ಕೇಳಿದೊಡನೆಯೇ ಮೈ ಜುಂ ಎನಿಸುವ
ಕವಿತೆಯ ಕಾಲ ಇದಲ್ಲ
ಯಾವ ಬೆರಳಿಗೂ ಸ್ಪಂದಿಸಲಾರದೆ
ಸಡಿಲಾಗಿವೆ ತಂತಿಗಳೆಲ್ಲ.

ಸುತ್ತಣ ಗಿಡ ಮರ ವಸಂತ ಸ್ಪರ್ಶಕೆ
ಹೊಸ ಹೊಸತಾಗಿವೆ ಪ್ರತಿಸಲವೂ,
ಕನಸುಗಳಿಲ್ಲದ, ಬೆರಗೂ ಇಲ್ಲದ
ನಮ್ಮೊಳಗೆಲ್ಲಿವೆ ಹೊಸಚಿಗುರು?

ಅಳತೆಗೆ, ತೂಕಕೆ, ಎಣಿಕೆಗೆ ದೊರೆಯುವ
ದೈನಂದಿನ ಸರುಕೇ ಬೇರೆ
ಗರುಡನ ರೆಕ್ಕೆಗೆ, ಮತ್ಸ್ಯದ ಅಳವಿಗೆ
ನಿಲುಕುವ ನೆಲೆಗಳೆ ಬೇರೆ!

ಬಂಡೆ-ಬೆಟ್ಟಗಳ ಕೋಟೆಯ ನಡುವೆ
ಸ್ಥಾವರವಾಗಿದೆ ಬದುಕು
ಗಡಿಗಳ ದಾಟುತ ಜಂಗಮವಾಗುವ
ಸಂಕಲ್ಪವು ಬೇಕು.

ಅಲ್ಪತೃಪ್ತಿಗಳ ಕುಂಡವನೊಡೆಯುತ
ತಾಯ್ನೆಲದಲಿ ಬೇರನ್ನೂರಿ
ಬೆಳೆಯುವುದೆಂದಿಗೆ, ಈ ಹೊಸ ಪೀಳಿಗೆ
ಕಾಲ-ದೇಶಗಳ ಮೀರಿ?