ಪ್ರಿಯ ಶ್ರೀ ವಿಷ್ಣು ನಾಯ್ಕರಿಗೆ,
ಪ್ರೀತಿಪೂರ್ವಕ ವಂದನೆಗಳು –

ನಿಮ್ಮ ೮-೪-೮೬ರ ಪತ್ರ ತಲುಪಿತು. ಓದುತ್ತಿರುವಂತೆ ಮನಸ್ಸಿಗೆ ತುಂಬ ನೋವಾಯಿತು; ದುಃಖವಾಯಿತು; ದಿಗ್ಭ್ರಮೆಯಾಯಿತು. ನನಗೆ ಪೂಜ್ಯ ಸ.ಪ.ಗಾಂವಕರರ ಬಗ್ಗೆ ಭಕ್ತಿಭಾವ ಇದೆ. ದೇವರನ್ನು ನಂಬದ ನಾನು ಪೂಜ್ಯ ಗಾಂವಕಾರರಂಥ ಸಜ್ಜನರಲ್ಲಿಯೇ ದೈವಾಂಶವನ್ನು ಕಂಡು ತಲೆಬಾಗಿದವನು. ಅವರ ವಿಷಯವಾಗಿ ‘ಮುಂಗಾರು’ ಪತ್ರಿಕೆಯಲ್ಲಿ ನೀವು ಬರೆದ ವ್ಯಕ್ತಿಚಿತ್ರದ ಲೇಖನ ಓದಿ ಸಂತೋಷಪಟ್ಟಿದ್ದೇನೆ. ನಿಮ್ಮ ಲೇಖನದಲ್ಲಿ ಅವರ ಬಗ್ಗೆ ಗೌರವ ಭಾವನೆ ತುಂಬಿದ್ದುದನ್ನು ಕಂಡು ನಿಮ್ಮ ಸಹೃದಯತೆಗೆ ಮೆಚ್ಚಿದ್ದೇನೆ. ಮಾರ್ಚ್ ೧೬ನೆಯ ತಾರೀಖಿನ ದಿನ ಪೂಜ್ಯ ಗಾಂವಕಾರರನ್ನು ಕುರಿತ ವಿಚಾರಗೋಷ್ಠಿಯೊಂದರಲ್ಲಿ ನೀವು ಮಂಡಿಸಿದ ಪ್ರಬಂಧದಲ್ಲಿಯೂ ಗಾಂವಕಾರರ ವ್ಯಕ್ತಿತ್ವದ ಸಾತ್ವಿಕತೆಯನ್ನು ತುಂಬ ಚೆನ್ನಾಗಿ, ಪರಿಣಾಮಕಾರಿಯಾಗಿ ವಿವರಿಸಿದ್ದೀರಿ. ಅದರಿಂದಲೂ ನನಗೆ ಅತ್ಯಂತ ಸಂತೋಷವಾಗಿತ್ತು. ಗಾಂವಕಾರರ ಬಗ್ಗೆ ಮಾತ್ರವಲ್ಲ ಅವರ ಮೊಮ್ಮಗಳಾದ ಪ್ರೊ. ನಿರ್ಮಲಾ ಗಾಂವಕಾರ ಅವರನ್ನು ಕುರಿತೂ ನೀವು ಎರಡೂ ಲೇಖನಗಳಲ್ಲಿ ತುಂಬು ಅಭಿಮಾನ ಗೌರವ ವ್ಯಕ್ತಪಡಿಸಿದ್ದೀರಿ. ಪೂಜ್ಯ ಗಾಂವಕಾರರು ಹಾಗೂ ಪ್ರೊ. ನಿರ್ಮಲಾ ಗಾಂವಕಾರರು ನಮ್ಮವರು, ನಮ್ಮ ಅಂಕೋಲೆಯವರು ಎಂಬ ಅಭಿಮಾನ, ಹೆಮ್ಮೆಯ ಭಾವನೆ ನಿಮ್ಮ ಲೇಖನಗಳಲ್ಲಿ ಎದ್ದು ಕಾಣುವಂತಿದೆ.

‘ಮುಂಗಾರು’ ಪತ್ರಿಕೆಗೆ ಗಾಂವಕಾರರ ಶತಾಬ್ದಿ ಸಂದರ್ಭದಲ್ಲಿ ಒಂದು ಸುಂದರವಾದ, ಸಮಯೋಚಿತವಾದ ಲೇಖನ ಬರೆದಿದ್ದಕ್ಕೆ ನಾನು ನಿಮ್ಮನ್ನು ಮನಸಾರೆ ಅಭಿನಂದಿಸಿದ್ದೆ. ಆ ಲೇಖನದಲ್ಲಿ ಪೂಜ್ಯ ಗಾಂವಕಾರರನ್ನು ಕುರಿತು ‘ಒಬ್ಬ ಶೂದ್ರ ವರ್ಗದ ಮಣ್ಣಿನ ಮಗ’ ಸ್ವಯಂ ಪ್ರತಿಭೆ ಹಾಗೂ ಪ್ರಯತ್ನದ ಬಲದಿಂದ ಹಿಂದಿನ ವಿಶಾಲ ಮುಂಬಯಿ ಸರಕಾರದಲ್ಲಿ ಪಾರ್ಲಿಮೆಂಟರಿ ಸೆಕ್ರೆಟರಿಯಾಗಿ, ಖೇರ್ ಮಂತ್ರಿ ಮಂಡಲದಲ್ಲಿ ಉಪಸಚಿವನಾಗಿ (೪೬-೪೭) ಸೈ ಸೈ ಎನ್ನಿಸಿಕೊಂಡಿದ್ದಾರೆ’. ಇತ್ಯಾದಿಯಾಗಿ ನೀವು ಬರೆದದ್ದರಲ್ಲಿ ‘ಶೂದ್ರ’ ಎಂಬ ಶಬ್ದ ಗಾಂವಕಾರರಿಗೆ ಅಗೌರವದ ಮಾತೆಂದು ತಿಳಿದ ಯಾರೋ ನಿಮಗೆ ಕೊಲೆಯ ಬೆದರಿಕೆಯ ಪತ್ರ ಬರೆದಿದ್ದಾರೆಂದು ನೀವು ತಿಳಿಸಿದಾಗ ನನಗೆ ದಿಗ್ಭ್ರಮೆಯಾಯಿತು. ಹಾಗೆ ನಿಮಗೆ ಬರೆದವರ ದೃಷ್ಟಿಯಲ್ಲಿ ‘ಶೂದ್ರ’ ಎಂಬ ಶಬ್ಧ ಕೀಳು ಎಂಬ ಭಾವನೆ ಇದ್ದಿರಬಹುದು. ಆದರೆ ಶೂದ್ರ ಎಮಬ ಪದವನ್ನು ಇಂದು ಸಾಹಿತ್ಯಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿವೇಚನೆ ವಿಶ್ಲೇಷಣೆಗಳ ಸಂದರ್ಭದಲ್ಲಿ ಹೇಗೆ ಬಳಸುತ್ತಾರೆ ಎಂಬ ಬಗ್ಗೆ ಅಗತ್ಯವಾದ ಮಾಹಿತಿ ಅವರಿಗೆ ಇದ್ದಂತೆ ತೋರುವುದಿಲ್ಲ.

ಮಹಾಕವಿ ಕುವೆಂಪು ಅವರ ಬಗ್ಗೆ ಬರೆಯುವಾಗ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೊತ್ತಮೊದಲ ಶ್ರೇಷ್ಠ ಶೂದ್ರ ಸಾಹಿತಿ ಎಂದು ಯಾರೋ ಹೇಳುವುದಲ್ಲ, ಅವರ ಮಗ ಕನ್ನಡದ ಮತ್ತೊಬ್ಬ ಅತ್ಯಂತ ಮಹತ್ವದ ಸಾಹಿತಿ – ಶ್ರೀ ಪೂರ್ಣಚಂದ್ರ ತೇಜಸ್ವಿಯವರೂ ಹೇಳುತ್ತಾರೆ. ಅವರು ಹಾಗೆ ಬರೆದದ್ದೂ ಉಂಟು. ಹುಟ್ಟಿನಿಂದ ಬ್ರಾಹ್ಮಣರಲ್ಲದ ಸಾಹಿತಿಗಳನ್ನು ಶೂದ್ರ ಸಾಹಿತಿಗಳೆಂದು ಕರೆಯುವುದು ಕನ್ನಡ ಸಾಹಿತ್ಯದಲ್ಲಿ ಸಾಮಾನ್ಯವಾಗಿದೆ. ಬ್ರಾಹ್ಮಣ – ಶೂದ್ರ ಸಾಹಿತ್ಯದ ಚರ್ಚೆ ಬಲುವಾಗಿ ಬೆಳೆದಿದೆ. ಕ್ಷತ್ರಿಯ ವೈಶ್ಯ ಎಂಬ ಮಾತುಗಳು ಈ ಚರ್ಚೆಯಲ್ಲಿ ಬರುವುದೇ ಇಲ್ಲ. ಜೊತೆಗೆ ಬ್ರಾಹ್ಮಣ – ಶೂದ್ರ ಎಂಬಲ್ಲಿಯೂ ಕೇವಲ ಹಿಂದಿನ ವರ್ಣಾಶ್ರಮದ ಅರ್ಥದಲ್ಲಿ ಬಳಕೆಯಾಗುವುದಿಲ್ಲ. ಇಂದು ‘ಶೂದ್ರ’, ‘ಶೂದ್ರ ಸಾಹಿತಿ’ ಎಂಬ ಮಾತುಗಳು ಅಗೌರವ ಸೂಚಕಗಳಲ್ಲವೇ ಅಲ್ಲ. ‘ಶೂದ್ರ’ ಎಂಬ ಪತ್ರಿಕೆ ಬೆಂಗಳೂರಿನಿಂದ ಹೊರಡುತ್ತಿದೆ. ಅದರ ಸಂಪಾದಕರು ಶೂದ್ರ ಶ್ರೀನಿವಾಸ ಎಂದೇ ತಮ್ಮ ಹೆಸರನ್ನು ಬರೆಯುತ್ತಾರೆ. ಇದು ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ವಿಚಾರ – ವಿಮರ್ಶೆಗಳನ್ನು ಕುರಿತ ಬರವಣಿಗೆಗಳನ್ನು ಓದುತ್ತಿರುವವರಿಗೆ ಗೊತ್ತಿರುವ ವಿಚಾರ. ಆ ಹಿನ್ನೆಲೆಯನ್ನು ಬಲ್ಲವರಾದ ನೀವು ‘ಶೂದ್ರ’ ಎಂಬ ಪದವನ್ನು ಬಳಸಿದ್ದೀರಿ. ಹಾಗೆ ಬಳಸಿದ್ದರಲ್ಲಿ ಯಾವ ತಪ್ಪೂ ಇಲ್ಲ. ನಿಮಗೆ ಕೊಲೆ ಬೆದರಿಕೆ ಪತ್ರ ಬರೆದವರು ಈ ಕಾಲದ ಸಾಹಿತ್ಯಕ – ಸಾಮಾಜಿಕ, ಸಾಂಸ್ಕೃತಿಕ ವಿಚಾರ-ಚರ್ಚೆಗಳಿಗೆ ಸಂಬಂಧಿಸಿದ ಬರವಣಿಗೆಗಳನ್ನು ಓದುತ್ತಿರುವವರಲ್ಲವೆಂಬುದು ಖಾತ್ರಿ, ಅದರಲ್ಲಿ ಅನುಮಾನವಿಲ್ಲ.

ಏನೇ ಅದರೂ ಕೊಲೆ ಬೆದರಿಕೆ ಹಾಕುವುದು ಖಂಡನೀಯ. ವಿಚಾರವಂತರೆಲ್ಲ ಅದನ್ನು ಖಂಡಿಸಬೇಕು. ಯಾವುದೇ ವ್ಯಕ್ತಿ ಅವನು ಯಾವ ಜಾತಿಗೆ ಸೇರಿದವನೇ ಇರಲಿ ತಾನು ಹುಟ್ಟಿ ಬೆಳೆದ ಕಾರಣಕ್ಕಾಗಿ ಆ ಜಾತಿಯ ಮಾನ ಮರ್ಯಾದೆಯ ಗುತ್ತಿಗೆ ಹಿಡಿದವರಂತೆ ವರ್ತಿಸುವುದು ಸರಿಯಲ್ಲ. ಅಂಥವರಿಂದ ಆ ಜಾತಿಯ ಹೆಸರಿಗೆ, ಆ ಜಾತಿಯ ಜನರಿಗೆ ಗೌರವ ಬರುವುದಿಲ್ಲ; ಕಳಂಕ ತಟ್ಟುತ್ತದೆ.

ಪೂಜ್ಯ ಗಾಂವಕಾರರಂಥ ಅಜಾತಶತ್ರು ವ್ಯಕ್ತಿಯ ಬಗ್ಗೆ ಅಭಿಮಾನ ತೋರಿಸಲು ಹೋಗಿ ಅವರು ಎಂದೂ ಒಪ್ಪದಿದ್ದಂಥ ಹಿಂಸಾತ್ಮಕ ಮಾರ್ಗ ಹಿಡಿಯುವದರಿಂದ ಗಾಂವಕಾರರಿಗೆ ಅಗೌರವ ತೋರಿಸಿದಂತೆ, ಅಪಮಾನ ಮಾಡಿದಂತೆ ಎಂಬುದೂ ಆ ಪತ್ರ ಬರೆದವರಿಗೆ ತಿಳಿಯಲಿಲ್ಲವಲ್ಲಾ ಎಂದು ಸೋಜಿಗವಾಗುತ್ತದೆ.

ಪೂಜ್ಯ ಗಾಂವಕಾರರ ಎಂದೂ ಜಾತಿವಾದಿಯಾಗಿರಲಿಲ್ಲ. ತಾನು ಹುಟ್ಟಿದ ಜಾತಿಯವರಿಗೆ ಮಾತ್ರ ಸಹಾಯ ಮಾಡಿದ ಸಂಕುಚಿತ ಮನೋಭಾವದ ವ್ಯಕ್ತಿಯಾಗಿರಲಿಲ್ಲ. ಯಾರ ನೋವಿಗೂ ಯಾರ ದುಃಖಕ್ಕೂ ಅಂತಃಕರಣ ಮಿಡಿಯ ಬಲ್ಲ ಹಿರಿಯ ಉದಾರ ವ್ಯಕ್ತಿತ್ವ ಅವರದಾಗಿತ್ತು. ಆ ಅಂಶವನ್ನೂ ನಿಮ್ಮ ಲೇಖನದಲ್ಲಿ ನಿದರ್ಶನ ಸಹಿತವಾಗಿ ನೀವು ನಿರೂಪಿಸಿದ್ದೀರಿ.

ಪೂಜ್ಯ ಗಾಂವಕಾರರ ಬಗ್ಗೆ ನಿಜವಾದ ಅಭಿಮಾನ, ಪೂಜ್ಯ ಭಾವನೆ ಇರುವವರೇ ನಿಮಗೆ ಪತ್ರ ಬರೆದವರೆಂದು ನನಗೆ ಅನ್ನಿಸುವುದಿಲ್ಲ ಏಕೆಂದರೆ ಅಂಥ ಅಭಿಮಾನವಿದ್ದವರಾದರೆ ಅವರ ಶತಾಬ್ದಿ ಸಮಾರಂಭಕ್ಕೆ ಬರುತ್ತಿದ್ದರು. ಆ ದಿನ ಪ್ರಕಟವಾಗಿದ್ದ ನಿಮ್ಮ ‘ಮುಂಗಾರು’ ಲೇಖನವನ್ನು ಓದಿರುತ್ತಿದ್ದರು. ಓದಿ, ಏನೊ ಪ್ರಮಾದವಾಗಿದೆ ಎಂದು ಅನಿಸಿದ್ದರೆ ಆ ದಿನದ ಸಮಾರಂಭಕ್ಕೆ ಬಂದು ಆ ವಿಷಯ ಪ್ರಸ್ತಾಪಿಸುತ್ತಿದ್ದರು. ಅಥವಾ ನೀವು ಆ ದಿನದ ವಿಚಾರಗೋಷ್ಠಿಯಲ್ಲಿ ಮಂಡಿಸಿದ, ಗಾಂವಕಾರರನ್ನು ಕುರಿತ ಪ್ರಬಂಧವನ್ನು ಕೇಳಿಸಿಕೊಂಡಿದ್ದರೆ ಅವರ ತಪ್ಪು ಕಲ್ಪನೆ ಮಾಯವಾಗುತ್ತಿತ್ತು. ಅವರು ಹಾಗೇನೂ ಮಾಡಲಿಲ್ಲ. ಅಂದರೆ ತಾತ್ಪರ್ಯವಿಷ್ಟೇ; ಗಾಂವಕಾರರ ಶತಾಬ್ದಿ ಸಮಾರಂಭಕ್ಕೆ ಬರುವುದರ ಮೂಲಕವಾದರೂ ಆ ಹಿರಿಯ ಚೇತನಕ್ಕೆ ಗೌರವ ಸಲ್ಲಿಸಬೇಕೆಂಬ ಭಾವನೆಯೂ ಇಲ್ಲದ ವ್ಯಕ್ತಿ ಅವರ ಮೇಲಿನ ಅಭಿಮಾನದಿಂದಲೇ ನಿಮಗೆ ಬೆದರಿಕೆ ಪತ್ರ ಬರೆದಿದ್ದಾನೆಂದು ನನಗೆ ಅನ್ನಿಸುವುದಿಲ್ಲ. ಅದಕ್ಕೆ ಗಾಂವಕಾರರ ಹೆಸರು ನೆವಮಾತ್ರ ; ನಿಜವಾದ ಕಾರಣ ಬೇರೆ ಇರುವಂತಿದೆ.

ಇಂದು ಅಂಕೋಲೆಯ ಹೆಸರು ಬಂದಾಗ ಹೊರಗಿನವರು ತಟಕ್ಕನೆ ನೆನಪಿಸಿಕೊಳ್ಳುವ ಮಹತ್ವದ ಹೆಸರುಗಳಲ್ಲಿ ನಿಮ್ಮದೂ ಒಂದು. ನಿಮ್ಮ ಬರವಣಿಗೆಯ ಯೋಗ್ಯತೆಯಿಂದಾಗಿ ನೀವು ಅಂಕೋಲೆಯ, ಏಕೆ ಜಿಲ್ಲೆಯಲ್ಲಿರುವ ಮುಂಚೂಣಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದೀರಿ. ರಾಘವೇಂದ್ರ ಪ್ರಕಾಶನದ ಮೂಲಕ ಜಿಲ್ಲೆಯ ಬರೆಹಗಾರರನ್ನು ಬೆಳಕಿಗೆ ತರುವ ಪ್ರಶಂಸನೀಯ ಕಾರ್ಯವನ್ನು ಕಷ್ಟ-ನಷ್ಟಗಳನ್ನು ಎದುರಿಸುತ್ತಲೇ ಮಾಡುತ್ತ ಬರುತ್ತಿರುವ ಸಾಹಸಿ ಪ್ರಕಾಶಕರಾಗಿದ್ದೀರಿ. ಜಿಲ್ಲೆಯಲ್ಲಿ ನಡೆವ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನೀವು ಬೆಲೆಯುಳ್ಳ ಪಾತ್ರ ವಹಿಸುತ್ತ ಬಂದಿರುವವರು, ಅಂಕೋಲೆಯಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣ ಸೃಷ್ಟಿಸಲು ದುಡಿಯುತ್ತಿರುವ ಮುಖ್ಯರಾದ ಕೆಲವೇ ಕೆಲವರಲ್ಲಿ ನೀವೂ ಒಬ್ಬರು. ಸಾಹಿತ್ಯಕ, ಸಾಂಸ್ಕೃತಿಕ ವಿಷಯಗಳಲ್ಲಿ ಆಸಕ್ತಿ ಇರುವ ನನ್ನಂಥ ಎಷ್ಟೋ ಜನರಿಗೆ ನಿಮ್ಮ ಬಗ್ಗೆ ಪ್ರೀತಿ ಇದೆ; ಅಭಿಮಾನ ಇದೆ. ದಿವಂಗತ ಜನದೇವ ನಾಯಕರನ ಬದುಕು – ಬರೆಹ ಕುರಿತು ನೀವು ಸಂಪಾದಿಸಿ ಪ್ರಕಟಿಸಿದ ಗ್ರಂಥ, ಈಗ ಪ್ರಕಟನೆಯ ಹಂತದಲ್ಲಿರುವ ಡಾ. ಎಂ.ಅಕಬರ ಆಲಿಯವರ ಬದುಕು-ಬರೆಹ ಕುರಿತ ಗ್ರಂಥ ಇತ್ಯಾದಿಗಳು ನಿಮ್ಮ ಮನಸ್ಸುಜಾತಿ, ಮತಗಳು ಸಂಕುಚಿತ ಭಾವನೆಗೆ ಬಲಿಯಾಗದ, ಮನುಷ್ಯನ ಯೋಗ್ಯತೆಯನ್ನು ಗುರುತಿಸುವ ಗುಣಗೌರವ ಬುದ್ಧಿಯದೆಂಬುದಕ್ಕೆ ಸಾಕ್ಷಿಗಳಾಗಿವೆ. ನೀವು ಸಾಹಿತ್ಯ ಅಕಾಡೆಮಿಯ ಸಹಯೋಗದಿಂದ ಹೊನ್ನಾವರದಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿಯೊಂದರ ಸಮಾರೋಪ ಸಮಾರಂಭದಲ್ಲಿ ನಾನು ಮಾಡಿದ ಸಾಹಿತ್ಯ ಸಂಬಂಧವಾದ ಭಾಷಣದ ಬಗ್ಗೆ ನೀವು ನಿಮ್ಮ ಕವನ ಸಂಕಲನ ‘ನನ್ನ ಅಂಬಾರಕೊಡ್ಲ’ದ ಮೊದಲ ಮಾತಿನಲ್ಲಿ ಪ್ರಸ್ತಾಪಿಸುತ್ತ ಆ ಭಾಷಣ ನಿಮ್ಮ ಜೀವಮಾನದಲ್ಲಿಯೇ ಕೇಳಿದ ಶ್ರೇಷ್ಠ ಭಾಷಣ ಎಂದು ಬರೆದಿದ್ದೀರಿ. ಅದನ್ನು ಓದಿದಾಗ ನಿಮ್ಮ ಮನಸ್ಸಿನ ಔದಾರ್ಯ, ಇತರರಲ್ಲಿರುವ ಸ್ವಲ್ಪ ಗುಣವನ್ನೂ ದೊಡ್ಡದಾಗಿ ಕಾಣುವ ಕಂಡು ಬಣ್ಣಿಸುವ ಹೃದಯವಂತಿಕೆ ಇವುಗಳಿಗೆ ನಾನು ಮುಗ್ಧನಾಗಿದ್ದೆ. ಇಂಥ ನಿಮ್ಮ ಬಗ್ಗೆ ಸಲ್ಲದ ಆರೋಪವನ್ನು ಹೊರಿಸಿ ಕೊಲೆ ಬೆದರಿಕೆ ಹಾಕುವಂಥ ಪತ್ರವನ್ನು ಯಾರೊ ಬರೆದಿದ್ದಾರೆಂದು ಕೇಳಿದಾಗ ಅವರ ಕ್ಷುದ್ರತೆಗಾಗಿ ವ್ಯಥೆಯಾಯಿತು.

ಇತ್ತೀಚಿನ ವರ್ಷಗಳಲ್ಲಿ ಅಂಕೋಲೆಯಲ್ಲಿ ಜಾತಿಯ ಹೆಸರಿನಲ್ಲಿ ಅಹಿತಕರವಾದ ಘಟನೆಗಳು ನಡೆಯುತ್ತಿರುವ ಸುದ್ದಿಗಳನ್ನು ದೂರದಲ್ಲಿರುವ ನಮ್ಮಂಥವರು ಪತ್ರಿಕೆಗಳ ಮೂಲಕ ಕೇಳುತ್ತಿರುತ್ತೇವೆ.ಇದು ನಮ್ಮ ಅಂಕೋಲೆಗೆ ಇತ್ತೀಚಿನ ವರ್ಷಗಳಲ್ಲಿ ಬಡಿದ ಶಾಪ ಎಂಬಂತೆ ಮುಂದುವರಿಯುತ್ತಲೇ ಇದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಎರಡನೆಯ ಬಾರ್ಡೋಲಿ ಎಂದು ಕೀರ್ತಿ ಪಡೆದ ಅಂಕೋಲೆ ನಮ್ಮ ಊರು. ನಮ್ಮ ತಾಲೂಕು ಎಂದು ಹೆಮ್ಮೆಯಿಂದ ಉಬ್ಬಿ ಹೇಳಿಕೊಳ್ಳುವ ನಮ್ಮಂಥವರಿಗೆ ಜಾತಿಯ ಹೆಸರಿನಲ್ಲಿ ನಡೆವ ಬೀದಿ ಕಾಳಗಗಳ ಸುದ್ಧಿ ಓದುವಾಗ ಅವಮಾನವಾದಂತಾಗುತ್ತದೆ; ಅತ್ಯಂತ ದುಃಖವಾಗುತ್ತದೆ.

ನಾವೆಲ್ಲ ಶಿಕ್ಷಣ ಪಡೆಯುವಾಗ ನಮಗೆ ಹತ್ತಿರದಲ್ಲಿ ಹೈಸ್ಕೂಲುಗಳಿರಲಿಲ್ಲ.ಕಾಲೇಜಂತೂ ಇರಲೇ ಇಲ್ಲ. ಕೆಲವೊಮ್ಮೆ ಅರೆಹೊಟ್ಟೆಯಲ್ಲಿ, ಎಷ್ಟೋ ಸಲ ಅದೂ ಇಲ್ಲದೇ ನಮ್ಮ ನಮ್ಮ ಆದರ್ಶದ ಕಡೆ ಹೆಜ್ಜೆ ಹಾಕಿದವರು ನಾವು – ನಮ್ಮ ತಲೆಮಾರಿನ ಬಹುಪಾಲು ವಿದ್ಯಾವಂತರು. ಇಂದಿನ ಎಳೆಯರಿಗೆ ಕಲಿಯುವ ಮನಸ್ಸು, ಯೋಗ್ಯತೆ ಇದ್ದರೆ ಕಾಲೇಜಿನ ಮೆಟ್ಟಿಲು ಹತ್ತುವುದು ಅದರ್ಶದ ಮಾತೇನಲ್ಲ. ಸಹಜವಾಗಿ ಹೋಗಬಹುದಾದ ಪರಿಸ್ಥಿತಿ ಇದೆ. ಸನ್ಮಾನ್ಯರಾದ ದಿನಕರ ದೇಸಾಯಿ, ಎಸ್.ವಿ.ಪಿಕಳೆ, ಪ್ರೇಮಾ ಪಿಕಳೆ, ಸ.ಪ. ಗಾಂವಕಾರ, ಶೆಟಗೇರಿ ಜೋಗಿ ನಾಯಕ, ವಿದ್ಯಾ ನಾರ್ವೇಕರ, ಜೈಹಿಂದ್ ಹೈಸ್ಕೂಲಿನ ಸ್ಥಾಪನೆಗೆ ಕಾರಣರಾದ ಮಹನೀಯರು (ನನಗವರ ಹೆಸರು ಸರಿಯಾಗಿ ಗೊತ್ತಿಲ್ಲ) – ಮೊದಲಾದ ಲೋಕೋಪಕಾರ ಬುದ್ಧಿಯುಳ್ಳವರು ಮಾಡಿದ ಪ್ರಯತ್ನ, ಪರಿಶ್ರಮಗಳಿಂದಾಗಿ ಇಂದು ಪದವಿ ತರಗತಿಗಳವರೆಗಿನ ವಿದ್ಯಾಭ್ಯಾಸ ಪಡೆವ ಸೌಭಾಗ್ಯ ತಾಲೂಕಿನ ಎಳೆಯರಿಗೆ ದೊರೆಯುವಂತಾಗಿದೆ. ಶಾಲೆ-ಕಾಲೇಜುಗಳಿಗೆ ಹೋಗಿ ಬರಲು ಅನುಕೂಲವಾಗುವಂತೆ – ಹಳ್ಳಿ-ಹಳ್ಳಿಗಳಿಗೆ ಇಂದು ಬಸ್ ಸೌಕರ್ಯ ಬೇರೆ ಆಗಿದೆ. ನಾವು ಕಲಿಯುವಾಗ ಮಳೆಗಾಲ, ಚಳಿಗಾಲ, ಬೇಸಿಗೆ ಎನ್ನದೇ ಯಾವಾಗಲೂ ಬರಿಗಾಲಲ್ಲಿ-ಕಾಲಿಗೆ ಚಪ್ಪಲ್ ಕೂಡ ಇಲ್ಲದೇ-ಶಾಲೆಗೆ ಹೋಗಿ ಬರುತ್ತಿದ್ದೆವು. ಇಂದು ಆ ರಿಕ್ತ ಪರಿಸ್ಥಿತಿ ಇಲ್ಲ. ಅದು ಸಂತೋಷದ ಸಂಗತಿ. ಅಂಕೋಲೆಯ ಹಳ್ಳಿ ಹಳ್ಳಿಗಳಲ್ಲಿ ಎಲ್ಲಿ ಹೋದರೂ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಾರೆ. ಅವರು ಮುಂದಿನ ವಿದ್ಯಾಬ್ಯಾಸಕ್ಕೂ ದೂರ ದೂರದ ಊರು, ನಗರ, ದೇಶಗಳಿಗೆ ಹೋಗಿ, ತಾಲೂಕಿಗೆ, ಜಿಲ್ಲೆಗೆ, ರಾಜ್ಯಕ್ಕೆ, ದೇಶಕ್ಕೆ ಹೆಸರು ತಂದಂಥವರೂ ಆಗಿದ್ದಾರೆ; ಆಗುತ್ತಿದ್ದಾರೆ. ಇಂಥ ಕಾಲದಲ್ಲಿ ಕ್ಷುಲ್ಲಕ ವಿಷಯಗಳ ಬಗ್ಗೆಯೇ ಯೋಚನೆ ಮಾಡುತ್ತಾ ತಮ್ಮ ಶಕ್ತಿಯನ್ನು ವ್ಯರ್ಥ ಮಾಡುವ ಕೆಲವು ಎಳೆಯರೂ ಇದ್ದಾರಲ್ಲಾ ಎಂದು ಬೇಸರವಾಗುತ್ತದೆ. ಅಂಥ ಕೇವಲ ಕೆಲವೇ ಮಂದಿಯಿಂದ ಅಂಕೋಲೆಯ ಒಳ್ಳೆಯ ಹೆಸರಿಗೆ ಧಕ್ಕೆಯಾಗುತ್ತಿದೆಯಲ್ಲಾ ಎಂದು ವ್ಯಥೆಯಾಗುತ್ತದೆ.

ಕಾಲ ಬದಲಾಗಿದೆ, ಬದಲಾಗುತ್ತಿದೆ. ದೇಶದ ಜನಜೀವನದಲ್ಲಿ ಹೊಸ ಹೊಸ ಆಶೆ, ಆಶೋತ್ತರಗಳು ಬೆಳೆಯುತ್ತಿವೆ. ಅದಕ್ಕೆ ನನ್ನ ತಾಲೂಕಿನ ಎಳೆಯ ತಲೆಮಾರಿನ ಜನ ಹೊಂದಿಕೊಳ್ಳಬೇಕು. ಅದರೊಂದಿಗೆ ದಾಪುಗಾಲಿನ ಹೆಜ್ಜೆ ಇಟ್ಟು ಮುಂದೆ ಸಾಗಬೇಕು. ಅದನ್ನು ಬಿಟ್ಟು ಇರುವ ಅಲ್ಪ-ಸ್ವಲ್ಪ ಪ್ರತಿಭೆ, ಶಕ್ತಿಗಳನ್ನು ಸಮಾಜ ವಿರೋಧಿಯಾದ, ಜನವಿರೋಧಿಯಾದ ಚಟುವಟಿಕೆಗಳಲ್ಲಿ ತೊಡಗಿಸಿ ವ್ಯರ್ಥ ಮಾಡಿಕೊಳ್ಳಬಾರದು. ಸಾಹಿತ್ಯಕ, ಸಾಮಾಜಿಕ, ರಾಜಕೀಯ ಬೆಳವಣಿಗೆ, ಬದಲಾವಣೆಗಳ ಬಗ್ಗೆ ಅಭಿಪ್ರಾಯ ಭೇದ ಇರುವುದು ಸಹಜ. ಪ್ರಜಾಪ್ರಭುತ್ವ ರಾಜ್ಯಪದ್ಧತಿ ಇರುವ ದೇಶದಲ್ಲಿಯಂತೂ ಅದು ಅನಿವಾರ್ಯ. ಆದರೆ ಅಭಿಪ್ರಾಯ ಭೇದಗಳು ಹೊಸ ಹೊಸ ವೈಚಾರಿಕ ಅಲೆಗಳನ್ನು, ಹೊಳಹುಗಳನ್ನು ಪ್ರಕಾಶಗೊಳಿಸುವಂಥವಾಗಿರಬೇಕು. ಒಂದು ವಿಷಯವನ್ನು ಅಂಧ ಶ್ರದ್ಧೆ, ಅಂಧ ಅಭಿಮಾನಗಳಿಂದ ನೋಡದೆ ಹತ್ತು ದಿಕ್ಕುಗಳಿಂದ ಹತ್ತು ರೀತಿಗಳಿಂದ ನೋಡುವುದಕ್ಕೆ, ನೋಡಿ ತಿಳಿಯುವುದಕ್ಕೆ ಅನುಕೂಲವಾಗುವಂತೆ ಪರಿಸರ ಇರಬೇಕು. ಆಗ ಎಲ್ಲರೂ ಬೆಳೆಯುತ್ತಾರೆ. ಅದನ್ನು ಬಿಟ್ಟು ಅಭಿಪ್ರಾಯ ಭೇದ ಉಂಟಾದೊಡನೆ ಪರಸ್ಪರ ಕಾದಾಡುವ, ಹೊಡೆದಾಡುವ, ಕೊಲೆ ಬೆದರಿಕೆ ಹಾಕುವ, ನಾಗರಿಕವಲ್ಲದಂಥ ಪರಿಸರ, ಪರಿಸ್ಥಿತಿಗಳ ನಿರ್ಮಾಣವಾಗಬಾರದು. ಜಾತಿ, ಮತಗಳ ಭೇದ-ಭಾವ, ದ್ವೇಷ ಅಸೂಯೆಗಳು ನಾಗರಿಕ ಜನತೆ ಇರುವಲ್ಲಿ ಅಥವಾ ನಾಗರಿಕರಾಗಬೇಕೆಂಬ ಹಂಬಲ ಇರುವ ಜನರಿರುವಲ್ಲಿ ಇರಲೇಬಾರದು, ಅಂಥ ಮನೋಭಾವ ಬೆಳೆಸಿಕೊಂಡು ಮುಂದುವರಿವ ಎಳೆಯರ ಸಂಖ್ಯೆ ಹೆಚ್ಚಾಗಲಿ, ಹಿರಿಯರಾದವರೂ ಸಹ ಎಳೆಯರು ತಪ್ಪು ದಾರಿ ಹಿಡಿದಾಗ ತಿಳಿಸಿ ಹೇಳಿ ತಿದ್ದುವ ಸಾತ್ವಿಕ ಸತ್ವವನ್ನು ಬೆಳೆಸಿಕೊಳ್ಳುವಂಥವರಾಗಲಿ. ಇದು, ಅಂಕೋಲೆ ನಮ್ಮದೆಂಬ ಅಭಿಮಾನ ಇರುವ, ನಮ್ಮಂಥವರ ಹೃತ್ಪೂರ್ವಕವಾದ ಕಳಕಳಿ, ಹಾರೈಕೆ.

ನಮ್ಮ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಸಂಕಟದ ಪರಿಸ್ಥಿತಿಯ ನಿರೀಕ್ಷೆಯಲ್ಲಿ ಕಳವಳಕ್ಕೆ ಒಳಗಾಗಿದೆ. ಕೈಗಾದ ಅಣುಸ್ಥಾವರ ಯೋಜನೆ, ಬೇಡತಿ ಯೋಜನೆ ಇವು ನಮ್ಮ ಜಿಲ್ಲೆಯ ಜನರಲ್ಲಿ ಒಳದಿಗಿಲನ್ನು ಹುಟ್ಟಿಸಿವೆ. ಅದರ ಜೊತೆಗೇ ಅಂಕೋಲೆಯವರಿಗೆ ವಿಶೇಷವಾಗಿ -ನೌಕಾನೆಲೆಯ ಯೋಜನೆಯಿಂದಾಗಿ ಮುಂದೇನು ಎಂಬುದು ಸರಿಯಾಗಿ ಗೊತ್ತಾಗದಂಥ ಅನಿಶ್ಚಿತತೆ, ಆತಂಕ ಎದುರು ನಿಂತು ಕೆಣಕುತ್ತಿದೆ, ಅಣಕಿಸುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ನಿಜವಾದ ಅರ್ಥದಲ್ಲಿ ತನು, ಮನ, ಧನಗಳನ್ನು ಅರ್ಪಿಸಿ ದುಡಿದ ಹೋರಾಟಗಾರರ, ಸ್ವಾತಂತ್ರ್ಯಯೋಧರ ಸಾಹಸಕ್ಕೆ ತ್ಯಾಗ ಬಲಿದಾನಕ್ಕೆ ದೊರೆಯುತ್ತಿರುವ ಪ್ರತಿಫಲ ಇಷ್ಟು ಕ್ರೂರವಾದದ್ದಾಗಿದೆಯಲ್ಲಾ ಎಂಬ ದುಃಖ ಎಲ್ಲರ ಮನಸ್ಸನ್ನೂ ತುಂಬುತ್ತಿದೆ. ಇದು ಚರಿತ್ರೆಯ ಕ್ರೂರ ವ್ಯಂಗ್ಯವೆನಿಸುತ್ತಿದೆ. ಕೇಂದ್ರ ಸರ್ಕಾರದ ಪ್ರಭುಶಕ್ತಿಯ ಆಧಿಕಾರಕ್ಕೆ ಬಾಗಿ ಬಸವಳಿಯಬೇಕಾದ ದಿನಗಳು ನಮ್ಮ ಜಿಲ್ಲೆಯವರಿಗೆ ಅದರಲ್ಲಿಯೂ ನಮ್ಮ ತಾಲೂಕಿನವರಿಗೆ ಬಹುಶಃ ಬಹಳ ದೂರವಿಲ್ಲ. ಎಂಬ ಭಯ ಬೆಳೆಯುತ್ತಲಿದೆ. ಈ ಬರಲಿರುವ ದುರಂತದ ಮುನ್‌ಸೂಚನೆಗಳು ಇಷ್ಟು ಸ್ಪಷ್ಟವಾಗಿ ಕಾಣುತ್ತಿರುವಾಗಲೂ ಅಂಕೋಲೆಯ ಜನರೆಲ್ಲ ಒಂದು, ಅವರ ಮನವೆಲ್ಲ ಒಂದು ಎಂಬಂಥ ಸೌಹಾರ್ದ ಭಾವನೆ ಬೆಳೆಯಬೇಕೆಂಬ ವಿವೇ ಹೆಚ್ಚು ಹೆಚ್ಚಾಗಿ ಜನರಲ್ಲಿ ಬೆಳೆಯಬೇಡವೆ, ಎಂದು ಹೃದಯವಿದ್ದವರೆಲ್ಲ ಕೇಳಿಕೊಳ್ಳಬೇಕಾಗಿದೆ. ನನಗಂತೂ ನನ್ನ ಜಿಲ್ಲೆಯ ಜನ, ಅದಕ್ಕಿಂತ ಹೆಚ್ಚಾಗಿ ನನ್ನ ತಾಲೂಕಿನ ಜನ ಐದಂಕದ ರುದ್ರ ನಾಟಕದ ನಾಲ್ಕನೆಯ ಅಂಕದ ಪಾತ್ರಗಳಂತೆ ಕಾಣಿಸುತ್ತಾರೆ. ಐದನೆಯ ಅಥವಾ ಕೊನೆಯ ಅಂಕದಲ್ಲಿ ಬಡಿಯುವ ಶಾಪದ ಘೋರ, ದುರಂತ ಎಂಥದೋ ಎಂಬ ಕಳವಳವು ಭವಿಷ್ಯವನ್ನು ಕುರಿತು ಚಿಂತಿಸುವವರನ್ನೆಲ್ಲ ಕಾಡುತ್ತಿದೆ. ಮುಂದೆ ವಲಸೆಗಾರರಂತೆ ನಿರಾಶ್ರಿತರಂತೆ ನಮ್ಮ ಜನರನ್ನು ಎಲ್ಲೆಲ್ಲಿಗೊ ಕಳಿಸಿದರೆ, ಕೊಂಡೊಯ್ದರೆ ಅಂಕೋಲೆಯವರೆಂದು ಹೆಮ್ಮೆ-ಆಭಿಮಾನಪಟ್ಟುಕೊಳ್ಳುತ್ತಿರುವ ನಮ್ಮ ತಾಲೂಕಿನ ಜನರೆಲ್ಲ ಎಲ್ಲೆಲ್ಲಿ ಚದುರಿ, ಕೆದರಿ ಹೋಗುತ್ತಾರೊ ಗೊತ್ತಿಲ್ಲ. ಅಂಥ ಸ್ಥಿತಿ ಬಂದಾಗ ನಾವು ಬ್ರಾಹ್ಮಣರೊ, ಕ್ಷತ್ರಿಯರೊ, ವೈಶ್ಯರೊ, ಶೂದ್ರರೊ ಎಂಬ ಹುಟ್ಟಿನ ಅಭಿಮಾನದ ಪ್ರಶ್ನೆಗಿಂತ ನಾವು ಮನುಷ್ಯರೊ ಎಂಬಂಥ ಪ್ರಶ್ನೆ ಮಾತ್ರ ಎದುರು ನಿಂತು ಅಣಕಿಸಬಹುದು. ಆಗ ನಾವು ಬ್ರಾಹ್ಮಣರೊ, ಕೊಂಕಣಿಗಳೊ, ನಾಡವರೊ, ನಾಮಧಾರಿಗಳೊ, ಹಾಲಕ್ಕಿ ಒಕ್ಕಲೊ – ಇನ್ನಾರೊ ಎಂಬಿತ್ಯಾದಿ ಜಾತಿಯ ಅಭಿಮಾನ ಗಾಳಿಗೆ ಹಾರಿಹೋದೀತು, ಅಷ್ಟೆ.

ಇಂಥ ಕಠಿಣ ಪರಿಸ್ಥಿತಿಯನ್ನು ಊಹಿಸುತ್ತ ಆತಂಕಕ್ಕೆ ಒಳಗಾಗಿರುವ ನಮ್ಮ ತಾಲೂಕಿನವರು ಜೊತೆಯಲ್ಲಿ ಇರುವಷ್ಟು ಕಾಲವಾದರೂ ಜಾತಿ, ಮತ ಭೇದಗಳನ್ನು ಮರೆತು ಸ್ನೇಹ, ಸೌಹಾರ್ದಗಳಿಂದ ಬದುಕಬಾರದೆ? ಈ ಪ್ರಶ್ನೆಯನ್ನು ಕುರಿತು ನಮ್ಮ ಅಂಕೋಲೆಯ ಜನತೆ ಗಂಭೀರವಾಗಿ ಯೋಚನೆ ಮಾಡಬೇಡವೆ? ಇದನ್ನೆಲ್ಲ ಎಳೆಯರಿಗೆ ಮನಮುಟ್ಟುವಂತೆ ತಿಳಿಸಿ ಹೇಳಬಲ್ಲವರಾರು?ಮನೆಮನೆಯ ಹಿರಿಯರು ತಂತಮ್ಮ ಮನೆಯ ಎಳೆಯರಿಗೆ ಈ ಬಗ್ಗೆ ಪ್ರೀತಿಯಿಂದ ತಿಳಿಸಿ ಹೇಳಿ ತಿದ್ದುವ ಸಂಕಲ್ಪ ಮಾಡಬೇಕು. ಎಲ್ಲೋ ಕೆಲವು ಜಾತಿವಾದಿ ಎಳೆಯರ ಹುಂಬತನಕ್ಕೆ ಪ್ರಚೋದನೆ, ಪೋಷಣೆ ನೀಡದೆ ಅವರನ್ನು ವಿವೇಕದ ಹಾದಿಗೆ ತಿರುಗಿಸಲು ಪ್ರಯತ್ನಸಬೇಕು. ಬಹುಶಃ ಅದೊಂದೇ ಈಗ ಉಳಿದಿರುವ ನೈತಿಕ ದಾರಿ.

ನಿಮಗೆ ಇಷ್ಟು ದೀರ್ಘ ಪತ್ರ ಬರೆಯುತ್ತಿದ್ದೇನೆಂದು ಪತ್ರ ಬರೆಯಲು ಪ್ರಾರಂಭಿಸಿದಾಗ ನನಗೆ ಅನಿಸಿರಲಿಲ್ಲ. ಮನಸ್ಸು ತುಂಬ ನೊಂದದ್ದರಿಂದ ಬರವಣಿಗೆ ಬೆಳೆಯಿತೆಂದು ತೋರುತ್ತದೆ.

ನನ್ನ ‘ನಿರಪೇಕ್ಷ’ ಎಂಬ ಸಾಹಿತ್ಯ ವಿಮರ್ಶೆಯ ಪುಸ್ತಕಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದ ಬಗ್ಗೆ ನನ್ನನ್ನು ತುಂಬು ಹೃದಯದಿಂದ ಅಭಿನಂದಿಸಿರುವ ನಿಮ್ಮ ಸದ್ಭಾವನೆಗೆ ಕೃತಜ್ಞನಾಗಿದ್ದೇನೆ. “ವಿಮರ್ಶಾಕ್ಷೇತ್ರದ ತಮ್ಮ ಮಹಾನ್ ಸಾಧನೆಯನ್ನು ಗುರುತಿಸಿ ರಾಜ್ಯ ಸಾಹಿತ್ಯ ಅಕಾಡೆಮಿಯವರು ನೀಡಿದ ಪ್ರಶಸ್ತಿ” ಗಾಗಿ ಅಭಿನಂದನೆ ಎಂದು ಬರೆದಿದ್ದೀರಿ. ಅದು ನನ್ನ ವಿಷಯದಲ್ಲಿ ನೀವಿಟ್ಟಿರುವ ಪ್ರೀತಿ ವಿಶ್ವಾಸದ ಮಾತೆಂದು ತಿಳಿದಿದ್ದೇನೆ. ನನ್ನದು ‘ಮಹಾನ್ ಸಾಧನೆ’; ಎಂದು ನಾನು ಖಂಡಿತವಾಗಿಯೂ ತಿಳಿದಿಲ್ಲ. ಇದು ನಾನು ಹೇಳುತ್ತಿರುವ ಸುಳ್ಳು ವಿನಯದ ಮಾತಲ್ಲ. ಬೇರೆಯವರ ಸ್ವಪ್ರತಿಷ್ಠೆ, ಆತ್ಮ ಪ್ರತ್ಯಯಗಳೊಂದಿಗೆ ಅನಿವಾರ್ಯವಾಗಿ ಸರಸವಾಡಬೇಕಾಗಿ ಬರುವ ಸಾಹಿತ್ಯ ವಿಮರ್ಶೆಯ ಬರವಣಿಗೆಗಳಲ್ಲಿ ನಿಷ್ಠುರ, ನಿರ್ದಾಕ್ಷಿಣ್ಯ ಎಂದೇ ತೋರಬಹುದಾದಂಥ ನಿಲುವು, ಧೋರಣೆಯ ನನ್ನ ವಿಮರ್ಶೆಯ ಲೇಖನಗಳ ಸಂಕಲನವೊಂದಕ್ಕೆ ಬಹುಮಾನ ನೀಡುವಂಥ ಔದಾರ್ಯವನ್ನು ಸಾಹಿತ್ಯ ಅಕಾಡೆಮಿಯವರು ತೋರಿಸಿದ್ದನ್ನು ಕಂಡು ನನಗೆ ಸ್ವಲ್ಪ ಆಶ್ಚರ್ಯವೇ ಆಗಿದೆ. ಇಂಥ ಬಹುಮಾನಗಳಿಗೆ ಹೆಚ್ಚಿನ ಮಹತ್ವ ಕೊಟ್ಟುಕೊಂಡು ಬಂದವನೂ ನಾನಲ್ಲ; ಅವುಗಳನ್ನು ವಿರೋಧಿಸುತ್ತ ಬಂದವನೂ ಅಲ್ಲ. ಆದ್ದರಿಂದ ವೈಯಕ್ತಿಕವಾಗಿ ನನಗೆ ಅತಿಶಯ ಸಂತೋಷವಾಗಿದೆ ಎನ್ನಲಾರೆ. ಆದರೆ, ನಿಮ್ಮಂಥ ಎಷ್ಟೋ ಸಾಹಿತ್ಯ ಪ್ರೇಮಿಗಳಿಗೆ, ನನ್ನ ವಿಷಯದಲ್ಲಿ ಪ್ರೀತಿ, ಮಮತೆ, ಅಭಿಮಾನ ಇರುವ ಎಷ್ಟೋ ಜನರಿಗೆ ಇದರಿಂದ ತುಂಬ ಸಂತೋಷವಾಗಿದೆ ಎಂಬುದು ಕರ್ನಾಟಕದ ಯಾವ ಯಾವುದೋ ಕಡೆಗಳಿಂದ ಬರುತ್ತಿರುವ ಅಭಿನಂದನಾ ಪತ್ರಗಳಿಂದ ವ್ಯಕ್ತವಾಗುತ್ತಲಿದೆ. ಬಂದ ಬಹುಮಾನಕ್ಕಿಂತ, ಪ್ರಶಸ್ತಿ ಪತ್ರಕ್ಕಿಂತ ಇಂಥವರ ಪ್ರೀತಿ, ಅಭಿಮಾನ ಸದ್ಭಾವನೆಗಳ ಪ್ರಕಟನೆಗೆ ಅದು ಕಾರಣವಾಗುವಂತಾಯಿತಲ್ಲಾ ಎಂಬುದರಿಂದಲೇ ಹೆಚ್ಚಿನ ಸಂತೋಷವಾಗಿದೆ. ನನ್ನನ್ನು ತಕ್ಕಮಟ್ಟಿಗಾದರೂ ಬಲ್ಲ ನಿಮಗೆ ನಾನು ಹೀಗೆ ಬರೆಯುತ್ತಿರುವುದು ದುರಂಹಕಾರದ ಮಾತು ಎಂದು ಅನಿಸಲಾರದೆಂಬ ವಿಶ್ವಾಸದಿಂದಾಗಿ ಹೀಗೆ ಬರೆದೆ, ಕ್ಷಮಿಸಿ.

ಇಲ್ಲಿ ಇನ್ನೆಲ್ಲ ಒಳಿತು, ಸದಾ ನಿಮ್ಮ ಒಳಿತು, ಕ್ಷೇಮವನ್ನು ಹಾರೈಸುವ,

ನಿಮ್ಮವನಾದ,
ಜಿ.ಎಚ್. ನಾಯಕ