಂಹವನಗಳನ್ನು ಭಿನ್ನ ಸಂಸ್ಕೃತಿಯ ನೆಲೆಯಲ್ಲಿ ನೋಡುವ ಯತ್ನ ಇಲ್ಲಿಗೇ ನಿಲ್ಲುವುದಿಲ್ಲ.  ಬೇರೆ ಬೇರೆ ಲಿಂಗಕ್ಕೆ ಸೇರಿದವರು ಮಾತುಕತೆಯಾಡುವಾಗ ಏನಾಗುತ್ತದೆ ಎಂಬುದನ್ನು ವಿಶ್ಲೇಷಿಸಬೇಕಾಗುತ್ತದೆ. ಅಂದರೆ, ಭಿನ್ನ ಸಂಸ್ಕೃತಿಗಳಿಗೆ ಸೇರಿದ ಸದಸ್ಯರು ಸಮಾನತೆಯ ನೆಲೆಯಲ್ಲಿ ಮಾತುಕತೆಗೆ ತೊಡಗುವುದನ್ನು ಪರಿಶೀಲಿಸಬೇಕಾಗುತ್ತದೆ.

ಹೆಣ್ಣು ಗಂಡುಗಳ ಮಾತುಕತೆಗಳ ವಿಶ್ಲೇಷಣೆಗೆ ಭಿನ್ನಸಂಸ್ಕೃತಿ ಚೌಕಟ್ಟನ್ನು ಅನ್ವಯಿಸುವಾಗ ಉಂಟಾಗುವ ಸಮಸ್ಯೆಗಳು

ಭಿನ್ನಸಂಸ್ಕೃತಿ ಚೌಕಟ್ಟನ್ನು ಅನ್ವಯಿಸಿದರೆ, ಗಂಡು ಹೆಣ್ಣುಗಳು ಪರಸ್ಪರ ಅರ್ಥಮಾಡಿಕೊಳ್ಳುವಾಗ ತಾವು ಎಳವೆಯಲ್ಲಿ ಕಲಿತ ನಿಯಮಗಳನ್ನೇ ಬಳಸುತ್ತಾರೆಂದು ಹೇಳಬೇಕಾಗುತ್ತದೆ. ಹಾಗಾಗಿ, ಅಪಾರ್ಥಗಳಾದಾಗ ಅದಕ್ಕೆ ಸಂಸ್ಕೃತಿಗಳ ಭಿನ್ನತೆಯೇ ಕಾರಣವೆಂದು ಹೇಳುವುದು ಸಹಜ. ನಮ್ಮ ಪ್ರಕಾರ ಮೊದಲ ಸಮಸ್ಯೆ ಹುಟ್ಟುವುದು ಇಲ್ಲಿಯೇ. ಏಕೆಂದರೆ, ಒಂದೇ ಲಿಂಗದವರು ನಡೆಸುವ ಮಾತುಕತೆಗಳ ನಿಯಮಗಳನ್ನು  ಹೆಣ್ಣು ಗಂಡುಗಳು ಒಟ್ಟಾಗಿ ನಡೆಸುವ ಮಾತುಕತೆಗಳಲ್ಲಿಯೂ ಯಥಾವತ್ತಾಗಿ ಬಳಸಲಾಗುತ್ತದೆಂದು ಮೊದಲೇ ಒಪ್ಪಿಕೊಂಡಂತಾಗಿದೆ. ಮಾಲ್ಟ್‌ಜ್ ಮತ್ತು ಬೋರ್ಕರ್ ಆಗಲೀ, ಇಲ್ಲವೇ ಟ್ಯಾನನ್ ಆಗಲೀ, ಹೆಣ್ಣು ಗಂಡುಗಳು, ಎಳವೆಯಲ್ಲಿ ಕಲಿತ ನಿಯಮಗಳನ್ನೇ ದೊಡ್ಡವರಾದ ಮೇಲೂ, ತಾವು ಈಗ ಮಾತನಾಡುತ್ತಿರುವುದು ಹೆಣ್ಣಿನ ಜೊತೆಯಲ್ಲೋ ಗಂಡಿನ ಜೊತೆಯಲ್ಲೋ ಎಂಬುದರ ಪರಿವೆಯೇ ಇಲ್ಲದೆ ಬಳಸುತ್ತಾರೆ ಎನ್ನುವುದಕ್ಕೆ ಪುರಾವೆಗಳನ್ನು ನೀಡಿಲ್ಲ. ಟ್ಯಾನನ್ ಮಾತ್ರ ಕೆಲವು ಪ್ರಸಂಗಗಳನ್ನು ಉದಾಹರಿಸಿದ್ದಾಳೆ. ಅವುಗಳ ಪ್ರಕಾರ ಹೆಂಡತಿಯರು ತಮ್ಮ ಗೆಳತಿಯರೊಡನೆ ಮಾತಾಡುವಾಗ ನಿರೀಕ್ಷಿಸುವ ಸಾಹಚರ್ಯದ ಒತ್ತಾಸೆಯ ಮಾತಿನ ಬಗೆಗಳನ್ನು ತಮ್ಮ ಗಂಡಂದಿರೊಡನೆ ಮಾತಾಡುವಾಗಲೂ ನಿರೀಕ್ಷಿಸುತ್ತಾರೆಂದು ತಿಳಿಯಬೇಕಾಗುತ್ತದೆ. ಹಾಗೆ ತಮ್ಮ ನಿರೀಕ್ಷೆ ದಿಟವಾಗದಿದ್ದರೆ ಗಂಡಂದಿರು ನಗೆಹನಿಗಳನ್ನೋ, ಇಲ್ಲವೇ ಬುದ್ದಿ ಮಾತುಗಳನ್ನೋ ಹೇಳಿದರೆ, ಇವರು ನೊಂದುಕೊಳ್ಳುತ್ತಾರೆ, ಇಲ್ಲವೇ ಉದ್ವಿಗ್ನರಾಗುತ್ತಾರೆ. ಟ್ಯಾನನ್ ಮತ್ತೊಂದು ಅಧ್ಯಯನದಲ್ಲಿ ಹುಡುಗರು ಮತ್ತು ಹುಡುಗಿಯರ ಮಾತುಗಳಿರುವ ವಿಡಿಯೋ ದೃಶ್ಯಗಳನ್ನು ವಿಶ್ಲೇಷಿಸಿದ್ದಾಳೆ. ಅವುಗಳಿಗೆ  ಟ್ಯಾನನ್ ತಾನೇ ನೀಡಿದ ಪ್ರತಿಕ್ರಿಯೆಗಳನ್ನು ಆ ವಿಡಿಯೋಗಳನ್ನು ನೋಡಿದ ಗಂಡಸರು ನೀಡಿದ ಪ್ರತಿಕ್ರಿಯೆಯೊಡನೆ ಹೋಲಿಸಿದ್ದಾಳೆ.  ಟ್ಯಾನನ್‌ಗೆ ಹುಡುಗಿಯರ ಮಾತು ಮುದ್ದುಮುದ್ದಾಗಿ ಹಿತಕರವೆನಿಸಿತು. ಅದು ಹೆಂಗಸರ ಸಹಜ ಬಗೆ ಎಂದು ಆಕೆ ಹೇಳುತ್ತಾಳೆ. ಹುಡುಗರಲ್ಲಿ ಕಂಡುಬರುವ ಚಡಪಡಿಕೆ ಮತ್ತು ಅಣಕಗಳು ಅವಳಲ್ಲಿ ಮುಜುಗರವನ್ನು ಉಂಟು ಮಾಡಿದವು. ಆದರೆ ಪ್ರತಿಕ್ರಿಯೆ ನೀಡಿದ ಗಂಡಸರು ಹುಡುಗರ ಮಾತಿನಲ್ಲಿ ಕಂಡ ಹುಮ್ಮಸ್ಸು ಮತ್ತು ಅವರ ನಗೆಚಾಟಿಕೆಗಳು ಆಕರ್ಷಕವಾಗಿವೆ ಎಂದರು. ಹುಡುಗಿಯರು ಸುಮ್ಮನೆ ಕುಳಿತು ವಿಧೇಯತೆಯನ್ನು ತೋರಿಸುವುದು ಗಂಡಸರಿಗೆ ಇಷ್ಟವಾಗಲಿಲ್ಲ. ಟ್ಯಾನನ್ ಇದನ್ನು ವಿಶ್ಲೇಷಿಸುತ್ತಾ ‘‘ಹುಡುಗರೂ ಮತ್ತು ಹುಡುಗಿಯರೂ ಭಿನ್ನಜಗತ್ತುಗಳಲ್ಲಿ ಬೆಳೆಯುತ್ತಾರೆ. ಆದರೆ ನಾವು ಒಂದೇ ಜಗತ್ತಿನಲ್ಲಿದ್ದೇವೆಂದು ತಿಳಿಯುತ್ತೇವೆ. ಹಾಗಾಗಿ ಪರಸ್ಪರರ ವರ್ತನೆಗಳನ್ನು ನಮ್ಮದೇ ಮಾನದಂಡಗಳಿಂದ ನೋಡುತ್ತೇವೆ’’ಎನ್ನುತ್ತಾಳೆ. (೧೯೯೦)

ಈ ಹೇಳಿಕೆಯು ಭಿನ್ನಸಂಸ್ಕೃತಿ ಸಂಹವನದಲ್ಲಿ ಆಗುವ ಅಪಾರ್ಥ ಕುರಿತಂತೆ ಸೂಕ್ತ ವಿಶ್ಲೇಷಣೆಯಾಗಿದೆ. ಆದರೆ, ಇಂತಹ ತೀರ್ಮಾನಗಳನ್ನು ತಲುಪುವ ಮೊದಲು ವ್ಯವಸ್ಥಿತವಾದ ಅಧ್ಯಯನಗಳನ್ನು ಹೆಚ್ಚಾಗಿ ನಡೆಸದೆ ಇರುವುದರಿಂದ ಈ ತೀರ್ಮಾನಗಳು ಅತಿವ್ಯಾಪ್ತಿ ದೋಷಕ್ಕೆ ಒಳಗಾಗಿವೆ ಎನ್ನಬೇಕಾಗಿದೆ. ಏಕೆಂದರೆ, ಒಂದೇ ಲಿಂಗಕ್ಕೆ ಸೇರಿದವರು, ಇಲ್ಲವೇ ಗಂಡು ಹೆಣ್ಣುಗಳು ಒಟ್ಟಾಗಿ ನಡೆಸುವ ಮಾತುಕತೆಗಳನ್ನು ಪರಿಶೀಲಿಸುವಾಗ ಒಂದೇ ಬಗೆಯ ಮಾನದಂಡಗಳು ಅನ್ವಯವಾಗುತ್ತವೆಂದು ಹೇಳುವುದು ಹೇಗೆ? ಭಾಗೀದಾರರು ಗಂಡೋ ಹೆಣ್ಣೋ ಎಂಬುದನ್ನವಲಂಬಿಸಿ ಮಾತುಕತೆಯ ವಿಷಯ, ಬಗೆ, ಅರ್ಥಮಾಡಿಕೊಳ್ಳುವ ನಿಯಮಗಳು ಬದಲಾಗಬಹದು. ಏರಿಸ್ ಮತ್ತು ಜಾನ್‌ಸನ್ ಒಂದೇ ಲಿಂಗಕ್ಕೆ ಸೇರಿದ ಗೆಳೆಯರ ಮಾತುಕತೆಯ ವಿಷಯವನ್ನು ಅಧ್ಯಯನ ಮಾಡಿದ್ದಾರೆ. ಅಂಥ ಕಡೆ ಹೆಂಗಸರು ತಮ್ಮ ಗಂಡಂದಿರೊಡನೆ ಯಾವ ವಿಷಯವನ್ನು ಕುರಿತು ಮಾತಾಡುವುದಿಲ್ಲವೋ ಅವುಗಳನ್ನು ತಮ್ಮ ಆತ್ಮೀಯ ಗೆಳತಿಯರೊಡನೆ ಮಾತಾಡಿದ್ದಾರೆ. (೧೯೮೩) ಅಂದರೆ, ಮಾತುಕತೆಯಲ್ಲಿ ಭಾಗೀದಾರರಾಗಿರುವವರು ಗಂಡೋ ಹೆಣ್ಣೋ ಎಂಬುದು ಮಾತುಕತೆಯ ವಿಷಯವನ್ನು ನಿರ್ಧರಿಸುವುದಾದರೆ, ಆ ಭಾಗೀದಾರರನ್ನು ಅರ್ಥ ಮಾಡಿಕೊಳ್ಳುವ ಬಗೆಯೂ ಕೂಡಾ ಇದರಿಂದ ಪ್ರಭಾವಿತವಾಗಲೇ ಬೇಕು. ಟ್ಯಾನನ್‌ಳ ಹಿಂದಿನ ಉದಾಹರಣೆಯನ್ನು ನೋಡೋಣ. ಹುಡುಗರ ಮತ್ತು ಹುಡುಗಿಯರ ಮಾತುಕತೆಗಳನ್ನು ಹೆಂಗಸರು ಮತ್ತು ಗಂಡಸರು ಬೇರೆ ಬೇರೆಯಾಗಿ ವಿಶ್ಲೇಷಿಸಿದ್ದು ನಿಜ. ಆದರೆ ಒಂದು ವೇಳೆ ಹುಡುಗಿಯರು ಬೇಕೆಂದೇ ಹುಡುಗರಂತೆ ಮಾತಾಡಿದ್ದರೆ, (ಚಡಪಡಿಸುವುದು, ಅಣಕಿಸುವುದು, ಒಬ್ಬರ ಕಾಲನ್ನೊಬ್ಬರು ಎಳೆಯುವುದು, ಸವಾಲು ಹಾಕುವುದು) ಆಗ ಗಂಡಸರು ಆ ಹುಡುಗಿಯರ ಮಾತುಕತೆಗಳನ್ನು ಮೆಚ್ಚಿಕೊಳ್ಳುತ್ತಿದ್ದರೇನು? ನಾವು ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳಲು ಕೆಲವು ಪ್ರಚಲಿತ ಮಾದರಿಗಳನ್ನು ಇರಿಸಿಕೊಂಡಿರುತ್ತೇವೆ. ನಮ್ಮ ಲಿಂಗದವರ ಲೋಕದಲ್ಲೇ ಬದುಕುತ್ತಾ ಇಂಥ ಮಾದರಿಗಳನ್ನು ಮೈಗೂಡಿಸಿಕೊಂಡಿರುತ್ತೇವೆ. ನಿಜ, ಆದರೆ, ಹೀಗೆ ಸಮಲಿಂಗಿ ಗಳೊಡನೆ ವ್ಯವಹರಿಸುತ್ತಾ ಕಲಿತಿದ್ದಕ್ಕಿಂತಾ ಭಿನ್ನವೇ ಆಗಿ, ಗಂಡಸರು ಮತ್ತು ಹೆಂಗಸರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇರೆಯದೇ ಆದ ಮಾನದಂಡಗಳನ್ನು ಕೂಡಾ ಪಡೆದಿರುತ್ತವೆ.

ಗಂಡು ಹೆಣ್ಣುಗಳು ಮಾತಾಡುವಾಗ ಭಿನ್ನಸಂಸ್ಕೃತಿಯ ಮಾದರಿಯನ್ನು ಅನುಸರಿಸುತ್ತಾರೆ ಎಂದು ಹೇಳುವುದು ತೀರಾ ಸರಳ ಗ್ರಹಿಕೆ. ಏಕೆಂದರೆ, ಮಕ್ಕಳು ತಂತಮ್ಮ ಲಿಂಗದ ಮಕ್ಕಳೊಡನೆ ಎಷ್ಟೇ ಸಮಯವನ್ನು ಕಳೆದರೂ ಬೇರೆ ಲಿಂಗದ ಮಕ್ಕಳಿಂದ ಸಂಪೂರ್ಣ ಬೇರ್ಪಟ್ಟಿರುವುದಿಲ್ಲ. ಸಮಲಿಂಗಿಗಳೊಡನೆ ಗೆಳೆತನದ ಮಾತುಕತೆಯ ನಿಯಮಗಳನ್ನು ಕಲಿಯುತ್ತಿರುವಾಗಲೇ ಅವರು ಬೇರೆ ಲಿಂಗದ ಮಕ್ಕಳೊಡನೆ, ತಂದೆ ತಾಯಿಯರೊಡನೆ ಮಾತುಕತೆಯಾಡುತ್ತಿರುತ್ತಾರಷ್ಟೇ?ಹೀಗಾಗಿ ಹುಡುಗರು ಮತ್ತು ಹುಡುಗಿಯರು ಸಂಸ್ಕೃತಿಯು ಸಿದ್ಧಗೊಳಿಸಿಕೊಟ್ಟ ಮಾದರಿಗಳನ್ನು ತಮ್ಮೊಳಗೆ ನೆಲೆಗೊಳಿಸಿಕೊಳ್ಳುತ್ತಾರೆ. ಆದ್ದರಿಂದ, ಬೆಳೆದ ಮೇಲೆ ಮಾತುಕತೆಗೆ ತೊಡಗುವ ಗಂಡು ಹೆಣ್ಣುಗಳು, ಯಾವುದೋ ಒಂದು ಕಾರ್ಖಾನೆಯಲ್ಲಿ ಜೊತೆಗೂಡಿ ಕೆಲಸ ಮಾಡುತ್ತಿರುವ ಅಮೆರಿಕ ಮತ್ತು ಜಪಾನಿನ ಕಾರ್ಮಿಕರಂತೆ, ನಿಜವಾಗಿಯೂ ಬೇರೆ ಬೇರೆ ಸಂಸ್ಕೃತಿಗಳಿಗೆ ಸೇರಿರುವುದಿಲ್ಲ. ಕಾರ್ಖಾನೆಯ ಸಂದರ್ಭದಲ್ಲಿ ಕಾರ್ಮಿಕರು ಇನ್ನೊಂದು ಸಂಸ್ಕೃತಿಯ ಪರಿಚಯ ಪಡೆದಿರುವುದಿಲ್ಲ. ಆದರೆ, ಹೆಣ್ಣು ಗಂಡುಗಳ ವಿಚಾರ ಹೀಗಲ್ಲ.

ಭಿನ್ನಸಂಸ್ಕೃತಿ ಎಂಬ ಮಾತನ್ನು ಬಳಸುವುದರಲ್ಲೇ ಒಂದು ಸಮಸ್ಯೆ ಇದೆ. ಈ ಪದ ಎರಡು ಸಂಸ್ಕೃತಿಗಳ ನಡುವೆ ಪಟ್ಟಿ ಮಾಡಿ ತೋರಿಸಬಹುದಾದ, ಮತ್ತು ಬದಲಾಗದ ಭಿನ್ನತೆಗಳು ಇರುತ್ತವೆಂದೂ, ಆ ಭಿನ್ನತೆಗಳನ್ನು ಅರಿತು ಅರಗಿಸಿಕೊಳ್ಳುವುದು ಅಸಾಧ್ಯವೆಂದೂ ನಂಬುತ್ತದೆ. ಗಂಡು ಹೆಣ್ಣುಗಳ ಮಾತುಕತೆಯನ್ನು ಭಿನ್ನಸಂಸ್ಕೃತಿಯ ನೆಲೆಯಿಂದ ನೋಡಿದಾಗ ಗಂಡಸರು ಮತ್ತು ಹೆಂಗಸರ ನಡುವೆ ಹೀಗೆಯೇ ಭಿನ್ನತೆಗಳ ಪಟ್ಟಿಯೊಂದು ಇರುತ್ತದೆಂದು ತಿಳಿಯಬೇಕಾಗುತ್ತದೆ. ಈ ನೆಲೆಯನ್ನು ಒಪ್ಪಿದರೆ, ಆಗ ಹೆಂಗಸರ ಸಂಹವನ ಸಾಮರ್ಥ್ಯದಲ್ಲಿ ಹೊಸದೇನೂ ಇರುವುದಿಲ್ಲ. ಹಾಗೇನಾದರೂ ಹೊಸತು ಕಾಣಬೇಕಾದರೆ ಅದು ಗಂಡಸರ ಸಂವಹನ ಸಾಮರ್ಥ್ಯಕ್ಕಿಂತ ಹೇಗೆ ಭಿನ್ನ ಎಂಬುದು ಗೊತ್ತಾಗಬೇಕು. ಇದೇ ಮಾತು ಗಂಡಸರ ಸಂವಹನ ಸಾಮರ್ಥ್ಯಕ್ಕೂ ಅನ್ವಯಿಸುತ್ತದೆ. ಆಗ, ಹೆಣ್ಣು ಗಂಡುಗಳ ಮಾತುಕತೆ ಗಮನಾರ್ಹವಾಗಬೇಕಾದರೆ, ಅವರಿಬ್ಬರ ಸಂವಹನ ಸಾಮರ್ಥ್ಯಗಳ ನಡುವೆ ಇರುವ ವ್ಯತ್ಯಾಸವು ಬದಲಾಗದೆ ಇರುವಂಥದ್ದು ಎಂದಾಗಬೇಕು; ಮತ್ತು ಅವರು ಸಮಲಿಂಗಿಗಳೊಡನೆ ಬಳಸುವ ಮಾತುಕತೆಯ ನಿಯಮಗಳನ್ನೇ ಇಲ್ಲಿಯೂ ಯಥಾವತ್ತಾಗಿ ಅನ್ವಯಿಸುತ್ತಿರಬೇಕು. ಎರಡು ಭಿನ್ನಸಂಸ್ಕೃತಿಗಳಿಗೆ ಸೇರಿದವರ ಮಾತುಕತೆಗಳು ತಂತಮ್ಮ ಸಂಸ್ಕೃತಿಯ ನಿಯಮಗಳಿಗನುಗುಣವಾಗಿ ಇನ್ನೊಬ್ಬರನ್ನು ಅರ್ಥವೋ ಅಪಾರ್ಥವೋ ಮಾಡಿಕೊಳ್ಳುವಷ್ಟಕ್ಕೆ ಸೀಮಿತವಾಗಿರುವುದಿಲ್ಲ. ಅಮೆರಿಕದ ಗಂಡು ಹೆಣ್ಣುಗಳ ನಡುವೆ ನಡೆಯುವ ಮಾತುಕತೆಯನ್ನು ಒಂದೇ ಸಂಸ್ಕೃತಿಯ ಭಿನ್ನ ವಲಯಗಳ ನೆಲೆಯಿಂದ ನೋಡಬೇಕಾಗುತ್ತದೆ. ಆಗ ಆ ಸಂಸ್ಕೃತಿಯ ಒಳ ರಚನೆಯ ಸಂಕೀರ್ಣತೆಗಳು ನಮಗೆ ಮುಖ್ಯವಾಗುತ್ತವೆ. ಭಿನ್ನ ಸಂಸ್ಕೃತಿ ಸಂಹವನದಲ್ಲಿ ಒಬ್ಬರು ಇನ್ನೊಬ್ಬರನ್ನು ತಮ್ಮ ದೃಷ್ಟಿಕೋನಕ್ಕನುಗುಣವಾಗಿ ನೋಡಿ, ಹೋಲಿಸಿಕೊಂಡು, ವಿಶ್ಲೇಷಿಸುತ್ತಿರುತ್ತಾರೆ. ಇದು ‘ಪರವೀಕ್ಷಕ’ನೆಲೆ ಎನ್ನಬಹುದು. ಆದರೆ, ಒಂದೇ ಸಂಸ್ಕತಿಯ ಭಿನ್ನ ವಲಯಗಳ ನಡುವೆ ನಡೆಯುವ ಮಾತುಕತೆಯು ಭಾಗೀದಾರಿಕೆ ನೆಲೆಯಲ್ಲಿ ನಡೆಯುತ್ತದೆ. ಭಾಗೀದಾರರಿಗೆ ಹೆಚ್ಚಿನ ಜವಾಬ್ದಾರಿ ಇಂಥಲ್ಲಿ ಅತ್ಯಗತ್ಯ.

ಸಂಸ್ಕೃತಿಯೊಳಗಣ ಭಿನ್ನತೆಯ ದೃಷ್ಟಿಕೋನವು ಸಂವಹನವನ್ನು ಚಲನಶೀಲವೆಂದು ಗ್ರಹಿಸುತ್ತದೆ. ಇಲ್ಲಿ ಹೊಂದಿಕೊಳ್ಳುವ, ಕೊಟ್ಟು ತೆಗೆದುಕೊಳ್ಳುವ, ಹೊಸ ಅರ್ಥಗಳನ್ನು ಹುಟ್ಟು ಹಾಕುವ, ಕೆಲಸ ನಡೆಯಬೇಕು. ಭಾಗೀದಾರರು ಇನ್ನೊಬ್ಬರೊಡನೆ ಮಾತಾಡುತ್ತಲೇ ತಮ್ಮ ನಿಯಮಗಳನ್ನು ಹೊಂದಿಸಿಕೊಳ್ಳುತ್ತಾ ಬದಲಿಸುತ್ತಿರುತ್ತಾರೆ. ಇನ್ನೊಬ್ಬರ ದೃಷ್ಟಿಕೋನವನ್ನು ಅರಿತುಕೊಂಡು ತಮ್ಮ ಮಾತಿನ ಬಗೆಯನ್ನು ಬದಲಾಯಿಸಿಕೊಳ್ಳುವ ಸಾಮರ್ಥ್ಯವು ವ್ಯಕ್ತಿಯಲ್ಲಿ ಇರುವುದನ್ನು ಭಿನ್ನಸಂಸ್ಕೃತಿ ಮಾದರಿಯು ನಿರಾಕರಿಸುತ್ತದೆ. ಇದಲ್ಲದೆ, ಮಾತುಕತೆಯಾಡುವ ಗಂಡು ಹೆಣ್ಣುಗಳಲ್ಲಿ ಇರುವ ಸಾಮಾಜಿಕ, ಸಾಂಸ್ಕೃತಿಕ ತಿಳಿವಳಿಕೆ, ಗಂಡು ಹೆಣ್ಣುಗಳಾಗಿ ವಹಿಸಬೇಕಾದ ಪಾತ್ರಗಳ ಬಗೆಗಿನ ನಿರೀಕ್ಷೆ -ಇವೆಲ್ಲವನ್ನೂ ಭಿನ್ನಸಂಸ್ಕೃತಿ ಮಾದರಿಯು ನಿರಾಕರಿಸುತ್ತದೆ. ಹಾಗೆ ನೋಡಿದರೆ ಮಾತನಾಡುತ್ತಿರುವವರ ಮಾತಿನ ರೀತಿಯ ಮೇಲೆ ಕೇಳಿಸಿಕೊಳ್ಳುತ್ತಿರುವವರು ಗಂಡೋ, ಹೆಣ್ಣೋ ಎಂಬುದು ಪ್ರಭಾವ ಬೀರುತ್ತದೆ ಎಂಬುದನ್ನೇ ಈ ಮಾದರಿಯು ಕಡೆಗಣಿಸುತ್ತದೆ. ಈ ಪ್ರಭಾವ ಮಾತುಕತೆಯಲ್ಲಿ ಉಂಟಾಗುವ ಭಿನ್ನ ಪರಿಣಾಮಗಳಿಗೆ ಒಂದು ಕಾರಣ.

ಭಿನ್ನಸಂಸ್ಕೃತಿ ಮಾದರಿಯನ್ನು ಗಂಡು ಹೆಣ್ಣುಗಳ ಮಾತುಕತೆಯ ವಿಶ್ಲೇಷಣೆಗೆ ಬಳಸುವುದೆಂದರೆ, ಯಾಜಮಾನ್ಯವನ್ನು ಆಧರಿಸಿದ ಮಾದರಿಯನ್ನು ಅನ್ವಯಿಸಿದಂತೆಯೇ ಸರಿ.  ಜನಾಂಗ, ವರ್ಗ, ವಯಸ್ಸು ಮತ್ತು ಲಿಂಗ ದೃಷ್ಟಿಕೋನಗಳು, ಮಾತುಕತೆಯಲ್ಲಿ ವಹಿಸುವ ಪಾತ್ರವನ್ನು ಈ ಎರಡೂ ಮಾದರಿಗಳು ಪರಿಗಣಿಸುವುದಿಲ್ಲ. ಗಂಡು ಹೆಣ್ಣುಗಳು ತಂತಮ್ಮ ಸಮಲಿಂಗಿ ಗುಂಪುಗಳ ಭಾಗವಾಗಿರುವಂತೆ, ಪರಸ್ಪರ ನಂಟುಳ್ಳ ಹಲವು ಸಾಮಾಜಿಕ ಗುಂಪುಗಳಿಗೂ ಸೇರಿರುತ್ತಾರೆ. ಹಾಗಾಗಿ, ಒಬ್ಬ ವ್ಯಕ್ತಿ ಇನ್ನೊಬ್ಬರೊಡನೆ ವ್ಯವಹರಿಸುವಾಗ ಕೇವಲ ಹೆಂಗಸು ಅಥವಾ ಗಂಡಸು ಮಾತ್ರ ಆಗಿರುವುದಿಲ್ಲ. ಅಮೆರಿಕದ ಗಂಡು ಹೆಣ್ಣುಗಳ ಮಾತುಕತೆಯ ವಿಶ್ಲೇಷಣೆಗೆ ಮಾಲ್ಟ್‌ಜ್ ಮತ್ತು ಬೋರ್ಕರ್ ಭಿನ್ನ ಸಂಸ್ಕೃತಿಯ ಮಾದರಿಯನ್ನೇನೋ ಬಳಸಿದರು. ಇವರ ತೀರ್ಮಾನಗಳು ಸಾಂಸ್ಕೃತಿಕ ಮತ್ತು ಕುಲದ ನೆಲೆಯ ವೈವಿಧ್ಯಗಳನ್ನು ಮತ್ತು ಅಮೆರಿಕದಲ್ಲಿರುವ ಜಾನಾಂಗಿಕ ಬಿಕ್ಕಟ್ಟನ್ನು ಪರಿಗಣಿಸುವುದಿಲ್ಲ. ಟ್ಯಾನನ್ ಹೇಳಿದ ಪ್ರಸಂಗಗಳೆಲ್ಲ ಹೆಚ್ಚು ವ್ಯತ್ಯಾಸಗಳಿಲ್ಲದ ಗುಂಪಿಗೆ ಸೇರಿದವು. ಅವರೆಲ್ಲ ಅಮೇರಿಕದ ಶಿಕ್ಷಿತ ಮಧ್ಯಮವರ್ಗದ ಹೆಟರೋಸೆಕ್ಷುಯಲ್ ನಾಗರಿಕರು. ಆದರೆ ಬೇರೊಂದು ಕಡೆ ನ್ಯೂಯಾರ್ಕಿನ ಯಹೂದಿಗಳ ಮಾತುಕತೆಯ ರೀತಿ ಮತ್ತು ಕ್ಯಾಲಿಫೋರ್ನಿಯಾದ ಯಹೂದಿಗಳಲ್ಲದವರ ಮಾತುಕತೆಯ ರೀತಿಗಳನ್ನು ಹೋಲಿಸಿ ಟ್ಯಾನನ್ ಅಧ್ಯಯನ ನಡೆಸಿದ್ದಾಳೆ. ಈ ಅಧ್ಯಯನದಲ್ಲಿ ಲಿಂಗವೊಂದೇ ಮಾತುಕತೆಯ ಭಿನ್ನತೆಗೆ ಕಾರಣವಾಗುತ್ತದೆಂದು ಹೇಳಿದ್ದರೂ, ಈ ತೀರ್ಮಾನವನ್ನು ಆಕೆ ತನ್ನ ಬೇರೆ ಅಧ್ಯಯನಗಳಲ್ಲಿ ಸೇರ್ಪಡೆ ಮಾಡಿಕೊಳ್ಳಲಿಲ್ಲ.

ಭಿನ್ನತೆ ಮತ್ತು ಯಜಮಾನಿಕೆಯ ಸಮಸ್ಯೆಗಳು

ಸಾಮಾಜಿಕವಾಗಿ ಸಮಾನರಾದ ಹೆಂಗಸರು ಮತ್ತು ಗಂಡಸರ ನಡುವೆ ನಡೆಯುವ ಮಾತುಕತೆಯಲ್ಲಿ ಅಧಿಕಾರ ಸಂಬಂಧಕ್ಕೆ ಮಹತ್ವವಿಲ್ಲದಿರುವುದರಿಂದ, ಆ ಮಾತುಕತೆಗಳ ವಿಶ್ಲೇಷಣೆಗೆ ಯಜಮಾನಿಕೆ ಆಧಾರಿತ ಮಾದರಿಗಿಂತ ಭಿನ್ನಸಂಸ್ಕೃತಿ ಮಾದರಿಯನ್ನು ಬಳಸುವುದೇ ಸರಿ ಎಂದು ವಾದಿಸಲಾಯಿತಷ್ಟೇ? ಆದರೆ, ಸಾಮಾನ್ಯ ಮಾತುಕತೆಗಳಲ್ಲಿ ಗಂಡು ಹೆಣ್ಣುಗಳು ಸಮಾನಸ್ಕಂದ, ಸ್ನೇಹಿತರಂತೆ ವರ್ತಿಸಿದರೆ ಮಾತ್ರ ಈ ಮಾದರಿಯ ನೆಲೆ ನಿಜವಾಗುತ್ತದೆ. ಈ ಶರತ್ತು ನಾವು ತಿಳಿದಷ್ಟು ಸುಲಭವಲ್ಲ. ಗಂಡು ಹೆಣ್ಣುಗಳು ಒಟ್ಟಾಗಿ ಮಾತಾಡುವಾಗ ಈ ಶರತ್ತಿನ ಪಾಲನೆ ಆಗುವುದೇ ಇಲ್ಲ. ಅಲ್ಲದೆ, ಗೆಳೆತನ ಮತ್ತು ಸಮಾನಸ್ಕಂದತೆ ಎಂಬ ಮಾತುಗಳಿಗೇ ಹಲವಾರು ವ್ಯಾಖ್ಯಾನಗಳಿವೆ. ಭಾಗೀದಾರರ ಅಂತಸ್ತುಗಳು ಮುಖ್ಯವೆನಿಸುವ ತರಗತಿಗಳು, ಕೆಲಸದ ಜಾಗಗಳು, ವೈದ್ಯ ಮತ್ತು ರೋಗಿ ಭೇಟಿ, ಮಾರಾಟಗಾರ -ಗಿರಾಕಿ ಭೇಟಿ, ತಾಯಿ ಮತ್ತು ಮಗ, ತಂದೆ ಮತ್ತು ಮಗಳು, ಅಷ್ಟೇಕೆ ಗಂಡ ಹೆಂಡತಿ -ಇಂತಹ ಸಂದರ್ಭಗಳಲ್ಲಿ ಭಿನ್ನಸಂಸ್ಕೃತಿ ಮಾದರಿಯನ್ನು ಬಳಸುವುದು ಸಾಧ್ಯವೇ ಇಲ್ಲ.

ಗಂಡು ಹೆಣ್ಣುಗಳು ಯಾವಾಗ ತಾನೇ ಸರಿಸಮಾನರಂತೆ ಸಂವಾದಿಸುತ್ತಾರೆ ಎಂಬ ಪ್ರಶ್ನೆಯನ್ನು ಕೇಳಬಹುದು. ಹೋಗಲಿ, ಗೆಳೆಯರಾದರೂ ಸಮಾನತೆಯ ನೆಲೆಯಲ್ಲಿರುತ್ತಾರೆ ಎನ್ನಬಹುದೇ?  ಭಿನ್ನಸಂಸ್ಕೃತಿ ಮಾದರಿಯು ಹೆಣ್ಣು ಗಂಡುಗಳು ಸಾಮಾಜಿಕವಾಗಿ ಸಮಾನರು ಎಂದು ನಾವು ನಂಬಲು ಒತ್ತಾಯಿಸುತ್ತದೆ. ಆದರೆ, ಸಾಮಾಜಿಕವಾಗಿ ಸಮಾನರಾಗಿರುವುದೆಂದರೆ ಅದಕ್ಕೆ ಎರಡು ಅರ್ಥಗಳಿವೆ. ೧. ತಾತ್ವಿಕ ನೆಲೆಯಲ್ಲಿ ಸಾಮಾಜಿಕವಾಗಿ ಸಮಾನರಾಗಿರುವುದು  ೨.ನಿಜವಾಗಿಯೂ ಸಾಮಾಜಿಕವಾಗಿ ಸಮಾನರಾಗಿರುವುದು. ಮೊದಲನೆಯದು ನಿಜವಿದ್ದರೆ, ಎರಡನೆಯದೂ ನಿಜವಾಗಿರಬೇಕಿಲ್ಲ. ಅದರಲ್ಲೂ ಸಮಾನತೆಯ ಪ್ರಶ್ನೆಯು ಗಂಡು ಹೆಣ್ಣುಗಳ ಮಟ್ಟಿಗೆ ಇನ್ನೂ ಜಟಿಲವಾಗಿದೆ.  ಇಲ್ಲಿಯೂ ಎರಡು ನೆಲೆಗಳಿವೆ. ೧.ವ್ಯಕ್ತಿ-ವ್ಯಕ್ತಿಗಳ ನಡುವಣ ಸಂಬಂಧ  ೨.ಒಂದು ಲಿಂಗದ ಪ್ರತಿನಿಧಿಯಾಗಿ ಇನ್ನೊಂದು ಲಿಂಗದ ಪ್ರತಿನಿಧಿಯೊಡನೆ ಇರುವ ಸಂಬಂಧ. ನಿಜವಾಗಿಯೂ ಸಾಮಾಜಿಕ ಸಮಾನತೆ ಎಂಬುದು ಇದ್ದರೆ, ಅದು ಎರಡು ನೆಲೆಗಳಲ್ಲೂ ಇರಬೇಕು. ಈ ಹೊತ್ತಿನ ಅಮೇರಿಕದ ಸಮಾಜದಲ್ಲಿ ಗಂಡು ಹೆಣ್ಣುಗಳ ನಡುವೆ ಈ ಬಗೆಯ ಸಮಾನತೆ ಅಸಾಧ್ಯ. ನಾನು ವಯಸ್ಸು, ವರ್ಗ, ಶಿಕ್ಷಣ, ಜನಾಂಗ -ಮುಂತಾದ ನೆಲೆಗಳಲ್ಲಿ ನನ್ನದೇ ಗುಂಪಿಗೆ ಸೇರಿದ ಗಂಡಸಿನೊಡನೆ ಮಾತಾಡುವಾಗಲೂ ಹೆಣ್ಣಾಗಿ ಸಾಮಾಜಿಕ ಸಮಾನತೆಯನ್ನು ಆತನೊಡನೆ ಹೊಂದಿರುವುದು ಅಸಂಭವ.

ಬೀದಿಯಲ್ಲಿ ಹೋಗುವ ಅಪರಿಚಿತರು ಮಾಡುವ ಟೀಕೆ ಟಿಪ್ಪಣಿಗಳನ್ನು ಆಧರಿಸಿ ನಡೆಸಿದ ಅಧ್ಯಯನಗಳನ್ನು ಉದಾಹರಣೆಯನ್ನಾಗಿ ನೋಡೋಣ.  ಇಲ್ಲಿ ಭಾಗೀದಾರರ ಸಾಮಾಜಿಕ ಅಂತಸ್ತಿನ ವ್ಯತ್ಯಾಸ ಮುಖ್ಯವಾಗುವುದಿಲ್ಲ. ಅಲ್ಲದೆ, ಇಂಥ ಕಡೆಗಳಲ್ಲಿ ಗಂಡು ಹೆಣ್ಣುಗಳು ಭಾಗೀದಾರರಾಗಿರುತ್ತಾರೆ. ಹೆಚ್ಚಾಗಿ ಗಂಡಸರೇ ಹೆಂಗಸರನ್ನುದ್ದೇಶಿಸಿ ಮಾತಾಡಿರುತ್ತಾರೆ. ಈ ಅಸಮತೋಲನವೇ ಇಲ್ಲೇನೋ ಅಸಮಾನತೆ ಅಡಗಿದೆ ಎಂಬುದರ ಸೂಚಕವಾಗಿದೆ.  ಅನ್ನಿಸಿಕೊಂಡ ಹೆಂಗಸರು ತಮಗೆ ಕಿರುಕುಳ, ಮನೋವೇದನೆ ಆಗಿದೆ ಎಂದು ಆರೋಪಿಸಿದ್ದಾರೆ. ಅಂದವರು ತಮ್ಮ ಮಾತುಗಳನ್ನು ಹೊಗಳಿಕೆಯನ್ನಾಗಿ ಪರಿಗಣಿಸಬೇಕೆಂದು ಸಮರ್ಥಿಸಿಕೊಳ್ಳುತ್ತಾರೆ. ತಾವು ನಿಜವಾಗಿಯೂ ಸ್ನೇಹಪರರೆಂದು ವಾದಿಸುತ್ತಾರೆ.  ಯಜಮಾನಿಕೆ ಮೆರೆಯುವ ಉದ್ದೇಶ ಇಲ್ಲವೇ ಇಲ್ಲವೆಂದೂ ಹೇಳಿಯಾರು. ಆದರೆ, ಇದೇ ಮಾತುಗಳನ್ನು ಆತ ಒಬ್ಬ ಗಂಡಸಿಗೆ ಹೇಳಬಹುದೇ? ಅಥವಾ ಹೆಂಗಸೊಬ್ಬಳು ಹೀಗೆ ಬೀದಿಮಾತು ಆಡಿದ್ದರೆ ಅದನ್ನು ಮೆಚ್ಚುಗೆಯ ಮಾತೆಂದು ಈ ಗಂಡಸು ಸ್ವೀಕರಿಸಿಯಾನೇ? ಆ ಮಾತುಗಳು ಸ್ನೇಹಸೂಚಕವೆಂದು ನಂಬುತ್ತಾನೇನು? ಕೇಳಿಸಿಕೊಂಡವರು ಮರಳಿ ಅಂಥದೇ ಮಾತನ್ನು ಹೇಳಲಾಗದಂತೆ ಮಾಡುವ ಕ್ರಿಯೆಯಲ್ಲಿ ತೊಡಗಲು ಅವನಿಗೆ ಅಧಿಕಾರ ಎಲ್ಲಿಂದ ಬಂತು? ಆತ ಗಂಡಸು, ಆಕೆ ಹೆಂಗಸು ಆಗಿರುವುದೇ ಇದಕ್ಕೆಲ್ಲ ಕಾರಣ. ಅಂದರೆ, ಈ ನೆಲೆಯಲ್ಲಿ ಹೆಣ್ಣು ಗಂಡುಗಳು ಸಮಾನರಲ್ಲ.