ಸ್ತ್ರೀವಾದಿ ಚಿಂತಕರು ತಮ್ಮ ತಾತ್ತ್ವಿಕ ನೆಲೆಗಟ್ಟುಗಳನ್ನು ಕಟ್ಟಿಕೊಳ್ಳಲು ಬೇರೆ ಬೇರೆ ಜ್ಞಾನವಲಯಗಳ ಚಿಂತನಾಕ್ರಮಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಜ್ಞಾನ ವಲಯಗಳು ಒಂದಲ್ಲ ಒಂದು ವಿಧದಲ್ಲಿ ಹೆಣ್ಣನ್ನು ಕುರಿತ ವ್ಯಾಖ್ಯೆಗಳನ್ನು ಒಳಗೊಂಡಿರುತ್ತವೆ ಎನ್ನುವ ನಂಬಿಕೆಯಿಂದ ಈ ಶೋಧ ಮೊದಲಾದಂತೆ ತೋರುತ್ತದೆ. ಜ್ಞಾನವಲಯಗಳು ತಮ್ಮ ಪರಿಕಲ್ಪನೆಗಳ ಚೌಕಟ್ಟಿನಲ್ಲಿ ಹೆಣ್ಣನ್ನು ವ್ಯಾಖ್ಯಾನಿಸಿರಬಹುದು; ಅಥವಾ ಅವುಗಳ ಕಾರ್ಯಸೂಚಿಯಲ್ಲಿ ಮತ್ತು ಆನ್ವಯಿಕ ನೆಲೆಗಳಲ್ಲಿ ಹೆಣ್ಣನ್ನು ವ್ಯಾಖ್ಯಾನಿಸುವ ಆಯ್ಕೆಯನ್ನು ಮಾಡಿಕೊಂಡಿರಬಹುದು. ವಿಜ್ಞಾನ, ಅದರಲ್ಲೂ ಭೌತವಿಜ್ಞಾನಗಳು ನೇರವಾಗಿ ಹೆಣ್ಣನ್ನು ಕುರಿತ ಚಿಂತನೆಗಳಿಗೆ ಅನುವು ಮಾಡಿ ಕೊಂಡಿಲ್ಲವಾದರೂ, ಅವುಗಳ ಲೋಕದೃಷ್ಟಿಯಲ್ಲಿ ಹೆಣ್ಣು ಮತ್ತು ಆಕೆಯ ಜಗತ್ತು ಅಂತಸ್ಥವಾಗಿರುವುದೇ ಎಂಬ ಪ್ರಶ್ನೆ ಇದ್ದೇ ಇರುತ್ತದೆ. ಸಮಾಜಶಾಸ್ತ್ರ, ಚರಿತ್ರೆ, ಮನೋವಿಜ್ಞಾನ – ಮುಂತಾದ ಸಾಮಾಜಿಕ ವಿಜ್ಞಾನಗಳು ಮಂಡಿಸುವ ತಾತ್ತ್ವಿಕ ಚೌಕಟ್ಟಿನಲ್ಲಿ ಹೆಂಗಸಿನ ಸ್ಥಾನವನ್ನು ಗುರುತಿಸಲು ವಿಶೇಷ ಪರಿಕರಗಳು ಬೇಕಾಗಿಲ್ಲ.

ಜ್ಞಾನವಲಯಗಳನ್ನು ಸ್ತ್ರೀವಾದಿಗಳು ಶೋಧಿಸುವಾಗ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಯಾವುದೇ ಜ್ಞಾನವಲಯದ ತಾತ್ತ್ವಿಕ ಚೌಕಟ್ಟು ಹಲವು ಮಗ್ಗಲುಗಳನ್ನು ಹೊಂದಿರುತ್ತದೆ. ಇದಕ್ಕೆ ಚಾರಿತ್ರಿಕವಾದ, ಸಾಮಾಜಿಕವಾದ ಕಾರಣಗಳಿರುತ್ತವೆ. ವೈದ್ಯವಿಜ್ಞಾನವನ್ನು ನಿದರ್ಶನವನ್ನಾಗಿ ಗಮನಿಸಬಹುದು. ದೇಹರಚನಾಶಾಸ್ತ್ರವನ್ನು ಸಾವಿರಾರು ವರ್ಷಗಳಿಂದ ಮಂಡಿಸುತ್ತ ಬಂದಿದ್ದರೂ ಪ್ರಾಯೋಗಿಕವಾಗಿ ದೇಹವೊಂದನ್ನು ಛೇದಿಸಿ ವಿವರಗಳನ್ನು ಗಮನಿಸಲು ಹೊರಟದ್ದು ತೀರಾ ಈಚೆಗೆ. ಇದರಿಂದ ಮೊದಲಿನ ಎಷ್ಟೋ ತೀರ್ಮಾನಗಳು ಬದಲಾಗುತ್ತಾ ಬಂದವು. ಅಲ್ಲದೆ, ಮಾನವ ದೇಹವನ್ನು ಅಂಗರಚನೆ ಮತ್ತು ರೋಗಪೀಡಿತ ಎಂಬ ಎರಡು ನೆಲೆಗಳಲ್ಲಿ ನೋಡುವ ಪದ್ಧತಿ ಇದೆ. ಇಂಥ ನೆಲೆಗಳಲ್ಲಿ ಹೆಣ್ಣು ಮತ್ತು ಗಂಡು ದೇಹಗಳನ್ನು ‘ಮಾನವ ದೇಹ’ ಎಂದಷ್ಟೇ ನೋಡುತ್ತಿದ್ದ ವೈದ್ಯವಿಜ್ಞಾನದ ನಿರ್ಮಮತೆಯು ಹಲವು ಪ್ರಶ್ನೆಗಳಿಗೆ ಎಡೆಮಾಡಿ ಕೊಡುತ್ತದೆ. ಸ್ತ್ರೀವಾದಿಗಳು ಎಲ್ಲ ಜ್ಞಾನವಲಯಗಳನ್ನೂ ಹೀಗೆ ಅವುಗಳ ಚಾರಿತ್ರಿಕ ಬೆಳವಣಿಗೆಯ ಹಿನ್ನೆಲೆಯಲ್ಲಿಯೇ ಮುಖಾಮುಖಿಯಾಗುವುದು ಅನಿವಾರ್ಯ.

ಜ್ಞಾನವಲಯಗಳನ್ನು ಹೆಚ್ಚಿನ ತಿಳುವಳಿಕೆಗೋಸ್ಕರ ಪ್ರವೇಶಿಸುವುದು ಒಂದು ಬಗೆ. ತಮ್ಮ ಈವರೆಗಿನ ತಿಳುವಳಿಕೆಯನ್ನು ತಾಳೆ ನೋಡಲು ಇತರ ಜ್ಞಾನವಲಯಗಳ ತಿಳಿವನ್ನು ಬಳಸುವುದು ಇನ್ನೊಂದು ಬಗೆ. ಇದಲ್ಲದೆ, ಮೂರನೆಯ ಬಗೆಯೂ ಒಂದಿದೆ. ಇದು ಪ್ರತಿರೋಧದ ಬಗೆ. ಇಲ್ಲಿ ತನ್ನ ಶೋಧದ ಚೌಕಟ್ಟಿಗೆ ಇತರ ಜ್ಞಾನವಲಯಗಳ ಗ್ರಹಿಕೆ ಪೂರಕವಾಗಿದೆಯೇ ಅಥವಾ ವಿರೋಧವನ್ನು ಹುಟ್ಟು ಹಾಕುತ್ತಿದೆಯೇ ಎನ್ನುವುದನ್ನು ಕಂಡುಕೊಳ್ಳಲಾಗುತ್ತದೆ. ಇದಕ್ಕೆ ತಕ್ಕಂತೆ ಇತರ ಜ್ಞಾನವಲಯಗಳೊಡನೆ ಸಂವಾದ ಬೆಳೆಯುತ್ತದೆ. ಸ್ತ್ರೀವಾದವು ಈ ಮೂರೂ ಹಾದಿಗಳನ್ನು ಬೇರೆ ಬೇರೆ ಕಾಲಘಟ್ಟಗಳಲ್ಲಿ, ಬೇರೆ ಬೇರೆ ಪ್ರಮಾಣಗಳಲ್ಲಿ ಅನುಸರಿಸುತ್ತದೆ.

ಸ್ತ್ರೀವಾದಿಗಳ ಆಸಕ್ತಿಯನ್ನು ಸೆಳೆದ ಜ್ಞಾನವಲಯಗಳಲ್ಲಿ ಭಾಷಾಶಾಸ್ತ್ರವೂ ಒಂದು. ಹಾಗೆ ನೋಡಿದರೆ, ಸ್ತ್ರೀವಾದಿಗಳು ನೇರವಾಗಿ ಭಾಷಾಶಾಸ್ತ್ರವನ್ನು ಪ್ರವೇಶಿಸಲಿಲ್ಲ. ಅವರ ಆಸಕ್ತಿ ಇದ್ದದ್ದು ಭಾಷೆಯಲ್ಲಿ. ಭಾಷೆಯನ್ನು ಕುರಿತ ಅಧ್ಯಯನವಲಯವಾಗಿ ಭಾಷಾಶಾಸ್ತ್ರ ರೂಪುಗೊಂಡಿರುವುದರಿಂದ, ಸ್ತ್ರೀವಾದಿಗಳು ಭಾಷಾಶಾಸ್ತ್ರದೊಡನೆ ಮುಖಾಮುಖಿಯಾಗು ವುದು ಅಗತ್ಯವಾಗಿದೆ. ಭಾಷಾಶಾಸ್ತ್ರದ ತಿಳುವಳಿಕೆಯ ನೆರವಿನಿಂದ ಹೆಣ್ಣು ಮತ್ತು ಭಾಷೆಯ ಸಂಬಂಧವನ್ನು ಅರಿಯಲು ಯತ್ನಿಸುತ್ತಾ ಸಾಗಿದ ಸ್ತ್ರೀವಾದ, ಈಗ ತನ್ನೆಲ್ಲ ಭಾಷಿಕ ಚಿಂತನೆಗಳನ್ನೂ ಕ್ರೋqsಕರಿಸಿ ‘ಸ್ತ್ರೀವಾದಿ ಭಾಷಾಶಾಸ್ತ್ರ’ ಎಂಬ ಜ್ಞಾನವಲಯವನ್ನು ಮುಂದಿರಿಸಿದೆ. ಇದು ಭಾಷಾಶಾಸ್ತ್ರಜ್ಞರು ರೂಪಿಸಿದ ಜ್ಞಾನವಲಯವಲ್ಲ. ಸ್ತ್ರೀವಾದಿಗಳು ಕಟ್ಟಿದ ಜ್ಞಾನವಲಯ ಎಂಬುದನ್ನು ಗಮನಿಸಬೇಕು. ಇಲ್ಲಿ ಭಾಷಾಶಾಸ್ತ್ರದ ದಿಗಂತಗಳನ್ನು ವಿಸ್ತರಿಸುವ ಆಸಕ್ತಿ ಮುಖ್ಯವಲ್ಲ. ಸ್ತ್ರೀವಾದದ ಹರಹನ್ನು ಭಾಷಿಕ ನೆಲೆಯಲ್ಲಿ ಪರೀಕ್ಷಿಸುವುದು ಮತ್ತು ಪರಿಷ್ಕರಿಸುವುದು ಮುಖ್ಯ ಗುರಿಯಾಗಿದೆ. ಈ ವ್ಯತ್ಯಾಸವನ್ನು ಗುರುತಿಸಿದ್ದಕ್ಕೆ ಕಾರಣಗಳಿವೆ. ಸಾಮಾಜಿಕ ಭಾಷಾಶಾಸ್ತ್ರ, ಮನೋಭಾಷಾಶಾಸ್ತ್ರ, ಚಾರಿತ್ರಿಕ ಭಾಷಾಶಾಸ್ತ್ರ ಮುಂತಾದ ಭಾಷಾಶಾಸ್ತ್ರದ ಶಾಖೆಗಳಲ್ಲಿ ಕಾರ್ಯನಿರತರಾಗಿರುವವರು ಭಾಷಾಶಾಸ್ತ್ರಜ್ಞರು. ಆದರೆ ಸ್ತ್ರೀವಾದಿ ಭಾಷಾಶಾಸ್ತ್ರ ಹಾಗೆ ಭಾಷಾಶಾಸ್ತ್ರದ ಶಾಖೆಯಾಗಿಲ್ಲ. ಅದು ಸ್ತ್ರೀವಾದದ ಮುಖ್ಯ ಕಾರ್ಯಸೂಚಿಯನ್ನು ಗಮನದಲ್ಲಿ ಇರಿಸಿಕೊಂಡಿರುವ ಜ್ಞಾನವಲಯ. ಹಾಗಾಗಿ, ಇಲ್ಲಿನ ಚರ್ಚೆಗಳೆಲ್ಲವೂ ಸ್ತ್ರೀವಾದಿಗಳ ಪರಿಕಲ್ಪನೆಗಳನ್ನು ಎಂದೂ ಬಿಟ್ಟು ಕೊಡುವುದಿಲ್ಲ.

ಸ್ತ್ರೀವಾದಿಗಳು ತಮ್ಮ ಎಲ್ಲ ಚಿಂತನೆಗಳ ಹಿಂದೆಯೂ ಚಾರಿತ್ರಿಕವಾಗಿ ಮತ್ತು ಸಮಕಾಲೀನವಾಗಿ ಹೆಂಗಸಿಗೆ ದೊರಕದೆ ಹೋಗಿರುವ ಸಮಾನತೆಯನ್ನೇ ಆಧಾರವಾಗಿ ಇರಿಸಿಕೊಂಡಿರುತ್ತಾರೆ. ಈ ಅಸಮಾನತೆಯ ಅನುಭವವು ನಿರ್ದಿಷ್ಟ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ, ಎಲ್ಲ ಸಮಾಜಗಳಲ್ಲೂ ಕಂಡು ಬರುವ ಲಕ್ಷಣವಾಗಿದೆ. ಅಸಮಾನತೆ ಯನ್ನು ಕಾಯ್ದುಕೊಳ್ಳುವ ಮತ್ತು ಅದನ್ನು ಸಮರ್ಥಿಸುವ ಚಿಂತನೆಗಳನ್ನು ಎಲ್ಲ ಸಮಾಜ ಗಳೂ ಮಂಡಿಸಿವೆ. ಜೊತೆಗೆ, ಅಸಮಾನತೆಯ ನೆಲೆಗಟ್ಟನ್ನು ಹೊಂದಿರುವ ಸಾಮಾಜಿಕ ಸಂಸ್ಥೆಗಳನ್ನೂ ರೂಪಿಸಿ ಬೆಳೆಸುತ್ತಿವೆ. ಸ್ತ್ರೀವಾದಿಗಳು ಈ ಪರಿಸ್ಥಿತಿಯನ್ನು ಗಮನಿಸುವಾಗ, ಯಾವ ಯಾವ ಸಾಮಾಜಿಕ ವ್ಯವಸ್ಥೆಗಳು ಅಸಮಾನತೆಯನ್ನು ಪೋಷಿಸುವ ಕೆಲಸವನ್ನು ಮಾಡುತ್ತಿವೆ ಎನ್ನುವುದನ್ನು ಬಯಲಿಗೆಳೆಯುತ್ತಾರೆ. ಅವುಗಳ ಸ್ವರೂಪವನ್ನು ಚರ್ಚಿಸುತ್ತಾರೆ. ಸಾಧ್ಯವಾದ ಕಡೆಗಳಲ್ಲಿ, ಆ ವ್ಯವಸ್ಥೆಗಳನ್ನು ಬದಲಿಸಲು ಕಾರ್ಯಯೋಜನೆಗಳನ್ನು ರೂಪಿಸುತ್ತಾರೆ. ಈ ನಿಟ್ಟಿನಲ್ಲಿ ನೋಡಿದಾಗ ಸ್ತ್ರೀವಾದಿಗಳಿಗೆ ಭಾಷೆಯೂ ಅಂಥ ವ್ಯವಸ್ಥೆ ಗಳಲ್ಲಿ ಒಂದಾಗಿದೆ ಎಂದು ತೋರಿದೆ. ಭಾಷೆ ಎಂಬ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಂಗಸ ರನ್ನು ಅಸಮಾನತೆಯ ನೆಲೆಯಲ್ಲಿ ಇರಿಸುವುದನ್ನು ಬಿಂಬಿಸುವ ಅಂಶಗಳು ಹೆಣೆದು ಕೊಂಡಿರುವುದೆಂದು ಸ್ತ್ರೀವಾದಿಗಳಿಗೆ ತೋರಿದೆ. ಆದ್ದರಿಂದಲೇ, ಭಾಷೆಯ ಸ್ವರೂಪವನ್ನು ಕುರಿತ ಚರ್ಚೆ ಸ್ತ್ರೀವಾದಿಚಿಂತನೆಗಳಲ್ಲಿ ಪ್ರವೇಶ ಪಡೆದಿದೆ.

ಭಾಷೆಯನ್ನು ಅದರ ರಚನೆ, ನಿಯೋಗ ಮುಂತಾದವುಗಳ ನೆಲೆಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನಗಳುನಡೆದಿವೆ.ಭಾಷೆ ವೈಯಕ್ತಿಕವಾಗಿರುವಂತೆ ಸಾಮಾಜಿಕವೂ ಹೌದು. ಮಾನವರ ಅಂತಸ್ಥ ಸಾಮರ್ಥ್ಯಗಳಲ್ಲಿ ಭಾಷೆಯೂ ಒಂದೆಂದು ಪರಿಗಣಿಸುವಾಗ, ಅದಕ್ಕಿರುವ ಸಾಮಾಜಿಕ ನೆಲೆಗಟ್ಟನ್ನು ಅಲ್ಲಗಳೆಯಲು ಬರುವುದಿಲ್ಲ. ಅಂದರೆ, ಭಾಷೆಯು ವ್ಯಕ್ತಿಯ ನೆಲೆಯಲ್ಲಿ ಜೀವಂತವಾಗಿರುವಂತೆ ತೋರಿದರೂ, ವ್ಯಕ್ತಿಯ ಭಾಷಾಸಾಮರ್ಥ್ಯ ಮತ್ತು ಬಳಕೆಗಳು, ಸಾಮಾಜಿಕವಾಗಿಯೇ ನಿಯಂತ್ರಿತವಾಗುತ್ತವೆ. ಇದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಭಾಷೆ ಎಂಬುದು ಸಮಾಜದ ವ್ಯಕ್ತಿಗಳ ನಡುವಣ ಸಂಪರ್ಕಜಾಲವನ್ನು ನಿರ್ಮಿಸುವ ಉಪಕರಣವಾಗಿದೆ. ಹಾಗಿರುವುದರಿಂದ, ಭಾಷೆಯ ಸ್ವರೂಪವನ್ನು ವ್ಯಕ್ತಿಯು ನಿರ್ಧರಿಸುವುದು ಅಸಾಧ್ಯ. ಸಮಾಜವೇ ಅಂಥ ಆಯ್ಕೆಗಳನ್ನು ವ್ಯಕ್ತಿಗೆ ಸಿದ್ಧಪಡಿಸಿಕೊಟ್ಟಿರು ತ್ತದೆ. ಈ ಆಯ್ಕೆಗಳಲ್ಲಿ ಯಾವ ಬದಲಾವಣೆಯಾದರೂ, ಅದು ಸಾಮಾಜಿಕ ನೆಲೆಯ ಸಮ್ಮತಿಯನ್ನು ಪಡೆದುಕೊಂಡೇ ಇರುತ್ತದೆ.

ಭಾಷೆಯ ಈ ಲಕ್ಷಣದಿಂದಾಗಿ ಸಾಮಾಜಿಕ ಆಚರಣೆಗಳು ಹಾಗೂ ನಂಬಿಕೆಗಳು, ಭಾಷೆಯಲ್ಲಿ ಬಿಂಬಿತವಾಗುವ ಅಥವಾ ಸೂಚಿತವಾಗುವ ಸಾಧ್ಯತೆಗಳು ಇದ್ದೇ ಇರುತ್ತವೆ. ಅಲ್ಲದೆ, ಸಾಮಾಜಿಕ ಆಚರಣೆಗಳನ್ನು ನಿರಂತರಗೊಳಿಸುವ, ಮತ್ತು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಸಾಧನವಾಗಿಯೂ ಭಾಷೆ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ, ಭಾಷೆ ಎಲ್ಲರಿಗೂ ಸಮಾನವಾಗಿ ದೊರೆತಿರುವ ಸೌಲಭ್ಯ ಎಂದು ತಿಳಿದರೂ, ಅದು ಎಲ್ಲರನ್ನೂ ಸಮಾನವಾಗಿ ಪರಿಗಣಿಸುವ ಸಾಧನವಾಗಿ ಉಳಿದಿಲ್ಲ ಎಂಬುದು ಸ್ತ್ರೀವಾದಿಗಳ ತರ್ಕ. ತಮ್ಮ ಈ ತರ್ಕವನ್ನು ವಿವರಿಸಲು ಅವರು ಹಲವು ನಿದರ್ಶನಗಳನ್ನು ಮುಂದಿಡುತ್ತಾರೆ.

ಸ್ತ್ರೀವಾದವು ಭಾಷೆಯನ್ನು ತನ್ನ ಚಿಂತನೆಗಳ ಚೌಕಟ್ಟಿನಲ್ಲಿ ವಿವರಿಸುವಾಗ ಮೂರು ವಲಯಗಳನ್ನು ಆಯ್ದು ಕೊಂಡಿದೆ. ಮೊದಲ ಎರಡು ವಲಯಗಳು ವಿಶ್ಲೇಷಣೆಯ ನೆಲೆಯಲ್ಲಿದ್ದರೆ, ಮೂರನೆಯದು, ಪರಿವರ್ತನೆಯನ್ನು ಗುರಿಯನ್ನಾಗಿರಿಸಿಕೊಂಡಿದೆ. ಮೊದಲೆರಡು ವಲಯಗಳು ೧. ಭಾಷೆಯಲ್ಲಿ ಹೆಣ್ಣಿನ ಪ್ರತಿನಿಧೀಕರಣ ೨. ಗಂಡು ಹೆಣ್ಣುಗಳ ನಡುವಣ ತಾರತಮ್ಯಗಳನ್ನು ಭಾಷೆಯು ಕಾಯ್ದಿಡುತ್ತಿರುವ ಬಗೆ. ಇವುಗಳನ್ನು ಗಮನದಲ್ಲಿರಿಸಿಕೊಳ್ಳುತ್ತದೆ. ೩. ಮೂರನೆಯ ವಲಯ ಇಂಥ ಪರಿಸ್ಥಿತಿಯಿಂದ ಹೊರಬರಲು ಭಾಷೆ ಎಂಬ ವ್ಯವಸ್ಥೆಯಲ್ಲೇ ಆಗಬೇಕಾಗಿರುವ ಪರಿವರ್ತನೆಗಳನ್ನು ಕುರಿತದ್ದು. ಈ ಮೂರನೆಯ ವಲಯದಲ್ಲಿ ಕ್ರಮಾಗತವಾಗಿ ಎರಡು ಹಂತಗಳಿವೆ. ಮೊದಲನೆಯದು, ಈಗಿರುವ ಭಾಷೆಯಲ್ಲೇ ಸುಧಾರಣೆಗಳನ್ನು ತರುವ ಮೂಲಕ ಅದರಲ್ಲಿರುವ ಅಸಮಾನತೆಯ ಪೋಷಕ ನೆಲೆಗಳನ್ನು ಅಳಿಸಿ ಹಾಕಲು ಯೋಜಿಸುತ್ತದೆ. ಎರಡನೆಯ ಹಂತದಲ್ಲಿ ಈಗಿನ ಭಾಷೆಯನ್ನು ಸಮೂಲ ಪರಿವರ್ತನೆಗೆ ಗುರಿಪಡಿಸಿ ಪ್ರತಿಭಾಷೆಯೊಂದನ್ನು ಹೆಂಗಸಿಗಾಗಿಯೇ ರೂಪಿಸಲು ಮುಂದಾಗುತ್ತದೆ. ಈ ಮೂರೂ ವಲಯಗಳನ್ನು ಕುರಿತಂತೆ ಅಗಾಧ ಪ್ರಮಾಣದ ಚರ್ಚೆಗಳು, ವಾಗ್ವಾದಗಳು, ವಿವಾದಗಳು ಕಳೆದ ನಾಲ್ಕು ದಶಕಗಳಲ್ಲಿ ನಡೆದಿವೆ. ಈ ಎಲ್ಲ ಚರ್ಚೆಗಳೂ ಇಂಗ್ಲಿಶ್ ಮತ್ತು ಐರೋಪ್ಯ ಭಾಷೆಗಳನ್ನಾಡುವ ದೇಶಗಳಲ್ಲಿ ಮೊದಲಾದವು. ಈಚಿನ ದಶಕಗಳಲ್ಲಿ ಜಗತ್ತಿನ ಬೇರೆ ಬೇರೆ ಭಾಷಾ ಸಮುದಾಯಗಳಲ್ಲಿಯೂ ಇಂಥ ಚರ್ಚೆಗಳು ನಡೆಯುತ್ತಿವೆ. ಹೀಗಿದ್ದರೂ, ವೈಚಾರಿಕ ಚೌಕಟ್ಟೊಂದು ಜಾಗತಿಕವಾಗಿ ರೂಪುಗೊಂಡಿದೆ ಎಂದು ಹೇಳ ಲಾಗುವುದಿಲ್ಲ. ಸ್ತ್ರೀವಿಮೋಚನೆಯ ನೆಲೆಯಿಂದ ಮೊದಲಾದ ಸ್ತ್ರೀವಾದವು ಆಧುನಿಕೋತ್ತರ ವಾದಗಳವರೆಗೆ ಸಾಗಿ ಬರುವಾಗ ಕಂಡುಕೊಂಡ ಎಲ್ಲ ವೈಚಾರಿಕ ಪಲ್ಲಟಗಳೂ ಸ್ತ್ರೀವಾದಿ ಭಾಷಾಚಿಂತನೆಗಳಲ್ಲಿ ಕಂಡುಬಂದಿವೆ. ಹೀಗಾಗಿ, ಈ ಚಿಂತೆನಗಳನ್ನು ಸಿದ್ಧಗೊಂಡ ಮಾದರಿಯಲ್ಲಿ ಮಂಡಿಸುವುದು ಕಷ್ಟಸಾಧ್ಯ. ಆಗಿರುವ ಎಲ್ಲ ಪರಿವರ್ತನೆಗಳನ್ನೂ ಒಳಗೊಂಡಂತೆ ಈ ಚಿಂತನಾ ಸಾಮಗ್ರಿಯನ್ನು ನಾವೀಗ ಗ್ರಹಿಸಬೇಕಾಗಿದೆ.

ಕನ್ನಡದಂತಹ ಭಾಷಾಸಂಸ್ಕೃತಿಗಳು ಹೊಸ ಚಿಂತನೆಯ ವಲಯಗಳನ್ನು ಜಾಗತಿಕ ನೆಲೆಯಲ್ಲೇ ಕಂಡುಕೊಳ್ಳುತ್ತಿವೆ. ಇದು ಸರಿಯೋ, ತಪ್ರೋಎಂಬ ವಾಗ್ವಾದಗಳು ಕನ್ನಡದಲ್ಲಿ ನಡೆದಿವೆ. ಸ್ತ್ರೀವಾದ ಎಂಬುದೇ ‘ನಮ್ಮ ಸಂಸ್ಕೃತಿ’ಗೆ ಹೊರತಾದುದು, ಅದಕ್ಕಂಟಿರುವ ಪಾಶ್ಚಾತ್ಯ ಮೈಲಿಗೆಯಿಂದಾಗಿ ಅದು ನಮಗೆ ತ್ಯಾಜ್ಯ ಎನ್ನುವ ವಾದ ಒಂದೆಡೆಯಾದರೆ, ಸ್ತ್ರೀ ಪರವಾದ ಮತ್ತು ಸ್ತ್ರೀ ಸಮಾನತೆಯ ಚಿಂತನೆಗಳ ಬೇರುಗಳು ‘‘ನಮ್ಮ ಸಂಸ್ಕೃತಿ’ಯಲ್ಲೇ ಇವೆ, ಅವುಗಳಿಂದ ನಮಗೆ ಬೇಕಾದ ಸ್ತ್ರೀವಾದವನ್ನು ಕಟ್ಟಿಕೊಳ್ಳಬೇಕು ಎನ್ನುವ ವಾದ ಇನ್ನೊಂದು ಕಡೆ. ಈ ಎರಡೂ ವಾದಗಳು ಪಾಶ್ಚಾತ್ಯ ಮಾದರಿಯ ಚಿಂತನಾ ಚೌಕಟ್ಟುಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ವಿರೋಧಿಸುತ್ತವೆ ಮತ್ತು ನಿರಾಕರಿಸುತ್ತವೆ. ಹೀಗಿದ್ದರೂ, ಅಗಾಧ ಪ್ರಮಾಣದ ಸ್ತ್ರೀವಾದಿ ಚಿಂತನಾಸಾಹಿತ್ಯ ಭಾರತದ ಭಾಷೆಗಳಲ್ಲಿ ಸ್ವಯಂ ಕೃಷಿಯಿಂದ ರೂಪುಗೊಳ್ಳುತ್ತಿರುವುದು ಕಡಿಮೆ. ಒಂದೋ ‘ಪಾಶ್ಚಾತ್ಯ’ ಎಂದು ಕರೆಯಲಾಗುತ್ತಿರುವ ಚಿಂತನೆಗಳಿಂದ ಪ್ರೇರಿತವಾದ ದೇಶೀ ಸಂದರ್ಭದ ಅಧ್ಯಯನಗಳು ನಡೆಯುತ್ತಿವೆ; ಇಲ್ಲವೇ ದೇಶಭಾಷೆಗಳ ಓದುಗರಿಗಾಗಿ ಪಾಶ್ಚಾತ್ಯ ಮಾದರಿಯ ಚಿಂತನೆಗಳನ್ನು ಪರಿಚಯಿಸುವ ಬರವಣಿಗೆಗಳು ನಡೆಯುತ್ತಿವೆ. ಕನ್ನಡದಲ್ಲಿ ಕಳೆದ ಮೂರು ದಶಕಗಳಿಂದ ಸಾಕಷ್ಟು ಪ್ರಮಾಣದ ಸ್ತ್ರೀವಾದಿ ಚೌಕಟ್ಟಿನ ಬರವಣಿಗೆಗಳು ಲಭ್ಯವಿದೆ. ಇಂಥ ಬರವಣಿಗೆಗಳಲ್ಲಿ ಗಟ್ಟಿಜೊಳ್ಳಿನ ವಿಭಜನೆ ಅಗತ್ಯವೆಂದು ಕೆಲವರು ಹೇಳುತ್ತಿರುವುದುಂಟು. ಆದರೆ, ಅದಕ್ಕಿಂತಲೂ ಮುಖ್ಯವಾದ ವಿಭಜನೆ ಅಗತ್ಯವಿದೆ. ಅದೆಂದರೆ, ಯಾವುದು ದಿಟವಾದ ಸ್ತ್ರೀವಾದಿ ಬರಹ, ಯಾವುದು ಹುಸಿ ಸ್ತ್ರೀವಾದಿ ಬರಹ ಎಂಬುದನ್ನು ಬೇರೆ ಮಾಡಬೇಕಾಗಿದೆ. ಹುಸಿ ಸ್ತ್ರೀವಾದಿ ಬರಹಗಳು ಹುಟ್ಟಲು ಎರಡು ಕಾರಣಗಳಿವೆ. ಒಂದು, ಸ್ತ್ರೀವಾದಿ ಚಿಂತನೆಗಳನ್ನು ತಮಗೆ ತೋಚಿ ದಂತೆ, ಅವುಗಳ ಚಾರಿತ್ರಿಕ ವಿಕಾಸಕ್ಕೆ ಬೆಲೆ ಕೊಡದೆ ವ್ಯಾಖ್ಯಾನಿಸಿಕೊಳ್ಳುವುದು. ಎರಡನೆಯದು, ಪಾಶ್ಚಾತ್ಯ ಪ್ರಭಾವಗಳಿಂದ ಮುಕ್ತವಾಗುವ ಯತ್ನದಲ್ಲಿ ಹುಂಬತನವನ್ನು ಆಹ್ವಾನಿಸಿಕೊಳ್ಳುವುದು. ಈ ಎರಡೂ ಬಗೆಯ ಬರವಣಿಗೆಗಳ ಹುಸಿತನ ನಮಗೆ ಗೊತ್ತಾಗಬೇಕಾಗಿದೆ. ಅದಕ್ಕೆ ಅವುಗಳ ಹುಸಿತನವನ್ನು ತೋರಿಸಿಕೊಡುವ ಪ್ರಯತ್ನಗಳನ್ನು ಮಾಡುವುದು ಒಂದು ದಾರಿಯಾದರೆ, ದಿಟವಾದ ಸ್ತ್ರೀವಾದಿ ಚಿಂತನೆಗಳ ಪ್ರಕ್ರಿಯಾತ್ಮಕ ಹಾದಿಯನ್ನು ಪರಿಚಯ ಮಾಡಿಕೊಳ್ಳುವುದು ಇನ್ನೊಂದು ದಾರಿ. ಈ ಎರಡನೆಯ ಆಯ್ಕೆಯನ್ನು ಮಾಡಿಕೊಂಡಿದ್ದರಿಂದಲೇ ಇಲ್ಲಿ ಪಾಶ್ಚಾತ್ಯ ಮಾದರಿಗಳ ನೇರ ಅನುವಾದದ ಕೆಲಸಕ್ಕೆ ತೊಡಗಬೇಕಾಯಿತು.

‘ಸ್ತ್ರೀವಾದ’ ಎಂದರೆ ಮಹಿಳೆಯರ ಪರವಾಗಿ ಮಾತನಾಡುವುದು ಎಂಬ ಸ್ಥೂಲ ವ್ಯಾಖ್ಯೆಯನ್ನು ಇಟ್ಟುಕೊಂಡಷ್ಟಕ್ಕೆ ಸ್ತ್ರೀವಾದಿ ಚಿಂತನೆಯನ್ನು ಕಟ್ಟುವುದು ಸಾಧ್ಯ ಎಂಬ ಹಗುರವಾದ ನಿಲುವು ವ್ಯಕ್ತವಾಗುತ್ತಿರುವುದು ತೀರಾ ಆತಂಕಕಾರಿಯಾದ ಸಂಗತಿ. ಏಕೆಂದರೆ ಇದೀಗ ತಾನೇ ಆಕಾರ ತಳೆಯುತ್ತಿರುವ ಸ್ತ್ರೀವಾದವು ಇಂಥ ನಿಲುವಿನಿಂದಾಗಿ ದಾರಿ ತಪ್ಪುವ ಸಾಧ್ಯತೆಗಳಿವೆ. ಒಂದು, ಅಧಿಕಾರಸ್ಥ ನೆಲೆಯಿಂದ ಬರುವ ನಿಲುವುಗಳು ಮಹಿಳೆಯರಿಗೆ ಅಷ್ಟಿಷ್ಟು ಸೌಲಭ್ಯಗಳನ್ನು ಒದಗಿಸಿದರೆ ಆಯಿತು ಎಂಬಂತಿರುತ್ತವೆ. ಶತಮಾನಗಳಿಂದ ಅಧೀನ ನೆಲೆಯಲ್ಲೇ ಉಳಿದು ಬಂದಿರುವ ಹೆಣ್ಣು ಸಮುದಾಯವೂ ಕೂಡಾ ಈ ಉದಾರವಾದಿ ದಾನವನ್ನು ಪಡೆಯುವಷ್ಟಕ್ಕೆ ಧನ್ಯವಾಗಿಬಿಡುತ್ತದೆ. ಸಮಾನತೆ, ಬಿಡುಗಡೆ ಎಂಬ ಕಲ್ಪನೆಗಳು ಇಲ್ಲೆಲ್ಲೂ ಸುಳಿಯಲಾರವು. ಎರಡನೆಯದಾಗಿ ಬುದ್ದಿ ಜೀವಿಗಳೆನಿಸಿಕೊಂಡ ಕೆಲವರು ಪಿತೃಪ್ರಧಾನತೆಯ ನೆಲೆಗಳನ್ನೇ, ಸ್ತ್ರೀಪರ ಎಂಬ ಭ್ರಮಾತ್ಮಕ ಸಂಕಥನಗಳನ್ನು ರಚಿಸುತ್ತಾ, ಭದ್ರಪಡಿಸುತ್ತಾ ಹೋಗುತ್ತಾರೆ. ಈ ಗುಂಪು ಸ್ತ್ರೀವಾದಕ್ಕೆ ಎದುರಾಗುವ ಅತ್ಯಂತ ಅಪಾಯಕಾರಿ ಶತ್ರು. ಈ ಸಂಕಥನಗಳಲ್ಲಿ ಸಮಾನತೆ, ಬಿಡುಗಡೆ ಎಂಬ ಮಾತುಗಳು ಬಿಡುಬೀಸಾಗಿ ಬಳಕೆಗೊಳ್ಳುತ್ತಾ, ಅಂಥದೊಂದು ಸಾಮಾಜಿಕ ಪರಿವರ್ತನೆಯನ್ನು ತರಲು ಎಷ್ಟೊಂದು ಸರಳ ಹಾಗೂ ನೇರವಾದ ದಾರಿಯೊಂದನ್ನು ಅನುಸರಿಸಬಹುದಲ್ಲ ಎಂಬ ಭ್ರಮೆಯನ್ನು ಸ್ವತಃ ಮಹಿಳೆಯರಲ್ಲೂ ಹುಟ್ಟಿಸಿ ನಂಬಿಸಿ ಬಿಡುತ್ತದೆ. ಈ ಭ್ರಮೆಯ ಬಲೆಗೆ ಬೀಳುವವರು ತೀರಾ ಅಮಾಯಕರಾದ ಹೆಂಗಸರಲ್ಲ. ಓದು ಬರಹ, ಉದ್ಯೋಗ ಇತ್ಯಾದಿ ಹಲವು ಸೌಲಭ್ಯಗಳನ್ನು ಪಡೆದಷ್ಟಕ್ಕೇ ತಮ್ಮಷ್ಟು ಮುಕ್ತರು ಯಾರೂ ಇಲ್ಲ ಎಂಬ ಅವಾಸ್ತವ ಲೋಕದಲ್ಲಿ ಬದುಕುತ್ತಿರುವ ಹೆಂಗಸರು; ಶಿಕ್ಷಣ, ಉದ್ಯೋಗಗಳೆಂಬ ಹುಸಿ ಸಬಲೀಕರಣದ ಗಾಳಿಗೋಪುರದಲ್ಲಿರುವ, ತಮ್ಮಷ್ಟಕ್ಕೆ ತಾವೇ ಬುದ್ದಿವಂತರೆಂದು ಅಂದುಕೊಂಡಿರುವವರು; ಪಿತೃಪ್ರಧಾನತೆಯ ನೆಲೆಗಳನ್ನು ಭದ್ರಪಡಿಸುವ ಬುದ್ದಿಜೀವಿಗಳು ಹೊಂದಾಣಿಕೆಯ ನಡೆಯಿಂದ ಸಮಾನತೆಯು ಸಾಧ್ಯ ಎಂಬ ಸಿಹಿತರ್ಕವೊಂದನ್ನು ಮುಂದಿಟ್ಟಾಗ ಅದನ್ನು ಗಬಕ್ಕನೆ ಆತುಕೊಳ್ಳುವವರು ಈ ಹೆಂಗಸರೇ. ಮೇಲು ಪದರದ ಹಲವು ಸೌಖ್ಯಗಳಲ್ಲಿ ಇರುವ ಇವರಿಗೆ ಸಮಾನತೆ, ಬಿಡುಗಡೆ ಎಂಬವೂ ಕೂಡಾ ಆಂತರಿಕ ಸಂಗತಿಗಳೆನ್ನಿಸದೆ, ಕೈಯಲ್ಲಿಷ್ಟು ಹಣ, ಓಡಾಟಕ್ಕೆ ಸ್ವಾತಂತ್ರ್ಯ, ಮನೆಗೆಲಸಗಳಿಂದ ಸ್ವಲ್ಪ ಬಿಡುಗಡೆ ಎಂಬಂಥ ಹಲಕೆಲವು ಬಾಹ್ಯ ಲಕ್ಷಣ ಗಳಿಗೆ ಸಂಬಂಧಿಸಿದ್ದಾಗಿ ಬಿಡುತ್ತದೆ. ಆದರೆ, ‘ಹೊಂದಾಣಿಕೆ’ಯ ವ್ಯಾಖ್ಯಾನದಲ್ಲಿ ಯಾರು ಯಾರನ್ನು ಹೊಂದಿಕೊಂಡು ಹೋಗಬೇಕು ಎಂಬ ಚರ್ಚೆ ಮಗುಮ್ಮಾಗಿ ನಡೆಯುತ್ತಾ, ಅದರ ಎಲ್ಲ ಭಾರವನ್ನು ಹೆಂಗಸಿನ ಮೇಲೆಯೇ ಹೊರಿಸಿಬಿಡುವ ಹುನ್ನಾರವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಜನಪ್ರಿಯ ಪತ್ರಿಕೆಗಳಲ್ಲಿ, ಭಾಷಣಗಳಲ್ಲಿ ದಿನನಿತ್ಯವೆಂಬಂತೆ ಕಾಣಿಸಿಕೊಳ್ಳುವ ಇಂಥ ಬರಹಗಳು ‘ಸ್ತ್ರೀವಾದ’ ಎಂದರೆ ಇದೇ ಅಲ್ಲವೇ ಎಂಬ ಅರ್ಥವನ್ನು ಗಟ್ಟಿಯಾಗಿ ಸ್ಥಾಪಿಸಿಬಿಟ್ಟಿವೆ. ನಮ್ಮ ಸಂದರ್ಭದಲ್ಲಿ ಕೇವಲ ಜನಪ್ರಿಯ ನೆಲೆಗಳಲ್ಲಿ ಮಾತ್ರವೇ ಅಲ್ಲದೆ, ಗಂಭೀರ ಶೈಕ್ಷಣಿಕ ನೆಲೆಯ ಚರ್ಚೆಗಳೂ ಈ ಭ್ರಮಾಜಾಲದಲ್ಲಿ ಸಿಲುಕಿಕೊಂಡಿವೆ ಎಂಬುದು ತೀರಾ ಗಾಬರಿ ತರುವ ವಿಷಯವಾಗಿದೆ. ಅತ್ಯಂತ ಗಂಭೀರ ಬೌದ್ದಿಕ ಚರ್ಚೆಗಳೆಂಬಂತೆ ಪ್ರಸ್ತುತಗೊಳ್ಳುವ ಎಷ್ಟೋ ಚಿಂತನೆಗಳು ಮಾನವೀಯತೆ, ಕುಟುಂಬ ಮತ್ತು ಸಮಾಜದ ರಕ್ಷಣೆ ಎಂಬಂಥ ನೆಲೆಗಳನ್ನೇ ತಮಗೆ ಬೇಕಾದಂತೆ ವ್ಯಾಖ್ಯಾನಿಸತೊಡಗಿ ವ್ಯವಸ್ಥಿತವಾಗಿ ಎಂದಿನಿಂದಲೂ ಚಾಲ್ತಿಗೊಳಿಸುತ್ತ ಬಂದಿರುವ ಪಿತೃಪ್ರಧಾನ ಮೌಲ್ಯಗಳನ್ನು ಇನ್ನಷ್ಟು ಮತ್ತಷ್ಟು ಭದ್ರಗೊಳಿಸುತ್ತಿವೆ.

ಆದರೆ ಈವರೆಗೆ ಈ ಮಹಿಳಾ ಜೀವವಿರೋಧಿ ನೆಲೆಗಳು ಕನಿಷ್ಠಪಕ್ಷ ಸ್ಪಷ್ಟವಾಗಿ ತಮ್ಮ ಕೋರೆಹಲ್ಲುಗಳನ್ನು ಪ್ರದರ್ಶಿಸುತ್ತಿದ್ದವಾದರೆ, ಈಗಿನ ಮುಖವಾಡದಲ್ಲಿ ಅದು ತನ್ನ ಹುಸಿತನವನ್ನು ಬಿಟ್ಟುಗೊಡದಷ್ಟು ನಾಜೂಕಿನದ್ದಾಗಿದೆ. ಸ್ತ್ರೀವಾದದ ತಾತ್ತ್ವಿಕ ಚಿಂತನೆಗಳನ್ನು ಅತ್ಯಂತ ಸ್ನೇಹಮಯವಾಗಿ ಪರಿಗಣಿಸುತ್ತಿವೆಯೇನೋ ಎಂಬ ಭ್ರಮೆಗಳನ್ನು ಸೃಷ್ಟಿಸುತ್ತಿದೆ. ಇಡೀ ವ್ಯವಸ್ಥೆಯ ಕಾನೂನು, ಸಂವಿಧಾನ, ಆಡಳಿತ ವಲಯಗಳಷ್ಟೇ ಅಲ್ಲದೆ ಜ್ಞಾನವಲಯಗಳೂ ಕೂಡಾ ಮಹಿಳಾ ಪರವಾಗಿ ಸುಧಾರಣೆಗೊಳ್ಳುತ್ತಿವೆ ಎಂಬಂತೆ ತೋರುವ ಸಾಂತ್ವನಗಳು ತಮ್ಮ ಹುಸಿತನವನ್ನು ಮರೆಮಾಚಿ ಕಾಣಿಸಿಕೊಳ್ಳುತ್ತಿವೆ. ಸಮಾನತೆಗಾಗಿ ಇನ್ನು ಚಿಂತನೆಗಳನ್ನು ನಡೆಸಬೇಕಾದ, ಹೋರಾಡಬೇಕಾದ ಕಾರಣಗಳೇ ಇಲ್ಲ ಎಂಬ ಚಿತ್ರಣಗಳನ್ನೂ ಕೊಡಲಾಗುತ್ತಿದೆ. ಈ ಮಧ್ಯೆ ಪ್ರಾಮಾಣಿಕವಾದ ಮತ್ತು ಗಂಭೀರವಾದ ಸ್ತ್ರೀವಾದಿ ಚಿಂತನೆಗಳ ದಿಟ ಸ್ವರೂಪವನ್ನು ಗುರುತಿಸುವುದೇ ಕಷ್ಟಕರ ಎಂಬಂಥ ಪರಿಸ್ಥಿತಿಗಳೂ ಇವೆ. ಈ ಗೊಂದಲಗಳಲ್ಲಿ ರೂಪುಗೊಂಡ ಚಟುವಟಿಕೆಗಳಿಗೆ ಸ್ತ್ರೀವಾದಿ ಚಿಂತನೆಯ ಚಾರಿತ್ರಿಕ ವಿಕಾಸದ ಬಗ್ಗೆ ಯಾವುದೇ ಕಾಳಜಿಯೂ ಇರುವುದಿಲ್ಲ. ಬದಲಿಗೆ, ಬೌದ್ದಿಕ ಚರ್ಚೆಯ ಸೋಗಿನಲ್ಲಿ ತಮಗೆ ತೋಚಿದಂತೆ ವ್ಯಾಖ್ಯಾನ ಮಾಡುವುದಷ್ಟೇ ಗುರಿಯಾಗಿರುತ್ತದೆ. ಇದನ್ನು ಹುಸಿ ಸ್ತ್ರೀವಾದ ಎನ್ನದೆ ಬೇರೇನು ಹೇಳಬಹುದು? ಇನ್ನೊಂದು ಬಗೆಯ ಹುಸಿ ಸ್ತ್ರೀವಾದವೂ ಇದೆ. ದೇಸೀಚಿಂತನೆ ಎಂಬ ಗಂಭೀರವಾದ, ತುಂಬಾ ಉಪಯುಕ್ತವಾದ ಚಿಂತನೆಯನ್ನು ಅಪಬಳಕೆ ಮಾಡುತ್ತಿರುವ ಬುದ್ದಿಜೀವಿಗಳ ಚಟುವಟಿಕೆ ಇಲ್ಲಿದೆ. ಸ್ತ್ರೀವಾದವು ಚಾರಿತ್ರಿಕವಾಗಿ ಪಾಶ್ಚಾತ್ಯ ಮೂಲಗಳಿಂದ ಆಕಾರ ಪಡೆದದ್ದು ಹೌದು. ಸ್ತ್ರೀವಾದಿ ಚಿಂತನೆಯ ವಿಕಾಸದಲ್ಲಿ, ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯ ಕಾರಣದಲ್ಲಿ ಜಗತ್ತಿನ ಎಲ್ಲ ಮಹಿಳೆಯರ ಬದುಕಿನ ಬವಣೆಗಳೂ ಒಂದೇ ಮೂಲದವು ಎಂಬುದನ್ನು ಒಪ್ಪಿದರೂ, ಆ ಬವಣೆಗಳ ಒಳ ವೈವಿಧ್ಯದ ವಿವರಗಳು, ಕಾರಣಗಳು, ಪರಿಹಾರಗಳು ಮುಂತಾದ ಎಲ್ಲ ಸಂಗತಿಗಳೂ ಆಯಾ ಸಮುದಾಯ ಸಂದರ್ಭನಿಷ್ಠದವೇ ಆಗಿರುತ್ತವೆ ಎಂಬುದನ್ನೀಗ ಯಾರೂ ಅಲ್ಲಗಳೆಯುತ್ತಿಲ್ಲ. ಆದರೆ, ಹುಸಿ ಸ್ತ್ರೀವಾದ ಚಿಂತನೆಗಳು ಸಮಸ್ಯೆಯ ಈ ಬಹುಮುಖೀ ಗುಣವನ್ನು ಇನ್ನೊಂದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಾ ಸ್ತ್ರೀವಾದಿ ಚಿಂತನೆಯ ದಿಕ್ಕನ್ನು ತಪ್ಪಿಸುತ್ತಿವೆ. ಅದರಲ್ಲಿ ಮುಖ್ಯವಾದ ಒಂದು ಬಗೆ ಎಂದರೆ, ನಮ್ಮ ಸ್ತ್ರೀವಾದಿ ಚಿಂತನೆಗಳು ಪಾಶ್ಚಾತ್ಯ ಚಿಂತನೆಗಳ ಪ್ರಭಾವದಿಂದ ಸಂಪೂರ್ಣವಾಗಿ ಮುಕ್ತವಾಗಿರಬೇಕು ಎಂಬ ಚಿಂತನೆ. ಔಚಿತ್ಯವರಿತು ನಮ್ಮ ಸಂದರ್ಭಗಳನ್ನು ಇನ್ನಿತರ ಸಂದರ್ಭಗಳೊಂದಿಗೆ ಮುಖಾಮುಖಿಯಾಗಿಸಿ ನಮಗೆ ಅನುಕೂಲಕರವಾಗಿ ಒದಗಿ ಬರುವಂಥದ್ದನ್ನು ಬಳಸಿಕೊಳ್ಳುತ್ತಾ, ನಮ್ಮ ಸಂದರ್ಭ ವಿಶಿಷ್ಟ ಸಂಗತಿಗಳನ್ನು ಕೂಡಿಸಿಕೊಳ್ಳುತ್ತಾ, ನಮ್ಮ ಚಿಂತನೆಗಳು ಭದ್ರ ತಳಹದಿಯನ್ನು ರೂಪಿಸಿಕೊಳ್ಳಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪಾಶ್ಚಾತ್ಯ ಪ್ರಭಾವದಿಂದ ಮುಕ್ತವಾಗುವುದು ಎಂಬುದನ್ನೇ ಮುಖ್ಯವಾಗಿಸಿಕೊಂಡು, ನಮ್ಮ ಸಂದರ್ಭಗಳನ್ನು ಪ್ರತ್ಯೇಕವಾಗಿಟ್ಟು ಅಧ್ಯಯನ ಮಾಡಲು ಹೊರಟಾಗ ಎರಡು ಅಪಾಯಗಳು ಸಾಧ್ಯ. ಪಾಶ್ಚಾತ್ಯದಿಂದ ಪಡೆಯಬೇಕಾದ್ದನ್ನು ನಿರಾಕರಿಸಿದ್ದು ಒಂದು ನಷ್ಟವಾದರೆ, ಆ ನಿರಾಕರಣೆಯ ಸಮರ್ಥನೆಗಾಗಿ ನಮ್ಮ ಎಲ್ಲ ಸಂದರ್ಭಗಳನ್ನೂ ಔಚಿತ್ಯ ಮೀರಿ ವೈಭವೀಕರಿಸುತ್ತಾ, ವಾಸ್ತವವನ್ನು ಗ್ರಹಿಸಲು ಸೋಲುವುದು ಇನ್ನೊಂದು ಅಪಾಯ. ಇಂಥ ಹುಸಿ ದೇಸೀಚಿಂತನೆಗಳೂ ಕೂಡಾ ಸ್ಥಾಪಿತ ಮೌಲ್ಯಗಳನ್ನೇ ದೃqsಕರಿಸುವ ಸಾಧನಗಳಾಗಿ ಬಿಡಬಹುದು.

ಸ್ತ್ರೀವಾದಿ ಚಿಂತನೆಯು ಶುದ್ಧ ಬೌದ್ದಿಕ ಚಟುವಟಿಕೆಯಲ್ಲ; ಅದು ಸಮಾಜದಲ್ಲಿ ಮಹಿಳಾ ಬದುಕನ್ನು ಸುಸಂಗತವಾಗಿಸಲು ನಡೆಸುವ ಒಂದು ರಾಜಕಾರಣದ ಚಟುವಟಿಕೆ. ಈ ಮಾತು ಸ್ತ್ರೀವಾದಿ ಚಿಂತನೆಯ ದಿಟವಾದ ನೆಲೆ. ಈ ನೆಲೆಯನ್ನು ಸ್ಪಷ್ಟಪಡಿಸಿಕೊಳ್ಳುವುದು ನಮ್ಮ ಅಗತ್ಯವಾಗಿದೆ. ಹುಸಿ ಸ್ತ್ರೀವಾದವನ್ನು ಗುರುತಿಸುವುದು ಸಾಧ್ಯವಾಗಬೇಕಾದರೆ, ದಿಟವಾದ ಸ್ತ್ರೀವಾದಿ ಚಿಂತನೆಗಳ ಪ್ರಕ್ರಿಯಾತ್ಮಕ ಹಾದಿಯನ್ನು ಪರಿಚಯ ಮಾಡಿ ಕೊಳ್ಳುವುದು ತುಂಬಾ ಮುಖ್ಯವಾದ ಸಂಗತಿ. ಜಗತ್ತಿನ ಎಲ್ಲೆಡೆಯ ಚಿಂತನೆಗಳನ್ನು ಕ್ರೋqsಕರಿಸಿ ನೋಡುವುದು ಇದರ ಮೊದಲ ಹಂತ. ಈ ಕ್ರೋqsಕರಣ ಹಲವು ಬಗೆಗಳಲ್ಲಿ ನಡೆಯಬಹುದು. ಸ್ತ್ರೀವಾದಿ ಚಿಂತನೆಗಳು ಈ ಪಿತೃಪ್ರಧಾನ ವ್ಯವಸ್ಥೆಯ ಮುಖ್ಯ ರಚನೆಯಾದ ಜ್ಞಾನವಲಯಗಳೊಂದಿಗೆ ಮುಖಾಮುಖಿಯಾಗುತ್ತಲೇ ತಮ್ಮ ತಾತ್ತ್ವಿಕತೆಯನ್ನು ಕಟ್ಟಿಕೊಳ್ಳುತ್ತಾ ಬಂದಿವೆ. ಈ ವಿವಿಧ ಜ್ಞಾನವಲಯಗಳಲ್ಲಿ ಹೆಣ್ಣು ಬದುಕನ್ನು ವ್ಯಾಖ್ಯಾನಿಸಿರುವ ಬಗೆಯನ್ನು ಅಧ್ಯಯನ ಮಾಡುತ್ತಲೇ, ನಮ್ಮ ಅನುಭವಾಧಾರಿತ ವ್ಯಾಖ್ಯಾನವನ್ನು ರೂಪಿಸಿಕೊಳ್ಳಬೇಕಿದೆ. ಮುಂದಿನ ಎಲ್ಲ ಕ್ರಿಯಾತ್ಮಕ ಚಟುವಟಿಕೆಗಳಿಗೂ ನಮ್ಮನ್ನು ಕುರಿತು ನಾವೇ ಕಂಡುಕೊಂಡ ವ್ಯಾಖ್ಯಾನವು ಅಧಾರವಾಗಬೇಕಿದೆ. ಈ ವ್ಯಾಖ್ಯಾನವೂ ಕೂಡಾ ಜಾಗತಿಕ ನೆಲೆಯ ಮಹಿಳಾ ಬದುಕು ಕಾಣಿಸಿಕೊಳ್ಳುವ ಬಹುಮುಖೀ ಮಾದರಿಗಳಲ್ಲೇ ಇರಬಹುದು. ಇಂಥ ಬಹುಮುಖೀ ಮಾದರಿಗಳ ಅಧ್ಯಯನವು ನಮ್ಮನ್ನು ನಾವು ಅಧ್ಯಯನ ಮಾಡಿಕೊಳ್ಳುವಲ್ಲಿ ನೆರವನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಚಿಂತನೆಗಳ ಮಾದರಿಗಳನ್ನು ಅನುವಾದಿಸುವುದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಅನುವಾದ ಸಮುಚ್ಚಯದಲ್ಲಿ ಭಾಷಾಶಾಸ್ತ್ರ ಎಂಬ ಜ್ಞಾನವಲಯದಲ್ಲಿ ಕೆಲಸ ಮಾಡುತ್ತಿರುವ ಹಲವು ಸ್ತ್ರೀವಾದಿ ಚಿಂತಕರು, ಸ್ತ್ರೀವಾದಿ ಚಿಂತನೆಗಳ ನೆಲೆಯಿಂದ ಭಾಷಾಶಾಸ್ತ್ರವನ್ನು ಮುಖಾಮುಖಿಯಾಗಿರುವ ಮಾದರಿಗಳು ಸೇರ್ಪಡೆಗೊಂಡಿವೆ.

ಭಾಷೆಯಲ್ಲಿ ಹೆಂಗಸನ್ನು ಪ್ರತಿನಿಧೀಕರಿಸುತ್ತಿರುವ ರೀತಿಯನ್ನು ಗಮನಿಸಿದರೆ, ಆಯಾ ಭಾಷಿಕ ಸಮುದಾಯವು ಹೆಣ್ಣಿನ ಬಗ್ಗೆ ಹೊಂದಿರುವ ನಂಬಿಕೆಗಳು, ತೀರ್ಮಾನಗಳು, ದೃಷ್ಟಿಕೋನಗಳು ತಿಳಿದುಬರುತ್ತವೆ. ಈ ಪ್ರತಿನಿಧೀಕರಣಗಳಿಗೆ ಯಾರು ಕಾರಣರು ಎಂಬ ಪ್ರಶ್ನೆ ಅಷ್ಟು ಮುಖ್ಯವಲ್ಲ. ಆದರೆ, ಅವುಗಳನ್ನು ಬಳಸುವ ಭಾಷಾಸಮುದಾಯವು ಆ ಪ್ರತಿನಿಧೀಕರಣಗಳ ಹಿಂದೆ ಇರುವ ನೆಲೆಗಳಿಗೆ ತನ್ನ ಸಮ್ಮತಿಯನ್ನು ನೀಡುತ್ತಿರುತ್ತದೆ ಎಂಬುದು ಮುಖ್ಯ. ಹೀಗೆ, ಬಳಕೆಯಲ್ಲಿ ಭಾಗೀದಾರರಾಗಿರುವವರಲ್ಲಿ ಹೆಂಗಸರೂ ಸೇರಿರುತ್ತಾರೆ. ತಮಗೇ ಅರಿವಿಲ್ಲದಂತೆ ತಮ್ಮ ವಿರುದ್ಧವೇ ಇರುವ ಭಾಷಿಕ ನೆಲೆಗಳನ್ನು ಭದ್ರಗೊಳಿಸುವಲ್ಲಿ ತಾವೂ ಪಾಲುದಾರರಾಗಿ ಬಿಡುತ್ತಾರೆ. ಭಾಷೆಯಲ್ಲಿ ಇರುವ ಇಂಥ ಸ್ಥಿರೀಕೃತ ಮಾದರಿಗಳನ್ನು ಹಲವು ಸ್ತರಗಳಲ್ಲಿ ನೋಡಬಹುದು. ಒಂದು, ಭಾಷೆಯ ಆಶಯದ ಸ್ತರ. ಎರಡು, ರೂಪದ ಸ್ತರ, ಮೂರು, ಬಳಕೆಯ ಸ್ತರ.

ಆಶಯದ ಸ್ತರದಲ್ಲಿ ಗಾದೆಗಳು, ನುಡಿಗಟ್ಟುಗಳು, ನಗೆಹನಿಗಳು ಸೇರುತ್ತವೆ. ಇವೆಲ್ಲವೂ ಭಾಷಿಕರಿಗೆ ದತ್ತವಾಗಿ ಬಂದಿರುವಂಥವು. ಅಂದರೆ, ಆ ಭಾಷಿಕ ರಚನೆಗಳಿಗೆ ಅವರು ನೇರವಾಗಿ ಕಾರಣರಲ್ಲ. ಹಾಗಾಗಿ, ಆ ರಚನೆಯ ಹಿಂದಿರುವ ಆಶಯವು ಸಮುದಾಯದ ಆಶಯವಾಗಿದ್ದು ಭಾಷಿಕರ ಮೂಲಕ ಆಚರಣೆಗೆ ಬರುತ್ತದೆ. ಈ ಆಶಯಗಳು ಸಮುದಾಯದ ಅಪೇಕ್ಷೆಗಳಾಗಿರಬಹುದೇ ಹೊರತು ಸಾಮಾಜಿಕ ವಾಸ್ತವಗಳನ್ನು ಬಿಂಬಿಸುತ್ತಿರುವುದಿಲ್ಲ ಎನ್ನುವುದೇ ಸ್ತ್ರೀವಾದದ ಮುಖ್ಯ ತಕರಾರು. ಉದಾಹರಣೆಗೆ, ‘ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬ ಹೇಳಿಕೆ ರೂಪದ ಮಾತನ್ನು ನೋಡೋಣ. ಈ ಮಾತನ್ನು ಕನ್ನಡ ಭಾಷಿಕರು ಕೆಲವು ನಿರ್ದಿಷ್ಟ ಪ್ರಸಂಗಗಳನ್ನು ವ್ಯಾಖ್ಯಾನಿಸುವಾಗ ಬಳಸುತ್ತಾರೆ. ಅಂತಹ ನಿರ್ದಿಷ್ಟ ಸಂದರ್ಭಗಳು ಅತ್ತೆ-ಸೊಸೆಯರನ್ನು ಒಳಗೊಂಡಿರಬಹುದು. ಅಕ್ಕತಂಗಿಯರನ್ನು ಒಳಗೊಂಡಿರ ಬಹುದು. ಇಲ್ಲವೇ ಮನೆಯೊಡತಿ ಕೆಲಸದಾಕೆಯನ್ನೂ ಗಮನಿಸುತ್ತಿರಬಹುದು. ಈ ಎಲ್ಲ ಸಂದರ್ಭಗಳಲ್ಲೂ ಅಸಮಾನತೆಯ ಕರ್ತೃಗಳು ಹೆಂಗಸರೇ ಎಂಬ ವ್ಯಾಖ್ಯೆಯನ್ನು ಮೇಲಿನ ಹೇಳಿಕೆಯ ಮೂಲಕ ಮಂಡಿಸುವು ದುಂಟು. ಆದರೆ, ಇದು ಸಾಮಾಜಿಕ ವಾಸ್ತವದ ತಿರುಚು ವ್ಯಾಖ್ಯೆ. ಹೆಂಗಸರನ್ನು ಒಳಗೊಂಡ ಇಂಥ ಸಂದರ್ಭಗಳನ್ನು ನೋಡಲು, ವ್ಯಾಖ್ಯಾನಿಸಲು ಬೇರೆಯೇ ಪರಿಕರಗಳು ಬೇಕಾಗುತ್ತವೆ. ಆದರೆ, ಅಂಥ ಪರಿಕರಗಳ ಗೊಡವೆ ಇಲ್ಲದೆ, ಎಲ್ಲ ಕಾಲಕ್ಕೂ ‘ಸತ್ಯ’ವೆನಿಸುವಂತೆ ತೋರುವ ಹೇಳಿಕೆಗಳನ್ನು ಭಾಷೆಯಲ್ಲಿ ರೂಪಿಸಲಾಗಿರುತ್ತದೆ. ಇಂಥ ಆಶಯಗಳನ್ನುಳ್ಳ ರಚನೆಗಳು ಹೆಂಗಸನ್ನು ಹಲವು ನಕಾರಾತ್ಮಕ ಚಹರೆಗಳಲ್ಲಿ ಇರಿಸುತ್ತವೆ. ಆಕೆ ಅಗತ್ಯಕ್ಕಿಂತ ಹೆಚ್ಚು ಮಾತನಾಡುವವಳು. ಆಸೆ ಬುರುಕಿ, ಜಿಪುಣಿ, ಹಟಮಾರಿ, ತರ್ಕ ವಿಹೀನೆ, ದಡ್ಡಿ, ವಿತಂಡಾವಾದಿ ಮುಂತಾದ ಗುಣಗಳನ್ನು ಆರೋಪಿಸಿ ಚಿತ್ರಿಸಲಾಗುತ್ತದೆ. ಹಾಗೆ ನೋಡಿದರೆ, ಹೆಂಗಸಿನ ‘ಸದ್ಗುಣ’ಗಳನ್ನು ಹೇಳುವ ಭಾಷಿಕ ರಚನೆಗಳಿಗೂ ಇದೇ ವಿವರಣೆ ಅನ್ವಯಿಸುತ್ತದೆ. ಉದಾಹರಣೆಗೆ, ‘ತಾಯಿಕರುಳು’ ಎಂಬ ರಚನೆಯನ್ನೇ ನೋಡೋಣ. ಈ ರಚನೆಯನ್ನು ಹೆಣ್ಣಿನ ಸಕಾರಾತ್ಮಕ ನೆಲೆಯೊಂದನ್ನು ಪ್ರತಿನಿಧಿಸಲು ಬಳಸಲಾಗುತ್ತದೆ; ಅಥವಾ ಹಾಗೆಂದು ಆ ಸಮುದಾಯ ನಂಬಿರುತ್ತದೆ. ಹೆಂಗಸಿನ ಸ್ವಭಾವದಲ್ಲೇ ತನ್ನ ಮಕ್ಕಳಿಗಾಗಿ ಕರಗುವ ಗುಣವಿದೆ ಎನ್ನುವುದು ಈ ಸ್ಥಿರೀಕೃತ ಆಶಯದ ಉದ್ದೇಶ. ಆದರೆ, ಇದು ಜೈವಿಕ, ಭಾವುಕ ಮತ್ತು ಸಾಮಾಜಿಕ ನೆಲೆಗಳಲ್ಲಿ  ಬೇರೆ ಬೇರೆ ಅರ್ಥಪರಂಪರೆಗಳನ್ನು ಸೃಷ್ಟಿಸುತ್ತದೆ. ಅಂದರೆ, ಹೆಂಗಸು ಬದುಕುತ್ತಿರುವ ವಾಸ್ತವಕ್ಕೂ, ಈ ತಾಯಿಕರುಳು ಎಂಬ ರಚನೆಯ ಆಶಯಕ್ಕೂ ನೇರ ಸಂಬಂಧ ಇರುವುದಿಲ್ಲ. ಹೆಂಗಸಿನ ವ್ಯಾಖ್ಯೆ ಈ ಭಾಷಿಕಾಂಶಗಳಲ್ಲಿ ವ್ಯಕ್ತವಾಗುವುದಕ್ಕೂ, ಆಕೆಯ ವಾಸ್ತವಕ್ಕೂ ಕಂದರವಿರುತ್ತದೆ. ಈ ಕಂದರವನ್ನು ಸ್ತ್ರೀವಾದವು ತೆರೆದು ತೋರಿಸುತ್ತದೆ.

ಇನ್ನೊಂದು ಹೇಳಿಕೆ ಕನ್ನಡ ಮಾತಾಡುವ ಜನರಲ್ಲಿ ಬಳಕೆಯಲ್ಲಿದೆ. ‘‘ಏನಾದರೇನು? ಮಡಕೆಯ ತಳ ಕೆರೆಯುವುದು ಹೆಂಗಸಿಗೆ ತಪ್ಪಿದ್ದಲ್ಲ’’. ಈ ಹೇಳಿಕೆ, ಹೆಂಗಸಿನ ಬದುಕಿನಲ್ಲಿ ನೆಗೆತಗಳನ್ನು ಸಾಧ್ಯ ಮಾಡುವ ಯೋಜನೆಗಳು ಇರುವುದಿಲ್ಲ, ಅಷ್ಟೇಕೆ, ಇರಬಾರದು ಎಂಬ ಸ್ಥಿರೀಕೃತ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಸಾಮಾನ್ಯವಾಗಿ, ತಮಗೆ ದತ್ತವಾದ ಮಿತಿಗಳನ್ನು ಮೀರಲು ಹದಿವಯಸ್ಸಿನ ಹೆಣ್ಣುಮಕ್ಕಳು ಇಚ್ಛಿಸಿದಾಗ, ಹಿರಿಯರು ಅವರ ಜೀವನದ ಗುರಿಯೇ ಕುಟುಂಬದ ಮಾಡು, ತೊಳಿ, ಬಳಿ ಎಂಬುದಕ್ಕೆ ಸೀಮಿತ ಎಂಬ ಸೂಚನೆಯನ್ನು ಮೇಲಿನ ಹೇಳಿಕೆಯ ಮೂಲಕ ನೀಡುತ್ತಾರೆ. ಹೀಗೆ ಹೇಳುವವರು ತಮ್ಮ ಮಾತು ಆ ಹುಡುಗಿಯ ಹಿತ ಕಾಯುವಂತೆ ಇದೆಯೆಂದೇ ಭಾವಿಸುವುದುಂಟು. ವ್ಯರ್ಥ ಪ್ರಯತ್ನದಿಂದ ಆಗುವ ಹತಾಶೆಯಿಂದ ಆಕೆಯನ್ನು ರಕ್ಷಿಸಲು ಈಗಲೇ ಬುದ್ದಿವಾದ ಹೇಳುತ್ತಿದ್ದೇವೆಂದು ಅವರು ಭಾವಿಸುತ್ತಾರೆ. ಅದು ಹುಡುಗಿಯನ್ನು ನಕಾರಾತ್ಮಕವಾಗಿ ನೋಡುತ್ತಿರುವ ಬಗೆ ಎಂಬುದು ಅವರ ಅರಿವಿಗೇನೂ ಬಂದಿರುವುದಿಲ್ಲ. ಇದರರ್ಥ, ಇಂಥ ಭಾಷಿಕ ಹೇಳಿಕೆಗಳು, ಹೆಂಗಸಿನ ಸಾಧ್ಯತೆಗಳನ್ನು ಮೊಟಕುಗೊಳಿಸುತ್ತವೆ ಎಂದಲ್ಲ. ಈಗಾಗಲೇ ಹೇಳಿದಂತೆ, ಸಾಮಾಜಿಕ ವಾಸ್ತವದಲ್ಲಿ ಹೆಂಗಸು ಇಂಥ ಮಿತಿಗಳನ್ನು ತನ್ನ ಮೇಲೆ ಹೇರಿಕೊಳ್ಳದೆಯೂ ಇರಬಹುದು. ಆದರೆ, ಭಾಷಿಕರಚನೆಗಳು ಇಲ್ಲಿ ವಾಸ್ತವವನ್ನು ಬಿಂಬಿಸದೆ ಹುಸಿ ಹೋಗುತ್ತಿರುತ್ತವೆ.

ರೂಪ ಮತ್ತು ಬಳಕೆಯ ಸ್ಥರಗಳು ಸ್ವಲ್ಪ ಮಟ್ಟಿಗೆ ಒಂದರೊಡನೊಂದು ಬೆರೆತುಕೊಳ್ಳುತ್ತವೆ. ಅಂಥ ಕೆಲವು ಸಂದರ್ಭಗಳನ್ನು ಗಮನಿಸೋಣ. ಹೆಂಗಸು ಹೇಗೆ ಮಾತಾಡಬೇಕು ಎಂಬ ಬಗ್ಗೆ ಪ್ರತಿಯೊಂದು ಭಾಷಿಕ ಸಮುದಾಯವೂ ಅದರದ್ದೇ ಆದ ನಂಬಿಕೆಯನ್ನು ಹೊಂದಿದೆ. ದನಿಯನ್ನು ಎತ್ತರಿಸಿ ಮಾತಾಡಬಾರದು. ಮಾತಾಡುವಾಗ ನಡುವೆ ತನ್ನ ಮಾತನ್ನು ಸೇರಿಸಬಾರದು, ಉಚ್ಚಾರಣೆಯಲ್ಲಿ ಹೆಂಗಸಿಗೆ ವಿಶಿಷ್ಟವೆಂದು ತಿಳಿಯಲಾದ ಕಾಕನ್ನು ಕಾಯ್ದುಕೊಳ್ಳಬೇಕು, ಕೆಲವು ಪದಗಳು ಹಾಗೂ ಪದರಚನೆಗಳನ್ನು ಬೇರೆಯವರ, ಅದರಲ್ಲೂ ಗಂಡಸರ ಎದುರು, ಹೇಳಬಾರದು-ಮುಂತಾದ ಬಳಕೆಯ ನಿಯಮಗಳು ಅಲಿಖಿತವಾಗಿ ಜಾರಿಯಲ್ಲಿವೆ. ನಿಷೇಧಗಳ ರೂಪದಲ್ಲಿರುವ ಈ ನಿಯಮಗಳು ವಾಸ್ತವವಾಗಿ ಹೆಂಗಸಿನ ಮಾತಿನ ರೀತಿಯ ಬಗ್ಗೆ ಆ ಭಾಷಿಕ ಸಮುದಾಯವು ಹೊಂದಿರುವ ಸ್ಥಿರಮಾದರಿಗಳನ್ನು ಸೂಚಿಸುತ್ತವೆ. ಉದಾಹರಣೆಗೆ, ಯಾರಾದರೂ ಗಂಡಸರು ತಮ್ಮ ಮಾತಿನ ನಡುವೆ ಹೆಂಗಸರ ಮಾತಿನ ಅನುಕರಣೆ ಮಾಡಲು ಹೊರಟರೆ, ಮೇಲೆ ಹೇಳಿದ ಲಕ್ಷಣಗಳನ್ನು ತಮ್ಮ ಮಾತಿನಲ್ಲಿ ಆಹ್ವಾನಿಸಿಕೊಳ್ಳುತ್ತಾರೆ. ರಂಗನಟರು ಗಂಡಸರಾಗಿದ್ದರೂ ಹೆಣ್ಣುವೇಷ ಧರಿಸಿ ಮಾತಾಡುವಾಗ, ಆ ಭಾಷಿಕ ಸಮುದಾಯದಲ್ಲಿ ಹೆಂಗಸರ ಭಾಷಾಬಳಕೆಯ ಬಗೆಗೆ ನೆಲೆಗೊಂಡ ನಂಬಿಕೆಗಳು ಕಾಣಿಸಿಕೊಳ್ಳುತ್ತವೆ. ಈ ಸಿದ್ಧಮಾದರಿಯನ್ನು ಮೀರಿದರೆ, ಹೆಂಗಸಿಗೆ ಗಂಡುಬೀರಿ ಎಂಬ ಹಣೆಪಟ್ಟಿ ಸಲ್ಲುತ್ತದೆ. ಗಂಡುಬೀರಿ ಎಂಬ ಪದರಚನೆಗೆ ಹಲವು ಅರ್ಥಗಳಿದ್ದರೂ, ಮಾತಿನ ಬಳಕೆಯ ಒಪ್ಪಿತ ನಿಯಮಗಳನ್ನು ಮೀರಿದವಳು ಎಂಬ ಅರ್ಥವೂ ಸೇರಿಕೊಳ್ಳುತ್ತದೆ.

ಹೆಂಗಸಿನ ಧ್ವನ್ಯಂಗಗಳ ರಚನೆಗೂ ಆಕೆ ಮಾತಾಡುವ ಬಗೆಗೂ ಸಂಬಂಧವಿದೆ ಎಂಬುದನ್ನು ಒಪ್ಪಿಕೊಳ್ಳೋಣ. ಇದು ಮುಖ್ಯವಾಗಿ, ದನಿಯ ಶ್ರುತಿಗೆ ಸಂಬಂಧಿಸಿದ ಸಂಗತಿ. ಇದನ್ನು ಭಾಷಿಕವಿಶಿಷ್ಟ ಅಂಶವೆಂದು ಪರಿಗಣಿಸಲು ಬರುವುದಿಲ್ಲ. ಆದರೆ, ಶ್ರುತಿಯನ್ನು ಹೊರತುಪಡಿಸಿ ಉಳಿದ ಭಾಷಿಕ ಅಂಶಗಳನ್ನು ಬಳಸುವಲ್ಲಿ, ದೈಹಿಕ ನೆಲೆಯಲ್ಲಿ ಗಂಡು ಹೆಣ್ಣುಗಳನ್ನು ಬೇರೆಯಾಗಿಡುವ ಅಂಶಗಳು ಯಾವುವೂ ಇಲ್ಲ. ಅಂದರೆ, ಈ ವ್ಯತ್ಯಾಸಗಳನ್ನು ಒಂದು ಭಾಷಿಕ ಸಮುದಾಯ ತಾನೇ ಸೃಷ್ಟಿಸಿ ಹೆಂಗಸಿನ ಮೇಲೆ ಆರೋಪಿಸುತ್ತದೆ ಎಂದಾಯ್ತು.

ಸ್ತ್ರೀವಾದಿಗಳು ಮೇಲಿನ ವಿವರಣೆಗಳನ್ನು ಮಂಡಿಸುವಾಗ ಭಾಷೆಯು ಹೆಂಗಸಿಗೆ ವಿಧಿಸುವ ಚೌಕಟ್ಟುಗಳನ್ನು ತೆರೆದು ತೋರಿಸುತ್ತಿರುತ್ತಾರೆ. ಆದರೆ, ಈ ಅಂಶವನ್ನು ಬೇರೊಂದು ರೀತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯವಿದೆ. ಭಾಷಿಕ ಸಮುದಾಯ ಬಾಷೆಯ ಬಳಕೆಗೆ ಕೆಲವು ಭಿನ್ನ ನೆಲೆಗಳನ್ನು ಹೆಂಗಸಿಗೆ ರಚಿಸಿ ಕೊಡುವುದಾದರೆ, ಹೆಂಗಸರೂ ಕೂಡಾ ತಾವೇ ರಚಿಸಿಕೊಂಡ ಭಿನ್ನ ನೆಲೆಗಳ ಮೂಲಕ ಪ್ರತಿರೋಧವನ್ನು ತೋರಿಸುವುದು ಸಾಧ್ಯ.

ಸಾಮಾಜಿಕ ವಾಸ್ತವದ ನೆಲೆಗಳಲ್ಲಿ ಹೆಂಗಸಿಗೆ ತನ್ನ ಪ್ರತಿರೋಧವನ್ನು, ಅದರಲ್ಲೂ ಗಂಡಸಿನ ಎದುರು, ನೇರವಾಗಿ ವ್ಯಕ್ತಪಡಿಸಲು ಅವಕಾಶಗಳು ಕಲ್ಪಿತವಾಗಿರುವುದೇ ಇಲ್ಲ. ಅಂಥ ಪ್ರತಿರೋಧಗಳು ಹಲವೊಮ್ಮೆ ಒಳಗೇ ಸಂಚಿತಗೊಳ್ಳುತ್ತಾ ಸ್ಫೋಟಗೊಳ್ಳುವ ಸಂದರ್ಭಗಳು ಉಂಟಾಗಬಹುದು. ಇಂತಹ ಸಂದರ್ಭಗಳಲ್ಲಿ ಈ ಮಹಿಳೆಯರಲ್ಲಿ ವರ್ತನಾಸಮಸ್ಯೆಗಳಿಂದ ಮೊದಲುಗೊಂಡು ಹಲವು ಬಗೆಯ ಮನೋವೈಕಲ್ಯಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಮಹಿಳೆಯರು ಅಭಿವ್ಯಕ್ತಿಗೊಳಿಸಲಾಗದ ಪ್ರತಿರೋಧ ಗಳನ್ನು ತಮಗೇ ಅರಿವಿಲ್ಲದೆ ಸಂಬಂಧವಿಲ್ಲದವರ ಮೇಲೆ, ಸದ್ಯದಲ್ಲಿ ತನಗಿಂತ ದುರ್ಬಲರಾದವರ ಮೇಲೆ ದಾಳಿ ನಡೆಸಿ ಹೊರಹಾಕಬಹುದು. ತಾಯಂದಿರು ಮಕ್ಕಳನ್ನು ವಿನಾಕಾರಣ ಹೊಡೆದು ಬೈದು ಮಾಡುವಲ್ಲಿ, ಗೃಹಿಣಿಯರು ಮನೆಯ ಕೆಲಸದ ಮೇಲೆ ಹಾಗೂ ಕೆಲಸದಾಕೆಯ ಮೇಲೆ ತೋರುವ ಸಿಟ್ಟಿನಲ್ಲಿ, ಅಕ್ಕಪಕ್ಕದವರೊಂದಿಗೆ ದುರ್ದಾನ ತೆಗೆದುಕೊಂಡವರಂತೆ ನಡೆದುಕೊಳ್ಳುವ ಮಹಿಳೆಯರ ಮಾತು ವರ್ತನೆಗಳಲ್ಲಿ ಈ ಸ್ವರೂಪವನ್ನು ನೋಡಬಹುದು. ಇವೆರಡು ಬಗೆಗಳಲ್ಲದೆ, ಅವರ ಸಂಚಿತ ಪ್ರತಿರೋಧಗಳು ಭಾಷಿಕ ನೆಲೆಗಳ ಮೂಲಕವೂ ಹೊರದಾರಿಗಳನ್ನು ಕಂಡುಕೊಳ್ಳಬಹುದು. ಕ್ರಿಯಾತ್ಮಕವಾಗಿ ಅಭಿವ್ಯಕ್ತಿಗೊಳ್ಳಬೇಕಾದ ಸಂಗತಿಗಳು, ಅಂಥ ಅವಕಾಶಗಳು ಅಲಭ್ಯವಾದ ಸಂದರ್ಭದಲ್ಲಿ ಭಾಷೆಯ ನೆಲೆಗಳ ಮೂಲಕ ಅಭಿವ್ಯಕ್ತಗೊಳ್ಳುವುದನ್ನು ಭಾಷಾಶಾಸ್ತ್ರದ ಪರಿಭಾಷೆಯಲ್ಲಿ Speech act, ಅಂದರೆ ಭಾಷಿಕಕ್ರಿಯೆ ಎನ್ನಲಾಗುತ್ತದೆ. ಭಾಷಿಕಕ್ರಿಯೆಗಳಲ್ಲಿ ಎರಡು ಬಗೆಗಳು ಸಾಧ್ಯ. ಒಂದು, ಸಮುದಾಯದ ನೆಲೆಯಲ್ಲಿ ಈಗಾಗಲೇ ಸ್ಥಾಪಿತಗೊಂಡಿರುವ ಗಾದೆಗಳು, ಒಡಪುಗಳು, ನುಡಿಗಟ್ಟುಗಳು, ಬೈಗುಳಗಳು ಇಂಥವನ್ನು ವ್ಯಕ್ತಿಗಳು ಬಳಸು ತ್ತಿರಬಹುದು. ಇಲ್ಲಿ ವ್ಯಕ್ತಿಗಳು ಈಗಾಗಲೇ ಸಿದ್ಧಗೊಂಡಿರುವ ರೂಪಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಪರಿಕರಗಳನ್ನಾಗಿಸಿಕೊಳ್ಳುತ್ತಾರೆ. ಇದು ವ್ಯಕ್ತಿಯ ನಿರೂಪಣೆಯೇ ಆಗಿದ್ದರೂ, ಪ್ರಧಾನವಾಗಿ ಅದು ಸಮುದಾಯದ ನಿರೂಪಣೆಯೇ ಆಗಿರುತ್ತದೆ. ಎಷ್ಟೋ ವೇಳೆ ಸಮುದಾಯದ ಸಮಗುಂಪುಗಳು ರೂಪಿಸಿಕೊಳ್ಳುವ ಭಾಷಿಕ ಆಟಗಳು ಕೂಡಾ ಪ್ರತಿರೋಧಗಳ ಅಭಿವ್ಯಕ್ತಿಗೆ ಅವಕಾಶಗಳಾಗಿರಬಹುದು. ಉದಾಹರಣೆಗೆ ಇಂಥ ಗುಂಪು ಗಳು ರೂಪಿಸಿಕೊಳ್ಳುವ ರಹಸ್ಯ ಭಾಷೆಗಳು.  ಪದಗಳ ಮಧ್ಯದಲ್ಲಿ ಕ,ಟ ಮುಂತಾದ ಅಕ್ಷರಗಳನ್ನು ಬಳಸಿ ರೂಪಿಸಿಕೊಳ್ಳುವ ರಹಸ್ಯ ಭಾಷೆಯಂಥವು. ಇವನ್ನೆಲ್ಲ ವ್ಯಕ್ತಿಗಳ ಪ್ರಜ್ಞಾಪೂರ್ವಕ ಆಯ್ಕೆ ಎಂದು ಹೇಳಲಾಗದಿದ್ದರೂ ಸಮುದಾಯದಲ್ಲಿ ಹರಡಿದಂತೆ ಕಾಣುವ ಭಾಷಿಕ ಪ್ರತಿರೋಧಗಳ ಕುರುಹುಗಳೆಂದು ಗುರುತಿಸಲು ಸಾಧ್ಯವಿದೆ.