ಭಾಗೀದಾರರಾಗಿರುವ ವ್ಯಕ್ತಿಗಳು ಬಯಸಲಿ, ಬಯಸದಿರಲಿ; ಅಲ್ಲೆಲ್ಲ ಗಂಡಸಿನ ಯಜಮಾನಿಕೆ ಇದ್ದೇ ಇರುವುದೆಂಬ ಅಂಶವನ್ನು ಭಿನ್ನಸಂಸ್ಕೃತಿ ಮಾದರಿಯು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದೇ ಸಮಸ್ಯೆ ಎಂದು ನನಗೆ ತೋರುತ್ತದೆ. ಈ ಮಾದರಿಯ ಪ್ರಕಾರ ಯಜಮಾನಿಕೆ ಎಂಬುದು ವ್ಯಕ್ತಿಗಳ ನಡುವೆ ಕ್ರಿಯಾಶೀಲವಾಗಿರದಿದ್ದರೂ ಅದು ಇದೆ ಎಂದು ತಪ್ಪಾಗಿ ವ್ಯಾಖ್ಯಾನಿಸಬಹುದಾಗಿದೆ. ಈ ಭಿನ್ನಸಂಸ್ಕೃತಿ ಮಾದರಿಯನ್ನು ಸಮರ್ಥಿಸುವವರು, ಗಂಡು ಹೆಣ್ಣುಗಳ ಸಂವಾದದಲ್ಲಿ ಯಾವ ವರ್ತನೆ ಗಂಡಸಿನ ಯಜಮಾನಿಕೆಯೆಂದು ಪರಿಗಣಿತವಾಗುತ್ತದೋ ಅದೇ ವರ್ತನೆ ಆತ ತನ್ನ ಗಂಡು ಗೆಳೆಯರೊಡನೆ ಸಂವಾದಿಸುವಾಗ ಸ್ನೇಹಪರತೆಯಾಗಿ ತೋರುತ್ತದೆ ಎನ್ನುತ್ತಾರೆ. ಹಾಗಾಗಿ ಇವರ ಪ್ರಕಾರ ಗಂಡು ಯಜಮಾನಿಕೆ ಎಂಬುದು ನಿಜವಾಗಿಯೂ ‘ಇರುವುದಿಲ್ಲ’. ಅದು ಸಾಂಸ್ಕೃತಿಕ ವ್ಯತ್ಯಾಸ ಮತ್ತು ಅಪವ್ಯಾಖ್ಯಾನದ ಪರಿಣಾಮ.

ಯಜಮಾನಿಕೆಯ ಉದ್ದೇಶ ಇರಲಿಲ್ಲ ಎಂದ ಮಾತ್ರಕ್ಕೆ ಅಲ್ಲಿ ಯಜಮಾನಿಕೆಯೇ ಇಲ್ಲವೆಂದು ಈ ಮಾದರಿ ನಂಬುತ್ತದೆ. ಯಜಮಾನಿಕೆ ಎಂಬುದು ಕೇವಲ ಒಂದು ವ್ಯಾಖ್ಯಾನವೆಂದೂ, ದುರ್ಬಲತೆ, ನಿಷ್ಕ್ರಿಯತೆ, ಕೊರತೆ – ಮುಂತಾದ ಗುಣಗಳು ಹೇಗೆ ಮೌಲ್ಯ ನಿರ್ಧಾರಕ ಮಾತುಗಳೋ ಹಾಗೆಯೇ ಯಜಮಾನಿಕೆ ಎಂಬುದೂ ಹೊರಗಿನವರು ನೀಡುವ ತೀರ್ಮಾನ ಎನ್ನುತ್ತಾರೆ. ಹೆಂಗಸರಲ್ಲಿ ದುರ್ಬಲತೆ, ನಿಷ್ಕ್ರಿಯತೆ ಮತ್ತು ಕೊರತೆಗಳಿವೆಯೆಂದು ಹೊರಗಿನವರು ಹೇಳುವಂತೆ, ಗಂಡಸರ ವರ್ತನೆಯಲ್ಲೂ ಹೀಗೆಯೇ ಯಜಮಾನಿಕೆಯನ್ನು ಕಾಣಲಾಗುತ್ತದೆ. ಈ ಮಾತನ್ನು ಗಮನಿಸಿದರೆ, ಯಜಮಾನಿಕೆಯನ್ನು ತೋರುವುದನ್ನೇ ಯಜಮಾನಿಕೆಯ ಗುಣ ಆರೋಪಿತವಾಗುವುದು ಎಂದು ಹೇಳುತ್ತಿದ್ದಾರೋ, ಅಥವಾ ಅವೆರಡೂ ಒಂದೇ ಎಂದು ಹೇಳುತ್ತಿದ್ದಾರೋ ತಿಳಿಯುತ್ತಿಲ್ಲ. ನಿಜ.  ಗಂಡಸೊಬ್ಬರು ಮಾಡುವ ಟಿಪ್ಪಣಿಯನ್ನು ವ್ಯಾಖ್ಯಾನಿಸುವವರು ಅದು ಯಜಮಾನಿಕೆಯ ನೆಲೆಯಿಂದ ಹುಟ್ಟಿದ್ದೆಂದು ಹೇಳಿದರೂ, ಆ ಮಾತಾಡಿದ ಗಂಡಸಿಗೆ ಅಂಥ ಉದ್ದೇಶ ಇಲ್ಲದಿರಬಹುದು. ಆದರೆ, ಉದ್ದೇಶವಿದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಯಜಮಾನಿಕೆ ಎಂಬುದು ಇರುತ್ತದೋ ಇಲ್ಲವೋ ಎನ್ನುವುದೇ ನಮಗೆ ಮುಖ್ಯ. ಭಿನ್ನ ಸಂಸ್ಕೃತಿ ಮಾದರಿಯ ಬೆಂಬಲಿಗರು ಗಂಡು ಹೆಣ್ಣಿನ ಮಾತುಕತೆಯಲ್ಲಿ ಅಪಾರ್ಥ ಉಂಟಾಗುವುದನ್ನು ವಿವರಿಸುವಾಗ, ಹೆಂಗಸರು ಗಂಡಸರ ವರ್ತನೆಗಳನ್ನು ಹೇಗೆ ಮತ್ತು ಏಕೆ ಯಜಮಾನಿಕೆ ಎಂದು ತಪ್ಪಾಗಿ ತಿಳಿಯುತ್ತಾರೆ ಎನ್ನುವುದನ್ನು ವಿವರಿಸಿಯಾರು. ಅಲ್ಲದೆ, ಯಜಮಾನಿಕೆ ನಡೆಸುವ ಉದ್ದೇಶ ಗಂಡಸರಿಗೆ ಇರುವುದಿಲ್ಲವೆಂದೂ ವಾದಿಸಿಯಾರು. ಜೊತೆಗೆ ಗಂಡಸರ ಯಜಮಾನಿಕೆ ಎನ್ನುವುದೇ ಅಪಕಲ್ಪನೆ ಅದು ನಿಜವಲ್ಲ ಎಂದೂ ಹೇಳಬಹುದು. ಇಷ್ಟೆಲ್ಲ ಹೇಳಿ ಯಜಮಾನಿಕೆಯ ಮಾದರಿಯನ್ನು ಒಪ್ಪುವವರು ಈ ಮೇಲಿನ ಅಂಶಗಳನ್ನು ಸರಿಯಾಗಿ ಗಮನಿಸಿಲ್ಲ ಎಂದು ಶರಾ ಬರೆಯುತ್ತಾರೆ. ಆದರೆ, ಸಂವಾದಗಳಲ್ಲಿ ಗಂಡಸರ ಯಜಮಾನಿಕೆ ಇರುವುದೇ ಇಲ್ಲವೆಂದು ಹೇಳುವುದು ಭಿನ್ನಸಂಸ್ಕೃತಿ ಮಾದರಿಯವರಿಗೆ ಸಾಧ್ಯವಿಲ್ಲ.

ಯಜಮಾನಿಕೆಯನ್ನು ಒಂದು ಸಾಮಾಜಿಕ ಸ್ಥಿತಿ ಎಂದು ತಿಳಿಯಬೇಕು. ಆದರೆ, ಯಜಮಾನಿಕೆಯನ್ನು ಹೊರಗಿನವರು ಮಾಡುವ ವ್ಯಾಖ್ಯಾನ ಮಾತ್ರ ಎಂದು ಗೊಂದಲ ಉಂಟು ಮಾಡಿರುವುದಕ್ಕೆ ಕಾರಣಗಳಿವೆ. (೧) ಮಾಲ್ಟ್‌ಜ್ ಮತ್ತು ಬೋರ್ಕರ್ ಅವರು ಸ್ವತಃ ಭಿನ್ನಸಂಸ್ಕೃತಿ ಮಾದರಿಯನ್ನು ಸಮರ್ಥಿಸುವ ಯಾವ ಕ್ಷೇತ್ರಕಾರ್ಯವನ್ನೂ ಮಾಡಲಿಲ್ಲ.  ಸಮಲಿಂಗಿಗಳ ಸಂವಾದಗಳನ್ನು ಆಧರಿಸಿ ಭಿನ್ನಲಿಂಗಿಗಳ ಸಂವಾದಗಳನ್ನು ವಿಶ್ಲೇಷಿಸ ಹೊರಟಿದ್ದಾರೆ. (೨) ಭಿನ್ನಸಂಸ್ಕೃತಿ ಮಾದರಿಯ ಮತ್ತೊಬ್ಬ ಸಮರ್ಥಕಿಯಾದ ಟ್ಯಾನನ್ ಕೂಡಾ ಮುಖ್ಯವಾಗಿ ತನ್ನ ವಾದ ಸಮರ್ಥನೆಗೆ ಸಮಲಿಂಗಿ ಸಂವಾದಗಳನ್ನೇ ಬಳಸಿದ್ದಾಳೆ.   ಸಮಲಿಂಗಿ ಸಂವಾದಗಳಲ್ಲಿ ಲಿಂಗಗಳ ನಡುವಣ ಯಜಮಾನಿಕೆ ಮತ್ತು ಅಸಮಾನತೆಯ ಪ್ರಶ್ನೆ ತಲೆ ಎತ್ತುವುದೇ ಇಲ್ಲ.  ವಾಸ್ತವವಾಗಿ ಗಂಡು ಹೆಣ್ಣುಗಳ ಸಂವಾದಗಳನ್ನು ಆಧರಿಸಿದ ಕ್ಷೇತ್ರಕಾರ್ಯ ಅಧ್ಯಯನಗಳಲ್ಲಿ ಯಜಮಾನಿಕೆಯ ಸ್ವರೂಪ ಬಯಲಾಗಿದೆ.

ಅಮೇರಿಕದ ಸಮಾಜವು ಪಿತೃಪ್ರಧಾನವಾದುದು. ಗಂಡಸರಿಗೆ ಅಲ್ಲಿ ಸಾಂಸ್ಕೃತಿಕ ಅಧಿಕಾರವಿದೆ. ಅದರಿಂದ ಸಾಮಾಜಿಕ ವ್ಯವಸ್ಥೆಯ ಬೇರುಗಳು ಭದ್ರಗೊಳ್ಳುತ್ತಿವೆ. ಶ್ರಮ ಹಂಚಿಕೆಯಲ್ಲಿ ಇರುವ ಲಿಂಗತಾರತಮ್ಯದ ಮೂಲಕ ಗಂಡಸರ ಯಜಮಾನಿಕೆಗೆ ಒಂದು ನೆಲೆ ದೊರೆತಿದೆ. ಆ ಮೂಲಕವೇ ಅದು ಸ್ಥಿರಗೊಳ್ಳುತ್ತಿದೆ. ಭಿನ್ನಸಂಸ್ಕೃತಿ ಮಾದರಿಯೂ ಕೂಡಾ ಅಮೇರಿಕದ ಸಮಾಜದಲ್ಲಿ ಗಂಡಸರ ಮಾತೇ ನಡೆಯುವುದೆಂದೂ, ಹೆಂಗಸರ ಮಾತನ್ನು ಕಡೆಗಣಿಸಲಾಗುವುದೆಂದೂ ಒಪ್ಪತ್ತದೆ. ಮಾತಾಡುವ ಹೆಂಗಸರಿಗೆ ದಂಡನೆ ಕಾದಿರುವುದೂ, ಅವರ ಮಾತಿನ ರೀತಿನೀತಿಗಳನ್ನು ಬದಲಾಯಿಸಿಕೊಳ್ಳಲು ಆದೇಶಿಸುವುದೂ – ಇವೆಲ್ಲವನ್ನೂ ಒಪ್ಪುತ್ತಾರೆ. ಇದಕ್ಕೆ ಕಾರಣಗಳನ್ನು ಹುಡುಕುವುದಿಲ್ಲ. ಅಲ್ಲದೆ, ಹೆಣ್ಣುಗಂಡುಗಳ ದಿನದಿನದ ಮಾತುಕತೆಗಳ ಮೇಲೆ ಇವೆಲ್ಲದರ ಪರಿಣಾಮವನ್ನು ಕೂಡಾ ಪರಿಶೀಲಿಸುವುದಿಲ್ಲ.  ಒಂದು ವೇಳೆ ನಾವು ಲಿಂಗಗಳ ನಡುವೆ ಏಣಿಶ್ರೇಣಿಯ ವ್ಯವಸ್ಥೆ ಇರುವುದನ್ನು ನಿರಾಕರಿಸಿದರೆ, ಆಗ ಹೆಂಗಸರು ಮತ್ತು ಗಂಡಸರು ಭಾಷೆಯನ್ನು ಬಳಸುವಾಗ ಕಾಣುವ ಅಸಮತೋಲನಕ್ಕೆ ಏನು ಕಾರಣಗಳನ್ನು ಹೇಳುವುದು? ಮತ್ತು ಈ ಏಣಿಶ್ರೇಣಿ ಇದೆ ಎಂದೂ, ಸಮಾಜದಲ್ಲಿ ಅಧಿಕಾರ ರಚನೆ ಉಂಟೆಂದೂ ಒಪ್ಪಿಕೊಂಡರೆ, ಆಗ ಇವೆಲ್ಲವೂ ನಮ್ಮ ದಿನದಿನದ ವ್ಯವಹಾರಗಳನ್ನು ಪ್ರಭಾವಿಸುವುದಿಲ್ಲ ಎಂದು ವಾದಿಸಲು ಬರುವುದಿಲ್ಲ. ಗಂಡು ಹೆಣ್ಣುಗಳ ಸಂವಾದವು ಇಂಥ ರಚನೆಯೊಡನೆ ಯಾವ ನಂಟೂ ಇಲ್ಲದಂತೆ ನಡೆಯುತ್ತಿರುತ್ತದೆಂದು ಭಿನ್ನಸಂಸ್ಕೃತಿ ಮಾದರಿ ತಿಳಿಯುತ್ತದೆ;  ಈ ಮಾತುಕತೆಗಳ ನಿಜಾರ್ಥವನ್ನು ತಿಳಿಯಲು ಅವು ನಡೆಯುವ ಸಂದರ್ಭಗಳನ್ನು ಅರಿತರೆ ಸಾಕು ಎಂದು ನಂಬುತ್ತವೆ. ಆದರೆ, ಸಂವಾದಗಳನ್ನು ಸಾಮಾಜಿಕ, ಸಾಂಸ್ಕೃತಿಕ ರಚನೆಗಳು ನಿಯಂತ್ರಿಸುತ್ತವೆ. ಈ ನಿಯಂತ್ರಣದ ಮೂಲಕವೇ ಅಂಥ ರಚನೆಗಳು ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತವೆ. ಸಂವಹನದ ಸಮಸ್ಯೆಗೆ ಬಾಧ್ಯರಾಗುವುದು ಗಂಡಸೋ ಹೆಂಗಸೋ ಎಂಬುದಲ್ಲ ಸಮಸ್ಯೆ. ಅವರ ಸಂವಾದಗಳು ಸಾಮಾಜಿಕ ಏಣಿಶ್ರೇಣಿಯಿಂದ ನಿಯಂತ್ರಿತವಾಗುವುದನ್ನು ನಾವು ಗುರುತಿಸುತ್ತೇವೆಯೇ ಇಲ್ಲವೋ ಎನ್ನುವುದು ಮುಖ್ಯ.

ಸಮಲಿಂಗಿ ಸಮವಯಸ್ಕರೊಡನೆ ವ್ಯವಹರಿಸುತ್ತ ಹುಡುಗ ಹುಡುಗಿಯರು ಕಲಿತುಕೊಳ್ಳುವ ಮಾತಿನ ರೀತಿಗಳನ್ನು ನೋಡಿದರೂ, ಅಧಿಕಾರ ರಚನೆಯ ಲಕ್ಷಣಗಳು ಅಲ್ಲಿಯೂ ಕಾಣಸಿಗುತ್ತವೆ. ಸಹಕಾರ, ಸಹಭಾಗಿತ್ವ, ಸಮಾನತೆ, ಸಂಬಂಧ ರಚನೆ, ಹಂಚಿಕೊಳ್ಳುವಿಕೆ, ಸಹಾನುಭೂತಿ, ಮುಂತಾದ ಹುಡುಗಿಯರ ಮಾತುಕತೆಯ ಲಕ್ಷಣಗಳು ಹೆಂಗಸರ ಗುಣಗಳು ಎನ್ನಲಾದ ದೊರೆಯುವಿಕೆ, ನೆರವಾಗುವಿಕೆ, ತೆರೆದ ಮನಸ್ಸು, ಭಾವುಕತೆ, ಸ್ನೇಹಪರತೆ ಮುಂತಾದ ಗುಣವಾಚಕಯುಕ್ತ ಲಕ್ಷಣಗಳನ್ನೇ ಹೋಲುತ್ತವೆ. ಈ ಲಕ್ಷಣಗಳನ್ನು ದುರ್ಬಲತೆ, ಹಿಂಜರಿಕೆ ಎಂದೂ ವ್ಯಾಖ್ಯಾನಿಸಲಾಗಿದೆ. ಹುಡುಗರ ಮಾತುಕತೆಗಳಲ್ಲಿ ಸ್ಥಾನ ಉಳಸಿಕೊಳ್ಳಲು ಪೈಪೋಟಿ, ಅಧಿಕಾರ ಸ್ಥಾಪನೆ, ಸವಾಲು ಹಾಕುವಿಕೆ, ವಾದ ಹೂಡುವಿಕೆ, ಯಾಜಮಾನ್ಯ,ಮಾತಿನ ರಭಸ ಮುಂತಾದ ಲಕ್ಷಣಗಳಿದ್ದು ಇವುಗಳನ್ನು ಬಲಯುತವಾದ ಪುರುಷ ಚಹರೆಗಳೆಂದು ಹೇಳಲಾಗುತ್ತದೆ. ಸಂವಾದಗಳಲ್ಲಿ ಲಿಂಗಭಿನ್ನತೆ ತಲೆಎತ್ತುವ ಬಗ್ಗೆ ಟ್ಯಾನನ್ ನಡೆಸಿದ ಅಧ್ಯಯನಗಳಲ್ಲೂ, ಹೆಣ್ಣುಗಂಡುಗಳಿಗೆ ಕಟ್ಟಿಕೊಡಲಾದ ಈ ಸಿದ್ದಮಾದರಿಗಳೇ ಕಂಡು ಬಂದಿವೆ. ಹುಡುಗಿಯರು ಮತ್ತು ಹುಡುಗರು  ಈ ಲಕ್ಷಣಗಳನ್ನೇಕೆ ಮೈಗೊಡಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ಮಾಲ್ಟ್‌ಜ್ ಮತ್ತು ಬೋರ್ಕರ್ ಎತ್ತಿಕೊಳ್ಳಲೇ ಇಲ್ಲ. ಹುಡುಗಿಯರು ಯಜಮಾನಿಕೆಯನ್ನು ತೋರುವುದನ್ನು ಯಾರೂ ಒಪ್ಪುವುದಿಲ್ಲವೇಕೆ, ಹುಡುಗರು ಮೇಲುಗೈ ಪಡೆಯಲು ಹಂಬಲಿಸುವುದೇಕೆ ಎಂಬ ಪ್ರಶ್ನೆಗಳು ಅವರನ್ನು ಕಾಡಿಸಲಿಲ್ಲ. ಜಂಡರ್ ಲಕ್ಷಣಗಳಲ್ಲಿ ಈ ಅಸಮತೋಲನ ಉಂಟಾಗುವುದನ್ನು ಕೇವಲ ಸಾಮಾಜೀಕರಣ ಪ್ರಕ್ರಿಯೆಯ ಅಧ್ಯಯನದಿಂದ ವಿವರಿಸಲು ಸಾಧ್ಯವಿಲ್ಲ.

ಮಾತಿನಲ್ಲಿ ಗಂಡಸರು ತೋರುವ ರಭಸ ಮತ್ತು ಅಂತಸ್ತಿನ ಬಗ್ಗೆ ತೋರುವ ಎಚ್ಚರ, ಹೆಂಗಸರು ಮಾತಿನಲ್ಲಿ ಸದಾ ಸಹಕರಿಸಬೇಕೆಂಬ ನಿರೀಕ್ಷೆ ಇವೆಲ್ಲವೂ ತೀರಾ ಆಕಸ್ಮಿಕವಾಗಿರಲಾರದು ಎಂದು ಕ್ಯಾಮರೊನ್ , ಮೆಕಲೆಂಡಿನ್ ಮತ್ತು ಓಲೆಹರಿ(೧೯೮೮) ಅವರ ಅಧ್ಯಯನಗಳು ತೋರಿಸಿಕೊಟ್ಟಿವೆ. ಗಂಡಸರು ಅಧ್ಯಾಪಕರ, ರಕ್ಷಕರ ಪಾತ್ರವನ್ನೇ ವಹಿಸುತ್ತಿರುವುದು ಕೂಡಾ ಆಕಸ್ಮಿಕವಲ್ಲ . ದುಡಿಮೆಯ ಹಂಚಿಕೆಯಲ್ಲಿ ಕಾಣುವ ಲಿಂಗತಾರತಮ್ಯವು ಯಜಮಾನಿಕೆಯ ಸ್ವರೂಪವನ್ನೇ ತೋರಿಸುತ್ತದೆ. ಇದರಿಂದ ಕೆಲವೊಮ್ಮೆ ಈ ಯಾಜಮಾನ್ಯ ‘‘ಎಂದೂ ಇರುವಂಥದ್ದೇ ’’ಎಂಬ ತೀರ್ಮಾನ ಮಾಡಿದರೂ ಅಚ್ಚರಿಯಲ್ಲ. ಹೆಂಗಸರು ಮತ್ತು ಗಂಡಸರು ಮಕ್ಕಳಾಗಿದ್ದಾಗ ಕಲಿಯುವ ಬೇಕುಬೇಡಗಳು ಮುಂದೆ ಅವರು ದೊಡ್ಡವರಾದಾಗ ಹೇಗಿರಬೇಕೆಂದು ಸಂಸ್ಕೃತಿಯು ನಿಗದಿಪಡಿಸಲಿದೆಯೋ ಅದನ್ನೇ ಹೋಲುತ್ತವೆ. ಅಂದರೆ ಸಾಮಾಜಿಕ ಶ್ರೇಣೀಕರಣದಲ್ಲಿ ಹೆಣ್ಣು, ಗಂಡುಗಳು ಹೊಂದಲಿರುವ ಸ್ಥಾನಗಳನ್ನು ಸೂಚಿಸುವಂತಿರುತ್ತವೆ. ಸಂವಾದಗಳಲ್ಲಿ ಕಂಡು ಬರುವ ಲಿಂಗತಾರತಮ್ಯವು ಕೇವಲ ಸಾಂಸ್ಕೃತಿಕ ಭಿನ್ನತೆಗಳಿಂದ ಉಂಟಾಗುವುದಿಲ್ಲ. ಮಾತುಕತೆಗಳಲ್ಲಿ  ಹೆಂಗಸರು ಗಂಡಸರಿಗೆ ಹೆಚ್ಚು ಅವಕಾಶ ನೀಡಲು ಯತ್ನಿಸುವುದು, ಮತ್ತು ಗಂಡಸರು ಎತ್ತಲೋ ನೋಡುತ್ತಾ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುವ ಹಾಗೆ ಹೆಂಗಸರ ಕಣ್ಣಿಗೆ ಕಾಣುವುದು – ಇವೆಲ್ಲವೂ ಸ್ಥಾಪಿತ ಮಾದರಿಗಳನ್ನೇ ಪುನರಭಿನಯಿಸುತ್ತವೆ. ಮಾತುಕತೆಗಳಲ್ಲೂ ನಿಜ ಜೀವನದಲ್ಲಿರುವಂತೆ ಹೆಂಗಸರೇ ಹೆಚ್ಚು ದುಡಿಯುತ್ತಾರೆ. ಮಾತುಕತೆಯಲ್ಲಿ ತೊಡಗಿಕೊಂಡಿದ್ದೇವೆಂದು ತೋರಿಸಲು ಹೆಂಗಸರು ಏಕೆ ಹೆಚ್ಚು ದುಡಿಯಬೇಕಾಗಿ ಬರುತ್ತದೆ ಎಂಬುದನ್ನು ನಾವು ಗಮನಿಸದೆ ಹೋದಲ್ಲಿ ಅಸಮಾನತೆಯನ್ನು ಸಮರ್ಥಿಸುತ್ತಿರುತ್ತೇವೆ; ಮತ್ತು ಸಂವಾದಗಳಲ್ಲಿ ಸೋಮಾರಿಯಾಗಿರಲು ಗಂಡಸರಿಗೆ ದೊರಕಿರುವ ಸೌಲಭ್ಯವನ್ನು ಕ್ರಮಬದ್ಧಗೊಳಿಸುತ್ತಿರುತ್ತೇವೆ. (ಮಾತುಕತೆಯಲ್ಲಿ ಹೀಗೆ ಗೊತ್ತಾದ ಪ್ರಮಾಣದ ದುಡಿಮೆಯನ್ನು ಮಾಡದ ಹೆಂಗಸರಿಗೆ ‘ತಲೆಹರಟೆ’ ಎಂದೂ, ಸರಿಯಾಗಿ ದುಡಿಯದಿದ್ದರೆ ‘ತಲೆ ತಿರುಕಿ’ ಎಂದೂ ಬೈಯುವುದು ಖಂಡಿತ. ಆದರೆ, ನಿರೀಕ್ಷಿಸಿದಷ್ಟು ಕೆಲಸ ಮಾಡಿದಾಗ ಆಕೆಗೆ ಯಾವ ಹೊಗಳಿಕೆಯೂ ಕಾಯ್ದಿರುವುದಿಲ್ಲ.)

ಗಂಡು ಹೆಣ್ಣುಗಳ ನಡುವೆ ಇರುವ ಸಾಂಸ್ಕೃತಿಕ ವ್ಯತ್ಯಾಸಗಳಿಂದಾಗಿ ಸಂವಾದಗಳಲ್ಲಿ ಅಪಾರ್ಥ ಉಂಟಾಗುವುದೆಂದು ಹೇಳಲಾಗಿದೆ. ಇದರ ಬಗ್ಗೆ ಗಮನ ಹರಿಸಿದಾಗ ಇನ್ನೊಂದು ಸಮಸ್ಯೆ ಕಾಣತೊಡಗುತ್ತದೆ. ಅಪಾರ್ಥ ಉಂಟಾಗುವುದು ಗಂಡು ಹೆಣ್ಣುಗಳ ಸಂವಾದಗಳ  ಅಂತಿಮ ಫಲಿತವೆಂದೂ, ಅದನ್ನು ಪರಿಹರಿಸಲು ಸಾಧ್ಯ ಎಂದೂ ಭಿನ್ನ ಸಂಸ್ಕೃತಿ ಮಾದರಿಯು ನಂಬುತ್ತದೆ. ಅದಕ್ಕಾಗಿಯೇ ಸಂಸ್ಕೃತಿಗಳ ನಡುವಣ ಭಿನ್ನತೆಗಳನ್ನು ಪಟ್ಟಿ ಮಾಡಿ ಹೋಲಿಸುವುದು ಅಗತ್ಯವೆಂದು ವಾದಿಸಲಾಗಿದೆ. ಪರಸ್ಪರರಲ್ಲಿ ಇರುವ ವ್ಯತ್ಯಾಸಗಳನ್ನೂ ಅವರವರ ಗ್ರಹಿಕೆಗಳಲ್ಲಿ ಇರುವ ಭಿನ್ನತೆಗಳನ್ನೂ ಅರಿತಾಗ, ಕೊನೆಯ ಪಕ್ಷ ಅವರ ಬಗ್ಗೆ ಎಚ್ಚರ ವಹಿಸಿದಾಗ ಮಾತ್ರ ಅಪಾರ್ಥಗಳಿಗೆ ಕಾರಣಗಳು ಗೋಚರಿಸುತ್ತವೆ. ಆಗ ನಾವು ವ್ಯಕ್ತಿಗಳನ್ನು ದೂಷಿಸುವುದನ್ನು ನಿಲ್ಲಿಸುತ್ತೇವೆ. ಅಪಾರ್ಥ ಮಾಡಿಕೊಳ್ಳುವುದನ್ನು ಕೇವಲ ವಿಶ್ಲೇಷಿಸಿದರೆ ಸಾಲದು. ಇದರ ಪರಿಣಾಮ ಏನಾಗುತ್ತದೆ ಎಂಬುದನ್ನು ತಿಳಿಯಬೇಕಾಗಿದೆ. ಸಾಮಾಜಿಕವಾಗಿ ಸಮಾನರಾದವರ ನಡುವೆ ಉಂಟಾಗುವ ಅಪಾರ್ಥವು ಭಾಗೀದಾರರಿಬ್ಬರ ಮೇಲೂ ನಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುವುದೆಂದು ಸಾಮಾನ್ಯವಾಗಿ ತಿಳಿಯಲಾಗಿದೆ.

ಆದರೆ, ಇದೆಷ್ಟು ನಿಜ? ಗಂಡು ಹೆಣ್ಣುಗಳ ನಡುವೆ ಅಪಾರ್ಥ ಉಂಟಾಗುವುದನ್ನು ತಿಳಿಯಲು ಟ್ಯಾನನ್ ಬಳಸಿದ ಪ್ರಸಂಗಗಳ ಉದಾಹರಣೆಗಳನ್ನು ಗಮನಿಸಿದಾಗ ನನಗೆ ಅಪಾರ್ಥ ಉಂಟಾಗುವುದರಿಂದ ನಷ್ಟ ಹೆಂಗಸಿಗೆ ಹೆಚ್ಚೇ ಹೊರತು ಗಂಡಸಿಗಲ್ಲ ಎಂದು ತೋರುತ್ತದೆ.  ಟ್ಯಾನನ್ ಇದಕ್ಕೆ ಗಂಡು ಹೆಣ್ಣುಗಳ ಮಾತಿನ ರೀತಿಗಳೇ ಕಾರಣವೆಂದು ಹೇಳುತ್ತಾಳೆ.  ಒಂದು ಪ್ರಸಂಗವನ್ನು ನೋಡೋಣ :  ಹೆಂಡತಿಯೊಬ್ಬಳು ತಾನು ಕೆಲಸ ಮಾಡುವಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಗಂಡನಿಗೆ ಹೇಳಿಕೊಳ್ಳುತ್ತಿದ್ದಾಳೆ, ಎನ್ನೋಣ.  ತಮ್ಮಿಬ್ಬರ ನಡುವೆ ಇರುವ ಸಾಮೀಪ್ಯದಿಂದಾಗಿ ಗಂಡ ತನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಈ ತೊಂದರೆಗಳನ್ನು ಎದುರಿಸುವ ತಾನು ಒಂಟಿಯಲ್ಲವೆಂದು ಒತ್ತಾಸೆಯಾಗಬೇಕೆಂದು, ಅವನ ಸಮಸ್ಯೆಗಳನ್ನೂ ತನ್ನಲ್ಲಿ ಹೇಳಿಕೊಳ್ಳಬೇಕೆಂದೂ ನಿರೀಕ್ಷಿಸುತ್ತಾಳೆ. ಆತನೋ ತನ್ನ ಚೌಕಟ್ಟಿಗನುಗುಣವಾಗಿ ಅವಳ ಮಾತುಗಳಿಗೆ ಪ್ರತಿಕ್ರಿಯಿಸುತ್ತಾ, ನಗೆಹನಿಗಳನ್ನು ಹೇಳಿ ಅವಳ ಕತೆಯನ್ನು ಬದಿಗೆ ತಳ್ಳುತ್ತಾನೆ. ಜೊತೆಗೆ ಸಮಸ್ಯೆಗೆ ಪರಿಹಾರವನ್ನೂ ಸೂಚಿಸಬಹುದು. ಆಗ ಅವಳಿಗೆ ತನ್ನ ಮಾತಿಗೆ ಬೆಲೆ ಇಲ್ಲವೆಂದೂ, ಆತ ತಾನೇ ಜಾಣನೆಂದು ತೋರಿಸಿಕೊಳ್ಳುತ್ತಿರುವನೆಂದೂ ಅನ್ನಿಸಬಹುದು. ಅವಳು ಆಗ ಬೇಸರಗೊಂಡರೆ, ಇವನಿಗೆ ಇವಳೇಕೆ ಬೇಸರಗೊಳ್ಳುತ್ತಿದ್ದಾಳೆ ಎಂಬ ದುಗುಡವೂ ಉಂಟಾಗಬಹುದು. ಅಪಾರ್ಥದ ಒಟ್ಟು ಪರಿಣಾಮವೇನಾಯಿತು? ಆಕೆ ಆತ ತನ್ನನ್ನು ಗೌರವಿಸಲಿಲ್ಲ, ಕಡೆಗಣಿಸುತ್ತಿದ್ದಾನೆ, ದಪ್ಪ ಚರ್ಮದವನು ಎಂದುಕೊಳ್ಳಬಹುದು. ಜೊತಗೆ ಬುದ್ದಿವಂತನೆಂದೂ ಮೆರೆಯುತ್ತಿರುವಂತೆ ತೋರಬಹುದು. ಅವನಿಗೆ ಅನ್ನಿಸುವುದೇ ಬೇರೆ.  ಅವಳು ತಾನೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾರಳು, ನಗುವ ಸ್ವಭಾವವೇ ಇಲ್ಲ, ಗಳಿಗೆಗೊಂದು ಥರ ವರ್ತಿಸುತ್ತಾಳೆ, ತರ್ಕಬದ್ಧವಾಗಿ ಚಿಂತಿಸುವುದಿಲ್ಲ ಎಂದುಕೊಳ್ಳುತ್ತಾನೆ.  ಏಕೆಂದರೆ ಅವಳಿಗೊಂದು ಸಮಸ್ಯೆಯಿದ್ದು, ಅದಕ್ಕೆ ತಾನು ಸೂಚಿಸಿದ ಪರಿಹಾರವನ್ನು ಸ್ವೀಕರಿಸಲು ಅವಳು ಸಿದ್ಧಳಿಲ್ಲವೆಂದು ಅವನಿಗೆ ತೋರುತ್ತದೆ. ಇವರಿಬ್ಬರ ಅನಿಸಿಕೆಗಳು ಹೆಣ್ಣು ಗಂಡುಗಳ ಬಗ್ಗೆ ನೆಲೆಗೊಂಡಿರುವ ನಕಾರಾತ್ಮಕ ಲಕ್ಷಣಗಳಿಗೆ ಅನುಗುಣವಾಗಿಯೇ ಇವೆ.  ಆದರೆ ತರ್ಕ ಮತ್ತು ಬುದ್ದಿಯ ಮಹತ್ವವನ್ನು ಎತ್ತಿ ಹೇಳುವ ಸಾಂಸ್ಕೃತಿಕ ನೆಲೆಗಳಿಂದ ನೋಡಿದಾಗ, ಆತನ ಬಗ್ಗೆ ಅವಳು ತಳೆಯುವ ನಿಲುವುಗಳಿಂದ ಆತ ಅವಳಿಗಿಂತ ಕೀಳು ಎಂದೇನೂ ಅನ್ನಿಸುವುದಿಲ್ಲ; ಆದರೆ ಆಕೆಯ ಬಗ್ಗೆ ಆತ ತಳೆಯುವ ನಿಲುವುಗಳಿಂದ ಅವಳು ಅವನಿಗಿಂತ ಕೀಳು ಎಂಬ ನಿರ್ಣಯಕ್ಕೆ ಬರುವುದು ಅನಿವಾರ್ಯವಾಗುತ್ತದೆ. ಇಲ್ಲಿ ಗಂಡಸು ಸಮಸ್ಯೆಯನ್ನು ಬಿಡಿಸಿ, ಅದಕ್ಕೊಂದು ಪರಿಹಾರವನ್ನು ಸೂಚಿಸಿದ ತೃಪ್ತಿಯನ್ನು ಪಡೆದುಕೊಳ್ಳುತ್ತಾನೆ. ತನ್ನ ಕೆಲಸ ತಾನು ಮಾಡಿದ್ದೇನೆಂಬ ನಿರಾಳತೆ ಇರುತ್ತದೆ. ಹೆಂಗಸು ಮಾತ್ರ ತನಗೆ ಬೇಕಾದ್ದು ಸಿಗದಿರುವ ಅತಂತ್ರ ಸ್ಥಿತಿಯಲ್ಲಿ ತೊಳಲುತ್ತಾಳೆ.

ಹೆಂಗಸಿನ ಮಾನಸಿಕ ಸ್ಥಿತಿಯ ಮೇಲೆ ಉಂಟಾಗುವ ಮೇಲೆ ಹೇಳಿದ ಪರಿಣಾಮಗಳ ಜೊತೆಗೆ, ಇಂಥ ಅಪಾರ್ಥಗಳ ಸಂದರ್ಭದ ಪರಿಣಾಮ ಇನ್ನಷ್ಟು ದಟ್ಟವಾಗಿರುತ್ತದೆ. ಅಮೇರಿಕದ ಸಮಾಜದಲ್ಲಿ ಗಂಡಸರು ಸಂಪನ್ಮೂಲಗಳ ನಿಯಂತ್ರಕರು. ಅವರಲ್ಲಿ ಹೆಚ್ಚು ಹಣವಿರುತ್ತದೆ. ದೈಹಿಕ ಶಕ್ತಿಯೂ ಹೆಚ್ಚು. ಹಾಗಾಗಿ ಅಧಿಕಾರದ ಸೂತ್ರ ಅವರ ಕೈಯಲ್ಲಿರುತ್ತದೆ. ಈ ಕಾರಣದಿಂದ ಹೀಗೆ ವರ್ತಿಸುವ ಹೆಂಗಸರನ್ನು ದಂಡಿಸುವ ಅವಕಾಶವೂ ಅವರಿಗಿರುತ್ತದೆ.

ಅಪಾರ್ಥಕ್ಕೆ ಯಾವೊಬ್ಬ ವ್ಯಕ್ತಿಯೂ ಕಾರಣವಲ್ಲ, ಸದುದ್ದೇಶವುಳ್ಳ ವರ್ತನೆಗಳನ್ನು ಕೆಲವೊಮ್ಮೆ ತಪ್ಪಾಗಿ ಗ್ರಹಿಸಬಹುದು ಎಂದಾದರೆ, ಇಂಥ ಸಂದರ್ಭಗಳಲ್ಲಿ ಗಂಡಸರಿಗಿಂತ ಹೆಂಗಸರಿಗೇ ಹೆಚ್ಚು ಸಂಕಷ್ಟಗಳು ಉಂಟಾಗುವುದೇಕೆ?  ಪರಿಚಿತ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ಹೆಂಡತಿಯ ಮೇಲೆ ಜರುಗುವ ಹಿಂಸೆಗಳು, ಇವೆಲ್ಲವನ್ನೂ ಈ ಅಪಾರ್ಥದ ಸಂದರ್ಭಗಳ ಜೊತೆಗಿರಿಸಿ, ಇವೆಲ್ಲವೂ ಸಾಮಾಜಿಕ ನೆಲೆಯಲ್ಲಿ ನಡೆಯುತ್ತಿರುವ ಸಂವಾದ ಭಗ್ನತೆಯ ನಿರ್ದಶನಗಳೆಂದು ತಿಳಿಯಬೇಕು. ಹೆಂಗಸರು ದೈಹಿಕ ಹಿಂಸೆಗೆ ಒಳಗಾಗುವುದರ ಜೊತೆಗೆ ಇದೆಲ್ಲ ‘ನಿನ್ನಿಂದಲೇ ಆಗಿದ್ದು’ ಎಂಬ ಟೀಕೆ ಬೈಗುಳಗಳನ್ನೂ ಎದುರಿಸಬೇಕಾಗುತ್ತದೆ. ಸಮಾನ ನೆಲೆಯಲ್ಲಿ ವ್ಯವಹರಿಸುತ್ತಿರುವ ಗಂಡು ಹೆಣ್ಣುಗಳ ನಡುವೆ ಕೆಲವು ವರ್ತನೆಗಳನ್ನು ಅರಿಯಲು ಅವರು ಬೇರೆ ಬೇರೆ ನಿಯಮಗಳನ್ನು ಹೊಂದಿರುವುದರಿಂದಾಗಿ ಇಂಥ ಅಪಾರ್ಥಗಳು ದುರದೃಷ್ಟವಶಾತ್ ಸಂಭವಿಸಿಬಿಡುತ್ತವೆಂದು ಹೇಳುವುದು ಅಸಂಗತವೇ ಸರಿ. ಅಪಾರ್ಥ ಉಂಟಾದಾಗ ಯಾರಿಗೆ ಲಾಭವಾಗಿದೆ, ಯಾರಿಗೆ ದಂಡನೆಯಾಗಿದೆ, ಯಾರನ್ನು ಕ್ಷಮಿಸಲಾಗಿದೆ, ಹೇಗೆ ಕ್ಷಮಿಸಿದ್ದಾರೆ – ಇವೆಲ್ಲವನ್ನೂ ವ್ಯಕ್ತಿಗತ ಮತ್ತು ಸಾಮಾಜಿಕ ನೆಲೆಯಲ್ಲಿ ವಿಶ್ಲೇಷಿಸಬೇಕು. ಇದರ ಜೊತೆಗೆ ಅಧಿಕಾರ ಸಂಬಂಧದ ಎಳೆಯೂ ಸೇರಿಕೊಳ್ಳುತ್ತದೆ. ಸಂವಾದಗಳ ನಿಯಮಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳಲ್ಲಿ, ಸಂಪನ್ಮೂಲಗಳ ಹಿಡಿತದಲ್ಲಿ, ಇಲ್ಲವೇ, ಸಾಮಾಜಿಕವಾದ ನಿಯಮಗಳಲ್ಲಿ – ಹೀಗೆ ಯಾವುದೇ ಬಗೆಯಲ್ಲಿ ಕಾಣಿಸಿಕೊಂಡರೂ, ಇವೆಲ್ಲವೂ ಗಂಡಸರನ್ನು ಕೇಂದ್ರದಲ್ಲಿ ಇರಿಸಿಕೊಳ್ಳುವುದರಿಂದ ಅಪಾರ್ಥ ಉಂಟಾಗುವ ಸಂದರ್ಭದಲ್ಲೆಲ್ಲಾ ತಮ್ಮ ಕೈವಾಡವನ್ನು ತೋರಿಸದೇ ಬಿಡುವುದಿಲ್ಲ. ಗಂಡಸರು ಅಧಿಕಾರವುಳ್ಳವರಾದ್ದರಿಂದ ಅವರು ಹೆಂಗಸರನ್ನು ಅಪಾರ್ಥ ಮಾಡಿಕೊಳ್ಳುವ ಹಕ್ಕನ್ನೂ ಹೊಂದಿರುತ್ತಾರೆ. ಹಾಗೆ ಮಾಡಿದ್ದಕ್ಕೆ ಅವರಿಗೆ ದಂಡನೆಯೇನೂ ಇಲ್ಲ. ಜೊತೆಗೆ ಗಂಡಸಿನ ವರ್ತನೆಯನ್ನು ಅಪಾರ್ಥ ಮಾಡಿಕೊಳ್ಳುವ ಹೆಂಗಸರಿಗೆ ದಂಡನೆ ವಿಧಿಸುವ ಹಕ್ಕು ಕೂಡ ಗಂಡಸರಿಗಿದೆ. ಈ ಬಗ್ಗೆ ಹೆನ್ಲೆ ಮತ್ತು ಕ್ರಾಮರಿ (೧೯೯೧) ಹೇಳುವುದನ್ನು ನೋಡೋಣ – ‘ಸಂವಾದಗಳಲ್ಲಿ ಯಾರ ಮಾತು ಗೆಲ್ಲುತ್ತದೆ ಎನ್ನುವುದನ್ನು, ಯಾರ ಮಾತಿನ ಬಗೆ ಸಹಜವೆಂದು ತಿಳಿಯಬೇಕೆಂಬುದನ್ನು, ಇನ್ನೊಬ್ಬರ ಮಾತಿನ ಶೈಲಿಯನ್ನು ಹೊಸದಾಗಿ ಯಾರು ಕಲಿತು ಅವರ ವರ್ತನೆಗಳನ್ನು ಅರ್ಥ ಮಾಡಿಕೊಳ್ಳಬೇಕೆಂಬುದನ್ನು, ಯಾರ ಭಾಷಾಶೈಲಿ ಬಳಸು, ಅತಾರ್ಕಿಕ ಮತ್ತು ಕೀಳು ಎಂದು ಪರಿಗಣಿತವಾಗಬೆಕು ಎಂಬುದನ್ನು ನಿರ್ಧರಿಸುವುದು ಭಾಗೀದಾರರ ಸಾಮಾಜಿಕ ಶ್ರೇಣಿಗಳು.  ಲಿಂಗ ವ್ಯತ್ಯಾಸಗಳು ಸಮಾಂತರ ರೇಖೆಗಳಲ್ಲಿ ಚಲಿಸುವುದಿಲ್ಲ. ಅವು ಒಂದನ್ನೊಂದು ಛೇದಿಸಿಕೊಂಡು, ಕೆಲವೊಮ್ಮೆ ಒಂದನ್ನೊಂದು ವಿರೋಧಿಸಿಕೊಂಡು ಚಲಿಸುತ್ತವೆ. ಹಾಗಾಗಿ ಗಂಡು ಹೆಣ್ಣುಗಳಷ್ಟು ಸಂಕೀರ್ಣ ಸಂಬಂಧಗಳಿಗೆ  ಒಳಗಾಗಿರುವ ಸಾಮಾಜಿಕ ಗುಂಪುಗಳು ಬೇರೆ ಯಾವುದೂ ಇರಲಾರದು.

ಈ ನೆಲೆಯನ್ನು ಕಡೆಗಣಿಸಿ ಕೇವಲ ಭಿನ್ನತೆಯನ್ನಷ್ಟೇ ಎತ್ತಿ ಹಿಡಿಯುವ ಮಾದರಿಯು ಈವರೆಗೆ ನೆಲೆಗೊಂಡಿರುವ ಪರಿಸ್ಥಿತಿಯನ್ನೇ ಲಜ್ಜೆಗೆಟ್ಟು ಸಮರ್ಥಿಸುತ್ತದೆ. ಸಾಂಸ್ಕೃತಿಕ ಭಿನ್ನತೆಯಿಂದಾಗಿ ಮುಗ್ಧಜೀವಿಗಳು ತಮಗೇ ತಿಳಿಯದಂತೆ ಅಪಾರ್ಥ ಮಾಡಿಕೊಳ್ಳುತ್ತಾರೆಂದು ಹೇಳುತ್ತಾ ತಪ್ಪಿನ ಹೊಣೆಯಿಂದ ಅವರನ್ನು ಮುಕ್ತಗೊಳಿಸುತ್ತದೆ.

ಸಮಾರೋಪ
ಜಂಡರ್ ಅನ್ನು ಒಂದು ಸಾಮಾಜಿಕ ರಚನೆ ಎಂದು ಪರಿಗಣಿಸುವ ಬಗೆ

ಜಂಡರ್ ಬಗ್ಗೆ ಮಾತಾಡುವುದೆಂದರೆ, ಹೆಣ್ಣು ಗಂಡುಗಳನ್ನು ಸಾಮಾಜಿಕ, ಸಾಂಸ್ಕೃತಿಕ ಸಮೂಹಗಳೆಂದು ಪರಿಗಣಿಸಿ ಮಾತಾಡಿದಂತೆ. ಈ ಎರಡೂ ಸಮೂಹಗಳನ್ನು ರಚಿಸುವಾಗ ಸಾಮಾಜಿಕ ಶ್ರೇಣೀಕರಣದಲ್ಲಿ ಅವುಗಳಿಗೆ ಬೇರೆ ಬೇರೆ ಸ್ಥಾನಗಳನ್ನು ನಿರ್ದೇಶಿಸಲಾಗಿದೆ.  ಭಿನ್ನತೆ ಮತ್ತು ಯಜಮಾನಿಕೆಗಳನ್ನು ಲಿಂಗಬೇಧದ ಸಂದರ್ಭದಲ್ಲಿ ಬೇರೆ ಬೇರೆಯಾಗಿ ಪರಿಗಣಿಸುವುದರಿಂದ ನಮಗೆ ಎರಡು ಭಿನ್ನ ಕೋನಗಳಿಂದ ಪಡೆದ ಎರಡು ಭಿನ್ನ ಚಿತ್ರಗಳು ಮಾತ್ರ ದೊರಕುತ್ತವೆ. ಆಗ ನಮಗೆ ಪರಿಸ್ಥಿತಿಯ ಸಂಕೀರ್ಣತೆ ಇಡಿಯಾಗಿ ಅರಿವಿಗೆ ಬರುವುದಿಲ್ಲ. ಜಂಡರ್ ರಚನೆಯಲ್ಲಿ ಭಿನ್ನತೆ ಮತ್ತು ಯಜಮಾನಿಕೆಗಳು ಜೊತೆಜೊತೆಯಾಗಿ ಕೆಲಸಮಾಡುತ್ತವೆ ಎಂದು ತಿಳಿಯುವುದೇ ಸರಿಯಾದ ದಾರಿ.

ಈವರೆಗಿನ ಹಲವು ಭಾಷಾಸಂಶೋಧನೆಗಳು ಜಂಡರ್ ಅನ್ನು ತೀರಾ ಸರಳವಾದ ರೀತಿಯಲ್ಲಿ ವಿವರಿಸಿಕೊಳ್ಳಲು ಯತ್ನಿಸಿವೆ. ಹೆಣ್ಣು ಮತ್ತು ಗಂಡು ಎಂಬುದನ್ನು ಭಾಷಾಪೂರ್ವ ವಾಸ್ತವಗಳೆಂದೂ, ಹುಟ್ಟಿನಿಂದಲೇ ಜೈವಿಕವಾಗಿ ನಿರ್ಧಾರಗೊಂಡ ಸಂಗತಿಯೆಂದೂ ಜಂಡರ್ ಅನ್ನು ವ್ಯಾಖ್ಯಾನಿಸಲಾಗಿದೆ. ಈ ಅಧ್ಯಯನಗಳು ಜಂಡರ್ ಒಂದು ಸಾಮಾಜಿಕ ರಚನೆ ಎಂದು ಗ್ರಹಿಸಲು ಸೋತಿವೆ. ನಾವು ಹೆಣ್ಣು ಇಲ್ಲವೇ ಗಂಡು ಎಂದು ಹುಟ್ಟಿದ ಮಾತ್ರಕ್ಕೆ ಹಾಗೆಯೇ ಸಾಮಾಜೀಕರಣಗೊಂಡು ಹೆಣ್ಣು ಗಂಡುಗಳಾಗುವುದಿಲ್ಲ. ಹುಟ್ಟಿದಾಗ ಜನನಾಂಗಗಳನ್ನು ಕುರುಹುಗಳಾಗಿ ಇರಿಸಿ ವಿಭಜನೆ ಮಾಡಿದರೂ, ಬೆಳೆಯುವಾಗ ನಾವು ಯಾವ ಜನನಾಂಗವನ್ನು ಹೊಂದಿದ್ದೇವೆ ಎಂಬ ಅಂಶ ಗೌಣವಾಗಿ ಬಿಡುತ್ತದೆ. ನಾವು ಹೆಣ್ಣು ನಿಯಮಗಳನ್ನು ಕಲಿಯಲು ನಮಗೆ ಹೆಂಗಸು ಎಂಬ ಹಣೆಪಟ್ಟಿ ಹಚ್ಚಿದ್ದೇ ಕಾರಣ. ಈ ನಿಯಮಗಳನ್ನು ಕಲಿತು ಪಾಲಿಸುವ ಮೂಲಕ ನಾವು ‘ಹೆಣ್ಣು’ಗಳಾಗುತ್ತೇವೆ. ವೆಸ್ಟ್ ಮತ್ತು ಜಿಮರ್‌ಮನ್ (೧೯೮೭) ಹೇಳುವಂತೆ ಜಂಡರ್  ಎಂಬುದು ‘ನಿಯತವಾದ ನಿಯಮಬದ್ಧವಾದ ಮತ್ತು ಆವರ್ತನಶೀಲವಾದ ಪೂರ್ಣಗೊಳ್ಳುವಿಕೆ’ ಮತ್ತು ಇದೊಂದು ‘‘ಆಯಾ ಲಿಂಗಪ್ರಬೇಧಕ್ಕೆ ಸೇರಿದವರಿಗೆ ತಕ್ಕ ಕ್ರಿಯೆಗಳನ್ನೂ ದೃಷ್ಟಿಕೋನಗಳನ್ನೂ ಪಡೆದುಕೊಂಡು ಅವುಗಳನ್ನು ನಿರ್ದಿಷ್ಟ ಸಂದರ್ಭಕ್ಕೆ ತಕ್ಕಂತೆ ನಿರ್ವಹಿಸುವ ಚಟುವಟಿಕೆ’ಯಾಗಿದೆ. ನಾವು ಭಾಗವಹಿಸುವ ಎಲ್ಲ ಚಟುವಟಿಕೆಗಳೂ ಜಂಡರ್ ನಿಯಂತ್ರಿತ. ಹಾಗಾಗಿ ನಾವು ಸದಾ ಅದನ್ನು ಕಟ್ಟುತ್ತಿರುತ್ತೇವೆ. ಒಬ್ಬ ವ್ಯಕ್ತಿಯ ಜಂಡರ್ ಎಂಬುದು ಅವರು ಏನಾಗಿದ್ದಾರೆ ಎಂಬುದಲ್ಲ. ಅದಕ್ಕಿಂತ ಮುಖ್ಯವಾಗಿ ಅವರು ಏನು ಮಾಡುತ್ತಾರೆ ಮತ್ತು ಇನ್ನೊಬ್ಬರೊಡನೆ ವ್ಯವಹರಿಸುವಾಗ ಮತ್ತೆ ಮತ್ತೆ ಏನನ್ನು ಮಾಡುತ್ತಿರುತ್ತಾರೆ ಎಂಬುದರಿಂದ ವ್ಯಕ್ತಿಯ ಜಂಡರ್ ಯಾವುದೆಂಬುದು ನಿಶ್ಚಿತವಾಗುತ್ತದೆ. ನಮ್ಮ ನಡವಳಿಯ ಹಿಂದೆ ನಮ್ಮ ಉದ್ದೇಶಗಳೇನೇ ಇರಲಿ, ಸಮಾಜವು ಜಂಡರ್ ಅನ್ನು ಹೇಗೆ ವ್ಯಾಖ್ಯಾನಿಸುತ್ತದೆ ಎಂಬುದನ್ನವಲಂಬಿಸಿ ನಮ್ಮ ವರ್ತನೆಗಳ ಮೌಲ್ಯಮಾಪನ ನಡೆದಿರುತ್ತದೆ. ಅಮೇರಿಕವೇ ಮೊದಲಾದ ಹಲವು ಸಮಾಜಗಳಲ್ಲಿ ಹೆಣ್ಣಾಗಿರುವುದೆಂದರೆ ಅಧೀನವಾಗಿ, ದುರ್ಬಲವಾಗಿ ಇರುವುದೆಂದೇ ಅರ್ಥ. ಹೆಣ್ಣು ಗಂಡುಗಳ ನಡುವೆ ಇರುವ ವ್ಯತ್ಯಾಸಗಳನ್ನು ಒಂದು ‘ಸತ್ಯ’ ವೆಂದು ಸ್ಥಾಪಿಸಿ, ಅದಕ್ಕನುಗುಣವಾಗಿ ಜಂಡರ್ ಅನ್ನು ರಚಿಸಲಾಗುತ್ತದೆ. ಆಗ ಒಂದು ಜಂಡರ್‌ಗೆ ಸೇರಿರುವುದೆಂದರೆ, ಸಮಾಜ ಆ ಜಂಡರ್‌ಗೆ ವಿಧಿಸಿದ ಕರ್ತವ್ಯಗಳನ್ನೂ ಕಾರ್ಯವಿಧಾನಗಳನ್ನೂ ಮತ್ತೆ ಮತ್ತೆ ನಿರ್ವಹಿಸುವುದೆಂದೇ ಅರ್ಥ.

ನಮ್ಮ ಜಗತ್ತು ಮತ್ತು ನಮ್ಮ ಸಾಮಾಜಿಕ ಜೀವನವನ್ನು ಕಟ್ಟುವಲ್ಲಿ ಜಂಡರ್ ಪಾತ್ರ ದೊಡ್ಡದು. ಎಲ್ಲ ಮಾನವರೂ ಇದರ ವ್ಯಾಪ್ತಿಗೆ ಬರುತ್ತಾರೆ. ಹೆಣ್ಣು ಗಂಡು ಎಂಬ ವಿಭಜನೆಗೆ ಒಳಗಾಗದೆ ಯಾವೊಬ್ಬ ವ್ಯಕ್ತಿಯೂ ಪಾರಾಗುವುದು ಸಾಧ್ಯವೇ ಇಲ್ಲ. ಜಂಡರ್ ಎಂಬುದು ಒಂದು ಸಾಮಾಜಿಕ ರಚನೆಯಾಗಿರುವುದರಿಂದಲೇ ಅದು ಮುಖ್ಯ. ಇದನ್ನು ನಮ್ಮ ನಿತ್ಯದ ವ್ಯವಹಾರಗಳಲ್ಲಿ ಆಚರಿಸುತ್ತಿರುತ್ತೇವೆ. ಇದಕ್ಕೂ, ನಮ್ಮ ಸ್ವಭಾವ ಇಲ್ಲವೇ ಜೈವಿಕ ರಚನೆಗೂ ಸಂಬಂಧವಿಲ್ಲ. ಧರ್ಮ, ಕುಲಚಹರೆ, ವಯಸ್ಸು, ವರ್ಗ, ಲೈಂಗಿಕ ದೃಷ್ಟಿಕೋನ, ಪ್ರದೇಶ – ಮುಂತಾದವುಗಳೊಡನೆ ಜಂಡರ್‌ಗೆ ಸಂಬಂಧವಿದೆ. ಇವೆಲ್ಲವೂ ಪರಸ್ಪರ ಕ್ರಿಯಾಶೀಲವಾಗಿರುತ್ತವೆ. ಹಾಗಾಗಿ, ಸಂಕಥನಗಳಲ್ಲಿ ಕಂಡು ಬರುವ ಲಿಂಗವ್ಯತ್ಯಾಸಗಳಿಗೆ ಭಿನ್ನಸಂಸ್ಕೃತಿಗಳು ಕಾರಣವೋ ಯಜಮಾನಿಕೆ ಕಾರಣವೋ, ಅಥವಾ ಇವೆರಡೂ ಕಾರಣವೋ ಎಂದು ಚಿಂತಿಸುವುದು ಅಷ್ಟು ಮುಖ್ಯವೆನಿಸುವುದಿಲ್ಲ. ಬದಲಾಗಿ, ಭಾಷಾಬಳಕೆಯ ಸಂದರ್ಭದಲ್ಲಿ ಜಂಡರ್ ಅನ್ನು ಇಡಿಯಾದ ಚಲನಶೀಲ ಪರಿಕಲ್ಪನೆಯಾಗಿ ಗ್ರಹಿಸುವುದು ಹೇಗೆ ಎನ್ನುವುದೇ ಮುಖ್ಯ. ಆಗ ಮಾತ್ರ ಒಂದು ಸಾಮಾಜಿಕ ಸಂದರ್ಭದಲ್ಲಿ ಭಾಷೆಯನ್ನು ಬಳಸುವಾಗ ನಾವು ಜಂಡರ್ ಅನ್ನು ಹೇಗೆ ಕ್ರಿಯಾಶೀಲಗೊಳಿಸುತ್ತಿದ್ದೇವೆ ಎನ್ನುವುದು ಗೊತ್ತಾಗಲು ಸಾಧ್ಯ.

—-
ಆಕರ
: Akiuchida : When ‘difference’ is dominant –
A critique of the ‘anti -power based’ cultural
approach to sex difference : In journal –
Language in Society – ೨೧ನೇ ಸಂಚಿಕೆ